ಮುಂಡರಗಿ ತಾಲ್ಲೂಕು

ಮುಂಡರಗಿ ತಾಲ್ಲೂಕು

ಊರು ಕಕ್ಕೂರ
ಸ್ಮಾರಕ ಮಲ್ಲಿಕಾರ್ಜುನ
ಸ್ಥಳ ಗ್ರಾಮದಲ್ಲಿ
ಕಾಲ
ಶೈಲಿ
ಅಭಿಮುಖ ಪಶ್ಚಿಮ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಪ್ರಾಚೀನ ಮಲ್ಲಿಕಾರ್ಜುನ ದೇವಾಲಯ ಸಂಪೂರ್ಣವಾಗಿ ಬಿದ್ದುಹೋಗಿದ್ದು, ಅದನ್ನು ನವೀಕರಿಸಿ ಮರು ಕಟ್ಟಲಾಗಿದೆ. ಆದರೆ ಹಳೆಯ ದೇವಾಲಯಕ್ಕೆ ಸೇರಿದ ಮಹತ್ವದ ಯಾವುದೇ ಪ್ರಾಚ್ಯಾವಶೇಷಗಳು ಕಂಡುಬರುವುದಿಲ್ಲ. ಪ್ರಾಚೀನವೆಂದು ಪರಿಗಣಿಸಬಹುದಾದ ಲಿಂಗದ ಪೀಠ ಹಾಗೂ ರುದ್ರಭಾಗಗಳು ಮಾತ್ರ ಉಳಿದುಕೊಂಡಿವೆ. ಇದೇ ದೇವಾಲಯದ ಆವರಣದಲ್ಲಿರುವ ಹನುಮಂತನ ಗುಡಿಯನ್ನು ಸ್ಥಳೀಯರು ವ್ಯವಸ್ಥಿತವಾಗಿ ರಕ್ಷಿಸಿದ್ದಾರೆ.

ಹನುಮಂತದೇವರ ಗುಡಿಯ ಮುಂಭಾಗದಲ್ಲಿ ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ ಕ್ರಿ.ಶ. ೧೧೩ರ ಶಾಸನವೊಂದು ಪ್ರಕಟಗೊಂಡಿದೆ (ಧಾ.ಜಿ.ಶಾ.ಸೂ, ಸಂ.ಮುಂ. ೭, ಪು. ೪೦; SII, SI, pt. II, no. 165). ಇದು ಗ್ರಾಮದಲ್ಲಿದ್ದ ಮಲ್ಲಿಕಾರ್ಜುನ ದೇವಾಲಯಕ್ಕೆ ದಾನ ನೀಡಿದ ಮಾಹಿತಿಯನ್ನು ನೀಡುತ್ತದೆ. ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಸಾಮಂತ ಪೆರ್ಮಾಡಿಯರಸನು ಮಾಸವಾಡಿ-೧೪೦ರ ಆಡಳಿತ ವಿಭಾಗವನ್ನು ಆಳುತ್ತಿದ್ದನು. ಅದೇ ಕಾಲಕ್ಕೆ ಈತನ ಮಹಾ ಮಂಡಲೇಶ್ವರ ಕಕ್ಕರಸನು ಒಡವಡ್ಡಿ (ಚಿಕ್ಕವಡ್ಡಟ್ಟಿ)ಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಿರ್ವಹಿಸುತ್ತಿದ್ದನು. ಶಾಸನದಲ್ಲಿ ಉಲ್ಲೇಖವಾದ ಕಕ್ಕರಸನಿಂದಲೇ ಈ ಗ್ರಾಮಕ್ಕೂ ’ಕಕ್ಕೂರ’ ಎಂದು ಹೆಸರು ಬಂದಿರಬಹುದೆಂದು ಅಭಿಪ್ರಾಯಪಡಲಾಗಿದೆ. (ಮಹಾಲಿಂಗ ಯಾಳಗಿ (ಸಂ). ಮಂಡರಗಿ ನಾಡದರ್ಶನ, ಪು. ೨೯). ಆದರೆ ಆ ವೇಳೆಗಾಗಲೇ (ಕಕ್ಕರಸನು ಆಡಳಿತ ನಿರ್ವಹಿಸುತ್ತಿದ್ದ ವರ್ಷಗಳಲ್ಲಿ) ಶಾಸನದಲ್ಲಿ ಕಕ್ಕೂರ ಎಂಬ ಸ್ಪಷ್ಟವಾದ ಹೆಸರಿನ ಉಲ್ಲೇಖವಿದೆ ಇದರಿಂದ ಮೇಲಿನ ಅಭಿಪ್ರಾಯವನ್ನು ಕೈಬಿಡುವುದು ಸೂಕ್ತ.

ಊರು ಕಲಕೇರಿ
ಸ್ಮಾರಕ ಕಲ್ಮೇಶ್ವರ
ಸ್ಥಳ ಗ್ರಾಮದಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದ್ದ ಈ ಪ್ರಾಚೀನ ದೇವಾಲಯ ಸದ್ಯ ಸಂಪೂರ್ಣವಾಗಿ ನವೀಕೃತಗೊಂಡಿರುವ ಸ್ಮಾರಕವಾಗಿದೆ. ರಿಪೇರಿಗೆ ಒಳಗಾಗಿರುವ ಈ ದೇವಾಲಯ ಈಗ ಗರ್ಭಗಹ ಮತ್ತು ಮಂಟಪವನ್ನು ಮಾತ್ರ ಹೊಂದಿದೆ. ಕಲ್ಮೇಶ್ವರ ಗುಡಿ ಅಧಿಷ್ಠನ ಭಾಗವು ಪ್ರಾಚೀನವಾಗಿದ್ದು ಅದು ಮೆಟ್ಟಿಲಾಕಾರದಂತೆ ಅತ್ಯಂತ ಸರಳವಾಗಿದೆ. ಅಧಿಷ್ಠಾನಕ್ಕೆ ಉಸುಕುಕಲ್ಲನ್ನು ಬಳಸಲಾಗಿದೆ. ಎತ್ತರವಾದ ಕಟ್ಟೆಯ ಮೇಲಿರುವ ಈ ದೇವಾಲಯದಲ್ಲಿ ಪ್ರಾಚೀನ ದೇವಾಲಯದ ಯಾವ ಕುರುಹುಗಳು ಕಂಡುಬರುವುದಿಲ್ಲ.

ಕಲಕೇರಿ ಗ್ರಾಮದ ಎರಡು ಶಾಸನಗಳು ಪ್ರಕಟಗೊಂಡಿವೆ. (ಸೌ.ಇಂ.ಸಂ. ಧಾ.ಜಿ.ಶಾ.ಸೂ, ಸಂ. ಮುಂ. ೮, ಪು. ೪೦; SII, XV, XV No. 568 and 269). ಕ್ರಿ.ಶ. ೧೨ನೇ ಶತಮಾನದ ಕಾಲಾವಧಿಗೆ ಸಂಬಂಧಿಸಿದ ಒಂದು ಶಾಸನವು ಕಲಕೇರಿಯಲ್ಲಿ ಪಾರ್ಶ್ವನಾಥ ಬಸದಿ ನಿರ್ಮಾಣವಾಗಿರುವ ಉಲ್ಲೇಖವನ್ನು ನೀಡುತ್ತದೆ. ಭಾನುಕೀರ್ತಿ ಸಿದ್ಧಾಂತಿದೇವನ ಶಿಷ್ಯ ಹಾಲಿಗಾವುಂಡನರಸ ಈ ಬಸದಿಯನ್ನು ನಿರ್ಮಾಣ ಮಾಡಿದ್ದಾನೆ. ಆದರೆ ಕ್ಷೇತ್ರಕಾರ್ಯಾವಧಿಯಲ್ಲಿ ಗಮನಿಸಿದಾಗ ಶಾಸನದಲ್ಲಿ ಉಲ್ಲೇಖಿತವಾಗಿರುವ ಬಸದಿಯ ಬಗೆಗೆ ಯಾವ ಕುರುಹುಗಳು ಕಂಡುಬರುವುದಿಲ್ಲ. ಬಹುಶಃ ಅನೇಕ ಕಾರಣಗಳಿಗಾಗಿ ಪ್ರಾಚೀನ ಬಸದಿಯು ನಾಶವಾಗಿರಬಹುದು. ಕಲಕೇರಿ ಗ್ರಾಮ ಪರಿಸರ ಜೈನ ಧರ್ಮೀಯರ ವಿಸ್ತಾರ ಕ್ಷೇತ್ರವಾಗಿತ್ತು ಎಂಬುದರಲ್ಲಿ ಯಾವ ಸಂಶಯವಿಲ್ಲ. ಊರಿನ ಸುತ್ತಲಿರುವ ಗುಡ್ಡಗಳಲ್ಲಿ ಹಲವು ಪ್ರಾಚೀನ ಮಾನವ ವಸತಿ ಕೇಂದ್ರಗಳು ಕಂಡುಬರುತ್ತವೆ. ಕಲಕೇರಿ ಗ್ರಾಮಕ್ಕೆ ಸಮೀಪದಲ್ಲಿರುವ ಬಸವಣ್ಣಗುಡ್ಡ ಎಂದು ಕರೆಯಲಾಗುವ ಸ್ಥಳದಲ್ಲಿ ಇತಿಹಾಸ ಪೂರ್ವದ ಅನೇಕ ಕುರುಹುಗಳು ಸಿಕ್ಕಿವೆ. ಸ್ಥಳೀಯವಾಗಿ ಅವನ್ನು ಕುಪ್ಪರಿ ಅಥವಾ ಸಿದ್ಧರ ಕಟ್ಟೆಗಳೆಂದು ಕರೆಯುತ್ತಾರೆ. ಅವನ್ನು ಸಮೀಕ್ಷೆ ಮಾಡಿದ ಅವಧಿಯಲ್ಲಿ ಪ್ರಾಚೀನವಾದ ಅನೇಕ ಕುರುಹುಗಳು ಕಂಡುಬಂದಿವೆ. ಈ ನೆಲೆಯ ಸ್ಪಷ್ಟತೆಯ ಬಗೆಗೆ ಇನ್ನೂ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ.

ಗ್ರಾಮದಲ್ಲಿರುವ ಹನುಮಂತನ ಗುಡಿಯ ಮುಂಭಾಗದಲ್ಲಿ ಎರಡು ವೀರಗಲ್ಲುಗಳು ಹಾಗೂ ಒಂದು ಸುಂದರ ಮಾಸ್ತಿಕಲ್ಲನ್ನು ಇಟ್ಟಿದ್ದಾರೆ. ಎರಡೂ ವೀರಗಲ್ಲುಗಳಿಗೆ ಎಣ್ಣೆಯನ್ನು ಸವರಲಾಗಿದ್ದು ಅವು ಸ್ಪಷ್ಟವಾಗಿ ಕಾಣುವುದಿಲ್ಲ. ಯುದ್ಧದಲ್ಲಿ ವೀರಮರಣ ಹೊಂದಿರುವ ಯೋಧನ ಕಥನವನ್ನು ಈ ವೀರಗಲ್ಲುಗಳು ನೀಡುತುತ್ತವೆ. ಇದೇ ಗುಡಿಯ (ಹನುಮಂತ) ಪಕ್ಕದಲ್ಲಿ ಸುಮಾರು ೫ ಅಡಿ ಎತ್ತರದ ಮಾಸ್ತಿಕಲ್ಲನ್ನು ನಿಲ್ಲಿಸಲಾಗಿದೆ. ಬಲಗೈಯನ್ನು ಎತ್ತಿರುವ ಈ ಶಿಲ್ಪದ ತಲೆಯ ಹಿಂಭಾಗದಲ್ಲಿ ಪ್ರಭಾವಳಿ ಹಾಗೂ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ಉಬ್ಬೂಶಿಲ್ಪಗಳನ್ನು ಕೆತ್ತಲಾಗಿದೆ. ನಿಲುವಂಗಿಯನ್ನು ಧರಿಸಿದ ಈ ಶಿಲ್ಪದ ಅಕ್ಕ-ಪಕ್ಕದಲ್ಲಿ ಚಿಕ್ಕದಾದ ಎರಡು ಉಬ್ಬುಶಿಲ್ಪಗಳು ಇವೆ. ಇಂಥ ಸುಂದರವಾದ ಶಿಲ್ಪವನ್ನು ಗಮನಿಸಿದರೆ, ಶಿಲ್ಪವಾಗಿ ಅನಾವರಣಗೊಂಡಿರುವ ಸ್ತ್ರೀಯು ಬಹುಶಃ ಹೆಚ್ಚಿನ ಸ್ಥಾನಮಾನ ಅಲಂಕರಿಸಿದ್ದಿರಬಹುದು. ಸ್ಥಳೀಯರು ಈ ಮಾಸ್ತಿಶಿಲ್ಪವನ್ನು ಮರಿಯಮ್ಮದೇವಿ ಎಂದು ಕರೆಯುತ್ತಾರೆ ಹಾಗು ಹಲವಾರು ತೊಂದರೆಗಳನ್ನು ಪರಿಹರಿಸುವ ದೇವತೆಯಾಗಿ ಪೂಜಿಸುತ್ತಾರೆ. ಇಲ್ಲಿರುವ ಪ್ರಾಚ್ಯಾವಶೇಷಗಳು ಯಾವ ಪ್ರಾಚೀನ ಸ್ಮಾರಕಕ್ಕೆ ಸಂಬಂಧಪಟ್ಟಿವೆ ಎಂದು ತಿಳಿಯುವುದು ಕಷ್ಟಸಾಧ್ಯವಾಗಿದೆ. ಕ್ರಿ.ಶ. ೧೬೫೧ರ ತೇದಿಯ ಇನ್ನೊಂದು ಶಾಸನವು ಕಲಿಕೇರಿ ಸೀಮೆಯ ಮುಸ್ಲಿಂ ಅಧಿಕಾರಿಯೊಬ್ಬನು ತೆರಿಗೆ ವಿನಾಯಿತಿ ನೀಡಿರುವ ಉಲ್ಲೇಖ ಹೊಂದಿದೆ. ಕಲಿಕೇರಿಯು ವಿಜಯನಗರ ಆಡಳಿತದ ನಂತರ ಸವಣೂರ ನವಾಬರ ಆಡಳಿತಕ್ಕೆ ಒಳಪಟ್ಟ ಕಂದಾಯ ಗ್ರಾಮವಾಗಿತ್ತು. ಬಹುಶಃ ಆ ಸಂದರ್ಭದಲ್ಲಿ ಮುಸ್ಲಿಂ ಅಧಿಕಾರಿಯು ಇಂಥ ಶಾಸನವನ್ನು ಹೊರಡಿಸಿರಬಹುದು.

ಊರು ಕಲಕೇರಿ
ಸ್ಮಾರಕ ಗ್ರಾಮದ ಉತ್ತರಕ್ಕೆ
ಸ್ಥಳ ಮಲಕಪ್ಪನ ಮಠ (ಬಸವಣ್ಣನಗುಡಿ)
ಕಾಲ ಕ್ರಿ.ಶ. ೧೬-೧೭ನೇ ಶತಮಾನ
ಶೈಲಿ ಆಧುನಿಕ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ವಿಜಯನಗರೋತ್ತರ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಸ್ಥಳೀಯವಾಗಿ ಸಿಗುವ ಗಟ್ಟಿಶಿಲೆಯಿಂದಲೇ ಕಟ್ಟಡ ನಿರ್ಮಾಣವಾಗಿದೆ. ವಿಶೇಷವಾಗಿ ಇಡೀ ದೇವಾಲಯವನ್ನೇ ಬೃಹತ್‌ಶಿಲಾಫಲಕಗಳಿಂದ ಹೊದಿಸಲಾಗಿದೆ. ಇಲ್ಲಿ ಬಳಸಿರುವ ಕಲ್ಲನ್ನು ಗಮನಿಸಿದರೆ ಇದೊಂದು ಪ್ರಾಚೀನ ಸ್ಮಾರಕ ಇರಬಹುದೆಂದು ಭಾಸವಾಗುತ್ತದೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದರೆ ಇದೊಂದು ಆಧುನಿಕ ಸ್ಮಾರಕವೆಂಬುದು ತಿಳಿದುಬರುವುದು.

ದೇವಾಲಯವು ಗರ್ಭಗೃಹ ಹಾಗು ನವರಂಗವನ್ನು ಮಾತ್ರ ಹೊಂದಿದೆ. ಗರ್ಭ ಗೃಹದಲ್ಲಿ ನಂದಿಶಿಲ್ಪವನ್ನು ಇಟ್ಟಿದ್ದಾರೆ. ಗರ್ಭಗೃಹದ ಬಾಗಿಲವಾಡವು ತುಂಬಾ ಸರಳವಾಗಿದೆ. ದೇವಾಲಯದ ನವರಂಗವು ತಕ್ಕಮಟ್ಟಿಗೆ ವಿಶಾಲವಾಗಿದ್ದು ಮೇಲ್ಛಾವಣಿಗೆ ಆಧಾರವಾಗಿ ಹಲವಾರು ಕಂಬಗಳನ್ನು ನಿಲ್ಲಿಸಲಾಗಿದೆ. ಇಲ್ಲಿರುವ ಕಂಬಗಳು ಗಾತ್ರದಲ್ಲಿ ದೊಡ್ಡದಾಗಿವೆಯೆ ಹೊರತು ಸಂದರ್ಯದ ದೃಷ್ಟಿಯಿಂದ ಅತ್ಯಂತ ನಿರಾಲಂಕರದಿಂದ ಕೂಡಿವೆ. ಗುಡಿಯ ಅಧಿಷ್ಠಾನ ಹಾಗೂ ಗೋಡೆ ಭಾಗಗಳೂ ಸಹ ಅಲಂಕಾರರಹಿತವಾಗಿವೆ. ಗುಡಿಯ ಮಂಜೂರಿನ ಭಾಗವು ಸುತ್ತಲೂ ಮುಂದುವರೆದಿದೆ. ಸ್ಮಾರಕಕ್ಕೆ ಸಂಬಂಧಪಟ್ಟ ಯಾವ ಮಾಹಿತಿಯೂ ಸಿಗುವುದಿಲ್ಲ. ಮಲ್ಲಿಕಾರ್ಜುನ ಎಂಬ ವ್ಯಕ್ತಿಯು ಈ ಸ್ಥಳದಲ್ಲಿ ಬಹಳ ವರ್ಷಗಳ ಕಲ ವಾಸವಾಗಿದ್ದರಿಂದ ಇದಕ್ಕೆ ಮಲಕಪ್ಪನ ಮಠ ಎಂಬ ಹೆಸರು ಬಂದಿರುವುದೆಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಊರು ಕೊರ್ಲಹಳ್ಳಿ
ಸ್ಮಾರಕ ಈಶ್ವರ
ಸ್ಥಳ ತುಂಗಭದ್ರ ದಂಡೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈಶ್ವರ ದೇವಾಲಯ ಹೆಚ್ಚಿನ ದುರಸ್ತಿ ಕಾರ್ಯಗಳಿಗೆ ಒಳಗಾಗಿದೆ. ಹಿಂಭಾಗದ ಗೋಡೆ ಅಲ್ಲಿಲ್ಲಿ ಬಿದ್ದುಹೋಗಿದೆ. ದೇವಾಲಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದೊಂದು ತ್ರಿಕೂಟ ಹಾಗು ಅದರಲ್ಲೂ ತ್ರೈಪುರುಷ ದೇವಾಲಯ ಇದ್ದಿರಬಹುದೆಂದು ಭಾಸವಾಗುತ್ತದೆ. ಆದರೆ ಸದ್ಯ ಮುಖ್ಯ ಗರ್ಭಗೃಹ ಹಾಗೂ ಅದರ ಬಲಭಾಗ ಅಂದರೆ ದಕ್ಷಿಣಾಭಿಮುಖವಾದ ಇನ್ನೊಂದು ಗರ್ಭಗೃಹ ಮಾತ್ರ ಉಳಿದಿದೆ. ಉತ್ತರಾಭಿಮುಖವಾಗಿದ್ದ ಮತ್ತೊಂದು ಗರ್ಭಗೃಹ ಸಂಪೂರ್ಣವಾಗಿ ನಶಿಸಿಹೋಗಿದೆ. ಈಶ್ವರ ದೇವಾಲಯ ಬಿದ್ದು ಹೋಗಿರಲು ಬಹುಮುಖ್ಯ ಕಾರಣವೆಂದರೆ ಪಕ್ಕದಲ್ಲಿಯೇ ವೇಗವಾಗಿ ಹರಿಯುತ್ತಿರುವ ತುಂಗಭದ್ರಾ ನದಿ. ದೇವಾಲಯದ ಹಿಂಭಾಗದ ಗೋಡೆಗೆ ನೀರು ಬಡಿದುಕೊಂಡು ಸಾಗುತ್ತದೆ. ಬಲಭಾಗದಲ್ಲಿರುವ (ದಕ್ಷಿಣಾಭಿಮುಖ) ಗರ್ಭಗೃಹದಲ್ಲಿ ಸೂರ್ಯನ ಶಿಲ್ಪವನ್ನು ಇಡಲಾಗಿದೆ. ಗರ್ಭಗೃಹವು ಕೂಡ ಹೆಚ್ಚಿನ ದುರಸ್ತಿಕಾರ್ಯಗಳಿಗೆ ಒಳಗಾಗಿದೆ. ಶಿಖರಭಾಗವು ಬಿದ್ದುಹೋದ ನಂತರ ಮೇಲ್ಛಾವಣಿಯನ್ನು ಮಣ್ಣಿನಿಂದ ಬಳಿದಿದ್ದಾರೆ. ಅಲ್ಲದೆ ಈ ಗರ್ಭಗೃಹಕ್ಕೆ ಸಂಬಂಧಿಸಿದ ಅವಶೇಷಗಳು ಮಣ್ಣಿನಲ್ಲಿ ಹೂತುಹೋಗಿವೆ. ತ್ರೈಪುರುಷ ದೇವಾಲಯದ ಪೂರಕ ಅಂಶವೆಂದು ಪರಿಗಣಿಸಲ್ಪಡುವ ಸೂರ್ಯನ ಶಿಲ್ಪವು ಇಲ್ಲಿದೆ. ಹೀಗಾಗಿ ಈ ದೇವಾಲಯ ತ್ರಿಕೂಟ ರಚನೆಯಾಗಿರುವುದರ ಜೊತೆಗೆ ತ್ರೈಪುರುಷ ದೇವಾಲಯ ಲಕ್ಷಣಗಳನ್ನು ಹೊಂದಿತ್ತೆಂದು ಅಭಿಪ್ರಾಯಪಡಬಹುದು. ಎಡಭಾಗ (ಉತ್ತರಾಭಿಮುಖ)ದಲ್ಲಿದ್ದ ಇನ್ನೊಂದು ಗರ್ಭಗೃಹವು ಸಂಪೂರ್ಣವಾಗಿ ಬಿದ್ದುಹೋಗಿದ್ದು ಅದರ ಅವಶೇಷಗಳು ಮಣ್ಣಿನಲ್ಲಿ ಹೂತುಹೋಗಿವೆ.

ಸದ್ಯ ಉಳಿದಿರುವ ದೇವಾಲಯವು ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಲಿಂಗವಿದ್ದರೆ, ಅಂತರಾಳದಲ್ಲಿ ನಂದಿಶಿಲ್ಪವಿದೆ. ಗರ್ಭಗೃಹದ ಬಾಗಿಲವಾಡವು ಸರಳರಚನೆಯಾಗಿದ್ದು ಬಾಗಿಲು ಚಿಕ್ಕದಾಗಿದೆ. ಅಂತರಾಳದ ಬಾಗಿಲವಾಡವು ಜಾಲಂಧರನಿ (ಕಿಟಕಿ)ದ ರಚಿಸಲ್ಪಟ್ಟಂಥದ್ದು. ಬಾಗಿಲವಾಡದ ಮೇಲ್ಭಾಗವು ಮುಂಚಾಚಿದೆ ಹಾಗೂ ಮುಂಚಾಚಿದ ಭಾಗವನ್ನು ಅಲಂಕರಿಸಲಾಗಿದೆ. ಲಲಾಟದಲ್ಲಿ ಪುಷ್ಟಾಲಂಕಾರ ಮಾಡಿದ್ದಾರೆ. ಲಲಾಟದ ಮೇಲ್ಭಾಗದಲ್ಲಿ ಕೀರ್ತಿಮುಖ ಉಬ್ಬುಶಿಲ್ಪಗಳನ್ನು ಕಂಡರಿಸಲಾಗಿದ್ದು ಅಲ್ಲದೇ ಚೌತ್ತರೇಯ-ದ್ರಾವಿಡ ಮಾದರಿಯ ಶಿಖರ ಪಟ್ಟಿಕೆಗಳನ್ನು ನಿರ್ಮಿಸಲಾಗಿದೆ.

ವಿಶಾಲವಾಗಿದ್ದ ನವರಂಗದ ಅರ್ಧಭಾಗವು ಬಿದ್ದಿರುವುದರಿಂದ ಅದನ್ನು ಚಿಕ್ಕಮಂಟಪವನ್ನಾಗಿ ಮಾರ್ಪಡಿಸಿ ಅದಕ್ಕೆ ಕಬ್ಬಿಣದ ಗೇಟನ್ನು ಅಳವಡಿಸಲಾಗಿದೆ. ನವರಂಗದಲ್ಲಿ ಈಗ ಉಳಿದಿರುವ ಕಂಬಗಳು ಚೌಕಾಕಾರದವು. ಕಂಬದ ದಂಡ ಭಾಗದಲ್ಲಿ ವೃತ್ತಾಕಾರದ ಬಳ್ಳಿ ಹಾಗೂ ಮಣಿಸರದ ಅಲಂಕಾರ ಮಾಡಲಾಗಿದೆ. ಗಟ್ಟೆ ಆಕಾರದ ಫಲಕ ಹಾಗೂ ಬೋಧಿಗೆಯನ್ನು ಕಂಬಗಳು ಒಳಗೊಂಡಿವೆ ಇನ್ನೆರಡು ಕಂಬಗಳು ಒಳಗೊಂಡಿವೆ. ಇನ್ನೆರಡು ದುಂಡಾಕಾರದ ಕಂಬಗಳು ಈಶ್ವರ ದೇವಾಲಯದ ಸಮೀಪದಲ್ಲಿರುವ ದುರಗಮ್ಮನ ಗುಡಿಯ ಮುಂಭಾಗದಲ್ಲಿವೆ. ಮುರಿದುಹೋದ ಈ ಕಂಬಗಳು ಬಹುಶಃ ಈಶ್ವರ ದೇವಾಲಯಕ್ಕೆ ಸಂಬಂಧಿಸಿದವು ಎಂದು ಅಭಿಪ್ರಾಯಪಡಬಹುದು. ಅಲ್ಲದೇ ಇಲ್ಲಿ ಕೆಲವು ಭಗ್ನಾವಶೇಷಗಳನ್ನು ಸಹ ಇಡಲಾಗಿದೆ.

ದೇವಾಲಯ ರಚನೆಯು ಬೃಹದಾಕಾರದ ಶಿಲಾಬಂಡೆಗಳಿಂದ ನಿರ್ಮಾಣವಾಗಿರುವಂಘದ್ದು, ಉಸುಕು ಕಲ್ಲಿನಲ್ಲಿ ಕಟ್ಟಲಾಗಿರುವ ದೇವಾಲಯಕ್ಕೆ ನಿರಾಲಂಕರಣೆಯ ಅಧಿಷ್ಠಾನವಿದೆ. ಹೊರಗೋಡೆ ಹಚ್ಚಿನಂಶ ಬಿದ್ದುಹೋಗಿದ್ದು ಅವಶೇಷಗಳು ಮಣ್ಣಿನಲ್ಲಿ ಹೂಗುಹೋಗಿವೆ. ದೇವಾಲಯದ ಶಿಖರ ಭಾಗವು ಸಹ ಬಿದ್ದಿರಬಹುದು.

ಈ ದೇವಾಲಯದ ಸಮೀಪದಲ್ಲಿ ನಿರ್ಮಾಣವಾಗಿರುವ ಸೇತುವೆ ಬಳ್ಳಾರಿ ಹಾಗೂ ಗದಗ ಜಿಲ್ಲೆಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಆಚೆ ದಂಡೆಯ ಮೇಲೆ ಮದಲಗಟ್ಟೆ ಆಂಜನೇಯನ ದೇವಾಲಯವಿದೆ. ಈ ಸ್ಥಳವು ವಿಜಯನಗರ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿತ್ತು.

ಕ್ರಿ.ಶ. ೧೦೫೦ರ ತೇದಿವುಳ್ಳ ಶಾಸನವೊಂದು ನದಿಯ ದಂಡೆಯಲ್ಲಿ ಕಂಡುಬಂದಿದ್ದು ಅದು ಪ್ರಕಟಗೊಂಡಿದೆ (ಧಾ.ಜಿ.ಶಾ.ಸೂ, ಸಂ.ರೋ. ೧೦. ಪು. ೪೦; SII, XI, pt. I. No. 86). ಕಲ್ಯಾಣ ಚಾಲುಕ್ಯ ಒಂದನೆಯ ಸೋಮೇಶ್ವರನ ಕಾಲಕ್ಕೆ ಸಂಬಂಧಿಸಿದ ಈ ಶಾಸನದಲ್ಲಿ ಅರಸೀಬೀಡಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದ ಅರಸಿ ಅಕ್ಕಾದೇವಿಯು ದಾನವನ್ನು ನೀಡಿರುವ ಉಲ್ಲೇಖವಿದೆ. ಮುಂಡರಗಿ (ಆಸವಾಡಿ-೧೪೦ ಆಡಳಿತ ವಿಭಾಗ) ಪ್ರದೇಶವು ಅರಸಿ ಅಕ್ಕಾದೇವಿಯ ಆಳ್ವಿಕೆಗೆ ಒಳಪಟ್ಟಿತ್ತು. ಈಕೆಯ ಸಾಮಂತ ಅಜ್ಜರಸನು ಕಾಳಮುಖ ಮಠದ ಸನ್ಯಾಸಿನಿ ಗಂಗಿಕಬ್ಬೆಗೆ ದಾನ ಕೊಟ್ಟಿರುವ ಮಾಹಿತಿ ಇದೆ. ಶಾಸನದಲ್ಲಿ ಕೊರಲಹಳ್ಳಿಯನ್ನು ಕೋರ್ಲಹಳ್ಳಿಯೆಂದು ಕರೆಯಲಗಿದೆ.

ಕ್ರಿ.ಶ. ೧೩೭೯ರ (ಎರಡನೆಯ ಹರಿಹನ ಕಾಲದ) ತಾಮ್ರಪಟ ಶಾಸನ ಸಹ ಕೊರ್ಲಹಳ್ಳಿಯ ಬಗ್ಗೆ ವಿವರ ನೀಡುತ್ತದೆ. ಡಂಬಳವನ್ನೊಳಗೊಂಡು ಸುತ್ತಲಿನ ಸುಮಾರು ೬೬ ಗ್ರಾಮಗಳು ವಿಜಯನಗರದ ಆಳ್ವಿಕೆಗೆ ಒಳಪಟ್ಟಿದ್ದವು. ಅಲ್ಲದೆ ಅದೇ ಕಾಲಕ್ಕೆ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆಕಟ್ಟಿ ಸಂಪರ್ಕ ಸಾಧಿಸಲಾಗಿತ್ತು ಎಂಬ ಪ್ರಮುಖ ಸಂಗತಿ ತಿಳಿದುಬರುತ್ತದೆ. ವಿಜಯನಗರ (ಹಂಪೆ) ಆಡಳಿತದ ಮುಖ್ಯ ಪ್ರದೇಶದ (Core area) ಆಚೆಗೆ ರಾಜ್ಯ ಸಂಪರ್ಕ ಸಾಧಿಸುವ ಮೊದಲ ಕಟ್ಟೆ ಅಥವಾ ಮದಲಗಟ್ಟೆ ಈ ಸ್ಥಳವಾಗಿತ್ತೆಂಬುದು ಬಹಳ ಮುಖ್ಯವಾದ ವಿಚಾರವಾಗಿದೆ.

ಉತ್ತರಾಧಿಮಠ ಪರಂಪರೆಯಲ್ಲಿ ೨೩ನೇ ಯತಿಗಳಾಗಿ ಕಾರ್ಯನಿರ್ವಹಿಸಿದ ಸತ್ಯವೀರ ಶ್ರೀಪಾದಂಗಳವರು (ಕೊರ್ಲಹಳ್ಳಿ ಬೋಧರಾಚಾರ್ಯ) ಇದೇ ಗ್ರಾಮದವರಾಗಿದ್ದು, ಅವರು ವೈಕುಂಠ ವಾಸಿಯಾದ ನಂತರ ಅವರ ಕ್ರಿಯಾವಿಧಿಗಳನ್ನು ಇದೇ ಗ್ರಾಮದಲ್ಲಿ ಮಾಡಿದ್ದಾರೆ. ತುಂಗಭದ್ರಾ ನದಿ ದಂಡೆಯಲ್ಲಿ ಅವರಿಗೆ ಬೃಂದಾವನ ನಿರ್ಮಿಸಿದ್ದಾರೆ.

ಊರು ಗುಮ್ಮಗೋಳ
ಸ್ಮಾರಕ ಗೋಣಿಬಸವೇಶ್ವರ
ಸ್ಥಳ ಗ್ರಾಮದ ಪೂರ್ವಕ್ಕೆ
ಕಾಲ ಕ್ರಿ.ಶ. ೧೬-೧೭ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಉತ್ತರ
ಸ್ಥಿತಿ ಸಾಧಾರಣ
ಸಂರಕ್ಷಣೆ

ಕರ್ನಾಟಕ ಸಾಂಸ್ಕೃತಿಕ ಇತಿಹಾಸದಲ್ಲಿ ಪಂಚಗಣಾಧೀಶರೆಂದು ಕರೆಯಲಾಗುವ (ಕೊಟ್ಟೂರಿನ ಕೊಟ್ಟೂರೇಶ್ರರ, ಮದ್ದಾನ ಸ್ವಾಮಿ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಹರಪನಹಳ್ಳಿಯ ಕೋಟೇಶ್ವರ ಹಾಗೂ ಕೂಲಹಳ್ಳಿಯ ಗೋಣಿಬಸವೇಶ್ವರ) ಸಾಂಸ್ಕೃತಿಕ ನಾಯಕರಲ್ಲಿ ಕೂಲಹಳ್ಳಿಯ ಗೋಣಿಬಸವೇಶ್ವರರು ಒಬ್ಬರು. ಈ ಮಹಾಪುರುಷರು ಅನೇಕ ಪವಾಡಗಳನ್ನು ಮೆರೆದಿದ್ದಾರೆ. ಐಹಿಕ ಲೋಕದ ಮೂಲಕವೇ ಪರಮಾರ್ಥವನ್ನು ಪಡೆದವರು. ತಾವು ಸಾಧಿಸಿದ ಸಾಧನೆಗಳಿಂದ ದೈವತ್ವಕ್ಕೇರಿದವರು. ಅಂಥ ಮಹಾ ಪುರುಷರ ಸ್ಮರಣೆಗಾಗಿ ಜನರು ಅನೇಕ ದೇವಾಲಯಗಳನ್ನು ಬಳ್ಳಾರಿ, ಚಿತ್ರದುರ್ಗ ಹಾಗೂ ಗಹದ ಜಿಲ್ಲೆಯ ಅನೇ ಸ್ಥಳಗಳಲ್‌ಇ ನಿರ್ಮಿಸಿದ್ದಾರೆ. ಅಂಥವುಗಳಲ್ಲಿ ಗುಮ್ಮಗೋಳದಲ್ಲಿರುವ ಗೋಣಿಬಸವೇಶ್ವರ ಕ್ಷೇತ್ರವು ಒಂದು. ಇದು ಸುತ್ತಲಿನ ಪ್ರದೇಶದಲ್ಲಿರುವ ಅನೇಕ ಜನಾಂಗಗಳಿಗೆ ಮನೆ ದೇವರು ಹಾಗೂ ಕುಲದೇವರಾಗಿ ಪ್ರಾಮುಖ್ಯತೆ ಪಡೆದಿದೆ. ಅಧ್ಯಯನಾರ್ಹ ಸಂಗತಿಯೆಂದರೆ ಬಹುಶಃ ಈ ಗುಡಿಯ ಸಂಬಂಧದಿಂದಾಗಿ ಈ ಗ್ರಾಮಕ್ಕೆ ಗುಮ್ಮಗೋಲ ಹೆಸರು ಬಂದಿರುವ ಸಾಧ್ಯತೆ ಇದೆ. ವಿವರವಾಗಿ ಹೇಳುವುದಾದರೆ ಈ ದೇವಾಲಯದ ಶಿಖರ ಗುಮ್ಮಟ(ಗೋಳ)ವು ದೊಡ್ಡದಾಗಿದ್ದು ಬಹುದೂರದವರೆಗೆ ಕಂಡುಬುರತ್ತದೆ. ಗುಮ್ಮಟಾಕಾರದ (ದುಂಡಾಗಿರುವ) ಗೋಳ (ಶಿಖರ)ದಿಂದ ಈ ಗ್ರಾಮಕ್ಕೆ ಗುಮ್ಮಗೋಲ ಎಂಬ ಗ್ರಾಮನಾಮ ಬಂದಿರುವ ಸಸಾಧ್ಯತೆಗಳಿವೆ. ಗೋಣಿಬಸವೇಶ್ವರ ದೇವಾಲಯವನ್ನು ‘ಮಠ’ವೆಂದು ಕರೆಯುತ್ತಾರೆ. ಅಲ್ಲದೆ ಇದರ ಉಸ್ತುವಾರಿ ಬಾಳೇ ಹಳ್ಳಿಪೀಠದ (ರೇಣುಕಾಚಾರ್ಯ) ಅಧೀನವಾಗಿ ಕಾರ್ಯನಿರ್ವಹಿಸುತ್ತಿದೆ.

ವಿಶಾಲವಾದ ಪ್ರಾಂಗಣದಲ್ಲಿ ನಿರ್ಮಾಣವಾಗಿರುವ ಈ ದೇವಾಲಯಕ್ಕೆ ದೊಡ್ಡ ಮಹದ್ವಾರ ಇದೆ. ಇಂಡೋ-ಇಸ್ಲಾಮಿಕ್ ವಾಸ್ತಿಶಿಲ್ಪವನ್ನು ನೆನಪಿಸುವಂತೆ ಈ ದ್ವಾರದ ರಚನೆ ಮಾಡಲಾಗಿದೆ. ಈ ದ್ವಾರವನ್ನು ಪ್ರವೇಶಿಸುತ್ತಿದ್ದಂತೆ ನಮಗೆ ಎತ್ತರದ ಕಟ್ಟಿಎಯ ಅಂಕಣ ಸಿಗುತ್ತದೆ. ಈ ಕಟ್ಟೆಯಲ್ಲಿ ಹಲವಾರು ಕಂಬಗಳಿವೆ. ಇವು ಕಲ್ಲಿನಿಂದ, ಗಾರೆ ಹಾಗೂ ಹಚ್ಚಿನಿಂದ ನಿರ್ಮಿಗವಾಗಿವೆ. ಇಲ್ಲಿರುವ ಕಂಬಗಳ ಮೇಲೆ ಅನೇಕ ಉಬ್ಬುಶಿಲ್ಪಗಳು ಹಾಗೂ ಯಾಳಿಗಳನ್ನುನಿರ್ಮಿಸಲಾಗಿದೆ. ಈ ಅಂಕಣದಲ್ಲಿಯೇ ಬಲಗಡೆ ಚಿಕ್ಕ ಗರ್ಭವನ್ನು ಸಹ ನಿರ್ಮಿಸಲಾಗಿದೆ. ಅಂಕಣದಾಟಿ ಒಳಪ್ರವೇಶಿಸುತ್ತಿದ್ದಂತೆ ಒಂದು ತೀರ್ಥಕುಂಡ (ತಟಾಕವು) ಸಿಗುವುದು. ಸುಮಾರು ೭-೮ ಅಡಿ ಆಳವಿರುವ ಈ ಕುಂಡದ ಸುತ್ತಲೂ ಕಂಬಗಳ ಸಹಿತವಾಗಿರುವ ಕಟ್ಟೆಯನ್ನು ನಿರ್ಮಿಸಲಾಗಿದೆ. ಅಲ್ಲದೇ ಈ ತಿರ್ಥದಹೊಂಡಕ್ಕೆ ಎದುರಾಗಿಯೇ ಗರ್ಭಗೃಹವನ್ನು ನಿರ್ಮಾಣ ಮಾಡಲಾಗಿದೆ. ಅದರ ಅಕ್ಕಪಕ್ಕದಲ್ಲಿ ಇನ್ನೆರಡು ಚಿಕ್ಕಗರ್ಭಗೃಹಗಳಿವೆ. ಮುಖ್ಯ ಗರ್ಭಗೃಹದಲ್ಲಿ ಲಿಂಗವಿದೆ. ಈ ಲಿಂಗವನ್ನೆ ಕೊಟ್ಟೂರೇಶ್ವರನೆಂದು ಪೂಜಿಸುತ್ತಾರೆ. ಲಿಂಗಕ್ಕೆ ಎದುರಾಗಿರುವ ನಂದಿಶಿಲ್ಪವನ್ನೂ ಗೋಣಿ ಬಸವೇಶ್ವರನೆಂದು ಕರೆದು ಪೂಜಿಸುತ್ತಾರೆ. ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣವಾಗಿರುವ ಈ ದೇವಾಲಯದ ರಚನೆಯಲ್ಲಿ ವಿಜಯನಗರದ ವಾಸ್ತುಲಕ್ಷಣಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಎರಡು ಅಂಖಣಗಳಲ್ಲಿ ನಿರ್ಮಾಣವಾಗಿರುವ ಈ ದೇವಾಲಯನ್ನು ಮೆಟ್ಟಿಲುಗಳ ಸಹಾಯದಿಂದ ಪ್ರವೇಶಿಸುತ್ತಾ ಹೋಗಬೇಕು. ಈ ಎರಡು ಅಂಕಣಗಳಲ್ಲಿ ನೂರಾರು ಕಂಬಗಳನ್ನು ಜೋಡಿಸಲಾಗಿದೆ. ವಿಶಾಲವಾದ ಪ್ರಾಂಘಣ ಹೊಂದಿರುವ ಈ ದೇವಾಲಯಕ್ಕೆ ಸುಣ್ಣವನ್ನು ಬಳಿಯಲಾಗಿದೆ. ಎಲ್ಲಾ ಧರ್ಮಗಳ ಹಾಗೂ ಒಳ ಪಂಗಡಗಳ ಜೊತೆಗೆ ಸಮನ್ವಯ ಸಾಧಿಸಲು ಶ್ರಮಿಸಿದ ಗೋಣಿ ಬಸವೇಶ್ವರರು ಸುತ್ತಲಿನ ಹಾಗೂ ಬಹುದೂರದ ಎಲ್ಲ ಪ್ರದೇಶಗಳ ಜನವರ್ಗಕ್ಕೆ ಆರಾಧ್ಯ ದೈವವಾಗಿ ಪ್ರಾಮುಖ್ಯತೆಯನ್ನು ಪಡೆದಿದ್ದಾರೆ.

ಊರು ಚಿಕ್ಕವಡ್ಡಟ್ಟಿ
ಸ್ಮಾರಕ ಕಲ್ಮೇಶ್ವರ
ಸ್ಥಳ ಶಿರಹಟ್ಟಿ-ಮುಂಡರಗಿ ರಸ್ತೆ
ಕಾಲ ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ದಕ್ಷಿಣ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗ್ರಾಮದ ಕೆರೆಯ ಮೇಲಿರುವ ಈ ದೇವಾಲಯವು ಗರ್ಭಗೃಹ ಹಾಗು ನವರಂಗವನ್ನು ಮಾತ್ರ ಹೊಂದಿದೆ. ಹೆಚ್ಚಿನ ದುರಸ್ತಿ ಕಾರ್ಯಗಳಿಗೆ ಒಳಗಾಗಿದ್ದು, ಮೂಲ ಲಕ್ಷಣಗಳು ಕಳೆದುಹೋಗಿವೆ. ಗರ್ಭಗೃಹದಲ್ಲಿ ಲಿಂಗವಿದೆ. ನವರಂಗದಲ್ಲಿ ನಂದಿ ಶಿಲ್ಪವನ್ನು ಇಟ್ಟಿದ್ದಾರೆ. ಗರ್ಭಗೃಹ ಹಾಗೂನವರಂಗದ ಎರಡೂ ಬಾಗಿಲವಾಡಗಳು ಅತ್ಯಂತ ಸರಳ ರಚನೆಯವು. ಗರ್ಭಗೃಹಕ್ಕೆ ಎದುರಾಗಿರುವ ಗೋಡೆಯಲ್ಲಿ ಒಂದು ಚಿಕ್ಕ ಜಾಲಾಂಧರವನ್ನು ನಿರ್ಮಿಸಲಾಗಿದೆ. ದೇವಾಲಯದ ಅಧಿಷ್ಠಾನ ಮಣ್ಣಲ್ಲಿ ಹೂತು ಹೋಗಿದೆ. ಗೋಡೆಗಳಿಗೆ ಸಿಮೆಂಟು ಬಳೆಯಲಾಗಿದೆ. ಶಿಖರವಿಲ್ಲ. ಮುಂಭಾಗಲದಲ್‌ಇ ತ್ರುಟಿತವಾದ ಒಂದು ಭೈರವನ ಶಿಲ್ಪ ಹಾಗು ಕೆಲವು ನಾಗಶಿಲ್ಪಗಳನ್ನು ಇಟ್ಟಿದ್ದಾರೆ.

ಊರು ಡಂಬಳ
ಸ್ಮಾರಕ ದೊಡ್ಡ ಬಸಪ್ಪ
ಸ್ಥಳ ಗ್ರಾಮದ ವಾಯವ್ಯ
ಕಾಲ ೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಕಲ್ಯಾಣ ಚಾಲುಕ್ಯರ ನಿರ್ಮಿಸಿದ ಪ್ರಮುಖ ದೇವಾಲಯಗಳಲ್ಲಿ ಡಂಬಳದ ದೊಡ್ಡಬಸಪ್ಪನ ಗುಡಿಯು ಒಂದು. ಕ್ರಿ.ಶ. ೧೧-೧೨ನೆಯ ಶತಮಾನದಲ್ಲಿ ಆಳ್ವಿಕೆ ಮಾಡಿದ ಕಲ್ಯಾಣ ಚಾಲುಕ್ಯರು ತುಂಗಭದ್ರಾನದಿ ಪರಿಸರದಲ್ಲಿ ನೂರಾರು ದೇವಾಲಯಗಳು ನಿರ್ಮಾಣವಾಗುವುದಕ್ಕೆ ಕಾರಣರಾಗಿದ್ದಾರೆ. ಅಂಥ ಪ್ರಮುಖ ಸ್ಮಾರಕಗಳಲ್ಲಿ ವಿಶೇಷವಾಗಿ ಪರಿಗಣಿಸಲ್ಪಡುವ ದೊಡ್ಡಬಸಪ್ಪನ ದೇವಾಲಯವು ಕನ್ನಡ ನಾಡಿನ ಹೆಮ್ಮೆಯ ಪ್ರತೀಕವೆಂದರೆ ತಪ್ಪಾಗಲಾರದು. ಸುಮಾರು ಎರಡುನೂರು ವರ್ಷಗಳ ದೀರ್ಘೇತಿಹಾಸವನ್ನು ಹೊಂದಿರುವ ಈ ಸ್ಮಾರಕವು ಕೆಲವು ಚಿಕ್ಕ-ಪುಟ್ಟ ದುರಸ್ತಿ ಕಾರ್ಯಗಳಿಗೆ ಒಳಗಾಗಿರುವುದನ್ನು ಬಿಟ್ಟರೆ ತನ್ನ ಮೂಲ ಸೌಂದರ್ಯವನ್ನು ಉಳಿಸಿಕೊಂಡಿದೆ. ಅಡಿಯಿಂದ ಮುಡಿಯವರೆಗೆ ನಕ್ಷತ್ರಾಕಾರದ ವಿನ್ಯಾಸವನ್ನು ಹೊಂದಿರುವ ಈ ದೇವಾಲಯ ಕರ್ನಾಟಕದ ವಾಸ್ತಿಶಿಲ್ಪ ಅಧ್ಯಯನಕ್ಕೆ ವಿಶೇಷ ಉದಾಹರಣೆಯಾಗಿ ನಿಲ್ಲುತ್ತದೆ. ಕನ್ನಡ ನಾಡಿನ ವಾಸ್ತುಶಿಲ್ಪ ಅಧ್ಯಯನದ ಪಿತಾಮಹ ಹೆನ್ರಿ ಕಜೆನ್ಸಿ ಅವರು ಮೊಟ್ಟಮೊದಲಿಗರಾಗಿ ತುಂಬಾ ಶ್ರದ್ಧೆಯಿಂದ ಡಂಬರಳ ದೊಡ್ಡಬಸಪ್ಪ ದೇವಾಲಯದ ಬಗೆಗೆ ಮಾಹಿತಿ ಬರೆದು ಪ್ರಕಟಿಸಿದ್ದಾರೆ. ಇಲಲ್‌ಇರುವ ಕಂಬಗಳಲ್ಲಿನ ಕೆತ್ತನೆಯ ಕಲಾ-ಕೌಶಲ್ಯಕ್ಕೆ ಮನಸೋತಿರುವರು. ಅವರು ಈ ದೇವಾಲಯದ ನಿರ್ಮಾಣ ಕಲ್ಯಾಣ ಚಾಲುಕ್ಯ ವಾಸ್ತುಶಿಲ್ಪಕ್ಕೆ ಹಿಡಿದ ಕನ್ನಡಿ ಎಂದು ಅಭಿಪ್ರಾಯಿಸಿದ್ದಾರೆ.

ಸುಂದರವಾದ ಈ ಸ್ಮಾರಕವು ಗರ್ಭಗೃಹ, ಅಂತರಾಳ, ನವರಂಗ, ಮುಖಮಂಟಪ ಹಾಗೂ ನಂದಿಮಂಟಪಗಳನ್ನು ಹೊಂದಿರುವುದು. ನಕ್ಷಾತ್ರಾಕಾರದ ತಲವಿನ್ಯಾಸವು ಈ ಗುಡಿಯ ಇನ್ನೊಂದು ವಿಶೇಷ. ದೇವಾಲಯದ ಇಲ್ಲ ಭಾಗಗಳು ವಿಶಾಲವಾಗಿವೆ. ಗರ್ಭಗೃಹದಲ್ಲಿ ನಕ್ಷಾತ್ರಾಕಾರದ ಸುಂದರವಾದ ಕೆತ್ತನೆಯ ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ. ಅದಕ್ಕಿರುವ ಪೀಠವು ಸಹ ಕಲಾತ್ಮಕತೆಯಿಂದ ಕೂಡಿರುವುದು. ಗರ್ಭಗೃಹದಲ್ಲಿ ಭುವನೇಶ್ವರಿಯನ್ನು ಕೆತ್ತಿದ್ದಾರೆ. ಅದು ಕೂಡಾ ವಿಸ್ತಾರದಿಂದ ಕೂಡಿದ ಕೆತ್ತನೆಯಾಗಿದ್ದು ಅದರ ಪ್ರತಿಭಾಗವು ಎದ್ದು ತೋರುವಂತೆ ಚಿತ್ರಿಸಲಾಗಿದೆ. ಗರ್ಭಗೃಹಕ್ಕಿರುವ ಎತ್ತರವಾದ ಬಾಗಿಲವಾಡವಂಥು ಅತ್ಯದ್ಬುತವಾಗಿರುವುದು. ಬಾಗಿಲವಾಡದಲ್ಲಿ ಏಳು ಪಟ್ಟಿಕೆಗಳನ್ನು ರಚಿಸಿದ್ದಾರೆ. ಹಾಗೂ ಎಲ್ಲ ಪಟ್ಟಿಕೆಗಳಲ್ಲಿ ಚಿಕ್ಕ ಚಿಕ್ಕ ಉಬ್ಬುಶಿಲ್ಪಗಳನ್ನು ಕಂಡರಿಸಿದ್ದಾರೆ. ಅಲ್ಲದೇ ನೃತ್ಯಭಂಗಿಯಲ್ಲಿರುವ ಉಬ್ಬುಶಿಲ್ಪಗಳನ್ನು ಕೆಳಭಾಗದ ಎರಡುಕತೆಗೆ ಎತ್ತಲಾಗಿದೆ. ಬಾಗಿಲವಾಡದ ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪವನ್ನು ವಿಶೇಷವೆಂಬಂತೆ ನಿರ್ಮಿಸಿದ್ದಾರೆ. ಈ ಉಬ್ಬುಶಿಲ್ಪದ ಮೇಲ್ಭಾಗದಲ್ಲಿ ಕಪೋತ ರಚನೆ ಹಾಗೂ ಅದರ ಮೇಲ್ಭಾಗದಲ್ಲಿ ಚಿಕ್ಕ ಚಿಕ್ಕ ಮಂಟಪಗಳ ರಚನೆ ಮಾಡಿ ಕಲಾಕಾರನು ತನ್ನ ಕಾರ್ಯದ ಸುಕ್ಷ್ಮತೆಯನ್ನು ಮೆರೆದಿದ್ದಾನೆ.

ವಿಶಾಲವಾದ ಗರ್ಭಗೃಹಕ್ಕೆ ಹೊಂದಿಕೊಂಡಂತೆ ಗರ್ಭಗೃಹದಷ್ಟೇ ವಿಸ್ತಾರವಾದ ಅಂತರಾಳವು ದೇವಾಲಯಕ್ಕೆಇದೆ. ಇದು ಬರಿದಾಗಿದೆ. ತೆರೆದ ಅಂತರಾಳಕ್ಕೆ ತೋರಣ ಕಂಬಗಳಿಂದ ಅಲಂಕರಣೆ ಮಾಡಿದ್ದಾರೆ. ಯಾಳಿ ಹಾಗೂ ಕೀರ್ತಿಮುಖ ಅಲಂಕರಣೆಯಿಂದ ಕಂಬಗಳನ್ನು ಸುಮದರಗೊಳಿಸಲಾಗಿದೆ. ತೋರಣಕ್ಕೆ ಬಳಸಿರುವ ಎರಡೂ ಕಂಬಗಳು ತಿರುಗಣಿ ಆಕಾರದವುಗಳು.

ನವರಂಗವು ವಿಸ್ತಾರದಿಂದ ಕೂಡಿದೆ. ಸುಂದರ ಕೆತ್ತನೆಯ ನಾಲ್ಕು ಕಂಬಗಳು ಇಲ್ಲಿವೆ. ಅವು ಕಪ್ಪುಕಲ್ಲಿನಲ್ಲಿ ನಿರ್ಮಾಣವಾಗಿದ್ದು ತಂಬಾ ನಯವಾಗಿವೆ. ಕಂಬಗಳ ಕೆಲಭಾಗದಲ್ಲಿ ನಾಲ್ಕು ಕಡೆಗಳಲ್ಲೂ ಉಬ್ಬುಶಿಲ್ಪಗಳನ್ನು ಕಂಡರಿಸಲಾಗಿದೆ. ಈ ಉಬ್ಬುಶಿಲ್ಪಗಳ ಶಿವನ ಅವತಾರಗಳನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಕೆಲವು ಸ್ತ್ರೀ ಶಿಲ್ಪಗಳನ್ನು ಸಹ ನಿರ್ಮಿಸಲಾಗಿದೆ. ಕಂಬಗಳಲ್‌ಇ ವೃತ್ತಾಕಾರದ, ಗಂಟೆ ಆಕಾರದ ಹೂಬಳ್ಳೀ ರಚನೆಗಳು ಹಾಗೂ ವೃತ್ತಾಕಾರದ ಮತ್ತು ಬಟ್ಟಲಾಕೃತಿಯ ಕೆತ್ತನೆಗಳನ್ನು ಈ ಕಂಬಗಳಲ್ಲಿ ಅಳವಡಿಸಲಾಗಿದೆ. ಕಂಬಗಳಿಗೆ ಚೌಕಾಕಾರದ ಬೋಧಿಗೆಗಳನ್ನು ಜೋಡಿಸಲಾಗಿದೆ. ನವರಂಗದಲ್ಲಿನ ನಾಲ್ಕು ಕಂಬಗಳನ್ನೊಳಗೊಂಡಂತೆ ಭುವನೇಶ್ವರಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಕೆತ್ತಿರುವ ಭುವನೇಶ್ವರಿ ಕಲ್ಯಾಣ ಚಾಲುಕ್ಯರ ಕಾಲದ ಕಲಾ ವೈಶಿಷ್ಟ್ಯತೆಯನ್ನು ಇತಿಹಾಸದುಚದ್ದಕ್ಕೂ ನೆನಪಿನಲ್ಲಿಡುವಂತೆ ಮಾಡಿದೆ. ಎಲೆಗಳನ್ನು ವೃತ್ತಗಳಲ್‌ಇ ಜೋಡಿಸಿಟ್ಟಂತೆ ತೋರುವ ಈ ಭುವನೇಶ್ರಿಯ ಕೆತ್ತನೆಯಲ್ಲಿ ಕಲಾಕಾರ ತನ್ನ ಗರಿಷ್ಠಮಟ್ಟದ ನೈಪುಣ್ಯತೆಯನ್ನು ಮೆರದಂತಿಗೆ. ನಾಲ್ಕು ಕಂಬಗಳನ್ನು ಒಳಗೊಂಡಂತೆ ಕೆಳಭಾಗದಲ್ಲಿ ಎತ್ತರದ ಕಟ್ಟೆಯನ್ನು ನಿರ್ಮಿಸಲಾಗಿದೆ. ಗುಡಿಯ ಛಾವಣಿಯಲ್ಲಿ ದೊಡ್ಡ ದೊಡ್ಡ ತೊಲೆಗಳನ್ನು ಜೋಡಿಸಲಾಗಿದೆ. ನವರಂಗಕ್ಕೆ ‌ದಕ್ಷಿಣಾಭಿಮುಖವಾದ ದ್ವಾರ ನಿರ್ಮಿಸಲಾಗಿದೆ. ಅದರ ಮೂಲಕವೇ ಗುಡಿಯನ್ನು ಪ್ರವೇಶಿಸಬೇಕು.

ಮುಖ್ಯ ಗರ್ಭಗೃಹಕ್ಕೆ ಎದುರಾಗಿ ನಂದಿ ಮಂಟಪವನ್ನು ನಿರ್ಮಿಸಲಾಗಿದೆ. ಈ ಮಂಟಪವನ್ನು ಗುಡಿಯ ಜೊತೆಗೆ ಸೇರಿಸಿ ಕಟ್ಟಲಾಗಿದೆ. ನಕ್ಷತ್ರಾಕಾರದ ನಾಲಕ್‌ಉ ಕಂಬಗಳನ್ನು ಸೇರಿ ಬೃಹತ್ತಧ ಮಂಟಪವನ್ನು ನಿರ್ಮಿಸಲಾಗಿದೆ. ಇಲ್ಲಿರುವ ಕಂಬಗಳು ಸಹ ಸೂಕ್ಷ್ಮಕುಸುರಿನ ಕೆತ್ತನೆಗಳಿಂದ ಕೂಡಿದ ಮನಮೋಹಕ ಕಂಬಗಳಾವಿದೆ. ನಂದಿ ಶಿಲ್ಪವನ್ನು ನೋಡಿದ ತಕ್ಷಣ ಯಾರೇ ಆದರೂ ಬೆರಗುಗೊಳ್ಳದೆ ಇರಲಾರರು. ಸುಮಾರು ಎಂಟು ಅಡಿ ಎತ್ತರವಿರುವ ಈ ವಿಗ್ರಹವನ್ನು ಕಪ್ಪುಕಲ್ಲಿನಲ್ಲಿ ಕೆತ್ತಲಾಗಿದೆ. ಶಿಲ್ಪದಲ್ಲಿನ ಪರತಿ ಕೆತ್ತನೆಯನ್ನು ಅತ್ಯಂತ ಸ್ಪಷ್ಟವಾಗಿ ಹಾಗೂ ನಯನಾಜುಕಿನಿಂದ ಕಲಾಕಾರ ಕೆತ್ತಿದ್ದಾನೆ. ಹಾಗೂ ವಿವಿಧ ಅಲಂಕಾರಗಳಿಂದ ಅಂದಗೊಳಿಸಿದ್ದಾನೆ. ಬಹುಶಃ ನಂದಿ ಮಂಟಪವನ್ನು ಪ್ರತ್ಯೇಕವಾಗಿ ನಿರ್ಮಿಸಿರುವ ಸಾಧ್ಯತೆಗಳಿವೆ. ಆದರೆ ಸದ್ಯ ದೊಡ್ಡ ಬಸಪ್ಪನ ಗುಡಿಯನ್ನೊಳಗೊಂಡತೆ ನಂದಿಯ ವಿಗ್ರಹ ಹಾಗೂ ಅದಕ್ಕರಿರುವ ಮಂಟಪದ ಸುತ್ತಲೂ ಗೋಡೆಯನ್ನು ಕಟ್ಟಲಾಗಿದೆ.

ದೇವಾಲಯಕ್ಕೆ ಪ್ರವೇಶ ಆಥವಾ ಮುಖ ಮಂಟಪವಿದೆ. ಅದನ್ನುಸಹ ಕಂಬಗಳಿಂದ ಸುಂದರಗೊಳಿಸಲಾಗಿದೆ. ಅದರಲ್ಲಿ ಕಟ್ಟೆಯನ್ನು ಕಟ್ಟಲಾಗಿದೆ. ಮುಖಮಂಟಪಕ್ಕಿರುವ ಪ್ರವೇಶದ್ವಾರವು ಸಹ ಮುಖ್ಯಗರ್ಭಗೃಹದ ಬಾಗಿವಾಡದಂತೆ ತುಂಬಾ ಸುಂದರವಾಗಿದೆ. ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪವಿದೆ. ಮುಖಮಂಟಪದ ಕಕ್ಷಾಸನದ ಹೊರಗೋಡೆಯಲ್ಲಿ ಆನೆ ಸಾಲುಗಳ ಪಟ್ಟಿಕೆಗಳನ್ನು ರಚಿಸಲಾಗಿದೆ.

ದೇವಾಲಯವು ಅಡಿಯಿಂದ ಮುಡಿಯವರೆಗೆ ನಕ್ಷತ್ರಾಕಾರದ ವಿನ್ಯಾಸಹೊಂದಿರುವುದು. ಅಧಿಷ್ಠಾನದಲ್ಲಿ ಉಪಾನ, ಜಗತಿ ಅದರ ಮೇಲ್ಭಾಗದಲ್ಲಿ ಕಪೋತವನ್ನು ರಚಿಸಲಾಗಿದೆ. ಈ ಕಪೋತದಲ್ಲಿ ಮಂಟಪಗಳ ಅಲಂಕಾರ ಮಾಡಲಾಗಿದೆ. ಅಲ್ಲದೇ ಹೊರಗೋಡೆಯ ಪ್ರತಿಯೊಂದು ಮೂಲೆಯಲ್ಲಿ ಗಜ (ಉಬ್ಬು) ಶಿಲ್ಪಗಳನ್ನು ಅಳವಡಿಸಲಾಗಿದೆ. ಹೊರಗೋಡೆಯಲ್ಲಿ ಪಂಜರ, ಕೀರ್ತಿಮುಖ ಹಾಗೂ ಮಣಿಸರಗಳಿಂದ ಅಲಂಕಾರ ಮಾಡಲಾಗಿದೆ.

ಶಿಖರವು ಅದ್ಭುತವಾಗಿದೆ. ಪ್ರತಿಹಂತದಲ್ಲೂ ಬಿಡಿಸಿಲ್ಪಗಳನ್ನು ಹಾಗೂ ಚಿಕ್ಕಮಂಟಪ ಅಲಂಕಾರದಿಂದ ಸೌಂದರ್ಯವನ್ನು ಇಮ್ಮಡಿಗೊಳಿಸಲಾಗಿದೆ. ಇಡೀ ಶಿಖರ ನಕ್ಷತ್ರಾಕಾರದಲ್ಲಿದ್ದು ಮೊದಲ ನೋಟದಲ್ಲಿ ಕಣ್ಮನ ಸೆಳೆಯುತ್ತದೆ.

ದೊಡ್ಡ ಬಸಪ್ಪನ ಗುಡಿಯನ್ನು ಪ್ರಾಚೀನ ಕಾಲದಲ್‌ಇ ಅಜ್ಜೇಶ್ವರನೆಂದು ಕರೆಯಲಾಗುತ್ತಿತ್ತು ಎಂಬ ಲಿಖಿಗ ಆಧಾರಗಳಿವೆ. ಅದನ್ನು ಅಜ್ಜಮೇಶ್ವರ ಭವನವೆಂತಲೂ ಕರೆದಿರುವುದಿದೆ. ಇದನ್ನು ಅಜ್ಜಿಮಯ್ಯನೆಂಬನು ಕಟ್ಟಿದನೆಂಬು ಪ್ರತೀತಿ ಇದೆ. ಈತನು ಮಹಾಶಿವಭಕ್ತನಾಗಿದ್ದನು. ಧರ್ಮವೊಳಲಿನಲ್ಲಿ ಕುಲಪರ್ವತವನ್ನೇ ತಂದು ಒಂದು ಆಕಾರಕ್ಕೆ ಬರುವಂತೆ ನಿರ್ಮಿಸಿದನೆಂದು ಹಾಗೂ ಅದು ಆ ಧರ್ಮದ (ಡಂಬಳ)ದ ಪಟ್ಟಣಕ್ಕೆ ಕಲಶದಂತೆ ಶೋಭಿಸುತ್ತಿತ್ತೆಂದೂ ಶಾಸನದಲ್ಲಿ ವಿವರಿಸಲಾಗಿದೆ (ಮಹಾಲಿಂಗ ಯಾಳಗಿ, (ಸಂ.) ಪುಟ-೧೯).

ಈ ಗುಡಿಯ ಮುಂಭಾಗದಲ್ಲಿ ಕಲ್ಯಾಣ ಚಾಲುಕ್ಯ ನಾಲ್ಕನೆಯ ಸೋಮೇಶ್ವರನ ಕ್ರಿ.ಶ. ೧೧೮೪ರ ತೇದಿವುಳ್ಳ ಶಾಸನವಿದೆ. (ಧಾ.ಜಿ.ಶಾ.ಸೂ, ಸಂ. ಮು, ೧೮, ಪು. ೪೦; SIIXV, No. 57). ಮಹಾಪ್ರದಾನ ಸೇನಾಧಿಪತಿ ತೇಜಿಮಯ್ಯ ದಂಡನಾಯಕನಿಂದ ಧರ್ಮಪುರದ ಗೋಣ ಸಮುದ್ರಕ್ಕೆ (ಡಂಬಳದ ಕೆರೆ) ಭೂಮಿಯನ್ನು ದನ ಮಾಡಿರುವ ಉಲ್ಲೇಖವಿದೆ.

ಊರು ಡಂಬಳ
ಸ್ಮಾರಕ ಜಪದ ಬಾವಿ
ಸ್ಥಳ ಗ್ರಾಮದ ವಾಯವ್ಯಕ್ಕೆ
ಕಾಲ ೧೨-೧೩ನೇ ಶತಮಾನ
ಶೈಲಿ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ಬಾವಿ ಸುತ್ತಲಿನ ಪರಿಸರವು ಪ್ರಾಚೀನ ಡಂಬಳ ಪಟ್ಟಣದ ವಸತಿ ಪ್ರದೇಶವಾಗಿತ್ತು. ಚೌಕಾಕಾರದ ಈ ಬಾವಿಯನ್ನು ಕಪ್ಪುಕಲ್ಲಿನಲ್ಲಿ ನಿರ್ಮಿಸಲಾಗಿದೆ. ಇದರ ಆಲ ಸುಮಾರು ಹದಿನೈದರಿಂದ ಇಪ್ಪತ್ತು ಅಡಿಗಳು. ಒಳಗೋಡೆಯನ್ನು ಕಲ್ಲಿನಿಂದ ಭದ್ರವಾಗಿ ಕಟ್ಟಿದ್ದು ಮೇಲ್ಭಾಗದಲ್ಲಿ ಸುತ್ತಲೂ ಚಿಕ್ಕಮಂಟಪ(ಗೂಡು)ಗಳಿವೆ. ಇಂಥ ಗೂಡುಗಳನ್ನು ಬಾವಿಯ ಪ್ರವೇಶದಲ್ಲಿ ಕೂಡ ನಿರ್ಮಿಸಲಾಗಿದೆ. ಈ ಮಂಟಪಗಳ, ಸೌಂದರ್ಯ ಹೆಚ್ಚಿಸಲು ಅವುಗಳಿಗೆ ಶಿಖರ ಭಾಗವನ್ನು ಕೆತ್ತಿದ್ದಾರೆ. ಕದಂಬರ-ನಾಗರ ಶೈಲಿಯ ಶಿಖರವನ್ನು ಈ ಮಂಟಪಗಳು ಹೊಂದಿವೆ. ಬಾವಿಯ ನಿರ್ಮಾಣದ ಬಗೆಗೆ ಖಚಿತವಾದ ಯಾವ ಮಾಹಿತಿಗಳು ಕಂಡು ಬಂದಿಲ್ಲ. ಆದರೂ ನಿರ್ಮಾಣದ ಶೈಲಿ ಹಾಗೂ ಅಲಂಕಾರ ಗಮನಿಸಿದರೆ ಹನ್ನೊಂದರಿಂದ ಹನ್ನೆರಡನೆಯ ಶತಮಾನದ ಕಾಲಾವಧಿಯಲ್ಲಿ ಇದನ್ನು ಕಟ್ಟಿರಬಹುದು ಎಂದು ತೋರುತ್ತದೆ. ಸದ್ಯ ಬಾವಿಯ ಸುತ್ತಲೂ ಗಿಡಗಂಟೆ, ಹಾಗೂ ಮುಳ್ಳುಕಂಟಿಗಳು ಬೆಳೆದಿದ್ದು, ಅಲ್ಲಲ್ಲಿ ಅದರ ಗೋಡೆಭಾಗವು ಉದುರಿವೆ.

ಡಂಬಳದ ಪ್ರಾಚೀನ ಕೋಟೆಯಲ್ಲಿ ಐತಿಹಾಸಿಕ ಕುರುಹುಗಳು ಹೇರಳವಾಗಿ ಕಮಡುಬರುತ್ತವೆ. ಇದೇ ಕೋಟೆಯ ಆವರಣದಲ್ಲಿ ಗಣಪತಿಯ ಗುಡಿಯಿದೆ. ಅದರಲ್ಲಿ ಬೃಹದಾಕಾರದ ಏಕಶಿಲಾ ಗಣಪತಿ ವಿಗ್ರಹ ಮನಸೆಳೆಯುತ್ತದೆ. ಕೋಟೆಯ ಆವರಣದಲ್ಲಿ ಜೈನಬಸದಿ ಇರುವ ಉಲ್ಲೇಖವನ್ನು ಕೆಲವು ವಿದ್ವಾಂಸರು ಮಾಡಿದ್ದಾರೆ. (ಮಹಾಲಿಂಗ ಯಾಳಗಿ (ಸಂ) ಮುಂಡರಗಿ ನಾಡ ದರ್ಶನ. ಪು. ೧೨). ಆದರೆ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಅಂಥ ಯಾವ ಕುರುಹುಗಳು ಕಂಡುಬಂದಿಲ್ಲ. ಜೈನ ಬಸದಿಯಲ್ಲದೇ ‘ನಗರ ಜಿನಾಲಯ’ದ ಉಲ್ಲೇಖ ಸಹ ಶಾಸನದಲ್ಲಿದೆ (ಧಾ.ಜಿ.ಶಾ.ಸೂ, ಸಂ.ರೋ, ೧೪, ಪು. ೪೦; SII, XI, pt. I, No. 57). ಕಲ್ಯಾಣ ಚಾಲುಕ್ಯ ಒಂದನೆಯ ಸೋಮೇಶ್ರರನ ಕಾಲದ ಕ್ರಿ.ಶ. ೧೦೫೯ರ ತೇದಿವುಳ್ಳ ಶಾಸನವೊಂದು ನಗರ ಜಿನಾಲಯ ಕುರಿತು ಮಹಿತಿ ನೀಡುತ್ತದೆ. ಈ ಶಾಸನದಲ್ಲಿ ಧರ್ಮವೊಲ(ಡಂಬಳ)ದ ಹದಿನಾರು ಸೆಟ್ಟಿಗಳ ಸಮ್ಮುಖದಲ್ಲಿ ಬೀರಯ್ಯ ಸೆಟ್ಟಿಯು ನಗರ ಜಿನಾಲಯಕ್ಕೆ ಸುವರ್ಣದಾನ ನೀಡಿದ ವಿವರವಿದೆ. ಆದರೆ ಸದ್ಯ ಡಂಬಳದಲ್ಲಿ ಈ ಹೆಸರಿನ ಯಾವ ಜಿನಾಲಯವು ಕಂಡಬರುವುದಿಲ್ಲ. ಬಹುಶಃ ಇದು ಸಂಪೂರ್ಣವಾಗಿ ಬಿದ್ದು ನಾಶವಾಗಿರಬಹುದು.

ಪ್ರಾಚೀನ ಜೈನ ಬಸಿದಚಿಯಲ್ಲಿದ್ದ ಇನ್ನೊಂದು ಶಾಸನ (ಧಾ.ಜಿ.ಶಾ.ಸೂ, ಸಂ.ರೋ, ೧೪; ಪು. ೪೦; SII, XI, pt. II, No. 144). ಮಹತ್ವದ ಸಂಗತಿಯನ್ನು ತಿಳಿಸುತ್ತದೆ. ಕ್ರಿ.ಶ. ೧೦೯೮ರ ಇಸ್ವಿಯ ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ ಈ ಶಾಸನ ಸಂಗಮಸೆಟ್ಟಿ ಕಟ್ಟಿಸಿದ ಬೌದ್ಧವಿಹಾರಕ್ಕೆ ಸ್ಥಳೀಯ ತೆಲ್ಲಿಗರು ತೈಲದಾನ ಮಾಡಿದ ವಿಷಯ ತಿಳಿಸುತ್ತದೆ. ಇದರಿಂದ ತಿಳಿದುಬರುವ ಅತಿ ಮುಖ್ಯ ಸಂಗತಿ ಎಂದರೆ ಇಲ್ಲೊಂದು ಬೌದ್ಧ ವಿಹಾರ ಇತ್ತು ಎಂಬುದರ ಬಗೆಗೆ ಸ್ಪಷ್ಟವಾದ ಮಾಹಿತಿ ಇರುವುದು. ಕೋಟೆ ಆವರಣದಲ್ಲಿ ಹೆಚ್ಚಿನ ಸಂಶೋಧನೆ ಕಾರ್ಯವನ್ನು ಕೈಗೊಂಡರೆ ಈ ಮೊದಲು ವಿವಿರಿಸಿರುವ ಐತಿಹಾಸಿಕ ಕುರುಹುಗಳು ಕಂಡುಬರುವುದರಲ್ಲಿ ಸಂಶವಿಲ್ಲ. ಇದೇ ಗ್ರಾಮದಲ್ಲಿರುವ ಮತ್ತೊಂದು ಶಾಸನ (ಧಾ.ಜಿ.ಶಾ.ಸೂ, ಸಂ.ರೋ, ೨೨; ಪು. ೪೧; SII, XV, No. 300). ಯಾದವ ರಾಮಚಂದ್ರನ ಕಾಲಕ್ಕೆ ಸೇರಿದ್ದು ಕ್ರಿ.ಶ. ೧೨೮೩ರ ತೇದಿಯಿದೆ. ಈ ಶಾಸನದಲ್ಲಿ ಭೋಗದೇವ ದೇವಾಲಯದ ಆಚಾರ್ಯನ ಬಗ್ಗೆ ಉಲ್ಲೇಕವಿದೆ. ಈ ದೇವಾಲಯಕ್ಕೆ ಭೂಮಿಯನ್ನು ದಾನ ಮಾಡಿದ ಸಂಗತಿ ಹೇಳಿದೆ. ಅಂದರೆ ಭೋಗದೇವ ದೇವಾಲಯ ಎಂಬ ಹೆಸರಿನ ಸ್ಮಾರಕವು ಡಂಬಳದಲ್ಲಿತ್ತು ಎಂಬ ವಿಷಯ ತಿಳಿದು ಬರುವುದು. ಆದರೆ ಆ ಹೆಸರಿನ ಯಾವ ದೇವಾಲಯ ಸದ್ಯ ಡಂಬಳದಲ್ಲಿ ಕಂಡು ಬರುವುದಿಲ್ಲ. ಬೌದ್ಧ ಧರ್ಮಕ್ಕೆ ಸಂಬಂಧಿಸಿದ ತಾಂತ್ರಕ ಪಂಥದ ಬಗೆಗೆ ಮಹತ್ವದ ವಿವರ ನೀಡುವ ಈ ಶಾಸನ ಕಣ್ಮರೆಯಾಗಿರುವುದು ವಿಷಾದದ ಸಂಗತಿಯೇ ಸರಿ. ತಾರಾ ಭಗವತಿಯ ಉಬ್ಬು ಶಿಲ್ಪವನ್ನೊಳಗೊಂಡ ಶಾಸನದ ಬಗೆಗೂ ಇದರಲ್ಲಿ ಉಲ್ಲೇಖಿಸಲಾಗಿದೆ.

ಕೋಟೆ ಪ್ರದೇಶದಲ್ಲಿ ಸಂಪೂರ್ಣವಾಗಿ ಬಿದ್ದುಹೋಗಿರುವ ಈಶ್ವರ ದೇವಾಲಯ ಒಂದಿದೆ. ಬಹುಶಃ ಇದನ್ನು ಕಲ್ಮೇಶ್ವರ ದೇವಾಲವೆಂದು ಕೂಡಾ ಕರೆಯುತ್ತಿದ್ದಿರಬಹುದು. ಈ ಗುಡಿಯ ಮುಂಭಾಗದಲ್ಲಿ ಶಾಸನವೊಂದಿದೆ. ದೊಡ್ಡದಾಗಿರುವ ಈ ಶಿಲಾ ಶಾಸನವು ಸುಮದರವಾಗಿದ್ದು ಅನೇಕ ಕಾರಣಗಳಿಂದ ಸವೆದು ಹೋಗುತ್ತಿದೆ. ಉಳಿದಂತೆ ಪ್ರಾಚೀನ ದೇವಾಲಯದ ಅವಶೇಷಗಳು ಹರಡಿಕೊಂಡಿವೆ.

ಡಂಬಳದ ಕೆರೆಯ ದಂಡೆಯ ಮೇಲೆ ಕಾಳಮ್ಮನ ಗುಡಿಯೊಂದಿದೆ. ಪ್ರಾಚೀನ ಗುಡಿ ಬಿದ್ದುಹೋದ ನಂತರ ಹೊಸದಾಗಿ ಕಟ್ಟಲಾಗಿದೆ. ಆದರೆ ಪ್ರಾಚೀನ ದೇವಾಲಯದ ಕಂಬಗಳು ಹಾಗೂ ತ್ರುಟಿತ ಶಿಲ್ಪದ ತುಣುಕುಗಳು ದೇವಾಲಯದ ಮುಂಭಾಗದಲ್ಲಿ ಕಂಡುಬರುತ್ತವೆ. ಇಲ್ಲಿರುವ ಪ್ರಾಚೀನ ಪ್ರಾಚ್ಯವಶೇಷಗಳಷ್ಟೇ ಮುಖ್ಯವಾದುದು ಡಂಬಳದ ಕೆರೆ. ಇತಿಹಾಸ ಪೂರ್ವಕಾಲದಿಂದಲೂ ಈ ಕೆರೆಯೇ ಡಂಬಳದ ಜೀವನಾಡಿಯಾಗಿತ್ತೆಂದರೆ ತಪ್ಪಾಗಲಾರದು. ಶಾಸನಗಳಲ್ಲಿ ಇದನ್ನು ಗೋಣಸಮುದ್ರವೆಂದು ಕರೆದಿದ್ದಾರೆ. ಕ್ರಿ.ಶ. ೧೮೭೬ರಲ್ಲಿ ಬ್ರಿಟಿಷ ಸಾಮ್ರಾಜ್ಷೆ ವಿಕ್ಞೋರಿಯಾ ರಾಣಿಯು ಕೆರೆಯ ದುರಸ್ತಿಗೆ ಹೆಚ್ಚಿನ ಕಾಳಜಿವಹಿಸಿ ಅದರ ನಿರ್ವಹಣೆಗೆ ಸಕಲ ಸೌಲಭ್ಯಗಳನ್ನು ಒದಗಿಸಿ ಅದಕ್ಕೊಂದು ಹೊಸ ರೂಪ ಕೊಟ್ಟಿರುವ ದಾಖಲೆಗಳು ಪ್ರಕಟಗೊಂಡಿವೆ.

ಬೌದ್ದಧರ್ಮದ, ತಾಂತ್ರಿಕ ಪಂಥದ (ವಜ್ರಾಯಾನ), ಜೈನಧರ್ಮದ, ಶೈವ ಹಾಗೂ ವೈಷ್ಣವ ಪಂಥಗಳ ನೆಲೆವೀಡವಾದ ಡಂಬಳವು ಆಧುನಿಕ ಕಾಲದಲ್ಲೂ ಅನೇಕ ಸಮಾಜೋ-ಧಾರ್ಮಿಕ ಕಾರ್ಯಗಳಿಗೆ ಪ್ರಸಿದ್ಧವಾಗಿದೆ. ೧೭ನೇ ಶತಮಾನದಲ್ಲಿ ಪ್ರಾರಂಭವಾದ ತೋಂಟದಾರ್ಯ ಶೂನ್ಯಪೀಠವು ಈ ಭಾಗದಲ್ಲಿ ಅನೇಕ ಧರ್ಮ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದು ಶ್ಲಾಘನೀಯ. ಎಡೆಯೂರ ತೋಂಟದಾರ್ಯ ಸಿದ್ಧಲಿಂಗ ಯತಿಗಳ ಪರಂಪರೆಗೆ ಸೇರಿದ ಮಠವೊಂದು ಡಂಬಳದಲ್ಲಿದೆ. ಹಲವರು ಈ ಸಂಸ್ಥಾನಮಠಕ್ಕೆ ದತ್ತಿ-ದಾನಗಳನ್ನು ನೀಡಿ ಪೋಷಿಸಿಕೊಂಡು ಬಂದಿದ್ದಾರೆ. ೧೮ನೇ ಶತಮಾನದಲ್ಲಿ ರಚನೆಯಾದ ಕಂಬಗಳು ಹಾಗು ಉಸುಕು ಕಲ್ಲಿನಲ್ಲಿ ಕಟ್ಟಿರುವ ಈ ದೇವಾಲಯ ಸುಸ್ಥಿತಿಯಲ್ಲಿದೆ. ಶೈಕ್ಷಣಿಕ, ಸಾಹಿತ್ಯ ಹಾಗೂ ದಾಸೋ ಕಾರ್ಯಗಳನ್ನು ಈ ಮಠ ಇಂದಿಗೂ ನಿರಂತವಾಗಿ ನಡೆಸಿಕೊಂಡು ಬರುತ್ತಿದೆ. ರಾಣಿ ವಿಕ್ಟೋರಿಯಾ ಕಾಲದಲ್ಲಿ ಇಲ್ಲೊಂದು ಭವ್ಯವಾದ ವಸತಿ ಗೃಹವನ್ನು ನಿರ್ಮಿಸಲಾಗಿದೆ. ಯುರೋಪ್ (ಗಾಥಿಕ್) ಮಾದರಿಯ ಈ ಕಟ್ಟಡ ಡಂಬಳದ ದೊಡ್ಡ ಬಸಪ್ಪನ ಗುಡಿಯ ಹಿಂಭಾಗದಲ್ಲಿದೆ. ಸುಮಾರು ಒಂದುನೂರು ಐವತ್ತು ವರ್ಷಗಳ ಇತಿಯಾಸ ಹೊಂದಿರುವ ವಸತಿ ಗೃಹ ನೋಡಲು ಭವ್ಯವಾಗಿ ಸುಂದರವಾಗಿ ಕಂಡುಬರುತ್ತದೆ.

೯.

ಊರು ಡಂಬಳ
ಸ್ಮಾರಕ ಡಬ್ಬಗಲ್ಲುಗುಡಿ (ಸೋಮೇಶ್ವರ)
ಸ್ಥಳ ಮುಂಡರಗಿ-ಗದಗ ರಸ್ತೆ
ಕಾಲ ೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ ಭಾ.ಪು.ಇ.

ಈ ದೇವಾಲಯ ಎತ್ತರದ ಕಟ್ಟೆಯ ಮೇಲೆ ನಿರ್ಮಾಣವಾಗಿದೆ. ಇದನ್ನು ಡಬ್ಬುಗಲ್ಲು ಗುಡಿ ಸೋಮೇಶ್ವರ ಹಾಗೂ ಮಧುವೇಶ್ರ ಎಂಬ ನಾನಾ ಹೆಸರುಗಳಿಂದ ಕರೆಯುತ್ತಾರೆ. ಉಸುಕು ಕಲ್ಲಿನಲ್ಲಿ ರಚನೆಯಾಗಿರುವ ಈ ಸ್ಮಾರಕ ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ನವರಂಗದ ಮಂಟಪಕ್ಕೆ ಮೂರು ಕಡೆ ಪ್ರವೇಶ ದ್ವಾರಗಳನ್ನು ನಿರ್ಮಿಸಿದ್ದು ಅವುಗಳ ಮೂಲಕ ಗುಡಿಯನ್ನು ಪ್ರವೇಶಿಸಬಹುದು.

ಗರ್ಭಗೃಹ ಚೌಕಾಕಾರವಾಗಿದ್ದು ವಿಶಾಲವೂ ಆಗಿದೆ. ಇದರಲ್ಲಿ ಲಿಂಗವಿದೆ. ಅದಕ್ಕೆ ಚೌಕಾಕಾರದ ಪೀಠ, ವೃತ್ತಾಕಾರದ ಪಾನ ಬಟ್ಟಲು ಹಾಗೂ ದುಂಡಾಕಾರದ ಗಿಡ್ಡನೆಯ ರುದ್ರಭಾಗಿವದೆ. ಅಲಂಕರಣೆಯಿಂದ ಕೂಡಿದ ಬಾಗಿಲವಾಡ ಗರ್ಭಗೃಹಕ್ಕಿದ್ದು ಅದು ನಾನಾ ಬಗೆಯ ಕೆತ್ತನೆಗಳನ್ನೊಳಗೊಂಡಿದೆ. ಅಷ್ಟ ಪಟ್ಟಿಕೆ, ವೃತ್ತಾಕಾರದ ಪಟ್ಟಿಕೆ, ಮಣಿಸರ ಅಲಂಕರಣೆಯ ಪಟ್ಟಿಕೆ ಹಾಗೂ ಹೊಸೆದ ಹಗ್ಗದಂತೆ ಕಾಣುವ ಕುಸುರಿ ಅಷ್ಟೇ ಅಲ್ಲದೆ ಬಾಗಿಲವಾಡದ ಸುತ್ತಲೂ ವಜ್ರಾಕೃತಿಯ ಅಲಂಕರಣೆಯ ಪಟ್ಟಿಕೆಯನ್ನು ಚಿತ್ರಿಸಿದ್ದಾರೆ. ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬು ಶಿಲ್ಪವಿರುವುದು. ಅದರ ಮೇಲ್ಭಾಗದಲ್ಲಿ ಕಪೋತ ಅಲಂಕರಣೆಯಿದೆ. ಗರ್ಭಗೃಹದ ಒಳಗಡೆ ಪ್ರತಿ ಮೂಲೆಯಲ್ಲೂ ಅರ್ಧಕಂಬಗಳು ಕಂಡುಬರುತ್ತವೆ. ಸುಂದರ ಭುವನೇಶ್ವರಿಯನ್ನು ಸಹ ಗರ್ಭಗೃಹದಲ್ಲಿ ರಚಿಸಿದ್ದಾರೆ.

ಅಂತರಾಳವು ಬರಿದಾಗಿದೆ. ಆದರೆ ಹೊರಗಿನಿಂದ ತಂದಿರುವ ನಂದಿ ಶಿಲ್ಪವನ್ನು ಇತ್ತೀಚೆಗೆ ಇಡಲಾಗಿದೆ. ಬಾಗಿಲವಾಡವನ್ನು ಜಾಲಂಧರದಿಂದ ಅಲಂಕರಣೆಗೊಳಿಸಲಾಗಿದೆ. ಸುತ್ತಲೂ ಮಣಿಸರ ಹಾಗೂ ಹೊಸೆದ ಹಗ್ಗದ ತರಹ ಅಲಂಕರಣೆ ಮಾಡಲಾಗಿದೆ. ಅಂತರಾಳದಲ್ಲಿರುವ ಬಾಗಿಲವಾಡದ ಲಲಾಟ ಭಾಗದಲ್ಲಿ ಕೂಡಾ ಜಾಲಂಧರವೇ ಮುಂದುವರೆದಿದೆ. ಇಲ್ಲಿ ಉಬ್ಬುಶಿಲ್ಪಗಳ ರಚನೆ ಇಲ್ಲ.

ನವರಂಗ ಮಂಟಪ ಇಪ್ಪತ್ತನಾಲ್ಕು ಕಂಬಗಳನ್ನು ಹೊಂದಿದೆ. ಅಲ್ಲದೇ ಅರ್ಧ ಕಂಬಗಳು ಸಹ ನವರಂಗದಲ್ಲಿ ಕಾಣುತ್ತವೆ. ಇಲ್ಲಿರುವ ಅರ್ಧಕಂಬಗಳಲ್ಲಿ ಐದು ಪಟ್ಟಿಕೆಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿಯೂ ಕೆಲವು ಅಲಂಕರಣೆಗಳನ್ನು ಚಿತ್ರಿಸಲಾಗಿದೆ. ತಿರುಗಣಿ ಯಂತ್ರದಿಂದ ಮಾಡಲ್ಪಟ್ಟಿರುವ ನವರಂಗದಲ್ಲಿನ ನಾಲ್ಕು ಕಂಬಗಳು ಗಂಟೆಯಾಕಾರದವು. ಇವೆಲ್ಲವನ್ನೊಳಗೊಂಡಂತೆ ಮಧ್ಯದಲ್ಲಿ ವೃತ್ತಾಕಾರದ ಕಟ್ಟೆಯನ್ನು ನಿರ್ಮಿಸಲಾಗಿದೆ. ಮೇಲ್ಭಾಗದಲ್ಲಿ ಭುವನೇಶ್ವರಿಯನ್ನು ರಚಿಸಲಾಗಿದೆ. ಈ ಕಂಬಗಳಿಗೆ ವೃತ್ತಾಕಾರದ, ತಟ್ಟೆ ಆಕಾರದ ಫಲಕ ಹಾಗೂ ಚೌಕಾಕಾರದ ಬೋಧಿಗೆಯನ್ನು ಅಳವಡಿಸಿದೆ. ಉಳಿದ ಕಂಬಗಳು ನಕ್ಷತ್ರಾಕಾರದಲ್ಲಿವೆ. ಅವು ಎರಡು ಪಟ್ಟಿಕೆಯ ರಚನೆಗಳಿಂದ ಕೂಡಿವೆ. ನವರಂಗಕ್ಕೆ ಕಕ್ಷಾಸನವನ್ನು ನಿರ್ಮಿಸಲಾಗಿದೆ. ಕಟ್ಟೆಯಲ್ಲಿ ಸಹ ಕಂಬಗಳನ್ನು ನಿರ್ಮಿಸಲಾಗಿದೆ. ಅವು ಗಂಟೆಯಾಕಾರದ ಕಂಬಗಳಾಗಿದ್ದು, ಎಂಟು ಪಟ್ಟಿಕೆಗಳಿಂದ ಕೂಡಿವೆ.

ಗರ್ಭಗೃಹ ಹಾಗೂ ಅಂತರಾಳದ ಹೊರಗೋಡೆಯನ್ನು ವಿವಿಧ ತರಹದ ಅರ್ಧ ಕಂಬಗಳಿಂದ ಅಂದಗೊಳಿಸಲಾಗಿದೆ. ಅವುಗಳಲ್ಲಿ ಗಂಟೆಯಾಕಾರದ ಅರ್ಧಕಂಬಗಳು ವಿಶೇಷವಾಗಿ ಮೂಡಿಬಂದಿವೆ. ಮೇಲ್ಛಾವಣಿಯಲ್ಲಿ ಮಂಜೂರಿನ ಭಗ ನಿರ್ಮಿತವಾಗಿದೆ. ಗುಡಿಯ ಮೇಲ್ಛಾವಣಿಯನ್ನು ಶಿಲಾಫಲಕಗಳಿಂದ ಹೊದಿಸಲಾಗಿದ್ದು ಕಲ್ಲುಗಳಿಂದಲೇ ದೇವಾಲಯವನ್ನು ಮುಚ್ಚಿದ (ಡಬ್ಬು) ಹಾಗೆ ತೋರುತ್ತದೆ. ಹೀಗಾಗಿ ಸೋಮೇಶ್ವರ ಗುಡಿಯನ್ನು ಸ್ಥಳೀಯರು ಡಬ್ಬಗಲ್ಲು ಗುಡಿ ಎಂದು ಕರೆಯುವ ರೂಢಿಯಿದೆ.

ದೇವಾಲಯದ ಅಧಿಷ್ಠಾನವು ಉಪಾನ, ಜಗತಿ, ಗಳ, ತ್ರಿಪಟ್ಟ ಕುಮದ ಹಾಗೂ ಕಪೋತ ಭಾಗಗಳಿಂದ ಅಲಂಕರಿಸಲಾಗಿದೆ. ಕಪೋತ ಭಾಗದ ಮೇಲೆ ಇನ್ನೊಂದು ಪಟ್ಟಿಕೆಯು ದೇವಾಲಯ ಸುತ್ತಲೂ ನಿರ್ಮಣವಾಗಿದೆ. ಸೋಪಾನ (ಮೆಟ್ಟಿಲು)ಗಳ ಮೂಲಕ ನವರಂಗಕ್ಕೆ ಪ್ರವೇಶವಿದೆ. ಇಲ್ಲಿರುವ ಮೆಟ್ಟಿಲುಗಳನ್ನು ಆನೆಯ ಶಿಲ್ಪ ಫಲಕದಿಂದ ಜೋಡಿಸಿ ಅಂದವನ್ನು ಹೆಚ್ಚಿಸಲಾಗಿದೆ. ಮೇಲೆ ಪುಷ್ಟ ಅಲಂಕರಣೆಯನ್ನು ಸಹ ಮಾಡಲಾಗಿದೆ. ದೇವಾಲಯಕ್ಕೆ ಶಿಖರವಿಲ್ಲ. ಬಹುಶಃ ಶಿಖರವು ಬಿದ್ದು ಹೋಗಿರಬಹುದು. ಸೋಮೇಶ್ವರ ದೇವಾಲಯ ಒಂದು ರಕ್ಷಿತ ಸ್ಮಾರಕ. ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಒಳಪಟ್ಟಿರುವ ಈ ಗುಡಿ ಸುಸಜ್ಜಿತವಾಗಿದೆ.

ಡಬ್ಬಗಲ್ಲು ಗುಡಿಗೆ ಸಂಬಂಧಿಸಿದಂತೆ ಒಂದು ಶಾಸನ ಪ್ರಕಟವಾಗಿದೆ (ಧಾ.ಜಿ.ಶಾ.ಸೂ.ಸಂ.ರೋ, ೨೧, ಪು. ೪೦; SII, XV, No. 569). ಕ್ರಿ.ಶ. ೧೨ನೇ ಶತಮಾನದ ಕಾಲಾವಧಿಗೆ ಸೇರಿದ ಈ ಶಾಸನ ಮಾಧವೇಶ್ವರ ದೇವಾಲಯಕ್ಕೆ ಒಂದು ಗಡಿಂಬ ಭೂಮಿಯನ್ನು ದಾನವಾಗಿ ಬಿಟ್ಟ ಮಾಹಿತಿಯನ್ನು ನೀಡುತ್ತದೆ. ಈ ಶಾಸನದಿಂದ ತಿಳಿದುಬರುವ ಮುಖ್ಯ ಅಂಶವೆಂದರೆ ಈ ಹೊತ್ತು ಡಬ್ಬಗಲ್ಲುಗುಡಿ ಹಾಗೂ ಸೋಮೇಶ್ವರನೆಂದು ಕರೆಯಲಾಗುವ ಈ ದೇವಾಲಯವನ್ನು ಶಾಸನಗಳಲ್ಲಿ ಮಾಧವೇಶ್ವರನೆಂದು ಉಲ್ಲೇಖಿಸಲಾಗಿದೆ.

೧೦.

ಊರು ಡೋಣಿ
ಸ್ಮಾರಕ ಸಿದ್ಧಲಿಂಗೇಶ್ವರ
ಸ್ಥಳ ಗ್ರಾಮದ ಉತ್ತರಕ್ಕೆ
ಕಾಲ ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪಶ್ಚಿಮ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಹಳ್ಳದ ದಂಡೆಯ ಮೇಲೆ ಸಿದ್ಧಲಿಂಗೇಶ್ವರ ದೇವಾಲಯ ನಿರ್ಮಾಣವಾಗಿದೆ. ಈ ಗುಡಿಯ ನವರಂಗ ಹಲವು ದುರಸ್ತಿಕಾರ್ಯಗಳಿಗೆ ಒಳಗಾಗಿರುವುದನ್ನು ಕಾಣುತ್ತೇವೆ. ಗರ್ಭಗೃಹ, ಅಂತರಾಳ, ನವರಂಗ ಹಾಗೂ ಇತ್ತೀಚೆಗೆ ಕಟ್ಟಿಸಿದ ಮಂಟಪವು ದೇವಾಲಯದಲ್ಲಿದೆ. ಗರ್ಭಗೃಹದ ಒಳಗೋಡೆ ಹಾಗೂ ನೆಲೆಹಾಸು ಅಮೃತಶಿಲೆಯಿಂದ ಅಲಂಕರಣಗೊಳಿಸಲಾಗಿದೆ. ಇದರಲ್ಲಿನ ಲಿಂಗವು ನಿತ್ಯಪೂಜೆಗೆ ಒಳಪಡುತ್ತದೆ. ನಿರಾಲಂಕಾರದಿಂದ ಕೂಡಿದ ಚಿಕ್ಕದಾದ ಬಾಗಿವಾಡವು ಗರ್ಭಗೃಹಕ್ಕಿದೆ. ಲಲಾಟದಲ್ಲಿ ಗಜಲಕ್ಷ್ಮಿ ಉಬ್ಬು ಶಿಲ್ಪವನ್ನು ಕೆತ್ತಿದ್ದಾರೆ. ಗರ್ಭಗೃಹಕ್ಕೆ ಹೊಂದಿಕೊಂಡಂತಿರುವ ಅಂತರಾಳ ಬರಿದಾಗಿದೆ. ಅದರ ಬಾಗಿಲವಾಡ ಸಾದಾ ರಚನೆಯದ್ದಾಗಿದೆ.

ನಾಲ್ಕು ಕಂಬಗಳಿಂದ ಕೂಡಿರುವ ನವರಂಗವು ತಕ್ಕಮಟ್ಟಿಗೆ ವಿಶಾಲವಾಗಿದೆ. ಇಲ್ಲಿರುವ ಚೌಕಾಕಾರದ ಕಂಬಗಳ ಮಧ್ಯಭಾಗದಲ್ಲಿ ಎಂಟು ಪಟ್ಟಿಕೆಗಳನ್ನು ಕಂಡಿರಿಸಿದೆ. ಫಲಕ ಹಾಗೂ ಬೋಧಿಗೆಗಳನ್ನು ಈ ಕಂಬಗಳು ಒಳಗೊಂಡಿವೆ. ಲಲಾಟದಲ್ಲಿ ಗಣಪನ ಉಬ್ಬುಶಿಲ್ಪವನ್ನು ಹೊಂದಿರುವ ನವರಂಗದ ಬಾಗಿಲವಾಡವು ಸರಳವಾದುದು. ನವರಂಗಕ್ಕೆ ಹೊಂದಿಕೊಂಡಂತೆ ಇತ್ತೀಚೆಗೆ ಹೊಸ ಜೋಡಣೆಯಾಗಿ ಒಂದು ಮಂಟಪ ನಿರ್ಮಿತವಾಗಿದೆ.

ಅಧಿಷ್ಠಾನ ಭಾಗ ಮಣ್ಣಿನಲ್ಲಿ ಹೂತುಹೋಗಿದೆ. ಹೊರಗೋಡೆ ನಿರಾಲಂಕಾರದಿಂದ ಕೂಡಿದೆ. ಪ್ರಾಚೀನವಾಗಿರುವ ಕದಂಬ-ನಾಗರ ಶೈಲಿಯ ಶಿಖರ ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿದೆ. ಈ ಶಿಖರ ಸುಖನಾಸವನ್ನು ಹೊಂದಿರುವುದು. ಸುಣ್ಣ-ಬಣ್ಣಗಳಿಂದ ದೇವಾಲಯವನ್ನು ಅಲಂಕರಣೆ ಮಾಡಿರಿವುದರಿಂದ ಮೂಲ ಸೌಂದರ್ಯ ಕ್ಷೀಣಿಸಿದಂತೆ ಕಾಣುತ್ತದೆ.

ನವರಂಗದಲ್ಲಿರುವ ಕಂಬಗಳ ಬಗೆಗೆ ಸ್ವಲ್ಪ ಮಟ್ಟಿನ ಸಂಶಯ ಹುಟ್ಟುತ್ತದೆ. ಪ್ರಾಚೀನ ದೇವಾಲಯದ ನವರಂಗದ ಕಮಬಗಳನ್ನು ಬದಲಾವಣೆ ಮಾಡಿದ್ದಾರೆ ಎಂಬುದು ಚರ್ಚೆಯ ಸಂಗತಿ ಇದಕ್ಕೆ ಆಧಾರವೆಂಬಂತೆ ಹಲವಾರು ಪ್ರಾಚೀನ ಅವಶೇಷಗಳು ಗುಡಿಯ ಮುಂಭಾಗದಲ್ಲಿ ಬಿದ್ದಿವೆ. ಅವುಗಳಲ್ಲಿ ದುಂಡನೆಯ ಕಂಬಗಳು ಸಹ ಸೇರಿವೆ. ಹುಲಿಬೇಟೆಯನ್ನಾಡಿ ವೀರಮರಣ ಹೊಮದಿರುವ ಯೋಧನೊಬ್ಬನ ಶಿಲಾಫಲಕ ಆವರಣದಲ್ಲಿದೆ. ಈ ಶಿಲ್ಪದ ಕೆತ್ತನೆಯು ಮನಸ್ಸಿಗೆ ಮುದ ನೀಡುತ್ತದೆ. ಕೆಳಭಾಗದಲ್ಲಿ ಬಿಲ್ಲು-ಬಾಣ ಹೂಡಿ ಎದುರಿಗೆ ನಿಂತಿರುವ ಹುಲಿಯನ್ನು ಕೊಲ್ಲುವ ಸಾಹಸದಲ್ಲಿ ತೊಡಗಿದ ಹಾಗೂ ಮೇಲ್ಭಾಗದಲ್ಲಿ ಈ ಯೋಧನನ್ನು ಇಬ್ಬರು ಸ್ತ್ರೀಯರು ಕರೆದೊಯ್ಯುತ್ತಿರುವ ಚಿತ್ರವನ್ನು ಬಿಡಿಸಲಾಗಿದೆ. ಬಹುಶಃ ಯೋಧನು ಬೇಟೆಯ ಸಮಯದಲ್ಲಿ ಮರಣ ಹೊಂದಿರುವ ಸಾಧ್ಯತೆಗಳಿವೆ. ಈ ಶಿಲ್ಪದ ಪಕ್ಕದಲ್ಲಿಯೇ ತ್ರುಟಿತವಾಗಿರುವ ಸಪ್ತಮಾತೃಕೆಯ ಶಿಲ್ಪವನ್ನು ಇಟ್ಟಿದೆ.

ಸಿದ್ಧೇಶ್ವರ ಗುಡಿಯ ಉಲ್ಲೇಖವನ್ನು ನೀಡುವ ನಾಲ್ಕು ಶಾಸನಗಳು ಪ್ರಕಟವಾಗಿವೆ. ಅವೆಲ್ಲ ಕಲ್ಯಾಣ ಚಾಲಯಕ್ಯ ಆರನೆಯ ವಿಕ್ರಮಾದಿತ್ಯನ ಕಲಕ್ಕೆ ಸೇರಿದವು (ಧಾ.ಜಿ.ಶಾ.ಸೂ, ಸಂ.ರೋ, ೨೪, ೨೫, ೨೭ ಮತ್ತು ೨೯ ಪು. ೪೧; SII, XI, pt. II, No. 126-181 P. 182). ಶಾಸನಗಳಲ್ಲಿ ಡೋಣಿಯನ್ನು ದ್ರೋಣಾಪುರಿ, ದ್ರೋಣಾಮುಖವೆಂದು ಕರೆಯಲಾಗಿದೆ. ಅಲ್ಲದೇ ಈ ದ್ರೋಣಾಪುರಿ ಪಟ್ಟಣ ಆರನೆಯ ವಿಕ್ರಮಾದಿತ್ಯನ ರಾಣಿ ಪಿರಿಯರಿಸಿ ಲಕ್ಷ್ಮೀದೇವಿಯ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದು ಪ್ರಮುಖ ಸಂಗತಿ. ಡೋಣಿಯ ಸೆಟ್ಟಿಯರು ಹಾಗೂ ಅರವತ್ತು ಮಹಾಜನರು ಇತ್ತಿನ ಸಿದ್ದೇಶ್ವರ ದೇವಾಲಯಕ್ಕೆ ಭೂಮಿಯನ್ನು ದಾನಮಾಡಿರುವ ಉಲ್ಲೇಖವಿದೆ. ಅದೇ ದೇವಾಲಯಕ್ಕೆ ದಂಡನಾಯಕ ಮಹಾದೇವಭಟ್ಟನ ಆದೇಶದ ಮೇರೆಗೆ ಸುಂಕವೆರ್ಗಡೆ ವಿಟ್ಟರಸನು ಸುಂಕಗಳ (ತೆರಿಗೆಯಿಂದ ಬಂದ ಹಣ) ದಾನ ಮಾಡಿರುವ ಮಾಹಿತಿಯನ್ನು ಈ ಶಾಸನವು ಒಳಗೊಂಡಿದೆ.

ಇದೇ ಗ್ರಾಮಕ್ಕೆ ಸಂಬಂಧಿಸಿದ ಮೂರು ಶಾಸನಗಳು ಪ್ರಕಟವಾಗಿದ್ದು (ಧಾ.ಜಿ.ಶಾ.ಸೂ, ಸಂ.ರೋ. ೨೬, ೨೮ ಹಾಗೂ ೩೧ ಪು. ೪೧; SII, XI, pt. II No. 140, SII, XV, No. 572 and 614). ಅವು ಜೈನ ಬಸಿದಿಗೆ ಸಂಬಂಧಪಟ್ಟ ಉಲ್ಲೇಖಗಳನ್ನು ನೀಡುತ್ತವೆ. ಯಾಪನೀಯ ಸಂಘ ಮತ್ತು ವೃಕ್ಷ ಮೂಲಗಣದ ಚಾರುಕೀರ್ತಿ ಪಂಡಿತರಿಗೆ ಸ್ಥಳೀಯನಾದ ಸೋಕಸೆಟ್ಟಿ (ಸೋವಿಸೆಟ್ಟಿ)ಯು ತಾನು ಕಟ್ಟಿಸಿದ ಜೈನ ದೇವಾಲಯಕ್ಕೆ ಭೂಮಿ ದಾನ ಮಾಡಿದ ಸಂಗತಿಯಿದೆ. ಅಲ್ಲದೇ ಅರವತ್ತು ಮಹಾಜನರು ಇದೇ ಬಸದಿಗೆ ಭೂಮಿ ಹಾಗೂ ನಿವೇಶನವನ್ನು ದಾನ ಮಾಡಿದ್ದಾರೆ. ಕ್ರಿ.ಶ. ೧೨೬೬ರ ತೇದಿವುಳ್ಳ ಮತ್ತೊಂದು ಶಾಸನವು ತಿಪ್ಪರಾಜನು ಕರ್ನಾಟ ಮಂಡಲವನ್ನಾಳುವಾಗ ಶ್ರೀಕರಣದ ಬೊಪ್ಪಣನಿಂದ ಕಾಣೂರ ಗಣದ ಮರುದೇವಿ ಅವ್ಬೆಯ ಬಸಿದಿಗೆ ಪಾರ್ಶ್ವನಾಥ ವಿಗ್ರಹ ದಾನ ಮಾಡಿರುವ ಸಂಗತಿ ತಿಳಿದುಬರುತ್ತದೆ. ಶಾಸನಗಳಲ್ಲಿ ಇಷ್ಟೆಲ್ಲಾ ವಿವರಗಳು ಬಸದಿಯ ಬಗ್ಗೆ ಇದ್ದರೂ ಸದ್ಯ ಊರಲ್ಲಿ ಅಂಥ ಯಾವ ಜೈನ ದೇವಾಲಯ ಕಂಡುಬರುವುದಿಲ್ಲ. ಈ ಬಸದಿಯು ಬಹುಶಃ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಅಥವಾ ಹಳ್ಳದ ಆಚೆ ಪ್ರದೇಶದಲ್ಲಿ ಇದ್ದಿರಬಹುದೆಂಬ ಸಂಶಯ ವ್ಯಕ್ತವಾಗುತ್ತದೆ. ಪ್ರಾಚೀನ ದೇವಾಲಯದ ವಾಸ್ತು ಅವಶೇಷಗಳು ಸಿದ್ದೇಶ್ವರ ಗುಡಿಯ ಸುತ್ತಲೂ ಕಂಡಬುರುತ್ತವೆ. ಅವಶೇಷಗಳೆಲ್ಲ ಶಾಸನ ಉಲ್ಲೇಖಿತ ಜೈನ ಬಸದಿಗೆ ಸಂಬಂಧಪಟ್ಟವುಗಳೇ ಎಂಬುದು ಪ್ರಶ್ನಾರ್ಥಕವಾಗಿಯೆ ಉಳಿದುಕೊಳ್ಳುತ್ತವೆ.