೧೧.

ಊರು ಕುರ್ತುಕೋಟಿ
ಸ್ಮಾರಕ ನರಸಿಂಹ
ಸ್ಥಳ ಈಶ್ವರ ಗುಡಿ ಎದುರು
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ ರಾ.ಪು.ಇ.

ಈಶ್ವರ ದೇವಾಲಯಕ್ಕೆ ಅಭಿಮುಖವಾಗಿರುವ ನರಸಿಂಹ ದೇವಾಲಯವು ಗರ್ಭಗೃಹ ಮತ್ತು ಮುಖಮಂಟಪಗಳನ್ನೊಳಗೊಂಡಿದೆ. ಚೌಕಾಕಾರದ ಗರ್ಭಗೃಹದಲ್ಲಿ ಉಗ್ರನರಸಿಂಹನ ಸುಂದರ ಮೂತಿಯು ಪೀಟದ ಮೇಲಿದೆ. (ಧಾಜಿಗ್ಯಾ ಪು. ೯೧೬) ಮುಂಭಾಗದ ಮುಖಮಂಟಪದಲ್ಲಿ ತಿರುಗಣಿ ಯಂತ್ರದಿಂದ ಮಾಡಿದ ವೃತ್ತಾಕಾರದ ಹಳೆಯ ಕಂಬಗಳನ್ನಿಟ್ಟು ಅದರ ಮೇಲೆ ಮರದ ತೊಲೆಗಳಿಂದ ಈ ದೇವಾಲಯ ಕಟ್ಟಲಾಗಿದೆ. ಈ ದೇವಾಲಯದಲ್ಲಿನ ಕಂಬಗಳ ಮೇಲೆ ಕೆಲವು ಉಬ್ಬುಶಿಲ್ಪಗಳಿವೆ. ಮುಖಮಂಟಪದ ದ್ವಾರ ಮತ್ತು ಲಲಾಟ ಸರಳವಾಗಿದೆ. ಹೊರಭಾಗದ ಅಧಿಷ್ಠಾನ ಮತ್ತು ಭಿತ್ತಿ ಸರಳವಾಗಿದೆ. ಹೊರಭಾಗದ ಭಿತ್ತಿಯನ್ನು ಕಲ್ಲು ಮತ್ತು ಮಣ್ಣನ್ನು ಬಳಸಿ ಇತ್ತೀಚೆಗೆ ನಿರ್ಮಿಸಲಾಗಿದೆ. ದೇವಾಲಯದ ಹೊರಭಾಗದಲ್ಲಿ ಮೂರು ಶಾಸನಗಳಿವೆ. ಅದರಲ್ಲಿ ಒಂದು ಶಾಸನವು ಕಲ್ಯಾಣ ಚಾಲುಕ್ಯರ ಅರಸ ಮೂರನೇ ಸೋಮೇಶ್ವರನ ಕಾಲಕ್ಕೆ ಸೇರಿದ್ದು ಅದು ಕ್ರಿ.ಶ. ೧೧೩೮ರಲ್ಲಿ ಇಲ್ಲಿನ ದೇವಾಲಯಕ್ಕಾಗಿ ಮಾಸಯ್ಯ ನಾಯಕನು ನಂದಾದೀವಿಗೆಗಾಗಿ ದಾನ ನೀಡಿದ ವಿವರವನ್ನು ನೀಡುತ್ತದೆ.

೧೨

ಊರು ಕುರ್ತುಕೋಟಿ
ಸ್ಮಾರಕ ವೀರಭದ್ರ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇದೇ ಊರಿನಲ್ಲಿ ವೀರಭದ್ರ ದೇವಾಲಯವಿದ್ದು, ಅದು ಗರ್ಭಗೃಹ, ಅಂತರಾಳ ಮತ್ತು ತೆರೆದ ಮುಖಮಂಟಪಗಳನ್ನು ಹೊಂದಿದೆ. ಇಡೀ ದೇವಾಲಯವನ್ನು ಈಗ ನವೀಕರಿಸಿ ಮೇಲ್ಛಾವಣಿಗೆ ಆರ್.ಸಿ.ಸಿ. ಹಾಕಿದ್ದಾರೆ. ಗರ್ಭಗೃಹವು ಚೌಕಾಕಾರವಾಗಿದ್ದು ಅದರಲ್ಲಿ ಸ್ಥಾನಿಕ ವೀರಭದ್ರನ ಮೂರ್ತಿಶಿಲ್ಪ ಇದೆ. ಅದರ ಬಳಿಯೇ ಒಂದು ಲಿಂಗವಿದೆ. ಇದರ ದ್ವಾರವು ಲತಾ, ಸ್ತಂಭ, ಪುಷ್ಟ ಮತ್ತು ಮಣಿ ಶಾಖೆಗಳಿಂದಾವೃತವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ಗರ್ಭಗೃಹದ ಮುಂದಿರುವ ಅಂತರಾಳದಲ್ಲಿ ಒಂದು ತೆಳ್ಳನೆಯ ಕಂಬವಿದೆ.

ದೇವಾಲಯದ ಅಧಿಷ್ಠಾನವು ಸರಳವಾಗಿದೆ. ಭಿತ್ತಿಯು ಬಹುತೇಕ ಸರಳವಾಗಿದ್ದು, ದಕ್ಷಿಣ ಭಾಗದ ಹೊರಗೋಡೆಯಲ್ಲಿ ಮಾತ್ರ ಸಪ್ತಮಾತೃಕೆಯರು ಹಾಗೂ ತ್ರುಟಿತ ದೇವಿಯರ ಶಿಲ್ಪಗಳಿವೆ. ಗರ್ಭಗೃಹದ ಮೇಲೆ ನವೀಕರಿಸಿದ ಶಿಖರವಿದೆ. ಅಂತರಾಳದ ಮೇಲಿನ ಸುಖನಾಸಿಯಲ್ಲಿ ಸೂರ್ಯನ ವಿಗ್ರಹವಿದೆ.

ಈ ದೇವಾಲಯದ ಹೊರಭಾಗದಲ್ಲಿ ಚಾಲುಕ್ಯ ಶೈಲಿಯ ಕಂಬಗಳು ಮತ್ತು ಅದೇ ಕಾಲಕ್ಕೆ ಸೇರಿದ ಸಪ್ತಮಾತೃಕೆ, ಉಮಾಮಹೇಶ್ವರಿ, ಗಣೇಶ, ನಾರಾಯಣ, ಮಹಿಷಮರ್ದಿನಿ ಮತ್ತು ನಂದಿಯ ಶಿಲ್ಪಗಳಿವೆ. ಒಂದು ಶಾಸನಶಿಲ್ಪ, ಒಂದು ಶಾಸನ ಹಾಗೂ ಗಜಲಕ್ಷ್ಮಿಯ ಶಿಲ್ಪವಿದೆ.

ಇದೇ ಗ್ರಾಮದ ಮಧ್ಯದಲ್ಲಿ ದಕ್ಷಿಣಾಭಿಮುಖವಾಗಿರುವ ಹನುಂತನ ದೇವಾಲಯವಿದ್ದು, ಅದರಲ್ಲಿ ಸ್ವಲ್ಪ ನಶಿಸಿರುವ ಹನುಮಂತನ ಮೂರ್ತಿಶಿಲ್ಪ ಇದೆ. ಅಲ್ಲಿಯೇ ಲಿಂಗ ಮತ್ತು ಶಾಸನಗಳಿವೆ.

೧೩

ಊರು ಕುರ್ತುಕೋಟಿ
ಸ್ಮಾರಕ ವಿರೂಪಾಕ್ಷ
ಸ್ಥಳ ಊರಿನ ದಕ್ಷಿಣ ದಿಕ್ಕಿಗೆ
ಕಾಲ ಕ್ರಿ.ಶ. ೧೦೦-೧೧ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯ ಚೌಕಾಕಾರವಾಗಿದ್ದು, ಗರ್ಭಗೃಹ ಮತ್ತು ಅಂತರಾಳ ಮತ್ತು ನವರಂಗಗಳನ್ನೊಳಗೊಂಡಿದೆ. ಗರ್ಭಗೃಹದಲ್ಲಿ ಇತ್ತೀಚಿಗೆ ಹೊಸದಾಗಿ ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ. ಮೂಲ ಪ್ರಾಚೀನ ಲಿಂಗವನ್ನು ದೇವಾಲಯದ ಹೊರಭಾಗದಲ್ಲಿನ ಅರಳಿಮರದ ಕೆಳಗಡೆ ಇಟ್ಟಿದ್ದಾರೆ. ಮುಚ್ಚಿಗೆ, ದ್ವಾರ ಮತ್ತು ಲಲಾಟಗಳು ಸರಳವಾಗಿವೆ. (ಧಾಜಿಗ್ಯಾ, ಪು. ೯೧೫-೧೬) ಅಂತರಾಳವು ಸಹ ಸರಳವಾಗಿದ್ದು, ಯಾವುದೇ ವಿಶೇಷತೆ ಇಲ್ಲ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ಅಲಂಕೃತ ನವರಂಗದ ಮುಚ್ಚಿಗೆಯಲ್ಲಿ ಅರಳಿದ ಕಮಲದ ಶಿಲ್ಪವಿದೆ. ನವರಂಗವನ್ನು ಪ್ರವೇಶಿಸಲು ಪೂರ್ವದ ಕಡೆ ದ್ವಾರವಿದೆ. ಇದರ ಹೊಸ್ತಿಲು (ಚಂದ್ರಶಿಲೆ) ಪ್ರಾಚೀನ ಕಾಲದ್ದಾಗಿದ್ದು, ಬಾಗಿಲನ್ನು ಮಾತ್ರ ಇತ್ತೀಚೆಗೆ ನಿರ್ಮಿಸಲಾಗಿದೆ. ನವರಂಗದಲ್ಲಿ ಎರಡು ವೀರಗಲ್ಲು, ಹಾಗೂ ಒಂದು ನಾಗರಕಲ್ಲುಗಳಿವೆ. ನವರಂಗಲ್ಲಿಯೇ ಎರಡು ಶಾಸನಗಳು ಇವೆ.

ಗುಡಿಯ ಗೋಡೆಯಲ್ಲಿರುವ ಕಲ್ಯಾಣ ಚಾಲುಕ್ಯ ಆರನೆ ವಿಕ್ರಮಾದಿತ್ಯನ ಕ್ರಿ.ಶ. ೧೦೮೨ರ ಶಾಸನವು (ಧಾಜಿಶಾಸೂ, ಸಂ ಗ. ೨೮, SII, XI, P.I, No. 133) ಜರಗರ ಡೋಣಿ ಸಾಸಿರ್ವರು ದಾಸೇಶ್ವರ ದೇವರಿಗೆ ದಾನ ನೀಡಿದ್ದನ್ನು ತಿಳಿಸುತ್ತದೆ. ಕೆರೆ ಏರಿಯಲ್ಲಿನ ಶಾಸನವು (ಧಾಜಿಶಾಸೂ ಸಂಗ ೨೯, SII, XI, P.I, No. 134) ಬೆಲ್ಕೆಯರ ಎರೆಯಮಯ್ಯನು ಎರೆಯ ವಿಷ್ಣುಕೇಶವ ದೇವರಿಗೆ ಭೂದಾನ ಮಾಡಿದ ವಿಷಯ ದಾಖಲಿಸಿದೆ. ಗುಡಿಯ ಕಂಬದಲ್ಲಿರುವ ಕಲ್ಯಾಣ ಚಾಲುಕ್ಯ ಅರಸ ಆರನೆ ವಿಕ್ರಮಾದಿತ್ಯನ ಕ್ರಿ.ಶ. ೧೧೨೬ರ ಶಾಸನವು (ಧಾಜಿಶಾಸು, ಸಂಗ ೩೦, SII, XI, P.I, No. 200) ಕೇಶಿರಾಜನು ದಾನೇಶ್ವರ ದೇವಾಲಯಕ್ಕೆ ಡೋಣಿ ಸಾಸರ್ವರಿಗೆ ಸುಂಕವನ್ನು ದಾನ ನೀಡಿದ ವಿಷಯವನ್ನು ಉಲ್ಲೇಖಿಸಿದೆ. ನರಸಿಂಹದೇವರ ಗುಡಿ ಎದುರು ಇರುವ ಶಾಸನವು ಕಲ್ಯಾಣ ಚಾಲುಕ್ಯ ಅರಸ ಮೂರನೇ ಸೋಮೇಶ್ವರನ (ಕ್ರಿ.ಶ. ೧೧೩೮) ಕಾಲಕ್ಕೆ ಸೇರಿದೆ (ಧಾಜಿಶಾಸೂ ಸಂಗ ೩೧, SII, XI, Pt.I, No. 17). ಇದು ಬೋಸಯ್ಯನಾಕನು ನಂದಾದೀವಿಗೆ ದಾನ ಮಾಡಿದ ವಿಷಯವನ್ನು ಉಲ್ಲೇಖಿಸಿದೆ.

೧೪

ಊರು ಕೋಟ ಉಮಚಗಿ
ಸ್ಮಾರಕ ಬಸ್ತಿಗುಡಿ (ಜೈನ ದೇವಾಲಯ)
ಸ್ಥಳ ಊರಿನ ಪೂರ್ವಕ್ಕೆ
ಕಾಲ ಕ್ರಿ.ಶ. ೧೦-೧೧ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಬಸದಿಯಲ್ಲಿ ಗರ್ಭಗೃಹ ಮಾತ್ರ ಉಳಿದಿದ್ದು, ಉಳಿದ ಮೂಲ ಭಾಗಗಳು ನಾಶವಾಗಿವೆ. ಚೌಕಾಕಾರವಾಗಿರುವ ಗರ್ಭಗೃಹದಲ್ಲಿ ಚಾಲುಕ್ಯ ಶೈಲಿಯ ಪಾರ್ಶ್ವನಾಥನ ಸುಂದರವಾದ ಮೂತಿಶಿಲ್ಪ ಇದೆ. (ಧಾಜಿಗ್ಯಾ, ಪು. ೯೧೯) ಗರ್ಭಗೃಹದ ದ್ವಾರವು ಸರಳವಾಗಿದ್ದು, ಲಲಾಟದಲ್ಲಿ ತೀರ್ಥಂಕರನು ಪದ್ಮಾಸನದಲ್ಲಿ ಕುಳಿತು ಧ್ಯಾನಮಗ್ನನಾಗಿರುವ ಉಬ್ಬುಶಿಲ್ಪವಿದೆ. ಇದರ ಮೇಲೆ ತೆನೆಯ ಅಲಂಕಾರವನ್ನು ಮೂಡಿಸಿರುವುದು ವಿಶೇಷವಾಗಿದೆ. ೧೦೦-೧೫೦ ವರ್ಷಗಳ ಹಿಂದೆ ಸಾಧಾರಣ ಕಲ್ಲಿನಿಂದ ದುರಸ್ಥಿಗೊಳಿಸಿರುವ ಈ ದೇವಾಲಯದ ಅಧಿಷ್ಠಾನವು ಕಂಪ ಮತ್ತು ಪದ್ಮಗಳನ್ನೊಳಗೊಂಡಿದೆ. ಇದರ ಭಿತ್ತಿಯು ಸಹ ಸರಳವಾಗಿದ್ದು ಯಾವುದೇ ವಿಶೇಷತೆ ಇಲ್ಲ. ದೇವಾಲಯದ ಸುತ್ತ ಹೊಸದಾಗಿ ಪ್ರಕಾರ ಗೋಡೆಯನ್ನು ಇತ್ತೀಚಿಗೆ ನಿರ್ಮಿಸಲಾಗಿದೆ.

ಇದೇ ದೇವಾಲಯದಲ್ಲಿ ಕ್ರಿ.ಶ. ೧೬ನೇ ಶತಮಾನದ ಶಾಸನವು (ಧಾಜಿಶಾಸೂ ಸಂ.ಗ. ೩೭; ಪುಟ ೯, SII XV, No. 696) ಉಮಚಗಿ ಗ್ರಾಮಕ್ಕೆ ಸದಾಶಿವರಾಯ ಸಮುದ್ರ ಎಂಬ ಹೆಸರಿತ್ತೆಂದು ದಾಖಲಿಸಿದೆ.

೧೫

ಊರು ಕೋಟ ಉಮಚಗಿ
ಸ್ಮಾರಕ ಸೋಮೇಶ್ವರ
ಸ್ಥಳ ಊರಿನ ಉತ್ತರದ ಕೆರೆ ಪಕ್ಕ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ ರಾ.ಪು.ಇ.

ದೇವಾಲಯಕ್ಕೆ ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖಮಂಟಪಗಳಿವೆ. ಗರ್ಭಗೃಹ ಚೌಕಾಕಾರವಾಗಿದ್ದು, ಅದರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಅದರ ಮುಚ್ಚಿಗೆಯು ವೃತ್ತಾಕಾರವಾಗಿದ್ದು, ಅದರ ಮಧ್ಯದಲ್ಲಿ ಕಮಲದ ಮೊಗ್ಗು ಇಳಿಬಿದ್ದ ರೀತಿಯಲ್ಲಿದೆ. ಇದರ ದ್ವಾರವು ಪುಷ್ಪ, ಸ್ತಂಭ, ಮೊದಲಾದ ನಾಲ್ಕು ಶಾಖೆಗಳಿಂದ ಕೂಡಿದ್ದು ಆ ಭಾಗಕ್ಕೆ ಇತ್ತೀಚಿಗೆ ಬಣ್ಣ ಬಳಿಯಲಾಗಿದೆ. ಅಂತರಾಳವು ಚೌಕಾಕಾರವಾಗಿದ್ದು, ಇದರ ದ್ವಾರವು ಗರ್ಭಗೃಹದಂತೆ ವಿವಿಧ ಶಾಖೆಗಳಿಂದ ಕೂಡಿದೆ. ಅದರ ಮುಚ್ಚಿಗೆಯು ಚೌಕಾಕಾರವಾಗಿದ್ದು ಅದರ ಮಧ್ಯಭಾಗದಿಂದ ಕಮಲದ ಮೊಗ್ಗು ಇಳಿಬಿದ್ದಿದೆ. ಈ ಎಲ್ಲಾ ಭಾಗಗಳಿಗೂ ಇತ್ತೀಚೆಗೆ ಬಣ್ಣ ಹಚ್ಚಲಾಗಿದೆ. ನವರಂಗವನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಯಾವುದೇ ಪ್ರಾಚೀನ ಕುರುಹುಗಳು ಇಂದು ಉಳಿದಿಲ್ಲ. ಇಲ್ಲಿ ಸಿಮೆಂಟ್‌ನಿಂದ ಕಂಬಗಳನ್ನು ಮಾಡಲಾಗಿದೆ. ಮುಖಮಂಟಪವನ್ನು ತೀರಾ ಇತ್ತೀಚೆಗೆ ನಿರ್ಮಿಸಲಾಗಿದೆ.

ಅಧಿಷ್ಠಾನವು ಕಂಪ, ಗಳ ಮತ್ತು ಪದ್ಮಗಳನ್ನು ಒಳಗೊಂಡಿದೆ. ಭಿತ್ತಿಯಲ್ಲಿ ಅರೆಗಂಬಗಳು ಹಾಗೂ ದೇವಕೋಷ್ಠಗಳಿಂದ ಅಲಂಕರಿಸಲಾಗಿದೆ. ನವರಂಗದ ಹೊರಭಾಗದ ಭಿತ್ತಿಯಲ್ಲಿ ಸಿಮೆಂಟಿನಿಂದ ಇತ್ತೀಚಿಗೆ ಸ್ತಂಭಗಳ ಅಲಂಕರಣೆಯನ್ನು ಮಾಡಲಾಗಿದೆ. ನವರಂಗದ ಹಿಂಭಾಗದ ಮೇಲ್ಛಾವಣಿಯ ಈಶಾನ್ಯ ಮತ್ತು ವಾಯುವ್ಯ ಭಾಗದಲ್ಲಿ ಮುಂಚಾಚಿದೆ. ಗರ್ಭಗೃಹದ ಮೇಲೆ ತ್ರಿತಳವಿರುವ ಶಿಖರವಿದೆ. ಪ್ರತಿ ತಳದ ಮಧ್ಯದಲ್ಲಿ ಸಿಂಹಲಲಾಟ, ಮಕರತೋರಣ ಮತ್ತು ಶೈವ ಶಿಲ್ಪಗಳಿವೆ. ಶಿಖರದಲ್ಲಿ ಅಲಂಕೃತ ಸುಖನಾಸಿ ಇದೆ. ದೇವಾಲಯದ ಸುತ್ತ ಇತ್ತೀಚೆಗೆ ನಿರ್ಮಿಸಿದ ಪ್ರಕಾರ ಗೋಡೆ ಇದೆ. ಈ ಪ್ರಕಾರ ಗೋಡೆಯೊಳಗೆ ಶಾಸನ, ಸೂರ್ಯನಪೀಠ ಮತ್ತು ದೇವರ ಮೂರ್ತಿಶಿಲ್ಪಗಳಿವೆ. ಇಲ್ಲಿನ ಕಲ್ಮೇಶ್ವರ ಗುಡಿಯ ಎದುರಿನಲ್ಲಿ ಕಲ್ಯಾಣ ಚಾಲುಕ್ಯರ ಅರಸ ಆರನೇ ವಿಕ್ರಮಾದಿತ್ಯನ ಕಾಲದ ಶಾಸನವು (ಕ್ರಿ.ಶ. ೧೧೧೨) ದಂಡನಾಯಕ ಕೇಶವಯ್ಯನಿಂದ ಶ್ರೀಧರಭಟ್ಟನಿಗೆ ‘ವುಮ್ಮಚಿಗಿ’ ಗ್ರಾಮವನ್ನು ದಾನ ನೀಡಿದ ವಿವರವಿದೆ. (ಧಾಜಿಶಾಸೂ, ಸಂ.ಗ. ೩೨ ಪು. ೯). ಇದೇ ಕಾಲಕ್ಕೆ ಸೇರಿದ ಕ್ರಿ.ಶ. ೧೦೯೯ ಶಾಸನವೊಂದು ಸೋಮೇಶ್ವರ ದೇವಾಲಯದ ಬಳಿ ಇದ್ದು, ಅದು ದಂಡನಾಯಕನಾದ ಅನಂತಪಾಲರಸನು ಬೇಳ್ವೊಲ-೩೦೦, ಪುರಿಗೆರೆ-೩೦೦ಗಳನ್ನು ಆಳುತ್ತಿರುವಾಗ ಆ ದೇವಾಲಯಕ್ಕೆ ದತ್ತಿಬಿಟ್ಟ ಉಲ್ಲೇಖವಿದೆ. (ಧಾಜಿಶಾಸೂ, ಸಂ. ೩೩; ಪು. ೯, SII, XI-I No. 146). ಇದಲ್ಲದೆ ಕಲ್ಲಯಾಣ ಚಾಲುಕ್ಯರ ಮೂರನೇ ಸೋಮೇಶ್ವರನ ಕಾಲದ (ಕ್ರಿ.ಶ. ೧೧೧೨) ಶಾಸನವೊಂದು ಇಲ್ಲಿನ ಸೋಮೇಶ್ವರ ದೇವಾಲಯದ ಎದುರಿನ ಕಂಭದಲ್ಲಿದ್ದು, ಅದು ವಾಮಣಯ್ಯ ನಾಯಕನನ್ನು ಸ್ತುತಿಸುತ್ತದೆ. (ಧಾಜಿಶಾಸೂ, ಸಂ. ಗ ೩೪; ಪು. ೯, SII, XI-II No. 161). ಅಲ್ಲದೇ ಇದೇ ದೇವಾಲಯದ ಬಳಿ ದೊರೆತಿರುವ ಮೂರನೇ ಜಗದೇಕಮಲ್ಲನ ಶಾಸನವು ‘ಉಮ್ಮಚಗಿ’ ಅಗ್ರಹಾರವಾಗಿತ್ತೆಂದು ತಿಳಿಸುತ್ತದೆ. (ಧಾಜಿಶಾಸೂ, ಸಂ. ಗ ೩೫ ಪು. ೯).

೧೬

ಊರು ಗದಗ
ಸ್ಮಾರಕ ತ್ರಿಕೂಟೇಶ್ವರ
ಸ್ಥಳ ಊರಿನ ಮಧ್ಯ
ಕಾಲ ಕ್ರಿ.ಶ. ೧೦-೧೧ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ ಹಾಗೂ ನವರಂಗ ಸೂರ್ಯನಾರಾಯಣ ಇರುವ ಮತ್ತೊಂದು ಗರ್ಭಗೃಹ ಹೊಂದಿದೆ. ಮೂಲ ಗರ್ಭಗೃಹವು ಆಯತಾಕಾರವಾಗಿದ್ದು, ಅದರಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಲಿಂಗಗಳಿವೆ. ಇವುಗಳನ್ನು ಸ್ಥಳೀಯರು ಉದ್ಭವ ಲಿಂಗಗಳೆಂದು ಕರೆಯುತ್ತಾರೆ. ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾಪಥವಿದೆ. ಗರ್ಭಗೃಹದ ಉತ್ತರ, ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗೆ ಗೋಡೆಗಳಲ್ಲಿ ಕೋಷ್ಠಗಳಿವೆ. ಇವುಗಳ ದ್ವಾರವನ್ನು ಕೋಡಿ ಬಸಪ್ಪನ ದೇವಾಲಯದ ರೀತಿಯಲ್ಲಿ (ಸ್ತಂಭಶಾಖೆ ರೀತಿಯಲ್ಲಿ) ಅಲಂಕರಿಸಲಾಗಿದೆ. ಗರ್ಭಗೃಹದ ಮುಚ್ಚಣೆಗೆಯು ಸರಳವಾಗಿದೆ. ಆದರೆ ಅದರ ದ್ವಾರವು ವಜ್ರ, ಲತಾಬಳ್ಳಿ, ಸ್ತಂಭ ಶಾಖೆಗಳಿಂದ ಅಲಂಕರಿಸಲಾಗಿದೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ತೆರೆದ ಅಂತರಾಳದಲ್ಲಿ ಕಂಬಗಳಿದ್ದು, ಇದರ ಗೋಡೆಗಳಲ್ಲಿ ಎತ್ತರದ ಕೋಷ್ಠಕಗಳಿವೆ. ಅವುಗಳ ದ್ವಾರವನ್ನು ಸ್ತಂಭಶಾಖೆಯಿಂದ ಎದ್ದು ಕಾಣುವಂತೆ ಅಲಂಕರಿಸಲಾಗಿದೆ. (ಅವುಗಳಲ್ಲಿ ಗಣೇಶ ಮತ್ತು ಉಮಾಮಹೇಶ್ವರನ ಮೂರ್ತಿ ಶಿಲ್ಪಗಳಿವೆ). ಅಂತರಾಳದ ಮುಚ್ಚಣಿಗೆಯಲ್ಲಿ ಅರಳಿದ ತಾವರೆಯ ಅಲಂಕಾರವಿದೆ. ಇದರ ದ್ವಾರವು ವಜ್ರ, ಲತಾ, ಸ್ತಂಭ ಮತ್ತು ಲತಾ ಶಾಖೆಗಳಿಂದ ಕೂಡಿದೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ಇದರ ಮೇಲಿನ ಭಾಗದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ, ಗಣೇಶ ಮತ್ತು ವಿಷ್ಣುವಿನ ಉಬ್ಬುಶಿಲ್ಪಗಳಿವೆ.

ನವರಂಗದಲ್ಲಿ ಅಷ್ಟ ಮತ್ತು ಹದಿನಾರು ಮುಖದ ನಾಲ್ಕು ವೃತ್ತಾಕಾರದ ಕಂಬಗಳಿದ್ದು ಅವು ಗಂಟೆಯ ಅಲಂಕಾರದಿಂದ ಕೂಡಿದೆ. ನವರಂಗದ ಮಧ್ಯದ ಭುವನೇಶ್ವರಿಯಲ್ಲಿ ಅರಳಿದ ತಾವರೆಯ ಅಲಂಕಾರವಿದೆ. ನವರಂಗದಲ್ಲಿ ಸರ್ವಾಲಂಕೃತ ನಂದಿ ಹಾಗೂ ಅದರ ಮುಂಭಾಗಕ್ಕೆ ಲಿಂಗವಿದೆ. ಉಮಾಮಹೇಶ್ವರಿ ಮತ್ತು ಗಣೇಶನ ಮೂರ್ತಿ ಶಿಲ್ಪಗಳಿವೆ. ದೇವಾಲಯದ ಈ ಭಾಗವನ್ನು ಪ್ರವೇಶಿಸಲು ಉತ್ತರ ಮತ್ತು ದಕ್ಷಿಣದಲ್ಲಿ ಪ್ರವೇಶ ದ್ವಾರಗಳಿವೆ. ದ್ವಾರವು ಪುಸ್ಪ, ಲತಾ, ಸ್ತಂಭ ಮೊದಲಾದ ಶಾಖೆಗಳಿಂದ ಅಲಂಕೃತವಾಗಿದ್ದು ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ದ್ವಾರದ ಎಡ ಮತ್ತು ಬಲಭಾಗಗಳಲ್ಲಿ ಜಾಲಾಂಧ್ರಗಳಿವೆ. ನವರಂಗದ ಮುಂಭಾಗಕ್ಕೆ (ಪೂರ್ವ ಭಾಗದಲ್ಲಿ) ಸೂರ್ಯನಾರಾಯಣಮೂರ್ತಿ ಇರುವ ಮತ್ತೊಂದು ಗರ್ಭಗೃಹ ಇದೆ. (ನವರಂಗದ ದ್ವಾರಗಳನ್ನು ಪ್ರವೇಶಿಸಲು ಹಸ್ತಿಹಸ್ತಾ ಫಲಕಗಳಿವೆ. ಅಲ್ಲದೆ ಪ್ರವೇಶದ್ವಾರದ ಇಕ್ಕೆಲಗಳಲ್ಲಿ ಕಕ್ಷಾಸನ ಕಟ್ಟೆಗಳಿವೆ).

ದೇವಾಲಯದ ಅಧಿಷ್ಠಾನವು ಉಪಾನ, ಪದ್ಮ, ಕಪೋತ, ಕುಮುದಗಳ ಅಲಂಕಾರಗಳಿಂದ ಕೂಡಿದೆ. ಭಿತ್ತಿಯಲ್ಲಿ ಅರೆಗಂಭಗಳು, ಪೂರ್ಣಕುಂಭಗಳ ಶಾಲಾ-ಕೂಟ-ಪಂಜರಗಳ ಮತ್ತು ಶಿಖರದ ಮಾದರಿಗಳನ್ನು ಕೆತ್ತಲಾಗಿದೆ. ದೇವಾಲಯದ ಮೇಲಿದ್ದ ಮೂಲ ಶಿಖರ ಈಗ ನಶಿಸಿದೆ.

ಈ ದೇವಾಲಯವನ್ನು ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಲಾಗಿದ್ದು, ನಂತರದ ಅರಸಮನೆತನದವರ ಕಾಲದಲ್ಲಿ ವಿಸ್ತರಿಸಲಾಗಿದೆಯೆಂದು ಆ. ಸುಂದರ ಅವರು ಅಭಿಪ್ರಾಯಪಡುತ್ತಾರೆ. (ಧಾಜಿಗ್ಯಾ, ಪು. ೯೨೫-೯೨೬).

ಇದೇ ನಗರದ ಮಧ್ಯಭಾಗದಲ್ಲಿ ಶಾಕ್ತದೇವಾಲಯವಿದ್ದು, ಅದನ್ನು ಹೊಸ ಸರಸ್ವತಿಗುಡಿ ಎಂದು ಕರೆಯಲಾಗುತ್ತದೆ. ಇದರಲ್ಲಿ ಆಯತಾಕಾರದ ಗರ್ಭಗೃಹ ಹಾಗೂ ಮುಖಮಂಟಪಗಳಿವೆ. ಗರ್ಭಗೃಹದಲ್ಲಿ ಸರಸ್ವತಿಯ ಶಿಲಾಮೂರ್ತಿ ಇದ್ದು ಸುಂದರವಾಗಿದೆ. ಇದರ ಮುಚ್ಚಿಗೆಯಲ್ಲಿ ಅರಳಿದ ತಾವರೆ ಇದೆ. ಇದರ ದ್ವಾರದಲ್ಲಿ ವಿವಿಧ ಶಾಖೆಗಳಿದ್ದು, ಅವುಗಳು ಸರಳವಾಗಿವೆ. ಗರ್ಭಗೃಹದ ಮುಂದಿನ ಮುಖಮಂಟಪದಲ್ಲಿ ನಾಲ್ಕು ಕಲ್ಯಾಣ ಚಾಲುಕ್ಯ ಶೈಲಿಯ ಕಂಬಗಳಿವೆ.

ತ್ರಿಕೂಟೇಶ್ವರ ದೇವಾಲಯದ ಪ್ರಕಾರದಲ್ಲಿರುವ ಕಲ್ಯಾಣ ಚಾಲುಕ್ಯ ಅರಸ ಇರಿವಬೆಡಂಗನ ಕ್ರಿ.ಶ. ೧೦೦೨ರ ಶಾಸನದಲ್ಲಿ (ಧಾಜಿಶಾಸೂ, ಸಂ.ಗ. ೩೯; ಪು. ೯, SII, XI-II, P.I. No. 48) ಶೋಭರಸನಿಂದ ಕಾಳಜ್ಞಾನಿ ವಖ್ಬಾಣಿಜೀರಿಗೆ ದಾನ ನೀಡಿದ ವಿಷಯವಿದೆ. ಇದೇ ಆರಸುಮನೆತನದ ನಾಲ್ಕನೇ ವಿಕ್ರಮಾದಿತ್ಯನ ಕಾಲದ ಶಾಸನವು ಮಾಧವರಾಜನನ್ನು ಸ್ತುತಿಸುತ್ತದೆ. (ಧಾಜಿಶಾಸು, ಸಂ.ಗ. ೪೧; ಪು. ೯, SII, XI-II, NO. 76) ಪ್ರಕಾರದಲ್ಲಿರುವ ಆರನೇ ವಿಕ್ರಮಾದಿತ್ಯನ ಕ್ರಿ.ಶ. ೧೧೦೨ರ ಶಾಸನವು (ದಜಿಶಾಸೂ, ಸಂ.ಗ. ೪೭; ಪು. ೯, SII, XI-II, No. 150) ದಂಡನಾಯಕ ಮಾಧವನಿಂದ ತ್ರಿಕೂಟೇಶ್ವರ ಮತ್ತು ಕೇಶವದೇವರಿಗೆ ದಾನ ನೀಡಿದುದನ್ನು ದಾಖಲಿಸಿದೆ. ಇವನ ಕಾಲದ ಇನ್ನೊಂದು ಶಾಸನವು (ಧಾಜಿಶಾಸೂ, ಸಂ. ಗ. ೪೮; ಪು. ೯, SII, XV-II, No. 201) ಮಹಾಮಂಡಲೇಶ್ವರ ಇಂದ್ರಕೇಶಿಯಿಂದ ತ್ರಿಕೂಟೇಶ್ವರನಿಗೆ ದಾನ ನೀಡಿದ ವಿವರಗಳನ್ನು ನೀಡುತ್ತದೆ. ಪ್ರಕಾರದಲ್ಲಿರುವ ಕಲಚುರಿ ಸಂಕಮನ ಕ್ರಿ.ಶ. ೧೧೮೪ರ ಶಾಸನವು (ಧಾಜಿಶಾಶು, ಸಂ.ಗ ೫೨; ಪು. ೯, SII, SV-II, No. 140) ಯೋಗಿಸಹಜಾನಂದನು ಮಾಧವೇಶ್ವರ ದೇವರಿಗೆ ದಾನ ನೀಡಿದುದನ್ನು ಉಲ್ಲೇಖಿಸಿದೆ. ಇವರ ಕಾಲದ (ಕ್ರಿ.ಶ. ೧೧೩೪-೩೫) ಇಲ್ಲಿಯ ಮತ್ತೊಂದು ಶಾಸನ (ಧಾಜಿಶಾಸೂ, ಸಂ.ಗ. ೫೩; ಪು. ೯, SII, XV-II, No. 547) ತ್ರಿಕೂಟೇಶ್ವರ ದೇವರಿಗೆ ನೀಡಿದ ದಾನ ವಿವರಗಳನ್ನು ನೀಡುತ್ತದೆ. ಪ್ರಕಾರದಲ್ಲಿನ ಯಾದವ ಭಿಲ್ಲಮನ ಕ್ರಿ.ಶ. ೧೧೯೧ರ ಶಾಸನವು (ಧಾಜಿಶಾಸೂ, ಸಂ.ಗ ೧೫೦; ಪು. ೯, EI, III, SII, XV). ಹೇರೂರಿನಲ್ಲಿ ಬೀಡುಬಿಟ್ಟಾಗ ಅರಸನು ತ್ರಿಕೂಟೇಶ್ವರ ದೇವರಿಗೆ ಬೆಳ್ವೊಲ-೩೦೦ರಲ್ಲಿಯ ಹಿರಿಯ ಹಂದಿಗೋಳ ಗ್ರಾಮದಾನ ಮಾಡಿದ ವಿವರ ತಿಳಿಸುತ್ತದೆ.

ಪ್ರಕಾರದಲ್ಲಿರುವ ಹೊಯ್ಸಳರ ಅರಸ ಎರಡನೇ ಬಲ್ಲಾಳನ ಕ್ರಿಶ. ೧೧೯೨ರ ಶಾಸನವು (ಧಾಜಿಶಾಸೂ, ಸಂ.ಗ. ೫೭; ಪು. ೧೦, SII, XV, NO. 208; EI, VI, pp. 89-97; IA, II, pp. 299-301) ವೀರಬಲ್ಲಾಳ ದೇವನಿಂದ ಸ್ವಂಭೂತ್ರಿಕೂಟೇಶ್ವರ ದೇವಾಲಯಕ್ಕೆ ಹೊಂಬಾಳಲು ಗ್ರಾವನ್ನು ದಾನ ಮಾಡಿದ ಉಲ್ಲೇಖವಿದೆ. ಇದೇ ಅರಸುಮನೆತನದ ಇದೇ ಅರಸನ ಕ್ರಿ.ಶ. ೧೧೯೯ರ ಶಾಸನವು (ಧಾಜಿಶಾಸೂ, ಸಂ.ಗ. ೫೮; ಪು. ೧೦, SII, XV, No. 214) ಮಹಾಮಂಡಲೇಶ್ವರ ರಾಯರಸರಿಂದ ತ್ರಿಕೂಟೇಶ್ವರ ದೇವರಿಗೆ ದಾನ ನೀಡಿದುದನ್ನು ತಿಳಿಸುತ್ತದೆ. ಗುಡಿಯ ಮುಂಭಾಗದಲ್ಲಿರುವ ಕ್ರಿ.ಶ. ಸುಮಾರ ೧೨ನೇ ಶತಮಾನದ ಶಾಸನವು ಚಂದ್ರಭೂಷಣಮುನಿಯನ್ನು ಸ್ತುತಿಸಿದೆ (ಧಾಜಿಶಾಸೂ, ಸಂ.ಗ. ೫೯ ಪು. ೧೦). ಪ್ರಕಾರದಲ್ಲಿರುವ ಯಾದವ ಸಿಂಘಣನ ಕಾಲದ ಕ್ರಿ.ಶ. ೧೨೧೩ರ ಶಾಸನವು (ಧಾಜಿಶಾಸೂ, ಸಂ.ಗ. ೬೦; ಪು. ೧೦, SII, XV, No. 159) ಗದುಗಿನ ಎಪ್ಪತ್ತೆರಡು ಮಹಾಜನರು ತ್ರಿಕೂಟೇಶ್ವರ ದೇವರಿಗೆ ದಾನ ನೀಡಿದರೆಂದು ಉಲ್ಲೇಖಿಸದೆ. ಉಂಟಪದ ಕಂಬದಲ್ಲಿರುವ ಶಾಸನದ ತೇದಿಯು ಕ್ರಿ.ಶ. ೧೨೨೫ (ಧಾಜಿಶಾಸೂ, ಸಂ.ಗ ೬೧; ಪು. ೧೦, SII, SV, No. 609). ಅದು ಚಂಡವೆಯಿಂದ ತ್ರಿಕೂಟೇಶ್ವರ ದೇವಾಲಯಕ್ಕೆ ಎರಡು ಸುವರ್ಣಧ್ವಜಗಳನ್ನು ದಾನ ಮಾಡಿದುದನ್ನು ದಾಖಲಿಸಿದೆ. ಪ್ರಕಾರದಲ್ಲಿರುವ ವಿಜನಯಗರದ ಅರಸ ಅಚ್ಯುತರಾಯನ ಕ್ರಿ.ಶ. ೧೫೩೯ರ ಶಾಸನವು ಅರಸರಿಂದ ಬ್ರಾಹ್ಮಣರಿಗೆ ಆನಂದನಿಧಿ ದಾನ ನೀಡಿದ್ದನ್ನು ತಿಳಿಸುತ್ತದೆ (ಧಾಜಿಸಾಸೂ, ಸಂ.ಗ. ೬೮; ಪು. ೧೦, SII, XV, No. 252).

೧೭

ಊರು ಗದಗ
ಸ್ಮಾರಕ ವೀರನಾರಾಯಣ
ಸ್ಥಳ ಊರಿನ ಮಧ್ಯೆ
ಕಾಲ ಕ್ರಿ.ಶ. ೧೦-೧೧ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ ರಾ.ಪು.ಇ.

ದೇವಾಲಯದಲ್ಲಿ ಗರ್ಭಗೃಹ, ಅರ್ಧಮಂಟಪ, ನವರಂಗ ಹಾಗೂ ರಂಗಮಂಟಪಗಳಿವೆ. ನವರಂಗದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳಿವೆ. ರಂಗಮಂಟಪದಲ್ಲಿ ವಿಜಯನಗರ ಶೈಲಿಯ ಕಂಬಗಳು ಕಂಡುಬರುತ್ತವೆ. ರಂಗಮಂಟಪದ ಹೊರ ಪ್ರಕಾರದ ಎತ್ತರವಾದ ಗೋಡೆ ಮತ್ತು ಮಹಾದ್ವಾರದ ಮೇಲ್ಭಾಗದಲ್ಲಿ ಇರುವ ವಿಜಯನಗರ ಕಾಲದ ರಾಯಗೋಪುರಗಳು ಇವೆ. ರಂಗಮಂಟಪದ ಕಂಬಗಳ ಮೇಲೆ ದಶಾವತಾರದ ಹಲವಾರು ಉಬ್ಬುಶಿಲ್ಪಗಳಿವೆ. ಗರ್ಭಗೃಹದ ಮೇಲೆ ಕದಂಬ ನಾಗರ ಶೈಲಿಯ ಶಿಖರವಿದೆ. ಇದನ್ನು ಜೀರ್ಣೋದ್ಧಾರ ಮಾಡಲಾಗಿದೆ. ಶಿಖರದ ಮುಂಭಾಗದಲ್ಲಿ ಸುಕನಾಸಿ ಇದೆ.

ಈ ದೇವಾಲಯವನ್ನು ಕ್ರಿ.ಶ. ಸುಮಾರು ೧೦ನೇ ಶತಮಾನದಲ್ಲಿ ನಿರ್ಮಿಸಿರಬಹುದೆಂದು ಅ.ಸುಂದರ ಅವರು ಅಭಿಪ್ರಾಯಪಡುತ್ತಾರೆ. (ಧಾಜಿಗ್ಯಾ, ಪು. ೯೨೭-೨೮). ದೇವಾಲಯದಲ್ಲಿನ ಕ್ರಿ.ಶ. ೧೦೩೭ರ ಶಾಸನವು ದೋಯಿಯಪ್ಪ ಗೆರ್ಗಡೆ ಎಂಬ ಅಧಿಕಾರಿ ಬಾರನಾರಾಯಯಣ ದೇವಾಲಯ ನಿರ್ಮಿಸಿದನೆಂದು ತಿಳಿಸುತ್ತದೆ. ಅದ್ದರಿಂದ ಪ್ರಸ್ತುತ ಶಾಸನೋಕ್ತ ಬಾರನಾರಯಣ ಗುಡಿಯೇ ವೀರನಾರಾಯಣ ಗುಡಿಯೆಂದು, ಅದನ್ನು ಕ್ರಿ.ಶ. ೧೦ನೇ ಶತಮಾನದ ಅಂತ್ಯದಲ್ಲಿ ನಿರ್ಮಿಸಿರುವ ಸಾಧ್ಯತೆಗಳಿವೆಯೆಂದು ಅವರ ಅಭಿಪ್ರಾಯಪಡುತ್ತಾರೆ. ನಂತರದ ಅರಸುಮನೆತನಗಳವರು ದೇವಾಲಯವನ್ನು ವಿಸ್ತರಿಸಿದರು ಎಂಬುದು ಗುಡಿಯ ವಾಸ್ತು ಶೈಲಿಯಿಂದ ಗೋಚರಿಸುತ್ತದೆ. ವಿನಯನಗರ ಅರಸರ ಕಾಲದಲ್ಲಿ ರಂಗಮಂಟಪ, ಗೋಪುರ ಮತ್ತು ಹೊರ ಪ್ರಕಾರ ಗೋಡೆಗಳು ನಿರ್ಮಾಣಗೊಂಡವು. ೧೯೬೨ರಲ್ಲಿಯೂ ಸಹ ರಾಯಗೋಪುರವನ್ನೂ ನವೀಕರಿಸಲಾಗಿದೆ. ಈ ಪೂರ್ವದಲ್ಲಿ ಗೋಪುರದಲ್ಲಿದ್ದ ಮಿಥುನ ಶಿಲ್ಪಗಳನ್ನು ಸಹ ಅದೇ ಜಾಗದಲ್ಲಿ ರಚಿಸಲಾಗಿದೆ ಎಂದು ತಿಳಿಯಬರುತ್ತದೆ.

ಸ್ಥಳೀಯರ ನಂಬಿಕೆಯಂತೆ ಈ ದೇವಾಲಯವನ್ನು ಹೊಯ್ಸಳ ವಿಷ್ಣುವರ್ಧನನು ಕಟ್ಟಿಸಿದನು, ಎ.ಎಂ. ಅಣ್ಣೆಗೇರಿಯವರು ಎರಡನೇ ಬಲ್ಲಾನು ನಿರ್ಮಿಸಿದನೆಂದು ಅಭಿಪ್ರಾಯಪಡುತ್ತಾರೆ. ಆದರೆ ವಿಜಯನಗರ ಕಾಲದಲ್ಲಿ ದೇವಾಲಯವನ್ನೆ ವಿಸ್ತರಿಸಿರುವುದು ಖಚಿತವೆಂದು ಹಾಗೂ ಗರ್ಭಗೃಹದಲ್ಲಿರುವ ಮೂಲ ವಿಗ್ರಹವು ವಿಜಯನಗರ ಶೈಲಿಯಲ್ಲಿದೆ ಎಂದು ಅ. ಸುಂದರ ಅವರು ಅಭಿಪ್ರಾಯಪಡುತ್ತಾರೆ.

ರಂಗಮಂಟಪದಲ್ಲಿರುವ ಒಂದು ಕಂಬದ ಮುಂದೆ ಕುಳಿತು ಗದುಗಿನ ನಾರಾಯಣಪ್ಪನ (ಕುಮಾರವ್ಯಾಸ) ತನ್ನ ಪ್ರಸಿದ್ಧ ‘ಕರ್ನಾಟಕ ಭಾರತ ಕಥಾ ಮಂಜರಿ’ ಅಥವಾ ‘ಗದುಗಿನ ಭಾರತ’ ಮಹಾಕಾವ್ಯವನ್ನು ರಚಿಸಿದನೆಂಬುದು ಸ್ಥಳೀಯರ ನಂಬಿಕೆಯಾಗಿದೆ. ದೇವಾಲಯದ ಆವರಣದಲ್ಲಿ ಅನೇಕ ಗುಡಿಗಳಿವೆ. ಅವುಗಳಲ್ಲಿ ರಾಘವೇಂದ್ರ ಬೃಂದಾವನ ಮತ್ತು ಆಂಜನೇಯನ ಗುಡಿ ಪ್ರಮುಖವಾಗಿವೆ.

ವೀರನಾರಾಯಣ ಗುಡಿಯ ಉತ್ತರದಿಕ್ಕಿನ ಪ್ರಕಾರ ಗೋಡೆಯಲ್ಲಿರುವ ರಾಷ್ಟ್ರಕೂಟ ಅರಸ ನಿರುಪನ ಕ್ರಿ.ಶ. ೯೧೯ರ ಶಾನವು ಬೆಳ್ವೊಲದ ಅಧಿಕಾರಿಯಾದ ಮಹಾಶ್ರೀಮಂತ ಹಾಗೂ ಮಹಾಜನರ ನಡುವೆ ಆದ ಭಟ್ಟಿಕೆರೆಯ ತೆರಿಗೆ ಒಪ್ಪಂದದ ಉಲ್ಲೇಖವಿದೆ (ಧಾಜಿಶಾಸೂಸಂಗ ೩೮ ಪು. ೯). ಗೋಪುರದ ಮೇಲ್ಛಾವಣಿಯಲ್ಲಿರುವ ಶಾಸನವು (ಧಾಜಿಶಾಸೂಸಂಗ ೪೦ ಪು. ೯) ದೇಸಿಂಗನು ಕಳ್‌ದುಗು ಅಗ್ರಹಾರವನ್ನು ಮುತ್ತಿದ ವಿಷಯವನ್ನು ತಿಳಿಸುತ್ತದೆ. ಬಾವಿಯ ಸಮೀಪದ ಶಾಸನವು (ಧಾಜಿಶಾಸೂ, ಸಂ.ಗ ೪೨; ಪು. ೯, SII, XI, pp.I. No. 72, EI, XIX pp. 217-22) ದಾಮೋದರ ಸೆಟ್ಟಿಯಿಂದ ತ್ರೈಪುರುಷದೇವರಿಗೆ ಭೂದಾನ ಮಾಡಿದ್ದನ್ನು ದಾಖಲಿಸಿದೆ. ಇದು ಕಲ್ಯಾಣ ಚಾಲುಕ್ಯ ಅರಸ ಎರಡನೆ ಜಯಸಿಂಹನ ಕ್ರಿ.ಶ. ೧೦೩೭ರ ಕಾಲಕ್ಕೆ ಸೇರಿದ ಶಿಲಾಶಾನವಾಗಿದೆ. ಗುಡಿಯ ಹತ್ತಿರದ ಬ್ರಾಹ್ಮಣರ ಮನೆ ಹಿಂಭಾಗದಲ್ಲಿರುವ ಶಾಸನದಲ್ಲಿ (ಧಾಜಿಶಾಸೂ ಸಂ. ಗ. ೪೩, ಪು. ೯) ಮಹಾಮಂಡಲೇಶ್ವರ ಚೋಳಂಗೊಂಡ ಮಾರರಸನಿಂದ ದೇವಾಲಯ ಮತ್ತು ಮಠಗಳಿಗಾಗಿ ತತ್ಪುರಷಜೀಯನಿಗೆ ಭೂದಾನ ಮಾಡಿದ ವಿಷಯವಿದೆ. ಇದರ ಕಾಲವು ಒಂದನೇ ಸೋಮೇಶ್ವರನ ಕ್ರಿ.ಶ. ೧೦೬೫ ಆಗಿದೆ. ಆದರೆ ಲಿಪಿಯು ಈಚೆನದ್ದಾಗಿರುವುದರಿಂದ, ಶಾಸನವು ಮೂಲಶಾಸನದ ಪ್ರತಿಯೆಂದು ಭಾವಿಸಲಾಗಿದೆ. ರಂಗಮಂಟಪದ ಪಕ್ಕದಲ್ಲಿರುವ (ಧಾಜಿಶಾಸೂ, ಸಂ.ಗ. ೪೪; ಪು. ೯, EI, XV, pp. 348) ಕಲ್ಲಯಾಣ ಚಾಲಕ್ಯ ಅರಸ ಆರನೆ ವಿಕ್ರಮಾದಿತ್ಯನ ಕ್ರಿ.ಶ. ೧೦೯೯ರ ತೇದಿಯ ಶಾಸನವು ದಂಡನಾಯಕ ಸೋಮೇಶ್ವರ ಭಟ್ಟೋಪಾಧ್ಯಾಯರಿಂದ ಲಕ್ಕುಂಡಿಯಲ್ಲಿ ಪ್ರಭಾಕರ ವ್ಯಾಖ್ಯಾನ ಶಾಲೆಯ ನಿರ್ಮಾಣ ಹಾಗೂ ದಾನವನ್ನು ಕುರಿತು ದಾಖಲಿಸಿದೆ. ಉಮಾಮಹೇಶ್ವರ ವಿಗ್ರಹದ ಹತ್ತಿರವಿರುವ ಶಾಸನವು (ಧಾಜಿಶಾಸು, ಸಂ.ಗ ೪೫ ಪು. ೯) ಕ್ರಿ.ಶ. ೧೧ನೇ ಶತಮಾನಕ್ಕೆ ಸೇರಿದ್ದು, ವಾವನರಸನ ಪತ್ನಿ ರೇವಕಬ್ಬರಸಿ ಉಮಾಮಹೇಸವರ ಶಿಲ್ಪ ಮಾಡಿಸಿದ್ದನ್ನು ತಿಳಿಸುತ್ತದೆ. ಪ್ರಕಾರದಲ್ಲಿರುವ ಆರನೆ ವಿಕ್ರಮಾದಿತ್ಯನ ಕ್ರಿ.ಶ. ೧೧೦೧ರ ಶಾಸನವು (ಧಾಜಿಶಾಸು, ಸಂ.ಗ ೪೬; ಪು. ೯) ಮದ್ದಿಮಯ್ಯನಾಯಕನು ಶಂಕರನಾರಾಯಣ ದೇವಾಲಯ, ಕೆರೆ ಹಾಗೂ ಸತ್ರ ನಿರ್ಮಿಸಿ, ಭೂಮಿ ಮತ್ತು ಹಣವನ್ನು ದಾನ ಮಾಡಿದನೆಂದು ತಿಳಿಸುತ್ತದೆ. ಗುಡಿಯ ಹೊರಗೆ ಇರುವ ಕ್ರಿ.ಶ. ೧೧೧೭ರ ಶಾಸನವು (ಧಾಜಿಶಾಸೂ, ಸಂ. ಗ ೪೯, ಪು. ೯) ಮಣಿಯರ ಮಹಾದೇವಯ್ಯನಾರಕನು ಸತ್ರ ಹಾಗೂ ಮಲ್ಲಿಕಾರ್ಜುನ ದೇವಾಲಯಗಳಿಗೆ ಭೂದಾನ ಮಾಡಿದನೆಂದು ತಿಳಿಸುತ್ತದೆ. ಪ್ರಕಾರದಲ್ಲಿರುವ ಮೂರನೆ ಸೋಮೇಶ್ವರನ ಕ್ರಿ.ಶ. ೧೧೩೭ರ ಶಾಸನವು (ಧಾಜಿಶಾಸೂ, ಸಂ. ಗ. ೫೦; ಪು. ೯) ಚೌಡೆಯದೇವನಿಂದ ಕಾಳಿಮಯ್ಯಗೇರಿಯ ಹೃಷಿಕೇಶದೇವರಿಗೆ ಭೂದಾನವನ್ನು ಕುರಿತು ಪ್ರಸ್ತಾಪಿಸಿದೆ. ಇಲ್ಲಿರುವ ಕಲಚುರಿ ಬಿಜ್ಜಳನ ಕ್ರಿ.ಶ. ೧೧೬೨ರ ಶಾಸನವು ಭೋಗೇಶ್ವರಿಗೆ ನೀಡಿದ ದಾನವನ್ನು ದಾಖಲಿಸಿದೆ (ಧಾಜಿಶಾಸೂ, ಸಂ. ಗ ೫೧; ಪು. ೯, SII, XV, No. 103). ಮತ್ತೊಂದು ಶಾಸನವು ನಾಲ್ಕನೇ ಸೋಮೇಶ್ವರನ ಕ್ರಿ.ಶ. ೧೧೮೫ರ ಕಾಲಕ್ಕೆ ಸೇರಿದ್ದು, ವಿಷ್ಣುವರ್ಧನ ಬೀಚಿ ಸೆಟ್ಟಿಯು ದೇವರಿಗೆ ದಾನ ಮಾಡಿದುದನ್ನು ತಿಳಿಸುತ್ತದೆ. (ಧಾಜಿಶಾಸೂ ಸಂ.ಗ. ೫೪; ಪು. ೯, SII, SV, No. 66) ಉತ್ತರ ದಿಕ್ಕಿನ ಪ್ರಕಾರದಲ್ಲಿರುವ ಇವನ ದಾಲದ ಕ್ರಿ.ಶ. ೧೧೮೬ರ ಶಾಸನವು ವಿಷ್ಣುವರ್ಧನ ಬೀಚಿ ಸೆಟ್ಟಿಯಿಂದ ಯಮೇಶ್ವರದೇವರಿಗೆ ಹಣ ದಾನ ನೀಡಿದುದನ್ನು ದಾಖಲಿಸಿದೆ (ಧಾಜಿಶಾಸೂ ಸಂ.ಗ. ೫೫; ಪು. ೯).

ಕಲ್ಯಾಣ ಮಂಟಪದ ಕಂಬದಲ್ಲಿರುವ ಶಾಸನವು ಕ್ರಿ.ಶ. ಸುಮಾರು ೧೩ನೇ ಶತಮಾನಕ್ಕೆ ಸೇರಿದ್ದು, ಸುವರ್ಣ ಮತ್ತು ಭೂಮಿ ದಾನಗಳನ್ನು ಉಲ್ಲೇಖಿಸುತ್ತದೆ. (ಧಾಜಿಶಾಸೂ, ಸಂ.ಗ ೬೨; ಪು. ೯, SII, XV, No. 620).ಇಲ್ಲಿಯೇ ಇರುವ ಇದೇ ಕಾಲದ ಶಾಸನ (ಧಾಜಿಶಾಸೂ ಸಂ. ಗ. ೬೩; ಪು. ೧೦, SII, SV, No. 621) ತ್ರೈಪುರುಷ ದೇವರಿಗೆ ಬಿಟ್ಟ ಭೂಮಿ ಹಾಗೂ ಸುವರ್ಣದಾನವನ್ನು ಉಲ್ಲೇಖಿಸಿದೆ. ಬಾವಿಯಲ್ಲಿರುವ ಎರಡು ಶಾಸನಗಳಲ್ಲಿ (ಧಾಜಿಶಾಸೂ ಸಂ. ಗ ೬೪; ಮತ್ತು ೬; ಪು. ೧೦, KI, V, No. 109 ಮತ್ತು KI, V, No. 110) ಮಂಗಲಪದ್ಯವನ್ನು ಉಲ್ಲೇಖಿಸಿದೆ. ಕಲ್ಯಾಣ ಚಾಲುಕ್ಯ ಅರಸ ನಾಲ್ಕನೇ ಸೋಮೇಶ್ವರನ ಕಾಲದ ಶಾಸನವು (ಧಾಜಿಶಾಸೂ ಸಂ. ಗ ೭೧; ಪು. ೧೦, ಪು. ೯) ಲಂಕಿಮಯ್ಯ ನಾಯಕ ಮತ್ತು ಮಹಾದೇವಭಟ್ಟರಿಂದ ಹನ್ನೆರಡು ಜನರಿಗೆ ದಾನ ನೀಡಿದರೆಂದು ದಾಖಲಿಸಿದೆ.

ಪ್ರಕಾರದ ಹೊರಗೆ ವಿಜಯನಗರ ಅರಸ ಕೃಷ್ಣದೇವರಾಯನ ಕಾಲದ ಕ್ರಿ.ಶ. ೧೫೨೦ರ ಶಾಸನವು ತಿಮ್ಮಪ್ಪನಾಯಕ ಅಯ್ಯನಿಂದ ಅರವಟ್ಟಗೆಗಳಿಗಾಗಿ ನಾಯನಪ್ಪ ನಾಯಕನಿಗೆ ಭೂದಾನ ಮಾಡಿದ ವಿಷಯವನ್ನು ಉಲ್ಲೇಖಿಸಿದೆ. (ಧಾಜಿಶಾಸೂ ಸಂ. ಗ. ೬೬, ಪು. ೧೦). ಬಾವಿಯ ಬಳಿಯಿರುವ ಶಾಸನ (ಧಾಜಿಶಾಸೂ, ಸಂ. ಗ. ೬೭, ಪು. ೧೦, SII, XV, No. 253) ವಿಜಯನಗರ ಅರಸ ಅಚ್ಯುತರಾಯನ ಕ್ರಿ.ಶ. ೧೫೩೬ರ ಶಾಸನವು ಅರಸನಿಂದ ಬ್ರಾಹ್ಮಣರಿಗೆ ಆನಂಧನಿಧಿ ದಾನ ಹಾಗೂ ಕುಮಾರವ್ಯಾಸನನ್ನು ಉಲ್ಲೇಖಿಸುತ್ತದೆ. ಪೂರ್ವದಿಕ್ಕಿನ ಪ್ರಕಾರದಲ್ಲಿರುವ ಇದೇ ಅರಸನ ಕ್ರಿ.ಶ. ೧೫೪೦ರ ಶಾಸನವು (ಧಾಜಿಶಾಸೂ, ಸಂ. ಗ ೬೯; ಪು. ೧೦) ಅರಸನಿಂದ ಬ್ರಾಹ್ಮಣರಿಗೆ ಆನಂದನಿಧಿ ದಾನವನ್ನು ನೀಡಿದ ವಿಷಯ ತಿಳಿಸುತ್ತದೆ.

ಗುಡಿಯ ಪೂರ್ವದಿಕ್ಕಿನ ಗೋಪುರದ ಮೇಲ್ಚಾವಣಿಯಲ್ಲಿರುವ ತೇದಿಯಿಲ್ಲದ ಶಾಸನವು ಬಾಯಿಕಟ್ಟೆಯಿಂದ ಭಟ್ಟವೃತ್ತಿ ಮತ್ತು ಚಟ್ಟವೃತ್ತಿಗಳಿಗೆ ಭೂಮಿ ಹಾಗೂ ಹಣದಾನ ನೀಡಿದ ವಿಷಯ ತಿಳಿಸುತ್ತದೆ (ಧಾಜಿಶಾಸೂ, ಸಂ.ಗ. ೭೨; ಪು. ೧೦). ದಕ್ಷಿಣ ಗೋಪುರದ ಕಂಬದಲ್ಲಿರುವ ತೀದಿ ಇಲ್ಲದ ಶಾಸನವು (ಧಾಜಿಶಾಸೂ ಸಂ.ಗ. ೭೩ ಪು. ೧೦) ಮಹಾದೇವ ಮಂತ್ರಿಯಿಂದ ಕಲಿದೇವಸ್ವಾಮಿ ದೇವಾಲಯವೆಂದು ಕರೆಯುವ ಜೈನಮಂದಿರದ ಮಹಾಮಂಟಪ ಜೀರ್ಣೋದ್ಧಾರವನ್ನು ಕುರಿತು ಉಲ್ಲೇಖಿಸದೆ. ಕೋನೇರಿತೀರ್ಥದ ಹನುಮಂತದೇವರ ಗುಡಿ ಹಿಂದೆ ಇರುವ ಶಾಸನವು (ಧಾಜಿಶಾಸೂ, ಸಂ. ಗ. ೭೪; ಪು. ೧೦) ಲೊಕ್ಕಿಗೊಂಡಿಯ ಸಾವಿರ ಮಹಾಜನರನ್ನು ಕುರಿತು ಉಲ್ಲೇಖಿಸಿದೆ.

೧೮

ಊರು ಗದಗ
ಸ್ಮಾರಕ ಸರಸ್ವತಿ
ಸ್ಥಳ ಊರಿನ ಮಧ್ಯಭಾಗದಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಉತ್ತರ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಚೌಕಾಕಾರದ ಗರ್ಭಗೃಹ, ತೆರೆದ ಅಂತರಾಳ ಮತ್ತು ನವರಂಗಗಳಿಂದ ಕೂಡಿದೆ. ಗರ್ಭಗೃಹದಲ್ಲಿ ಸರಸ್ವತಿಯ ಸುಂದರ ಮೂರ್ತಿ ಇದೆ. ಇದರ ಮುಚ್ಚಿಗೆಯಲ್ಲಿ ಅರಳಿದೆ ಪದ್ಮವಿದೆ. ಗರ್ಭಗೃಹದ ದ್ವಾರವು ಲತಾ, ಪದ್ಮ, ವಜ್ರ, ಸ್ತಂಭ, ಮೊದಲಾದ ಶಾಖೆಗಳಿಂದ ಅಲಂಕೃತವಾಗಿವೆ. ಲಲಟಾದಲ್ಲಿ ಗಜಲಕ್ಷ್ಮಿಯ ಶಿಲ್ಪವಿದೆ. ಸರಳ ಅಂತರಾಳವಿದೆ. ಇದರ ಮುಂದಿನ ನವರಂಗದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳಿವೆ. ವೃತ್ತ ಮತ್ತು ಗಂಟೆಯಾಕಾರದಲ್ಲಿರುವ ಈ ಕಂಬಗಳನ್ನು ಬಳೆ ಮತ್ತು ಮಾಲೆ, ನರಸಿಂಹನ ಉಬ್ಬುಶಿಲ್ಪಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ. ಕಂಬಗಳ ಬೋದಿಗೆಗಳನ್ನು ಸುಂದರವಾದ ಯಾಳಿ ಶಿಲ್ಪಗಳಿಂದ ನಿರ್ಮಿಸಲಾಗಿದೆ. ಈ ಕಂಬಗಳ ಮೇಲಿನ ಭುವನೇಶ್ವರಿಯು ಅತ್ಯಂತ ಸುಂದರ ಹಾಗೂ ನಯನ ಮನೋಹರವಾಗಿದೆ. ನವರಂಗದ ಒಳಭಾಗದಲ್ಲಿ ಕಕ್ಷಾಸನವಿದೆ. ಇದರ ಪ್ರವೇಶ ದ್ವಾರವು ರತ್ನ, ಲತಾ ಮತ್ತು ಸ್ತಂಭ ಶಾಖೆಗಳಿಂದ ಕೂಡಿದೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. (ಧಾಜಿಶಾಸೂ, ಪು. ೯೨೬-೯೨೭).

ಈ ದೇವಾಲಯದ ಅಧಿಷ್ಠಾನವು ಉಪಾನ, ಪದ್ಮ, ಕುಮದ, ಕಪೋತ, ಅಧೋ ಪದ್ಮಗಳಿಂದ ಅಲಂಕೃತವಾಗಿದೆ. ಭಿತ್ತಿಯು ಹಲವು ರೀತಿಯ ಕುಡ್ಯಸ್ತಂಭ ಪೂರ್ಣಕುಂಭ, ಕೋಷ್ಠಗಳಿಂದ ಅಲಂಕೃತವಾಗಿದೆ. ದೇವಾಲಯದ ಮೇಲಿನ ಶಿಖರ ನಾಶವಾಗಿದೆ. ಈ ದೇವಾಲಯದ ವಾಸ್ತುಶಿಲ್ಪ ಹಾಗೂ ಶಿಲ್ಪಗಳು ಉತ್ತುಮ ಮತ್ತು ಮೂಲ ಕಲಾ ಫ್ರೌಢಿಮೆಯನ್ನು ತೋರುತ್ತವೆ ಎಂದು ಹಲವಾರು ವಿದ್ವಾಂಸರುಗಳು ಅಭಿಪ್ರಾಯಪಡುತ್ತಾರೆ.

೧೯

ಊರು ಗಾವುರವಾಡ
ಸ್ಮಾರಕ ಕಲ್ಮೇಶ್ವರ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೮-೧೯ನೇ ಶತಮಾನ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚಿಗೆ ನಿರ್ಮಿಸಲಾಗಿರುವ ಈ ದೇವಾಲಯದಲ್ಲಿ ಗರ್ಭಗೃಹ ಮತ್ತು ಮುಖಮಂಟಪಗಳಿವೆ. ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಮುಖ ಮಂಟಪದಲ್ಲಿ ಆಧುನಿಕ ಶೈಲಿಯ ನಂದಿ ಶಿಲ್ಪ ಇದೆ. ಈ ದೇವಾಲಯದ ದಕ್ಷಿಣ ಭಾಗದ ಬಯಲಿನಲ್ಲಿ ಈಶ್ವರ ಎಂದು ಕರೆಯುವ ಪಾಳುಬಿದ್ದ ಗುಡಿಯ ಅವಶೇಷಗಳಿವೆ. ಇದರಲ್ಲಿ ಈಶ್ವರನ ಲಿಂಗವಿದ್ದು, ಅದರ ಪಕ್ಕದಲ್ಲಿ ಪಾರ್ಶ್ವನಾಥ, ನಾರಾಯಣ ಮತ್ತು ನಾಗರಶಿಲ್ಪಗಳಿವೆ.

ಇದೇ ಊರಿನ ವೀರನಾರಾಯಣ ಗುಡಿಯು ಸಂಪೂರ್ಣ ಹಾಳಾಗಿದ್ದು, ಅಲ್ಲಿ ಇಂದು ದೇವಾಲಯದ ಯಾವ ಅವಶೇಷಗಳು ಉಳಿದಿಲ್ಲ (ಧಾಜಿಶಾಸೂ ಪು. ೯೩೧). ಆದರೆ ಅಲ್ಲಿ ಶಾಸನವೊಂದು ಮಾತ್ರ ಉಳಿದುಕೊಂಡಿದೆ. ಅದು ಕಲ್ಯಾಣ ಚಾಲುಕ್ಯರ ಮೂರನೆ ಸೋಮೇಶ್ವರನ ಕಾಲದಾಗಿದ್ದು, ಕ್ರಿಶ. ೧೦೭೧ರಲ್ಲಿ ಮಹಾಮಂಡಲೇಶ್ವರ ಲಕ್ಷ್ಮರಸನು ಅಣ್ಣಿಗೆರೆಯ ಜಿನಾಲಯಕ್ಕೆ ಪೂರ್ವದತ್ತಿಯ ಪುನರ್ಭರಣ ಮಾಡಿದ ವಿವರ ಇದೆ.

ಇದೇ ಊರಿನ ದಕ್ಷಿಣ ಭಾಗದಲ್ಲಿ ಸಿಮೆಂಟ್‌ನಿಂದ ಇತ್ತೀಚೆಗೆ ಕಟ್ಟಿದ ಈಶ್ವರ ದೇವಾಲಯವಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯ ಚೌಕಾಕಾರವಾಗಿದ್ದು, ಗರ್ಭಗೃಹದಲ್ಲಿ ಪುರಾತನ ಲಿಂಗವಿದೆ. ಉಳಿದಂತೆ ಪ್ರಾಚೀನ ಕುರುಹುಗಳಿಲ್ಲ.

ನಾರಾಯಣ ಗುಡಿ ಎದುರು ಇರುವ ರಾಷ್ಟ್ರಕೂಟ ಅರಸ ಒಂದನೆ ಅಮೋಘವರ್ಷನ ಕ್ರಿ.ಶ. ೮೬೯ರ ಶಾಸನವು (ಧಾಜಿಶಾಸೂ, ಸಂ.ಗ. ೭೫; ಪು. ೧೦, SII, XI, p. I No. 13) ದೇವಣ್ಣಯ್ಯನು ಬೆಳ್ವೊಲ-೩೦೦, ಪುಲಿಗೆರೆ-೩೦೦ ಆಳುವಾಗ ತುಪ್ಪದ ಸುಂಕವನ್ನು ದಾನ ನೀಡಿದುದನ್ನು ಉಲ್ಲೇಖಿಸುತ್ತದೆ. ಅಲ್ಲಿಯೇ ಇರುವ ಮತ್ತೊಂದು ಶಾಸನವು ಕಲ್ಯಾಣ ಚಾಲುಕ್ಯ ಅರಸ ಎರಡನೇ ಸೋಮೇಶ್ವರನ ಕಾಲಕ್ಕೆ ಸೇರಿದೆ. ಅದರ ತೇದಿಯು ಕ್ರಿ.ಶ. ೧೦೭೧ (ಧಾಜಿಶಾಸೂ, ಸಂ.ಗ. ೭೬; ಪು. ೧೦, EI, CV, p. 337) ಅದು ಮಹಾಮಂಡಲೇಶ್ವರ ಲಕ್ಷ್ಮರಸನಿಂದ ಅಣ್ಣಿಗೆರೆಯಲ್ಲಿಯ ಜಿನಾಲಯಕ್ಕೆ ಪುನರ್ ದತ್ತಿಯ ವಿವರಗಳನ್ನು ನೀಡುತ್ತದೆ. ಊರನ್ನು ಗಾವಡಿವಾಡ ಎಂದು ಎರಡು ಶಾಸನಗಳು ಉಲ್ಲೇಖಿಸಿವೆ.

೨೦

ಊರು ಚಿಕ್ಕ ಹಂದಿಗೊಳ
ಸ್ಮಾರಕ ಸಿದ್ಧೇಶ್ವರ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಸುಮಾರು ಎರಡುನೂರು ವರ್ಷಗಳ ಹಿಂದೆ ನಿರ್ಮಿಸಿರುವ ಈ ದೇವಾಲಯ ಗರ್ಭಗೃಹ, ಅಂತರಾಳ ಮತ್ತು ಮುಖಮಂಟಪಗಳನ್ನು ಹೊಂದಿದೆ. ಈ ದೇವಾಲಯದ ಗರ್ಭಗೃಹ ಚೌಕಾಕಾರವಾಗಿದ್ದು, ಅದರಲ್ಲಿ ಲಿಂಗವಿದೆ. ಅಂತರಾಳವು ಸರಳವಾಗಿದೆ. ತೆರೆದ ಮುಖಮಂಟಪದಲ್ಲಿ ಜೋಡಿ ನಂದಿಗಳಿವೆ. ಉತ್ತರ ದಕ್ಷಿಣದ ಭಿತ್ತಿಯಲ್ಲಿ ಎರಡು ಗೂಡುಗಳಿವೆ. ಅವುಗಳಲ್ಲಿ ಕ್ರಮವಾಗಿ ಗಣೇಶ ಮತ್ತು ದೇವಿಯ ಶಿಲ್ಪಗಳಿವೆ. ದೇವಾಲಯದ ಹೊರಭಾಗವು ಸರಳವಾಗಿದೆ.

ಇದೇ ಗ್ರಾಮದಲ್ಲಿ ಮೇಲಿನ ಗುಡಿಯ ದಕ್ಷಿಣ ಭಾಗಕ್ಕೆ ಪೂರ್ವಾಭಿಮುಖವಾಗಿರುವ ಹರಿಹರೇಶ್ವರ ದೇವಾಲಯವಿದೆ. ಅದರಲ್ಲಿ ಚಾಲುಕ್ಯ ಶೈಲಿಯ ಲಿಂಗ, ಅದರ ಎದುರಿನಲ್ಲಿ ಜೋಡಿ ನಂದಿಗಳಿವೆ.

ಇಲ್ಲಿನ ಹನುಮಂತ ದೇವರ ಗುಡಿಯ ಗೋಡೆಯ ಮೇಲೆ ಕಲ್ಯಾಣ ಚಾಲುಕ್ಯರ ಅರಸ ಆರನೇ ವಿಕ್ರಮಾದಿತ್ಯನ (೧೦೯೯) ಶಾಸನವೊಂದು ದೊರೆತಿದೆ. ಅದು ಪ್ರತಿಕಂಠ ಚೆಂದನೆಂಬುವನು ಮಾಧವೇಶ್ವರ ದೇವಾಲಯವನ್ನು ನಿರ್ಮಿಸಿ ಅದಕ್ಕೆ ಭೂ ದಾನ ನೀಡಿದ್ದನ್ನು ದಾಖಲಿಸುತ್ತದೆ. (ಧಾಜಿಶಾಸೂ, ಸಂ.ಗ. ೭೭; ಪು. ೧೦, SII, XI, p. II, No. 147; KI V, No. 14). ಇದೇ ಊರಿನ ಶಾನವೊಂದು ಕಲಚುರಿಗಳ ಸೋವಿದೇವನ ಕಾಲದ್ದಾಗಿದ್ದು, ಅದು ಜಿನಾಲಯಕ್ಕೆ ಭೂದಾನ ನೀಡಿದ ವಿವರವನ್ನು ನೀಡುತ್ತದೆ. ಅದರ ತೇದಿಯು ಕ್ರಿ.ಶ. (ಧಾಜಿಶಾಸೂ, ಸಂ.ಗ. ೭೮; ಪು. ೧೦, SII, XV, No. 128; KI V, No. 38).