ಕನ್ನಡದ ಇತಿಹಾಸದ ಸಗಟು ಪರಿಕಲ್ಪನೆಯ ಮೇಲೆ ನಾವು ಕರ್ನಾಟಕವನ್ನು ಕಟ್ಟಿಕೊಂಡಿದ್ದೇವೆ. ಇದರೊಳಗೆ ಕನ್ನಡ ಸಂಸ್ಕೃತಿ ಇದೆ, ಕನ್ನಡ ರಾಜಕೀಯ ಇದೆ, ಕನ್ನಡ ಸಾಮಾಜಿಕತೆ ಇದೆ. ಇವುಗಳ ನೆಲೆ ಕನ್ನಡ ಭೌಗೋಲಿಕತೆ. ಈ ಭೌಗೋಳಿಕತೆ ಹಿಗ್ಗಿ-ಕುಗ್ಗಿ ನಮ್ಮಲ್ಲಿಯವರೆಗೆ ಉಳಿದುಬಂದಿದೆ. ಮಹಾಜನ ವರದಿಯ ಜಾರಿಯ ಒತ್ತಾಯದಲ್ಲಿ ನಾವೀಗ ಕರ್ನಾಟಕವನ್ನು ಒಳಗೆ ಮತ್ತು ಹೊರಗೆ ಗ್ರಹಿಸುತ್ತಿದ್ದೇವೆ. ಅಂತೂ ನಮ್ಮ ದೃಷ್ಟಿಯಲ್ಲಿ ಕರ್ನಾಟಕವಿನ್ನೂ ಪೂರ್ಣಗೊಂಡಿಲ್ಲ. ಈ ಅಪೂರ್ಣತೆಯ ಹೋರಾಟವೆ ಕನ್ನಡವನ್ನು ನಾವು ಬೇರೆ ಬೇರೆ ಶಕ್ತಿ ಹಾಗೂ ಸಾಂಸ್ಥಿಕ ರೂಪಗಳಲ್ಲಿ ಗ್ರಹಿಸಲು ಕಾರಣವಾಗಿದೆ. ಇದು ಕನ್ನಡ ಕರ್ನಾಟಕ ರಾಜಕೀಯ. ಇದರ ದುರ್ಬಳತೆಯ ಅರಿವಿನಲ್ಲಿ ಕರ್ನಾಟಕದ ಒಳಗೆ ಹಾಗೂ ಹೊರಗೆ ನಮ್ಮನ್ನು ತುಂಬಿಕೊಳ್ಳಲು ಹಲವು ಬಗೆಯ ಶಕ್ತಿ ಕೇಂದ್ರಗಳನ್ನು ಕಂಡುಕೊಳ್ಳುತ್ತಿದ್ದೇವೆ. ಕನ್ನಡ ವಿಶ್ವವಿದ್ಯಾಲಯ ಅಂಥ ಶಕ್ತಿ ಕೇಂದ್ರಗಳಲ್ಲಿ ಒಂದು. ಕನ್ನಡ ವಿಶ್ವವಿದ್ಯಾಲಯ ಹಂಪಿಯ ನೆಲದಲ್ಲೆ ಹುಟ್ಟಿ ಬೆಳೆಯಬೇಕೆಂಬ ಸಾಂಸ್ಕೃತಿಕ ಹಠದ ಪ್ರತ್ಯಕ್ಷ – ಪರೋಕ್ಷ ತುಡಿತದ ಹಿಂದೆ ನಮ್ಮ ಐತಿಹಾಸಿಕ ಶಕ್ತಿ ಕೇಂದ್ರದ ಸೆಳೆತ ಇದೆ ಎಂಬುದನ್ನು ಮರೆಮಾಚಲು ಸಾಧ್ಯವೆ?

ಕನ್ನಡ ಮತ್ತು ಕರ್ನಾಟಕ ಪರಿಕಲ್ಪನೆಯ ಮಧ್ಯೆ ಈಗ ಹೆಚ್ಚು ಅಂತರ ಉಳಿದಿಲ್ಲ. ಕನ್ನಡ ಎಂಬುದು ನಮಗೆ ಈಗ ಕೇವಲ ಭಾಷೆ ಅಲ್ಲ. ಭಾಷಾಗಣರಾಜ್ಯಗಳನ್ನು ಒಪ್ಪಿಕೊಳ್ಳುವಾಗಲೇ ನಮ್ಮ ಸಂಕ್ತಿ ಚಿಂತಕರು ಇದನ್ನು ಅರಿತಿದ್ದಾರೆ. ವಸಾಹತು ಶಾಹಿಯ ಪ್ರತ್ಯಕ್ಷ ಆಳ್ವಿಕೆಯ ಸಂದರ್ಭದಲ್ಲಿ ಕನ್ನಡ ಕನ್ನಡ ನಾಡು ಎಂಬುದು ಕೇವಲ ಒಂದು ಭಾಷೆ ಹಾಗೂ ಒಂದು ಭೂ ಪ್ರದೇಶಕ್ಕೆ ಕೊಟ್ಟ ಹೆಸರುಗಳಲ್ಲ ಎಂಬುದು ಸ್ಪಷ್ಟವಾಯಿತು. ನವ ವಸಾಹತುಶಾಹಿಯ ಹೊಸ ಶಕ್ತಿ ರಾಜಕೀಯದ ಸಂದರ್ಭದಲ್ಲಿ ಕನ್ನಡ ಎಂಬುದು ಒಂದು ಭಾಷೆ, ಒಂದು ಭೌಗೋಳಿಕ ಪ್ರದೇಶ ಎಂಬುದಕ್ಕಿಂತಲೂ ಇದೊಂದು ಪ್ರಚ್ಛನ್ನ ಜ್ಞಾನ ಮಾದರಿ ಅಥವಾ ಸಂಸ್ಕೃತಿ ಪದ್ಧತಿ ಎಂಬುದು ನಿಚ್ಚಳವಾಗಿದೆ. ಇದು ಇವತ್ತಿನ ನಮ್ಮ ಕನ್ನಡದ ನೆಲೆ.

ಸಂಸ್ಕೃತಿ ಒಂದು ನಿರಂತರ ಜೀವನ ಕ್ರಮ. ನಿರಂತರತೆ ತಪ್ಪಿದಾಗ ಅದು ಪಳೆಯುಳಿಕೆ. ಈ ಬಗೆಯ ಪಳಿಯುಳಿಕೆಯಾಗುವುದನ್ನು ತಪ್ಪಿಸಿಕೊಳ್ಳುವ ಎಚ್ಚರವೇ ಹೋರಾಟ. ಇದು ಎರಡು ಕಾರಣಕ್ಕೆ ಉಂಟಾಗುತ್ತದೆ. ಒಂದು, ಸಂಸ್ಕೃತಿಯೊಂದು ತನ್ನೊಳಗಿನಿಂದ ಸಮಕಾಲೀನ ಸಂದರ್ಭಕ್ಕೆ ಅಗತ್ಯವಾಗಿ ಪುನರ್ ಸೃಷ್ಟಿಗೊಳ್ಳಲಾರದಂಥ ನಿಶ್ಯಕ್ತಿಹೊಂದಿರುವುದು. ಎರಡು, ತನ್ನ ಸಾಂಸ್ಕೃತಿಕ ಪುನರ್ ಸೃಷ್ಟಿಯನ್ನು ನಿಲ್ಲಿಸಿ ಹೊರಗಿನ ಸಂಸ್ಕೃತಿಯ ಶೋಧನೆಗೆ ಸದಾ ಕೈ ಬಾಯಿ ತೆರೆದು ಕೂತಿರುವುದು. ಕನ್ನಡಕ್ಕೆ ಈ ಪರಿಸ್ಥಿತಿ ಇರುವಂತಿದೆ. ಅದಕ್ಕಾಗಿಯೇ ನಾವೆಲ್ಲ ಗಾಬರಿಗೊಂಡಿದ್ದೇವೆ.

ಸಂಸ್ಕೃತಿಯೊಂದರಲ್ಲಿ ಸಾಮಾಜಿಕ ಜ್ಞಾನವೂ ಇದೆ. ವಿಜ್ಞಾನವೂ ಇದೆ. ಧುತ್ತನೆ ಅವತರಿಸಿದ ಪಾಶ್ಚಾತ್ಯ ವಿಜ್ಞಾನ, ವಿಜ್ಞಾನ ಎಂದರೆ ತಾನೆ ಎಂದು ಘೋಷಿಸಿಕೊಂಡಿತು. ಇದು ಅಕ್ರಮಣಶೀಲ ವಿಜ್ಞಾನ. ಮಾನಸಿಕತೆಗಿಂತ ಭೌತಿಕ ಸ್ವರೂಪವೇ ಇದರ ಅಡಂಬರ. ಇದರ ಆಕ್ರಮಣ ಹಾಗೂ ಆಡಂಬರಶೀಲತೆಯ ಒತ್ತಡಕ್ಕೆ ಬೇರೆ ಬೇರೆ ಸಂಸ್ಕೃತಿಗಳ ಒಳಗೆ ಅಂತರ್ಗತವಾಗಿದ್ದ ವಿಜ್ಞಾನ ಶೋಧನೆ ನೆಲಕಚ್ಚಿತು. ಈ ಪಾಶ್ಚಾತ್ಯ ವಿಜ್ಞಾನದ ಭಾಷೆ ಸಂಸ್ಕೃತಿಯೊಳಗಿನ ಭಾಷೆಯಾಗಿರಲಿಲ್ಲ. ಅದರದು ವ್ಯಾಪರದ ಭಾಷೆ ಲಾಭದ ನ್ಯಾಯ. ಅದನ್ನು ನಾವು ಕೊಳ್ಳಬೇಕು. ಕೊಳ್ಳಲು ನಮಗೆ ಶಕ್ತಿ ಇರಬೇಕು. ಇಲ್ಲದಿದ್ದರೆ ಅದು ನಮ್ಮನ್ನು ಆಕ್ರಮಿಸುತ್ತದೆ. ನಮ್ಮ ಸೃಜನೆ ಮತ್ತು ಅದರಿಂದ ಉಂಟಾದ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತದೆ. ನಮ್ಮೊಳಗೆ ನಾವು ನಿರುದ್ಯೋಗಿಗಳಾಗುವಂಥ ಈ ಸಮಸ್ಯೆ ನಮ್ಮಂಥ ಹಲವು ಭಾಷಾಸಂಸ್ಕೃತಿಗಳಿಗೆ ಬಂದೊದಗಿದೆ. ಕನ್ನಡಿಗರು ಕನ್ನಡ ನೆಲ, ಕನ್ನಡ ಜಲ, ಕನ್ನಡದ ಕೆಲಸಗಳಿಂದ ವಂಚಿತರಾಗಿ ಚಡಪಡಿಸುತ್ತಿರುವುದರ ಹಿನ್ನೆಲೆ ಇದು.

ಸಂಸ್ಕೃತಿಗಳಲ್ಲಿ ಸಾಮಾನ್ಯ ಸಂಸ್ಕೃತಿ ಮತ್ತು ಶಕ್ತಿ ಸಂಸ್ಕೃತಿಗಳೆಂದು ಎರಡುಂಟು. ಸಾಮಾನ್ಯ ಸಂಸ್ಕೃತಿ ಸಾಮಾನ್ಯ ಮನುಷ್ಯನ ಆಹಾರ, ಬಟ್ಟೆ, ವಸತಿಯಂಥ ಪ್ರಾಥಮಿಕ ಸೌಲಭ್ಯಗಳನ್ನು ಹುಡುಕಿಕೊಳ್ಳುವಲ್ಲಿಂದ ಶುರುವಾಗುತ್ತದೆ. ಅವಕಾಶಗಳು ಹೆಚ್ಚಿದಂತೆ ಅದು ಬೆಳೆಯುತ್ತದೆ. ಇಲ್ಲದಿದ್ದಲ್ಲಿ ಕಮರಿಹೋಗುತ್ತದೆ.ಒಂದು ಸಂಸ್ಕೃತಿ ಒಂದು ಸ್ವರೂಪವನ್ನು ಪಡೆದುಕೊಂಡರೆ ಬೇಗ ಸಾಯುವುದಿಲ್ಲ. ಸಾಮಾನ್ಯ ಸಂಸ್ಕೃತಿಗಳು ಪ್ರಾಥಮಿಕ ಅವಶ್ಯಕತೆಗಳನ್ನು ಒದಗಿಸುವ ಸಾಮರ್ಥ್ಯವುಳ್ಳವಾದರೂ ಅವೆ ಬಹಳ ಕಾಲ ಬದುಕುವಂತವು. ಯಾವುದೇ ಕಾಲದ, ಯಾವುದೇ ಸಂಸ್ಕೃತಿಯಲ್ಲಿ ಬಹುಸಂಖ್ಯಾತರು ಪ್ರಾಥಮಿಕ ಅವಶ್ಯಕತೆಗಳಲ್ಲೇ ಬದುಕುತ್ತಿರುತ್ತಾರೆ ಎಂಬುದು ನಗ್ನ ಸತ್ಯ.

ಶಕ್ತಿ ಸಂಸ್ಕೃತಿ ಒಂದು ರಾಜಕೀಯ ಚಾರಿತ್ರಿಕ ತುರ್ತಿನಿಂದ ಹುಟ್ಟುತ್ತದೆ. ಇದರ  ಅವತರಣಿಕೆಯಲ್ಲಿ ಸಾಮಾನ್ಯನಿಗಿಂತ ಮೇಲಿನವರೆ ಇರುತ್ತಾರೆ. ಇಂತ ವಿಶೇಷ ವ್ಯಕ್ತಿಗಳ ವಿಶೇಷ ಸೌಲಭ್ಯಾಕಾಂಕ್ಷೆಯ ಫಲವಾಗಿಯೇ ಶಕ್ತಿಸಂಸ್ಕೃತಿ ಹುಟ್ಟುತ್ತದೆ. ನಮ್ಮ ನಡುವೆ ಇದ್ದ ಹಾಗೂ ಇರುವ ಸಾಮಂತಶಾಹಿ, ರಾಜಶಾಹಿ ಮತ್ತು ವಸಾಹತುಶಾಹಿ ಸಂಸ್ಕೃತಿಗಳು ಇದಕ್ಕೆ ಉದಾಹರಣೆ. ಇಂಥ ಸಂಸ್ಕೃತಿಗಳು ಪ್ರಬಲವಾಗಿದ್ದಾಗ ಸಾಮಾನ್ಯನ ಸ್ಥಿತಿ ತೀರ ಹದಗೆಡುತ್ತದೆ ಇಲ್ಲವೆ ಅವನದು ಸೇವಕ ವೃತ್ತಿಯಾಗಿರುತ್ತದೆ. ಕನ್ನಡ ಸಂಸ್ಕೃತಿಯ ಇತಿಹಾಸದಲ್ಲಿ ಕಂಡು ಬರುವ ಕೆರೆಗೆಹಾರ, ಜೋಳವಾಳಿ, ವೇಳವಾಳಿ ತಿಂಕವಾಳಿ ಮುಂತಾದ ಪದ್ದತಿಗಳು ಇದಕ್ಕೆ ಸಾಕ್ಷಿ. ಸಾಮಂತಶಾಹಿ ಮತ್ತು ರಾಜಶಾಹಿಗಳಂಥವು ವ್ಯಕ್ತಿಗಳನ್ನು ಸೇವೆಗಳನ್ನಾಗಿ ಇಟ್ಟುಕೊಂಡಿದ್ದವು. ಜಾಗತೀಕರಣವೆಂಬ ನವವಸಾಹತುಶಾಹಿ ಬೇರೆ ಬೇರೆ ಸಂಸ್ಕೃತಿಗಳನ್ನು ಇಡಿಯಾಗಿ ಸೇವೆಗೆ ಇಟ್ಟುಕೊಳ್ಳುತ್ತಿದೆ.

ಸಾಮಾನ್ಯ ಎಂಬ ಸಂಸ್ಕೃತಿಯೆ ಒಂದು ಚಾರಿತ್ರಿಕ ಘಟ್ಟದಲ್ಲಿ ಶಕ್ತಿ ಸಂಸ್ಕೃತಿಯಾಗಿ ಬೆಳೆಯುತ್ತದೆ. ಸಾಮಾನ್ಯ ಜನರ ಸಾಮಾಜಿಕ ಅಸಂಘಟನೆತ್ತು ಅಸಾಹಯಕತೆಯ ಲಾಭ ಪಡೆದು ಅಥವಾ ಅವರ ಬದುಕಿಗೆ ಹೊಸ ಭರವಸೆಗಳನ್ನು ಕೊಡುತ್ತ ಇಂಥ ಶಕ್ತಿಗಳು ಅವತಾರವಾಗುತ್ತವೆ. ಕರ್ನಾಟಕದ ಸಂದರ್ಭದಲ್ಲಿ ವಿಜಯನಗರ ಸಾಮ್ರಾಜ್ಯ, ಇವತ್ತಿನ ಸ್ಥಿತಿಯಲ್ಲಿ ಯೂರೋ ಕೇಂದ್ರಿತ ಜಾಗತಿಕ ಯಜಮಾನರುಗಳ ಪ್ರಾಬಲ್ಯವನ್ನು ಉದಾಹರಣೆಯಾಗಿ ಕೊಡಬಹುದು.ಈ ಶಕ್ತಿಸಂಸ್ಕೃತಿಗಳು ಕಾಲ ಮಿತಿಯವಾಗಿರುತ್ತವೆ. ಸಾಮಾನ್ಯ ಸಂಸ್ಕೃತಿಗಳು ನಿರಂತರ ಪ್ರಕ್ರಿಯೆಗಳಾಗಿವೆ. ಇವು ಒಟ್ಟೊಟ್ಟಿಗೆ ಇರುತ್ತವೆ. ಆದರೆ ಸಾಮಾನ್ಯನನ್ನು ಶಕ್ತಿಸಂಸ್ಕೃತಿ ಗಾಬರಿ ಮತ್ತು ಅಸಹಾಯಕತೆಯಲ್ಲಿಡುತ್ತದೆ. ಇದು ಈಗಿನ ಕನ್ನಡಿಗರ ಸ್ಥಿತಿಯೂ ಹೌದು.

ಈಗ ನಮಗೆ ಅರ್ಥವಾಯಿತು, ಭಾಷೆ ಎಂಬುದು ಕೇವಲ ಮಾತು ಅಲ್ಲ ಅದು ಜನವರ್ಗವೊಂದು ಬದುಕಿದ್ದ ಹಾಗೂ ಬದುಕುತ್ತಿರುವ ಒಂದು ಜೀವನ ವಿಧಾನ. ಈ ಜೀವನ ಕ್ರಮವನ್ನು ಪ್ರಸ್ತುತವಾಗಿಸಿಕೊಳ್ಳುತ್ತಾ ಹೋಗುವುದೇ ನಮ್ಮ ಅಸ್ತಿತ್ವ ಎನ್ನುತ್ತೇವೆ. ಈ ಭಾಷಾಸಂಸ್ಕೃತಿ ನಮಗೆ ಜೀವನವನ್ನು ಕೊಡಬೇಕು. ಎಂದರೆ ನಮಗೊಂದು ವೃತ್ತಿಕೊಡಬೇಕು. ಇವತ್ತಿನ ತುರ್ತಿನಲ್ಲಿ ಪೂರ್ವಾತ್ಯ ರಾಷ್ಟ್ರಗಳು ತಮ್ಮ ತಮ್ಮ ಭಾಷಾ ಸಂಸ್ಕೃತಿಯನ್ನೆ ನೆಲೆ ಮತ್ತು ಬಲ ಮಾಡಿಕೊಂಡು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಾಗಿ ಬಂದಿದೆ. ಯೂರೋಕೇಂದ್ರತ ರಾಷ್ಟ್ರಗಳ ಹಾಗೆ  ಹೆಚ್ಚಿಸಿಕೊಂಡ ಸಂಪತ್ತು ಮತ್ತು ಅದನ್ನು ಬಿಕರಿಮಾಡುವ ಜಾಗತಿಕ ಮಾರುಕಟ್ಟೆಯ ಹುಡುಕಾಟದ ಮೂಲಕ ತಮ್ಮ ಸೂಪ್ರಮಸಿಯನ್ನು ಸ್ಥಾಪಿಸಲು ಹೊರಟಿವೆ. ನಮಗೆ ಅಂಥ ಹೆಚ್ಚಿನ ಸಾಮಗ್ರಿಗಳೂ ಇಲ್ಲ ಜ್ಞಾನವೂ ಇಲ್ಲ, ಅದು ಬೆಳೆಯಲು ಅವಕಾಶ ಕೊಡುವ ಸಾಧ್ಯತೆಗಳೂ ಇಲ್ಲ.

ಇಂಥ ಮಾತುಗಳನ್ನು ಹೇಳಿದಾಗ ಹಲವರು ಇದೆಲ್ಲ ಗೊತ್ತಿಲ್ಲದ ವಿಚಾರ, ನಮಗೆ ಸಂಬಂಧಪಡದ ಅಸಂಬದ್ಧ ವಿವರಣೆ ಎಂದೆ ಭಾವಿಸಿದ್ದಾರೆ. ಭಾರತ ೧೯೯೦-೯೧ರಲ್ಲಿ ಸ್ವದೇಶಿ ರಕ್ಷಣಾ ಆರ್ಥಿಕ ನೀತಿಯಿಂದ ಹಂತ ಹಂತವಾಗಿ ಜಾಗತೀಕರಣಕ್ಕೆ ದಾಟಿದ ಪರಿಸ್ಥಿತಿಯ ಹಿಂದಿನ ಒತ್ತಡಗಳೇನು ಎಂಬುದನ್ನು ನಮ್ಮ ಹೆಚ್ಚಿನ ವಿದ್ಯಾವಂತರು ಅರ್ಥಮಾಡಿಕೊಳ್ಳಲಿಲ್ಲ. ಭಾರತ ಎದುರಿಸುತ್ತಿರುವ ಈ ಸ್ಥಿತಿ ಕರ್ನಾಟಕಕ್ಕೂ ಸಂಬಂಧಿಸಿದೆ. ತಮಿಳುನಾಡು ಅಥವಾ ಮಹಾರಾಷ್ಟ್ರಕ್ಕೆ ಈ ಸಮಸ್ಯೆ ಇಲ್ಲ ಎಂದು ಇದರ ಅರ್ಥವಲ್ಲ. ಹೊರ ದೇಶಗಳ ಸೌಲಭ್ಯಗಳಿಗೆ ಸ್ವಲ್ಪ ಹತ್ತಿರದಲ್ಲಿರುವುದರಿಂದ ಅವರು ನಮಗಿಂತ ಹೆಚ್ಚು ಮಂಪರಿನಲ್ಲಿ ಇದ್ದಾರೆ ಅಷ್ಟೆ.

ನಾವು ಕನ್ನಡಿಗರು ಎಚ್ಚೆತ್ತಿಲ್ಲ, ಮೈಮರೆತಿದ್ದೇವೆ, ಮೂಕರಿಂತಿದ್ದೇವೆ, ಸೌಮ್ಯವಾಗಿದ್ದೇವೆ, ನಿಸ್ಸಹಾಯಕರಾಗಿದ್ದೇವೆ, ಹೆಚ್ಚು ಸಹಿಷ್ಣುಗಳು, ಬಂದವರಿಗೆಲ್ಲಾ ಬಾಗಿಲು ತೆರೆಯುತ್ತೇವೆ,  ಇರುವ ನಮ್ಮ ಜಾಗವನ್ನು ಹೊರಗಿನಿಂದ ಬಂದವರಿಗೆ ಖಾಲಿ ಮಾಡಿಕೊಡುತ್ತೇವೆ. ದಿನೇ ದಿನೇ ನಾವು ಎತ್ತಂಗಡಿ ಆಗುತ್ತಿದ್ದೇವೆ. ನಮ್ಮ ಉದ್ಯೋಗಗಳನ್ನು ಅನ್ಯಭಾಷಿಕರು ಪಡೆದುಕೊಂಡಿದ್ದಾರೆ….. ಹೀಗೆ ನಾವು ‘ಇಲ್ಲಗಳ’ ಪಟ್ಟಿಯಲ್ಲಿ ನಮ್ಮನ್ನು ಸೇರಿಸಿಕೊಳ್ಳುತ್ತಿದ್ದೇವೆ. ಬ್ರಿಟಿಷರಿದ್ದಾಗ ಕಿತ್ತೂರು ರಾಣಿ ಚನ್ನಮ್ಮ ಸಂಗೊಳ್ಳಿರಾಯಣ್ಣ ಟಿಪ್ಪು ಸುಲ್ತಾನ್ ಮುಂತಾದ ವೀರರನ್ನು ಮುಂದಿಟ್ಟುಕೊಂಡು ಹೋರಾಡಿದೆವು. ಅದಕ್ಕೂ ಮೊದಲು ದಾಳಿಕೋರ ಮುಸ್ಲಿಮರ ವಿರುದ್ಧವೂ ಹೋರಾಡಲು ನಮಗೆ ವೀರರು ಇದ್ದರು. ಈಗ ಅಂಥ ವೀರರು ನಮ್ಮ ಹಿಡಿಕ್ಕೆಗೆ ಸಿಗುತ್ತಿಲ್ಲ ನಮ್ಮ ದೊಡ್ಡ ಪರಂಪರೆಯ ಕನ್ನಡ ಚಳುವಳಿಯೇನೊ ಬಹಳ ಕಾಲದಿಂದ ಹಲವರ ಶ್ರಮ, ತ್ಯಾಗದಿಂದ ನಡೆಯುತ್ತಾ ಬಂದಿದೆ. ಆದರೇನು ನಮಗೆ ನಮ್ಮ ನಿಜವಾದ ಶತ್ರು. ಯಾರು ಎಂದೆ ಸ್ಪಷ್ಟವಾಗಿಲ್ಲ ಆ ಶತ್ರು ಸ್ಪಷ್ಟ ಸ್ವರೂಪದಲ್ಲಿ ನಮ್ಮ ಎದುರಿಗೆ ನಿಲ್ಲುತ್ತಿಲ್ಲ. ಸದ್ಯಕ್ಕೆ ತಮಿಳು, ಮಲೆಯಾಳಿ ಅಥವಾ ಮರಾಠಿ, ನಮ್ಮ ಶತ್ರು ಎಂದು ಕೊಂಡಿದ್ದೇವೆ. ಆದರೆ ಅವನು ಎದುರಿಗಿದ್ದು ನಮಗೆ ಹಿಡಿಯಲಾಗುತ್ತಿಲ್ಲ ಇಲ್ಲಿ ನಾವು ಬೆಂಗಳೂರಿನ ತಮಿಳರ ವಿರುದ್ಧ ಹೋರಾಟ ಶುರುಮಾಡಿದರೆ ಚೆನ್ನೈನವರು ಅಲ್ಲಿನ ಕರ್ನಾಟಕದ ಬೇಕರಿ ಮಾಲೀಕರ ವಿರುದ್ಧ ಊಟಿಯ ಟೀ ತೋಟದ ಕನ್ನಡಿಗರ  ವಿರುದ್ಧ ಚಳುವಳಿ ಮಾಡುತ್ತಾರೆ. ರಾಷ್ಟ್ರೀಯ ಸಾಮರಸ್ಯದ ದೃಷ್ಟಿಯಿಂದ ಭಾರತ ಸರ್ಕಾರ ಈ ಇಬ್ಬರನ್ನೂ ಹತ್ತಿಕ್ಕುತ್ತದೆ. ಅಲ್ಲಿಗೆ ನಮ್ಮ ಕನ್ನಡ ಹೋರಾಟ ಮುಗಿಯಿತು. ಬೆನಗಲ್ ರಾಮರಾಯರು, ಆಲೂರು ವೆಂಕಟರಾಯರು, ಡೆಪ್ಯುಟಿ ಚನ್ನಬಸಪ್ಪನವರು, ಹುಯಿಲಗೋಳ ನಾರಾಯಣರಾಯರು, ಬಿ.ಎಂ.ಶ್ರೀ, ಕುವೆಂಪು, ಅಂದಾನಪ್ಪ ದೊಡ್ಡಮೇಟಿ, ಅದರಗುಂಜಿ ಶಂಕರಗೌಡ ಪಾಟೀಲ, ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಮ. ರಾಮಮೂರ್ತಿ, ಅ.ನ.ಕೃ…. ಅವರಿಗಿದ್ದ ಹೋರಾಟದ ವ್ಯಾಪಕ ಕ್ಷೇತ್ರ ಈಗಿನವರಿಗೆ ಸಿಗುತ್ತಿಲ್ಲ. ಆದ್ದರಿಂದಲೇ ಹಲವರು ದಿಕ್ಕು ಕಾಣದೆ ಚಡಪಡಿಸುತ್ತಾರೆ. ಇನ್ನು ಕೆಲವರು ಕನ್ನಡ ಹೋರಾಟವನ್ನು ಸ್ವುದ್ಯೋಗ ಅಥವಾ ರಾಜಕೀಯ ಭವಿಷ್ಯವನ್ನಾಗಿ ಮಾಡಿಕೊಂಡಿದ್ದಾರೆ. ತಪ್ಪು ಅವರದಲ್ಲ; ಶತ್ರುವನ್ನು ಹುಡುಕಿಕೊಳ್ಳಲಾರದ ನಮ್ಮ ಅಸಮರ್ಥತೆಯಲ್ಲಿ ಇದೆ.

ಬದುಕುವ ಹೋರಾಟದಲ್ಲಿ ಕನ್ನಡಿಗರು ತಮಿಳ, ಮರಾಠಿ, ಮಲಯಾಳಿಗಳ ಮುಂದೆ ತೀರಾ ಸಪ್ಪೆಯಾಗಿರುವುದು ನಿಜ. ಇದು ಸಮಸ್ಯೆಯನ್ನು ಪತ್ತೆಹಚ್ಚುವ ಒಂದು ಮುಖ. ಇದು ಮೇಲು ಮಟ್ಟದ ಸಮಸ್ಯೆ. ಬೆಂಗಳೂರಿನ ನಮ್ಮ ಉದ್ಯೋಗ್ದ ಮೇಲೆ ಇರುವ ತಮಿಳು ಬ್ರಾಹ್ಮಣನನ್ನು ಓಡಿಸಿ, ಕನ್ನಡ ಬ್ರಾಹ್ಮಣನಿಗೆ, ತಮಿಳು ವ್ಯಾಪಾರಿಯನ್ನು ಓಡಿಸಿ ಕನ್ನಡ ವ್ಯಾಪಾರಿಗೆ ಅವಕಾಶ ಮಾಡಿಕೊಟ್ಟೆವು ಅನ್ನಿ ಅಷ್ಟರ ಮಟ್ಟಿಗೆ ಅದು ಸರಿ ಎಂದು ನೀವು ಹೇಳಿದರೆ ಅದನ್ನು ಒಪ್ಪಿಕೊಳ್ಳೋಣ. ಬೆಂಗಳೂರಿನ ನಗೆ ಸಾರಿಗೆ ಕಂಡಕ್ಟರ್‌ಗಳಲ್ಲಿ ಮೂವತ್ತು ಪರ‍್ಸೆಂಟ್ ತಮಿಳರೇ ಇದ್ದಾರೆ ಎಂದರೆ ಅದಕ್ಕೆ ಕಾರಣವಾದ ಶತ್ರುವನ್ನು ಎಲ್ಲಿ ಹುಡುಕುತ್ತೀರಿ? ಹಿಂದೆ ಗಾದೆ ಹೇಳುವ ‘ದುಷ್ಮನ್ ಕಹಾಹೈ ದುಷ್ಮನ್ ಬಗಲ್ ಮೆ ಹೈ? ನಮ್ಮದೆ ಆಗುತ್ತಿದೆಯಲ್ಲ; ನಮ್ಮ ಮೊದಲ ಶತ್ರುವೆ ಕೈ ತಪ್ಪಿಸಿಕೊಂಡ.

ಕರ್ನಾಟಕದ ಜನ ಕರ್ನಾಟಕವನ್ನು ಕಲ್ಪಿಸಿಕೊಳ್ಳಲೂ ಆಶಕ್ತರಾಗಿದ್ದಾರೆ. ಯುದ್ಧ ಕಣದಿಂದ ಪಲಾಯನ ಮಾಡಿ ಬಂದ ಪ್ರಜೆಗಳಂತೆ ಕಾಣುತ್ತಾರೆ. ಕನಿಷ್ಠ ಅವರು ಮೊದಲು ಮಾಡಬೇಕಾದ ಕೆಲಸ ಕರ್ನಾಟಕವನ್ನು ಪರಿಕಲ್ಪಿಸಿಕೊಳ್ಳುವುದು, ಕರ್ನಾಟಕದ ಶಕ್ತಿಯನ್ನು ಗುರುತಿಸುವುದು ಮತ್ತು ಅದನ್ನು ಕ್ರಿಯೆಗೆ ರೂಢಿಸುವುದು. ಕರ್ನಾಟಕವನ್ನು ಮೂರು ಬಗೆಯಲ್ಲಿ ಪರಿಕಲ್ಪಿಸಿಕೊಳ್ಳಬಹುದು.

೧. ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಮೂಲಕ

೨. ಕರ್ನಾಟಕ ಭಾರತದಲ್ಲಿ ಬದುಕಿದ ನಮೂನೆಯ ಮೂಲಕ

೩. ಕರ್ನಾಟಕ ಜಾಗತಿಕ ಸ್ಥಿತಿಯಲ್ಲಿ ಏನಾಗಿದೆ ಎಂಬುದನ್ನು ಪ್ರಚಲಿತ ವಿದ್ಯಮಾನಗಳ ಜೊತೆಗೆ ಮುಖಾಮುಖಿ ಮಾಡುವುದು.

ಈ ಪರಿಕಲ್ಪನೆಯ ಒಳಗೆ ಮತ್ತು ಹೊರಗೆ ಯೋಚಿಸಿದಾಗ ಕರ್ನಾಟಕದ ಸತ್ವವೂ ಅದರ ಶತ್ರುಗಳೂ ನಮಗೆ ಎದುರಾಗುತ್ತಾರೆ. ಪರಿಹಾರ ನಮ್ಮ ಸಾಮರ್ಥ್ಯವನ್ನು ಅವಲಂಬಿಸಿದೆ.

ಸ್ವಾತಂತ್ರ ಪೂರ್ವಕ್ಕೆ ಕನ್ನಡ ಭಾಷೆ ಮತ್ತು ಕನ್ನಡನಾಡು ಅದನ್ನು ಆಳುತ್ತಿದ್ದ ರಾಜರ ಮೂಲಕ ಗುರುತಿಸಿಕೊಳ್ಳುತ್ತಿದ್ದವು. ರಾಜನ ಏಳು ಬೀಳುಗಳು ನಾಡಿನ ಹಾಗೂ ಭಾಷೆಯ ಏಳುಬೀಳುಗಳಾಗಿರುತ್ತಿದ್ದವು. ಈಗ ಇವು ಪ್ರಜೆಗಳು ಮತ್ತು ಅವರಿಂದ ಚುನಾಯಿತರಾದ ಪ್ರತಿನಿಧಿಗಳ ಮೂಲಕವೆ ಗುರುತಿಸಿಕೊಳ್ಳಬೇಕಾಗಿದೆ. ಶ್ರೀ ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿ ಆಗುವವರೆಗೆ ಉತ್ತರ ಭಾರತದವರ ಗುರುತಿನಲ್ಲಿ ಕರ್ನಾಟಕದವರು ಮದ್ರಾಸಿಗಳು. ಮದ್ರಾಸ್, ಕೇರಳ ಮತ್ತು ಪಂಜಾಬ ರಾಜ್ಯಗಳು ಸ್ವಾತಂತ್ರ್ಯದ ತರುಣದಲ್ಲೆ ತಮ್ಮ ರಾಜಕೀಯ ಅನನ್ಯತೆಯನ್ನು ಮೆರೆದವು. ಕರ್ನಾಟಕ ಹಾಗಾಗಲಿಲ್ಲ.

ಕರ್ನಾಟಕವನ್ನು ಸ್ಪಷ್ಟವಾಗಿ ಪರಿಕಲ್ಪಿಸಿಕೊಳ್ಳಬೇಕಾದವರು ಕರ್ನಾಟಕದ ರಾಜಕಾರಣಿಗಳು. ಭಾರತದ ಸ್ವಾತಂತ್ರ್ಯದ ಹೊಸತರಲ್ಲಿ ಕರ್ನಾಟಕ ಮಂತ್ರಿ ಮಂಡಲದ ಕೆಲವು ಮಂತ್ರಿಗಳು ಕನ್ನಡನಾಡಿನ ಬಗ್ಗೆ ಮಾತನಾಡುವಾಗ ಕವಿರಾಜ ಮಾರ್ಗಕಾರನ ‘ಕಾವೇರಿಯಿಂದ ಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುದಾವಲಯ ವಿಲೀನ ವಿಷಯ ವಿಷಯ ವಿಶೇಷಂ : ಅಥವಾ ಕನ್ನಡಿಗರು ‘ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’ ಎಂಬ ವಾಕ್ಯಗಳನ್ನು ಉದ್ಧರಿಸುತ್ತಿದ್ದರು. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದ ನಾವು ಆ ಮಾತುಗಳಿಂದ ನಮ್ಮ ಮೈಮನ ತುಂಬಿಕೊಳ್ಳುತ್ತಿದ್ದೆವು. ಆಮೇಲಾಮೇಲೆ ಕರ್ನಾಟಕದ ಸಂಸ್ಕೃತಿ ಮಂತ್ರಿಗಳಿಂದ ಕೂಡ ಇಂಥ ವಾಕ್ಯಗಳು ಗಂಟಲು ಕೀಳಲಿಲ್ಲ ಕನ್ನಡ ಸಂಸ್ಕೃತಿ ಮಂತ್ರಿಯಾಗಿ ಶ್ರೀ ಎಚ್. ವಿಶ್ವನಾಥ ಎಂ.ಪಿ. ಪ್ರಕಾಶ್, ಅಂಥ ಕೆಲವರು ಕರ್ನಾಟಕದ ಮರ‍್ಯಾದೆ ಉಳಿಸಿದರು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹೆದರಿಸಿದ ಕನ್ನಡ ಸಂಸ್ಕೃತಿ ಮಂತ್ರಿಗಳೂ ಕೂಡ ಆಗಿ ಹೋಗಿದ್ದು ಮತ್ತೊಂದು ವಿಶೇಷ.

ಕರ್ನಾಟಕವನ್ನು ಸರಿಯಾಗಿ ಪರಿಕಲ್ಪಿಸಿ ಕಟ್ಟಿಕೊಡಬೇಕಾದ ಜನವರ್ಗವೆಂದರೆ ಕನ್ನಡನಾಡಿನ ಚಿಂತಕರು. ಇಲ್ಲಿ ರಾಷ್ಟ್ರೀಯವಾದಿಗಳು, ಗಾಂಧಿವಾದಿಗಳು, ಲೋಹಿಯಾವಾದಿಗಳು, ಮಾರ್ಕ್ಸ್ ವಾದಿಗಳು, ಅಂಬೇಡ್ಕರ್‌ವಾದಿಗಳು ಹಾಗೂ ಸ್ವತಂತ್ರ ಚಿಂತಕರು ಹಲವರಿದ್ದರು ಮತ್ತು ಇದ್ದಾರೆ. ಇವರು ವಿಶೇಷವಾಗಿ ಭಾರತದ ಜಾತಿ, ವರ್ಗ, ವರ್ಣ, ಧರ್ಮಗಳ ಅಸಮಾನತೆಯ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕವನ್ನು ಒಂದು ಅನನ್ಯತೆಯನ್ನಾಗಿ ಪರಿಕಲ್ಪಿಸಿ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಇವರ ಕೊಡುಗೆ ತೀರಾ ಕಡಿಮೆ. ಭಾಷಾ ಸಂಸ್ಕೃತಿ, ಭಾಷಾ ರಾಷ್ಟ್ರ ಇವುಗಳ ಸಾಂಸ್ಕೃತಿಕ ಆಸ್ತಿತ್ವ ಮತ್ತು ಅನನ್ಯತೆಯ ಬಗ್ಗೆ ದೇಶದ ಹೊರಗೆ ಮತ್ತು ಒಳಗೆ ಇದ್ದ ಹಲವು ಚಿಂತಕರು ಗಮನಿಸಿದ್ದರು. ಅನಂತರದ ಚಿಂತಕರು ಈ ಬಗ್ಗೆ ಅಗತ್ಯವಾದಷ್ಟು ಗಮನ ಹರಿಸಲಿಲ್ಲ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಜನವರ್ಗ ಮತ್ತು ಸಂಸ್ಕೃತಿಗಳನ್ನು ತುಂಡು ತುಂಡಾಗಿ ಕಲ್ಪಿಸಿಕೊಂಡರೆ ಹೊರತು ಅವುಗಳ ಅಂತರ್ ಸಂಬಂಧಗಳನ್ನು ಗ್ರಹಿಸಿದಂತೆ ಕಾಣಲಿಲ್ಲ ಇದರಿಂದಾಗಿ ಸಾಹಿತ್ಯವಲಯದಲ್ಲಿ ಇರುವವರೆ ಕರ್ನಾಟಕ ಸಂಸ್ಕೃತಿ ಮತ್ತು ಅದರ ಅನನ್ಯತೆಯ ಬಗ್ಗೆ ಮಾತನಾಡುವಂತಾಯಿತು. ಇದರಿಂದ ಆದ ಅನ್ಯಾಯ ಎಂದರೆ, ಕನ್ನಡ-ಕರ್ನಾಟಕದ ಸಮಸ್ಯೆ ಎಂದರೆ ಈ ಸಾಹಿತಿಗಳ ಸಮಸ್ಯೆ ಎನ್ನುವಂತಾಗಿದೆ. ಕರ್ನಾಟಕದ ಸಮಸ್ಯೆ ಎಂದರೆ ಕರ್ನಾಟಕದ ಜನರ ಸಂಸ್ಕೃತಿಯ ಸಮಸ್ಯೆ; ಹಾಗೆಂದರೆ ಕರ್ನಾಟಕದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಯ ವಿಷಯ ಎಂದು ಬಹುತೇಕರಿಗೆ ಅರ್ಥವಾಗಬೇಕಾಗಿದೆ. ಈ ಬಗ್ಗೆ ವಿದ್ಯಾವಂತರೆನಿಸಿಕೊಂಡ ಹಲವರಲ್ಲಿ ಎಂಥ ಅಭಿಪ್ರಾಯವಿದೆ ಎಂದರೆ ಆರ್ಥಿಕತೆ ಬಗ್ಗೆ ಮಾತನಾಡಲು ನಾವು ಮಾರ್ಕ್ಸ್‌ವಾದಿಗಳಾ? ರಾಜಕೀಯ! ಅಯ್ಯೊ, ಅದು ಏನಿದ್ದರೂ ರಾಜಕಾರಣಿಗಳು ಮಾತನಾಡುವ ಸಂಗತಿ. ನಮಗ್ಯಾಕೆ ಅವರ ತಂಟೆ ಎಂದು ಹೆದರುತ್ತಾರೆ. ಇವರಿರಲಿ, ಇವರನ್ನು ಕಂಡು ನಾವು ‘ಶಿವ ಶಿವ’ ಎನ್ನಬೇಕಾಗಿದೆ. ಪಕ್ಷ ರಾಜಕೀಯದ ಬಗ್ಗೆ ಮಾತನಾಡಲು ಭಯವಿದ್ದರೆ, ಶ್ರೀಮಂತರ ಸಂಪಾದನೆಯ ಬಗ್ಗೆ ಟೀಕೆ ಮಾಡಲು ಆಗದಿದ್ದರೆ, ಬಿಡಿ ಸೃಜನಾತ್ಮಕ ಆರ್ಥಿಕ ರಾಜಕೀಯ ಚಿಂತನೆಯ ಬಗ್ಗೆ ಮಾತನಾಡಲು ಏನು ಧಾಡಿ?

ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವ ಕೆಲಸ ಕರ್ನಾಟಕದ ಅಧಿಕಾರಿಗಳಿಂದ ಸಾಧ್ಯ ಅವರಾಗಲಿ ಅವರ ಮಕ್ಕಳಾಗಲಿ ಇಂಗ್ಲಿಷ್ ಕಲಿತಿರುವುದು ಅಪರಾಧವಲ್ಲ, ಅದು ಅಗತ್ಯ. ಆ ಕಾರಣಕ್ಕೆ ಕನ್ನಡಿಗನಿಗೆ ಹುಟ್ಟಿದ, ಕನ್ನಡ ಸಂಸ್ಕೃತಿ ಸಂಪಾದಿಸಿಕೊಂಡ, ಕನ್ನಡಿಗನಾಗಿರುವ ಭಾಗ್ಯದಿಂದ ವಂಚಿಸಿಕೊಳ್ಳಬೇಕಾಗಿಲ್ಲ. ನಮ್ಮ ಸುಖದ ಕ್ಷಣಗಳು, ದುಃಖದ ಕ್ಷಣಗಳು ಮತ್ತು ಚಿಂತನೆಯ ಕ್ಷಣಗಳು ಕನ್ನಡದ ಸಂದರ್ಭಗಳೇ ಅಗಿರುತ್ತವೆ ಎಂಬುದನ್ನು ನಿರಾಕರಿಸಲು ಸಾಧ್ಯವೆ? ಇದು ಬೌದ್ಧಿಕ ಸ್ವಾತಂತ್ರ್ಯದ ವಿಷಯ, ಬೌದ್ಧಿಕವಾಗಿ ಗುಲಾಮನಾದವನು ತನ್ನ ಸಂಸ್ಕೃತಿಯನ್ನಾಗಲೀ ಭಾಷೆಯನ್ನಾಗಲೀ ಬೆಳಸಲಾರ. ಕರ್ನಾಟಕದ ಅಧಿಕಾರಿಗಳು ಐ.ಎ.ಎಸ್. ನವರಿಗೆ ಹೆದರಿಕೊಂಡು, ಅವರನ್ನು ವೈಭವೀಕರಿಸುತ್ತಾ ತಮ್ಮತನವನ್ನು ಸಂಪೂರ್ಣ ಮರೆತಿದ್ದಾರೆ. ಭಾರತ ಮಟ್ಟದ ಅಧಿಕಾರಿಗಳನ್ನು ಅವರು ಮಣಿಸಬಹುದು.

ಕರ್ನಾಟಕ ಒಂದು ಭಾಷಾಗಣರಾಜ್ಯವಾಗಲು ಶ್ರಮಿಸಿದ ಹಲವರಿದ್ದಾರೆ. ಅವರಿಗೆ ಸಮೃದ್ಧ ಕರ್ನಾಟಕದ ಬೆಳವಣಿಗೆಯ ಕನಸುಗಳಿದ್ದವು. ಆದರೆ ಕರ್ನಾಟಕವೆಂದರೆ ಕನ್ನಡ ಮಾತನಾಡುವ ಒಂದು ದೊಡ್ಡ ಪ್ರದೇಶ ಮತ್ತು ಅದರೊಳಗೆ ದೊಡ್ಡದಾಗಿ ಕಾಣುವ ಜನವೆ ಅವರ ಅಭಿವೃದ್ಧಿಯ ಘಟಕಗಳಾಗಿದ್ದವು. ಸ್ವತಂತ್ರ ಭಾಷಾ ರಾಜ್ಯದ ಪರಿಕಲ್ಪನೆಯಲ್ಲಿ ಆರ್ಥಿ-ಸಾಂಸ್ಕೃತಿಕ ಸಮಾನತೆ ಹಾಗೂ ಸಹಭಾಗಿತ್ವದ ಒತ್ತಡ ಇದೆ ಎಂಬುದು ಅವರಿಗೆ ಅಷ್ಟಾಗಿ ತಿಳಿದಂತಿರಲಿಲ್ಲ. ಈ ಅರಿವಿನ ಕೊರೆತೆಯೆ ಕರ್ನಾಟಕವನ್ನು ಒಟ್ಟಿಗೆ ಕೂಡಿಸಿಕೊಂಡು ಬರಲು ಅಡ್ಡಿಯಾಯಿತು. ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಆಗ ಮಾತನಾಡಿದವರೆಲ್ಲ ವಿಶಾಲ ಮನೋಭವಾದ ದೊಡ್ಡಮನುಷ್ಯರು. ಆದರೆ ಸ್ವಾತಂತ್ರ್ಯ ಅನೇಕ ಅಸಮಾನ, ಅಸಂಘಟಿತ ಸಾಂಸ್ಕೃತಿಕ ವಿಶಿಷ್ಟ ಇದ್ದ ಜನರನ್ನು ಹೇಗೆ ಒಟ್ಟಾಗಿ ಕರೆದುಕೊಂಡು ಹೋಗುವುದು ಎಂಬ ಬಗ್ಗೆ ಆಲೋಚನೆ ಇರಲಿಲ್ಲ. ಇದರಿಂದಾಗಿ ಅನಂತರ ಬಂದ ನಮ್ಮ ಬರ್ಬರ ರಾಜಕಾರಣ ಬೇರೆ ಬೇರೆ ಜನ, ಭಾಷೆ, ಸಂಸ್ಕೃತಿಗಳನ್ನು ಅವು ಇರುವಂತೆ,  ಇರುವಲ್ಲಿಯೆ ಇಟ್ಟು ಬೆಳಸಿದರೆ ಹೊರತು ಅವುಗಳನ್ನು ಕರ್ನಾಟಕದ ಸಂರಚನಾ ಘಟಕಗಳನ್ನಾಗಿ ರೂಪಿಸಲಿಲ್ಲ, ಕರ್ನಾಟಕದೊಳಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಒಡಕು ಧ್ವನಿಗಳು ಹುಟ್ಟಿ ಕೊಳ್ಳಲು ಈ ಬಗೆಯ ಸಮಗ್ರ ಹಾಗೂ  ದೂರದರ್ಶಿ ಚಿಂತನೆಯ ಕೊರತೆಯೆ ಕಾರಣ. ಇದು ಕನ್ನಡ ರಾಜಕಾರಣ ಹಾಗೂ ಚಿಂತಕರ ಮಿತಿಯೂ ಹೌದು.

ಕರ್ನಾಟಕ ಒಂದು ಭಾಷಾ ನಾಡಾಗಿ ಹುಟ್ಟಿಕೊಂಡುದನ್ನು ಸಮಸ್ತ ಕನ್ನಡಿಗರು ಸ್ವಾಗತಿಸಿದರು. ಅದರ ಹುಟ್ಟಿನ ಜೊತೆಗೆ ಕನ್ನಡಪರ ಚಳುವಳಿಗಳು ಹುಟ್ಟಿಕೊಂಡುದು ಒಂದು ದುರ್ದೈವ. ಕರ್ನಾಟಕವನ್ನು ಒಂದು ಭಾಷೆಯ ಮೂಲಕ ಗುರುತಿಸಿದರಾದರೂ ಅದು ಕೇವಲ ಕನ್ನಡ ಮತಾನಾಡುವವರ ನಾಡು ಅಂತ ಆಗಿರಲಿಲ್ಲ. ಕರ್ನಾಟಕವೆಂಬುದು ಒಂದು ಅಖಂಡ ಸಂಸ್ಕೃತಿಯ ಪ್ರದೇಶ. ಕರ್ನಾಟಕ ಅದರೊಳಗೆ ಇರುವ ಎಲ್ಲ ಜನರ ಅಭಿವೃದ್ಧಿಯನ್ನು ಒಳಗೊಂಡಿದೆ ಎಂಬುದನ್ನು ಕೆಲವರು ತಿಳಿಯಲಿಲ್ಲ ಕನ್ನಡ ಪರ ಹೋರಾಟಗಾರರು ಕೂಡ ಕರ್ನಾಟಕದ ಅಭಿವೃದ್ಧಿ ಎಂದರೆ ಕರ್ನಾಟಕ ಒಳಗೊಂಡಿರುವ ಎಲ್ಲರ ಅಭಿವೃದ್ಧಿ ಎಂಬುದನ್ನು ಬಿಂಬಿಸಲಿಲ್ಲ. ಇದು ಆ ಕಾಲದ ಕನ್ನಡಪರ ಚಿಂತಕರ ಮಿತಿ; ಭಾಷಾ ಪ್ರಾಂತವೊಂದರಲ್ಲಿ ಬಹು ಜನರನ್ನು ಮಾತನಾಡಿಸುವ ಭಾಷೆ ಒಂದು ವಿಶಾಲ ಅರ್ಥದಲ್ಲಿ ಆ ನಾಡಿನ ಅಭಿವೃದ್ಧಿಯ ಅಳತೆ. ಅದರೊಳಗಿನ ಇನ್ನಿತರ ಭಾಷಿಕರು ಬೇರೆಯವರು ಅಲ್ಲ. ಒಂದು ರಾಜ್ಯಕ್ಕೆ ರಾಜ್ಯಭಾಷೆ ಸಾಧ್ಯವಾಗಿದೆ ಎಂದರೆ ಅದು ಆ ರಾಜ್ಯದ ಆರ್ಥಿಕ ಸಾಮಾಜಿಕ ಬೆಳವಣಿಗೆಯನ್ನು ಚಾರಿತ್ರಿಕವಾಗಿ ಸಾಧ್ಯಮಾಡಿಕೊಟ್ಟಿದೆ ಎಂದು ಅರ್ಥ. ಈ ಕಾರಣಕ್ಕೆ ಅದರ ಪ್ರಾಧಾನ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಪ್ರಧಾನ ಭಾಷೆ ಕೇವಲ ಭಾಷೆ ಅಲ್ಲ; ಅದು ಆ ನಾಡಿನ ಅನಂತರಕಾಲದ ಅಭಿವೃದ್ಧಿಯ ಹಾಗೂ ಅಸ್ತಿತ್ವದ ಸಂಕೇತ. ಕನ್ನಡ ಭಾಷೆಯನ್ನು ಒಂದು ಅಖಂಡ ಸಂಸ್ಕೃತಿ ಧಾರೆ ಎಂದು ಗುರುತಿಸಲಾಗದ ಕನ್ನಡ ಹೋರಾಟಗಾರರು, ಕನ್ನಡವೆಂದರೆ ಕೆಲವರ ಭಾಷೆ ಎಂದು ಅದರ ಅಖಂಡತೆಯನ್ನು ಗುರುತಿಸಲು ಅಶಕ್ತರಾದರೆ, ನಾಡಿನೊಳಗಣ ಇತರ ಭಾಷಿಕರು ಕರ್ನಾಟಕದ ಅಭಿವೃದ್ಧಿಗೆ ಒಂದು ಬಗೆಯಲ್ಲಿ ಅಡೆತಡೆಯಾದರು. ಆ ಕಾಲದ ಕನ್ನಡ ಹೋರಾಟಗಾರರ ಚಿಂತನೆಯಲ್ಲಿ ಮಿತಿ ಇತ್ತು. ಆದರೆ ಆವನ ಉದ್ದೇಶ ಎಂದೂ ಕೆಟ್ಟದಾಗಿರಲಿಲ್ಲ. ಆರಂಭಿಕ ಹೋರಾಟದ ಪರಿಸ್ಥಿತಿಯ ಹಾಗೆ, ಅದು ಹೆಚ್ಚು ಭಾವುಕವಾಗಿರುತ್ತದೆ. ಈ ಭಾವುಕತೆ ಅಪರಾಧ ಕೂಡ ಅಲ್ಲ ಅದು ಮನಸ್ಸನ್ನು ಮನುಷ್ಯರನ್ನು ಬೆಳೆಸುವ ಪ್ರಕ್ರಿಯೆ.

ಕನ್ನಡ ನಾಡೇನೋ ಉದಯವಾಯಿತು. ಆದರೆ ಅದರೊಳಗಿನ ಜನರನ್ನು ಕನ್ನಡಿಗರನ್ನು ಮಾಡುವುದು ಹೇಗೆ ಎಂದು ಆರಂಭಿಕ ಕನ್ನಡ ಹೋರಾಟಗಾರರಿಗೆ, ಕರ್ನಾಟಕದ ಸರ್ಕಾರಕ್ಕೆ ಗೊತ್ತಾಗಲಿಲ್ಲ. ಕರ್ನಾಟಕದವರೇ ಆಗಿ ಕನ್ನಡ ಮಾತೃಭಾಷೆ ಅಲ್ಲದವರು ಕನ್ನಡ ಬಹುಸಂಖ್ಯಾತರ ಭಾಷೆ, ಅದರ ಪರವಾದ ಹೋರಾಟ ಬಹು ಸಂಖ್ಯಾತರ ಅಭಿವೃದ್ಧಿಯ ಸಂಗತಿ ಎಂದು ತಿಳಿದರು. ಇದರ ಪರಿಣಾಮವೆಂದರೆ ಕನ್ನಡದ ಅಭಿವೃದ್ಧಿಯೆ ಬೇರೆ ಕರ್ನಾಟಕದ ಅಭಿವೃದ್ಧಿಯೆ ಬೇರೆ ಎಂಬ ಮನೋಭಾವ ಹುಟ್ಟಿಕೊಂಡದ್ದು. ಕರ್ನಾಟಕದ ಅಭಿವೃದ್ಧಿಯೆಂದರೆ ಇಂಡಸ್ಟ್ರಿಯಲ್ ಎಸ್ಟೇಟ್ ಸ್ಥಾಪಿಸುವುದು, ಕನ್ನಡದ ಅಭಿವೃದ್ಧಿಯೆಂದರೆ ಕನ್ನಡ ಭಾಷೆಯ ಬಗ್ಗೆ ಭಾಷಣ ಮಾಡುವುದು ಎಂದಾಯಿತು. ಕನ್ನಡ ಭಾಷೆಯ ಜೊತೆಗೆ ಕರ್ನಾಟಕ, ಕರ್ನಾಟಕದ ಜೊತೆಗೆ ಜನರ ಅಭಿವೃದ್ಧಿ ಎಂಬ ಸಮಗ್ರ ಚಿಂತನೆಗೆ ಚ್ಯುತಿಯುಂಟಾಯಿತು. ಈಗಲಾದರೂ ನಿಮ್ಮ ಭಾಷೆಯ ಮೂಲಕ ನಿಮ್ಮ ಅಭಿವೃದ್ಧಿ ಕನ್ನಡ ಭಾಷೆಯ ಮೂಲಕ ಕರ್ನಾಟಕದ ಅಭಿವೃದ್ಧಿ ಎಂಬ ತಿಳಿವನ್ನು ಎಲ್ಲರಲ್ಲಿ ತರಬೇಕಾಗಿದೆ. ಕನ್ನಡ ಕರ್ನಾಟಕವಿಲ್ಲದೆ ನಿಮ್ಮ ಅಭಿವೃದ್ಧಿ ಹಾಗೂ ಅಸ್ತಿತ್ವ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಕರ್ನಾಟಕದ ಎಲ್ಲರೂ ಕನ್ನಡ ಅಂದರೆ ಕರ್ನಾಟಕದ ಐಡೆಂಟಿಟಿಯಲ್ಲಿ ಇದ್ದೇವೆ. ಎಂಬುದನ್ನು ಅರ್ಥಮಾಡಿಕೊಳ್ಳುವುದು ಶ್ರೇಯಸ್ಕರ. ಈ ನಿಟ್ಟಿನ ಕನ್ನಡ ಚಳುವಳಿ, ಕರ್ನಾಟಕದ ಪರ ಕಾರ್ಯಕ್ರಮ ಇನ್ನೂ ಆರಂಭವಾಗಿಯೆ ಇಲ್ಲ ಎನ್ನಬಹುದು.

ಕರ್ನಾಟಕ ರಾಜ್ಯದ ರಾಜಧಾನಿಯಲ್ಲಿ ಕನ್ನಡದ ಮೂಲಕ ಕರ್ನಾಟಕದ ಅಭಿವೃದ್ಧಿ ಎಂಬ ಚಿಂತನೆಗೆ ಅವಕಾಶವೆ ಇಲ್ಲ ಅಲ್ಲಿ ಅಭಿವೃದ್ಧಿ ವ್ಯಕ್ತಿಗಳ ಮತ್ತು ಉದ್ಯಮಿಗಳ ಮಧ್ಯದ ಸೆಣಸಾಟ; ರಾಜ್ಯವೆಂಬುದು ಗಣನೆಗೆ ಬರುತ್ತಿಲ್ಲ, ಬೆಂಗಳೂರಿನ ಅಭಿವೃದ್ಧಿ (ಪರಿಕಲ್ಪನೆ) ಎಷ್ಟು ತಾತ್ಕಾಲಿಕ ಎಂದರೆ ಅಲ್ಲೊಬ್ಬ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಕೋಟ್ಯಾಧಿಪತಿ ಆಗಿರುತ್ತಾನೆ ಮತ್ತೊಬ್ಬ ದರಿದ್ರಾಧಿಪತಿಯಾಗಿರುತ್ತಾನೆ; ಈ ಮಧ್ಯೆ ಇಡೀ ಕರ್ನಾಟಕ ಜನ ಹತ್ತನೆ ಶತಮಾನದಲ್ಲೇ ಇರುತ್ತಾರೆ. ಈ ಅದ್ಭುತಗಳು ಅವತರಿಸುವುದು ವ್ಯಕ್ತಿ ಆಧಾರಿತ ಅಥವಾ ಉದ್ಯಮಪತಿ ಆಧಾರಿತ ಅಭಿವೃದ್ಧಿ ಅಥವಾ ಸಂಪತ್ತಿನ ಪರಿಕಲ್ಪನೆ ಇದ್ದಾಗ ಇಂಥ ಕಡೆ ಕರ್ನಾಟಕವೂ ನಗಣ್ಯ. ಜಗತ್ತಿನ ಸಂದರ್ಭದಲ್ಲಿ ಭಾರತವೂ ನಗಣ್ಯವಾಗುತ್ತದೆ.

ಈ ವ್ಯಕ್ತಿ ಆಧಾರಿತ ಅವಾಂತರಕಾರಿ ಅಭಿವೃದ್ಧಿಯನ್ನು ಹತ್ತಿಕ್ಕಲು ಸಂಸ್ಕೃತಿ ಆಧಾರಿತ ಅಭಿವೃದ್ಧಿಯ ಕಡೆಗೆ ನಾವು ನಡೆಯಬೇಕಾಗಿದೆ. ಈ ಸಂಸ್ಕೃತಿ ಎಂಬುದು ಒಂದು ಸಂಸ್ಕೃತಿಯೊಳಗಿನ ಒಟ್ಟು ಜನರ ಅಭಿವೃದ್ಧಿಯ ಬಗ್ಗೆ ಮಾತಾಡುತ್ತದೆ. ಆದ್ದರಿಂದ ಒಂದಲ್ಲ ಒಂದು ರೀತಿಯಿಂದ ಸ್ವತಂತ್ರ ಅಸ್ತಿತ್ವದ, ಚಾರಿತ್ರಿಕವಾಗಿ ಗಟ್ಟಿಯಾಗಿರುವ ಪ್ರತಿಯೊಂದು ಸಂಸ್ಕೃತಿಯೂ ಅದು ಭಾಷಾ ಸಂಸ್ಕೃತಿಯಾಗಲಿ, ಬುಡಕಟ್ಟು ಸಂಸ್ಕೃತಿಯಾಗಲಿ, ದೇಶ ಸಂಸ್ಕೃತಿಯಾಗಲಿ, ತನ್ನ ಅಖಂಡ ಅಭಿವೃದ್ಧಿ ಹೋರಾಟಕ್ಕಾಗಿ ಎದ್ದು ನಿಲ್ಲಬೇಕು. ಆಗ ಸಂಪತ್ತಿನ ಅಸಮಾನ ಹಂಚಿಕೆ ಆದಷ್ಟು ಕಡಿಮೆಯಾಗುತ್ತದೆ.

ಆದ್ದರಿಂದಲೆ ನಮಗೆ ಈಗ ಕನ್ನಡ ವಿಶ್ವವಿದ್ಯಾನಿಲಯ ಒಂದು ಸಾಂಸ್ಕೃತಿಕ ಆಸ್ತಿಯೂ ಅಸ್ತ್ರವೂ ಆಗಬೇಕಾಗಿದೆ. ಬೆಂಗಳೂರು ನಮ್ಮ ರಾಜಕೀಯದ ರಾಜಧಾನಿಯಾಗಿ ಇರಲಿ, ಕನ್ನಡ ವಿಶ್ವವಿದ್ಯಾಲಯ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಆಗಲಿ. ಪರಕೀಯರ ದಾಳಿಯನ್ನು ಎದುರಿಸಿ ಸ್ವತಂತ್ರ ಸಾಂಸ್ಕೃತಿಕ ನೆಲೆಯನ್ನು ನಿರ್ಮಿಸಿಕೊಳ್ಳುವ ಚಾರಿತ್ರಿಕ ಒತ್ತಡದಿಂದ ಹಂಪಿಯಲ್ಲಿ ವಿಜಯನಗರ ಹುಟ್ಟಿಕೊಂಡಿತು ಎಂಬುದು ಈಗ ಇತಿಹಾಸ. ಇಲ್ಲಿಯ ಇತಿಹಾಸದ ಪಾಠವೆ ಕರ್ನಾಟಕವನ್ನು ಪುನರ್ ನಿರ್ಮಿಸುವ ಚಾರಿತ್ರಿಕ ತುರ್ತು ಮತ್ತು ಹೊಣೆಗಾರಿಕೆಯನ್ನು ಹೊರಬೇಕಿದೆ. ಆದರೆ ಈಗ ನಮ್ಮ ಮುಂದೆ ಇರುವ ಚರಿತ್ರೆ ಬೇರೆಯದೇ ತೆರನದು. ವಸಾಹತು ಶಾಹಿಯಿಂದ ಸ್ವಾತಂತ್ರ್ಯವನ್ನು ಪಡೆದದ್ದು ಮುಗಿದೆ. ಈ ಐವತ್ತು ವರ್ಷಗಳಲ್ಲಿ ಸಮಾನತೆ, ಸರ್ವೋದಯ, ಪೂರ್ಣದೃಷ್ಟಿ ಸಾಮಾಜಿಕ ನ್ಯಾಯದಂಥ ಸೋದರತ್ವದ ಪರಿಕಲ್ಪನೆಗಳು ನಮ್ಮ ಸಮಾಜದ ಮೇಲೆ ಹಾದು ಹೋಗಿವೆ. ಈ ಐವತ್ತು ವರ್ಷಗಳಲ್ಲಿ ಸಮಾನತಾ ಹೋರಾಟದ ಸಾಧನೆ ಏನೂ ಅಲ್ಲ ಎನ್ನುವಂಥ ರೀತಿಯ ಆಂತರಿಕ ಹಾಗೂ ಬಾಹ್ಯ ವಸಾಹತೀಕರಣ ಬೇತಾಳದಂತೆ ನಮ್ಮ ಬೆನ್ನು ಹೇರಿದೆ.

ನಮ್ಮ ಹಿಂದಿನ ‘ಸಂಸ್ಕೃತಿ ಕರ್ನಾಟಕ’, ‘ಸಾಹಿತ್ಯ ಕರ್ನಾಟಕವನ್ನು’ ತಿಳಿದುಕೊಂಡರೆ ಅದು ಸಂಸ್ಕೃತ ಸಂಸ್ಕೃತಿಯ ಯಜಮಾನಿಕೆಯಲ್ಲಿತ್ತು ಹೊರಗಿನ ಶಕ್ತಿಗಳು ಒಳಗೆ ಬಂದು ಹೊಂದಾಣಿಕೆಯಾಗಿದ್ದವು. ಇವು ದೋಚಿದ್ದು ಮತ್ತು ಕೊಟ್ಟದ್ದರಲ್ಲಿ ಹೆಚ್ಚು ಕಡಿಮೆ ಹೊಂದಾಣಿಕೆಯಾಯಿತು. ಬ್ರಿಟಿಷ್ ವಸಾಹತುಶಾಹಿ ‘ಇದು ನಮ್ಮ ಮನೆ’ ಎಂದು ಬಂದಂತೆ ಕಾಣಲಿಲ್ಲ. ಮನೆ ತಂತ್ರಜ್ಞಾನವನ್ನು ಅದು ಹಾಳು ಮಾಡಿತು. ವಸಾಹತುಶಾಹಿ ಅಭಿವೃದ್ಧಿ ಪರಿಕಲ್ಪನೆ ಭಾರತವನ್ನು ಹೊಸದಾಗಿ ಕಟ್ಟಿಕೊಳ್ಳಲು ಸಹಕರಿಸಲಿಲ್ಲ ತನ್ನ ಹೊಸದನ್ನು ಪಡೆಯಲು ಮಾತ್ರ ಪ್ರೋತ್ಸಾಹಿಸಿತು. ಸೃಷ್ಟಿಯನ್ನು ಕೊಡದ, ವಸ್ತುಗಳನ್ನು ಮಾತ್ರ ಕೊಟ್ಟ ಈ ಮಾಂತ್ರಿಕ ಯಜಮಾನನನ್ನು ಭಾರತ ವಿರೋಧಿಸಿತು. ಸ್ವಂತದ ಸೃಜನಶೀಲತೆಗಾಗಿ ಹೋರಾಡಿತು. ಇದರ ಉಪ ಉತ್ಪನ್ನವೆ ನಮ್ಮ ನವೋದಯ ಸಾಹಿತ್ಯ.

ಕನ್ನಡ ಸಾಹಿತಿ ಮತ್ತು ಕನ್ನಡ ಭಾಷೆ ಹಾಗೂ ಜನಸಾಮಾನ್ಯರ ಮಧ್ಯೆ ಒಂದು ಅವ್ಯಕ್ತ ಗೋಡೆ ನಿರ್ಮಾಣವಾಗಿದೆ. ಇದಕ್ಕೆ ಜನರಷ್ಟೇ ಕಾರಣರಲ್ಲ. ಕನ್ನಡ ಸಾಹಿತಿಗಳು ಕೂಡ. ಇಲ್ಲಿಯವರೆಗಿನ ನಮ್ಮ ಸಾಹಿತ್ಯ ಆಲೋಚನೆ ಸಾಹಿತ್ಯವೇ ಬೇರೆ; ಅದು ಕನ್ನಡ ನಾಡು ಹಾಗೂ ಕನ್ನಡ ರಾಜಕೀಯಕ್ಕೆ ದೂರವಾದುದು ಎಂದೆ ತಿಳಿದುಕೊಂಡಿದ್ದರು. ಇವತ್ತೂ ಕೂಡ ನಮ್ಮ ಸಾಹಿತಿಗಳ ಕ್ಷೇತ್ರವೆಂದರೆ ತಾವು ವಾಸಮಾಡುವ ಮನೆ, ಸಾಹಿತ್ಯರಚನೆ ಎಂದರೆ ತಪಸ್ಸು. ಸಾಹಿತ್ಯದ ಕೊಡುಗೆ ಎಂದರೆ ದಪ್ಪ ದಪ್ಪ ಆದರ್ಶನಗಳ ಪ್ರತಿಪಾದನೆ. ನಮ್ಮ ಯಾವ ಸಾಹಿತ್ಯ ಪ್ರಸ್ಥಾನವೂ ಸರ್ವತಂತ್ರ ಸ್ವತಂತ್ರ ಸಾಹಿತ್ಯ ಉತ್ಪತ್ತಿಯಲ್ಲ. ಪ್ರತಿಯೊಂದು ಸಾಹಿತ್ಯ ಪ್ರಸ್ಥಾನದ ಹಿಂದೆ ಸ್ವತಂತ್ರವಾದ ಸಾಮಾಜಿಕ ಸ್ಥಿತ್ಯಂತರ ಇದೆ. ಆ ಸಾಮಾಜಿಕ ಚಳುವಳಿಯ ಉತ್ಪತ್ತಿಯಾಗಿಯೆ ಸಾಹಿತ್ಯ ಹುಟ್ಟಿ ಬಂದಿದೆ. ನಮ್ಮ ನವೋದಯ, ನವ್ಯ, ಪ್ರಗತಿಪರ ಹಾಗೂ ಬಂಡಾಯ ಸಾಹಿತ್ಯ ಪ್ರಸ್ಥಾನಗಳು ಇದಕ್ಕೆ ಹೊರತಲ್ಲ. ಇದರ ಅರ್ಥ ಸಾಹಿತ್ಯ ಸಮಾಜದ ಆಗು ಹೋಗುಗಳಿಗೆ ನೇರವಾಗಿ ಸಂಬಂಧಿಸಿದೆ. ಸಾಹಿತಿ ಸಮಾಜದ ಸ್ಥಿತ್ಯಂತರದ ಹೊರಗೆ ಇಲ್ಲ; ಒಳಗೇ ಇದ್ದಾನೆ. ಆದ್ದರಿಂದ ಕರ್ನಾಟಕ ಕನ್ನಡದ ಸ್ಥಿತಿ-ಗತಿಗಳ ಜೊತೆಗೆ ಆತನೇರವಾಗಿಯೆ ಗುರುತಿಸಿಕೊಳ್ಳಬೇಕಿದೆ. ಸಾಹಿತಿ ತನ್ನ ಶುಭ್ರತೆ ಪರಿಕಲ್ಪನೆಯ ಅವಾಂತರದಿಮದ ಹೊರಬರಬೇಕಿದೆ. ಸಂಶೋಧಕ ಹೂತು ಹೋದುದನ್ನು ಕೆದಕುತ್ತಾ ಕೂರುವುದಕ್ಕೆ ಸೀಮಿತ ಆಗಬಾರದು. ವೈಚಾರಿಕ ತನ್ನ ಬೀದಿ ಭಾಷಣಗಳಿಗೆ ಅಂಟಿಕೊಳ್ಳಲಾಗದು. ಬಂಡಾಯ ಸಾಹಿತ್ಯ ಒದರಿಕೊಂಡು ಎದ್ದು ಮುದುರಿಕೊಂಡು ಬಿದ್ದದ್ದು, ಒಂದು ಸಾಹಿತ್ಯಕ ನಿರ್ವಾತ ಸೃಷ್ಟಿಯಾದಂತೆ ಕಾಣುತ್ತಿದೆಯಲ್ಲವೆ? ಅದು ಬಂಡಾಯ ಮಿತಿಯಲ್ಲ; ಬಂಡಾಯದೊಳಗಣ ಮೌಲ್ಯಗಳ ಘೋಷಣೆಯಂತೆ ಕರ್ನಾಟಕ ಹೊರಳಲಾಗಿಲ್ಲ. ಅದು ನಿಜವಾಗಿ ಕರ್ನಾಟಕ ಕನ್ನಡ ಸಂಸ್ಕೃತಿಯ ಬೆಳವಣಿಗೆಯ ಮಿತಿಯೆ ಆಗಿದೆ. ಈಗ ನಮ್ಮ ಎಲ್ಲ ಪ್ರಗತಿಯ ಕಣ್ಣ ಮೇಲೆ ಮಣ್ಣು ತೂರಿಕೊಂಡು ಹೋಗುತ್ತಿರುವ ಬಿರುಗಾಳಿ ಬೀಸುತ್ತಿದೆ. ಅದು ಜಾಗತೀಕರಣವೆಂಬ ನವ ವಸಾಹತೀಕರಣ. ಅದರ ಆಕ್ರಮಣ ಶೀಲತೆಯಲ್ಲಿ ಕರ್ನಾಟಕವೂ ಸೇರಿಕೊಂಡಿದೆ.