ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗವು “ಜಿಲ್ಲಾ ಅಭಿವೃದ್ಧಿ ಅಧ್ಯಯನ” ಎಂಬ ಯೋಜನೆಯನ್ನು ೧೯೯೮ರಲ್ಲಿ ಪ್ರಾರಂಭಿಸಿದೆ. ಜಿಲ್ಲಾ ಅಭಿವೃದ್ಧಿ ಅಧ್ಯಯನವೆಂದರೇನು? ಅದರ ವ್ಯಾಪ್ತಿ, ಉದ್ದೇಶ ಮುಂತಾದವುಗಳನ್ನು ಮುಂದೆ ವಿವರಿಸಿದೆ. ಈ ಅಧ್ಯಯನ ಯೋಜನೆಯ ಮೊದಲ ಹಂತದಲ್ಲಿ ೧೯೯೭ ರಲ್ಲಿ ಅಸ್ತಿತ್ವಕ್ಕೆ ಬಂದ ಏಳು ಹೊಸ ಜಿಲ್ಲೆಗಳ ಅಭಿವೃದ್ಧಿ ಅಧ್ಯಯನವನ್ನು ವಿಭಾಗವು ಕೈಗೆತ್ತಿಕೊಂಡಿದೆ. ಮುಂದಿನ ಹಂತದಲ್ಲಿ ಉಳಿದ ೨೦ ಜಿಲ್ಲೆಗಳ ಅಭಿವೃದ್ಧಿ ಅಧ್ಯಯನಗಳನ್ನು ಸಿದ್ಧಪಡಿಸಲಾಗುವುದು. ಈಗಾಗಲೇ ಈ ಅಧ್ಯಯನದ ಒಂದು ಭಾಗವಾಗಿ ಕರ್ನಾಟಕದ ೨೭ ಜಿಲ್ಲೆಗಳ ಅಭಿವೃದ್ಧಿ ಸಂಬಂಧಿ ವಿಷಯಗಳನ್ನು ಒಳಗೊಂಡ ‘ಮಾಹಿತಿ ಕೋಶ’ವನ್ನು ವಿಭಾಗವು ಪ್ರಕಟಿಸಿದೆ.

೧೯೬೮ರಲ್ಲಿ ಬೆಂಗಳೂರು ಜಿಲ್ಲೆಯನ್ನು ವಿಭಜಿಸಿ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಎಂಬ ಜಿಲ್ಲೆಗಳನ್ನು ರೂಪಿಸಲಾಯಿತು. ಅದನ್ನು ಬಿಟ್ಟರೆ ರಾಜ್ಯದಲ್ಲಿ ಜಿಲ್ಲೆಗಳ ಪುನರ್ವಿಂಗಡನೆ ನಡೆದಿರಲಿಲ್ಲ. ೧೯೯೭ರಲ್ಲಿ ನಡೆದ ಜಿಲ್ಲೆಗಳ ಪುನರ್ವಿಂಗಡನೆ ಕೆಲಸವು ಅಪೂರ್ಣವಾಗೆ ಉಳಿದಿದೆ. ಜಿಲ್ಲೆಗಳ ಪುನರ್‌ಸಂಘಟನೆಗಾಗಿ ಸಲಹೆ ನೀಡಲು ಅಧ್ಯಯನ ನಡೆಸಲು ಸರ್ಕಾರವು ನೇಮಿಸಿದ್ದ ಸಮಿತಿಯ ಸಲಹೆ – ಶಿಫಾರಸ್ಸುಗಳು ಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಉದಾಹರಣೆಗೆ ಕರ್ನಾಟಕದ ಜಿಲ್ಲೆಗಳು ಮತ್ತು ತಾಲ್ಲೂಕುಗಳ ಪುನರ್‌ಸಂಘಟನೆಗಾಗಿ ನೇಮಿಸಿದ್ದ ವಾಸುದೇವರಾವ್ ಏಕ ಸದಸ್ಯ ಸಮಿತಿಯು ನೀಡಿದ್ದ ಸಲಹೆಗಳು ಜಾರಿಗೊಂಡಿಲ್ಲ. ಆ ಸಮಿತಿಯು ಕೇವಲ ಎರಡು ಹಂತಗಳಲ್ಲಿ ಜಿಲ್ಲೆಗಳನ್ನು ರಚಿಸಲು ಸಲಹೆ ನೀಡಿತ್ತು. ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಕೂಡಾ ಸಮಿತಿಯು ಅನೇಕ ಬದಲಾವಣೆಗಳನ್ನು ಸಲಹೆ ಮಾಡಿತ್ತು. ಆದರೆ ಅವುಗಳು ಯಾವುವೂ ಜಾರಿಗೆ ಬಂದಿಲ್ಲ. ರಾವ್ ಸಮಿತಿಯು ಸಲಹೆ ಮಾಡಿದ್ದ ಎರಡು ಹೊಸ ಜಿಲ್ಲೆಗಳು ಗದಗ ಮತ್ತು ಶಹಪುರ. ಧಾರವಾಡ ಜಿಲ್ಲೆಯನ್ನು ವಿಭಜಿಸಿ ಗದಗವನ್ನು ಜಿಲ್ಲೆಯಾಗಿ ನಿರ್ಮಾಣ ಮಾಡಲಾಗಿದೆ. ಆದರೆ ಗುಲಬರ್ಗಾ ಜಿಲ್ಲೆಯನ್ನು ವಿಭಜಿಸಿ ಜಿಲ್ಲೆಯೊಂದನ್ನು ರೂಪಿಸುವ ಕೆಲಸ ಇನ್ನೂ ನಡೆದಿಲ್ಲ. ಗುಲಬರ್ಗಾಕ್ಕೆ ಸಂಬಂಧಿಸಿದ ಹೊಸ ಜಿಲ್ಲೆಯ ಕೇಂದ್ರ ಯಾವುದಿರಬೇಕು ಎಂಬುದರ ಬಗ್ಗೆ ಒಮ್ಮತದ ತೀರ್ಪು ಸಾಧ್ಯವಾಗಿಲ್ಲ. ಸದ್ಯ ಈ ವಿಷಯ ನೆನೆಗುದಿಗೆ ಬಿದ್ದಿದೆ.

ಜಿಲ್ಲಾ ಪುನರ್ವಿಂಗಡಣೆಗೆ ಯಾವುದು ಮಾನದಂಡ?

೧೯೯೭ರಲ್ಲಿ ಕರ್ನಾಟಕ ಸರ್ಕಾರವು ಏಳು ಹೊಸ ಜಿಲ್ಲೆಗಳನ್ನು ರೂಪಿಸಿತು. ಅವುಗಳಲ್ಲಿ ನಾಲ್ಕು ಉತ್ತರ ಕರ್ನಾಟಕ ಪ್ರದೇಶದಲ್ಲಿವೆ. ದಕ್ಷಿಣ ಕನ್ನಡ, ಬಿಜಾಪುರ, ಮೈಸೂರು ಮತ್ತು ರಾಯಚೂರು ಜಿಲ್ಲೆಗಳನ್ನು ವಿಭಜಿಸಿ ಕ್ರಮವಾಗಿ ಉಡುಪಿ, ಬಾಗಲಕೋಟೆ, ಚಾಮರಾಜ ನಗರ ಮತ್ತು ಕೊಪ್ಪಳ ಎಂಬ ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ. ಅಯಂತ ದೊಡ್ಡ ಜಿಲ್ಲೆಯಾಗಿದ್ದ ಧಾರವಾಡ ಜಿಲ್ಲೆಯನ್ನು ವಿಭಜಿಸಿ ಗದಗ ಮತ್ತು ಹಾವೇರಿ ಎಂಬ ಎರಡು ಹೊಸ ಜಿಲ್ಲೆಗಳನ್ನು ನಿರ್ಮಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕುಗಳನ್ನು (ಜಗಳೂರು, ದಾವಣಗೆರೆ ಮತ್ತು ಹರಿಹರ) ಶಿವಮೊಗ್ಗ ಜಿಲ್ಲೆಯ ಎರಡು ತಾಲ್ಲೂಕುಗಳನ್ನು (ಚನ್ನಗಿರಿ ಮತ್ತು ಹೊನ್ನಾಳಿ) ಮತ್ತು ಬಳ್ಳಾರಿ ಜಿಲ್ಲೆಯ ಒಂದು ತಾಲ್ಲೂಕನ್ನು (ಹರಪನಹಳ್ಳಿ) ಕೂಡಿಸಿ ದಾವಣಗೆರೆ ಜಿಲ್ಲೆಯನ್ನು ಹೊಸದಾಗಿ ರಚಿಸಲಾಗಿದೆ. ಹೀಗೆ ಏಳು ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದಿವೆ. ಈ ಏಳು ಜಿಲ್ಲೆಗಳನ್ನು ಹೊಸದಾಗಿ ನಿರ್ಮಾಣ ಮಾಡಿದ್ದರಿಂದ ಅವುಗಳ ಎಂಟು ತಾಯಿ ಜಿಲ್ಲೆಗಳ ವಿಸ್ತೀರ್ಣ ಹಾಗೂ ಜನಸಂಖ್ಯೆ ಪ್ರಮಾಣ ಬದಲಾವಣೆಗೆ ಒಳಗಾಗಿವೆ. ಈಗ ರಾಜ್ಯದಲ್ಲಿ ೨೭ ಜಿಲ್ಲೆಗಳಿವೆ. ತಾಲ್ಲೂಕುಗಳ ಸಂಖ್ಯೆ ೧೭೫. ಹೊಸ ಜಿಲ್ಲೆಗಳು ತಮ್ಮ ಜಿಲ್ಲೆಗಳನ್ನು ಕಟ್ಟುವ ಕೆಲಸ ಪ್ರಾರಂಭಿಸಿವೆ. ೧೯೯೮ ರಲ್ಲಿ ಎಲ್ಲ ಏಳು ಹೊಸ ಜಿಲ್ಲೆಗಳು ತಮ್ಮ ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಿವೆ.

ರಾಜ್ಯದಲ್ಲಿ ಜಿಲ್ಲೆಗಳ ಪುನರ್ವಿಂಗಡಣೆಗೆ ಪೂರ್ವದಲ್ಲಿ, ಅಂದರೆ ಜಿಲ್ಲೆಗಳ ಸಂಖ್ಯೆ ೨೦ ಇದ್ದಾಗ ಜಿಲ್ಲೆಗಳ ಸರಾಸರಿ ವಿಸ್ತೀರ್ಣ ೯೫೮೯.೫೫ ಚದರ ಕಿಲೋಮೀಟರ್ (ಚ.ಕಿ.ಮಿ) ಇತ್ತು. ಆಗ ಹತ್ತು ಜಿಲ್ಲೆಗಳ ವಿಸ್ತೀರ್ಣವು ಜಿಲ್ಲೆಗಳ ಸರಾಸರಿ ವಿಸ್ತೀರ್ಣಕ್ಕಿಂತ ಅಧಿಕವಿತ್ತು. ಜಿಲ್ಲೆಗಳ ಪುನರ್ವಿಂಗಡಣೆ ನಂತರ ರಾಜ್ಯದಲ್ಲಿ ಜಿಲ್ಲಾ ಸರಾಸರಿ ವಿಸ್ತೀರ್ಣವು ೭೧೦೩.೩೩ ಚ.ಕಿ.ಮಿ. ಆಗಿದೆ. ಈಗಲೂ ೧೧ ಜಿಲ್ಲೆಗಳ ವಿಸ್ತೀರ್ಣವು ಜಿಲ್ಲಾ ಸರಾಸರಿ ವಿಸ್ತೀರ್ಣಕ್ಕಿಂತ ಅಧಿಕವಾಗಿದೆ. ವಿಸ್ತೀರ್ಣದ ದೃಷ್ಟಿಯಿಂದ ಗುಲಬರ್ಗ (೧೬೨೨೪ ಚ.ಕಿ.ಮಿ) ಮತ್ತು ಬೆಳಗಾವಿ (೧೩೪೧೫ ಚ.ಕಿ.ಮಿ) ಜಿಲ್ಲೆಗಳು ಅತಿ ದೊಡ್ಡ ಜಿಲ್ಲೆಗಳಾಗಿವೆ. ಜನಸಂಖ್ಯೆಯ ದೃಷ್ಟಿಯಿಂದಲೂ ಅವು ಬೃಹತ್ ಜಿಲ್ಲೆಗಳಾಗಿವೆ. ಬೆಳಗಾವಿ ಜಿಲ್ಲೆಯ ಜನಸಂಖ್ಯೆ ೨೩.೮೩ ಲಕ್ಷ ಮತ್ತು ಗುಲಬರ್ಗ ಜಿಲ್ಲೆಯ ಜನಸಂಖ್ಯೆ ೨೫.೮೭ ಲಕ್ಷ. ರಾಜ್ಯದಲ್ಲಿ ಈಗಿರುವ ಜಿಲ್ಲಾ ಸರಾಸರಿ ಜನಸಂಖ್ಯೆ ೧೬.೬೬ ಲಕ್ಷ.

ವಿಸ್ತೀರ್ಣವನ್ನಾಗಲಿ ಅಥವಾ ಜನಸಂಖ್ಯೆಯಲ್ಲಾಗಲಿ ಆಧಾರವಾಗಿಟ್ಟುಕೊಂಡು ಹೊಸ ಜಿಲ್ಲೆಗಳನ್ನು ರೂಪಿಸಿಲ್ಲ ಎಂಬುದು ಮೇಲಿನ ಚರ್ಚೆಯಿಂದ ಸ್ಪಷ್ಟವಾಗುತ್ತದೆ. ಈಗ ರಚಿಸಲಾಗಿರುವ ಹೊಸ ಏಳು ಜಿಲ್ಲೆಗಳ ಸರಾಸರಿ ವಿಸ್ತ್ರೀರ್ಣ ೫೩೦೨ ಚಕಿಮಿ. ಇದು ಈಗಿರುವ ಜಿಲ್ಲಾ ಸರಾಸರಿ ವಿಸ್ತೀರ್ಣಕ್ಕಿಂತ ಕಡಿಮೆಯಾಗಿದೆ. ಬೆಂಗಳೂರು ಜಿಲ್ಲೆಯನ್ನು ‘ಅಪವಾದ’ವೆಂದು ಕೈಬಿಟ್ಟರೆ, ಇಂದು ರಾಜ್ಯದಲ್ಲಿರುವ ಅತ್ಯಂತ ಚಿಕ್ಕ ಜಿಲ್ಲೆಯೆಂದರೆ ಉಡುಪಿ (೩೮೫೧ ಚಕಿಮಿ). ಇದರ ನಂತರ ಕೊಡಗು (೪೨೪೯ ಚಕಿಮಿ) ಮತ್ತು ಧಾರವಾಡ (೪೨೪೯ ಚಕಿಮಿ) ಜಿಲ್ಲೆಗಳು ಬರುತ್ತವೆ. ಅನುಬಂಧದಲ್ಲಿ ನೀಡಿರುವ ಕೋಷ್ಟಕ – ೧.೨ ರಲ್ಲಿ ಕರ್ನಾಟಕದ ೨೭ ಜಿಲ್ಲೆಗಳ ವಿಸ್ತೀರ್ಣ ಹಾಗೂ ಜನಸಂಖ್ಯೆಗಳಿಗೆ ಸಂಬಂಧಿಸಿದ ವಿವರಗಳನ್ನು ನೀಡಲಾಗಿದೆ.

ಕರ್ನಾಟಕದಲ್ಲಿ ಜಿಲ್ಲೆಗಳನ್ನು ಹಾಗೂ ತಾಲ್ಲೂಕುಗಳನ್ನು ಪುನರ್‌ಸಂಘಟಿಸಲು ೧೯೭೩ ರಲ್ಲಿ ಸರ್ಕಾರವು ನೇಮಿಸಿದ್ದ ಏಕ ಸದಸ್ಯ ಸಮಿತಿಯು ‘ಆದರ್ಶ ಜಿಲ್ಲೆ’ ಯೊಂದರ ಗಾತ್ರ ಎಷ್ಟಿರಬೇಕು ಎಂಬ ಪ್ರಶ್ನೆಯನ್ನು ಪರಿಶೀಲಿಸಿದೆ. ಆದರ್ಶ ಜಿಲ್ಲೆಯ ವಿಸ್ತೀರ್ಣ ೪೦೦೦ ಚ.ಕಿ.ಮಿ. ಮತ್ತು ಜನಸಂಖ್ಯೆ ೧೦ ಲಕ್ಷ ಇರಬೇಕು ಎಂಬ ಮಾನದಂಡವನ್ನು ಸಮಿತಿಯು ಪರಿಶೀಲಿಸಿದೆ. ಆದರೆ ಅಂತಿಮವಾಗಿ ಇಂತಹ ಮಾನದಂಡವನ್ನು ಎಲ್ಲ ಪ್ರದೇಶಗಳಿಗೂ ಅನ್ವಯಿಸುವುದು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಸಮಿತಿಯು ಬಂದು ಮುಟ್ಟಿದೆ. ಹೊಸ ಜಿಲ್ಲೆಗಳನ್ನು ರಚಿಸುವಾಗ ನಿರ್ದಿಷ್ಟವಾಗಿ ಯಾವುದೇ ಸಂಗತಿಯನ್ನು ಮಾನದಂಡವಾಗಿ ಬಳಸಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿ ಬಿಡಬಹುದು.

ಜಿಲ್ಲಾ ಆಡಳಿತಒಂದು ಚಾರಿತ್ರಿಕ ನೋಟ

ಜಿಲ್ಲೆಯನ್ನು ಆಡಳಿತದ ಒಂದು ಮೂಲ ಘಟಕವನ್ನಾಗಿ ಬ್ರಿಟಿಷರು ರೂಪಿಸಿದರು. ‘ಜಿಲ್ಲಾಧಿಕಾರಿ’ ಎಂಬ ಪ್ರತಿಷ್ಠಿತ ಹುದ್ದೆಯನ್ನು ೧೭೭೨ ರಲ್ಲಿ ರೂಪಿಸಲಾಯಿತು. ನಮ್ಮಲ್ಲಿ ಈಗಿರುವ ಜಿಲ್ಲಾಡಳಿತ ವ್ಯವಸ್ಥೆಗೆ ಸುಮಾರು ೨೦೦ ವರ್ಷಗಳಿಗೂ ಮಿಕ್ಕು ಇತಿಹಾಸವಿದೆ ಎಂದು ಹೇಳಬಹುದು. ವಸಾಹತುಶಾಹಿ ಕಾಲದಲ್ಲಿ ‘ರೆವಿನ್ಯೂ, ಪೊಲೀಸು ಮತ್ತು ನ್ಯಾಯಾಂಗ’ – ಹೀಗೆ ಮೂರು ಅಧಿಕಾರಗಳನ್ನು ಜಿಲ್ಲಾಧಿಕಾರಿಗೆ ವಹಿಸಿಕೊಡುವ ಪದ್ಧತಿ ಜಾರಿಗೆ ಬಂದಿತು. ಇಂದಿಗೂ ಈ ಪದ್ಧತಿಯು ಮುಂದುವರಿದಿರುವುದನ್ನು ನಾವು ನೋಡಬಹುದಾಗಿದೆ.

ಬ್ರಿಟಿಷರ ಆಳ್ವಿಕೆಯ ಪೂರ್ವದಲ್ಲಿ ಆಡಳಿತ ಘಟಕಗಳು ಇರಲಿಲ್ಲವೆಂದು ಹೇಳಲು ಸಾಧ್ಯವಿಲ್ಲ. ವಾಸ್ತವವಾಗಿ ಅಸ್ತಿತ್ವದಲ್ಲಿದ್ದ ಆಡಳಿತ ಘಟಕಗಳನ್ನು ಆಧರಿಸಿಯೇ ಬ್ರಿಟಿಷರು ಜಿಲ್ಲೆಗಳನ್ನು ರೂಪಿಸಿದ ಜಿಲ್ಲೆಗಳಿಗೆ ಆಡಳಿತ ಘಟಕವೆಂಬ ರೂಪ ಅವು ಜಿಲ್ಲೆಗಳಾಗಿ ರೂಪುಗೊಂಡ ಪೂರ್ವದಲ್ಲೆ ಇತ್ತು ಎಂಬುದನ್ನು ಗುರುತಿಸಬಹುದಾಗಿದೆ. ‘ಜಿಲ್ಲೆ’ ಯೆಂಬ ಹೆಸರು ಬ್ರಿಟಿಷರ ಕಾಲದಲ್ಲಿ ಚಾಲ್ತಿಗೆ ಬಂದಿರಬಹುದು.

೧೯ನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ‘ಜಿಲ್ಲಾ ಆಡಳಿತ’ ವೆನ್ನುವುದು ಸುವ್ಯವಸ್ಥಿತ ರೂಪು ತಳೆಯಿತು. ರೆವೆನ್ಯೂ, ಪೊಲೀಸು, ನ್ಯಾಯಾಂಗ, ಜೈಲು, ನೀರಾವರಿ, ಶಿಕ್ಷಣ, ಆರೋಗ್ಯ – ಮುಂತಾದ ಇಲಾಖೆಗಳನ್ನು ಜಿಲ್ಲಾ ಮಟ್ಟದಲ್ಲಿ ೧೮೪೩ – ೫೩ರ ದಶಕದಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಅಂದು ಅಸ್ತಿತ್ವಕ್ಕೆ ಬಂದ ಜಿಲ್ಲಾ ಆಡಳಿತ ಬಹಳಷ್ಟು ಮಟ್ಟಿಗೆ ಅದೇ ರೂಪದಲ್ಲಿ ಇಂದಿಗೂ ಮುಂದುವರಿದಿದೆ.

ವಸಾಹತುಶಾಹಿ ಕಾಲದಲ್ಲಿ ‘ಜಿಲ್ಲಾಧಿಕಾರಿ’ಯು ಸರ್ಕಾರದ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದನು. ಅವನು ಸರ್ಕಾರದ ಕಣ್ಣು – ಕಿವಿಯಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ಜಿಲ್ಲಾಧಿಕಾರಿಯ ಸಲಹೆ ಸೂಚನೆ ಮೇರೆಗೆ ಸರ್ಕಾರವು ನೀತಿಗಳನ್ನು ರೂಪಿಸುತತಿತ್ತು. ಜಿಲ್ಲೆಯ ‘ದೊರೆ’ – ‘ಪ್ರಭು’ ಎಂಬ ಅಭಿದಾನ ಜಿಲ್ಲಾಧಿಕಾರಿಗಿತ್ತು.

ಜಿಲ್ಲಾ ಆಡಳಿತ ಸ್ವಾತಂತ್ಯ್ರಾನಂತರ

ಬ್ರಿಟಿಷರು ಯಶಸ್ವಿಯಾಗಿ ಉಪಯೋಗಿಸಿದ್ದ, ಸಮರ್ಥವಾಗಿ ಸಂಘಟಿಸಿದ್ದ ಜಿಲ್ಲಾ ಆಡಳಿತ ವ್ಯವಸ್ಥೆ ಸ್ವಾತಂತ್ಯ್ರಾನಂತರ ಭಾರತದಲ್ಲಿ ಮುಂದುವರಿದಿದೆ. ಸಣ್ಣ – ಪುಟ್ಟ ಕೆಲವು ಬದಲಾವಣೆಗಳಾಗಿರಬಹುದು. ಜಿಲ್ಲಾಧಿಕಾರಿಯೆಂದರೆ ಜಿಲ್ಲೆಯ ‘ಪ್ರಭು – ದೊರೆ’ ಎಂಬ ನಂಬಿಕೆಯೇ ಇಂದಿಗೂ ಮುಂದುವರಿದಿದೆ. ಇಂದಿಗೂ ಜಿಲ್ಲಾಧಿಕಾರಿ ಸರ್ಕಾರದ ‘ಕಣ್ಣು’ – ‘ಕಿವಿ’ ಯಾಗಿದ್ದಾನೆ. ಜಿಲ್ಲೆಯಲ್ಲಿ ಕಾನೂನು – ಶಾಂತಿ – ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಜಿಲ್ಲಾಧಿಕಾರಿಯದಾಗಿದೆ.

ಬ್ರಿಟಿಷರು ಜಿಲ್ಲೆಯನ್ನು ಒಂದು ಆಡಳಿತ ಘಟಕವಾಗಿ ಪರಿಭಾವಿಸಿಕೊಂಡಿದ್ದರು. ಆಡಳಿತದ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ವಹಿಸಿದ್ದರು. ‘ಅಭಿವೃದ್ಧಿ’ಯೆನ್ನುವುದು ವಸಾಹತುಶಾಹಿ ಆಳ್ವಿಕೆಯ ಅಜೆಂಡಾದಲ್ಲಿ ಇರಲಿಲ್ಲ. ಅದೊಂದು ಆನುಷಂಗಿಕ ಸಂಗತಿಯಾಗಿತ್ತು. ಅಭಿವೃದ್ಧಿ ಎನ್ನುವುದು ಸರ್ಕಾರದ ಜವಾಬ್ದಾರಿಯಾಗಿರಲಿಲ್ಲ. ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂಬ ನೀತಿಯನ್ನು ಬ್ರಿಟಿಷರು ಅನುಸರಿಸುತ್ತಿದ್ದರು. ಇದರಿಂದಾಗಿ ಜಿಲ್ಲೆಯ ಮಟ್ಟದಲ್ಲಿ ‘ಆಡಳಿತ’ವೇ ಪ್ರಧಾನವಾಗಿ ‘ಅಭಿವೃದ್ಧಿ’ ಅನುಷಂಗಿಕವಾಗಿತ್ತು.

ಸ್ವಾತಂತ್ರ್ಯಾನಂತರ ಜಿಲ್ಲಾ ಆಡಳಿತಕ್ಕೆ ಸಂಬಂಧಿಸಿದಂತೆ ಬದಲಾವಣೆಗಳಾದವು. ಜಿಲ್ಲಾ ಆಡಳಿತವನ್ನು ಅಭಿವೃದ್ಧಿ ಮುಖಿಯನ್ನಾಗಿಸುವ ಪ್ರಯತ್ನ – ಪ್ರಯೋಗ ನಡೆಯಿತು. ಈ ಪ್ರಯೋಗ – ಪ್ರಯತ್ನ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ‘ಜನರಿಗೆ – ಪ್ರಜೆಗಳಿಗೆ ಏನೂ ತಿಳಿಯುವುದಿಲ್ಲ. ಆದ್ದರಿಂದ ಅವರನ್ನು ಆಡಳಿತಕ್ಕೆ ಒಳಪಡಿಸಬೇಕು. ಅವರ ಮೇಲೆ ಆಡಳಿತ ನಡೆಸಬೇಕು’. ಈ ಬಗೆಯ ವಸಾಹತುಶಾಹಿ ಮನೋಭಾವ ಇಂದು ಸಂಪೂರ್ಣವಾಗಿ ಮಾಯವಾಗಿದೆ ಎಂದು ಧೈರ್ಯದಿಂದ ಹೇಳಲು ಸಾಧ್ಯವಿಲ್ಲ.

ಸಂವಿಧಾನದ ೭೩ ಮತ್ತು ೭೪ನೆಯ ತಿದ್ದುಪಡಿಗಳು

ಜಿಲ್ಲೆಗಳ ಮಟ್ಟದಲ್ಲಿ ‘ಅಭಿವೃದ್ಧಿ’ಗೆ ಅಗ್ರಸ್ಥಾನ ನೀಡುವ ಒಂದು ಗಂಭೀರ ಪ್ರಯತ್ನ ೧೯೯೦ರ ದಶಕದ ಆರಂಭದಲ್ಲಿ ನಡೆಯಿತು. ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಇಂದು ಸಂವಿಧಾನಾತ್ಮಕ ಮನ್ನಣೆ ದೊರೆತಿದೆ. ಜಿಲ್ಲೆಗಳ ಮಟ್ಟದಲ್ಲಿ ‘ಆಡಳಿತ – ಅಭಿವೃದ್ಧಿ’ಗಳನ್ನು ಪ್ರತ್ಯೇಕಗೊಳಿಸುವ ಒಂದು ಸಣ್ಣ ಪ್ರಯತ್ನ ನಡೆದಿದೆ. ಈಗ ಆಡಳಿತ ನಿರ್ವಹಣೆಯ ಜವಾಬ್ದಾರಿ ಜಿಲ್ಲಾಧಿಕಾರಿಯದಾಗಿದ್ದರೆ ಅಭಿವೃದ್ಧಿ ನಿರ್ವಹಣೆಯ ಜವಾಬ್ದಾರಿ ಜಿಲ್ಲಾ ಪಂಚಾಯತ್‌ದ್ದಾಗಿದೆ. ವಸಾಹತುಶಾಹಿ ಕಾಲದಲ್ಲಿ ಜಿಲ್ಲಾ ಆಡಳಿತದಲ್ಲಿ ಒಂದು ಅನುಷಂಗಿಕ ಭಾಗವಾಗಿದ್ದ ‘ಅಭಿವೃದ್ಧಿ’ ಕಾರ್ಯಭಾರಕ್ಕೆ ಇಂದು ಪ್ರತ್ಯೇಕ – ಪ್ರತಿಷ್ಠಿತ ಸ್ಥಾನ ದೊರೆತಿದೆ.

ಇಲ್ಲಿ ಒಂದು ಪ್ರಶ್ನೆ ಉದ್ಭವಿಸಬಹುದು. ಅಭಿವೃದ್ಧಿಗೆ ಸಂಬಂಧಿಸಿದಂತೆ ‘ಆಡಳಿತ’ ಅವಶ್ಯಕತೆ ಇಲ್ಲವೆ? ಅಭಿವೃದ್ಧಿ ಕಾರ್ಯಕ್ರಮಗಳ ಆಡಳಿತ ನಡೆಯಬೇಕಲ್ಲ! ಇದು ಸರಿ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಆಡಳಿತದ ಅಗತ್ಯವಿದೆ. ಆದರೆ ಇಲ್ಲಿ ಆಡಳಿತವನ್ನು ‘ರೆವೆನ್ಯೂ – ಕಾನೂನು – ಶಾಂತಿ – ಸುವ್ಯವಸ್ಥೆ – ಪೊಲೀಸು’ ಮುಂತಾದವುಗಳ ನಿರ್ವಹಣೆಗೆ ಸೀಮಿತಗೊಳಿಸಿಕೊಳ್ಳಲಾಗಿದೆ. ಆಡಳಿತವೆಂದರೆ ಕಾನೂನು ಶಾಂತಿ ಪಾಲನೆ ಎಂದೂ, ರೆವಿನ್ಯೂ ಜವಾಬ್ದಾರಿ ಎಂದೂ, ಪೊಲೀಸು ವ್ಯವಸ್ಥೆ ಎಂದೂ ತಿಳಿಯಲಾಗಿದೆ.

ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆಯೂ ಆಡಳಿತದ ಅಗತ್ಯವಿದೆ. ‘ಆಡಳಿತ ಯಂತ್ರ’ ವೆನ್ನುವುದು ಅಭಿವೃದ್ಧಿಯ ಅನುಷ್ಠಾನಕ್ಕೆ ಅಗತ್ಯವಾಗಿದೆ. ವಾಸ್ತವವಾಗಿ ‘ಅಭಿವೃದ್ಧಿ ಆಡಳಿತಗಾರರು’ ಎಂಬ ಒಂದು ಪರಿಭಾವನೆಯೇ ರೂಪುಗೊಂಡಿದೆ. ಇಲ್ಲಿ ಆಡಳಿತ ಎಂಬುದನ್ನು ಸೀಮಿತ ನೆಲೆಯಲ್ಲಿ ರೆವಿನ್ಯೂ ವಿಷಯಗಳ ನಿರ್ವಹಣೆಗೆ ಮಾತ್ರ ಪರಿಮಿತ ಗೊಳಿಸಿಕೊಳ್ಳಲಾಗಿದೆ.

ಹೊಸ ಜಿಲ್ಲೆಗಳು: ಆಡಳಿತ ಮತ್ತು ಅಭಿವೃದ್ಧಿ

ಅಭಿವೃದ್ಧಿ ಮತ್ತು ಆಡಳಿತಗಳ ದೃಷ್ಟಿಯಿಂದ ಹೊಸ ಜಿಲ್ಲೆಗಳ ರಚನೆಯು ಮಹತ್ವಪೂರ್ಣ ಸಂಗತಿಯಾಗಿದೆ. ಅಭಿವೃದ್ಧಿ ಮತ್ತು ಆಡಳಿತಗಳಿಗೆ ಸಂಬಂಧಪಟ್ಟ ಸಂಗತಿಗಳೇ ಹೊಸ ಜಿಲ್ಲೆಗಳ ರಚನೆಯ ಹಂದೆ ಚಾಲಕ ಶಕ್ತಿಗಳಾಗಿ ಕೆಲಸ ಮಾಡಿವೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಜಿಲ್ಲೆಗಳ ಗಾತ್ರ ಚಿಕ್ಕದಾಗಿದ್ದರೆ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಆಡಳಿತ ನಿರ್ವಹಣೆ ಸುಲಭ ಸಾಧ್ಯ ಎಂದು ತಿಳಿಯಲಾಗಿದೆ. ‘ಪ್ರಜಾವಾಣಿ’ ದಿನಪತ್ರಿಕೆ ಈ ಬಗ್ಗೆ ನಡೆಸಿದ ಒಂದು ಸಮೀಕ್ಷೆ ಸಂದರ್ಭದಲ್ಲಿ ಹಾವೇರಿಯ ಜಿಲ್ಲಾಧಿಕಾರಿ ರಮೇಶ ಝಳಕಿ ಅವರು ಹೀಗೆ ನುಡಿದಿದ್ದಾರೆ: “ಜಿಲ್ಲೆ ಚಿಕ್ಕದಾಗಿರುವುದರಿಂದ ಕಾನೂನು ಸುವ್ಯವಸ್ಥೆ ಮತ್ತು ಆಡಳಿತ ಸುಲಭವಾಗಿದೆ. ಎಲ್ಲಿ ಏನೇ ಘಟನೆ ಸಂಭವಿಸಿದರೂ ಅರ್ಧ ಗಂಟೆಯೊಳಗಾಗಿ ಘಟನೆ ನಡೆದ ಸ್ಥಳ ತಲುಪಿ ಸಂಭವಿಸಬಹುದಾದ ಅನಾಹುತ ತಪ್ಪಿಸಬಹುದಾಗಿದೆ” (ಪ್ರಜಾವಾಣಿ: ೧೧.೦೨.೧೯೯೯) ಆಡಳಿತ ವಿಷಯ ಬಿಟ್ಟು ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರು ಏನೂ ಹೇಳುವುದಿಲ್ಲ ಎಂಬುದು ಇಲ್ಲಿ ಅಪ್ರಸ್ತುತವಾದರೂ ಗಮನಿಸಬೇಕಾದ ಸಂಗತಿಯಾಗಿದೆ. ಜಿಲ್ಲೆಗಳ ಗಾತ್ರ ಚಿಕ್ಕದಾಗಿರುವುದರಿಂದ ‘ಆಡಳಿತ’ವು ಜನರ ಹತ್ತಿರಕ್ಕೆ ಬರುತ್ತದೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕಾರ್ಯಕ್ಷಮತೆ ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ. ಜನರ ಹತ್ತಿರಕ್ಕೆ ಬರುವುದರಿಂದ ಆಡಳಿತವು ಹೆಚ್ಚು ಪಾರದರ್ಶಕವೂ ವಿಳಂಬ ರಹಿತವೂ ಆಗುತ್ತದೆ ಎಂದೂ ಹೇಳಲಾಗಿದೆ (ರಾವ್ ೧೯೭೫, ಪು:೫). ಜಿಲ್ಲೆಯ ಗಾತ್ರ ಚಿಕ್ಕದಾಗಿರುವುದರಿಂದ ಅಭಿವೃದ್ಧಿಯು‘ ಜನಸ್ಪಂದಿ’ಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಜಿಲ್ಲೆಯ ವಿಸ್ತೀರ್ಣ – ಗಾತ್ರ ಪರಿಮಿತವಾಗಿದ್ದರೆ ಜಿಲ್ಲೆಯ ಯಾವುದೇ ಮೂಲೆಕಟ್ಟಿನ ಹಳ್ಳಿಯಿಂದಲಾದರು ಜನರು ಜಿಲ್ಲಾ ಕೇಂದ್ರಕ್ಕೆ ಬಂದು ಹೋಗಲು ಸುಲಭವಾಗುತ್ತದೆ. ಜಿಲ್ಲಾ ಮಟ್ಟದ ಸರ್ಕಾರಿ ಇಲಾಖೆಗಳಿಗೆ ಎಡತಾಕುವುದು ಸುಲಭವಾಗುತ್ತದೆ. ಜಿಲ್ಲಾ ಕೇಂದ್ರಕ್ಕೆ ಹಳ್ಳಿಗಳಿಂದ ಬಂದು ಹೋಗಲು ತಗಲುವ ಖರ್ಚು ಕಡಿಮೆಯಾಗುತ್ತದೆ. ಉದಾಹರಣೆಗೆ ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ಕೊಪ್ಪಳ ತಾಲ್ಲೂಕಿನ ಮೂಲೆ ಕಟ್ಟಿನ ಕುಗ್ರಾಮವೊಂದರಿಂದ ಜಿಲ್ಲಾ ಕೇಂದ್ರ ರಾಯಚೂರು ಸುಮಾರು ೨೦೦ ಕಿ.ಮೀ. ನಷ್ಟು ದೂರವಿತ್ತು. ಇದರಿಂದಾಗಿ ಎರಡು ರೀತಿಯ ತೊಂದರೆಗಳಿದ್ದವು. ಮೊದಲನೆಯದಾಗಿ ಜಿಲ್ಲಾ ಕೇಂದ್ರವು ಅನೇಕ ಹಳ್ಳಿಗಳಿಂದ ಬಹಳ ದೂರವಿದ್ದುದರಿಂದ ಅಲ್ಲಿಗೆ ಹೋಗಿ ಬರಲು ತಗಲುವ ಪ್ರಯಾಣ ವೆಚ್ಚ ದುಬಾರಿಯಾಗಿತ್ತು. ಬಡ ಕುಟುಂಬಗಳಿಗೆ ಇದನ್ನು ಭರಿಸುವುದು ಸಾಧ್ಯವಿರಲಿಲ್ಲ. ಇದರ ಪರಿಣಾಮವಾಗಿ ಜನರು ಮತ್ತು ಆಡಳಿತಗಳ ನಡುವೆ ಕಂದಕವೇ ಏರ್ಪಟ್ಟಿತ್ತು. ಸಹಜವಾಗಿ ಆಡಳಿತವು ಜನರಿಂದ ದೂರವೇ ಉಳಿದು ಬಿಟ್ಟಿತ್ತು. ಎರಡನೆಯದಾಗಿ ದೂರದ ಹಳ್ಳಿಗಳಿಂದ ಜಿಲ್ಲಾ ಕೇಂದ್ರಕ್ಕೆ ೨೦೦ ಕಿ.ಮೀ. ಪ್ರಯಾಣ ಮಾಡಿ ಸರ್ಕಾರಿ ಇಲಾಖೆಗಳಲ್ಲಿ ಒಂದು ದಿನದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ತಮ್ಮ ಊರು ಸೇರಿಸಿಕೊಳ್ಳುವುದು ಜನರಿಗೆ ಸಾಧ್ಯವಿದ್ದಿರಲಿಲ್ಲ. ಇದರಿಂದಾಗಿ ಅಭಿವೃದ್ಧಿಯ ‘ಜನವಿಮುಖಿ’ಯಾಗಿತ್ತು.

ಹೊಸ ಜಿಲ್ಲೆಗಳ ರಚನೆಯಿಂದ ಇವೆರಡು ತೊಂದರೆಗಳು ಬಗೆಹರಿದಂತಾಗಿವೆ. ಜಿಲ್ಲೆಯ ಗಾತ್ರವು ಚಿಕ್ಕದಾಗಿರುವುದರಿಂದ ಆಡಳಿತದ ದೃಷ್ಟಿಯಿಂದ ಎಷ್ಟು ಅನುಕೂಲಗಳು ಪ್ರಾಪ್ತವಾಗಿದ್ದಾವೊ ಅಷ್ಟೇ ಅನುಕೂಲಗಳು, ಒಂದು ದೃಷ್ಟಿಯಿಂದ ಅದಕ್ಕಿಂತ ಅಧಿಕ ಪ್ರಮಾಣದ ಅನುಕೂಲಗಳು ಅಭಿವೃದ್ಧಿ ಸಂಗತಿಯಲ್ಲೂ ಪ್ರಾಪ್ರವಾಗಿದ್ದಾವೆ. ಹೊಸ ಜಿಲ್ಲೆಗಳ ರಚನೆಯಿಂದಾಗಿ ಅಲ್ಲಿ ಆಡಳಿತ ಜನರ ಹತ್ತಿರಕ್ಕೆ ಬಂದಿದೆ ಮತ್ತು ಅಭಿವೃದ್ಧಿ ಜನಸ್ಪಂದಿಯಾಗಿದೆ.

ಸಂವಿಧಾನದ ೭೩ ಮತ್ತು ೭೪ನೆಯ ತಿದ್ದುಪಡಿಗಳಿಂದಾಗಿ ಆಡಳಿತ ಮತ್ತು ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ವಿಕೇಂದ್ರೀಕರಣಕ್ಕೆ ಸಂವಿಧಾನ ಬದ್ಧ ಮನ್ನಣೆ ದೊರಕಿದಂತಾಗಿದೆ. ನಿಜವಾದ ಅರ್ಥದಲ್ಲಿ ಜಿನ್ನೆಯು ಈಗ ಅಭಿವೃದ್ಧಿಯ ಘಟಕವಾಗಿ ರೂಪುಗೊಂಡಿದೆ. ಜಿಲ್ಲೆಯ ಆಡಳಿತ ಸೂತ್ರಗಳು – ರೆವಿನ್ಯೂ ವಿಷಯಗಳು, ಕಾನೂನು – ಶಾಂತಿ ಪಾಲನೆ ಜವಾಬ್ದಾರಿಗಳು ಜಿಲ್ಲಾಧಿಕಾರಿಯ, ಕರ್ನಾಟಕದ ಸಂದರ್ಭದಲ್ಲಿ ಡೆಪ್ಯೂಟಿ ಕಮೀಷನರ್ ಅವರ ವಶದಲ್ಲಿ ಇದ್ದರೆ ಜಿಲ್ಲೆಯ ಅಭಿವೃದ್ಧಿ ನಿರ್ವಹಣೆ ಜವಾಬ್ದಾರಿಯು ಜಿಲ್ಲಾ ಪಂಚಾಯತಿಯ ವಶದಲ್ಲಿದೆ. ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಗ್ರಗಣ್ಯ ಅಧಿಕಾರಿಯಾಗಿರಬೇಕೋ ಅಥವಾ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಗ್ರಗಣ್ಯರಾಗಿರಬೇಕೋ ಎಂಬುದರ ಚರ್ಚೆ – ಸಂವಾದ ಇನ್ನೂ ನಡೆಯುತ್ತಲೇ ಇದೆ. ವಸಾಹತುಶಾಹಿ ಆಳ್ವಿಕೆಯಲ್ಲಿ ಜಿಲ್ಲಾಧಿಕಾರಿಯು ಜಿಲ್ಲೆಯ ಅಗ್ರಗಣ್ಯ ಅಧಿಕಾರಿಯಾಗಿದ್ದನು. ಆಡಳಿತ ನಿರ್ವಹಣೆಯೊಂದೆ ಅವನ ಏಕೈಕ ಜವಾಬ್ದಾರಿಯಾಗಿತ್ತು. ಅಭಿವೃದ್ಧಿಯು ಆನುಷಂಗಿಕವಾಗಿತ್ತು. ಸ್ವಾತಂತ್ರ್ಯಾನಂತರ ಇದು ಬದಲಾಗಬೇಕಿತ್ತು. ಕಾನೂನಿನ ದೃಷ್ಟಿಯಿಂದ ಅನೇಕ ಬದಲಾವಣೆಗಳಾಗಿವೆ. ಆದರೆ ‘ಆಡಳಿತ ವ್ಯಸನ’ ದಿಂದ ಸರ್ಕಾರ ಮುಕ್ತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ.

ಸಂವಿಧಾನದ ೭೩ ಮತ್ತು ೭೪ ನೆಯ ತಿದ್ದುಪಡಿಯ ನಂತರ, ವಿಕೇಂದ್ರೀಕರಣ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ಮೇಲೆ ಅಧಿಕಾರವು ಜಿಲ್ಲೆಯ, ತಾಲ್ಲೂಕಿನ ಮತ್ತು ಗ್ರಾಮ ಪಂಚಾಯತಿ ಮಟ್ಟಕ್ಕೆ ಹರಿದು ಬಂದಿದ್ದರಿಂದ ವಸಾಹತುಶಾಹಿ ಕಾಲದ ‘ಆಡಳಿತ ವ್ಯಸನ’ದಲ್ಲಿ ಅಲ್ಪಸ್ವಲ್ಪ ಬದಲಾವಣೆ ಉಂಟಾದಂತೆ ಕಾಣುತ್ತದೆ. ಜಿಲ್ಲೆಯ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಭಾರಕ್ಕೆ ಆದ್ಯತೆ ನೀಡುವ ಒಂದು ಕ್ರಮ ನಿಧಾನವಾಗಿಯಾದರೂ ದೇಶದಲ್ಲಿ ರೂಪುಗೊಳ್ಳುತ್ತದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸು ವರಿಷ್ಟಾಧಿಕಾರಿ (ಎಸ್. ಪಿ) ಕಚೇರಿಗಳಿಗಿಂತ ಹೆಚ್ಚಿನದಾದ ಪ್ರಾಮುಖ್ಯತೆ ಜಿಲ್ಲಾ ಪಂಚಾಯತಿ ಕಚೇರಿಗೆ ಸಲ್ಲುವಂತಾಗಿದೆ. ಆಡಳಿತಕ್ಕೆ ಸಲ್ಲುತ್ತಿದ್ದ ಅಗ್ರ ಪೂಜೆ ಈಗ ಅಭಿವೃದ್ಧಿಗೆ ಸಲ್ಲುವಂತಾಗಿದೆ. ಆದರೂ ವಸಾಹತುಶಾಹಿ ಕಾಲದಿಂದ ಕಾಡುತ್ತಾ ಬಂದಿರುವ ‘ಆಡಳಿತ ವ್ಯಸನ’ ಪೂರ್ಣವಾಗಿ ಮಾಯವಾಗಲಿಲ್ಲ.

ಹೊಸ ಜಿಲ್ಲೆಗಳಲ್ಲಿ ಏನಾಗಿದೆ?

ವಸಾಹತುಶಾಹಿ ಮನೋಭಾವ, ಆಡಳಿತಕ್ಕೆ ಅಗ್ರಪೂಜೆ ನೀಡುವ ವಾಡಿಕೆ ಪೂರ್ವವಾಗಿ ಮಾಯವಾಗಲಿಲ್ಲ ಎಂಬುದಕ್ಕೆ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಜಿಲ್ಲೆಗಳನ್ನು ಸರ್ಕಾರ ನಿರ್ವಹಿಸುತ್ತಿರುವ ಬಗೆಯಿಂದ ತಿಳಿದುಕೊಳ್ಳಬಹುದು. ಆಡಳಿತ ವ್ಯವಸ್ಥೆಯನ್ನು ರೂಪಿಸುವ ಕಾರ್ಯಕ್ಕೆ ಹೊಸ ಜಿಲ್ಲೆಗಳಲ್ಲಿ ಆದ್ಯತೆ ನೀಡಲಾಗಿದೆ. ಇದು ಅನಿವಾರ್ಯ. ಈ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸು ವರಿಷ್ಠಾಧಿಕಾರಿಗಳ ಕಚೇರಿಗಳನ್ನು ಸಂಘಟಿಸುವ ಕಾರ್ಯ ಅತ್ಯಂತ ಮಹತ್ವ ಪಡೆದುಕೊಂಡುಬಿಟ್ಟಿದೆ. ‘ಪ್ರಜಾವಾಣಿ’ ದಿನಪತ್ರಿಕೆ ಹೊಸ ಜಿಲ್ಲೆಗಳ ಬಗ್ಗೆ ನಡೆಸಿದ ಒಂದು ಸಮೀಕ್ಷೆಯಲ್ಲಿ ಹೊಸ ಜಿಲ್ಲೆಯ ಒಬ್ಬ ನಾಗರಿಕ ಹೀಗೆ ಉದ್ಗಾರ ತೆಗೆದಿದ್ದಾನೆ.

ಜಿಲ್ಲಾಧಿಕಾರಿ ಮತ್ತು ಪೊಲೀಸು ವರಿಷ್ಠಾಧಿಕಾರಿಗಳು
ಮಾತ್ರ ನಮ್ಮ ಸಮೀಪ ಇರುತ್ತಾರೆ. ದೂರದ ಧಾರವಾಡಕ್ಕೆ
ಹೋಗುವ ಬದಲು ಹತ್ತಿರದ ಹಾವೇರಿಗೆ ತೆರತಿ ಮನವಿ
ಸಲ್ಲಿಸಬಹುದಾಗಿದೆ ಎಂಬುದನ್ನು ಬಿಟ್ಟರೆ ಹೆಚ್ಚಿನ ಅನುಕೂಲಗಳು
ಇಂದಿಗೂ ಆಗಿಲ್ಲ (ಪ್ರಜಾವಾಣಿ. ೧೧.೨.೯೯)

ಆಡಳಿತ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ಜಿಲ್ಲೆಗಳಲ್ಲಿ ಏನು ನಡೆಯತ್ತಿದೆ ಎಂಬುದರ ಪೂರ್ಣ ಚಿತ್ರ ಹಾವೇರಿ ಜಿಲ್ಲೆಗೆ ಸೇರಿದ ನಾಗರಿಕರೊಬ್ಬರ ಮೇಲಿನ ಉದ್ಗಾರದಿಂದ ದೊರೆಯುತ್ತದೆ. ಹೊಸ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿ.ಈ.ಓ) ಹುದ್ದೆಗಳು ಮೊನ್ನೆ ಮೊನ್ನೆ ಯವರೆಗೆ ಖಾಲಿಇದ್ದವು. ಈ ಹುದ್ದೆಗೆ ಬರಲು ಐ.ಎ.ಎಸ್. ಅಧಿಕಾರಿಗಳು ಸಿದ್ಧರಿಲ್ಲ ಎಂಬ ಮಾತು ಕೇಳಿ ಬರುತ್ತದೆ. ಹೊಸ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತಿಯನ್ನು ಸಂಘಟಿಸಲಾಗಿದೆ. ಆದರೆ ಅದರ ಕಾರ್ಯ ಚಟುವಟಿಕೆಗಳು ಆದ್ಯತೆ ಪಡೆದುಕೊಂಡಿಲ್ಲ. ಜಿಲ್ಲೆಗಳ ಮಟ್ಟದಲ್ಲಿ ಆಡಳಿತ ಮತ್ತು ಅಭಿವೃದ್ಧಿಗಳ ನಡುವಿನ ಭಿನ್ನತೆಯನ್ನು ಸರ್ಕಾರವು ಅರ್ಥ ಮಾಡಿಕೊಂಡಂತೆ ಕಾಣಲಿಲ್ಲ. ವಸಾಹತುಶಾಹಿ ಆಳ್ಚಿಕೆ ಕಾಲದಲ್ಲಿ ಆಡಳಿತವು ಪ್ರಧಾನವಾಗಿ ಅಭಿವೃದ್ಧಿಯು ಆನುಷಂಗಿಕವಾಗಿತ್ತು. ಇಂದೂ ಸಹ ಇದೇ ಬಗೆ ಮುಂದುವರಿಯಬೇಕಾಗಿಲ್ಲ. ಇದು ಬದಲಾಗಬೇಕು. ಜಿಲ್ಲೆಗಳು ಮೂಲಭೂತವಾಗಿ ಅಭಿವೃದ್ಧಿಯ ಘಟಕಗಳಾಗಬೇಕು. ಹೊಸ ಜಿಲ್ಲೆಗಳಲ್ಲಿ ಜನರು ಏನನ್ನು ನಿರೀಕ್ಷಿಸುತ್ತಿದ್ದಾರೆ? ‘ಉತ್ತಮ ಕುಡಿಯುವ ನೀರಿನ ಸರಬರಾಜು, ಒಳ ಚರಂಡಿ – ರಸ್ತೆ – ಸಾರಿಗೆ ವ್ಯವಸ್ಥೆ, ಸುಸಜ್ಜಿತ ಆಸ್ಪತ್ರೆ’ – ಇವು ಜನರ ನಿರೀಕ್ಷೆಗಳು ಎಂದು ‘ಪ್ರಜಾವಾಣಿ’ ಸಮೀಕ್ಷೆ ತಿಳಿಸಿದೆ.

ಹೊಸ ಜಿಲ್ಲೆಗಳು ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಅವುಗಳ ಅಭಿವೃದ್ಧಿ ಸಂಬಂಧಿ ಸ್ಥಿತಿಗಳೇನು? ಅವುಗಳು ಅಭಿವೃದ್ಧಿ ದೃಷ್ಟಿಯಿಂದ ಯಾವ ಅನುಕೂಲಗಳನ್ನು ಪಡೆದಿವೆ? ಅವುಗಳು ಎದುರಿಸುತ್ತಿರುವ ಅನಾನುಕೂಲ ಸಂಗತಿಗಳು ಯಾವುವು? ಅವುಗಳ ತೀವ್ರಗತಿ ಅಭಿವೃದ್ಧಿಗೆ ಅಗತ್ಯವಾದ ವಾತಾವರಣಗಳನ್ನು ಹೇಗೆ ಸೃಷ್ಟಿಸುವುದು? – ಇವೇ ಮುಂತಾದ ಸಂಗತಿಗಳು ಇಂದು ನಮ್ಮ ಮುಂದಿವೆ. ಇವೇ ಪ್ರಶ್ನೆಗಳು ಹೊಸ ಜಿಲ್ಲೆಗಳ ಜನಪ್ರತಿನಿಧಿಗಳ ಮುಂದಿವೆ.

ಜಿಲ್ಲೆಯ ವೈಶಿಷ್ಟ್ಯ

ಪ್ರತಿಯೊಂದು ಜಿಲ್ಲೆಗೂ ತನ್ನದೇ ಆದ ವಿಶಿಷ್ಟತೆ – ಅನನ್ಯತೆ – ವ್ಯಕ್ತಿತ್ವ ಇರುತ್ತದೆ. ಅದಕ್ಕೊಂದು ಚಾರಿತ್ರಿಕ ಪರಂಪರೆ ಇರುತ್ತದೆ. ಕರ್ನಾಟಕದಲ್ಲಿನ ಜಿಲ್ಲೆಗಳಿಗೆ ಕನಿಷ್ಟ ಪಕ್ಷ ೨೦೦ ವರ್ಷಗಳ ಇತಿಹಾಸವಿದೆ. ಪ್ರತಿಯೊಂದು ಜಿಲ್ಲೆಯು ತನ್ನ ಭೌಗೋಳಿಕ ವ್ಯಾಪ್ತಿಯಲ್ಲಿರುವ ಒಂದಲ್ಲ ಒಂದು ವಿಶಿಷ್ಟತೆಯೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳುವುದು ರೂಢಿ. ಉದಾಹರಣೆಗೆ ಮೈಸೂರು ಜಿಲ್ಲೆಗೆ ದಸರಾ ಉತ್ಸವ ಇದೆ. ಅರಮನೆ ಇದೆ. ಹಾಸನಕ್ಕೆ ಶ್ರವಣಬೆಳಗೊಳ ಇದೆ. ಬಳ್ಳಾರಿ ಜಿಲ್ಲೆಗೊಂದು ಹಂಪೆ ಇದೆ. ಹೀಗೆ ಪ್ರತಿಯೊಂದು ಜಿಲ್ಲೆಗೂ ವಿಶಿಷ್ಟತೆ ಇರುತ್ತದೆ. ‘ಗುರುತು’ ಇರುತ್ತದೆ. ಇದಕ್ಕೆ ಬಹಳ ಪ್ರಸ್ತುತವಾದ ಉದಾಹರಣೆಯೆಂದರೆ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು. ಕೊಡಗು ಜಿಲ್ಲೆಯು ತನ್ನನ್ನು ತಾನು ‘ಮಿಲಿಟರಿ’ ಜೊತೆ ಸಮೀಕರಿಸಿಕೊಂಡುಬಿಟ್ಟಿದೆ. ಹೊಸ ಜಿಲ್ಲೆಗಳು ಇಂತಹ ವ್ಯಕ್ತಿತ್ವ ಗುರುತು ಪರಂಪರೆಯನ್ನು ಹುಡುಕಿಕೊಳ್ಳಬೇಕಾಗುತ್ತದೆ. ‘ಗುರುತ’ನ್ನು ಹುಡುಕಿಕೊಳ್ಳುವುದರಿಂದ ಅನೇಕ ಅನುಕೂಲಗಳು ಪ್ರಾಪ್ರವಾಗುತ್ತವೆ. ಜನತೆ ತಮ್ಮ ‘ಜಿಲ್ಲೆ’ ಎಂಬ ಅಭಿಮಾನ ಬೆಳೆಸಿಕೊಳ್ಳಬೇಕಾಗುತ್ತದೆ.

ಜಿಲ್ಲಾ ಅಭಿವೃದ್ಧಿ ಅಧ್ಯಯನ

ಕರ್ನಾಟಕದಲ್ಲಿ ೧೯೯೭ರಲ್ಲಿ ಅಸ್ತಿತ್ವಕ್ಕೆ ಬಂದ ಏಳು ಹೊಸ ಜಿಲ್ಲೆಗಳ ಅಭಿವೃದ್ಧಿ ಸ್ವರೂಪವನ್ನು ಗುರುತಿಸುವ ಅಧ್ಯಯನವನ್ನು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ಕೈಗೊಂಡಿದೆ. ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ವೆಂಬ ಒಂದು ಪ್ರತ್ಯೇಕ ಅಧ್ಯಯನ ನೆಲೆಯನ್ನು ಕಂಡುಕೊಳ್ಳಲು ಇಲ್ಲಿ ಪ್ರಯತ್ನಿಸಲಾಗಿದೆ. ಸಂವಿಧಾನದ ೭೩ ಮತ್ತು ೭೪ನೆಯ ತಿದ್ದುಪಡಿಯ ತರುವಾಯ ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ಕ್ಕೆ ವಿಶೇಷ ಮಹತ್ವ ಬಂದಿದೆ. ಆಡಳಿತ ಮತ್ತು ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ವಿಕೇಂದ್ರೀಕರಣಕ್ಕೆ ಸಂವಿಧಾನಬದ್ಧ ಮನ್ನಣೆ ದೊರಕಿದಂತಾಗಿದೆ. ಇಂದು ನಿಜವಾದ ಅರ್ಥದಲ್ಲಿ ಜಿಲ್ಲೆಯು ಅಭಿವೃದ್ಧಿ ಘಟಕವಾಗಿ ರೂಪು ತಳೆದಿದೆ. ಜಿಲ್ಲೆಯನ್ನು ಆಡಳಿತ ಘಟಕವಾಗಿ ಪರಿಭಾವಿಸುವುದು ವಾಡಿಕೆಯಲ್ಲಿತ್ತು. ಆದರೆ ಇಂದು ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಯೋಜನೆಗಳು ಸಿದ್ಧವಾಗಬೇಕಾಗಿದೆ. ಈ ಬದಲಾದ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ನಾವು ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ವನ್ನು ರೂಪಿಸಿದ್ದೇವೆ. ಜಿಲ್ಲಾ ಅಭಿವೃದ್ಧಿಯ ಗತಿಶೀಲತೆಯನ್ನು ಶೋಧಿಸುವ ಪರಿಯನ್ನೇ ಜಿಲ್ಲಾ ಅಭಿವೃದ್ಧಿ ಅಧ್ಯಯನ ಎಂದು ಕರೆಯಲಾಗಿದೆ. ಅಭಿವೃದ್ಧಿಯನ್ನು ಕುರಿತಂತೆ ಜಿಲ್ಲೆಯಲ್ಲಿ ಸಂವಾದವನ್ನು ಚರ್ಚೆಯನ್ನು ಹುಟ್ಟು ಹಾಕುವುದು ನಮ್ಮ ಅಧ್ಯಯನದ ಮೂಲ ಉದ್ದೇಶವಾಗಿದೆ.

ಅಭಿವೃದ್ಧಿಯ ನೆಲೆಗಳ ಶೋಧ

‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ವನ್ನು ಒಂದು ನಿರ್ದಿಷ್ಟ ಅಭಿವೃದ್ಧಿ ವಿಚಾರ ಪ್ರಣಾಳಿಕೆ ಚೌಕಟ್ಟಿನಲ್ಲಿ ರೂಪಿಸಲಾಗಿದೆ. ವರಮಾನ, ಉತ್ಪನ್ನ, ಉಳಿತಾಯ, ಬಂಡವಾಳ ಹೂಡಿಕೆ ಮುಂತಾದ ಗಾತ್ರನಿಷ್ಟ ಆರ್ಥಿಕ ಸೂಚಿಗಳ ನೆಲೆಯಿಂದ ಅಭಿವೃದ್ಧಿಯನ್ನು ಪರಿಭಾವಿಸುವ ಸಾಂಪ್ರದಾಯಿಕ ಅಭಿವೃದ್ಧಿ ವಿಚಾರ ಪ್ರಣಾಳಿಕೆ ಪ್ರತಿಯಾಗಿ ಇಲ್ಲಿ ನಾವು ಅಭಿವೃದ್ಧಿಯನ್ನು ಅಮರ್ತ್ಯಸೇನ್ ರೂಪಿಸಿರುವ ಮಾನವಮುಖಿ ಅಭಿವೃದ್ಧಿ ವಿಚಾರ ಪ್ರಣಾಳಿಕೆ ನೆಲೆಯಿಂದ ಪರಿಭಾವಿಸಲು ಪ್ರಯತ್ನಿಸಿದ್ದೇವೆ. ಅಭಿವೃದ್ಧಿಯನ್ನು ವರಮಾನದ ನೆಲೆಯಿಂದ ಪರಿಭಾವಿಸುವ ಪರಿಯೊಂದು ವಾಡಿಕೆಯಲ್ಲಿದೆ. ಇದನ್ನು ‘ಸಾಂಪ್ರದಾಯಿಕ ಅಭಿವೃದ್ಧಿ ವಿಚಾರ ಪ್ರಣಾಳಿಕೆ’ ಎಂದು ಕರೆಯಬಹುದು. ಒಂದು ಆರ್ಥಿಕತೆಯ ರಾಷ್ಟ್ರೀಯ ಉತ್ಪನ್ನದಲ್ಲಿನ ಬೆಳವಣಿಗೆಯ ಗತಿಯನ್ನು ಅಭಿವೃದ್ಧಿ ಎಂದು ನಿರ್ವಚಿಸಲಾಗಿದೆ. ವರಮಾನದ ಏರಿಕೆಯ ಗತಿಯೇ ಅಭಿವೃದ್ಧಿಯನ್ನು ಅಳತೆ ಮಾಡುವ ಮಾನದಂಡ. ಈ ಕಾರಣ ದಿಂದಾಗಿಯೆ ಆರ್ಥಿಕತೆಯ ಉತ್ಪಾದನಾ ಮಟ್ಟವನ್ನು, ಉತ್ಪಾದನಾ ಸಾಮರ್ಥ್ಯವನ್ನು ಉತ್ತಮ ಪಡಿಸುವ ಮಾರ್ಗಗಳ ಶೋಧವೇ ಅಭಿವೃದ್ಧಿ ಅಧ್ಯಯನದ ಮೂಲ ಹೇತುವಾಗಿಬಿಟ್ಟಿತು. ಬಡತನ, ಹಸಿವು, ನಿರುದ್ಯೋಗ – ಹೀಗೆ ಎಲ್ಲ ಬಗೆಯ ದುಸ್ಥಿತಿಗೂ ಕಾರಣವನ್ನು ಉತ್ಪನ್ನದ – ಆಹಾರದ ಕೊರತೆಯಲ್ಲಿ ಗುರುತಿಸಲಾಯಿತು. ಈ ವಿಚಾರ ಪ್ರಣಾಳಿಕೆಯಲ್ಲಿ ಉತ್ಪನ್ನ – ಆಹಾರ ಮುಂತಾದವು ‘ಇರುವುದು’ ಪ್ರಧಾನವಾಗಿ, ಅವು ಜನರಿಗೆ ‘ದೊರೆಗೊಳ್ಳುವುದು’ ಆನುಷಂಗಿಕವಾಗಿ ಬಿಟ್ಟಿತು.

ಈ ಬಗೆಯ ವರಮಾನ ಕೇಂದ್ರಿತ, ಮೌಲ್ಯ ನಿರಪೇಕ್ಷ ಏಕಲಿಂಗಿ ಅಭಿವೃದ್ಧಿ ವಿಚಾರ ಪ್ರಣಾಳಿಕೆಯು ಇತ್ತೀಚೆಗೆ ತೀವ್ರತರನಾದ ಟೀಕೆ – ವಿಮರ್ಶೆಯನ್ನು – ಸವಾಲುಗಳನ್ನು ಎದುರಿಸುತ್ತಿದೆ. ಅಮರ್ತ್ಯಸೇನ್‌ ಅವರು ಸಾಂಪ್ರದಾಯಿಕ ಅಭಿವೃದ್ಧಿ ವಿಚಾರ ಪ್ರಣಾಳಿಕೆ ಬಗ್ಗೆ ಅನೇಕ ಸೂಕ್ಷ್ಮ ಪ್ರಶ್ನೆಗಳನ್ನು ಎತ್ತಿದ್ದಾರೆ. ಯುಎನ್‌ಡಿಪಿಯು ಸಿದ್ಧಪಡಿಸುತ್ತಿರುವ ‘ಮಾನವ ಮುಖಿ ಅಭಿವೃದ್ಧಿ ವರದಿ’ಗಳಲ್ಲೀ ವರಮಾನ ಕೇಂದ್ರಿತ ಅಭಿವೃದ್ಧಿ ತಂತ್ರ ಟೀಕೆಯನ್ನು ಎದುರಿಸುತ್ತಿದೆ.

ಅಮರ್ತ್ಯಸೇನ್ ಮತ್ತು ಮೆಹಬೂಬ್ ಉಲ್ ಹಕ್ ಅವರುಗಳು ಸಾಂಪ್ರದಾಯಿಕ ವಿಚಾರ ಪ್ರಣಾಳಿಕೆಯಲ್ಲಿ ಆನುಷಂಗಿಕವಾಗಿದ್ದ ‘ಜನರು’, ‘ಜನರ ಬದುಕು’ ಇವುಗಳನ್ನು ತಮ್ಮ ಅಭಿವೃದ್ಧಿ ವಿಚಾರ ಪ್ರಣಾಳಿಕೆಯ ಹೃದ್ಯಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ವರಮಾನವು ಅನುಷಂಗಿಕವೆಂದು, ಜನರ ಬದುಕು ಪ್ರಧಾನವೆಂದು ಇವರು ವಾದಿಸಿದರು. ಅಭಿವೃದ್ಧಿ ಪ್ರಕ್ರಿಯೆಯನ್ನು ಸಾಮಾಜಿಕ ನೆಲೆಯಿಂದಲೆ ಪರಿಭಾವಿಸಬೇಕು ಎಂದು ಇವರಿಬ್ಬರು ಪ್ರತಿಪಾದಿಸಿದರು. ಜನರು ಅಭಿವೃದ್ಧೀಯ ‘ಸಾಧನ’ವೂ ಹೌದು ಮತ್ತು ‘ಸಾಧ್ಯ’ವೂ ಹೌದು ಎಂಬುದನ್ನು ಸೇನ್ ಮತ್ತು ಹಕ್ ತೋರಿಸಿಕೊಟ್ಟರು.

ಅಮರ್ತ್ಯಸೇನ್ ಮತ್ತು ಮೆಹಬೂಬ್ ಉಲ್ ಹಕ್ ಅವುಗಳು ರೂಪಿಸಿರುವ ಅಭಿವೃದ್ಧಿ ವಿಚಾರ ಪ್ರಣಾಳಿಕೆ ಪ್ರಕಾರ ‘ಜನರ ಬದುಕು ಉತ್ತಮಗೊಳ್ಳುವ ಪರಿಯೇ’ ಅಭಿವೃದ್ಧಿ, ವರಮಾನ, ಉತ್ಪನ್ನ, ಆಹಾರ, ಉದ್ಯೋಗ – ಮುಂತಾದವು ಅಭಿವೃದ್ಧಿಯ ದೃಷ್ಟಿಯಿಂದ ಮುಖ್ಯ. ಆದರೆ ಸೇನ್ ಪ್ರಕಾರ ಅವುಗಳ ಮೇಲೆ ಜನರಿಗಿರುವ ‘ಹಕ್ಕುದಾರಿಕೆ’ ಹೆಚ್ಚು ಮುಖ್ಯ. ಅಮರ್ತ್ಯಸೇನ್ ಅವರು ತಮ್ಮ ಪ್ರಸಿದ್ಧ ಗ್ರಂಥ ‘ಪಾವರ್ಟಿ ಆಂಡ್ ಪ್ರಾಮೈನ್’ನಲ್ಲಿ ಈ ಬಗ್ಗೆ ಹೀಗೆ ನುಡಿದಿದ್ದಾರೆ. (ಸೇನ್ ೧೯೮೧. ಪು.೧)

“Starvation is the characteristic of some people not having enough food to eat. It is not the characteristic of their being not enough food to eat”

ಅಮರ್ತ್ಯಸೇನ್ ಪ್ರಕಾರ ವರಮಾನ – ಉತ್ಪನ್ನ – ಆಹಾರ ಇವುಗಳು ‘ಇರುವುದು’ (their being) ಮುಖ್ಯವಾದರೂ ಸಹ ಅವು ಜನರಿಗೆ ದೊರೆಗೊಳ್ಳುವುದು (having enough) ಹೆಚ್ಚು ನಿರ್ಣಾಯಕವಾದುದು. ಅವು ಜನರಿಗೆ ದೊರೆಗೊಂಡಾಗ ಮಾತ್ರ ಬದುಕು ಉತ್ತಮವಾಗಲು ಸಾಧ್ಯ. ಆದ್ದರಿಂದಲೇ ಮೆಹಬೂಬ್ ಉಲ್ ಹಕ್ ಅವರು ‘ಬದುಕನ್ನು ಉತ್ತಮಪಡಿಸಿಕೊಳ್ಳಲು ಜನರಿಗೆ ಇರುವ ಅವಕಾಶಗಳ ವರ್ಧನೆಯೇ’ ಅಭಿವೃದ್ಧಿ ಎಂದಿದ್ದಾರೆ. ಅವಕಾಶಗಳನ್ನು ದಕ್ಕಿಸಿಕೊಳ್ಳುವ ಸಾಮರ್ಥ್ಯ ಜನರಿಗೆ ಇರಬೇಕು. ಇವರ ಜೊತೆಗೆ ಅವಕಾಶಗಳ ಕೂಟದಲ್ಲಿ ತನಗೆ ಬೇಕಾದುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿರಬೇಕು. ಈ ಸಾಮರ್ಥ್ಯ ಮತ್ತು ಸ್ವಾತಂತ್ರ್ಯಗಳನ್ನು ಸಂಯೋಜಿಸಿ ಅಮರ್ತ್ಯಸೇನ್ ಅವರು ‘ಧಾರಣಶಕ್ತಿ’ ಎಂಬ ಪರಿಭಾವನೆ ರೂಪಿಸಿದ್ದಾರೆ. ಧಾರಣಶಕ್ತಿಯನ್ನು `ability to achieve well being and the freedom to achieve well being’ ಎಂದು ನಿರ್ವಚಿಸಿದ್ದಾರೆ. (ಸೇನ್. ೧೯೯೨)

‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ವನ್ನು ಸೇನ್ ಅವರು ರೂಪಿಸಿರುವ ‘ಧಾರಣಶಕ್ತಿ’ ಪರಿಭಾವನೆ ಹಾಗೂ ಯುಎನ್‌ಡಿಪಿ ಮೂಲಕ ಮೆಹಬೂಬ್ – ಉಲ್ – ಹಕ್ ಅವರು ರೂಪಿಸಿರುವ ‘ಮಾನವ ಮುಖಿ ಅಭಿವೃದ್ಧಿ’ ವಿಚಾರ ಪ್ರಣಾಳಿಕೆ ನೆಲೆಯಿಂದ ನಡೆಸುವ ಉದ್ದೇಶವಿದೆ. ಬಡತನ, ಹಸಿವು, ನಿರುದ್ಯೋಗ ಮುಂತಾದ ದುಸ್ಥಿತಿಗಳಿಗೆ ಉತ್ತರವನ್ನು ಆಹಾರೋತ್ಪಾದನೆಯಲ್ಲಿ ಕಂಡುಕೊಳ್ಳುವುದಕ್ಕೆ ಪ್ರತಿಯಾಗಿ ಆಹಾರೋತ್ಪನ್ನದ ಮೇಲೆ ಜನರಿಗಿರುವ ‘ಹಕ್ಕುದಾರಿಕೆ’ (entitlement) ಯಲ್ಲಿ ಕಂಡುಕೊಳ್ಳಲು ಇಲ್ಲಿ ಪ್ರಯತ್ನಿಸಲಾಗಿದೆ. ಅಭಿವೃದ್ಧಿಯ ರಾಜಕೀಯಾರ್ಥಿಕತೆ ನೆಲೆಗಳನ್ನು ಗುರುತಿಸುವ ಉದ್ದೇಶ ಜಿಲ್ಲಾ ಅಭಿವೃದ್ಧಿ ಅಧ್ಯಯನದ ಮೂಲದಲ್ಲಿದೆ. ಆದ್ದರಿಂದಲೇ ಪ್ರಸ್ತುತ ಜಿಲ್ಲಾ ಅಭಿವೃದ್ಧಿ ಅಧ್ಯಯನದಲ್ಲಿ ಜನರ ಅಕ್ಷರ ಸಂಪತ್ತು, ಆರೋಗ್ಯ ಭಾಗ್ಯ, ಬದುಕು – ಸಾವುಗಳ ವಿವರ, ಆಯುರ್ಮಾನ, ದುಡಿಮೆಗಾರರು, ಮಹಿಳಾ ದುಡಿಮೆಗಾರರು – ಮುಂತಾದ ಸಂಗತಿಗಳಿಗೆ ಅಗ್ರಗಣ್ಯಸ್ಥಾನ ನೀಡಲಾಗಿದೆ. ಅಭಿವೃದ್ಧಿಯ ಲಿಂಗ ಸಂಬಂಧಿ ಆಯಾಮಗಳನ್ನು ಗುರುತಿಸುವುದು ಜಿಲ್ಲಾ ಅಧ್ಯಯನದ ಬಹುಮುಖ್ಯ ಪ್ರಣಾಳಿಕೆಯಾಗಿದೆ. ಆದರೆ ಇಲ್ಲಿನ ಅಧ್ಯಯನದಲ್ಲಿ ಔದ್ಯಮಿಕ ರಂಗದ ಪಾತ್ರ – ಗಾತ್ರವನ್ನು ಕಡೆಗಣಿಸಿಲ್ಲ.

ಜಿಲ್ಲಾ ಅಭಿವೃದ್ಧಿ ಅಧ್ಯಯನವೆಂದರೆ ಕೇವಲ ಅಂಕಿ – ಅಂಶಗಳ ಕೋಶವಲ್ಲ. ಮಾರ್ಗ ದರ್ಶನ ಮಾಡುವುದು. ಇದರ ಕೆಲಸವಲ್ಲ. ಅಭಿವೃದ್ಧಿ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ಸಂಕಥನವೊಂದನ್ನು ಶುರುಮಾಡುವ ಉದ್ದೇಶ ಜಿಲ್ಲಾ ಅಭಿವೃದ್ಧಿ ಅಧ್ಯಯಯನದ ಮೂಲದಲ್ಲಿದೆ.