ಕೊಪ್ಪಳ ಜಿಲ್ಲೆಯು ರಚನೆಯಾದ ಮೇಲೆ ತುಂಗಭದ್ರಾ ನದಿಯಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ. ಆದರೆ ಕೊಪ್ಪಳ ಜಿಲ್ಲೆಯ ಜನರ ಬದುಕು ತೀವ್ರವಾಗಿ ಬದಲಾಗಿದೆಯೆಂದು ಹೇಳಲು ಸಾಧ್ಯವಿಲ್ಲ. ನಿಜವಾಗಿ ಹೇಳಬೇಕೆಂದರೆ ಕೊಪ್ಪಳ ಜಿಲ್ಲೆಯ ಜನರ ಬದುಕು ಕಳೆದ ೪೦ – ೫೦ ವರ್ಷಗಳಲ್ಲಿ ತೀವ್ರ ಬದಲಾಗಿಲ್ಲ. ಈ ಕಾರಣಕ್ಕೆ ಈ ಜಿಲ್ಲೆಯ ಆರ್ಥಿಕತೆಯನ್ನು “ಏಕರೂಪಿ” ಆರ್ಥಿಕತೆ ಎಂದು ಕರೆದಿದ್ದೇವೆ. ಇಂದಿಗೂ ಸಹ ಈ ಜಿಲ್ಲೆಯ ಶೇ.೮೦ ಜನರ ಬದುಕಿನ ಮೂಲ ಕೃಷಿ. ಇಡೀ ರಾಜ್ಯದಲ್ಲಿ ೨೭ ಜಿಲ್ಲೆಗಳ ಪೈಕಿ ಕೃಷಿಯನ್ನು ಅತಿ ಹೆಚ್ಚಾಗಿ ಅವಲಂಬಿಸಿಕೊಂಡಿರುವ ಜನರಿರುವ ಜಿಲ್ಲೆ ಕೊಪ್ಪಳ. ಈ ಜಿಲ್ಲೆಯಲ್ಲಿನ ಎಲ್ಲ ಹಳ್ಳಿಗಳಿಗೂ ಒಂದೇ ತೆರನಾಗಿ ಕಾಣುತ್ತದೆ. ಏಕೆಂದರೆ ಇವೆಲ್ಲ ಕೃಷಿಪ್ರಧಾನ ಹಳ್ಳಿಗಳು ಜಿಲ್ಲೆಯ ಗಂಗಾವತಿ ತಾಲೂಕು ಹಾಗೂ ಕೊಪ್ಪಳ ತಾಲೂಕಿನ ಕೆಲವು ಭಾಗ ಬಿಟ್ಟರೆ ಉಳಿದಂತೆ ಇಲ್ಲಿರುವು ಮಳೆ ಆಧರಿತ ಕೃಷಿ. ಈ ಜಿಲ್ಲೆಯ ರೈತಾಪಿ ವರ್ಗದ ಬದುಕು ಮಳೆ ಸಮೃದ್ಧವಾದರೆ ಹಸನಾಗಿರುತ್ತದೆ. ಇಲ್ಲದಿದ್ದರೆ ಬದುಕು ಬರಡಾಗುರತ್ತದೆ. ಕೃಷಿಯೇತರ ಚಟುವಟಿಕೆಗಳು ಇಲ್ಲವೆ ಇಲ್ಲ ಎನ್ನವಷ್ಟು ಕಡಿಮೆ ಇವೆ.

೨೦ನೆಯ ಶತಮಾನದ ಮುಗಿಯುವ ಕಾಲ ಸನ್ನಿಹಿತವಾಗಿರುವ ಇಂದು ಕೂಡ ಕೊಪ್ಪಳ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಕೇವಲ ಶೇ. ೩೮.೨೩. ಮಹಿಳೆಯರ ಸಾಕ್ಷರತೆ ಶೇ. ೨೨.೭೮. ಪರಿಷಿಷ್ಟ ಮಹಿಳೆಯರ ಸಾಕ್ಷರತೆ ಕೇವಲ ಶೇ. ೯.೬೪. ಈ ಅಂಕಿ – ಅಂಶಗಳಿಂದ ಅಭಿವೃದ್ಧಿಯ ಸ್ವರೂಪವನ್ನು ನಾವು ಅರ್ಥ ಮಾಡಿಕೊಳ್ಳುಬಹುದು.

ಕೊಪ್ಪಳ ಜಿಲ್ಲೆಯ ಒಟ್ಟು ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಶೇ. ೪೬.೩೬. ಸರಿ ಸುಮಾರು ಅರ್ಧದಷ್ಟು ದುಡಿಮೆಗಾರರು ಜಿಲ್ಲೆಯಲ್ಲಿ ಭೂರಹಿತ ದುಡಿಮೆಗಾರರಾಗಿದ್ದಾರೆ. ಈ ಜಿಲ್ಲೆಯ ಬಡತನದ ಮಟ್ಟವನ್ನು ಗುರುತಿಸಲು ಇದಕ್ಕಿಂತ ಉತ್ತಮವಾದ ಮಾನದಂಡ ಮತ್ತಾವುದೂ ಬೇಕಾಗಿಲ್ಲ.

ಈ ಜಿಲ್ಲೆಯ ದುಡಿಮೆಗಾರ ವರ್ಗದ ಲಿಂಗ ಸ್ವರೂಪವು ಅಭಿವೃದ್ಧಿಯಲ್ಲಿನ ಮಹಿಳೆಯರ ಪಾತ್ರದ ಬಗ್ಗೆ ಒಳನೋಟವನ್ನು ಒದಗಿಸುತ್ತದೆ. ರಾಜ್ಯ ಮಟ್ಟದಲ್ಲಿ ಮಹಿಳಾ ದುಡಿಮೆಗಾರ ವರ್ಗದ ದುಡಿಮೆ ಸಹಭಾಗಿತ್ವ ಪ್ರಮಾಣ ಶೇ.೨೮.೯೫ ರಷ್ಟಿದ್ದರೆ ಕೊಪ್ಪಳ ಜಿಲ್ಲೆಯಲ್ಲಿ ಅದು ಶೇ.೩೭.೩೧ ರಷ್ಟಿದೆ. ಇಡೀ ರಾಜ್ಯದಲ್ಲಿ ಇದು ಅತ್ಯಧಿಕ ಮಟ್ಟದ ದುಡಿಮೆ ಸಹಭಾಗಿತ್ವ ಪ್ರಮಾಣವಾಗಿದೆ. ನಮ್ಮ ಅಧ್ಯಯನದಿಂದ ಕಂಡುಬಂದ ಬಹುಮುಖ್ಯ ತಥ್ಯವೆಂದರೆ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಯ ಬೆನ್ನೆಲುವು ಮಹಿಳಾ ದುಡಿಮೆಗಾರ ವರ್ಗ. ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ಕಣ್ಣಿಗೆ ಕಾಣುಬಂತೆ ೧/೩ ಕ್ಕಿಂತ ಅಧಿಕ ಭಾಗ ಮಹಿಳೆಯರಾಗಿದ್ದಾರೆ. ಮಹಿಳೆಯ ಅವ್ಯಕ್ತ ದುಡಿಮೆಯನ್ನು ಪರಿಗಣಿಸಿದರೆ ಅವರ ದುಡಿಮೆ ಪ್ರಮಾಣವು ಜಿಲ್ಲೆಯ ಜನಸಂಖ್ಯೆಯಲ್ಲಿನ ಮಹಿಳೆಯರ ಪ್ರಮಾಣಕ್ಕೆ ಸರಿಸಮವಾಗಿದೆ.

ಕೊಪ್ಪಳ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚಿಂತಿಸುವುವರೆಲ್ಲ ಸದರಿ ಜಿಲ್ಲೆಯ ಮಹಿಳಾ ದುಡಿಮೆಗಾರ ವರ್ಗವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಈ ವರ್ಗದ ಅಭಿವೃದ್ಧಿಗೆ ವಿಶೇಷ ಕ್ರಮಗಳನ್ನು ರೂಪಿಸಬೆಕಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಮೊಟ್ಟ ಮೊದಲು ನಡೆಯಬೇಕಾದ ಕೆಲಸವೆಂದರೆ ಮಹಿಳೆಯರ ಸಾಕ್ಷತೆ ಪ್ರಮಾಣವನ್ನು ಉತ್ತು ಪಡಿಸುವುದು. ಇತ್ತಿಚೆಗೆ ಕರ್ನಾಟಕ ಸರ್ಕಾರವು ಸಿದ್ಧಪಡಿಸಿರುವ ಮಾನವ ಅಭಿವೃದ್ಧಿ ವರದಿಯಲ್ಲಿ ರಾಜ್ಯದ ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ಲೆಕ್ಕ ಹಾಕಲಾಗಿದೆ. ಅದರ ಪ್ರಕಾರ ರಾಯಚೂರು ಜಿಲ್ಲೆಯ ಮಾನವ ಅಭಿವೃದ್ಧಿ ಸೂಚ್ಯಂಕ ೧.೩೯೯ ಕೊಪ್ಪಳವು ಹೊಸ ಜಿಲ್ಲೆಯಾಗಿರುವುರಿಂದ ಅದರೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಲೆಕ್ಕ ಹಾಕಿಲ್ಲ. ರಾಯಚೂರು ಜಿಲ್ಲೆಯ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಕೊಪ್ಪಳ ಜಿಲ್ಲೆಗೂ ಅನ್ವಯ ಮಾಡಬಹುದಾಗಿದೆ. ಮಾನವ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯದಲ್ಲಿ ರಾಯಚೂರು/ ಕೊಪ್ಪಳ ಜಿಲ್ಲೆಯ ಸ್ಥಾನ ೨೦. ಈ ಎಲ್ಲ ಸಂಗತಿಗಳ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಕ್ರಮಗಳನ್ನು ಜರೂರಾಗಿ ಕೈಗೊಳ್ಳಬೇಕಾಗಿದೆ. ಮಾನವ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯದಲ್ಲಿ ಕೊಪ್ಪಳ/ರಾಯಚೂರು ಜಿಲ್ಲೆಗೆ ಕಡೆಯ ಸ್ಥಾನವಿದೆ. ವರಮಾನದ ದೃಷ್ಟಿಯಿಂದಲೂ ಕೊಪ್ಪಳ ಜಿಲ್ಲೆಯ ಸ್ಥಾನ ಹೇಳಿಕೊಳ್ಳುವ ಮಟ್ಟದಲ್ಲೇನು ಇಲ್ಲ. ಜಿಲ್ಲಾ ವರಮಾನದ ದೃಷ್ಟಿಯಿಂದ ರಾಜ್ಯದಲ್ಲಿ ಕೊಪ್ಪಳ ಜಿಲ್ಲೆಗೆ ೨೬.ನೆಯ ಸ್ಥಾನವಿದೆ. ಹತ್ತೊಂಬತ್ತು ವರ್ಷ ತುಂಬುವುದರೊಳಗೆ ವಿವಾಹವಾಗಿರುವ ಮಹಿಳೆಯರ ಪ್ರಮಾಣ ರಾಯಚೂರು/ಕೊಪ್ಪಳ ಜಿಲ್ಲೆಯಲ್ಲಿ ಶೇ.೪೬.೭೦. ರಾಜ್ಯದಲ್ಲಿ ಈ ದೃಷ್ಟಯಿಂದ ಕೊಪ್ಪಳ ಜಿಲ್ಲೆಗೆ ಎರಡನೆಯ ಸ್ಥಾನವಿದೆ.

ಎಲ್ಲಿಯವರೆಗೆ ಈ ಜಿಲ್ಲೆಯಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವುದಿಲ್ಲವೋ ಮತ್ತು ಎಲ್ಲಿಯವರೆಗೆ ಅಭಿವೃದ್ಧಿಯನ್ನು ಲಿಂಗೀಕರಣ ಗೊಳಿಸುವುದಿಲ್ಲವೋ ಅಲ್ಲಿಯವರೆಗೆ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ. ಕೃಷಿ ಮೇಲಿನ ಅತಿಯಾದ ಅವಲಂಬನೆಯು ಇಲ್ಲಿ ಸಂಕೋಲೆಯಾಗಿ ಬಿಟ್ಟಿದೆ. ಅದರಿಂದ ಬಿಡುಗಡೆಯೇ ಅಭಿವೃದ್ಧಿಯ ಮಾರ್ಗವಾಗಿದೆ.

ಈಗಿರುವ ಮಾಹಿತಿ ಪ್ರಕಾರ ಕೊಪ್ಪಳ / ರಾಯಚೂರು ಜಿಲ್ಲೆಯಲ್ಲಿರುವ ಬಡತನದ ರೇಖೆ ಕೆಳಗೆ ಜೀವಿಸುತ್ತಿರುವ ಜನರ ಪ್ರಮಾಣ ಶೇ. ೨೪.೫೭. ಈ ದಿಶೆಯಲ್ಲಿ ರಾಜ್ಯದಲ್ಲಿ ರಾಯಚೂರು/ಕೊಪ್ಪಳ ಜಿಲ್ಲೆಯು ಉತ್ತಮ ಸ್ಥಿತಿಯಲ್ಲಿದೆ. ಈ ಲೆಕ್ಕಾಚಾರದ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿರುವ ಬಡತನದ ರೇಖೆಯ ಕೆಳಗೆ ಜೀವಿಸುತ್ತಿರುವ ಜನರ ಸಂಖ್ಯೆ೨.೩೫ ಲಕ್ಷ. ಆದರೆ ಬಡತನ ರೇಖೆಯ ಕೆಳಗೆ ಬದುಕುತ್ತಿರುವ ಜನರ ಅಂದಾಜಿನ ಬಗ್ಗೆ ಅನುಮಾನಗಳು ಸಾದ್ಯ. ಬಡತನಕ್ಕೆ ಸಂಬಂದಪಟ್ಟ ಅನೇಕ ಸೂಚಿಗಳಲ್ಲಿ ಕೊಪ್ಪಳವು ಅತ್ಯಂತ ದಾರುಣತೆಯನ್ನು ತೋರಿಸಿದರೆ ಬಡತನದ ರೇಖೆಯ ಕೆಳಗೆ ಜೀವಿಸುತ್ತಿರುವ ಜನರ ಸಂಖ್ಯೆಗೆ ಸಂಬಂಧಿಸಿದಂತೆ ಮಾತ್ರ ಉತ್ತಮವಾದ ಸ್ಥಿತಿಯ ಚಿತ್ರಣವಿದೆ. ಇದನ್ನು ನಂಬಲು ಸಾಧ್ಯವಿಲ್ಲ. ಈ ಜಿಲ್ಲೆಯಲ್ಲಿದ್ದ ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣವೇ ಶೇ. ೪೬.೩೬. ಅವರ ಸಂಖ್ಯೆ ೧.೯೨ ಲಕ್ಷ. ಈ ಬಗ್ಗೆ ನಾವು ಮರುಚಿಂತನೆ ನಡೆಸಬೇಕಾಗಿದೆ. ವರಮಾನದ ದೃಷ್ಟಿಯಿಂದ ರಾಜ್ಯದಲ್ಲಿ ಕೊಪ್ಪಳ ಜಿಲ್ಲೆಯ ಸ್ಥಾನವು ಉತ್ತಮವಾಗಿಲ್ಲ. ರಾಜ್ಯದ ವರಮಾನದಲ್ಲಿ ಕೊಪ್ಪಳದ ಪಾಲು ಕೇವಲ ಶೇ.೧.೭೩. ಆದರೆ ಜನಸಂಖ್ಯೆಯಲ್ಲಿ ಇದರ ಪಾಲು ಶೇ. ೨.೧೩. ಈ ಎಲ್ಲ ಸಂಗತಿಗಳನ್ನು ನೋಡಿದಾಗ ಜಿಲ್ಲೆಯಲ್ಲಿ ಬಡತನದ ರೇಖೆ ಕೆಳಗೆ ಜೀವಿಸುತ್ತಿರುವ ಜನರ ಪ್ರಮಾಣ ಸರ್ಕಾರದ ಅಂದಾಜಿಗಿಂತ ಅಧಿಕವಿರುವ ಸಾದ್ಯತೆ ಇದೆ. ಏಕೆಂದರೆ ರಾಜ್ಯಮಟ್ಟದಲ್ಲಿ ಬಡತನದ ರೇಖೆಯ ಕೆಳಗೆ ಜೀವಿಸುತ್ತಿರುವ ಜನರ ಪ್ರಮಾಣ ಶೇ.೩೩.೧೬. ಕೊಪ್ಪಳ ಜಿಲ್ಲೆಯಲ್ಲಿ ಇದರ ಪ್ರಮಾಣ ರಾಜ್ಯಮಟ್ಟಕ್ಕಿಂತ ಕಡಿಮೆ ಇರಲು ಸಾಧ್ಯವಿಲ್ಲ. ರಾಯಚೂರು ಜಿಲ್ಲೆಯಲ್ಲಿ ಬಡತನದ ರೇಖೆಯ ಕೆಳಗೆ ಜೀವಿಸುತ್ತಿರುವ ಜನರ ಪ್ರಮಾಣದ ಅಂದಾಜು ನಂಬಿಕೆಗೆ ಅರ್ಹವಾಗಿಲ್ಲ. ಅನೇಕ ವಿಷಯಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿರುವ ಹಾಗೂ ದಾರುಣತೆಯನ್ನು ಅನುಭವಿಸುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ಬಡತನದ ಪ್ರಮಾಣವು ಶೇ.೨೫ಕ್ಕಿಂತ ಕಡಿಮೆ ಇರುವುದನ್ನು ನಂಬಲು ಸಾಧ್ಯವಿಲ್ಲ.

ಈಗ ನಮ್ಮ ಅಧ್ಯಯನದಿಂದ ಕಂಡುಕೊಂಡ ಮುಖ್ಯ ತಥ್ಯಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಮಂಡಿಸಬಹುದು.

೧. ಕೊಪ್ಪಳ ಜಿಲ್ಲೆಯು ಪ್ರಾಥಮಿಕ ವಲಯವನ್ನು ಪ್ರಧಾನವಾಗಿ ಹೊಂದಿರುವ ಜಿಲ್ಲೆಯಾಗಿದೆ. ದುಡಿಮೆಗಾರ ವರ್ಗದಲ್ಲಿ ಶೇ.೮೨.೨೮ ರಷ್ಟು ಮಂದಿ ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿದ್ದರೆ ಜಿಲ್ಲೆಯ ವರಮಾನದಲ್ಲಿ ಶೇ.೫೩ರಷ್ಟು ಪ್ರಾಥಮಿಕ ವಲಯದಿಂದ ಪ್ರಾಪ್ತವಾಗುತ್ತದೆ. ರಾಜ್ಯದಲ್ಲಿ ದುಡಿಮೆಗಾರ ವರ್ಗದ ದೃಷ್ಟಿಯಿಂದ ಅತಿ ಹೆಚ್ಚಾಗಿ ಪ್ರಾಥಮಿಕ ವಲಯವನ್ನು ಹೊಂದಿರುವ ಜಿಲ್ಲೆಗಳಲ್ಲಿ ಕೊಪ್ಪಳಕ್ಕೆ ಪ್ರಥಮ ಸ್ಥಾನವಿದೆ. ವರಮಾನದ ದೃಷ್ಟಿಯಿಂದ ಕೊಪ್ಪಳ ಜಿಲ್ಲೆಯ ಪ್ರಾಥಮಿಕ ವಲಯಕ್ಕೆ ರಾಜ್ಯದಲ್ಲಿ ಎರಡನೆಯ ಸ್ಥಾನವಿದೆ.

೨. ಭೂಮಾಲೀಕತ್ವಕ್ಕೆ ಹಾಗೂ ವರಮಾನದ ವಿರತಣೆಯಲ್ಲಿ ತೀವ್ರ ಅಸಮಾನತೆಗಳಿವೆ ಪ್ರಾಥಮಿಕ ವಲಯದಲ್ಲಿನ ದುಡಿಮೆಗಾರ ವರ್ಗದ ತಲಾ ಉತ್ಪನ್ನವು ರೂ.೧೨೩.೬೯ ರಷ್ಟಾದರೆ ಪ್ರಾಥಮಿಕೇತರ ವಲಯದಲ್ಲಿನ ದುಡಿಮೆಗಾರ ವರ್ಗದ ತಲಾ ಉತ್ಪನ್ನ ರೂ.೫೧೩.೯೦ರಷ್ಟಿದೆ. ಕಡಿಮೆ ಸಂಖ್ಯೆಯಲ್ಲಿರುವ ಜಮೀನ್ದಾರರ ವಶದಲ್ಲಿ ಜಿಲ್ಲೆಯ ಸಾಗುವಳಿ ಪ್ರದೇಶದ ಹೆಚ್ಚು ಭಾಗವಿದೆ.

೩. ಈ ಜಿಲ್ಲೆಯ ಅಭಿವೃದ್ಧಿಯ ಮೂಲ ದ್ರವ್ಯ ಮಹಿಳೆಯರಾಗಿದ್ದಾರೆ.ಆದರೆ ಮಹಿಳೆಯರ ಸ್ಥಿತಿಗತಿಗಳು ಹಾಗೂ ಸ್ಥಾನಮಾನಗಳು ಅತ್ಯಂತ ಕೆಳಮಟ್ಟದಲ್ಲಿವೆ. ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ಮಹಿಳೆಯರ ಪಾಲು ಶೇ.೩೭.೩೧. ಜಿಲ್ಲೆಯ ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣ ಶೇ. ೫೮.೩೩. ಈ ಜಿಲ್ಲೆಯ ಮಹಿಳಾ ವರ್ಗವು ಪುರುಷ ಸರಿಸಮನಾಗಿ ಅಭಿವೃದ್ಧಿಗೆ ಕಾಣಿಕೆ ನೀಡುತ್ತಿದ್ದಾರೆ.

೪. ಇಡೀ ರಾಜ್ಯದಲ್ಲಿ ಸಾಕ್ಷರತೆ ಅತಿ ಕಡಿಮೆ ಇರುವ ಜಿಲ್ಲೆಗಳೆಂದರೆ ಕ್ರಮವಾಗಿ ರಾಯಚೂರು ಮತ್ತು ಕೊಪ್ಪಳ. ಸಾಕ್ಷರತೆ ದೃಷ್ಟಿಯಿಂದ ರಾಜ್ಯದ ೨೭ ಜಿಲ್ಲೆಗಳ ಪೈಕಿ ರಾಯಚೂರು ಜಿಲ್ಲೆಗೆ ೨೭ನೆಯ ಸ್ಥಾನವಿದ್ದರೆ ಕೊಪ್ಪಳ ಜಿಲ್ಲೆಗೆ ೨೬ನೆಯ ಸ್ಥಾನವಿದೆ. ಕೊಪ್ಪಳ ಜಿಲ್ಲೆಯ ಮಹಿಳೆಯರ ಸಾಕ್ಷರತೆ ಪ್ರಮಾಣ ಕೇವಲ ಶೇ.೨೨.೯೮. ಗ್ರಾ,ಮೀಣ ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ. ೧೯.೩೮. ಇಡೀ ರಾಜ್ಯದಲ್ಲಿ ಮಹಿಳೆಯರ ಮತ್ತು ಪುರುಷರ ನಡುವಿನ ಸಾಕ್ಷರತೆ ಅಂತರ ಅತ್ಯಧಿಕವಾಗಿರುವುದು ಕೊಪ್ಪಳ ಜಿಲ್ಲೆಯಲ್ಲಿ ಎಂಬುದು ಆತಂಕದ ಸಂಗತಿಯಾಗಿದೆ.

೫. ಜನಸಂಖ್ಯೆ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳಿಗೆ ಸಂಬಂಧಸಿದಂತೆ ಕೊಪ್ಪಳ ಜಿಲ್ಲೆಯ ಬಗ್ಗೆ ವಿವರಗಳು ದೊರೆಯುವುದಿಲ್ಲ. ರಾಯಚೂರು ಜಿಲ್ಲೆಯ ಬಗ್ಗೆ ವಿವರಗಳು ಲಭ್ಯವಿದೆ. ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ ವಿವರಗಳನ್ನು ಕೊಪ್ಪಳ ಜಿಲ್ಲೆಗೂ ಅನ್ವಯಿಸಬಹುದಾಗಿದೆ.

ಜನಸಂಖ್ಯೆಯು ತೀವ್ರವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಜನರ ಆರೋಗ್ಯ ಸೂಚಿಗಳು ಉತ್ತಮವಾಗಿರಲು ಸಾದ್ಯವಿಲ್ಲ. ಕರ್ನಾಟಕ ರಾಜ್ಯದಲ್ಲಿ ಮಹಿಳೆಯರ ವಿವಾಹದ ವಯಸ್ಸು ಅತ್ಯಂತ ಕಡಿಮೆ ಇರುವುದು ಕೊಪ್ಪಳ ಜಿಲ್ಲೆಯಲ್ಲಿ. ಈ ಜಿಲ್ಲೆಯಲ್ಲಿ ಮಹಿಳೆಯರಿಗೆ ೧೯ ವರ್ಷ ತುಂಬುವುದರೊಳಗೆ ಸರಿಸುಮಾರು ಅರ್ಧದಷ್ಟು ಹೆಣ್ಣು ಮಕ್ಕಳು ವಿವಾಹಿತರಾಗಿರುತ್ತಾರೆ. ಈ ಜಿಲ್ಲೆಯಲ್ಲಿ ಫಲವಂತಿಕೆ ಪ್ರಮಾಣ ೪ ಮೀರಿದೆ. ಜನನ ಪ್ರಮಾಣವು ಇಲ್ಲಿ ೩೦ ರಷ್ಟಿದೆ. ಈ ಜಿಲ್ಲೆಯ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳು ಉತ್ತಗೊಳ್ಳಬೇಕಾಗಿದೆ.

೬. ಕೊಪ್ಪಳ ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳಿವೆ. ಈ ತಾಲೂಕುಗಳ ನಡುವೆ ಅಭಿವೃದ್ಧಿ ಅಂತರಗಳಿವೆ. ನೀರಾವರಿ ಸೌಲಭ್ಯ ಹೊಂದಿರುವ ಗಂಗಾವತಿಯು ಜಿಲ್ಲೆಯಲ್ಲಿ ಅತ್ಯಂತ ಮುಂದುವರಿದ ತಾಲೂಕಾಗಿದೆ. ಜಿಲ್ಲಾ ಕೇಂದ್ರವಾದ ಕೊಪ್ಪಳ ತಾಲೂಕು ಜಿಲ್ಲೆಯಲ್ಲಿ ಎರಡನೆಯ ಸ್ಥಾನ ಪಡೆದಿದೆ. ಆದರೆ ಯಲಬುರ್ಗ ಮತ್ತು ಕುಷ್ಟಗಿ ತಾಲೂಕುಗಳು ಮಾತ್ರ ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿದೆ. ಉದಾಹರಣೆಗೆ ಕುಷ್ಟಗಿ ತಾಲೂಕಿನಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಶೇ. ೩೮.೪೯. ಇದು ಅತ್ಯಧಿಕ ಪ್ರಮಾಣದ ಬೆಳವಣಿಗೆಯಾಗಿದೆ. ಈ ತಾಲೂಕಿನಲ್ಲಿ ಸಾಕ್ಷರತೆ ಪ್ರಮಾಣ ಶೇ. ೩೫.೩೪.ಯಲಬುರ್ಗ ತಾಲೂಕಿನಲ್ಲಿನ ಒಟ್ಟು ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಶೇ. ೮೨.೩೯. ಕೊಪ್ಪಳ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚಿಂತಿಸುವಾಗ ನಾವು ಈ ಜಿಲ್ಲೆಯೊಳಗೆ ಇರುವ ತಾಲೂಕು – ತಾಲೂಕುಗಳ ನಡುವಿನ ಅಭಿವೃದ್ಧಿ ಅಂತರ ಅಸಮಾನತೆಗಳ ಬಗ್ಗೆ ಗಮನ ನೀಡಬೇಕಾಗಿದೆ.

೭. ಕೈಗಾರಿಕೆಗಳ ದೃಷ್ಟಿಯಿಂದ ಕೊಪ್ಪಳ ಜಿಲ್ಲೆಯು ತೀವ್ರ ಹಿಂದುಳಿದಿದೆ. ಈ ಜಿಲ್ಲೆಯಲ್ಲಿನ ದುಡಿಮೆಗಾರ ವರ್ಗದಲ್ಲಿ ಉದ್ದಿಮೆರಂಗವನ್ನು ಅವಲಂಬಿಸಿಕೊಂಡಿರುವವರ ಪ್ರಮಾಣ ಕೇವಲ ಶೇ.೫.೬೬. ಜಿಲ್ಲೆಯಲ್ಲಿ ದೊಡ್ಡ ಉದ್ದಿಮೆಗಳ ಸಂಖ್ಯೆ ಅತ್ಯಂತ ಕಡಿಮೆ. ಅನೇಕ ಸಾಂಪ್ರದಾಯಿಕ ಸಣ್ಣ ಉದ್ದಿಮೆಗಳು, ಕಸುಬುಗಳು, ಇರುವ ಒಂದೆರಡು ಉದ್ದಿಮೆಗಳು ಗಂಗಾವತಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಯಲಬುರ್ಗ ಮತ್ತು ಕುಷ್ಟಗಿ ತಾಲೂಕುಗಳು ಉದ್ದಿಮೆಯ ಹೆಸರನ್ನೇ ಕೇಳಿಲ್ಲ. ಗಂಗಾವತಿ ನಗರದಲ್ಲಿ ಅನೇಕ ಅಕ್ಕಿ ಗಿರಣಿಗಳಿವೆ. ಈ ಜಿಲ್ಲೆಯ ಅಭಿವೃದ್ಧಿಯಲ್ಲಿ ಉದ್ದಮೆರಂಗದ ಪಾತ್ರ ತುಂಬಾ ನಿರ್ಣಾಯಕವಾದುದಾಗಿದೆ.

೮ ಅಭಿವೃದ್ಧಿ ಎನ್ನುವುದು ಒಂದು ಅಖಂಡವಾದ ಪ್ರಕ್ರಿಯೆಯೇನಲ್ಲ. ಅದು ಸಮಾಜದಲ್ಲಿರುವ ಏಣಿ – ಶ್ರೇಣಿ,ಮೇಲು – ಕೀಳುಗಳಿಗೆ ಅನುಗುಣವಾಗಿ ಪ್ರಸರಿಸುತ್ತಿರುತ್ತದೆ. ಕೊಪ್ಪಳ ಜಿಲ್ಲೆಯ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ವಂಚಿತವಾದ ವರ್ಗವೆಂದರೆ ಪರಿಶಿಷ್ಟ ಜನಸಂಖ್ಯೆ.ಪರಿಶಿಷ್ಟ ಜನಸಂಖ್ಯೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಒಳಗೊಂಡಿದೆ. ಜನಸಂಖ್ಯೆಯಲ್ಲಿ ಶೇ.೨೦ಕ್ಕಿಂತ ಅಧಿಕ ಪರಿಶಿಷ್ಟರ ಜನಸಂಖ್ಯೆಯನ್ನು ಹೊಂದಿರುವ ರಾಜ್ಯದ ೧೪ ಜಿಲ್ಲೆಗಳ ಪೈಕಿ ಕೊಪ್ಪಳವು ಒಂದಾಗಿದೆ. ಆದರೆ ಜಿಲ್ಲೆಯಲ್ಲಿ ಅತ್ಯಂತ ದಾರುಣವಾದ ಬದುಕನ್ನು ಬದುಕುತ್ತಿರುವ ವರ್ಗವೆಂದರೆ ಪರಿಶಿಷ್ಟ ಜನರಾಗಿದ್ದಾರೆ.

ಜಿಲ್ಲೆಯ ಒಟ್ಟು ಸಾಕ್ಷರತೆ ಪ್ರಮಾಣ ಶೇ.೩೮.೨೩ ರಷ್ಟಿದ್ದರೆ ಪರಿಶಿಷ್ಟ ಜನರ ಸಾಕ್ಷಕತೆ ಪ್ರಮಾಣ ಕೇವಲ ಶೇ.೧೮.೧೦. ಈ ಜಿಲ್ಲೆಯ ಪರಿಶಿಷ್ಟ ಮಹಿಳೆಯರ ಸಾಕ್ಷರತೆ ಕೇವಲ ಶೇ.೯.೬೪. ಇಡೀ ರಾಜ್ಯದಲ್ಲಿ ಸಾಕ್ಷರತೆಯು ಕೇವಲ ಒಂದಂಕಿಯಷ್ಟಿರುವುದು ಕೊಪ್ಪಳ ಜಿಲ್ಲೆಯಲ್ಲಿ. ಕೊಪ್ಪಳ ಜಿಲ್ಲೆಯ ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಶೆ.೨೧.೭೭. ಆದರೆ ಜಿಲ್ಲೆಯ ಅಕ್ಷರಸ್ಥರಲ್ಲಿ ಪರಿಶಿಷ್ಟರ ಪ್ರಮಾಣ ಕೇವಲ ಶೇ.೯.೨೯. ಜಿಲ್ಲೆಯ ಕೃಷಿ ಕಾರ್ಮಿಕರಲ್ಲಿ ಪರಿಶಿಷ್ಟರ ಪ್ರಮಾಣ ಶೇ.೨೯.೦೮.

ಅಭಿವೃದ್ಧಿ ಎನ್ನುವುದು ಕೊಪ್ಪಳ ಜಿಲ್ಲೆಯ ಸಂದರ್ಭದಲ್ಲಿ ಮಹಿಳೆಯರ ಹಾಗೂ ಪರಿಶಿಷ್ಟರ ಬದುಕನ್ನು ಉತ್ತಮ ಪಡಿಸುವಲ್ಲಿ ಕ್ರಿಯಾಶೀಲವಾಗಬೇಕಾಗಿದೆ. ಜಿಲ್ಲೆಯ ಒಟ್ಟು ಸಾಕ್ಷರತೆ ಪ್ರಮಾಣ ಕಡಿಮೆ ಇದೆ. ಆದರೆ ಪರಿಶಿಷ್ಟ ಮಹಿಳೆಯರ ಸಾಕ್ಷರತೆ ಪ್ರಮಾಣ ಕನಿಷ್ಟತಮವಾಗಿದೆ. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಕೊಪ್ಪಳ ಜಿಲ್ಲೆಯ ಅಭಿವೃದ್ಧಿಯನ್ನು ರೂಪಿಸಬೇಕಾಗಿದೆ. ಏಕರೂಪತೆಯಿಂದ ಕೂಡಿರುವ ಅರ್ಥಿಕತೆಯನ್ನು ಬಹುರೂಪಿಯನ್ನಾಗಿಸಬೇಕಾಗಿದೆ. ಪ್ರಾಥಮಿಕೇತರ ವಲಯವನ್ನು ತೀವ್ರಗತಿಯಲ್ಲಿ ಬೆಳೆಸಬೇಕಾಗಿದೆ. ಅಭಿವೃದ್ಧಿಯು ಜಿಲ್ಲೆಯ ಮಹಿಳೆಯರಿಗೆ ಮತ್ತು ಪರಿಶಿಷ್ಟ ಜನಸಂಖ್ಯೆಗೆ ಅರ್ಥಪೂರ್ಣವಾಗುವಂತೆ ಮಾಡಬೇಕಾಗಿದೆ. ಈ ಜಿಲ್ಲೆಯ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯೋಗಾವಕಾಶಗಳನ್ನು ಬೆಳೆಸುವಂತಹ ಕಾರ್ಯ ಕ್ರಮಗಳನ್ನು ರೂಪಿಸಬೇಕಾಗಿದೆ. ಅರಣ್ಯ ಬೆಳೆಸುವ ಕಾರ್ಯಕ್ರಮವು ಜಿಲ್ಲೆಯಲ್ಲಿ ಉದ್ಯೋಗವನ್ನು ನೀಡಬಲ್ಲದು. ಕರ್ನಾಟಕ ರಾಜ್ಯದಲ್ಲಿ ಅರಣ್ಯ ಪ್ರದೇಶ ಅತ್ಯಂತ ಕಡಿಮೆ ಇರುವ ಜಿಲ್ಲೆ ಕೊಪ್ಪಳ. ಯಲಬುರ್ಗ ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶ ಇಲ್ಲವೆ ಇಲ್ಲ(ಶೇ.೦.೦೫). ಈ ಜಿಲ್ಲೆಯಲ್ಲಿರುವ ಒಟ್ಟು ಬೀಳುಭೂಮಿಯ ಪ್ರಮಾಣ ಸುಮಾರು ಒಂದು ಲಕ್ಷ ಹೆಕ್ಟೇರುಗಳು. ಈ ಪ್ರಮಾಣದ ಪ್ರದೇಶದಲ್ಲಿ ಅರಣ್ಯ ಬೆಳೆಸಬಹುದು. ಈ ಕಾರ್ಯಕ್ರಮವು ನಾಲ್ಕಾರು ವರ್ಷ ಜಿಲ್ಲೆಯ ದುಡಿಮೆಗಾರರಿಗೆ ಉದ್ಯೋಗ ಒದಗಿಸಬಹುದು.

ಕೊಪ್ಪಳ ಜಿಲ್ಲಾ ಪಂಚಾಯತಿಯು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬೇಕಾಗಿದೆ. ರಸ್ತೆ, ಸೇತುವೆ, ದೀಪದ ಕಂಬ, ಕಟ್ಟಡಗಳೇ ಅಭಿವೃದ್ಧಿಯಲ್ಲ ಎಂಬುದನ್ನು ಜಿಲ್ಲಾ ಪಂಚಾಯತಿ ಅರ್ಥಮಾಡಿಕೊಳ್ಳಬೇಕು. ಜಿಲ್ಲೆಗೆ ಅಭಿವೃದ್ಧಿಗೆ ಖಾಸಗಿ ಬಂಡವಾಳವನ್ನು, ವಿದೇಶಿ ಬಂಡವಾಳವನ್ನು ಅಕರ್ಷಿಸುವುದರ ಬಗ್ಗೆ ಯೋಚಿಸಬೇಕಾಗಿದೆ. ಮೊಟ್ಟ ಮೊದಲು ಜಿಲ್ಲೆಯಲ್ಲಿ ನಡೆಯಬೇಕಾಗಿರುವ ಕೆಲಸವೆಂದರೆ ಶಾಲೆಗೆ ಹೋಗುವ ವಯೋಮಾನದ ಮಕ್ಕಳೆಲ್ಲರು ಶಾಲೆಗೆ ಹೋಗುವಂತೆ ಮಾಡಬೇಕಾಗಿದೆ. ಸಾಕ್ಷರತೆ ಪ್ರಮಾಣವನ್ನು ಉತ್ತಮಪಡಿಸುವ ದಿಶೆಯಲ್ಲಿ ಸಮರೋಪಾದಿಯಲ್ಲಿ ಕಾರ್ಯಕ್ರಮ ನಡೆಯಬೇಕಾಗಿದೆ. ಅಭಿವೃದ್ಧಿಯನ್ನು ಲಿಂಗೀಕರಣಗೊಳಿಸುವ ಕೆಲಸವೂ ನಡೆಯಬೇಕು. ರಾಜ್ಯ ಸರ್ಕಾರವು ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗೆ ಉಳಿದೆಲ್ಲ ಜಿಲ್ಲೆಗಳಿಗೆ ನೀಡುವ ನೆರವಿಗಿಂತ ಅಧಿಕವಾದ ನೆರವನ್ನು ನೀಡಬೇಕು. ಉಳಿದೆಲ್ಲ ಜಿಲ್ಲೆಗಳಿಗಿಂತ ಹೆಚ್ಚಿನ ವೇಗದಲ್ಲಿ ಕೊಪ್ಪಳ ಜಿಲ್ಲೆ ಬೆಳೆದರೆ ಮಾತ್ರ ಅದು ಉಳಿದೆಲ್ಲ ಜಿಲ್ಲೆಗಳ ಮಟ್ಟಕ್ಕೆ ಬರಲು ಸಾಧ್ಯ.