ಕೊಪ್ಪಳ ಜಿಲ್ಲೆಯ ದುಡಿಯುವ ವರ್ಗದಲ್ಲಿ ಶೇ. ೮೦.೬೫ ರಷ್ಟು ಕೃಷಿಯನ್ನು ಅವಲಂಬಿಸಿಕೊಂಡಿದೆ. ಈ ಜಿಲ್ಲೆಯ ಕೃಷಿಯು ಮೂಲತಃ ಒಣ ಬೇಸಾಯ ಸ್ವರೂಪದ್ದಾಗಿದೆ. ಜಿಲ್ಲೆಯಲ್ಲಿರುವ ಒಟ್ಟು ನೀರಾವರಿ ಪ್ರದೇಶದ ವಿಸ್ತೀರ್ಣ ೮೦೩.೭೫ ಹೆಕ್ಟೇರುಗಳು. ಇದರಲ್ಲಿ ಶೇ. ೭೫.೭೪ ರಷ್ಟು ಭತ್ತ ಮತ್ತು ಕಬ್ಬಿಗೆ ಹೋದರೆ ಇತರೆ ಬೆಳೆಗಳಿಗೆ ದೊರೆಯುವ ನೀರಾವರಿ ಕೇವಲ ಶೇ. ೨೪.೨೬ ಆಹಾರ ಧಾನ್ಯಗಳಲ್ಲಿ ಭತ್ತವೊಂದನ್ನು ಬಿಟ್ಟರೆ ಉಳಿದಂತೆ ಜಿಲ್ಲೆಯಲ್ಲಿರುವುದು ಒಣ ಬೇಸಾಯವೇ ಆಗಿದೆ. ಈ ಜಿಲ್ಲೆಯ ಕೃಷಿ ಉತ್ಪನ್ನದ ವಿವರವಾಗಲಿ ಅಥವಾ ಎಕರೆವಾರು ಇಳುವರಿ ವಿವರಗಳಾಗಲಿ ದೊರೆಯುತ್ತಿಲ್ಲ. ಜಿಲ್ಲೆಯಲ್ಲಿನ ಭೂಮಿಯ ಬಳಕೆಗೆ ಸಂಬಂಧಿಸಿದ ಮಾಹಿತಿ ದೊರೆತಿದೆ. ಅದನ್ನು ಇಲ್ಲಿ ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ.

ಕೋಷ್ಟರ ೭.೨ ರಲ್ಲಿ ಕೊಪ್ಪಳ ಜಿಲ್ಲೆಯ ಭೌಗೋಳಿಕ ಪ್ರದೇಶ, ಅರಣ್ಯ ಪ್ರದೇಶ, ಬಿತ್ತನೆ ಪ್ರದೇಶ, ನೀರಾವರಿ ಪ್ರದೇಶ, ಬೀಳು ಭೂಮಿ ಇತ್ಯಾದಿ ವಿವರಗಳನ್ನು ನೀಡಿದೆ. ಕೋಷ್ಟಕ – ೭.೧ ರಲ್ಲಿ ಬಿತ್ತನೆ ಪ್ರದೇಶದಲ್ಲಿ ವಿವಿಧ ಬೆಳೆಗಳು ಪಡೆದಿರುವ ಭೂಮಿಯ ವಿವರಗಳನ್ನು ನೀಡಿದೆ.

ಬೆಳೆ ಪದ್ಧತಿ

ಕೋಷ್ಟಕ – ೭.೧ ರಲ್ಲಿ ತೋರಿಸಿರುವಂತೆ ಒಟ್ಟು ಬಿತ್ತನೆ ಪ್ರದೇಶದಲ್ಲಿ ಶೇ. ೬೦.೪೩ ರಷ್ಟು ಪ್ರದೇಶದಲ್ಲಿ ಆಹಾರ ಧಾನ್ಯವನ್ನು, ಶೇ. ೧೬.೦೭ ರಷ್ಟು ಪ್ರದೇಶದಲ್ಲಿ ದ್ವಿದಳ ಧಾನ್ಯಗಳನ್ನು ಮತ್ತು ಉಳಿದ ಪ್ರದೇಶ ಶೇ. ೨೩.೫೦ ರಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಆಹಾರ ಧಾನ್ಯಗಳಲ್ಲಿ ನೀರಾವರಿ ಬೆಳೆಯಾದ ಭತ್ತ ಬೆಳೆಯುವ ಪ್ರದೇಶದ ಪ್ರಮಾಣ ಶೇ. ೧೫.೭೯ ರಷ್ಟಿದೆ. ಜಿಲ್ಲೆಯಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳಲ್ಲಿ ಮುಖ್ಯವಾದವು ಸೇಂಗಾ ಮತ್ತು ಹತ್ತಿ.

ಜಿಲ್ಲೆಯ ಬಿತ್ತನೆ ಪ್ರದೇಶದಲ್ಲಿ ಶೇ. ೪೦ ರಷ್ಟು ಪ್ರದೇಶದಲ್ಲಿ ಅಧಿಕ ಇಳುವರಿ ನೀಡುವ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅಂದರೆ ಈ ಜಿಲ್ಲೆಯಲ್ಲಿ ಕೃಷಿಯು ಆಧುನೀಕರಣಗೊಳ್ಳುತ್ತಿದೆ ಎಂದು ತಿಳಿಯಬಹುದು. ಪ್ರತಿ ಹೆಕ್ಟೇರಿಗೆ ಬಳಸುವ ರಾಸಾಯನಿಕ ಗೊಬ್ಬರದ ಪ್ರಮಾಣ (ಎನ್. ಪಿಕೆ) ೧೨೦.೧೫ ಕೆ.ಜಿ. ಇದರಲ್ಲಿ ಸಾರಜನಕದ ಪ್ರತಿ ಹೆಕ್ಟೇರು ಬಳಕೆ ೭೬.೦೨ ಕೆ.ಜಿ. ಯಾದರೆ ರಂಜಕದ ಪ್ರತಿ ಹೆಕ್ಟೇರು ಬಳಕೆ ೨೯.೯೭ ಕೆ.ಜಿ. ಪೊಟ್ಯಾಷ್‌ನ ಪ್ರತಿ ಹೆಕ್ಟೇರು ಬಳಕೆ ಬಹಳ ಕಡಿಮೆ. ಅದರ ಪ್ರಮಾಣವು ೧೪.೧೬ ಕೆ.ಜಿ. ಕರ್ನಾಟಕ ರಾಜ್ಯದ ಪ್ರತಿ ಹೆಕ್ಟೇರು ಸರಾಸರಿ ರಾಸಾಯನಿಕ ಗೊಬ್ಬರದ ಬಳಕೆ ಕೇವಲ ೭೮ ಕೆ.ಜಿ. ರಾಜ್ಯದ ಸರಾಸರಿಗಿಂತ ಕೊಪ್ಪಳ ಜಿಲ್ಲೆಯಲ್ಲಿ ರಾಸಾಯನಿಕ ಗೊಬ್ಬರದ ಪ್ರತಿ ಹೆಕ್ಟೇರು ಬಳಕೆ ಅಧಿಕವಾಗಿದೆ. ರಾಸಾಯನಿಕ ಗೊಬ್ಬರದ ಬಳಕೆಯು ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಸರಿಸುಮಾರು ಸಮವಾಗಿದೆ.

ಅರಣ್ಯ ಪ್ರದೇಶ

ಕರ್ನಾಟಕ ರಾಜ್ಯದಲ್ಲಿ ಅರಣ್ಯ ಪ್ರದೇಶವನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಂದಿರುವುದು ರಾಯಚೂರು ಜಿಲ್ಲೆಯಾಗಿತ್ತು (ಶೇ. ೩.೪೩). ಈ ಜಿಲ್ಲೆಯ ವಿಭಜನೆಯಾದ ಮೇಲೆಯೂ ಸಹ ರಾಯಚೂರು, ರಾಜ್ಯದಲ್ಲಿ ಅರಣ್ಯ ಪ್ರದೇಶವನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಂದಿರುವ ಜಿಲ್ಲೆಯಾಗಿ ಮುಂದುವರಿದಿದೆ. ಕೋಷ್ಟಕ – ೭.೨ ರಲ್ಲಿ ತೋರಿಸಿರುವಂತೆ ಹೊಸ ಜಿಲ್ಲೆಯಾದ ಕೊಪ್ಪಳದಲ್ಲಿನ ಅರಣ್ಯ ಪ್ರದೇಶದ ವಿಸ್ತೀರ್ಣ ೧೯೪೫೧ ಹೆಕ್ಟೇರುಗಳು. ಇದು ಜಿಲ್ಲೆಯ ಭೌಗೋಳಿಕ ಪ್ರದೇಶದ ಶೇ. ೫.೩೩ ರಷ್ಟಿದೆ. ಇದು ನಿಜಕ್ಕೂ ಆತಂಕದ ಸಂಗತಿಯಾಗಿದೆ. ಉಷ್ಣ ವಲಯದಲ್ಲಿ ಭೌಗೋಳಿಕ ಪ್ರದೇಶದ ಕನಿಷ್ಟ ಶೇ. ೩೩ ರಷ್ಟು ಪ್ರದೇಶದಲ್ಲಾದರೂ ಅರಣ್ಯವಿರಬೇಕು ಎಂದು ಹೇಳಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಶೇ. ೧೬.೦೭. ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವು ರಾಜ್ಯದ ಅರಣ್ಯ ಪ್ರದೇಶದ ೧/೩ ರಷ್ಟು ಕೂಡ ಇಲ್ಲ. ಈ ದಿಶೆಯಲ್ಲಿ ಜಿಲ್ಲಾ ಆಡಳಿತವಾಗಲಿ, ಜಿಲ್ಲಾ ಪಂಚಾಯತಿಯಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಗಂಭೀರವಾಗಿ ಚಿಂತಿಸಿದಂತೆ ಕಾಣಲಿಲ್ಲ.

ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕಡಿಮೆ ಇದೆ. ಆದರೆ ಇದಕ್ಕಿಂತ ಹೆಚ್ಚು ಆತಂಕದ ಸಂಗತಿಯೆಂದರೆ ಅರಣ್ಯ ಪ್ರದೇಶದ ತಾಲ್ಲೂಕುವಾರು ವಿತರಣೆ. ಜಿಲ್ಲೆಯ ಒಟ್ಟು ಅರಣ್ಯ ಪ್ರದೇಶದಲ್ಲಿ ಸುಮಾರು ಅರ್ಧದಷ್ಟು (ಶೇ. ೪೯.೧೭) ಗಂಗಾವತಿ ತಾಲ್ಲೂಕಿನಲ್ಲೂ ಮತ್ತು ಶೇ. ೩೬.೬೦ ರಷ್ಟು ಕೊಪ್ಪಳ ತಾಲ್ಲೂಕಿನಲ್ಲೂ ಶೇ. ೧೩.೯೫ ರಷ್ಟು ಕುಷ್ಟಗಿ ತಾಲ್ಲೂಕಿನಲ್ಲೂ ಇದೆ. ಯಲಬುರ್ಗ ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶವು ನಿಜಕ್ಕೂ ಇಲ್ಲವೆ ಇಲ್ಲ ಎಂದರೂ ನಡೆದೀತು! ಯಲಬುರ್ಗ ತಾಲ್ಲೂಕಿನ ಭೌಗೋಳಿಕ ಪ್ರದೇಶದ ಶೇ. ೦.೦೫ ರಷ್ಟು ಪ್ರದೇಶದಲ್ಲಿ ಮಾತ್ರ ಅರಣ್ಯವಿದೆ. ಈ ವಿಷಯದ ಬಗ್ಗೆ ಕೊಪ್ಪಳ ಜಿಲ್ಲಾ ಪಂಚಾಯತಿ ಮತ್ತು ಯಲಬುರ್ಗ ತಾಲ್ಲೂಕು ಪಂಚಾಯತಿಗಳು ಗಂಭೀರವಾಗಿ ಯೋಚಿಸಬೇಕಾಗಿದೆ.

ಪ್ರಪಂಚದಲ್ಲಿ ತಲಾ ಅರಣ್ಯ ಪ್ರದೇಶ ೦.೮ ಹೆಕ್ಟೇರು. ಭಾರತದಲ್ಲಿ ತಲಾ ಅರಣ್ಯ ಪ್ರದೇಶ ೦.೦೮ ಹೆಕ್ಟೇರು. ಕರ್ನಾಟಕದಲ್ಲಿ ತಲಾ ಅರಣ್ಯ ಪ್ರದೇಶ …. ಕೊಪ್ಪಳದಲ್ಲಿ ತಲಾ ಅರಣ್ಯ ಪ್ರದೇಶ ೦.೦೩ ಹೆಕ್ಟೇರು.

ಬೆಳೆ ಪದ್ಧತಿ
ಕೋಷ್ಟಕ: .

ಕ್ರ. ಸಂ.

ಮುಖ್ಯ ಬೆಳೆಗಳು

ಬೆಳೆಗಳ ಪ್ರದೇಶ
(ಹೆಕ್ಟೇರುಗಳಲ್ಲಿ)

ಭತ್ತು ೫೭,೯೬೭
ಜೋಳ ೮೪,೭೭೬
ಸಜ್ಜೆ ೪೭,೫೯೯
ಗೋಧಿ ೧೨,೪೨೨
ಮುಸುಕಿನ ಜೋಳ ೭,೧೫೩
ಉಪ ಧಾನ್ಯಗಳು
ಒಟ್ಟು ಏಕದಳ ಧಾನ್ಯಗಳು
೧೧,೮೬೮
೨,೨೧,೭೮೫ (೬೦.೪೨)
ಕಡಲೆ ೧೨,೯೪೯
ತೊಗರಿ ೧೪,೯೫೮
ಇತರೆ ದ್ವಿದಳ ಧಾನ್ಯಗಳು ೫೮,೯೭೧ (೧೬.೦೭)
೧೦ ಸೇಂಗ ೫೧,೩೫೦
೧೧ ಕಬ್ಬು ೨೯,೧೨
೧೨ ಹತ್ತಿ ೨೪,೭೧೧
೧೩ ಒಟ್ಟು ವಾಣಿಜ್ಯ ಬೆಳೆಗಳು ೭೮,೯೭೩ (೨೧.೫೨)
ಪ್ರಧಾನ ಬೆಳೆಗಳು ಬೆಳೆಯುವ ಪ್ರದೇಶ ೩,೫೯,೭೨೯ (೯೮.೦೧)
೧೫ ಅಧಿಕ ಇಳುವರಿ ಬೆಳೆಗಳು ೧,೪೬,೬೧೦ (೩೯.೯೪)
೧೬ ಸಾರಜನಕ ಗೊಬ್ಬರ ೨೭,೯೦೦ ಟನ್‌ಗಳು
೧೭ ರಂಜಕ ಗೊಬ್ಬರ ೧೧,೦೦೦ ಟನ್‌ಗಳು
೧೮ ಪೊಟ್ಯಾಷ್ ೫೨,೦೦೦ ಟನ್‌ಗಳು
೧೯ ಒಟ್ಟು ರಾಸಾಯನಿಕ ಗೊಬ್ಬರ ೪೪,೦೦೦ ಟನ್‌ಗಳು

ಅರಣ್ಯಾಭಿವೃದ್ಧಿ ಕಾರ್ಯಕ್ರಮ

ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯಾಭಿವೃದ್ಧಿ ಕಾರ್ಯಕ್ರಮವನ್ನು ಬೃಹತ್ ಪ್ರಮಾಣದಲ್ಲಿ ಕೈಗೊಳ್ಳುವ ಅವಶ್ಯಕತೆ ಇದೆ. ಈ ಕಾರ್ಯಕ್ರಮವನ್ನು ಪ್ರತ್ಯೇಕವಾಗಿ ಕೈಗೊಳ್ಳುವುದಕ್ಕೆ ಪ್ರತಿಯಾಗಿ ಜಿಲ್ಲೆಯ ಉದ್ಯೋಗ ದೃಢೀಕರಣ ಯೋಜನೆಯ ಅಂಗವಾಗಿ ಕೈಗೊಳ್ಳುವುದು ಲೇಸು. ಅರಣ್ಯ ಬೆಳೆಸುವ ಉದ್ದೇಶಕ್ಕಾಗಿ ಜಿಲ್ಲೆಯಲ್ಲಿರುವ ಬೀಳು ಭೂಮಿಯನ್ನು ಬಳಸಬಹುದು. ಕೊಪ್ಪಳ ಜಿಲ್ಲೆಯಲ್ಲಿರುವ ಒಟ್ಟು ಬೀಳು ಭೂಮಿ ೧೦೦.೫೨೨ ಹೆಕ್ಟೇರುಗಳು (ಸಾಗುವಳಿ ಮಾಡದಿರುವ ಇತರೆ ಭೂಮಿ ಮತ್ತು ಬೀಳು ಭೂಮಿ) ಈ ಬೀಳು ಭೂಮಿಯನ್ನು ಅರಣ್ಯ ಪ್ರದೇಶವನ್ನಾಗಿ ಬೆಳೆಸಿದರೆ ಆಗ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಪ್ರಮಾಣವು ಸುಮಾರು ಶೇ. ೨೫ ರಷ್ಟಾಗುತ್ತದೆ.

ವಾಣಿಜ್ಯ ನಿಯಮಗಳಿಗನುಸಾರವಾಗಿ ಅರಣ್ಯ ಬೆಳೆಸುವ ಕಾರ್ಯಕ್ರಮವನ್ನು ರೂಪಿಸಬಹುದಾಗಿದೆ. ಈ ಕಾರ್ಯಕ್ರಮಕ್ಕೆ ಅಗತ್ಯವಾದ ಬಂಡವಾಳವನ್ನು ಖಾಸಗಿ ವಲಯದಿಂದ ರೂಢಿಸಿಕೊಳ್ಳಬಹುದು. ಈ ಬಗ್ಗೆ ಕೊಪ್ಪಳ ಜಿಲ್ಲಾ ಪಂಚಾಯಿತಿಯು ವಿನೂತನವಾಗಿ ಯೋಚಿಸಬೇಕಾಗಿದೆ. ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾದ ಡಾ. ಡಿ. ಎಂ. ನಂಜುಂಡಪ್ಪ ಅವರು ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪಂಚಾಯತಿಯ ಸದಸ್ಯರನ್ನುದ್ದೇಶಿಸಿ ಮಾತನಾಡುತ್ತಾ ‘ಜಿಲ್ಲಾ ಪಂಚಾಯತಿಗಳು ಸ್ವಂತ ಬಂಡವಾಳ ಸಂಪನ್ಮೂಲಗಳನ್ನು ಸಂಗ್ರಹಿಸಿಕೊಳ್ಳಬೇಕು ಎಂದು ಅದಕ್ಕಾಗಿ ಜಿಲ್ಲೆಯ ಶ್ರೀಮಂತ ರೈತರಿಂದ ಹಾಗೂ ಖಾಸಗಿ ವಲಯದಿಂದ ಬಂಡವಾಳ ಸಂಗ್ರಿಸಬೇಕು’ ಎಂದು ಕರೆ ನೀಡಿದ್ದಾರೆ (ಇಂಡಿಯನ್ ಎಕ್ಸ್‌ ಪ್ರೆಸ್‌ ೧೦ – ೦೨ – ೯೯, ಪು:೩)

ಅರಣ್ಯ ಬೆಳೆಸುವ ಕಾರ್ಯಕ್ರಮಕ್ಕೆ ಖಾಸಗಿ ವಲಯದಿಂದ ಹಾಗೂ ವಿದೇಶಿ ಕಂಪನಿಗಳಿಂದಲೂ ಬಂಡವಾಳವನ್ನು ಆಕರ್ಷಿಸಬಹುದು. ಈ ಕಾರ್ಯಕ್ರಮವನ್ನು ಜಿಲ್ಲೆಯ ಕೃಷಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದಕ್ಕಾಗಿ ಉಪಯೋಗಿಸಿಕೊಳ್ಳಬಹುದು. ಕೊಪ್ಪಳ ಜಿಲ್ಲಾ ಪಂಚಾಯತಿಯು ಈ ಬಗ್ಗೆ ದಿಟ್ಟವಾಗಿ ಇನ್ನೋವೊಟಿವ್ ಆಗಿ ಯೋಚಿಸಬೇಕಾಗಿದೆ. ‘ಬಂಡವಾಳ ಹೂಡಿಕೆ – ಪ್ರತಿಫಲವಾಗಿ ಬರುವ ವರಮಾನ’ಗಳ ನಡುವಣ ಅನುಪಾತ ಒಂದಕ್ಕಿಂತ ಕಡಿಮೆ ಇರುವಂತೆ ನೋಡಿಕೊಂಡು ಪ್ರಸ್ತುತ ಕಾರ್ಯಕ್ರಮವನ್ನು ರೂಪಿಸಬಹುದಾಗಿದೆ. ಅದನ್ನು ಲಾಭದಾಯಕ ಉದ್ಯಮವಾಗಿ ಬೆಳೆಸಬಹುದು.

ಪರಿಸರ ಚಳುವಳಿ

ಪರಿಸರ ಚಳುವಳಿ – ಪರಿಸರ ಪ್ರಜ್ಞೆ ಎನ್ನುವುದು ಉಳ್ಳವರ ‘ತಿಂಡಿ – ತೀಟೆ’ ಎನ್ನುವಂತಾಗಿ ಬಿಟ್ಟಿದೆ. ಅದನ್ನು ಕೇವಲ ಜಲಮಾಲಿನ್ಯ, ವಾಯು ಮಾಲಿನ್ಯ, ಕಬ್ಬನ್ ಪಾರ್ಕ್‌ಗಳಿಗೆ ಸೀಮಿತಗೊಳಿಸಿದಂತೆ ಕಾಣುತ್ತಿದೆ. ಈ ಬಗೆಯ ಸೋಗಲಾಡಿತನದ ಪರಿಸರ ಚಳುವಳಿಯು ಜನರನ್ನು ಒಳಗೊಳ್ಳುವುದು ಸಾಧ್ಯವಿಲ್ಲ. ಪರಿಸರ ಚಳುವಳಿಯು ಸಮಾಜದ ಕೆಳವರ್ಗದ ಜನರ ಬದುಕನ್ನು ಒಳಗೊಂಡಿರಬೇಕು. ಪರಿಸರ ಚಳುವಳಿಯು ಕೊಪ್ಪಳ ಜಿಲ್ಲೆಯ ಸಂದರ್ಭದಲ್ಲಿ ಅರಣ್ಯ ಬೆಳೆಸುವ ಕಾರ್ಯಕ್ರಮವನ್ನು ಅಂತರ್ಗತ ಮಾಡಿಕೊಂಡಿರಬೇಕು ಮತ್ತು ಈ ಕಾರ್ಯಕ್ರಮದ ಮೂಲಕ ಜಿಲ್ಲೆಯ ೧.೯೨ ಲಕ್ಷ ಕೃಷಿ ಕಾರ್ಮಿಕರಿಗೆ ಉದ್ಯೋಗ ದೊರೆಯುವಂತಾಗಬೇಕು. ಆಗ ಅದು ಜನಪರ ಪರಿಸರ ಚಳುವಳಿಯಾದೀತು.

ಕೃಷಿ ಅಭಿವೃದ್ಧಿ ಎನ್ನುವುದು ಕೇವಲ ಬೆಳೆಗಳ ನಿರ್ವಹಣೆಗೆ ಸೀಮಿತಗೊಂಡಿರುವಂತೆ ಕಾಣುತ್ತಿದೆ. ಕೃಷಿ ಅಭಿವೃದ್ಧಿಯೆಂದರೆ ಕೇವಲ ಬೆಳೆಗಳ ನಿರ್ವಹಣೆ – ಇಳುವರಿ ಅಷ್ಟೆ ಅಲ್ಲ. ಸಮಗ್ರ ಕೃಷಿ – ಸುಸ್ಥಿರ ಗತಿ (Sustainable) ಕೃಷಿ ಅಭಿವೃದ್ಧಿಯನ್ನು ಸಾಧಿಸಿಕೊಳ್ಳ ಬೇಕಾದರೆ ಅದು ಅರಣ್ಯವನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ರಮವನ್ನು ಒಳಗೊಂಡಿರಬೇಕಾಗುತ್ತದೆ. ಅಂತರ್ಜಲದ ರಕ್ಷಣೆ ಮತ್ತು ಅದರ ರೀಜನರೇಶನ್, ಭೂಸವಕಳಿ ನಿರ್ವಹಣೆ, ಉರವಲು ಕಟ್ಟಿಗೆ ಸರಬರಾಜು, ಹವಾಮಾನದ ಸಮತೋಲನ ಕಾಪಾಡುವುದು ಮುಂತಾದವುಗಳಿಗೆ ಅರಣ್ಯ ಪ್ರದೇಶ ಸಹಾಯಕವಾಗಬಲ್ಲುದು.

ಕೊಪ್ಪಳ ಜಿಲ್ಲೆಯ ಸಂದರ್ಭದಲ್ಲಿ ಯಲಬುರ್ಗ ತಾಲ್ಲೂಕಿನ ಬಗ್ಗೆ ಒತ್ತಿ ಹೇಳಬೇಕಾಗಿದೆ. ಈ ತಾಲ್ಲೂಕಿನ ನೀರಾವರಿ ಪ್ರದೇಶದ ವಿಸ್ತೀರ್ಣ ಕೇವಲ ೧೮೨೦ ಹೆಕ್ಟೇರುಗಳು. ಇದು ಬಿತ್ತನೆ ಪ್ರದೇಶದ ಕೇವಲ ಶೇ. ೭.೯೮ ರಷ್ಟಾಗುತ್ತದೆ. ಅಂದರೆ ತಾಲ್ಲೂಕಿನ ಶೇ. ೯೨ ರಷ್ಟು ಪ್ರದೇಶವು ಮಳೆಯನ್ನು ಆಶ್ರಯಿಸಿದೆ. ಈ ತಾಲ್ಲೂಕಿನಲ್ಲಿ ನೀರಾವರಿಯನ್ನು ಅಭಿವೃದ್ಧಿ ಪಡಿಸಲು ಅಂತರ್ಜಲವನ್ನು ಅವಲಂಬಿಸಬೇಕಾಗಿದೆ. ಅಂತರ್ಜಲದ ಮಟ್ಟ ಹಾಗೂ ಮಳೆ ನೀರಿನ ಸೂಕ್ತ ಸಂಗ್ರಹಗಳು ಅರಣ್ಯ ಪ್ರದೇಶವನ್ನು ಅವಲಂಬಿಸಿದೆ. ಆದ್ದರಿಂದ ಈ ತಾಲ್ಲೂಕಿನಲ್ಲಿ ಅರಣ್ಯ ಬೆಳೆಸುವ ಕಾರ್ಯಕ್ರಮಕ್ಕೆ ಆದ್ಯತೆ ದೊರೆಯಬೇಕು.

ಕೊಪ್ಪಳ ಜಿಲ್ಲೆಯಲ್ಲಿರುವ ಒಟ್ಟು ಬೀಳುಭೂಮಿಯ ವಿಸ್ತೀರ್ಣ ೧,೦೦,೫೨೨ ಹೆಕ್ಟೇರುಗಳು. ಬೀಳು ಭೂಮಿಯೆಂದರೆ ಅದೇನು ಗಿಡ – ಮರ – ಬಳ್ಳಿಗಳು ಬೆಳೆಯದ ಭೂಮಿಯಲ್ಲ. ಮಣ್ಣಿನ ಮೂಲಗುಣವೆ ಪೋಷಣೆ – ಪಾಲನೆ. ಬೀಳು ಪ್ರದೇಶದಲ್ಲಿ ಅರಣ್ಯ ಬೆಳೆಸಲು ಆಧುನಿಕ ವಿಜ್ಞಾನ – ತಂತ್ರಜ್ಞಾನದ ನೆರವನ್ನು ಪಡೆಯಬಹುದು. ಹೀಗೆ ಆಧುನಿಕ ವಿಜ್ಞಾನ – ತಂತ್ರಜ್ಞಾನ ಬಳಸಿಕೊಂಡು ಮರುಭೂಮಿಯನ್ನು ನಂದನವನವನ್ನಾಗಿಸಿರುವ ಉದಾಹರಣೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮಗೆ ದೊರೆಯುತ್ತವೆ. ಕೃಷಿ ವಿಶ್ವವಿದ್ಯಾಲಯಗಳು, ಅರಣ್ಯ ವಿದ್ಯಾಲಯಗಳು, ವಿಜ್ಞಾನ – ತಂತ್ರಜ್ಞಾನ ಮಂಡಳಿಗಳು – ಮುಂತಾದ ಸಂಸ್ಥೆಗಳ ಸೇವೆಯನ್ನು ಜಿಲ್ಲೆ ಪಡೆದುಕೊಳ್ಳಬಹುದು.

ಅತಿ ನೀರಾವರಿಯ ಶಾಪ

ಇಡೀ ರಾಜ್ಯದಲ್ಲಿ ನೀರಾವರಿಯನ್ನು ಅತಿ ಹೆಚ್ಚಾಗಿ ಪಡೆದಿರುವ ಗಂಗಾವತಿ ತಾಲ್ಲೂಕಿನಲ್ಲಿ ಬಿತ್ತನೆ ಪ್ರದೇಶದ ಶೇ. ೫೫.೫೬ ರಷ್ಟು ಪ್ರದೇಶಕ್ಕೆ ನೀರಾವರಿ ದೊರೆಯುತ್ತಿದೆ. ಇಲ್ಲಿ ನೀರಾವರಿಯ ಸಮರ್ಪಕ ನಿರ್ವಹಣೆಯಾಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಈ ತಾಲ್ಲೂಕಿನಲ್ಲಿ ರೈತರು ಪ್ರಧಾನವಾಗಿ ಭತ್ತವನ್ನು ಬೆಳೆಯುತ್ತಾರೆ. ಈ ತಾಲ್ಲೂಕಿನಲ್ಲಿ ಬೆಳೆಗಳ ತೀವ್ರತೆ ಪ್ರಮಾಣ ಶೇ. ೧೪೩.೯೩. ಇದರ ಅರ್ಥ ಇಷ್ಟೆ! ಈ ತಾಲ್ಲೂಕಿನಲ್ಲಿ ಬಿತ್ತನೆಯಾದ ಪ್ರದೇಶ ೪೫೧೭೪ ಹೆಕ್ಟೇರುಗಳು. ಇದರಲ್ಲಿ ೩೭೪೧೬ ಹೆಕ್ಟೇರಿನಲ್ಲಿ ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಪ್ರದೇಶವನ್ನು ಬಿತ್ತನೆ ಪ್ರದೇಶ ಲೆಕ್ಕ ಹಾಕುವಾಗ ಎರಡು ಬಾರಿ ಕೂಡಿಕೊಳ್ಳಲಾಗುತ್ತದೆ. ಇದರಿಂದಾಗಿ ಗಂಗಾವತಿ ತಾಲ್ಲೂಕಿನ ಒಟ್ಟು ಬಿತ್ತನೆ ಪ್ರದೇಶ ೧,೨೨,೯೫೦ ಹೆಕ್ಟೇರುಗಳು. ನಿಜವಾಗಿಯೂ ಇರುವ ಬಿತ್ತನೆ ಪ್ರದೇಶ ೮೫೧೭೪ ಹೆಕ್ಟೇರುಗಳು. ಒಂದಕ್ಕಿಂತ ಹೆಚ್ಚು ಬಾರಿ ಬೆಳೆಯುವ ಪ್ರದೇಶವನ್ನು ಎರಡು ಬಾರಿ ಎಣಿಸುವುದರಿಂದ ಒಟ್ಟು ಬಿತ್ತನೆ ಪ್ರದೇಶ ೧,೨೨,೫೭೦ ಹೆಕ್ಟೇರುಗಳಾಗುತ್ತದೆ.

ನೀರಾವರಿಗೆ ಸಂಬಂಧಿಸಿದಂತೆ ಕೆಲವು ಎಚ್ಚರಿಕೆಗಳನ್ನು ಪರಿಗಣಿಸುವುದು ಅವಶ್ಯಕ. ನೀರಾವರಿಯು ಇಲ್ಲದೆ ಇದ್ದಾಗ ಎಷ್ಟು ಸಮಸ್ಯೆಯೋ ಅದೇ ರೀತಿ ನೀರಾವರಿಯು ‘ಅತಿ’ಯಾದರೂ ‘ಸಮಸ್ಯೆ’ ಉಂಟಾಗುತ್ತದೆ. ಗಂಗಾವತಿ ತಾಲ್ಲೂಕಿನಲ್ಲಿ ಇಂತಹ ಸಮಸ್ಯೆ ಇದೆ. ನೀರಾವರಿಯ ಸಮರ್ಪಕ ನಿರ್ವಹಣೆ, ನೀರಿನ ಸೂಕ್ತ ನಿಯಂತ್ರಣ, ಬೆಲೆ ಆವರ್ತನ, ತಾತ್ಕಾಲಿಕವಾಗಿ ಭೂಮಿಯನ್ನು ಬೀಳು ಬಿಡುವುದು ಮುಂತಾದ ಕ್ರಮಗಳ ಬಗ್ಗೆ ಯೋಚಿಸಬೇಕಾಗಿದೆ. ಇದಕ್ಕೆ ತಜ್ಞರ ಸಲಹೆ – ಸೂಚನೆ – ಮಾರ್ಗದರ್ಶನ ಪಡೆದುಕೊಳ್ಳಬಹುದು. ಈ ಹಿಂದೆ ಹೇಳಿರುವಂತೆ ಕೃಷಿ ಸಮಸ್ಯೆಯೆಂದರೆ ಕೇವಲ ಬೆಳೆ, ಇಳುವರಿ, ರಾಸಾಯನಿಕ ಗೊಬ್ಬರ, ಬೀಜ, ಕೀಟಭಾದೆ – ಇವಿಷ್ಟೆ ಅಲ್ಲ. ಭೂಮಿಯ ಪೌಷ್ಟಿಕಾಂಶವನ್ನು ಕಾಯ್ದುಕೊಳ್ಳುವ ಬಗ್ಗೆ ಗಮನ ನೀಡಬೇಕಾಗಿದೆ. ಸಾಗುವಳಿಯೇತರ ಭೂಮಿಯ ಗುಣ ಮಟ್ಟವನ್ನು ಕಾಯ್ದುಕೊಳ್ಳಬೇಕಾಗಿದೆ. ಈ ಎಲ್ಲ ಉದ್ದೇಶಗಳನ್ನು ಅರಣ್ಯ ಬೆಳೆಸುವ ಕಾರ್ಯಕ್ರಮದ ಮೂಲಕ ಸಾಧಿಸಿಕೊಳ್ಳಬಹುದು.

ಕೊಪ್ಪಳವು ಮೂಲತಃ ಒಣ ಬೇಸಾಯವನ್ನು ಹೊಂದಿರುವ ಜಿಲ್ಲೆಯಾಗಿದೆ. ಬಿತ್ತನೆ ಪ್ರದೇಶದ ಶೇ. ೭೮.೧೦ ರಷ್ಟು ಪ್ರದೇಶ ಮಳೆಯನ್ನು ಅವಲಂಬಿಸಿರುವ ಬಿತ್ತನೆ ಪ್ರದೇಶವಾಗಿದೆ. ಮಳೆಯನ್ನು ಅವಲಂಬಿಸಿಕೊಂಡಿರುವ ಬಿತ್ತನೆ ಪ್ರದೇಶದ ವಿಸ್ತೀರ್ಣ ೨,೮೬,೬೫೨ ಹೆಕ್ಟೇರುಗಳಾಗಿವೆ. ಇಡೀ ಜಿಲ್ಲೆಯಲ್ಲಿ ಬೆಳೆಗಳ ತೀವ್ರತೆ ಕೇವಲ (೧೧೮.೬). ಒಣ ಬೇಸಾಯ ಪ್ರಧಾನವಾಗಿದೆಯೆಂದು ಹತಾಶರಾಗುವ ಅಥವಾ ಮೂಗು ಮುರಿಯುವ ಅವಶ್ಯಕತೆ ಇಲ್ಲ. ಒಣಬೇಸಾಯ ತಂತ್ರಜ್ಞಾನ ಇಂದು ಲಭ್ಯವಿದೆ. ಜಲಾನಯನ ಅಭಿವೃದ್ಧಿ ಕಾರ್ಯಯೋಜನೆ ಇದೆ. ಕೃಷಿ ಇಲಾಖೆ, ಕೃಷಿ ತಜ್ಞರು, ಅಭಿವೃದ್ಧಿ ಆಡಳಿತಗಾರರು, ಮುಂತಾದ ಸಂಗತಿಗಳನ್ನೆಲ್ಲಾ ಒಟ್ಟಿಗೆ ಸಂಘಟಿಸಿ ಕೊಪ್ಪಳ ಜಿಲ್ಲೆಯ ಕೃಷಿ ಅಭಿವೃದ್ಧಿ ಯೋಜನೆ ಸಿದ್ಧಪಡಿಸಬಹುದು. ನಿಜವಾಗಲು ಕೃಷಿಯನ್ನು ಅಭಿವೃದ್ಧಿ ಪಡಿಸುವುದು ಕಷ್ಟವಾಗಬಾರದು. ವಾಣಿಜ್ಯೀಕರಣ, ಲಾಭದಾಯಕತ್ವ, ಉದಾರೀಕರಣ, ಖಾಸಗೀಕರಣ, ರಫ್ತು ವ್ಯಾಪಾರ ಮುಂತಾದ ಉಳ್ಳವರ – ಪ್ರತಿಷ್ಠಿತರ – ನಗರ ವಾಸಿಗಳ ತೀಟೆ – ತಿಂಡಿಗಳಿಗೆ – ವ್ಯಸನಗಳಿಗೆ ಮರುಳಾಗದೆ ಸ್ಥಳೀಯವಾಗಿ – ಸಾಮಾಜಿಕ ಏಣಿ ಶ್ರೇಣಿಯಲ್ಲಿ ಕೆಳಸ್ತರದಲ್ಲಿರುವ ಜನರ, ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಬದುಕನ್ನು ಉತ್ತಮ ಪಡಿಸುವ ಉದ್ದೇಶದಿಂದ ಯೋಜನೆಯನ್ನು ರೂಪಿಸುವುದಾದರೆ ಕೊಪ್ಪಳ ಜಿಲ್ಲೆಯ ಜನರ ಬದುಕನ್ನು ಉತ್ತಮ ಪಡಿಸಬಹುದು. ಕೈಗಾರಿಕೆಗಳೇ ಅಭಿವೃದ್ಧಿ ಎಂಬ ಭ್ರಮೆಯಿಂದ ಮೊದಲು ಮುಕ್ತರಾಗುವ ಅವಶ್ಯಕತೆ ಇದೆ. ಅಭಿವೃದ್ಧಿ ಎಂದರೆ ‘ಜನರ ಅಭಿವೃದ್ಧಿ’, ಜನರ ಅಭಿವೃದ್ಧಿ ಎಂದರೆ ‘ಜನರ ಬದುಕು ಉತ್ತಮಗೊಳ್ಳುವ ಪರಿ’ ಎಂದಾಗಬೇಕು. ಜನರು ಎಂದರೆ ಅದರಲ್ಲಿ ಮಹಿಳೆಯರು ಸೇರಬೇಕು.ಕ ಪ್ಪಳ ಜಿಲ್ಲೆಯ ೧.೯೨ ಲಕ್ಷ ಭೂರಹಿತ ಕೃಷಿ ಕಾರ್ಮಿಕರ ಬದುಕು ಅಭಿವೃದ್ಧಿಯ ಗುರಿಯಾಗಬೇಕು. ಈಗ ಅವರು ಕೇವಲ ಅಭಿವೃದ್ಧಿಯ ಸಾಧನವಾಗಿದ್ದಾರೆ – ಉಪಕರಣಗಳಾಗಿದ್ದಾರೆ. ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ. ಕೃಷಿ ಅಭಿವೃದ್ಧಿಯೆಂದರೆ ಆಹಾರೋತ್ಪಾದನೆಯನ್ನು ಏರಿಸುವ ಒಂದು ‘ತಂತ್ರ’ ಎಂಬ ನಮ್ಮ ತಾಂತ್ರಿಕ ಪರಿಭಾಷೆ ಬದಲಾಗಬೇಕು. ಕೃಷಿಯಿಂದ ಹರಿದು ಬರುವ ಸರಕುಗಳು ಜನರಿಗೆ ದೊರೆಗೊಳ್ಳುವ ಪ್ರಕ್ರಿಯೆ ಮುಖ್ಯವಾಗಬೇಕು. ಅಭಿವರದ್ಧಿಯ ‘ಸಹಭಾಗಿತ್ವ’ಎಂದರೆ ಕೇವಲ ಸಾಧನವಾಗಿ ಮಾತ್ರ ಸಹಭಾಗಿಗಳಾಗುವುದಲ್ಲ. ಅಭಿವೃದ್ಧಿಯ ಸಾಧನವಾಗಿರುವ ಜನರು ಅಭಿವೃದ್ಧಿಯಲ್ಲಿ ಪಾಲುದಾರರು ಆಗಬೇಕು.

ಭೂಮಾಲಿಕತ್ವ ಮತ್ತು ಜಮೀನ್ದಾರಿಕೆ

ಕೊಪ್ಪಳ ಜಿಲ್ಲೆಯು ಅತಿ ಹೆಚ್ಚಾಗಿ ಭೂ ರಹಿತ ಕೃಷಿ ಕಾರ್ಮಿಕರನ್ನು ಹೊಂದಿರುವ ಜಿಲ್ಲೆಯಾಗಿದೆ. ಭೂಮಾಲಿಕತ್ವದಲ್ಲಿ ತೀವ್ರ ಸ್ವರೂಪದ ಅಸಮಾನತೆ ಇರುವುದು ಇದರಿಂದ ಸ್ಪಷ್ಟವಾಗುತ್ತದೆ. ಭೂಮಾಲಿಕತ್ವಕ್ಕೆ ಸಂಬಂಧಿಸಿದಂತೆ ಇಲ್ಲಿ ಜಮೀನ್ದಾರಿ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಈ ಜಿಲ್ಲೆಯಲ್ಲಿ ಭೂಮಾಲಿಕತ್ವವು ಜಮೀನ್ದಾರಿಕೆ ವ್ಯವಸ್ಥೆಯಿಂದ ಕೂಡಿರುವುದಕ್ಕೆ ಕಾರಣವಿದೆ. ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿ ಕೊಪ್ಪಳವು ಒಂದು ಜಹಗೀರ್ ಆಗಿತ್ತು. ನಿಜಾಮನ ಆಳ್ವಿಕೆಯು ಜಮೀನ್ದಾರಿ ಪದ್ಧತಿಯನ್ನು ಪ್ರೋತ್ಸಾಹಿಸಿತು. ಅದೇ ಪದ್ಧತಿ ಇಂದಿಗೂ ಮುಂದುವರೆದಿರುವುದನ್ನು ಕಾಣಬಹುದು. ಕೋಷ್ಟಕ – ೭.೩ ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಭೂಮಾಲಿಕತ್ವ ರಚನೆಯನ್ನು ನೀಡಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಭೂಮಿಯ ಬಳಕೆ
ಕೋಷ್ಟಕ: .               

(ವಿಸ್ತೀರ್ಣ: ಹೆಕ್ಟೇರುಗಳಲ್ಲಿ)

ಕ್ರ. ಸಂ.

ವಿವರಗಳು

ಗಂಗಾವತಿ

ಕೊಪ್ಪಳ

ಕುಷ್ಟಗಿ

ಯಲಬುರ್ಗ

ಕೊಪ್ಪಳ ಜಿಲ್ಲೆ

ಭೌಗೋಳಿಕ ವಿಸ್ತೀರ್ಣ

೧,೩೨,೧೩೧

೧,೩೬,೭೫೫

೧,೩೫,೭೭೯

೧,೪೭,೮೩೦

೫,೫೨,೪೯೫

ಅರಣ್ಯ

೧೪೪೮೨

(೧೦.೯೬)

೧೦೭೭೯

(೭.೮೮)

೪೧೧೦

(೩.೦೨)

೮೦

(೦.೦೫೮)

೨೯.೪೫೧

(೫.೩೩)

ಸಾಗುವಳಿಗೆ ಲಭ್ಯವಿಲ್ಲದ ಭೂಮಿ

೧೨೩.೩೧

೨೭.೧೮೯

೯೯೮೭

೫೯೮೮

೫೫.೪೯೫

(೧೦.೦೪)

ಸಾಗುವಳಿ ಮಾಡದಿರುವ ಇತರೆ ಭೂಮಿ

೭೭೫೩

೨೭೩೯

೪೭೦೯

೨೮೬೫

೧೮೦೬೬

(೩.೨೭)

ಬೀಳು ಭೂಮಿ

೧೨೩೯೧

೧೨೭೧೨

೨೫೧೩೦

೩೨೨೨೩

೮೨೪೫೯

(೧೪.೯೩)

ಬಿತ್ತನೆ ಆಗಿರುವ
ಪ್ರದೇಶ (ನಿವ್ವಳ)

೮೫೧೭೪

(೬೪.೪೬)

೮೩೩೩೬

(೬೦.೯೪)

೯೧೮೪೩

(೬೭.೬೪)

೧,೦೬೬೭೪

(೭೨.೧೬)

೩೬೭೦೨೭

(೬೬.೪೩)

ಒಂದಕ್ಕಿಂತ ಹೆಚ್ಚು ಬಾರಿ ಬಿತ್ತನೆಯಾಗಿರುವ ಪ್ರದೇಶ

೩೭೪೧೬

೧೨೯೫೧

೧೦೫೦೧

೭೪೬೨

೬೮೩೩೩

ನೀರಾವರಿಯಾದ ನಿವ್ವಳ ಪ್ರದೇಶ ಬಿತ್ತನೆಯಾಗಿರುವ ಪ್ರದೇಶದ ಶೇಕಡ

೪೭೨೩೮

 

(೫೫.೫೬)

೧೪೮೬೮

 

(೧೭.೮೪)

೯೭೪೯

 

(೧೦.೦೧)

೮೫೨೦

 

(೭.೯೮)

೮೦೩೭೫

 

(೨೧.೯೦)

ಬೆಳೆ ತೀವ್ರತೆ

೧,೨೨,೫೯೦

೮೫೧೭೪

೧೪೩,೯೩

೯೬೨೮೭

೮೩೩೩೬

೧೧೫.೫೪

೧,೦೨,೩೪೭

೯೧೮೪೩

೧೧೧.೪೪

೧೧೪೧೩೬

೧೦೬೬೭೪

೧೦೭.೦೦

೪೩೫೩೬೦

೩೬೭೦೨೭

೧೧೮.೬೧

ಭೂಮಾಲಿಕತ್ವ
ಕೋಷ್ಟಕ: .

ಕ್ರ.
ಸಂ.

ಹಿಡುವಳಿಗಳ ಗಾತ್ರ

ಹಿಡುವಳಿಗಳ ಸಂಖ್ಯೆ

ಹಿಡುವಳಿಗಳ ವಿಸ್ತೀರ್ಣ (ಹೆಕ್ಟೇರುಗಳಲ್ಲಿ)

ಹಿಡುವಳಿಗಳ ಸರಾಸರಿ ಗಾತ್ರ (ಹೆಕ್ಟೇರುಗಳಲ್ಲಿ)

೧. ಅತಿ ಸಣ್ಣ ಹಿಡುವಳಿಗಳು(ಒಂದು ಹೆಕ್ಟೇರಿಗಿಂತ ಕಡಿಮೆ)

೨೮೭೭೩

(೧೮.೩೫)

೧೭೨೫೭

(೩.೮೨)

೦.೬೦

ಸಣ್ಣ ಹಿಡುವಳಿಗಳು(೧ ರಿಂದ ೨ ಹೆಕ್ಟೇರುಗಳು)

೫೦೨೭೯

(೩೨.೦೭)

೭೪೭೩೮

(೧೬.೫೫)

೧.೪೮

ಮಧ್ಯಮ ಗಾತ್ರದ ಹಿಡುವಳಿಗಳು(೨ ರಿಂದ ೪ ಹೆಕ್ಟೇರುಗಳು)

೪೬೨೩೮

(೨೯.೪೯)

೧,೨೯,೮೩೯

(೨೮.೭೪)

೨.೮೧

ದೊಡ್ಡ ಹಿಡುವಳಿಗಳು(೪ ರಿಂದ ೧೦ ಹೆಕ್ಟೇರುಗಳು)

೨೬೩೬೫

(೧೬.೮೧)

೧,೮೬,೮೧೮

(೩೪.೭೧)

೫.೯೫

ಅತಿ ದೊಡ್ಡ ಹಿಡುವಳಿಗಳು(೧೦ ಹೆಕ್ಟೇರುಗಳಿಗಿಂತ ಅಧಿಕ)

೫೧೪೧

(೩.೨೮)

೭೩೦೯೪

(೧೬.೧೮)

೧೪.೨೨

ಒಟ್ಟು

೧,೫೬,೭೯೬

(೧೦೦.೦೦)

೪,೫೧,೭೪೬

(೧೦೦.೦೦)

೨.೮೮

ಕೋಷ್ಟಕದಲ್ಲಿ (೭.೩) ತೋರಿಸಿರುವಂತೆ ಜಿಲ್ಲೆಯಲ್ಲಿ ಹಿಡುವಳಿಗಳ ಸರಾಸರಿ ಗಾತ್ರ ೨.೮೮ ಹೆಕ್ಟೇರುಗಳು. ಆದರೆ ಅತಿ ದೊಡ್ಡ ಹಿಡುವಳಿಗಳಿಗೆ ಸಂಬಂಧಿಸಿದಂತೆ ಸರಾಸರಿ ಹಿಡುವಳಿ ಗಾತ್ರ ೧೪.೨೨ ಹೆಕ್ಟೇರುಗಳು. ಅತಿ ಸಣ್ಣ ಹಿಡುವಳಿಗಳ ಸರಾಸರಿ ಗಾತ್ರ ಕೇವಲ ೦.೬೦ ಹೆಕ್ಟೇರುಗಳು. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮಗಾತ್ರದ ಹಿಡುವಳಿಗಳನ್ನು ಕೂಡಿಸಿ ರೈತಾಪಿ ಹಿಡುವಳಿಗಳೆಂದು ಮತ್ತು ಉಳಿದ ಎರಡು ಬಗೆಯ ಹಿಡುವಳಿಗಳನ್ನು ಕೂಡಿಸಿ ಜಮೀನ್ದಾರಿ ಹಿಡುವಳಿಗಳೆಂದು ಕರೆಯೋಣ. ಈಗ ನಮಗೆ ಭೂಮಾಲಿಕತ್ವದಲ್ಲಿನ ಅಸಮಾನತೆಯ ಕಲ್ಪನೆ ಸ್ಪಷ್ಟವಾಗಿ ಮೂಡುತ್ತದೆ.

ಹಿಡುವಳಿಗಳ ಸಂಖ್ಯೆಯಲ್ಲಿ ರೈತಾಪಿ ಹಿಡುವಳಿಗಳ ಪಾಲು ಶೇ. ೭೯.೯೧ ರಷ್ಟಿದ್ದರೆ ಜಮೀನ್ದಾರಿ ಹಿಡುವಳಿಗಳ ಪಾಲು ಕೇವಲ ಶೇ. ೨೦.೦೯ ರಷ್ಟಿದೆ. ಇದರ ಅರ್ಥ ಇಷ್ಟೆ! ರೈತಾಪಿ ಹಿಡುವಳಿಗಳು ಶೇ. ೭೯.೯೧ ಇದ್ದರೆ ಜಮೀನ್ದಾರಿ ಹಿಡುವಳಿಗಳ ಪ್ರಮಾಣವು ಶೇ. ೨೦.೦೯ ಇದೆ. ಆದರೆ ಹಿಡುವಳಿ ಪ್ರದೇಶಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಶೇ. ೭೯.೯೧ ರಷ್ಟಿರುವ ರೈತರು ಹಿಡುವಳಿ ಪ್ರದೇಶದಲ್ಲಿ ಕೇವಲ ಶೇ. ೪೯.೧೧ ರಷ್ಟನ್ನು ಮಾತ್ರ ಪಡೆದಿದ್ದರೆ ಶೇ. ೨೦.೦೯ ರಷ್ಟಿರುವ ಜಮೀನ್ದಾರರು ಶೇ. ೫೦.೮೯ ರಷ್ಟು ಹಿಡುವಳಿ ಪ್ರದೇಶದ ಮೇಲೆ ಮಾಲಿಕತ್ವ ಪಡೆದಿದ್ದಾರೆ. ದೊಡ್ಡ ಮತ್ತು ಅತಿ ದೊಡ್ಡ ಜಮೀನ್ದಾರರ ಪ್ರಮಾಣ ಕೇವಲ ಶೇ. ೨೦.೦೯ ರಷ್ಟಿದೆ. ಆದರೆ ಇವರು ಮಾಲಿಕತ್ವ ಹೊಂದಿರುವ ಪ್ರದೇಶದ ಪ್ರಮಾಣ ಶೇ. ೫೦.೮೯. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರ ಪ್ರಮಾಣ ಶೇ. ೭೯.೯೧ ರಷ್ಟಿದ್ದರೂ ಜಮೀನಿನಲ್ಲಿ ಇವರ ಪಾಲು ಕೇವಲ ಶೇ. ೮೯.೧೧. ರೈತಾಪಿ ವ್ಯವಸ್ಥೆಯಲ್ಲಿ ಹಿಡುವಳಿಗಳ ಸರಾಸರಿ ಗಾತ್ರ ೧.೭೭ ಹೆಕ್ಟೇರುಗಳಾದರೆ ಜಮೀನ್ದಾರಿ ಹಿಡುವಳಿಗಳ ಸರಾಸರಿ ಗಾತ್ರ ೭.೩೦ ಹೆಕ್ಟೇರುಗಳಾಗಿದೆ.

ಭೂಮಾಲಿಕತ್ವದ ಅಸಮಾನತೆ ಮತ್ತು ಕೃಷಿ ಕಾರ್ಮಿಕರು

ಕೊಪ್ಪಳ ಜಿಲ್ಲೆಯ ಭೂ ಮಾಲೀಕತ್ವದಲ್ಲಿ ತೀವ್ರ ಸ್ವರೂಪದ ಅಸಮಾನತೆಯಿರುವ ಸಂಗತಿಯನ್ನು ಈಗಾಗಲೆ ನೋಡಿದ್ದೇವೆ. ಇದಕ್ಕೆ ಪೂರಕವಾಗಿ ಈಗ ನಾವು ಕೊಪ್ಪಳ ಜಿಲ್ಲೆಯಲ್ಲಿರುವ ಕೃಷಿ ಕಾರ್ಮಿಕರ ಪ್ರಮಾಣವನ್ನು ನೋಬಹುದು. ಕರ್ನಾಟಕದ ೨೭ ಜಿಲ್ಲೆಗಳ ಪೈಕಿ ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರನ್ನು ಅತಿ ಹೆಚ್ಚಾಗಿ ಪಡೆದಿರುವ ಜಿಲ್ಲೆ ಕೊಪ್ಪಳ. ಈ ಜಿಲ್ಲೆಯಲ್ಲಿನ ಒಟ್ಟು ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಶೇ. ೪೬.೩೫. ರಾಜ್ಯಮಟ್ಟದಲ್ಲಿ ಇದರ ಪ್ರಮಾಣ ಕೇವಲ ಶೇ. ೨೮.೯೧. ಕೃಷಿ ಕಾರ್ಮಿಕರ ಪ್ರಮಾಣ ಅಧಿಕವಾಗಿರುವುದೇ ಭೂ ಮಾಲೀಕತ್ವದಲ್ಲಿನ ಅಸಮಾನತೆಗೆ ಸೂಚನೆಯಾಗಿದೆ.

ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಕೊಪ್ಪಳ ಜಿಲ್ಲೆಯ ಪಾಲು ಶೇ. ೨.೧೩. ಆದರೆ ರಾಜ್ಯದ ಒಟ್ಟು ಕೃಷಿ ಕಾರ್ಮಿಕರಲ್ಲಿ ಕೊಪ್ಪಳ ಜಿಲ್ಲೆಯ ಪಾಲು ಶೇ. ೩.೮೫. ರಾಜ್ಯದ ಒಟ್ಟು ಮಹಿಳಾ ಕೃಷಿ ಕಾರ್ಮಿಕರಲ್ಲಿ ಕೊಪ್ಪಳ ಜಿಲ್ಲೆಯ ಪಾಲು ಶೇ. ೪.೫೨. ಕರ್ನಾಟಕ ರಾಜ್ಯಮಟ್ಟದಲ್ಲಿ ಜನಸಂಖ್ಯೆಯಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಕೇವಲ ಶೇ. ೧೧.೧೨. ಆದರೆ ಕೊಪ್ಪಳ ಜಿಲ್ಲೆಯ ಜನಸಂಖ್ಯೆಯಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಶೇ. ೨೦.೧೦.

ಭೂಮಾಲೀಕತ್ವ ವ್ಯವಸ್ಥೆಗೆ ಸಂಬಂಧಿಸಿದ ಅಸಮಾನತೆಯನ್ನು ಸರಿಪಡಿಸದೆ, ಬೃಹತ್ ಪ್ರಮಾಣದಲ್ಲಿ ಈ ಜಿಲ್ಲೆಯಲ್ಲಿರುವ ಭೂರಹಿತ ಕೃಷಿ ಕಾಮಿಕರ ಬದುಕನ್ನು ನೇರೂಪ ಮಾಡದೆ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಯ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಿಲ್ಲ. (ಸೂರಜ್ ಬಂದೋಪಾಧ್ಯಾಯ ಮತ್ತು ಡೋನಾಲ್ಡ್ ವನ್‌ ಇಸ್ಟೆನ್ – ೧೯೯೧).