೪೧

ಊರು ಮಲ್ಲಸಮುದ್ರ
ಸ್ಮಾರಕ ಕಲ್ಮೇಶ
ಸ್ಥಳ ಊರಿನ ಪಶ್ಚಿಮಕ್ಕೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಮತ್ತು ಮುಖಮಂಟಪಗಳಿವೆ. ಗರ್ಭಗೃಹವು ಆಯತಾಕಾರವಾಗಿದ್ದು, ಅದರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಶಿವಲಿಂಗವಿದೆ. ಇದರ ಮುಚ್ಚಿಗೆಯಲ್ಲಿ ಅರಳಿದ ಪುಷ್ಟದ ಅಲಂಕಾರವಿದೆ. ಗರ್ಭಗೃಹದಲ್ಲಿ ಲಿಂಗದೊಂದಿಗೆ, ಭೈರವನ ಶಿಲ್ಪ ಮತ್ತು ಒಂದು ವೀರಗಲ್ಲಿದೆ. ಇದರ ದ್ವಾರವು ಏಕಶಾಖೆಯಿಂದ ಕೂಡಿದ್ದು ಲಲಾಟದ ಅಂತರಾಳವು ಮೂಚಾಚಿದ್ದು ಸರಳವಾಗಿದೆ. ಅದರ ದ್ವಾರವು ಗರ್ಭಗೃಹದ ದ್ವಾರ ಮತ್ತು ಲಲಾಟದ ರೀತಿಯನ್ನು ಹೋಲುತ್ತದೆ. ದ್ವಾರದ ಎರಡೂ ಬದಿಗಳಲ್ಲಿ ಜಾಲಾಂಧ್ರಗಳಿವೆ. ಅಂತರಾಳ ಮುಂದಿನ ಭಾಗದಲ್ಲಿ ಮೆಟ್ಟಿಲುಗಳಿದ್ದು, ಅದರ ಮುಂದಿನ ಮೂಲ ಭಾಗಗಳು ನಾಶವಾಗಿ ಹೋಗಿವೆ.

ಗುಡಿಯ ಅಧಿಷ್ಠಾನವು ಸರಳವಾಗಿದೆ. ಭಿತ್ತಿಯ ಹೊರಭಾಗವನ್ನು ೧೯೭೧ರಲ್ಲಿ ಕಲ್ಲು ಮತ್ತು ಗಾರೆ ಬಳಸಿ ದುರಸ್ಥಿಗೊಳಿಸಲಾಗಿದೆ ದೇವಾಲಯವು ಮಾಳಿಗೆ ರೀತಿಯಲ್ಲಿದ್ದು, ಬಿದುರು ಮತ್ತು ಮಣ್ಣನ್ನು ಉಪಯೋಗಿಸಿ ಮೇಲ್ಛಾವಣಿಯನ್ನು ಕಟ್ಟಲಾಗಿದೆ. ದೇವಾಲಯದ ಹೊರಭಾಗದಲ್ಲಿ ಕಲ್ಯಾಣ ಚಾಲುಕ್ಯ ಕಾಲದ ಶಾಸನ, ವೀರಗಲ್ಲು, ನಾಗರಕಲ್ಲು ಹಾಗೂ ಭಗ್ನಗೊಂಡ ಚಾಮುಂಡಿ ಶಿಲ್ಪಗಳಿವೆ.

ಇದೇ ಗ್ರಾಮದ ಮಧ್ಯಭಾಗದಲ್ಲಿ ಬಸದಿಯ ಗುಡಿ (ಜೈನದೇವಾಲಯ) ಇದ್ದು ಅದು ಪೂರ್ವಾಭಿಮುಖವಾಗಿದೆ. ಹಳೆಯ ಕಟ್ಟಡದ ಜಾಗದಲ್ಲಿಯೇ ನವೀನ ಕಟ್ಟಡವನ್ನು ಕಟ್ಟಲಾಗಿದೆ. ಇದರಲ್ಲಿ ಪ್ರಾಚೀನ ಕಾಲದ ಪಾರ್ಶ್ವನಾಥನ ಮತ್ತು ಆಸೀನನಾಗಿರುವ ಪಾರ್ಶ್ವನಾಥನ ಮುಕ್ಕೊಡೆ ಸಿಂಹಲಾಂಛನ, ಚಮರಧಾರಣಿಯರ (ಎರಡು) ಮೂರ್ತಿಗಳು ಇವೆ. ಇದೇ ಗ್ರಾಮದಲ್ಲಿ ಹೊಸದಾಗಿ ಕಲಟ್ಟಿದ ಹನುಮಂತ ದೇವಾಲಯವಿದೆ. ದಕ್ಷಿಣಾಭಿಮುಖವಾಗಿರುವ ಈ ದೇವಾಲಯದಲ್ಲಿ ಕ್ರಿ.ಶ. ೧೭-೧೮ನೇ ಶತಮಾನಕ್ಕೆ ಸೇರಿದ ಹನುಮಂತನ ವಿಗ್ರಹವಿದೆ. ಇಲ್ಲಿಯೇ ಜೈನ ಶಾಸನವಿದೆ. ಧ್ಯಾನ ಮುದ್ರೆಯಲ್ಲಿ ಕುಳಿತ ತೀರ್ಥಂಕರ, ಹಸು-ಕರುವಿನ ಶಿಲ್ಪಗಳು ಮತ್ತು ಸವೆದು ಹೋದ ಶಾಸನಗಳಿವೆ.

ಇದೇ ಊರಿನ ಪೂರ್ವಭಾಗದಲ್ಲಿ ಇತ್ತೀಚೆಗೆ ನಿರ್ಮಿಸಿದ ಬಸವಣ್ಣ ದೇವಾಲಯವಿದ್ದು, ಅಲ್ಲಿ ತ್ರುಟಿತ ಶಾಸನ, ನಾಗರಕಲ್ಲು, ವೀರಗಲ್ಲು ಮತ್ತು ಪ್ರಾಚೀನ ದೇವಾಲಯದ ಕಲ್ಲುಗಳಿವೆ. ಇಲ್ಲಿನ ಈಶ್ವರ ಗುಡಿ ಎದುರಿನಲ್ಲಿ ಕಲ್ಯಾಣ ಚಾಲುಕ್ಯರ ಅರಸ ಮೂರನೇ ತೈಲಪನ ಶಾಸನವು (ಕ್ರಿ.ಶ. ೧೧೫೭) ಇಲ್ಲಿ ಮೂಲಸ್ತಂಭ ಸ್ಥಾಪನೆಯಾದ ಬಗೆಗೆ ವಿವರ ನೀಡುತ್ತದೆ (ಧಾ.ಜಿ.ಶಾ.ಸೂ.ಸಂ.ಗ. ೧೧೦; ಪು. ೧೧, SII, XV, No. 54).

೪೨

ಊರು ಮುಳುಗುಂದ
ಸ್ಮಾರಕ ನಗರೇಶ್ವರ
ಸ್ಥಳ ಊರಿನ ಉತ್ತರಕ್ಕೆ, ಕೆರೆ ದಂಡೆಯಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯಕ್ಕೆ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ಗರ್ಭಗೃಹವು ಚೌಕಾಕಾರವಾಗಿದ್ದು, ಅದರಲ್ಲಿ ಬೃಹದಾಕಾರದ ನಗರೇಶ್ವರನ ಲಿಂಗವಿದೆ. ಇದರ ಮುಚ್ಚಿಗೆಯಲ್ಲಿ ಅರಳಿದ ತಾವರೆ ಇದೆ. ಪಂಚಶಾಖೆಗಳಿಂದ ಕೂಡಿದ ಗರ್ಭಗೃಹದ ದ್ವಾರದಲ್ಲಿ ಸ್ತಂಭಶಾಖೆ ಮಾತ್ರ ಹೆಚ್ಚು ಅಲಂಕೃತವಾಗಿದ್ದು, ಉಳಿದ ಶಾಖೆಗಳು ಸರಳವಾಗಿವೆ.

ಚೌಕಾಕಾರದ ಅಂತರಾಳದಲ್ಲಿ ನಂದಿ ಇದೆ. ಇದರ ಛತ್ತಿನಲ್ಲಿ ಅರಳಿದ ವೃತ್ತಾಕಾರದ ಪದ್ಮವಿದೆ. ಅಂತಾಳದ ದ್ವಾರವು ವಜ್ರ, ಪುಷ್ಪ, ಲತಾ, ಸ್ತಂಭ, ಪುಷ್ಪ ಶಾಖೆಗಳಿಂದ ಅಲಂಕೃತವಾಗಿದೆ. ದ್ವಾರದ ಎರಡೂ ಬಗಿಗಳಲ್ಲಿ ಪುಷ್ಪ ಜಾಲಂಧ್ರಗಳಿವೆ.

ಅಂತರಾಳದ ಮುಂದಿರುವ ನವರಂಗದ ಉತ್ತರ ಮತ್ತು ಪೂರ್ವದ ಒಳ ಭಿತ್ತಿಯ ಶಿಖರದ ಮಾದರಿಯ ಎರಡು ದೇವಕೋಷ್ಠಗಳಿವೆ. ನವರಂಗವನ್ನು ಪ್ರವೇಶಿಸಲು ಪೂರ್ವ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಪ್ರವೇಶ ದ್ವಾರಗಳಿವೆ. ಇವುಗಳು ಪಂಚಶಾಖೆಗಳಿಂದ ಅಲಂಕೃತವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪಗಳಿವೆ. ದಕ್ಷಿಣ ಭಾಗದ ಗೋಡೆಯಲ್ಲಿ ಒಂದು ಶಾಸನವಿದೆ. ಪೂರ್ವ ಪ್ರವೇಶದ್ವಾರದ ಲಲಾಟದ ಮೇಲಿನ ಭಾಗದಲ್ಲಿ ಶಾರ್ದೂಲಗಳು ಹಾಗೂ ಹೋರಾಟ ನಿರತ ಸಿಂಹಗಳನ್ನು ಕೆತ್ತಲಾಗಿದೆ.

ದೇವಾಲಯದ ಅಧಿಷ್ಠಾನದಲ್ಲಿ ಉಪಾನ ಭಾಗ ಮಾತ್ರ ಗೋಚರಿಸುತ್ತದೆ. ಅಧಿಷ್ಠಾನದ ಮೇಲಿನ ಭಿತ್ತಿಯಲ್ಲಿ ಕದಂಬ ನಾಗರ ಶೈಲಿಯ ಶಿಖರದ ಮಾದರಿಗಳನ್ನು ಕೆತ್ತಲಾಗಿದೆ. ಮೂಲ ದೇವಾಲಯದ ಗರ್ಭಗೃಹದ ಮೇಲೆ ಹಿಂದೆ ಇದ್ದಿರಬಹುದಾದ ಶಿಖರ ಈಗ ನಶಿಸಿದೆ. ಆದರೆ ಅಂತರಾಳದ ಮೇಲೆ ಸುಖನಾಸಿ ಮಾತ್ರ ಉಳಿದುಕೊಂಡಿದೆ.

ಇದೇ ಊರಿನ ಮಧ್ಯಭಾಗದಲ್ಲಿ ದಕ್ಷಿಣಾಭಿಮುಖವಾಗಿರುವ ಹನುಮಂತ ದೇವಾಲಯವಿದೆ. ಗರ್ಭಗೃಹ ಮತ್ತು ಮುಖಮಂಟಪಗಳನ್ನು ಈ ದೇವಾಲಯ ಒಳಗೊಂಡಿದೆ. ಗರ್ಭಗೃಹವು ಚೌಕಾಕಾರವಾಗಿದ್ದು, ಅದರಲ್ಲಿ ಹನುಮಂತನ ಶಿಲ್ಪವಿದೆ. ಕತ್ತಿ ತೆಗೆದು ಹೋರಾಡಲು ಬಂದ ರಾಕ್ಷಸನನ್ನು ಹನುಮ ತನ್ನ ಎರಡು ಕಾಲುಗಳ ಮಧ್ಯೆ ಹಿಡಿದುಕೊಂಡಿರುವಂತೆ ಕೆತ್ತಲಾಗಿದೆ (ಇದು ಪ್ರಾಯಶಃ ಶನಿಯ ಶಿಲ್ಪವಿರಬೇಕು). ಇದರ ದ್ವಾರವು ಸರಳವಾಗಿದೆ. ಮುಖಮಂಟಪವನ್ನು ಇತ್ತೀಚೆಗೆ ಕಟ್ಟಲಾಗಿದೆ. ಇದರಲ್ಲಿ ನಾಲ್ಕು ಕಲ್ಲಿನ ಕಂಬಗಳಿವೆ. ದೇವಾಲಯದ ಹೊರಭಾಗವನ್ನು ಸೈಜ್‌ಗಲ್ಲಿನಿಂದ ಇತ್ತೀಚೆಗೆ ನಿರ್ಮಿಸಿರುವುದರಿಂದ ಮೂಲ ವಾಸ್ತು ಭಾಗಗಳು ಈಗ ಉಳಿದಿಲ್ಲ. (ಧಾ.ಜಿ.ಗ್ಯಾ, ಪು. ೯೯೨-೯೯೩).

ನಗರೇಶ್ವರ ಗುಡಿಯ ಹಿಂಭಾಗದಲ್ಲಿರುವ ಕಲ್ಯಾಣ ಚಾಲುಕ್ಯ ಅರಸ ಒಂದನೇ ಸೋಮೇಶ್ವರನ ಕ್ರಿ.. ೧೦೬೨ರ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೧೭; ಪು. ೧೨, SII, XI, pt. I, No. 97) ಮಹಾಸಾಮಂತ ಆಯಿಚರಸ ಆಳುವಾಗ ಸೆಟ್ಟಿಗಳಿಂದ ಧ್ರುವೇಶ್ವರ ಪಂಡಿತರಿಗೆ ಭೂದಾನ ಮಾಡಿದ ವಿಷಯ ದಾಖಲಿಸಿದೆ. ಜಗದೇಕಮಲ್ಲನ ಕಾಲದ ಶಾಸನ (ಧಾ.ಜಿ.ಶಾ.ಸೂ, ಸಂ.ಗ. ೧೨೧; ಪು. ೧೨, SII, XV, No. 40) ಮುಳಗುಂದ-೧೨ ಆಳುತ್ತಿದ್ದ ಮಹಾಸಾಮಂತ ಬೊಪ್ಪದೇವರಸನಿಂದ ಭೀಮೇಶ್ವರ ದೇವರಿಗೆ ದಾನ ನೀಡಿದ ಉಲ್ಲೇಖವಿದೆ. ಅದೇ ಕಲ್ಲಿನಲ್ಲಿರುವ ಕಲಚುರಿ ಅರಸ ಸಂಕಮನ ಕ್ರಿ.ಶ. ೧೧೭೮ರ ಶಾಸನ (ಧಾ.ಜಿ.ಶಾ.ಸೂ, ಸಂ.ಗ. ೧೨೨; ಪು. ೧೨, SII, XV, No. 131) ಮಹಾಜನರಿಂದ ವಿದುರೇಶ್ವರ ದೇವಾಲಯಕ್ಕೆ ದಾನ ಮಾಡಿದ ವಿಷಯವಿದೆ.

೪೩

ಊರು ಮುಳಗುಂದ
ಸ್ಮಾರಕ ಭಂಡದೇಶ್ವರ
ಸ್ಥಳ ಊರಿನ ಉತ್ತರಕ್ಕೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ ರಾ.ಪು.ಇ.

ಗರ್ಭಗೃಹ ಮತ್ತು ಅಂತರಾಳಗಳನ್ನು ಈ ದೇವಾಲಯ ಹೊಂದಿದೆ. ಗರ್ಭಗೃಹ ಚೌಕಾಕಾರವಾಗಿದ್ದು, ಅದರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಶಿವಲಿಂಗವಿದೆ. ಅಲ್ಲದೆ ಛತ್ತಿನಲ್ಲಿ ಅರಳಿದ ಕಮಲವಿದೆ. ಇದರ ದ್ವಾರವೂ ಪಂಚಶಾಖೆಗಳಿಂದ ಕೂಡಿದ್ದು, ಅದರಲ್ಲಿ ಸ್ತಂಭಶಾಖೆ ಹೆಚ್ಚು ಅಲಂಕೃತವಾಗಿದೆ. ಗರ್ಭಗುಡಿಯ ಮುಂದಿನ ಅಂತರಾಳವು ಅರ್ಧಮಂಟಪದ ರೀತಿಯಲ್ಲಿ ಸರಳವಾಗಿದೆ. ಇದರ ಛತ್ತಿನಲ್ಲಿ ಕಮಲದ ಅಲಂಕಾರವಿದೆ. ದೇವಾಲಯದ ಮೂಲ ಶಿಖರ ಇಂದು ನಾಶವಾಗಿದೆ.

೪೪

ಊರು ಮುಳಗುಂಗ
ಸ್ಮಾರಕ ಕುಂಬಸಲಿಂಗೇಶ್ವರ
ಸ್ಥಳ ಊರಿನ ಮಧ್ಯೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ ರಾ.ಪು.ಇ.

ಈ ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ಶಿಥಿಲ ನವರಂಗಗಳನ್ನು ಹೊಂದಿದೆ. ಗರ್ಭಗೃಹವು ಚೌಕಾಕಾರವಾಗಿದ್ದು, ಮಧ್ಯದಲ್ಲಿ ಶಿವಲಿಂಗವಿದೆ. ಕಲ್ಯಾಣ ಚಾಲುಕ್ಯ ಶೈಲಿಯಲ್ಲಿರುವ ಈ ಲಿಂಗದ ಪಾಣಿಬಟ್ಟಲನ್ನು ಬದಲಿಸಿದಂತಿದೆ. ಗರ್ಭಗೃಹದ ಛತ್ತಿನಲ್ಲಿ ಅರಳಿದ ತಾವರೆ ಇದೆ. ಉತ್ತರದ ಒಳಭಾಗದಲ್ಲಿ ಭಿತ್ತಿಯಲ್ಲಿ ಕಪಾಟು ಇದೆ.

ಗರ್ಭಗೃಹದ ಬಾಗಿಲವಾಡವು ಮೂರು ಶಾಖೆಗಳಿಂದ ಅಲಂಕೃತವಾಗಿದೆ. ಚೌಕಾಕಾರಾದ ಅಂತರಾಳವು ಸರಳವಾಗಿದೆ. ಇದರ ಮುಚ್ಚಿಗೆಯಲ್ಲಿ ಅರಳಿದ ತಾವರೆಯ ಅಲಂಕಾರವಿದೆ. ಇದರ ಪ್ರವೇಶ ದ್ವಾರವು ಗರ್ಭಗೃಹದ ದ್ವಾರದಂತೆ ಅಲಂಕೃತವಾಗಿದೆ. ಅಂತರಾಳದ ಮುಂದಿನ ನವರಂಗ ಭಾಗವು ಸಂಪೂರ್ಣವಾಗಿ ಹಾಳಾಗಿದ್ದು, ಅದರ ಅಧಿಷ್ಠಾನ ಭಾಗ ಮಾತ್ರ ಕೆಲವು ಕಡೆ ಉಳಿದುಕೊಂಡಿದೆ.

ಈ ದೇವಾಲಯದ ಹೊರಭಾಗವನ್ನು ಇತ್ತೀಚಿಗೆ ಸೈಜುಗಲ್ಲು ಮತ್ತು ಸಿಮೆಂಟ್‌ ಬಳಸಿ ಕಟ್ಟಿರುವುದರಿಂದ ಮೂಲ ವಾಸ್ತುಭಾಗಗಳು ಉಳಿದಿಲ್ಲ. ದೇವಾಲಯದ ಮುಂಭಾಗದಲ್ಲಿ ಬ್ರಹ್ಮ, ನಾಗರಕಲ್ಲು ಮತ್ತಿತರ ಶಿಲ್ಪಾವಶೇಷಗಳಿವೆ.

ಮುಳಗುಂದ ಗ್ರಾಮದಲ್ಲಿರುವ ಅತ್ಯಂತ ಪ್ರಾಚೀನ ಶಾಸನವು ನಾರಾಯಣದೇವರ ಗುಡಿಯ ಧ್ವಜಸ್ತಂಭದಲ್ಲಿದೆ. ಇದರ ಕಾಲವು ಕ್ರಿ.ಶ. ೫೭೭ (ಧಾ.ಜಿ.ಶಾ.ಸೂ, ಸಂ.ಗ. ೧೧೧; ಪು. ೧೧, SII, XI, pt. I No. 516) ಇದು ಮೂಲಸ್ತಂಭದ ಸ್ಥಾಪನೆಯನ್ನು ಕುರಿತು ತಿಳಿಸುತ್ತದೆ. ಜಿನಾಲಯದ ಗೋಡೆಯಲ್ಲಿರುವ ರಾಷ್ಟ್ರಕೂಟ ಅರಸ ಎರಡನೇ ಕೃಷ್ಣ ಕ್ರಿ.ಶ. ೯೦೭-೯೦೩ರ ಶಾಸನ (ಧಾ.ಜಿ.ಶಾ.ಸೂ, ಸಂ.ಗ. ೧೧೨; ಪು. ೧೧, EI, II, XI, pp. 192-94) ಬೇಕಾರ್ಯನಿಂದ ಮುಳಗುಂದದಲ್ಲಿ ಬಸದಿಯ ನಿರ್ಮಾಣ ಹಾಗೂ ಆತನ ಮಗ ಅರಪಾರ್ಯನಿಂದ ಭೂದಾನ ಮಾಡಿದ ವಿಷಯವಿದೆ. ಇವುಗಳಲ್ಲದೇ ಊರಿನಲ್ಲಿ ಗಂಗ, ಕಲ್ಯಾಣ ಚಾಲುಕ್ಯ, ಕಲಚುರಿಗಳು, ಹೊಯ್ಸಳರ ಕಾಲದ ಅನೇಕ ಶಾಸನಗಳಿವೆ (ಧಾ.ಜಿ.ಶಾ.ಸೂ, ಸಂ.ಗ. ೧೧೩, ೧೧೪, ೧೧೫, ೧೧೬, ೧೧೭, ೧೧೮, ೧೧೯, ೧೨೦, ೧೨೧, ೧೨೨, ೧೨೩, ೧೨೪, ೧೨೫, ೧೨೬, ೧೨೭, ೧೨೮ ಮತ್ತು ೧೨೯).

ಪಾರ್ಶ್ವನಾಥ ಬಸದಿಯ ಕಂಬದಲ್ಲಿರುವ ಕ್ರಿ.ಶ. ಸುಮಾರು ೧೬ನೇ ಶತಮಾನದ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೩೦; SII, XV, No. 695) ಪಾರ್ಶ್ವನಾಥ ಬಸದಿಯನ್ನು ಸುಟ್ಟ ಇಸ್ಲಾಮರೊಂದಿಗೆ ನಡೆದ ಯುದ್ಧದಲ್ಲಿ ಸಹಸ್ರಕೀರ್ತಿಯ ಮರಣವೆಂದು ದಾಖಲಿಸುತ್ತದೆ. ಚಂದ್ರನಾಥ ಬಸದಿಯ ಕಂಬದಲ್ಲಿನ ಶಾಸನವು (ಧಾ.ಜಿ.ಶಾ.ಸೂ, ಸಂ. ಗ. ೧೩೧; ಪು. ೧೧, SII, XV, No. 716) ಮಹಮ್ಮದೀಯರಿಂದ ಮುರಿದ ಆದಿನಾಥ ವಿಗ್ರಹವನ್ನು ಬನದಾಂಬಿಕೆಯು ಪುನಃ ಸ್ಥಾಪನೆ ಮಾಡಿದ ವಿಷಯವನ್ನು ಉಲ್ಲೇಖಿಸಿದೆ.

೪೫

ಊರು ಮುಳಗುಂದ
ಸ್ಮಾರಕ ಸೋಮೇಶ್ವರ
ಸ್ಥಳ ಅಂದಾನಿಸ್ವಾಮಿ ಮಠದ ಪಕ್ಕ
ಕಾಲ ಕ್ರಿ.ಶ. ೧೦-೧೧ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ ರಾ.ಪು.ಇ.

ಈ ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ನವರಂಗಕ್ಕೆ ಹೊಂದಿಕೊಂಡಂತೆ ಮತ್ತೊಂದು ಗರ್ಭಗೃಹ, ಅಂತರಾಳಗಳು ಅದರ ಉತ್ತರಕ್ಕಿವೆ. ಗರ್ಭಗೃಹವು ಚೌಕಾಕಾರವಾಗಿದ್ದು ಅದರಲ್ಲಿ ಶಿವಲಿಂಗವಿದೆ. ಗರ್ಭಗುಡಿಯ ಉತ್ತರ ಮತ್ತು ಪಶ್ಚಿಮ ಗೋಡೆಗಳಲ್ಲಿ ಕಪಾಟುಗಳಿದ್ದು, ಇದರ ಛತ್ತಿನಲ್ಲಿ ಅರಳಿದ ತಾವರೆಯಿದೆ. ಪ್ರವೇಶ ದ್ವಾರವು ಯಾವುದೇ ಅಲಂಕೃತ ಶಾಖೆಗಳಿಂದ ಕೂಡಿರದೆ ಸರಳವಾಗಿದ್ದು, ಲಲಾಟದಲ್ಲಿ ದೇವಿ ಉಬ್ಬುಶಿಲ್ಪವಿದೆ. ಆಲೀಡಾಸನದಲ್ಲಿದ್ದು ಚತುರ್ಭುಜಗಳನ್ನು ಹೊಂದಿದೆ. ಮೇಲಿನ ಬಲಗೈನಲ್ಲಿ ತ್ರಿಶೂಲ, ಮೇಲಿನ ಎಡಗೈನಲ್ಲಿ ಅಸ್ಪಷ್ಟ ವಸ್ತುವನ್ನು ಹಿಡಿದಿದ್ದಾಳೆ. ಅಂತರಾಳವು ಚೌಕಾಕಾರವಾಗಿದ್ದು, ಸರಳವಾಗಿದೆ. ಇದರ ದ್ವಾರವು ಎರಡು ಶಾಖೆಗಳಿಂದ ಕೂಡಿದ್ದು, ಅವುಗಳಲ್ಲಿ ಸ್ತಂಭಶಾಖೆ ಹೆಚ್ಚು ಅಲಂಕೃತವಾಗಿದೆ. ದ್ವಾರದ ಎರಡೂ ಬದಿಯಲ್ಲಿ ಸರಳ ಜಾಲಾಂಧ್ರಗಳಿದ್ದು, ಅವುಗಳ ಕೆಲವು ಭಾಗ ಹಾಳಾಗಿದೆ.

ನವರಂಗದಲ್ಲಿ ನಾಲ್ಕು ಚೌಕ-ವೃತ್ತಾಕಾರದ ಕಂಬಗಳಿದ್ದು, ಇವುಗಳಲ್ಲಿ ಬಳೆ, ಗಂಟೆ, ಮಾಲಾಗಳ ಅಲಂಕರಣೆಯಿದೆ. ಕೆಳಗಿನ ಚೌಕಾಕಾರದ ಭಾಗದಲ್ಲಿ ನರ್ತಕಿಯರ ಉಬ್ಬುಶಿಲ್ಪಗಳಿವೆ. ನವರಂಗದ ಮಧ್ಯಭಾಗದಲ್ಲಿ ನಂದಿಯನ್ನಿಡಲಾಗಿದೆ. ನವರಂಗದ ಪ್ರತಿ ಅಂಕಣದ ಛತ್ತನ್ನು ಮೂರು ಭಾಗಗಳನ್ನಾಗಿ ಮಾಡಿ ಪ್ರತಿ ಭಾಗದಲ್ಲಿ ಎರೆಡೆರಡು ಇಳಿಬಿದ್ದ ಕಮಲಗಳನ್ನು ಬಿಡಿಸಲಾಗಿದೆ. ನವರಂಗದ ಪಶ್ಚಿಮದಲ್ಲಿ ಎರಡು ಹಾಗೂ ದಕ್ಷಿಣ ಮತ್ತು ಉತ್ತರದ ಗೋಡೆಯಲ್ಲಿ ತಲಾ ಒಂದು ಕೋಷ್ಠಗಳಿವೆ. ಪ್ರತಿ ಕೋಷ್ಠವನ್ನು ಮೂಲ ದೇವಾಲಯವಾದ ರೀತಿಯಲ್ಲಿಯೇ ಅಲಂಕರಿಸಲಾಗಿದೆ.

ನವರಂಗದ ಉತ್ತರ ಭಾಗಕ್ಕೆ ಹೊಂದಿಕೊಂಡಂತೆ ಮತ್ತೊಂದು ಗರ್ಭಗೃಹ ಇದೆ. ಇದು ಚೌಕಾಕಾರವಾಗಿದ್ದು ಅದರಲ್ಲಿನ ಗರುಡ ಪೀಠದ ಮೇಲೆ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇದರ ಛತ್ತಿನಲ್ಲಿ ಕಮಲದ ಅಲಂಕಾರವಿದೆ. ಇದರ ಪ್ರವೇಶ ದ್ವಾರವು ವಜ್ರ, ಪುಷ್ಟಿ, ಲತಾ, ಬಳ್ಳಿ ಮತ್ತು ಸ್ತಂಭ ಶಾಖೆಗಳಿಂದ ಅಲಂಕೃತವಾಗಿದ್ದು, ಲಲಾಟದಲ್ಲಿ ಯಾವುದೇ ಉಬ್ಬುಶಿಲ್ಪವಿಲ್ಲ. ಇದರ ಮೇಲ್ಭಾಗಕ್ಕೆ ಕಪೋತ ಮತ್ತು ಶಿಖರದ ಮಾದರಿಗಳನ್ನು ಭಿತ್ತಿಯಲ್ಲಿ ಬಿಡಿಸಲಾಗಿದೆ. ಈ ಗರ್ಭಗೃಹದ ಮುಂಭಾಗಕ್ಕೆ ಸರಳ ಅಂತರಾಳವಿದೆ. ಇದರ ಛತ್ತಿನಲ್ಲಿ ಅರಳಿದ ತಾವರೆಯ ಅಲಂಕಾರವಿದೆ. ಅಂತರಾಳದ ಪ್ರವೇಶ ದ್ವಾರವು ಹಾಳಾಗಿದ್ದು ಮೂಲತಃ ಬೇರೆಡೆ ಇದ್ದ ಎರಡು ದ್ವಾರಪಾಲಕ ಶಿಲ್ಪಗಳನ್ನು ದ್ವಾರದ ಎರಡೂ ಬದಿಯಲ್ಲಿಡಲಾಗಿದೆ. ನವರಂಗಕ್ಕೆ ಹೊಂದಿಕೊಂಡಂತೆ ದಕ್ಷಿಣ ಭಾಗದಲ್ಲಿ ಇದ್ದಿರಬಹುದಾದ ಮತ್ತೊಂದು ಗರ್ಭಗೃಹ ಅಂಗತರಾಳಗಳು ಹಾಳಾಗಿರುವುದನ್ನು ಅಲ್ಲಿನ ಅವಶೇಷಗಳಿಂದ ಗುರುತಿಸಬಹುದು.

ದೇವಾಲಯಕ್ಕೆ ಉಪಾನ, ಪದ್ಮ, ಕುಮುದುಗಳಿರುವ ಅಧಿಷ್ಠಾನವಿದೆ. ಭಿತ್ತಿಯ ಕೆಲವು ಭಾಗಗಳನ್ನು ಇತ್ತೀಚೆಗೆ ಚಕ್ಕೆ ಕಲ್ಲುಗಳನ್ನು ಉಪಯೋಗಿಸಿ ಕಟ್ಟಲಾಗಿದೆ. ಭಿತ್ತಿಯಲ್ಲಿ ಅರೆಗಂಭಗಳ ಅಲಂಕಾರವಿದೆ. ಮೂಲ ಗರ್ಭಗೃಹದ ಮೇಲಿನ ಇದ್ದ ಶಿಖರ ಹಾಳಾಗಿದೆ.

ಅನ್ನದಾನಿಸ್ವಾಮಿ ಮಠದ ಕಂಬದಲ್ಲಿರುವ ಯಾದವ ಸಿಂಘಣನ ಕ್ರಿ.ಶ. ೧೨೨೪ರ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೨೫; ೧೨, SII, XV, No. 170) ಸ್ವಯಂಭೂ ದೇವಾಲಯದ ನಂದಾದೀವಿಗೆಗೆ ದಾನ ನೀಡಿದ ಉಲ್ಲೇಖವಿದೆ.

೪೬

ಊರು ಮುಳಗುಂದ
ಸ್ಮಾರಕ ಸಿದ್ದೇಶ್ವರ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪಶ್ಚಿಮ
ಸ್ಥಿತಿ ಉತ್ತಮ
ಸಂರಕ್ಷಣೆ ರಾ.ಪು.ಇ.

ಇದು ಮೂರು ಗರ್ಭಗೃಹ, ಅಂತರಾಳ ಮತ್ತು ನವರಂಗ, ಮುಖಮಂಟಪ ಹಾಗೂ ನಂದಿಮಂಟಪದಿಂದ ಕೂಡಿದ ತ್ರಿಕೂಟ ದೇವಾಲಯ. ಮೂಲ ಗರ್ಭಗೃಹವು ಪೂರ್ವ ಭಾಗಕ್ಕಿದ್ದು, ಅದು ಚೌಕಾಕಾರವಾಗಿದೆ. ಅದರಲ್ಲಿ ಶಿವಲಿಂಗವಿದೆ. ಇದರ ಛತ್ತಿನಲ್ಲಿ ಅರಳಿದ ತಾವರೆ ಇದೆ. ಗರ್ಭಗೃಹದ ಪ್ರವೇಶ ದ್ವಾರವು ಪಂಚಶಾಖೆಗಳಿಂದ ಅಲಂಕೃತವಾಗಿದ್ದು ಲಲಾಟದಲ್ಲಿ ನಾಟ್ಯ ಶಿವನ ಉಬ್ಬಶಿಲ್ಪವಿದೆ. ಅದರ ಅಕ್ಕ-ಪಕ್ಕಗಳಲ್ಲಿ ಬಾಳಹೂವಿನ ಅಲಂಕಾರ ಹಾಗೂ ದ್ರಾವಿಡ ಮತ್ತು ರೇಖಾನಾಗರ ಶೈಲಿಯ ಶಿಖರ ಮಾದರಿಗಳನ್ನು ಕೆತ್ತಲಾಗಿದೆ. ದ್ವಾರದ ಎಡಬದಿಗಳಲ್ಲಿ ಶೈವ ದ್ವಾರಪಾಲಕರ ಶಿಲ್ಪಗಳಿದ್ದು, ಅವುಗಳ ಬಳಿಯೇ ಚಾಮರಧಾರಿಗಳ ಉಬ್ಬಶಿಲ್ಪಗಳಿವೆ. ಅಂತರಾಳದ ಛತ್ತಿನಲ್ಲಿ ವೃತ್ತಾಕಾರದ ಕಮಲದ ಹೂವಿದೆ. ಇದರ ಬಾಗಿಲುವಾಡವು ಮೂರು ಸರಳ ಶಾಖೆಗಳಿಂದ ಕುಡಿದೆ. ಇಲ್ಲಿನ ಲಲಾಟದಲ್ಲಿಯೂ ಸಹ ನಾಟ್ಯಶಿವನ ಉಬ್ಬುಶಿಲ್ಪವಿದೆ. ಈ ದ್ವರದ ಇಕ್ಕೆಲೆಗಳಲ್ಲಿ ಜಾಲಾಂಧ್ರಗಳಿವೆ.

ಉತ್ತರದ ಗರ್ಭಗೃಹವು ಮುಖ್ಯಗರ್ಭಗೃಹದ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಆದರೆ ಗರ್ಭಗೃಹದ ಉತ್ತರ ಮತ್ತು ಪೂರ್ವದ ಒಳ ಭಿತ್ತಿಯಲ್ಲಿ ಗೂಡುಗಳಿವೆ. ಗರ್ಭಗೃಹದ ಮುಂಭಾಗದ ಅಂತರಾಳವು ಸಹ ಮುಖ್ಯ ಅಂತರಾಳದ ರೀತಿಯಲ್ಲಿದೆ. ಆದರೆ ಇದರ ಲಲಾಟದಲ್ಲಿ ಯಾವುದೇ ಉಬ್ಬುಶಿಲ್ಪಗಳಿರದೆ ಸರಳವಾಗಿದೆ. ಅಂತರಾಳದ ಭಾಗದಲ್ಲಿ ಹನ್ನೊಂದು ಸ್ಥಾನಿಕ ರುದ್ರರ ಉಬ್ಬುಶಿಲ್ಪಗಳಿವೆ.

ದಕ್ಷಿಣದ ಗರ್ಭಗೃಹದಲ್ಲಿ ದಕ್ಷಿಣ ಹಾಗೂ ಪೂರ್ವದ ಒಳ ಭಿತ್ತಿಯಲ್ಲಿ ಕೋಷ್ಠಗಳಿವೆ. ಉಳಿದಂತೆ ಪೂರ್ವ ದಿಕ್ಕಿನಲ್ಲಿನ ಮೂಲ ಗರ್ಭಗೃಹದ ಎಲ್ಲಾ ಲಕ್ಷಣಗಳನ್ನು ಇದು ಹೊಂದಿದೆ. ಅಂತರಾಳದ ಭಾಗದಲ್ಲಿ ಹನ್ನೊಂದು ಸ್ಥಾನಿಕ ರುದ್ರರ ಶಿಲ್ಪಗಳಿವೆ.

ಈ ಮೂರು ಗರ್ಭಗೃಹಗಳಿಗೆ ಹೊಂದಿಕೊಂಡಂತೆ ನವರಂಗವಿದ್ದು, ಅದರಲ್ಲಿ ಒಂದು ಸಣ್ಣ ನಂದಿ ವಿಗ್ರಹವನ್ನು ಇತ್ತೀಚಿಗೆ ಪ್ರತಿಷ್ಠಾಪಿಸಿದೆ. ನವರಂಗದಲ್ಲಿ ಚೌಕ, ವೃತ್ತಾಕಾರದ ಕಂಬಗಳಿದ್ದು, ಕಂಬಗಳ ಮೇಲಿನ ಬೋದಿಗೆಗಳಲ್ಲಿ ಯಾಳಿ ಮತ್ತು ಸುರುಳಿಗಳ ಅಲಂಕರಣೆಯಿದೆ. ನವರಂಗದ ಭುವನೇಶ್ವರಿಯಲ್ಲಿ ಅರಳಿದ ತಾವರೆಯ ಅಲಂಕರಣೆಯಿದೆ. ನವರಂಗವನ್ನು ಪ್ರವೇಶಿಸಲು ಪೂರ್ವಕ್ಕೆ, ಪ್ರವೇಶ ದ್ವಾರವಿದೆ. ಅದು ಗರ್ಭಗೃಹದ ದ್ವಾರದಂತೆ ಅಲಂಕಾರಗೊಂಡಿದ್ದು ಆಕರ್ಷಕವಾಗಿದೆ. ನವರಂಗದ ಮುಂಭಾಗದಲ್ಲಿ ಮುಖಮಂಟಪವಿದ್ದು, ಪೂರ್ವ, ಉತ್ತರ ಮತ್ತು ದಕ್ಷಿಣದಲ್ಲಿ ಪ್ರವೇಶ ದ್ವಾರಗಳಿವೆ. ಇಲ್ಲಿನ ಕಂಬಗಳು ನವರಂಗದ ಕಂಬಗಳಂತೆ ಅಲಂಕೃತಗೊಂಡಿವೆ. ಛತ್ತಿನಲ್ಲಿ ಅರಳಿದ ತಾವರೆಯಿದೆ. ಮುಖಮಂಟಪದ ಮುಂಭಾಗಕ್ಕೆ ನಂದಿಮಂಟಪವಿದ್ದು ಅದರಲ್ಲಿ ನಂದಿ ಇದೆ. ದೇವಾಲಯದ ಅಧಿಷ್ಠಾನವು ಉಪಾನ, ಕುಮುದ ಮತ್ತು ಪದ್ಮಗಳಿಂದ ಅಲಂಕೃತವಾಗಿದೆ. ಮುಖಮಂಟಪದ ಸುತ್ತಲಿನ ಅಧಿಷ್ಠಾನ ಭಾಗವು ಉಪಾನ, ಹಂಸ, ಆನೆ, ಕುದುರೆ ಸಾಲುಗಳಿಂದ, ನರ್ತಕಿಯರ ಹಾಗೂ ಹಾಗೂ ಶಿವನ ವಿವಿಧ ಅವತಾರಗಳ ಶಿಲ್ಪಗಳಿಂದ ಅಲಂಕೃತಗೊಂಡಿವೆ. ಗರ್ಭಗೃಹದ ಪೂರ್ವ, ಉತ್ತರ, ದಕ್ಷಿಣ ಹೊರಭಾಗದ ಭಿತ್ತಿಯಲ್ಲಿ ದೇವಕೋಷ್ಠಗಳಿದ್ದು, ಅವುಗಳನ್ನು ಅರೆಗಂಬ ಮತ್ತು ಶಿಖರಗಳಿಂದ ಅಲಂಕರಿಸಲಾಗಿದೆ. ದೇವಾಲಯದ ಉಳಿದ ಭಿತ್ತಿಯ ಭಾಗವು ಸರಳವಾಗಿದೆ. ದೇವಾಲಯದ ಮೇಲೆ ಇದ್ದ ಶಿಖರಗಳು ಈಗ ಕಾಣಬರುತ್ತಿಲ್ಲ. ಈ ದೇವಾಲಯದ ಮುಂದೆ, ಪಶ್ಚಿಮ ಭಾಗದಲ್ಲಿ ಪ್ರವೇಶ ಮಂಟಪವಿದೆ. ಇದಕ್ಕೆ ಹೊಂದಿಕೊಂಡಂತೆ ದೇವಾಲಯದ ಸುತ್ತಲೂ ಇದ್ದ ಪ್ರಕಾರ ಗೋಡೆ ಈಗ ನಾಶವಾಗಿದೆ. ಪ್ರವೇಶಮಂಟಪದ ವಿವಿಧ ಭಾಗಗಳಲ್ಲಿ ನೃತ್ಯ ಭಂತಿಯ ಶಿವನ ವಿವಿಧ ಶಿಲ್ಪಗಳಿವೆ. ದೇವಾಲಯದ ಹೊರಭಾಗದಲ್ಲಿ ನಾಗರಕಲ್ಲು ಮತ್ತು ಬಸವನ ಶಿಲ್ಪಗಳಿದ್ದು, ಆಕರ್ಷಕವಾಗಿದೆ.

೪೭

ಊರು ಯಲಿಶಿರೂರು
ಸ್ಮಾರಕ ಜೋಡಿ ದೇವಾಲಯಗಳು
ಸ್ಥಳ ಊರಿನ ಪೂರ್ವಕ್ಕೆ
ಕಾಲ ಕ್ರಿ.ಶ. ೧೧-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ ರಾ.ಪು.ಇ

ಒಂದರ ಪಕ್ಕದಲ್ಲೊಂದರಂತೆ ಇರುವ ಈ ಜೋಡಿ ದೇವಾಲಯಗಳು ವಾಸ್ತುಶಿಲ್ಪ ದೃಷ್ಟಿಯಿಂದ ಗಮನಾರ್ಹವಾಗಿದೆ. ಮೊದಲನೆಯ ಗುಡಿಯು ಎರಡು ಗರ್ಭಗೃಹ, ಅಂತರಾಳ, ಮತ್ತು ನವರಂಗಗಳಿಂದ ಕೂಡಿದ ದ್ವಿಕೂಟ ದೇವಾಲಯ ಇದರ ಮುಖ್ಯ ಗರ್ಭಗೃಹ ಪಶ್ಚಿಮದಲ್ಲಿದ್ದು, ಅದರಲ್ಲಿ ಶಿವಲಿಂಗವಿದೆ. ಗರ್ಭಗೃಹದ ಮುಚ್ಚಿಗೆಯಲ್ಲಿ ಅರಳಿದ ಪದ್ಮವಿದ್ದು, ದ್ವಾರವು ಸರಳವಾಗಿದೆ. ತೆರೆದ ಅಂತರಾಳವು ಸರಳವಾಗಿವೆ. ಇಲ್ಲಿರುವ ಪೀಠವೊಂದರ ಮೇಲೆ ಇತ್ತೀಚಿಗೆ ಪ್ರತಿಷ್ಠಾಪಿಸಿದ ಲಿಂಗವಿದೆ. ಅದರ ಪೀಠ ಭಾಗದಲ್ಲಿ ಏಳು ಕುದುರೆಗಳನ್ನು ಕೆತ್ತಲಾಗಿದೆ. ದಕ್ಷಿಣದ ಕಡೆ ಇರುವ ಮತ್ತೊಂದು ಗರ್ಭಗೃಹದಲ್ಲಿ ಶಿವಲಿಂಗವಿದೆ. ಅದನ್ನು ರಾಮಲಿಂಗವೆಂದು ಸ್ಥಳೀಯರು ಕರೆಯುತ್ತಾರೆ. ಇದರ ಮುಚ್ಚಿಗೆಯಲ್ಲಿ ಅರಳಿದ ಪದ್ಮವಿದೆ. ಈ ಗರ್ಭಗೃಹದ ಮುಂಭಾಗದಲ್ಲಿ ಅಂತರಾಳಕ್ಕೆ ಪರ್ಯಾಯವಾಗಿ ಒಂದು ದೊಡ್ಡ ಅಂಕಣವನ್ನು ನವರಂಗಕ್ಕೆ ಸೇರಿಸಲಾಗಿದೆ. ನವರಂಗದಲ್ಲಿ ನಾಲ್ಕು ಕಂಬಗಳಿದ್ದು ಅವು ಚೌಕ, ವೃತ್ತಕಾರವಾಗಿದ್ದು, ಹಲವು ರೀತಿಯ ಅಲಂಕಾರಗಳಿಂದ ಕೂಡಿದೆ. ಇದರ ಮುಚ್ಚಿಗೆಯಲ್ಲಿ ಅರಳಿದ ಕಮಲದ ಅಲಂಕಾರವಿದ್ದು, ದ್ವಾರದಲ್ಲಿ ವಿವಿಧ ಸರಳ ಶಾಖೆಗಳಿವೆ.

ಈ ದೇವಾಲಯದ ಅಧಿಷ್ಠಾನವು ಉಪಾನ, ತ್ರಿಪಟ್ಟಕುಮುದ ಮತ್ತು ಕಪೋತಗಳಿಂದ ಕೂಡಿದೆ. ಭಿತ್ತಿಯಲ್ಲಿ ಅರೆಗಂಭಗಳ ಶಿಖರ ಮಾದರಿಗಳನ್ನು ಕೆತ್ತಲಾಗಿದೆ.

ದೇವಾಲಯದ ಪಕ್ಕದಲ್ಲಿರುವ ಇನ್ನೊಂದು ದೇವಾಲಯವು ಪಶ್ಚಿಮಾಭಿಮುಖವಾಗಿದ್ದು, ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನೊಳಗೊಂಡಿದೆ. ಗರ್ಭಗೃಹವು ಚೌಕಾಕಾರವಾಗಿದ್ದು, ಅದರಲ್ಲಿ ಲಿಂಗವಿದೆ. ಉತ್ತರ ಗೋಡೆಯಲ್ಲಿ ಕಪಾಟು ಇದೆ. ಪೂರ್ವ ಭಾಗದ ಗೋಡೆಯಲ್ಲಿ ದೇವಕೋಷ್ಠವಿದೆ. ಗರ್ಭಗೃಹದ ಬಾಗಿಲುವಾಡವು ಸರಳವಾಗಿದೆ. ಅಂತರಾಳವು ಸರಳವಾಗಿದ್ದು ದ್ವಾರವು ಮೂರು ಶಾಖೆಗಳಿಂದ ಕೂಡಿದೆ. ದ್ವಾರದ ಎರಡೂ ಬದಿಗಳಲ್ಲಿ ಜಾಲಾಂಧ್ರಗಳಿವೆ. ನವರಂಗದಲ್ಲಿ ನಾಲ್ಕು ಚೌಕ, ವೃತ್ತ, ಗಂಟೆಯಾಕಾರದ ಕಂಬಗಳಿವೆ. ಅವುಗಳ ಮೇಲೆ ಮಾಲಾಲಂಕಾರವಿದೆ. ಅದರ ಮುಚ್ಚಿಗೆಯಲ್ಲಿ ಪದ್ಮವಿದೆ. ಇದರ ಉತ್ತರದ ಒಳಭಿತ್ತಿಯ ದೇವಕೋಷ್ಠದಲ್ಲಿ ಇತ್ತೀಚಿನ ಉಮಾ-ಮಹೇಶ್ವರಿ ಮೂರ್ತಿಶಿಲ್ಪ ಇದೆ. ನವರಂಗದ ಪ್ರವೇಶ ದ್ವಾರವು ಐದು ಶಾಖೆಗಳಿಂದ ಅಲಂಕೃತವಾಗಿದೆ.

ದೇವಾಲಯದ ಅಧಿಷ್ಠಾನವು ಉಪಾನ, ತ್ರಿಪಟ್ಟಕುಮುದ ಮತ್ತು ಕಪೋತಗಳಿಂದ ಕೂಡಿದೆ. ಭಿತ್ತಿಯಲ್ಲಿ ಅರೆಗಂಬಗಳು ಮತ್ತು ಗೋಪುರದ ಮಾದರಿಗಳನ್ನು, ಕೆತ್ತಲಾಗಿದೆ. ದೇವಾಲಯದ ಮೇಲೆ ಮೂರು ತಲಗಳ ಶಿಖರವಿದೆ. ಶಿಖರವು ಶಾಲಾ, ಕೂರ, ಪಂಚರ ಮತ್ತು ಸ್ತೂಪಿಗಳನ್ನೊಳಗೊಂಡಿದೆ. ಶಿಖರಕ್ಕೆ ಸುಖನಾಸಿಯಿದೆ.

ದೇವಾಲಯದ ಹೊರಭಾಗದಲ್ಲಿ ಆರು ವೀರಗಲ್ಲುಗಳು, ಎರಡು ಶಾಸನಗಳು ಮತ್ತು ಭಗ್ನ ಕಂಬಗಳಿವೆ. ಈ ದೇವಾಲಯವನ್ನು ಭೋಗೇಶ್ವರ ದೇವಾಲಯವೆಂದು ಶಾಸನಗಳು ತಿಳಿಸುತ್ತವೆ. (ಧಾ.ಜಿ,.ಗ್ಯಾ, ಪು. ೮೯೭-೮೯೮).

ಇದೇ ಊರಿನಲ್ಲಿ ಮತ್ತೊಂದು ಈಶ್ವರ ಗುಡಿಯಿದ್ದು ಅದು ಗರ್ಭಗೃಹ ಮತ್ತು ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹ ಚೌಕಾಕಾರವಾಗಿದ್ದು, ಅದರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಅದರ ಮುಚ್ಚಿಗೆಯಲ್ಲಿ ಪದ್ಮವಿದೆ. ಮುಖ ಮಂಟಪವು ಮರದ ಕಂಬಗಳಿಂದ ಕೂಡಿದೆ. ಅದರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಅಧಿಷ್ಠಾನದಲ್ಲಿ ಉಪಾನ, ಪದ್ಮ ಮತ್ತು ಕುಮುದಗಳಿವೆ. ಭಿತ್ತಿ ಸರಳವಾಗಿದೆ. ದೇವಾಲಯದ ಮೇಲೆ ಶಿಖರವಿಲ್ಲ.

ಗ್ರಾಮದಲ್ಲಿರುವ ಚಾವಡಿ ಬಳಿಯ ವೀರಗಲ್ಲು ಶಾಸನವು ಅತ್ಯಂತ ಪ್ರಾಚೀನವಾಗಿದ್ದು, ರಾಷ್ಟ್ರಕೂಟರ ಅರಸ ಎರಡನೆಯ ಕೃಷ್ಣನ ಕಾಲಕ್ಕೆ (ಕ್ರಿ.ಶ. ೯೦೧) ಸೇರಿದುದಾಗಿದೆ. (ಧಾ.ಜಿ.ಶಾ.ಸೂ, ಸಂ.ಗ. ೬; ಪು. ೮, SII, XI, pt. I, No. 25) ಇದು ಮಹಾಶ್ರೀಮಂತ ಬೆಳುವಲ-೩೦೦ ಆಳುತ್ತಿದ್ದ ಎಂದು ಉಲ್ಲೇಖಿಸಿದೆ. ಇಲ್ಲಿಯ ಇನ್ನೊಂದು ಶಾಸನದ (ಧಾ.ಜಿ.ಶಾ.ಸೂ, ಸಂ.೭ಲ ಪು. ೮, SII, XI, pt. I, No. 50) ತೇದಿಯು ಕ್ರಿ.ಶ. ೧೦೦೫. ಇದು ಮಹಾಮಂಡಲೇಶ್ವರ ಶೋಭರಸ ಮತ್ತು ಮಹಾಪ್ರಧಾನ ಮಹಾದೇವಯ್ಯರುಗಳು ವಿವಿಧ ಕಾಲಗಳಲ್ಲಿ ನೀಡಿದ ದಾನಗಳ ವಿವರಗಳನ್ನು ನೀಡುತ್ತದೆ. ಕಲ್ಯಾಣ ಚಾಲುಕ್ಯ ಅರಸ ಇರಿಬಬೆಡಂಗ (ಕ್ರಿ.ಶ. ೧೦೦೫) ಮತ್ತು ಎರಡನೆ ಸೋಮೇಶ್ವರನ (ಕ್ರಿ.ಶ. ೧೧೩೮) ಕಾಲದಲ್ಲಿ ನೀಡಿದ ದಾನಗಳಾಗಿವೆ. ಇನ್ನೊಂದು ವೀರಗಲ್ಲು ಶಾಸನವು (ಧಾ.ಜಿ.ಶಾ.ಸೂ, ಸಂ. ೮; ಪು. ೮, SII, XI, pt. I, No. 51) ಕಲ್ಯಾಣಚಾಲುಕ್ಯ ಅರಸ ಸತ್ತಿಗನ (ಇರಿವಬೆಡಂಗ) ಕಾಲದಲ್ಲಿ ಉಣಕಲ್ಲು ಕೋಟೆ ಕಾಳಗದಲ್ಲಿ ಕೇತನು ಮರಣಸಿದನೆಂದು ತಿಳಿಸುತ್ತದೆ. ಮತ್ತೊಂದು ವೀರಗಲ್ಲು ಶಾಸನವು ಕ್ರಿ.ಶ. ೧೧ನೇ ಶತಮಾನಕ್ಕೆ ಸೇರಿದ್ದಾಗಿದ್ದು (ಧಾಜಿಶಾಸೂ, ಸಂ.ಗ. ೯) ಅದು ವೀರನೊಬ್ಬನ ಮರಣವನ್ನು ದಾಖಲಿಸಿದೆ. ಭೋಗೇಶ್ವರ ಗುಡಿಯ ಬಳಿಯ ಶಾಸನವು ಕಲ್ಯಾಣ ಚಾಲುಕ್ಯ ಅರಸರ ಕಾಲದ ಆರನೆ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದೆ. ಅದರ ತೇದಿಯು ಕ್ರಿ.ಶ. ೧೧೦೯ ಆಗಿದೆ (ಧಾ.ಜಿ.ಶಾ.ಸೂ, ಸಂ.ಗ. ೧೦; ಪು. ೮, SII, XI, pt. I, No. 158). ಇದು ಇಎಲೆಯ ಸಿರೂರಿನ ಪ್ರತಿಷ್ಠಿತರಿಂದ ಭೋಗೇಶ್ವರ ದೇವಾಲಯಕ್ಕೆ ದಾನ ನೀಡಿದರೆಂದು ತಿಳಿಸುತ್ತದೆ. ಚಾವಡಿ ಬಳಿಯ ಇದೇ ಅರಸನ ಕ್ರಿ.ಶ. ೧೧೧೮ರ ಕಾಲದ ಶಾಸನ (ಧಾ.ಜಿ.ಶಾ.ಸೂ, ಸಂ. ೧೧; ಪು. ೮, SII, XI, pt. I, No. 167) ಎಲೆಯ ಸಿರಿವೂರ ಗಾವುಂಡರಿಂದ ಬಳೇಶ್ವರ ದೇವಾಲಯಕ್ಕೆ ಭೂದಾನ ಮಾಡಿದ್ದನ್ನು ಉಲ್ಲೇಖಿಸಿದೆ. ಭೋಗೇಶ್ವರ ಗುಡಿ ಗೋಡೆಯಲ್ಲಿನ ಕಲ್ಯಾಣ ಚಾಲುಕ್ಯ ಅರಸ ಎರಡನೆ ಜಗದೇಕಮಲ್ಲನ ಕ್ರಿ.ಶ. ೧೧೪೪ರ ಶಾಸನವು (ಧಾ.ಜಿ.ಶಾ.ಸೂ, ಸಂ. ೧೨; ಪು. ೮, SII, XV, No. 25) ನಾಮಿಯಣ್ಣನಿಂದ ಭೋಗೇಶ್ವರ ದೇವಾಲಯಕ್ಕೆ ನೀಡಿದ ದಾನದ ವಿವರಗಳಿವೆ. ಅದೇ ಕಲ್ಲು (ಧಾಜಿ.ಶಾ.ಸೂ, ಸಂ. ೧೩; ಪು. ೮, SII, XV No. 107) ಕಲಚುರಿ ಬಿಜ್ಜಳನ ಕಾಲಕ್ಕೆ ಸೇರಿದ್ದಾಗಿದೆ. ತೇದಿಯು ಕ್ರಿ.ಶ. ೧೧೬೭ ಆಗಿದ್ದು, ಸೊರಟೂರ ಮಹಾಪ್ರಭು ದಾಸಿರಾಜಯ್ಯನು ಬೋಗೇಶ್ವರ ದೇವಾಲಯಕ್ಕೆ ದಾನ ನೀಡಿದ ವಿಷಯ ಉಲ್ಲೇಖಿಸಿದೆ. ಇದೇ ಗುಡಿಯ ಕಂಬದಲ್ಲಿನ ಕಲ್ಯಾಣ ಚಾಲುಕ್ಯ ಅರಸ ಒಂದನೇ ಸೋಮೇಶ್ವರನ ತೇದಿಯಿಲ್ಲದ ಶಾಸನ (ಧಾ.ಜಿ.ಶಾ.ಸೂ, ಸಂ. ೧೪; ಪು. ೮, SII, XI, pt. I, No. 102) ಅಪೂರ್ಣವಾಗಿದ್ದು, ಕುಮಾರ ಭುವನೈಕಮಲ್ಲನ ಪ್ರಶಸ್ತಿಯನ್ನು ದಾಖಲಿಸಿದೆ.

೪೮

ಊರು ಲಕ್ಕುಂಡಿ
ಸ್ಮಾರಕ ಮಾಣಿಕೇಶ್ವರ
ಸ್ಥಳ ಊರಿನ ಉತ್ತರಕ್ಕೆ
ಕಾಲ ಕ್ರಿ.ಶ. ೯-೧೦ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ ಭಾ.ಪು.ಇ.

ಮೂರು ಗರ್ಭಗೃಹ ಮೂರು ಅಂತರಾಳ ಹಾಗೂ ನವರಂಗ ಮತ್ತು ತೆರೆದ ಮುಖ ಮಂಟಪಗಳಿಂದ ಕೂಡಿದ ತ್ರಿಕೂಟ ದೇವಾಲಯ. ಮೂಲ ಗರ್ಭಗೃಹ ಪೂರ್ವ ದಿಕ್ಕಿನಲ್ಲಿದ್ದು, ಚೌಕಾಕಾರವಾಗಿದೆ. ಗರ್ಭಗೃಹದ ಪಶ್ಚಿಮ ಮತ್ತು ಉತ್ತರ ಗೋಡೆಗಳಲ್ಲಿ ದೇವಕೋಷ್ಠಗಳಿವೆ. ಇದರ ಛತ್ತಿನಲ್ಲಿ ವೃತ್ತಾಕಾರದ ಅರಳಿದ ಪದ್ವವಿದೆ. ಬಾಗಿಲುವಾಡವು ವಜ್ರ, ಸ್ತಂಭ, ಲತಾಬಳ್ಳಿ, ಪುಷ್ಪ ಮೊದಲಾದ ಪಂಚ ಶಾಖೆಗಳಿಂದ ಕೂಡಿದೆ. ದ್ವಾರದ ಕೆಳಭಾಗದಲ್ಲಿ ಎರಡೂ ಕಡೆ ನಾಲ್ಕು ಜನ ಚಾಮರಧಾರಿಗಳನ್ನು ಕೆತ್ತಲಾಗಿದೆ. ಈ ಗರ್ಭಗೃಹದ ಮುಂಭಾಗದ ಅಂತರಾಳದ ಮುಚ್ಚಿಗೆಯಲ್ಲಿ ಬಹುದಳದ ಕಮಲ ದಳಗಳ ಅಲಂಕಾರವಿದೆ. ಇದರ ದ್ವಾರವು ವಜ್ರ ಹಾಗೂ ಇತರೆ ಶಾಖೆಗಳಿಂದ ಅಲಂಕೃತವಾಗಿದೆ. ದ್ವಾರದ ಎಡ ಮತ್ತು ಬಲಭಾಗಗಳಲ್ಲಿ ದ್ವಾರಪಾಲಕರನ್ನು ಕೆತ್ತಲಾಗಿದೆ. ಲಲಾಟವು ಸರಳವಾಗಿದೆ. ದ್ವಾರದ ಎರಡೂ ಕಡೆ ಜಾಲಾಂಧ್ರಗಳಿವೆ. ಉತ್ತರ ಮತ್ತು ದಕ್ಷಿಣದ ಗರ್ಭಗೃಹದ ಅಂತರಾಳಗಳು ಈ ಮೇಲಿನ ರೀತಿಯಲ್ಲಿಯೇ ಅಲಂಕೃತವಾಗಿವೆ. ಮೂರು ಗರ್ಭಗೃಹಗಳಿಗೂ ಸೇರಿದಂತೆ ನವರಂಗವಿದೆ.

ಇದರ ಮುಚ್ಚಿಗೆಯಲ್ಲಿ ಅರಳಿದ ಪದ್ಮವಿದ್ದು, ಅದರ ಸುತ್ತಲೂ ಪಟ್ಟಿಕೆಗಳಿಂದ ಅಲಂಕರಿಸಲಾಗಿದೆ. ಇಲ್ಲಿನ ಕಂಬಗಳು ಚೌಕ, ವೃತ್ತಾಕಾರವಾಗಿದ್ದು, ಅವುಗಳನ್ನು ಗಂಟೆ, ಬಳೆ ಮತ್ತು ಮಾಲೆಗಳಿಂದ ಅಲಂಕರಿಸಲಾಗಿದೆ. ನವರಂಗದ (ಪಶ್ಚಿಮ ಭಾಗದ ಅಂತರಾಳದ ಮುಂಭಾಗಕ್ಕೆ) ಒಳ ಭಿತ್ತಿಯಲ್ಲಿ ಶಿಖರದ ಮಾದರಿಯ ದೇವಕೋಷ್ಠಗಳಿವೆ. ನವರಂಗದ ಪ್ರವೇಶ ದ್ವಾರವು ಪೂರ್ವ ದಿಕ್ಕಿನಲ್ಲಿದ್ದು ಅದು ವಿವಿಧ ಶಾಖೆಗಳಿಂದ ಅಲಂಕೃತವಾಗಿದೆ. ಈ ದ್ವಾರದ ಎರಡೂ ಬದಿಗಳಲ್ಲಿ ಶೈವ ದ್ವಾರಪಾಲಕರು ಮತ್ತು ಲಲಾಟವನ್ನು ಉತ್ತಮ ರೀತಿಯಲ್ಲಿ ಅಲಂಕರಿಸಲಾಗಿದೆ. ನವರಂಗದ ಮುಂಭಾಗಕ್ಕೆ ತೆರದ ಮುಖಮಂಟಪವಿದ್ದು, ಇದರ ಛತ್ತಿನಲ್ಲಿ ನವರಂಗದ ಛತ್ತಿನ ರೀತಿಯ ಅಲಂಕರಣೆಯಿದೆ.

ದೇವಾಲಯದ ಅಧಿಷ್ಠಾನವು ಉಪಾನ ಮತ್ತು ಪದ್ಮಗಳಿಂದ ಕೂಡಿದೆ. ಭಿತ್ತಿಯ ಅರೆಗಂಗಳನ್ನು ಶಿಖರ ಮಾದರಿಗಳಿಂದ ಅಲಂಕರಿಸಲಾಗಿದೆ. ಕಪೋತ ಭಾಗವನ್ನು ಸಹ ಅಲಂಕರಿಸಲಾಗಿದೆ. ಗರ್ಭಗೃಹದ ಮೇಲೆ ಶಿಖರವಿದ್ದು, ಅಲ್ಲಿ ಶಾಲಾ, ಕೂಟ, ಪಂಚರಗಳ ಅಲಂಕಾರವಿದೆ. ದೇವಾಲಯದ ಮುಂಭಾಗಕ್ಕೆ ಮೆಟ್ಟಿಲಿರುವ ಬಾವಿ ಇದೆ. ಈ ಬಾವಿಯ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಮೆಟ್ಟಿಲುಗಳಿದ್ದು, ಇದರ ಪಶ್ಚಿಮ ಭಾಗಕ್ಕೆ (ಮುಖಮಂಟಪದ ಮುಂಭಾಗಕ್ಕೆ) ನಡೆದಾಡಲು ಅನುಕೂಲವಾಗುವಂತೆ ಕಲ್ಲುಚಪ್ಪಡಿಯನ್ನು ಹಾಕಲಾಗಿದೆ. ಬಾವಿಯ ಹಾದಿಯಲ್ಲಿ ಎರಡೂ ಕಡೆ (ಮೆಟ್ಟಿಲುಗಳ ಎಡ-ಬಲಕ್ಕೆ) ಒಂದೊಂದು ಮತ್ತು ಪೂರ್ವ, ಪಶ್ಚಿಮ, ದಕ್ಷಿಣದ ದಿಕ್ಕಿನಲ್ಲಿ ತಲಾ ಎರಡೆರಡೂ ಗೂಡುಗಳಿದ್ದು ಅವುಗಳ ಮೇಲಿನ ಭಾಗವನ್ನು ಶಿಖರದ ಮಾದರಿಗಳಂತೆ ಅಲಂಕರಿಸಲಾಗಿದೆ. (ಧಾಜಿಗ್ಯಾ, ಪು. ೧೦೦೬) ಗುಡಿಯ ಕಂಬದಲ್ಲಿರುವ ಕ್ರಿ.ಶ,. ಸುಮಾರು ೧೨ನೇ ಶತಮಾನದ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೫೯; ಪು. ೧೩, SII, XV, No. 560) ಬಸವಿಶೆಟ್ಟಿಯು ನೀಡಿದ ದಾನವನ್ನು ಉಲ್ಲೇಖಿಸಿದೆ.

೪೯

ಊರು ಲಕ್ಕುಂಡಿ
ಸ್ಮಾರಕ ಕಾಶಿವಿಶ್ವನಾಥ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೧೫೨
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ ಭಾ.ಪು.ಇ.

ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖಮಂಟಪಗಳಿಂದ ಕೂಡಿದೆ. ಚೌಕಾಕಾರದ ಗರ್ಭಗೃಹದಲ್ಲಿ ಲಿಂಗವಿದೆ. ಪಶ್ಚಿಮ, ದಕ್ಷಿಣ, ಉತ್ತರದ ಭಿತ್ತಿಗಳಲ್ಲಿ ಗೂಡುಗಳಿವೆ. ಇದರ ಛತ್ತಿನಲ್ಲಿ ಬಹು ದಳದ ತಾವರೆ ಇದೆ. ಬಾಗಿಲವಾಡವು ವಜ್ರ, ನಾಗ, ನಾಗಿಣಿ, ಗಂಧರ್ವ, ಸ್ತಂಭ, ಲತಾ, ಶಾಖೆಗಳಿಂದ ಅಲಂಕೃತವಾಗಿದೆ. ಕೆಳ ಭಾಗದಲ್ಲಿ ಚಾಮರಧಾರಿಣಿಯರಿದ್ದಾರೆ. ತೆರೆದ ಅಂತರಾಳವು ಛತ್ತಿನಲ್ಲಿ ಅರಳಿದ ಬಹು ದಳಗಳ ತಾವರೆ ಇದೆ. ಇದರ ಉತ್ತರ ಮತ್ತು ದಕ್ಷಿಣದ ಭಿತ್ತಿನಲ್ಲಿ ಅರಳಿದ ಬಹು ದಳಗಳ ತಾವರೆ ಇದೆ. ಇದರ ಉತ್ತರ ಮತ್ತು ದಕ್ಷಿಣದ ಭಿತ್ತಿಗಳಲ್ಲಿ ಜಾಲಾಂಧ್ರಗಳಿವೆ. ಉತ್ತರದ ಬೋದಿಗೆಯಲ್ಲಿ ಒಡ್ಡೋಲಗ, ದಕ್ಷಿಣದಲ್ಲಿ ಅನಂತಶಯನ ಶಿಲ್ಪವಿದೆ. ಇದರ ಪ್ರವೇಶ ದ್ವಾರವು ವಿವಿಧ ಶಾಖೆಗಳಿಂದ ಆಲಂಕೃತವಾಗಿದ್ದು, ಅದರಲ್ಲಿನ ಅರೆಗಂಭಗಳ ಶಾಖೆಗಳು ಎದ್ದುಕಾಣುತ್ತವೆ.

ನವರಂಗದ ಮಧ್ಯಭಾಗದಲ್ಲಿ ಸ್ವಲ್ಪ ಎತ್ತರವಾದ ವೇದಿಕೆಯಿದ್ದು, ಅದರ ಮೇಲೆ ಚೌಕ, ವೃತ್ತಾಕಾರದ ನಾಲ್ಕು ಕಂಬಗಳಿವೆ. ಇವುಗಳನ್ನು ಗಂಟೆ, ಮಾಲೆಗಳಿಂದ ಅಲಂಕರಿಸಲಾಗಿದೆ. ಇಲ್ಲಿನ ಭುವನೇಶ್ವರಿಯಲ್ಲಿ ಅರಳಿದ ಬಹು ದಳಗಳ ತಾವರೆ ಇದೆ. ಇಲ್ಲಿನ ಬೋದಿಗೆ ಮತ್ತು ತೊಲೆಗಳನ್ನು ವಿವಿಧ ಶಿಲ್ಪಗಳಿಂದ ಅಲಂಕರಿಸಲಾಗಿದೆ. ಧಾಜಿಗ್ಯಾ, ಪು. ೧೦೦೬-೦೭.

ನವರಂಗದ ಒಳಭಾಗದ ಭಿತ್ತಿಯಲ್ಲಿನ ಗೋಡೆಕಂಬಗಳು ಹೆಚ್ಚು ಹೊರ ಬಂದಿರುವುದರಿಂದ ಪ್ರತಿಭಾಗದಲ್ಲೂ ಗೂಡುಗಳು ನಿರ್ಮಾಣವಾಗಿವೆ. ವಾಯುವ್ಯ ಭಾಗದ ಗೂಡಿನಲ್ಲಿ ಸಪ್ತಮಾತೃಕೆಯರು ಮತ್ತು ದಕ್ಷಿಣ ಭಾಗದ ಗೂಡಿನಲ್ಲಿ ಗಣೇಶನ ಶಿಲ್ಪಗಳನ್ನಿಡಲಾಗಿದೆ. ನವರಂಗವನ್ನು ಪ್ರವೇಶಿಸಲು ದಕ್ಷಿಣ ಹಾಗೂ ಪೂರ್ವದಲ್ಲಿ ಪ್ರವೇಶ ದ್ವಾರಗಳಿದ್ದು, ಅವು ನನ್ನೇಶ್ವರ ದೇವಾಯದ ದ್ವಾರಗಳಂತೆ ಅಲಂಕೃತವಾಗಿವೆ. ದಕ್ಷಿಣ ದ್ವಾರದ ಲಲಾಟದ ಮೇಲಿನ ಭಗದಲ್ಲಿ ಏಕದಶರುದ್ರ, ಅದರ ಮೇಲೆ ಶಿವನ ಶಿಲ್ಪಗಳಿದ್ದು ನಯನಮನೋಹರವಾಗಿದೆ. ಕಾಶಿವಿಶ್ವನಾಥ ದೇವಾಲಯದ ಎದುರು ಭಾಗದಲ್ಲಿ ಸೂರ್ಯನಾರಾಯಣ ದೇವಾಲಯವಿದೆ. ಗರ್ಭಗೃಹ, ಅಂತರಾಳ ಮತ್ತು ಹಾಳಾದ ನವರಂಗಗಳಿವೆ. ಗರ್ಭಗೃಹ ಚೌಕಾಕಾರವಾಗಿದ್ದು, ಅದರಲ್ಲಿ ಸ್ಥಾನಿಕ ಸೂರ್ಯನ ಶಿಲ್ಪವಿದೆ. ಇದರ ಬಾಗಿಲವಾಡವು ವಜ್ರ, ಲತಾ, ಮಿಥುನ, ಸ್ತಂಭ ಪುಷ್ಪ ಶಾಖೆಗಳಿಂದ ಅಲಂಕೃತವಾಗಿದೆ. ಇದರ ಕೆಳಭಾಗದಲ್ಲಿ ಚಾಮರಧಾರಣಿಯರಿದ್ದಾರೆ. ಲಲಾಟದಲ್ಲಿ ಗಜಲಕ್ಷ್ಮಿ, ಕಪೋತ ಹಾಗೂ ಅದರ ಮೇಲೆ ಸೂರ್ಯನ ಶಿಲ್ಪವಿದೆ. ಈ ಶಿಲ್ಪದ ಪೀಠಭಾಗದಲ್ಲಿ ಉಷೆ ಮತ್ತು ಪ್ರತ್ಯುಷೆಯರನ್ನು ಕೆತ್ತಲಾಗದೆ. ತೆರೆದ ಅಂತರಾಳವು ಸರಳವಾಗಿದೆ. ಇದರ ಮುಂದಿನ ನವರಂಗವು ಹಾಳಾಗಿದೆ.

ಈ ದೇವಾಲಯದ ಆಧಿಷ್ಠಾನವು ಉಪಾನ, ಪದ್ಮ ಮತ್ತು ಕುಮುದಗಳಿಂದ ಅಲಂಕೃತವಾಗಿದೆ. ಇದರ ಮೇಲಿನ ಭಿತ್ತಿಯಲ್ಲಿ ದೇವಕೋಷ್ಠಗಳು, ಅರೆಗಂಭಗಳು, ಶಿಖರದ ಮಾದರಿಗಳು ಮತ್ತು ಕಪೋತ ಅಲಂಕಾರವಿದೆ. ಮೂರು ಹಂತಗಳ ಶಾಲಾ ಕೂರ, ಪಂಚರವಿದ್ದು, ಮೇಲೆ ಶಿಖರವಿಲ್ಲ ಸುಖಾನಾಸಿ ಇದೆ. ಗುಡಿಯನ್ನು ಪ್ರವೇಶಿಸಲು ದಕ್ಷಿಣ ಮತ್ತು ಉತ್ತರ ಭಾಗದಿಂದ ಮೆಟ್ಟಲುಗಳಿವೆ.

ದೇವಾಲಯದ ಸಮೀಪವಿರುವ ಶಾಸನವು ಕಲ್ಯಾಣ ಚಾಲುಕ್ಯ ಅರಸ ಆರನೇ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ್ದು, ಲೊಕ್ಕಿಗುಂಡಿ ಮತ್ತು ಮಹಾಜನರನ್ನು ಕುರಿತು ಉಲ್ಲೇಖಿಸಿದೆ (ಧಾ.ಜಿ.ಶಾ.ಸೂ, ಸಂ.ಗ. ೧’೩೮; ಪು. ೧೨, SII, XI, pt. II, No.202). ಗುಡಿಯ ತೊಲೆಯ ಮೇಲಿನ ಮೂರನೇ ತೈಲನ ಕ್ರಿ.ಶ. ೧೧೫೨ರ ಶಾಸನ (ಧಾ.ಜಿ.ಶಾ.ಸೂ, ಸಂ.ಗ. ೧೪೨; ಪು. ೧೨, SII, XV, No. 48) ತ್ರಿಭುವನ ಕೇಶವದೇವಾದಿಗಳಿಂದ ಕವಿತಾಳೇಶ್ವರ ದೇವರಿಗೆ ಭೂಮಿ ಮತ್ತು ಸುವರ್ಣಗಳನ್ನು ದಾನ ನೀಡಿದ ವಿಷಯವನ್ನು ತಿಳಿಸುತ್ತದೆ. ಅದೇ ಕಲ್ಲಿನಲ್ಲಿರುವ ಅದೇ ಅರಸನ ಕ್ರಿ.ಶ. ೧೧೫೩ರ ಶಾಸನ ಕಾಳಯ ನಾಯಕನು (ಧಾ.ಜಿ.ಶಾ.ಸೂ, ಸಂ.ಗ. ೧೪೩ ಪು. ೧೨) ಅನ್ನಸತ್ರಕ್ಕಾಗಿ ಮೋನಿದೇವನಿಗೆ ದಾನ ನೀಡಿದ ವಿವರಗಳಿವೆ. ಗುಡಿಯ ವೇದಿಕೆಯಲ್ಲಿರುವ ಕಲಚುರಿ ಬಿಜ್ಜಳನ ಕಾಲದ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೪೪; ಪು. ೧೨, SII, XI, pt. II, No. 109) ಮಹಾದೇವನಾಯಕನನ್ನು ಉಲ್ಲೇಖಿಸುತ್ತದೆ. ಇಲ್ಲಿ ಇನ್ನೊಂದು ಶಾಸನ ಕಲ್ಯಾಣ ಚಾಲುಕ್ಯ ಅರಸ ನಾಲ್ಕನೇ ಸೋಮೇಶ್ವರನ ಕ್ರಿ.ಶ. ೧೧೮೪ರ ಕಾಲದ್ದಾಗಿದ್ದು (ಧಾ.ಜಿ.ಶಾ.ಸೂ, ಸಂ.ಗ. ೧೫೦; ಪು. ೧೩, SII, XV, No. 61) ಸಾಸಿರ್ವರ ಸನ್ನಿಧಿಯಲ್ಲಿ ಆಯಿಚಿಸೆಟ್ಟಿ ಯಾದಿಗಳಿಂದ ಸುವರ್ಣ ದಾನವನ್ನು ಕುರಿತು ಹೇಳುತ್ತದೆ. ಇಲ್ಲಿರುವ ಮತ್ತೊಂದು ಶಾಸನ ಹೊಯ್ಸಳ ಅರಸ ಎರಡನೆ ಬಲ್ಲಾಳನ (ಕ್ರಿ.ಶ. ೧೨೦೨) ಕಾಲದ್ದಾಗಿದೆ. (ಧಾ.ಜಿ.ಶಾಸ.ಸೂ, ಸಂ. ಗ. ೧೬೪; ಪು. ೧೩, SII, XV, No. 222) ನೀಡಿದ ಮಧುಸೂದನ ದೇವರಪೂಜೆಗೆ ಸುವರ್ಣದಾನ ಮಾಹಿತಿ ಒದಗಿಸುತ್ತದೆ. ಯಾದವ ಸಿಂಘಣನ ಕ್ರಿ.ಶ. ೧೨೨೩ರ ಶಾಸನ (ಧಾ.ಜಿ.ಶಾ.ಸೂ, ಸಂ.ಗ. ೧೬೫; ಪು. ೧೩, SII, XV, No. 167) ಪ್ರಿತಿಷ್ಠಿತ ವ್ಯಾಪಾರಿಗಳು ಮಧುಸೂದನ ದೇವರಿಗೆ ಸುವರ್ಣದಾನ ನೀಡಿದರೆಂದು ದಾಖಲಿಸಿದೆ.

೫೦

ಊರು ಲಕ್ಕುಂಡಿ
ಸ್ಮಾರಕ ಕುಂಬಾರೇಶ್ವರ
ಸ್ಥಳ ಊರಿನ ಪೂರ್ವಕ್ಕೆ
ಕಾಲ ಕ್ರಿ.ಶ. ೧೧ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ದಕ್ಷಿಣ
ಸ್ಥಿತಿ ಉತ್ತಮ
ಸಂರಕ್ಷಣೆ ಭಾ.ಪು.ಇ.

ಇದು ಮೂರು ಗರ್ಭಗೃಹ, ಮೂರು ಅಂತರಾಳ ಹಾಗೂ ನವರಂಗಗಳನ್ನೊಳಗೊಂಡ ತ್ರಿಕೂಟ ದೇವಾಲಯವಾಗಿದೆ.

ಪಶ್ಚಿಮದಲ್ಲಿರುವ ಚೌಕಾಕಾರದ ಗರ್ಭಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗೃಹದ ಪಶ್ಚಿಮ, ದಕ್ಷಿಣ ಹಾಗೂ ಉತ್ತರದ ಒಳ ಭಿತ್ತಿಯಲ್ಲಿ ದೇವಕೋಷ್ಠಗಳಿವೆ. ಇದರ ಛತ್ತಿನಲ್ಲಿ ಬಹುದಳದ ಕಮಲವಿದೆ. ಗರ್ಭಗೃಹದ ದ್ವಾರವು ವಜ್ರ, ಸ್ತಂಭ, ಲತಾ ಮತ್ತು ಬಳ್ಳಿ ಶಾಖೆಗಳಿಂದ ಅಲಂಕೃತವಾಗಿದೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ಇದರ ದಕ್ಷಿಣ ಮತ್ತು ಉತ್ತರದ ಭಿತ್ತಿಗಳಲ್ಲಿ ಚೌಕಾಕಾರದ ಜಾಲಾಂಧ್ರಗಳಿವೆ.

ಉತ್ತರ ಹಾಗೂ ಪೂರ್ವದ ಗರ್ಭಗೃಹ ಮತ್ತು ಅಂತರಾಳಗಳು ಪಶ್ಚಿಮದ ಗರ್ಭಗೃಹದಂತೆ ಮತ್ತು ಅಂತರಾಳಗಳ ರೀತಿಯಲ್ಲಿ ಅಲಂಕೃತವಾಗಿವೆ. ಉತ್ತರ ಗರ್ಭಗೃಹದ ಲಲಾಟದಲ್ಲಿ ನರಸಿಂಹ ಹಾಗೂ ಭೂವರಾಹನ ಶಿಲ್ಪವಿದೆ. ಅದೇ ರೀತಿ ಪೂರ್ವದ ಗರ್ಭಗುಡಿಯ ಲಲಾಟದಲ್ಲಿ ನಾಟ್ಯಶಿವ ಮತ್ತು ಚಾಮುಂಡಿಯರ ಶಿಲ್ಪಗಳಿವೆ. ಈ ಮೂರು ಗರ್ಭಗೃಹಗಳ ಪ್ರವೇಶದ್ವಾರದಲ್ಲಿ ಚಂದ್ರಶಿಲೆಗಳಿವೆ. (ಧಾ.ಜಿ.ಗ್ಯಾ. ಪು. ೧೦೦೬-೧೦೦೭).

ಮೇಲಿನ ಮೂರು ಗರ್ಭಗೃಹ ಮತ್ತು ಅಂತರಾಳಗಳಿಗೆ ಹೊಂದಿಕೊಂಡಂತೆ ನವರಂಗವಿದೆ. ಇದರಲ್ಲಿ ಚೌಕ ಮತ್ತು ಗಂಟೆಯಾಕಾರದ ನಾಲ್ಕು ಕಂಬಗಳಿದ್ದು, ಇದರ ಛತ್ತಿನಲ್ಲಿ ಅರಳಿದ ಕಮಲವಿದೆ. ನರಂಗದ ಪ್ರವೇಶದ್ವಾರವು ದಕ್ಷಿಣಕ್ಕಿದೆ. ಇದರ ಬಾಗಿಲುವಾಡವು ಸರಳವಾದ ಐದು ಶಾಖೆಗಳಿಂದ ಕೂಡಿದೆ. ದೇವಾಲಯದ ಆಧಿಷ್ಠಾನವು ಉಪಾನ, ಪದ್ಮ, ಕುಮುದ ಮತ್ತು ಕಪೋತಗಳಿಂದ ಕೂಡಿದೆ. ಅಧಿಷ್ಠಾನದ ಮೇಲಿನ ಮತ್ತು ಅರೆಗಂಭಗಳು, ಶಿಖರ ಸರ್ವಗೋರಣಯುಕ್ತ, ಸಿಂಹಲಲಾಟ, ಕುಂಭಪಂಜರಗಳು ಮತ್ತು ದೇವಕೋಷ್ಠಗಳಿಂದ ಅಲಂಕೃತವಾಗಿವೆ. ಗರ್ಭಗೃಹಗಳ ಹೊರಭಾಗದ ಮಧ್ಯದ ಭಿತ್ತಿಗಳಲ್ಲಿ ತಲಾ ಮೂರು ಅರೆಗಂಭಗಳ ಮಧ್ಯದಲ್ಲಿ ದೇವಕೋಷ್ಠಗಳಿದ್ದು ಅವುಗಳ ಮೇಲಿನ ಭಾಗವನ್ನು ಕಪೋತ, ಶಿಖರದ ಮಾದರಿಗಳಿಂದ ಅಲಂಕರಿಸಲಾಗಿದೆ. ಈ ಶಿಖರಗಳಲ್ಲಿ ಶಾಲಾ, ಕೂಟ, ಪಮಚರಗಳ ಕೆತ್ತನೆಯನ್ನು ತುಂಬ ನಯವಾಗಿ ಮಾಡಿರುವುದನ್ನು ಗಮನಿಸಬಹುದು. ಪೂರ್ವದ ಗರ್ಭಗೃಹದ ಜಲಹರಿಯು ಉತ್ತರಕ್ಕಿದೆ. ಅದೇ ರೀತಿ ಉತ್ತರದ ಗರ್ಭಗೃಹದ ಜಲಹರಿ ಪೂರ್ವಕ್ಕೆ ಹಾಗೂ ಪಶ್ಚಿಮದ ಗರ್ಭಗೃಹದ ಜಲಹರಿ ಉತ್ತರ ದಿಕ್ಕುಗಳಿವೆ. ಪ್ರಸ್ತುತ ಕೇಂದ್ರ ಪುರಾತತ್ವ ಇಲಾಖೆಯು ಭಿತ್ತಿಯ ಮೇಲಿನ ಭಾಗದ ಜೀರ್ಣೋದ್ಧಾರ ಕಾರ್ಯ ನಡೆಸುತ್ತಿದೆ.