ಸಂಗೀತಗಾರರಿಗಾಗಿ  ಸಂಗೀತಗಾರರಿಂದ ಸಂಗೀತಕ್ಕೋಸ್ಕರವೇ ನಡೆಸಲ್ಪಡುವ ಸಂಸ್ಥೆ ಎಂಬ ಮೂಲ ಮಂತ್ರದೊಡನೆ ಕರ್ನಾಟಕದ ಕಲಾವಿದರಿಗೆ ಆದ್ಯತೆ ನೀಡಬೇಕೆಂಬ ಘನೋದ್ದೇಶ ಹೊಂದಿ ಆರಂಭವಾದ ಸಂಸ್ಥೆ ಗಾನಕಲಾ ಪರಿಷತ್ತು ಆಡಳಿತ ಮಂಡಳಿ ಅಥವಾ ಕಾರ್ಯಕಾರಿ ಸಮಿತಿಯಲ್ಲಿಯೂ ಬಹುತೇಕ ಸಂಗೀತಗಾರರೇ ಇರುವುದು ಈ ಸಂಸ್ಥೆಯ ವಿಶಿಷ್ಟತೆ.

ಮೂರೂವರೆ ದಶಕಗಳಿಂದಲೂ ಕಛೇರಿಗಳು ವಿದ್ವತ್‌ಗೋಷ್ಠಿ ವಾರ್ಷಿಕ ಸಮ್ಮೇಳನ ಸಂಗೀತಕ್ಕೆ ಸಂಬಂಧಪಟ್ಟ ವಿಷಯಗಳ ಪ್ರಕಟಣೆ ಪ್ರದರ್ಶನಗಳ ಮಾಧ್ಯಮದಲ್ಲಿ ಕ್ಷೇತ್ರದ ಆರೋಹಣದಲ್ಲಿ ಪರಿಷತ್ತಿನ ಕೊಡುಗೆ ಅಪಾರ. ಶಾಸ್ತ್ರಜ್ಞರಿರುವ ತಜ್ಞರ ಸಮಿತಿ ಶಾಸ್ತ್ರಭಾಗದಲ್ಲಿ ಬೆಳಕು ಚೆಲ್ಲುವ ವಿಷಯಗಳಲ್ಲಿ ಮಾರ್ಗದರ್ಶನ ನೀಡುತ್ತಾರೆ. ಅಧ್ಯಯನ ಗೋಷ್ಠಿಯಲ್ಲಿ ಮಂಡಿತವಾದ ಪ್ರಬಂಧಗಳನ್ನು ಸಂಕಲಿಸಿ “ಗಾನಕಲಾ ಮಂಜರಿ” ಎಂಬ ಗ್ರಂಥವನ್ನು ಪ್ರಕಟಿಸಲಾಗಿದೆ. ಈ ಗ್ರಂಥವನ್ನು ಕನ್ನಡ ಸಂಸ್ಕೃತಿ ನಿರ್ದೇಶನಾಲಯವು ಪ್ರಕಟಿಸಿದ್ದು ಸಂಗೀತ ಜಗತ್ತಿಗೆ ಗುಣಗಾತ್ರದಲ್ಲಿ; ವಸ್ತು ವೈವಿಧ್ಯತೆಯಲ್ಲಿ ಉತ್ಕೃಷ್ಟವಾದ ಕೊಡುಗೆಯೊಂದು ದೊರಕಿದಂತಾಗಿದೆ. ಪರಿಷತ್ತಿನ ಸಾಧನೆಯ ಹೆಜ್ಜೆಗಳೂ ಇದರಲ್ಲಿ ಭದ್ರವಾಗಿ ಮೂಡಿವೆ. ’ಗಾನ ಕಲಾಸಿರಿ’ ಸಂಸ್ಥೆಯ ಮಾಸ ಪತ್ರಿಕೆಯಾಗಿ ಮೂಡಿಬರುತ್ತಿದೆ.

ಪ್ರತಿವರ್ಷವೂ ಹಿರಿಯ ಸಮ್ಮೇಳನಾಧ್ಯಕ್ಷರಿಗೆ ’ಗಾನಕಲಾ ಭೂಷಣ’ ಹಾಗೂ ಯುವ ವಿಭಾಗದ ಸಮ್ಮೇಳನಾಧ್ಯಕ್ಷರಿಗೆ ’ಗಾನ ಕಲಾಶ್ರೀ’ ಎಂಬ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಉತ್ತಮ ರೀತಿಯಲ್ಲಿ ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ಗಾನಕಲಾ ಪರಿಷತ್ತಿಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ೨೦೦೦-೦೧ ರ ಸಾಲಿನಲ್ಲಿ “ಕರ್ನಾಟಕ ಕಲಾಶ್ರೀ” ಪ್ರಶಸ್ತಿಯೂ ಸಂದಿದೆ.