೩೧

ಊರು ಸಿಂಗಟಾಲೂರು
ಸ್ಮಾರಕ ವೀರಭದ್ರ
ಸ್ಥಳ ಗುಡ್ಡದ ಮೇಲೆ
ಕಾಲ ೧೬-೧೭ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಉತ್ತರ
ಸ್ಥಿತಿ ಉತ್ತಮ
ಸಂರಕ್ಷಣೆ

ನಾಡಿನ ವೀರಭದ್ರ ದೇವರಗಳ ಆರಾಧನಾ ಕ್ಷೇತ್ರಗಳಲ್ಲಿ ಇದು ಸಹ ಹೆಚ್ಚಿನ ಜನಾಕರ್ಷಣೆ ಪಡೆದಿರುವ ಜಾಗೃತ ಕ್ಷೇತ್ರ. ಎತ್ತರದ ಗುಡ್ಡ (ಕಪ್ಪತಗುಡ್ಡ)ದ ಮೇಲಿರುವ ಈ ಕ್ಷೇತ್ರವು ರಮ್ಯವಾದ ಸ್ಥಳವಾಗಿದೆ. ಕೇಳಭಾಗದಲ್ಲಿ ನಯನ ಮನೋಹರವಾಗಿ ತುಂಗಭದ್ರೆ ತಿರುವನ್ನು ಪಡೆದು ಹರಿಯುತ್ತದೆ.

ನೂರಾರು ಮೆಟ್ಟಿಲುಗಳ ಸಹಾಯದಿಂದ ಅಥವಾ ವಾಹನದ ಮೂಲಕ ಗುಡ್ಡ ಬಳಸಿಕೊಂಡು ದೇವಾಲಯ ತಲುಪಬಹುದು. ಗುಡ್ಡದ ಮೇಲಿರುವ ವಿಶಾಲವಾದ ಅಂಗಳದಲ್ಲಿ ವೀರಭದ್ರ ಹಾಗೂ ಕಾಳಮ್ಮನ ದೇವಾಲಯಗಳಿವೆ. ಈ ಎಡರಡು ದೇವಾಲಯಗಳಲ್ಲಿ ವೀರಭದ್ರನ ಗುಡಿಯೇ ಪ್ರಮುಖವಾದುದು. ಉತ್ತರಾಭಿಮುಖವಾಗಿರುವ ವೀರಭದ್ರನ ದೇವಾಲಯ ಹಿಂಭಾಗದ ಗವಿಯನ್ನು ಒಳಗೊಂಡು ನಿರ್ಮಿಸಲ್ಪಟ್ಟಿರುವಂಥದ್ದು. ಗರ್ಭಗೃಹದ ಹಿಂಭಾಗದಲ್ಲಿ ಎರಡು ಚಿಕ್ಕ ಗವಿ(ಗುಹೆ)ಗಳಿವೆ. ಅವನ್ನು ಪೂಜಾರಿ ವರ್ಗವು ಮನೆಯನ್ನಾಗಿ ಬಳಸಿಕೊಂಡು ನಿತ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ.

ಗರ್ಭಗೃಹ, ಅಂತರಾಳ ನವರಂಗ ಹಾಗೂ ಇತ್ತೀಚೆಗೆ ನಿರ್ಮಿಸಲ್ಪಟ್ಟಿರುವ ಮುಖ ಮಂಟಪವಿದೆ. ಗರ್ಭಗೃಹದಲ್ಲಿ ವೀರಭದ್ರನ ಶಿಲ್ಪ ಇದೆ. ಸುಮಾರು ನಾಲ್ಕು ಅಡಿ ಎತ್ತರವಾಗಿರುವ ಈ ಶಿಲ್ಪ ಯಾವಾಗಲೂ ಅಲಂಕಾರದಿಂದ ಕೂಡಿರುವುದರಿಂದ ಶಿಲ್ಪದ ಶೈಲಿ, ಹಾಗೂ ಕಾಲದ ಬಗೆಗೆ ಸ್ಪಷ್ಟವಾಗಿ ತಿಳಿದುಕೊಳ್ಳಲು ಕಷ್ಟಸಾಧ್ಯ. ಅಲ್ಲದೇ ಗರ್ಭಗೃಹಕ್ಕೆ ಸಾರ್ವಜನಿಕರ ಮುಕ್ತ ಅವಕಾಶವನ್ನು ನಿರ್ಬಂಧಿಸಲಾಗಿದೆ. ಗರ್ಭಗೃಹದ ಬಾಗಿಲವಾಡವನ್ನು ವಿವಿಧ ಬಣ್ಣಗಳಿಂದ ಅಲಂಕಾರ ಮಾಡಲಾಗಿದ್ದು ಲೋಹದ ಸೀಟು(ತಗಡು)(ಗಳಿಂದ ಹೊದಿಕೆ ಮಾಡಿದ್ದಾರೆ. ಹೀಗಾಗಿ ಬಾಗಿಲವಾಡದ ವಾಸ್ತು ಲಕ್ಷಣಗಳನ್ನು ತಿಳಿಯುವುದು ಅಸಾಧ್ಯ. ಇದೇ ತರಹದ ಅಲಂಕಾರ ಅಂತರಾಳದ ಬಾಗಿಲವಾಡದಲ್ಲೂ ಪುನರಾವರ್ತಿತವಾಗಿದೆ.

ನವರಂಗ ವಿಶಾಲವಾಗಿದ್ದು ನಾಲ್ಕು ಕಂಬಗಳನ್ನು ಹೊಂದಿದೆ. ಅವುಗಳಲ್ಲಿ ಎರಡು ದುಂಡಾಗಿದ್ದು ಉಳಿದೆರಡು ಚೌಕಾಕಾರದ ಕಂಬಗಳು. ಅವು ಬುಡದಲ್ಲಿ ಹಾಗೂ ಮಧ್ಯಭಾಗದಲ್ಲಿ ಚೌಕಾಕಾರವಾಗಿವೆ. ಇವುಗಳ ಮಧ್ಯೆ ಹದಿನಾರು ಪಟ್ಟಿಕೆಗಳನ್ನು ಕಂಡರಿಸಲಾಗಿದೆ. ಅಲ್ಲದೇ ವೃತ್ತಾಕಾರದ ಫಲಕ ಹಾಗೂ ಬೋಧಿಗೆಗಳನ್ನು ಕಂಬಗಳಲ್ಲಿ ಅಳವಡಿಸಲಾಗಿದೆ. ಇವು ಸುಣ್ಣ ಬಣ್ಣಗಳಿಂದ ಅಲಂಕರಣೆಗೊಳ್ಪಟ್ಟಿದ್ದು ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡಂತಿವೆ. ದೇವಾಲಯದ ನೆಲಹಾಸು, ಒಳಗೋಡೆ ಹಾಗೂ ಮೇಲ್ಛಾವಣಿ ದುರಸ್ತಿ ಕಾರ್ಯಗಳಿಗೆ ಒಳಪಟ್ಟಿವೆ ನೆಲ ಹಾಗೂ ಒಳಗೋಡೆ ಭಾಗಗಳನ್ನು ಗ್ರಾನೈಟ್ ಶಿಲೆಯಿಂದ ಸುಮದರಗೊಳಿಸಲಾಗಿದೆ.

ಶಿಂಗಟಾಲೂರಿನ ವೀರಭದ್ರ ದೇವಾಲಯದ ಇತಿಹಾಸ ನಾಲ್ಕೈದನೂರು ವರ್ಷಗಳ ಕಾಲದ್ದಾಗಿದ್ದರೂ ಸದ್ಯದ ದಿನಗಳಲ್ಲಿ ಶಿಗಟಾಲೂರಿನ ವೀರಭದ್ರನ ಪ್ರಾಮುಖ್ಯತೆ ಹಾಗೂ ಪ್ರಾಚೀನತೆ ಅನೇಕ ಜಿಲ್ಲೆಗಳಿಗೆ ಹರಡಿದೆ. ಪ್ರತಿ ವರ್ಷ ಚೈತ್ರ (ಮಾರ್ಚ್) ಮಾಸದಲ್ಲಿ ಅದ್ದೂರಿಯಾದ ಹಾಗೂ ಬೃಹತ್ತಾದ ಜಾತ್ರೆ ನಡೆಯುತ್ತದೆ. ವೀರಭದ್ರನ ಸಂಪ್ರದಾಯಕ್ಕೆ ಸಂಬಂಧಿಸಿದ ವಿಧಿ ಆಚರಣೆಗಳಾದ ಕೊಂಡ ಹಾಯುವುದು, ನಾಲಿಗೆ, ಬಾಯಲ್ಲಿ ಹಾಗೂ ಬೆನ್ನಲ್ಲಿ ಲೋಹದ ಸಲಾಕೆಗಳನ್ನು ತೂರಿಸಿಕೊಂಡು ದೇವರ ಹರಕೆ ತೀರಿಸುವ ದೃಶ್ಯಗಳು ಅತ್ಯಂತ ಭಯಾನಕವಾಗಿ ಕಾಣುತ್ತವೆ. ಭವ್ಯ ಪರಂಪರೆಯನ್ನು ಹೊಂದಿರುವ ಶಿಂಗಟಾಲೂರಿನ ವೀರಭದ್ರನ ಬಗೆಗೆ ಸಂಬಂಧಿಸಿದಂತೆ ಲಿಖಿತವಾಗಿರುವ ಮಾಹಿತಿಗಳು ತುಂಬಾ ವಿರಳ.

ವೀರಭದ್ರನ ಗುಡಿಯ ಎಡಭಾಗದಲ್ಲಿ ಕಾಳಮ್ಮನ ದೇವಾಲಯವಿದೆ. ಇದು ಸಂಪೂರ್ಣವಾಗಿ ಹೊಸದಾಗಿ ನಿರ್ಮಾಣವಾದ ಕಟ್ಟಡ. ವೀರಭದ್ರನಿಗೆ ಹಾಗೂ ಭದ್ರಕಾಳಿಯ ಬಗೆಗೆ ಸಂಬಂಧಿಸಿದಂತೆ ಅನೇಕ ಐತಿಹ್ಯಗಳು ಪ್ರಚಲಿತದಲ್ಲಿವೆ.

ದೇವಾಲಯಕ್ಕಿರುವ ಶಿಖರ ಡೂಮ್ ಮಾದರಿಯದ್ದು (ಇಂಡೋ-ಇಸ್ಲಾಮಿಕ್). ಮೇಲೆ ಕಲಶವನ್ನು ಇಟ್ಟಿದ್ದಾರೆ. ಶಿಖರ ಭಾಗವನ್ನು ಸಹ ಸುಣ್ಣದಿಂದ ಬಳದಿದ್ದಾರೆ. ದೇವಾಲಯಕ್ಕೆ ಸಂಬಂಧಿಸಿರುವಂತೆ ಕೆಲವು ಮಾಹಿತಿಗಳನ್ನು ಪುನರ್ ಅಧ್ಯಯನಕ್ಕೆ ಒಳಪಡಿಸುವುದು ಸೂಕ್ತ. ಈವರೆಗೂ ದೇವಾಲಯದ ಬಗೆಗೆ ಪ್ರಕಟವಾಗಿರುವ ಮಾಹಿತಿಗಳು ಹಾಗೂ ಸ್ಥಳೀಯರ ಅಭಿಪ್ರಾಯಗಳು ಇದರ ಕಾಲವನ್ನು ಕ್ರಿ.ಶ. ೧೦ನೇ ಶತಮಾನಕ್ಕೆ ಸಂಬಂಧಿಸಿ ಸೂಚಿಸುತ್ತವೆ. ದೇವಾಲಯದ ನಿರ್ಮಾಣ ಅದೇ ಕಾಲದಲ್ಲಿ ಆಯಿತೆಂಬುದು ಅಭಿಪ್ರಾಯ. ಆದರೆ ದೇವಾಲಯದ ನಿರ್ಮಾಣ ಅದೇ ಕಾಲದಲ್ಲಿ ಆಯಿತೆಂಬುದು ಅಭಿಪ್ರಾಯ ಸೂಚಿಸುತ್ತವೆ. ದೇವಾಲಯದ ನಿರ್ಮಾಣ ಅದೇ ಕಾಲದಲ್ಲಿ ಆಯಿತೆಂಬುದು ಅಭಿಪ್ರಾಯ. ಆದರೆ ದೇವಾಲಯದಲ್ಲಿರುವ ಕಂಬಗಳನ್ನು ಹೊರತುಪಡಿಸಿದರೆ ಇನ್ನುಳಿದ ಯಾವ ಅವಶೇಷಗಳು ಪ್ರಾಚೀನವಾದವುಗಳಲ್ಲ. ಬಹುಶಃ ಇಲ್ಲಿರುವ ಕಂಬಗಳನ್ನು ಬೇರೆ ಕಡೆಯಿಮದ ತಂದಿರಬಹುದೇ ಎಂಬುದು ವಿಚಾರರ್ಹ ಸಂಗತಿ. ಆದರೆ ಈ ಕ್ಷೇತ್ರವು ಪ್ರಾಚೀನವಾದುದು ಎಂಬುದರಲ್ಲಿ ಅನುಮಾನವಿಲ್ಲ. ಸಿದ್ಧರು, ಯತಿಗಳು ಹಾಗೂ ಅನೇಕ ಸಾಧಕ ಪುರುಷರು ಇಲ್ಲಿರುವ ಗವಿಗಳಲ್ಲಿ ನೆಲೆಸಿ ತಮ್ಮ ಕಾರ್ಯಸಿದ್ಧಿಗಳನ್ನು ಸಾಶಿಸಿರುವಲ್ಲಿ ಅನುಮಾನವಿಲ್ಲ. ಈ ಪ್ರದೇಶದಲ್ಲಿ ಸಿದ್ಧಿಪುರುಷರು ನೆಲೆಸಲು ಬಹುಮುಖ್ಯ ಕಾರಣಗಳೆಂದರೆ ಕಪ್ಪತಗುಡ್ಡವು ಗಿಡಮೂಲಿಕೆ ಔಷಧಿಗಳಿಗೆ ಮೊದಲಿನಿಂದಲೂ ಪ್ರಸಿದ್ಧವಾಗಿರುವ ಸಸ್ಯವನ. ರಸ ವಿದ್ಯೆಗಳ ಮೂಲಕ ಪವಾಡ ಮೆರೆಯುವ ಸಿದ್ಧರಿಗೆ ಇಂಥ ಔಷಧ ಗಿಡ ಜನ್ಯ ಪ್ರದೇಶ ವಾಸ್ತವ್ಯಕ್ಕೆ ಪ್ರಾಶಸ್ತ್ಯ ಎನಿಸಿರಬಹುದು. ಈ ಪ್ರದೇಶ ವಿಜಯನಗರೋತ್ತರ ಸಂದರ್ಭದಲ್ಲಿ ಸಾಂಸ್ಕೃತಿಕರಣಗೊಂಡಿರುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೇ ಮಧ್ಯ ಹಾಗೂ ಆಧುನಿಕ ಕಾಲದ ಸಂಕ್ರಮಣಾವಸ್ಥೆಯಲ್ಲಿ ವೀರಭದ್ರನ ಆರಾಧನೆ ಪ್ರಾಮುಖ್ಯತೆ ಪಡೆದುಕೊಂಡು ಈಗಿರುವ ದೇವಾಲಯ ನಿರ್ಮಾಣವಾಗಿರಬಹುದು.

೩೨

ಊರು ಹಳೇ ಶಿಂಗಟಾಲೂರು
ಸ್ಮಾರಕ ಕಲ್ಮೇಶ್ವರ
ಸ್ಥಳ ಗ್ರಾಮದ ದಕ್ಷಿಣಕ್ಕೆ ತುಂಗಭದ್ರಾ ನದಿದಂಡೆ
ಕಾಲ ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಪ್ರಾಚೀನವಾಗಿರುವ ಕಲ್ಮೇಶ್ವರ ದೇವಾಲಯ ದುರಸ್ತಿಗೆ ಬಂದು ತಲುಪಿದೆ. ಅಲ್ಲದೆ ಕೆಲವು ದುರಸ್ತಿ ಕಾರ್ಯಕ್ಕೂ ಒಳಗಾಗಿದೆ. ತುಂಬಭದ್ರಾ ನದಿಯ ದಂಡೆಯ ಮೇಲೆ ಇರುವ ಈ ದೇವಾಲಯ ನೆರೆಹಾವಳಿಗೆ ಮೇಲಿಂದ ಮೇಲೆ ಒಳಗಾಗಿದೆ. ಸುಂದರವಾಗಿದ್ದ ಕಲ್ಮೇಶ್ವರ ದೇವಾಲಯದ ಒಳ ಹಾಗೂ ಹೊರಗೋಡೆಗಳು, ದೇವಾಲಯದ ಛತ್ತು ಹಾಗೂ ಅಲ್ಲಿರುವ ಕಂಬಗಳು ನಾಶವಾಗುವ ಹಂತದಲ್ಲಿವೆ. ಹೀಗಾಗಿ ಈ ಸ್ಮಾರಕವು ಕೆಲವೇ ದಿನಗಳಲ್ಲಿ ಬಿದ್ದು ಹೋಗುವ ಕುಟೀರದಂತೆ ಭಾಸವಾಗುತ್ತದೆ.

ದೇವಾಲಯ ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಲಿಂಗವಿದ್ದು ನಿತ್ಯವೂ ಪೂಜಿಸಲ್ಪಡುವುದು. ಅದಕ್ಕಿರುವ ಬಾಗಿಲವಾಡವು ಅತ್ಯಂತ ಸರಳತೆಯಿಂದ ಕೂಡಿದೆ. ಅದರ ಅಂತರಾಳ ಚಿಕ್ಕದಾಗಿದ್ದು ಮಧ್ಯದಲ್ಲಿ ನಂದಿಯ ಚಿಕ್ಕ ಶಿಲ್ಪವೊಂದನ್ನು ಇಟ್ಟಿದೆ. ಬಾಗಿಲವಾಡ ಜಾಲಂಧಾರಗಳಿಂಧ ರಚನೆಯಾಗಿದ್ದು. ಅತ್ಯಂತ ಸರಳವಾಗಿದೆ.

ನವರಂಗವು ಹೆಚ್ಚಿನ ವಿಸ್ತಾರವನ್ನು ಪಡೆದಿಲ್ಲ. ಅದರಲ್ಲಿರುವ ನಾಲ್ಕು ಕಂಬಗಳು ಕಲ್ಯಾಣ ಚಾಲುಕ್ಯರ ಮಾದರಿಯ ಕಂಬಗಳು. ಬುಡದಲ್ಲಿ ಹಾಗೂ ಕಂಬ ಗೋಡೆಯ ಭಾಗದಲ್ಲಿ ಚೌಕಾಕಾರವಾಗಿದ್ದು, ಜೊತೆಗೆ ವೃತ್ತಾಕರದ ಫಲಕ ಹಾಗೂ ಚೌಕಾಕಾರದ ಬೋಧಿಗೆಗಳನ್ನು ಹೊಂದಿವೆ. ಕಂಬಗಳ ಮಧ್ಯಭಾಗದಲ್ಲಿ ಹದಿನಾರು ಪಟ್ಟಿಕೆಗಳ ರಚನೆ ಇದೆ. ನಾಲ್ಕು ಕಂಬಗಳನ್ನೊಳಗೊಂಡಂತೆ ಎತ್ತರದ ಕಟ್ಟೆ (Rised Platform) ಇರುವುದು. ನವರಂಗದಲ್ಲಿ ಸುಂದರವಾದ ಭುವನೇಶ್ವರಿಯನ್ನು ಕೆತ್ತಿದ್ದಾರೆ. ಪೂರ್ವಾಭಿಮುಖವಾಗಿರುವ ಕಲ್ಮೇಶ್ವರ ದೇವಾಲಯಕ್ಕೆ ದಕ್ಷಿಣಾಭಿಮುಖವಾಗಿರುವ ಇನ್ನೊಂದು ಪ್ರವೇಶದ್ವಾರವನ್ನು ನಿರ್ಮಿಸಲಾಗಿದೆ. ದೇವಾಲಯದ ಹೊರಗೋಡೆ ಸಾದಾ ರಚನೆಯದು. ಗೋಡೆಗಳಲ್ಲಿ ಆಯತಾಕಾರದ ಅರ್ಧ ಕಂಬಗಳು ಕಾಣುತ್ತವೆ. ಮೇಲ್ಛಾವಣಿಯನ್ನು ಶಿಲಾ ಫಲಕಗಳಿಂದ ನಿರ್ಮಿಸಿದ್ದು ಅವು ಅಲ್ಲಲ್ಲಿ ಕುಸಿದು ಬಿದ್ದಿವೆ. ದೇವಾಲಯಕ್ಕಿರುವ ಶಿಖರ ಭಾಗ ಬಿದ್ದುಹೋಗಿದೆ. ದೇವಾಲಯದ ಬಿದ್ದುಹೋದ ಭಾಗಗಳನ್ನು ಮಣ್ಣಿನಿಂದ ರಿಪೇರಿ ಮಾಡಲಾಗಿದೆ. ಕಲ್ಮೇಶ್ವರ ದೇವಾಲಯದ ಪಕ್ಕದಲ್ಲಿರುವ ಹನುಮಂತನ ಗುಡಿಯ ಮುಂಭಾಗದಲ್ಲಿ ಪ್ರಾಚೀನ ದೇವಾಲಯವೊಂದರ ಪ್ರಾಚ್ಯಾವಶೇಷಗಳನ್ನು ಇಡಲಾಗಿದೆ. ಪ್ರಾಯಶಃ ಇವೆಲ್ಲವು ಕಲ್ಮೇಶ್ವರನ ಗುಡಿಗೆ ಸಂಬಂಧಪಟ್ಟ ಕುರುಹುಯಗಳು ಎಂಬುದನ್ನು ಊಹಿಸಬಹುದು. ನವರಂಗದಲ್ಲಿ ಕಲ್ಯಾಣ ಚಾಲುಕ್ಯರ ಶಾಸನವೊಂದಿದ್ದು ಅದನ್ನು ಕಪ್ಪುಕಲ್ಲಿನಲ್ಲಿ ರಚಿಸಲಾಗಿದೆ. ಸುಮಾರು ಎರಡೂವರೆ ಅಡಿ ಎತ್ತರವಿರುವ ಶಾಸನವು ಸ್ಪಷ್ಟತೆಯಿಂದ ಕೂಡಿದೆ. ಬಹುಶಃ ಇದೊಂದು ಅಪ್ರಕಟಿತ ಶಾಸನವಾಗಿರಬಹುದು.

ಶಿಂಗಟಾಲೂರಿಗೆ ಸಂಬಂಧಿಸಿದ ಶಾಸನವೊಂದು ಕೊಪ್ಪಳ ತಾಲೂಕಿನ ಕವಲೂರಿನಲ್ಲಲಿ ಕಂಡುಬಂದಿದೆ. ಕ್ರಿ.ಶ. ೧೨ನೇ ಶತಮಾನದ ಕಾಲಾವಧಿಗೆ ಸಂಬಂಧಪಟ್ಟ ಈ ಶಾಸನ ಚಕ್ರವರ್ತಿ ಬಿಜ್ಜಳನನ್ನು ಹೆಸರಿಸುತ್ತದೆ. ಬಿಜ್ಜಳನ ಹಾಗೂ ಆತನ ಮಗ ನಿಶ್ಯಂಕನ ಸಾಹಸ ಕಾರ್ಯವನ್ನು ವರ್ಣಿಸುತ್ತದೆ. ಮಾಸವಾಡಿ ಆಡಳಿತ ವಿಭಾಗದ ಅಧಿಪತಿಯಾದ ಕುಪ್ಪೆರಸನ ಬಗೆಗೂ ಉಲ್ಲೇಖಿಸುತ್ತದೆ. ಮೇಲೆ ಉಲ್ಲೇಖಿತ ಎಲ್ಲ ಅಧಿಪತಿಗಳ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಬಾಚಿದೇವ ಹಾಗೂ ಆತನ ಮಗ ಕುಮಾರ ಬೆಡಗಿದೇವನು (ಶಿಂಗಟಾಲೂರಿನ ಅಧಿಕಾರಿಗಳು) ಕೇರೂರು (ಕವಲೂರು) ಅಗ್ರಹಾರದ ಮಹಾಜನರಿಗೆ ದಾನ ಕೊಟ್ಟರೆಂಬ ಉಲ್ಲೇಖ ಬರುತ್ತದೆ.

೩೩

ಊರು ಹಿರೇವಡ್ಡಟ್ಟಿ
ಸ್ಮಾರಕ ಸೋಮೇಶ್ವರ
ಸ್ಥಳ ಕೋಟೆ ಆವರಣ
ಕಾಲ ೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ —-

ಮುಂಡರಗಿ- ಡಂಬಳ ರಸ್ತೆಯಲ್ಲಿರುವ ಹಿರೇವಡ್ಡಟ್ಟಿ ಗ್ರಾಮ ಐತಿಹಾಸಿಕ ಪ್ರಸಿದ್ಧವಾಗಿದೆ. ಗ್ರಾಮದಲ್ಲಿ ಪ್ರಾಚೀನ ಕೋಟೆಯ ಅವಶೇಷಗಳು ಹಾಗೂ ಕ್ರಿ.ಶ.೧೨ನೇ ಶತಮಾನಕ್ಕೆ ಸೇರಬಹುದಾದ ಮೂರು ದೇವಾಲಯಗಳು ಇವೆ. ಅವುಗಳಲ್ಲಿ ಸೋಮೇಶ್ವರ ದೇವಾಲಯ ಸ್ವಲ್ಪ ಮಟ್ಟಿಗೆ ಸುಸ್ಥಿತಿಯಲ್ಲಿರುವ ದೇವಾಲಯ. ಇದೊಂದು ತ್ರಿಕೂಟ ರಚನೆ. ಮುಖ್ಯ ಗರ್ಭಗೃಹ ಅಂತರಾಳವನ್ನು ಹೊಂದಿದ್ದರೆ, ಉಳಿದೆರಡು ಕೇವಲ ಗರ್ಭಗೃಹಗಳನ್ನು ಮಾತ್ರ ಹೊಂದಿವೆ. ಈ ಮೂರು ಗರ್ಭಗೃಹಗಳನ್ನು ಒಳಗೊಂಡಂತೆ ನವರಂಗ ನಿರ್ಮಾಣಗೊಂಡಿವೆ. ಕಕ್ಷಾಸನ ಮಂಟಪ ಹೊಂದಿರುವ ಈ ದೇವಾಲಯವನ್ನು ಮೆಟ್ಟಿಲುಗಳ ಸಹಾಯದಿಂದ ಪ್ರವೇಶಿಸಬೇಕಾಗುತ್ತದೆ.

ಕಪ್ಪುಶಿಲೆಯಲ್ಲಿ ನಿರ್ಮಾಣವಾದ ಈ ದೇವಾಲಯದ ಮುಖ್ಯ ಗರ್ಭಗೃಹದಲ್ಲಿ ವೃತ್ತಾಕಾರದ ಪೀಠವುಳ್ಳ ಲಿಂಗ ಪ್ರತಿಷ್ಠಾಪನೆಯಾಗಿದೆ. ನಿತ್ಯವೂ ಪೂಜೆಗೊಳಪಡುತ್ತದೆ. ಬಾಗಿಲವಾಡ ಅತ್ಯಂತ ಸರಳವಾದ ರಚನೆ. ಮುಖ್ಯ ಗೃಹಕ್ಕೆ ಮಾತ್ರ ಅಂತರಾಳವಿದೆ. ಇದರಲ್ಲಿ ನಂದಿಯನ್ನು ಇಡಲಾಗಿದೆ. ಪಂಚಪಟ್ಟಿಕೆಗಳಿಂದ ಕೂಡಿದ ಸಾದಾ ಬಾಗಿಲವಾಡವನ್ನು ಅಂತರಾಳ ಹೊಂದಿದೆ. ಬಾಗಿಲವಾಡದಲ್ಲಿ ಲಲಾಟದ ರಚನೆಯಿದ್ದರೂ ಅದು ಬರಿದಾಗಿದೆ. ಬಾಗಿಲವಾಡದ ಇಕ್ಕೆಲುಗಳಲ್ಲಿ ಜಾಲಾಂಧರ ಅಳವಡಿಸಲಾಗಿದೆ. ನಕ್ಷತ್ರಾಕಾರದ ಕೆತ್ತನೆಯ ಕಂಬಗಳೆರಡು ಅಂತರಾಳದಲ್ಲಿವೆ. ಉಳಿದೆರಡು ಗರ್ಭಗೃಹಗಳು ಉತ್ತರ ಹಾಗೂ ದಕ್ಷಿಣಕ್ಕೆ ಮುಖ ಮಾಡಿವೆ. ಅವುಗಳಿಗೆ ಅಂತರಾಳದ ಭಾಗಗಳಿಲ್ಲ. ಇವೆರಡೂ ಗರ್ಭಗೃಹಗಳು ಬರಿದಾಗಿವೆ. ಉತ್ತರಾಭಿಮುಖ ಗರ್ಭಗೃಹದ ಬಾಗಿಲವಾಡ ಅರ್ಧ ಕಂಬಗಳಿಂದ ರಚನೆಯನ್ನು ಹೊಂದಿದೆ. ಅದರ ಲಲಾಟ ಬರಿದಾಗಿದೆ. ಅದೇ ತರಹ ಲಕ್ಷಣಗಳನ್ನು ದಕ್ಷಿಣಾಭಿಮುಖ ಗರ್ಭಗೃಹದ ಬಾಗಿಲವಾಡ ಒಳಗೊಂಡಿದೆ.

ಮೂರೂ ಗರ್ಭಗೃಹಗಳನ್ನೊಳಗೊಂಡ ವಿಶಾಲವಾದ ನವರಂಗವಿದೆ. ಇದರಲ್ಲಿ ಪಶ್ಚಿಮಾಭಿಮುಖವಾಗಿರುವ ಎರಡು ಕೋಷ್ಠಕಗಳಿವೆ. ಅದರಲ್ಲಿ ಒಂದು ಬರಿದಾಗಿದ್ದರೆ ಇನ್ನೊಂದರಲ್ಲಿ ಮಹಿಷಾಸುರಮರ್ದಿನಿಯ ಬಿಡಿ ಶಿಲ್ಪವನ್ನು ಇಡಲಾಗಿದೆ. ಇದೇ ನವರಂಗದಲ್ಲಿ ಸರಸ್ವತಿಯ ಶಿಲ್ಪವನ್ನು ಇಡಲಾಗಿದೆ. ಸುಂದರವಾದ ಕೆತ್ತನೆಯಿಂದ ಕೂಡಿರುವ ಈ ಶಿಲ್ಪವು ಚತುರ್ಭುಜವುಳ್ಳದ್ದು. ವಿದ್ಯಾದೇವಿಯ ಈ ಮೂರ್ತಿಯ ಕೈಗಳಲ್ಲಿ ಮಣಿಸರ, ಪುಸ್ತಕ ಹಾಗೂ ಪುಷ್ಪವನ್ನು ಧರಿಸಿದೆ. ಉತ್ತರಾಭಿಮುಖ ಗರ್ಭಗೃಹದ ಪಕ್ಕದಲ್ಲಿ ಎರಡು ಶಿಲಾಶಾಸನ ಫಲಕಗಳನ್ನು ಗೋಡೆಯಲ್ಲಿ ಹೂಳಿಡಲಾಗಿದೆ. ಅವು ಹೆಚ್ಚಿನಂಶ ಸವೆದು ಹೋಗಿವೆ. ನವರಂಗವು ನಾಲ್ಕು ಚೌಕಾಕಾರದ ಕಂಬಗಳನ್ನು ಒಳಗೊಂಡಿದೆ. ಇಲ್ಲಿರುವ ಕಂಬಗಳಲ್ಲಿ ವೃತ್ತಫಲಕ, ತಟ್ಟಿಯಾಕಾರದ ಫಲಕ ಹಾಗೂ ಬೋಧಿಗೆಗಳನ್ನು ಅಳವಡಿಸಲಾಗಿದೆ. ಮಧ್ಯಭಾಗದಲ್ಲಿ ಎತ್ತರದ ಕಟ್ಟೆಯನ್ನು ಹೊಂದಿರುವುದು. ಅಲ್ಲದೆ ಸುಂದರವಾದ ಕೆತ್ತನೆಯ ಭುವನೇಶ್ವರಿಯ ಅಲಂಕರಣೆ ನವರಂಗದಲ್ಲಿದೆ. ದೇವಾಲಯಕ್ಕೆ ಕಕ್ಷಾಸನ ಮಂಟಪವಿದ್ದು ಅದರಲ್ಲೂ ಚೌಕಾಕಾರದ ಕಂಬಗಳನ್ನು ಜೋಡಿಸಲಾಗಿದೆ. ಮೆಟ್ಟಿಲುಗಳ ಸಹಾಯದಿಂದ ಈ ಮಂಟಪದ ಮೂಲಕ ದೇವಾಲಯಕ್ಕೆ ಪ್ರವೇಶವಿದೆ. ಅತ್ಯಂತ ಸರಳವಾದ ಅಧಿಷ್ಠಾನ, ನಿರಾಲಂಕರಣೆಯ ಗೋಡೆಗಳು ದೇವಾಲಯಕ್ಕಿವೆ. ಆವರಣದಲ್ಲಿ ವೀರಯೋಧನ ತ್ರುಟಿತವಾದ ಶಿಲಾಫಲಕವೊಂದನ್ನು ಇಡಲಾಗಿದೆ. ಸಪ್ತಮಾತೃಕೆಯ (ಮುರಿದಿರುವ) ಶಿಲ್ಪ ಸಹ ಈ ಆವರಣದಲ್ಲಿದೆ. ದೇವಾಲಯದ ಮೇಲ್ಛಾವಣಿಯನ್ನು ಗಾರೆ-ಗಚ್ಚಿನಿಂದ ದುರಸ್ತಿಗೊಳಿಸಿ ಶಿಖರವನ್ನು ಹೊಸದಾಗಿ ನಿರ್ಮಿಸಲಾಗಿದೆ. ಕಪ್ಪು ಶಿಲೆಯಲ್ಲಿ ರಚನೆಯಾದ ಈ ದೇವಾಲಯ ರಕ್ಷಿತವಾಗದ ಸ್ಮಾರಕವಾಗಿದೆ.

ಈ ಹಿಂದಿನ ವಿವರಣೆಯಲ್ಲಿ ನವರಂಗದಲ್ಲಿ ಎರಡು ಶಾಸನಗಳಿರುವುದನ್ನು ಉಲ್ಲೇಖಿಸಲಾಗಿದೆ. ಆದರೆ ಅವು ಪ್ರಕಟವಾಗಿರುವ ಬಗೆಗೆ ಗೊಂದಲಗಳಿವೆ. ಧಾರವಾಡ ಜಿಲ್ಲಾ ಶಾಸನ ಸೂಚಿಯ ಮುಂಡರಗಿ ತಾಲೂಕಿನ ಶಾಸನಗಳಲ್ಲಿ “ಚಿಕ್ಕವಡ್ಡಟ್ಟಿ”ಯ ಗ್ರಾಮದ ಹೆಸರಿನ ಶಾಸನವೊಂದು ಪ್ರಕಟವಾಗಿದೆ. ಆದರೆ “ಚಿಕ್ಕವಡ್ಡಟ್ಟಿ” ಕಲ್ಮೇಶ್ವರ ದೇವಾಲಯವನ್ನು ಕ್ಷೇತ್ರಕಾರ್ಯಾವಧಿಯಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಯಾವ ಶಾಸನವು ಅಲ್ಲಿ ಕಂಡುಬಂದಿಲ್ಲ. ಬಹುಶಃ ಹಿರೇವಡ್ಡಟ್ಟಿಯ ಸೋಮೇಶ್ವರ ಗುಡಿಯಲ್ಲಿರುವ ಎರಡು ಶಾಸನಗಳ ಉಲ್ಲೇಖವೆ ಕಣ್‌ತಪ್ಪಿನಿಂದ “ಚಿಕ್ಕವಡ್ಡಟ್ಟಿ” ಎಂಬ ಗ್ರಾಮದ ಹೆಸರಿನಲ್ಲಿ ಅಚ್ಚಾಗಿರಬಹುದು. ಈ ಅಭಿಪ್ರಾಯ ವ್ಯಕ್ತಪಡಿಸಲು ಕಾರಣವೇನೆಂದರೆ ಪ್ರಕಟವಾಗಿರುವ ಶಾಸನದ ಮೇಲಿರುವ ಚಿತ್ರಗಳು ಹಾಗೂ ವಿವರಣೆ ಹಿರೇವಡ್ಡಟ್ಟಿಯ ಶಾಸನಗಳಲ್ಲಿ ವ್ಯಕ್ತವಾಗಿವೆ. ಈ ವಿಷಯವನ್ನು ಶಾಸನ ವಿವರಣೆಯಲ್ಲಿ ಹೇಳಲಾಗುವುದು.

ಸೋಮೇಶ್ವರ ದೇವಾಲಯದ ಗೋಡೆಯಲ್ಲಿರುವ ಎರಡು ಶಾಸನಗಳು ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯ ಹಾಗೂ ಎರಡನೆಯ ಜಗದೇಕಮಲ್ಲನ ಕಾಲಕ್ಕೆ ಸೇರಿದವು. (ಧಾ.ಜಿ.ಶಾ.ಸೂ, ಸಂ. ರೋ. ೧೧ ಮತ್ತು ೧೨ ಪು.೪೦; SII, XI, pt. II, No.178 and SII, XV No. 29). ಕ್ರಿ.ಶ. ೧೧೨೭ರ ಶಾಸನವು ಶಿವ, ಸೂರ್ಯ, ಗಣಪ ಹಾಗೂ ಸರಸ್ವತಿ ದೇವತೆಗಳನ್ನು ಸ್ಮರಿಸುತ್ತಾ ಪ್ರಾರಂಭವಾಗುತ್ತದೆ. ಉತ್ತರಕ್ಕೆ ದ್ರೋಣಗಿರಿ, ಪಕ್ಕದಲ್ಲಿಯೇ ತಟಾಕ (ಕೆರೆ) ಇರುವ ಬಗೆಗೆ ಹಾಗೂ ಈ ಊರಿನಲ್ಲಿ ನೆಲೆಸಿರುವ ಕಲಿದೇವ ಸ್ವಾಮಿ ಶ್ರೀಪರ್ವತ (ಶ್ರೀಶೈಲ) ಹಾಗೂ ವಾರಣಾಸಿ (ಕಾಶಿ) ಗಳಿಗಿಂತ ಹೆಚ್ಚಿನ ಮಹತ್ವಪಡೆದಿರುವ ಸಂಗತಿಯನ್ನು ತಿಳಿಸಿಕೊಡುತ್ತದೆ. ಈ ಎಲ್ಲ ವಿವರಗಳು ಹಿರೇವಡ್ಡಟ್ಟಿಯಲ್ಲಿನ ಶಾಸನದಲ್ಲಿ ಇವೆ ಹೊರೆತು ಚಿಕ್ಕವಡ್ಡಟ್ಟಿಯಲ್ಲಿ ಅಲ್ಲ. ಹೀಗಾಗಿ ಈಗಾಗಲೇ ಚಿಕ್ಕವಡ್ಡಟ್ಟಿ ಗ್ರಾಮದ ಹೆಸರಿನಲ್ಲಿ ಪ್ರಕಟವಾಗಿರುವ ಶಾಸನ ಹಿರೇವಡ್ಡಟ್ಟಿ ಗ್ರಾಮಕ್ಕೆ ಸಂಬಂಧಿಸಿದ್ದು ಎಂದು ತಿಳಿಯುವುದು ಸೂಕ್ತ.

ಮಾಸವಾಡಿಯ ಪೆರ್ಮಾಡಿರಸನ (ಮಹಾಸಾಮಂತ) ಅಧಿಕಾರಿ ಕಕ್ಕರಸನಕು (ಮಹಾಮಂಡಲೇಶ್ವರ) ಒಡ್‌ವಡ್ಡಿಯನ್ನು ಉಪ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡುತ್ತಿದ್ದನು. ಈ ಅರಸನು ಸರುಕ-೧೨ ಹಾಗೂ ಅವಗವಾಡಸಿ-೧೨ರ ಭೂಪ್ರದೇಶಗಳನ್ನು ಈ ರಾಜಧಾನಿಯ ಆಡಳಿತದಿಂದಲೇ ನಿಯಂತ್ರಿಸುತ್ತಿದ್ದನೆಂಬುದನ್ನು ಶಾಸನ ವಿವರಿಸುತ್ತದೆ. ಇಲ್ಲಿರುವ ಕಲಿದೇವ ಸ್ವಾಮಿಗೆ ಭೂದಾನ ಮಾಡಿ, ಬ್ರಹ್ಮಕಪುರಿ ನಾರಾಯಣಭಟ್ಟ ಹಾಗೂ ರೂವಾರಿ ಬಮ್ಮೋಜರಿಗೆ ಅದನ್ನು ವಹಿಸಿಕೊಟ್ಟಿರುವ ಬಗೆಗೆ ಮಾಹಿತಿ ಇದೆ. ಇದೇ ಶಾಸನದಲ್ಲಿ ದ್ರೋಣಪರ್ವತದಲ್ಲಿರುವ ಭೈರವನು (ಕಪ್ಪತ ಮಲ್ಲಯ್ಯ) ನಮ್ಮನ್ನು ರಕ್ಷಿಸಲಿ ಎಂದು ಹೇಳಿದೆ. ಅಲ್ಲದೆ ಆ ಪರ್ವತದಲ್ಲಿರುವ ದಿವ್ಯ ತೀರ್ಥಗಳ ಬಗೆಗೆ ಮಾಹಿತಿ ನೀಡುತ್ತದೆ.

೩೪

ಊರು ಹಿರೇವಡ್ಡಟ್ಟಿ
ಸ್ಮಾರಕ ಕಲ್ಮೇಶ್ವರ
ಸ್ಥಳ ಸೋಮೇಶ್ವರನ ಗುಡಿಯ ಹತ್ತಿರ
ಕಾಲ ೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ —-

ಎತ್ತರದ ಕಟ್ಟೆಯ ಮೇಲೆ ನಿರ್ಮಾಣವಾಗಿದ್ದ ಈ ದೇವಾಲಯ ಸದ್ಯ ಸಂಪೂರ್ಣವಾಗಿ ಬಿದ್ದುಹೋಗಿದೆ. ತ್ರುಟಿತವಾದ ಗರ್ಭಗೃಹದ ಭಾಗ ಮಾತ್ರ ಉಳಿದಿವೆ. ಅದರಲ್ಲಿ ಪ್ರಾಚೀನ ಲಿಂಗವಿದ್ದು ಅದು ನಿತ್ಯವು ಪೂಜೆಗೆ ಒಳಪಡುತ್ತದೆ. ಗರ್ಭಗೃಹದ ಮೇಲ್ಛಾವಣಿ ಕುಸಿದಿದ್ದು ಉಳಿದಿರುವ ಗೋಡೆಗಳನ್ನು ಸ್ಥಳೀಯವಾಗಿ ಸಿಗುವ ಚಕ್ಕೆ ಕಲ್ಲುಗಳಿಂದ ದುರಸ್ತಿಗೊಳಿಸಲಾಗಿದೆ. ಈ ದೇವಾಲಯಕ್ಕೆ ಅಂತರಾಳ ಹಾಗೂ ನವರಂಗ ಇದ್ದಿರುವ ಕುರುಹುಗಳು ಕಂಡುಬರುತ್ತವೆ. ಪ್ರಾಚೀನ ಗುಡಿಯ ಅಳಿದುಳಿದ ಅವಶೇಷಗಳು ಅಲ್ಲಿಲ್ಲಿ ಬಿದ್ದಿವೆ. ದೇವಾಲಯಕ್ಕೆ ಸಂಬಂಧಿಸಿದ ಯಾವ ಶಾಸನಗಳು ಕಂಡುಬಂದಿಲ್ಲ.

೩೫

ಊರು ಹಿರೇವಡ್ಡಟ್ಟಿ
ಸ್ಮಾರಕ ಬಳ್ಲೇಶ್ವರ
ಸ್ಥಳ ಕೋಟೆ ಆವರಣ
ಕಾಲ ೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ —-

ದೂರದಿಂದ ನೋಡಿದಾಗ ಬಿದ್ದುಹೋದ ಮಂಟಪದಂತೆ ಕಾಣುವ ಈ ದೇವಾಲಯ ಗರ್ಭಗೃಹ ಹಾಗೂ ನವರಂಗಗಳನ್ನು ಹೊಂದಿದೆ. ಅದಕ್ಕಿರುವ ನವರಂಗವು ಮಂಟಪದಂತೆ ಕಾಣುತ್ತಿದ್ದು ಅದು ಸಹ ಸಂಪೂರ್ಣವಾಗಿ ಹಾಳಾಗಿದೆ. ಗರ್ಭಗೃಹದಲ್ಲಿ ಈಗಲೂ ಪ್ರಾಚೀನ ಲಿಂಗವನ್ನು ಕಾಣುತ್ತೇವೆ. ನವರಂಗದಲ್ಲಿ ಚೌಕಾಕಾರದ ನಾಲ್ಕು ಕಂಬಗಳಿದ್ದು ಅವು ವೃತ್ತಾಕಾರದ ಫಲಕ, ತಟ್ಟೆ ಆಕಾರದ ಫಲಕ ಹಾಗೂ ಬೋಧಿಗೆಗಳನ್ನು ಹೊಂದಿವೆ. ಇದರಲ್ಲಿರುವ ನಂದಿಯ ಶಿಲ್ಪ ಸುಂದರವಾದುದು. ಮುರಿದು ಹೋಗಿರುವ ಬಾಗಿಲವಾಡದ ಲಲಾಟದಲ್ಲಿ ಕುಳಿತಿರುವ ಶಿವನ ಉಬ್ಬು ಶಿಲ್ಪವನ್ನು ಕೆತ್ತಿದೆ. ಬಳಪದ ಕಲ್ಲಿನಲ್ಲಿ ಮಾಡಿರುವ ಈ ನಂದಿಯ ಶಿಲ್ಪದ ರಚನೆ ಅದರ ನಿರ್ಮಾಣದಲ್ಲಿ ಕಲಾಕಾರನು ತೋರಿರುವ ತನ್ನ ಕೈಚಳಕ ಹಾಗೂ ಕೌಶಲ್ಯವನ್ನು ಗುರುತಿಸಬಹುದು. ಮೇಲ್ಛಾವಣಿಯ ಒಳ ಭಾಗದಲ್ಲಿ ಪುಷ್ಚ ಮಾದರಿಯ ಭುವನೇಶ್ವರಿಯನ್ನು ಕೆತ್ತಿದೆ.

ಇದೇ ಗುಡಿಯ ಮುಂಭಾಗದಲ್ಲಿ ಕೋಟೆಯ ಪ್ರವೇಶದ್ವಾರವಿದೆ. ಅದರ ಗೋಡೆಯಲ್ಲಿ ಅನೇಕ ಉಬ್ಬು ಶಿಲ್ಪ ಫಲಕಗಳನ್ನು ಅಳವಡಿಸಿದೆ. ಅದರಲ್ಲಿ ಶಿವ, ಗಣಪತಿ, ವೀರಭದ್ರ, ಷಣ್ಮುಖ ಹಾಗೂ ನಂದಿಯನ್ನೊಳಗೊಂಡ ಶಿವನ ಪರಿವಾರದ ಶಿಲಾಫಲಕ ಮಹತ್ವದ್ದಾಗಿದೆ.

ಬಳ್ಳೇಶ್ವರ ಗುಡಿಯ ಪಕ್ಕದಲ್ಲಿ ಆಂಜನೇಯನ ಗುಡಿಯಿದ್ದು ಮುಂಭಾಗದಲ್ಲಿ ಒಂದು ಚಿಕ್ಕ ದೀಪಸ್ತಂಭವಿದೆ. ಅದರ ಮೇಲೆ ಅನೇಕ ಉಬ್ಬುಶಿಲ್ಪಗಳನ್ನು ಕಂಡರಿಸಿದ್ದಾರಲ್ಲದೇ ವಿಜಯನಗರ ಕಾಲದ್ದೆನ್ನಬಹುದಾದ ಅಪ್ರಕಟಿತ ಶಾಸನವು ಇಲ್ಲಿರುವ ಸ್ತಂಭದ ಮೇಲಿದೆ.