ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬರುತ್ತಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವೂ ಒಂದು ಆಡುಂಬೊಲವಾಗ ಕಾರ್ಯನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ಧಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂದು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟವಾಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನಾಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ಧಿಕ ಗಡಿರೇಖೆಗಳನ್ನು ಕಳಚಿಕೊಂಡ ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಕರ್ನಾಟಕ ದೇವಾಲಯ ಕೋಶ ಎನ್ನುವ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಅದರ ವ್ಯಾಪ್ತಿಯಲ್ಲಿ ಪ್ರತಿಯೊಂದು ಜಿಲ್ಲೆಯ ಸಮಗ್ರ ದೇವಾಲಯಗಳ ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯಲ್ಲಿ ಈಗಾಗಲೇ ಕರ್ನಾಟಕ ದೇವಾಲಯ ಕೋಶ ಯೋಜನೆಯಡಿ, ಬಳ್ಳಾರಿ ಜಿಲ್ಲೆ, ಹಾವೇರಿ ಜಿಲ್ಲೆ, ಕೊಪ್ಪಳ ಜಿಲ್ಲೆ, ಬಿಜಾಪುರ ಜಿಲ್ಲೆ, ಧಾರವಾಡ ಜಿಲ್ಲೆ ಕೋಶವು ಪ್ರಕಟವಾಗಿವೆ. ಈಗ ಪ್ರಕಟವಾಗುತ್ತಿರುವ ಗದಗ ಜಿಲ್ಲೆಯ ದೇವಾಲಯ ಕೋಶವನ್ನು ನಮ್ಮ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸದಸ್ಯರಾದ ಡಾ. ಬಾಲಸುಬ್ರಮಣ್ಯ, ಡಾ. ಸಿ.ಎಸ್. ವಾಸುವದೇವನ್ ಹಾಗೂ ಶ್ರೀ ರಮೇಶ ನಾಯಕ ಅವರು ಪರಿಶ್ರಮ ಮತ್ತು ಶ್ರದ್ಧೆಯಿಂದ ಸಿದ್ಧಪಡಿಸಿಕೊಟ್ಟಿದ್ದಾರೆ.

ಕರ್ನಾಟಕ ದೇವಾಲಯಗಳ ಭಿನ್ನ ನೆಲೆಗಳಿಂದ ಸಾಂಸ್ಕೃತಿಕ ಅಧ್ಯಯನಕ್ಕೆ ಅನುವು ಮಾಡಿಕೊಡುವ ಬಹು ಆಯಾಮಗಳನ್ನುಳ್ಳ ಅನನ್ಯತೆಯ ಪ್ರತೀಕಗಳಾಗಿವೆ. ಶಿಲ್ಪಶಾಸ್ತ್ರ, ವಾಸ್ತ್ರುಶಿಲ್ಪ, ಧರ್ಮ, ಆರಾಧನೆ, ಜಾನಪದ, ಕಸುಬುಗಳು, ಆರ್ಥಿಕತೆ-ಹೀಗೆ ಅನೇಕ ನೆಲೆಗಳಿಂದ ದೇವಾಲಯಗಳನ್ನು ಪರಿಭಾವಿಸಬಹುದು. ಶಿಲ್ಪ ಮತ್ತು ವಾಸ್ತುಶಿಲ್ಪಗಳ ಶ್ರೇಷ್ಠತೆ, ಆರಾಧನೆಗಳ ಭೂಮತೆ ಹಾಗೂ ಅವುಗಳಿಗೆ ಪೂರಕವಾದ ಜನಪ್ರಿಯತೆಯನ್ನು ಆಧರಿಸಿಕೊಂಡು ದೇವಾಲಯಗಳನ್ನು ಕೆಲವು ಸಂಶೋಧಕರು ವೈಭವೀಕರಿಸುತ್ತಾ ಬಂದಿದ್ದಾರೆ, ಬಹುಮುಖಿ ಅಧ್ಯಯನಗಳನ್ನು ನಡೆಸಿದ್ದಾರೆ. ಆದರೆ, ಒಂದು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಾಲೂಕುಗಳ ಸಣ್ಣಪುಟ್ಟ ದೇವಾಲಯಳು ಸಂಶೋಧಕರ ಅಧ್ಯಯನ ವ್ಯಾಪ್ತಿಯಿಂದ ಸಾಮಾನ್ಯವಾಗಿ ಹೊರಗೆ ಉಳಿಯುತ್ತವೆ. ಆದರೆ ಕರ್ನಾಟಕ ದೇವಾಲಯಗಳ ಕೋಶ ಎನ್ನುವ ಈ ಯೋಜನೆಯಲ್ಲಿ ಎಲ್ಲ ತಾಲೂಕುಗಳ ಎಲ್ಲ ಗ್ರಾಮಗಳ ಸಣ್ಣಪುಟ್ಟ ದೇವಾಲಯಗಳನ್ನು ಕೂಡ ಶೋಧಿಸಿ ಅವುಗಳ ವೈಶಿಷ್ಟ್ಯಗಳನ್ನು ಸಂಕ್ಷಿಪ್ತವಾಗಿ ವರದಿ ಮಾಡಲಾಗಿದೆ. ಇದೊಂದು ಮಾಹಿತಿ ಪ್ರಧಾನವಾದ ಕೋಶ. ಇಲ್ಲಿ ಒಂದೊಂದು ದೇವಾಲಯವನ್ನು ಕೇಂದ್ರೀಕರಿಸಿಕೊಂಡು ವಿಸ್ತೃತವಾದ ಅಧ್ಯಯನ ನಡೆಸಲು ಅವಕಾಶವಾಗಿದೆ. ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಅಧ್ಯಯನಗಳಿಗೆ ಈ ಮಾಹಿತಿಗಳು ಅಪೂರ್ವ ಆಕರ ಸಾಮಗ್ರಿಗಳಾಗಿವೆ. ಇಂತಹ ಒಂದು ತಳಪಾಯದ ಅಧ್ಯಯನ ನಡೆಯುತ್ತಿರುವುದು ಕರ್ನಾಟಕದ ದೇವಾಲಯಗಳಿಗೆ ಸಂಬಂಧಿಸಿದಂತೆ ಇದೇ ಮೊತ್ತ ಮೊದಲನೆಯದು. ಕನ್ನಡ ವಿಶ್ವವಿದ್ಯಾಲಯ, ಹಂಪಿಯು ತಳಮಟ್ಟದ ಅಧ್ಯಯನವನ್ನು ಒಂದು ಪ್ರಧಾನ ಆಶಯವನ್ನಾಗಿ ಇಟ್ಟುಕೊಂಡಿರುವ ಕಾರಣ ನಮ್ಮ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಇಂತಹ ದೇವಾಲಯಗಳ ಕೋಶವನ್ನು ಸಮರ್ಥವಾಗಿ ಸಿದ್ಧ ಮಾಡಿದೆ. ವ್ಯಾಪಕ ಕ್ಷೇತ್ರಕಾರ್ಯ, ಸಮರ್ಪಕ ದಾಖಲೀಕರಣ ಮತ್ತು ಭಿನ್ನ ಶಾಸ್ತ್ರಗಳ ಪರಿಜ್ಞಾನದ ಆಧಾರದ ಮೇಲೆ ಈ ಕ್ಷೇತ್ರದಲ್ಲಿ ಅಪಾರವಾದ ಕ್ಷೇತ್ರಜ್ಞಾನವುಳ್ಳ ಡಾ. ಬಾಲಸುಬ್ರಮಣ್ಯ, ಡಾ. ಸಿ.ಎಸ್. ವಾಸುದೇವನ್ ಹಾಗೂ ಶ್ರೀ ರಮೇಶ ನಾಯಕ ಅವರು ಈ ದೇವಾಲಯಗಳ ಕೋಶವನ್ನು ಸಿದ್ಧಪಡಿಸಿದ್ದಾರೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಹಾರ್ದಿಕ ಅಭಿನಂದನೆಗಳು. ಈ ಗ್ರಂಥದ ಲೇಖಕರಲ್ಲಿ ಒಬ್ಬರಾದ ಡಾ. ಬಾಲಸುಬ್ರಮಣ್ಯ ಅವರು ಅಕಾಲಿಕ ವಿಧಿವಶರಾದರು. ಪುಸ್ತಕವು ಪ್ರಕಟಣೆಗೊಳ್ಳುವ ಹೊತ್ತಿಗೆ ಅವರ ಅಗಲಿಕೆ ತುಂಬಾ ನೋವಿನ ಸಂಗತಿಯಾಗಿದೆ. ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಆಭಾರಿಯಾಗಿದ್ದೇನೆ.

ಬಿ.ಎ. ವಿವೇಕ ರೈ
ಕುಲಪತಿಗಳು