ಆರ್ಥಿಕ ಸ್ವರೂಪದ ಉತ್ಪನ್ನಕಾರಕ ಚಟುವಟಿಕೆಗಳನ್ನು ಜನಗಣತಿಯಲ್ಲಿ ದುಡಿಮೆಯೆಂದು ನಿರ್ವಚಿಸಲಾಗಿದೆ. ಅದು ಭೌತಿಕವಾದುದಾಗಿರಬಹುದು. ಅಥವಾ ಬೌದ್ಧಿಕವಾದುದಾಗಿರಬಹುದು. ಕೂಲಿ – ಸಂಬಳ – ಸಂಭಾವನೆಯಿರಬಹುದು ಅಥವಾ ತಮ್ಮದೇ ಹೊಲ – ಗದ್ದೆ – ಮನೆ – ಮಠದಲ್ಲಿ ನಡೆಸುವ ಸ್ವಂತ ದುಡಿಮೆಯಾಗಿರಬಹುದು. ಅಭಿವೃದ್ಧಿಯು ಮೂಲ ದ್ರವ್ಯ ದುಡಿಮೆ. ಜನಗಣತಿ ವರದಿಗಳಲ್ಲಿ ಯಾವ ವರ್ಗವನ್ನು ಮೇನ್ ವರ್ಕರ್ಸ ಎಂದು ವಗೀಕರಿಸಲಾಗಿದೆಯೋ ಅವರನ್ನು ಇಲ್ಲಿ ದುಡಿಮೆಗಾರ ವರ್ಗ ಎಂದು ಕರೆಯಲಾಗಿದೆ.

ಕಾರ್ಲ್‌ಮಾರ್ಕ್ಸ್‌ನ ಪ್ರಕಾರ ಮೌಲ್ಯದ ಉತ್ಪಾದಕರು ದುಡಿಮೆಗಾರರು ಪ್ರತಿಯೊಂದು ವಸ್ತು ಯಾ ಸೇವೆಯ ಉತ್ಪಾದನೆಯ ಮೂಲದಲ್ಲಿ ದುಡಿಮೆಗಾರರು ಇರುತ್ತಾರೆ. ಈ ಹಿನ್ನೆಲೆಯಲ್ಲಿ ದುಡಿಮೆಗಾರರು ಸಂಪನ್ಮೂಲವೆಂದೂ ಉತ್ಪಾದನೆಯ ಸಾಧನವೆಂದೂ ಪರಿಗಣಿಸಿಕೊಂಡು ಬರಲಾಗಿದೆ. ಇಲ್ಲಿ ನಾವು ಬಹು ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ದುಡಿಮೆಗಾರರು ಉತ್ಪಾದನಾ ಕತೃಗಳೂ ಹೌದು ಮತ್ತು ಉತ್ಪಾದಿಸಿದ ಸರಕು ಮತ್ತು ಸೇವೆಗಳ ಅನುಭೋಗಿಗಳೂ ಹೌದು. ಅಭಿವೃದ್ಧಿಯ ಚರ್ಚೆಯಲ್ಲಿ ದುಡಿಮೆಗಾರರ ಉಪಕರಣವಾದಿ ಮಹತ್ವ ಪ್ರಧಾನವಾಗಿ ಉಳಿದ ಸಂಗತಿಗಳೆಲ್ಲ ಮೂಲೆಗುಂಪಾಗಿರುವಂತೆ ಕಾಣುತ್ತದೆ. ದುಡಿಮೆಯ ಫಲವನ್ನು ದುಡಿಮೆಗಾರರು ಅನುಭವಿಸಬೇಕು. ದುಡಿಮೆಯ ಫಲ ದುಡಿಮೆಗಾರರಿಗೆ ಎಷ್ಟರಮಟ್ಟಿಗೆ ಸಲ್ಲುತ್ತಿದೆ ಎಂಬುದು ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಅನುಷಂಗಿತಕವಾಗಿದೆ. ಈ ಕುರಿತ ಚರ್ಚೆಇಲ್ಲಿ ಅಪ್ರಸ್ತುತ.

‘ದುಡಿಮೆಗಾರರು’ ಎಂಬ ವರ್ಗವನ್ನು ಅಖಂಡವಾಗಿ ನೋಡಲು ಸಾಧ್ಯವಿಲ್ಲ, ಅವರನ್ನು ಅಖಂಡವಾಗಿ ನೋಡುವ ಪದ್ಧತಿ ಇದೆ. ನಮ್ಮ ಸಮಾಜದ ಸಂದರ್ಭದಲ್ಲಿ, ಏಣಿ ಶ್ರೇಣಿಗಳಿಂದ ಕೂಡಿರುವ ವ್ಯವಸ್ಥೆಯಲ್ಲಿ ದುಡಿಮೆಗಾರರು ಒಂದು ಏಕರೂಪ ಸಂಗತಿಗಳನ್ನು ‘ಆರ್ಥಿಕ’ವೆಂದು ವರ್ಗೀಕರಿಸಿ, ಸಾಮಾಜಿಕತೆಯಿಂದ ಅವುಗಳನ್ನು ಛೇದಗೊಳಿಸಿ ನೋಡುವ ಪರಿಯೊಂದು ಪ್ರಚಲಿತದಲ್ಲಿದೆ. ಇದು ಸರಿಯಲ್ಲವೆಂದು ನಮ್ಮ ಅಭಿಪ್ರಾಯ. ಆದ್ದರಿಂದ ದುಡಿಮೆ – ದುಡಿಮೆಗಾರರು – ಇವುಗಳನ್ನು ಸಾಮಾಜಿಕ ನೆಲೆಯಲ್ಲೇ ಪರಿಭಾವಿಸಿಕೊಳ್ಳಬೇಕಾಗುತ್ತದೆ. ಈ ಅಧ್ಯಯನದಲ್ಲಿ ದುಡಿಮೆಗಾರ ವರ್ಗವನ್ನು ಮೂರು ನೆಲೆಯಿಂದ ನೋಡಲು ಪ್ರಯತ್ನಿಸಿದೆ. ಮೊದಲನೆಯದಾಗಿ ದುಡಿಮೆಗಾರ ವರ್ಗದ ಸಾಮಾಜಿಕ ಸ್ಥಿತಿಗತಿಗಳನ್ನು ವಿಶ್ಲೇಷಿಸಲಾಗಿದೆ. ಎರಡನೆಯದಾಗಿ ದುಡಿಮೆ ವರ್ಗದಲ್ಲಿನ ‘ಪರಿಶಿಷ್ಟ’ರ ಪ್ರಮಾಣವನ್ನು ಕುರಿತಂತೆ ಚರ್ಚಿಸಲಾಗಿದೆ. ಮೂರನೆಯ ಭಾಗದಲ್ಲಿ ದುಡಿಮೆಗಾರರ ಲಿಂಗ ಸಂಬಂಧಿ ಸ್ವರೂಪವನ್ನು ಹಿಡಿದಿಡಲು ಪ್ರಯತ್ನಿಸಲಾಗಿದೆ. ಈ ಬಗೆಯ ಅಧ್ಯಯನದ ಮೂಲಕ ಜಿಲ್ಲಾ ಮಟ್ಟದಲ್ಲಿ ಉತ್ಪಾದನಾ ಸಂಬಂಧಗಳ ಸ್ವರೂಪ ಮತ್ತು ಉತ್ಪಾದನಾ ಶಕ್ತಿಗಳ ನೆಲೆಗಳನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ. ಈ ಬಗೆಯ ವಿಶ್ಲೇಷಣೆಯ ಮೂಲಕ ಕೊಪ್ಪಳ ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ವಿವಿಧ ಸಾಮಾಜಿಕ ಗುಂಪುಗಳ ಪ್ರಮಾಣ ಎಷ್ಟಿದೆ? ಮತ್ತು ದುಡಿಮೆಗಾರ ವರ್ಗದಲ್ಲಿ ಮಹಿಳೆಯರ ಪಾಲು ಎಷ್ಟಿದೆ? ಎಂಬುದನ್ನು ಗಣನೆ ಮಾಡಲಾಗಿದೆ. ಈ ಬಗೆಯ ವಿಶ್ಲೇಷಣೆಯು ಕೊಪ್ಪಳ ಜಿಲ್ಲೆಯಲ್ಲಿ ದುಡಿಮೆಯ ಭಾರ ಯಾವ ವರ್ಗದ ಮೇಲೆ ಅಧಿಕವಾಗಿದೆ ಎಂಬುದನ್ನು ಗುರುತಿಸಬಹುದಾಗಿದೆ.

ಭಾಗ

ದುಡಿಮೆಗಾರ ವರ್ಗದ ಸಾಮಾಜಿಕ ನೆಲೆಗಳು

ಕೋಷ್ಟಕ – ೪.೧ ರಲ್ಲಿ ತೋರಿಸಿರುವಂತೆ ಕೊಪ್ಪಳ ಜಿಲ್ಲೆಯಲ್ಲಿರುವ ಒಟ್ಟು ದುಡಿಮೆಗಾರರ ಸಂಖ್ಯೆ. ೪,೧೫,೪೬೬. ಜಿಲ್ಲೆಯ ಒಟ್ಟು ದುಡಿಮೆಗಾರರ ವರ್ಗದಲ್ಲಿ ಸಾಗುವಳಿದಾರರ ಪ್ರಮಾಣ ೧,೪೨,೪೯೯ ಮತ್ತು ಕೃಷಿ ಕಾರ್ಮಿಕರ ಸಂಖ್ಯೆ ೧,೯೨,೫೯೪. ಸಾಗುವಳಿದಾರರು ಮತ್ತು ಕೃಷಿ ಕಾರ್ಮಿಕರನ್ನು ಕೂಡಿಸಿದರೆ ಕೃಷಿಯನ್ನು ಅವಲಂಬಿಸಿ ಕೊಂಡಿರುವ ದುಡಿಮೆಗಾರ ವರ್ಗದ ಸಂಖ್ಯೆ ಸಿಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರ ಸಂಖ್ಯೆ ೩.೩೫.೦೯೩. ಜಿಲ್ಲೆಯಲ್ಲಿ ಒಟ್ಟು ದುಡಿಮೆಗಾರರ ವರ್ಗದಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವವರ ಪ್ರಮಾಣ ಶೇ. ೮೦.೬೫. ರಾಜ್ಯಮಟ್ಟದಲ್ಲಿ ಇದರ ಪ್ರಮಾಣ ಕೇವಲ ಶೇ. ೬೩.೧೨. ಕೊಪ್ಪಳ ಜಿಲ್ಲೆಯು ಕೃಷಿ ಪ್ರಧಾನ ಆರ್ಥಿಕತೆಯನ್ನು ಹೊಂದಿದೆ. ಈ ಜಿಲ್ಲೆಯಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿ ನಿರತರಾಗಿರುವ ದುಡಿಮೆಗಾರರ ಪ್ರಮಾಣ ಕೇವಲ ಶೇ. ೧೯.೩೫. ಕೊಪ್ಪಳ ಜಿಲ್ಲೆಯಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ದುಡಿಮೆಗಾರರ ವರ್ಗದ ಪ್ರಮಾಣ ಶೇ. ೪೩.೩೬ ಆದರೆ ಇದು ರಾಜ್ಯಮಟ್ಟದಲ್ಲಿ ಶೇ. ೩೮.೪೫ ರಷ್ಟಿದೆ. (ನೋಡಿ: ಕೋಷ್ಟಕ – ೪೨) ಒಟ್ಟು ದುಡಿಮೆಗಾರರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಕೊಪ್ಪಳ ಜಿಲ್ಲೆಯಲ್ಲಿ ಶೇ. ೪೯.೩೬. ಆದರೆ ರಾಜ್ಯಮಟ್ಟದಲ್ಲಿ ಇದು ಶೇ. ೨೮.೯೧ ರಷ್ಟಿದೆ. ಕೊಪ್ಪಳ ಜಿಲ್ಲೆಯಲ್ಲಿ ಸಾಪೇಕ್ಷವಾಗಿ ದುಡಿಮೆಯಲ್ಲಿ ನಿರತರಾಗಿರುವ ಜನರ ಪ್ರಮಾಣವು ರಾಜ್ಯಮಟ್ಟಕ್ಕಿಂತ ಅಧಿಕವಾಗಿದೆ.

ಕೊಪ್ಪಳ ಜಿಲ್ಲೆಯ ದುಡಿಮೆಗಾರ ವರ್ಗ
ಕೋಷ್ಟಕ: .

ಕ್ರ.ಸಂ.

ವಿವರಗಳು

ಒಟ್ಟು

ಮಹಿಳೆಯರು

ಪುರುಷರು

೧. ಸಾಗುವಳಿದಾರರು

೧.೪೨.೪೯೯

೨೯.೨೩೧

೧.೧೩.೨೬೮

೨. ಕೃಷಿ ಕಾರ್ಮಿಕರು

೧.೯೨.೫೯೪

೧.೧೨.೫೬೧

೪೦.೦೩೩

೩. ಪಶುಪಾಲನೆ
ಅರಣ್ಯ, ಗಣಿಗಾರಿಕೆ

೬೭೩೬

೧೦೦೫

೫೭೩೧

I ಪ್ರಾಥಮಿಕ ವಲಯ

೩.೪೧.೮೨೯

೧.೪೨.೭೯೭

೧.೯೯.೦೩೨

ಕೌಟುಂಬಿಕ
ಕೈಗಾರಿಕಾ ಚಟುವಟಿಕೆ

೧೦.೬೩೫

೩೪೫೩

೭೧೮೨

೫. ಕುಟುಂಬೇತರ ಕೈಗಾರಿಕಾ ಚಟುವಟಿಕೆ

೯೭೮೮

೧೫೨೨

೮೨೬೬

೬. ನಿರ್ಮಾಣ ಚಟುವಟಿಕೆಗಳು

೩೦೮೨

೨೧೧

೨೮೭೧

II ದ್ವಿತೀಯ ವಲಯ

೨೩೫೦೫

೫೧೮೬

೧೮೩೧೯

ವ್ಯಾಪಾರ
ವಾಣಿಜ್ಯ

೨೦೬೨೦

೨೭೧೬

೧೭೯೦೪

೮. ಸಾರಿಗೆ ಸಂಗ್ರಹ,
ಸಂಪರ್ಕ

೪೩೯೮

೨೧೩

೪೧೮೫

೯. ಇತರೆ ಸೇವೆಗಳು

೨೫೧೧೪

೪೦೮೨

೨೧೦೩೨

III ತೃತೀಯ ವಲಯ

೫೦೧೩೨

೭೦೧೦

೪೩೧೨೧

೧೦. ಒಟ್ಟು
ದುಡಿಯುವ ವರ್ಗ

೪.೧೫.೪೬೬

೧.೫೪.೯೯೩

೨.೬೦.೪೭೨

ಬಡತನದ ತೀವ್ರತೆಯ ಸೂಚಿ

ಕೊಪ್ಪಳ ಜಿಲ್ಲೆಯಲ್ಲಿ ಜನಸಂಖ್ಯೆಗೆ ಸಾಪೇಕ್ಷವಾಗಿ ದುಡಿಯುವ ವರ್ಗ ಮತ್ತು ದುಡಿಯುವ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣಗಳು ರಾಜ್ಯಮಟ್ಟದಲ್ಲಿರುವುದಕ್ಕಿಂತ ಅಧಿಕವಾಗಿವೆ ಎಂಬುದನ್ನು ಕೋಷ್ಟಕ – ೪.೨ ರಲ್ಲಿ ತೋರಿಸಿದೆ. ಇದರ ಆಧಾರದ ಮೇಲೆ ಕೊಪ್ಪಳ ಜಿಲ್ಲೆಯಲ್ಲಿ ಬಡತನದ ಪ್ರಮಾಣ ಮತ್ತು ಅದರ ತೀವ್ರತೆಯು ರಾಜ್ಯಮಟ್ಟಕ್ಕಿಂತ ಅಧಿಕವಾಗಿದೆ ಎಂದು ಹೇಳಬಹುದು. ದುಡಿಯುವ ವರ್ಗ ಮತ್ತು ಕೃಷಿ ಕಾರ್ಮಿಕರ ಪ್ರಮಾಣದ ಅಗಾಧತೆಯನ್ನು ಬಡತನದ ಸೂಚಿಯಾಗಿ ಬಳಸಬಹುದಾಗಿದೆ. (ಶೇರ್‌ಗಿಲ್ ಎಚ್.ಎಸ್. ೧೯೮೯, ಕಲ್ಪನಾ ಬಾರ್ದನ್, ೧೯೮೯) ಇದರ ಇಂಪ್ಲಿಕೇಶನ್ ಏನು? ಆಥಿಕವಾಗಿ ಹಿಂದುಳಿದಿರುವ, ಅಭಿವೃದ್ಧಿಯ ದೃಷ್ಟಿಯಿಂದ ಕೆಳಮಟ್ಟದಲ್ಲಿರುವ ಕೊಪ್ಪಳ ಜಿಲ್ಲೆಯಲ್ಲಿ ಜನರಿಗೆ ದುಡಿಮೆಯು ಅನಿವಾರ್ಯವಾಗಿದೆ. ಇಲ್ಲಿ ದುಡಿಮೆಯೇ ಬದುಕಾಗಿದೆ. ದುಡಿಮೆಯನ್ನು ಬದುಕಿಗೆ ಸಂವಾದಿಯಾಗಿ ಬಳಸುವುದು ಇಲ್ಲಿ ರೂಢಿಯಲ್ಲಿದೆ. ದುಡಿಮೆಗಾರ ವರ್ಗದ ಪ್ರಮಾಣ ಮತ್ತು ಕೃಷಿ ಕಾರ್ಮಿಕರ ಪ್ರಮಾಣಗಳು ಸಾಪೇಕ್ಷವಾಗಿ ಅಧಿಕವಾಗಿದ್ದ ಮಾತ್ರಕ್ಕೆ ಜಿಲ್ಲೆಯಲ್ಲಿ ಬಡತನ ತೀವ್ರವಾಗಿದೆ ಎಂದು ಹೇಗೆ ಹೇಳುವುದು? ಎಂತಹ ಪ್ರಶ್ನೆ ಇಲ್ಲಿ ಸಹಜ. ಕೊಪ್ಪಳ ಜಿಲ್ಲೆಯಲ್ಲಿ ಬಡತನವು ರಾಜ್ಯಮಟ್ಟಕ್ಕಿಂತ ತೀವ್ರವಾಗಿದೆ ಎಂದು ಹೇಳಲು ಅನೇಕ ಕಾರಣಗಳಿವೆ.

ಕೊಪ್ಪಳ ಜಿಲ್ಲೆಯಲ್ಲಿ  ಜನಸಂಖ್ಯೆದುಡಿಮೆಗಾರ ವರ್ಗ ಮತ್ತು ಕೃಷಿ ಕಾರ್ಮಿಕರು
ಕೋಷ್ಟಕ.

ಕ್ರ.ಸಂ.

ವಿವರಗಳು

ಕೊಪ್ಪಳ ಜಿಲ್ಲೆ

ಕರ್ನಾಟಕ

೧. ಜನಸಂಖ್ಯೆ

೯,೫೮,೦೭೮

೪,೪೯,೭೭,೨೦೧

೨. ದುಡಿಮೆಗಾರ ವರ್ಗ

೪,೧೫,೪೬೬

೧,೭೨,೯೨,೧೧೭

೩. ಜನಸಂಖ್ಯೆಯಲ್ಲಿ ದುಡಿಮೆಗಾ ವರ್ಗದ ಪ್ರಮಾಣ

ಶೇ. ೪೩.೩೬

ಶೇ. ೩೮.೪೫

೪. ಕೃಷಿ ಕಾರ್ಮಿಕರು

೧,೯೨,೫೯೪

೪೯,೯೯,೯೫೯

೫. ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ

ಶೇ. ೪೬.೩೬

ಶೇ. ೨೮.೯೧

ಕೋಷ್ಟಕ – ೪.೩ ರಲ್ಲಿನ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಒಂದು ಗುಂಪಿಗೆ ಸೇರಿದರೆ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಗುಲಬರ್ಗ ಎರಡನೆಯ ಗುಂಪಿಗೆ ಸೇರುತ್ತವೆ. ಮೊದಲನೆಯ ಗುಂಪಿನ ಜಿಲ್ಲೆಗಳು ಆರ್ಥಿಕವಾಗಿ ಮುಂದುವರಿದ ಜಿಲ್ಲೆಗಳಾಗಿದ್ದರೆ ಎರಡನೆಯ ಗುಂಪಿನ ಜಿಲ್ಲೆಗಳು ಹಿಂದುಳಿದ ಜಿಲ್ಲೆಗಳಾಗಿವೆ. ಈ ಎರಡು ಗುಂಪಿನ ಜಿಲ್ಲೆಗಳಲ್ಲಿ ಮಾತ್ರ ದುಡಿಮೆಗಾರ ವರ್ಗದ ಪ್ರಮಾಣ ಅಧಿಕವಾಗಿದೆ. ಮುಂದುವರಿದ ಜಿಲ್ಲೆಗಳಲ್ಲಿ ದುಡಿಮೆಗಾರ ವರ್ಗದ ಪ್ರಮಾಣ ಅಧಿಕವಾಗಿದೆ ಮತ್ತು ಹಿಂದುಳಿದ ಜಿಲ್ಲೆಗಳಲ್ಲೂ ಅದು ಅಧಿಕವಾಗಿದೆ. ಈ ವಿಚಿತ್ರವನ್ನು ಹೇಗೆ ವಿವರಿಸುವುದು.

ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಮಾತ್ರ ದುಡಿಮೆಗಾರ ವರ್ಗದ ಪ್ರಮಾಣವು ಶೇ. ೪೦ ಮತ್ತು ಅದಕ್ಕೂ ಅಧಿಕ ಮಟ್ಟದಲ್ಲಿದೆ. ಇದನ್ನು ಕೋಷ್ಟಕ ೪.೩ ರಲ್ಲಿ ತೋರಿಸಿದೆ.

ದುಡಿಮೆಯಲ್ಲಿ ಸಹಭಾಗಿತ್ವ ಪ್ರಮಾಣ ೧೯೯೧
ಕೋಷ್ಟಕ: .

ಕ್ರ. ಸಂ

ಜಿಲ್ಲೆಗಳು

ಜನಸಂಖ್ಯೆ

ದುಡಿಮೆಗಾರ ವರ್ಗ

ಜನಸಂಖ್ಯೆಯಲ್ಲಿ ದುಡಿಮೆಗಾರ ವರ್ಗದ ಪ್ರಮಾಣ

೧.೨.೩.

೪.

೫.

೬.

೭.

 

ದಕ್ಷಿಣ ಕನ್ನಡಚಿಕ್ಕಮಗಳೂರುಕೊಡಗು

ಗುಲಬರ್ಗ

ಬಳ್ಳಾರಿ

ರಾಯಚೂರು

ಕೊಪ್ಪಳ

ಕರ್ನಾಟಕ ರಾಜ್ಯ

೧೬,೫೬,೧೬೫

೧೦,೧೭,೨೮೩

೪,೮೮,೪೫೫

೨೫,೫೨,೧೬೯

೧೬,೫೬,೦೦೦

೧೩,೫೧,೮೦೯

೯,೫೮,೦೭೮

೪,೪೯,೭೭,೨೦

೭,೦೮,೬೦೨

೪,೧೨,೨೭೬

೨,೨೦,೨೪೮

೧೦,೩೯,೯೨೨

೭,೦೮,೨೯೯

೫,೫೫,೫೨೯

೪,೧೫,೪೬೬

೧,೭೨,೯೨,೧೧೭

೪೨.೭೮

೪೦.೫೨

೪೫.೦೯

೪೦.೨೭

೪೨.೭೭

೪೧.೦೯

೪೩.೩೬

೩೮.೪೫

ಇವೆರಡು ಗುಂಪಿನ ಜಿಲ್ಲೆಗಳಲ್ಲಿನ ದುಡಿಮೆಗಾರ ವರ್ಗದ ಸಾಮಾಜಿಕ ಸ್ವರೂಪ ವಿಭಿನ್ನವಾಗಿದೆ. ಮುಂದುವರಿದ ಜಿಲ್ಲೆಗಳಲ್ಲಿನ ದುಡಿಮೆಗಾರರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಅತ್ಯಂತ ಕಡಿಮೆ ಇದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿನ ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಕ್ರಮವಾಗಿ ಶೇ. ೧೬.೦೮, ಶೇ೨೪.೭೨ ಮತ್ತು ಶೇ. ೧೫.೦೭. ಆದರೆ ಬಳ್ಳಾರಿ, ರಾಯಚೂರು, ಗುಲಬರ್ಗಾ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಸರಾಸರಿ ಶೇ. ೪೪.೨೯ ಇದೆ. ಈ ನಾಲ್ಕು ಜಿಲ್ಲೆಗಳಲ್ಲಿನ ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣವು ಶೇ. ೫೦ ಕ್ಕಿಂತ ಅಧಿಕವಾಗಿದೆ. ಕೊಪ್ಪಳ ಜಿಲ್ಲೆಯನ್ನು ನಿದರ್ಶನವಾಗಿ ತೆಗೆದುಕೊಂಡರೆ, ಅಲ್ಲಿ ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣ ಶೇ. ೫೮.೪೭.

ಕೊಪ್ಪಳ ಜಿಲ್ಲೆಯಲ್ಲಿ ಬಡತನದ ಪ್ರಮಾಣ ಹಾಗೂ ಅದರ ತೀವ್ರತೆ ರಾಜ್ಯಮಟ್ಟದ ಸರಾಸರಿಗಿಂತ ಅಧಿಕವಾಗಿದೆಯೆಂದು ಹೇಳಲು ಮೂರು ಮುಖ್ಯ ಸಂಗತಿಗಳನ್ನು ಆಧಾರವಾಗಿ ನೀಡಬಹುದು.

೧. ಈ ಜಿಲ್ಲೆಯಲ್ಲಿ ದುಡಿಮೆಗಾರ ವರ್ಗದ ಪ್ರಮಾಣವು ರಾಜ್ಯ ಸರಾಸರಿಗಿಂತ ಅಧಿಕವಾಗಿದೆ.

೨. ಈ ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಣವು ರಾಜ್ಯ ಸರಾಸರಿಗಿಂತ ಅತ್ಯಧಿಕವಾಗಿದೆ.

೩. ಈ ಜಿಲ್ಲೆಯ ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣವು ಪುರುಷರ ಪ್ರಮಾಣಕ್ಕಿಂತ ಅಧಿಕವಾಗಿದೆ.

ಈ ಮೂರು ಸಂಗತಿಗಳು ಏಕಕಾಲದಲ್ಲಿ ಅಸ್ತಿತ್ವದಲ್ಲಿದ್ದರೆ ಆ ಜಿಲ್ಲೆಯಲ್ಲಿ ಬಡತನವು ತೀವ್ರವಾಗಿರುತ್ತದೆ ಎಂದು ಹೇಳಬಹುದು.

ಕೃಷಿ ಮತ್ತು ಕೃಷಿಯೇತರ ಕಸುಬುಗಳು

ಕೊಪ್ಪಳ ಜಿಲ್ಲೆಯು ‘ಏಕರೂಪಿ’ ಆರ್ಥಿಕ ರಚನೆಯನ್ನು ಹೊಂದಿದೆ ಎಂಬ ಸಂಗತಿಯನ್ನು ಹಿಂದೆ ಹೇಳಿದ್ದೇವೆ. ರಾಜ್ಯಮಟ್ಟದಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರ ವರ್ಗದ ಪ್ರಮಾಣ ಶೇ. ೬೩.೧೨. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಅದರ ಪ್ರಮಾಣ ಶೇ.೮೦.೬೫. ಕೃಷಿಯೇತರ ಚಟುವಟಿಕೆಗಳು ಇಲ್ಲವೆ ಇಲ್ಲ ಎನ್ನುವಷ್ಟು ‘ಏಕರೂಪಿ’ ಆರ್ಥಿಕತೆ ಎಂದೂ ಕರೆಯುವುದು ರೂಢಿ. ಕೃಷಿಯೇತರ ಚಟುವಟಿಕೆಗಳಲ್ಲಿ ನಿರತರಾಗಿರುವ ದುಡಿಮೆಗಾರರ ಸಮಖ್ಯೆ ಕೇವಲ ೮೦.೩೭೬. ಇವರಲ್ಲಿ ಮಹಿಳೆಯರ ಪ್ರಮಾಣ ಕೇವಲ ಶೇ. ೧೬.೪೨. ಕೃಷಿ ಚಟುವಟಿಕೆಗಳನ್ನು ಬಿಟ್ಟರೆ ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಅನ್ಯಮಾರ್ಗವೆ ಇಲ್ಲದಂತಾಗಿದೆ. ‘ಅವಕಾಶಗಳ ವಿಸ್ತರಣೆಯೇ ಅಭಿವೃದ್ಧಿ’ ಎನ್ನುವುದಾದರೆ ಕೊಪ್ಪಳ ಜಿಲ್ಲೆಯಲ್ಲಿ ಬದುಕನ್ನು ಉತ್ತಮಪಡಿಸಿಕೊಳ್ಳಲು ಇರುವ ಅವಕಾಶಗಳು ಕಡಿಮೆ. ಅವಕಾಶಗಳಲ್ಲಿ ಆಯ್ಕೆ ಸಾಧ್ಯವೇ ಇಲ್ಲದ ಬದುಕು ಇಲ್ಲಿದೆ. ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕ ವರ್ಗದ ಪ್ರಮಾಣ ಅಧಿಕವಾಗಿರುವುದೇ ಈ ಜಿಲ್ಲೆಯಲ್ಲಿ ಸಾಕ್ಷರತೆ ಕಡಿಮೆ ಇರಲು ಕಾರಣವಾಗಿದೆ.

ಯಾವ ವರ್ಗದ ಅಭಿವೃದ್ಧಿ?

ಕೋಷ್ಟಕ – ೪.೧ ರಲ್ಲಿ ತೋರಿಸಿರುವಂತೆ ಕೊಪ್ಪಳ ಜಿಲ್ಲೆಯ ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿರುವವರ ಪ್ರಮಾಣ ಶೇ. ೮೨.೨೮. ಆದರೆ ಪ್ರಾಥಮಿಕೇತರ ವಲಯದಲ್ಲಿ ನೆಲೆ ನಿಂತಿರುವ ದುಡಿಮೆಗಾರ ವರ್ಗದ ಪ್ರಮಾಣ ಕೇವಲ ಶೇ. ೧೭.೭೨. ಇಂದು ನಡೆದಿರುವ ಅಭಿವೃದ್ಧಿ ಸ್ವರೂಪವನ್ನು ಗಮನಿಸಿದರೆ ಅದು ಪ್ರಾಥಮಿಕೇತರ ವಲಯದಲ್ಲಿರುವ ದುಡಿಮೆಗಾರ ವರ್ಗದ ಹಿತಾಸಕ್ತಿಗಳನ್ನು ರಕ್ಷಿಸುತ್ತಿರುವಂತೆ, ಪೋಷಿಸುತ್ತಿರುವಂತೆ ಕಾಣುತ್ತದೆ. ಕೊಪ್ಪಳ ಜಿಲ್ಲೆಯಲ್ಲಿರುವ ೧.೯೨ ಲಕ್ಷ ಕೃಷಿ ಕಾರ್ಮಿಕರ ಹಿತಾಸಕ್ತಿಗಳನ್ನು ಗುರಿಯಾಗಿಟ್ಟುಕೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ಕಣ್ಣಿಗೆ ಕಾಣುತ್ತಿಲ್ಲ. ಕೃಷಿ ಕಾರ್ಮಿಕರಲ್ಲಿ ೧.೨ ಲಕ್ಷದಷ್ಟಿರುವ ಮಹಿಳಾ ಕೃಷಿ ಕಾರ್ಮಿಕರ ಹಿತವನ್ನು ಕಾಪಾಡುವ ಹಗೂ ಅವರ ಬದುಕನ್ನು ಉತ್ತಮ ಪಡಿಸಬಲ್ಲ ಕಾರ್ಯಕ್ರಮಗಳು ಇಲ್ಲವೆ ಇಲ್ಲ. ಆರೋಗ್ಯಭಾಗ್ಯವನ್ನಾಗಲಿ, ಅಕ್ಷರ ಸೌಭಾಗ್ಯವನ್ನಾಗಿ ಕಾಣದಿರುವ ೧.೯೨ ಲಕ್ಷ ಕೃಷಿ ಕಾರ್ಮಿಕರ ಬದುಕು ತೀವ್ರ ದುಸ್ಥಿತಿಯಲ್ಲಿದೆ.

ಧಾರಣಶಕ್ತಿಯ ದುಸ್ಥಿತಿ

ಧಾರಣಶಕ್ತಿಯ ದುಸ್ಥಿತಿಯನ್ನು ಅಮರ್ತ್ಯಸೇನ್ ಅವರು ‘ಬಡತನ’ವೆಂದು ಕರೆದಿದ್ದಾರೆ. ಧಾರಣಶಕ್ತಿಯು ಎರಡು ಸಂಗತಿಗಳನ್ನು ಒಳಗೊಂಡಿದೆ. ಬದುಕನ್ನು ಉತ್ತಮ ಪಡಿಸಿಕೊಳ್ಳಲು ಲಭ್ಯವಿರುವ ಅವಕಾಶಗಳನ್ನು ತನ್ನದಾಗಿಸಿಕೊಳ್ಳುವ ‘ಸಾಮರ್ಥ್ಯ’ ಮೊದಲನೆಯದಾದರೆ ಎರಡನೆಯದು ಲಭ್ಯವಿರುವ ಅವಕಾಶಗಳಲ್ಲಿ ತನಗೆ ಉತ್ತಮ ವೆನಿಸಿದ್ದನ್ನು ಆಯ್ಕೆ ಮಾಡಿಕೊಳ್ಳುವ ‘ಸ್ವಾತಂತ್ರ್ಯ’, ‘ಸಾಮರ್ಥ್ಯ ಹಾಗೂ ಸ್ವಾತಂತ್ರ್ಯ ಇವೆರಡು ಗುಣಗಳು ಮನಷ್ಯನಲ್ಲಿ ಅಂತರ್ಗತಗೊಂಡಿರುವ ಒಂದು ಸ್ಥಿತಿಯನ್ನೇ ಧಾರಣ ಶಕ್ತಿ ಎಂದು ನಿರ್ವಚಿಸಲಾಗಿದೆ. ಈ ಧಾರಣ ಶಕ್ತಿಯ ದುಸ್ಥಿತಿಯೇ ಬಡತನ. ಬಡತನದ ನಿವಾರಣೆಯೆಂದರೆ ಅಮರ್ತ್ಯಸೇನ್ ಪ್ರಕಾರ ಧಾರಣಶಕ್ತಿಯ ಸಂವರ್ಧನೆ.

ಬದುಕನ್ನು ಉತ್ತಮಪಡಿಸಿಕೊಳ್ಳಲು ಹರಿದು ಬರುವ ಅವಕಾಶಗಳನ್ನು ದಕ್ಕಿಸಿಕೊಳ್ಳುವ ಸಾಮರ್ಥ್ಯವಾಗಲಿ ಅಥವಾ ಅವಕಾಶಗಳಲ್ಲಿ ತಾನು ಬಯಸಿದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನಾಗಲಿ ಕೊಪ್ಪಳ ಜಿಲ್ಲೆಯ ೧.೯೨ ಕೃಷಿ ಕಾರ್ಮಿಕರು ಹೊಂದಿಲ್ಲ. ಇಲ್ಲಿ ವಿಕಲ್ಪಗಳು ಎರಡು: ಒಂದು ದುಡಿಮೆ, ಇಲ್ಲವೆ ಉಪವಾಸ. ಕೃಷಿ ಕಾರ್ಮಿಕರಿಗೆ ಸಂಬಂಧಪಟ್ಟ ದುಡಿಮೆ ವರ್ಷ ಪೂರ್ತಿ ದೊರೆಯುವಂತಹದ್ದಲ್ಲ.

ಧಾರಣಶಕ್ತಿ ಹೇಗೆ ಪ್ರಾಪ್ತವಾಗುತ್ತದೆ? ಧಾರಣಶಕ್ತಿಯು ಅಕ್ಷರ ಜ್ಞಾನದಿಂದ ಪ್ರಾಪ್ತವಾಗುತ್ತದೆ. ಆಸ್ತಿ – ಪಾಸ್ತಿ – ಸಂಪತ್ತಿನಿಂದ ಪ್ರಾಪ್ತವಾಗುತ್ತದೆ. ಜಾತಿ ಸ್ವರೂಪದಿಂದಲೂ ಬರಬಹುದು. ಈ ಮೂರು ಸಂಪತ್ತಿನಿಂದ ವಂಚಿತರಾದ ಕೊಪ್ಪಳ ಜಿಲ್ಲೆಯ ೧.೯೨ ಲಕ್ಷ ಕೃಷಿ ಕಾರ್ಮಿಕರ, ಅವರಲ್ಲಿನ ೧.೧೨ ಲಕ್ಷ ಮಹಿಳಾ ಕೃಷಿ ಕಾರ್ಮಿಕರ ಬದುಕು ಕಂಗಾಲಾಗಿದೆ.

ಭಾಗ

ದುಡಿಮೆಗಾರ ವರ್ಗದ ಜಾತಿ ಸ್ವರೂಪ

ಸಾಂಪ್ರದಾಯಿಕ ಅಭಿವೃದ್ಧಿ ವಿಚಾರ ಧಾರೆಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಸಂಗತಿಗಳನ್ನು ಅಖಂಡವಾಗಿ ನೋಡುವ ಪದ್ಧತಿ ರೂಢಿಯಲ್ಲಿದೆ. ವರಮಾನ, ಸಾಕ್ಷರತೆ, ದುಡಿಮೆಗಾರ ವರ್ಗ, ಸಾಗುವಳಿದಾರರು ಮುಂತಾದವುಗಳನ್ನು ಹೀಗೆ ಅಖಂಡವಾಗಿ ಪರಿಭಾವಿಸಿಕೊಂಡು ಬರಲಾಗಿದೆ. ಆದರೆ ಈ ಬಗೆಯ ಅಖಂಡ ಸ್ವರೂಪಿ ಅಧ್ಯಯನಗಳು ಸಮಸ್ಯೆಯ ಪೂರ್ಣ ದರ್ಶನ ಮಾಡಿಸಲು ಸಾಧ್ಯವಿಲ್ಲ. ಅಖಂಡ ಸ್ವರೂಪಿ ಅಧ್ಯಯನ ವಿಧಾನವು ಅನೇಕ ಬಗೆಯ ಟೀಕೆಗಳನ್ನು ಎದುರಿಸುತ್ತಿದೆ. ಹೇಳಿ ಕೇಳಿ ನಮ್ಮ ಸಮಾಜವೇ ಅಖಂಡವಾದಿ ಸಮಾಜವಲ್ಲ. ವರ್ಣ, ವರ್ಗ, ಜಾತಿ, ಲಿಂಗ, ಪ್ರದೇಶ ಮುಂತಾದ ಸಂಗತಿಗಳನ್ನು ಆಧರಿಸಿದ ವಿಚ್ಛಿದ್ರತೆಗಳಿಂದ ಖಂಡ – ತುಂಡವಾಗಿ ಹೋಗಿದೆ. ಇಂತಹ ಒಂದು ವ್ಯವಸ್ಥೆಯಲ್ಲಿ ಅಭಿವೃದ್ಧಿಯನ್ನು ಅಖಂಡ ನೆಲೆಯಲ್ಲಿ ಪರಿಭಾವಿಸುವುದು ಸಾಧುವಲ್ಲ.

ನಮ್ಮ ಕರ್ನಾಟಕದ ಸಂದರ್ಭದಲ್ಲಿ ಜನಸಂಖ್ಯೆಯನ್ನು ಪರಿಶಿಷ್ಟ ಜಾತಿ (ಪ.ಜಾ), ಪರಿಶಿಷ್ಟ ಪಂಗಡ (ಪ.ಪಂ), ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಇತರೆ ವರ್ಗ ಎಂದು ವರ್ಗೀಕರಿಸಬಹುದು. ಈ ವಿವಿಧ ಸಾಮಾಜಿಕ ಗುಂಪುಗಳ ಸಾಮಾಜಿಕ ಸ್ಥಾನಮಾನ, ಆರ್ಥಿಕ ಸ್ಥಿತಿಗತಿಗಳು ಸಮಾನವಾಗಿರುವುದಿಲ್ಲ. ಈ ನಮ್ಮ ಅಧ್ಯಯನದಲ್ಲಿ, ಮಾಹಿತಿಯ ಮಿತಿಯಿಂದಾಗಿ ವಿಶ್ಲೇಷಣೆಯನ್ನು ಕೇವಲ ಪರಿಶಿಷ್ಟರು (ಪ.ಜಾ. +ಪ.ಪಂ.) ಮತ್ತು ಪರಿಶಿಷ್ಟೇತರರು (ಹಿಂದುಳಿದವರು + ಅಲ್ಪ ಸಂಖ್ಯಾತರು + ಇತರರು) ಎಂಬ ಎರಡು ಸಾಮಾಜಿಕ ಗುಂಪುಗಳನ್ನು ವರ್ಗೀಕರಿಸಿಕೊಳ್ಳಲಾಗಿದೆ.

ರಾಜ್ಯಮಟ್ಟದಲ್ಲಿ ಜನಸಂಖ್ಯೆಯಲ್ಲಿ ಪರಿಶಿಷ್ಟರ (ಪ.ಜಾ. + ಪ.ಪಂ.) ಪ್ರಮಾಣ ಶೇ. ೨೦.೬೪. ಆದರೆ ದುಡಿಮೆಗಾರ ವರ್ಗದಲ್ಲಿ ಅವರ ಪ್ರಮಾಣ ಶೇ. ೨೨.೪೬ ರಷ್ಟಿದೆ. ಕೃಷಿ ಕಾರ್ಮಿಕರಲ್ಲಿ ಅವರ ಪ್ರಮಾಣ ಶೇ. ೩೭.೫೮ ರಷ್ಟಿದೆ. ಆದರೆ ಸಾಗುವಳಿದಾರರಲ್ಲಿ ಮತ್ತು ಅಕ್ಷರಸ್ಥರಲ್ಲಿ ಮಾತ್ರ ಪರಿಶಿಷ್ಟರ ಪ್ರಮಾಣ ಕ್ರಮವಾಗಿ ಶೇ. ೧೭.೩೧ ಮತ್ತು ಶೇ. ೧೩.೪೩ ರಷ್ಟಿದೆ. ಇಲ್ಲಿ ನಾವು ಖಂಡ ಸ್ವರೂಪಿ ಅಧ್ಯಯನದ ಮಹತ್ವವನ್ನು ಗುರುತಿಸಬಹುದು.

ಜನಸಂಖ್ಯೆಯಲ್ಲಿ ೧/೫ ರಷ್ಟಿರುವ ಪರಿಶಿಷ್ಟರು ದುಡಿಮೆಗಾರರಲ್ಲಿ ಮತ್ತು ಕೃಷಿ ಕಾರ್ಮಿಕರಲ್ಲಿ ೧/೫ ಕ್ಕಿಂತ ಅಧಿಕ ಪಾಲು ಪಡೆದಿದ್ದಾರೆ. ಸಾಗುವಳಿದಾರರಲ್ಲಿ ಮತ್ತು ಅಕ್ಷರಸ್ಥರಲ್ಲಿ ಕ್ರಮವಾಗಿ ೧/೫ ಕ್ಕಿಂತ ಕಡಿಮೆ ಮತ್ತು ೧/೭ ಕ್ಕಿಂತ ಕಡಿಮೆ ಪಾಲು ಪಡೆದಿದ್ದಾರೆ. ಅಭಿವೃದ್ಧಿಗೆ ಸಂದ ದುಡಿಮೆಯಲ್ಲಿ ಅವರ ಪಾಲು ತಮ್ಮ ಜನಸಂಖ್ಯೆಯಲ್ಲಿನ ಪಾಲಿಗಿಂತ ಅಧಿಕವಾಗಿದೆ. ಆದರೆ ಅಭಿವೃದ್ಧಿಯು ಪಡೆಯುವ ಫಲಗಳಲ್ಲಿ ಮಾತ್ರ ಅವರ ಪಾಲು ತಮ್ಮ ಜನಸಂಖ್ಯೆಯಲ್ಲಿನ ಪಾಲಿಗಿಂತ ಕಡಿಮೆ ಇದೆ. ಅಖಂಡ ಸ್ವರೂಪಿ ಅಧ್ಯಯನಗಳು ಇಂತಹ ಸೂಕ್ಷ್ಮ ಸಂಗತಿಗಳನ್ನು ಮುಚ್ಚಿಡುತದೆ. ದುಡಿಮೆಗಾರ ವರ್ಗದ ಸ್ವರೂಪವನ್ನು ಅಖಂಡವಾಗಿ ಪರಿಭಾವಿಸದೆ ವಿವಿಧ ಜಾತಿ ಸಾಮಾಜಿಕ ಗುಂಪುಗಳಾಗಿ ನೋಡುವುದು ವಿಹಿತ.

ಕೊಪ್ಪಳ ಜಿಲ್ಲೆಯ ಜನಸಂಖ್ಯೆಯಲ್ಲಿ ಪರಿಶಿಷ್ಟರ ಒಟ್ಟು ಸಮಖ್ಯೆ ೨,೦೮,೬೦೩. ಅವರ ಶೇಕಡ ಪ್ರಮಾಣ ೨೧.೭೭. ಆದರೆ ಜಿಲ್ಲೆಯ ಒಟ್ಟು ದುಡಿಮೆಗಾರರಲ್ಲಿ ಪರಿಶಿಷ್ಟ ದುಡಿಮೆಗಾರ ವರ್ಗದ ಪ್ರಮಣ ಶೇ. ೨೧.೯೮. ಆದರೆ ಜಿಲ್ಲೆಯ ಒಟ್ಟು ಕೃಷಿ ಕಾರ್ಮಿಕರಲ್ಲಿ ಮಾತ್ರ ಪರಿಶಿಷ್ಟರ ಪ್ರಮಾಣ ಶೇ. ೨೯.೦೮ ರಷ್ಟಿದೆ.

ಪರಿಶಿಷ್ಟ ದುಡಿಮೆಗಾರರಲ್ಲಿ ಶೇ. ೬೧.೩೪ ರಷ್ಟು ಕೃಷಿ ಕಾರ್ಮಿಕರಿದ್ದರೆ ಪರಿಶಿಷ್ಟೇತರ ದುಡಿಮೆಗಾರರಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಕೇವಲ ಶೇ. ೪೨.೧೩. ಒಟ್ಟಾರೆ ಹೇಳುವುದಾದರೆ ಪರಿಶಿಷ್ಟರ ಜನಸಂಖ್ಯೆಯಲ್ಲಿ ದುಡಿಮೆಗಾರ ವರ್ಗದ ಪ್ರಮಾಣ ಹಾಗೂ ಕೃಷಿ ಕಾರ್ಮಿಕರ ಪ್ರಮಾಣ ಪರಿಶಿಷ್ಟೇತರ ಜನಸಂಖ್ಯೆಯಲ್ಲಿರುವುದಕ್ಕಿಂತ ಅಧಿಕವಾಗಿವೆ. ಈ ಒಂದು ಸಂಗತಿಯ ಮೇಲೆ ಪರಿಶಿಷ್ಟ ಜನಸಂಖ್ಯೆಯಲ್ಲಿ ಬಡತನವು ಪರಿಶಿಷ್ಟೇತರರಲ್ಲಿರುವುದಕ್ಕಿಂತ ತೀವ್ರವಾಗಿದೆಯೆಂದು ಹೇಳಬಹುದು. ದುಡಿಮೆಯಲ್ಲಿ ಮಾತ್ರ ಅಧಿಕವಾದ ಭಾರವನ್ನು ಹೊರುತ್ತಿರುವ ಪರಿಶಿಷ್ಟರು ಅಭಿವೃದ್ಧಿಯ ಫಲಗಳನ್ನು ಪಡೆಯುವುದರಲ್ಲಿ ವಂಚಿತರಾಗಿದ್ದಾರೆ. ಇದನ್ನು ಸಾಕ್ಷರತೆಗೆ ಸಂಬಂಧಿಸಿದಂತೆ ತೋರಿಸಲಾಗಿದೆ. ಕೋಷ್ಟಕ – ೪.೪ ರಲ್ಲಿ ಪರಿಶಿಷ್ಟರಲ್ಲಿನ ದುಡಿಮೆಗಾರರ ಪ್ರಮಾಣ ಮತ್ತು ಇತರೆ ವಿವರಗಳನ್ನು ತೋರಿಸಿದೆ.

ಜನಸಂಖ್ಯೆಯಲ್ಲಿ ಪರಿಶಿಷ್ಟರು
ಕೋಷ್ಟಕ: .

೧.೨.೩.

೪.

೫.

೬.

ಜಿಲ್ಲೆಯ ಜನಸಂಖ್ಯೆಪರಿಶಿಷ್ಟರ ಜನಸಂಖ್ಯೆದುಡಿಮೆಗಾರರ ಸಂಖ್ಯೆ

ಪರಿಶಿಷ್ಟರ ಸಂಖ್ಯೆ

ಕೃಷಿ ಕಾರ್ಮಿಕರ ಸಂಖ್ಯೆ

ಪರಿಶಿಷ್ಟರ ಸಂಖ್ಯೆ

೯,೫೮,೦೭೮೨,೦೮,೬೦೩ (ಶೇ. ೨೧.೭೧)೪,೧೫,೪೬೬

೯೧,೩೧೨ (ಶೇ. ೨೧.೯೮)

೧,೯೨,೫೯೪

೫೬,೦೧೧ (ಶೇ. ೨೯.೦೮)

ಭಾಗ

ದುಡಿಮೆಗಾರ ವರ್ಗದ ಲಿಂಗ ಸ್ವರೂಪ

“….. enlightened government action is essential to help realise the full potential of Indias female labour force. This challenge has to be met by policy makers, planners and administrators, other wise not only will the desired rate of economic growth fail to be realised, but over all social development will be adversely affected”.
T. Scarlett Epstein
Culture, Women and Indian Development, P – 53

ಜಿಲ್ಲಾ ಅಭಿವೃದ್ಧಿ ಅಧ್ಯಯನವನ್ನು ಲಿಂಗಸಂವೇದಿಯನ್ನಾಗಿ ರೂಪಿಸಲು ಪ್ರಯತ್ನಿಸಲಾಗಿದೆ ಎಂಬ ಮಾತನ್ನು ಮೊದಲೇ ತಿಳಿಸಿದ್ದೇವೆ. ಈ ಅಧ್ಯಯನದ ವಿವಿಧ ಭಾಗಗಳಲ್ಲಿ ಅಭಿವೃದ್ಧಿಯ ಲಿಂಗಸ್ವರೂಪವನ್ನು ಹಿಡಿದಿಡಲು ಪ್ರಯತ್ನ ಮಾಡಲಾಗಿದೆ. ಪ್ರಸ್ತುತ ಭಾಗದಲ್ಲಿ ದುಡಿಮೆಗಾರ ವರ್ಗದ ಲಿಂಗಸ್ವರೂಪವನ್ನು ವಿಶ್ಲೇಷಿಸಲಾಗಿದೆ.

ಜನಸಂಖ್ಯೆಯಲ್ಲಿ ಮತ್ತು ಮತದಾರರಲ್ಲಿ ಸರಿಸುಮಾರು ಅರ್ಧದಷ್ಟಿರುವ ಮಹಿಳೆಯರ ದುಡಿಮೆಯಲ್ಲಿನ ಸಹಭಾಗಿತ್ವವು ಅಭಿವೃದ್ಧಿಯ ದೃಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ. ಸಮಾಜವು ಹೇಳಿ ಕೇಳಿ ಪುರುಷ ಪ್ರಧಾನವಾದುದು. ಅದೇ ರೀತಿ ಅಭಿವೃದ್ಧಿಯೂ ‘ಏಕಲಿಂಗಿ’ಯಾಗಿರುವ ದುರಂತ ನಮ್ಮ ಎದುರಿಗಿದೆ. ಅಭಿವೃದ್ಧಿ ಕುರಿತ ಸಿದ್ಧಾಂತಗಳಲ್ಲೂ ಪುರುಷಶಾಹಿತ್ವ ಮೆರೆಯುತ್ತಿದೆ.

ನಮ್ಮ ಸಮಾಜದ ಸಂದರ್ಭದಲ್ಲಿ ಮಹಿಳೆಯರ ಸಾಮರ್ಥ್ಯವನ್ನು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಒಳಗು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಏಕೆಂದರೆ ಮಹಿಳೆಯರು ಎಲ್ಲ ಬಗೆಯ ತಾರತಮ್ಯ, ಪಕ್ಷಪಾತ ಹಾಗೂ ದಮನಕ್ಕೆ ಒಳಗಾಗಿದ್ದಾರೆ. ಮಹಿಳೆಯರ ‘ದುಡಿಮೆ’ಯನ್ನು ದುಡಿಮೆಯೆಂದು ಪರಿಗಣಿಸಲು ಸಮಾಜ ಹಾಗೂ ಪುರುಷ ವರ್ಗ ಸಿದ್ಧವಿಲ್ಲ. ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟಿರುವ ಮಹಿಳೆಯರ ಅಭಿವೃದ್ಧಿ ಸಾಮರ್ಥ್ಯವು ಪೋಲಾಗಿ ಹೋಗುತ್ತಿದೆ. ನಮ್ಮ ಸಮಾಜದ ಅಭಿವೃದ್ಧಿಯು ಕುಂಟುತ್ತಾ ಸಾಗಿರುವುದಕ್ಕೆ ಮಹಿಳೆಯರ ಅಭಿವೃದ್ಧಿ ಸಾಮರ್ಥ್ಯ ಪೋಲಾಗುತ್ತಿರುವುದೇ ಕಾರಣವಾಗಿದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹಿಳೆಯರ ಕಾಣಿಕೆಯು ಪುರುಷ ವರ್ಗದ ಕಾಣಿಕೆಗಿಂತಲು ಅಧಿಕವಾಗಿರುವುದನ್ನು ಅನೇಕ ಅಧ್ಯಯನಗಳು ದೃಢಪಡಿಸಿವೆ. ಈ ಬಗ್ಗೆ ಮಾತನಾಡುತ್ತ ಅಮರ್ತ್ಯಸೇನ್ ಅವರು ‘the emancipation of women is an integral part of social progress, not just a women’s issue’ ಹೀಗೆ ನುಡಿದಿದ್ದಾರೆ. (ಡ್ರೀಜ್, ಜೀನ್ ಮತ್ತು ಅಮರ್ತ್ಯಸೇನ್ – ೧೯೯೫)

ಲಿಂಗ ಸಂಬಂಧಿ ತಾರತಮ್ಯ, ಅಸಮಾನತೆಗಳಿಂದ ಮಹಿಳೆಯರು ಅನೇಕ ಬಗೆಯ ತುಳಿತಕ್ಕೆ ಒಳಗಾಗಿದ್ದಾರೆ. ಲಿಂಗ ಸಂಬಂಧಿ ತಾರತಮ್ಯ ಹಾಗೂ ದಮನ ಸಾಮಾಜಿಕ – ಸಾಂಸ್ಕೃತಿಕ ನೆಲೆಗಳಲ್ಲಿ ಗಟ್ಟಿಯಾಗಿ ನೆಲೆಯೂರಿಬಿಟ್ಟಿದೆ. ಈ ಲಿಂಗ ತಾರತಮ್ಯಗಳ ಪರಿಣಾಮಗಳು ಎಷ್ಟು ತೀಕ್ಷ್ಣವಾಗಿದ್ದಾವೆಯಂದರೆ ಭಾರತದ ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣವು ಸಾಪೇಕ್ಷವಾಗಿ ಹಾಗೂ ಸಾವಕಾಶವಾಗಿ ಕಡಿಮೆಯಾಗುತ್ತಾ ನಡೆದಿದೆ. ೧೯೦೧ರಲ್ಲಿ ಕರ್ನಾಟಕದಲ್ಲಿ ಲಿಂಗ ಪರಿಮಾಣವು (Sex Ratio) ೯೮೩ ಇತ್ತು. ಇದು ೧೯೬೧ರಲ್ಲಿ ೯೫೯ ಕ್ಕೆ ಇಳಿದಿದ್ದು ೧೯೯೧ ರಲ್ಲಿ ಅದು ೯೬೦ ಕ್ಕೆ ಏರಿಕೆಯಾಗಿದೆ. ಆದರೂ ಲಿಂಗ ಪರಿಮಾಣವು ಕೆಳ ಮಟ್ಟದಲ್ಲಿದೆ. ನಮ್ಮ ಸಮಾಜದ ಸಂದರ್ಭದಲ್ಲಿ ಲಿಂಗ ತಾರತಮ್ಯ ವ್ಯಾಪಕವಾಗಿದೆ ಎಂಬುದನ್ನು ಸಿದ್ಧ ಮಾಡಿ ತೋರಿಸಲು ಲಿಂಗ ಪರಿಮಾಣಕ್ಕೆ ಸಂಬಂಧಿಸಿದ ಕಡಿತ ಇಳಿತವೇ ಸಾಕು ಎನ್ನುತ್ತಾರೆ ಅಮರ್ತ್ಯಸೇನ್.

ಕರ್ನಾಟಕದ ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ೧೯೯೧ರಲ್ಲಿ ಶೇ. ೪೮.೯೭. ಆದರೆ ರಾಜ್ಯದ ಒಟ್ಟು ಅಕ್ಷರಸ್ಥರಲ್ಲಿ ಮಹಿಳೆಯರ ಪ್ರಮಾಣ ಕೇವಲ. ಶೇ. ೩೮.೭೫. ರಾಜ್ಯದ ದುಡಿಮೆಗಾರರ ವರ್ಗದಲ್ಲಿ ಮಹಿಳೆಯರ ಪ್ರಮಾಣ ೨೮.೯೫. ಈ ದುಡಿಮೆಗಾರ ವರ್ಗದಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವ ಮಹಿಳೆಯರ ಪ್ರಮಾಣ ಶೇ. ೭೫.೪೦ ಕರ್ನಾಟಕ ರಾಜ್ಯದಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರ ವರ್ಗದಲ್ಲಿ ಮಹಿಳೆಯರ ಪ್ರಮಾಣ ಶೇ. ೧೯.೩೧. ಹೀಗೆ ಮಹಿಳೆಯರ ಅಭಿವೃದ್ಧಿ ಸಾಮರ್ಥ್ಯವು ಫೋಲಾಗಿ ಹೋಗುತ್ತಿದೆ. ಆಕೆಯ ಅನೇಕ ಬಗೆಯ ದುಡಿಮೆಯನ್ನು ದುಡಿಮೆಯೆಂದು ಪರಿಗಣಿಸದೆ ಇರುವುದರಿಂದ ಆಕೆಯ ದುಡಿಮೆ ಸಹಭಾಗಿತ್ವ ಪ್ರಮಾಣವು ಅತ್ಯಂತ ಕೆಳಮಟ್ಟದಲ್ಲಿದೆ. ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣವು ಶೇ. ೨೮.೯೫. ಇದು ಮಹಿಳೆಯರ ದುಡಿಮೆಯ ಸಂಪೂರ್ಣ ಚಿತ್ರವನ್ನು ನೀಡುವುದಿಲ್ಲ. ಈ ಬಗೆಯ ತಾರತಮ್ಯ – ದಮನ ಜಿಲ್ಲಾ ಮಟ್ಟದಲ್ಲೂ ಮುಂದುವರಿಯುವುದನ್ನು ಇಲ್ಲಿ ನೋಡಬಹುದು.

ಕೊಪ್ಪಳ ಜಿಲ್ಲೆಯ ಜನಸಂಖ್ಯೆ ೯.೫೮ ಲಕ್ಷ. ಇದರಲ್ಲಿ ಮಹಿಳೆಯರ ಸಂಖ್ಯೆ ೪.೭೪ ಲಕ್ಷ (ಶೇ. ೪೯.೫೧) ಈ ಜಿಲ್ಲೆಯಲ್ಲಿನ ದುಡಿಮೆಗಾರ ವರ್ಗ ೪.೧೫ ಲಕ್ಷ. ಇವರಲ್ಲಿ ಮಹಿಳೆಯರ ಸಂಖ್ಯೆ ೧.೫೫ ಲಕ್ಷ (ಶೇ. ೩೭.೩೧). ಕೊಪ್ಪಳ ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ ೧.೯೨ ಲಕ್ಷ. ಇವರಲ್ಲಿ ಮಹಿಳೆಯರ ಪ್ರಮಾಣ ೧.೧೨ ಲಕ್ಷ (ಶೇ. ೫೮.೩೩).

ಇದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ ಕೊಪ್ಪಳ ಜಿಲ್ಲೆಯ ದುಡಿಮೆಯಲ್ಲಿ ಮಹಿಳೆಯರ ಪಾಲು ಅಪಾರವಾಗದೆ. ದುಡಿಮೆ ವರ್ಗದಲ್ಲಿ ಮಹಿಳೆಯರ ಪಾಲು ೧/೩ ಕ್ಕಿಂತ ಅಧಿಕವಾಗಿದೆ. ಕೃಷಿ ಕಾರ್ಮಿಕರಿಗೆ ಸಂಬಂಧಿಸಿದಂತೆ ಮಹಿಳೆಯರ ಪ್ರಮಾಣವು ಅರ್ಧಕ್ಕಿಂತ ಅಧಿಕವಾಗಿದೆ. ಇದಲ್ಲದೆ ಮಹಿಳೆಯರ ಅನೇಕ ಬಗೆಯ ದುಡಿಮೆಯು ಅವ್ಯಕ್ತವಾಗಿರುತ್ತದೆ.

ಮೂರು ಬಗೆಯ ದುಡಿಮೆ

ಮಹಿಳೆಯರು ನಿರ್ವಹಿಸುತ್ತಿರುವ ದುಡಿಮೆಯು ಮೂರು ಬಗೆಯದ್ದಾಗಿರುತ್ತದೆ. ಮೊದಲನೆಯದು ಉತ್ಪಾದನಾ ದುಡಿಮೆ. ಎರಡನೆಯದು ಕೌಟುಂಬಿಂಕ ದುಡಿಮೆ. ಮೂರನೆಯದು ಸಂತಾನೋತ್ಪತ್ತಿ ದುಡಿಮೆ. ಈ ಮೂರು ಬಗೆಯ ದುಡಿಮೆಗಳಲ್ಲಿ ಮೊದಲನೆಯದರಲ್ಲಿ ಮಾತ್ರ ದುಡಿಮೆ ಸ್ತ್ರೀ – ಪುರುಷರಿಗೆ ಸಮಾನವಾದುದಾಗಿದೆ. ಆದರೆ ಎರಡನೆಯ ಬಗೆಯಲ್ಲಿ ಮಹಿಳೆಯರು ದುಡಿಮೆಯ ಪ್ರಮಾಣವು ಪುರುಷರ ದುಡಿಮೆಯ ಪ್ರಮಾಣಕ್ಕಿಂತ ಅಧಿಕವಾಗಿರುತ್ತದೆ. ಮೂರನೆಯ ಬಗೆಯ ದುಡಿಮೆ ಸಂಪೂರ್ಣವಾಗಿ ಮಹಿಳೆಯರ ಕರ್ಮಕ್ಷೇತ್ರವಾಗಿದೆ. ಹೀಗೆ ದುಡಿಮೆಯನ್ನು ನಿರ್ವಹಿಸುವುದರಲ್ಲಿ ಸ್ತ್ರೀ ಪುರುಷರ ನಡುವೆ ಅಪಾರ ಅಂತರಗಳಿವೆ. ಮೂರು ಬಗೆಯ ದುಡಿಮೆಯನ್ನು ನಿರ್ವಹಿಸಬೇಕಾಗಿರುವುದರಿಂದ, ನಮ್ಮ ಸಮಾಜದ ಸಂದರ್ಭದಲ್ಲಿ ಮಹಿಳೆಯರು ಪ್ರತಿ ದಿನ ‘ಎರಡು ದುಡಿಮೆ ದಿನ’ಗಳನ್ನು ಬದುಕುವಂತಾಗಿದೆ. ಹೀಗೆ ವ್ಯಕ್ತ ಹಾಗೂ ಅವ್ಯಕ್ತ ದುಡಿಮೆಯನ್ನು ಪರಿಗಣಿಸಿದ್ದಾದರೆ ಅಭಿವೃದ್ಧಿಗೆ ಮಹಿಳೆಯರ ಕಾಣಿಕೆ ಅಪಾರವಾಗಿದೆ. ದುಡಿಮೆಯಲ್ಲಿ ಮಹಿಳೆಯರ ಪಾಲು ಅವರು ಜನಸಂಖ್ಯೆಯಲ್ಲಿರುವ ಪಾಲಿಗೆ ಸರಿಸಮವಾಗಿದೆಯೆಂದು ಹೇಳಬಹುದು. (ಟಿ.ಆರ್. ಚಂದ್ರಶೇಖರ್ – ೧೯೯೯)

ಮಹಿಳಾ ಕೃಷಿ ಕಾರ್ಮಿಕರು

ಪುರುಷ ವರ್ಗಕ್ಕಿಂತ ಮಹಿಳೆಯರ ಕೃಷಿ ಅವಲಂಬನೆ ಅಧಿಕವಾಗಿದೆ. ಕರ್ನಾಟಕದ ೧೨ ಜಿಲ್ಲೆಗಳಲ್ಲಿ ಮಾತ್ರ ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣವು ಪುರುಷರ ಪ್ರಮಾಣಕ್ಕಿಂತ ಅಧಿಕವಾಗಿದೆ. ಕೊಪ್ಪಳದಲ್ಲೂ ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣವು ಪುರುಷರ ಪ್ರಮಾಣಕ್ಕಿಂತ ಅಧಿಕವಾಗಿದೆ. ದುಡಿಮೆಯಲ್ಲಿ ಮಹಿಳೆಯರ ಸಹಭಾಗಿತ್ವವು ಕೊಪ್ಪಳ ಜಿಲ್ಲೆಯಲ್ಲಿ ಶೇ. ೩೨.೬೭. ಅಭಿವೃದ್ಧಿಯ ಗತಿಯು ಉತ್ತಮವಾದಂತೆ ಮತ್ತು ಆರ್ಥಿಕ ರಚನೆಯಲ್ಲಿ ಬದಲಾವಣೆ ಉಂಟಾದಂತೆ ಕೃಷಿ ಕಾರ್ಮಿಕರ ಪ್ರಮಾಣವು ಕಡಿಮೆಯಾಗುವುದನ್ನು ಕಾಣಬಹುದು. ಆದರೆ ಕೊಪ್ಪಳದಲ್ಲಿ ಕೃಷಿಯೇತರ ಚಟುವಟಿಕೆಗಳು ಬೆಳೆಯುತ್ತಿಲ್ಲ. ಈ ಕಾರಣಕ್ಕೆ ಕೊಪ್ಪಳ ಜಿಲ್ಲೆಯ ಒಟ್ಟು ಮಹಿಳಾ ದುಡಿಮೆಗಾರ ವರ್ಗದಲ್ಲಿ (೧.೫೪ ಲಕ್ಷ) ಸುಮಾರು ಶೇಕಡಾ ೯೧.೪೮ ರಷ್ಟು ಮಹಿಳೆಯರು (೧.೪೧ ಲಕ್ಷ) ಕೃಷಿಯನ್ನು ಅವಲಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ.

ಮಹಿಳಾ ಕೃಷಿ ಕಾರ್ಮಿಕರಲ್ಲಿ ಪರಿಶಿಷ್ಟ ಮಹಿಳಾ ಕೃಷಿ ಕಾರ್ಮಿಕರ ಪ್ರಮಾಣ ಶೇ. ೨೭.೫೭ ರಷ್ಟಿದೆ. ಬಡತನದ ತೀವ್ರತೆಯು ಕೃಷಿ ಕಾರ್ಮಿಕ ವರ್ಗದಲ್ಲಿ ಮಡುಗಟ್ಟಿಕೊಂಡಿದೆ ಎಂದು ಹೇಳಬಹುದು. ಎಲ್ಲಿಯವರೆಗೆ ಕೃಷಿಯ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಮಹಿಳೆಯರ ಬದುಕು ಉತ್ತಮಗೊಳ್ಳುವುದು ಸಾಧ್ಯವಿಲ್ಲ. ಇದರ ತಥ್ಯವೇನೆಂದರೆ, ಜಿಲ್ಲೆಯಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಆರ್ಥಿಕ ರಚನೆಯಲ್ಲಿ ತೀವ್ರ ಬದಲಾವಣೆ ಉಂಟಾಗುವಂತೆ ಮಾಡಬೇಕಾಗಿದೆ. ಪ್ರಾಥಮಿಕ ವಲಯವು ಈಗ ಪ್ರಧಾನವಾಗಿದೆ. ಇದು ಬದಲಾಗಬೇಕು.