ಅಧ್ಯಯನದ ಉದ್ದೇಶಗಳು

ಈಗಾಗಲೇ ಪ್ರಸ್ತಾವನೆಯಲ್ಲಿ ಪ್ರತಿಪಾದಿಸಿರುವಂತೆ ಹೊಸ ಜಿಲ್ಲೆಗಳ ಅಭಿವೃದ್ಧಿ ಸ್ಥಿತಿಗತಿಗಳನ್ನು, ಅದರ ಚಲನಶೀಲತೆಯನ್ನು ಪರಿಶೋಧಿಸುವ ಅಧ್ಯಯನ ಇದಾಗಿದೆ. ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ ಎಂಬ ದೊಡ್ಡ ಯೋಜನೆಯಡಿಯಲ್ಲಿ ಪ್ರಸ್ತುತ ಅಧ್ಯಯನ ಪ್ರಾರಂಭವಾಗಿದೆ. ಹೊಸ ಜಿಲ್ಲೆಗಳ ಅಭಿವೃದ್ಧಿ ಸ್ವತೂಪ, ಸ್ಥಿತಿಗತಿ, ಅಭಿವೃದ್ಧಿ ಆದ್ಯತೆಗಳು, ಉತ್ಪಾದನಾ ಸಂಬಂಧಗಳು ಮುಂತಾದವುಗಳನ್ನು ಕುರಿತ ಅನುಸಂಧಾನವೇ ಪ್ರಸ್ತುತ ಅಧ್ಯಯನ. ಈ ಬಗೆಯ ಅಧ್ಯಯನವು ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಯೋಜನೆ ರಚಿಸುವಲ್ಲಿ ಸಹಾಯಕವಾಗುತ್ತದೆ ಎಂದು ನಂಬಲಾಗಿದೆ.

ನಿರ್ದಿಷ್ಟವಾಗಿ ಅಧ್ಯಯನದ ಉದ್ದೇಶಗಳು ಹೀಗಿವೆ

೧. ಮೊದಲನೆಯದಾಗಿ ಹೊಸ ಜಿಲ್ಲೆಗಳಲ್ಲಿ ಅಭಿವೃದ್ಧಿ ಕುರಿತಂತೆ ಸಂವಾದವೊಂದನ್ನು ಸಂಕಥನವೊಂದನ್ನು ಹುಟ್ಟು ಹಾಕುವುದು ಇಲ್ಲಿನ ಬಹುಮುಖ್ಯ ಉದ್ದೇಶವಾಗಿದೆ. ರಾಜ್ಯ ಮಟ್ಟದಲ್ಲಿ, ಪ್ರಾದೇಶಿಕ ಮಟ್ಟದಲ್ಲಿ, ವಿಭಾಗ ಮಟ್ಟದಲ್ಲಿ ಹೊಸ ಜಿಲ್ಲೆ ಯಾವ ಸ್ಥಾನದಲ್ಲಿದೆ ಎಂಬುದನ್ನು ಎಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ.

೨. ಎರಡನೆಯದಾಗಿ ಹೊಸ ಜಿಲ್ಲೆಯ ಜನಸಂಖ್ಯೆಯ ಗಾತ್ರ, ಬೆಳವಣಿಗೆ, ಗುಣಶೀಲತೆ, ಆರೋಗ್ಯ, ಮರಣ ಪ್ರಮಾಣ, ಜನನ ಪ್ರಮಾಣ ಮುಂತಾದವುಗಳನ್ನು ಗುರುತಿಸುವ ಕೆಲಸವು ಇಲ್ಲಿ ನಡೆದಿದೆ.

೩. ಮೂರನೆಯದಾಗಿ ಮತ್ತು ಬಹು ಮುಖ್ಯವಾಗಿ ಹೊಸ ಜಿಲ್ಲೆಯ ದುಡಿಮೆಗಾರ ವರ್ಗದ ಸಾಮಾಜಿಕ ಸ್ವರೂಪ ಹಾಗೂ ಲಿಂಗ ಸ್ವರೂಪವನ್ನು ಸೂಕ್ಷ್ಮ ವಿಶ್ಲೇಷಣೆಗೆ ಒಳಪಡಿಸುವ ಉದ್ದೇಶವು ಪ್ರಸ್ತುತ ಅಧ್ಯಯನಕ್ಕಿದೆ. ಜನಸಂಖ್ಯೆಯಲ್ಲಿ ದುಡಿಯುವ ವರ್ಗ, ದುಡಿಮೆಗಾರರಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಮುಂತಾದವುಗಳ ಮೂಲಕ ಹೊಸ ಜಿಲ್ಲೆಗಳಲ್ಲಿನ ಬಡತನದ ತೀವ್ರತೆಯನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ.

೪. ನಾಲ್ಕನೆಯದಾಗಿ, ವರಮಾನ ಹಾಗೂ ದುಡಿಮೆಗಾರರು, ಹೊಸ ಜಿಲ್ಲೆಯ ಪ್ರಾಥಮಿಕ ವಲಯ, ದ್ವಿತೀಯ ವಲಯ ಹಾಗೂ ತೃತೀಯ ವಲಯಗಳಲ್ಲಿ ಹೇಗೆ ವಿತರಣೆಯಾಗಿದ್ದಾರೆ ಎಂಬುದನ್ನು ಗುರುತಿಸುವುದರ ಮೂಲಕ ಹೊಸ ಜಿಲ್ಲೆಯ ‘ಆರ್ಥಿಕ ರಚನೆ’ಯನ್ನು ಕಟ್ಟುವ ಉದ್ದೇಶ ಇಲ್ಲಿದೆ.

೫. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಉಪಕರಣವಾದಿ ಹಾಗೂ ಅಂತಸ್ಥವಾಗಿ ಮಹತ್ವಗಳೆರಡನ್ನು ಪಡೆದಿರುವ ಸಾಕ್ಷರತೆ, ಆರೋಗ್ಯ ಮುಂತಾದವುಗಳನ್ನು ವಿವರವಾಗಿ ಪರಿಶೀಲಿಸುವ ಉದ್ದೇಶವಿದೆ. ಸಾಕ್ಷರತೆಗೆ ಸಂಬಂಧಿಸಿದ ವಿವಿಧ ಮುಖಗಳನ್ನು ನೆಲೆಗಳನ್ನು ಇಲ್ಲಿ ಅನುಸಂಧಾನಕ್ಕೆ ಒಳಪಡಿಸಲಾಗಿದೆ. ೬ ರಿಂದ ೧೪ ವಯೋಮಾನದಲ್ಲಿ ಶಾಳೆಗಳಲ್ಲಿರುವ ಮಕ್ಕಳ ಸಂಖ್ಯೆ ಎಷ್ಟು, ಶಾಲೆಯ ಹೊರಗೆ ಉಳಿದ ಹತಭಾಗ್ಯ ಮಕ್ಕಳ ಪ್ರಮಾಣ ಎಷ್ಟು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನತೆಯ ಸಾಕ್ಷರತೆಯ ಪ್ರಮಾಣ ಎಷ್ಟು? ಮುಂತಾದ ಸೂಕ್ಷ್ಮ ಸಂಗತಿಗಳನ್ನು ಇಲ್ಲಿ ವಿವರಿಸಲಾಗಿದೆ.

೬. ಕೃಷಿಗೆ ಸಂಬಂಧಿಸಿದಂತೆ ಬೆಳೆ ಬೆಳೆಯುವ ಪ್ರದೇಶ ಎಷ್ಟು? ನೀರಾವರಿ ಪ್ರಮಾಣ ಎಷ್ಟು? ಅರಣ್ಯ ಪ್ರಮಾಣ ಎಷ್ಟಿದೆ? ಬೀಳು ಭೂಮಿ ಎಷ್ಟು? ಮುಂತಾದ ಸಂಗತಿಗಳನ್ನು ಸುಸ್ಥಿರಗತಿ ಬೆಳವಣಿಗೆ ನೆಲೆಯಲ್ಲಿ ನಡೆಸಲು ಉದ್ದೇಶವನ್ನು ಪ್ರಸ್ತುತ ಅಧ್ಯಯನ ಇಟ್ಟುಕೊಂಡಿದೆ.

೭. ರಸ್ತೆಗಳು, ಬ್ಯಾಂಕಿಂಗ್ – ಮುಂತಾದ ಸೇವಾ ವಲಯಕ್ಕೆ ಸಂಬಂಧಿಸಿದಂತೆ ಹೊಸ ಜಿಲ್ಲೆಗಳ ಸ್ಥಾನ ಯಾವುದು? ಎಂಬುದನ್ನು ಗುರುತಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

೮. ಹೊಸ ಜಿಲ್ಲೆಗಳಲ್ಲಿ ಔಧ್ಯಮಿಕರಂಗದ ಸ್ಥಾನಮಾನ ಯಾವುದು? ಔದ್ಯಮಿಕ ರಂಗದಲ್ಲಿ ತೊಡಗಿಸಿರುವ ಬಂಡವಾಳ, ಅಲ್ಲಿ ದುಡಿಮೆಯಲ್ಲಿ ನಿರತವಾಗಿರುವ ಕಾರ್ಮಿಕ ವರ್ಗ ಮುಂತಾದವುಗಳನ್ನು ಗುರುತಿಸುವ ಉದ್ದೇಶವು ಅಧ್ಯಯನಕ್ಕಿದೆ. ಕೈಗಾರಿಕಾ ಬೆಳವಣಿಗೆಯ ಒಂದು ಮುನ್ನೋಟವನ್ನು ನೀಡಲು ಇಲ್ಲಿ ಪ್ರಯತ್ನಿಸಲಾಗಿದೆ.

೯. ಇಡೀ ಅಧ್ಯಯನದ ಒಳನೋಟಗಳಿಂದ ಹೊಸ ಜಿಲ್ಲೆಗಳ ಅಭಿವೃದ್ಧಿಯ ಒಂದು ಮುನ್ನೋವನ್ನು ನೀಡಲು ಇಲ್ಲಿ ಪ್ರಯತ್ನಿಸಲಾಗಿದೆ. ಈ ಜಿಲ್ಲೆಗಳ ಅಭಿವೃದ್ಧಿಯ ಭಾವಿ ಸ್ವರೂಪ ಹೇಗಿರಬಹುದು? ಭವಿಷ್ಯ ಉಜ್ವಲವಾಗಿದೆಯೆ? ಅಥವಾ ನಿರಾಶಾದಾಯಕವಾಗಿದೆಯೆ? ಎಂಬುದನ್ನು ಗುರುತಿಸುವ ಉದ್ದೇಶವೂ ನಮ್ಮ ಅಧ್ಯಯನಕ್ಕಿದೆ.

೧೦. ಈ ಅಧ್ಯಯನದ ಮೂಲಕ ನಾವು ಕರ್ನಾಟಕದ ೨೭ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಒಂದು ಮಾಹಿತಿ ಕೋಶವನ್ನು ಸಿದ್ಧ ಪಡಿಸಿದ್ದೇವೆ. ಹೊಸ ಜಿಲ್ಲೆಗಳು ವಿಭಾಗ ಮಟ್ಟದಲ್ಲಿ, ಪ್ರಾದೇಶಿಕ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಯಾವ ಸ್ಥಾನದಲ್ಲಿವೆ ಎಂಬುದನ್ನು ಗುರುತಿಸಲು ನಮ್ಮ ಮಾಹಿತಿ ಕೋಶ ನೆರವಾಗುತ್ತದೆ. ಕರ್ನಾಟಕದ ಜಿಲ್ಲಾ ಅಭಿವೃದ್ಧಿ ಅಧ್ಯಯನದ ಮೊದಲ ಹಂತವಾಗಿ ‘ಮಾಹಿತಿ ಕೋಶ’ವನ್ನು ಸಿದ್ಧಪಡಿಸುವ ಉದ್ದೇಶವನ್ನು ಪ್ರಸ್ತುತ ಅಧ್ಯಯನವು ಇಟ್ಟುಕೊಂಡಿದೆ (ಈ ಮಾಹಿತಿ ಕೋಶವು ಈಗಾಗಲೇ ಪ್ರತ್ಯೇಕವಾಗಿ ಪ್ರಕಟಗೊಂಡಿದೆ).

ಅಧ್ಯಯನ ವಿಧಾನ

ಮೂಲಭೂತವಾಗಿ ಇದೊಂದು ಎಂಪರಿಕಲ್ ಸ್ವರೂಪದ ಅಧ್ಯಯನದಂತೆ ಕಂಡರೆ ಆಶ್ಚರ್ಯವಿಲ್ಲ. ನಿಜ, ಎಂಪರಿಕಲ್‌ ಸ್ವರೂಪ ಪ್ರಧಾನವಾಗಿದೆ. ಆದರೆ ಈ ಅಧ್ಯಯನದಲ್ಲಿ ಸೈದ್ಧಾಂತಿಕ ಸಂಗತಿಗಳನ್ನು ಕಡೆಗಣಿಸಿಲ್ಲ. ಅಭಿವೃದ್ಧಿಗೆ ಸಂಬಂಧಿಸಿದ ಸೈದ್ಧಾಂತಿಕ ಸಂಗತಿಗಳು ನಮ್ಮ ಅಧ್ಯಯನದ ಮೂಲದಲ್ಲಿ ಕೆಲಸ ಮಾಡಿದೆ. ಪ್ರಜ್ಞಾಪೂರ್ವಕವಾಗಿ ಅಧ್ಯಯನವನ್ನು ಲಿಂಗ ಸಂವೇದಿಯನ್ನಾಗಿ ಮಾಡಲಾಗಿದೆ. ದುಡಿಮೆಗಾರರ ವರ್ಗ ಹಾಗೂ ವರಮಾನ ಇವುಗಳು ಜಿಲ್ಲೆಯ ಮೂರು ವಲಯಗಳಲ್ಲಿ ಹಂಚಿಕೆಯಾಗಿರುವ ಬಗೆಯನ್ನು ಆಧರಿಸಿ ಜಿಲ್ಲೆಯ ‘ಆರ್ಥಿಕ ರಚನೆ’ಯನ್ನು ಕಟ್ಟಲು ಇಲ್ಲಿ ಪ್ರಯತ್ನಿಸಲಾಗಿದೆ. ವಾಸ್ತವವಾಗಿ ಕರ್ನಾಟಕದ ಹೊಸ ಜಿಲ್ಲೆಗಳಿಗೆ ಸಂಬಂಧಿಸಿದಂತೆ ವರಮಾನದ ವಿವರಗಳು ದೊರೆಯುವುದಿಲ್ಲ. ನಮ್ಮ ಅಧ್ಯಯನದ ಅನುಕೂಲಕ್ಕಾಗಿ ಹೊಸ ಜಿಲ್ಲೆಗಳ ನಿವ್ವಳ ಆಂತರಿಕ ಉತ್ಪನ್ನವನ್ನು ಒಂದು ವಿಶೇಷ ವಿಧಾನದಿಂದ ಗಣನೆ ಮಾಡಲಾಗಿದೆ. ಈ ಅಧ್ಯಯನವನ್ನು ಅಮರ್ತ್ಯಸೇನ್‌ರ ಧಾರಣಾಶಕ್ತಿ ಪರಿಭಾವನೆ ಮತ್ತು ಮೆಹಬೂಬ್‌ ಉಲ್‌ಹಕ್ ಅವರ ಮಾನವಮುಖಿ ಅಭಿವೃದ್ಧೀ ವಿಚಾರ ಪ್ರಣಾಳಿಕೆಯನ್ನು ಆಧರಿಸಿ ರಚಿಸಲಾಗಿದೆ.

ಒಟ್ಟಾರೆ ಲಿಂಗ ಸಂಬಂಧಿ ವಿಚಾರಗಳು, ಮಾನವಮುಖಿ ಅಭಿವೃದ್ಧಿ ವಿಚಾರ ಪ್ರಣಾಳಿಕೆ, ಪೊಲಿಟಿಕಲ್ ಎಕಾನಮಿ ಪ್ರಶ್ನೆಗಳು ನಮ್ಮ ಅಧ್ಯಯನದ ಹಿಂದೆ ಕ್ರಿಯಾಶೀಲವಾಗಿ ಕೆಲಸ ಮಾಡಿವೆ. ಇದೊಂದು ‘ನೀತಿ – ನಿರೂಪಣಾ ಸಂವೇದಿ’ ಅಧ್ಯಯನವಾಗಿದೆ. ಜಿಲ್ಲೆಯ ಮಟ್ಟದಲ್ಲಿ ಅಭಿವೃದ್ಧಿಯೋಜನೆಯನ್ನು ರೂಪಿಸುವ ಕೆಲಸದಲ್ಲಿ ನಿರತರಾಗಿರುವ ಎಲ್ಲರಿಗೂ ಇದು ಮಾರ್ಗದರ್ಶಿ ಕೈಪಿಡಿಯಾಗಬಲ್ಲದು.

ಮಾಹಿತಿ ಸಂಗ್ರಹ

ಅಧ್ಯಯನಕ್ಕೆ ಅಗತ್ಯವಾದ ಎಲ್ಲ ಮಾಹಿತಿಯನ್ನು ಅನುಷಂಗಿಕ ಮೂಲಗಳಿಂದ ಸಂಗ್ರಹಿಸಿಕೊಳ್ಳಲಾಗಿದೆ. ಜನಗಣತಿ ನಿರ್ದೇಶನಾಲಯ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಎಂಜಿನೀಯರ್ ಅವರ ಕಚೇರಿ, ಶಿಕ್ಷಣ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ – ಹೀಗೆ ಅನೇಕ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿಕೊಂಡಿದ್ದೇವೆ. ಹೊಸ ಜಿಲ್ಲೆಗಳಿಗೆ ಭೇಟಿ ಕೊಟ್ಟು ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಧಿಕಾರಿ ಕಚೇರಿಗಳಿಂದ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದೇವೆ.

ಮಾಹಿತಿ ಸಂಗ್ರಹದ ಸಂದರ್ಭದಲ್ಲಿ ನಮಗೆ ಎದುರಾದ ಕೆಲವು ತೊಂದರೆಗಳನ್ನು ಇಲ್ಲಿ ದಾಖಲಿಸುವುದು ಅಪ್ರಸ್ತುತವಾಗಲಾರದು. ಹೊಸ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮಾಹಿತಿಯು ಲಭ್ಯವಿಲ್ಲ. ಹೊಸ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕುಗಳ ಮಾಹಿತಿಯನ್ನು ಒಟ್ಟುಗೂಡಿಸಿ ಜಿಲ್ಲಾ ಮಟ್ಟದ ಸೂಚಿಗಳನ್ನು ಸಿದ್ಧಪಡಿಸಬೇಕಾಗಿದೆ. ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ, ಜಿಲ್ಲಾ ಮಟ್ಟದಲ್ಲಿ ನೀಡುವ ಜವಾಬ್ದಾರಿಯನ್ನು ಬೆಂಗಳೂರಿನ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವು ಹೊತ್ತಿದೆ. ಆದರೆ ಈ ನಿರ್ದೇಶನಾಲಯವು ಇದುವರೆವಿಗೂ ಹೊಸ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಅಂಕಿ – ಅಂಶಗಳನ್ನು ಸಿದ್ಧಪಡಿಸಿಲ್ಲ.

ಹೊಸ ಜಿಲ್ಲೆಗಳ ವಿಸ್ತೀರ್ಣ

ಜಿಲ್ಲಾ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಬಹು ಮುಖ್ಯವಾದ ತೊಡಕಿದೆ. ಜನಗಣತಿ ವರದಿಗಳಲ್ಲಿ ಜಿಲ್ಲಾವಾರು ಹಾಗೂ ತಾಲ್ಲೂಕುವಾರು ವಿಸ್ತೀರ್ಣದ ವಿವರ ದೊರೆಯುತ್ತದೆ. ಸದರಿ ವರದಿಗಳಲ್ಲಿ ತಿಳಿಸಿರುವಂತೆ ಜಿಲ್ಲೆಗಳ ವಿಸ್ತೀರ್ಣವು ಆ ಜಿಲ್ಲೆಯೆ ತಾಲ್ಲೂಕುಗಳ ವಿಸ್ತೀರ್ಣವನ್ನು ಕೂಡಿಸಿದ ಮೊತ್ತಕ್ಕೆ ಸಮಾನಾಗುವುದಿಲ್ಲ. ಏಕೆಂದರೆ ಇಲ್ಲಿ ಬಳಸಿರುವ ಮಾಹಿತಿ ಮೂಲಗಳು ಬೇರೆ ಬೇರೆಯಾಗಿವೆ. ಜಿಲ್ಲಾ ವಿಸ್ತೀರ್ಣವನ್ನು ಸರ್ವೆ ಇಲಾಖೆಯ ಮಾಹಿತಿ ಆಧಾರದಿಂದ ಗಣನೆ ಮಾಡಿದ್ದರೆ, ತಾಲ್ಲೂಕು ಮಟ್ಟದ ವಿಸ್ತೀರ್ಣವನ್ನು ಗ್ರಾಮ ಹಾಗೂ ತಾಲ್ಲೂಕು ರೆವಿನ್ಯೂ ಇಲಾಖೆಯಿಂದ ಸಂಗ್ರಹಿಸಿ ಕೊಳ್ಳಲಾಗಿದೆ. ಈ ಸಮಸ್ತೆಯನ್ನು ನಿವಾರಿಸಿಕೊಳ್ಳುವಲ್ಲಿ ನಾವು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದೇವೆ. ಹೊಸ ಜಿಲ್ಲೆಗಳಿಗೆ ಸಂಬಂಧಿಸಿದ ೩೫ ತಾಲ್ಲೂಕುಗಳ ವಿಸ್ತೀರ್ಣವನ್ನು ಮಾತ್ರ ಇಲ್ಲಿ ಗಣನೆ ಮಾಡಿದ್ದೇವೆ. ಉಳಿದಂತೆ ಜಿಲ್ಲಾ ಮಟ್ಟದ ವಿಸ್ತೀರ್ಣವನ್ನೆ ಗಣನೆ ಮಾಡಿದ್ದೇವೆ. ಇದರಿಂದ ‘ಎರರ್’ನ ಪ್ರಮಾಣ ಕಡಿಮೆಯಾಗಿದೆ.

ಜಿಲ್ಲಾ ನಿವ್ವಳ ಆಂತರಿಕ ವರಮಾನ

ಕರ್ನಾಟಕದಲ್ಲಿ ನಿವ್ವಳ ಆಂತರಿಕ ಉತ್ಪನ್ನದ ವಿವರಗಳು ಜಿಲ್ಲಾ ಮಟ್ಟದಲ್ಲಿ ಮಾತ್ರ ಲಭ್ಯವಾಗುತ್ತಿವೆ. ತಾಲ್ಲೂಕು ಮಟ್ಟದಲ್ಲಿ ಅವು ದೊರೆಯುವುದಿಲ್ಲ. ಈ ಕಾರಣಗಳಿಗಾಗಿ ಹೊಸ ಜಿಲ್ಲೆಗಳಿಗೆ ಸಂಬಂಧಿಸಿದ ವರಮಾನದ ವಿವರ ನಮಗೆ ದೊರೆಯುವುದಿಲ್ಲ. ನಮ್ಮ ಅಧ್ಯಯನದ ಸಲುವಾಗಿ ಹೊಸ ಜಿಲ್ಲೆಗಳ ವರಮಾನವನ್ನು ಒಂದು ವಿಶಿಷ್ಟ ವಿಧಾನವನ್ನು ಅನುಸರಿಸಿ ಗಣನೆ ಮಾಡಿದ್ದೇವೆ. ಅದರ ವಿವರವನ್ನು ಅನುಬಂಧದಲ್ಲಿ ನೀಡಲಾಗಿದೆ. ವರಮಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೀಗೆ ಕಂಡುಕೊಂಡಿದ್ದರಿಂದ ಹೊಸ ಜಿಲ್ಲೆಗಳ ವಲಯವಾರು ಆರ್ಥಿಕ ರಚನೆಯನ್ನು ಕಟ್ಟಿಕೊಳ್ಳುವುದು ಇಲ್ಲಿ ಸಾಧ್ಯವಾಗಿದೆ.

ಸಾಕ್ಷರತೆ ವಿವರಗಳು

ಈ ಅಧ್ಯಯನದ ಮೂಲಕ ಪ್ರಥಮ ಬಾರಿಗೆ ಕರ್ನಾಟಕದ ಸಾಕ್ಷರತೆಗೆ ಸಂಬಂಧಿಸಿದ ವಿವರಗಳನ್ನು ನಾವು ಸಿದ್ಧಪಡಿಸಿದ್ದೇವೆ. ಸಾಕ್ಷರತೆ ವಿವರಗಳ ಜೊತೆಗೆ ಅನಕ್ಷರಸ್ಥರ ಪ್ರಮಾಣದ ವಿವರಗಳನ್ನು ಇಲ್ಲಿ ಚರ್ಚಿಸಲಾಗಿದೆ. ಸಾಕ್ಷರತೆಯ ಅಂಕಿ – ಸಂಖ್ಯೆಗಳನ್ನು ನಮ್ಮ ಅಧ್ಯಯನದಲ್ಲಿ ಅತ್ಯಂತ ಸೂಕ್ಷ್ಮ ಅನುಸಂಧಾನಕ್ಕೆ ಒಳಪಡಿಸಲಾಗಿದೆ. ಸಾಕ್ಷರರಲ್ಲಿ ಮಹಿಳೆಯರ ಪಾಲು, ಸಾಕ್ಷರರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನತೆಯ ಪಾಲು ಮುಂತಾದ ಸಂಗತಿಗಳನ್ನು ಪ್ರಸ್ತುತ ಅಧ್ಯಯನಕ್ಕಾಗೆ ಸಿದ್ಧಪಡಿಸಲಾಗಿದೆ. ಸಾಕ್ಷರತೆಯನ್ನು ಕೇವಲ ಶೇಕಡ ಪ್ರಮಾಣದಲ್ಲಿ ವಿಶ್ಲೇಷಿಸುವುದರ ಜೊತೆಗೆ ಪೂರ್ಣ ಅಂಕಿಗಳ ರೂಪದಲ್ಲೂ ವಿಶ್ಲೇಷಿಸಲಾಗಿದೆ.

ಜಿಲ್ಲಾ ಅಭಿವೃದ್ಧಿ ಅಧ್ಯಯನ ವರದಿ

‘ಅಭಿವೃದ್ಧಿ ವರದಿ’ಗಳನ್ನು ಸಿದ್ಧಪಡಿಸುವ ಪ್ರಕಟಿಸುವ ಒಂದು ವಿಶಿಷ್ಟ ಪದ್ಧತಿ ಪ್ರಚಲಿತದಲ್ಲಿದೆ. ೧೯೯೦ ರಿಂದ ಯುಎನ್‌ಡಿಪಿಯು ‘ಮಾನವಮುಖಿ ಅಭಿವೃದ್ಧಿ ವರದಿ’ಗಳನ್ನು ಪ್ರತಿ ವರ್ಷವೂ ಪ್ರಕಟಿಸುತ್ತಿದೆ. ಇಂದಿರಾಗಾಂಧಿ ಇನ್ಸ್‌ ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ರೀಸರ್ಚ್‌ನ ಕೀರ್ತಿ ಎಸ್. ಪಾರೀಖ್ ಮತ್ತು ಅವರ ಸಹೋದ್ಯೋಗಿಗಳು ಸೇರಿಕೊಂಡು ‘ಇಂಡಿಯಾ ಡೆವಲಪ್‌ಮೆಂಟ್ ರಿಪೋರ್ಟ್‌’ ಪ್ರಕಟಿಸಿದ್ದಾರೆ. ಇದು ‘ಅಭಿವೃದ್ಧಿ ವರದಿ’ಗಳ ಕಾಲ ಇದೇ ಮಾದರಿಯಲ್ಲಿ, ಆದರೆ ಅವುಗಳಿಗಿಂತ ಭಿನ್ನವಾದ ರೀತಿಯಲ್ಲಿ ನಾವು ಕರ್ನಾಟಕಕ್ಕೆ ಸಂಬಂಧಿಸಿದಂತೆ ‘ಜಿಲ್ಲಾ ಅಭಿವೃದ್ಧಿ ಅಧ್ಯಯನ ವರದಿ’ಗಳನ್ನು ಸಿದ್ಧಪಡಿಸುತ್ತಿದ್ದೇವೆ. ಸದ್ಯ, ಈ ಯೋಜನೆಯಡಿಯಲ್ಲಿ ೧೯೯೭ ರಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಏಳು ಜಿಲ್ಲೆಗಳ ‘ಅಭಿವೃದ್ಧಿ ಅಧ್ಯಯನ ವರದಿ’ಗಳನ್ನು ಪ್ರಕಟಿಸುತ್ತಿದ್ದೇವೆ. ಮೊದಲೇ ತಿಳಿಸಿರುವಂತೆ ನಮ್ಮ ‘ಜಿಲ್ಲಾ ಅಭಿವೃದ್ಧಿ ಅಧ್ಯಯನ ವರದಿ’ಯು ಮಾನವಮುಖಿ ಅಭಿವೃದ್ಧಿ ವರದಿಯಂತೆ ನಮ್ಮ ವರದಿಯು ಕೇವಲ ಶಿಕ್ಷಣ, ಸಾಕ್ಷರತೆ, ಆರೋಗ್ಯ ಮುಂತಾದ ಸಾಮಾಜಿಕ ವಲಯಗಳ ಪರಿಶೀಲನೆಗೆ ಮೀಸಲಾಗಿಲ್ಲ. ಇಂಡಿಯಾ ಅಭಿವೃದ್ಧಿ ವರದಿಯಂತೆ ನಮ್ಮ ವರದಿಯು ‘ವಲಯವಾರು’ ಅಧ್ಯಯನವಾಗಿಲ್ಲ. ಇವೆರಡನ್ನು ಸಮನ್ವಯಗೊಳಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ನಮ್ಮ ‘ಜಿಲ್ಲಾ ಅಭಿವೃದ್ಧಿ ಅಧ್ಯಯನ ವರದಿ’ಯಲ್ಲಿ ದುಡಿಯುವ ವರ್ಗದ ಸ್ವರೂಪವನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ವಿವಿಧ ಆಯಾಮಗಳನ್ನು ಹಿಡಿದಿಡಲು ಪ್ರಯತ್ನಿಸಲಾಗಿದೆ. ದುಡಿಮೆಗಾರರ ವಲಯವಾರು ಹಂಚಿಕೆಯನ್ನು ಗುರುತಿಸುವ ಮೂಲಕ ಆರ್ಥಿಕ ರಚನೆಯನ್ನು ಇಲ್ಲಿ ರೂಪಿಸಿಕೊಳ್ಳಲು ಸಾಧ್ಯವಾಗಿದೆ. ದುಡಿಮೆಗಾರ ವರ್ಗದ ಲಿಂಗ ಸ್ವರೂಪವನ್ನು ಇಲ್ಲಿ ಸೂಕ್ಷ್ಮ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಆ ಕಾರಣಗಳಿಂದ ನಮ್ಮ ವರದಿಯು ಮೇಲೆ ತಿಳಿಸಿದ ಅಭಿವೃದ್ಧಿ ವರದಿಗಳಿಗಿಂತ ಗುಣಾತ್ಮಕವಾಗಿ ಭಿನ್ನವಾಗಿದೆ.

ನಮ್ಮ ಅಧ್ಯಯನವರದಿಯು ಅಮರ್ತ್ಯಸೇನ್ ಅವರ ವಿಚಾರಗಳಿಂದ ಹೆಚ್ಚು ಪ್ರಭಾವಿತಗೊಂಡಿದೆ. ಇದು ಮಾನವಮುಖಿ ಅಭಿವೃದ್ಧಿ ವಿಚಾರ ಪ್ರಣಾಳಿಕೆಗೆ ಹೆಚ್ಚು ಸಂವೇದಿಯಾಗಿದೆ. ಆದರೆ ನಮ್ಮ ವರದಿ ಅನೇಕ ಇತಿ ಮಿತಿಗಳನ್ನು ಹೊಂದಿದೆ. ನಮ್ಮ ಜಿಲ್ಲಾ ಅಭಿವೃದ್ಧಿ ಅಧ್ಯಯನ ವರದಿಗಳನ್ನು ಮಾನವಮುಖಿ ಅಭಿವೃದ್ಧಿ ವರದಿ ಮತ್ತು ಇಂಡಿಯಾ ಅಭಿವೃದ್ಧಿ ವರದಿಗಳಿಗೆ ಹೋಲಿಸುತ್ತಿರುವ ಕ್ರಮವನ್ನು ‘ದಾರ್ಷ್ಟ್ಯತನ’ವೆಂದು ಭಾವಿಸಬೇಕಾಗಿಲ್ಲ. ತಾಂತ್ರಿಕವಾಗಿ ನಮ್ಮ ವರದಿಗಳನ್ನು ಯುಎನ್‌ಡಿಪಿಯ ಅಭಿವೃದ್ಧಿ ವರದಿಗೆ ಹೋಲಿಸಲು ಸಾಧ್ಯವಿಲ್ಲ. ನಮ್ಮ ಅಧ್ಯಯನವು ತನ್ನದೇ ಆದ ಮಹತ್ವ ಪಡೆದಿದೆ ಎಂಬುದನ್ನು ಹೇಳಲು ಹೋಲಿಕೆಗಳನ್ನು ಮಾಡಲಾಗಿದೆ.

ಅಧ್ಯಯನದ ವ್ಯಾಪ್ತಿ

ಈ ಅಧ್ಯಯನವು ಮೊದಲ ಹಂತದಲ್ಲಿ ಕರ್ನಾಟಕದ ೭ ಹೊಸ ಜಿಲ್ಲೆಗಳನ್ನು ಒಳಗೊಂಡಿದೆ. ಈ ಹೊಸ ಏಳು ಜಿಲ್ಲೆಗಳು ಹಳೆಯ ೮ ಜಿಲ್ಲೆಗಳನ್ನು ವಿಭಜಿಸಿ ರಚಿತಗೊಂಡಿವೆ. ಇದರಿಂದಾಗಿ ಕರ್ನಾಟಕದ ೧೫ ಜಿಲ್ಲೆಗಳ ವಿಸ್ತ್ರೀರ್ಣ, ಜನಸಂಖ್ಯೆ, ಗಡಿ ರೇಖೆಗಳು ಬದಲಾವಣೆಗೊಂಡಿವೆ. ಈ ಕಾರಣದಿಂದಾಗಿ ನಮ್ಮ ಅಧ್ಯಯನವು ಕರ್ನಾಕದ ೧೫ ಜಿಲ್ಲೆಗಳನ್ನು – ೭ ಹೊಸ ಜಿಲ್ಲೆಗಳು ಮತ್ತು ಹಳೆಯ ೮ ಜಿಲ್ಲೆಗಳು – ವ್ಯಾಪ್ತಿಯಲ್ಲಿ ಒಳಗೊಂಡಿದೆ. ಈ ಏಳು ಹೊಸ ಜಿಲ್ಲೆಗಳು ಹಾಗೂ ವಿಭಜಿತ ೮ ಜಿಲ್ಲೆಗಳು – ಹೀಗೆ ಒಟ್ಟು ೧೫ ಜಿಲ್ಲೆಗಳು ತಮ್ಮ ತಮ್ಮ ವಿಭಾಗಗಳಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಯಾವ ಸ್ಥಾನದಲ್ಲಿವೆ ಎಂಬುದನ್ನು ತಿಳಿಯಲು ನಾವು ರಾಜ್ಯದ ಒಟ್ಟು ೨೭ ಜಿಲ್ಲೆಗಳನ್ನು ಪರಿಗಣಿಸಬೇಕಾಯಿತು. ಹೀಗೆ ನಮ್ಮ ಅಭಿವೃದ್ಧಿ ಅಧ್ಯಯನವು ಹೊಸ ಏಳು ಜಿಲ್ಲೆಗಳಿಂದ ಪ್ರಾರಂಭಿಸಿ, ವಿಭಜಿತ ೮ ಜಿಲ್ಲೆಗಳನ್ನು ಸೇರಿಕೊಂಡು ಕೊನೆಗೆ ೨೭ ಜಿಲ್ಲೆಗಳ ಅಧ್ಯಯನವಾಗಿ ರೂಪು ತಳೆದಿದೆ.

ಕಾಲಾವಧಿಯ ದೃಷ್ಟಿಯಿಂದ ಈ ಅಧ್ಯಯನವು ‘೧೯೯೭’ನ್ನು ಮೂಲ ವರ್ಷವನ್ನಾಗಿ ಇಟ್ಟುಕೊಂಡಿದೆ. ಜನಸಂಖ್ಯೆ, ಸಾಕ್ಷರತೆ, ದುಡಿಮೆಗಾರರು ಮುಂತಾದವುಗಳಿಗೆ ಸಂಬಂಧಿಸಿದಂತೆ ೧೯೯೧ ಮೂಲ ವರ್ಷವಾಗಿದೆ. ಇವೆರಡೂ ವರ್ಷಗಳಿಗೆ ಸಂಬಂಧಿಸಿದಂತೆ ಮಾಹಿತಿ ದೊರೆಯದಿದ್ದಾಗ, ಯಾವ ವರ್ಷಕ್ಕೆ ಅದು ಸಂಬಂಧಪಟ್ಟಿದೆ ಎಂಬುದನ್ನು ಸೂಚಿಸಲಾಗಿದೆ.

ಅಧ್ಯಯನದ ಮಹತ್ವ

ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗವು ಆರಂಭಿಸಿರುವ ಮಹತ್ವಾಕಾಂಕ್ಷೆಯ ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ ಅನೇಕ ದೃಷ್ಟಿಯಿಂದ ಮಹತ್ವದ್ದಾಗಿದೆ.

೧. ಈ ಅಧ್ಯಯನದ ಮೂಲಕ ಅಭಿವೃದ್ಧಿ ಅಧ್ಯಯನ ವಿಭಾಗವು ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ ಎಂಬ ಹೊಸ ಅಧ್ಯಯನ ಮಾರ್ಗವೊಂದನ್ನು ಆವಿಷ್ಕಾರಗೊಳಿಸಿದೆ. ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ ಎಂಬುದು ಅಭಿವೃದ್ಧಿ ಅಧ್ಯಯನ ಕ್ಷೇತ್ರಕ್ಕೆ ನಮ್ಮ ವಿಭಾಗವು ನೀಡಿದ ಕಾಣಿಕೆಯಾಗಿದೆ. ಜಿಲ್ಲಾ ಅಭಿವೃದ್ಧಿ ಅಧ್ಯಯನಕ್ಕೆ ಒಂದು ನಿರ್ದಿಷ್ಟ ವ್ಯಾಖ್ಯೆಯನ್ನು ನೀಡಲು ಇಲ್ಲಿ ಪ್ರಯತ್ನಿಸಲಾಗಿದೆ.

೨. ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ವೆನ್ನುವುದು ಕೇವಲ ಅಂಕಿ – ಅಂಶಗಳ ಕೋಶವಲ್ಲ. ನಾವು ಪರಿಭಾವಿಸಿಕೊಂಡಿರುವ ಜಿಲ್ಲಾ ಅಭಿವೃದ್ಧಿ ಅಧ್ಯಯನವು ‘ಅನುಸಂಧಾನ’ ಸ್ವರೂಪದ್ದಾಗಿದೆ. ಈ ಅಧ್ಯಯನಗಳನ್ನು ಸಂಕಥನದ ರೂಪದಲ್ಲಿ ಕಟ್ಟಲಾಗಿದೆ. ಈ ಸಂಕಥನ ಸ್ವರೂಪದ ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ವು ಸಂಬಂಧಿಸಿದ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ‘ಸಂವಾದ’ವೊಂದನ್ನು ಚರ್ಚೆಯೊಂದನ್ನು ಪ್ರಚೋದಿಸಬಲ್ಲುದಾಗಿದೆ. ಈ ಕಾರಣದಿಂದಾಗಿ ಈ ಅಧ್ಯಯನ ಮಹತ್ವದ್ದಾಗಿದೆ.

೩. ಪ್ರತಿಯೊಂದು ಜಿಲ್ಲೆಗೂ ಒಂದು ವಿಶಿಷ್ಟತೆ ಇರುತ್ತದೆ. ಅದಕ್ಕೆ ಅನನ್ಯ ಗುರುತು ಇರುತ್ತದೆ. ಕರ್ನಾಟಕದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಜಿಲ್ಲೆಗಳು ಇಂತಹ ವ್ಯಕ್ತಿತ್ವ ವಿಶಿಷ್ಟತೆಯನ್ನು ಗುರುತಿಸಿಕೊಳ್ಳಬೇಕಾಗಿದೆ. ಈ ದಿಶೆಯಲ್ಲಿ ನಮ್ಮ ಅಧ್ಯಯನವು ಒಂದು ಪ್ರಯತ್ನವಾಗಿದೆ. ಈ ದೃಷ್ಟಿಯಿಂದ ನಮ್ಮ ಅಧ್ಯಯನವು ‘ಉಪಯೋಗಿ ಮಹತ್ವ’ ಪಡೆದಿದೆ.

೪. ಇದೊಂದು ‘ನೀತಿ – ನಿರೂಪಣಾ ಸಂವೇದಿ’ ಅಧ್ಯಯನವಾಗಿದೆ. ಜಿಲ್ಲೆಯ ಅಭಿವೃದ್ಧಿ ಯೋಜನೆ ರೂಪಿಸಲು ನಮ್ಮ ಅಧ್ಯಯನವು ಮಾರ್ಗದರ್ಶಿ ಕೈಪಿಡಿಯಾಗಬಲ್ಲದು. ಜಿಲ್ಲೆಯ ಒಂದು ನಿರ್ದಿಷ್ಟ ವರ್ಗದ ಹಿತಾಸಕ್ತಿಗಳನ್ನು ‘ಪ್ರಧಾನ’ವೆಂದು ನಮ್ಮ ಅಧ್ಯಯನವು ಘೋಷಿಸಿಕೊಂಡಿರುವುದರಿಂದ ಈ ಅಧ್ಯಯನ ‘ಮೌಲ್ಯ ನಿರಪೇಕ್ಷ’ವಾಗಿರಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಅಧ್ಯಯನ ಮಹತ್ವವನ್ನು ಪಡೆದುಕೊಂಡುಬಿಡುತ್ತದೆ.

೫. ಈ ಅಧ್ಯಯನದಲ್ಲಿ ಜಿಲ್ಲೆಯ ಅಭಿವೃದ್ಧಿ ಮಟ್ಟವನ್ನು ವಿಭಾಗ, ಪ್ರದೇಶ ಹಾಗೂ ರಾಜ್ಯಕ್ಕೆ ಸಾಪೇಕ್ಷವಾಗಿ ಗುರುತಿಸಿರುವುದರಿಂದ ಈ ಅಧ್ಯಯನವು ‘ಪ್ರಾದೇಶಿಕ ಅಧ್ಯಯನ’ ಮಹತ್ವವನ್ನು ಪಡೆದಿದೆ. ಪ್ರಾದೇಶಿಕ ಅಸಮಾನತೆ ಕುರಿತಂತೆ ಆಸಕ್ತಿ ಉಳ್ಳವರಿಗೆ ನಮ್ಮ ಅಧ್ಯಯನವು ಸುಕ್ಷ್ಮ ಒಳನೋಟಗಳನ್ನು ನೀಡಬಲ್ಲುದಾಗಿದೆ.

೬. ಇದೊಂದು ಮೌಲ್ಯ ವಿವೇಚನೆಯುಳ್ಳ ಅಧ್ಯಯನವಾಗಿದೆ ಎಂಬುದನ್ನು ಈಗಾಗಲೆ ಹೇಳಿಯಾಗಿದೆ. ಇದೇ ನೆಲೆಯಲ್ಲಿ ಹೇಳುವುದಾದರೆ ಇದೊಂದು ‘ಲಿಂಗ ಸಂವೇದಿ’ ಅಧ್ಯಯನವಾಗಿದೆ. ಅಭಿವೃದ್ಧಿಯ ಲಿಂಗ ಸಂವೇದಿ ಆಯಾಮಗಳನ್ನು ಗುರುತಿಸಲು ಇಲ್ಲಿ ಆದ್ಯ ಗಮನ ನೀಡಲಾಗಿದೆ. ಈ ದೃಷ್ಟಿಯಿಂದಲೂ ನಮ್ಮ ಅಧ್ಯಯನವು ಉಪಯುಕ್ತವೂ, ಮಹತ್ವವೂ ಆಗಿದೆ.

೭. ಇದೊಂದು ‘ಅಭಿವೃದ್ಧಿ ವಿಶಿಷ್ಟ’ ಅಧ್ಯಯನವಾಗಿದೆ. ಗ್ರಾಮ, ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲೆಗಳ ಮಟ್ಟದಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕಾದ ಪ್ರಮೇಯ ಈಗ ನಿರ್ಮಾಣವಾಗಿದೆ. ವಿಕೇಂದ್ರೀಕರಣವು ಕೇವಲ ಆಡಳಿತಾತ್ಮಕ ರಾಜಕೀಯ ಪ್ರಾತಿನಿಧ್ಯಕ್ಕೆ ಮೀಸಲಾಗಿದ್ದ ಕಾಲ ಮುಗಿದು ಹೋಗಿದೆ. ಈಗ ಅದು ಅತ್ಯಂತ ಗಂಭೀರವಾದ ರೀತಿಯಲ್ಲಿ ‘ಅಭಿವೃದ್ಧಿ ಮುಖಿ’ಯಾಗುತ್ತಿದೆ. ವಿಕೇಂದ್ರೀಕೃತ ಮತ್ತು ಸಹಭಾಗಿತ್ವವಾಗಿ ಅಭಿವೃದ್ದಿಯು ಪ್ರಚಲಿತದಲ್ಲಿರುವ ಇಂದಿನ ಸಂದರ್ಭದಲ್ಲಿ ನಮ್ಮ ಅಧ್ಯಯನವು ತುಂಬಾ ಮಹತ್ವ ಪಡೆದಿದೆ.

೮. ಅಭಿವೃದ್ಧಿ ಆಡಳಿತಗಾರರಿಗೆ, ಜನ ಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ ಮತ್ತು ಮುಖ್ಯವಾಗಿ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಅಧ್ಯಯನವು ತುಂಬಾ ಉಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ. ಅಭಿವೃದ್ಧಿ ಕುರಿತಂತೆ ಸಂವಾದಕ್ಕೆ – ಸಂಕಥನಕ್ಕೆ ಒಂದು ನೆಲೆಗಟ್ಟನ್ನು ನಮ್ಮ ಅಧ್ಯಯನವು ಒದಗಿಸುತ್ತದೆ. ಇದರಿಂದಾಗಿ ಇದು ಮಹತ್ದ್ದಾಗಿದೆ.

೯. ಕರ್ನಾಟಕದ ೨೯ ಜಿಲ್ಲೆಗಳಿಗೆ ಸಂಬಂಧಿಸಿದ ವಿಶಿಷ್ಟ ಮಾಹಿತಿ ಕೋಶ ಇಲ್ಲಿದೆ. ಅಭಿವೃದ್ಧಿ ಕುರಿತು ಅಧ್ಯಯನದಲ್ಲಿ ತೊಡಗಿರುವವರಿಗೆ ಇದೊಂದು ಮಾಹಿತಿಯ ಗಣಿಯಾಗಿದೆ. ಹೀಗೆ ನಮ್ಮ ಜಿಲ್ಲಾ ಅಭಿವೃದ್ಧಿ ಅಧ್ಯಯನವು ಅನೇಕ ಬಗೆಯ ಮಹತ್ವ ಪಡೆದುಕೊಂಡಿದೆ.

ಅಧ್ಯಯನದ ಮಿತಿಗಳು

ಇದೊಂದು ಮಹತ್ವಾಕಾಂಕ್ಷೆಯ ಅಧ್ಯಯನವಾಗಿದೆ. ಈ ಅಧ್ಯಯನವು ನಿರ್ದಿಷ್ಟವಾದ ಸೈದ್ಧಾಂತಿಕ ನೆಲೆಯನ್ನು ಹೊಂದಿದೆ ಮತ್ತು ಸುಸ್ಪಷ್ಟವಾದ ಅಧ್ಯಯನ ವಿಧಾನವನ್ನು ಇಲ್ಲಿ ರೂಪಿಸಿಕೊಂಡಿದ್ದೇವೆ. ಇಂತಹ ಅಧ್ಯಯನಗಳನ್ನು ಕೈಗೊಂಡಾಗ ಕೆಲವು ಮಿತಿಗಳು ಅಂತರ್ಗತಗೊಂಡಿರುತ್ತದೆ. ಈ ಮಿತಿಗಳ ಚೌಕಟ್ಟಿನಲ್ಲಿ ನಮ್ಮ ಅಧ್ಯಯನವನ್ನು ಪರಿಭಾವಿಸಬೇಕಾಗಿದೆ.

ಈ ಅಧ್ಯಯನದ ಬಹು ಮುಖ್ಯವಾದ ಮಿತಿಯೆಂದರೆ ಈ ಅಧ್ಯಯನವು ಸಂಪೂರ್ಣವಾಗಿ ಅನುಷಂಗಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ಪ್ರಾಥಮಿಕ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದಕ್ಕೆ ಕ್ಷೇತ್ರಕಾರ್ಯ ಕೈಗೊಳ್ಳಬೇಕು. ಸಮಯದ ಅಭಾವದಿಂದ ಅದನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಹೊಸ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದಲ್ಲಿ ಸಮಾಜದ ವಿವಿಧ ವರ್ಗಗಳೊಂದಿಗೆ ಚರ್ಚೆ – ಸಂವಾದ – ಸಂದರ್ಶನ ನಡೆಸುವ ಉದ್ದೇಶವಿತ್ತು. ಆದರೆ ಅದು ಕೈಗೂಡಲಿಲ್ಲ. ಮುಂದೆ ಅಂತಹ ‘ಸಮಗ್ರ’ವಾದ ಅಧ್ಯಯನ ಕೈಗೊಳ್ಳುವ ಉದ್ದೇಶ ನಮ್ಮದಾಗಿದೆ. ಈಗ ನಾವು ತಯಾರಿಸಿರುವ ಅಧ್ಯಯನ ವರದಿಯನ್ನು ಪೂರ್ವಭಾವಿ ಪ್ರಯತ್ನವೆಂದರೂ ಸರಿ! ಈ ಅಧ್ಯಯನದ ಉಪ ಉತ್ಪನ್ನವಾಗಿ ಕರ್ನಾಟಕದ ೨೭ ಜಿಲ್ಲೆಗಳನ್ನು ಕುರಿತಂತೆ ಅನುಷಂಗಿಕ ಮೂಲಗಳಿಂದ ಸಂಗ್ರಹಿಸಿದ ಅಂಕಿ – ಅಂಶಗಳನ್ನೆಲ್ಲಾ ಒಪ್ಪಮಾಡಿ ‘ಮಾಹಿತಿ ಕೋಶ’ವೊಂದನ್ನು ಸಿದ್ಧಪಡಿಸಿದ್ದೇವೆ. ನಮ್ಮ ಅಧ್ಯಯನದ ಮೂಲದಲ್ಲಿ ‘ಜಿಲ್ಲಾ’ಮಟ್ಟದಲ್ಲಿ ಅಭಿವೃದ್ಧಿ ಕುರಿತಂತೆ ಸಂವಾದ – ಸಂಕಥನವೊಂದನ್ನು ಹುಟ್ಟು ಹಾಕುವ ಉದ್ದೇಶ ಇತ್ತು. ಈ ದಿಶೆಯಲ್ಲಿ ನಮ್ಮ ಅಧ್ಯಯನ ಯಶಸ್ವಿಯಾಗಿದೆ ಎಂದು ನಾವು ಭಾವಿಸಿದ್ದೇವೆ. ನಮ್ಮ ಅಧ್ಯಯನದ ಇನ್ನೊಂದು ಬಹು ಮುಖ್ಯವಾದ ಮಿತಿಯೆಂದರೆ ಜಿಲ್ಲೆಯ ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಈ ಅಧ್ಯಯನವು ಏನನ್ನು ಹೇಳುವುದಿಲ್ಲ. ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಸಂಬಂಧಿ ವಿಷಯವನ್ನು ಮಾತ್ರ ಇಲ್ಲಿ ಅಧ್ಯಯನಕ್ಕೆ ಹಚ್ಚಲಾಗಿದೆ.

ಕೊಪ್ಪಳ ಜಿಲ್ಲೆಯ ಅಭಿವೃದ್ಧಿ ಅಧ್ಯಯನದ ವರದಿ

ರಾಯಚೂರು ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ವಿಭಜಿಸಿ ಕೊಪ್ಪಳ ಜಿಲ್ಲೆಯನ್ನು ರಚಿಸಲಾಗಿದೆ. ಪ್ರಾದೇಶಿಕವಾಗಿ ಕೊಪ್ಪಳವು ‘ಹೈದರಾಬಾದ್ – ಕರ್ನಾಟಕ’ ಪ್ರದೇಶಕ್ಕೆ ಸೇರಿದ ಜಿಲ್ಲೆಯಾಗಿದೆ. ಈ ಪ್ರದೇಶದಲ್ಲಿ ನಾಲ್ಕು ಜಿಲ್ಲೆಗಳಿದ್ದವು. ಇಂದು ಐದನೆಯ ಜಿಲ್ಲೆಯಾಗಿ ಕೊಪ್ಪಳ ರೂಪುಗೊಂಡಿದೆ. ಕರ್ನಾಟಕದಲ್ಲಿ ಪ್ರಾದೇಶಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವೆಂಬ ಅಭಿದಾನವನ್ನು ‘ಹೈದರಾಬಾದ್ – ಕರ್ನಾಟಕ’ ಪ್ರದೇಶ ಪಡೆದಿದೆ. ಹೈದರಾಬಾದ್ – ಕರ್ನಾಟಕ ಪ್ರದೇಶದ ಎಲ್ಲ ಲಕ್ಷಣಗಳನ್ನು ಕೊಪ್ಪಳ ಜಿಲ್ಲೆಯು ಪಡೆದಿದೆ. ಕರ್ನಾಟಕದಲ್ಲಿ ೨೦ ಜಿಲ್ಲೆಗಳಿದ್ದಾಗ, ಅನೇಕ ವಿಷಯಗಳಲ್ಲಿ ರಾಯಚೂರು ಜಿಲ್ಲೆಯು ೨೦ನೆಯ ಸ್ಥಾನ ಪಡೆದಿತ್ತು. ಇಂದು ರಾಜ್ಯದಲ್ಲಿ ೨೭ ಜಿಲ್ಲೆಗಳಾಗಿದೆ. ಈ ಸಂದರ್ಭದಲ್ಲಿ ರಾಯಚೂರು ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆಗಳು, ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯದಲ್ಲಿ ಕಡೆಯ ಸ್ಥಾನಗಳನ್ನು ಪಡೆದುಕೊಂದಿವೆ. ಲಿಂಗ ಸಂಬಂಧಗಳ ದೃಷ್ಟಿಯಿಂದ ಕೊಪ್ಪಳ ಜಿಲ್ಲೆಯು ಅನೇಕ ವಿಶಿಷ್ಟತೆಯನ್ನು ಪಡೆದಿದೆ. ಸಾಂಪ್ರದಾಯಿಕ ಅಭಿವೃದ್ಧಿ ಮೀಮಾಂಸೆಯು ಗುರುತಿಸುವ ಹಿಂದುಳಿದಿರುವಿಕೆಯ ಎಲ್ಲ ಲಕ್ಷಣಗಳನ್ನು ಕೊಪ್ಪಳ ಜಿಲ್ಲೆಯು ಹೊಂದಿದೆ. ಕೊಪ್ಪಳವು ಕೃಷಿ ಪ್ರಧಾನ ಆರ್ಥಿಕತೆಯನ್ನು ಹೊಂದಿದೆ. ಬಡತನದ ಲಿಂಗೀಕರಣ ಪ್ರಕ್ರಿಯೆಯ ಅಧ್ಯಯನಕ್ಕೆ ಕೊಪ್ಪಳವು ಅತ್ಯಂತ ಪ್ರಶಸ್ತವಾದ ಜಿಲ್ಲೆಯಾಗಿದೆ. ಪ್ರಸ್ತುತ ಅಧ್ಯಯನದಲ್ಲಿ ಕೊಪ್ಪಳ ಜಿಲ್ಲೆಯ ಅಭಿವೃದ್ಧಿ ಗತಿಶೀಲತೆಯನ್ನು ಗುರುತಿಸಲಾಗಿದೆ.

ಅಧ್ಯಾಯಗಳ ವಿನ್ಯಾಸ

ಜಿಲ್ಲಾ ಅಭಿವೃದ್ಧಿ ಅಧ್ಯಯನವು ಒಟ್ಟು ಹನ್ನೊಂದು ಅಧ್ಯಯಾಯಗಳನ್ನು ಒಳಗೊಂಡಿದೆ. ಒಂದೊಂದು ಅಧ್ಯಾಯಗಳಲ್ಲಿರುವ ವಿಷಯ – ವಿಶ್ಲೇಷಣೆ ವಿವರವನ್ನು ಇಲ್ಲಿ ಸ್ಥೂಪವಾಗಿ ನೀಡಲಾಗಿದೆ.

ಮೊದಲನೆಯ ಪ್ರಸ್ತಾವನೆ ಅಧ್ಯಯಾಯದಲ್ಲಿ ಜಿಲ್ಲೆಗಳ ಬಗ್ಗೆ ಚಾರಿತ್ರಿಕ ವಿವರ, ಕಾಲಾನಂತರ ಉಂಟಾದ ಬದಲಾವಣೆ, ಆಡಳಿತ ಮತ್ತು ಅಭಿವೃದ್ಧಿ ಪ್ರಧಾನ್ಯತೆ ಮುಂತಾದ ಪ್ರಾಥಮಿಕ ಮಾಹಿತಿಯ ಜೊತೆಗೆ ಪ್ರಸ್ತುತ ಅಧ್ಯಯನದ ರೂಪರೇಷೆ, ಉದ್ದೇಶ, ಅಧ್ಯಯನ ವಿಧಾನ, ಅಧ್ಯಯನದ ವ್ಯಾಪ್ತಿ, ಮಹತ್ವ ಮತ್ತು ಮಿತಿಗಳ ಬಗ್ಗೆ ವಿವರಗಳನ್ನು ಇದು ಒಳಗೊಂಡಿದೆ. ಈ ಅಧ್ಯಯನದ ಕೊನೆಯ ಭಾಗದಲ್ಲಿ ಪ್ರಸ್ತುತ ಅಧ್ಯಯನ ವರದಿಯಲ್ಲಿನ ಅಧ್ಯಾಯಗಳ ವಿನ್ಯಾಸವನ್ನು ನೀಡಲಾಗಿದೆ.

ಎರಡನೆಯ ಅಧ್ಯಾಯವು ಕೊಪ್ಪಳ ಜಿಲೆಲಯ ಚಾರಿತ್ರಿಕ ಹಿನ್ನೆಲೆ, ಅದರ ಭೌಗೋಳಿಕ ವಿಸ್ತೀರ್ಣ, ರಾಜ್ಯದಲ್ಲಿ ಅದರಸ್ಥಾನ ಮುಂತಾದವುಗಳ ಮಾಹಿತಿಯನ್ನು ಒಳಗೊಂಡಿದೆ. ಜಿಲ್ಲೆಯ ವಿವರವಾದ ಭೂಪಟವನ್ನು ಇಲ್ಲಿ ನೀಡಲಾಗಿದೆ.

ಮೂರನೆಯ ಅಧ್ಯಾಯದಲ್ಲಿ ಜನಸಂಖ್ಯೆಯ ಬೆಳವಣಿಗೆಯ ಗತಿಶೀಲತೆಯನ್ನು ಅದರ ಗುಣಶೀಲತೆಯನ್ನು, ಆರೋಗ್ಯ ಸ್ವರೂಪವನ್ನು ಇಲ್ಲಿ ವಿಶ್ಲೇಷಿಸಲಾಗಿದೆ –

ನಾಲ್ಕನೆಯ ಭಾಗದಲ್ಲಿ ಜಿಲ್ಲೆಯ ದುಡಿಮೆಗಾರ ವರ್ಗದ ಸಾಮಾಜಿಕ ಸ್ವರೂಪ ಮತ್ತು ಲಿಂಗ ಸ್ವರೂಪವನ್ನು ಸೂಕ್ಷ್ಮವಾಗಿ ವಿವರಿಸಲಾಗಿದೆ. ಈ ಜಿಲ್ಲೆಯಲ್ಲಿನ ಬಡತನವು ಹೇಗೆ ಲಿಂಗೀಕರಣ ಪ್ರಕ್ರಿಯೆಗೆ ಒಳಗಾಗದೆ ಎಂಬುದನ್ನು ವಿವರಿಸಲಾಗಿದೆ.

ಐದನೆಯ ಅಧ್ಯಾಯವು ಜಿಲ್ಲೆಯ ವರಮಾನ ಹಾಗೂ ದುಡಿಮೆಗಾರ ವರ್ಗದಲ್ಲಿ ಮೂರು ವಲಯಗಳು ಯಾವ ಪಾಲು ಪಡೆದಿವೆ ಎಂಬುದನ್ನು ಗುರುತಿಸುವುದರ ಮೂಲಕ ಜಿಲ್ಲೆಯ ಆರ್ಥಿಕ ರಚನೆಯನ್ನು ಕಟ್ಟಲು ಇಲ್ಲಿ ಪ್ರಯತ್ನಿಸಲಾಗಿದೆ. ಆರ್ಥಿಕ ರಚನೆಯಲ್ಲಾಗುತ್ತಿರುವ ಬದಲಾವಣೆಗಳನ್ನು ಗುರುತಿಸುವುದು ಪ್ರಯತ್ನ ಮಾಡಲಾಗಿದೆ.

ಆರನೆಯದಾಗಿ, ಸಾಕ್ಷರತೆಗೆ ಸಂಬಂಧಿಸಿದ ವಿವರಗಳನ್ನು ಆರನೆಯ ಅಧ್ಯಾಯ ಒಳಗೊಂಡಿದೆ. ಅಕ್ಷರಸ್ಥರ ಸಂಖ್ಯೆಯ ವಿವರಗಳ ಜೊತೆಗೆ ಅನಕ್ಷರಸ್ಥರ ವಿವರಗಳನ್ನು ಆರನೆಯ ಅಧ್ಯಾಯ ಒಳಗೊಂಡಿದೆ. ಅಕ್ಷರಸ್ಥರ ಸಂಖ್ಯೆಯ ವಿವರಗಳ ಜೊತೆಗೆ ಅನಕ್ಷರಸ್ಥರ ವಿವರಗಳನ್ನು ನೀಡಿ ಸಾಕ್ಷರತೆಯ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ. ಜಿಲ್ಲೆಯ ಸಾಕ್ಷರರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪಾಲನ್ನು ಗುರುತಿಸಲಾಗಿದೆ.

ಏಳು, ಎಂಟು ಮತ್ತು ಒಂಬತ್ತನೆಯ ಅಧ್ಯಾಯಗಳಲ್ಲಿ ಕ್ರಮವಾಗಿ ಕೃಷಿ ಔದ್ಯಮಿ ರಂಗ, ಬ್ಯಾಂಕಿಂಗ್‌ ರಸ್ತೆಗಳು ಮುಂತಾದವುಗಳ ವಿವರ ನೀಡಿದ್ದೇವೆ.

ಹತ್ತನೆಯ ಅಧ್ಯಾಯದಲ್ಲಿ ಇಡೀ ಅಧ್ಯಯನದ ತಥ್ಯಗಳ ಸಾರಾಂಶವನ್ನು ನೀಡಲಾಗಿದೆ. ಕೊಪ್ಪಳ ಜಿಲ್ಲೆಯ ಅಭಿವೃದ್ಧಿಯ ಒಂದು ಮುನ್ನೋಟವನ್ನು ನೀಡಲು ಇಲ್ಲಿ ಪ್ರಯತ್ನಿಸಲಾಗಿದೆ. ಕೊನೆಯ ಅಧ್ಯಾಯ ಸಾರಾಂಶವಾಗಿದೆ.