೧೧.

ಊರು ಡೋಣಿ
ಸ್ಮಾರಕ ಡೋಣಿಕವ್ವೆ
ಸ್ಥಳ ಗ್ರಾಮದ ಪೂರ್ವಕ್ಕೆ
ಕಾಲ ಆಧುನಿಕ
ಶೈಲಿ ಆಧುನಿಕ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಪ್ರಾಚೀನ ಕಾಲದ ಈ ಗುಡಿಯು ಹಲವಾರು ದುರಸ್ತಿ ಕಾರ್ಯಗಳಿಗೆ ಒಳಗಾಗಿದೆ. ದೇವಾಲಯದ ಹೊರಗೋಡೆ ಹಾಗೂ ಅಧಿಷ್ಠಾನದ ಭಾಗವನ್ನು ಬಿಟ್ಟರೆ ಮೇಲ್ಛಾವಣಿ ಹಾಗೂ ದೇವಾಲಯದ ಒಳಭಾಗ ಸಂಪೂರ್ಣವಾಗಿ ಹೊಸದಾಇ ನಿರ್ಮಾಣವಾಗಿದೆ. ಗ್ರಾಮದೇವತೆಯಾತಿರುವ ಡೋಣಿಕವ್ವೆ ಎಲ್ಲರ ಆರಾಧ್ಯ ದೈವ. ನಾಲ್ಕು ಅಡಿ ಎತ್ತರದ ವಿಗ್ರಹವು ದೇವಾಲಯದಲ್ಲಿದ್ದು ಅದನ್ನು ನಿತ್ಯವು ಪೂಜಿಸುತ್ತಾರೆ. ವಿಗ್ರಹವು ಸಹ ಇತ್ತೀಚೆಗೆ ನಿರ್ಮಿಸಲ್ಪಟ್ಟಂತಹುದು. ಹಳೆಯ ಶಿಲ್ಪವನ್ನು ಅಲ್ಲಿಯೆ ಇಡಲಾಗಿದೆ. ಇದೊಂದು ಸ್ತ್ರೀದೇವತೆಯಾಗಿದ್ದರೂ ಪುರುಷ ರೂಪದಲ್ಲಿ ಇದನ್ನು ಅಲಂಕಾರಗೊಳಿಸಿ ಆರಾಧಿಸುತ್ತಾರೆ.

ಮಂಟಪದಲ್ಲಿರುವ ಕಂಬಗಳು ಸಹ ಹೊಸವು. ಸಾದಾ ರಚನೆಯಿಂದ ಕೂಡಿರುವ ಬಾಗಿಲವಾಡದ ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪವಿದೆ. ಇದರ ಮೇಲೆ ಮುಂಚಾಚಿದ ಗೋರಣ ನಿರ್ಮಿಸಲಾಗಿದೆ. ದೇವಾಲಯಕ್ಕೆ ಶಿಖರವಿಲ್ಲ. ಆವರಣದಲ್ಲಿ ನಾಗಶಿಲ್ಪ ಹಾಗೂ ತ್ರುಟಿತ ಬಿಡಿ ಶಿಲ್ಪವೊಂದನ್ನು ಇಡಲಾಗಿದೆ.

ಡೋಣಿಕವ್ವೆಯ ಗುಡಿಗೆ ವಿಶಾಲವಾದ ಪ್ರಾಂಗಣವಿದೆ. ಗುಡಿಯ ಮುಂಭಾಗದಲ್ಲಿ ಒಂದು ಶಿಬಾರವನ್ನು ನಿರ್ಮಿಸಿದ್ದಾರೆ. ಇದನ್ನು ಮಡವರಿ ಬಸವಯ್ಯನೆಂಬವನು ಕಟ್ಟಿಸಿರುವ ಉಲ್ಲೇಖವಿದೆ. ಈ ಶಾಸನ ಕಾಲ ಕ್ರಿ.ಶ. ೧೨೨೬ (ಧಾ.ಜಿ.ಶಾ.ಸೂ. ಸಂ.ರೋ. ೩೦, ಪು. ೪೧; SII, XV, No. 192). ಶಿಬಾರಕ್ಕೆ ಬಳಸಿರುವ ಎರಡು ಕಂಬಗಳು ಚೌಕಾಕಾರವಾಗಿದ್ದು ಮಧ್ಯಭಾಗದಲ್ಲಿ ಹದಿನಾರು ಪಟ್ಟಿಕೆಗಳ ಅಲಂಕಾರ ಮಾಡಿದ್ದಾರೆ. ಎರಡು ಕಂಬಗಳನ್ನೊಳಗೊಂಡಂತೆ ಒಂದು ತೊಲೆಯನ್ನು ಮೇಲ್ಭಾಗಲದಲ್ಲಿ ಇಡಲಾಗಿದೆ. ಇಡೀ ಸಿಬಾರವನ್ನು ಬಣ್ಣದಿಂದಿ ಬಳಿಯಲಾಗಿದೆ.

೧೨.

ಊರು ಪೇಠಾ ಆಲೂರು
ಸ್ಮಾರಕ ನಾಗನಾಥೇಶ್ವರ
ಸ್ಥಳ ಗ್ರಾಮದಲ್ಲಿ
ಕಾಲ ೧೧ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಉತ್ತರ
ಸ್ಥಿತಿ ಸಾಧಾರಣ
ಸಂರಕ್ಷಣೆ

ನಾಗನಾಥೇಶ್ವರ ದೇವಾಲಯ್ಕಕೆ ಸಂಬಂಧಿಸಿದ ಶಾಸನಗಳಲ್ಲಿ ಇದನ್ನು ತ್ರೈಪುರುಷ ದೇವಾಲಯವೆಂದು ಉಲ್ಲೇಖ ಮಾಡಿಲಾಗಿದೆ. ಆಯತಾಕಾರದ ಗರ್ಭಗೃಹದಲ್ಲಿ ಸಮಾನವಾದ ಮೂರು ಭಾಗಗಳಿದ್ದು ಅವುಗಳಲ್ಲಿ ಲಿಂಗಗಳನ್ನು ಇಡಲಾಗಿದೆ. ಮೂರು ಅಂಕಣಗಳಿಗೆ ಒಂದು ಬಾಗಿಲನ್ನು ನಿರ್ಮಿಸಲಾಗಿದೆ. ಆಯತಾಕಾರದ ಗರ್ಭಗೃಹ ಹಾಗೂ ವಿಶಾಲವಾದ ನವರಂಗವನ್ನು ಈ ಗುಡಿಯು ಹೊಂದಿರುವುದು. ಎತ್ತರದ ಕಟ್ಟೆಯ ಮೇಲೆ ನಿರ್ಮಾಣವಾಗಿದ್ದ ನಾಗನಾಥೇಶ್ವರ ಪ್ರಾಚೀನ ದೇವಾಲಯ ಇತ್ತೀಚೆಗೆ ಹಲವಾರು ದುರಸ್ತಿ ಕಾರ್ಯಗಳಿಗೆ ಒಳಗಾಗಿದೆ. ಗರ್ಭಗೃಹ, ನವರಂಗ, ಪ್ರವೇಶ ದ್ವಾರ ಹೊರಗೋಡೆ ಹಾಗೂ ಪ್ರವೇಶ ಮೆಟ್ಟಿಲುಗಳನ್ನು ನವೀಕರಿಸಲಾಗಿದೆ.

ಗರ್ಭಗೃಹದ ಬಾಗಿಲವಾಡವು ಹೆಚ್ಚಿನ ಅಲಂಕಾರದಿಂದ ಕೂಡಿದೆ. ಅದರಲ್ಲಿ ಅಲಂಕೃತ ಅರ್ಧ ಕಂಬಗಳು, ವೃತ್ತಾಕಾರದ ಫಲಕ ಹಾಗೂ ಅಗಲ ಬಾಯಿ ಹೊಂದಿರುವ ಪಾತ್ರೆ (ಪಿಂಗಾಣಿ ಮಾದರಿ) ಆಕಾರದ ಫಲಕಗಳನ್ನು ಚಿತ್ರಿಸಲಾಗಿದೆ ಅಲ್ಲದೆ ಇದೇ ಬಾಗಿಲವಾಡದಲ್ಲಿ ಕೆಲವು ಪಟ್ಟಿಕೆಗಳನ್ನು ಕೆತ್ತಲಾಗಿದೆ. ಉಳಿದಂತೆ ಮಣಿ ಸರಗಳ ಹಾಗೂ ಹೊಸೆದ ಹಗ್ಗದ ಮಾದರಿಯ ಅಲಂಕಾರಗಳಿವೆ. ಲಲಾಟ ಭಾಗ ಸ್ವಲ್ಪ ಮುಂದೆ ಬಂದಿದ್ದು ಅದರಲ್ಲಿ ಗಜಲಕ್ಷ್ಮಿಯ ಸುಮದರವಾದ ಉಬ್ಬುಶಿಲ್ಪವಿದೆ. ಮೇಲ್ಭಾಗದಲ್ಲಿ ಕಪೋತ ಅಲಂಕರಣೆ ರಚಿಸಿದ್ದಾರೆ.

ವಿಶಾಸವಾದ ನವರಂಗವನ್ನು ನಯವಾಗಿರುವ ಕಪ್ಪು ಕಲ್ಲಿನಿಂದ ದುರಸ್ತಿ ಮಾಡಲಾಗಿದೆ. ಇಲ್ಲಿರುವ ನಾಲ್ಕು ಕಂಬಗಳು ಕಲ್ಯಾಣ ಚಾಲುಕ್ಯ ಮಾದರಿಗೆ ಸ್ಪಷ್ಟ ಉದಾಹರಣೆಗಳು. ತಿರುಗಣಿ ಯಂತ್ರದಿಂದ ರಚಿಸಲಾಗಿರುವ ಈ ಕಂಬಗಳಲ್ಲಿ ಗಂಟೆ ಆಕಾರ, ವೃತ್ತಕಾರದ ಫಲಕ ಹಾಗೂ ಅಗಲ ಬಾಯಿ ಹೊಂದಿರುವ ಪಾತ್ರೆ ಆಕಾರದ ಫಲಕಗಳನ್ನು ಕಂಬಗಳಲ್ಲಿ ಅಳವಡಿಸಲಾಗಿದೆ. ಇವನ್ನೊಳಗೊಂಡಂತೆ ಎತ್ತರದ ಕಟ್ಟೆಯನ್ನು ನಿರ್ಮಿಸಲಾಗಿದೆ. ದೇವಾಲಯದಲ್ಲಿರುವ ಈ ನಾಲ್ಕು ಕಂಬಗಳನ್ನು ಹೊರತುಪಡಿಸಿ ಉಳಿದೆಲ್ಲವು ನಿರಾಲಂಕಾರದಿಂದ ಕೂಡಿವೆ. ಒಂಬತ್ತು ಅಂಕಣಗಳ ಮೇಲ್ಛಾವಣಿಯ ಒಳಭಾಗವನ್ನು ವಜ್ರಾಕೃತಿಯ ಮಾದರಿಯ ಅಲಂಕರಣೆಯಿಂದ ಅಂದಗೊಳಿಸದ್ದಾರೆ. ನವರಂಗದಲ್ಲಿ ನಂದಿ ಶಿಲ್ಪವಿದೆ. ಸಪ್ತಮಾತೃಕೆಯ ಶಿಲ್ಪ ಹಾಗೂ ಮಹಿಷಾಸುರಮರ್ದಿನಿಯ ಶಿಲ್ಪವನ್ನು ನವರಂಗದಲ್ಲಿರುವ ಕೋಷ್ಠಕದಲ್ಲಿಡಲಾಗಿದೆ. ಮಧ್ಯದ ಮೂರು ಅಂಕಣಗಳಲ್ಲಿ ಪುಷ್ಪಕೆತ್ತನೆಯ ಭುವನೇಶ್ವರಿ ನಿರ್ಮಿಸಲಾಗಿದೆ. ಮೂರು ಕಡೆಗೆ ಪ್ರವೇಶದ್ವಾರವನ್ನು ಕಟ್ಟಿಸಲಾಗಿದ್ದು ಅವುಗಳ ಪ್ರವೇಶ ಮೆಟ್ಟಿಲುಗಳನ್ನು ಆನೆಯ ಶಿಲ್ಪಗಳ ಅಲಂಕರಣೆಯಿಂದ ನಿರ್ಮಿಸಲಾಗಿದೆ. ಬಲ ಭಾಗದ ಪ್ರವೇಶದಲ್ಲಿ ಸುಮಾರು ಹತ್ತು ಅಡಿ ಹಾಗೂ ಐದು ಅಡಿ ಎತ್ತರವಿರುವ ಎರಡು ಶಾಸನ ಶಿಲ್ಪಗಳನ್ನು ಗೋಡೆಯಲ್ಲಿ ಹೂಳಿಡಲಾಗಿದೆ. ಕಲ್ಯಾಣ ಚಾಲುಕ್ಯರ ಕಾಲದ ಈ ಶಾಸನ ಶಿಲ್ಪಗಳು ಸ್ಫುಟವಾಗಿದ್ದು ಸುಂದರವಾಗಿವೆ. ದೇವಾಲಯದ ಅಧಿಷ್ಠಾನವು ಉಪಾನ, ಜಗತಿ, ಗಳ ಹಾಗೂ ತ್ರಿಪಟ್ಟ ಕುಮುದ ಭಾಗಗಳನ್ನು ಹೊಂದಿದೆ. ದೇವಾಲಯಕ್ಕೆ ಶಿಖರವಿಲ್ಲ.

ನಾಗನಾಥೇಶ್ವರ ದೇವಾಲಯದ ಪಕ್ಕದಲ್ಲಿಯೇ ವೀರಭದ್ರನ ಗುಡಿಯಲ್ಲಿ ದೊಡ್ಡದಾದ ಒಂದು ಶಿಲಾ ಶಾಸನವಿದೆ. ಕ್ರಿ.ಶ. ೧೦೯೧ ತೇದಿವುಳ್ಳ ಈ ಶಾಸನವು ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸಂಬಂಧಿಸಿದ್ದು (ಧಾ.ಜಿ.ಶಾಸ.ಸೂ, ಸಂ. ರೋ. ೩, ಪು. ೪೦; SII, XI, pt. II No. 136). ಸ್ಥಳೀಯ ಆಡಳಿತಗಾರನಾದ ತೆಂಗಸುರಿಗೆಯ ಮಹಾದೇವಯ್ಯನು ಮಾಳದಾಲೂರಿ (ಪೇಠಾಆಲೂರ)ನಲ್ಲಿರುವ ತ್ರೈಪುರುಷ ದೇವಾಲಯಕ್ಕೆ ಭೂಮಿಯನ್ನು ದಾನ ಮಾಡಿದ ಮಾಹಿತಿಯನ್ನು ನೀಡುತ್ತದೆ. ಶಾಸನದಲ್ಲಿ ಉಲ್ಲೇಖವಾದ ತ್ರೈಪುರುಷ ದೇವಾಲಯ ಇಂದಿನ ನಾಗನಾಥೇಶ್ವರ ದೇವಾಲಯ ಆಗಿರಬಹುದು.

ಇದೇ ಗ್ರಾಮಕ್ಕೆ ಸಂಬಂಧಿಸಿದಂತೆ ನಾಲ್ಕು ಶಾಸನಗಳು ಪ್ರಕಟಗೊಂಡಿವೆ (ಧಾ.ಜಿ.ಶಾ.ಸೂ, ಸಂ. ರೋ, ೨೩, ೨೪ ಮತ್ತು ೨೫ ಪು. ೪೦; SII, XI, pt. I, 101, SII, XI pt. II, No. 136, No. 173 and 174). ಅವೆಲ್ಲವು ದಾನ ಶಾಸನಗಳಾಗಿವೆ. ಸ್ಥಳೀಯ ಪೆರ್ಮಾಡಿ ಅರಸ ಹಾಗೂ ನಾರಸರೆಂಬರು ಈ ಪ್ರದೇಶವನ್ನು ೧೧ನೇ ಶತಮಾನದಲ್ಲಿ ಆಳ್ವಿಕೆ ಮಾಡಿರುವ ವಿವರಗಳು ಸಿಕ್ಕುತ್ತವೆ. ಪ್ರಕಟವಾಗಿರುವ ಇಲ್ಲಿನ ಶಾಸನಗಳಲ್ಲಿ “ಪ್ರಸಾದ ಚಕ್ರವರ್ತಿ” “ಮರುಳೋಜನ” ಉಲ್ಲೇಖ ಬರುತ್ತದೆ. ಈತನು ಶಾಸನದ ಕವಿ, ಹಾಗೂ ಕಂಡರಣೆಕಾರನಾಗಿದ್ದನು. ಅಲ್ಲದೇ ಈತನು “ಪ್ರಸಾದ ಚಕ್ರವರ್ತಿ” ಎಂದು ಬಿರುದಾಂಕಿತನಾಗಿದ್ದನು. ಬಹುಶಃ ಹಲವಾರು ವಿಶಿಷ್ಟವಾದ ಪ್ರಸಾದ (ದೇವಾಲಯ) ರಚನೆಗಳನ್ನು ಈ ಪ್ರದೇಶದಲ್ಲಿ ಹಾಗೂ ಬೇರೆ ಬೇರೆ ಸ್ಥಳಗಳಲ್ಲಿ ಮಾಡಿದ್ದರಬಹುದಾದ ಸಾಧ್ಯತೆಗಳಿವೆ. ಹೀಗಾಗಿ “ಪ್ರಸಾದ ಚಕ್ರವರ್ತಿ” ಎಂಬ ವಿಶೇಷವಾದ ಬಿರುದಿಗೆ ಪಾತ್ರನಾಗಿ ಈ ಪ್ರದೇಶದ ಅನೇಕ ಶಾಸನಗಳಲ್ಲಿ ಮರುಳೋಜನು ಉಲ್ಲೇಖಿತನಾಗಿದ್ದಾನೆ.

೧೩.

ಊರು ಪೇಠಾ ಆಲೂರು
ಸ್ಮಾರಕ ಅನಂತಶಯನ ಗುಡಿ
ಸ್ಥಳ ಗ್ರಾಮದಲ್ಲಿ
ಕಾಲ ಆಧುನಿಕ
ಶೈಲಿ ಆಧುನಿಕ
ಅಭಿಮುಖ ದಕ್ಷಿಣ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯವು ಪ್ರಾಚೀನವಾಗಿದ್ದರೂ ಹಲವಾರು ಬದಲಾವಣೆಗೆ ಒಳಗಾಗಿದೆ. ಎತ್ತರದ ಕಟ್ಟೆಯ ಮೇಲೆ ನಿರ್ಮಾಣವಾಗಿರುವ ಈ ದೇವಾಲಯದ, ಅಧಿಷ್ಠಾನ ಅತ್ಯಂತ ಸರಳವಾಗಿ ಕಾಣುವುದು, ಗರ್ಭಗೃಹ ಹಾಗೂ ಸಭಾಮಂಟಪವನ್ನೊಳಗೊಂಡಿರುವ ಈ ಗುಡಿಯು ದಕ್ಷಿಣ ಮತ್ತು ಉತ್ತರಕ್ಕೆ ಪ್ರವೇಶದ್ವಾರವನ್ನು ಹೊಂದಿದೆ. ಇದೇ ಸಭಾಮಂಟಪದಲ್ಲಿ ಪಶ್ಚಿಮಾಭಿಮುಖವಾಗಿರುವ ಹನುಂತನ ಚಿಕ್ಕ ಗುಡಿಯೊಂದನ್ನು ನಿರ್ಮಿಸಲಾಗಿದೆ.

ಗರ್ಭಗೃಹದಲ್ಲಿರುವ ಅನಂತಶಯನ ಮೂರ್ತಿ ಕಪ್ಪುಶಿಲೆಯದಾಗಿದ್ದು ಅದಕ್ಕೊಂದು ಎತ್ತರದ ಪೀಠ ರಚನೆ ಮಾಡಲಾಗಿದೆ. ಎರಡೂ ಕಾಲುಗಳನ್ನು ಚಾಚಿ ಕೈಯನ್ನು ತಲೆಗೆ ಆಧಾರವಾಗಿಟ್ಟುಕೊಂಡು ಮಲಗಿರುವ ಈ ಶಿಲ್ಪವು, ಮೂರ್ತಿಶಿಲ್ಪ ಅಧ್ಯಯನ ದೃಷ್ಟಿಯಿಂದ ಮಹತ್ವದ್ದು. ಶಿಲ್ಪದ ಪ್ರತಿ ಭಾಗವನ್ನು ಹಾಗೂ ಹಿಂಬದಿಯ ಪ್ರಭಾವಳಿಯನ್ನು ಶಿಲ್ಪಕಾರನು ಸುಂದರವಾಗಿ ಚಿತ್ರಿಸಿದ್ದಾನೆ.

ಈ ಗ್ರಾಮದ ಈಶ್ವರ ದೇವಾಲಯವೊಂದಿದೆ. ಇದು ಪ್ರಾಚೀನವಾಗಿದ್ದರೂ ಸದ್ಯ ಸಂಪೂರ್ಣವಾಗಿ ನವೀಕರಣ ಕಾರ್ಯಕ್ಕೆ ಒಳಗಾಗಿದೆ. ಇಲ್ಲಿರುವ ಶಾಸನವು ಕ್ರಿ.ಶ. ೧೦೧೦ರ ಕಾಲಮಾನವುಳ್ಳದ್ದು. ಕಲ್ಯಾಣ ಚಕ್ರವರ್ತಿ ಐದನೆಯ ವಿಕ್ರಮಾದಿತ್ಯನ ಆಳ್ವಿಕೆಯ ಕಾಲಾವಧಿಯಲ್ಲಿ ರಚನೆಯಾಗಿದೆ (ಧಾ.ಜಿ.ಶಾ.ಸೂ, ಸಂ. ರೋ. ೧, ಪು. ೪೦; EI, XVI, p-27-31) ಸಿರಿವೂರ (ಶಿರೂರ)ದ ಅಮರಾಚಾರ ಭಟ್ಟಾರಕರಿಗೆ ವೆಣ್ಣೆಯ ಭಟ್ಟರು ಮಾಳದಾಲೂರು (ಆಲೂರು)ನಲ್ಲಿ ಭೂಮಿಯನ್ನು ದಾನವಾಗಿ ಕೊಟ್ಟಿರುವ ಉಲ್ಲೇಖ ಒಳಗೊಂಡಿದೆ. ಈ ಶಾಸನದಲ್ಲಿ ಪ್ರಸ್ತಾಪವಾಗಿರುವ ವೆಣ್ಣೆಯ ಭಟ್ಟರು ಒಬ್ಬ ಪ್ರಮುಖ ವ್ಯಕ್ತಿ. ಸ್ಥಳೀಯ ಅಧಿಕಾರಿಯಾಗಿದ್ದ ಈತನು ಕವಿ ಹಾಗೂ ವಿದ್ವಾಂಸನಾಗಿದ್ದನು. ಕಮ್ಮೆಕುಲದಲ್ಲಿ ಹುಟ್ಟಿದ ಈತನು ಕಾರ್ಯಸಾಧನೆಗಳಿಂದ ಆ ಪ್ರದೇಶದಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದನು. ವೆಣ್ಣೆಯ ಭಟ್ಟನ ಕಾಲುತೊಳೆದು ಅನೇಕ ದಾನ ಕಾರ್ಯಗಳನ್ನು ಸ್ಥಳೀಯರು ಮಾಡಿದ ಉಲ್ಲೇಖ ಸುತ್ತಲಿನ ಪ್ರದೇಶದಲ್ಲಿ ಸಿಕ್ಕರುವ ಶಾಸನಗಳಲ್ಲಿ ಸಿಗುತ್ತದೆ.

೧೪.

ಊರು ತಾಮ್ರಗುಂಡಿ
ಸ್ಮಾರಕ ಈಶ್ವರ (ಕಲ್ಲೇಶ್ವರ)
ಸ್ಥಳ ಬರದೂರ ಗ್ರಾಮದ ಪಶ್ಚಿಮಕ್ಕೆ ಸ್ಥಿತಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯದ ಸುತ್ತಲಿದ್ದ ಪ್ರಾಚೀನ ವಸತಿ ಪ್ರದೇಶ ಅನೇ ಕಾರಣಗಳಿಂದ ಬೇಚರಾಕ (ನಿರ್ವಸತಿ) ಸ್ಥಳವಾಗಿ ನಿರ್ಮಾನವಾಗಿದೆ. ಅಲ್ಲಿ ಹಳೆಯ ವಸತಿ ಪ್ರದೇಶದ ಕುರುಹುಗಳು ಈಗಲೂ ಕಂಡುಬರುತ್ತವೆ. ಅಂಥ ಅವಶೇಷಗಳಲ್ಲಿ ಮುಖ್ಯವಾಗಿ ಉಳಿದುಕೊಂಡು ಬಂದಿರುವುದು ಈಗಿರುವ ಈಶ್ವರ (ಕಲ್ಲೇಶ್ವರ)ನ ಗುಡಿ ಮಾತ್ರ. ಈಶ್ವರನ ಗುಡಿಯು ಗರ್ಭಗೃಹ, ತೆರೆದ ಅಂತರಳ, ಹಾಗೂ ನವರಂಗವನ್ನುಜ ಹೊಂದಿರುವುದು. ಗರ್ಭಗೃಹದಲ್ಲಿ ಪ್ರಾಚೀನ ಲಿಂಗವಿದ್ದು, ಪುಷ್ಪಾಲಂಕರಣೆಯ ಭುವನೇಶ್ವರಿ ಕೆತ್ತನೆ ಮಾಡಲಾಗಿದೆ. ಗರ್ಭಗೃಹದ ಬಾಗಿಲವಾಡವು ಸಾದಾ ರಚನೆಯದ್ದು. ಮೇಲ್ಭಾಗದಲ್ಲಿ ಕಪೋತ ಅಲಂಕರಣೆ ಮಾಡಿದ್ದಾರೆ. ಅಂತರಾಳವು ಬರಿದಾಗಿದೆ.

ಚಿಕ್ಕದಾದ ನಾಲ್ಕು ಕಂಬಗಳನ್ನು ನವರಂಗ ಹೊಂದಿದೆ. ಕಂಬಗಳಲ್ಲಿ ಹದಿನಾರು ಪಟ್ಟಿಕೆಗಳು, ವೃತ್ತಾಕಾರದ ಫಲಕ ಹಾಗೂ ಚೌಕಾಕಾರದ ಬೋಧಿಗೆ ಅಳವಡಿಸಲಾಗಿದೆ. ಪುಷ್ಪ ಅಲಂಕರಣೆಯ ಭುವನೇಶ್ವರಿಯೂ ನವರಂಗದಲ್ಲಿದೆ. ನವರಂಗಕ್ಕೆ ದಕ್ಷಿಣಾಭಿಮುಖ ದ್ವಾರವಿದೆ. ಅದರ ಬಾಗಿಲವಾಡದಲ್ಲಿ ಚಿಕ್ಕದಾಗಿರುವ ಅರ್ಧಕಂಬಗಳು ಹಾಗೂ ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪ ಕಂಡರಿಸಲಾಗಿದೆ. ದೇವಾಲಯದ ಹೊರ ಗೋಡೆಯು ನಿರಾಲಂಕರಣೆಯದು. ಬಿದ್ದುಹೋಗಿರುವ ಪ್ರಾಚೀನ ಶಿಖರದ ಅವಶೇಷಗಳ ದೇವಾಲಯದ ಮುಂಭಾಗದಲ್ಲಿವೆ. ಅಲ್ಲಿಯೆ ನಂದಿಶಿಲ್ಪವನ್ನು ಇಲ್ಲಿಡಲಾಗಿದೆ. ಕ್ರಿ.ಶ. ೧೧ನೇ ಶತಮಾನಕ್ಕೆ ಸೇರಿದ ಶಿಲಾಶಾಸವನ್ನು ಗುಡಿಯ ಮುಂಭಾಗದಲ್ಲಿ ಹೂಳಿಟ್ಟಿದ್ದಾರೆ. ಈಶ್ವರನ ದೇವಾಲಯದಿಂದ ಸ್ವಲ್ಪ ದೂರದಲ್ಲಿ ಆಂಜನೆಯನ ಬಿಡಿ ಶಿಲ್ಪವೊಂದಿದೆ. ಸುಮಾರು ನಾಲ್ಕು ಅಡಿ ಎತ್ತರವಿರುವ ಈ ಶಿಲ್ಪದ ಸುತ್ತಲೂ ಚಿಕ್ಕಗೋಡೆಯೊಂದು ಇತ್ತು. ಆದರೆ ಅದು ಬಿದ್ದುಹೋಗಿದೆ. ಸುಂದರವಾದ ಈ ಶಿಲ್ಪ ಇತ್ತೀಚೆಗೆ ನಿರ್ಮಾಣವಾಗಿರಬಹುದು. ಈ ಗುಡಿಯ ಪರಿಸರದಲ್ಲಿ ಹಳೆಯ ಗ್ರಾಮ ಅವಶೇಷಗಳು ಇಂದಿಗೂ ಕಂಡುಬರುತ್ತವೆ. ಅಲ್ಲದೇ ಪಕ್ಕದಲ್ಲಿಯೇ ಅದರ ದಂಡೆಯ ಮೇಲೆಯು ಹಳ್ಳವೊಂದು ಪ್ರವಹಿಸಿದ್ದು ಅನೇಕ ಪ್ರಾಚ್ಯ ಕುರುಹುಗಳು ದೊರಕುತ್ತವೆ.

ಕ್ರಿ.ಶ. ೧೦೪೫-೧೦೫೪ರ ತೇದಿಯ ಶಾಸನವೊಂದು ಪ್ರಕಟವಾಗಿದೆ (ಧಾ.ಜಿ.ಶಾಸ.ಸ.ಸಂ.ರೋ. ೯, ಪು.೪೦; SII, XI, pt. I, No. 92). ಗುಡಿಯ ಮುಂಭಾಗದಲ್ಲಿ ಈಗಲ್ಲ ಈ ಶಾಸನವನ್ನು ಹೂಳಿಟ್ಟಿದ್ದಾರೆ. ಚಾಲುಕ್ಯ ತ್ರೈಲೋಕ್ಯಮಲ್ಲ ಒಂದನೆಯ ಸೋಮೇಶ್ವರ ಮಹಾಸಾಮಂತ ಮಾಧವರಸನು ಕಿಸಗುಂಡಿ (ತಾಮ್ರಗುಂಡಿ) ಅಗ್ರಹಾರವನ್ನಾಳುತ್ತಿದ್ದಾರೆ. ದಾಸಿಮಯ್ಯನೆಂಬುವನು ಅಲ್ಲಿನ ಮೂಲಸ್ಥಾನ ಕಲಿದೇವಸ್ವಾಮಿ ಮತ್ತು ವಿಷ್ಣುದೇವಾಲಯದ ಪೂಜಾ ಕಾರ್ಯವಿಧಾನಗಳಿಗೆ ಹದಿನೈದು ಗದ್ಯಾಣಗಳನ್ನು ಕಿಸಗುಂಡಿ ಅಗ್ರಹಾರದ ಮಹಾಜನರ ಸಮ್ಮುಖದಲ್ಲಿ ದೇವರಿಗೆ ನೀಡಿದನೆಂದು ಉಲ್ಲೇಖಿಸುತ್ತದೆ.

೧೫

ಊರು ನಾಗರಹಳ್ಳಿ
ಸ್ಮಾರಕ ಪಮಚಲಿಂಗೇಶ್ವರ
ಸ್ಥಳ ತುಂಗಭದ್ರನದಿ ದಂಡೆ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ವಿಶಾಲ ಹಾಗೂ ಸುಂದರವಾಗಿದ್ದ ಪ್ರಾಚೀನ ಪಂಚಲಿಂಗೇಶ್ವರ ದೇವಾಲಯ ಸಂಪೂರ್ಣವಾಗಿ ನೆಲ ಕಚ್ಚಿದೆ. ತುಂಗಭದ್ರೆಯ ದಂಡೆಯಲ್ಲಿ ಕೇಂದ್ರೀಕೃತವಾಗಿದ್ದ ಪಂಚಲಿಂಗೇಶ್ವರನ ಗುಡಿ ಪ್ರತಿ ವರುಷ ಬರುವ ನದಿಯ ಪ್ರವಾಹಕ್ಕೆ ಒಳಗಾಗುತ್ತಲೇ ಇದೆ. ದೇವಾಲಯದ ಮುರಿದು ಬಿದ್ದಿರುವ ಗರ್ಭಗೃಹದ ಅವಶೇಷಗಳು, ನವರಂಗದ ಕಂಬಗಳು ಹಾಗೂ ಪ್ರಾಚೀನ ಲಿಂಗ ಮಾತ್ರ ಸದ್ಯ ಉಳಿದುಕೊಂಡಿವೆ. ಈ ಗುಡಿಯಲ್ಲಿ ವರ್ಷದ ಕೆಲವು ತಿಂಗಳು ನೀರು ಇರುತ್ತದೆ.

ನಾಗರಹಳ್ಳಿ ದೇವಾಲಯಕ್ಕೆ ಸಂಬಂಧಿಸಿದಂತೆ ಎರಡು ಶಾನಗಳು ಪ್ರಕಟಗೊಂಡಿವೆ. (ಧಾ.ಜಿ.ಶಾ.ಸೂ, ಸಂ.ರೋ. ೩೪ ಮತ್ತು ೨೫ ಪು. ೪೧; SII, XI, pt.I, No. 58 SII, XV 567). ಇವೆರಡು ದೇವಾಲಯಕ್ಕೆ ಸಂಬಧಿಸಿದಂತೆ ಎರಡು ಶಾಸನಗಳು ಪ್ರಕಟಗೊಂಡಿವೆ (ಧಾ.ಜಿ.ಶಾ.ಸೂ, ಸಂ.ರೋ. ೩೪ ಮತ್ತು ೨೫ ಪು. ೪೧; SII, XI, pt. I, No. 58 SII, XV 567). ಇವೆರಡು ೧೧ ಮತ್ತು ೧೨ನೇ ಶತಮಾನಕ್ಕೆ ಸೇರಿದವು. ಪಮಚಲಿಂಗ ದೇವಾಲಯದ ಪಮಚ ನಂದಿಯ ಪಾದಪೀಠದಲ್ಲಿರುವ ಶಾಸನ ಕ್ರಿ.ಶ. ೧೦೨೨ರ ತೇದಿವುಳ್ಳದ್ದು, ಕಲ್ಯಾಣದ ಚಾಲುಕ್ಯ ಎರಡನೆಯ ಜಯಸಿಂಹನ ಕಾಲದ ಈ ಶಿಲಾಲೇಖವು ಹಲವಾರು ಮಹತ್ವದ ಮಾಹಿತಿ ನೀಡುತ್ತದೆ. ಎರಡನೆ ಜಗದೇಕಮಲ್ಲನ ಮಹಾಸಾಮಂತ ದಶರಸನು ಮಾಸವಾಡಿ ೧೪೦ರ ಆಡಳಿತ ವಿಭಾಗವನ್ನು ಆಳುತ್ತಿದ್ದನು. ತಾನು ಮಾಡಿರುವ ಕಾರ್ಯಗಳಿಂದ ಪ್ರಸಿದ್ಧನಾಗಿದ್ದು ಹಲವಾರು ಬಿರುದು ಬಾವಲಿಗಳಿಂದ ಪುರಸ್ಕೃತನಾಗಿದ್ದನು. ಆತನಿಗೆ ‘ಸಂಗನ ಗರುಡ’ನೆಂಬ ಮಹತ್ವದ ಬಿರುದಿತ್ತೆಮದು ತಿಳಿಯುತ್ತದೆ. ಇನ್ನೆರಡು ಮುಖ್ಯವಾದ ಸಮಗತಿಗಳು ಇದೇ ಶಾಸನದ ಉಲ್ಲೇಖಗಳಿಂದ ಸಿಗುತ್ತವೆ. ಇಂದಿನ ನಾಗರಹಳ್ಳಿಯನ್ನು ಪ್ರಾಚೀನ ಕಾಲದಲ್ಲಿ ‘ಅರಗಿಲ್ವಾಡ’ ಎಂಬ ಹೆಸರಿನಿಮದ ಕರೆಯುತ್ತಿದ್ದರು. ಅರಗಿಲೆ ಅಥವಾ ಅರಗಿಲ್ ಎಂದರೆ ಚಕ್ರ, ಸುಳಿ ಎಂಬ ಅರ್ತಕೊಡುತ್ತದೆ. ಬಹುಶಃ ತುಂಗಭದ್ರೆಯಲ್ಲಿನ ಸುಳಿ (ತಿರುಗಣಿ)ಯಿಂದ ಈ ಹೆಸರು ಬಂದಿರಬಹುದೇ? ಇದು ಕುತೂಹಲದ ಸಂಗತಿ. ನದಿಯ ಪಕ್ಕದಲ್ಲಿರುವ ನಾಗರಹಳ್ಳಿಯು, ನದಿಯಲ್ಲಿರುವ ಸುಳಿ ತಿರುವ-ಚಕ್ರದಿಂದ ಬಹುಶಃ ಅರಗಿಲ್ವಾಡ ಎಂಬ ಪ್ರಾಚೀನ ಹೆಸರು ಪಡೆದಿರಬಹುದೆಂದು ಅಭಿಪ್ರಾಯಪಡಬಹುದಾದಿಗೆ.

ದೇವಾಲಯಕ್ಕೆ ಸಂಬಂಧಿಸಿದ ಇನ್ನೊಂದು ಮುಖ್ಯ ಸಂಗತಿ ತ್ರಿಭುವನ ನಾರಾಯಣ ಧರ್ಮಸೆಟ್ಟಿ ನಿರ್ಮಿಸಿದ ಧಮೇಶ್ವರ ದೇವಾಲಯಕ್ಕೆ ಕೊಟ್ಟಿರುವ ದಾನದ ಉಲ್ಲೇಖ. ಆದರೆ ಸದ್ಯ ಧಮೇಶ್ವರ ಎಂಬ ಹೆಸರಿನ ಯಾವ ದೇವಾಲಯವು ನಾಗರಹಳ್ಳಿ ಪರಿಸರದಲ್ಲಿಲ್ಲ. ಬಹುಶಃ ಈಗ ಬಿದ್ದುಹೋಗಿರುವ ಪಂಚಲಿಂಗೇಶ್ವರ ದೇವಾಲಯವೇ ಪ್ರಾಚೀನ ಧರ್ಮೇಶ್ವರ ದೇವಾಲಯ ಆಗಿದ್ದರಬಹುದೇ ಎಂಬುದು ಚರ್ಚಾರ್ಹ ಸಮಗತಿ. ಕಾರಣ ದೇವಾಲಯದಲ್ಲಿರುವ ಪಮಚನಂದಿಯ ಪಾದಪೀಠದಲ್ಲಿ ಈ ಶಾಸನವು ಕಂಡರಣೆಯಾಗಿರುವುದು. ಹೀಗಾಗಿ ಪಮಚಲಿಂಗೇಶ್ವರ ದೇವಾಲಯ ಧರ್ಮೇಶ್ವರ ದೇವಾಲಯ ಆಗಿದ್ದಿರಬಹುದಾದ ಎಲ್ಲ ಸಾಧ್ಯತೆಗಳಿವೆ. ಈ ಶಾಸನವನ್ನು ಬರೆದ ಈಸರಯ್ಯನೆಂಬವನ ಹೆಸರು ಸಹ ಉಲ್ಲೇಖವಾಗಿದೆ.

ಕ್ರಿ.ಶ. ೧೨ನೇ ಶತಮಾನಕ್ಕೆ ಸೇರಿದ ಇನ್ನೊಂದು ಶಾಸನ ತೃಟಿತಗೊಂಡಿದೆ. ಇದು ಕಳಲೆನಾಡಿನ ಮಳೂರ ಗ್ರಾಮದ ಮೇಳ್ವಾರಸೆಟ್ಟಿ ಸಾಗರಯ್ಯ ಸಂಯಿಬ್ಬೆಯ ಮಗ ತ್ರಿಭುನ ನಾರಾಯಣನ ಬಗೆಗೆ ತಿಳಿಸುತ್ತದೆ. ಆದರೆ ಇದೊಂದು ತೃಟಿಗ ಶಾಸನವಾಗಿರುವುದರಂದ ವಿವರವಾದ ವಿಷಯ ತಿಳಿಯುವುದು ಕಷ್ಟಸಾಧ್ಯ.

೧೬

ಊರು ಬರದೂರು
ಸ್ಮಾರಕ ಅಹೋಬಲ ನರಸಿಂಹಸ್ವಾಮಿ
ಸ್ಥಳ ಗ್ರಾಮದ ಪಶ್ಚಿಮಕ್ಕೆ
ಕಾಲ ಕ್ರಿ.ಶ. ೧೩-೧೪ನೇ ಶತಮಾನ
ಶೈಲಿ ವಿಜಯನಗರ ಪೂರ್ವ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿರುವ ನರಸಿಂಹಸ್ವಾಮಿ ದೇವಾಲಯ ಅನೇಕ ಮಾರ್ಪಾಡುಗಳಿಗೆ ಒಳಗಾಗಿದೆ. ಎತ್ತರದ ಕಟ್ಟೆಯ ಮೇಲೆ ನಿರ್ಮಾಣವಾಗಿರುವ ಈ ಕಟ್ಟಡ ಯಾವುದೇ ವಿಶೇಷ ಅಲಂಕರಣೆಗಳನ್ನು ಹೊಂದಿಲ್ಲ. ಗರ್ಭಗೃಹದಲ್ಲಿ ವಿಷ್ಣುಶಿಲ್ಪವಿದ್ದು (ಅಹೋಬಲ ನರಸಿಂಹಸ್ವಾಮಿ) ನಿತ್ಯವು ಪೂಜೆಗೊಳಪಡುತ್ತದೆ. ಪಂಚ ಪಟ್ಟಿಕೆಗಳನ್ನು ಒಳಗೊಂಡಿರುವ ಬಾಗಿಲವಾಡದ ಲಲಾಟದಲ್ಲಿ ಗಜಲಕ್ಷ್ಮಿ ಉಬ್ಬುಶಿಲ್ಪವನ್ನು ಹೊಂದಿರುವುದು. ದೇವಾಲಯಕ್ಕೆ ತೆರೆದ ಅಂತರಾಳವಿದ್ದು ಅದು ಬರಿದಾಗಿದೆ.

ತಕ್ಕಮಟ್ಟಿಗೆ ವಿಸ್ತಾರವಾಗಿರುವ ನವರಂಗದಲ್ಲಿ ದಕ್ಷಿಣಾಭಿಮುಖವಾಗಿರುವ ಇನ್ನೊಂದು ಬಾಗಿಲನ್ನು ನಿರ್ಮಿಸಲಾಗಿದೆ. ನಾಲ್ಕು ಕಂಬಗಳು ನವರಂಗದಲ್ಲಿದ್ದು ಅವು ಗಿಡ್ಡವಾಗಿ ಚೌಕಾಕಾರವಾಗಿವೆ. ಕಂಬಗಳಲ್ಲಿ ಹದಿನಾರು ಪಟ್ಟಿಕೆಗಳನ್ನು ಕಂಡರಿಸಲಾಗಿದೆ. ಅಲ್ಲದೇ ದುಂಡಾಕಾರದ ಫಲಕ ಹಾಗೂ ಬೋಧಿಗೆಗಳನ್ನು ಕಂಬಗಳಲ್ಲಿ ಅಳವಡಿಸಲಾಗಿದೆ. ನಾಲ್ಕು ಕಂಬಗಳನ್ನೊಳಗೊಂಡು ಮೇಲ್ಭಾಗದ ಒಳಭಿತ್ತಿಯಲ್ಲಿ ಭುವನೇಶ್ವರಿಯ ಅಲಂಕರಣೆಯನ್ನು ಮಾಡಲಾಗಿದೆ. ದೇವಾಲಯದ ಅಧಿಷ್ಠಾನವು ಉಪಾನ, ಜಗತಿಯನ್ನು ಮಾತ್ರ ಹೊಂದಿದೆ. ಹೊರಗೋಡೆ ನಿರಾಲಂಕಾರದಿಂದ ಕೂಡಿದೆ. ಶಿಖರವನ್ನು ಗಾರೆಯಿಂದ ನಿರ್ಮಿಸಿದೆ. ಪ್ರತಿ ವರುಷ ಹಂಪಿ ಹುಣ್ಣಿಮೆಯ ದಿನ ಅಹೋಬಲ ನರಸಿಂಹಸ್ವಾಮಿ ದೇವರ ಜಾತ್ರೆ ಜರುಗುತ್ತದೆ.

೧೭

 ಊರು ಬರದೂರು
ಸ್ಮಾರಕ ಭರತೇಶ್ವರ
ಸ್ಥಳ ಗ್ರಾಮದಲ್ಲಿ
ಕಾಲ ಕ್ರಿ.ಶ. ೧೭-೧೮ನೇ ಶತಮಾನ
ಶೈಲಿ ಆಧುನಿಕ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ ರಾ.ಪು.ಇ.

ಪ್ರಾಚೀನ ಭರತೇಶ್ವರ ದೇವಾಲಯವನ್ನು ಪುನಃ ನಿರ್ಮಿಸಿರುವ ಕುರುಹುಗಳಿವೆ. ಹಾಳಾಗಿರುವ ಹಳೆಯ ದೇವಾಲಯದ ಅವಶೇಷಗಳಾದ ಸಪ್ತಮಾತೃಕೆಯ ಶಿಲ್ಪ ಹಾಗೂ ನಾಗ ಶಿಲ್ಪಗಳನ್ನು ಆವರಣದಲ್ಲಿ ಇಡಲಾಗಿದೆ. ಈ ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಹಾಹೂ ನವರಂಗಳಿವೆ. ಗರ್ಭಗೃಹದಲ್ಲಿ ಲಿಂಗವಿದ್ದು ನಿತ್ಯ ಪೂಜೆಗೋಳಪಡುತ್ತದೆ. ಗರ್ಭಗೃಹದ ಬಾಗಿಲವಾಡ ನಿರಾಲಂಕಾರದಿಂದ ಕೂಡಿದೆ. ಅಂತರಾಳವು ಬರಿದಾಗಿದೆ. ನವರಂಗವನ್ನು ಹೆಚ್ಚಿನ ದುರಸ್ತಿ ಕಾರ್ಯಕ್ಕೆ ಒಳಪಡಿಸಲಾಗಿದೆ. ದಕ್ಷಿಣಾಭಿಮುಖವಾಗಿ ಬಾಗಿಲೊಂದನ್ನು ನವರಂಗದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಹೊರಗೋಡೆ ಹಾಗೂ ಅಧಿಷ್ಠಾನ ಭಾಗವು ನಿರಾಲಂಕಾರದಿಂದ ಕೂಡಿದೆ.

ಕ್ರಿ.ಶ. ೧೦೩೨ರ ತೇದಿವುಳ್ಳ ಶಾಸನವೊಂದು ಬರದೂರಿನ ಭರತೇಶ್ವರ ದೇವಾಲಯಕ್ಕೆ ಸಂಬಂಧಪಟ್ಟಂತೆ ಪ್ರಕಟವಾಗಿದೆ (ಧಾ.ಜಿ.ಶಾ.ಸೂ, ಸಂ.ರೋ. ೩೬ ಪು. ೪೧; SII, XV, No. 528). ದೇವಾಲಯದ ನಿತ್ಯ ನಿರ್ವಹಣೆಗೆ ಭೂಮಿಯನ್ನು ಕೊಂಡು ದಾನ ಮಾಡಿ, ಅದರ ಮೇಲ್ವಿಚಾರಕರನ್ನಾಗಿ ಸ್ಥಳೀಯ ಬ್ರಾಃಮಣ೯ಮಹಾಜನ)ರನ್ನು ನೇಮಕಮಾಡಿರುವ ಮಾಹಿತಿ ಈ ಶಾಸನದಲ್ಲಿದೆ. ಶಾಸನದಲ್ಲಿ ಉಲ್ಲೇಖಿತ ಭರತೇಶ್ವರ ಗುಡಿಯು ಹಲವಾರು ನವೀಕರಣ ಕಾರ್ಯಕ್ಕೆ ಒಳಗಾಗಿ ಪ್ರಾಚೀನ ಗುರುತುಗಳನ್ನು ಕಳೆದುಕೊಂಡು ಹೊಸ ಸ್ಮಾರಕವಾಗಿ ಅಸ್ತಿತ್ವದಲ್ಲಿದೆ. ಬರದೂರು ಗ್ರಾಮವನ್ನು ಶಾಸನಗಳಲ್ಲಿ ‘ಭರತಪುರ’ ಎಂದು ಕರೆದಿದೆ.

ಆಹೋಬಲ ನರಸಿಂಹಸ್ವಾಮಿ ಹಾಗೂ ಭರತೇಶ್ವರ ದೇವಾಲಯಗಳು ಅಲ್ಲದೇ ಇನ್ನೆರಡು ಪ್ರಾಚೀನ ದೇವಾಲಯಗಳು ಈ ಗ್ರಾಮದಲ್ಲಿದ್ದವು. ಅವು ಕ್ರಮವಾಗಿ ಈಶ್ವರ ದೇವಾಲಯ (ಸರಕಾರಿ ಪ್ರೌಢಶಾಲೆಯ ಹತ್ತಿರ) ಹಾಗೂ ಕಲ್ಲೇಶ್ವರ ದೇವಾಲಯ. ಈ ಎರಡು ದೇವಾಲಯಗಳು ಪ್ರಾಚೀನವಾದವು ಎಂದು ಗುರುತಿಸಲಾಗದಷ್ಟು ನವೀಕರಣ ಕಾರ್ಯಕ್ಕೆ ಒಳಗಾಗಿವೆ. ಸ್ಮಾರಕಗಳಿಗೆ ಸಂಬಂಧಪಟ್ಟ ಒಮದೆರಡು ಅವಶೇಷ (ತುಣಕು)ಗಳು ಮಾತ್ರ ಅಲ್ಲಲ್ಲಿ ಹರಡಿಕೊಂಡಿವೆ.

೧೮.

ಊರು ಬಿದರಳ್ಳಿ
ಸ್ಮಾರಕ ಗಣಪತಿ ಗುಡಿ
ಸ್ಥಳ ಗ್ರಾಮದ ಪೂರ್ವಕ್ಕೆ (ತುಂಗಭದ್ರಾ ನದಿ ದಂಡೆ)
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಉತ್ತರ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗಣಪತಿ ದೇವಾಲಯ ಸೋಮೇಶ್ವರ ದೇವಾಲಯದ ಆವರಣದಲ್ಲಿದೆ. ಇದು ಗಭ್ಗೃಹ ಹಾಗೂ ನವರಂಗವನ್ನು ಮಾತ್ರ ಹೊಂದಿದೆ. ಬಹುಶಃ ಕಾಲಾನಂತರದಲ್ಲಿ ಅಂತರಾಳದ ಭಾಗ ನವರಂಗದಲ್ಲಿ ಲೀನವಾಗಿದ್ದರಬಹುದು. ಪ್ರಾಚೀನವಾಗಿರುವ ಗುಡಿಯಲ್ಲಿ ಸದ್ಯ ಗಣಪತಿ ವಿಗ್ರಹವನ್ನಿಟ್ಟು ಪೂಜೆ ಮಾಡಲಾಗುತ್ತಿದೆ. ದೇವಾಲಯದ ನವರಂಗ ವಿಶಾಲವಾಗಿದ್ದು ಅದರ ಗೋಡೆಗಳು ಹಲವು ದುರಸ್ತಿ ಕಾರ್ಯಗಳಿಗೆ ಒಳಗಾಗಿದೆ. ನವರಂಗದ ಕೆಲವು ಕಂಬಗಳು ಸ್ವಲ್ಪಮಟ್ಟಿಗೆ ಕುತೂಹಲ ಮೂಡಿಸುತ್ತವೆ. ಇವು ಆಕಾರದಲ್ಲಿ ಗಿಡ್ಡನೆಯ ಸ್ವರೂಪವು. ತಿರುಗಣಿಯಂತ್ರಹ ಸಹಾಯದಿಂದ ರಚಿಸಲ್ಪಟ್ಟಿವೆ. ಇನ್ನು ಕೆಲವು ಚೌಕಾಕಾರದ್ದಾಗಿದ್ದು, ಬುಡದಲ್ಲಿ ಹಾಗೂ ದಮಡ ಭಾಗದಲದಲ್ಲಿ ಚೌಕಾಗಿವೆ. ಅವುಗಳು ಸಹ ಗಿಡ್ಡನೆಯ ಆಕಾರ ಪಡೆದಿವೆ. ಕಂಬಗಳ ರಚನಾ ಶೈಲಿ ಹಾಗೂ ರಚನೆಗೆ ಬಳಕೆ ಮಾಡಿದ ವಸ್ತವನ್ನು ಗಮನಿಸಿ ದೇವಾಲಯ ನಿರ್ಮಾಣದ ಕಾಲವನ್ನು ಗುರುತಿಸುವುದು ಕಷ್ಟಸಾಧ್ಯ. ನವರಂಗದಲ್ಲಿ ಸುಂದರವಾದ ಭುವನೇಶ್ವರಿ ಅಲಂಕರಣೆ ಮಾಡಲಾಗಿದೆ. ದೇವಾಲಯಕ್ಕೆ ಸಂಬಂಧಪಟ್ಟ ಯಾವ ಮಾಹಿತಿಯೂ ಕಂಡುಬರುವುದಿಲ್ಲ.

ಸೋಮನಾಥ ಹಾಗೂ ಗಣಪತಿ ದೇವಾಲಯಗಳಲ್ಲದೆ ಗ್ರಾಮದಲ್ಲಿ ಅಶ್ವಥ ನಾರಾಯಣ, ಮಲ್ಲಿಕಾರ್ಜುನ, ವೇಣುಗೋಪಾಲ, ಜಂಬುಕೇಶ್ವರ ಹಾಗೂ ರೇಣುಕಾಂಭ (ಬಿದುರುಳೆವ್ವ) ಎಂಬ ದೇವಾಲಯಗಳಿವೆ. ಗ್ರಾಮದ ಬಗೆಗೂ ಅನೇಕ ಐತಿಹ್ಯ ಹಾಗೂ ಪುರಾಣ ಕಥೆಗಳಿವೆ. ರೇಣುಕೆ ಪಾತಾಳದಲ್ಲಿರುವಾಗ ಅವಳನ್ನು ನೋಡುವ ಸಲುವಾಗಿ ಪರಶುರಾಮನು ತಾಯಿಯ ಸ್ಮರಣೆ ಮಾಡಲು ಆತನ ಭಕ್ತಿಗೆ ಮೆಚ್ಚಿದ ರೇಣುಕಾ ನದಿ ದಂಡೆಯ ಬಿದಿರು ಪೊಳೆ ಅಥವಾ ಬಿದಿರು ಮೆಳೆಯಾಗಿ ಉದ್ಭವಿಸಿ ಪರುಶರಾಮನಿಗೆ ದರ್ಶನವಿತ್ತು ಅನುಗ್ರಹಿಸಿದಳೆಂಬ ಐತಿಹ್ಯವನ್ನು ಗ್ರಾಮದಲ್ಲಿ ಸಾಮಾನ್ಯವಾಗಿ ಹೇಳಲಾಗುತ್ತದೆ. ಬಿದಿರಿನಲ್ಲಿ ಹುಟ್ಟಿದ ರೇಣುಕೆಯ ಸ್ಮರಣಾರ್ಥವಾಗಿಯೇ ಈ ಗ್ರಾಮಕ್ಕೆ ಬಿದುರಳ್ಳಿ, ಬಿದರಳ್ಳಿ ಎಂಬ ಹೆಸರು ಬಂದಿರಬಹುದು. ಇನ್ನೊಂದು ಮುಖ್ಯ ಸಂಗತಿಯೆಂದರೆ ಇಲ್ಲಿನ ಸೋಮನಾಥನಲ್ಲಿ ಸ್ವಯಂ ಕಾಶೀ ವಿಶ್ವನಾಥನೆ ಮೇಳೈಸಿರುವುದು. ಹೀಗಾಗಿ ಈ ಗ್ರಾಮವು ದಕ್ಷಿಣಕಾಶಿಯೆಂದೇ ಪ್ರಸಿದ್ಧವಾಗಿದೆ. ಅನೇಕ ಯತಿ-ಮುನಿಯರು ಸೋಮನಾಥನನ್ನು ಕುರಿತು ಸ್ಮರಿಸಿದ್ದಾರೆ. ವಾದಿರಾಜರು ಗ್ರಾಮದ ಅಧಿದೇವತೆ ಬಿದುರಳ್ಳಿಯ ಸೋಮೇಶ್ವರನನ್ನು ಮುಕ್ತಕಂಠದಿಂದ ಸ್ತುತಿಸಿದ್ದಾರೆ. ಅಲ್ಲದೇ ರಾಘವೇಂದ್ರ ಸ್ವಾಮಿ ಬಿದುರಳ್ಳಿಯಲ್ಲಿ ಒಂದು ತಿಂಗಳು ನಿಲೆನಿಂತ ಮಾಹಿತಿ ಕೂಡಾ ಇದೆ. ಪ್ರಾಚೀನ ಹಾಗೂ ಮಧ್ಯಕಾಲೀನ ಹಲವಾರು ಐತಿಹಾಸಿಕ ಘಟನೆಗಳನ್ನು ಮೈಗೂಡಿಸಿಕೊಂಡಿರುವ ಬಿದುರಳ್ಳಿಯ ಗ್ರಾಮದಲ್ಲಿ ಈಗೀರುವ ಪ್ರಾಚೀನ ದೇವಾಲಯಗಳು ಅನಾಧಾರಕ್ಕೆ ಒಳಗಾಗಿ ನಶಿಸಿ ಹೋಗುತ್ತಿರುವುದು ವಿಷಾದದ ಸಂಗತಿಯೇ ಸರಿ.

೧೯

ಊರು ಬಿದರಳ್ಳಿ
ಸ್ಮಾರಕ ಸೋಮೇಶ್ವರ
ಸ್ಥಳ ಗ್ರಾಮದಪೂರ್ವಕ್ಕೆ (ತುಂಗಭದ್ರಾ ನದಿ ದಂಡೆ)
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ತುಂಗಭದ್ರಾ ನದಿ ದಂಡೆಯ ಮೇಲಿರುವ ಸೋಮೇಶ್ವರ ದೇವಾಲಯ ಗರ್ಭಗೃಹ, ಅಂತರಾಳ ಹಾಗೂ ವಿಶಾಲವಾದ ನವರಂಗವನ್ನು ಹೊಂದಿರುವುದು. ಕಪ್ಪುಶಿಲೆಯಲ್ಲಿ ನಿರ್ಮಾಣವಾಗಿರುವ ಈ ದೇವಾಲಯ ಪ್ರಾಚೀನತೆಯ ಭವ್ಯ ಇತಿಹಾಸವನ್ನು ಒಳಗೊಂಡಿದೆ. ಇಲ್ಲಿರುವ ಸೋಮೇಶ್ವರನಲ್ಲಿ ಸ್ವಯಂ ಕಾಶೀವಿಶ್ವನಾಥನನ್ನು ಕಾಣುವ ಜನರು ಈ ಕಾರಣಕ್ಕಾಗಿ ಬಿದರಹಳ್ಳಿಯನ್ನು ದಕ್ಷಿಣಕಾಸಿ ಎಂದು ಸಂಭೋದಿಸುವ ವಾಡಿಕೆ ಇದೆ.

ಸೋಮೇಶ್ವರ ದೇವಾಲಯದ ಗರ್ಭಗೃಹದಲ್ಲಿ ಲಿಂಗವಿದ್ದು, ಅದು ಚೌಕಾಕಾರವಾಗಿರುವುದು. ಗರ್ಭಗೃಹ ಒಳಗೋಡೆಯಲ್ಲಿ ಕಟ್ಟೆಯನ್ನು ನಿರ್ಮಿಸಲಾಗಿದೆ. ಭುವನೇಶ್ವರಿಯ ಕೆತ್ತನೆ ಇದೆ. ಇಲ್ಲಿರುವ ಐದು ಶಿಲ್ಪಗಳಲ್ಲಿ ಎರಡು ಸ್ತ್ರೀ ಶಿಲ್ಪಗಳು, ಮೂರು ಪುರುಷ ಶಿಲ್ಪಗಳಾಗಿವೆ. ತನ್ನ ಕೌಶಲ್ಯವನ್ನು ಪ್ರದರ್ಶಿಸಿರುವ ಕೆತ್ತನೆಕಾರ ಚಿಕ್ಕದಾಗಿರುವ ಉಬ್ಬುಶಿಲ್ಪಗಳಿವೆ ಸುಂದರವಾದ ಕೀರೀಟ ಅಲಂಕರಣೆ ಮಾಡಿದ್ದಾನೆ. ಅಲ್ಲದೆ ಈ ಐದು ಶಿಲ್ಪವನ್ನೊಳಗೊಂಡು ಕೀರ್ತಿಮುಖ ಅಲಂಕಾರ ಮಾಡಲಾಗಿದೆ. ಹೊಸ್ತಿಲ ಭಾಗವು ನಕ್ಷತ್ರಾಕಾರದಲ್ಲಿದೆ. ಗರ್ಭಗೃಹದ ಬಾಗಿಲವಾಡದ ಲಲಾಟದಲ್ಲಿ ಗಜಲಕ್ಷ್ಮಿ ಉಬ್ಬು ಶಿಲ್ಪವಿದೆ. ಅದರ ಮೇಲ್ಭಾಗದಲ್ಲಿ ಕಪೋತ ತರಹದ ಶಿಲಾಪಟ್ಟಿಕೆ ರಚನೆಯಿದೆ. ದೇವಾಲಯದ ಅಂತರಾಳವು ಬರಿದಾಗಿದ್ದು ಅದರ ಬಾಗಿಲವಾಡವು ಜಾಲಂಧರಗಳಿಂದ ಕೂಡಿದೆ. ಅಂತರಾಳದ ಬಾಗಿಲವಾಡವು ಗತೋರಣವನ್ನು ಹೊಂದಿದೆ. ಪುಷ್ಪ ಪಟ್ಟಿಕೆಗಳಿಂದ ಸುಂದರವಾಗಿ ರಚನೆಯಾಗಿರುವ ತೋರಣದ ಲಲಾಟದಲ್ಲಿ ತ್ರಿಮೂರ್ತಿಗಳ ಉಬ್ಬುಶಿಲ್ಪವನ್ನು ನಿರ್ಮಿಸಲಾಗಿದೆ. ಇವು ಕೈಯಲ್ಲಿ ಗದೆ, ದಂಡ ಹಾಗೂ ನಾಗವನ್ನು ಹಿಡಿದುಕೊಂಡಿವೆ. ಅಲ್ಲದೆ ಇಕ್ಕೆಲಗಳಲ್ಲಿ ಕೋಷ್ಠಕಗಳಿದ್ದು ಅವು ಬರಿದಾಗಿವೆ. ಈ ಬರಿದಾದ ಕೋಷ್ಠಕಗಳಿಗೆ ದ್ರಾವಿಡ ಮಾದರಿಯ ಶಿಖರ ಹಾಗೂ ಲಲಾಟದಲ್ಲಿ ಗಜಲಕ್ಷ್ಮಿ ಉಬ್ಬುಶಿಲ್ಪವನ್ನು ನಿರ್ಮಿಸಲಾಗಿದೆ.

ದೇವಾಲಯದ ನವರಂಗ ವಿಶಾಲವಾಗಿದ್ದು, ಮುರು ಕಡೆಗೂ ಪ್ರವೇಶದ್ವಾರ ಹೊಂದಿದೆ. ಇಲ್ಲಿರುವ ನಾಲ್ಕು ಕಂಬಗಳು ತಿರುಗಣಿ ಯಂತ್ರದಿಂದ ರಚಿಸಲ್ಪಟ್ಟ ದುಂಡಾಕೃತಿಯ ಕಂಬಗಳಾಗಿದ್ದರೆ ಉಳಿದವು ನಕ್ಷತ್ರಾಕಾರದವು. ದುಂಡಾಕೃತಿಯ (ತಿರುಗಣಿ) ಕಂಬಗಳೂ, ತಟ್ಟೆಯಾಕಾರದ ಫಲಕ ಹಾಗೂ ತರಂಗ ಮಾದರಿಯ ಬೋಧಿಗೆಗಳನ್ನು ಹೊಂದಿವೆ. ಉಳಿದ ನಕ್ಷತ್ರಾಕಾರದ ಕಂಬಗಳು ಕಪ್ಪುಕಲ್ಲಿನಲ್ಲಿ ನಿರ್ಮಾಣವಾದ ಸುಂದರ ರಚನೆಗಳು, ಈ ಕಂಬದ ಅಧಿಷ್ಠಾನ ಭಾಗಗಳನ್ನಂತು ತುಂಬಾ ಸುಂದರವಾಗಿ ರಚಿಸಲಾಗಿದೆ. ನವರಂಗದಲ್ಲಿ ಸುಂದರವಾದ (ಸೂರ್ಯಕಾಂತಿ ಹೂವಿನ ತರಹದ) ಭುವನೇಶ್ವರಿಯ ಕೆತ್ತನೆಯ ಅಲಂಕರಣೆಯಿದೆ. ತೃಟಿತವಾದ ನಂದಿ ಹಾಗೂ ಸಪ್ತಮಾತೃಕೆಯ ಬಿಡಿ ಶಿಲ್ಪವನ್ನು ನವರಂಗದ ಒಂದು ಮೇಲೆಯಲ್ಲಿ ಇಡಲಾಗಿದೆ. ನವರಂಗದ ಮುಖ್ಯ ಬಾಗಿಲು ಸೇರಿದಂತೆ ಉಳಿದೆರಡು ಬಾಗಿಲವಾಡಗಳು ಅತ್ಯಂತ ಸರಳ ರಚನೆಯವು. ಮುಖ್ಯ ಬಗಿಲವಾಡದ ಮೇಲ್ಭಾಗದಲ್ಲಿ ತ್ರಿಮೂರ್ತಿಯ ಶಿಲ್ಪವನ್ನು ಅಳವಡಿಸಲಾಗಿದೆ.

ಸೋಮೇಶ್ವರ ಗುಡಿಯ ಅಧಿಷ್ಠಾನವು ಉಪಾನ ಜಗತಿ, ಗಳ, ತ್ರಿಪಟ್ಟ ಕುಮುದ ಹಾಗೂ ಕಪೊತ ಭಾಗಗಳನ್ನು ಹೊಂದಿರುವುದು. ಆದರೆ ಹೊರಗೋಡೆಯನ್ನು ಸಂಪೂರ್ಣವಾಗಿ ಗಾರೆಯಿಮದ ಬಳಿಯಲಾಗಿದೆ. ಹೀಗಾಗಿ ಅದರ ಮೇಲಿರುವ ಕೆತ್ತನೆಗಳಾಗಲಿ ಅದರಲ್ಲಿ ಅಳವಡಿಸಿರುವ ಅರ್ಧ ಕಮಬಗಳಾಗಲಿ ಕಾಣುವುದಿಲ್ಲ. ಶಿಖರ ಭಾಗವು ಸಹ ಬಿದ್ದು ಹೋಗಿರಬಹುದು. ಪ್ರಾಚೀನ ದೇವಾಲಯದ ಹಲವು ಅವಶೇಷಗಳು ಗುಡಿಯ ಸುತ್ತಲೂ ಅಲ್ಲಲ್ಲಿ ಬಿದ್ದಿವೆ.

ಗ್ರಾಮಕ್ಕೆ ಸಂಬಂಧಪಟ್ಟಂತೆ ಒಟ್ಟು ಮೂರು ಶಾಸನಗಳು (ಧಾ.ಜಿ.ಶಾಸೂ, ಸಂ. ರೋ. ೩೮, ೩೯ ಮತ್ತು ೪೦, ಪು. ೪೧) ಪ್ರಕಟವಾಗಿವೆ. ಈ ಶಾಸನಗಳಲ್ಲಿನ ವಿಷಯದನ್ವಯ ಬಿದಿರುವಳ್ಳಿಯು ಒಂದು ಪ್ರಾಚೀನ ಅಗ್ರಹಾರವಾಗಿದ್ದುದಲ್ಲದೇ ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತೆಂಬುದು ತಿಳಿದುಬರುತ್ತದೆ. ಕ್ರಿ.ಶ. ೧೦೫೨ರ ಶಾಸನವೊಂದು ಬಿದುರ್ವ್ವಳ್ಳಿಯ ದೇವಾಲಯಕ್ಕೆ ದಾನ ನೀಡಿರುವ ಬಗೆಗೆ ಹಾಗೂ ಕ್ರಿ.ಶ. ೧೧೪೯-೫೦ರ ಶಾಸನ ಸೋಮನಾಥ ದೇವರಿಗೆ ಶೆಟ್ಟಿಯೊಬ್ಬ ಭೂಮಿಯನ್ನು ದಾನವಾಗಿ ಕೊಟ್ಟಿರುವ ಬಗೆಗೆ ತಿಳಿಸುತ್ತದೆ. ಪ್ರಕಟಗೊಂಡಿರುವ ಈ ಎರಡು ಶಾಸನಗಳು ಸೋಮನಾಥ ದೇವಾಲಯದ ಆವರಣಲ್ಲಿ ಕಂಡುಬಂದಿವೆ. ಗ್ರಾಮದ ಬಗ್ಗೆ ಮಾಹಿತಿ ನೀಡುವ ಇನ್ನೊಂದು ಶಾಸನವೆಂದರೆ ಕ್ರಿ.ಶ. ೧೭೮೦ ಕಾಲದ್ದು. ಬಿದರಹಳ್ಳಿ ಗ್ರಾಮಕ್ಕೆ “ತಿಗುಲಗಾ ಜಯಸಮುದ್ರ” ಎಂದು ನಾಮಕರಣ ಮಾಡಿದ ಉಲ್ಲೇಖವನ್ನು ಈ ಶಾಸನ ನೀಡುತ್ತದೆ. (ಬಹುಶಃ ಇದು ತಿಗುಣ ಎಂದಿರಬಹುದು. ತಿಗುಣ ಅಂದರೆ ಒಂದು ಸುಗಂಧ ದ್ರವ್ಯ ಎಂದರ್ಥ).

೨೦

ಊರು ಬೂದಿಹಾಳ
ಸ್ಮಾರಕ ಈಶ್ವರ
ಸ್ಥಳ ಗ್ರಾಮದಲ್ಲಿ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹದಲ್ಲಿರುವ ಲಿಂಗ ಹಾಗೂ ದೇವಾಲಯದ ಅಧಿಷ್ಠಾನ ಭಾಗ ಹೊರತುಪಡಿಸಿ ದೇವಾಲಯವನ್ನು ಹೊಸದಾಗಿ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿರುವ ಲಿಂಗ ಬೃಹದಾಕಾರವಾಗಿದ್ದೂ ಅಷ್ಠೇ ಸುಮದರವಾಗಿದೆ. ಕಲ್ಯಾಣದ ಚಾಲುಕ್ಯರ ಶೈಲಿಯಿಂದ ಪ್ರಭಾವಿತರಾಗಿ ದೇವಾಲಯಗಳನ್ನು ಕಟ್ಟುವುದರ ಮೂಲಕ ಹಾಗೂ ತಮ್ಮನ್ನು ಸ್ಥಳೀಯರ ಮಧ್ಯೆ ಶಾಶ್ವತವಾಗಿ ಗುರುತಿಸಿಕೊಳ್ಳುವ ಪ್ರಯತ್ನವಾಗಿ ಸಾಂತ ಅಧಿಕಾರ ವರ್ಗ ತಮ್ಮ ಹೆಸರಿನಲ್ಲಿ ವಿಶಿಷ್ಠವಾದ ಅನೇಕ ದೇವಾಲಯಗಳನ್ನು ಕಟ್ಟಿರುವುದು ತಿಳಿದಿರುವ ವಿಷಯವಾಗಿದೆ. ಅಂಥ ದೇವಾಲಯಗಳು ಸ್ಥಳೀಯ ಹಾಗೂ ಮುಖ್ಯವಾಗಿ (ಕಲ್ಯಾಣ ಚಾಲುಕ್ಯ ಶೈಲಿಯ) ಎರಡು ಮಿಶ್ರಣಗಳನ್ನು ಮೈಗೂಡಿಸಿಕೊಂಡು ಬೆಳೆದುಬಂದಿವೆ. ಅಂಥ ಮಾದರಿಯ ದೇವಾಲಯಗಳನ್ನು ಮುಂಡರಗಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಸೂಕ್ಷ್ಮವಾಗಿ ಗಮನಿಸಬಹುದು. ಬೂದಿಹಾಳದಲ್ಲಿರುವ ಈಶ್ವರ ದೇವಾಲಯ ಅಂಥ ಸಂಕರಕ್ಕೆ ಉತ್ತಮ ಉದಾಹರಣೆಯಾಗಿ ನಿಲ್ಲುವಂಥದ್ದು. ಇಲ್ಲಿರುವ ಲಿಂಗದ ಬುಡ ಹಾಗೂ ಮೇಲ್ಭಾಗವನ್ನು ಚೌಕಾಕಾರವಾಗಿ ಹಾಗೂ ದೊಡ್ಡದಾಗಿ ನಿರ್ಮಿಸಿ ಅವುಗಳ ಮಧ್ಯೆ ಆಳವಾದ ಗಳವನ್ನು ರಚಿಸಿರುತ್ತಾರೆ. ಸಾಮಾನ್ಯವಾಗಿ ಕಲ್ಯಾಣ ಚಾಲುಕ್ಯ ಮಾದರಿ ಹಾಗೂ ಸ್ಥಳೀಯ ಮಿಶ್ರಣ ಮಾದರಿಯಿಂದ ಇಂಥ ಕಲಾಕೃತಿಗಳು ರಚನೆಗೊಂಡಿವೆ. ಬೂದಿಹಾಳದಲ್ಲಿರುವ ಈಶ್ವರ ದೇವಾಲಯದ ಲಿಂಗವು ಸಹ ಅದೇ ಮಾದರಿಯದ್ದು. ಈಶ್ವರ ದೇವಾಲಯದ ಅಧಿಷ್ಠಾನವನ್ನು ಅತ್ಯಂತ ಸರಳ ಹಾಗೂ ಮೆಟ್ಟಿಲಾಕಾರದಲ್ಲಿ ನಿರ್ಮಿಸಿದೆ. ಈ ರಚನೆಯನ್ನು ಹೋಲುವ ಅಧಿಷ್ಠಾನಗಳು ಮುಂಡರಗಿ ಪರಿಸರದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈಶ್ವರ ದೇವಾಲಯದ ಮುಂಭಾಗದಲ್ಲಿ ಅತಿ ತ್ರುಟಿತ ಶಾಸನ ಫಲಕವನ್ನು ಹೂಳಿಟ್ಟಿದ್ದಾರೆ. ಕ್ರಿ.ಶ. ೧೧೪೭ರ ತೇದಿಯುಳ್ಳ ಈ ಶಾಸನವು (ಸೌ ಈ, ಇ,ಸಂ. XV, ಧಾ.ಜಿ.ಶಾ.ಸೂ, ಸಂ.ರೋ. ೪೧ ಪು. ೪೧; SII, XV, No. 33 ಶಾ, ಸಂ. ೩೩) ಕಲ್ಯಾಣ ಚಾಲುಕ್ಯ ಎರಡನೆಯ ಜಗದೇಕಮಲ್ಲನ ಕಾಲದ್ದು. ಬನವಾಸಿ ಹನ್ನೆರಡು ಸಾವಿರ ಪ್ರಾಂತದಲ್ಲಿನ ಮಾಸವಾಡಿ-೧೪೦ರ ಆಡಳಿತ ವಿಭಾಗವು ಕುಪ್ಪದೇವರಸ ಆಳ್ವಿಕೆಗೆ ಒಳಪಟ್ಟಿತ್ತು. ಆ ಸಂದರ್ಭದಲ್ಲಿ ಬಮ್ಮಿಸೆಟ್ಟಿ ಎಂಬುವನು ಬೂದಿಹಾಳದ ಕಲಿದೇವಸ್ವಾಮಿ ದೇವಾಲಯಕ್ಕೆ ಭೂಮಿಯನ್ನು ದಾನ ಮಾಡುತ್ತಾನೆ. ಬಹುಶಃ ಈಗಿರುವ ಈಶ್ವರ ದೇವಾಲಯವೇ ಪ್ರಾಚೀನ ಕಲಿದೇವಸ್ವಮಿ ದೇವಾಲಯವಾಗಿದ್ದಿರಬಹುದೇ? ಎಂದು ಸಂದೇಹ ಪಡಬಹುದಾಗಿದೆ.