೮೧

ಊರು ಹುಲಿಕೋಟೆ
ಸ್ಮಾರಕ ಕಲ್ಮೇಶ್ವರ (ಕರಿಯಮ್ಮ)
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯದಲ್ಲಿ ಗರ್ಭಗೃಹ ಮತ್ತು ಅಂತರಾಳ ಭಾಗಗಳು ಮಾತ್ರವಿದ್ದು, ಉಳಿದ ಭಾಗಗಳು ನಶಿಸಿವೆ. ಗರ್ಭಗೃಹ ಚೌಕಾಕಾರವಾಗಿದ್ದು, ಅದರಲ್ಲಿ ಲಿಂಗವಿದೆ. ಇದರ ಮುಚ್ಚಿಗೆಯಲ್ಲಿ ಅರಳಿದ ಪದ್ಮವಿದೆ. ಗರ್ಭಗೃಹದ ದ್ವಾರ ಮತ್ತು ಲಲಾಟಗಳು ಸರಳವಾಗಿವೆ. ಪ್ರವೇಶ ದ್ವಾರದ ಎರಡೂ ಬದಿಗಳಲ್ಲಿ ಚೌಕಾಕಾರದ ಜಾಲಾಂಧ್ರಗಳಿವೆ.

ಹೊರಭಾಗದ ಬಹುತೇಕ ಭಾಗಗಳು ಹಾಳಾಗಿ ಹೋಗಿವೆ. ಅಧಿಷ್ಠಾನದಲ್ಲಿ ಕಂಪ, ಮತ್ತು ಗಳ ಪಟ್ಟಿಕೆ ಮಾತ್ರವಿದೆ. ಗರ್ಭಗೃಹದ ಪಶ್ಚಿಮ ಮತ್ತು ಉತ್ತರ ಭಿತ್ತಿಗಳು ಸುಸ್ಥಿತಿಯಲ್ಲಿವೆ.

ಈ ದೇವಾಲಯದ ಹೊರಭಾಗದಲ್ಲಿ ಕಲ್ಯಾಣ ಚಾಲುಕ್ಯರ ಗಣೇಶ, ಉಮಾಮಹೇಶ್ವರ, ಬ್ರಹ್ಮ, ಬಸವ, ಸೂರ್ಯ, ಚಾಮುಂಡಿ, ಲಿಂಗ ಮತ್ತು ಬಸವ ಶಿಲ್ಪಗಳಿವೆ.

೮೨

ಊರು ಹೊಂಬಳ
ಸ್ಮಾರಕ ಶಂಕರಲಿಂಗ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೮-೧೯ನೇ ಶತಮಾನ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹ, ಮುಖಮಂಟಪ ಮತ್ತು ಇತ್ತೀಚಿಗೆ ನಿರ್ಮಿಸಿದ ಮುಖಮಂಟಪಗಳು ಈ ದೇವಾಲಯದಲ್ಲಿವೆ. ಚೌಕಾಕಾರದ ಗರ್ಭಗೃಹದಲ್ಲಿ ಶಿವಲಿಂಗವಿದ್ದು, ಅದನ್ನು ಸ್ಥಳೀಯರು ಶಂಕಲಿಂಗವೆಂದು ಕರೆಯುತ್ತಾರೆ. ಗರ್ಭಗೃಹದ ಭುವನೇಶ್ವರಿಯಲ್ಲಿ ವೃತ್ತಕಾರ ಭಾಗವಿದ್ದು, ಅದರ ಮಧ್ಯದಿಂದ ಕಮಲದ ಮೊಗ್ಗು ಇಳಿಬಿದ್ದ ರೀತಿಯಿದೆ. ಗರ್ಭಗೃಹದ ದ್ವಾರ ಮತ್ತು ಲಲಾಟವು ಸರಳವಾಗಿದೆ. ಅದರ ಮುಂಭಾಗದಲ್ಲಿರುವ ಮುಖಮಂಟಪದಲ್ಲಿ ಚೌಕಾಕಾರದ ನಾಲ್ಕು ಕಂಬಗಳಿವೆ. ಅಂತರಾಳ ದ್ವಾರ ಮತ್ತು ಲಲಾಟವು ಸರಳವಾಗಿದೆ. (ಈ ಭಾಗಗಳು ಸು. ೨೦೦ ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು ಇತ್ತೀಚಿಗೆ ನವೀಕೃತಗೊಂಡಿವೆ). ಅದರ ಮುಂಭಾಗಕ್ಕೆ ನಾಲ್ಕು ಕಂಬಗಳಿರುವ ಇತ್ತೀಚಿನ ಮತ್ತೊಂದು ಮುಖಮಂಟಪವನ್ನು ನಿರ್ಮಿಸಲಾಗಿದೆ. ಇಲ್ಲಿ ಪ್ರಾಚೀನ ಕಾಲದ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿರುವ ರಂಗನಾಥ, ಚಾಮುಂಡಿ, ಆಸೀನ ಉಮಾಮಹೇಶ್ವರ ಮೂರ್ತಿಶಿಲ್ಪಗಳಿವೆ. ಇಲ್ಲಿಯೇ ರಾಷ್ಟ್ರಕೂಟ ಶೈಲಿಯ ಸ್ಥಾನಿಕ ಉಮಾಮಹೇಶ್ವರ ಮತ್ತು ಗಣೇಶ ಮೂರ್ತಿಗಳಿದ್ದು ಅವುಗಳು ಆಕರ್ಷಕವಾಗಿವೆ.

ಈ ದೇವಾಲಯದ ಅಧಿಷ್ಠಾನ ಮತ್ತು ಭಿತ್ತಿಗಳು ಸರಳವಾಗಿದೆ. ದೇವಾಲಯದ ಹೊರಭಾಗದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗಗಳು ಸಪ್ತಮಾತೃಕೆಯರು, ಮೂರು ಬಸವನ (ನಂದಿ) ವಿಗ್ರಹಗಳು, ಸೂರ್ಯನಪೀಠ, ಮತ್ತು ಎರಡು ವೀರಗಲ್ಲುಗಳಿವೆ.

ದೇವಾಲಯದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಿವೆ. ಒಂದನೇ ಸೋಮೇಶ್ವರನ ಕ್ರಿ.ಶ. ೧೦೪೯ರ ಶಾಸನವು ಕುಮಾರ ಭುವನೈಕ ಮಲ್ಲ ಸೋಮೇಶ್ವರ ದೇವನು ಬೆಳ್ವೊಲ-೩೦೦ ಆಳುವಾಗ ಜಕ್ಕಿಮಯ್ಯನು ವಿಷ್ಣು ದೇವಾಲಯಕ್ಕೆ ಭೂದಾನ ಮಾಡಿದ ವಿಷಯವನ್ನು (ಧಾಜಿಶಾಸೂ, ಸಂ.ಗ. ೨೦೦; SII, XI, pt. I, No. 84) ಉಲ್ಲೇಖಿಸಿಸಿದೆ. ಇನ್ನೊಂದು ಶಾಸನವು ನಾಲ್ಕನೇ ಸೋಮೇಶ್ವರನ ಕ್ರಿ.ಶ. ೧೧೮೯ರ ಶಾಸನವು (ಧಾಜಿಶಾಸೂ, ಸಂ.ಗ. ೨೦೧; SII, XV, No. 73) ರುದ್ರಶಕ್ತಿದೇವನಿಂದ ಕುಮಾರ ಬೊಂತೇಶ್ವರ ದೇವಾಲಯಕ್ಕೆ ಭೂದಾನದ ವಿಷಯ ದಾಖಲಿಸಿದೆ. ತ್ರಿಭುವನಮಲ್ಲನ ಕಾಲದ ಶಾಸನವು ಅಸ್ಪಷ್ಟವಾಗಿದೆ (ಧಾ.ಜಿ.ಶಾ.ಸೂ.ಸಂ.ಗ. ೨೦೨). ಶಾಸನಗಳಲ್ಲಿ ಪೊಂಬಳ್ವ, ಪೊಂಬಳಲು ಎಂದು ಈ ಊರು ಉಲ್ಲೇಖಗೊಂಡಿದೆ.

೮೩

ಊರು ಹೊಂಬಳ
ಸ್ಮಾರಕ ಯೋಗಿನಾರಾಯಣ
ಸ್ಥಳ ಊರಲ್ಲಿ
ಕಾಲ ಆಧುನಿಕ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚಿಗೆ ನಿರ್ಮಿಸಲಾಗಿರುವ ಈ ದೇವಾಲಯವು ಚೌಕಾಕಾರದ ಗರ್ಭಗೃಹ ಮತ್ತು ಮುಖಮಂಟಪವನ್ನೊಳಗೊಂಡಿದೆ. ಗರ್ಭಗೃಹದಲ್ಲಿ ಗರುಡ ಪೀಠದ ಮೇಲೆ ಅತ್ಯಂತ ಸುಂದರವಾಗಿರುವ ಯೋಗಿನಾರಾಯಣ ಮೂರ್ತಿಯಿದೆ. ಯೋಗ ಭಂತಿಯಲ್ಲಿ ಆಸೀನವಾಗಿರುವ ಈ ಮೂರ್ತಿಯ ಮೇಲಿನ ಎಡಗೈನಲ್ಲಿ ಶಂಖ ಮತ್ತು ಮೇಲಿನ ಬಲಗೈಯಲ್ಲಿ ಚಕ್ರಗಳಿದ್ದು, ಕೆಳಗಿನ ಎರಡೂ ಕೈಗಳು ಯೋಗ ಹಾಗೂ ಮುದ್ರೆಯಲ್ಲಿವೆ. ವೀರಭದ್ರನಂತೆ ಮೀಸೆಯನ್ನು ಕೆತ್ತಲಾಗಿದ್ದು, ಜಟೆಯನ್ನು ವಿಶೇಷವಾಗಿ ಈ ಮೂರ್ತಿಯಲ್ಲಿರಿಸಲಾಗಿದೆ. ಗರ್ಭಗೃಹದ ದ್ವಾರ ಮತ್ತು ಲಲಾಟಗಳು ಸರಳವಾಗಿದೆ. ಇದರ ಮುಂಭಾಗಕ್ಕಿರುವ ಮುಖಮಂಟಪ ಮತ್ತು ಅಧಿಷ್ಠಾನ ಮತ್ತು ಭಿತ್ತಿಗಳೆಲ್ಲವೂ ಸರಳವಾಗಿವೆ (ಧಾ.ಜಿ.ಗ್ಯಾ, ಪು. ೧೦೪೯-೧೦೫೦)

೮೪

ಊರು ಹೊಂಬಳ
ಸ್ಮಾರಕ ಕಲ್ಮೇಶ
ಸ್ಥಳ ಊರಲ್ಲಿ
ಕಾಲ ಆಧುನಿಕ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ

ಯೋಗಿನಾರಾಯಣ ದೇವಾಲಯದ ಪಕ್ಕದಲ್ಲಿಯೇ ಕಲ್ಮೇಶ ಎಂದು ಕರೆಯಲ್ಪಡುವ ದೇವಾಲಯವಿದೆ. ಇದು ಚೌಕಾಕಾರದ ಗರ್ಭಗೃಹ ಮತ್ತು ಮುಖಮಂಟಪವನ್ನೊಳಗೊಂಡಿದೆ. ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಉಳಿದಂತೆ ಈ ದೇವಾಲಯದ ಎಲ್ಲಾ ಭಾಗಗಳು ಸರಳವಾಗಿದೆ.

೮೫

ಊರು ಹೊಂಬಳ
ಸ್ಮಾರಕ ವೀರಭದ್ರ
ಸ್ಥಳ ಊರಲ್ಲಿ
ಕಾಲ ಆಧುನಿಕ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ

ಶಂಕರಲಿಂಗ ದೇವಾಲಯದ ಪೂರ್ವಕ್ಕೆ, ಪೂರ್ವಾಭಿಮುಖವಾಗಿರುವ ಮತ್ತೊಂದು ದೇವಾಲಯವಿದ್ದು ಅದನ್ನು ವೀರಭದ್ರ ದೇವಾಲಯ ಎನ್ನಲಾಗುತ್ತದೆ. ಇತ್ತೀಚೆಗೆ ಸಿಮೆಂಟ್‌ನಿಂದ ನಿರ್ಮಿಸಿರುವ ಈ ದೇವಾಲಯದಲ್ಲಿ ಚೌಕಾಕಾರದ ಗರ್ಭಗೃಹ, ಪ್ರದಕ್ಷಿಣಾಪಥ ವ್ಯವಸ್ಥೆ ಮತ್ತು ತೆರದ ಮುಖಮಂಟಪಗಳಿವೆ. ಗರ್ಭಗೃಹದಲ್ಲಿ ವೀರಭದ್ರ ಮೂರ್ತಿಶಿಲ್ಪಯಿದೆ. ಈ ದೇವಾಲಯದ ಸಮೀಪದಲ್ಲಿಯೇ ನಾಗರಕಲ್ಲು, ಚಾಲುಕ್ಯ-ರಾಷ್ಟ್ರಕೂಟ ಶೈಲಿಯಲ್ಲಿರುವ ವೀರಭದ್ರ ಮೂರ್ತಿಶಿಲ್ಪಗಳಿವೆ. ಈ ದೇವಾಲಯದ ಮುಂದಿರುವ ಶಾಸನವು ಅಸ್ಪಷ್ಟವಾಗಿದೆ.

೮೬

ಊರು ಹೊಂಬಳ
ಸ್ಮಾರಕ ಹನುಮಂತ
ಸ್ಥಳ ಊರಿನ ಪಶ್ಚಿಮಕ್ಕೆ
ಕಾಲ ಕ್ರಿ.ಶ. ೨೦ನೇ ಶತಮಾನ
ಶೈಲಿ ಸ್ಥಳೀಯ
ಅಭಿಮುಖ ದಕ್ಷಿಣ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯವನ್ನು ೧೯೫೬ರಲ್ಲಿ ನಿರ್ಮಿಸಲಾಗಿದ್ದುಚೌಕಾಕಾರದ ಗರ್ಭಗೃಹ ಮತ್ತು ಮುಖಮಂಟಪಗಳನ್ನು ಹೊಂದಿದೆ. (ಇದರ ನಿರ್ಮಾನದ ವಿವಿರ ಅಲ್ಲಿರುವ ಕಲ್ಲಿನ ಮೇಲೆ ಕೊರೆದಿರುವ ಇತ್ತೀಚಿನ ದಾಖಲೆಯಲ್ಲಿದೆ.)

ದಕ್ಷಿಣಾಮುಖವಾಗಿರುವ ಹನುಮಂಗನ ಮೂರ್ತಿ ಗರ್ಭಗೃಹದಲ್ಲಿರುವ ಆಕರ್ಷಕವಾಗಿದೆ. ಇತ್ತೀಚಿನ ದಿನಗಳಲ್‌ಇ ಇದನ್ನ ದುರಸ್ಥಿ ಮಾಡಲಾಗಿದೆ. ಗರ್ಭಗೃಹಕ್ಕೆ ಪ್ರದಕ್ಷಿಣಾ ಪಥವಿದೆ. ಗರ್ಭಗೃಹದ ಮುಂಭಾಗದಲ್ಲಿ ಇತ್ತೀಚಿಗೆ ನಿರ್ಮಿಸಿದ ಮುಖಮಂಪಟವಿದೆ. ಈ ದೇವಾಲಯದ ಅಧಿಷ್ಠಾನ ಮತ್ತು ಭಿತ್ತಿ ಸರಳವಾಗಿದೆ.

ದೇವಾಲಯದ ಮುಂಭಾಗದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಬಸವ, ಗಣೇಶನ ಮೂರ್ತಿ ಶಿಲ್ಪಗಳಿವೆ. ಇದೇ ಶೈಲಿಯ ಭಕ್ತರ ಕೆಲವು ಶಿಲ್ಪಗಳಿವೆ. ಹನುಮಂತ ದೇವರ ಗುಡಿ ಬಾಗಿಲ ಕಲೆಕಲ್ಲಿನ ಕ್ರಿ.ಶ. ಸುಮಾರು ೧೨ನೇ ಶತಮಾನದ ಶಾಸನವು ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದೆ (ಧಾ.ಜಿ.ಶಾ.ಸೂ, ಸಂ.ಗ. ೨೦೫; ಪು. ೧೪). ಅದು ನೀರಿಪ್ಪತ್ತು ಮಹಾಜನರು, ಅವಧೂತದೇವ, ಕ್ರಿಯಾಶಕ್ತಿ ಹಾಗೂ ವಾಮದೇವ ಪಂಡಿತರನ್ನು ಉಲ್ಲೇಖಿಸಿದೆ. ಹನುಮಂತನ ವಿಗ್ರಹದ ಹಿಂದೆ ಇರುವ, ಇದೇ ಕಾಲದ ಶಾಸನವು ಹೆಬ್ಬಣ ದಂಡನಾಯಕನ ವೀರಮರಣವನ್ನು ದಾಖಲಿಸಿದೆ (ಧಾ.ಜಿ.ಶಾ.ಸೂ. ಸಂ.ಗ. ೨೦೬; ಪು. ೧೪). ಹಡಪದರ ಓಣಿಯಲ್ಲಿರುವ ವಿಜಯನಗರ ಅರಸ ಸದಾಶಿವರಾಯನ ಕ್ರಿ.ಶ. ೧೫೪೭ರ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೨೦೭; ಪು. ೧೪). ಮಲ್ಲೋಜ ಮತ್ತು ಚಂದೋಜರ ವಿನಂತಿಯ ಮೇರೆಗೆ ತೊರಗಲಿ ಸೀಮೆಯಲ್ಲಿಯ ಹಡಪಿಗರ ಸುಂಕ ವಿನಾಯತಿಯ ಬಗೆಗೆ ತಿಳಿಸುತ್ತದೆ.