೬೧

ಊರು ಲಕ್ಕುಂಡಿ
ಸ್ಮಾರಕ ಈಶ್ವರ
ಸ್ಥಳ ಊರಿನ ದಕ್ಷಿಣಕ್ಕೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ

ಇದು ಮೂರು ಗರ್ಭಗೃಹಗಳು, ತೆರೆದ ಅಂತರಾಳಗಳು ಹಾಗೂ ನವರಂಗಗಳನ್ನು ಹೊಂದಿದ ತ್ರಿಕೂಟ ದೇವಾಲಯ. ಪಶ್ಚಿಮದ ಗರ್ಭಗೃಹ ಚೌಕಾಕಾರವಾಗಿದ್ದು ಅದರಲ್ಲಿ ಇತ್ತೀಚಿಗೆ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಈ ಲಿಂಗದ ಪೀಠಭಾಗದಲ್ಲಿ ಏಳು ಕುದುರೆಗಳೊಂದಿಗಿರುವ ಅರುಣನ ಶಿಲ್ಪಿವಿದೆ. ಗರ್ಭಗೃಹದ ದಕ್ಷಿಣ ಭಿತ್ತಿಯಲ್ಲಿ ಜಾಲಾಂಧ್ರವಿದೆ. ಇದರ ಮುಚ್ಚಿಗೆಯಲ್ಲಿ ಅರಳಿದ ಕಮಲದ ಅಲಂಕಾರವಿದೆ. ಇಲ್ಲಿನ ಪ್ರವೇಶ ದ್ವಾರವು ಸರಳವಾಗಿದೆ. ಇದರ ಮುಂಭಾಗದಲ್ಲಿ ತೆರೆದ ಅಂತರಾಳವಿದೆ. ಇದರಲ್ಲಿ ಬಸವನ ವಿಗ್ರಹವಿದೆ. ಇಲ್ಲಿನ ಛತ್ತಿನಲ್ಲಿ ವೃತ್ತಾಕಾರವಾಗಿರುವ ಅರಳಿದ ಕಮಲವಿದೆ. ಅಂತರಾಳದ ದಕ್ಷಿಣ ಭಿತ್ತಿಯಲ್ಲಿ ಜಾಲಾಂಧ್ರ ಇದೆ.

ಉತ್ತರದ ಗರ್ಭಗೃಹ ಚೌಕಾಕಾರವಾಗಿದ್ದು ಅದರಲ್ಲಿ ಲಿಂಗವಿದೆ. ಇದರ ಛತ್ತಿನಲ್ಲಿ ಹಲವು ದಳಗಳ ಕಮಲದ ಅಲಂಕಾರವಿದೆ. ಈ ಗರ್ಭಗೃಹದ ಪ್ರವೇಶ ದ್ವಾರವು ವಜ್ರ, ಲತಾ, ಪುಷ್ಪ, ಸ್ತಂಭ ಮೊದಲಾದ ಪಂಚ ಶಾಖೆಗಳಿಂದ ಅಲಂಕೃತವಾಗಿದೆ. ದ್ವಾರದಲ್ಲಿ ಚಾಮರಧಾರಣಿಯರಿದ್ದಾರೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ಗರ್ಭಗೃಹದ ಮುಂಭಾಗಕ್ಕೆ ತೆರೆದ ಅಂತರಾಳವಿದೆ. ಇದರ ಪೂರ್ವ ಮತ್ತು ಪಶ್ಚಿಮದ ಗೋಡೆಯಲ್ಲಿ ಜಾಲಾಂಧ್ರಗಳಿವೆ. ಛತ್ತಿನಲ್ಲಿ ಕಮಲವಿದೆ.

ಪೂರ್ವ ಗರ್ಭಗೃಹ ಚೌಕಾಕಾರವಾಗಿದೆ. ಈ ಗರ್ಭಗೃಹದ ಮಧ್ಯಭಾಗದಲ್ಲಿ ಲಿಂಗವಿದೆ. ಇದರ ದ್ವಾರ ಮತ್ತು ಅದರ ಮುಂದಿನ ಅಂತರಾಳವು ಉತ್ತರದಲ್ಲಿರುವ ಗರ್ಭಗೃಹ ಮತ್ತು ಅಂತರಾಳದಂತಿದೆ. ಈ ಮೇಲಿನ ಮೂರು ಗರ್ಭಗೃಹಗಳ ದ್ವಾರದಲ್ಲಿ ಚಂದ್ರಶಿಲೆಗಳಿವೆ. ಈ ಮೂರು ಗರ್ಭಗೃಹಗಳಿಗೆ ಹೊಂದಿಕೊಂಡಂತೆ ನವರಂಗವಿದೆ. ನವರಂಗದ ಮಧ್ಯಭಾಗದಲ್ಲಿ ಎತ್ತರವಾದ ವೇದಿಕೆ ಇದ್ದು, ಅದರ ಮೇಲೆ ನಾಲ್ಕು ಕಂಬಗಳಿವೆ. ಇದರ ಛತ್ತಿನಲ್ಲಿ ಹಲವು ದಳಗಳಿರುವ ಕಮಲವಿದೆ. ನವರಂಗದ ಒಳಭಾಗದ ಭಿತ್ತಿಯಲ್ಲಿನ ಅರೆಗಂಭಗಳು ಸ್ಪಲ್ಪ ಮುಂದೆ (ಹೊರ) ಚಾಚಿದಂತಿದ್ದು, ಅವು ನೋಡಲು ದೇವಕೋಷ್ಠಗಳಂತಿವೆ. ನವರಂಗವನ್ನು ಪ್ರವೇಶಿಸಲು ದಕ್ಷಿಣದಲ್ಲಿ ಪ್ರವೇಶ ದ್ವಾರವಿದ್ದು ಅದನ್ನು ವಿವಿಧ ಶಾಖೆಗಳಿಂದ ಅಲಂಕರಿಸಲಾಗಿದೆ. ಈ ಪ್ರವೇಶ ದ್ವಾರದ ಮುಂಭಾಗಕ್ಕೆ ಪ್ರಾಚೀನ ಕಾಲದಲ್ಲಿ ಎದುರು ಮಂಟಪ ಮತ್ತು ಚಿಕ್ಕ ಗುಡಿ ಇದ್ದಿದ್ದು ಈಗ ಸಂಪೂರ್ಣವಾಗಿ ನಾಶವಾಗಿದೆ.

ಈ ದೇವಾಲಯದ ಅಧಿಷ್ಠಾನವು ಉಪಾನ, ಪದ್ಮ ಮತ್ತು ತ್ರಿಪಟ್ಟಕುಮುದಗಳಿಂದ ಅಲಂಕೃತವಾಗಿದೆ. ಭಿತ್ತಿಯ ಮೇಲಿನ ಕಪೋತ ಹಾಗೂ ಇತರೆ ಭಾಗಗಳು ಸರಳವಾಗಿವೆ. ಗರ್ಭಗೃಹಗಳ ಮೇಲಿನ ಶಿಖರಗಳಲ್ಲಿನ ಶಾಲಾ, ಕೂಟ, ಪಂಜರಗಳ ಮೇಲೆ ಇತ್ತೀಚಿಗೆ ಸಿಮೆಂಟ್‌ನಿಂದ ಬಸವನ ವಿಗ್ರಹಗಳನ್ನು ನಿರ್ಮಿಸಿದ್ದಾರೆ. ದೇವಾಲಯದ ಹೊರಗೆ ವಾಯವ್ಯ ದಿಕ್ಕಿನಲ್ಲಿ ಪ್ರಾಚೀನ ಕಾಲದ ಬಾವಿ ಇದೆ.

ಸೋಮನಕೆರೆ ಏರಿಯಲ್ಲಿರುವ ಕಲ್ಯಾಣ ಚಾಲುಕ್ಯ ಅರಸ ಎರಡನೆಯ ಸೋಮೇಶ್ವರನ ಕ್ರಿ.ಶ. ೧೦೭೫ರ ಶಾಸನವು (ಧಾ.ಜಿ.ಶಾ.ಸೂ, ಸಂ. ೦೯, ಗಂ. ೧೩೫; KI, II) ಮರಳಿಮಯ್ಯನಿಂದ ಮರುಳೇಶ್ವರ ದೇವರಿಗೆ ನೀಡಿದ ಛತ್ರದ ದಾನವನ್ನು ತಿಳಿಸುತ್ತದೆ. ಇದೇ ಶಾಸನದಲ್ಲಿ ಕಲಚುರಿ ಅಹಮಲ್ಲನ ಕ್ರಿ.ಶ. ೧೧೮೧ರ ಶಾಸನವು ಇದೆ.

೬೨

ಊರು ಹೊಸೂರು
ಸ್ಮಾರಕ ನಾರಾಯಣಗುಡಿ
ಸ್ಥಳ ಗ್ರಾಮದಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಈ ದೇವಾಲಯದ ಗರ್ಭಗೃಹದಲ್ಲಿ ನಾರಾಯಣನ ಸ್ಥಾನಿಕ ಮೂರ್ತಿ ಇದೆ. ಸಮಭಂಗದ ಈ ಮೂರ್ತಿಯು ಪ್ರಭಾವಳಿ ಹೊಂದಿದೆ. ಇದರ ಮುಚ್ಚಿಗೆಯಲ್ಲಿ ಅರಳಿದ ತಾವರೆ ಇದೆ. ಬಾಗಿಲವಾಡವು ಪಂಚಶಾಖೆಗಳಿಂದ ಕೂಡಿದೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬಿಶಿಲ್ಪವಿದ್ದು, ಅದರ ಮೇಲಿನ ಭಾಗದಲ್ಲಿ ಹೊರಚಾಚಿದ ಗೂಡು ಇದೆ.

ಅಂತರಾಳವು ಚೌಕಾಕಾರವಾಗಿದ್ದು, ಛತ್ತಿನಲ್ಲಿ ವೃತ್ತಾಕಾರದಲ್ಲಿ ಅರಳಿದ ತಾವರೆ ಇದೆ. ಬಾಗಿಲವಾಡವು ಕೇವಲ ಸ್ತಂಭ ಶಾಖೆಯಿಂದ ಅಲಂಕೃತವಾಗಿದೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ಅದರ ಮೇಲೆ ಬ್ರಹ್ಮ, ವಿಷ್ಣು, ಮಹೇಶ್ವರರ ಉಬ್ಬು ಶಿಲ್ಪಗಳಿವೆ. ಬಾಗಿಲವಾಡದ ಇಕ್ಕೆಲೆಗಳಲ್ಲಿ ವಜ್ರ ಅಲಂಕಾರದ ಜಾಲಾಂಧ್ರಗಳಿವೆ.

ನವರಂಗದ ಮಧ್ಯದಲ್ಲಿ ಚೌಕ, ಎಂಟು, ಹದಿನಾರುಮುಖ ಅಲಂಕಾರದ ನಾಲ್ಕು ಕಂಬಗಳಿವೆ. ಛತ್ತಿನಲ್ಲಿ ಅರಳಿದ ಪದ್ವವಿದೆ. ನವರಂಗವನ್ನು ಪ್ರವೇಶಿಸಲು ಪೂರ್ವ ಮತ್ತು ದಕ್ಷಿಣದಲ್ಲಿ ದ್ವಾರಗಳಿವೆ. ಪೂರ್ವ ದ್ವಾರವು ಪಂಚ ಶಾಖೆಗಳಿಂದ ಕೂಡಿದೆ. ಇದರಲ್ಲಿ ಸ್ತಂಭ ಶಾಖೆ ಹೊರತುಪಡಿಸಿ ಉಳಿದವುಗಳು ಸರಳವಾಗಿವೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ದಕ್ಷಿಣ ದ್ವಾರವು ಸಹಾ ಇದೇ ರೀತಿಯಲ್ಲಿ ಅಲಂಕೃತವಾಗಿದೆ.

ಮುಖಮಂಟಪವನ್ನು ವಿಜಯನಗರ ಕಾಲದಲ್ಲಿ ನಿರ್ಮಿಸಲಾಗಿದ್ದು, ೪ x ೪ ಅಡಿ ಅಳತೆಯದಾಗಿದೆ. ವಿಶಾಲವಾದ ಕಂಬಗಳ ಮಂಟಪವು ಸಹ ಇದೆ. ಮಧ್ಯದ ವೇದಿಕೆ ಸ್ವಲ್ಪ ಎತ್ತವಾಗಿದ್ದು, ಅದರಲ್ಲಿ ವಿಜಯನಗರ ಶೈಲಿಯನ್ನು ಹೋಲುವ ನಾಲ್ಕು ಕಂಬಗಳಿವೆ. ಎಂಟು-ಹದಿನಾರು ಮುಖದ ಈ ಕಂಬಗಳು ಆಯತಾಕಾರದ ಕಂಬಗಳ ಮೇಲೆ ಯಾಳಿ, ಕಾಳಿಂಗಮರ್ಧನ, ಹಂಸ, ಶಂಖ, ಯೋಗಿ, ಹನುಮ, ಗರುಡ, ವರಾಹ ಮತ್ತು ಹಾಲುಣಿಸುತ್ತಿರುವ ಹಸುವಿನ ಶಿಲ್ಪಗಳಿವೆ. ಇಲ್ಲಿನ ಕಂಬಗಳು ಪುಷ್ಪ ಬೋದಿಗೆಗಳನ್ನು ಹೊಂದಿವೆ. ಮುಖಮಂಟಪವನ್ನು ಪ್ರವೇಶಿಸಲು ಪೂರ್ವ, ಉತ್ತರ ಮತ್ತು ದಕ್ಷಿಣದಲ್ಲಿ ಪ್ರವೇಶ ದ್ವಾರಗಳಿವೆ.

ದೇವಾಲಯದ ಅಧಿಷ್ಠಾನ ಭಿತ್ತಗಳು ಸರಳವಾಗಿವೆ. ಗರ್ಭಗೃಹದ ಮೇಲೆ ಮೂಲದಲ್ಲಿದ್ದ ಶಿಖರ ಈಗ ನಾಶವಾಗಿದೆ. ದೇವಾಲಯದ ಸುತ್ತಲೂ ಪ್ರಕಾರ ಗೋಡೆಯಿದ್ದು, ಅದನ್ನು ಪ್ರವೇಶಿಸಲು ಪೂರ್ವ ಮತ್ತು ದಕ್ಷಿಣದಲ್ಲಿ, ಪ್ರವೇಶ ದ್ವಾರಗಳಿವೆ. ಈ ಪ್ರಕಾರದ ಒಳಗೆ ಕುಮಾರವ್ಯಾಸನ ಬಾವಿ, ಪಾಠಶಾಲೆ, ಭೋಜನ ಶಾಲೆಗಳನ್ನು ಇತ್ತೀಚಿಗೆ ನಿರ್ಮಿಸಲಾಗಿದೆ.

೬೩

ಊರು ಶಿರೋಳ
ಸ್ಮಾರಕ ಈಶ್ವರ
ಸ್ಥಳ ಊರಿನ ಪೂರ್ವಕ್ಕೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ಗರ್ಭಗೃಹ ಚೌಕಾಕಾರವಾಗಿದ್ದು, ಅದರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಅಲ್ಲದೆ ನಂದಿ ಪ್ರತಿಮೆಗಳಿವೆ. ಗರ್ಭಗೃಹದ ಪಶ್ಚಿಮ ಭಿತ್ತಿಯಲ್ಲಿ ದೇವಕೋಷ್ಠವಿದ್ದು, ಅದರಲ್ಲಿ ಲಿಂಗವನ್ನು ಇಡಲಾಗಿದೆ. ಗರ್ಭಗೃಹದ ದ್ವಾರವು ಐದು ಶಾಖೆಗಳಿಂದ ಕೂಡಿದೆ. ಅವುಗಳ ಮೇಲೆ ಸುಣ್ಣ ಲೇಪಿಸುವುದರಿಂದ ಅವುಗಳ ಅಲಂಕಾರಗಳು ಸ್ಪಷ್ಟವಾಗಿ ಕಾಣುವುದಿಲ್ಲ. ಅಂತರಾಳವು ಚೌಕಾಕಾರವಾಗಿದ್ದು, ಇದರ ಮುಚ್ಚಿಗೆ, ಬಾಗಿಲವಾಡ ಮತ್ತು ದ್ವಾರ ಶಾಖೆಗಳು ಸರಳವಾಗಿವೆ. ದ್ವಾರದ ಎರಡು ಬದಿಗಳಲ್ಲಿ ಜಾಲಾಂಧ್ರಗಳಿವೆ.

ನವರಂಗ ಸಂಪೂರ್ಣ ಹಾಳಾಗಿದ್ದು, ಇಲ್ಲಿ ತ್ರುಟಿತ ಶಾಸನವಿದೆ. ಅಧಿಷ್ಠಾನವು ಮಣ್ಣಿನಲ್ಲಿ ಮುಚ್ಚಿಹೋಗಿದೆ. ಭಿತ್ತಿಯು ಸರಳವಾಗಿದ್ದು, ಮುಖ್ಯ ಗರ್ಭಗೃಹದ ಮೇಲೆ ಅಲಂಕೃತ ಶಿಖರವಿದೆ. ಶಿಖರದ ಮೇಲೆ ಅಲಂಕೃತ ಸ್ತೂಪಿ ಇದೆ. ಶಿಕರದ ಸುಖನಾಸಿಯಲ್ಲಿ ಸಂಜೀವ ಮೂರ್ತಿಯ ಉಬ್ಬುಶಿಲ್ಪವಿದೆ.

ದೇವಾಲಯದ ಸಮೀಪವೇ ಗಜಲಕ್ಷ್ಮಿಯ ಉಬ್ಬುಶಿಲ್ಪವೊಂದು ಬಿದ್ದಿದೆ. ಈ ದೇವಾಲಯದ ಎದುರಿನಲ್ಲಿ ಕಲ್ಯಾಣ ಚಾಲುಕ್ಯರ ಆರನೆ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ (ಕ್ರಿ.ಶ. ೧೧೨೧) ಶಾಸನವೊಂದು ತ್ರುಟಿತವಾಗಿದ್ದು, ಅದು ಇಲ್ಲಿನ ಮೂಲಸ್ಥಾನ ದೇವರಿಗೆ ದಾನ ನೀಡಿದ್ದನ್ನು ವಿವರಿಸುತ್ತದೆ. (ಧಾ.ಜಿ.ಶಾ.ಸೂ, ಸಂ.ಗ. ೧೭೧; ಪು. ೧೩, SII, XI, pt. II, No. 172) ಪ್ರಾಯಶಃ ಇಲ್ಲಿರುವ ಈಶ್ವರ ದೇವಾಲಯವನ್ನೇ ಅದು ಮೂಲಸ್ಥಾನವೆಂದು ಕರೆದಿರಬೇಕೆನಿಸುತ್ತದೆ.

೬೪

ಊರು ಸೊರಟೂರು
ಸ್ಮಾರಕ ವೀರಭದ್ರ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ ರಾ.ಪು.ಇ.

ಚೌಕಾಕಾರದ ಗರ್ಭಗೃಹ ಮತ್ತು ಅಂತರಾಳ ಹಾಗೂ ಎದುರು ಮಂಟಪಗಳು ಈ ದೇವಾಲಯದಲ್ಲಿದೆ. ಗರ್ಭಗೃಹದಲ್ಲಿ ವೀರಭದ್ರನ ಮೂರ್ತಿಶಿಲ್ಪ ಇದೆ. ಅದರ ಮುಚ್ಚಿಗೆಯಲ್ಲಿ ವೃತ್ತಕಾರದ ಕಮಲದ ಅಲಂಕಾರವಿದೆ. ಇದರ ದ್ವಾರ ನಶಿಸಿ ಹೋಗಿದೆ. ಅಂತರಾಳವು ಚೌಕಾಕಾರವಾಗಿದ್ದು, ಅದರ ಮುಚ್ಚಿಗೆ ಸರಳವಾಗಿದೆ. ಇದರ ದ್ವಾರವು ಮೂರು ಶಾಖೆಗಳಿಂದ ಕೂಡಿದ್ದು, ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬಶಿಲ್ಪವಿದೆ. ಈ ದೇವಾಲಯದ ಎದುರಿನಲ್ಲಿ ಇರುವ ಮಂಟಪದಲ್ಲಿ ನಂದಿ ವಿಗ್ರಹವಿದೆ. ದೇವಾಲಯದ ಅಧಿಷ್ಠಾನ ಮತ್ತು ಭಿತ್ತಿ ಸರಳವಾಗಿದೆ. (ಧಾ.ಜಿ.ಗ್ಯಾ, ಪು. ೧೦೨೮-೨೯)

ಗುಡಿ ಎದುರು ಕ್ರಿ.ಶ ಸುಮಾರು ೮ನೇ ಶತಮಾನದ ಶಾಸನವು (ಧಾ.ಜಿ.ಶಾ.ಸೂ.ಸಂ.ಗ| ೧೭೨; ಪು. ೧೩ SII. XV. No. ೪೪೯) ದೇಕರೆರಗ ಎಂಬುವವನ್ನು ಕುರಿತು ಉಲ್ಲೇಖಿಸಿದೆ. ಇದು ಗ್ರಾಮದಲ್ಲಿರುವ ಅತ್ಯಂತ ಪ್ರಾಚೀನ ಶಾಸನ. ಗುಡಿಯಲ್ಲಿರುವ ರಾಷ್ಟ್ರಕೂಟ ಅರಸ ಒಂದನೇ ಅಮೋಘವರ್ಷನ ಕ್ರಿ.ಶ. ೮೬೯ರ ಶಾಸನವು ವಿಳಕ್ಕರನಾಗಿಯಮ್ಮ ಗಾವುಂಡರು ಸಿರಿವಾಗಿಲ್ಲನ್ನು ನಿಲ್ಲಿಸಿದನೆಂದು ದಾಖಲಿಸಿದೆ. (ಧಾ.ಜಿ.ಶಾ.ಸೂ, ಸಂ.ಗ. ೧೭೪; ಪು. ೧೩, EI, XIII pp. 176-177) ಗುಡಿಯ ಎದುರು ಇರುವ ಇದೇ ವಂಶದ ಎರಡನೇ ಕೃಷ್ಣನ ಕ್ರಿ.ಶ. ೮೮೩ರ ಶಾಸನವು (ಧಾ.ಜಿ.ಶಾ.ಸೂ, ಸಂ. ೧೭೫; ಪು. ೧೩, SII. XI, pt. 1 No.20 EI, XXI, pp. 206-208) ಸೊರಟೂರ ಐವತ್ತು ಮಹಾಜನರ ಸನ್ನಿಧಿಯಲ್ಲಿ ಚಿದಣ್ಣನು ಗೋಸಹಸ್ರದಾನ ಮಾಡಿದನೆಂದು ದಾಖಲಿಸಿದೆ. ಅದರ ಸಮೀಪದ ಮೂರನೇ ಕೃಷ್ಣನ ಕ್ರಿ.ಶ. ೯೫೧ರ ಶಾಸನವು ದೇವರಿಗೆ ನೀಡಿದ ಹಲವು ದಾನಗಳನ್ನು ಪ್ರಸ್ತಾಪಿಸಿದೆ (ಧಾ.ಜಿ.ಶಾ.ಸೂ, ಸಂ. ೧೭೬; ಪು. ೧೪, SII. XI. pt. 1 No. 39, IA, XII, p. 257).

೬೫

ಊರು ಸೊರಟೂರು
ಸ್ಮಾರಕ ಈಶ್ವರ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ ರಾ.ಪು.ಇ

ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಾಲಯದಲ್ಲಿ, ಗರ್ಭಗೃಹ, ಅಂತರಾಳ ಹಾಗೂ ನವರಂಗಗಳಿವೆ. ಗರ್ಭಗೃಹ ಚೌಕಾಕಾರವಾಗಿದ್ದು ಅದರಲ್ಲಿ ಶಿವಲಿಂಗವಿದೆ. ಅಲ್ಲದೆ ಪಶ್ಚಿಮ ಭಿತ್ತಿಯಲ್ಲಿ ಒಂದು ದೇವಕೋಷ್ಠವಿದೆ. ಮುಚ್ಚಿಗೆ ಸರಳವಾಗಿದೆ. ಇದರ ದ್ವಾರದಲ್ಲಿ ಐದು ಶಾಖೆಗಳಿವೆ. ಸ್ತಂಭಶಾಖೆಯೊಂದನ್ನು ಹೊರತುಪಡಿಸಿ ಉಳಿದ ಶಾಖೆಗಳು ಸರಳವಾಗಿವೆ. ಅಂತರಾಳ ಸರಳಬಾಗಿದ್ದು, ಅದರ ಶಾಖೆ ಮತ್ತು ಲಲಾಟಗಳು ಸಹ ಸರಳವಾಗಿವೆ. ನವರಂಗದಲ್ಲಿ ನಾಲ್ಕು ಕಂಬಗಳು ಚೌಕ, ವೃತ್ತ ಮತ್ತು ಗಂಟೆಯಾಕಾರದಲ್ಲಿವೆ. ಕಂಬಗಳ ಫಲಕಗಳು ವೃತ್ತಾಕಾರವಾಗಿದ್ದು ಅವುಗಳು ಬೋಧಿಗೆಗಳು ಚೌಕಾಕಾರವಾಗಿವೆ. ಮುಚ್ಚಿಗೆಯಲ್ಲಿ ಅರಳಿರುವ ತಾವರೆಯ ಅಲಂಕಾರವಿದೆ. ನವರಂಗದ ಉತ್ತರ ಮತ್ತು ದಕ್ಷಿಣ ಒಳಭಿತ್ತಿಯಲ್ಲಿ ದೇವ ಕೋಷ್ಠಗಳಿದ್ದು ಅವುಗಳಲ್ಲಿ ಸೂರ್ಯನಾರಾಯಣ ಮತ್ತು ಗಣೇಶನ ಮೂರ್ತಿಗಳು ಇವೆ. ಸ್ಥಾನಿಕ ಸೂರ್ಯನಾರಾಯಣನು ಕಿರೀಟಧಾರಿಯಾಗಿದ್ದು. ಸಮಭಂಗದಲ್ಲಿ ತನ್ನೆರಡು ಕೈಗಳಲ್ಲಿ ಕಮಲದ ಮೊಗ್ಗುಗಳನ್ನು ಹಿಡಿದಿದ್ದಾನೆ. ಅಲಂಕೃತ ಸರ್ಪತೋರಣವಿದೆ. ಕಾಲಿನ ಭಾಗದಲ್ಲಿ ಉಕ್ಷೆ ಮತ್ತು ಪ್ರತ್ಯುಷೆ ಶಿಲ್ಪಗಳಿವೆ. ದಕ್ಷಿಣದಲ್ಲಿರುವ ಗಣೇಶ ಮೂರ್ತಿಯು ನಾಟ್ಯಭಂಗಿಯಲ್ಲಿದ್ದು ಆಕರ್ಷಕವಾಗಿದೆ. ನವರಂಗದ ದ್ವಾರವು ಪುಷ್ಪ, ವಜ್ರ, ಲತಾ, ಸ್ತಂಭ, ಹೂ-ಬಳ್ಳಿಗಳ ಶಾಖೆಯ ಅಲಂಕರಣೆಯಿದೆ. ಲಲಾಟದಲ್ಲಿ ಗಜಲಕ್ಷಿ ಯ ಉಬ್ಬುಶಿಲ್ಪವಿದೆ.

ಕಲ್ಲೇಶ್ವರ ದೇವರ ಗುಡಿಯ ಎದುರಿನ ಕಲ್ಯಾಣ ಚಾಲುಕ್ಯ ಅರಸ ಆರನೇ ವಿಕ್ರಮಾದಿತ್ಯನ ಕ್ರಿ.ಶ. ೧೦೯೧-೯೨ರ ಶಾಸನವು (ಧಾ.ಜಿ.ಶಾ.ಸೂ. ಸಂ. ೧೭೮; SII. XI. pt.II No. 137). ತೆಲ್ಲಿಗ ಜಕ್ಕಿಯಬ್ಬೆ ಯಾನು ಕಟ್ಟಿಸಿದ ಸತ್ರಕ್ಕೆ ಭೂದಾನ ನೀಡಿದುದನ್ನು ಉಲ್ಲೇಖಿಸಿದೆ. ಇದೇ ಅರಸನ ಕಾಲದ ಇನ್ನೊಂದು ಶಾಸನವು (ಧಾ.ಜಿ.ಶಾ.ಸೂ, ಸಂ. ೧೨೯; SII, XV, No. 10), ವಿಷ್ಣು ವಿಗ್ರಹದ ಸ್ಥಾಪನೆಯೇ ಬಗೆಗೆ ತಿಳಿಸುತ್ತದೆ.

೬೬

ಊರು ಸೊರಟೂರು
ಸ್ಮಾರಕ ನಾರಾಯಣ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಚೌಕಾಕಾರ ಗರ್ಭಗೃಹ ಮತ್ತು ಮುಖಮಂಟಪವನ್ನು ಹೊಂದಿದೆ. ಗರ್ಭಗೃಹದಲ್ಲಿ ನಾರಾಯಣನ ಮೂರ್ತಿಯಿದ್ದು ಅದರ ಮುಚ್ಚಿಗೆಯಲ್ಲಿ ಅರಳಿದ ಪದ್ಯವಿದೆ. ಇದರ ದ್ವಾರ ಮತ್ತು ಲಲಾಟಗಳು ಸರಳವಾಗಿವೆ. ಮುಖಮಂಟಪವು ಎರಡು ಚೌಕ ಮತ್ತು ಗಂಟೆಯಾಕಾರದ ಕಂಬಗಳಿವೆ. ಅದರ ಮುಚ್ಚಿಗೆ ಸರಳವಾಗಿದೆ. ದೇವಾಲಯದ ಅಧಿಷ್ಠಾನ ಮತ್ತು ಭಿತ್ತಿಗಳೆರಡೂ ಸಹ ಸರಳವಾಗಿದೆ. ದೇವಾಲಯದ ಮೇಲಿನ ಗೋಪುರವನ್ನು ಇತ್ತೀಚೆಗೆ ನಿರ್ಮಿಸಿದ್ದಾರೆ.

ವೆಂಕಟೇಶ ಗುಡಿಯ ಹತ್ತಿರದ ಅಶ್ವತ್ಥ ಕಟ್ಟೆಯಲ್ಲಿರುವ ರಾಷ್ಟ್ರಕೂಟ ಅರಸ ಒಂದನೇ ಅಮೋಘವರ್ಷನ ಕ್ರಿ.ಶ. ೮೬೮ರ ಶಾಸನವು ಕುಪ್ಪೆಯರಸನಿಂದ ಸುಂಕದಾನದ ವಿಷಯವನ್ನು ಉಲ್ಲೇಖಿಸಿದೆ (ಧಾ.ಜಿ.ಶಾ.ಸೂ, ಸಂ ೧೭೩; ಪು. ೧೩, SII, XI, pt.I No. 12).

೬೭

ಊರು ಸೊರಟೂರ
ಸ್ಮಾರಕ ಈಶ್ವರ
ಸ್ಥಳ ಊರಲ್ಲಿ
ಕಾಲ ಕ್ರ. ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ ರಾ.ಪು.ಇ

ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ಗರ್ಭಗೃಹ ಚೌಕಾಕಾರವಾಗಿದ್ದು ಅದರಲ್ಲಿ ಲಿಂಗ ಇದೆ. ಮುಚ್ಚಿಗೆಯಲ್ಲಿ ಅರಳಿದ ಪದ್ಮವಿದ್ದು, ದ್ವಾರವು ಐದು ಶಾಖೆಗಳಿಂದ ಕೂಡಿದೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬು ಶಿಲ್ಪವಿದೆ, ಅಂತರಾಳವು ಸರಳವಾಗಿದೆ. ಅದರ ದ್ವಾರವು ಮೂರು ಶಾಖೆಗಳಿಂದ ಕೂಡಿದ್ದು ಲಲಾಟವು ನಶಿಸಿ ಹೋಗಿದೆ. ದ್ವಾರದ ಎರಡು ಬದಿಗಳಲ್ಲಿ ಜಾಲಾಂಧ್ರವಿದೆ. ಅಂತರಾಳದ ಮುಂದಿನ ನವರಂಗ ಹಾಳಾಗಿದೆ. ಭಿತ್ತಿಯು ಸರಳವಾಗಿದೆ. ಇದೇ ದೇವಾಲಯದ ಉತ್ತರದಲ್ಲಿರುವ ದಾರಿಯ ಸಮೀಪ ಇನ್ನೊಂದು ಗುಡಿಯಿದ್ದು ಅದು ಬಹುತೇಕ ಹಾಳಾಗಿದೆ. ಇದರ ಅಂತರಾಳದ ದಕ್ಷಿಣ ಕಂಬದಲ್ಲಿ ಒಂದು ಶಾಸನವಿದೆ.

ಮಲ್ಲೇಶ್ವರ ಗುಡಿ ಕಂಬದಲ್ಲಿರುವ ಶಾಸನದ ತೇದಿಯು ಕ್ರಿ.ಶ. ೧೩೫೬ (ಧಾ.ಜಿ ಶಾ.ಸೂ, ಸಂ. ೧೮೪; ಪು.೧೩, S11, XV, No.649). ಅದು ಪ್ರಾಚೀನ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ಬಸವೇಶ್ವರ ವಿಗ್ರಹ ಸ್ಥಾಪಿಸಿದುದನ್ನು ಉಲ್ಲೇಖಿಸಿದೆ.

ಇದೇ ಊರಲ್ಲಿ ೧೭-೧೮ನೇ ಶತಮಾನಕ್ಕೆ ಸೇರಿದ ಹನುಮಂತ ಶಿಲ್ಪವಿರುವ ದೇವಾಲಯ ಮತ್ತು ಶಾಂತಿನಾಥ ಬಸದಿಗಳಿದ್ದು ಅವುಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಹನುಮಂತನ ಪ್ರತಿಮೆಯು ಕ್ರಿ. ಶ. ೧೭-೧೮ನೇ ಶತಮಾನಕ್ಕೆ ಸೇರಿದೆ. ಇಲ್ಲಿ ನಾಗರ ಕಲ್ಲುಗಳು, ಕಂಬ, ಲಿಂಗದಪೀಠ ಎರಡು ವೀರಗಲ್ಲುಗಳು, ಶಾಸನಗಳು ಹಾಗೂ ಭಗ್ನ ಮೂರ್ತಿಗಳಿವೆ.

ಹಾಳು ಜೈನ ಬಸದಿ (ಇಂದು ನವೀಕರಿಸಲಾಗಿದೆ) ಬಳಿಯ ಕಲ್ಯಾಣ ಚಾಲುಕ್ಯ ಅರಸ ಎರಡನೇ ಸೋಮೇಶ್ವರನ ಕ್ರಿ.ಶ. ೧೧೭೧ರ ಶಾಸನವು ದಂಡನಾಯಕ ಬಲದೇವಯ್ಯನು ಹುಲಿಯಬ್ಬಜ್ಜಿಕೆಯ ಕಾಲುತೊಳೆದು ಬಲದೇವ ಜೀನಾಲಯಕ್ಕೆ ದಾನ ನೀಡಿದನೆಂದು. ದಾಖಲಿಸಿದೆ (ಧಾ.ಜಿ ಶಾ.ಸೂ, ಸಂ. 183; ಪು.೧೪, S11, X1, pt.I No.111), ಇನ್ನೊಂದು ಶಾಸನವು (ಧಾ.ಜಿ ಶಾ.ಸೂ, ಸಂ. ೧೭೭; ಪು.೧೪, S11, XV, No.623) ನರೇಂದ್ರನ ಶಿಷ್ಯೆ ಪಮಿಗೌಡತಿಯಿಂದು ಉಲ್ಲೇಖಿಸಿದೆ.

೬೮

ಊರು ಹರ್ತಿ
ಸ್ಮಾರಕ ಪರಮೇಶ್ವೇರ
ಸ್ಥಳ ಊರಲ್ಲಿ
ಕಾಲ ಕ್ರಿ. ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ದಕ್ಷಿಣ
ಸ್ಥಿತಿ ಸಾಧಾರಣ
ಸಂರಕ್ಷಣೆ ರಾ.ಪು.ಇ

ಇದು ಮೂರು ಗರ್ಭಗೃಹ, ಮೂರು ಅಂತರಾಳ ಮತ್ತು ಒಂದು ನವರಂಗಗಳನ್ನು ಹೊಂದಿದ ತ್ರಿಕೂಟ ದೇವಾಲಯ, ಪೂರ್ವದಲ್ಲಿರುವ ಗರ್ಭಗೃಹ ಚೌಕಾಕಾರವಾಗಿದ್ದು, ಉಮಾಮಹೇಶ್ವರನ ಮೂರ್ತಿ ಇದೆ. ಇದರ ಪೀಠದಲ್ಲಿ ಏಳು ಕುದುರೆಗಳಿರುವ ಶಿಲ್ಪವಿದೆ. (ಇದು ಸೂರ್ಯನ ಶಿಲ್ಪದ ಪೀಠ) ಮಧ್ಯದಲ್ಲಿ ಕಲ್ಯಾಣ ಚಾಲುಕ್ಯ ಲಿಂಗವಿದೆ. ಗರ್ಭಗೃಹದ ಮುಚ್ಚಿಗೆಯಲ್ಲಿ ಅರಳಿದ ಕಮಲವಿದೆ. ಇದರ ದ್ವಾರವು ಪಂಚಶಾಖೆಗಳಿಂದ ಅಲಂಕೃತವಾಗಿದೆ. ಈ ಗರ್ಭಗೃಹದ ಮುಂದೆ ತೆರೆದ ಅಂತರಾಳವಿದೆ. ಅದರ ಮುಂದೆ ನಾಲ್ಕು ಚಿಕ್ಕ ಕಂಬಗಳಿರುವ ನವರಂಗವಿದೆ. ಇದರ ಉತ್ತರ ಮತ್ತು ದಕ್ಷಿಣಕ್ಕೆ ಎರಡು ದೊಡ್ಡದಾದ ದೇವಕೋಷ್ಠಕಗಳಿದ್ದು, ಅದರಲ್ಲಿ ಕ್ರಮವಾಗಿ ಸೂರ್ಯನಾರಾಯಣ ಮತ್ತು ನಾಗರ ಕಲ್ಲುಗಳಿವೆ. ನವರಂಗದ ಮುಚ್ಚಿಗೆಯಲ್ಲಿ ಅರಳಿದ ಕಮಲವಿದೆ.

ಪಶ್ಚಿಮದಲ್ಲಿನ ಗರ್ಭಗೃಹದಲ್ಲಿ ಲಿಂಗವಿದ್ದು, ಅದರ ಮುಚ್ಚಿಗೆಯಲ್ಲಿ ಅರಳಿದ ಪದ್ಮವಿದೆ. ಇದರ ಮುಚ್ಚಿಗೆಯಲ್ಲಿ ಅರಳಿದ ಪದ್ಮವಿದೆ.

ಉತ್ತರದ ಗರ್ಭಗೃಹವು ಚೌಕಾಕಾರವಾಗಿದ್ದು, ಅದರಲ್ಲಿ ಕಲ್ಯಾಣ ಚಾಲುಕ್ಯ ಶೈ;ಇಯ ಲಿಂಗವಿದೆ. ಅದರ ಮುಚ್ಚಿಗೆಯಲ್ಲಿ ಅರಳಿದ ಪದ್ಮವಿದೆ. ಇದರ ದ್ವಾರವು ಐದು ಶಾಖೆಗಳಿಂದ ಕೂಡಿದೆ. ಇಲ್ಲಿನ ತೆರೆದ ಅರ್ಧಮಂಟಪ ಮುಚ್ಚಿಗೆಯಲ್ಲಿಯೂ ಅರಳಿದ ಪದ್ಮವಿದೆ.

ಈ ಮೂರು ಗರ್ಭಗೃಹ ಮತ್ತು ಅಂತರಾಳಗಳಿಗೂ ಸೇರಿದಂತೆ ನವರಂಗವಿದೆ. ಇದರ ಮಧ್ಯದಲ್ಲಿ ನಾಲ್ಕು ಕಂಬಗಳಿವೆ. ಒಂದು ಕಂಬದಲ್ಲಿ ಶಾಸನವಿದೆ. ನವರಂಘದ ದ್ವಾರವು ಪಂಚಶಾಖೆಗಳಿಂದ ಕೂಡಿದ್ದು ಅದರಲ್ಲಿ ಸ್ತಂಭ ಮತ್ತು ಕುಬ್ಜ ಶಾಖೆಗಳು ಗಮನಾರ್ಹವಾಗಿವೆ.

ದೇವಾಲಯದ ಅಧಿಷ್ಠಾನವು ಉಪಾನ, ಪದ್ಮ ಮತ್ತು ತ್ರಿಪಟ್ಟಕುಮುದಗಳಿಂದ ಅಲಂಕೃತವಾಗಿದೆ. ಭಿತ್ತಿಯು ಅರೆಗಂಬಗಳು ಮತ್ತು ಶಿಖರದ ಮಾದರಿಗಳಿಂದ ಅಲಂಕೃತವಾಗಿದೆ. ನವರಂಗದ ಭಿತ್ತಿಯಲ್ಲಿ ದೇವಕೋಷ್ಠಕಗಳಿವೆ. ದೇವಾಲಯದ ಪಶ್ಚಿಮ ಮತ್ತು ಪೂರ್ವದ ಗರ್ಭಗೃಹಗಳ ಮೇಲೆ ಶಿಖರಗಳಿವೆ. ಪಶ್ಚಿಮದಲ್ಲಿನ ಶಿಖರವು ತ್ರಿತಲಗಳಿಂದ ಕೂಡಿದ್ದ ಶಾಲಾ, ಕೂಟ ಮತ್ತು ಪಂಜರಗಳ ಅಲಂಕರಣೆಯಿದೆ. ಇಲ್ಲಿರುವ ಸುಖನಾಸಿಯಲ್ಲಿ ಸೂರ್ಯನಾರಾಯಣನ ಮೂರ್ತಿಯನ್ನು ಇಡಲಾಗಿದೆ.

ಈ ದೇವಾಲಯದ ನವರಂಗದಲ್ಲಿನ ಕಂಬಗಳ ಮೇಲೆ ಕ್ರಿ.ಶ. ೧೧೭೩ಕ್ಕೆ ಸೇರಿದ (ಕಲಚುರಿ ಸೋವಿದೇವ) ಶಾಸನ ಹರ್ತಿಯ ಪನ್ನಿರ್ವರು ಗಾವುಂಡರಿಂದ ಇಲ್ಲಿನ ದೇವಾಲಯಕ್ಕೆ (ಗೋಯಿದೇಶ್ವರ) ದಾನ ನೀಡಿದ ಪ್ರಸ್ತಾಪವಿದೆ (ಧಾ.ಜಿ ಶಾ.ಸೂ, ಸಂ.ಗ ೧೮೬; ಪು.೧೪, S11, XV, No.120). ಇಲ್ಲಿನ ಮತ್ತೊಂದು ಕಂಬದ ಮೇಲಿನ ಶಾಸನವು ಬಿಜ್ಜಳನ ಕಾಲಕ್ಕೆ ಸೇರಿದ್ದು (ಕ್ರಿ.ಶ.೧೧೭೩) ಅಲ್ಲಿನ ಹೆಗ್ಗಡೆ ರೆಮ್ಮರಸರು ಜಾತಿವೇದ ಪಂಡಿತರ ಕಲತೊಳೆದು ಗೋಯಿದೇಶ್ವರ ದೇವರಿಗೆ ಸುಂಕ ಬಿಟ್ಟ ವಿವರ ದಾಖಲಿಸಿದೆ (ಧಾ.ಜಿ.ಶಾ.ಸೂ, ಸಂ.ಗ. ೧೮೭;; ಪು. ೧೪, SII, XV, No. 240) ಅದೇ ದೇವಾಲಯದ ಮತ್ತೊಂದು ಕಂಬದ ಮೇಲೆ ಇರುವ ಶಾಸನವು ಯಾದವರ ಸಿಂಘಣನ ಕಾಲದ್ದಗಿದ್ದು, (ಕ್ರಿ.ಶ. ೧೨೩೬) ಅದು ಅಲ್ಲಿನ ಹನ್ನೆರಡು ಆವುಂಡರು, ಉಗುರ ಮುನ್ನೂರ್ವರು ಹಾಗೂ ಡೋಣಿಸಾಸ್ವರ್ವರಿಂದ ಮೂಲಸ್ಥಾನದೇವರಿಗೆ ದಾನ ನೀಡಿದ ವಿವರವನ್ನು ದಾಖಲಿಸುತ್ತದೆ. (ಧಾ.ಜಿ.ಶಾ.ಸೂ, ಸಂ.ಗ. ೧೮೮; ಪು.೧೪, SII, XV, No. 176).

೬೯

ಊರು ಹರ್ತಿ
ಸ್ಮಾರಕ ತ್ರಿಲಿಂಗೇಶ್ವರ
ಸ್ಥಳ ಊರಿನ ಮಧ್ಯ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಉತ್ತರ
ಸ್ಥಿತಿ ಸಾಧಾರಣ
ಸಂರಕ್ಷಣೆ ರಾ.ಪು.ಇ

ದೇವಾಲಯದಲ್ಲಿ ಮೂರು ಗರ್ಭಗೃಹ ಮತ್ತು ಅಂತರಾಳಗಳಿವೆ. ಪೂರ್ವ, ಪಶ್ಚಿಮ ಹಾಗೂ ಉತ್ತರಗಳಲ್ಲಿ ಗರ್ಭಗೃಹಗಳಿದ್ದು, ಅವುಗಳ ಮುಂಭಾಗದ ನವರಂಗ ಬಿದ್ದು ಹೋಗಿದೆ. ಇದ್ದುದರಿಂದ ಇದು ಮೂರು ಪ್ರತ್ಯೇಕ ಗುಡಿಗಳಂತೆ ಕಂಡುಬರುತ್ತವೆ.

ದಕ್ಷಿಣ ಗರ್ಭಗೃಹವು ಚೌಕಾಕಾರವಾಗಿದ್ದು, ಅದರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಇದರ (ಒಳ ಭಿತ್ತಿಯಲ್ಲಿ) ದೇವಕೊಷ್ಠವಿದೆ. ಇದರ ದ್ವಾರದಲ್ಲಿ ನಾಲ್ಕು ಶಾಲೆಗಳಿದ್ದು, ಲಲಾಟವು ಸರಳವಾಗಿದೆ. ಗರ್ಭಗೃಹದ ಮುಂದೆ ತೆರೆದ ಅಂತರಾಳವಿದೆ. ಪೂರ್ವ ಮತ್ತು ಪಶ್ಚಿಮ ಗರ್ಭಗೃಹಗಳ ಮತ್ತು ಅಂತರಾಳಗಳೂ ಸಹ ಈ ಮೇಲಿನ ರೀತಿಯಲ್ಲಿಯೇ ಇವೆ. ಇವುಗಳ ಮುಂಭಾಗವನ್ನು ಹೆಂಚು ಹೊಂದಿಸಿ ಜೀರ್ಣೋದ್ಧಾರ ಮಾಡಿದ್ದಾರೆ.

ದೇವಾಲಯದ ಅಧಿಷ್ಠಾನವು ವಿವಿಧ ಭಾಗಗಳಿಂದ ಕೂಡಿದ್ದು ಅಲಂಕೃತವಾಗಿದೆ. ದೇವಾಲಯದ ಪೂರ್ವ ಮತ್ತು ದಕ್ಷಿಣ ಗರ್ಭಗೃಹದ ಹೊರಭಾಗವನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಆದರೆ ಪಶ್ಚಿಮ ಭಾಗದ ಭಿತ್ತಿಯು ಮೂಲ ರೂಪದಲ್ಲಿಯೇ ಉಳಿದಿದೆ. ಈ ಭಾಗದಲ್ಲಿ ಮಾತ್ರ ಶಿಕರವಿದೆ.

೭೦

ಊರು ಹರ್ಲಾಪುರ
ಸ್ಮಾರಕ ಹರಿಹರೇಶ್ವರ
ಸ್ಥಳ ಊರಿನ ಮಧ್ಯದಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯವು ಚೌಕಾಕಾರದ ಗರ್ಭಗೃಹ ಮತ್ತು ತೆರೆದ ಮುಖಮಂಟಪವನ್ನೊಳಗೊಂಡಿದೆ. ಗರ್ಭಗೃಹದಲ್ಲಿ ಲಿಂಗವಿದೆ. ಗರ್ಭಗೃಹದ ಮೂರು ಕಡೆ ಗೂಡುಗಳಿವೆ. ಇದರ ಛತ್ತಿನ ವೃತ್ತಾಕಾರದ ಭಾಗದಲ್ಲಿ ಅರಳಿದ ತಾವರೆ ಇದೆ. ಇದರ ಬಾಗಿಲವಾಡವು ಸರಳ ಉಬ್ಬು ಪಂಚ ಶಾಖೆಗಳಿಂದ ಕೂಡಿದೆ. ಲಲಾಟದಲ್ಲಿ ಗಣಪತಿಯ ಉಬ್ಬುಶಿಲ್ಪವಿದೆ. ಗರ್ಭಗೃಹದ ಮುಂಭಾಗಕ್ಕೆ ತೆರೆದ ಮುಖಮಂಟಪವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ದೇವಾಲಯದ ಅಧಿಷ್ಠಾನ ಸರಳವಾಗಿದೆ. ಭಿತ್ತಿಯ ಭಾಗದಲ್ಲಿ ಸೂರ್ಯ, ಕಮಲ, ಗಣೇಶನ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ.