ನರಗುಂದ ತಾಲ್ಲೂಕು

ನರಗುಂದ ತಾಲ್ಲೂಕು

ಊರು ಕಣಕಿಕೊಪ್ಪ
ಸ್ಮಾರಕ ಪಂಚಲಿಂಗೇಶ್ವರ
ಸ್ಥಳ ಗ್ರಾಮದಲ್ಲಿ
ಕಾಲ ಆಧುನಿಕ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯ ಗರ್ಭಗೃಹ ಮತ್ತು ಮುಖ ಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಪ್ರಾಚೀನ ಕಾಲದ ಶಿವಲಿಂಗವಿದೆ. ದೇವಾಲಯವನ್ನು ನೂತನವಾಗಿ ನಿರ್ಮಿಸಿರುವುದರಿಂದ ಯಾವುದೇ ಪ್ರಾಚೀನ ಅವಶೇಷಗಳು ಕಂಡುಬರುವುದಿಲ್ಲ.

ಊರು ಕಲಕೇರಿ
ಸ್ಮಾರಕ ಈಶ್ವರ
ಸ್ಥಳ ಊರಿನ ಪೂರ್ವಕ್ಕೆ
ಕಾಲ ಕ್ರಿ.ಶ. ೧೮-೧೯ನೇ ಶತಮಾನ
ಶೈಲಿ ಸ್ಥಳೀಯ
ಅಭಿಮುಖ ದಕ್ಷಿಣ
ಸ್ಥಿತಿ ಉತ್ತಮ
ಸಂರಕ್ಷಣೆ

ಪ್ರಾಚೀನವಾಗಿದ್ದ ದೇವಾಲಯವನ್ನು ಮರು ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದ್ದು, ಪ್ರಸ್ತುತ ಗರ್ಭಗೃಹ ಹಾಗೂ ಮುಖ ಮಂಟಪಗಳಿವೆ. ಗರ್ಭಗೃಹವನ್ನು (ಗ್ರಾನೈಟ್) ಕಣಶಿಲೆಯಿಂದ ನಿರ್ಮಿಸಲಾಗಿದೆ. ಮಂಟಪವನ್ನು ಮರ ಮತ್ತು ಬಿದಿರುಗಳನ್ನು ಬಳಸಿ ಕಟ್ಟಲಾಗಿದೆ.

ಊರು ಕೊಣ್ಣೂರು
ಸ್ಮಾರಕ ಉಮಾ ರಾಮೇಶ್ವರ
ಸ್ಥಳ ಊರಿನ ಉತ್ತರಕ್ಕೆ ಹಳ್ಳದ ದಂಡೆ
ಕಾಲ ಕ್ರಿ.ಶ. ೯-೧೦ನೇ ಶತಮಾನ
ಶೈಲಿ ರಾಷ್ಟ್ರಕೂಟ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಈ ದೇವಾಲಯ ಚೌಕಾಕಾರದ ಗರ್ಭಗೃಹ, ನವರಂಗ ಮತ್ತು ಮುಖಮಂಟಪಗಳನ್ನೊಳಗೊಂಡಿದೆ. ಗರ್ಭಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ನವರಂಗದಲ್ಲಿ ನಾಲ್ಕು ಕಂಬಗಳಿದ್ದು ಅದರ ಕೆಳ ಮತ್ತು ಮೇಲ್ಭಾಗಗಳು ಚೌಕಾಕಾರವಾಗಿದ್ದು ಮಧ್ಯ ಭಾಗದಲ್ಲಿ ಉದ್ದ ಪಟ್ಟಿಕೆಗಳಿವೆ. ಮುಖಮಂಟಪದಲ್ಲಿ ಮತ್ತೊಂದು ಲಿಂಗವಿದೆ. ನವರಂಗ ಮತ್ತು ಮುಖಮಂಟಪಗಳ ಮಧ್ಯೆ ಪೀಠವಿರದ ಇನ್ನೊಂದು ಲಿಂಗವಿದೆ. ಮುಖಮಂಟಪವು ಮೂರು ಅಂಕಣಗಳಿಂದ ಕೂಡಿದ್ದು ಅಲ್ಲಿನ ಕಂಬಗಳು ಆಕರ್ಷಕವಾಗಿವೆ. ಇದರಲ್ಲಿ ಭಗ್ನಗೊಂಡ ಪ್ರಾಚೀನ ನಂದಿ(ಬಸವ)ಯಿದೆ. ಈ ಮಂಟಪದ ಮುಂಭಾಗದಲ್ಲಿ ಓಂದು ದೀಪಸ್ತಂಭವಿದೆ. ದೇವಾಲಯದ ಪಶ್ಚಿಮಕ್ಕೆ ಹನ್ನೊಂದು ಕಮಾನುಗಳಿರುವ ಮಂಟಪವಿದ್ದು ಅದರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಪ್ರತಿ ಕಮಾನುಗಳ ಕೆಳಭಾಗದಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದೇ ಮಂಟಪದ ಬಳಿ ಕಲ್ಯಾಣ ಚಾಲುಕ್ಯ ಶೈಲಿಯ ಕಂಬವಿದೆ.

ಈ ದೇವಾಲಯವು ಸರಳ ಅಧಿಷ್ಠಾನ ಹೊಂದಿದೆ. ದೇವಾಲಯದ ಭಿತ್ತಿಯು ಸರಳವಾಗಿದೆ. ಭಿತ್ತಿಯಲ್ಲಿ ಕಗಂಬ-ನಾಗರ ಶೈಲಿಯ ಶಿಖರಗಳ ಮಾದರಿಗಳನ್ನು ಇಟ್ಟಿಗೆ ಮತ್ತು ಗಾರೆಗಳ ಸಹಾಯದಿಂದ ರಚಿಸಲಾಗಿದೆ. ಕಮಾನುಗಳಿರುವ ಮಂಟಪದ ಅಧಿಷ್ಠಾನ ಮತ್ತು ಭಿತ್ತಿಯು ಸರಳವಾಗಿದ್ದು ಹೆಚ್ಚಿನ ಅಲಂಕರಣೆಗಳಿಲ್ಲ.

ಇದೇ ಗ್ರಾಮದಲ್ಲಿ ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ ಮತ್ತು ವಿಜಯನಗರ ಕಾಲದ ಮೂರು ಶಾಸನಗಳು ದೊರಕಿವೆ. ಗ್ರಾಮದ ಅತ್ಯಂತ ಪ್ರಾಚೀನ ಶಾಸನವು ರಾಷ್ಟ್ರಕೂರ ಅರಸ ಒಂದನೆ ಅಮೋಘವರ್ಷನ ಕಾಲಕ್ಕೆ, (ಕ್ರಿ.ಶ. ೮೬೦) ಸೇರಿದುದಾಗಿದೆ. ಅಮೋಘವರ್ಷನು ಕೊಳನೂರು ಬಸದಿಗೆ ಗ್ರಾಮವನ್ನು ದಾನ ಮಾಡಿದ ವಿಷಯವನ್ನು ಶಾಸನವು ಉಲ್ಲೇಖಿಸಿದೆ. (ಧಾ.ಜಿ.ಶಾ.ಸೂ. EI, VI, pp. 25-38; ಸಂ. ನರ ಪು. ೨೩) ಕಲ್ಯಾಣ ಚಾಲುಕ್ಯ ಅರಸ ಎರಡನೇ ಸೋಮೇಶ್ವರನ ಕಾಲಕ್ಕೆ ಸೇರಿದ ಇನ್ನೊಂದು ಶಾಸನವು ಮಾಂಡಳಿಕ ಲಕ್ಷ್ಮನೃಪ ಹಾಗೂ ಆಗನ ಮೈದುನ ಮಹಾಸಾಮಂತ ಮಾಳನೃಪರನ್ನು ಉಲ್ಲೇಖಿಸದೆ. (ಧಾ.ಜಿ.ಶಾ.ಸೂ, ಸಂ. ನರ. ಪು. ೨೩) ಹಳೆಯ ಮಠದಲ್ಲಿರುವ ವಿಜಯನಗರದ ಅರಸ ಸದಾಶಿವರಾಯನ ಕಾಲದ (ಕ್ರಿ.ಶ. ೧೫೪೭) ಶಾಸನವು ತ್ರಿಟಿತವಾಗಿದ್ದು, ಅರಸನು ನಾವಿದ ತಿಮ್ಮೋಜಾದಿಗಳಿಗೆ ಸುಂಕದಾನ ನೀಡಿದುದನ್ನು ದಾಖಲಿಸುತ್ತದೆ (ಧಾ.ಜಿ.ಶಾ.ಸೂ, ಸಂ. ನರ ಪು. ೨೩)

ಊರು ಕೊಣ್ಣೂರು
ಸ್ಮಾರಕ ಶಂಕರಲಿಂಗ (ಸುಣ್ಣದಗುಡಿ)
ಸ್ಥಳ ಊರ ದಕ್ಷಿಣಕ್ಕೆ
ಕಾಲ ಕ್ರಿ.ಶ. ಸು. ೧೮-೧೯ನೇ ಶತಮಾನ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ

ಆಧುನಿಕ ಶೈಲಿಯಲ್ಲಿರುವ ಈ ದೇವಾಲಯ ಗರ್ಭಗೃಹವನ್ನು ಮಾತ್ರ ಹೊಂದಿದೆ. ಅದರಲ್ಲಿ ಪ್ರಾಚೀನ ಕಾಲದ ಶಿವಲಿಂಗವಿದೆ. ಚೌಕಾಕಾರದ ಕಣಶಿಲೆಯ ಕಲ್ಲುಗಳನ್ನು ಬಳಸಿ ದೇವಾಲಯವನ್ನು ಕಟ್ಟಲಾಗಿದೆ. ದೇವಾಲಯದ ಹೊರ ಮತ್ತು ಒಳಭಾಗಗಳ ಭಿತ್ತಿಯಲ್ಲಿ ಉಬ್ಬುಶಿಲ್ಪಗಳಿಲ್ಲ. ದೇವಾಲಯಕ್ಕೆ ಸರಳ ಅಧಿಷ್ಠಾನ ಮತ್ತು ಶಿಖರವಿದೆ.

ಊರು ಕೊಣ್ಣೂರು
ಸ್ಮಾರಕ ಉದ್ದವ್ವನ ಗುಡಿ
ಸ್ಥಳ ಊರ ಹೊಳೆಯ ಹತ್ತಿರ
ಕಾಲ ಆಧುನಿಕ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ

ಮೊದಲಿಗೆ ಪುರಾತನ ದೇವಾಲಯವಿದ್ದ ಸ್ಥಳದಲ್ಲಿಯೇ ಪ್ರಾಚೀನ ವಾಸ್ತು ಸಾಮಾಗ್ರಿಗಳನ್ನು ಬಳಸಿಕೊಂಡು ದೇವಾಲಯವನ್ನು ನೂತನವಾಗಿ ನಿರ್ಮಿಸಲಾಗಿದೆ. ಚೌಕಾಕಾರವಾಗಿರುವ ದೇವಾಲಯವು ಗರ್ಭಗೃಹವನ್ನು ಮಾತ್ರ ಹೊಂದಿದ್ದು, ಅದರ ಮೇಲೆ ಇಟ್ಟಿಗೆ ಮತ್ತು ಸಿಮೆಂಟ್ ಬಳಸಿ ಕಟ್ಟಿದ ಶಿಖರಿವದೆ. ಗರ್ಭಗೃಹದಲ್ಲಿ ಗ್ರಾಮದೇವತೆ ಉದ್ದವ್ವನ ಮೂರ್ತಿಯಿದೆ. ಗರ್ಭಗುಡಿಯ ದ್ವಾರವು ಚಿಕ್ಕದಾಗಿದ್ದು ಸರಳ ಬಾಗಿಲವಾಡವನ್ನೊಳಗೊಂಡಿದೆ.

ದೇವಾಲಯದ ಒಳಭಾಗದ ಉತ್ತರ ಮತ್ತು ದಕ್ಷಿಣದ ಗೋಡೆಗಲ್ಲಿ ಚಿಕ್ಕಗೂಡಗಳಿವೆ. ಅಧಿಷ್ಠಾನದಲ್ಲಿ ತ್ರಿಪಟ್ಟ ಕುಮುದವಿದ್ದು, ಭಿತ್ತಿಯಲ್ಲಿ ಅಲಂಕರಣೆಗಳಿಲ್ಲ. ಪ್ರಾಚೀನ ಕಾಲದ ಶಿಖರದ ಕೆಲವು ವಾಸ್ತು ಅವಶೇಷಗಳನ್ನು ಉಪಯೋಗಿಸಿಕೊಂಡು ಆಧುನಿಕ ಶೈಲಿಯಲ್ಲಿ ಶಿಖರವನ್ನು ಆಕರ್ಷವಾಗಿ ನಿರ್ಮಿಸಲಾಗಿದೆ.

ಊರು ಚಿಕ್ಕನರಗುಂದ
ಸ್ಮಾರಕ ಕಲ್ಲೇಶ್ವರ
ಸ್ಥಳ ಊರನ ವಾಯವ್ಯಕ್ಕೆ
ಕಾಲ ಕ್ರಿ.ಶ. ಸು. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯವು ಚೌಕಾಕಾರದ ಗರ್ಭಗೃಹ ಮತ್ತು ತೆರೆದ ಮಂಟಪಗಳನ್ನು ಹೊಂದಿದೆ. ದೇವಾಲಯವನ್ನು ಸಂಪೂರ್ಣ ನವೀಕರಿಸಿದ್ದು, ಇಲ್ಲಿನ ತೆರೆದ ಮಂಟಪವನ್ನು ಬಿದಿರು ಮತ್ತು ಮರದ ಸಹಾಯದಿಂದ ನಿರ್ಮಿಸಲಾಗಿದೆ. ಆವರಣದಲ್ಲಿ ಇಟ್ಟಿಗೆ ಭೀಮಮ್ಮನ ಪ್ರತಿಮೆ ಇರುವ ಚಿಕ್ಕಗುಡಿಯನ್ನು ಕಟ್ಟಲಾಗಿದೆ. ದೇವಾಲಯದ ಪ್ರಾಂಗಣದಲ್ಲಿ ಪ್ರಾಚೀನ ದೇವಾಲಯದ ಕಲ್ಲುಗಳು ಹೇರಳವಾಗಿ ಹರಡಿವೆ. ಇವುಗಳಲ್ಲಿ ಕೆಲವನ್ನು ಜನರು ನಡೆದಾಡಲು ಬಳಸಿಕೊಳ್ಳುತ್ತಿದ್ದಾರೆ.

ಇದೇ ಗ್ರಾಮದ ಮಧ್ಯದಲ್ಲಿರುವ ಬಲದೇವರ ದೇವಾಲಯವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಇದರ ಪ್ರಾಕಾರ ಗೋಡೆ ಬಳಿ ಕ್ರಿ.ಶ. ೧೪ನೇ ಶತಮಾನದ ತ್ರುಟಿತ ಶಾಸನವಿದೆ. ಅದು ಪರಗಿಪುರ ಬಸವಣ್ಣ ಮತ್ತು ಮೂರುರಾಯರ ಗಂಡ ಎಂದು ದಾಖಲಿಸದೆ. (ಧಾ.ಜಿ.ಶಾ.ಸೂ, ಸಂ.ನರ. ಪು. ೨೩)

ಊರು ತುಳಸಿಗೆರೆ
ಸ್ಮಾರಕ ತುಳಸಿಗೆರೇಶ್ವರ (ಆಂಜನೇಯ)
ಸ್ಥಳ ಊರಿನ ವಾಯವ್ಯಕ್ಕೆ
ಕಾಲ ಕ್ರಿ.ಶ. ಸು. ೧೮-೨೯ನೇ ಶತಮಾನ
ಶೈಲಿ ಸ್ಥಳೀಯ
ಅಭಿಮುಖ ಉತ್ತರ
ಸ್ಥಿತಿ ಉತ್ತಮ
ಸಂರಕ್ಷಣೆ

ಸ್ಥಳೀಯರಿಂದ ಗುಳಸಿಗೆರೇಶ್ವರ ದೇವಾಲಯವೆಂದು ಕರೆಯಲ್ಪಡುತ್ತಿರುವ ಈ ಆಂಜನೇಯ ದೇವಾಲಯ, ಚೌಕಾಕಾರದ ಗರ್ಭಗೃಹ ಮತ್ತು ಎರಡು ಹಂತಗಳಲ್ಲಿ ಕಟ್ಟಿದ ಮುಖಮಂಟಪ ಹಾಗೂ ದೀಪಸ್ತಂಭಗಳನ್ನೊಳಗೊಂಡಿದೆ. ಈ ದೇವಾಲಯದ ಮುಂಭಾಗದಲ್ಲಿ ಚಾಲುಕ್ಯ ಶೈಲಿಯ ಎರಡು ಕಂಬಗಳಿವೆ. ಬಹುಶಃ ಹಿಂದೆ ಸ್ಥಳದಲ್ಲಿ ಪುರಾತನ ದೇವಾಲಯವಿದ್ದು, ಅದು ಹಾಳಾಗಿದ್ದುದರಿಂದ ಅದರ ಸಮೀಪದಲ್ಲೇ ಈಗಿನ ಆಧುನಿಕ ದೇವಾಲಯ ಕಟ್ಟಿರುವಂತಿದೆ.

ದೇವಾಲಯಕ್ಕೆ ಅಧಿಷ್ಠಾನವಿದೆ. ಮೂಲ ಲಿಂಗದ ಕೆಳಭಾಗದಲ್ಲಿದ್ದ ಚೌಕಾಕಾರದ ಪೀಟವನ್ನು ಬಳಸಿ ಅದರ ಮೇಲೆ ದೀಪಸ್ತಂಭವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ.

ಊರು ನರಗುಂದ
ಸ್ಮಾರಕ ಸಿದ್ದೇಶ್ವರ ಮಠ
ಸ್ಥಳ ಊರಿನ ಉತ್ತರಕ್ಕಿರುವ ಗುಡ್ಡದ ಮಧ್ಯೆ
ಕಾಲ ಕ್ರಿ.ಶ. ೧೮-೧೯ನೇ ಶತಮಾನ
ಶೈಲಿ ಸ್ಥಳೀಯರು
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ಮಠವು ನರಗುಂದದ ಬಾಬಾಸಾಹೇಬರ ಕಾಲಾವಧಿಯಲ್ಲಿ ನಿರ್ಮಿತವಾದದ್ದು. ಚೌಕಾಕಾರದ ಗರ್ಭಗೃಹ ಮಾತ್ರವಿರುವ ಗುಡಿಯಲ್ಲಿ ಲಿಂಗವಿದೆ. ದೇವಾಲಯಕ್ಕೆ ಎರಡು ಪ್ರವೇಶ ದ್ವಾರಗಳಿದ್ದು, ಪ್ರಸ್ತುತ ಪೂರ್ವದಿಕ್ಕಿನಿಂದ ಪ್ರವೇಶಿಸಬಹುದಾಗಿದೆ. ಪಶ್ಚಿಮದ ದ್ವಾರವನ್ನು ಈಗ ಮುಚ್ಚಲಾಗಿದೆ. ಗರ್ಭಗುಡಿಯಲ್ಲಿ ಯಾವುದೇ ಅಲಂಕರಣೆಯಿಲ್ಲ. ಈ ಗುಡಿಯು ಅಧಿಷ್ಠಾನವನ್ನು ಹೊಂದಿದೆ. ದೇವಾಲಯದ ಭಿತ್ತಿ ಮತ್ತು ಇತರೆ ಭಾಗಗಳಲ್ಲಿ ಯಾವುದೇ ಉಬ್ಬ ಶಿಲ್ಪಗಳಿಲ್ಲ.

ದೇವಾಲಯವಿರುವ ಬೆಟ್ಟದ ಪಶ್ಚಿಮದ ಬುಡದಲ್ಲಿ, ಇತ್ತೀಚಿನ ವರ್ಷಗಳಲ್ಲಿ ನಿರ್ಮಿಸಿದ ಪತ್ರಿಮಠ ಎಂಬ ಮತ್ತೊಂದು ಮಠವಿದೆ. ಚೌಕಾಕಾರದ ಪ್ರಾಂಗಣದ ಮಧ್ಯದಲ್ಲಿ ಪೂರ್ವಭಿಮುಖವಾಗಿರುವ ಒಂದು ಗುಡಿಯಿದೆ. ಇದರಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಅದರ ಪಕ್ಕದಲ್ಲಿ ಅಜ್ಜನವರ ಗದ್ದುಗೆ ಇದ್ದು ಅದನ್ನು ಜನರು ಪೂಜಿಸುತ್ತಾರೆ.

ಊರು ನರಗುಂದ
ಸ್ಮಾರಕ ಶಂಕರಲಿಂಗ
ಸ್ಥಳ ಊರಿನ ಮಧ್ಯದಲ್ಲಿ
ಕಾಲ ಕ್ರಿ.ಶ. ೧೦-೧೧ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ ರಾ.ಪು.ಇ.

ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ, ಮುಖಮಂಟಪ ಮತ್ತು ತೆರೆದ ಮಂಟಪಗಳನ್ನು ಹೊಂದಿದೆ. ಗರ್ಭಗೃಹವು ಚೌಕಾಕಾರವಾಗಿದ್ದು ಅದರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಇದರ ದ್ವಾರ ಶಾಖೆಯು ಅಲಂಕರಣೆಗಳಿಲ್ಲದೆ ಸರಳವಾಗಿದೆ. ದೇವಾಲಯಕ್ಕೆ ಅಂತರಾಳವಿದ್ದು, ಅದರ ದ್ವಾರವೂ ಸಹ ಸರಳವಾಗಿದೆ. ದೇವಾಲಯದ ಅಂತರಾಳದಲ್ಲಿ ಪ್ರಾಚೀನ ಕಾಲದ ದತ್ತಾತ್ರೇಯ ಮತ್ತು ಹನುಮಂತನ ಮೂರ್ತಿ ಶಿಲ್ಪಗಳಿವೆ. ನವರಂಗದಲ್ಲಿ ಆಕರ್ಷಕ ನಾಲ್ಕು ಕಂಬಗಳಿವೆ. ಇವುಗಳು ಚೌಕ, ವೃತ್ತಾಕಾರವಾಗಿದ್ದು, ಬಳೆ, ಮಾಲಾ, ಪೂರ್ಣ ಕಳಸಗಳ ಅಲಂಕಾರಗಳನ್ನು ಹೊಂದಿವೆ.

ನವರಂಗದ ಮುಂಭಾಗದಲ್ಲಿ ಬಾಬಾಸಾಹೇಬರ ಕಾಲದಲ್ಲಿ ನಿರ್ಮಾಣವಾದ ಮುಖ ಮಂಟಪವು ಸಹ ನಾಲಕ್‌ಉ ಕಂಬಗಳಿಂದ ಕೂಡಿದೆ. ಇಲ್ಲಿನ ಕಂಬ ಮತ್ತು ಬೋಧಿಗೆಗಳನ್ನು ಮರದಿಂದ ನಿರ್ಮಿಸಲಾಗಿದ್ದು, ಅದರ ಮೇಲಿನ ಮುಚ್ಚಿಗೆಯನ್ನು, ಸಹ ಮರ ಹಾಗೂ ಮರದ ಹಲಗೆಗಳನ್ನು ಬಳಸಿ ಕಟ್ಟಲಾಗಿದೆ. ಈ ಮಂಟಪಕ್ಕೆ ಉತ್ತರ ಮತ್ತು ದಕ್ಷಿಣದಲ್ಲಿ ಎರಡು ದ್ವಾರಗಳಿವೆ. ಮಂಟಪದ ಮುಂಭಾಗಕ್ಕೆ ತೆರೆದ ಮಂಟಪವಿದೆ. ಅದರ ಮಧ್ಯದಲ್ಲಿಯೂ ನಾಲ್ಕು ಕಂಬಗಳಿವೆ.

ದೇವಾಲಯದ ಹೊರಭಾಗವನ್ನು ಸಿಮೆಂಟಿನಿಂದ ಸಂಪೂರ್ಣವಾಗಿ ನವೀಕರಿಸಿರುವುದರಿಂದ ಮೂಲವಾಸ್ತು ಭಾಗಗಳು ಗೋಚರವಾಗುವುದಿಲ್ಲ. ದೇವಾಲಯದ ದಕ್ಷಿಣ ಭಾಗದಲ್ಲಿ ಕೆಲವು ಕೋಣೆಗಳು ಮತ್ತು ಈಶಾನ್ಯಕ್ಕೆ ಒಂದು ಬಾವಿಯಿದೆ. ಇವೆಲ್ಲಾ ಭಾಗಗಳನ್ನು ಸುತ್ತುವರಿದಂತೆ ದೇವಾಲಯದ ಸುತ್ತಲೂ ಪ್ರಾಕಾರ ಗೋಡೆಯಿದೆ. ದೇವಾಲಯದ ದಕ್ಷಿಣ ಪ್ರಾಕಾರದಲ್ಲಿ ಉಗ್ರಾಣ, ಪಾಕಶಾಲೆ, ಮಂಟಪ ಮತ್ತು ಭೋಜನ ಶಾಲೆಗಳಿವೆ. ಪ್ರಾಕಾರದ ಪೂರ್ವದ ಪ್ರವೇಶದ್ವಾರವು ಭವ್ಯವಾಗಿದ್ದು, ಅದನ್ನು ಇತ್ತೀಚೆಗೆ ಸಿಮೆಂಟ್ ಮತ್ತು ಇಟ್ಟಿಗೆ ಬಳಸಿ ಕಟ್ಟಲಾಗಿದೆ. ಇತ್ತೀಚೆಗೆ ಪ್ರತಿಷ್ಠಾಪಿಸಿದ ಗಣಪತಿ, ಆಂಜನೇಯ, ನಾಗರ ಕಲ್ಲುಗಳು ಸಹ ದೇವಾಲಯದ ಆವರಣದಲ್ಲಿ ಕಂಡುಬರುತ್ತವೆ.

ದೇವಾಲಯದ ನವರಂಗ ಅಥವಾ ರಂಗಮಂಟಪದಲ್ಲಿ ಎರಡು ಶಾಸನಗಳಿವೆ. ಕ್ರಿ.ಶ. ೧೧೩೯ರ ಶಾಸನವು (ಧಾ.ಜಿ.ಶಾ.ಸೂ, ಸಂ. ನರ. ೯; KI, V, ನಂ. ೨೪) ಕಲ್ಯಾಣ ಚಾಲುಕ್ಯರ ಅರಸ ನಾಲ್ಕನೇ ಸೋಮೇಶ್ವರನ ಕಾಲಕ್ಕೆ ಸೇರಿದುದಾಗಿದೆ. ಅದು ದಂಡನಾಯಕ ರುದ್ರದೇವರಸನಿಂದ ನರಗುಂದ ಅಗ್ರಹಾರದ ಧವಳಶಂಕರ ದೇವಾಲಯಕ್ಕೆ ಸಿದ್ಧಾಯ ದಾನ ನೀಡಿರುವುದನ್ನು ಉಲ್ಲೇಖಿಸಿದೆ. ಇನ್ನೊಂದು ಶಾಸನವು ಸಹ ಕಲ್ಯಾಣ ಚಾಲುಕ್ಯ ಅರಸ ತ್ರೈಲೋಕ್ಯಮಲ್ಲದೇವನ ಕಾಲಕ್ಕೆ ಸೇರಿದ್ದು, ಕ್ರಿ.ಶ. ಸು. ೧೨ನೇ ಶತಮಾನಕ್ಕೆ ಸರಿಹೊಂದುತ್ತದೆ. ಪ್ರಸ್ತುತ ಶಾಸನವು ಏಚಿಸೆಟ್ಟಿಗೆ ಭೂ ದಾನ ನೀಡಿದ ವಿವರಗಳನ್ನು ನೀಡುತ್ತದೆ. (ಧಾ.ಜಿ.ಶಾ.ಸೂ, ಸಂ. ನರ. ೧೧; KI, V. ನಂ. ೨೯ ಪು. ೨೩) ಮೇಲಿನ ಶಾಸನಗಳಿಂದ ನರಗುಂದವು ಅಗ್ರಹಾರವಾಗಿರುತ್ತೆಂಬುದು ತಿಳಿದುಬರುತ್ತದೆ. ಮೊದಲ ಶಾಸನವು ಉಲ್ಲೇಖಿಸಿರುವ ಧವಳಶಂಕರ ದೇವಾಲಯವು ಪ್ರಸ್ತುತ ಶಂಕರಲಿಂಗ ದೇವಾಲಯವೇ ಆಗಿದೆ. ಊರಿನಲ್ಲಿರುವ ಮತ್ತೆರಡು ಶಾಸನಗಳಲ್ಲಿ ಒಂದು ಶಾಸನದ ತೇದಿಯು ಕ್ರಿ.ಶ. ೧೦೭೮ ಆಗಿದ್ದು, ವೀರನೊಳಂಬಪಲ್ಲವ ಪೇರ್ಮಾಡಿ ಜಯಸಿಂಹದೇವನು ಆಳುವಾಗ ಮಮ್ಮನೆಂಬ ವ್ಯಕ್ತಿಯು ಸತ್ರಕ್ಕೆ ನೀಡಿದ ದಾನವನ್ನು ದಾಖಲಿಸಿದೆ (ಧಾ.ಜಿ.ಶಾ.ಸೂ, ಸಂ.ನರ. ೮ ಪು. ೨೩; KI, V, ನಂ. ೧೧). ಜೋಡುಹನುಂತದೇವರ ಗುಡಿ ಎದುರು, ಇರುವ ತ್ರುಟಿತ ಶಾಸನವು ಲಕ್ಷ್ಮೀನಾರಾಯಣ ಭಟ್ಟನು ಕೀರ್ತಿನಾರಾಯಣ ದೇವರಿಗೆ ಭೂಮಿಯನ್ನು ದಾನ ನೀಡಿದುದನ್ನು ಉಲ್ಲೇಖಿಸಿದೆ (ಧಾ.ಜಿ.ಶಾ.ಸೂ, ಸಂ. ನರ, ೧೦, ಪು. ೨೩, KI, V, ನಂ. ೨೬). ಇದರ ತೇದಿಯು ಕ್ರಿ.ಶ. ೧೧೪೮ ಆಗಿದ್ದು, ಕಲ್ಯಾಣ ಚಾಲುಕ್ಯ ಅರಸ ಇಮ್ಮಡಿ ಜಗದೇಕಮಲ್ಲನ ಕಾಲಕ್ಕೆ ಸರಿಹೊಂದುತ್ತದೆ.

೧೦

ಊರು ನರಗುಂದ
ಸ್ಮಾರಕ ಮಹಾಬಲೇಶ್ವರ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ

ಈ ದೇವಾಲಯ ಗರ್ಭಗೃಹ, ಅರ್ಧಮಂಟಪ, ನವರಂಗ ಹಾಗೂ ಸೂರ್ಯ ನಾರಾಯಣ ಮಾರ್ಪಾಡುಗಳನ್ನೊಳಗೊಂಡಿದೆ. ಮೂಲತಃ ತ್ರಿಕೂಟವಾಗಿದ್ದು ಈ ದೇವಾಲಯದಲ್ಲಿ ಮೂರು ಚೌಕಾಕಾರದ ಗರ್ಭಗೃಹಗಳಿವೆ. ಇವುಗಳ ದ್ವಾರವು ಹಲವು ಶಾಖೆಗಳ ಅಲಂಕಾರದಿಂದ ಕೂಡಿದ್ದು, ಲಲಾಟದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ. ಗರ್ಭಗೃಹದ ಮಧ್ಯಭಾಗದಲ್ಲಿ ಶಿವಲಿಂಗವಿದೆ. ಗರ್ಭಗೃಹದ ಮುಂದಿನ ಅರ್ಧಮಂಟಪದ ದ್ವಾರದ ಹಲವು ಶಾಖೆಗಳ ಅಲಂಕಾರದಿಂದ ಕೂಡಿದ್ದು, ಲಲಾಟದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ. ಗರ್ಭಗೃಹದ ಮಧ್ಯಭಾಗದಲ್ಲಿ ಶಿವಲಿಂಗವಿದೆ. ಗರ್ಭಗೃಹದ ಮುಂದಿನ ಆರ್ಧಮಂಟಪದ ದ್‌ಆರದ ಲಲಾಟದ ಮೇಲಿನ ಭಾಗದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ಸ್ಥಾನೀಕರಾಗಿದ್ದಾರೆ.

ಅರ್ಧಮಂಟಪದ ಮುಂಬಾಗದ ನವರಂಗದಲ್ಲಿ ಚೌಕ, ಅಷ್ಟಕೋನಾಕಾರದ ಕಂಬಗಳಿವೆ. ಇವುಗಳಲ್ಲಿ ಗಂಟೆ, ಮಾಲಾ, ಕಮಲದ ಎಲೆಗಳ ಅಲಂಕಾರವಿದೆ. ಕಂಬಗಳ ಮೇಲೆ ಬೋಧಿಗೆ ಮತ್ತು ಭುವನೇಶ್ವರಿಗಳನ್ನು ಉತ್ತಮವಾಗಿ ಅಲಂಕರಿಸಲಾಗಿದೆ. ನವರಂಗದ ದ್ವಾರವು ವಿವಿಧ ಶಾಕೆಗಳಿಂದ ಅಲಂಕೃತವಾಗಿದೆ ಮತ್ತು ಲಲಾಟದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ ಮತ್ತು ಲಲಾಟದ ಮೇಲಿನ ಭಾಗವನ್ನು ಕಾಲಾಂತರದಲ್ಲಿ ಕಮಲದ ಹೂವಿನ ಅಲಂಕಾರವಿರುವ ಕಲ್ಲುಗಳನ್ನು ಜೋಡಿಸಲಾಗಿದೆ.

ನವರಂಗದ ಎದುರಿನಲ್ಲಿರುವ ಸೂರ್ಯನಾರಾಯಣ ಮಂಟಪವಿದ್ದು, ಅದರ್ಲ್ಲಿ ಸೂರ್ಯನಾರಾಯಣ ಸ್ಥಾನಿಕವಾಗಿರುವ ಮೂರ್ತಿ ಇದೆ. ಈ ಮೂರ್ತಿಯ ಪೀಠಭಾಗದಲ್ಲಿ ಏಳು ಕುದುರೆಗಳನ್ನು ಚಿತ್ರಿಸಲಾಗಿದೆ. ಇದೇ ಸೂರ್ಯನಾರಾಯಣ ಮಂಟಪದ ಮುಂಭಾಗ ಮತ್ತು ಅರ್ಧಮಂಟಪದಲ್ಲಿ ಸಹಾ ಸೂರ್ಯನ ಶಿಲ್ಪವಿದೆ.

ದೇವಾಲಯದ ಅಧಿಷ್ಠಾನವು ಮೂರು ಪಟ್ಟಿಕೆ ಮತ್ತು ಕುಮುದ, ಪದ್ಮಗಳಿಂದ ಕೂಡಿದೆ. ದೇವಾಲಯದ ಭಿತ್ತಿಯನ್ನು ದೇವಕೋಷ್ಠಕಗಳಿಂದ, ಶಿಖರದ ಮಾದರಿಗಳಿಂದ ಪೂರ್ಣಕಲಶ, ಅರೆಗಂಬಗಳು ಮತ್ತು ಕುಬ್ಜಪಂಜರಗಳಿಂದ ಅಲಂಕರಿಸಲಾಗಿದೆ. ನವರಂಗದ ದಕ್ಷಿಣದ್ವಾರದ ಮುಂಭಾಗವನ್ನು ಪ್ರವೇಶಿಸಲು ಹಸ್ತಿಹಸ್ತ ಫಲಕಗಳುಳ್ಳ ಮೆಟ್ಟಿಲುಗಳಿವೆ, ದೇವಾಲಯದ ಗರ್ಭಗೃಹದ ಮೇಲೆ ಇತ್ತೀಚಿಗೆ ಕಟ್ಟಿದ ಶಿಖರವಿದೆ.

ಸೂರ್ಯನಾರಾಯಣ ಮಂಟಪದ (ಗುಡಿ) ಅಧಿಷ್ಠಾನವು ಸಹಾ ಮೂಲ ದೇವಾಲಯದಂತೆ ವಿವಿಧ ಪಟ್ಟಿಕೆಗಳಿಂದ ಅಲಂಕೃತವಾಗಿದೆ. ಹಾಗೂ ಭಿತ್ತಿಯ ಭಾಗದಲ್ಲಿ ದೇವಕೋಷ್ಠಕಗಳಿಂದ, ಮತ್ತು ಶಿಖರದ ಮಾದರಿಗಳಿಂದ ಅಲಂಕರಿಸಲಾಗಿದೆ. ಈ ಮಂಟಪಕ್ಕೆ ಯಾವುದೇ ರೀತಿಯ ಶಿಖರವಿಲ್ಲ.

ಈ ದೇವಾಲಯದ ವಾಸ್ತು ಮತ್ತು ಸುತ್ತಲಿನ ಪರಿಸರವನ್ನು ಗನಿಸಿದರೆ ಪ್ರಾಚೀನ ಕಾಲದಲ್ಲಿ ಈ ದೇವಾಲಯವು ಪ್ರಮುಖ ಪಾತ್ರವಹಿಸಿರಬಹುದೆಂದು ಅರ್ಥೈಸಬಹುದಾಗಿದೆ.