೫೧

ಊರು ಲಕ್ಕುಂಡಿ
ಸ್ಮಾರಕ ಮಲ್ಲಿಕಾರ್ಜುನ
ಸ್ಥಳ ಊರಿನ ವಾಯುವ್ಯ ದಿಕ್ಕಿಗೆ
ಕಾಲ ಕ್ರಿ.ಶ. ೧೧ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ

ಈ ದೇವಾಲಯ ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖ ಮಂಟಪಗಳನ್ನೊಳಗೊಂಡಿದೆ.

ಗರ್ಭಗೃಹದಲ್ಲಿ ಚೌಕಾಕಾರದ ಶಿವಲಿಂಗವಿದೆ. ಇದರ ಉತ್ತರದ ಗೋಡೆಯಲ್ಲಿ ಕಪಾಟು ಇದ್ದು, ಛತ್ತು ಸರಳವಾಗಿದೆ. ಗರ್ಭಗೃಹದ ಬಾಗಿಲುವಾಡವು ಸರಳವಾದ ಐದು ಶಾಖೆಗಳಿಂದ ಕೂಡಿದ್ದು, ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ತೆರೆದ ಅಂತರಾಳದಲ್ಲಿ ನಂದಿಯ ವಿಗ್ರಹವಿದೆ.

ಅಂತರಾಳಕ್ಕೆ ಹೊಂದಿದಂತೆ ಚೌಕಾಕಾರದ ನವರಂಗವಿದ್ದು, ಅದರಲ್ಲಿ ನಾಲ್ಕು ಕಂಬಗಳಿವೆ. ಇದರ ಛತ್ತಿನಲ್ಲಿ ಬಹುದಳದ ಕಮಲ ಪುಷ್ಪವಿದೆ. ನವರಂಗವನ್ನು ಪ್ರವೇಶಿಸಲು ದಕ್ಷಿಣ ಹಾಗೂ ಪೂರ್ವದಲ್ಲಿ ಪ್ರವೇಶ ದ್ವಾರಗಳಿದ್ದು, ಅವು ಗರ್ಭಗೃಹ ದ್ವಾರದ ರೀತಿಯಲ್ಲಿವೆ. (ಧಾ.ಜಿ.ಗ್ಯಾ ಪು. ೧೦೦೭-೧೦೦೮).

ನವರಂಗದ ಮುಂಭಾಗದಲ್ಲಿ ಮುಖಮಂಟಪವಿದ್ದು, ಅದರಲ್ಲಿ ನವರಂಗದ ರೀತಿಯ ನಾಲ್ಕು ಅಲಂಕೃತ ಕಂಬಗಳಿವೆ. ಇದರ ಛತ್ತನ್ನು ಅತ್ಯಂತ ಸೂಕ್ಷ್ಮವಾಗಿ ವೃತ್ತಾಕಾರವಾಗಿ ಮಾಡಿ ಅದರಲ್ಲಿ ನಯವಾದ ಕುಸುರಿ ಕೆಲಸ ಮಾಡಲಾಗಿದೆ. ಮುಖಮಂಟಪದಲ್ಲಿ ಶಾಸನವಿದೆ.

ಈ ದೇವಾಲಯದ ಅಧಿಷ್ಠಾನವು ಉಪಾನ, ಪದ್ಮ, ತ್ರಿಪಟ್ಟಕುಮುದ, ಸ್ವಲ್ಪ ಹೊರಚಾಚಿದ ಕಪೋತಗಳಿಂದ ಅಲಂಕೃತವಾಗಿದೆ. ಅಧಿಷ್ಠಾನದ ಮೇಲಿನ ಭಿತ್ತಿಯಲ್ಲಿ ಅರೆಗಂಭ ಹಾಗೂ ಕುಂಭಪಂಜರುಗಳ ಅಲಂಕಾರವಿದೆ. ಮುಖಮಂಟಪದ ಉತ್ತರ ಹಾಗೂ    ದಕ್ಷಿಣ ದಿಕ್ಕಿನಲ್ಲಿ ಪ್ರವೇಶ ದ್ವಾರಗಳಿವೆ. ದೇವಾಲಯಕ್ಕೆ ಶಿಖರವಿಲ್ಲ. ಗುಡಿ ಗೋಡೆಯಲ್ಲಿರುವ ಕ್ರಿ.ಶ. ೧೦೭೬ರ ಶಾಸನವು (ಧಾ.ಜಿ.ಸಾ.ಸೂ, ಸಂ.ಗ. ೧೩೬; ಪು. ೧೨, SII, XV, No. 533) ದೇವೇಂದ್ರ ಪಂಡಿತರ ಶಿಷ್ಯನಿಂದ ಕಲಿದೇವಸ್ವಾಮಿಗೆ ಸುವರ್ಣದಾನ ನೀಡಿದನೆಂದು ದಾಖಲಿಸಿದೆ.

ಗುಡಿಯ ಕಂಬದಲ್ಲಿರುವ ಕ್ರಿ.ಶ. ೧೧೦೪ರ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೩೯; ಪು. ೧೨, XII, XI, pt. II, No. 187) ಸಂಕಿಮಯ್ಯನಾರಕನು ಹನ್ನೆರಡು ಜನರಿಗೆ ವಸ್ತ್ರವನ್ನು ದಾನ ಮಾಡಿದನೆಂದು ತಿಳಿಸುತ್ತದೆ.

ಇಲ್ಲಿಯ ಇನ್ನೊಂದು ಶಾಸನವು ಕಲ್ಯಾಣ ಚಾಲುಕ್ಯ ಅರಸ ಎರಡನೇ ಜಗದೇಕಮಲ್ಲನ ಕ್ರಿ.ಶ. ೧೧೪೦ರ ಕಾಲಕ್ಕೆ ಸೇರಿದೆ (ಧಾ.ಜಿ.ಶಾ.ಸೂ, ಸಂ.ಗ. ೧೪೧; ಪು. ೧೨, SII, XV, No. 21). ಅದು ಗ್ರಾಮದ ಹೆಗ್ಗಡೆಯು ಸುವರ್ಣದಾನ ನೀಡಿದನೆಂದು ದಾಖಲಿಸಿದೆ.

೫೨

ಊರು ಲಕ್ಕುಂಡಿ
ಸ್ಮಾರಕ ವಿರೂಪಾಕ್ಷ
ಸ್ಥಳ ಊರಿನ ಮಧ್ಯೆ
ಕಾಲ ಕ್ರಿ.ಶ. ೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನೊಳಗೊಂಡಿದೆ. ಚೌಕಾಕಾರದ ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಇದರ ಪಶ್ಚಿಮ, ದಕ್ಷಿಣ ಮತ್ತು ಉತ್ರದ ಒಳ ಭಿತ್ತಿಯ ಆಯತಾಕಾರದ ಗೂಡುಗಳಿವೆ. ಛತ್ತಿನಲ್ಲಿ ಬಹುದಳದ ಕಮಲವಿದೆ. ಮೂಲಲಿಂಗದ ಪೀಠದಲ್ಲಿದ್ದ ಸಪ್ತ ಆಶ್ವಗಳನ್ನು ತೆಗೆದು ಅದರ ಮಧ್ಯದಲ್ಲಿ ಉದ್ದನೆಯ ಕಲ್ಲನ್ನಿಟ್ಟು ಸ್ಥಳೀಯರು ವಿರೂಪಾಕ್ಷನೆಂದು ಕರೆದು ಪೂಜಿಸುತ್ತಿದ್ದಾರೆ. ಇದರಿಂದ ಈ ದೇವಾಲಯ ಮೂಲದಲ್ಲಿ ಸೂರ್ಯನಿಗೆ ಸೇರಿದ್ದೆಂದು ಗುರುತಿಸಬಹುದು.

ಅಂತರಾಳದಲ್ಲಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದರ ಛತ್ತಿನಲ್ಲಿ ಬಹುದಳದ ಪದ್ಮವಿದೆ. ಅಂತರಾಳದ ಮುಂಭಾಗದಲ್ಲಿರುವ ಕಂಬಗಳ ಮೇಲೆ ಲತಾತೋರಣ ಮತ್ತು ಸರ್ಪತೋರಣಗಳ ವಿಶೇಷ ಅಲಂಕಾರವಿದೆ. ಸರ್ಪತೋರಣದ ಮಧ್ಯದಲ್ಲಿ ಸೂರ್ಯನ ಶಿಲ್ಪವಿದ್ದು, ಆಕರ್ಷಣೀಯವಾಗಿದೆ.

ನವರಂಗವು ಚೌಕಾಕಾರವಾಗಿದ್ದು, ಅದರ ಮಧ್ಯದಲ್ಲಿ ಚೌಕಾಕಾರದ ಕಟ್ಟೆಯ ಮೇಲೆ ನಾಲ್ಕು ಕಂಬಗಳಿವೆ. ಇವುಗಳು ಚೌಕ, ವೃತ್ತ, ಅಷ್ಟಕೋನಾಕಾರದಲ್ಲಿದ್ದು ಸರಳವಾಗಿವೆ. ನವರಂಗದ ಛತ್ತಿನಲ್ಲಿ ಬಹುದಳದ ಕಮಲ ಪುಷ್ಟವಿದೆ. ಇದರ ಪ್ರವೇಶ ದ್ವಾರವು ಸರಳವಾಗಿದೆ.

ಗುಡಿಯ ಅಧಿಷ್ಠಾನವು ಉಪಾನ, ಪದ್ಮ, ತ್ರಿಪಟ್ಟ ಕುಮುದ ಮತ್ತು ಅಧೋ ಪದ್ಮಗಳಿಂದ ಅಲಂಕೃತವಾಗಿದೆ. ಅರೆಗಂಬಗಳು ಮತ್ತು ಶಿಖರದ ಮಾದರಿಗಳಿಂದ ಭಿತ್ತಿಯ ಭಾಗಗಳನ್ನು ಅಲಂಕರಿಸಲಾಗಿದೆ. ಭಿತ್ತಿಯ ಮೇಲಿನ ಕಪೋತ ಭಾಗದಲ್ಲಿ ಮಳೆನೀರು ಕೆಳಗೆ ಬೀಳಲು ‘ಹರಿನಾಲಿಗೆ’ಯನ್ನು ಮಾಡಲಾಗಿದೆ.

ಈ ದೇವಾಲಯದ ಸಮೀಪದಲ್ಲಿಯೇ ಸಿದ್ದೇಶ್ವರ ದೇವಾಲಯವಿದ್ದು, ಅದರಲ್ಲಿ ಗರ್ಭಗೃಹ ಹೊರತುಪಡಿಸಿ ಎಲ್ಲಾ ಮೂಲ ಭಾಗಗಳು ನಾಶವಾಗಿವೆ. ಗರ್ಭಗೃಹವು ಚೌಕಾಕಾರವಾಗಿದ್ದು, ಅದರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಇದರ ಮುಚ್ಚಿಗೆಯಲ್ಲಿ ವೃತ್ತಕಾರದ ತಾವರೆಯ ಅಲಂಕಾರವಿದೆ. ಬಾಗಿಲುವಾಡವು ಐದು ಶಾಖೆಗಳಿಂದ ಕೂಡಿದ್ದು, ಸ್ತಂಭಶಾಖೆ ಹೊರತುಪಡಿಸಿ ಉಳಿದ ಶಾಖೆಗಳು ಸರಳವಾಗಿವೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ.

ಗುಡಿಯ ಅಧಿಷ್ಠಾನದಲ್ಲಿ ಉಪಾನ ಮತ್ತು ಪದ್ಮಗಳಿವೆ. ಅಧಿಷ್ಠಾನದ ಮೇಲಿನ ಭಿತ್ತಿಯಲ್ಲಿ ಕಪೋತ ಮತ್ತು ಹೊರಚಾಚಿದ ಭಾಗಗಳು ಇವೆ. ಈ ದೇವಾಲಯದ ಮುಂಭಾಗದಲ್ಲಿ ದೇವಿ ಪೀಠದ ಮೇಲೆ ಗಣೇಶನ ಮೂರ್ತಿ ಇಡಲಾಗಿದೆ. ಕೆಲವು ದೇವತೆಗಳ ಮೂರ್ತಿಶಿಲ್ಪ ಹಾಗೂ ನಾಗರ ಕಲ್ಲುಗಳಿವೆ.

೫೩

ಊರು ಲಕ್ಕುಂಡಿ
ಸ್ಮಾರಕ ವೀರಭದ್ರ
ಸ್ಥಳ ಊರಿನ ಈಶಾನ್ಯ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ

ಎರಡು ಗರ್ಭಗೃಹ, ಅಂತರಾಳ, ನವರಂಗ ಹಾಗೂ ತೆರೆದ ಮುಖಮಂಟಪಗಳ ದ್ವಿಕೂಟ ದೇವಾಲಯ ಇದಾಗಿದೆ. ಉತ್ತರದ ಗರ್ಭಗೃಹ ಚೌಕಾಕಾರವಾಗಿದ್ದು ಅದರಲ್ಲಿ ವೀರಭದ್ರನ ಮೂರ್ತಿ ಇದೆ. ಇದರ ಉತ್ತರದ ಗೋಡೆಯಲ್ಲಿ ಶಿಲ್ಪ ಛತ್ತಿನಲ್ಲಿ ವೃತ್ತಾಕಾರದ ಕಮಲವಿದೆ. ಈ ಗರ್ಭಗೃಹದ ಪ್ರವೇಶ ದ್ವಾರವು ವಿವಿಧ ಸರಳ ಶಾಖೆಗಳಿಂದ ಕೂಡಿದ್ದು, ಅದರ ಲಲಾಟ ಭಾಗವು ಸರಳವಾಗಿದೆ.

ಅಂತರಾಳವು ಸರಳವಾಗಿದ್ದು, ಅದರ ಛತ್ತಿನಲ್ಲಿ ಕೇವಲ ವೃತ್ತಾಕಾರ ಭಾಗವಿದೆ. ಇದರ ಬಾಗಿಲವಾಡದಲ್ಲಿ ವಜ್ರಶಾಖೆ, ಅದರ ಪಕ್ಕ ಜಾಲಾಂಧ್ರವಿದೆ. ದಕ್ಷಿಣ ಭಾಗದ ಗರ್ಭಗೃಹ ಚೌಕಾಕಾರವಾಗಿದ್ದು, ಅದರಲ್ಲಿ ಲಿಂಗವಿದೆ. ಇದರ ಛತ್ತಿನಲ್ಲಿ ವೃತ್ತಾಕಾರದ ಕಮಲದ ಅಲಂಕಾರವಿದೆ. ಇದರ ಬಾಗಿಲುವಾಡವು ಪಟ್ಟಿಕೆ ಮತ್ತು ಸರಳವಾದ ಲಲಾಟದಿಂದ ಕೂಡಿದೆ. ಇದರ ಮುಂದಿರುವ ಅಂತರಾಳವು ಚೌಕಾಕಾರವಾಗಿದ್ದು ಇಲ್ಲಿ ನಂದಿಯನ್ನುಪ್ರತಿಷ್ಠಾಪಿಸಲಾಗಿದೆ. ಇದರ ಛತ್ತಿನಲ್ಲಿ ವೃತ್ತಾಕಾರದ ಕಮಲದ ಅಲಂಕಾರವಿದೆ. ಅಂತರಾಳದ ಬಾಗಿಲುವಾಡದಲ್ಲಿ ವಜ್ರಶಾಖೆ ಮಾತ್ರವಿದೆ. ಲಲಾಟವು ಸರಳವಾಗಿದೆ. ಬಾಗಿಲುವಾಡದ ಎರಡೂ ಕಡೆ ಚೌಕಾಕಾರದ ಜಾಲಾಂಧ್ರಗಳಿವೆ.

ಮೇಲಿನ ಎರಡೂ ಗರ್ಭಗೃಹ ಮತ್ತು ಅಂತರಾಳಗಳಿಗೆ ಹೊಂದಿಕೊಂಡಂತೆ ನವರಂಗವಿದೆ. ನವರಂಗದ ಮಧ್ಯದಲ್ಲಿ ಸ್ವಲ್ಪ ಎತ್ತರವಾದ ಕಟ್ಟೆಯ ಮೇಲೆ ಕಲ್ಯಾಣ ಚಾಲುಕ್ಯ ಶೈಲಿಯ ನಾಲ್ಕು ಅಲಂಕೃತ ಕಂಬಗಳಿವೆ. ಇದರ ಛತ್ತಿನಲ್ಲಿ ಬಹು ದಳಗಳ ತಾವರೆಯ ಅಲಂಕಾರವಿದೆ. ದೇವಾಲಯದ ನೇಲಕ್ಕೆ ಶಾಬಾದಿ ಶಿಲೆಯನ್ನು ಹಾಸಿದ್ದಾರೆ. ಇದರಿಂದ ಮೂಲ ಭಾಗಗಳು ಗೋಚರಿಸುತ್ತಿಲ್ಲ. ನವರಂಗವನ್ನು ಪ್ರವೇಶಿಸಲು ಪೂರ್ವಭಾಗದಲ್ಲಿ ಎರಡು ದ್ವಾರಗಳಿವೆ. ನವರಂಗದ ಮುಂಭಾಗದಲ್ಲಿ ಆರು ಕಂಬಗಳಿರುವ ಮುಖ ಮಂಟಪವಿದೆ.

ದೇವಾಲಯದ ಅಧಿಷ್ಠಾನದ ಮೇಲಿನ ಭಿತ್ತಿಯನ್ನು ಹೊಸದಾಗಿ ಸೈಜುಗಲ್ಲಿನಿಂದ ನಿರ್ಮಿಸಿರುವುದರಿಂದ ಮೂಲ ಅಲಂಕಾರವನ್ನು ಕುರಿತು ಹೇಳುವುದು ಕಷ್ಟಸಾಧ್ಯ.

ದೇವಾಲಯದ ಗೋಡೆಯಲ್ಲಿರುವ ಕಲಚುರಿ ಅರಸರ ಕಾಲದ (ಕ್ರಿ.ಶ. ೧೧೨೧) ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೪೦; ಪು. ೧೨, SII, XI, pt. II, No. 196) ನಾಣಿಮಯ್ಯನಾಯಕನು ಕೆರೆ ಮತ್ತು ಅರವಟಿಗೆಗಳಿಗೆ ದಾನ ನೀಡಿದನೆಂದು ಉಲ್ಲೇಖಿಸಿದೆ. ಕಲಚುರಿ ಸಂಕಮನ ಕ್ರಿ.ಶ. ೧೧೭೯ರ ಶಾಸನದಲ್ಲಿ (ಧಾ.ಜಿ.ಶಾ.ಸೂ, ಸಂ.ಗ. ೧೪೭; ಪು. ೧೩, SII, XV, No. 135) ನಾಲ್ಕನೆಯ ಸೋಮೇಶ್ವರ ಮತ್ತು ಶಿಲ್ಪಿಗಳು ಅಭಿನವ ಪ್ರಸನ್ನ ಕೇಶವ ದೇವರಿಗೆ ದಾನ ನೀಡಿದ ವಿವರಗಳಿವೆ. ಇಲ್ಲಿಯ ಇನ್ನೊಂದು ಶಾಸನವು ಕಲ್ಯಾಣ ಚಾಲುಕ್ಯ ಅರಸ ನಾಲ್ಕನೇ ಸೋಮೇಶ್ವರನ ಕ್ರಿ.ಶ. ೧೧೮೪-೮೫ರ ಕಾಲಕ್ಕೆ ಸೇರಿದೆ (ಧಾ.ಜಿ.ಶಾ.ಸೂ, ಸಂ.ಗ. ೧೫೨, SII, XV, No. 63) ಅದು ಪ್ರಸನ್ನ ಕೇಶವ ದೇವರಿಗೆ ಹಣವನ್ನು ದಾನ ನೀಡಿದ ವಿಷಯ ತಿಳಿಸುತ್ತದೆ.

೫೪

ಊರು ಲಕ್ಕುಂಡಿ
ಸ್ಮಾರಕ ಬ್ರಹ್ಮ ಜಿನಾಲಯ
ಸ್ಥಳ ಊರಿನ ಪೂರ್ವಕ್ಕೆ
ಕಾಲ ಕ್ರಿ.ಶ. ೧೧೦-೧೨ನೇ ಶತಮಾನ)
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ ಭಾ.ಪು.ಇ

ದೇವಾಲಯದಲ್ಲಿ ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮುಖಮಂಟಪಗಳಿವೆ. ಗರ್ಭಗೃಹ ಚೌಕಾಕಾರವಾಗಿದೆ. ಇದರ ಛತ್ತಿನಲ್ಲಿ ವೃತ್ತಕಾರದ ತಾವರೆಯ ಅಲಂಕಾರವಿದೆ. ಇದರ ಬಾಗಿಲವಾಡವು ಐದು ಶಾಖೆಗಳಿಂದ ಕೂಡಿದ್ದು, ಲತಾ ಸುರುಳಿಯೊಳಗೆ ವಾದ್ಯದವರ ಮತ್ತು ಯಾಳಿಗಳಿರುವ ಶಾಖೆಗಳು ಹೆಚ್ಚು ಕಲಾತ್ಮಕವಾಗಿದೆ. ಲಲಾಟದಲ್ಲಿ ಮಹಾವೀರನ ಶಿಲ್ಪವಿದೆ. ಅದರ ಮೇಲಿನ ಭಾಗದಲ್ಲಿ ಪದ್ಮಾವತಿ ಮತ್ತು ಕದನಕ್ಕಿಳಿದ ಆನೆಗಳ ಶಿಲ್ಪಗಳಿವೆ. ದ್ವಾರದ ಪೇದ್ಯಾ ಭಾಗದಲ್ಲಿ ಚಾಮರಧಾಣಿಯರಿದ್ದಾರೆ. ಗರ್ಭಗೃಹದ ಮುಂಭಾಗದಲ್ಲಿ ತೆರೆ ಅಂತರಾಳವಿದೆ. ಇದರ ದಕ್ಷಿಣ ಭಾಗದ ಭಿತ್ತಿಯಲ್ಲಿ ಜಾಲಾಂಧ್ರವಿದೆ.

ನವರಂಗದಲ್ಲಿ ತಿರುಗಣಿ ಯಂತ್ರದಿಂದ ತಯಾರಿಸಿದ ಚೌಕ, ವೃತ್ತ, ಎಂಟು-ಹದಿನಾರು ಮುಖದ ನಾಲ್ಕು ಕಂಬಗಳಿವೆ. ನವರಂಗದ ಛತ್ತಿನಲ್ಲಿ ವೃತ್ತಾಕಾರದ ಬಹುದಳದ ತಾವರೆ ಇದೆ. ನವರಂಗದಲ್ಲಿ ಆಸೀನ ಪದ್ಮಾವತಿ ಮತ್ತು ಸ್ಥಾನಿಕ ಬ್ರಹ್ಮನ (?) ಮೂರ್ತಿಗಳಿವೆ. ಇದರ ಬಾಗಿಲುವಾಡವು ವಜ್ರ, ಅರೆಗಂಭ, ಲತಾ ಬಳ್ಳಿ ಶಾಖೆಗಳಿಂದ ಅಲಂಕೃತವಾಗಿದೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ನವರಂಗದ ಮುಂಭಾಗಕ್ಕೆ ನಾಲ್ಕು ಕಂಬಗಳ ತೆರೆದ ಮುಖಮಂಟಪವಿದೆ.

ದೇವಾಲಯದ ಅಧಿಷ್ಠಾನವು ಉಪಾನ, ಪದ್ಮ, ತ್ರಿಪಟ್ಟಕುಮುದ, ಕಪೋತ ಮತ್ತು ಅಧೋಪದ್ಮಗಳಿಂದ ಅಲಂಕೃತವಾಗಿದೆ. ಅಧಿಷ್ಠಾನದ ಮೇಲಿನ ಭಿತ್ತಿಯು ದೇವಕೋಷ್ಠಗಳಿಂದ ಅಲಂಕೃತವಾಗಿದೆ.

ಈ ಬಸದಿಯಲ್ಲಿರುವ ಕಲ್ಯಾಣ ಚಾಲುಕ್ಯ ಅರಸ ಇರಿವಬೆಡಂಗನ ಕ್ರಿ.ಶ. ೧೦೦೭ರ ಶಾಸನವು(ಧಾ.ಜಿ.ಶಾ.ಸೂ, ಸಂ.ಗ. ೧೩೨; ಪು. ೧೨, ಪು. ೧೨, SII, XI, pt. I, No. 52) ಅತ್ತಿಮಬ್ಬೆಯಿಂದ ಬ್ರಹ್ಮಜಿನಾಲಯದ ನಿರ್ಮಾಣ ಮತ್ತು ಅದಕ್ಕೆ ದಾನ ನೀಡಿದ ವಿವರಗಳನ್ನು ನೀಡುತ್ತದೆ (ಧಾಜಿಗ್ಯಾ, ಪು. ೧೦೦೪-೦೫). ಶಾಸನದಲ್ಲಿ ಅಜಿತಪುರಾಣದ ಎರಡು ಪದ್ಯಗಳು ಸಹ ಇದೆ. ಇದೇ ಶಾಸನದ ನಕಲು ಸಹ ಬಸದಿಯ ಆವರಣದಲ್ಲಿದೆ. (ಧಾ.ಜಿ.ಶಾ.ಸೂ, ಸಂ.ಗ. ೧೩೩; ಪು. ೧೨, SII, XI, pt. I, No. 53) ಬಸದಿಯ ಪ್ರವೇಶ ದ್ವಾರದ ಬಲಕಂಬದ ಮೇಲಿರುವ ಕಲಚುರಿ ಸೋವಿದೇವನ ಕ್ರಿ.ಶ. ೧೧೭೭ರ ಶಾಸನದಲ್ಲಿ (ಧಾ.ಜಿ.ಶಾ.ಸೂ, ಸಂ.ಗ. ೧೪೫; ಪು. ೧೨, SII, XV, No. 119) ಗುಣನಿಧಿ ಕೇಶವದೇವನು ಸುವರ್ಣದಾನವನ್ನು ಬಸದಿಗೆ ನೀಡಿದನೆಂದು ದಾಖಲಿಸಿದೆ. ಬಸದಿಯಲ್ಲಿ ನೇಮಿನಾಥನ ಪಾದಪೀಠದಲ್ಲಿರುವ, ಕ್ರಿ.ಶ. ಸುಮಾರ ೧೨ನೇ ಶತಮಾನದ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೬೩; ಪು. ೧೨, SII, XV, No. 556) ಮೂಲಸಂಘ, ದೇವಗಣದ ಶಂಖದೇವನು ವಿಗ್ರಹವನ್ನು ದಾನ ನೀಡಿದನೆಂದು ಉಲ್ಲೇಖಿಸಿದೆ.

೫೫

ಊರು ಲಕ್ಕುಂಡಿ
ಸ್ಮಾರಕ ಈಶ್ವರ
ಸ್ಥಳ ಬ್ರಹ್ಮ ಜಿನಾಲಯದ ಪಕ್ಕ
ಕಾಲ ಕ್ರಿ.ಶ. ೧೧೦೦
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ ಭಾ.ಪು.ಇ.

ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹ ಚೌಕಾಕಾರವಾಗಿದೆ. ತೆರೆದ ಮುಖಮಂಟಪದಲ್ಲಿ ಎರಡು ಕಂಬಗಳಿವೆ. ಇದರ ಛತ್ತಿನಲ್ಲಿ ವೃತ್ತಾಕಾರದ ತಾವರೆ ಇದೆ. ದೇವಾಲಯದ ಅಧಿಷ್ಠಾನವು ಉಪಾನ, ಪದ್ಮ, ತ್ರಿಪುಟ್ಟಕುಮುದ ಹಾಗೂ ಅಧೋಪದ್ಮಗಳಿಂದ ಅಲಂಕೃತವಾಗಿದೆ. ಅಧಿಷ್ಠಾನದ ಮೇಲಿನ ಭಿತ್ತಿಯು ಅರೆಗಂಬಗಳು ಮತ್ತು ಶಿಖರದ ಮಾದರಿಗಳಿಂದ ಕೂಡಿದೆ. (ಧಾ.ಜಿ.ಗ್ಯಾ, ಪು. ೧೦೦೫)

೫೬

ಊರು ಲಕ್ಕುಂಡಿ
ಸ್ಮಾರಕ ವೀರಭದ್ರ
ಸ್ಥಳ ಊರಿನ ವಾಯುವ್ಯಕ್ಕೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯದಲ್ಲಿ ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮುಖಮಂಟಪಗಳಿವೆ. ಗರ್ಭಗೃಹವು ಚೌಕಾಕಾರವಾಗಿದ್ದು ಅದರಲ್ಲಿ ಸಿಂಹಪೀಠವಿರುವ ಸಪ್ತಹೆಡೆಯ ನಾಗಶಿಲ್ಪವಿದೆ. ಇದರ ಮೇಲೆ ಮುಕ್ಕೊಡೆ ಇದ್ದು, ಪಕ್ಕದಲ್ಲಿ ಚಾಮರಧಾರರ ಶಿಲ್ಪಗಳಿವೆ. ಇಲ್ಲಿ ಲಿಂಗವಿಟ್ಟು ಪೂಜಿಸುತ್ತಿದ್ದಾರೆ. ಇದರ ಬಾಗಿಲುವಾಡವು ವಜ್ರ, ಲತಾ, ಸ್ತಂಭ, ಸಿಂಹ, ಪುಷ್ಟ, ಮುಕ್ಕೂಡೆಯ (ಕೆಳಗೆ) ಕುಳಿತ ಜಿನರ ಶಾಖೆಗಳಿಂದ ಅಲಂಕೃತವಾಗಿದೆ. ತೆರೆದ ಅಂತರಾಳವು ಸರಳವಾಗಿದೆ. ಅದರ ಛತ್ತಿನಲ್ಲಿ ಅರಳಿದ ತಾವರೆಯ ಅಲಂಕಾರವಿದೆ. ಅಂತರಾಳದ ಮುಂಭಾಗದಲ್ಲಿ ನವರಂಗವಿದೆ. ಇದರ ಮಧ್ಯಭಾಗದಲ್ಲಿ ಸ್ವಲ್ಪ ಎತ್ತರವಾದ ಕಟ್ಟೆ ಇದ್ದು, ಅದರಲ್ಲಿ ಚೌಕ, ವೃತ್ತಾಕಾರದ ನಾಲ್ಕು ಕಂಬಗಳಿವೆ. ನವರಂಗದ ದಕ್ಷಿಣದ ಭಿತ್ತಿಯಲ್ಲಿ ಸಣ್ಣ ಜಾಲಾಂಧ್ರವಿದೆ. ಇದರ ಬಾಗಿಲವಾಡವು ಐದು ಶಾಖೆಗಳಿಂದ ಕೂಡಿದೆ. ಇದರಲ್ಲಿ ಸ್ತಂಭ ಶಾಖೆ ಹೊರತುಪಡಿಸಿ ಉಳಿದ ಶಾಖೆಗಳು ಸರಳವಾಗಿವೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ನವರಂಗದ ಮುಂಭಾಗದಲ್ಲಿ ಮುಖಮಂಟಪವಿದ್ದು ಅದನ್ನು ಪ್ರವೇಶಿಸಲು ಪೂರ್ವ, ಉತ್ತರ ಮತ್ತು ದಕ್ಷಿಣದಲ್ಲಿ ದ್ವಾರಗಳಿವೆ.

ಈ ದೇವಾಲಯದ ಅಧಿಷ್ಠಾನವು ಉಪಾನ, ಪದ್ಮ ಮತ್ತು ತ್ರಿಪಟ್ಟ ಕುಮುದಗಳಿಂದ ಕೂಡಿದೆ. ಭಿತ್ತಿಯು ಶಿಖರದ ಮಾದರಿಗಳಿಂದ, ಅರೆಗಂಭಗಳಿಂದ ಅಲಂಕೃತೌಅಗಿದೆ.

ನವರಂಗದ ಉತ್ತರ ಭಾಗದಲ್ಲಿ ಶಾಸನವಿದೆ. ಅಲ್ಲದೆ ಈ ದೇವಾಲಯ ಸಮೀಪವೇ ಇಪ್ಪತ್ನಾಲ್ಕು ತೀರ್ಥಂಕರರ ಪೀಠವಿದೆ. (ಧಾ.ಜಿ.ಗ್ಯಾ. ಪು. ೧೦೦೬).

ನಾಗರೇಶ್ವರ ಗುಡಿ ಎದರು ಇರುವ ಕ್ರಿ.ಶ. ಸುಮಾರು ೧೨ನೇ ಶತಮಾನದ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೬೨; ಪು. ೧೩, SII, XV, No. 557) ವಸುಧೈಕಭಾಂದವ ಜಿನಾಲಯದ ತ್ರಿಭುವನತಿಲಕ ಶಾಂತಿನಾಥದೇವರಿಗೆ ದಾನ ಶಾಲೆಯ ನಿವೇಶನವನ್ನು ದಾನ ಮಾಡಿದ್ದನ್ನು ಹೇಳುತ್ತದೆ.

೫೭

ಊರು ಲಕ್ಕುಂಡಿ
ಸ್ಮಾರಕ ನನ್ನೇಶ್ವರ
ಸ್ಥಳ ಊರಿನ ದಕ್ಷಿಣಕ್ಕೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧರಣ
ಸಂರಕ್ಷಣೆ ಭಾ.ಪು.ಇ.

ಈ ದೇವಾಲಯ ಗರ್ಭಗೃಹ, ಅಂತರಾಳ, ನವರಂಗ ಮತ್ತು ತೆರೆದ ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹ ಚೌಕಾಕಾರವಾಗಿದೆ. ಪಶ್ಚಿಮ ಹಾಗೂ ಉತ್ತರಕ್ಕೆ ದೇವ ಕೋಷ್ಠಗಳಿವೆ. ಭುವನೇಶ್ವರಿಯಲ್ಲಿ ಅಷ್ಟಕೋನದ ನಡುವೆ ಬಹುದಳಗಳ ಕಮಲವಿದೆ. ಇದರ ಬಾಗಿಲುವಾಡವು ಐದು ಶಾಖೆಗಳಿಂದ ಕೂಡಿದ್ದು, ಅದರಲ್ಲಿ ಸ್ತಂಭಶಾಖೆ ಹೆಚ್ಚು ಅಲಂಕೃತವಾಗಿದೆ. ಲಲಾಟದಲ್ಲಿ ಗಜಲಕ್ಷ್ಮಿ, ಉಬ್ಬುಶಿಲ್ಪವಿದೆ.

ಗರ್ಭಗೃಹದ ಮುಂದೆ ತೆರೆದ ಅಂತರಾಳವಿದೆ. ಇವುಗಳ ಮೇಲಿನ ಭುವನೇಶ್ವರಿಯಲ್ಲಿ ಬಹುದಳಗಳ ಪುಷ್ಟವಿದೆ. ನವರಂಗದ ನಾಲ್ಕು ಕಂಬಗಳನ್ನು ಮಕರಬ್ಬೆ ಮಾಡಿಸಿದಳೆಂದು ವಿವರಿಸುವ ಶಾಸನವೊಂದು ಒಂದು ಕಂಬದಲ್ಲಿದೆ. ಇಲ್ಲಿನ ದೇವಾಲಯಕ್ಕೆ ಸೇರಿದ ಅಂಗಡಿಗಳಿಂದ ಬರುವ ಬಾಡಿಗೆಯು ದೇವಾಲಯಕ್ಕೆ ಸಂದಾಯವಾಗುತ್ತಿತ್ತೆಂದು ಇಲ್ಲಿಯ ಬೋದಿಗೆಯಲ್ಲಿರುವ ಶಾಸನದಿಂದ ತಿಳಿದುಬರುತ್ತದೆ. ನವರಂಗದ ಪ್ರವೆಶ ದ್ವಾರವು ಪಮಚಶಾಖೆಯಿಂದ ಕೂಡಿದ್ದು, ಅವುಗಳ ಲತಾ-ನಾಗಣಿ, ಮಿಥುನ, ಪುಷ್ಚಶಾಖೆಗಳ ಪ್ರತಿ ಕೆಳಭಾಗದಲ್ಲಿ ಚಾಮರಧಾರಣಿಯರಿದ್ದಾರೆ.

ತೆರೆದ ಮುಖಮಂಟಪದ ಭುವನೇಶ್ವರಿಯಲ್ಲಿ ಅರಳಿದ ಪುಷ್ಪವಿದೆ. ಇಲ್ಲಿನ ಕಂಬಗಳು ಚೌಕ, ವೃತ್ತ ಮತ್ತು ಗಂಟೆಯಾಕಾರದಲ್ಲಿವೆ.

ದೇವಾಲಯದ ಅಧಿಷ್ಠಾನವು ಉಪಾನ, ಪದ್ಮ, ತ್ರಿಪಟ್ಟ, ಕುಮುದ ಮತ್ತು ಅಲಂಕಾರವಿದೆ. ಭಿತ್ತಿಯಲ್ಲಿ ಕಪೋತಗಳ ದೇವಕೋಷ್ಠಗಳು, ಶಿಖರದ ಮಾದರಿಗಳು ಹಾಗೂ ಅರೆಗಂಭಗಳ ವಿನ್ಯಾಸವಿದೆ. ಮುಖಮಂಟಪದ ಅಧಿಷ್ಠಾನದ ಕೆಲಭಾಗಗಳು ಮಾತ್ರ ಉಳಿದಿವೆ. ಮುಖಮಂಟಪವನ್ನು ಪ್ರವೇಶಿಸಲು ಪೂರ್ವದಲ್ಲಿ ಮೆಟ್ಟಿಲುಗಳಿವೆ. (ಧಾ.ಜಿ.ಗ್ಯಾ, ಪು. ೧೧೦೭).

ಗುಡಿಯ ಕಂಬದಲ್ಲಿನ ಶಾಸನವು ಕಲ್ಯಾಣ ಚಾಲುಕ್ಯ ಅರಸ ನಾಲ್ಕನೇ ಸೋಮೇಶ್ವರನ (ಕ್ರಿ.ಶ. ೧೧೩೬) ಕಾಲಕ್ಕೆ ಸೇರಿದೆ (ಧಾ.ಜಿ.ಶಾಸ.ಸೂ, ಸಂ.ಗ. ೧೫೫; ಪು. ೧೩, SII, XV, No. 70) ಅದು ಶಂಕರಸೆಟ್ಟಿಯು ನನ್ನೇಶ್ರ ದೇವರಿಗೆ ಸುವರ್ಣದಾನ ನೀಡಿದನೆಂದು ದಾಖಲಿಸಿದೆ. ಇನ್ನೊಂದು ಕಂಬದಲ್ಲಿರುವ ಕ್ರಿ.ಶ. ೧೨ನೇ ಶತಮಾನದ ಶಾಸನವು (ಧ.ಜಿ.ಶಾ.ಸೂ, ಸಂ.ಗ. ೧೬೮; ಪು.೧೩, SII, XV, No. 561) ಹೆಬ್ಬಣವಂಶದ ದೇವಲಬ್ಬೆಯ ಆದೇಶದ ಮೇರೆಗೆ ನನ್ನೇಶ್ವರ ದೇವಾಲಯಗಳ ಕಂಬಗಳ ನಿರ್ಮಾಣ ಕುರಿತು ದಾಖಲಿಸಿದೆ. ಲಿಂಗಾಯತ ಮಠದ ಮುಂದಿರುವ ಗೋಡೆಯಲ್ಲಿನ ಕ್ರಿ.ಶ. ಸುಮಾರು ೧೨ನೇ ಶತಮಾನದ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೬೧; ಪು. ೧೩, SII, XV, No. 558) ನನ್ನೇಶ್ವರ ದೇವಾಲಯಕ್ಕೆ ಮಹಾಜನರು ಅಂಗಡಿಯನ್ನು ದಾನ ನೀಡಿದರೆಂದು ತಿಳಿಸುತ್ತದೆ.

೫೮

ಊರು ಲಕ್ಕುಂಡಿ
ಸ್ಮಾರಕ ಸೋಮೇಶ್ವರ
ಸ್ಥಳ ಊರಿನ ಪಶ್ಚಿಮಕ್ಕೆ
ಕಾಲ ಕ್ರಿ.ಶ. ೧೧೦೦
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದಲ್ಲಿ, ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ಗರ್ಭಗೃಹ ಚೌಕಾಕಾರವಾಗಿದ್ದು, ಉತ್ತರದ ಗೋಡೆಯಲ್ಲಿ ಗೂಡು ಇದೆ. ಭುವನೇಶ್ವರಿಯಲ್ಲಿ ಬಹುದಳಗಳ ಪದ್ಮದ ಅಲಂಕಾರವಿದೆ. ಇದರ ಬಾಗಿಲವಾಡವು ಐದು ಸಾಖೆಗಳಿಂದ ಕೂಡಿದ್ದು, ಅದರಲ್ಲಿ ಸ್ತಂಭಶಾಖೆ ಮಾತ್ರ ಎದ್ದು ಕಾಣುತ್ತಿದ್ದು, ಉಳಿದವು ಸರಳವಾಗಿದೆ. ಲಲಾಟದಲ್ಲಿ ಗಜಲಕ್ಷ್ಮೀಯ ಉಬ್ಬುಶಿಲ್ಪವಿದೆ. ಅಂತರಾಳವು ಸರಳವಾಗಿದ್ದು, ಅದರ ಲಲಾಟದಲ್ಲಿ ಗಜಲಕ್ಷ್ಮೀಯ ಉಬ್ಬುಶಿಲ್ಪವಿದೆ. ಪೇದ್ಯ ಭಾಗದಲ್ಲಿ ಚಿಕ್ಕದಾಗಿ ದ್ವಾರಪಾಲಕರನ್ನು ಕೆತ್ತಲಾಗಿದೆ. ನವರಂಗವು ಚೌಕಾಕಾರವಾಗಿದ್ದು, ಅದರಲ್ಲಿ ಸ್ವಲ್ಪ ಎತ್ತರವಾಗಿರುವ ಕಟ್ಟೆಯ ಮೇಲೆ ತಿರುಗಣಿ ಯಂತ್ರದಿಂದ ಮಾಡಿದ ಅಲಂಕೃತ ನಾಲ್ಕು ಕಂಬಗಳಿವೆ. ನವರಂಗದ ಉತ್ತರದ ಕಂಬದಲ್ಲಿ ಶಾಸನವಿದೆ. ನವರಂಗದ ಪ್ರವೇಶ ದ್ವಾರವು ಪೂರ್ವಕ್ಕಿದ್ದು, ಅದರ ಇಕ್ಕೆಲಗಳಲ್ಲಿ ದೇವಕೋಷ್ಠಗಳಿವೆ. ಅಧಿಷ್ಠಾನ ಭಾಗ ಕಂಡುಬರುವುದಿಲ್ಲ. ಶಿಖರ ಭಾಗವನ್ನು ಕಾಣಬಹುದು.

ದೇವಾಲಯದ ಅಧಿಷ್ಠಾನವು ಉಪಾನ ಮತ್ತು ಪದ್ಮಗಳಿಂದ ಅಲಂಕೃತವಾಗಿದೆ. ಭಿತ್ತಿಯ ಅರೆಗಂಬ ಮತ್ತು ಶಿಖರದ ಮಾದರಿಗಳಿಂದ ಅಲಂಕೃತವಾಗಿದೆ. ನವರಂಗದ ವಾಯವ್ಯ ಭಾಗದಲ್ಲಿ ಶಾಸನವಿದೆ. ಕಲ್ಯಾಣ ಚಾಲುಕ್ಯ ಅರಸರ ಕಾಲದ ಕ್ರಿ.ಶ. ೧೧೮೮ರ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೫೬; ಪು. ೧೩ SII, XI, pt. II, No. 193) ಭರತೇಶ್ವರ ದೇವಾಲಯದ ಶಿಲ್ಪಗಳಿಂದ ಸುವರ್ಣದಾನ ಮಾಡಿದ ವಿಷಯವನ್ನು ಉಲ್ಲೇಖಿಸಿದೆ. (ಧಾ.ಜಿ.ಗ್ಯಾ, ಪು. ೧೦೦೬-೧೦೦೭) ಭಿತ್ತಿಯ ಮೇಲೆ ಕಪೋತ-ಹರಿನಾಲಿಗೆಗಳ ಅಲಂಕಾರವಿದೆ.

ನವರಂಗದ ಮುಂಭಾಗಕ್ಕಿದ್ದ ಪ್ರಾಚೀನ ಮುಖಮಂಟಪ ಹಾಳಾಗಿದೆ. ದೇವಾಲಯದ ಹೊರಭಾಗಕ್ಕೆ ಎರಡು ಜೈನ ಶಾಸನಗಳಿವೆ. ದೇವಾಲಯದ ಎದುರು, ನಂದಿಮಂಟಪವಿದ್ದು, ಅಲ್ಲಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಮಂಟಪದಲ್ಲಿ ನಾಲ್ಕು ಕಂಬ ಮತ್ತು ಮುಚ್ಚಿಗೆ ಮಾತ್ರವಿದ್ದು, ಮಂಟಪದ ಉಳಿದ ಭಾಗಗಳು ಹಾಳಾಗಿವೆ.

೫೯

ಊರು ಲಕ್ಕುಂಡಿ
ಸ್ಮಾರಕ ನೀಲಕಂಠೇಶ್ವರ
ಸ್ಥಳ ಊರಿನ ವಾಯವ್ಯಕ್ಕೆ
ಕಾಲ ಕ್ರಿ.ಶ. ೧೧೦೦
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧರಣ
ಸಂರಕ್ಷಣೆ

ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ಗರ್ಭಗೃಹ ಚೌಕಾಕಾರವಾಗಿದ್ದು, ಅದರಲ್ಲಿರುವ ಜೈನ ಪೀಠದ ಮೇಲೆ ಲಿಂಗವಿದೆ. ಇದರ ಮುಚ್ಚಿಗೆ ಸರಳವಾಗಿದೆ. ಬಾಗಿಲುವಾಡವು ಐದು ಶಾಖೆಗಳಿಂದ ಅಲಂಕೃತವಾಗಿದ್ದು, ಅದರ ಮೇಲೆ ಮೂರು ಉಬ್ಬಿದ ಅಲಂಕರಣೆಯ ಭಾಗಗಳಿವೆ. ಲಲಾಟದಲ್ಲಿ ಮೂಲತಃ ಇದ್ದಿರಬಹುದಾದ ತೀರ್ಥಂಕರ ಹಾಗೂ ಚಾಮರಧಾರಿಣಿಯ ಶಿಲ್ಪಗಳನ್ನು ಇತ್ತೀಚೆಗೆ ಹಾಳು ಮಾಡಲಾಗಿದೆ.

ಅಂತರಳವು ಸರಳವಾಗಿದೆ. ಇದರ ಮುಚ್ಚಿಗೆಯೂ ಸಹ ಸರಳವಾಗಿದೆ. ನವರಂಗವು ಚೌಕಾಕಾರವಾಗಿದ್ದು, ಅದರ ಸ್ವಲ್ಪ ಎತ್ತರವಾದ ಭಾಗದಲ್ಲಿ ಚೌಕ, ವೃತ್ತಾಕಾರದ ನಾಲ್ಕು ಕಂಬಗಳಿವೆ. ಇದರ ಭುವನೇಶ್ವರಿ ಸರಳವಾಗಿದೆ. ನವರಂಗದ ಮುಂಭಾಗ ಮತ್ತು ಪಕ್ಕದ ಭಾಗಗಳು ಹಾಳಾಗಿವೆ.

ದೇವಾಲಯದ ಅಧಿಷ್ಠಾನವು ಉಪಾನ, ಪದ್ಮ, ಕುಮುದ ಮತ್ತು ಯಾಳಗಳಿಂದ ಅಲಂಕೃತವಾಗಿದೆ. ಗರ್ಭಗೃಹದ ಭಿತ್ತಿಯು ಅರೆಗಂಬಗ ಮತ್ತು ಶಿಖರದ ಮಾದರಿಗಳಿಂದ ಅಲಂಕೃತವಾಗಿದೆ. ನವರಂಗದ ಭಿತ್ತಿಯ ಬಹುತೇಕ ಭಗ ಹಾಳಾಗಿದೆ. ಭಿತ್ತಿಯ ಮೇಲ್ಭಾಗದಲ್ಲಿ ಕಪೋತ, ಅಲಂಕರಣೆಗಳು ಇವೆ. ಗರ್ಭಗೃಹದ ಮೇಲೆ ಇದ್ದಿರಬಹುದಾದ ಶಿಖರ ಈತ ಉಳಿದಿಲ್ಲ (ಧಾ.ಜಿ.ಗ್ಯಾ, ಪು. ೧೦೦೬-೧೦೦೭).

೬೦

ಊರು ಲಕ್ಕುಂಡಿ
ಸ್ಮಾರಕ ಈಶ್ವರ
ಸ್ಥಳ ಊರಿನ ವಾಯವ್ಯಕ್ಕೆ
ಕಾಲ ಕ್ರಿ.ಶ. ೧೧೦೦
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಉತ್ತರ
ಸ್ಥಿತಿ ಮಧ್ಯಮ
ಸಂರಕ್ಷಣೆ ಭಾ.ಪು.ಇ.

ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ಗರ್ಭಗೃಹ ಚೌಕಾಕಾರವಾಗಿದ್ದು, ಅದರಲ್ಲಿ ಗರುಡ ಪೀಠದ ಮೇಲೆ ಶಿಖರದಲ್ಲಿನ ನಾರಾಯಣ ಫಲಕವನ್ನಿಡಲಾಗಿದೆ. ಪ್ರಾಯಶಃ ಮೂಲ ಮೂರ್ತಿ ಹಾಳಾಗಿದೆ. ಇದರ ಛತ್ತಿನ ವೃತ್ತಾಕಾರದ ಭಾಗದಲ್ಲಿ ಕಮಲದ ಹೂವಿನ ಅಲಂಕಾರವಿದೆ. ಇದರ ಬಾಗಿಲವಾಡವು ನಾಲ್ಕು ಶಾಖೆಗಳಿಂದ ಕೂಡಿದ್ದು, ಸ್ತಂಭ ಶಾಖೆ ಹೊರತುಪಡಿಸಿ ಉಳಿದವುಗಳು ಸರಳವಾಗಿವೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪ ಇದೆ. ಅಂತರಾಳವು ಸರಳವಾಗಿದ್ದು, ಇದರ ಛತ್ತಿನಕಾರ, ವೃತ್ತಾಕಾರ ಭಾಗದಲ್ಲಿ ಅರಳಿದ ತಾವರೆ ಅಲಂಕರಣೆಯಿದೆ. ಇದರ ಲಲಾಟದಲ್ಲಿ ವೇಣುಗೋಪಲಾನ ಶಿಲ್ಪವಿದ್ದು, ಇದರ ಮೇಲ್ಭಾಗಕ್ಕೆ ಮಕರತೋರಣದ ಅಲಂಕಾರವಿದೆ. ಇದರೊಂದಿಗೆ ವರಾಹ, ಯೋಗ ನರಸಿಂಹ ಕೆತ್ತನೆಗಳಿವೆ. ಬಾಗಿಲವಾಡದ ಪಕ್ಕದಲ್ಲಿ ಜಾಲಾಂಧ್ರದ ಮಾದರಿ ರಚಿಸಿ ವಾತಾಯನಕ್ಕೆ ಅನುಕೂಲ ಕಲ್ಪಿಸಲಾಗಿದೆ. ಇಕ್ಕೆಲಗಳಲ್ಲಿ ದ್ವಾರಪಾಲಕರಿದ್ದು, ಪೂರ್ವ ಭಾಗದಲ್ಲಿ ಶಾಸನವಿದೆ.

ನವರಂಗವು ಚೌಕಾಕಾರವಾಗಿದ್ದು, ಅದರಲ್ಲಿ ನಾಲ್ಕು ಕಂಬಗಳಿವೆ. ಮಧ್ಯದ ಛತ್ತಿನಲ್ಲಿ ವೃತ್ತಾಕಾರ ಭಾಗ ಮಾತ್ರವಿದೆ. ಪೂರ್ವಧ ಗೋಡೆ ಶಿಥಿಲವಾಗಿದೆ. ಅಂತರಾಳದ ಮುಂಭಾಗಕ್ಕೆ ಎರಡು ದೇವಕೋಷ್ಠಗಳಿವೆ. ಇದರ ಪ್ರವೇಶ ದ್ವಾರವು ಉತ್ತರಕ್ಕಿದೆ. ಅದು ವಿವಿಧ ಶಾಖೆಗಳಿಂದ ಅಲಂಕೃತವಾಗಿದೆ.

ಗುಡಿಯ ಅಧಿಷ್ಠಾನವು ಉಪಾನ, ಪದ್ಮ ಹಾಗು ಕುಮುದಗಳಿಂದ ಕೂಡಿದೆ. ಭಿತ್ತಿಯ ಮೂರು ಕಡೆ, ದೇವಕೋಷ್ಠ ಹಾಗೂ ಕಪೋತವಿದ್ದು, ಅದರ ಮೇಲೆ ಹೊರಚಾಚಿದ ಅಲಂಕೃತ ಭಾಗವಿದೆ. ಗರ್ಭಗೃಹದ ಮೇಲೆ ಶಿಖರವಿದ್ದು ಅದನ್ನು ಶಾಲಾ ಮತ್ತು ಕೂಟ ಪಂಜರಗಳಿಂದ ಅಲಂಕರಿಸಲಾಗಿದೆ. ಶಿಖರದ ಮೇಲ್ಭಾಗದಲ್ಲಿ ಸ್ತೂಪಿ ಇದೆ.

ಇದೇ ಊರಿನ ಮಧ್ಯದಲ್ಲಿ ಕಲ್ಲೇಶ್ವರ ದೇವಾಲಯವಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯದಲ್ಲಿ ಗರ್ಭಗೃಹ ಮತ್ತು ತೆರೆದ ಮುಖಮಂಟಪಗಳಿವೆ. ಚೌಕಾಕಾರದ ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಈಶ್ವರ ಲಿಂಗವಿದೆ. ಇದರ ಛತ್ತಿನಲ್ಲಿ ಅರಳಿದ ಪದ್ಮವಿದೆ. ಗರ್ಭಗೃಹದ ಒಳಭಾಗದ ಭಿತ್ತಿಯ ಉತ್ತರ, ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಗೂಡುಗಳಿವೆ.

ಗರ್ಭಗುಡಿಯ ಮುಂಭಾಗಕ್ಕೆ ಆರು ಅಂಕಣವಿರುವ ತೆರೆದ ಮುಖಮಂಟಪ ಇದೆ. ಇದರಲ್ಲಿ ನಾಲ್ಕು ಮರದ ಕಂಬಗಳಿವೆ. ಈ ಮಂಟಪದ ಮುಚ್ಚಿಗೆಯನ್ನು ಬೊಂಬು ಮತ್ತು ಮರವನ್ನು ಬಳಸಿ ನಿರ್ಮಿಸಲಾಗಿದೆ. ಈ ಮಂಟಪದ ಎದುರು ಭಾಗದಲ್ಲಿ ನಂದಿ ಮತ್ತು ನಾಗರಕಲ್ಲುಗಳಿವೆ.

ಚಂದ್ರಮೌಳೇಶ್ವರ ಗುಡಿಯ ತೊಲೆಯಲ್ಲಿರುವ ಶಾಸನವು ಕಲಚುರಿ ಸೋವಿದೇವನ ಕಾಲಕ್ಕೆ ಸೇರಿದೆ. ಅದರ ತೇದಿಯು (ಕ್ರಿ.ಶ. ೧೧೭೪) (ಧಾ.ಜಿ.ಶಾ.ಸೂ, ಸಂ.ಗ. ೧೪೬; ಪು. ೧೩, SII, XV, pt. II, No. 125) ಅದು ಗುಣನಿಧಿ ದೇಶವದೇವನಿಂದ ಅಸಿತರ ದೇಶವಾದಿತ್ಯದೇವರ ನಂದಾದೀವಿಗೆಗೆ ಸುವರ್ಣದಾನ ನೀಡಿದ್ದನ್ನು ಉಲ್ಲೇಖಿಸಿದೆ. ಕಂಬದಲ್ಲಿನ ಇನ್ನೊಂದು ಶಾಸನವು ಕಲಚುರಿ ಸಂಕಮನ ಕ್ರಿ.ಶ. ೧೧೮೦ರ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೪೮; ಪು. ೧೩, SII, XV, No. 137) ನಾಕಯ್ಯ ನಾಯಕನು ಅಸಿತರ ಕೇಶವಾದಿತ್ಯ ದೇವರಿಗೆ ದಾನ ಮಾಡಿದ ವಿಷಯ ತಿಳಿಸುತ್ತದೆ. ತೊಲೆಯಲ್ಲಿರುವ ಕಲ್ಯಾಣ ಚಾಲುಕ್ಯ ಅರಸ ನಾಲ್ಕನೇ ವಿಕ್ರಮಾದಿತ್ಯನ ಕ್ರಿ.ಶ. ೧೧೮೪ರ ಶಾಸನದಲ್ಲಿ ಬಸವರಸ, ಸಿದ್ದಯ್ಯಾದಿಗಳು ಅಸಿತರ ಕೇಶಿವಾದಿತ್ಯರಿಗೆ ಸುವರ್ಣದಾನ ನೀಡಿದ ವಿಷಯವಿದೆ. (ಧಾ.ಜಿ.ಶಾ.ಸೂ, ಸಂ.ಗ. ೧೪೯; ಪು. ೧೩, SII, XV, No. 60) ಇನ್ನೊಂದು ತೊಲೆಯಲ್ಲಿರುವ ಶಾಸನವು ಇದೇ ಅರಸನ ಇದೇ ಕಾಲದ ಶಾಸನವು (ಧಾ.ಜಿ.ಶಾಸ.ಸೂ, ಸಂ.ಗ. ೧೫೧‘; ಪು. ೧೩, SII, XV, No. 61) ಆಯಿಚಿಸೆಟ್ಟಿಯಾದಿಗಳು ಅಸಿತರ ಕೇಶವಾದಿತ್ಯರಿಗೆ ಸುವರ್ಣದಾನ ಮಾಡಿದುದನ್ನು ದಾಖಲಿಸಿದೆ. ಮತ್ತೊಂದು ತೊಲೆಯಲ್ಲಿನ ಕ್ರಿ.ಶ. ಸುಮಾರು ೧೨ನೇ ಶತಮಾನದ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೬೦; SII, XV, No. 559) ದೀಪಾವಳಿ ಪರ್ವದ ನಿಮಿತ್ತ ಆಯಿಚಿಸೆಟ್ಟಿಯು ನಾಲ್ಕುನೂರು ಅಡಿಕೆ ದಾನ ನೀಡಿದನೆಂದು ಉಲ್ಲೇಖಿಸಿದೆ.