ಕೊಪ್ಪಳವು ಪುರಾಣ ಪ್ರಸಿದ್ಧ ಸ್ಥಳವೂ ಹೌದು ಮತ್ತು ಇತಿಹಾಸ ಪ್ರಸಿದ್ಧ ಸ್ಥಳವೂ ಹೌದು. ಪುರಾಣ ಪ್ರಸಿದ್ಧ ಸ್ಥಳವೆನ್ನುವುದಕ್ಕಿಂತ ಅದು ಇತಿಹಾಸ ಪ್ರಸಿದ್ಧ ಸ್ಥಳವೆಂದು ಹೇಳುವುದೇ ಹೆಚ್ಚು ಸೂಕ್ತ. ಈ ಪ್ರದೇಶದ ಚರಿತ್ರೆಯನ್ನು ಕ್ರಿಸ್ತ ಪೂರ್ವ ಕಾಲಕ್ಕೇ ಒಯ್ಯಬಹುದಾಗಿದೆ. ಭಾರತದ ಪ್ರಸಿದ್ಧ ಚಕ್ರವರ್ತಿ ಅಶೋಕ ಚಕ್ರವರ್ತಿಗೆ (ಕ್ರಿ.ಪೀ. ೨೭೩ – ೨೩೬) ಸಂಬಂಧಿಸಿದ ಎರಡು ಅಮೂಲ್ಯ ಶಾಸನಗಳು ಕೊಪ್ಪಳದಲ್ಲಿ ಸಿಕ್ಕಿವೆ. ಈ ಶಾಸನಗಳು ಐತಿಹಾಸಿಕವಾಗಿ ತುಂಬಾ ಮಹತ್ವ ಪಡೆದಿವೆ. ಈ ಕಾಲದಲ್ಲಿ ಕೊಪ್ಪಳವು ಪಡೆದಿದ್ದ ಪ್ರಸಿದ್ಧಿ ಇದರಿಂದ ತಿಳಿದು ಬರುತ್ತದೆ. ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ ಪ್ರಥಮ ಚಕ್ರವರ್ತಿ ಅಶೋಕ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಮೌರ್ಯರು, ಶಾತವಾಹನರು, ಕದಂಬರು, ಚಾಲುಕ್ಯರು, ಗಂಗರು, ರಾಷ್ಟ್ರಕೂಟರು, ಹೊಯ್ಸಳರು ವಿಜಯನಗರ ಅರಸರು – ಮುಂತಾದ ಅರಸುಮನೆತನ – ಚಕ್ರಾಧಿಪತ್ಯಗಳೊಂದಿಗೆ ಈ ಪ್ರದೇಶವು ಒಂದಲ್ಲ ಒಂದು ಬಗೆಯ ಸಂಬಂಧ ಸಂಪರ್ಕ ಪಡೆದದ್ದು ಚರಿತ್ರೆಯಿಂದ ತಿಳಿದು ಬರುತ್ತದೆ. ಅನೇಕ ಅರಸು ಮನೆತನಗಳಿಗೆ, ಚಕ್ರಾಧಿಪತಿಗಳಿಗೆ ಸೇರಿದ ಶಾಸನಗಳಲ್ಲಿ ಸಾಹಿತ್ಯ ಕೃತಿಗಳಲ್ಲಿ, ತಾಮ್ರ ಪತ್ರಗಳಲ್ಲಿ ಕೊಪ್ಪಳದ ಉಲ್ಲೇಖ ಸಿಗುತ್ತದೆ.

‘ಕೊಪಣ ತೀರ್ಥ’, ‘ಆದಿತೀರ್ಥ’, ‘ಮಹಾತೀರ್ಥ’, ‘ಕೊಪಣಾಚಲ’ ಮುಂತಾದ ಹೆಸರುಗಳಿಂದ ಕೊಪ್ಪಳವನ್ನು ಕರೆದಿರುವುದು ಶಿಲಾಶಾಸನಗಳಿಂದ ಹಾಗೂ ಸಾಹಿತ್ಯ – ಶಾಸ್ತ್ರ ಕೃತಿಗಳಿಂದ ತಿಳಿದು ಬರುತ್ತದೆ. ಪ್ರಾಚೀನ ಕಾಲದಿಂದಲೂ ಕೊಪ್ಪಳವು ಜೈನರ ಪ್ರಸಿದ್ಧ ಕ್ಷೇತ್ರವಾಗಿದ್ದಂತೆ ಕಂಡು ಬರುತ್ತದೆ. ಕನ್ನಡದ ಪ್ರಮುಖ ಕವಿ ರನ್ನ ತನ್ನ ಕೃತಿಯಲ್ಲಿ ತನ್ನ ಆಶ್ರಯದಾತೆಯಾಗಿದ್ದ ‘ಅತ್ತಿಮಬ್ಬೆ’ಯನ್ನು ‘ನೆಗಳ್ದ ಕೊಪಣಾಚಲದಂತೆ ಪವಿತ್ರ’ ಎಂದು ಬಣ್ಣಿಸಿದ್ದಾನೆ. ಅದೊಂದು ಜೈನರ ಯಾತ್ರಾಸ್ಥಳವೂ ಆಗಿದ್ದಿರಬೇಕು. ಕುಮಾರ ಸೇನನೆಂಬ ಮುನಿ ಮುಳುಗುಂದದಲ್ಲಿ ತಪಸ್ಸನ್ನು ಆಚರಿಸಲು ತೃಪ್ತಿ ಕಾಣದೆ ಕೊಪಣಾಚಲಕ್ಕೆ ಬಂದು ಮುಕ್ತಿ ಪಡೆದನೆಂದು ಚಾವುಂಡರಾಯ ಪುರಾಣ ಹೇಳಿದೆ. ಇಲ್ಲಿ ೭೭೨ ಜಿನಾಲಯಗಳಿದ್ದವೆಂದು ಒಂದು ಶಾಸನ ವರ್ಣಿಸಿದೆ. ಇದೊಂದು ಜೈನ ಕೇಂದ್ರವಾಗಿತ್ತು ಎಂಬುದು ೧೩ನೆಯ ಶತಮಾನಕ್ಕೆ ಸೇರಿದ ಹರಿಹರ, ರಾಘವಾಂಕ, ಅವರುಗಳ ಕೃತಿಗಳಲ್ಲಿ ತಿಳಿದು ಬರುತ್ತದೆ. ಕನ್ನಡದಲ್ಲಿ ಪ್ರಥಮ ಶಾಸ್ತ್ರಗ್ರಂಥವೆಂಬ ಕೀರ್ತಿಗೆ ಪಾತ್ರವಾಗಿರುವ ‘ಕವಿರಾಜ ಮಾರ್ಗ’ದಲ್ಲಿ ಇದನ್ನು ‘ಮಹಾ ಕೊಪಣನಗರ’ ಎಂದು ಕರೆಯಲಾಗಿದೆ.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಈ ಪ್ರದೇಶವು ಬಿಜಾಪುರದ ಆದಿಲ್‌ಷಾನ (ಕ್ರಿ.ಶ. ೧೫೫೭ – ೧೫೮೦) ಆಳ್ಚಿಕೆಗೆ ಒಳಪಟ್ಟಿತ್ತು. ಅಂದು ಈ ಸ್ಥಳವನ್ನು ‘ಮುಜಪುರ್‌ ನಗರ’ ಎಂದು ಕರೆಯುತ್ತಿದ್ದರು ಎನ್ನಲಾಗಿದೆ. ಶಿವಾಜಿ, ಹೈದರಾಲಿ, ಟಿಪ್ಪು ಅವುಗಳ ಆಳ್ವಿಕೆಯ ಭಾಗವಾಗಿಯೂ ಇದ್ದುದನ್ನು ಚರಿತ್ರೆ ತಿಳಿಸುತ್ತದೆ. ೧೮ನೆಯ ಶತಮಾನದ ಕೊನೆಯ ಭಾಗದಲ್ಲಿ ಇದು ಬ್ರಿಟಿಷರ ವಶವಾದಂತೆ ಕಂಡುಬರುತ್ತದೆ. ೧೯ನೆಯ ಶತಮಾನದ ಮಧ್ಯಭಾಗದಲ್ಲಿ ವೀರಪ್ಪನೆಂಬ ಜಮೀನ್ದಾರ ಮತ್ತು ಮುಂಡರಗಿ ಭೀಮರಾಯ ಎಂಬುವವರು ಬ್ರಿಟಿಸರ ವಿರುದ್ಧ ಬಂಡೆದ್ದು ಹೋರಾಟ ಮಾಡಿ ಹುತಾತ್ಮರಾದದ್ದು ಕೊಪ್ಪಳದ ಕೋಟೆಯಲ್ಲಿ ಎನ್ನಲಾಗಿದೆ. ಕ್ರಿ.ಶ ೧೮೬೧ ರಲ್ಲಿ ಬ್ರಿಟಿಷರು ಈ ಭಾಗವನ್ನು ಹೈದರಾಬಾದಿನ ‘ನವಾಬ ಸಾಲಾರಜಂಗ ಅವ್ವಲ್’ ಅವರಿಗೆ ಜಹಗೀರಾಗಿ ನೀಡಿದರು ಎಂದು ತಿಳಿದು ಬರುತ್ತದೆ. ಕ್ರಿ.ಶ. ೧೮೬೧ ರಿಂದ ಕ್ರಿ.ಶ. ೧೯೪೮ರ ವರೆಗೆ ಇದು ಹೈದರಾಬಾದ್‌ನ ನವಾಬನ ವಶದಲ್ಲಿತ್ತು.

೨೦ನೆಯ ಶತಮಾನದಲ್ಲಿ ಕೊಪ್ಪಳ

೨೦ನೆಯ ಶತಮಾನದ ಪ್ರಾರಂಭದಲ್ಲಿ ಈ ಪ್ರದೇಶದಲ್ಲಿ ನಾಲ್ಕು ಜಿಲ್ಲೆಗಳಿದ್ದವು. ಕೊಪ್ಪಳ ಮತ್ತು ಯಲಬುರ್ಗಾ – ಇವು ಜಹಗೀರ್ ಜಿಲ್ಲೆಗಳೆಂದು ಪ್ರತ್ಯೇಕ ಸ್ಥಾನಮಾನ ಪಡೆದಿದ್ದವು. ರಾಯಚೂರು ಮತ್ತು ಲಿಂಗಸೂಗೂರು – ಇವು ಎರಡು ಆಡಳಿತಾತ್ಮಕ ಜಿಲ್ಲೆಗಳಾಗಿದ್ದವು. ರಾಯಚೂರು, ಯಾದಗಿರಿ, ಎರ್ಗೇರ, ದೇವದುರ್ಗ, ಮಾನ್ವಿ, ಅಲಂಪುರ ಮತ್ತು ಗಡ್ವಾಲ್ ತಾಲ್ಲೂಕುಗಳು ರಾಯಚೂರು ಜಿಲ್ಲೆಯ ಭಾಗವಾಗಿದ್ದರೆ ಲಿಂಗಸೂಗೂರು, ಕುಷ್ಟಗಿ, ಗಂಗಾವತಿ, ಸಿಂಧನೂರು, ಶಹಪುರ ಮತ್ತು ಶೋರಾಪುರ ತಾಲ್ಲೂಕುಗಳು ಲಿಂಗಸೂಗೂರು ಜಿಲ್ಲೆಯ ಭಾಗಗಳಾಗಿದ್ದವು. ೧೯೦೫ರಲ್ಲಿ ಲಿಂಗ ಸೂಗೂರು ಜಿಲ್ಲೆಯನ್ನು ರದ್ದುಗೊಳಿಸಿ, ಆ ಜಿಲ್ಲೆಯ ಶಹಾಪುರ, ಶೋರಾಪುರ ಮತ್ತು ಯಾದಗಿರಿ ತಾಲ್ಲೂಕುಗಳನ್ನು ಗುಲಬರ್ಗಾ ಜಿಲ್ಲೆಗೆ ಮತ್ತು ಲಿಂಗಸೂಗೂರು, ಕುಷ್ಟಗಿ, ಗಂಗಾವತಿ ಮತ್ತು ಸಿಂಧನೂರು ತಾಲ್ಲೂಕುಗಳನ್ನು ರಾಯಚೂರು ಜಿಲ್ಲೆಗಳಿಗೆ ವರ್ಗಾಯಿಸಲಾಯಿತು. ಎರ್ಗೇರ ತಾಲ್ಲೂಕಿನ ಎಲ್ಲ ಗ್ರಾಮಗಳನ್ನು ರಾಯಚೂರು, ಮಾನ್ವಿ ಮತ್ತು ದೇವದುಗ್ಗ ತಾಲ್ಲೂಕುಗಳಿಗೆ ಹಂಚಲಾಯಿತು. ಈ ಎಲ್ಲ ಪುನರ್ ಸಂಘಟನೆಯ ನಂತರ ರಾಯಚೂರು ಜಿಲ್ಲೆಯಲ್ಲಿ ೯ ತಾಲ್ಲೂಕುಗಳು ಉಳಿದುಕೊಂಡವು. ಕೊಪ್ಪಳ ಮತ್ತು ಯಲಬುರ್ಗಾಗಳು ಮಾತ್ರ ಪ್ರತ್ಯೇಕ ಜಹಗೀರ್ ಜಿಲ್ಲೆಗಳಾಗಿ ಮುಂದುವರಿದಿದ್ದವು. ೯ ತಾಲ್ಲೂಕುಗಳನ್ನು ಒಳಗೊಂಡ ರಾಯಚೂರು ಮತ್ತು ಪ್ರತ್ಯೇಕ ಜಹಗೀರ್‌ ಜಿಲ್ಲೆಗಳಾಗಿದ್ದ ಕೊಪ್ಪಳ ಮತ್ತು ಯಲಬುರ್ಗಾಗಳು ೧೯೪೮ ಸೆಪ್ಟೆಂಬರ್ ೧೮ರ ವರೆಗೆ ಹೈದರಾಬಾದ್ ನವಾಬನ ಆಳ್ವಿಕೆಯಲ್ಲಿದ್ದವು. ಹೈದರಾಬಾದ್ ನವಾಬನು ೧೯೪೮ ರ ಸೆಪ್ಟೆಂಬರ್‌ ೧೮ ರಂದು ಭಾರತ ಸರ್ಕಾರಕ್ಕೆ ಶರಣಾದ ಮೇಲೆ ಈ ಜಿಲ್ಲೆಗಳು ಭಾರತದ ಗಣರಾಜ್ಯದಲ್ಲಿ ವಿಲೀನಗೊಂಡವು.

ಜಹಗೀರ್ಗಳ ರದ್ಧತಿ

೧೯೪೯ರಲ್ಲಿ ಹೈದರಾಬಾದ್ ರಾಜ್ಯದಲ್ಲಿ ಜಹಗೀರ್‌ಗಳನ್ನು ರದ್ದುಗೊಳಿಸಿ ಶಾಸನವೊಂದನ್ನು ಜಾರಿಗೆ ತರಲಾಯಿತು. ಇದರ ಪರಿಣಾಮವಾಗಿ ಕೊಪ್ಪಳ ಮತ್ತು ಯಲಬುರ್ಗಾ ಜಹಗೀರ್ ಜಿಲ್ಲೆಗಳನ್ನು ತಾಲ್ಲೂಕುಗಳಾಗಿ ಪರಿವರ್ತಿಸಿ ರಾಯಚೂರು ಜಿಲ್ಲೆಗೆ ಸೇರಿಸಲಾಯಿತು. ಈಗ ರಾಯಚೂರು ಜಿಲ್ಲೆಯಲ್ಲಿನ ತಾಲ್ಲೂಕುಗಳ ಸಂಖ್ಯೆ ೧೧ಕ್ಕೇರಿತು.

ಆದರೆ, ೧೯೫೬ರ ರಾಜ್ಯ ಪುನರ್ವಿಂಗಡಣೆಯಿಂದಾಗಿ ಗಡ್ವಾಲ್ ಮತ್ತು ಆಲಂಪುರ ತಾಲ್ಲೂಕುಗಳು ಆಂಧ್ರಪ್ರದೇಶಕ್ಕೆ ವರ್ಗಾವಣೆಯಾದವು. ಇದರಿಂದಾಗಿ ರಾಯಚೂರು ಜಿಲ್ಲೆಯಲ್ಲಿನ ತಾಲ್ಲೂಗಳ ಸಂಖ್ಯೆ ೯ ಕ್ಕೆ ಇಳಿಯಿತು. ೧೯೫೬ ರಿಂದ ೧೯೯೭ರ ವರಡಗಡ ೯ ತಾಲ್ಲೂಕುಗಳನ್ನು ಒಳಗೊಂಡ ರಾಯಚೂರು ಜಿಲ್ಲೆ ಅಸ್ತಿತ್ವದಲ್ಲಿತ್ತು.

ಅಂದು ಅಖಂಡ ರಾಯಚೂರು ಜಿಲ್ಲೆಯ ಭೌಗೋಳಿಕ ಚದರಳತೆಯು ೧೪,೦೧೭ ಚ.ಕಿ.ಮಿ. ಆಗಿತ್ತು. ಜನಸಂಖ್ಯೆ ೨೩.೧೦ ಲಕ್ಷವಿತ್ತು (೧೯೯೧). ಈ ಬಗೆಯ ಬೃಹತ್ ಗಾತ್ರ ಹಾಗೂ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ೧೯೯೧ರಿಂದಲೂ ಕೊಪ್ಪಳ ಜಿಲ್ಲೆಯ ರಚನೆಗಾಗಿ ನಡೆಯುತ್ತಿದ್ದ ಹೋರಾಟದ ಪರಿಣಾಮವಾಗಿ ೧೯೯೭ ಆಗಸ್ಟ್‌ ೧೫ ರಂದು ರಾಯಚೂರು ಜಿಲ್ಲೆಯನ್ನು ವಿಭಜಿಸಿ ಗಂಗಾವತಿ, ಕುಷ್ಟಗಿ, ಯಲಬುರ್ಗಾ ಮತ್ತು ಕೊಪ್ಪಳ ತಾಲ್ಲೂಕುಗಳನ್ನು ಒಳಗೊಂಡ ಹೊಸ ಕೊಪ್ಪಳ ಜಿಲ್ಲೆಯನ್ನು ರೂಪಿಸಲಾಯಿತು. ೧೯೪೯ರ ವರೆವಿಗೂ ಕೊಪ್ಪಳವು ಒಂದು ಸಣ್ಣ ಜಹಗೀರ್‌ ಜಿಲ್ಲೆಯಾಗಿತ್ತು. ಜಹಗೀರ್ ರದ್ದತಿ ಶಾಸನದಿಂದಾಗಿ ಅದು ಜಿಲ್ಲೆಯ ಸ್ಥಾನಮಾನ ಕಳೆದುಕೊಂಡು ತಾಲ್ಲೂಕು ಕೇಂದ್ರವಾಯಿತು. ಈಗ ಅದು ಮತ್ತು ಒಂದು ಪೂರ್ಣ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕುಗಳಿವೆ ಇದರ ಭೌಗೋಳಿಕ ಚದರಳತೆ ೫೫೫೯ ಚ.ಕಿ.ಮೀ. ಇದರ ಜನಸಂಖ್ಯೆ ೯.೫೮ ಲಕ್ಷ.

ಕೊಪ್ಪಳ ಜಿಲ್ಲೆಯು ಕರ್ನಾಟಕದ ಈಶಾನ್ಯ ಭಾಗದಲ್ಲಿದೆ. ಉತ್ತರದಲ್ಲಿ ಬಾಗಲಕೋಟೆ ಮತ್ತು ರಾಯಚೂರು, ಪೂರ್ವದಲ್ಲಿ ರಾಯಚೂರು, ದಕ್ಷಿಣದಲ್ಲಿ ಬಳ್ಳಾರಿ, ಪಶ್ಚಿಮದಲ್ಲಿ ಗದಗ ಈ ಜಿಲ್ಲೆಯ ಮೇರೆಗಳಾಗಿವೆ. ಈ ಜಿಲ್ಲೆಯು ತ್ರಿಕೋನಾಕೃತಿಯಲ್ಲಿದೆ. ಉತ್ತರದ ತುದಿ ವಿಸ್ತೃತವಾಗಿದೆ ಮತ್ತು ದಕ್ಷಿಣದ ತುದಿ ಚೂಪಾಗಿದೆ.

ಕೊಪ್ಪಳ ಜಿಲ್ಲೆಯ ಭೌಗೋಳಿಕ ವಿಸ್ತೀರ್ಣದ ವಿವರ

ಕರ್ನಾಟಕದ ಒಟ್ಟು ಭೌಗೋಳಿಕ ವಿಸ್ತೀರ್ಣತೆಯಲ್ಲಿ ಕೊಪ್ಪಳ ಜಿಲ್ಲೆಯ ವಿಸ್ತೀರ್ಣವು ಶೇ.೨.೯೦ ರಷ್ಟಿದೆ. ರಾಜ್ಯದ ಜನಸಂಖ್ಯೆಯಲ್ಲಿ ಕೊಪ್ಪಳ ಜಿಲ್ಲೆಯ ಪಾಲು ಶೇ. ೨.೧೩ ರಷ್ಟಿದೆ. ಭೌಗೋಳಿದ ವಿಸ್ತೀರ್ಣದಲ್ಲಿ ಕೊಪ್ಪಳವು ರಾಜ್ಯದಲ್ಲಿ ೧೮ನೆಯ ಸ್ಥಾನದಲ್ಲಿದೆ. ಜನಸಂಖ್ಯೆಯಲ್ಲಿ ಕೊಪ್ಪಳದ ಸ್ಥಾನ ೨೪. ಜನಸಂಖ್ಯೆಯ ದೃಷ್ಟಿಯಿಂದ ಕೊಪ್ಪಳ ಜಿಲ್ಲೆಯು ರಾಜ್ಯದಲ್ಲಿ ನಾಲ್ಕನೆಯ ಚಿಕ್ಕ ಪುಟ್ಟ ಜಿಲ್ಲೆಯಾಗಿದೆ. ಕ್ರಮವಾಗಿ ಬೆಂಗಳೂರು ನಗರ, ಉಡುಪಿ, ಕೊಡಗುಗಳ ನಂತರ ಕೊಪ್ಪಳ ಜಿಲ್ಲೆ ಬರುತ್ತದೆ.

ಕೋಷ್ಟಕ. . ರಲ್ಲಿ ಜಿಲ್ಲೆಯ ಭೌಗೋಳಿಕ ವಿಸ್ತೀರ್ಣವನ್ನು ಹಾಗೂ ಜನಸಂಖ್ಯೆಯನ್ನು ತಾಲ್ಲೂಕುವಾರು ನೀಡಲಾಗಿದೆ.
ತಾಲ್ಲೂಕುವಾರು ವಿಸ್ತೀರ್ಣ

ಕೋಷ್ಟಕ: .

ಕ್ರ. ಸಂ.

ತಾಲ್ಲೂಕುಗಳು

ಭೌಗೋಳಿಕ ವಿಸ್ತೀರ್ಣ (ಚದರ ಕಿಲೋಮೀಟರ್‌)

ಜನಸಂಖ್ಯೆ (ಲಕ್ಷಗಳಲ್ಲಿ ೧೯೯೧)

ಕುಷ್ಟಗಿಕೊಪ್ಪಳಗಂಗಾವತಿ

ಯಲಬುರ್ಗಾ

೧೩೬೬

೧೩೭೫

೧೩೨೮

೧೪೯೦

೧,೮೯,೮೯೧

೨,೫೧,೭೧೩

೩,೨೦,೩೯೪

೧,೯೬,೦೮೦

ಒಟ್ಟು ಜಿಲ್ಲೆ

೫೫೫೯

೯,೫೮,೦೭೮

ಆಕರ: ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಅಂಕಿಅಂಶಗಳ ನೋಟ. ಸಂಖ್ಯೆ: .ಸಾ.ನಿ. ೫೧/೧೯೯೭ ಪು.

ಕರ್ನಾಟಕ ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣ ೧,೯೧,೨೯೦ ಚ.ಕಿ.ಮಿ. ಕರ್ನಾಟಕದಲ್ಲಿ ಈಗಿರುವ ಜಿಲ್ಲೆಗಳ ಸಂಖ್ಯೆ ೨೭. ಜಿಲ್ಲಾವಾರು ಸರಾಸರಿ ವಿಸ್ತೀರ್ಣ ೭೧೦೩.೩೩ ಚ.ಕಿ.ಮೀ. ಕೊಪ್ಪಳ ಜಿಲ್ಲೆಯ ವಿಸ್ತೀರ್ಣವು ರಾಜ್ಯ ಸರಾಸರಿ ವಿಸ್ತೀರ್ಣಕ್ಕಿಂತ ಕಡಿಮೆ ಇದೆ. ರಾಜ್ಯದಲ್ಲಿ ೧೧ ಜಿಲ್ಲೆಗಳ ವಿಸ್ತೀರ್ಣವು ಸರಾಸರಿ ವಿಸ್ತೀರ್ಣಕ್ಕಿಂತ ಅಧಿಕವಿದೆ. ಉಳಿದ ೧೬ ಜಿಲ್ಲೆಗಳ ವಿಸ್ತೀರ್ಣವು ರಾಜ್ಯದ ಜಿಲ್ಲಾ ಸರಾಸರಿ ವಿಸ್ತೀರ್ಣರಕ್ಕಿಂತ ಅಧಿಕ ಇದೆ. ಉಳಿದ ೧೬ ಜಿಲ್ಲೆಗಳ ವಿಸ್ತೀರ್ಣವು ರಾಜ್ಯದ ಜಿಲ್ಲಾ ಸರಾಸರಿ ವಿಸ್ತೀರ್ಣಕ್ಕಿಂತ ಕಡಿಮೆ ಇದೆ. ಇಂದು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಏಳು ಹೊಸ ಜಿಲ್ಲೆಗಳ ಸರಾಸರಿ ವಿಸ್ತೀರ್ಣ ಕೇವಲ ೫೩೦೨ ಚ.ಕಿ.ಮೀ. ಈಗ ಭೌಗೋಳಿಕ ವಿಸ್ತೀರ್ಣದ ದೃಷ್ಟಿಯಿಂದ ರಾಜ್ಯದಲ್ಲಿರುವ ಬೃಹತ್‌ ಜಿಲ್ಲೆಗಳೆಂದರೆ ಗುಲಬರ್ಗಾ (೧೬.೨೨೫ ಚ.ಕಿ.ಮೀ), ಬೆಳಗಾವಿ (೧೩೪೧೫ ಚ.ಕಿ.ಮಿ), ತುಮಕೂರು (೧೦.೫೯೮ ಚ.ಕಿ.ಮೀ), ಬಿಜಾಪುರ (೧೦.೪೮೧ ಚ.ಕಿ.ಮಿ) ಮತ್ತು ಉತ್ತರ ಕನ್ನಡ (೧೦.೨೯೧ ಚ.ಕಿ.ಮೀ). ಜನಸಂಖ್ಯೆಯ ಗಾತ್ರದ ದೃಷ್ಟಿಯಿಂದ ಕೊಪ್ಪಳ ಜಿಲ್ಲೆಯು ರಾಜ್ಯದಲ್ಲಿ ನಾಲ್ಕನೆಯ ಪುಟ್ಟ ಜಿಲ್ಲೆಯಾಗಿದೆ. ಜನಸಂಖ್ಯೆ ದೃಷ್ಟಿಯಿಂದ ರಾಜ್ಯದಲ್ಲಿ ಜಿಲ್ಲಾ ಸರಾಸರಿ ಜನಸಂಖ್ಯೆ ೧೬.೬೬ ಲಕ್ಷ. ರಾಜ್ಯದಲ್ಲಿ ೨೦ ಜಿಲ್ಲೆಗಳ ಜನಸಂಖ್ಯೆ ಸರಾಸರಿ ಕಡಿಮೆ ಇದೆ. ಕೊಪ್ಪಳ ಜಿಲ್ಲೆಯ ಜನಸಂಖ್ಯೆ ೯.೫೮ ಲಕ್ಷ. ರಾಜ್ಯದಲ್ಲಿ ೭ ಜಿಲ್ಲೆಗಳ ಜನಸಂಖ್ಯೆಯು ರಾಜ್ಯ ಸರಾಸರಿಗಿಂತ ಅಧಿಕವಿದೆ. ಬೆಂಗಳೂರು ನಗರ ಜಿಲ್ಲೆಯನ್ನು ಅಪವಾದವೆಂದು ಕೈಬಿಟ್ಟರೆ, ಜನಸಂಖ್ಯೆಯ ದೃಷ್ಟಿಯಿಂದ ರಾಜ್ಯದಲ್ಲಿರುವ ಅತಿದೊಡ್ಡ ಜಿಲ್ಲೆಗಳೆಂದರೆ ಬೆಳಗಾವಿ (೩೫.೮೪ ಲಕ್ಷ), ಗುಲಬರ್ಗಾ (೨೫,೮೨ ಲಕ್ಷ), (ತುಮಕೂರು ೨೩.೦೬) ಲಕ್ಷ.

ಒಟ್ಟಾರೆ ರಾಜ್ಯದಲ್ಲಿ ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆ – ಎರಡರ ನೆಲೆಯಿಂದಲೂ ನೋಡಿದಾಗ ಬೆಳಗಾವಿ ಮತ್ತು ಗುಲಬರ್ಗಾ ಎರಡು ಬೃಹತ್ ಜಿಲ್ಲೆಗಳಾಗಿ ಒಡಮೂಡುತ್ತದೆ. ರಾಜ್ಯದಲ್ಲಿರುವ ಜಿಲ್ಲಾವಾರು ಸರಾಸರಿ ಜನಸಂಖ್ಯೆಯ ಎರಡು ಪಟ್ಟಿಗೂ ಮೀರಿದ ಜನಸಂಖ್ಯೆ ಬೆಳಗಾವಿ ಜಿಲ್ಲೆಯಲ್ಲಿದೆ. ರಾಜ್ಯದಲ್ಲಿರುವ ಜಿಲ್ಲಾವರು ಸರಾಸರಿ ಭೌಗೋಳಿಕ ವಿಸ್ತೀರ್ಣದ ಎರಡು ಪಟ್ಟಿಗೂ ಮೀರಿದ ವಿಸ್ತೀರ್ಣ ಗುಲರ್ಬಾ ಜಿಲ್ಲೆಯದಾಗಿದೆ. ರಾಜ್ಯದಲ್ಲಿ ಜಿಲ್ಲೆಗಳ ಹಾಗೂ ತಾಲ್ಲೂಕುಗಳ ಪುನರ್ವಿಂಗಡಣೆಗಾಗಿ ೧೯೭೩ರಲ್ಲಿ ಸರ್ಕಾರವು ನೇಮಿಸಿದ್ದ ಏಕ ಸದಸ್ಯ ಸಮಿತಿಯು ಗುಲಬರ್ಗಾ ಜಿಲ್ಲೆಯನ್ನು ವಿಭಜಿಸಿ, ಶೋರಾಪುರ ಎಂಬ ಹೊಸ ಜಿಲ್ಲೆ ರಚಿಸಲು ಶಿಫಾರಸ್ಸು ಮಾಡಿತ್ತು. ಆದರೆ ಸರ್ಕಾರಕ್ಕೆ ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ. ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಅವಶ್ಯಕತೆ ಇದೆ.