ಈ ಅಧ್ಯಾಯದ ಮುಖ್ಯ ಉದ್ದೇಶ ಕೊಪ್ಪಳ ಜಿಲ್ಲೆಯ ಕೈಗಾರಿಕಾ ಬೆಳವಣಿಗೆ ಬಗ್ಗೆ ಒಂದು ಸ್ಥೂಲ ಚಿತ್ರವನ್ನು ನೀಡುವುದು. ಇಲ್ಲಿ ಕೈಗಾರಿಕೀಕರಣವನ್ನು ಕೃಷಿಯೇತರ ಚಟುವಟಿಕೆಯೆಂದು ನಿರ್ವಚಿಸಿಕೊಳ್ಳಲಾಗಿದೆ. ಈ ಅರ್ಥದಲ್ಲಿ ಕೈಗಾರಿಕೀಕರಣದ ವ್ಯಾಪ್ತಿಯೊಳಗೆ ಆಧುನಿಕ ಸಣ್ಣ, ಮಧ್ಯಮ ಮತ್ತು ದೊಡ್ಡ ಉದ್ಯಮಗಳು ಹಾಗೂ ಗೃಹ/ಗುಡಿ ಕೈಗಾರಿಕೆಗಳು, ಸಾಂಪ್ರದಾಯಿಕ ಕಸಬುದಾರಿಕೆ, ಪೆಟ್ಟಿಗೆ ಅಂಗಡಿಗಳು, ಕಿರಾಣಿ ಅಂಗಡಿಗಳು ಇತ್ಯಾದಿ ಸೇರುತ್ತವೆ. ಈ ಬಗೆಯ ಕೃಷಿಯೇತರ ಚಟುವಟಿಕೆಗಳಿಗೆ ಮಹತ್ವ ಏಕೆ ನೀಡಬೇಕು ಎನ್ನುವುದನ್ನು ಸ್ವಲ್ಪ ವಿಸ್ತಾರವಾಗಿಯೆ ಚರ್ಚೆ ಮಾಡಬೇಕಾಗಿದೆ. ನಮಗೆಲ್ಲ ತಿಳಿದಿರುವಂತೆ ಕೃಷಿ ಭೂಮಿಯ ಪೂರೈಕೆ ಸೀಮಿತವಾಗಿದೆ. ಅಂತ ಮೇಲೆ ಅದರ ಮೇಲೆ ಅವಲಂಬಿಸಿಕೊಳ್ಳುವವರ ಸಂಖ್ಯೆಯೂ ಮಿತವಾಗಿರಬೇಕು. ಎರಡು ವಿಧಾನಗಳಿಂದ ಕೃಷಿ ವಿಸ್ತರಣೆ ಸಾಧ್ಯ. ಮೊದಲನೆಯದು ಹೆಚ್ಚು ಭೂಮಿಯನ್ನು ಸಾಗುವಳಿಗೆ ತೊಡಗಿಸುವುದು. ಅದರ ಇದು ಸುಲಭದ ಕೆಲಸವಲ್ಲ. ಮತ್ತು ಇದು ಅನಂತವಾದ ಪ್ರಕ್ರಿಯೆಯಲ್ಲ. ಎರಡನೆಯ ವಿಧಾನವೆಂದರೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿಕೊಂಡು ಸಾಂದ್ರ ಬೇಸಾಯ ಮಾಡುವುದು.

ಈ ಎರಡೂ ವಿಧಾನದಲ್ಲಿ ಉಂಟಾಗುವ ಕೃಷಿ ಅಭಿವೃದ್ಧಿಯಿಂದ ಸಮಾಜದ ಕೆಳವರ್ಗಗಳಿಗೆ ಅನುಕೂಲವಾಗುತ್ತದೆ ಎಂದು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ ೧೯೭೦ರ ದಶಕದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ಹಸಿರು ಕ್ರಾಂತಿಯಿಂದ ಇದು ಸ್ಪಷ್ಟವಾಗಿದೆ. ಆಧುನಿಕ ಕೃಷಿಯನ್ನು ಅಳವಡಿಸಿಕೊಳ್ಳಲು ಹಿಡುವಳಿಗಳ ಗಾತ್ರ ದೊಡ್ಡದಿರಬೇಕು. ಇದರಿಂದಾಗಿ ಆಧುನೀಕರಣದ ಲಾಭ ಬಹುತೇಕ ಸಂದರ್ಭದಲ್ಲಿ ದೊಡ್ಡ ಕೃಷಿಕರ ಪಾಲಾಗಿದೆ. ಇದರ ಜೊತೆಗೆ ಈ ಬಗೆಯ ಕೃಷಿಯು ಹೆಚ್ಚು ಉದ್ಯೋಗ ಸೃಷ್ಟಿಸುತ್ತದೆ ಎಂದು ಹೇಳಲೂ ಸಾಧ್ಯವಿಲ್ಲ.

ಕೃಷಿಯ ಬೆಳವಣಿಗೆಯು ನಮ್ಮ ಗ್ರಾಮೀಣ ಪ್ರದೇಶದ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಭಾವಿಸುವಂತಿಲ್ಲ. ಏರುತ್ತಿರುವ ಜನಸಂಖ್ಯೆ, ಉದ್ಯೋಗಿಗಳ ಪೂರೈಕೆ ಹಿನ್ನೆಲೆಯಲ್ಲಿ ಕೃಷಿಯೇತರ ಚಟುವಟಿಕೆಗಳ ಬೆಳವಣಿಗೆಗೆ ಮಹತ್ವ ಬಂದಿದೆ.

ಯೋಜಿತ ಅಭಿವೃದ್ಧಿಯ ಆರಂಭದ ದಿಸೆಯಲ್ಲಿ ಕೆಲವು ಉದ್ದಿಮೆಗಳನ್ನಾದರೂ ಹಿಂದುಳಿದಿರುವ ಪ್ರದೇಶಗಳಲ್ಲಿ ಸ್ಥಾಪಿಸಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂಬ ನಂಬಿಕೆಯಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ. ವಾಸ್ತವವಾಗಿ ಅದು ಬೇರೆ ರೀತಿಯ ಸಮಸ್ಯೆಗಳನ್ನು ಹುಟ್ಟು ಹಾಕಿತು. ವರಮಾನ – ಸಂಪತ್ತಿನ ಕೇಂದ್ರೀಕರಣ, ಅತಿಯಾದ ಬಂಡವಾಳ ವಿನಿಯೋಜನೆ, ಉದ್ಯಮಗಳ ದಟ್ಟಣೆ ಮುಂತಾದ ಸಮಸ್ಯೆಗಳು ಉದ್ಭವವಾದವು. ಇದಕ್ಕೆ ಪರಿಹಾರವಾಗಿ ೧೯೭೦ರ ದಶಕದಲ್ಲಿ ಸಣ್ಣ ಉದ್ದಿಮೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ನಿರ್ಧರಿಸಿತು. ಸಣ್ಣ ಉದ್ದಿಮೆಗಳಿಗೆ ಮಹತ್ವ ನೀಡಬೇಕೆಂಬ ವಿಚಾರ ಆರಂಭದಿಂದಲೂ ಇತ್ತು. ಗಾಂಧಿವಾದಿಗಳು ಸಾಂಪ್ರದಾಯಿಕ ಗುಡಿ ಗೃಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು ಎಂಬ ವಾದ ಮಾಡುತ್ತಿದ್ದರೆ ನೆಹರೂ ಅವರ ಗುಂಪು ಆಧುನಿಕ ಸಣ್ಣ ಉದ್ದಿಮೆಗಳನ್ನು ಪ್ರೋತ್ಸಾಹಿಸಬೇಕೆಂದು ವಾದಿಸುತ್ತಿತ್ತು. ಈ ಎರಡೂ ವಾದ – ಪ್ರತಿ ವಾದಗಳ ನಡುವೆ ರಾಜಿ ಸೂತ್ರವಾಗಿ ಎರಡು ಬಗೆಯ ಸಣ್ಣ ಉದ್ದಿಮೆಗಳಿಗೂ ಪ್ರೋತ್ಸಾಹ ನೀಡಬೇಕೆಂಬ ತೀರ್ಮಾನವಾಯಿತು.

ಈ ಕೆಳಗಿನ ಉದ್ದೇಶಗಳಿಗಾಗಿ ಸಣ್ಣ ಉದ್ದಿಮೆಗಳನ್ನು ಪ್ರೋತ್ಸಾಹಿಸಬೇಕೆಂದು ಸರ್ಕಾರ ಹೇಳಿದೆ.

೧. ಸಣ್ಣ ಉದ್ದಿಮೆಗಳನ್ನು ಕಡಿಮೆ ಬಂಡವಾಳದಿಂದ ನಿರ್ಮಿಸಬಹುದು.

೨. ಇವು ಶ್ರಮ ಆಧರಿಸಿದ ತಂತ್ರವನ್ನು ಬಳಸುತ್ತವೆ. ಆದ್ದರಿಂದ ನಿರುದ್ಯೋಗಕ್ಕೆ ಇದು ಪರಿಹಾರ ಒದಗಿಸಬಲ್ಲದು.

೩. ಇವುಗಳನ್ನು ಯಾವುದೇ ಪರಿಸರದಲ್ಲೂ ಸ್ಥಾಪಿಸಬಹುದಾಗಿದೆ.

೪. ಇವು ವಿಕೇಂದ್ರೀಕೃತ ಕೈಗಾರಿಕೀಕರಣಕ್ಕೆ ಸೂಕ್ತವಾಗಿದೆ.

೫. ಕಡಿಮೆ ಬಂಡವಾಳ ಮತ್ತು ಸರಳ ತಂತ್ರಜ್ಞಾನದಿಂದ ಇವುಗಳನ್ನು ಅಭಿವೃದ್ಧಿ ಪಡಿಸಬಹುದು. ಈ ಕಾರಣದಿಂದ ಸಮಾಜದ ಎಲ್ಲ ವರ್ಗಗಳಲ್ಲೂ ಉದ್ಯಮ ಪತಿಗಳ ಬೆಳವಣಿಗೆ ಸಾಧ್ಯ. ಸಂಪತ್ತಿನ ಮರು ವಿತರಣೆ ಇದರಿಂದ ಸಾಧ್ಯವಾಗುತ್ತದೆ.

ಸಣ್ಣ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಪಟ್ಟಿ ಮಾಡಿದ ಲಾಭಗಳು ವಾಸ್ತವವಾಗಿ ಸೃಷ್ಟಿಯಾಗಲಿಲ್ಲ. ಇಂದು ಆಧುನಿಕ ಸಣ್ಣ ಉದ್ದಿಮೆಗಳು ಮತ್ತು ಬೃಹತ್ ಉದ್ದಿಮೆಗಳ ನಡುವೆ ವ್ಯತ್ಯಾಸವೇ ತುಂಬಾ ತೆಳುವಾಗಿದೆ. ತಂತ್ರಜ್ಞಾನ, ಕಚ್ಚಾ ಸಾಮಗ್ರಿಗಳ ಉಪಯೋಗ, ಆಧುನಿಕ ವಾಣಿಜ್ಯ ವ್ಯವಸ್ಥೆಗಳ ಅಗತ್ಯ ಮುಂತಾದವುಗಳ ದೃಷ್ಟಿಯಿಂದ ಇವೆರಡೂ ಬಗೆಯ ಉದ್ದಿಮೆಗಳಲ್ಲಿ ವ್ಯತ್ಯಾಸಗಳು ಇಲ್ಲ. ಈ ಕಾರಣದಿಂದಲೇ ಅವು ಶ್ರಮಸಾಂತ್ರ ಎನ್ನುವಂತಿಲ್ಲ. ಸಂಪತ್ತಿನ ಮರು ವಿತರಣೆ ಅವುಗಳಿಂದ ಸಾಧ್ಯವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಅಭಿವೃದ್ಧಿಯಲ್ಲಿನ ಪ್ರಾದೇಶಿಕ ಅಸಮಾನತೆಯನ್ನು ತೊಡೆಯುವಲ್ಲಿ ಅವು ಯಶಸ್ವಿಯಾಗಲಿಲ್ಲ. ಈ ನಿಟ್ಟಿನಲ್ಲಿ ಉದ್ಯೋಗ ಒದಗಿಸುವ ಪರಿಣಾಮಕಾರಿ ಕಾರ್ಯ ನಡೆದದ್ದು ಅಸಂಘಟಿತವಲಯದಲ್ಲಿ ! ಎರಡು ಮುಖ್ಯ ಕಾರಣಗಳಿಗಾಗಿ ಇದನ್ನು ಅಸಂಘಟಿತ ವಲಯ ಎಂದು ಕರೆಯಲಾಗಿದೆ. ಒಂದನೆಯದಾಗಿ ಈ ವಲಯದಲ್ಲಿನ ಕಾರ್ಮಿಕರು ಅಸಂಘಟಿತರು, ಎರಡನೆಯದಾಗಿ ಇದೊಂದು ಅನಧಿಕೃತ ವಲಯವಾಗಿದೆ. ಏಕೆಂದರೆ ಈ ವಲಯದಲ್ಲಿನ ಚಟುವಟಿಕೆಗಳಿಗೆ ಕಾನೂನು – ನೀತಿ – ನಿಯಮಗಳು ಅನ್ವಯವಾಗುವುದಿಲ್ಲ. ಜೊತೆಗೆ ಇದು ಆಧುನಿಕ ಪ್ರಭುತ್ವ ನೀಡುವ ಸೌಲಭ್ಯ ಸವಲತ್ತುಗಳನ್ನು ಅಷ್ಟಾಗಿ ಬಳಸಿಕೊಳ್ಳುತ್ತಿಲ್ಲ. ಇಲ್ಲಿ ಕುಟುಂಬ ಸದಸ್ಯರ ಪರಿಶ್ರಮದಿಂದ ಉದ್ದಿಮೆ ನಡೆಯುತ್ತದೆ. ಇಲ್ಲಿ ವ್ಯವಹಾರದ ಒಟ್ಟು ಉದ್ದೇಶವು ಲಾಭಗಳಿಸುವುದಕ್ಕಿಂತ ಕುಟುಂಬದ ಸದಸ್ಯರಿಗೆ ಅನ್ನ – ಆಶ್ರಯ ಒದಗಿಸುವುದಾಗಿದೆ. ಆದ್ದರಿಂದ ಕೈಗಾರಿಕೀಕರಣ ಎಂಬುದನ್ನು ಕೃಷಿಯೇತರ ಚಟುವಟಿಕೆಗಳು ಎಂದು ವ್ಯಾಖ್ಯಾನಿಸಿಕೊಳ್ಳುವುದು ಒಳ್ಳೆಯರು. ಇಲ್ಲಿ ಆಧುನಿಕ ಕೃಷಿಯೇತರ ಚಟುವಟಿಕೆಗಳ ಜೊತೆಗೆ ಸಾಂಪ್ರದಾಯಿಕ ಕೃಷಿಯೇತರ ಚಟುವಟಿಕೆಗಳು ಸೇರಿಕೊಳ್ಳುತ್ತವೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೊಪ್ಪಳ ಜಿಲ್ಲೆಯ ಕೃಷಿಯೇತರ ಚಟುವಟಿಕೆಗಳ ಸ್ಥಿತಿ ಮತ್ತು ಸಾಧ್ಯತೆಗಳನ್ನು ಪರಿಶೀಲಿಸಬೇಕಾಗಿದೆ.

ಕೈಗಾರಿಕೀಕರಣ: ಕೆಲವು ಸೈದ್ಧಾಂತಿಕ ಪ್ರಶ್ನೆಗಳು

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಭಿವೃದ್ಧಿಯ ಚುಕ್ಕಾಣಿಯು ಪ್ರಭುತ್ವದ ವಶದಲ್ಲಿತ್ತು. ೧೯೯೧ ರಲ್ಲಿ ಪ್ರಾರಂಭವಾದ ಉದಾರೀಕರಣ ನೀತಿಯಿಂದಾಗಿ ಈಗ ಸ್ಥಿತಿ ಬದಲಾವಣೆಯಾಗಿದೆ. ಆದರೆ ಅಭಿವೃದ್ಧಿಯ ಮೂಲ ಉದ್ದೇಶ ಮಾತ್ರ ಅಂದು ಮತ್ತು ಇಂದು ಒಂದೇ ಆಗಿದೆ. ಆ ಉದ್ದೇಶವೆಂದರೆ ಆರ್ಥಿಕ ಅಭಿವೃದ್ಧಿಯ ಮೂಲಕ ಸಮಾಜದಲ್ಲಿ ಪರಿವರ್ತನೆಯನ್ನು ತರುವುದು. ಇದಕ್ಕೆ ಅಳವಡಿಸಿಕೊಂಡ ಕಾರ್ಯ ವಿಧಾನದಲ್ಲಿ ಇಂದು ಬದಲಾವಣೆಯಾಗಿದೆ. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಪ್ರಭುತ್ವ (state) ನೇರ ಪಾಲುಗೊಳ್ಳುವ ಮೂಲಕ ಪರಿವರ್ತನೆಗೆ ಚಾಲನೆ ನೀಡುವ ಕೆಲಸ ನಡೆಯುತ್ತಿತ್ತು. ಈಗ ಪ್ರಭುತ್ವದ ಪಾತ್ರ – ಗಾತ್ರದಲ್ಲಿ ಬದಲಾವಣೆಯಾಗಿದೆ. ಸರ್ಕಾರದ ನೇರ ಸಹಭಾಗಿತ್ವವನ್ನು ಬಂಡವಾಳ ವಿರೋಧಿಸುತ್ತದೆ. ಉದಾರೀಕರಣದ ಉದ್ದೇಶ, ಪ್ರಭುತ್ವವನ್ನು ಕ್ಷೀಣಿಸಬೇಕೆಂಬುದಲ್ಲ. ಅದು ಬಂಡವಾಳದ ನಿರ್ವಹಣೆಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು. ಅದರ ಪಾತ್ರ ಪೂರಕವಾಗಿರಬೇಕೆ ವಿನಃ ಪ್ರಧಾನವಾಗಿರಬಾರದು ಎಂಬುದು ಇಂದಿನ ವಿಚಾರವಾಗಿದೆ. ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ಸಂಘಟಿತ ಕಾರ್ಮಿಕರಿಂದ ಉಂಟಾಗುವ ವಿವಾದಗಳನ್ನು ಪರಿಹರಿಸುವುದು ಬಂಡವಾಳ ವಿನಿಯೋಜನೆ ಸಂಚಲನೆಗೆ ಅನುವು ಮಾಡಿಕೊಡುವುದು ಹಾಗೂ ಹೂಡಿದ ಬಂಡವಾಳವನ್ನು ವಾಪಸ್ಸು ಹಿಂತೆಗೆದುಕೊಳ್ಳಲು ಅನುಕೂಲವಾಗುವಂತೆ ಕಾನೂನು ರೂಪಿಸುವುದು ಮುಂತಾದವು ಇಂದು ಪ್ರಭುತ್ವ ನಿರ್ವಹಿಸಬೇಕಾಗಿರುವ ಕಾರ್ಯಭಾರವಾಗಿದೆ.

ಅಭಿವೃದ್ಧಿ ಯೋಜನೆ ದೃಷ್ಟಿಯಿಂದ ಇಂದು ಜಿಲ್ಲೆಯು ಒಂದು ಘಟಕವಾಗಿ ರೂಪುಗೊಂಡಿದೆ. ಇತ್ತೀಚೆಗಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ದೃಷ್ಟಿಯಿಂದ ತಾಲ್ಲೂಕನ್ನು ಘಟಕವನ್ನಾಗಿಸಬೇಕೆಂಬ ವಾದವೂ ಇದೆ. ಇದಕ್ಕೆ ಕಾರಣ ಜಿಲ್ಲೆಯನ್ನು ಒಂದು ಅಭಿವೃದ್ಧಿ ಘಟಕವಾಗಿಸಿದಾಗ, ಆ ಜಿಲ್ಲೆಯೊಳಗಿನ ಮುಂದುವರಿದ ತಾಲ್ಲೂಕುಗಳು ಅಭಿವೃದ್ಧಿಯ ಎಲ್ಲ ಸವಲತ್ತುಗಳನ್ನು ಪಡೆದುಕೊಂಡುಬಿಡುವ ಸಾಧ್ಯತೆ ಇದೆ. ಜಿಲ್ಲೆಯು ಹಿಂದುಳಿದಿರಬಹುದು. ಹಿಂದುಳಿದ ಜಿಲ್ಲೆಯೊಳಗೆ ಮುಂದುವರಿದ ತಾಲ್ಲೂಕುಗಳಿರಬಹುದು. ಇದಕ್ಕೆ ನಿದರ್ಶನವಾಗಿ ಕೊಪ್ಪಳ ಜಿಲ್ಲೆಯನ್ನು ತೆಗೆದುಕೊಳ್ಳಬಹುದು. ಯಾವುದೇ ಮಾನದಂಡದಿಂದ ನೋಡಿದರೂ ಇದು ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಆದರೆ ಜಿಲ್ಲೆಯೊಳಗೆ ಗಂಗಾವತಿಯು ತುಂಬಾ ಮುಂದುವರಿದ ತಾಲ್ಲೂಕಾಗಿದೆ. ಇದೇ ರೀತಿ ಅನೇಕ ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕೆಗಳ ದೃಷ್ಟಿಯಿಂದ ಮುಂದುವರಿದ ತಾಲ್ಲೂಕುಗಳಿವೆ. ಸರ್ಕಾರದ ಸಹಾಯಧನ, ತೆರಿಗೆ ರಿಯಾಯಿತಿ, ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ, ಸಬ್ಸಿಡಿ ಮುಂತಾದ ಸವಲತ್ತುಗಳನ್ನು ಮುಂದುವರಿದ ತಾಲ್ಲೂಕುಗಳು ಪಡೆದುಕೊಂಡು ಬಿಡುವ ಸಾಧ್ಯತೆ ಇದೆ. ಈ ದೃಷ್ಟಿಯಿಂದ ತಾಲ್ಲೂಕನ್ನು ಅಭಿವೃದ್ಧಿಯ ಘಟಕವನ್ನಾಗಿಸಬೇಕೆಂಬ ವಾದವಿದೆ. ಆದರೆ ಇಂದು ಜಿಲ್ಲೆಯನ್ನು ಅಭಿವೃದ್ಧಿ ಘಟಕವನ್ನಾಗಿ ಮಾಡಿಕೊಂಡು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಕೆಲಸ ನಡೆದಿದೆ. ಅಭಿವೃದ್ಧಿ ಹಾಗೂ ಆಡಳಿತ ಎರಡರ ದೃಷ್ಟಿಯಿಂದಲೂ ಜಿಲ್ಲೆಯ ಗಾತ್ರ ಚಿಕ್ಕದಾಗಿದ್ದರೆ ಅನುಕೂಲ ಎನ್ನಲಾಗಿದೆ. ಈ ಕಾರಣದಿಂದಾಗಿಯೇ ಕರ್ನಾಟಕದಲ್ಲಿ ಹೊಸ ಜಿಲ್ಲೆಗಳನ್ನು ರೂಪಿಸಲಾಗಿದೆ. ಜಿಲ್ಲೆಯ ಗಾತ್ರ ಚಿಕ್ಕದಾಗಿದ್ದರೆ ಅಭಿವೃದ್ಧಿ ಹಾಗೂ ಆಡಳಿತ ಚುರುಕುಗೊಳ್ಳುತ್ತವೆ. ಅವುಗಳ ಕಾರ್ಯಕ್ಷಮತೆ ಉತ್ತಮಗೊಳ್ಳುತ್ತದೆ ಎಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಅಭಿವೃದ್ಧಿಯ ಗುರಿ, ವಿಧಾನ ಮುಂತಾದವುಗಳ ಬಗ್ಗೆ ಧಾರಾಳ ಟೀಕೆಗಳಿವೆ. ಈ ಬಗೆಗಿನ ಚರ್ಚೆ ಇಲ್ಲಿ ಪ್ರಸ್ತುತ ಎಂದು ಭಾವಿಸಲಾಗಿದೆ.

ಆರ್ಥಿಕ ಪ್ರಗತಿ – ಅಭಿವೃದ್ಧಿಯಿಂದ ಸಾಮಾಜಿಕ ಪರಿವರ್ತನೆ, ಜನರ ಜೀವನ ಉತ್ತಮಗೊಳ್ಳುವುದು ನಡೆಯುತ್ತಿಲ್ಲ. ಅಭಿವೃದ್ಧಿ ಮಟ್ಟ ಉತ್ತಮವಾಗಿರುವಾಗಲೂ ವರಮಾನ – ಉತ್ಪನ್ನಗಳು ಉನ್ನತ ಮಟ್ಟಕ್ಕೇರಿದ ಸಂದರ್ಭದಲ್ಲೂ ಬಡತನ – ಕಡು ಬಡತನ ತೀವ್ರಗೊಳ್ಳುವ ಸಂಗತಿ ನಮ್ಮ ಮುಂದಿದೆ. ಇದಕ್ಕೆ ಪರಿಹಾರವನ್ನು ಒಂದು ಕಾಲದಲ್ಲಿ ಸಂಪತ್ತಿನ ಮರು ವಿತರಣೆಯಲ್ಲಿ ಕಂಡುಕೊಳ್ಳಲಾಗಿತ್ತು. ಆದರೆ ಅದು ಕಾರ್ಯ ಸಾಧುವಲ್ಲ ಎಂಬುದು ಈಗ ಸಿದ್ಧವಾಗಿದೆ. ಈಗ ಚರ್ಚೆಯಲ್ಲಿರುವ ಸಂಗತಿಯೆಂದರೆ ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವುದು. ಸಂಪತ್ತಿನ ಮರು ವಿತರಣೆಯಿಲ್ಲದೆ ಅಸಮಾನತೆ – ಬಡತನ ದೂರವಾಗಬೇಕಾದರೆ ಸಮಾಜದ ಪ್ರತಿಯೊಬ್ಬನಿಗೂ ಆಧುನೀಕರಣ – ಉದಾರೀಕರಣ ಪ್ರಕ್ರಿಯೆಯಲ್ಲಿ ಸಹಭಾಗಿಯಾಗಲು ಅವಕಾಶವಿರಬೇಕು. ಅದಕ್ಕಾಗಿ ಜನರಿಗೆ ಶಿಕ್ಷಣ, ಆರೋಗ್ಯ, ನೀರು, ಆಹಾರ, ಸಾರಿಗೆ, ಮುಂತಾದ ಸೌಲಭ್ಯಗಳ ಪೂರೈಕೆಯಾಗಬೇಕು. ಕೃಷಿಯೇತರ ಚಟುವಟಿಕೆಗಳನ್ನು ಬಂಡವಾಳ ವಿನಿಯೋಜನೆ ದೃಷ್ಟಿಗಿಂತ ಅವು ಜನರಿಗೆ ಒದಗಿಸಬಹುದಾದ ಹಕ್ಕುದಾರಿಕೆ-ಉದ್ಯೋಗಗಳ ದೃಷ್ಟಿಯಿಂದ ನೋಡುವ ಅಗತ್ಯವಿದೆ.

ಅಭಿವೃದ್ಧಿ ಕುರಿತಂತೆ ಪ್ರಭುತ್ವದ ನಾಯಕತ್ವಕ್ಕೆ ಪ್ರತಿಯಾಗಿ ಖಾಸಗೀ – ಸರ್ಕಾರೇತರ ಪ್ರಯತ್ನಗಳಿಗೆ ಮಹತ್ವ–ಪ್ರಧಾನ್ಯತೆ ದೊರಕಬೇಕೆಂಬುದು ಈಗಿನ ವಾದ. ಪ್ರಭುತ್ವವು ಪ್ರಧಾನವಾಗಿದ್ದರೆ ಕೇಂದ್ರೀಕೃತ ತೀರ್ಮಾನಗಳಿಗೆ ಅವಕಾಶವಾಗಿ ಬಿಡುತ್ತದೆ. ನಮ್ಮದು ಬಹು ವಿಸ್ತಾರವಾದ ಮತ್ತು ವೃವಿದ್ಯತೆಯಿಂದ ಕೂಡಿದ ದೇಶ. ಇಲ್ಲಿ ಕೇಂದ್ರೀಕೃತ ತೀರ್ಮಾನಗಳು ಸಮಾಜದ ಎಲ್ಲ ವರ್ಗಗಳ ಆಶಯಕ್ಕೆ ಅನುಗುಣವಾಗಿ ಇರುವುದು ಸಾಧ್ಯವಿಲ್ಲ. ಅವುಗಳ ಸ್ಥಳೀಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅವುಗಳಿಗೆ ಪರಿಹಾರ ರೂಪಸಲು ವಿಫಲವಾಗಿವೆ. ಆದ್ದರಿಂದ ವಿಕೇಂದ್ರೀಕೃತ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೆ ಪ್ರಯತ್ನಗಳು ನಡೆದಿವೆ. ಪಂಚಾಯತ್ ರಾಜ್ ಸಂಸ್ಥೆಗಳು ಬಡತನ ನಿವಾರಣೆ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತವೆ. ಅವುಗಳ ಜೊತೆಗೆ ಸಣ್ಣ ಉದ್ದಿಮೆ, ಕಸುಬುದಾರಿಕೆ, ಗುಡಿ ಕೈಗಾರಿಕೆ ಮುಂತಾದ ಕೃಷಿಯೇತರ ಚಟುವಟಿಕೆಗಳನ್ನು ಸೇರಿಸಿಕೊಂಡು ಅಭಿವೃದ್ಧಿಯನ್ನು ರೂಪಿಸುವ ಅಗತ್ಯವಿದೆ.

ಅಭಿವೃದ್ಧಿಯನ್ನು ಮಾನವಮುಖಿಯಾಗಿಸುವ ದಿಶೆಯಲ್ಲಿ ತೀವ್ರ ಪ್ರಯತ್ನಗಳು ನಡೆಯುತ್ತಿವೆ. ಅಮರ್ತ್ಯಸೇನ್ ಅವರಿಗೆ ಸಿಕ್ಕಿದ ನೊಬೆಲ್ ಪ್ರಶಸ್ತಿಯಿಂದ ಇದನ್ನು ತಿಳಿದುಕೊಳ್ಳಬಹುದು. ಅಭಿವೃದ್ಧಿ ಎನ್ನುವುದು ಕೇವಲ ಬಂಡವಾಳ ವಿನಿಯೋಜನೆ, ವರಮಾನ, ಉತ್ಪನ್ನ ಮುಂತಾದವುಗಳಿಗೆ ಮಾತ್ರ ಸೀಮಿತವಾದ ಸಂಗತಿಯಾಗಿ ಉಳಿದಿಲ್ಲ. ಆರೋಗ್ಯ, ಅಕ್ಷರ, ಆಹಾರ, ಆಶ್ರಯ – ಮುಂತಾದ ಸಂಗತಿಗಳನ್ನು ಅಭಿವೃದ್ಧಿ ಒಳಗೊಳ್ಳುತ್ತಿದೆ. ಕೃಷಿಯೇತರ ಚಟುವಟಿಕೆಗಳು ಸಮಾಜದ ಕೆಳಸ್ತರದಲ್ಲಿರುವ ವರ್ಗಗಳಿಗೆ ಎಟುಕಬೇಕಾದರೆ ಆ ವರ್ಗಗಳ ಧಾರಣಶಕ್ತಿಯನ್ನು ಉತ್ತಮಪಡಿಸಬೇಕಾಗಿದೆ. ಯಾವ ಬಗೆಯ ಚಟುವಟಿಕೆಗಳು ಜನರ ಧಾರಣ ಶಕ್ತಿಯನ್ನು, ಹಕ್ಕುದಾರಿಕೆಯನ್ನು ಉತ್ತಮ ಪಡಿಸುತ್ತಿವೆಯೋ ಅಂತಹ ಕೃಷಿಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕಾಗುತ್ತದೆ.

ಕೇಂದ್ರೀಕೃತ ಮಾದರಿಗಿಂತ ವಿಕೇಂದ್ರೀಕೃತ ಮಾದರಿಯಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಬೆಳಸಬೇಕಾಗಿದೆ. ಏಕೆಂದರೆ ಕೇಂದ್ರೀಕೃತ ಮಾದರಿಯಲ್ಲಿ ಸ್ಥಳೀಯ ಸಂಪನ್ಮೂಲಗಳ ಬಳಕೆ ಮತ್ತು ರಕ್ಷಣೆ ಕುರಿತಂತೆ ಹೆಚ್ಚು ಗಮನ ದೊರೆಯುವುದಿಲ್ಲ. ಸ್ಥಳೀಯ ಸಂಪನ್ಮೂಲ ಆಧರಿಸಿದ ಕೃಷಿಯೇತರ ಚಟುವಟಿಕೆಗಳನ್ನು ಬೆಳೆಸಲು ವಿಕೇಂದ್ರೀಕೃತ ಮಾದರಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.

ಕೈಗಾರಿಕಾರಂಗ ಕುರಿತ ಮಾಹಿತಿ

ಹೊಸ ಜಿಲ್ಲೆಗಳ ಕೈಗಾರಿಕಾ ಚಟುವಟಿಕೆ ಕುರಿತಂತೆ ವಿವರವಾದ ಮಾಹಿತಿ ಲಭ್ಯವಿಲ್ಲ. ನಾವು ಸಂಗ್ರಹಿಸಿರುವ ಮಾಹಿತಿಯನ್ನು ಆಧರಿಸಿ ಕೆಲವು ನಿರ್ಣಯಗಳನ್ನು ಇಲ್ಲಿ ಮಂಡಿಸಿದೆ. ಜಿಲ್ಲೆಯಲ್ಲಿರುವ ಕೈಗಾರಿಕಾ ಘಟಕಗಳ ಸಂಖ್ಯೆ, ಕೈಗಾರಿಕಾ ಉದ್ಯೋಗಗಳ ಸಂಖ್ಯೆ ಮತ್ತು ಅಲ್ಲಿ ಹೂಡಲಾದ ಬಂಡವಾಳ ಮುಂತಾದವುಗಳ ವಿವರಗಳನ್ನು ಇಲ್ಲಿ ವಿಶ್ಲೇಷಣೆಗೆ ಬಳಸಲಾಗಿದೆ. ಕೈಗಾರಿಕೆ, ಗುಡಿ/ ಗೃಹ ಕೈಗಾರಿಕೆ, ವ್ಯಾಪಾರ – ವಾಣಿಜ್ಯ, ಸಾರಿಗೆ ಮುಂತಾದ ಕ್ಷೇತ್ರದಲ್ಲಿನ ಚಟುವಟಿಕೆಗಳನ್ನು ಕೃಷಿಯೇತರ ಚಟುವಟಿಕೆಯೆಂದು ನಿರ್ವಚಿಸಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯ ಕೈಗಾರಿಕಾ ರಂಗ ಬೆಳವಣಿಗೆಯನ್ನು ರಾಜ್ಯ ಮಟ್ಟದ ಸರಾಸರಿಗೆ ಹೋಲಿಸಿ ನೋಡಲಾಗಿದೆ.

ಈ ಎಲ್ಲ ಬಗೆಯ ವಿಶ್ಲೇಷಣೆಯಿಂದ ಹೊಸದಾಗಿ ನಿರ್ಮಾಣಗೊಂಡ ಕೊಪ್ಪಳ ಜಿಲ್ಲೆಯ ಕೃಷಿಯೇತರ ಚಟುವಟಿಕೆಗಳ ಸ್ಥಿತಿಗತಿಗಳನ್ನು ಗುರುತಿಸುವುದು ಸಾಧ್ಯವಾಗುತ್ತದೆ. ಈ ಜಿಲ್ಲೆಯಲ್ಲಿ ಮುಂದೆ ಕೃಷಿಯೇತರ ಚಟುವಟಿಕೆಗಳನ್ನು ಹೇಗೆ ಬೆಳೆಸಬೇಕು ಎಂಬುದರ ಚರ್ಚೆ ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ಬೇಕಾದ ಮಾಹಿತಿ ನಮಗೆ ಲಭ್ಯವಿಲ್ಲ. ಇದು ನಮ್ಮ ಅಧ್ಯಯನದ ಒಂದು ಮಿತಿಯಾಗಿದೆ.

ಕೃಷಿಯೇತರ ಚಟುವಟಿಕೆಗಳು

ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಚಟುವಟಿಕೆಗಳನ್ನು ಕೃಷಿಯೇತರ ಚಟುವಟಿಕೆಗಳೆಂದು ಇಲ್ಲಿ ಪರಿಭಾವಿಸಲಾಗಿದೆ. ಮುಖ್ಯ ವಾಹಿಸಿ ಅರ್ಥಶಾಸ್ತ್ರದ ಪ್ರಕಾರ ಆರ್ಥಿಕ ಚಟುವಟಿಕೆಗಳನ್ನು ಮೂರು ಬಗೆಯಲ್ಲಿ ವರ್ಗೀಕರಿಸಬಹುದು. ಒಂದನೆಯದು ಪ್ರಾಥಮಿಕರಂಗದ, ಅಂದರೆ ಕೃಷಿ ಮತ್ತು ತತ್ಸಬಂಧಿ ಚಟುವಟಿಕೆಗಳು. ಎರಡನೆಯದು ಕೈಗಾರಿಕಾ ರಂಗದ, ಅಂದರೆ ದ್ವಿತೀಯ ವಲಯದ ಚಟುವಟಿಕೆಗಳು ಮತ್ತು ಮೂರನೆಯದಾಗಿ ಸೇವಾ ವಲಯದ ಚಟುವಟಿಕೆಗಳು. ಕೈಗಾರಿಕೆ ರಂಗ ಮತ್ತು ಸೇವಾರಂಗದ ಚಟುವಟಿಕೆಗಳನ್ನು ಕೃಷಿಯೇತರ ಚಟುವಟಿಕೆಗಳೆಂದು ಕರೆಯಬಹುದು.

ಇಡೀ ರಾಜ್ಯದಲ್ಲಿ ಅತ್ಯಂತ ಕಡಿಮೆ ಕೃಷಿಯೇತರ ಚಟುವಟಿಕೆಗಳಿರುವ ಜಿಲ್ಲೆಗಳಲ್ಲಿ ಕೊಪ್ಪಳವು ಒಂದು ಜಿಲ್ಲೆಯಾಗಿದೆ. ಈ ಜಿಲ್ಲೆಯ ಒಟ್ಟು ದುಡಿಮೆಗಾರ ವರ್ಗದಲ್ಲಿ ಕೇವಲ ಶೇ. ೧೬.೫೮ ರಷ್ಟು ಮಂದಿ ಮಾತ್ರ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯ ಮಟ್ಟದಲ್ಲಿ ಇದರ ಪ್ರಮಾಣ ಶೆ. ೨೯.೮೮ ರಷ್ಟಿದೆ. ಈ ಒಂದು ಬಗೆಯ ಆರ್ಥಿಕ ರಚನೆಯ ಆಧಾರದಿಂದ ಕೊಪ್ಪಳ ಜಿಲ್ಲೆಯು ಹಿಂದುಳಿದ ಜಿಲ್ಲೆಯೆಂದು ಪರಿಗಣಿಸಬಹುದು. ಇಂತಹ ನಿರ್ಣಯಗಳ ಔಚಿತ್ಯವನ್ನು ಅನೇಕ ಬಗೆಯಲ್ಲಿ ಪ್ರಶ್ನಿಸಬಹುದು. ಆದರೆ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಬೇರು ಬಿಟ್ಟಿರುವ ಅಸಮಾನತೆಗಳನ್ನು ತೊಡೆದು ಹಾಕುವಲ್ಲಿ ಕೃಷಿಯೇತರ ಚಟುವಟಿಕೆಗಳ ಪಾತ್ರ ಮಹತ್ವವಾದುದು ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಕೃಷಿ ಪ್ರಧಾನ ವ್ಯವಸ್ಥೆಯಲ್ಲಿ ಕೆಳವರ್ಗದ ಜನರಿಗೆ ಅನುಕೂಲಗಳು ದೊರಕುವ ಸಾಧ್ಯತೆ ಕಡಿಮೆ. ಕೃಷಿ ಕೂಲಿ ಕನಿಷ್ಠ ಮಟ್ಟದಲ್ಲಿದೆ. ದಿನಗೂಲಿ ಪ್ರಮಾಣ ಇಂದಿಗೂ ರೂ. ೧೫ ರಿಂದ ರೂ. ೨೦ ಮೀರಿಲ್ಲ. ಕೃಷಿಯೇತರ ಚಟುವಟಿಕೆಗಳು ಇಲ್ಲದಿರುವುದರಿಂದ ಕೃಷಿ ಕೂಲಿ ಅಧಿಕಗೊಳ್ಳುವಂತೆ ಮಾಡಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ ಕೊಪ್ಪಳ ಜಿಲ್ಲೆಯಲ್ಲಿ ಕೃಷಿಯೇತರ ಚಟುವಟಿಕೆಗಳ ಬೆಳವಣಿಗೆಗೆ ಮಹತ್ವ ನೀಡುವ ಅವಶ್ಯಕತೆ ಇದೆ.

ಕೊಪ್ಪಳ ಜಿಲ್ಲೆಯಲ್ಲಿ ಕೈಗಾರಿಕೀಕರಣ

ಇಲ್ಲಿ ಜಿಲ್ಲೆಯಲ್ಲಿನ ಸಣ್ಣ, ಮಧ್ಯಮ ಹಾಗೂ ದೊಡ್ಡ ಉದ್ದಿಮೆಗಳಿಗೆ ಸಂಬಂಧಿಸಿದ ಮಾಹಿತಿ ಇದೆ. ಆದರೆ ಗುಡಿ / ಗೃಹ ಕೈಗಾರಿಕೆಗಳಿಗೆ ಸಂಬಂಧಿಸಿದ ಮಾಹಿತಿ ಇಲ್ಲದಿರುವುದು ಒಂದು ಮುಖ್ಯ ಕೊರತೆಯಾಗಿದೆ. ಕೈಗಾರಿಕಾ ರಂಗದ ಬೆಳವಣಿಗೆಯನ್ನು ವಿವಿಧ ಮಾನದಂಡಗಳಿಂದ ಇಲ್ಲಿ ಗುರುತಿಸಲಾಗಿದೆ. ಕೋಷ್ಟಕ – ೮.೧ ರಲ್ಲಿ ಕೊಪ್ಪಳ ಜಿಲ್ಲೆಯ ಕೈಗಾರಿಕಾ ರಂಗದ ಸ್ಥಿತಿಗತಿಯನ್ನು ತೋರಿಸಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಕೈಗಾರಿಕಾ ರಂಗ:
ಕೋಷ್ಟಕ:.

ಜಿಲ್ಲೆಯ ಒಟ್ಟು ದುಡಿಮೆಗಾರರ ವರ್ಗ

೪,೪೪,೦೮೦

ಕೃಷಿಯೇತರ ಚಟುವಟಿಕೆಗಳಲ್ಲಿನ ದುಡಿಮೆಗಾರ ವರ್ಗ

೭೩,೬೩೭ (ಶೇ.೧೬.೫೮)

ಸಣ್ಣ ಕೈಗಾರಿಕಾ ಘಟಕಗಳು

೩೨೮

ಮಧ್ಯಮ ಹಾಗೂ ದೊಡ್ಡ ಕೈಗಾರಿಕೆಗಳ ಸಂಖ್ಯೆ

ಒಟ್ಟು ಉದ್ಯಮಗಳ ಸಂಖ್ಯೆ

೩೩೩

ಕೈಗಾರಿಕೆಗಳ ಮೇಲೆ ಹೂಡಲಾದ ಬಂಡವಾಳ

ರೂ. ೩೬೫.೯೭ ಕೋಟಿ

ಕೈಗಾರಿಕೆಗಳಲ್ಲಿನ ಕಾರ್ಮಿಕರ ಸಂಖ್ಯೆ

೧೯೮೨

ಉದ್ದಿಮೆಗಳ ಸಂಖ್ಯೆಯ ದೃಷ್ಟಿಯಿಂದ ಕೊಪ್ಪಳ ಜಿಲ್ಲೆಯ ಸ್ಥಾನವು ಸಾಪೇಕ್ಷವಾಗಿ ಉತ್ತಮವಿರುವಂತೆ ಕಂಡುಬರುತ್ತದೆ. ರಾಜ್ಯದ ಒಟ್ಟು ಉದ್ದಿಮೆಗಳ ಸಂಖ್ಯೆಯಲ್ಲಿ ಕೊಪ್ಪಳದ ಪಾಲು ಶೇ. ೨.೨೯. ಜನಸಂಖ್ಯೆಯಲ್ಲಿ ಕೊಪ್ಪಳದ ಪಾಲು ಕೇವ. ಶೇ. ೨.೧೩. ಇಷ್ಟಾದರೂ ಸಹ ಕರ್ನಾಟಕದಲ್ಲಿ ಸರ್ಕಾರ ರಚಿಸಿರುವ ಏಳು ಹೊಸ ಜಿಲ್ಲೆಗಳ ಪೈಕಿ ಕೈಗಾರಿಕೆಗಳ ದೃಷ್ಟಿಯಿಂದ ತುಂಬ ಹಿಂದುಳಿದಿರುವ ಜಿಲ್ಲೆ ಕೊಪ್ಪಳ. ಇದು ಕೋಷ್ಟಕ – ೮.೨ ರಿಂದ ಸ್ಪಷ್ಟವಾಗುತ್ತದೆ.

ಹೊಸ ಜಿಲ್ಲೆಗಳಲ್ಲಿ ಸಣ್ಣ, ಉದ್ಯಮ ಹಾಗೂ ದೊಡ್ಡ ಉದ್ದಿಮೆಗಳ ಸಂಖ್ಯೆ
ಕೋಷ್ಟಕ: .

ಹೊಸ
ಜಿಲ್ಲೆಗಳು

ಸಣ್ಣ
ಉದ್ದಿಮೆಗಳು

ಮಧ್ಯಮ ಹಾಗೂ ದೊಡ್ಡ ಉದ್ದಿಮೆಗಳು

ಒಟ್ಟು ಉದ್ದಿಮೆಗಳು

ಗದಗ

೪೯೪

೫೦೨

ಹಾವೇರಿ

೧೦೦೪

೧೦೧೧

ಬಾಗಲಕೋಟೆ

 

೧೦

೧೦

ಕೊಪ್ಪಳ

೩೨೮

೩೩೩

ದಾವಣಗೆರೆ

೫೬೨೩

೧೩

೫೬೩೬

ಉಡುಪಿ

೫೨೧೪

೧೨

೫೨೨೬

ಚಾಮರಾಜನಗರ

ಕರ್ನಾಟಕ

೧೩೫೨೯

೯೯೮

೧೪೫೨೭

ಮೂಲ: ಜಿಲ್ಲಾ ಕೈಗಾರಿಕಾ ಕೇಂದ್ರಗಳು: ಗದಗ, ಹಾವೇರಿ, ಚಿತ್ರದುರ್ಗ ಮತ್ತು ಶಿವಮೊಗ್ಗ
ಆರ್ಥಿಕ ಸಮೀಕ್ಷೆ ೧೯೯೭೯೮ ಪು. ೩೬ ಕರ್ನಾಟಕ ಸರ್ಕಾರ

ಆರ್ಥಿಕ ಅಭಿವೃದ್ಧಿಯೊಂದಿಗೆ ಕೃಷಿವಲಯ ತನ್ನ ಪ್ರಧಾನ ಸ್ಥಾನಮಾನ ಕಳೆದುಕೊಂಡು ಉದ್ದಿಮೆ ಮತ್ತು ಸೇವಾ ವಲಯವು ಆರ್ಥಿಕವಾಗಿ ಪ್ರಧಾನ ಸ್ಥಾನಕ್ಕೇರುವುದು ವಾಡಿಕೆಯಲ್ಲಿರುವ ಒಂದು ಪ್ರವೃತ್ತಿ. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಕೃಷಿ ತನ್ನ ಪ್ರಧಾನ ಸ್ಥಾನಮಾನವನ್ನು ಕಳೆದುಕೊಂಡಿಲ್ಲ. ಈ ಜಿಲ್ಲೆಯಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರ ಸಂಖ್ಯೆ ಬಹಳ ಕಡಿಮೆ. ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಜನರಲ್ಲಿ ಸಂಘಟಿತ ಉದ್ದಿಮೆಗಳಲ್ಲಿ ದುಡಿಯುವವರ ಸಂಖ್ಯೆ ಕೇವಲ ೧೯೮೨. ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಲ್ಲಿ ಸಂಘಟಿತ ಉದ್ದಿಮೆಗಳಲ್ಲಿರುವವರ ಪ್ರಮಾಣ ಕೊಪ್ಪಳ ಜಿಲ್ಲೆಯಲ್ಲಿ ಕೇವಲ ಶೇ. ೨.೬೯ (ನೋಡಿ ಕೋಷ್ಟಕ ೮.೧). ಕೊಪ್ಪಳ ಜಿಲ್ಲೆಯು ಒಟ್ಟು ದುಡಿಮೆಗಾರ ವರ್ಗದಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿ ದುಡಿಯುತ್ತಿರುವವರ ಸಂಖ್ಯೆ ಕೇವಲ ೭೩,೬೩೭ (ಶೇ. ೧೬.೫೮).

ಕೊಪ್ಪಳ ಜಿಲ್ಲೆಯ ಉದ್ದಿಮೆ ರಂಗದ ಮೇಮೆ ವಿನಿಯೋಗಿಸಿರುವ ಬಂಡವಾಳ ರೂ. ೩೬೫೯.೬೬ ಲಕ್ಷ ಎನ್ನಲಾಗಿದೆ. ರಾಜ್ಯದಲ್ಲಿ ಉದ್ದಿಮೆಗಳ ಮೇಲೆ ವಿನಿಯೋಗಿಸಿದ ಬಂಡವಾಳದಲ್ಲಿ ಕೊಪ್ಪಳ ಜಿಲ್ಲೆಯ ಪ್ರಮಾಣ ಕೇವಲ ಶೇ. ೦.೧೮. ಇಲ್ಲಿನ ಒಂದು ವಿಚಿತ್ರ ಸಂಗತಿಯೆಂದರೆ ಕೊಪ್ಪಳ ಜಿಲ್ಲೆಯಲ್ಲಿ ವಿನಿಯೋಗಿಸಿದ ಬಂಡವಾಳದಲ್ಲಿ ಸಣ್ಣ ಉದ್ದಿಮೆಗಳಲ್ಲಿನ ಬಂಡವಾಳದ ಪ್ರಮಾಣ ಕೇವಲ ಶೇ. ೧೮.೨೫. ರಾಜ್ಯದ ಮುಂದುವರಿದ ಜಿಲ್ಲೆಗಳಾದ ದಾವಣಗೆರೆ ಮತ್ತು ಉಡುಪಿಗಳಲ್ಲಿ ಉದ್ದಿಮೆರಂಗದ ಮೇಲೆ ವಿನಿಯೋಗಿಸಿದ ಬಂಡವಾಳದಲ್ಲಿ ಹೆಚ್ಚಿನ ಪ್ರಮಾಣ ಸಣ್ಣ ಉದ್ದಿಮೆ ರಂಗದಲ್ಲಿದೆ. ಆದರೆ, ಹಿಂದುಳಿದ ಕೊಪ್ಪಳದಂತಹ ಜಿಲ್ಲೆಯಲ್ಲಿ ಪರಿಸ್ಥಿತಿ ತಿರುವು ಮುರುವು ಆಗಿದೆ.

ಬಂಡವಾಳ ಮತ್ತು ಉದ್ಯೋಗ

ಬಂಡವಾಳ ವಿನಿಯೋಜನೆ ಹಾಗೂ ಉದ್ಯೋಗಗಳ ಸೃಷ್ಟಿಗಳ ನಡುವಿನ ಸಂಬಂಧದ ಬಗ್ಗೆ ವಿವಿಧ ನಿಲುವುಗಳಿವೆ. ಬಂಡವಾಳಸಾಂದ್ರ ಉದ್ದಿಮೆಗಳ ಸಂಖ್ಯೆಯನ್ನು ಅಭಿವೃದ್ಧಿಯ ಸೂಚಿಯನ್ನಾಗಿ ಬಳಸುವುದು ರೂಢಿಯಲ್ಲಿದೆ. ಅಭಿವೃದ್ಧಿ ಶೀಲ ದೇಶಗಳಲ್ಲಿ ಬಂಡವಾಳದ ಕೊರತೆ ಇದೆ. ಆದರೆ ಶ್ರಮಶಕ್ತಿ ಅಪಾರವಾಗಿದೆ. ಈ ಬಗೆಯ ಉತ್ಪಾದನಾ ಕರ್ತೃಗಳ ಲಭ್ಯತೆಯಿಂದಾಗಿ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಬಂಡವಾಳದ ಜೊತೆಗೆ ಉದ್ಯೋಗಗಳ ಸೃಷ್ಟಿಯು ಮುಖ್ಯವಾಗುತ್ತದೆ. ಸಣ್ಣ ಉದ್ದಿಮೆಗಳ ಸಮರ್ಥನೆಗೆ ನೀಡುವ ಒಂದು ಪ್ರಧಾನವಾದವೆಂದರೆ ಅವು ಶ್ರಮಸಾಂದ್ರವಾಗಿದ್ದಾವೆ ಎಂಬುದಾಗಿದೆ. ಬೃಹತ್ ಉದ್ದಿಮೆಗಳು ಬಂಡವಾಳ ಸಾಂದ್ರವೂ, ಆಮದು ಅವಲಂಬಿತವೂ, ಉಚ್ಚ ತಂತ್ರಜ್ಞಾನ ಬಯಸುವವೂ ಆಗಿದ್ದರೆ ಸಣ್ಣ ಉದ್ದಿಮೆಗಳು ಕಡಿಮೆ ಬಂಡವಾಳ, ಆಮದು ಮುಕ್ತ ಮತ್ತು ಸ್ಥಳೀಯ ತಂತ್ರಜ್ಞಾನ ಆಧರಿಸಿದ ಸ್ವರೂಪ ಹೊಂದಿದೆ. ಸಣ್ಣ ಉದ್ದಿಮೆಗಳು ಹೆಚ್ಚು ಶ್ರಮಸಾಂದ್ರ ಸ್ವರೂಪ ಹೊಂದಿವೆ. ನಿರುದ್ಯೋಗ ನಿವಾರಣೆ ದೃಷ್ಟಿಯಿಂದ ಸಣ್ಣ ಉದ್ದಿಮೆಗಳ ಅಭಿವೃದ್ಧಿ ಹೆಚ್ಚು ಪ್ರಸ್ತುತ ಎಂದು ಹೇಳಲಾಗಿದೆ.

ಈ ಬಗೆಯ ಗೃಹೀತಗಳು ಪ್ರಚಲಿತದಲ್ಲಿವೆ. ಆದರೆ ಇಂತಹ ವಾದದಲ್ಲಿ ಹುರುಳಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಬಂಡವಾಳ ಮತ್ತು ಉದ್ಯೋಗಗಳ ನಡುವೆ ಸಂಬಂಧ ತುಂಬಾ ಸಂಕೀರ್ಣವಾದುದಾಗಿದೆ. ಬಂಡವಾಳದ ಪ್ರಮಾಣವು ಉತ್ಪಾದನಾ ತಂತ್ರವನ್ನು ಅವಲಂಬಿಸಿದೆ. ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಯಾರೂ ಬಂಡವಾಳ ವಿನಿಯೋಗಿಸುವುದಿಲ್ಲ. ಬಂಡವಾಳ ಹೂಡುವುದು ಲಾಭಗಳಿಸಲು! ಶ್ರಮಸಾಂದ್ರ ತಂತ್ರದಿಂದ ಲಾಭ ಹೆಚ್ಚಾಗುವ ಸಾಧ್ಯತೆ ಇದ್ದರೆ ಉದ್ಯಮ ಪತಿಗಳು ಅಂತಹ ತಂತ್ರವನ್ನೇ ಅಳವಡಿಸಿಕೊಳ್ಳುತ್ತಾರೆ. ಯಾವ ಬಗೆಯ ಉತ್ಪಾದನಾ ಕರ್ತೃಗಳ ಕೂಟದಿಂದ ವೆಚ್ಚವು ಕನಿಷ್ಠವಾಗಿ ಲಾಭ ಗರಿಷ್ಠವಾಗುವುದೊ ಅಂತಹ ಕೂಟವನ್ನು ಬಂಡವಾಳಶಾಹಿಗಳು ಆಯ್ಕೆ ಮಾಡಿಕೊಳ್ಳುತ್ತಾರೆ.

ನಮ್ಮ ಸಂದರ್ಭದಲ್ಲಿ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳನ್ನು ಮಧ್ಯಮ ಗಾತ್ರದ ಹಾಗೂ ದೊಡ್ಡ ಉದ್ದಿಮೆಗಳಿಗೆ ಪೂರಕವಾಗಿ ಉತ್ತೇಜಿಸಲಾಗುತ್ತಿದೆ. ವಾಸ್ತವವಾಗಿ ಇಂದು ಸಣ್ಣ ಮತ್ತು ಬೃಹತ್ ಉದ್ದಿಮೆಗಳ ನಡುವಿನ ಅಂತರಗಳು ತೀವ್ರ ತೆಳುವಾಗುತ್ತಿವೆ. ಬೃಹತ್ ಉದ್ದಿಮೆಗಳು ಹೆಚ್ಚು ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿವೆ. ಇಂತಹ ಉದ್ದಿಮೆಗಳಿಗೆ ಪೂರಕವಾಗಿರುವ ಸಣ್ಣ ಉದ್ದಿಮೆಗಳು ಶ್ರಮಸಾಂದ್ರ ತಂತ್ರ ಅಳವಡಿಸಿಕೊಳ್ಳುವುದು ಕಷ್ಟಸಾಧ್ಯ.

ಕೊಪ್ಪಳ ಜಿಲ್ಲೆಯಲ್ಲಿ ಸಣ್ಣ ಉದ್ದಿಮೆಗಳಲ್ಲಿ ಪ್ರತಿ ಒಂದು ಲಕ್ಷ ಬಂಡವಾಳ ವಿನಿಯೋಜನೆಗೆ ಸೃಷ್ಟಿಯಾಗುವ ಉದ್ಯೋಗ ಪ್ರಮಾಣ ೧.೩೯. ಮಧ್ಯಮ ಮತ್ತು ಬೃಹತ್ ಗಾತ್ರದ ಉದ್ದಿಮೆಗಳಲ್ಲಿ ಪ್ರತಿ ಒಂದು ಲಕ್ಷ ಬಂಡವಾಳ ವಿನಿಯೋಜನೆಗೆ ಸೃಷ್ಟಿಯಾಗುವ ಉದ್ಯೋಗ ಪ್ರಮಾಣ ಕೇವಲ ೦.೩೫. ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಸಣ್ಣ ಉದ್ದಿಮೆಗಳು ಶ್ರಮ ಸಾಂದ್ರವಾಗಿದ್ದರೆ ಬೃಹತ್ ಉದ್ದಿಮೆಗಳು ಬಂಡವಾಳ ಸಾಂದ್ರ ತಂತ್ರ ಬಳಸಿವೆ. ಇದಕ್ಕೆ ನಾವು ಊಹಿಸಬಹುದಾದ ಕಾರಣವೆಂದರೆ ಕೊಪ್ಪಳ ಜಿಲ್ಲೆಯಲ್ಲಿ ಸಣ್ಣ ಉದ್ದಿಮೆಗಳು ಕೃಷಿ ಆಧಾರಿತವಾಗಿರುವ ಸಾಧ್ಯತೆ ಇದೆ. ಈ ಜಿಲ್ಲೆಯ ಸಣ್ಣ ಉದ್ದಿಮೆಗಳು ಸಾಂಪ್ರದಾಯಿಕ ಸ್ವರೂಪದವು ಇರಬಹುದು.

ಈ ಕಾರಣದಿಂದಾಗಿ ಕೊಪ್ಪಳ ಜಿಲ್ಲೆಯಲ್ಲಿ ಸಣ್ಣ ಉದ್ದಿಮೆಗಳನ್ನು ಹೆಚ್ಚು ಪ್ರೋತ್ಸಾಹಿಸುವ ಅಗತ್ಯವಿದೆ.