ಒಂದು ದೇಶ ಯಾ ಪ್ರದೇಶದ ಆರ್ಥಿಕ ರಚನೆಯು ಮೂರು ಪ್ರಧಾನ ವಲಯಗಳನ್ನು ಹೊಂದಿರುತ್ತದೆ. ಅವುಗಳನ್ನು ಪ್ರಾಥಮಿಕ ವಲಯ, ದ್ವಿತೀಯ ವಲಯ ಮತ್ತು ತೃತೀಯ ವಲಯ ಎಂದು ವರ್ಗೀಕರಿಸಲಾಗಿದೆ. ಒಂದು ಆರ್ಥಿಕತೆಯ ವರಮಾನ ಮತ್ತು ದುಡಿಯುವ ವರ್ಗಗಳು ಮೂರು ವಲಯಗಳ ನಡುವೆ ಹೇಗೆ ವಿತರಿಸಲ್ಪಟ್ಟಿದೆ ಎಂಬುದನ್ನೇ ‘ಆರ್ಥಿಕ ರಚನೆ’ ಎಂದು ಕರೆಯಲಾಗಿದೆ. ಒಂದು ಆರ್ಥಿಕತೆಯಲ್ಲಿ ಈ ಮೂರು ವಲಯಗಳು ಯಾವ ಯಾವ ಸ್ಥಾನ ಪಡೆದುಕೊಂಡಿವೆ ಎಂಬುದು ಅಭಿವೃದ್ಧಿಯ ದೃಷ್ಟಿಯಿಂದ ತುಂಬಾ ಮಹತ್ವದ ಸಂಗತಿಯಾಗಿದೆ. ಅಭಿವೃದ್ಧಿ ಮತ್ತು ಆರ್ಥಿಕ ರಚನೆ ನಡುವೆ ಸಂಬಂಧವನ್ನು ಅರ್ಥಶಾಸ್ತ್ರಜ್ಞರು ಗುರುತಿಸಿದ್ದಾರೆ. ಈ ಬಗ್ಗೆ ಕೊಲಿನ್ ಕ್ಲಾರ್ಕ್‌ ಮತ್ತು ಸೈಮನ್ ಕುಜ್ನೆಟ್ಸ್ ಅವರುಗಳು ಸೂತ್ರ ರೂಪದ ಪ್ರಮೇಯಗಳನ್ನು ರೂಪಿಸಿದ್ದಾರೆ. (ವಿವರಗಳಿಗೆ ನೋಡಿ: ಬಿ. ಶೇಷಾದ್ರಿ ೧೯೯೧ ಪು: ೪೪ – ೬೩)

ವಲಯಗಳ ವಿವರಣೆ

ದುಡಿಯುವ ವರ್ಗದ ನೆಲೆಯಿಂದ ಪ್ರಾಥಮಿಕ ವಲಯವು ಕೃಷಿ (ಸಾಗುವಳಿದಾರರು ಮತ್ತು ಕೃಷಿ ಕಾರ್ಮಿಕರು) ಪಶುಪಾಲನೆ ಮತ್ತು ಅರಣ್ಯಗಾರಿಕೆ ಹಾಗೂ ಬಂಡೆಗಾರಿಕೆ ಮತ್ತು ಗಣಿಗಾರಿಕೆ ಚಟುವಟಿಕೆಗಳನ್ನು ಒಳಗೊಂಡಿದೆ. ವರಮಾನದ ದೃಷ್ಟಿಯಿಂದಲು ಈ ವಲಯವು ಕೃಷಿ, ಅರಣ್ಯಗಾರಿಕೆ, ಮೀನುಗಾರಿಕೆ, ಗಣಿಗಾರಿಕೆ, ಚಟುವಟಿಕೆಗಳನ್ನು ಹೊಂದಿದೆ.

ದುಡಿಯುವ ವರ್ಗದ ದೃಷ್ಟಿಯಿಂದ ದ್ವಿತೀಯ ವಲಯವು ಕೌಟುಂಬಿಕ ಕೈಗಾರಿಕಾ ಚಟುವಟಿಕೆಗಳನ್ನು ಒಳಗೊಂಡಿದೆ. ವರಮಾನದ ದೃಷ್ಟಿಯಿಂದ ಈ ವಲಯವು ವ್ಯಾಪಾರ, ವಾಣಿಜ್ಯ ಸಾರಿಗೆ – ಸಂಪರ್ಕ ಮತ್ತು ಇತರೆ ಸೇವಾ ಚಟುವಟಿಕೆಗಳನ್ನು ಒಳಗೊಂಡಿದೆ. ವರಮಾನದ ದೃಷ್ಟಿಯಿಂದ ಇದು ರೈಲು ಸಾರಿಗೆ, ಇತರೆ ಸಾರಿಗೆ, ಸಂಪರ್ಕ, ವ್ಯಾಪಾರ, ಹೋಟೇಲು, ಪ್ರವಾಸೋದ್ಯಮ, ಬ್ಯಾಂಕಿಂಗ್, ಮನೆ – ನಿವೇಶನ ವ್ಯವಹಾರ, ಆಡಳಿತ ಮತ್ತು ಇತರೆ ಸೇವಾ ಚಟುವಟಿಕೆಗಳನ್ನು ಒಳಗೊಂಡಿದೆ.

ಆರ್ಥಿಕ ರಚನೆಯ ಬದಲಾವಣೆ ನೆಲೆಗಳು

ಕೋಲಿನ್ ಕ್ಲಾಕ್, ಸೈಮನ್ ಕುಜ್ನೇಟ್ಸ್ ಮುಂತಾದ ಅರ್ಥಶಾಸ್ತ್ರಜ್ಞರು ಪ್ರತಿಪಾದಿಸಿದ ಹಾಗೂ ತಮ್ಮ ಎಂಪರಿಕಲ್ ಅಧ್ಯಯನಗಳಿಂದ ಕಂಡುಕೊಂಡ ಬಹು ಮುಖ್ಯ ತಥ್ಯಗಳನ್ನು ಹೀಗೆ ಮಂಡಿಸಬಹುದಾಗಿದೆ.

೧. ಅಭಿವೃದ್ಧಿಯ ಆರಂಭದ ಹಂತದಲ್ಲಿ ಪ್ರಾಥಮಿಕ ವಲಯವು ಆರ್ಥಿಕತೆಯಲ್ಲಿ ಪ್ರಧಾನ ಸ್ಥಾನಮಾನ ಪಡೆದಿರುತ್ತದೆ. ಈ ಹಂತದಲ್ಲಿ ದ್ವತೀಯ ವಲಯ ಮತ್ತು ತೃತೀಯ ವಲಯಗಳು ಶೈಶಾವಸ್ಥೆಯಲ್ಲಿರುತ್ತವೆ. ವರಮಾನದ ಸಿಂಹಪಾಲು ಮತ್ತು ದುಡಿಯುವ ವರ್ಗದ ಹೆಚ್ಚಿ ಭಾಗ ಪ್ರಾಥಮಿಕ ವಲಯದಲ್ಲಿರುತ್ತದೆ.

೨. ಅಭಿವೃದ್ಧಿಯ ಗತಿ ಉತ್ತಮವಾದಂತೆ, ಅಭಿವೃದ್ಧಿಯ ಮಟ್ಟ ಉನ್ನತವಾದಂತೆ ದುಡಿಯುವ ವರ್ಗವು ಪ್ರಾಥಮಿಕ ವಲಯದಿಂದ ದ್ವಿತೀಯ ವಲಯಕ್ಕೆ, ತದನಂತರ ತೃತೀಯ ವಲಯಕ್ಕೆ ವರ್ಗಾವಣೆಯಾಗತೊಡಗುತ್ತದೆ. ಪ್ರಾಥಮಿಕ ವಲಯದಿಂದ ಹರಿದು ಬರುವ ವರಮಾನದ ಪ್ರಮಾಣವು ಕಡಿಮೆಯಾಗಿ ದ್ವಿತೀಯ ಮತ್ತು ತೃತೀಯ ವಲಯಗಳಿಂದ ಪ್ರಾಪ್ತವಾಗುವ ವರಮಾನದ ಪ್ರಮಾಣ ಅಧಿಕಗೊಳ್ಳುತ್ತದೆ.

ಹೀಗೆ ವರಮಾನ ಮತ್ತು ದುಡಿಯುವ ವರ್ಗ ಇವುಗಳ ವಲಯವಾರು ಸ್ಥಾನ – ಮಾನ ಪಾತ್ರಗಳು ಅಂದರೆ ಆರ್ಥಿಕ ರಚನೆ ಸ್ವರೂಪವು ಅಭಿವೃದ್ಧಿಯ ಗತಿಯಲ್ಲಾಗುವ ಬದಲಾವಣೆಯೊಂದಿಗೆ ಪರಿವರ್ತನೆಯಾಗುತ್ತಿರುತ್ತದೆ. ಅಭಿವೃದ್ಧಿಯ ಗತಿ ಉತ್ತಮಗೊಂಡಂತೆ ಕೃಷಿ, ಅರಣ್ಯಗಾರಿಕೆ, ಗಣಿಗಾರಿಕೆ, ಪಶುಪಾಲನೆ, ಬೇಟೆ ಮುಂತಾದವು. ಅಂದರೆ ಪ್ರಾಚೀನ ಸ್ವರೂಪದ ಚಟುವಟಿಕೆಗಳು ತಮ್ಮ ಮಹತ್ವ ಕಳೆದುಕೊಳ್ಳುತ್ತವೆ. ಕೈಗಾರಿಕೆ, ಯಂತ್ರೋದ್ಯಮ, ಸಾರಿಗೆ, ಬ್ಯಾಂಕಿಂಗ್, ವ್ಯಾಪಾರ, ವಾಣಿಜ್ಯ ಮುಂತಾದವು ಮಹತ್ವವನ್ನು ಪಡೆದುಕೊಂಡು ಬಿಡುತ್ತವೆ. ಈ ಬಗೆಯ ಬದಲಾವಣೆಯಿಂದಾಗಿ ವರಮಾನ ಮತ್ತು ದುಡಿಯುವ ವರ್ಗ – ಇವುಗಳಲ್ಲಿ ದ್ವಿತೀಯ ವಲಯದ, ತೃತೀಯ ವಲಯದ ಪಾಲು ಅಧಿಕಗೊಳ್ಳುತ್ತಾ ನಡೆಯುತ್ತದೆ.

ಕೊಪ್ಪಳ ಜಿಲ್ಲೆಯ ಆರ್ಥಿಕ ರಚನೆ

ಒಂದು ಪ್ರದೇಶದ ಆರ್ಥಿಕ ರಚನೆ ಸ್ವರೂಪವನ್ನು ಗುರುತಿಸಲು ನಮಗೆ ಮುಖ್ಯವಾಗಿ ಎರಡು ಸಂಗತಿಗಳು ಬೇಕಾಗುತ್ತವೆ. ಮೊದಲನೆಯದಾಗಿ ವಲಯವಾರು ದುಡಿಯುವ ವರ್ಗದ ಹಂಚಿಕೆಗೆ ಸಂಬಂಧಿಸಿದ ಮಾಹಿತಿ. ಇದು ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಜನಗಣತಿ ವರದಿಗಳಲ್ಲಿ ದೊರೆಯುತ್ತದೆ. ಎರಡನೆಯದಾಗಿ ವಲಯವಾರು ವರಮಾನದ ಹಂಚಿಕೆ. ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಇದು ದೊರೆಯುವುದಿಲ್ಲ. ಕರ್ನಾಟಕದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವು ‘ನಿವ್ವಳ ಜಿಲ್ಲಾ ಆಂತರಿಕ ಉತ್ಪನ್ನ’ (ಎನ್ ಡಿ ಡಿ ಪಿ)ದ ವಲಯವಾರು ಸ್ವರೂಪದ ವಿವರಗಳನ್ನು ಸಿದ್ಧಪಡಿಸುತ್ತಿದೆ ಮತ್ತು ಪ್ರಕಟಿಸುತ್ತಿದೆ. ಜಿಲ್ಲೆಯ ಮಟ್ಟದಲ್ಲಿ ಮಾತ್ರ ಇದು ನಡೆಯುತ್ತಿದೆ ವಿನಾ ತಾಲ್ಲೂಕು ಮಟ್ಟದಲ್ಲಿ ಇದು ನಡೆಯುತ್ತಿಲ್ಲ. ಈ ಕಾರಣದಿಂದಾಗಿ ಕರ್ನಾಟಕದ ಏಳು ಹೊಸ ಜಿಲ್ಲೆಗಳಿಗೆ ಸಂಬಂಧಿಸಿದಂತೆ ನಿರ್ದೇಶನಾಲಯವು ವರಮಾನದ ವಿವರಗಳನ್ನು ಸಿದ್ಧಪಡಿಸಿಲ್ಲ. ತಾಲ್ಲೂಕು ಮಟ್ಟದಲ್ಲಿ ಇಂತಹ ವಿವರ ದೊರೆಯುವುದಿಲ್ಲ.

ಕೊಪ್ಪಳ ಜಿಲ್ಲೆಯ ನಿವ್ವಳ ಆಂತರಿಕ ಉತ್ಪನ್ನ

ನಮ್ಮ ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ದ ಉದ್ದೇಶಕ್ಕಾಗಿ ಕೊಪ್ಪಳ ಜಿಲ್ಲೆಯ ‘ನಿವ್ವಳ ಆಂತರಿಕ ಉತ್ಪನ್ನ’ವನ್ನು ಪರೋಕ್ಷ ವಿಧಾನದಿಂದ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ. ಅವಿಭಜಿತ ರಾಯಚೂರು ಜಿಲ್ಲೆಯ ೧೯೯೫ – ೯೬ರ ಪ್ರತಿ ತಲಾ ನಿವ್ವಳ ಆಂತರಿಕ ಉತ್ಪನ್ನದಿಂದ ಕೊಪ್ಪಳ ಜಿಲ್ಲೆಯ ೧೯೯೫ರ ಜನಸಂಖ್ಯೆಯನ್ನು ಗುಣಿಸುವುದರ ಮೂಲಕ ಹೊಸ ಜಿಲ್ಲೆಯ ನಿವ್ವಳ ಆಂತರಿಕ ಉತ್ಪನ್ನವನ್ನು ಕಂಡುಕೊಂಡಿದ್ದೇವೆ. ಇದೇ ರೀತಿ ವಿಭಜಿತ ರಾಯಚೂರು ಜಿಲ್ಲೆಯ ಆಂತರಿಕ ಉತ್ಪನ್ನ ಮತ್ತು ವಿಭಜಿತ ರಾಯಚೂರು ಜಿಲ್ಲೆಯ ನಿವ್ವಳ ಆಂತರಿಕ ಉತ್ಪನ್ನಗಳ ಮೊತ್ತವು ಅವಿಭಜಿತ ರಾಯಚೂರು ಜಿಲ್ಲೆಯ ನಿವ್ವಳ ಆಂತರಿಕ ಉತ್ಪನ್ನಕ್ಕೆ ಸಮನಾಗಿರುತ್ತದೆ. ಅವಿಭಜಿತ ರಾಯಚೂರು ಜಿಲ್ಲೆಯ ನಿವ್ವಳ ಅಂತರಿಕ ಉತ್ಪನ್ನದ ವಲಯವಾರು ಸ್ಥಾನಮಾನವನ್ನೇ ಕೊಪ್ಪಳ ಜಿಲ್ಲೆಯ ವಲಯವಾರು ಸ್ವರೂಪಕ್ಕೂ ಅಳವಡಿಸಿಕೊಳ್ಳಲಾಗಿದೆ. ಈ ರೀತಿಯಲ್ಲಿ ಕೊಪ್ಪಳ ಜಿಲ್ಲೆಯ ವರಮಾನದ ವಲಯವಾರು ಸ್ವರೂಪವನ್ನು ರೂಪಿಸಲಾಗಿದೆ. ಕೊಪ್ಪಳ ಜಿಲ್ಲೆಯ ವರಮಾನ ಹಾಗೂ ದುಡಿಯುವ ವರ್ಗ – ಇವುಗಳ ವಲಯವಾರು ಸ್ಥಾನಮಾನದ ಚಿತ್ರವನ್ನು ಕೋಷ್ಟಕ ೫.೧ ರಲ್ಲಿ ನೀಡಲಾಗಿದೆ.

ಕೋಷ್ಟಕ ೫.೧ ರಲ್ಲಿ ಕೊಪ್ಪಳ ಜಿಲ್ಲೆ, ವಿಭಜಿತ ರಾಯಚೂರು ಜಿಲ್ಲೆ ಹಾಗೂ ಅವಿಭಜಿತ ರಾಯಚೂರು ಜಿಲ್ಲೆಗಳ ವರಮಾನ ಮತ್ತು ದುಡಿಯುವ ವರ್ಗಗಳ ವಲಯವಾರು ಸ್ಥಾನಮಾನಗಳನ್ನು ತೋರಿಸಲಾಗಿದೆ. ತುಲನಾತ್ಮಕ ಅಧ್ಯಯನಕ್ಕೆ ಅನುಕೂಲವಾಗುವಂತೆ ಅವಿಭಜಿತ ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ ೧೯೮೦ – ೮೧ರ ವರಮಾನ ಮತ್ತು ದುಡಿಯುವ ವರ್ಗಗಳ ವಲಯವಾರು ಹಂಚಿಕೆಯನ್ನು ಕೋಷ್ಟರ – ೫.೨ ರಲ್ಲಿ ನೀಡಿದೆ.

೧೯೮೧ ಮತ್ತು ೧೯೯೧ – ಇವೆರಡು ಕಾಲಘಟ್ಟಗಳಲ್ಲಿ ರಾಯಚೂರು ಜಿಲ್ಲೆಯ ಆರ್ಥಿಕ ರಚನೆ ಸ್ವರೂಪದ ಆಧಾರದ ಮೇಲೆ ಆ ಜಿಲ್ಲೆ ಪ್ರಾಥಮಿಕ ವಲಯವನ್ನು ಪ್ರಧಾನವಾಗಿ ಹೊಂದಿರುವ ಜಿಲ್ಲೆ ಎಂದು ಹೇಳಬಹುದು. ದ್ವಿತೀಯ ವಲಯದ ಸ್ಥಾನಮಾನ ಆನುಷಂಗಿಕವಾಗಿರುವುದನ್ನು ಕೋಷ್ಟಕದಲ್ಲಿ ನೋಡಬಹುದು. ಈ ಜಿಲ್ಲೆಯ ಆರ್ಥಿಕ ರಚನೆಯಲ್ಲಿ ತೃತೀಯ ವಲಯವು ಎರಡನೆಯ ಸ್ಥಾನಮಾನದಲ್ಲಿದೆ. ೧೯೮೧ರಲ್ಲಿ ರಾಯಚೂರು ಜಿಲ್ಲೆಯ ವರಮಾನದಲ್ಲಿ ಶೇ. ೬೧.೭೩ ರಷ್ಟು ಮತ್ತು ದುಡಿಯುವ ವರ್ಗದಲ್ಲಿ ಶೇ. ೮೧.೮೯ ರಷ್ಟು ಪ್ರಾಥಮಿಕ ವಲಯದಲ್ಲಿ ನೆಲೆಗೊಂಡಿದ್ದನ್ನು ನೋಡಬಹುದಾಗಿದೆ. ಜಿಲ್ಲೆಯ ವರಮಾನದ ಶೇ. ೧೨.೩೩ ರಷ್ಟು ಮತ್ತು ದುಡಿಯುವ ವರ್ಗದಲ್ಲಿ ಕೇವಲ ಶೇ. ೭.೭೯ ರಷ್ಟು ದ್ವಿತೀಯ ವಲಯದಲ್ಲಿ ನೆಲೆಗೊಂಡಿದ್ದುದು ಕೋಷ್ಟಕದಿಂದ ಸ್ಷಷ್ಟವಾಗುತ್ತದೆ. ವರಮಾನ ಹಾಗೂ ದುಡಿಯುವ ವರ್ಗಗಳ ಸ್ಥಾನ ಮಾನದ ದೃಷ್ಟಿಯಿಂದ ರಾಯಚೂರು ಜಿಲ್ಲೆಯ ತೃತೀಯ ವಲಯದ ಸ್ಥಾನವು ದ್ವಿತೀಯ ವಲಯದ ಸ್ಥಾನಕ್ಕಿಂತ ಉತ್ತಮವಾಗಿದೆ.

೧೯೯೦ ದಶಕದಲ್ಲಿ ರಾಯಚೂರು ಜಿಲ್ಲೆಯ ಆರ್ಥಿಕ ರಚನೆಯು ಅನೇಕ ಬಗೆಯ ಬದಲಾವಣೆಗೆ ಒಳಗಾಗಿದೆ. ೧೯೯೫ – ೯೬ ರಲ್ಲಿ ಕೊಪ್ಪಳ ಜಿಲ್ಲೆಯ ಒಟ್ಟು ವರಮಾನ ರೂ. ೭೯೮.೧೮ ಕೋಟಿ. ಇದರಲ್ಲಿ ಶೇ. ೫೩ ರಷ್ಟು ಪ್ರಾಥಮಿಕ ವಲಯದಿಂದ ಶೇ. ೧೨.೩ ರಷ್ಟು ದ್ವಿತೀಯ ವಲಯದಿಂದ ಮತ್ತು ಶೇ. ೩೪.೭೦ ರಷ್ಟು ತೃತೀಯ ವಲಯದಿಂದ ಪ್ರಾಪ್ತವಾಗುತ್ತದೆ. ಅರ್ಧಕ್ಕಿಂತಲೂ ಹೆಚ್ಚಿನ ವರಮಾನವು ಪ್ರಾಥಮಿಕ ವಲಯದಿಂದ ಹರಿದು ಬರುತ್ತಿದೆ. ಇದರಿಂದಾಗಿ ಕೊಪ್ಪಳ ಜಿಲ್ಲೆಯ ಪ್ರಾಥಮಿಕ ವಲಯವನ್ನು ಪ್ರಧಾನವಾಗಿ ಹೊಂದಿರುವ ಜಿಲ್ಲೆಯೆಂದು ಹೇಳಬಹುದು.

ಕೊಪ್ಪಳ ಜಿಲ್ಲೆಯ ೧೯೯೧ ರ ಒಟ್ಟು ದುಡಿಯುವ ವರ್ಗದ ಪ್ರಮಾಣ ೪.೧೫ ಲಕ್ಷ. ಇದರಲ್ಲಿ ಶೇ. ೮೨.೨೮ ರಷ್ಟು ಪ್ರಾಥಮಿಕ ವಲಯದಲ್ಲಿ ದುಡಿಯುತ್ತಿದ್ದರೆ ಶೇ. ೫.೬೬ ರಷ್ಟು ದ್ವಿತೀಯ ವಲಯದಲ್ಲೂ ಮತ್ತು ಶೇ. ೧೨.೦೬ ರಷ್ಟು ತೃತೀಯ ವಲಯದಲ್ಲೂ ದುಡಿಯುತ್ತಿದೆ. ಈ ಜಿಲ್ಲೆಯಲ್ಲಿ ದುಡಿಯುವ ವರ್ಗವು ಅತಿ ಹೆಚ್ಚಾಗಿ ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿರುವುದು ಸ್ಪಷ್ಟವಾಗಿದೆ. ೧೯೮೦ – ೮೧ ರಲ್ಲಿ ರಾಯಚೂರು ಜಿಲ್ಲೆಯಲ್ಲಿ ದುಡಿಯುವ ವರ್ಗದ ಶೇ. ೮೧.೮೯ ರಷ್ಟು ಪ್ರಾಥಮಿಕ ವಲಯದಲ್ಲಿತ್ತು. ೧೯೯೦ – ೯೧ ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪ್ರಾಥಮಿಕ ವಲಯದಲ್ಲಿ ದುಡಿಯುತ್ತಿರುವವರ ಪ್ರಮಾಣ ಇಲ್ಲಿ ಅಧಿಕವಾಗಿರುವುದನ್ನು ಒಪ್ಪಿಕೊಳ್ಳದೆ ಇದ್ದರೂ, ಅದು ಉನ್ನತ ಮಟ್ಟದಲ್ಲಿ ಸ್ಥಿರವಾಗುಳಿದಿರುವುದನ್ನು ಒಪ್ಪಿಕೊಳ್ಳಬಹುದಾಗಿದೆ. ೧೯೮೧ ರಿಂದ ೧೯೯೧ರ ಅವಧಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿರುವ ದುಡಿಯುವ ವರ್ಗದ ಪ್ರಮಾಣ ಕಡಿಮೆಯಾಗಿಲ್ಲ. ಇದು ಕೇವಲ ಆಶ್ಚರ್ಯ ಹುಟ್ಟಿಸುವ ಸಂಗತಿಯಷ್ಟೆ ಅಲ್ಲ. ಇದು ಆತಂಕವನ್ನು ಹುಟ್ಟಿಸುವ ಸಂಗತಿಯಾಗಿದೆ.

ದ್ವಿತೀಯ ವಲಯಕ್ಕೆ ಸಂಬಂಧಿಸಿದಂತೆ ಉಂಟಾಗುತ್ತಿರುವ ಬದಲಾವಣೆ ಸ್ವರೂಪವು ಆಶಾದಾಯಕವಾಗಿಲ್ಲ. ೧೯೮೧ – ೯೧ರ ಕಾಲಾವಧಿಯಲ್ಲಿ ವರಮಾನದಲ್ಲಿ ದ್ವಿತೀಯ ವಲಯ ಪ್ರಮಾಣವು ಶೇ. ೧೨.೩೩ ರಲ್ಲಿ ಸ್ಥಿರವಾಗಿದೆ. ಇದಕ್ಕಿಂತ ಮುಖ್ಯವಾಗಿ ಈ ವಲಯದಲ್ಲಿ ದುಡಿಯುತ್ತಿರುವ ದುಡಿಯುವ ವರ್ಗದ ಪ್ರಮಾಣವು ಕಳೆದ ದಶಕದಲ್ಲಿ ಶೇ. ೭.೭೯ ರಿಂದ ಶೇ. ೫.೬೬ ಕ್ಕೆ ಇಳಿದಿರುವುದು ಆತಂಕಕ್ಕೆ ಕಾರಣವಾಗಿದೆ. ಒಂದು ಪ್ರದೇಶದ ಆರ್ಥಿಕತೆಯು ಅಭಿವೃದ್ಧಿ ಪಥದಲ್ಲಿ ಮುಂದುವರಿದಂತೆ ದ್ವಿತೀಯ ವಲಯವು ವರಮಾನ ಮತ್ತು ದುಡಿಯುವ ವರ್ಗ – ಇವರೆಡರಲ್ಲಿನ ಪಾಲಿನ ದೃಷ್ಟಿಯಿಂದಲೂ ತೀವ್ರಗತಿಯಲ್ಲಿ ಬೆಳೆಯಬೇಕಾದುದು ಸಹಜ. ಆರ್ಥಿಕತೆಯ ದುಡಿಯುವ ವರ್ಗದ ಹೆಚ್ಚು ಭಾಗವನ್ನು ದ್ವಿತೀಯ ವಲಯವು ಸೆಳೆದುಕೊಳ್ಳಬೇಕು. ಆದರೆ ರಾಯಚೂರು – ಕೊಪ್ಪಳ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಈ ವಲಯದಲ್ಲಿನ ದುಡಿಯುವ ವರ್ಗದ ಪ್ರಮಾಣ ಕಡಿಮೆಯಾಗುತ್ತಿರುವುದು ಗಂಭೀರ ಸಂಗತಿಯಾಗಿದೆ.

ತೃತೀಯ ವಲಯವು ದ್ವಿತೀಯ ವಲಯವನ್ನು ಹಿಂದೆ ಹಾಕಿ ವೇಗವಾಗಿ ಬೆಳೆಯುತ್ತಿದೆ. ವರಮಾನ ಮತ್ತು ದುಡಿಯುವ ವರ್ಗ ಇವೆರಡರದಲ್ಲಿಯೂ ತೃತೀಯ ವಲಯದ ಪಾಲು ಅಧಿಕಗೊಳ್ಳುತ್ತಿದೆ. ಕಳೆದ ದಶಕದಲ್ಲಿ ತೃತೀಯ ವಲಯದ ಪ್ರಮಾಣವು ವರಮಾನಕ್ಕೆ ಸಂಬಂಧಿಸಿದಂತೆ ಶೇ. ೨೫.೯೪ ರಿಂದ ಶೇ.೩೪.೭೦ ಕ್ಕೂ ಮತ್ತು ದುಡಿಯುವ ವರ್ಗದಲ್ಲಿ ಪಾಲು ಶೇ. ೧೦.೩೨ ರಿಂದ ಶೇ. ೧೩.೦೬ ಕ್ಕೂ ಏರಿಕೆಯಾಗಿದೆ. ಕೊಲಿನ್ ಕ್ಲಾರ್ಕ್‌, ಸೈಮನ್ ಕುಜ್ನೇಟ್ಸ್ ಮುಂತಾದವರು ಗುರುತಿಸಿರುವಂತೆ ಪ್ರಾಥಮಿಕ ವಲಯದ ಪ್ರಾಮುಖ್ಯತೆ ಕಡಿಮೆಯಾದ ಮೇಲೆ ದ್ವಿತೀಯ ವಲಯವು ಪ್ರಧಾನ ಸ್ಥಾನಮಾನ ಪಡೆಯಬೇಕು.

ನಂತರ ಮೂರನೆಯ ಹಂತದಲ್ಲಿ ದ್ವಿತೀಯ ವಲಯವನ್ನು ಪಲ್ಲಟಗೊಳಿಸಿ ತೃತೀಯ ವಲಯವು ಪ್ರಧಾನ ಸ್ಥಾನವನ್ನು ಪಡೆದುಕೊಳ್ಳಬೇಕು. ಆದರೆ, ಕೊಪ್ಪಳ ಜಿಲ್ಲೆಯ ಆರ್ಥಿಕ ರಚನೆಯಲ್ಲಿನ ಬದಲಾವಣೆಗಳು ನಿರೀಕ್ಷಿಸಿದ ಪರಿಯಲ್ಲಿ ನಡೆಯುತ್ತಿಲ್ಲ. ಪ್ರಾಥಮಿಕ ವಲಯವನ್ನು ಪಲ್ಲಟಗೊಳಿಸಿ ತೃತೀಯ ವಲಯವು ಪ್ರವರ್ಧಮಾನಕ್ಕೆ ಬರುತ್ತಿದೆ.

ತೃತೀಯ ವಲಯದ ಆತಂಕಕಾರಿ ಬೆಳವಣಿಗೆ

ಆರ್ಥಿಕ ರಚನೆಯಲ್ಲಿ ಪ್ರಾಥಮಿಕ ವಲಯದಲ್ಲಿ ಪ್ರಾಪ್ತವಾಗುವ ವರಮಾನದ ಪ್ರಮಾಣವು ಕಡಿಮೆಯಾಗಿ, ದ್ವಿತೀಯ ವಲಯದ ಸ್ಥಾನ ಸ್ಥಿರವಾಗಿದ್ದು ಅಥವಾ ಕಡಿಮೆಯಾಗಿ ತೃತೀಯ ವಲಯದಲ್ಲಿ ‘ಪ್ರಾಪ್ತವಾಗುವ ಪ್ರಮಾಣ ತೀವ್ರಗತಿಯಲ್ಲಿ ಬೆಳವಣಿಗೆ ತೋರುತ್ತಿದ್ದರೆ, ಅದು ಆರ್ಥಿಕತೆಯ ದೀರ್ಘಾವಧಿ ಬೆಳವಣಿಗೆ ದೃಷ್ಟಿಯಿಂದ ಆರೋಗ್ಯಕಾರಿ ಪ್ರವೃತ್ತಿಯಾಗಿ ಕಾಣುವುದಿಲ್ಲ. ಪ್ರಾಥಮಿಕ ಮತ್ತು ದ್ವಿತೀಯ ವಲಯಗಳು ವಸ್ತುರೂಪಿ ಉತ್ಪನ್ನಗಳನ್ನು ಅಂದರೆ ವರಮಾನವನ್ನು – ಬಂಡವಾಳ ಸರಕುಗಳನ್ನು ಉತ್ಪಾದಿಸುವ ವಲಯಗಳಾಗಿವೆ ಆರ್ಥಿಕತೆಯ ದೀರ್ಘಾವಧಿ ಬೆಳವಣಿಗೆ ದೃಷ್ಟಿಯಿಂದ ಇದು ತುಂಬಾ ಮುಖ್ಯವಾದುದಾಗಿದೆ. ತೃತೀಯ ವಲಯವು ಅಮೂರ್ತರೂಪದ ‘ಸೇವೆ’ಗಳನ್ನು ಸೃಷ್ಟಿಸುವ ವಲಯವಾಗಿದೆ. ಈ ವಲಯವು ಮುಖ್ಯವಾಗಿ ವರಮಾನವನ್ನು ‘ಸ್ವೀಕರಿಸುವ’, ‘ಗಳಿಸುವ’, ವಲಯ ಮಾತ್ರವಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ತೃತೀಯ ವಲಯವು ವರಮಾನ ಮತ್ತು ದುಡಿಯುವ ವರ್ಗಗಳೆರಡರ ದೃಷ್ಟಿಯಿಂದಲೂ ಬೆಳೆಯುತ್ತಿದೆ. ಪ್ರಾಥಮಿಕ ಮತ್ತು ದ್ವಿತೀಯ ವಲಯಗಳಿಗಿಂತ ಅತಿವೇಗವಾಗಿ ತೃತೀಯ ವಲಯವು ಬೆಳೆಯುತ್ತಿದೆ. ೧೯೮೧ – ೯೧ರ ದಶಕದಲ್ಲಿ ದ್ವಿತೀಯ ವಲಯದಲ್ಲಿ ಕಡಿತವಾದ ದುಡಿಯುವ ವರ್ಗವು ತೃತೀಯ ವಲಯಕ್ಕೆ ಸಾಗಿಹೋಗಿದೆ. ದ್ವಿತೀಯ ವಲಯದಲ್ಲಿ ದುಡಿಯುವ ವರ್ಗದ ಪ್ರಮಾಣ ಶೇ. ೨.೧೩ ರಷ್ಟು ತೃತೀಯ ವಲಯಕ್ಕೆ ವರ್ಗಾವಣೆಯಾಗಿದೆ. ದುಡಿಯುವ ವರ್ಗದ ದೃಷ್ಟಿಯಿಂದ ತೃತೀಯ ವಲಯವು ಮಾತ್ರ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಇಂತಹ ಬೆಳವಣಿಗೆಯು ಕೇವಲ ‘ಹುಸಿ’ ರೂಪದ ಬೆಳವಣಿಗೆಯಾಗಿರುತ್ತದೆ ವಿನಾ ಗಟ್ಟಿಯಾದ ಬೆಳವಣಿಗೆಯಾಗಿರುವುದಿಲ್ಲ.

ಏಕರೂಪಿ ಆರ್ಥಿಕ ರಚನೆ

ಕೊಪ್ಪಳ ಜಿಲ್ಲೆಯ ಆರ್ಥಿಕ ರಚನೆಯ ವರಮಾನ ಸ್ವರೂಪವು ಮಾತ್ರ ತೀವ್ರ ರೀತಿಯ ಬದಲಾವಣೆಗೆ ಒಳಗಾಗಿದೆ. ಆದರೆ ದುಡಿಯುವ ವರ್ಗದ ವಲಯವಾರು ರಚನೆಯು ಮಾತ್ರ ತೀವ್ರವಾಗಿ ಬದಲಾಗುತ್ತಿಲ್ಲ. ದುಡಿಯುವ ವರ್ಗದ ವಲಯವಾರು ಸಾಪೇಕ್ಷ ಸ್ಥಾನಮಾನದ ದೃಷ್ಟಿಯಿಂದ ಕೊಪ್ಪಳ ಜಿಲ್ಲೆಯು ‘ಏಕರೂಪಿ ಆರ್ಥಿಕ ರಚನೆ’ಯನ್ನು (Non – diversified Economic Structure) ಹೊಂದಿದೆ ಎಂದು ಹೇಳಬಹುದು. ಈ ಜಿಲ್ಲೆಯಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ಅವಲಂಬಿಸಿಕೊಂಡಿಉರವ ದುಡಿಯುವ ವರ್ಗದ ಪ್ರಮಾಣ ಕೇವಲ ಶೇ. ೧೯.೩೫. ಉಳಿದಂತೆ ಶೇ. ೮೧.೬೫ ರಷ್ಟು ದುಡಿಯುವ ವರ್ಗವು ಕೃಷಿಯನ್ನು ಅವಲಂಬಿಸಿಕೊಂಡಿದೆ. ಈ ಬಗೆಯ ಏಕರೂಪಿ ಆರ್ಥಿಕ ರಚನೆಯ ಅಸ್ತಿತ್ವವು ಜಿಲ್ಲೆಯ ಅಭಿವೃದ್ಧಿಯು ಮಂದಗತಿಯಲ್ಲಿ ನಡೆಯುತ್ತಿರುವುದರ ಸೂಚನೆಯಾಗಿದೆ. ಕೃಷಿಯೇತರ ಚಟುವಟಿಕೆಗಳು ವಿಸ್ತರಣೆಯಾಗುತ್ತಿಲ್ಲ. ವಿಸ್ತರಣೆಯಾಗುತ್ತಿದ್ದರೆ ಸಾರಿಗೆ – ವ್ಯಾಪಾರ – ಆಡಳಿತಗಳನ್ನು ಒಳಗೊಂಡ ತೃತೀಯ ವಲಯವು ಬೆಳೆಯುತ್ತಿದೆ.

ಕೊಪ್ಪಳ ಜಿಲ್ಲೆಯ ದುಡಿಯುವ ವರ್ಗದಲ್ಲಿ ಶೇ. ೪೬.೩೬ ರಷ್ಟು ಕೃಷಿ ಕಾರ್ಮಿಕರಿದ್ದಾರೆ. ಕೃಷಿ ಕಾರ್ಮಿಕರಲ್ಲಿ ಅರ್ಧಕ್ಕಿಂತ ಅಧಿಕ ಮಹಿಳೆಯರಿದ್ದಾರೆ. ರಾಜ್ಯ ಮಟ್ಟದಲ್ಲಿನ ಒಟ್ಟು ದುಡಿಯುವ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಕೇವಲ ಶೇ. ೨೮.೯೨. ರಾಜ್ಯದಲ್ಲಿ ಕೃಷಿ ಕಾರ್ಮಿಕರನ್ನು ಅತ್ಯಧಿಕ ಪ್ರಮಾಣದಲ್ಲಿ ಹೊಂದಿರುವ ಜಿಲ್ಲೆ ಕೊಪ್ಪಳ.

ಕೊಪ್ಪಳ ಜಿಲ್ಲೆ, ವಿಭಜಿತ ರಾಯಚೂರು ಹಾಗೂ ಅವಿಭಜಿತ ರಾಯಚೂರು ಜಿಲ್ಲೆಗಳ ತ್ರಿವಲಯ ಆರ್ಥಿಕ ರಚನೆ
ಕೋಷ್ಟಕ.

ವರಮಾನ: ೧೯೯೫ – ೯೬. ಚಾಲ್ತಿ ಬೆಲೆಗಳು (ಕೋಟಿ ರೂಪಾಯಿಗಳಲ್ಲಿ) ದುಡಿಮೆಗಾರ ವರ್ಗ: ಲಕ್ಷಗಳಲ್ಲಿ  ೧೯೯೦.೯೧

ಜಿಲ್ಲೆಗಳು

ಪ್ರಾಥಮಿಕ ವಲಯ

ದ್ವಿತೀಯ ವಲಯ

ತೃತೀಯ ವಲಯ

ಜಿಲ್ಲಾ ಆರ್ಥಿಕ ರಚನೆ

ವರಮಾನ

ದುಡಿಮೆಗಾರ ವರ್ಗ

ವರಮಾನ

ದುಡಿಮೆಗಾರ ವರ್ಗ

ವರಮಾನ

ದುಡಿಮೆಗಾರ ವರ್ಗ

ವರಮಾನ

ದುಡಿಮೆಗಾರ ವರ್ಗ

ಕೊಪ್ಪಳ

೪೨೩.೦೩

(೫೩)

೩.೪೨

(೮೨.೨೮)

೯೮.೧೮

(೧೨.೩)

೦.೨೩

(೫.೬೬)

೨೭೬.೯೭

(೩೪.೭)

೦.೫೦

(೧೨.೦೬)

೭೯೮.೧೮

(೧೦೦.೦೦)

೪.೧೫

(೧೦೦.೦೦)

(ವಿಭಜಿತ)

೫೯೬.೮೧

೪.೫೨

೧೩೮.೫೦

೦.೧೯

೩೯೦.೭೪

೦.೮೪

೧೧೨೬.೦೫

೫.೫೫

ರಾಯಚೂರು

(೫೩)

(೮೧.೩೭)

(೧೨.೩)

(೩.೪೧)

(೩೪.೭)

(೧೫.೨೨)

(೧೦೦.೦೦)

(೧೦೦.೦೦)

(ಅವಿಭಜಿತ)

೧೦೨೦

೭.೯೪

೨೩೭.೬

೦.೪೨

೬೬೮

೧.೩೫

೧೯೨೪

೯.೭೧

ರಾಯಚೂರು

(೫೩)

(೮೧.೭೬)

(೧೨.೩)

(೪.೩೭)

(೩೪.೭)

(೧೩.೮೭)

(೧೦೦.೦೦)

(೧೦೦.೦೦)

ಮೂಲ: ವರಮಾನ: ಅನುಬಂಧ: ಕೋಷ್ಟಕ ಸಂಖ್ಯೆ .೧೦ ಮತ್ತು .೧೧
ದುಡಿಮೆಗಾರ ವರ್ಗ: ಅನುಬಂಧ ಕೋಷ್ಟಕ ಸಂಖ್ಯೆ . ಮತ್ತು .

ಅವಿಭಜಿತ ರಾಯಚೂರು ಜಿಲ್ಲೆಯ ತ್ರಿವಲಯ ಆರ್ಥಿಕ ರಚನೆ: ೧೯೮೦೮೧
ಕೋಷ್ಟಕ.

ಜಿಲ್ಲೆ

ಪ್ರಾಥಮಿಕ ವಲಯ

ದ್ವಿತೀಯ ವಲಯ

ತೃತೀಯ ವಲಯ

ಜಿಲ್ಲಾ ಆರ್ಥಿಕ ರಚನೆ

ವರಮಾನ

ದುಡಿಮೆಗಾರ ವರ್ಗ

ವರಮಾನ

ದುಡಿಮೆಗಾರ ವರ್ಗ

ವರಮಾನ

ದುಡಿಮೆಗಾರ ವರ್ಗ

ವರಮಾನ

ದುಡಿಮೆಗಾರ ವರ್ಗ

ಅವಿಭಜಿತ

೧೫೮.೦೪

೬.೪೧

೩೧.೫೭

೦.೬೧

೬೬.೪೧

೦.೮೧

೨೫೬.೦೨

೭.೮೩

ರಾಯಚೂರು

(೬೧.೭೩)

(೮೧.೮೯)

(೧೨.೩೩)

(೭.೭೯)

(೨೫.೯೪)

(೧೦.೩೨)

(೧೦೦.೦೦)

(೧೦೦.೦೦)

ಇವೆರಡು ಸಂಗತಿಗಳು – ಅಂದರೆ ದುಡಿಯುವ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣವು ರಾಜ್ಯ ಸರಾಸರಿಗಿಂತ ಅಧಿಕ ಮಟ್ಟದಲ್ಲಿರುವುದು ಮತ್ತು ಕೃಷಿ ಕಾರ್ಮಿಕರಲ್ಲಿ ಅರ್ಧಕ್ಕಿಂತ ಅಧಿಕ ಪ್ರಮಾಣದಲ್ಲಿ ಮಹಿಳೆಯರು ಇರುವುದು ಇವೆರಡು ಒಂದು ಮುಖ್ಯ ಸಂಗತಿಯನ್ನು ಅತ್ಯಂತ ಸ್ಪಷ್ಟವಾಗಿ ತೋರಿಸುತ್ತಿದೆ. ಅದೇನೆಂದರೆ ಕೊಪ್ಪಳ ಜಿಲ್ಲೆಯಲ್ಲಿ ಬಡತನದ ತೀವ್ರತೆಯು ಅತಿಯಾಗಿದೆ. ಈ ಜಿಲ್ಲೆಯಲ್ಲಿನ ಬಡತನವು ಮೂಲಭೂತವಾಗಿ ‘ರಾಚನಿಕ’ ಸ್ವರೂಪದ್ದಾಗಿದೆ. ಸಾಕ್ಷರತೆಯಲ್ಲಿ ಕೊಪ್ಪಳ ಜಿಲ್ಲೆಯು ರಾಜ್ಯದಲ್ಲಿ ೨೬ನೆಯ ಸ್ಥಾನದಲ್ಲಿದೆ. ಈ ಜಿಲ್ಲೆಯ ‘ತಾಯಿ ಜಿಲ್ಲೆ’ಯಾದ ರಾಯಚೂರು ಸಾಕ್ಷರತೆಯಲ್ಲಿ ಇಡೀ ರಾಜ್ಯದಲ್ಲಿ ಕಟ್ಟಕಡೆಯ – ಅಂದರೆ ೨೭ನೆಯ ಸ್ಥಾನದಲ್ಲಿದೆ. ಈ ಜಿಲ್ಲೆಯಲ್ಲಿರುವ ಅಕ್ಷರಸ್ಥರ ಸಂಖ್ಯೆ ೨.೯೦ ಲಕ್ಷವಾದರೆ ಅನಕ್ಷರಸ್ಥರ ಸಂಖ್ಯೆಯು ೪.೭೦ ಲಕ್ಷವಾಗಿದೆ. ಈ ೪.೭೦ ಲಕ್ಷ ಅನಕ್ಷರಸ್ಥರಲ್ಲಿ ಮಹಿಳೆಯರ ಸಂಖ್ಯೆ ೨.೯೧ ಲಕ್ಷವಾದರೆ ಪುರುಷರ ಸಂಖ್ಯೆ ೧.೭೯ ಲಕ್ಷ. ಈ ಜಿಲ್ಲೆಯಲ್ಲಿರುವ ಅನಕ್ಷರತೆಗೂ ಮತ್ತು ಈ ಜಿಲ್ಲೆಯಲ್ಲಿರುವ ಕೃಷಿ ಕಾರ್ಮಿಕರ ಅಗಾಧ ಪ್ರಮಾಣಕ್ಕೂ ಸಂಬಂಧವಿದೆ. ಸಾಕ್ಷರತೆ ಅಥವಾ ನಿರಕ್ಷರತೆ ‘ಸಮಸ್ಯೆ’ ಮುಖ್ಯ ಅಲ್ಲ. ನಿಜವಾದ ಸಮಸ್ಯೆ ಇರುವುದು ಬಡತನದ್ದು ಮತ್ತು ಕೃಷಿ ಕಾರ್ಮಿಕರ ಪ್ರಮಾಣ ಅಧಿಕವಾಗಿರುವುದು.

ಆರ್ಥಿಕ ರಚನೆ ಮತ್ತು ಅಸಮಾನತೆ

ಕೋಷ್ಟಕ – ೫.೧ ರಲ್ಲಿ ಕೊಪ್ಪಳ ಜಿಲ್ಲೆಯ ತ್ರಿವಲಯರೂಪಿ ಆರ್ಥಿಕ ರಚನೆಯ ಸ್ವರೂಪವನ್ನು ನೀಡಿದ್ದೇವೆ. ಇಲ್ಲಿ ದುಡಿಮೆಗಾರ ವರ್ಗ ಹಾಗೂ ವರಮಾನಗಳ ತ್ರಿವಲಯವಾರು ಸಾಪೇಕ್ಷ ಸ್ಥಾನಮಾನಗಳ ಆಧಾರದ ಮೇಲೆ ಜಿಲ್ಲೆಯಲ್ಲಿನ ಆರ್ಥಿಕ ಅಸಮಾನತೆಯನ್ನು ಗುರುತಿಸಬಹುದಾಗಿದೆ. ೧೯೯೧ರ ಅಂಕಿ – ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಶೇ. ೮೨.೨೮ರಷ್ಟಿರುವ ಪ್ರಾಥಮಿಕ ವಲಯದ ದುಡಿಮೆಗಾರ ವರ್ಗವು ಜಿಲ್ಲೆಯ ವರಮಾನದಲ್ಲಿ ಕೇವಲ ಶೇ. ೫೩ ರಷ್ಟನ್ನು ಮಾತ್ರ ಅನುಭವಿಸುತ್ತಿದೆ. ಆದರೆ ಪ್ರಾಥಮಿಕೇತರ ವಲಯದಲ್ಲಿರುವ ಶೇ. ೧೭.೭೨ ರಷ್ಟಿರುವ ದುಡಿಮೆಗಾರ ವರ್ಗ ಜಿಲ್ಲೆಯ ವರಮಾನದ ಶೇ. ೪೭ ರಷ್ಟನ್ನು ಅನುಭವಿಸುತ್ತಿದೆ. ಜಿಲ್ಲೆಯಲ್ಲಿ ಕೇವಲ ಉನ್ನತ ಜಾತಿ – ಉನ್ನತ ವರಮಾನವಿರುವ ವರ್ಗಮಾತ್ರ ಪ್ರಾಥಮಿಕೇತರವಲಯ ಪ್ರವೇಶಿಸಬಹುದು. ಈ ವಲಯ ಪ್ರವೇಶಿಸಲು ಅಗತ್ಯವಾಗಿರುವ ಮೊದಲನೆಯ ನಿಬಂಧನೆ ಶಿಕ್ಷಣ. ಈ ವಲಯದಲ್ಲಿರುವ ಜನವರ್ಗಕ್ಕೆ ಹಣಕಾಸು ಸಂಸ್ಥೆಗಳ ಸೌಲಭ್ಯ ಸುಲಭವಾಗಿ ದೊರೆಯುತ್ತದೆ. ಸರ್ಕಾರಿ ಅಧಿಕಾರಿಗಳ ಜೊತೆ ಸನಿಹದ ಸಂಬಂಧ ವಿರುತ್ತದೆ. ಆದರೆ ಪ್ರಾಥಮಿಕ ವಲಯದಲ್ಲಿನ ಜನವರ್ಗವು ಅನಕ್ಷರತೆಯಿಂದ ನರಳುತ್ತಿದೆ. ಇದರಲ್ಲಿನ ದೊಡ್ಡ ಗುಂಪೆಂದರೆ ಭೂರಹಿತ ಕಾರ್ಮಿಕರು. ಈ ವರ್ಗವು ಅನುಭವಿಸುತ್ತಿರುವ ವರಮಾನದ ಪ್ರಮಾಣವು ಸಾಪೇಕ್ಷವಾಗಿ ಪ್ರಾಥಮಿಕೇತರ ವಲಯದಲ್ಲಿರುವ ದುಡಿಮೆಗಾರ ವರ್ಗವು ಅನುಭವಿಸುತ್ತಿರುವ ವರಮಾನದ ಪ್ರಮಾಣಕ್ಕಿಂತ ಕಡಿಮೆಇದೆ. ಪ್ರಾಥಮಿಕ ವಲಯದಲ್ಲಿರುವ ದುಡಿಮೆಗಾರ ವರ್ಗ ಅಧಿಕ. ಆದರೆ ಈ ವಲಯದಲ್ಲಿರುವ ವರಮಾನದ ಪ್ರಮಣ ಕಡಿಮೆ. ಪ್ರಾಥಮಕ ವಲಯದಲ್ಲಿನ ಪ್ರತಿ ತಲಾ ಉತ್ಪನ್ನ ರೂ. ೧೨೩.೬೯ ಆದರೆ ಪ್ರಾಥಮಿಕೇತರ ವಲಯದಲ್ಲಿನ ಪ್ರತಿ ತಲಾ ಉತ್ಪನ್ನ ರೂ. ೫೧೩.೯೦. ತಲಾ ಉತ್ಪನ್ನದಲ್ಲಿನ ವಲಯವಾರು ವ್ಯತ್ಯಾಸವು ಜಿಲ್ಲೆಯಲ್ಲಿರುವ ವರಮಾನದ ವಿತರಣೆಯಲ್ಲಿನ ಅಸಮಾನತೆಯನ್ನು ತೋರಿಸುತ್ತಿದೆ. ಪ್ರಾಥಮಿಕೇತರ ವಲಯದಲ್ಲಿನ ದುಡಿಮೆಗಾರ ವರ್ಗವು ಉನ್ನತ ವರಮಾನ ಪಡೆಯುತ್ತಿದ್ದರೆ ಪ್ರಾಥಮಿಕ ವಲಯದಿಂದ ವರಮಾನ ಕೆಳಮಟ್ಟದಲ್ಲಿದೆ. ಈ ರೀತಿಯ ಆರ್ಥಿಕ ರಚನೆಯ ಸ್ವರೂಪ ಬದಲಾಗಬೇಕು.

ತೀವ್ರ ಆತಂಕಕ್ಕೆ ಕಾರಣವಾಗಿರುವ ಸಂಗತಿಯೆಂದರೆ ೧೯೮೦ – ೮೧ ರಿಂದ ೧೯೯೦ – ೯೧ರ ಅವಧಿಯಲ್ಲಿ ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರ ವರ್ಗದ ಪ್ರಮಾಣವು ಶೇ. ೦.೩೯ ರಷ್ಟು ಅಧಿಕಗೊಂಡಿದೆ. ಆದರೆ ಇದೇ ಅವಧಿಯಲ್ಲಿ ಪ್ರಾಥಮಿಕ ವಲಯದ ವರಮಾನದ ಪ್ರಮಾಣ ಶೇ. ೮.೭೩ರಷ್ಟು ಕಡಿತಗೊಂಡಿದೆ. ಜಿಲ್ಲೆಯಲ್ಲಿ ಆರ್ಥಿಕ ಅಸಮಾನತೆಯು ತೀವ್ರಗೊಳ್ಳುತ್ತ ನಡೆದಿರುವುದು ಇದರಿಂದ ಸ್ಪಷ್ಟವಾಗುತ್ತದೆ.