೧೧

ಊರು ನರಗುಂದ-ಸೋಮಾಪುರ
ಸ್ಮಾರಕ ಹನುಮಂತ
ಸ್ಥಳ ಊರಿನ ದಕ್ಷಿಣಕ್ಕೆ
ಕಾಲ ಕ್ರಿ.ಶ. ೧೭-೧೮ನೇ ಶತಮಾನ
ಶೈಲಿ ಆಧುನಿಕ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ

ಈ ದೇವಾಲಯವು ಚೌಕಾಕಾರದ ಗರ್ಭಗೃಹ ಮತ್ತು ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹದ ಬಾಗಿಲುವಾಡವು ಚಾಲುಕ್ಯ ಶೈಲಿಯಲ್ಲಿದ್ದು, ಬಹುಶಃ ಬೇರೆಡೆಯಿಂದ ಅದನ್ನು ತಂದು ಕಟ್ಟಿರಬಹುದೆನಿಸುತ್ತದೆ. ಮುಖಮಂಟಪವು ಚೌಕಾಕಾರದ ನಾಲ್ಕು ಸರಳ ಕಂಬಗಳಿಂದ ಕೂಡಿದೆ. ದೇವಾಲಯದ ಭಿತ್ತಿಯು ಅಲಂಕಾರ ರಹಿತವಾಗಿದ್ದು ಆಧಿನಿಕ ಶೈಲಿಯ ಶಿಖರವನ್ನೊಳಗೊಂಡಿದೆ. ದೇವಾಲಯದ ಮುಂಭಗದಲ್ಲಿನ ಆವರಣ ಗೋಡೆಯಲ್ಲಿ ಸಪ್ತಮಾತೃಕೆಯರ ಇದೇ ಆವರಣದಲ್ಲಿ ಎರಡು ಶಾಸನಗಳಿವೆ. ಶಿಲಾಫಲಕವಿದೆ. ಮೊದಲ ಶಾಸನದ ತೇದಿಯು ಕ್ರಿ.ಶ. ೧೦೮೧ ಆಗಿದ್ದು, ಕಲ್ಯಾಣ ಚಾಲುಕ್ಯ ಅರಸ ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದೆ. ಅದು ಯುವರಾಜ ವೀರನೊಳಂಬಾದಿ ರಾಜನ ರಾಯಭಾರಿ ಮಂಡೆಯರಸ್ನು ಭೂದಾನ ಮಾಡಿದ ವಿವರಗಳನ್ನು ನೀಡುಸತ್ತದೆ. (ಧಾ.ಜಿ.ಶಾ.ಸೂ, ಸಂ. ನರ. ೧೫ ಪು. ೨೩; KI. V, ಸಂ. ೧೨). ಕ್ರಿ.ಶ. ೧೧೦೩ರ ಇನ್ನೊಂದು ಶಾಸನವು (ಧಾ.ಜಿ.ಶಾ.ಸೂ, ಸಂ. ನರ. ೧೬; ಪು. ೨೩; KI, V, ನಂ. ೧೫) ಮೆಕ್ಕೆಗೇರಿಯ ಮೂವತ್ತೈದು ಮಹಾಜನರಿಂದ ಮಂಡೆಗೆರೆಯ ಕೆರೆಗೆ ಸುಂಕ ಮತ್ತು ಆದಾಯವನ್ನು ನೀಡಿದ ವಿಷಯವನ್ನು ದಾಖಲಿಸುತ್ತದೆ. ಗುಡಿಯ ತೊಲೆಯಲ್ಲಿನ ಕ್ರಿ.ಶ. ೧೭೬೯ರ ಶಾಸನವು ಸೋಮಾಪುರದಲ್ಲಿ ಹನುಮಂತದೇವರನ್ನು ದೇವರಾಯನು ಪ್ರತಿಷ್ಠಾಪಿಸಿದ ವಿವರಗಳನ್ನು ನೀಡುತ್ತದೆ. (ಧಾ.ಜಿ.ಶಾ.ಸೂ, ಸಂ. ೧೭, ಪು. ೨೩). ದೊಡ್ಡದಾಗಿರುವ ಈ ಶಾಸನವನ್ನು ಸ್ಥಳೀಯರು ಹಾಸುಗಲ್ಲಾಗಿ ಉಪಯೋಗಿಸುತ್ತಿರುವುದು ವಿಪರ್ಯಾಸ. ಇಲ್ಲಿರುವ ಮತ್ತೊಂದು ಶಾಸನ ಸಂಪೂರ್ಣ ತ್ರುಟಿತವಾಗಿದೆ.

೧೨

ಊರು ನರಗುಂದ-ಸೋಮಾಪುರ
ಸ್ಮಾರಕ ಈಶ್ವರ
ಸ್ಥಳ ಗ್ರಾಮದ ಮಧ್ಯೆ
ಕಾಲ ಆಧುನಿಕ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚಿನ ದಿನಗಳಲ್ಲಿ ನಿರ್ಮಾಣವಾದ ಈ ದೇವಾಲಯವು ಚೌಕಾಕಾರದ ಗರ್ಭಗೃಹ ಮತ್ತು ಮುಖಮಂಟಪವನ್ನೊಳಗೊಂಡಿದೆ. ಗರ್ಭಗೃಹದಲ್ಲಿ ಚಾಲುಕ್ಯ ಶೈಲಿಯ ಲಿಂಗವಿದೆ. ಅದರೊಂದಿಗೆ ಮತ್ತೆರಡು ಲಿಂಗಗಳೂ ಸಹಾ ಅಲ್ಲಿಯೇ ಇವೆ. ಸರಳವಾದ ಮುಖ ಮಂಟಪವನ್ನು ಇತ್ತೀಚೆಗೆ ಕಟ್ಟಲಾಗಿದೆ.

ಗ್ರಾಮದಲ್ಲಿಯೇ ಇರುವ ಬಸವಣ್ಣ ದೇವಾಲಯದ ಬಳಿ ಎರಡನೇ ಸೋಮೇಶ್ವರನ ಕಾಲದ ಕ್ರಿ.ಶ. ೧೦೭೫ರ ಶಾಸನವು ದೊರೆತಿದೆ. ಈ ಶಾಸನವು ಸೆಟ್ಟಿಯೊಬ್ಬನು ಬಸದಿಗೆ ನೀಡಿದ ಭೂದಾನವನ್ನು ಕುರಿತು ಉಲ್ಲೇಖಿಸುತ್ತದೆ. (ಧಾ.ಜಿ.ಶಾ.ಸೂ, ಸಂ. ನರ, ೧೪; ಪು. ೨೩; KI, V, ನಂ. ೧೦). ಅದರ ಬಳಿ ಮತ್ತೊಂದು ತ್ರುಟಿತ ಶಾಸನವಿದೆ.

೧೩

ಊರು ಬನಹಟ್ಟಿ
ಸ್ಮಾರಕ ರಾಮಲಿಂಗಪ್ಪನ ಗುಡಿ
ಸ್ಥಳ ಊರಿನಲ್ಲಿ
ಕಾಲ ಕ್ರಿ.ಶ. ಸು. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಚೌಕಾಕಾರದ ಗರ್ಭಗೃಹವನ್ನು ಮಾತ್ರ ಹೊಂದಿದೆ. ಪ್ರಾಯಶಃ ಈ ದೇವಾಲಯದಲ್ಲಿದ್ದ ಇತರೆ ಭಾಗಗಳು ಕಾಲ ಕ್ರಮೇಣ ನಶಿಸಿರಬಹುದೆನಿಸುತ್ತದೆ. ಚೌಕಾಕಾರದ ಗರ್ಭಗೃಹದಲ್ಲಿ ಪಾಣಿಪೀಠವಿಲ್ಲದ ಎರಡು ಲಿಂಗಗಳಿದ್ದು ಅವುಗಳ ಅಕ್ಕಪಕ್ಕದಲ್ಲಿ ಎರಡು ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ಲಿಂಗಗಳ ಮಧ್ಯದಲ್ಲಿ ಭಗ್ನಗೊಂಡಿರುವ (ಭೈರವ) ಮೂರ್ತಿಶಿಲ್ಪವಿದೆ. ಚತುರ್ಮುಖಿಯಾತಿರುವ ಈ ಪ್ರತಿಮೆಯ ಮೇಲಿನ ಕೈಗಳು ನಾಶಗೊಂಡಿದ್ದು, ಕೆಳಗಿನ ಕೈಗಳು ಮಾತ್ರ ಉಳಿದಿವೆ. ಕೆಳಗಿನ ಬಲಗೈಯಲ್ಲಿ ಖಡ್ಗ ಮತ್ತು ಕೆಳಗಿನ ಎಡಗೈಯಲ್ಲಿ ಕಾಪಾಲವಿದೆ.

ಈ ದೇವಾಲಯಕ್ಕೆ ಅಧಿಷ್ಠಾನವಿದೆ. ಇದರ ಭಿತ್ತಿಯಲ್ಲಿ ಯಾವುದೇ ಶಿಲ್ಪಗಳಿಲ್ಲ. ದೇವಾಲಯದ ಮೇಲ್ಚಾವಣಿಯ ನಿರ್ಮಾಣಕ್ಕಾಗಿ ಕಪ್ಪುಶಿಲೆಯ ಚಪ್ಪಡಿ (ಕಡಪಕಲ್ಲನ್ನು) ಬಳಸಲಾಗಿದೆ.

೧೪

ಊರು ಶಿರೋಳ್
ಸ್ಮಾರಕ ಕೆಳಗಣ ಹನುಂತ
ಸ್ಥಳ ಊರಿನ ದಕ್ಷಿಣಕ್ಕೆ
ಕಾಲ ಕ್ರಿ.ಶ.ಸು. ೧೭-೧೮ನೇ ಶತಮಾನ
ಶೈಲಿ ಸ್ಥಳೀಯ
ಅಭಿಮುಖ ದಕ್ಷಿಣ
ಸ್ಥಿತಿ ಉತ್ತಮ
ಸಂರಕ್ಷಣೆ

ಈ ದೇವಾಲಯವು ಗರ್ಭಗೃಹ ಮತ್ತು ಮುಖಮಂಟಪವನ್ನು ಹೊಂದಿದೆ. ಪ್ರಾಚೀನವಾದ ಹನುಮಂತನ ಶಿಲ್ಪಕ್ಕೆ ಸುಮಾರು ೭೦-೮೦ ವರ್ಷಗಳ ಹಿಂದೆ ಗುಡಿ ಕಟ್ಟಿಸಿದ್ದಾರೆ. ಈ ದೇವಾಲಯದ ಬಳಿ ಪ್ರಾಚೀನ ಕಬಂದ ಬೋಧಿಗೆಯಿದೆ ಹಾಗೂ ಸನಿಹದಲ್ಲಿರುವ ಗೋಟದಾರ್ಯ ಮಠದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಮರಳುಗಲ್ಲಿನ ಲಿಂಗವಿದೆ. ಮಠದ ಕಂಬವೊಂದರಲ್ಲಿ ಚಾಲುಕ್ಯರ ಕಾಲದ ಶೈಲಿಯ ಕಂಬಗಳು ಮತ್ತು ಕ್ರಿ.ಶ. ೧೦-೧೧ನೇ ಶತಮಾನಕ್ಕೆ ಸೇರಬಹುದಾದ ವೀರಗಲ್ಲುಗಳಿವೆ. ಈ ವೀರಗಲ್ಲು ಎಲ್ಲಾ ವೀರಗಲ್ಲುಗಳಂತೆ ಉದ್ದವಾಗಿರದೆ ಅಡ್ಡವಾದ ಪಟ್ಟಿಕೆಯಂತಿದೆ. ಇದರ ಮಧ್ಯದ ಪಟ್ಟಿಕೆಯಲ್ಲಿ ವೀರನೊಬ್ಬ ಮಗುವಿನ ತಲೆಯ ಮೇಲೆ ಕೈ ಇಟ್ಟಂತಿರುವುದು ವಿಶೇಷವಾಗಿದೆ.

೧೫

ಊರು ಹದಲಿ
ಸ್ಮಾರಕ ಕೆಳಗಣ ಹನುಮಂತ
ಸ್ಥಳ ಗ್ರಾಮದ ಸಮೀಪವಿರುವ ಹೊಲದಲ್ಲಿ
ಕಾಲ ಕ್ರಿ.ಶ.ಸು. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ

ಈ ದೇವಾಲಯ ಚೌಕಾಕಾರದ ಗರ್ಭಗೃಹ ಮತ್ತು ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಕಲ್ಮೇಶ್ವರನ ಲಿಂಗವಿದೆ. ಗರ್ಭಗೃಹದ ಸುತ್ತಲೂ ಪ್ರಕ್ಷಿಣಾಫತವಿದೆ. ಮುಖಮಂಟಪದಲ್ಲಿ ಅಲಂಕೃತ ಆರು ಕಂಬಗಳಿವೆ. ಮುಖಮಂಟಪದ ಮುಂಭಾಗಕ್ಕೆ ಕಕ್ಷಾಸನವಿದೆ. ಅದರ ಬಳಿ ಆರನೆಯ ವಿಕ್ರಮಾದಿತ್ಯನ ಕ್ರಿ.ಶ. ೧೦೮೪ರ ಶಾಸನವಿದೆ. ಪ್ರಸ್ತುತ ಶಾಸನವು ಜ್ಞಾನಶಕ್ತಿ ಪಂಡಿತನಿಂದ ಗೌರವೇಶ್ವರ ದೇವರಿಗೆ ದಾನ ನೀಡಿದ ವಿವರಗಳನ್ನು ಒದಗಿಸುವುದರೊಂದಿಗೆ, ಶಾಸನ ಕವಿ ಕರ್ಪರಸವನ್ನು ಸಹ ಉಲ್ಲೇಖಿಸಿದೆ. (ಧಾ.ಜಿ.ಶಾ.ಸೂ, ಸಂ. ನರ, ೧೮, ಪು. ೨೩; ಪು. ೨೩, IA, XII, ಪು. ೯೧). ದೇವಾಲಯದ ಅಧಿಷ್ಠಾನ ಮತ್ತು ಹೊರ ಭಿತ್ತಿಗಳು ಸರಳವಾಗಿವೆ. ಮೇಲ್ಛಾವಣಿಯ ನಿರ್ಮಾಣಕ್ಕೆ ಕಡಪಕಲ್ಲು ಬಳಸಿದ್ದಾರೆ. ಈ ದೇವಾಲಯದ ಬಹುತೇಕ ಭಾಗಗಳನ್ನು ಇತ್ತೀಚೆಗೆ ಜೀರ್ಣೋದ್ಧಾರಗೊಳಿಸಲಾಗಿದೆ.