ಸಾಕ್ಷರತೆ ಮತ್ತು ಅಭಿವೃದ್ಧಿಗಳ ನಡುವಿನ ಸಂಬಂಧವನ್ನು ವಿವಿಧ ನೆಲೆಗಳಲ್ಲಿ ಚರ್ಚಿಸಲು ಸಾಧ್ಯ. ಸಾಕ್ಷರತೆಯನ್ನು ಅಭಿವೃದ್ಧಿಯ ‘ಸಾಧನ’ವೆಂದೂ, ‘ಸಂಪನ್ಮೂಲ’ವೆಂದೂ ‘ಮಾನವ ಬಂಡವಾಳ’ವೆಂದೂ ಪರಿಭಾವಿಸುವ ಪರಿಯೊಂದು ಸಾಂಪ್ರದಾಯಿಕ ಅಭಿವೃದ್ಧಿ ಸಂಕಥನದಲ್ಲಿ ರೂಢಿಯಲ್ಲಿದೆ. ಸಾಕ್ಷರತೆಯು ಜನರನ್ನು ಸುಶಿಕ್ಷಿತರನ್ನಾಗಿ ಮಾಡುತ್ತದೆ, ಅವರ ಉತ್ಪಾದನಾ ಕ್ಷಮತೆಯನ್ನು – ಕುಶಲತೆಯನ್ನು ಉತ್ತಮ ಪಡಿಸುತ್ತದೆ, ಜನರನ್ನು ಆಧುನಿಕರನ್ನಾಗಿಸುತ್ತದೆ – ನಾಗರಿಕರನ್ನಾಗಿಸುತ್ತದೆ, ಅಭಿವೃದ್ಧಿಯ ಗತಿಯನ್ನು ಉತ್ತಮಪಡಿಸುತ್ತದೆ – ಎಂದೆಲ್ಲ ವಾದಿಸಲಾಗುತ್ತದೆ. ‘ಸಾಕ್ಷರತೆ’ಯನ್ನು ಆಧುನೀಕರಣ ‘ಹರಿಕಾರ’ನೆಂದೂ ಹೇಳಲಾಗಿದೆ. ಇವೆಲ್ಲವೂ ಒಂದು ನೆಲೆಯಲ್ಲಿ ಸರಿಯಾದ ವಿಚಾರಗಳೇ ಆಗಿವೆ. ಸಾಕ್ಷರತೆಯು ಮೇಲೆ ತಿಳಿಸಿರುವ ಎಲ್ಲ ನಿಯೋಗಗಳನ್ನು ನಿರ್ವಹಿಸುತ್ತಲೇ ಬಂದಿದೆ. ಆದರೆ ಇದು ಸಾಕ್ಷರತೆಯ ಒಂದು ಮುಖ ಮಾತ್ರವಾಗಿದೆ. ಸಾಂಪ್ರದಾಯಿಕ ಮೂಲ ಧಾರೆ ಅಭಿವೃದ್ಧಿ ಸಂಕಥನದಲ್ಲಿ ಹೀಗೆ ಸಾಕ್ಷರತೆಯ ಒಂದು ಮುಖ್ಯವನ್ನು ಮಾತ್ರ ಪರಿಗಣಿಸುತ್ತಾ ಬರಲಾಗಿದೆ.

ಅಂತಸ್ಥವಾದಿ ಗುಣ

೧೯೯೮ರಲ್ಲಿ ಆಲ್‌ಫ್ರೆಡ್ ನೊಬೆಲ್ ಸ್ಮಾರಕ ಬ್ಯಾಂಕ್ ಆಫ್ ಸ್ವೀಡನ್‌ನ ಅರ್ಥಶಾಸ್ತ್ರದ ಪ್ರಶಸ್ತಿಯನ್ನು ಗಳಿಸಿರುವ ಅಮರ್ತ್ಯಸೇನ್ ಅವರು ಮೂಲಧಾರೆ ಅಭಿವೃದ್ಧಿ ಸಂಕಥನಕ್ಕೆ ಭಿನ್ನವಾದ ನೆಲೆಯಲ್ಲಿ ಸಾಕ್ಷರತೆಯನ್ನು ಪರಿಭಾವಿಸುವ ಬಗೆಯೊಂದನ್ನು ಬೆಳೆಸಿದಿದ್ದಾರೆ. ಅವರ ಪ್ರಕಾರ ಸಾಕ್ಷರತೆಯು ಅಭಿವೃದ್ಧಿಯ ‘ಸಾಧನ’ವೂ ಹೌದು ಮತ್ತು ‘ಸಾಧ್ಯ’ವೂ ಹೌದು, ಅದು ತನ್ನಷ್ಟಕ್ಕೆ ತಾನೆ ಮಹತ್ವದ್ದಾಗಿದೆ. ಅದು ಮನುಷ್ಯನ ಅಂತಸ್ಥವಾಗಿ ಗುಣವಾಗಿದೆ. ಅದು ಮನುಷ್ಯನಿಗೆ ಸಮಾಜದಲ್ಲಿ ಒಂದು ಗೌರವದ ಪ್ರತಿಷ್ಟೆಯ ಸ್ಥಾನವನ್ನು ಒದಗಿಸುತ್ತದೆ. ಅದು ಸ್ವಾಭಿಮಾನದ ಸಂಕೇತವೂ ಹೌದು. ಅಭಿವೃದ್ಧಿಯು ಅಭಿವ್ಯಕ್ರವಾಗುವ ಪರಿಯೇ ಸಾಕ್ಷರತೆ. ಕೇವಲ ಶ್ರಮಶಕ್ತಿಯ ಕಾರ್ಯಕ್ರಮತೆಯನ್ನು, ಕುಶಲತೆಯನ್ನು ಉತ್ತಮ ಪಡಿಸುತ್ತದೆ ಎಂಬ ಕಾರಣಕ್ಕಾಗಿ ಅದು ಮಹತ್ವವಾಗಬೇಕಾಗಿಲ್ಲ. ವಿಷಾದದ ಸಂಗತಿಯೆಂದರೆ ಸಾಂಪ್ರದಾಯಿಕ ಅಭಿವೃದ್ಧಿ ಸಂಕಥನದಲ್ಲಿ ಹಾಗೂ ನಮ್ಮ ಸಮಾಜಸ ಸಂದರ್ಭದಲ್ಲಿ ಅಭಿವೃದ್ಧಿಯ ಸಾಧನವಾಗಿಯೇ ಮಹತ್ವ ಪಡೆದಿದೆ. ಇದನ್ನು ಅಮರ್ತ್ಯಸೇನ್ ಖಂಡಿಸುತ್ತಾರೆ. ಸಾಕ್ಷರತೆಯು ಒಂದು ಗುಣ. ಮನುಷ್ಯನಿಗೆ ಧಾರಣಶಕ್ತಿಯನ್ನು ಒದಗಿಸುವ ಒಂದು ಶಕ್ತಿ. ಬದುಕನ್ನು ಉತ್ತಮ ಪಡಿಸಿಕೊಳ್ಳಲು ಇರುವ ಅವಕಾಶಗಳನ್ನು ತಮ್ಮದು ಮಾಡಿಕೊಳ್ಳಲು ಜನರಿಗೆ ಸಾಕ್ಷರತೆಯು ಶಕ್ತಿಯನ್ನು – ಸಾಮರ್ಥ್ಯವನ್ನು ಒದಗಿಸುತ್ತದೆ. ಬದುಕನ್ನು ಉತ್ತಮಪಡಿಸಿಕೊಳ್ಳಲು ಇರುವ ಅವಕಾಶಗಳನ್ನು ಸಾಕ್ಷರತೆ ವರ್ಧಿಸುತ್ತದೆ. ಇದರಿಂದಾಗಿ ಬದುಕನ್ನು ಉತ್ತಮ ಪಡಿಸಿಕೊಳ್ಳಲು ಇರುವ ಅವಕಾಶಗಳಲ್ಲಿ ತಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅದು ಜನರಿಗೆ ಒದಗಿಸುತ್ತದೆ. ಆದ್ದರಿಂದ ಸಾಕ್ಷರತೆ ಎಂದರೆ‘ ‘ಸ್ವಾತಂತ್ರ್ಯ’ವೆಂದೂ ಹೇಳಬಹುದು.

ಈ ಕಾರಣಕ್ಕೆ ಅಮರ್ತ್ಯಸೇನ್ ಅವರು ಸಾಕ್ಷರತೆಯೇ ಅಭಿವೃದ್ಧಿ ಎಂದು ಹೇಳುತ್ತಾರೆ. ಧಾರಣಶಕ್ತಿಯು ಒಂದು ಅಂಗ ಸಾಕ್ಷರತೆ. ಧಾರಣಶಕ್ತಿಯನ್ನು ನಿರ್ಧರಿಸುವ ಒಂದು ಅಂಶ ಸಾಕ್ಷರತೆ. ‘ಧಾರಣಶಕ್ತಿಯ ದುಸ್ಥಿತಿ’ಯೇ ಬಡತನವೆಂದು ಸೇನ್ ಅವರು ಬಡತನವನ್ನು ನಿರ್ವಚಿಸಿದ್ದಾರೆ. (ಸೇನ್ ೧೯೯೫). ಅನಕ್ಷರತೆಯು ಧಾರಣಶಕ್ತಿಯ ದುಸ್ಥಿತಿಯ ದ್ಯೋತಕವಾಗಿದೆ. ಸಾಕ್ಷರತೆಯ ಅಂತಸ್ಥವಾದಿ ನೆಲೆಗಳನ್ನು ಪರಿಶೋಧಿಸುವ ಸೇನ್ ಅವರು ಅದರ ‘ಉಪಕರಣವಾದಿ;ನೆಲೆಗಳನ್ನು ಕಡೆಗಣಿಸುವುದಿಲ್ಲ. ಆದರೆ ಅವರು ಸಾಕ್ಷರತೆಯ ಉಪಕರಣವಾದಿ ನೆಲೆಗಳು ಪ್ರಧಾನವಾಗಿ ಅದರ ಅಂತಸ್ಥವಾದಿ ನೆಲೆಗಳು ಅನುಷಂಗಿಕವಾಗಿರುವುದನ್ನು ಕಂಡು ವಿಷಾಧಿಸುತ್ತಾರೆ.

ನಮ್ಮ ಸಮಾಜದ ಸಂದರ್ಭದಲ್ಲಿ, ಚಾರಿತ್ರಿಕವಾಗಿ ಸಾಕ್ಷರತೆ – ಶಿಕ್ಷಣ ಇವುಗಳು ಪ್ರತಿಷ್ಠಿತ ವರ್ಗದ ಪ್ರತಿಷ್ಠಿತ ಸರಕುಗಳಾಗಿ ಬಿಟ್ಟಿವೆ. ಇದನ್ನು ಬಹುಮುಖ್ಯವಾಗಿ ಅದನ್ನು ಕೇವಲ ಅಭಿವೃದ್ಧಿಯ ಸಾಧನವನ್ನಾಗಿ ಪರಿಗಣಿಸಿದ್ದೇ ಕಾರಣವಾಗಿದೆ. ಸಾಕ್ಷರತೆಯೇ ಅಭಿವೃದ್ಧಿ ಎನ್ನುವುದು ನಿರ್ಲಕ್ಷ್ಯಕ್ಕೆ ಗುರಿಯಾಗಿ, ಮೂಲೆಗೆ ಸರಿದು ಅದರ ಉಪಕರಣ ವಾದಿ ನೆಲೆಗಳು ಬೃಹತ್ ಸ್ವರೂಪ ತಳೆದು ಬಿಟ್ಟಿವೆ. ಅಮರ್ತ್ಯಸೇನ್, ಮೆಹಬೂಬ್ ಉಲ್‌ಹಕ್ ಅವುಗಳು ಸಾಕ್ಷರತೆಯ ವೈಫಲ್ಯವನ್ನು ಅಭಿವೃದ್ಧಿಯ ವೈಫಲ್ಯವೆಂದೇ ಪರಿಗಣಿಸಿದ್ದಾರೆ. ‘ಸಾಕ್ಷರತೆಯೇ ಅಭಿವೃದ್ಧಿ’, ‘ಸಾಕ್ಷರತೆಯು ಅಭಿವೃದ್ಧಿಯ ‘ಸಾಧನ’ ವೂ ಹೌದು ಮತ್ತು ‘ಸಾಧ್ಯ’ವೂ ಹೌದು’, ಸಾಕ್ಷರತೆ ತನ್ನಷ್ಟಕ್ಕೆ ತಾನು ಮಹತ್ವವಾದುದು ಎಂಬ ವಿಚಾರಗಳನ್ನು ಒಳಗೊಂಡ ವಿಚಾರ ಪ್ರಣಾಳಿಕೆಯನ್ನು ‘ಮಾನವ ಮುಖಿ ಅಭಿವೃದ್ಧಿ’ ಎಂದು ಕರೆಯಲಾಗಿದೆ. ಮೆಹಬೂಬ್ ಉಲ್ ಹಕ್ ಅವರು ಯುಪಿಎನ್‌ಡಿಎಗೆ ಸಿದ್ಧ ಮಾಡಿಕೊಟ್ಟ ‘ಮಾನವ ಮುಖಿ ಅಭಿವೃದ್ಧಿ ವರದಿ’ಗಳಲ್ಲಿ ಅಭಿವೃದ್ಧಿಯನ್ನು ಅಳೆಯಲು ‘ಆರೋಗ್ಯ – ಸಾಕ್ಷರತೆ – ವರಮಾನ’ ಮೂರನ್ನು ಒಳಗೊಂಡ ಸಂಯುಕ್ತ ಸೂಚ್ಯಂಕವೊಂದನ್ನು ಬಳಸಿದ್ದಾರೆ. ಅದನ್ನು ‘ಮಾನವ ಮುಖಿ ಅಭಿವೃದ್ಧಿ ಸೂಚ್ಯಂಕ’ವೆಂದು (HDI)ಕರೆಯಲಾಗಿದೆ. ಈ ಸೂಚ್ಯಂಕದಲ್ಲಿ ಮೊದಲನೆಯ ಸ್ಥಾನವು ಆರೋಗ್ಯಕ್ಕೂ, ಎರಡನೆಯ ಸ್ಥಾನ ಸಾಕ್ಷರತೆಗೂ ಮತ್ತು ಮೂರನೆಯ ಸ್ಥಾನ ವರಮಾನಕ್ಕೂ ನೀಡಲಾಗಿದೆ. ಬದುಕನ್ನು ಉತ್ತಮಪಡಿಸಿಕೊಳ್ಳಲು ಇರುವ ಅವಕಾಶಗಳನ್ನು ದಕ್ಕಿಸಿಕೊಳ್ಳುವ ‘ಸಾಮರ್ಥ್ಯ’ವನ್ನು ಮತ್ತು ಹೀಗೆ ಹರಿದು ಬರುವ ಅವಕಾಶಗಳನ್ನು ತಮಗೆ ಅಗತ್ಯವಾದುದನ್ನು ಆಯ್ಕೆಮಾಡಿಕೊಳ್ಳುವ ‘ಸ್ವಾತಂತ್ರ್ಯ’ವನ್ನು ಸಾಕ್ಷರತೆ ಜನರಿಗೆ ಒದಗಿಸುತ್ತದೆ ಎಂದು ಮಾನವ ಮುಖಿ ಅಭಿವೃದ್ಧಿ ವಿಚಾರ ಪ್ರಣಾಳಿಕೆ ಪ್ರತಿಪಾದಿಸುತ್ತದೆ. ಈ ಸಂಕಥನದಲ್ಲಿ ಸಾಕ್ಷರತೆಯನ್ನು ಅಭಿವೃದ್ಧಿಯ ‘ಸಾಧನ’ವಾಗಿಯೂ ಮತ್ತು ‘ಸಾಧ್ಯ’ವಾಗಿಯೂ ಹಾಗೂ ಗಾತ್ರ ನಿಷ್ಟವಾಗಿಯೂ ಮತ್ತು ಭಾವನಿಷ್ಟವಾಗಿಯೂ ಪರಿಭಾವಿಸಲಾಗಿದೆ.

ಸಾಕ್ಷರತೆಯನ್ನು ಅದನ್ನು ಸಂಬಂಧಿಸಿದ ಸಿದ್ಧಿ – ಸಾಧನೆಗಳನ್ನು ಸೇನ್ ಅವರು ‘ರಾಜಕೀಯಾರ್ಥಿಕತೆ’ (Political economy) ನೆಲೆಯಿಂದ ಪರಿಭಾವಿಸುತ್ತಾರೆ. ಅವರ ಪ್ರಕಾರ ಅದೇನು ‘ಸ್ವತಂತ್ರ’, ‘ಸ್ವಾಯತ್ವ’ ಪ್ರಕ್ರಿಯೆಯೇನಲ್ಲ. ಅದು ನಮ್ಮ ಸಮಾಜದ ಸಂದರ್ಭದಲ್ಲಿ ಸಂಭವಿಸಬೇಕಾದ ಒಂದು ಪ್ರಕ್ರಿಯೆ. ಸಾಕ್ಷರತೆಯ ಸ್ವರೂಪವು ನಮ್ಮ ಸಮಾಜದ ಒಂದು ಪ್ರತಿಬಿಂಬವೇ ಆಗಿರುತ್ತದೆ. ಸಾಮಾಜಿಕ ಚೌಕಟ್ಟಿನಿಂದ ‘ಅನ್ಯ’ವಾಗಿಸಿ, ಪ್ರತ್ಯೇಕಿಸಿ ಸಾಕ್ಷರತೆಯನ್ನು ಪರಿಭಾವಿಸುವುದು ಸಾಧ್ಯವಿಲ್ಲ. ಯಾರಿಗೆ ಸಾಕ್ಷರತೆ ದೊರೆಯಬೇಕು? ಯಾರಿಗೆ ದೊರೆಯಬಾರದು? ಯಾರಿಗೆ ಎಷ್ಟು ದೊರೆಯಬೇಕು? ಎಂಬುದನ್ನೆಲ್ಲಾ ಸಾಮಾಜಿಕ ವ್ಯವಸ್ಥೆ ನಿರ್ಧರಿಸುತ್ತಿರುತ್ತದೆ. ಸಾಕ್ಷರತೆಯಾಗಲಿ, ಶಿಕ್ಷಣವಾಗಲಿ, ಮೌಲ್ಯ ನಿರಪೇಕ್ಷ ಸಂಗತಿಗಳೇನಲ್ಲ. ಆದ್ದರಿಂದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಸಾಕ್ಷರತೆ ಬಗ್ಗೆ ಒಂದು ನಿರ್ದಿಷ್ಟ ನಿಲುವು ತಳೆಯುವುದು ತುಂಬಾ ಅವಶ್ಯಕ. ಸಾಕ್ಷರತೆ ಯಾರಿಗೆ ಸಿಗಬೇಕು. ಯಾರಿಗೆ ಸಿಗಬಾರದು, ಯಾರಿಗೆ ಎಷ್ಟಿ ಸಿಗಬೇಕು ಎಂಬುದನ್ನೆಲ್ಲಾ ಸಾಮಾಜಿಕ ವ್ಯವಸ್ಥೆ ನಿರ್ಧರಿಸುತ್ತಿರುತ್ತದೆ ಎಂದು ಹಿಂದೆ ಹೇಳಲಾಗಿದೆಯಷ್ಟೆ! ಈ ಕಾರಣಕ್ಕಾಗಿಯೇ ನಮ್ಮ ಸಮಾಜದ ಸಂದರ್ಭದಲ್ಲಿ ಸಾಕ್ಷರತೆಗೆ ಸಂಬಂದಿಸಿದಂತೆ ಲಿಂಗ ಭೇದ, ಜಾತಿ ಭೇದಗಳನ್ನು ನೋಡಬಹುದು. ಅಮರ್ತ್ಯಸೇನ್ ಮತ್ತು ಜೀನ್‌ಡ್ರೀಜ್ ಅವರುಗಳು ತಮ್ಮ ಒಂದು ಅಧ್ಯಯನದಲ್ಲಿ ಈ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ಮಹಿಳೆಯರ ಸಾಕ್ಷರತೆ ಪುರುಷರ ಸಾಕ್ಷರತೆಗಿಂತ ಕಡಿಮೆ ಇದ್ದರೆ ಅದು ಆಕೆಯ ಜೈವಿಕ ಸ್ವರೂಪದ ಫಲವಲ್ಲ. ಅದು ಸಮಾಜವು ಕಟ್ಟಿಕೊಟ್ಟಿರುವ ಒಂದು ಆರ್ಡರ್ (Social Order). ಸಾಮಾನ್ಯ ಜನಸಂಖ್ಯೆಯ ಸಾಕ್ಷತೆ ಪ್ರಮಾಣವು ಪರಿಶಿಷ್ಟ ಜನಸಂಖ್ಯೆಯ (ಪ.ಜಾ + ಪ.ಪಂ) ಸಾಕ್ಷರತೆ ಪ್ರಮಾಣಕ್ಕಿಂತ ಅಧಿಕವಾಗಿದ್ದರೆ ಅದು ಸಾಮಾಜಿಕ ವ್ಯವಸ್ಥೆಯಿಂದ ನಿಷ್ಪನ್ನವಾದ ಒಂದು ಪರಿಣಾಮವಾಗಿದೆ. ಸಾಕ್ಷರತೆಗೆ ಸಂಬಂಧಿಸಿದ ಸಿದ್ಧಿ – ಸಾಧನೆಗಳನ್ನು, ವೈಫಲ್ಯಗಳನ್ನು ವ್ಯಕ್ತಿಗತ ನೆಲೆಯಲ್ಲಿ ಅಥವಾ ಜೈವಿಕ – ನೈಸರ್ಗಿಕ – ಪ್ರಾಕೃತಿಕ ನೆಲೆಗಳಲ್ಲಿ ಪರಿಭಾವಿಸುವುದು ಸಾಧ್ಯವಿಲ್ಲ. ಇವೆಲ್ಲವೂ ಸಾಮಾಜಿಕ ವ್ಯವಸ್ಥೆಯೊಂದು ರೂಪಿಸಿದ ಸಂಗತಿಯಾಗಿವೆ. ಪ್ರಸ್ತುತ ಅಧ್ಯಾಯದಲ್ಲಿ ಕೊಪ್ಪಳ ಜಿಲ್ಲೆಯ ಸಾಕ್ಷರತೆ ಸಂಬಂಧಿ ಸಂಗತಿಗಳನ್ನು ಲಿಂಗಸಂಬಂಧಿ ನೆಲೆಯಲ್ಲಿ ಹಾಗೂ ಜಾತಿಸಂಬಂಧಿ ನೆಲೆಯಲ್ಲಿ ನೋಡಲು ಪ್ರಯತ್ನಿಸಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಸಾಕ್ಷರತೆ

ಕರ್ನಾಟಕದಲ್ಲಿ ಜಿಲ್ಲೆಗಳ ಪುನರ್ವಿಂಗಡಣೆ ನಡೆಯುವ ಪೂರ್ವದಲ್ಲಿ, ಅಂದರೆ ೨೦ ಜಿಲ್ಲೆಗಳು ಇದ್ದಾಗ ಸಾಕ್ಷರತೆಯಲ್ಲಿ ರಾಯಚೂರು ಜಿಲ್ಲೆಗೆ ಕಟ್ಟಕಡೆಯ ಸ್ಥಾನವಿತ್ತು. ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಶೇ. ೩೫.೯೬ ಇತ್ತು. ಈ ಜಿಲ್ಲೆಯನ್ನು ವಿಭಜಿಸಿ ಕೊಪ್ಪಳ ಜಿಲ್ಲೆಯನ್ನು ಪ್ರತ್ಯೇಕಗೊಳಿಸಲಾಗಿದೆ. ಈಗ ರಾಯಚೂರು ಜಿಲ್ಲೆಯ ವಿಸ್ತೀರ್ಣ ಹಾಗೂ ಜನಸಂಖ್ಯೆ ಕಡಿಮೆಯಾಗಿದೆ. ಈಗ ರಾಯಚೂರು ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ. ೩೪.೩೪ಕ್ಕೆ ಇಳಿದಿದೆ. ಇದರ ಅರ್ಥವೆಂದರೆ ಸಾಕ್ಷರತೆಯಲ್ಲಿ ಉತ್ತಮವಾಗಿದ್ದ ತಾಲ್ಲೂಕುಗಳು ಕೊಪ್ಪಳ ಜಿಲ್ಲೆಗೆ ಹೋಗಿ ಸಾಕ್ಷರತೆಯಲ್ಲಿ ಕೆಳಮಟ್ಟದ ಸಾಧನೆಗೈದಿದ್ದ ತಾಲ್ಲೂಕುಗಳು ರಾಯಚೂರು ಜಿಲ್ಲೆಯಲ್ಲಿ ಉಳಿದಿವೆ.

ಕೊಪ್ಪಳ ಜಿಲ್ಲೆಯ ಸಾಕ್ಷರತೆ ಪ್ರಮಾಣವು ಶೇ. ೩೮.೨೩ ಆಗಿದೆ. ರಾಜ್ಯದಲ್ಲಿ ಸಾಕ್ಷರತೆಗೆ ಸಂಬಂಧಿಸಿದಂತೆ ಕೊಪ್ಪಳಕ್ಕೆ ೨೬ನೆಯ ಸ್ಥಾನವೂ ರಾಯಚೂರಿಗೆ ೨೭ನೆಯ ಸ್ಥಾನವೂ ಇದೆ. ಅಂದ ಮೇಲೆ ಸಾಕ್ಷರತೆ ದೃಷ್ಟಿಯಿಂದ ಕೊಪ್ಪಳ ಜಿಲ್ಲೆಯ ಸಾಧನೆಯು ನಿಕೃಷ್ಟವಾದುದಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ. ೨.೧೩ ಪಾಲು ಪಡೆದಿರುವ ಕೊಪ್ಪಳ ಜಿಲ್ಲೆಯು ರಾಜ್ಯದ ಅಕ್ಷರಸ್ಥರಲ್ಲಿ ಶೇ. ೧.೩೮ ರಷ್ಟು ಪಾಲನ್ನು ಮತ್ತು ರಾಜ್ಯದ ಅನಕ್ಷರಸ್ಥರಲ್ಲಿ ಶೇ. ೨.೮೫ ರಷ್ಟು ಪಾಲನ್ನು ಪಡೆದಿದೆ. ಅಂದರೆ ರಾಜ್ಯದ ಜನ ಸಂಖ್ಯೆಯಲ್ಲಿ ಪಡೆದಿರುವುದಕ್ಕಿಂತ ಕಡಿಮೆ ಪಾಲನ್ನು ಅಕ್ಷರಸ್ಥರಲ್ಲಿ ಪಡೆದಿದ್ದರೆ ಅನಕ್ಷರಸ್ಥರಲ್ಲಿ ಮಾತ್ರ ರಾಜ್ಯದ ಜನಸಂಖ್ಯೆಯನ್ನು ಪಡೆದಿರುವುದಕ್ಕಿಂತ ಅಧಿಕ ಪಾಲು ಪಡೆದಿದೆ.

ಕರ್ನಾಟಕದಲ್ಲಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಜನಸಂಖ್ಯೆ, ಅಕ್ಷರಸ್ಥರು ಮತ್ತು ಅನಕ್ಷರಸ್ಥರು
ಕೋಷ್ಟಕ: .

ಕ್ರ.ಸಂ.

ವಿವರಗಳು

ಜನಸಂಖ್ಯೆ

ಅಕ್ಷರಸ್ಥರು

ಅನಕ್ಷರಸ್ಥರು

ಕರ್ನಾಟಕ ೪೪೪೯,೭೭,೨೦೧ ೨೧೦,೧೩,೧೯೩ ೧೬೪,೮೬,೬೯೭
ಕೊಪ್ಪಳ ರಾಜ್ಯದಲ್ಲಿ ೯,೫೮,೦೭೮ ೨,೯೦,೭೯೬ ೪,೬೯,೭೭೪
ಕೊಪ್ಪಳ ಜಿಲ್ಲೆಯ ಶೇಕಡ ಪಾಲು ೨.೧೩ ೧.೩೮ ೨.೮೫
ಕೊಪ್ಪಳ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ  – ಶೇ. ೩೮.೨೩ ಶೇ. ೬೧.೭೭

ಕರ್ನಾಟಕದಲ್ಲಿ ಅಕ್ಷರಸ್ಥರಿಗಿಂತ ಅಧಿಕವಾಗಿ ಅನಕ್ಷರಸ್ಥರನ್ನು ಪಡೆದಿರುವ ಜಿಲ್ಲೆಗಳ ಸಂಖ್ಯೆ ಏಳು. ಅವುಗಳು ಮಂಡ್ಯ, ಬಳ್ಳಾರಿ, ಬೀದರ, ಗುಲಬರ್ಗ, ಕೊಪ್ಪಳ, ಚಾಮರಾಜನಗರ ಮತ್ತು ರಾಯಚೂರು. ರಾಜ್ಯಮಟ್ಟದಲ್ಲಿ ಅಕ್ಷರಸ್ಥರ ಸಂಖ್ಯೆಯು ಅನಕ್ಷರಸ್ಥರ ಸಂಖ್ಯೆಗಿಂತ ಅಧಿಕವಾಗಿದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಇದು ತಿರುವು ಮುರುವು ಆಗಿದೆ. ಅಕ್ಷರಸ್ಥರು ಮತ್ತು ಅನಕ್ಷರಸ್ಥರುಗಳ ಒಟ್ಟು ಮೊತ್ತವು ಜನಸಂಖ್ಯೆಗೆ ತಾಳೆಯಾಗುವುದಿಲ್ಲ. ಏಕೆಂದರೆ ಸಾಕ್ಷರತೆಯ ಮಾಪನದ ದೃಷ್ಟಿಯಿಂದ ೦ – ೬ ವಯೋಮಾನದ ಜನಸಂಖ್ಯೆಯ ಬಿಟ್ಟು ೭ ವರ್ಷ ಮತ್ತು ೭ ವರ್ಷಕ್ಕೂ ಮೇಲ್ಪಟ್ಟ ವಯೋಮಾನದ ಜನಸಂಖ್ಯೆಯನ್ನು ಮಾತ್ರ ಪರಿಗಣಿಸಲಾಗುತ್ತದೆ.

ಸಾಕ್ಷರತೆ: ಅಖಂಡ ಸೂಚಿಯಲ್ಲ!

ಅಭಿವೃದ್ಧಿಗೆ ಸಂಬಂಧಿಸಿದ ಸೂಚಿಗಳನ್ನು ಅಖಂಡವಾಗಿ – ಇಡಿಯಾಗಿ ಪರಿಭಾವಿಸುವುದು ವಾಡಿಕೆಯಲ್ಲಿದೆ. ಸಾಕ್ಷರತೆಗೆ ಸಂಬಂಧಿಸಿದ ವಿವರಗಳನ್ನು ‘ಅಖಂಡ’ವಾಗಿ ನೋಡಿಕೊಂಡು ಬರಲಾಗಿದೆ. ಏಣಿ ಶ್ರೇಣಿ ಹಾಗೂ ಲಿಂಗಭೇದಗಳು ಅಂತರ್ಗತಗೊಂಡಿರುವ ನಮ್ಮ ಸಮಾಜದ ಸಂದರ್ಭದಲ್ಲಿ ಅಖಂಡವಾದಿ ದೃಷ್ಟಿಕೋನವು ಸಾಕ್ಷರತೆಯ ನಿಜರೂಪವನ್ನು ತೋರಿಸಲು ಸಾಧ್ಯವಿಲ್ಲ. ಇಂತಹ ವಿಷಯಗಳಲ್ಲಿ ಅಖಂಡವಾದಿ ದೃಷ್ಟಿಕೋನವು ಅನೇಕ ಬಗೆಯ ವಿಕೃತಿಗಳಿಗೆ ಹಾಗೂ ಅಪಾಯಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ನಮ್ಮ ಸಾಮಾಜಿಕ ವ್ಯವಸ್ಥೆಯೇ ಅಖಂಡವಾದುದಲ್ಲ. ವರ್ಣ, ವರ್ಗ, ಜಾತಿ – ಲಿಂಗ ಮುಂತಾದ ಬಗೆಯ ಛಿದ್ರ ವಿಚ್ಛಿದ್ರತೆಗಳು ಸಮಾಜದಲ್ಲಿ ಕ್ರಿಯಾಶೀಲವಾಗಿರುವ ಸಾಕ್ಷರತೆಗೆ ಸಂಬಂಧಿಸಿದ ಸೂಚಿಯು ಅಖಂಡವಾಗಿರಲು ಸಾಧ್ಯವಿಲ್ಲ.

ಸಾಕ್ಷರತೆಗೆ ಸಂಬಂಧಿಸಿದ ಸೂಚಿಯನ್ನು ಸಾಮಾಜಿಕ ಹಾಗೂ ಲಿಂಗ ಸಂಬಂಧಿ ನೆಲೆಗಳಿಂದ ಪರಿಶೋಧಿಸುವ ಅಗತ್ಯವಿದೆ. ಕರ್ನಾಟಕದ ಒಟ್ಟು ಸಾಕ್ಷರತೆ ಶೇ. ೫೬.೦೪. ಇದು ಇಡೀ ಕರ್ನಾಟಕದ ಜನಸ್ತೋಮಕ್ಕೆ ಸಂಬಂಧಿಸಿದ ಸಾಕ್ಷರತೆಯ ಪ್ರಮಾಣವಾಗಿದೆ. ಇದನ್ನು ನಾವು ಬಿಡಿಸಿ ಅದರ ಸಾಮಾಜಿಕ ಸ್ವರೂಪವನ್ನು ಮತ್ತು ಲಿಂಗಸಂಬಂಧಿ ಸ್ವರೂಪವನ್ನು ಅನಾವರಣ ಮಾಡಬೇಕಾಗುತ್ತದೆ. ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಸಾಕ್ಷರತೆ ಸೂಚಿಯ ಸಾಮಾಜಿಕ ಹಾಗೂ ಲಿಂಗಸಂಬಂಧಿ ನೆಲೆಗಳನ್ನು ಬಿಡಿಬಿಡಿಯಾಗಿ ಪರಿಶೀಲಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಸಂಪೂರ್ಣ ಸಾಕ್ಷರತೆಗೆ ಎಷ್ಟು ವರ್ಷಗಳು ಬೇಕು?

ಕೋಷ್ಟಕ – ೬.೨ ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ೧೯೬೧ ರಲ್ಲಿ ಮತ್ತು ೧೯೯೦ ರಲ್ಲಿ ಇದ್ದ ಸಾಕ್ಷರತೆ ಪ್ರಮಾಣವನ್ನು ತೋರಿಸಿದೆ.

ಕೊಪ್ಪಳ ಜಿಲ್ಲೆಯಲ್ಲಿ ಸಾಕ್ಷರತೆ: ೧೯೬೧ ಮತ್ತು ೧೯೯೧
ಕೋಷ್ಟಕ: .

ಸಾಕ್ಷರತೆ (ಶೇಕಡ)

೧೯೬೧

೧೯೯೧

ಒಟ್ಟು
೧೭.೩೪
ಮಹಿಳೆಯರು
೫.೩೫
ಪುರುಷರು
೨೯.೦೨
ಒಟ್ಟು
೩೮.೨೩
ಮಹಿಳೆಯರು
೨೨.೭೮
ಪುರುಷರು
೫೩.೪೬

೧೯೬೧ ರಲ್ಲಿ ಕೊಪ್ಪಳ ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ. ೧೭.೩೪. ೧೯೯೧ ರಲ್ಲಿ ಕೊಪ್ಪಳ ಜಿಲ್ಲೆಯ ಒಟ್ಟು ಸಾಕ್ಷರತೆ ಪ್ರಮಾಣ ಶೇ. ೩೮.೨೩ ಆಗಿದೆ. ಕಳೆದ ೩೦ ವರ್ಷಗಳ ಅವಧಿಯಲ್ಲಿ ಸಾಕ್ಷರತೆಯ ಪ್ರಮಾಣವು ಕೊಪ್ಪಳ ಜಿಲ್ಲೆಯಲ್ಲಿ ಶೇ. ೧೨೦.೪೨ ರಷ್ಟು ಏರಿಕೆಯಾಗಿದೆ. ಕಳೆದ ೩೦ ವರ್ಷಗಳಲ್ಲಿ ಏರಿಕೆಯಾದ ಗತಿಯಲ್ಲೇ ಸಾಕ್ಷರತೆಯು ಬೆಳೆಯುತ್ತಾ ಹೋದರೆ ಕೊಪ್ಪಳ ಜಿಲ್ಲೆಯು ಸಂಪೂರ್ಣ ಸಾಕ್ಷರತೆ ಸಾಧಿಸಿಕೊಳ್ಳಲು ಇನ್ನು ೯೦ ವರ್ಷಗಳು ಬೇಕಾಗುತ್ತವೆ. ೧೯೮೧ – ೯೧ರ ದಶಕದಲ್ಲಿ ಕೊಪ್ಪಳ ಜಿಲ್ಲೆಯ ಸಾಕ್ಷರತೆಯು ಸಾಧಿಸಿರುವ ಬೆಳವಣಿಗೆ ಪ್ರಮಾಣವನ್ನು ಲೆಕ್ಕ ಹಿಡಿದರೂ, ಅದಕ್ಕೆ ಸಂಪೂರ್ಣ ಸಾಕ್ಷರತೆ ಸಾಧಿಸಲು ಸುಮಾರು ೫೫ ವರ್ಷಗಳು ಬೇಕಾಗುತ್ತವೆ. ಆದ್ದರಿಂದ ಸಾಕ್ಷರತೆಯ ಬೆಳವಣಿಗೆ ಗತಿಯನ್ನು ಮುಂದಿನ ದಶಕಗಳಲ್ಲಿ ತೀವ್ರವಾಗಿ ಹೆಚ್ಚಿಸಬೇಕಾಗುತ್ತದೆ.

೨೧ನೆಯ ಶತಮಾನದ ಸವಾಲು

ಸಂಪೂರ್ಣ ಸಾಕ್ಷರತೆ ಸಾಧಿಸಿಕೊಳ್ಳಲು ಕೊಪ್ಪಳ ಜಿಲ್ಲೆಯು ಇನ್ನು ೯೦ ವರ್ಷಗಳು ಕಾಯಬೇಕೊ ಅಥವಾ ೫೫ ವರ್ಷಗಳು ಕಾಯಬೇಕೊ ಎಂಬುದು ಮುಖ್ಯವಲ್ಲ. ಈಗ ಬೀಜ ಮಾತೆಂದರೆ ೨೧ನೆಯ ಶತಮಾನದಲ್ಲಿ ಕೊಪ್ಪಳ ಜಿಲ್ಲೆಯು ಎದುರಿಸಬೇಕಾದ ಸವಾಲು – ಜವಾಬ್ದಾರಿ ಇದಾಗಿದೆ. ಸಂಪೂರ್ಣ ಸಾಕ್ಷರತೆಯೆಂದರೆ ಜಿಲ್ಲೆಯಲ್ಲಿರುವ ಒಟ್ಟು ಜನಸಂಖ್ಯೆಯನ್ನು ಸಾಕ್ಷರರನ್ನಾಗಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ೪೦ – ೫೦ ವರ್ಷ ವಯೋಮಾನ ದಾಟಿರುವ ಮತ್ತು ವೃದ್ಧರನ್ನು ಸಾಕ್ಷರರನ್ನಾಗಿ ಮಾಡುವುದು ಸಾಧ್ಯವಿಲ್ಲ. ಆದರೆ ೨೦ ವರ್ಷಗಳೊಳಗಿನ ಮಕ್ಕಳನ್ನು ಮಾತ್ರ ಸಾಕ್ಷರತೆಯು ಮುಖ್ಯ ಗುರಿಯನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಪ್ರಾಥಮಿಕ ಶಿಕ್ಷಣವನ್ನು ತೀವ್ರ ಸ್ವರೂಪದಲ್ಲಿ ಬೆಳೆಸಬೇಕಾಗಿದೆ.

೧೯೬೧ ರಿಂದ ೧೯೯೧ರ ಕಾಲವಧಿಯಲ್ಲಿ ಕರ್ನಾಟಕ ರಾಜ್ಯಮಟ್ಟದಲ್ಲಿ ಸಾಕ್ಷರತೆಯ ಪ್ರಮಾಣವು ಶೇ. ೧೨೦.೬೩ ರಷ್ಟು ಏರಿಕೆಯಾಗಿದೆ. ಕೊಪ್ಪಳ ಜಿಲ್ಲೆಯ ಸಾಕ್ಷರತೆಯೂ ಅಷ್ಟೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಆರಂಭದ ಹಂತದಲ್ಲಿ ಕೊಪ್ಪಳ ಜಿಲ್ಲೆಯ ಸಾಕ್ಷರತೆ ಪ್ರಮಾಣವು ಕರ್ನಾಟಕ ರಾಜ್ಯ ಸರಾಸರಿ ಸಾಕ್ಷರತೆ ಪ್ರಮಾಣಕ್ಕಿಂತ ಕಡಿಮೆ ಇತ್ತು. ಇದನ್ನು ಪರಿಗಣಿಸಿದ್ದಾದರೆ ಕೊಪ್ಪಳ ಜಿಲ್ಲೆಯ ಸಾಕ್ಷರತೆ ಬೆಳವಣಿಗೆ ಗತಿಯು ರಾಜ್ಯ ಮಟ್ಟದ ಸಾಕ್ಷರತೆ ಬೆಳವಣಿಗೆ ಗತಿಯು ರಾಜ್ಯ ಮಟ್ಟದ ಸಾಕ್ಷರತೆ ಬೆಳವಣಿಗೆ ಗತಿಗಿಂತ ಉನ್ನತವಾಗಬೇಕು. ಆಗ ಮಾತ್ರ ಕೊಪ್ಪಳ ಜಿಲ್ಲೆಯ ಸಾಕ್ಷರತೆಯನ್ನು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ರಾಜ್ಯ ಸರಾಸರಿ ಪ್ರಮಾಣದ ಮಟ್ಟಕ್ಕೆ ಒಯ್ಯಬಹುದಾಗಿದೆ.

ಸಾಕ್ಷರತೆಯ ಲಿಂಗಸಂಬಂಧಿ ಆಯಾಮಗಳು

ಪ್ರಪಂಚದಲ್ಲಿ ಬೆರಳೆಣಿಕೆಯಷ್ಟು ದೇಶಗಳನ್ನು ಬಿಟ್ಟರೆ (೨೩ ದೇಶಗಳು HDR ೧೯೯೭) ಉಳಿದೆಲ್ಲ ದೇಶಗಳಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣವು ಪುರುಷರ ಸಾಕ್ಷರತೆ ಪ್ರಮಾಣಕ್ಕಿಂತ ಕಡಿಮೆ ಇದೆ. ಭಾರತದಲ್ಲಿ ಪಾರಂಪಿರಿಕವಾಗಿ ಮಹಿಳೆಯರನ್ನು ಸಾಕ್ಷತೆಯಿಂದ ವಂಚಿತರನ್ನಾಗಿ ಮಾಡಲಾಗಿದೆ. ನಮ್ಮ ಪರಂಪರೆಯಲ್ಲಿ ಮಹಿಳೆಯರಿಗೆ ಶಿಕ್ಷಣವನ್ನು ಒದಗಿಸುವುದು ಸಾಮಾಜಿಕ ಭದ್ರತೆ ದೃಷ್ಟಿಯಿಂದ ಅಪಾಯಕಾರಿ ಎಂದೇ ಭಾಚಿಸಲಾಗಿತ್ತು. (ಸೇನ್ ೧೯೯೭). ಮಹಿಳೆಯರಿಗೆ ಸಾಕ್ಷರತೆಯನ್ನು ಒದಗಿಸಬೇಕು ಎಂಬ ವಿಷಯಕ್ಕೆ ಮಹತ್ವ ಸ್ವಾತಂತ್ಯ್ರೋತ್ತರ ಕಾಲದಲ್ಲಿ ಪ್ರಾಪ್ತವಾಯಿತು. ಭಾರತದ ಸಂದರ್ಭದಲ್ಲಿ ಮಹಿಳಾ ಸಾಕ್ಷರತೆ ಎಂಬುದು ೨೦ನೆಯ ಶತಮಾನದ ಒಂದು ಕೊಡುಗೆಯಾಗಿದೆ. ಮಹಿಳಾ ಸಾಕ್ಷರತೆಗೆ ಸಂಬಂಧಿಸಿದಂತೆ ಸ್ವಾತಂತ್ರ್ಯಾ ನಂತರ ಭಾರತದ ಸಿದ್ಧಿ – ಸಾಧನೆಗಳು ಹೇಳಿಕೊಳ್ಳುವಂತಹದ್ದಲ್ಲ. ಅದರಲ್ಲೂ ಸಮಗ್ರವಾಗಿ ಸಾಕ್ಷರತೆಯು ಏರಿಕೆಯಾಗಿದ್ದರೂ ಸಹ ಗ್ರಾಮೀಣ ಮಹಿಳೆಯರ ಮತ್ತು ಪರಿಶಿಷ್ಟ ಮಹಿಳೆಯರ ಸಾಕ್ಷರತೆ ಪ್ರಮಾಣವು ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಭಾರತದಲ್ಲಿನ ೨೨ ರಾಜ್ಯಗಳಲ್ಲಿ ಮಹಿಳೆಯರ ಸಾಕ್ಷರತೆಗೆ ಸಂಬಂಧಿಸಿದಂತೆ ಕರ್ನಾಟಕವು ೧೪ನೆಯ ಸ್ಥಾನದಲ್ಲಿದೆ (೧೯೯೧). ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಹಿಳೆಯರ ಸಾಕ್ಷರತೆ ಅತ್ಯಂತ ಕೆಳ ಮಟ್ಟದಲ್ಲಿದೆ. ಕೇರಳ, ಆಂಧ್ರಪ್ರದೇಶ ಮತ್ತು ತಮಿಳು ನಾಡು ರಾಜ್ಯಗಳಲ್ಲಿ ಮಹಿಳೆಯರ ಸಾಕ್ಷರತೆಯು ಶೇ. ೫೦ ಕ್ಕಿಂತ ಅಧಿಕವಿದೆ. ಆದರೆ ಕರ್ನಾಟಕದಲ್ಲಿ ಮಹಿಳೆಯರ ಸಾಕ್ಷರತೆ ಕೇವಲ ಶೇ. ೪೪.೩೪. ಈ ಕಾರಣಕ್ಕೆ ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಬೆಳವಣಿಗೆ ಪ್ರಮಾಣವು ಕರ್ನಾಟಕದಲ್ಲಿ ಶೇ. ೨೬.೭ ಇದ್ದರೆ, ಆಂಧ್ರಪ್ರದೇಶದಲ್ಲಿ ಶೇ. ೨೩.೧. ತಮಿಳುನಾಡಿನಲ್ಲಿ ಶೇ. ೧೭.೫ ಮತ್ತು ಕೇರಳದಲ್ಲಿ ೧೯.೨ ಇದೆ (೧೯೭೧ – ೮೧).

ಮಹಿಳಾ ಸಾಕ್ಷರತೆ ಮಹತ್ವ

ಸಾಕ್ಷರತೆ ಪ್ರಮಾಣ ಹಾಗೂ ಪ್ರಜನೋತ್ಪತ್ತಿ ಪ್ರಮಾಣಗಳ ನಡುವೆ ಇರುವ ವಿಲೋಮ ಸಂಬಂಧವನ್ನು ಅನೇಕ ಅಧ್ಯಯನಗಳು ದೃಢಪಡಿಸಿವೆ. ಅದರಲ್ಲೂ ಮಹಿಳಾ ಸಾಕ್ಷರತೆಯು ಪ್ರಜನೋತ್ಪತ್ತಿ ಪ್ರಮಾಣದ ಮೇಲೆ ತೀವ್ರ ಪ್ರಭಾವಬೀರ ಬಲ್ಲುದಾಗಿದೆ ಎಂಬುದನ್ನು ಜೀನ್ ಡ್ರೀಜ್ ಅವರ ಒಂದು ಅಧ್ಯಯನವು ತೋರಿಸಿಕೊಟ್ಟಿದೆ (ಡ್ರೀಜ್ ಜಿ. ೧೯೯೬) ಸಾಕ್ಷರತೆಯಿಂದ ಸಶಕ್ತಳಾದ ಹೆಣ್ಣು ಮತ್ತೆ ಮತ್ತೆ ಗರ್ಭಧರಿಸುವ ಪ್ರಯಾಸದ ಕ್ರಿಯೆಗೆ ಒಳಗಾಗಲು ಬಯಸುವುದಿಲ್ಲ. ಈ ಕಾರಣದಿಂದಾಗಿ ಮಹಿಳೆಯರ ಸಾಕ್ಷರತೆ ಪ್ರಮಾಣ ಉತ್ತಮಗೊಂಡಂತೆ ಪ್ರಜನೋತ್ಪತ್ತಿ ಪ್ರಮಾಣವು ಕಡಿಮೆಯಾಗುವುದನ್ನು ಕಾಣಬಹುದಾಗಿದೆ. ಕರ್ನಾಟಕವನ್ನೇ ತೆಗೆದುಕೊಂಡರೆ ಮಹಿಳೆಯರ ಸಾಕ್ಷರತೆ ಅಧಿಕವಿರುವ ಜಿಲ್ಲೆಗಳಿಗಿಂತ ಅದು ಕಡಿಮೆ ಇರುವ ಜಿಲ್ಲೆಗಳಲ್ಲಿ ಪ್ರಜನೋತ್ಪತ್ತಿ ಪ್ರಮಾಣವು ಅಧಿಕವಿರುವುದನ್ನು ಕಾಣಬಹುದು.

ಸಾಕ್ಷರತೆಯು ಮಹಿಳೆಯರನ್ನು ಸಶಕ್ತಳನ್ನಾಗಿಸುತ್ತದೆ. ಪ್ರಜನೋತ್ಪತ್ತಿ ಪ್ರಕ್ರಿಯೆಯ ಮೇಲೆ ಸಾಕ್ಷರತೆಯು ಮಹಿಳೆಯರಿಗೆ ನಿಯಂತ್ರಣ ಒದಗಿಸುತ್ತದೆ. ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳುವ ಸಾಮರ್ಥ್ಯವನ್ನು ಸಾಕ್ಷರತೆಯು ಮಹಿಳೆಯರಿಗೆ ಒದಗಿಸುತ್ತದೆ. ಈ ದಿಶೆಯಲ್ಲಿ ಪುರುಷರ ಸಾಕ್ಷರತೆಗಿಂತ ಮಹಿಳೆಯರ ಸಾಕ್ಷರತೆಯ ಪಾತ್ರ ತುಂಬಾ ಮಹತ್ವದ್ದಾಗಿದೆ. ಸಾಕ್ಷರತೆಯು ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರ ನಡುವಿನ ಶಕ್ತಿ ಸಂಬಂಧವನ್ನು ಬದಲಾಯಿಸುವ ದಿಶೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಮಹಿಳೆಯರ ಸಶಕ್ತೀಕರಣವೆಂದರೆ ಗಂಡು – ಹೆಣ್ಣುಗಳ ನಡುವಿನ ಶಕ್ತಿ ಸಂಬಂಧಗಳ ಬದಲಾವಣೆ ಎಂದು ಹೇಳಬಹುದು. ಲಿಂಗವಾದಿ ವಿಚಾರ ಪ್ರಣಾಳಿಕೆಯನ್ನು ಒಡೆಯುವ ದೃಷ್ಟಿಯಿಂದ ಮಹಿಳೆಯರ ಸಶಕ್ತೀಕರಣ ತುಂಬಾ ನಿರ್ಣಾಯಕವಾದುದಾಗಿದೆ. ಸಾಕ್ಷರತೆಯು ಮಹಿಳೆಯರಿಗೆ ಧಾರಣಶಕ್ತಿಯನ್ನು ಒದಗಿಸುತ್ತದೆ. ಬದುಕನ್ನು ಉತ್ತಮ ಪಡಿಸಿಕೊಳ್ಳಲು ಇರುವ ಅವಕಾಶಗಳನ್ನು ದಕ್ಕಿಸಿಕೊಳ್ಳುವ ತಾಕತ್ತನ್ನು ಸಾಕ್ಷರತೆ ಮಹಿಳೆಯರಿಗೆ ಒದಗಿಸುತ್ತದೆ ಮತ್ತು ಅವಕಾಶಗಳಲ್ಲಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅದು ಒದಗಿಸುತ್ತದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹಿಳೆಯರು ಸಹ ಭಾಗಿಗಳಾಗಲು ಅವರಿಗೆ ಸಾಕ್ಷರತೆ ತುಂಬಾ ಅಗತ್ಯವಾಗಿದೆ. ಸದ್ಯ ಇರುವ ಲಿಂಗ ಸಂಬಂಧಗಳನ್ನು ಪರಿವರ್ತಿಸಲು, ಲಿಂಗ ಸಂಬಂಧಗಳಲ್ಲಿ ಇರುವ ಅಸೌಷ್ಟವನ್ನು ಸರಿಪಡಿಸಲು ಮಹಿಳೆಯರಿಗೆ ಸಾಕ್ಷರತೆ ತುಂಬಾ ಅಗತ್ಯವಾಗಿದೆ.

ಮಹಿಳೆಯರು ಅಂತರ್ಗತ ಮಾಡಿಕೊಂಡಿರುವ ಲಿಂಗವಾದಿ ವಿಚಾರ ಪ್ರಣಾಳಿಕೆಯನ್ನು, ಪರಹಿತವಾದಿ ಮನೋಭಾವವನ್ನು, ಕುಟುಂಬ ಸಂಬಂಧಗಳಲ್ಲಿ ಸಹಕಾರಿ ಧೋರಣೆ ತಳೆಯುವ ಹಾಗೂ ಸಂಘರ್ಷದ ಭಾವನೆಯನ್ನು ಹತ್ತಿಕ್ಕುವ ನಿಲುವನ್ನು ತೊಡೆದು ಹಾಕಲು ಮಹಿಳೆಯರಿಗೆ ಸಾಕ್ಷರತೆ ತುಂಬಾ ಅವಶ್ಯಕವಾಗಿದೆ.

ಸಾಕ್ಷರತೆಗೆ ಸಂಬಂಧಿಸಿದ ಲಿಂಗವಾರು ಅಸಮಾನತೆಯು ಸಮಾಜದಲ್ಲಿ ಬೇರೂರಿರುವ ಮಹಿಳೆಯರ ನಿಕೃಷ್ಟೀಕರಣ ಹಾಗೂ ಲಿಂಗವಾದಿ ತಾರತಮ್ಯಗಳ ಅಭಿವ್ಯಕ್ತಿಯಾಗಿದೆ ಎನ್ನುತ್ತಾರೆ ಅಮರ್ತ್ಯಸೇನ್. ಅಭಿವೃದ್ಧಿಯಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಪಾಲು ದೊರೆಯುತ್ತಿಲ್ಲ ಎಂಬುದಕ್ಕೆ ಸಾಕ್ಷರತೆಗೆ ಸಂಬಂಧಿಸಿದ ಲಿಂಗವಾರು ಅಸಮಾನತೆಯು ಒಂದು ಸ್ಪಷ್ಟ ನಿದರ್ಶನವಾಗಿದೆ ಎಂದು ಹೇಳಬಹುದು. ಸಾಕ್ಷರತೆಯಲ್ಲಿ ಲಿಂಗವಾರು ಅಸಮಾನತೆಯು ಅಭಿವೃದ್ಧಿಯಲ್ಲಿನ ಲಿಂಗವಾರು ಅಸಮಾನತೆಯ ಪ್ರತಿರೂಪವೆಂದೇ ಭಾವಿಸಬಹುದಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಮಹಿಳೆಯರ ಸಾಕ್ಷರತೆ

ಈ ಭಾಗದಲ್ಲಿ ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಲಿಂಗವಾರು ಸಾಕ್ಷರತೆ ಅಂತರ ಅಸಮಾನತೆಗಳನ್ನು ವಿವರವಾಗಿ ಚರ್ಚಿಸಲಾಗಿದೆ. ಇದರ ಜೊತೆಗೆ ಸಾಕ್ಷರತೆ – ಪ್ರಜನೋತ್ಪತ್ತಿ, ಜನಸಂಖ್ಯೆ ಬೆಳವಣಿಗೆ, ಮಹಿಳೆಯರ ವಿವಾಹದ ವಯಸ್ಸು ಮುಂತಾದವುಗಳ ನಡುವಿನ ಸಂಬಂಧವನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಕರ್ನಾಟಕದಲ್ಲಿ ಮಹಿಳಾ ಸಾಕ್ಷರತೆಯು ಶೇ. ೨೫ ಕ್ಕಿಂತ ಕಡಿಮೆ ಇರುವ ನಾಲ್ಕು ಜಿಲ್ಲೆಗಳ ಪೈಕಿ ಕೊಪ್ಪಳವೂ ಒಂದು ಜಿಲ್ಲೆಯಾಗಿದೆ. ೧೯೯೧ರಲ್ಲಿ ಕೊಪ್ಪಳ ಜಿಲ್ಲೆಯ ಮಹಿಳಾ ಸಾಕ್ಷರತಾ ಪ್ರಮಾಣ ಕೇವಲ ಶೇ. ೨೨.೭೮. ಈ ಜಿಲ್ಲೆಯಲ್ಲಿ ಮಹಿಳೆಯರ ಸಾಕ್ಷರತೆಯು ಪುರುಷರ ಸಾಕ್ಷರತೆಯ ಅರ್ಧದಷ್ಟು ಇಲ್ಲ ಎಂಬುದನ್ನು ಕೋಷ್ಟಕದಿಂದ ತಿಳಿದುಕೊಳ್ಳಬಹುದು. ೧೯೬೧ ರಲ್ಲಿ ಕೊಪ್ಪಳ ಜಿಲ್ಲೆಯ ಮಹಿಳೆಯರ ಸಾಕ್ಷರತೆಯು ಶೇ. ೫.೩೫ ಇತ್ತು. ೧೯೯೧ ರಲ್ಲಿ ಅದು ಶೇ. ೨೨.೭೮ಕ್ಕೆ ಏರಿದೆ. ಕಳೆದ ಮೂವತ್ತು ವರ್ಷಗಳಲ್ಲಿ ಈ ಜಿಲ್ಲೆಯ ಮಹಿಳೆಯರ ಸಾಕ್ಷರತೆ ಪ್ರಮಾಣವು ೪.೦೩ ಪಟ್ಟು ಅಧಿಕಗೊಂಡಿದೆ. ಪುರುಷರ ಸಾಕ್ಷರತೆಯು ಇದೇ ಅವಧಿಯಲ್ಲಿ ೨ ಪಟ್ಟು ಅಧಿಕಗೊಂಡಿಲ್ಲ.

ಕೊಪ್ಪಳ ಜಿಲ್ಲೆಯಲ್ಲಿ ಸಾಕ್ಷರತೆ: ೧೯೬೧ ಮತ್ತು ೧೯೯೧
ಕೋಷ್ಟಕ: .

 

ಒಟ್ಟು

ಮಹಿಳೆಯರು
(ಶೇಕಡ)

ಪುರುಷರು

೧೯೬೧
೧೯೯೧

೧೭.೩೪
೩೮.೨೩

೫.೩೫
೨೨.೭೮

೨೯.೦೨
೫೩.೪೬

ಕೋಷ್ಟಕ – ೬.೩ ರಲ್ಲಿ ತೋರಿಸಿರುವಂತೆ ಕೊಪ್ಪಳ ಜಿಲ್ಲೆಯಲ್ಲಿ ಸಾಕ್ಷರತೆಗೆ ಸಂಬಂಧಿಸಿದ ಲಿಂಗವಾರು ಅಂತರವು ೧೯೬೧ರಲ್ಲಿ ಶೇ. ೨೩.೬೭ ಅಂಶಗಳಷ್ಟಿತ್ತು. ಇದು ೧೯೯೧ ರಲ್ಲಿ ಶೇ. ೩೦.೬೮ ಅಂಶಗಳಿಗೆ ಏರಿಕೆಯಾಗಿದೆ. ಇದು ಆತಂಕಕ್ಕೆ ಕಾರಣವಾಗಿರುವ ಸಂಗತಿಯಾಗಿದೆ. ವಾಸ್ತವವಾಗಿ ೧೯೬೧ ರಿಂದ ೧೯೯೧ರ ಕಾಲಾವಧಿಯಲ್ಲಿ ಮಹಿಳೆಯರ ಸಾಕ್ಷರತೆಯ ಬೆಳವಣಿಗೆ ಗತಿಯು ಪುರುಷರ ಸಾಕ್ಷರತೆಯ ಬೆಳವಣಿಗೆ ಗತಿಗಿಂತ ಅಧಿಕವಾಗಿದೆ. ಆದರೆ ಮೂಲದಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣವು ಅತ್ಯಂತ ಕಡಿಮೆ ಇದ್ದುದರಿಂದಾಗಿ ಅದು ವೇಗದಲ್ಲಿ ಬೆಳೆದರೂ ಲಿಂಗವಾರು ಅಂತರ ೧೯೬೧ ರಿಂದ ೧೯೯೧ರ ಅವಧಿಯಲ್ಲಿ ತೀವ್ರವಾಗಿದೆ.

ರಾಜ್ಯದಲ್ಲಿ ಕೊಪ್ಪಳ ಜಿಲ್ಲೆಯ ಪಾಲು

೧೯೯೧ರ ಜನಗಣತಿಯ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿರುವ ಮಹಿಳಾ ಸಾಕ್ಷರರ ಸಂಖ್ಯೆ ೮೬.೦೩೩. ರಾಜ್ಯದ ಮಹಿಳಾ ಸಾಕ್ಷರರ ಸಂಖ್ಯೆ ೮೧,೪೧,೫೬೫. ರಾಜ್ಯದ ಮಹಿಳಾ ಜನಸಂಖ್ಯೆಯಲ್ಲಿ ಕೊಪ್ಪಳ ಜಿಲ್ಲೆಯ ಪಾಲು ಶೇ. ೨.೭೫. ಆದರೆ, ರಾಜ್ಯದ ಅಕ್ಷರಸ್ಥ ಮಹಿಳೆಯರಲ್ಲಿ ಕೊಪ್ಪಳ ಜಿಲ್ಲೆಯ ಪಾಲು ಕೇವಲ ೧.೦೬ ಅಂದರೆ ರಾಜ್ಯದ ಅನಕ್ಷರಸ್ಥ ಮಹಿಳೆಯರಲ್ಲಿ ಕೊಪ್ಪಳ ಜಿಲ್ಲೆಯ ಪಾಲು ಶೇ. ೨.೮೫ ರಷ್ಟಿದೆ. ಒಟ್ಟಾರೆ ಮಹಿಳಾ ಸಾಕ್ಷರತೆ ದೃಷ್ಟಿಯಿಂದ ಕೊಪ್ಪಳ ಜಿಲ್ಲೆಯ ಸಿದ್ಧಿ – ಸಾಧನೆ ನಿಕೃಷ್ಟವಾಗಿದೆ. ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶವನ್ನು ತೆಗೆದುಕೊಂಡರೆ ಇಲ್ಲಿ ಮಹಿಳೆಯರ ಸಾಕ್ಷರತೆ ಕೇವಲ ಶೇ. ೧೯.೧೮. ಈ ಜಿಲ್ಲೆಯಲ್ಲಿರುವ ಪ್ರತಿ ಐವರು ಮಹಿಳೆಯರಲ್ಲಿ ನಾನ್ವರು ಅನಕ್ಷರಸ್ಥರಾಗಿದ್ದರೆ ಒಬ್ಬರು ಮಾತ್ರ ಅಕ್ಷರಸ್ಥರಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಮಹಿಳೆಯರ ಸಾಕ್ಷರತೆ ದೃಷ್ಟಿಯಿಂದ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಜಿಲ್ಲೆ ಕೊಪ್ಪಳ. ಈ ಧಿಶೆಯಲ್ಲಿ ಜಿಲ್ಲಾ ಪಂಚಾಯತಿಯು ವಿಶೇಷ ಗಮನ ಹರಿಸಬೇಕಾಗಿದೆ.

ಸಾಕ್ಷರತೆಯ ಜಾತಿ ನೆಲೆಗಳು

ಸಾಕ್ಷರತೆಗೆ ಸಂಬಂಧಿಸಿದ ಸಿದ್ಧಿ – ಸಾಧನೆಗಳನ್ನು ಅಖಂಡವಾಗಿ, ಇಡೀ ಜನಸಂಖ್ಯೆಗೆ ಅನ್ವಯವಾಗುವಂತೆ ಪರಿಗಣಿಸುವುದರಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಸಾಕ್ಷರತೆಯ ಲಿಂಗ ಸಂಬಂಧಿ ನೆಲೆಗಳನ್ನು ಪರಿಗಣಿಸಬೇಕಾಗುತ್ತದೆ. ಅದೇ ರೀತಿ ಸಾಕ್ಷರತೆಗೆ ಸಂಬಂಧಿಸಿದ ಜಾತಿ ನೆಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗುತ್ತದೆ. ಕೊಪ್ಪಳ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಶೇ. ೨೧.೭೬ (೨,೦೮,೫೦೦). ಏಣಿ ಶ್ರೇಣಿಗಳಿಂದ ಹಾಗೂ ಜಾತಿ ವ್ಯವಸ್ಥೆಯಿಂದ ಕೂಡಿರುವ ನಮ್ಮ ಸಮಾಜದಲ್ಲಿ ಅತ್ಯಂತ ನಿಕೃಷ್ಟವಾದ ಬದುಕು ನಡೆಸುತ್ತಿರುವ ಮಂದಿ ಪರಿಶಿಷ್ಟರಾಗಿದ್ದಾರೆ. ಅಭಿವೃದ್ಧಿಯಲ್ಲಿ ಇವರ ಪಾಲು ಎಷ್ಟಿದೆ ಎಂಬುದೇ ಅದರ ಮೌಲ್ಯ ಮಾಪನದ ಮಾನದಂಡವಾಗಬೇಕು. ಉದಾಹರಣೆಗೆ ಕೊಪ್ಪಳ ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ. ೨೧.೭೭ ರಷ್ಟಿರುವ ಪರಿಶಿಷ್ಟರ ಪ್ರಮಾಣವು ಜಿಲ್ಲಿಯ ಒಟ್ಟು ಸಾಕ್ಷರತೆಯಲ್ಲಿ ಎಷ್ಟಿದೆ ಎಂಬುದು ಸದರಿ ಜಿಲ್ಲೆಯ ಅಭಿವೃದ್ಧಿಯ ಮೌಲ್ಯಮಾಪನದ ಮಾನದಂಡ. ಕೊಪ್ಪಳ ಜಿಲ್ಲೆಯಲ್ಲಿರುವ ಒಟ್ಟು ಅಕ್ಷರಸ್ಥರ ಸಂಖ್ಯೆ ೩,೬೯,೬೫೭ ಇವರಲ್ಲಿ ಪರಿಶಿಷ್ಟರ (ಪ.ಜಾ+ ಪ.ಪಂ) ಸಂಖ್ಯೆ ಕೇವಲ ೩೪,೩೪೩. ಅಂದರೆ ಕೊಪ್ಪಳ ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ. ೨೧.೭೭ ಪಾಲಿ ಪಡೆದಿರುವ ಪರಿಶಿಷ್ಟರು ಜಿಲ್ಲೆಯ ಸಾಕ್ಷರರ ಸಂಖ್ಯೆಯಲ್ಲಿ ಕೇವಲ ಶೇ. ೯.೨೯ ಪಾಲು ಪಡೆದಿದ್ದಾರೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿರುವ ಒಟ್ಟು ಅನಕ್ಷರಸ್ಥರ ಸಂಖ್ಯೆ ೪,೬೯,೭೭೪. ಇವರಲ್ಲಿ ಪರಿಶಿಷ್ಟರ ಸಂಖ್ಯೆ ೧,೨೬,೦೧೮. ಸಾಪೇಕ್ಷವಾಗಿ ಜಿಲ್ಲೆಯ ಒಟ್ಟು ಅನಕ್ಷರಸ್ಥರಲ್ಲಿ ಪರಿಶಿಷ್ಟರ ಪಾಲು ಶೇ. ೨೬.೮೨. ಅಭಿವೃದ್ಧಿ ದುಸ್ಥಿತಿಯ ತೀವ್ರತೆಯು ಸಾಮಾನ್ಯ ಜನಸಂಖ್ಯೆಗಿಂತ ಪರಿಶಿಷ್ಟರಲ್ಲಿ ಅಧಿಕವಾಗಿದೆ.

ಆದ್ದರಿಂದ ಸಾಕ್ಷರತೆಗೆ ಸಂಬಂಧಿಸಿದ ಪ್ರಗತಿಯನ್ನು ಖಂಡತುಂಡವಾಗಿ ಬಿಡಿ ಬಿಡಿಯಾಗಿ ಸಾಮಾನ್ಯ ಜನಸಂಖ್ಯೆ ಹಾಗೂ ಪರಿಶಿಷ್ಟ ಜನಸಂಖ್ಯೆಗಳಿಗೆ ಸಂಬಂಧಿಸಿದಂತೆ ಪರಿಭಾವಿಸುವುದು ‘ರಾಜಕೀಯಾರ್ಥಿಕತೆ’ ದೃಷ್ಟಿಯಿಂದ ತುಂಬಾ ಮುಖ್ಯವಾದುದಾಗಿದೆ. ಸರ್ಕಾರದ ನೀತಿ – ನಿರೂಪಣೆ ಇಂಪ್ಲಿಕೇಶನ್ ದೃಷ್ಟಿಯಿಂದಲೂ ಇದು ತುಂಬಾ ಅವಶ್ಯಕ. ಸಾಕ್ಷರತೆಯೇ ಅಭಿವೃದ್ಧಿ ಎಂತಾದರೆ ಅದು ಸಮಾಜದ ಎಲ್ಲ ವರ್ಗದವರಿಗೂ ಯಾಕೆ ಸಮಾನವಾಗಿ ದೊರೆಯುತ್ತಿಲ್ಲ? ಪಾರಂಪರಿಕವಾಗಿ ನಮ್ಮ ಸಮಾಜದ ಒಂದು ವರ್ಗಕ್ಕೆ ಅಕ್ಷರ ಜ್ಞಾನವನ್ನು ನಿಷೇಧಿಸಲಾಗಿತ್ತು. ಅದರ ಪರಿಣಾಮವಾಗಿ ಇಂದಿಗೂ ನಮ್ಮ ಸಮಾಜದಲ್ಲಿ ಸಾಮಾನ್ಯ ಜನಸಂಖ್ಯೆ ಹಾಗೂ ಪರಿಶಿಷ್ಟ ಜನಸಂಖ್ಯೆಗಳ ನಡುವೆ ಸಾಕ್ಷರತೆಗೆ ಸಂಬಂಧಿಸಿದಂತೆ ತೀವ್ರ ಅಸಮಾನತೆಗಳಿರುವುದನ್ನು ಕಾಣಬಹುದಾಗಿದೆ.

ದೊಡ್ಡ ಪ್ರಮಾಣದಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ಅನೇಕ ಬಗೆಯ ಸೌಲಭ್ಯ – ಸವಲತ್ತುಗಳನ್ನು ಒದಗಿಸಲಾಗಿದೆ. ಆದರೆ ತೆರೆದಿರುವ ಶಾಲೆಗಳನ್ನು ಪ್ರವೇಶಿಸುವ, ಒದಗಿಸಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವ, ಅವುಗಳನ್ನು ಧಾರಣ ಮಾಡಿಕೊಳ್ಳುವ ಸಾಮರ್ಥ್ಯ ಪರಿಶಿಷ್ಟ ಜನಸಂಖ್ಯೆಗೆ ಇಲ್ಲವಾಗಿದೆ. ಸಾಕ್ಷರತೆಗೆ ಸಂಬಂಧಿಸಿದ ಜಾತಿವಾರು ಅಸಮಾನತೆಗಳು ನಮ್ಮ ಸಾಮಾಜಿಕ ವ್ಯವಸ್ಥೆಯ ಒಂದು ಪ್ರತಿಬಿಂಬವೇ ಆಗಿದೆ.

ಕೋಷ್ಟಕ – ೬.೪ ರಲ್ಲಿ ಕೊಪ್ಪಳ ಜಿಲ್ಲೆಯ ಪ.ಜಾ. ಮತ್ತು ಪ.ಪಂ.ಗಳ ಸಾಕ್ಷರತೆ ಪ್ರಮಾಣವನ್ನು ಮತ್ತು ಕೋಷ್ಟಕ – ೬.೫ ರಲ್ಲಿ ಪರಿಶಿಷ್ಟರ ಒಟ್ಟು ಜನಸಂಖ್ಯೆಯ (ಪ.ಜಾ. + ಪ.ಪಂ.) ಸಾಕ್ಷರತೆಯನ್ನು ಮತ್ತು ಸಾಮಾನ್ಯ ಜನಸಂಖ್ಯೆಯ ಸಾಕ್ಷರತೆಯನ್ನು ನೀಡಲಾಗಿದೆ. ತುಲನಾತ್ಮಕ ಅಧ್ಯಯನಕ್ಕೆ ಅನುಕೂಲವಾಗುವಂತೆ ಅವುಗಳನ್ನು ಇಲ್ಲಿ ನೀಡಲಾಗಿದೆ.

ಕೊಪ್ಪಳ ಜಿಲ್ಲೆ: ಸಾಕ್ಷರತೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ೧೯೯೧
ಕೋಷ್ಟಕ: .

ವಿವರಗಳು

.ಜಾ

.ಪಂ

ಒಟ್ಟು

ಮಹಿಳೆಯರು

ಪುರುಷರು

ಒಟ್ಟು

ಮಹಿಳೆಯರು

ಪುರುಷರು

ಗ್ರಾಮೀಣನಗರಒಟ್ಟು

೧೮.೩೩

೩೫.೭೩

೨೦.೭೬

೭.೬೬

೨೪.೩೦

೧೦.೦೩

೨೮.೯೯

೪೭.೫೩

೩೧.೫೬

೨೧.೯೯

೩೨.೩೫

೨೩.೦೧

೭.೫೯

೧೮.೩೯

೮.೬೭

೩೫.೯೨

೪೫.೯೯

೩೬.೯೩

ಕೊಪ್ಪಳ ಜಿಲ್ಲೆ: ಸಾಕ್ಷರತೆ: ಶಿಷ್ಟರು ಮತ್ತು ಪರಿಶಿಷ್ಟರು
ಕೋಷ್ಟಕ: .

ವಿವರಗಳು

ಪರಿಶಿಷ್ಟ ಜನಸಂಖ್ಯೆ(.ಜಾ.+. .ಪಂ)

ಸಾಮಾನ್ಯ ಜನಸಂಖ್ಯೆ

ಒಟ್ಟು

ಮಹಿಳೆಯರು

ಪುರುಷರು

ಒಟ್ಟು

ಮಹಿಳೆಯರು

ಪುರುಷರು

ಗ್ರಾಮೀಣನಗರಒಟ್ಟು ೧೯.೪೧೩೪.೯೭೨೧.೪೨ ೭.೬೪೨೩.೦೦೯.೬೪ ೩೧.೦೯೪೭.೧೮೩೩.೧೪ ೩೫.೦೨೫೫.೧೪೩೮.೨೩ ೧೯.೧೮೪೨.೮೧೨೨.೭೮ ೫೦.೭೫೬೭.೪೮೫೩.೪೬

ಕೋಷ್ಟಕ ೬.೪ ರಲ್ಲಿ ತೋರಿಸಿರುವಂತೆ ಒಟ್ಟು ಮತ್ತು ಪುರುಷರಿಗೆ ಸಂಬಂಧಿಸಿದಂತೆ ಪ.ಪಂ.ಗಳ ಸಾಕ್ಷರತೆ ಪ್ರಮಾಣವು ಪ.ಜಾ.ಗಳ ಸಾಕ್ಷರತೆ ಪ್ರಮಾಣಕ್ಕಿಂತ ಅಧಿಕವಾಗಿದೆ. ಪ.ಪಂ.ಗಳಲ್ಲಿ ಸಾಂಪ್ರದಾಯಿಕವಾಗಿ ಅಸ್ಪೃಶ್ಯತೆಯನ್ನು ಅನುಭವಿಸಿದ ಜಾತಿಗಳ ಸಂಖ್ಯೆ ಕಡಿಮೆ. ಆದರೆ ಪ.ಜಾ.ಗಳಲ್ಲಿ ಅಸ್ಪೃಶ್ಯತೆ ಅನುಭವಿಸಿದ ಜಾತಿಗಳ ಸಂಖ್ಯೆ ಅಧಿಕವಾಗಿದೆ. ಪ.ಪಂ.ಗಳ ಸಾಕ್ಷರತೆಯು ಪ.ಜಾ.ಯಲ್ಲಿನ ಸಾಕ್ಷರತೆ ಪ್ರಮಾಣಕ್ಕಿಂತ ಅಧಿಕವಿರುವುದಕ್ಕೆ ಇದು ಒಂದು ಕಾರಣವಾಗಿರಬಹುದು.

ಕೊಪ್ಪಳ ಜಿಲ್ಲೆಯಲ್ಲಿ ಸಾಮಾನ್ಯ ಜನಸಂಖ್ಯೆಯ ಸಾಕ್ಷರತೆ ಪ್ರಮಾಣ ಶೇ. ೩೮.೨೩ ಇದ್ದರೆ ಪರಿಶಿಷ್ಟರ ಸಾಕ್ಷರತಾ ಪ್ರಮಾಣವು ಶೇ. ೨೧.೪೨ ರಷ್ಟಿದೆ. ಪರಿಶಿಷ್ಟ ಮಹಿಳೆಯರ ಸಾಕ್ಷರತೆಯು ಎರಡಂಕಿಯನ್ನು ತಲುಪದ ದುರಂತ ನಮ್ಮೆದುರಿಗಿದೆ. ಗ್ರಾಮೀಣ ಪ್ರದೇಶದ ಪರಿಶಿಷ್ಟ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ. ೭.೬೪. ಸಾಮಾನ್ಯ ಜನಸಂಖ್ಯೆಯ ಗ್ರಾಮೀಣ ಮಹಿಳೆಯ ಸಾಕ್ಷರತೆ ಶೇ. ೧೯.೧೮ ಇದೆ. ಸಾಕ್ಷರತೆಯ ಸೌಲಭ್ಯವು ಸಮಾಜದ ಎಲ್ಲ ವರ್ಗಕ್ಕೂ ಸಮಾನವಾಗಿ ದೊರೆಯುತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಕೊಪ್ಪಳ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳು ದಾಖಲಾತಿ ಮತ್ತು ಹಾಜರಾತಿ

ಒಂದು ದೇಶ ಯಾ ಪ್ರದೇಶದ ಶಿಕ್ಷಣದ ಅಡಿಪಾಯ ಪ್ರಾಥಮಿಕ ಶಾಲೆಗಳು. ಸಂವಿಧಾನದ ೪೫ನೆಯ ಪರಿಚ್ಛೇದದಲ್ಲಿ ೬ ರಿಂದ ೧೪ ವರ್ಷಗಳ ವಯೋಮಾನದ ಮಕ್ಕಳಿಗೆ ಶಿಕ್ಷಣವನ್ನು ಉಚಿತವನ್ನಾಗಿಯೂ, ಕಡ್ಡಾಯವನ್ನಾಗಿಯೂ ಮಾಡಲಾಗಿದೆ. ಆದರೆ ವಾಸ್ತವ ಸಂಗತಿ ಇದಕ್ಕೆ ಭಿನ್ನವಾಗಿದೆ. ಪ್ರಾಥಮಿಕ ಶಾಲೆಗಳನ್ನು ಪ್ರವೇಶಿಸದ ಮಕ್ಕಳ ಪ್ರಮಾಣ ಶೇ. ೧೦ ಕ್ಕಿಂತ ಅಧಿಕವಾಗಿದೆ.

ಜನಸಂಖ್ಯೆಯ ಮುನ್ನಂದಾಜಿನ ಪ್ರಕಾರ ಕೊಪ್ಪಳ ಜಿಲ್ಲೆಯ ಜನಸಂಖ್ಯೆ ೧೯೯೮ರಲ್ಲಿ ೧೧.೭೪ ಲಕ್ಷ. ಇವರಲ್ಲಿ ೭ ರಿಂದ ೧೩ ವರ್ಷಗಳ ವಯೋಮಾನದ ಮಕ್ಕಳ ಸಂಖ್ಯೆ ೨.೧೨ ಲಕ್ಷ (ಜನಸಂಖ್ಯೆಯ ಶೇ. ೧೭.೧೯ ಎಂಬ ಪ್ರಮೇಯದ ಆಧಾರದ ಮೇಲೆ). ಈ ಆಧಾರದ ಮೇಲೆ ಕೊಪ್ಪಳ ಜಿಲ್ಲೆಯಲ್ಲಿ ೧ ರಿಂದ ೭ನೆಯ ತರಗತಿಗಳಲ್ಲಿ ಕಲಿಯುತ್ತಿರಬೇಕಾದ ಮಕ್ಕಳ ಸಂಖ್ಯೆ ೧೯೯೮ ರಲ್ಲಿ ೨.೧೨ ಲಕ್ಷ ಇರಬೇಕು. ಆದರೆ ವಾಸ್ತವವಾಗಿ ೧೯೯೮ ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ೧ ರಿಂದ ೭ನೆಯ ತರಗತಿಗಳಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ೧.೭೨ ಲಕ್ಷ ಇದರಿಂದ ತಿಳಿಯುವುದೇನೆಂದರೆ ಜಿಲ್ಲೆಯಲ್ಲಿ ೧ ರಿಂದ ೭ನೆಯ ತರಗತಿಗಳಲ್ಲಿ ಕಲಿಯುತ್ತಿರಬೇಕಾದ ಮಕ್ಕಳ ಸಂಖ್ಯೆ ೨.೧೨ ಲಕ್ಷದಲ್ಲಿ ಸುಮಾರು ೪೦,೦೦೦ ಮಕ್ಕಳು ಶಾಲೆಯಲ್ಲಿ ಇಲ್ಲ. ಜಿಲ್ಲೆಯಲ್ಲಿ ಮಕ್ಕಳ ಶಾಲಾ ಪ್ರವೇಶ ಪ್ರಮಾಣ ಶೇ. ೮೧.೧೩. ಆದರೆ ರಾಜ್ಯ ಮಟ್ಟದಲ್ಲಿ ಮಕ್ಕಳ ಶಾಲಾ ಪ್ರವೇಶ ಪ್ರಮಾಣ ಶೇ. ೯೦ ರಷ್ಟಿದೆ. ಕೊಪ್ಪಳ ಜಿಲ್ಲೆಯಲ್ಲಿ ಶಾಲೆ ಪ್ರವೇಶಿಸಿದ ಒಟ್ಟು ಮಕ್ಕಳಲ್ಲಿ ಬಾಲಕಿಯರ ಪ್ರಮಾಣ ಶೇ. ೪೪.೪೪. ಆದರೆ ಇದು ರಾಜ್ಯ ಮಟ್ಟದಲ್ಲಿ ಶೇ. ೪೭.೭೧ ರಷ್ಟಿದೆ.

ಕೋಷ್ಟಕ – ೬.೬ ರಲ್ಲಿ ತೋರಿಸಿರುವಂತೆ ತರಗತಿಗಳು ಉನ್ನತವಾದಂತೆ ಬಾಲಕಿಯರ ಪ್ರಮಾಣ ಕಡಿಮೆಯಾಗುತ್ತಾ ನಡೆದಿದೆ.

ಪ್ರಾಥಮಿಕ ಶಾಲೆ ಮಕ್ಕಳಲ್ಲಿ ಬಾಲಕಿಯರ ಪ್ರಮಾಣ (ಕೊಪ್ಪಳ ಜಿಲ್ಲೆ)
ಕೋಷ್ಟಕ: .

ತರಗತಿ

ಶಾಲಾ ದಾಖಲಾತಿ

ಬಾಲಕಿಯರು

ದಾಖಲಾತಿಯಲ್ಲಿ ಬಾಲಕಿಯರ ಪ್ರಮಾಣ

೧ ರಿಂದ ೪೫ ರಿಂದ ೭೧ ರಿಂದ ೭

೮ ರಿಂದ ೧೦

೧,೨೧,೪೬೩

೫೨,೫೮೧

೧,೭೪,೦೪೪

೧೯,೪೮೫

೫೫,೨೧೬

೨೨,೧೩೧

೭೭,೩೪೭

೭,೫೩೫

ಶೇ. ೪೫.೪೬

ಶೇ. ೪೨.೦೯

ಶೇ. ೪೪.೪೪

ಶೇ. ೩೮.೯೭

೧ ರಿಂದ ೪ನೆಯ ತರಗತಿಗಳಲ್ಲಿ ಬಾಲಕಿಯರ ಪ್ರಮಾಣ ಶೇ. ೪೫.೪೬ ರಷ್ಟಿದ್ದರೆ ೫ ರಿಂದ ೭ನೆಯ ತರಗತಿಗಳಲ್ಲಿ ಬಾಲಕಿಯರ ಪ್ರಮಾಣ ಶೇ. ೪೨.೦೯ ರಷ್ಟಿದೆ. ಮುಂದೆ ೮ ರಿಂದ ೧೦ನೆಯ ತರಗತಿಗಳಲ್ಲಿ ಬಾಲಕಿಯರ ಪ್ರಮಾಣ ಕೇವಲ ಶೇ. ೩೮.೬೭. ಸಮಾನದಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ತಾರತಮ್ಯ ತೀವ್ರವಾಗಿರುವುದರ ಸೂಚನೆಯನ್ನು ಪ್ರಾಥಮಿಕ ಶಾಲೆಗಳಲ್ಲಿ ನೋಡಬಹುದು. ಹೆಣ್ಣು ಮಕ್ಕಳಿಗೆ ವಯಸ್ಸು ಅಧಿಕಗೊಂಡಂತೆ ಅವರ ಬಗೆಗಿನ ತಾರತಮ್ಯ ಅಧಿಕವಾಗುತ್ತದೆ. ಈ ಪ್ರವೃತ್ತಿಯನ್ನು ಉಳಿದ ಸಂಗತಿಗಳಿಗೆ ಸಂಬಂಧಿಸಿದಂತೆಯೂ ತೋರಿಸಬಹುದಾಗಿದೆ. ಕರ್ನಾಟಕದಲ್ಲಿ ಶಿಶುಮರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷದ ಒಳಗಿನ ಶಿಶುಗಳ ಮರಣ ಪ್ರಮಾಣದಲ್ಲಿ ಲಿಂಗ ತಾರತಮ್ಯ ಕೇವಲ ೭ ಜಿಲ್ಲೆಗಳಲ್ಲಿ ಮಾತ್ರ ಇದ್ದರೆ ೫ ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣಕ್ಕೆ ಸಂಬಂಧಿಸಿದಂತೆ ಲಿಂಗ ತಾರತಮ್ಯವು ೧೨ ಜಿಲ್ಲೆಗಳಲ್ಲಿ ಕಂಡುಬರುತ್ತದೆ.

ಬಾಲ ಕಾರ್ಮಿಕರ ಸಮಸ್ಯೆ

ಕರ್ನಾಟಕ ರಾಜ್ಯ ಮಟ್ಟದಲ್ಲಿ ೧೪ ವರ್ಷದೊಳಗಿನ ಮಕ್ಕಳಲ್ಲಿ ಬಾಲ ಕಾರ್ಮಿಕರ ಪ್ರಮಾಣ ಶೇ. ೬.೦೩ ಇದೆ. ಆದರೆ ರಾಯಚೂರು ಜಿಲ್ಲೆಯಲ್ಲಿ ಇದು ಶೇ. ೯.೧೨ ಇದೆ. ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಬಾಲ ಕಾರ್ಮಿಕರ ಸಂಖ್ಯೆ ದೊರೆಯುವುದಿಲ್ಲ. ರಾಯಚೂರು ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಸಂಖ್ಯೆ ೪೬,೦೦೦ (ವಿವರಗಳಿಗೆ ನೋಡಿ: (ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ ೧೯೯೯) ಕೊಪ್ಪಳ ಜಿಲ್ಲೆಯಲ್ಲಿ ೭ ರಿಂದ ೧೩ ವರ್ಷದ ಮಕ್ಕಳಲ್ಲಿ ಶಾಲೆ ಪ್ರವೇಶಿಸದ ಮಕ್ಕಳ ಸಂಖ್ಯೆ ೪೦,೦೦೦. ಮೇಲ್ಕಂಡ ವರದಿಯಲ್ಲಿನ ಬಾಲ ಕಾರ್ಮಿಕರ ಅಂದಾಜಿಗೆ ಸರಿಯಾಗಿ ಕೊಪ್ಪಳ ಜಿಲ್ಲೆಯಲ್ಲಿನ ಬಾಲ ಕಾರ್ಮಿಕರ ನಮ್ಮ ಅಂದಾಜು ಸರಿಯಾಗಿದೆ ಎಂದು ಭಾವಿಸಬಹುದು.

ಶಾಲಾ ದಾಖಲಾತಿಹಾಜರಾತಿ: ಸಾಮಾಜಿಕ ಸ್ವರೂಪ

ಕೋಷ್ಟಕ – ೬.೭ ರಲ್ಲಿ ಕೊಪ್ಪಳ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿನ, ಅಂದರೆ ಒಂದನೆಯ ತರಗತಿಯಿಂದ ಏಳನೆಯ ತರಗತಿಯವರೆಗಿನ ತರಗತಿಗಳಲ್ಲಿ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ವಿವರಗಳನ್ನು ನೀಡಲಾಗಿದೆ.

ಪ್ರಾಥಮಿಕ ಶಾಲೆಗಳಲ್ಲಿ ಹಾಜರಾತಿ ಮತ್ತು ದಾಖಲಾತಿ: ಸಾಮಾಜಿಕ ಸ್ವರೂಪ
ಕೋಷ್ಟಕ: .

ಸಾಮಾಜಿಕ ವರ್ಷ

ದಾಖಲಾತಿ

ಹಾಜರಾತಿ

ಬಾಲಕಿಯರು

ಬಾಲಕರು

ಒಟ್ಟು

ಬಾಲಕಿಯರು

ಬಾಲಕರು

ಒಟ್ಟು

ಪರಿಶಿಷ್ಟ ಜಾತಿ

೧೨,೪೫೩

(೪೪.೨೯)

೧೫,೬೬೩

(೫೫.೭೧)

೨೮,೧೧೬

(೧೦೦.೦೦)

೧೧,೪೬೯

(೪೪.೨೯)

೧೪,೪೩೯

(೫೫.೭೧)

೨೫,೯೦೪

(೧೦೦.೦೦)

ಪರಿಶಿಷ್ಟ ಪಂಗಡ

೯೬,೮೪

(೪೩.೫೪)

೧೨,೫೫೮

(೫೬.೫೪)

೨೨,೨೪೨

(೧೦೦.೦೦)

೪,೦೩೪

(೩೯,೬೨)

೧೨,೨೪೨

(೬೦.೩೮)

೨೦,೨೭೬

(೧೦೦.೦೦)

ಅಲ್ಪಸಂಖ್ಯಾತರು

೨,೨೭೪

(೭೬.೦೮)

೭೧೫

(೨೩.೯೨)

೧೯೮೯

(೧೦೦.೦೦)

೨೧೨೩

(೭೫.೦೦)

೭೦೮

(೨೫.೦೦)

೨೮೩೧

(೧೦೦.೦೦)

ಇತರೆ

೫೨೯೩೬

(೪೩.೮೬)

೬೭೭೬೧

(೫೬.೧೪)

೧,೨೦,೬೯೭

(೧೦೦.೦೦)

೪೯೪೭೬

(೪೫.೩೯)

೫೯೫೩೧

(೫೪.೬೧)

೧,೦೯,೦೦೭

(೧೦೦.೦೦)

ಒಟ್ಟು

೭೭೩೪೭

(೪೪.೪೪)

೯೬೬೯೭

(೫೫.೫೬)

೧,೭೪೦೪೪

(೧೦೦.೦೦)

೭೧೧೦೨

(೪೫.೦೦)

೮೬೯೨೦

(೫೫.೦೦)

೧,೫೮,೦೦೨

(೧೦೦.೦೦)

ಈ ವಿವರಗಳನ್ನು ಸಾಮಾಜಿಕ ವರ್ಗಗಳ ಸ್ವರೂಪದಲ್ಲಿ ನೀಡಿದೆ. ೧೯೯೮ ಸೆಪ್ಟೆಂಬರ್‌ನಲ್ಲಿದ್ದಂತೆ ಕೊಪ್ಪಳ ಜಿಲ್ಲೆಯ ದಾಖಲಾದ ಪ್ರಾಥಮಿಕ ಶಾಲೆಗಳ ಮಕ್ಕಳ ಸಂಖ್ಯೆ ೧,೭೪,೦೪೪. ಕರ್ನಾಟಕದ ಜನಸಂಖ್ಯೆಯಲ್ಲಿ ಕೊಪ್ಪಳ ಜಿಲ್ಲೆಯ ಪಾಲು ಶೇ. ೨.೧೩. ಆದರೆ ಪ್ರಾಥಮಿಕ ಶಾಲೆಗಳಲ್ಲಿನ ದಾಖಲಾದ ಮಕ್ಕಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಪ್ರಮಾಣ ಕೇವಲ ಶೇ. ೨.೦೯. ಈ ಜಿಲ್ಲೆಯಲ್ಲಿ ದಾಖಲಾದ ಒಟ್ಟು ಮಕ್ಕಳಲ್ಲಿ ಬಾಲಕಿಯರ ಪ್ರಮಾಣ ಶೇ. ೪೪.೪೪. ರಾಜ್ಯಮಟ್ಟದಲ್ಲಿ ಇದು ಶೇ. ೪೭.೭೨ ರಷ್ಟಿದೆ. ಇಡೀ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಬಾಲಕಿಯರ ಪ್ರಮಾಣ ಅತ್ಯಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಕೊಪ್ಪಳಕ್ಕೆ ಮೊದಲನೆಯ ಸ್ಥಾನವಿದೆ. ಇದರಿಂದ ಕೊಪ್ಪಳ ಜಿಲ್ಲೆಯಲ್ಲಿ ಶಾಲೆಯನ್ನು ಪ್ರವೇಶಿಸಿದ ಮಕ್ಕಳಲ್ಲಿ ಹೆಚ್ಚಿನವರು ಬಾಲಕಿಯರು ಎಂಬುದು ಸ್ಪಷ್ಟವಾಗುತ್ತದೆ. ಲಿಂಗ ತಾರತಮ್ಯವು ತೀವ್ರವಾಗಿರುವ ಸಂಗತಿಯನ್ನು ಇದು ತೋರಿಸುತ್ತದೆ.

ಅನುಬಂಧ ಕೋಷ್ಟಕಗಳಾದ – ೫.೧ ರಿಂದ ೫.೧೫ ರಲ್ಲಿ ಕರ್ನಾಟಕ ರಾಜ್ಯದ ೨೭ ಜಿಲ್ಲೆಗಳ ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ, ಹಾಜರಾತಿ, ಅವರ ಲಿಂಗ ಪ್ರಮಾಣ ಮುಂತಾದ ವಿವರಗಳನ್ನು ಸಾಮಾಜಿಕ ವರ್ಗಗಳ ಸ್ವರೂಪದಲ್ಲಿ ನೀಡಲಾಗಿದೆ.

ಪ್ರಾಥಮಿಕ ಶಾಲೆಗಳಲ್ಲಿನ ದಾಖಲಾದ ಹಾಗೂ ಹಾಜರಾದ ಮಕ್ಕಳ ಸಾಮಾಜಿಕ ವರ್ಗಗಳ ಪ್ರಮಾಣವನ್ನು ಕೋಷ್ಟಕ – ೬.೮ ರಲ್ಲಿ ತೋರಿಸಿದೆ.

.ಜಾ

.ಪಂ.

ಅಲ್ಪಸಂಖ್ಯಾತರು

ಇತರೆ

ಒಟ್ಟು

ದಾ.

ಹಾ.

ದಾ.

ಹಾ.

ದಾ.

ಹಾ.

ದಾ.

ಹಾ.

ದಾ.

ಹಾ.

೧೬.೧೫ ೧೬.೩೯ ೧೨.೭೮ ೧೨.೮೩ ೧.೭೨ ೧.೭೯ ೬೯.೩೫ ೬೮.೯೯ ೧೦೦.೦೦ ೧೦೦.೦೦

ಪ.ಜಾ: ಪರಿಶಿಷ್ಟ ಜಾತಿ, ಪ.ಪಂ: ಪರಿಶಿಷ್ಟ ಪಂಗಡ, ದಾ: ದಾಖಲಾತಿ, ಹಾ: ಹಾಜರಾತಿ

ಕೊಪ್ಪಳ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾದ ಮಕ್ಕಳಲ್ಲಿ ಪ.ಜಾ.ಯ ಮಕ್ಕಳ ಪ್ರಮಾಣ ಶೇ. ೧೬.೧೫. ಮತ್ತು ಪ.ಪಂ. ಗಳ ಮಕ್ಕಳ ಪ್ರಮಾಣ ಶೇ. ೧೨.೭೮. ಆದರೆ ಜಿಲ್ಲೆಯ ಜನಸಂಖ್ಯೆಯಲ್ಲಿ ಪ.ಜಾ ಮತ್ತು ಪ.ಪಂ. ಗಳ ಪ್ರಮಾಣ ಕ್ರಮವಾಗಿ ಶೇ. ೧೫.೫೩ ಮತ್ತು ೬.೨೪. ಪ್ರಾಥಮಿಕ ಶಾಲೆಗಳಲ್ಲಿ ದಾಖಲಾದ ಮಕ್ಕಳಲ್ಲಿ ಪ.ಜಾ. ಮತ್ತು ಪ.ಪಂ.ಗಳಿಗೆ ಸೇರಿದ ಮಕ್ಕಳ ಪ್ರಮಾಣವು ಅವರು ಜನಸಂಖ್ಯೆಯಲ್ಲಿ ಪಡೆದಿರುವ ಪ್ರಮಾಣಕ್ಕಿಂತ ಅಧಿಕವಾಗಿರುವುದು ಅತ್ಯಂತ ಸ್ವಾಗತಾರ್ಹ ಸಂಗತಿಯಾಗಿದೆ. ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮಕ್ಕಳ ಪ್ರಮಾಣ ಶೇ. ೧.೭೨.

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ದಾಖಲಾದ ಮಕ್ಕಳಲ್ಲಿ ಶೇ. ೯೦.೭೯ ರಷ್ಟು ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ಇದರ ಪ್ರಮಾಣ ಶೇ. ೯೦.೨೫. ಕೋಷ್ಟಕ – ೬.೯ ರಲ್ಲಿ ಇದರ ವಿವರ ನೋಡಬಹುದು.

ದಾಖಲಾತಿಹಾಜರಾತಿ ಪರಿಮಾಣ
ಕೋಷ್ಟಕ: .

ಸಾಮಾಜಿಕ ವರ್ಗಗಳು

ದಾಖಲಾತಿಯಲ್ಲಿ ಹಾಜರಾತಿ ಪ್ರಮಾಣ

ಕೊಪ್ಪಳ

ಕರ್ನಾಟಕ

ಪರಿಶಿಷ್ಟ ಜಾತಿಪರಿಶಿಷ್ಟ ಪಂಗಡಅಲ್ಪ ಸಂಖ್ಯಾತರು

ಇತರೆ ವರ್ಗ

ಒಟ್ಟು

೯೨.೧೫೯೧.೧೬೯೪.೭೧

೯೦.೩೧

೯೦.೭೯

೯೦.೬೬೮೮.೬೫೮೮.೮೨

೯೦.೫೪

೯೦.೨೫

ಪ.ಜಾ. ಗೆ ಸೇರಿದ ಮಕ್ಕಳಿಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಹಾಜರಾತಿ ಪ್ರಮಾಣ ಶೇ. ೯೨.೧೫. ಇದು ರಾಜ್ಯ ಮಟ್ಟಕ್ಕಿಂತ ಉತ್ತಮವಾಗಿದೆ. ವಾಸ್ತವವಾಗಿ ಈ ಜಿಲ್ಲೆಯಲ್ಲಿ ಹಾಜರಾತಿ ಪ್ರಮಾಣ ಅತ್ಯಂತ ಕಡಿಮೆ, ಅಂದರೆ ಶೇ. ೯೦.೩೧ ಇತರೆ ವರ್ಗದಲ್ಲಿದೆ. ರಾಜ್ಯ ಮಟ್ಟದಲ್ಲಿ ಪ.ಪಂ. ಮತ್ತು ಅಲ್ಪ ಸಂಖ್ಯಾತರ ಹಾಜರಾತಿ ಪ್ರಮಾಣ ಅತ್ಯಂತ ಕೆಳಮಟ್ಟದಲ್ಲಿದೆ (ಕ್ರಮವಾಗಿ ಶೇ. ೮೮.೬೫. ಶೇ. ೮೮.೮೨)

ಅತ್ಯಂತ ವಿಚಿತ್ರವಾದ ಸಂಗತಿಯೆಂದರೆ ಕೊಪ್ಪಳ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿನ ದಾಖಲಾದ ಮಕ್ಕಳಲ್ಲಿ ಬಾಲಕಿಯರ ಪ್ರಮಾಣ ಶೇ. ೪೫ ಮೀರಿಲ್ಲ. ಆದರೆ ಅಲ್ಪ ಸಂಖ್ಯಾತರಲ್ಲಿ ಮಾತ್ರ ದಾಖಲಾದ ಒಟ್ಟು ಮಕ್ಕಳಲ್ಲಿ ಬಾಲಕಿಯರ ಪ್ರಮಾಣ ಶೇ. ೭೬ ರಷ್ಟಿದೆ. ಇದು ಪರಿಶೀಲಿಸಬೇಕಾದ ಸಂಗತಿಯಾಗಿದೆ. ಕರ್ನಾಟಕದ ೨೭ ಜಿಲ್ಲೆಗಳ ಪೈಕಿ ೨೧ ಜಿಲ್ಲೆಗಳಲ್ಲಿನ ಅಲ್ಪ ಸಂಖ್ಯಾತರ ಮಕ್ಕಳಲ್ಲಿ ಬಾಲಕಿಯರ ಪ್ರಮಾಣ ಶೇ. ೫೦ ಕ್ಕಿಂತ ಅಧಿಕವಿದೆ. ಕೊಪ್ಪಳ ಜಿಲ್ಲೆಯ ಪರಿಸ್ಥಿತಿ ಯು ತುಂಬಾ ವಿಶಿಷ್ಟವಾದುದಾಗಿದೆ.

ಮಕ್ಕಳಶಿಕ್ಷಕರ ಅನುಪಾತ

ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರ ನಡುವಿನ ಅನುಪಾತ ರಾಜ್ಯಮಟ್ಟದಲ್ಲಿ ೫೦ ಆಗಿದ್ದರೆ ಕೊಪ್ಪಳದಲ್ಲಿ ಅದು ೫೬ ರಷ್ಟಿದೆ. ಅಂದರೆ ಕೊಪ್ಪಳದಲ್ಲಿ ಪ್ರತಿ ಪ್ರಾಥಮಿಕ ಶಾಲೆಯ ಶಿಕ್ಷಕ ಸರಾಸರಿ ೫೬ ವಿದ್ಯಾರ್ಥಿಗಳಿಗೆ ಕಲಿಸಬೇಕಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿರುವ ಒಟ್ಟು ಶಿಕ್ಷಕರ ಸಂಖ್ಯೆ ೩೦೭೨ (೧೯೯೮). ಇವರಲ್ಲಿ ಮಹಿಳಾ ಶಿಕ್ಷಕಿಯರ ಪ್ರಮಾಣ ಶೇ. ೩೬.೬೯. ಜಿಲ್ಲೆಯಲ್ಲಿರುವ ಒಟ್ಟು ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಪರಿಶಿಷ್ಟ ಶಿಕ್ಷಕರ ಪ್ರಮಾಣ ಶೇ. ೨೩.೩೪. ಮಹಿಳೆಯರು ಮತ್ತು ಪರಿಶಿಷ್ಟರು – ಇಬ್ಬರಿಗೂ ಸಂಬಂಧಿಸಿದಂತೆ ಜಿಲ್ಲೆಯು ಮೀಸಲಾತಿ ನಿಯಮವನ್ನು ಪಾಲಿಸಿರುವ ಸಂಗತಿ ಇಲ್ಲಿದೆ.

ಕೊಪ್ಪಳ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು
ಕೋಷ್ಟಕ: .೧೦

ಒಟ್ಟು

ಪರಿಶಿಷ್ಟರು

ಒಟ್ಟು ಶಿಕ್ಷಕರ ಸಂಖ್ಯೆಮಹಿಳಾ ಶಿಕ್ಷಕಿಯಯರ ಸಂಖ್ಯೆಪುರುಷ ಶಿಕ್ಷಕರ ಸಂಖ್ಯೆ

೩೦೯೨

೧೦೨೭

೧೮೬೫

೭೩೦ (ಶೇ. ೨೫.೧೭)

೨೬೩ (ಶೇ. ೨೩.೩೪)

೪೬೮ (ಶೇ. ೨೫.೦೯)

ಕಳೆದ ೮ – ೧೦ ವರ್ಷಗಳಲ್ಲಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳ ಸಂಖ್ಯೆ, ಶಿಕ್ಷಕರ ಸಂಖ್ಯೆ, ಮತ್ತು ಶಾಲಾ ದಾಖಲಾತಿ ಗಣನೀಯವಾಗಿ ಬೆಳದಿದೆ. ಇದು ಇನ್ನೂ ಬೆಳೆಯಬೇಕು. ಇದು ಕೇವಲ ಒಂದು ಮುಖ ಮಾತ್ರ. ಪ್ರಾಥಮಿಕ ಶಾಲೆಗೆ ಸಂಬಂಧಿಸಿದಂತೆ ಇನ್ನೊಂದು ಮುಖವಿದೆ. ಅದೇ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ, ಪ್ರಾಥಮಿಕ ಶಿಕ್ಷಣದ ಗಾತ್ರದಲ್ಲಿನ ವಿಸ್ತರಣೆ ಜೊತೆಗೆ ಶಿಕ್ಷಣದ ಗುಣಮಟ್ಟದ ಸುಧಾರಣೆ ಕಡೆಗೂ ಗಮನ ನೀಡಬೇಕಾದುದು ತುಂಬಾ ಅವಶ್ಯಕ. ಶಿಕ್ಷಣದ ಉನ್ನತ ಸ್ತರದಲ್ಲಿ ಮಹಿಳೆಯರ ಪ್ರಮಾಣ ಮತ್ತು ಪರಿಶಿಷ್ಟರ ಪ್ರಮಾಣ ಬಹಳ ಕಡಿಮೆ ಇದೆ. ಇದಕ್ಕೆ ಮುಖ್ಯ ಕಾರಣ ಶಾಲೆ ಪ್ರವೇಶಿಸಿದ ಮಕ್ಕಳಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು ಮತ್ತು ಪರಿಶಿಷ್ಟರು ಪ್ರೌಢಶಾಲೆ ಮಟ್ಟಕ್ಕೆ ಹೋಗುವುದರೊಳಗೆ ಶಾಲೆ ಬಿಟ್ಟು ಬಿಡುತ್ತಾರೆ. ಈ ಕೆಲವು ಸೂಕ್ಷ್ಮ ಹಾಗೂ ಸಂಕೀರ್ಣ ಸಂಗತಿಗಳ ಕಡೆಗೆ ಗಮನ ನೀಡಬೇಕಾಗಿದೆ. ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ ಶಿಕ್ಷಣದ ಗುಣಮಟ್ಟವನ್ನು ಜಿಲ್ಲೆಯ ಮಟ್ಟದಲ್ಲಿ ಸುಧಾರಿಸುವ ಪ್ರಯತ್ನ ನಡೆಯಬೇಕು. ಇದನ್ನು ರಾಜ್ಯಮಟ್ಟದಲ್ಲಿ ಯೋಜಿಸಿ ಫಲವಿಲ್ಲ. ಏಕೆಂದರೆ ಈ ಸಮಸ್ಯೆಗಳು ತೀವ್ರ ರೀತಿಯ ಪ್ರಾದೇಶಿಕ – ಪ್ರದೇಶ ವಿಶಿಷ್ಟತೆ ಪಡೆದಿರುತ್ತವೆ. ಜಿಲ್ಲಾ ಪಂಚಾಯತಿಯು ಈ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಬೇಕು.[1] ೧೯೬೧ರ ಸಾಕ್ಷರತೆ ಪ್ರಮಾಣವನ್ನು ಒಟ್ಟು ಜನಸಂಖ್ಯೆಯನ್ನು ಪರಿಗಣಿಸಿ ಲೆಕ್ಕ ಹಾಕಲಾಗಿದೆ. ಆದ್ದರಿಂದ ೧೯೬೧ರ ಸಾಕ್ಷರತೆ ಪ್ರಮಾಣವು ವಾಸ್ತವ ಪ್ರಮಾಣಕ್ಕಿಂತ ಕಡಿಮೆ ಇರುವ ಸಾಧ್ಯತೆ ಇದೆ.