೨೧

ಊರು ಗಜೇಂದ್ರಗಡ
ಸ್ಮಾರಕ ಮರಿಯಮ್ಮನ ಗುಡಿ
ಸ್ಥಳ ಗ್ರಾಮದಲ್ಲಿ
ಕಾಲ ೧೮-೧೯ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ  

ಇತ್ತೀಚಿಗೆ ನಿರ್ಮಾಣವಾಗಿರುವ ಈ ದೇವಾಲಯ ದಕ್ಷಿಣಾಭಿಮುಖವಾಗಿದೆ. ಎತ್ತರದ ಕಟ್ಟೆಯ ಮೇಲಿದೆ. ಗರ್ಭಗೃಹ, ಅಂತರಾಳ ಹಾಗೂ ಮಂಟಪಗಳನ್ನು ಹೊಂದಿರುವುದು. ಗರ್ಭಗೃಹದಲ್ಲಿ ಉದ್ಭವಮೂರ್ತಿ ಶಿಲ್ಪವಿದ್ದು ಅದನ್ನೇ ಮರಿಯಮ್ಮಳೆಂದು ಪೂಜಿಸುತ್ತಾರೆ. ಅಂತರಾಳಕ್ಕೆ ಎರಡು ಪ್ರವೇಶಗಳನ್ನು ನಿರ್ಮಿಸಲಾಗಿದೆ. ಮಂಟಪಕ್ಕೆ ಸ್ಥಳೀಯವಾದ ಶಿಲೆಗಳನ್ನು ಬಳಸಿ ಗಟ್ಟಿಗೊಳಿಸಲಾಗಿದೆ. ದೇವಾಲಯಕ್ಕೆ ಶಿಖರವಿದ್ದು ಅದು ದ್ರಾವಿಡ ಮಾದರಿಯದ್ದು. ಶಿಖರದಲ್ಲಿ ಉಬ್ಬುಶಿಲ್ಪಗಳನ್ನು ಅಳವಡಿಸಲಾಗಿದೆ.

ಗಜೇಂದ್ರಗಡ ಹೆಸರಿನ ಪ್ರಸ್ತಾಪವಾಗುತ್ತಿದ್ದಂತೆ ಮೊದಲು ನೆನಪಿಗೆ ಬರುವುದುಜ ಅಲ್ಲಿರುವ ಕೋಟೆ. ಗಜೇಂದ್ರಗಡ ಕೋಟೆಯನ್ನು ಛತ್ರಪತಿ ಶಿವಾಜಿ ಕಟ್ಟಿಸಿದನೆಂಬ ಐತಿಹ್ಯವಿದೆ. ಆದರೆ ಅದಕ್ಕೆ ಸ್ಪಷ್ಟ ಪುರಾವೆಗಳಿಲ್ಲ. ಆದರೆ ಕೋಟೆ ಮಾತ್ರ ೧೬ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಕೋಟೆಯನ್ನು ಕಟ್ಟಿಸಿದ ಉಲ್ಲೇಖವುಳ್ಳ ಶಾಸನ (ಧಾ.ಜಿ.ಶಾ.ಸೂ, ಸಂ.ರೋ ೩೭, ಪು.೧೭;SII, XV-No 700) ಕೋಟೆಯಲ್ಲಿದೆ. ನಿಸರ್ಗ ನಿರ್ಮಿತ ಗುಡ್ಡ (ಗಡ) ವನ್ನು ರಕ್ಷಣಾ ಕಾರ್ಯಕ್ಕಾಗಿ ಬಳಸಿಕೊಂಡಿದ್ದಾರೆ. ಕಡಿದಾದ ಕಂದರಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಿಕೊಂಡು ಈ ರಕ್ಷಣಾ ಕೋಟೆಯನ್ನು ನಿರ್ಮಿಸಲಾಗಿದೆ. ಏರಿಕೊಂಡು ಹೋಗುವುದೇ ಒಂದು ಸಾಹಸದ ಕಾರ್ಯ. ಅಲ್ಲಲ್ಲಿ ಕಾವಲು ಗೋಪುರಗಳನ್ನು ಹಾಗೂ ವಿಶ್ರಾಂತಿ ತಂಗು ದಾಣಗಳನ್ನು ಕೋಟೆಯಲ್ಲಿ ನಿರ್ಮಿಸಲಾಗಿದೆ. ಗುಡ್ಡ(ಗಡ)ದ ಮೇಲ್ಭಾಗದಲ್ಲಿ ಅರಮನೆ ಹಾಗೂ ಚಿಕ್ಕಪುಟ್ಟ ವಾಸ್ತವ್ಯ ಗೃಹ ಚಟುವಟಿಕೆಗಳನ್ನು ಕಟ್ಟಿರುವ ಕುರುಹುಗಳಿವೆ. ನಿತ್ಯದ ಬಳಕೆಗೆ ಬೇಕಾಗುವ ನೀರಿನ ವ್ಯವಸ್ಥೆಗಾಗಿ ಕೋಟೆಯ ಮೇಲ್ಭಾಗದಲ್ಲಿ ಬಾವಿಗಳನ್ನು ತೋಡಲಾಗಿದೆ. ಸುಮಾರು ಎರಡು ಕಿ.ಮೀ. ವಿಸ್ತೀರ್ಣತೆಯನ್ನು ಹೊಂದಿರುವ ಈ ಕೋಟೆ, ರಕ್ಷಣಾ ದೃಷ್ಟಿಯಿಂದ ತುಂಬಾ ಸುಭದ್ರವಾಗಿದೆ. ಈ ಕೋಟೆಯು ೧೬ನೆ ಶತಮಾನದಲ್ಲಿ ನಿರ್ಮಾಣವಾಗಿರುವ ಸ್ಪಷ್ಟ ಉಲ್ಲೇಖವಿದ್ದರೂ ಅದನ್ನು ೧೬ನೇ ಶತಮಾನಕ್ಕೆ ಸೀಮಿತಗೊಳಿಸಿಕೊಳ್ಳುವುದು ಉಚಿತವಲ್ಲ. ಬಹುಶಃ ವಿಜಯನಗರ ಕಾಲದಲ್ಲಿಯೇ ಈ ಕೋಟೆಯ ನಿರ್ಮಾಣದ ಕಾರ್ಯಚಟುವಟಿಕೆಗಳು ಪ್ರಾರಂಭವಾಗಿರುವ ಸಾಧ್ಯತೆಗಳಿವೆ. ಕೋಟೆಯ ನಿರ್ಮಾಣದ ಅಧ್ಯಯನ ಕೈಗೊಂಡು ಅದರ ಬಗೆಗಿನ ಇತಿಹಾಸ ತಿಳಿಯುವ ಅವಶ್ಯಕತೆ ಇದೆ.

ಗಜೇಂದ್ರಗಡ ಪಟ್ಟಣಕ್ಕೆ ಪುರಾಣ ಕಾಲದ ಸಂಬಂಧ ಕಲ್ಪಿಸಲಾಗಿದೆ. ಮಹಿಷಾಸುರನ ಮಗ ಗಜಾಸುರನೆಂಬ ರಾಕ್ಷಸನು ಈ ಗುಡ್ಡದಲ್ಲಿ ವಾಸವಾಗಿದ್ದನೆಂಬ ಪ್ರತೀತ ಇದೆ. ಮೇವಾಡ (ಮೇವಾರ) ವಂಶಸ್ಥರು ಈ ಕೋಟೆಯನ್ನು ಆಳ್ವಿಕೆ ಮಾಡಿರುವ ಮಾಹಿತಿಗಳಿವೆ. ಘೋರ್ಪಡೆ ಎಂಬ ಮನೆತನ ಗಜೇಂದ್ರಗಡ ಕೋಟೆಯನ್ನು ಬಹು ವರ್ಷಗಳ ಕಾಲ ಆಳ್ವಿಕೆ ಮಾಡಿದೆ. ಈ ವಂಶಸ್ಥರು ಮುಧೋಳ, ಜಮಖಂಡಿ, ಸಂಡೂರು ಹಾಗೂ ಗಜೇಂದ್ರಗಡ ಪಟ್ಟಣಗಳಲ್ಲಿ ಸ್ವಾತಂತ್ಯ್ರಪೂರ್ವ ದಿನಗಳವರೆಗೆ ರಾಜ್ಯ ಭಾರ ಮಾಡಿರುವ ಇತಿಹಾಸ ಇದೆ. ಗಜೇಂದ್ರಗಡ ಪರಿಸರದಲ್ಲಿ ಬೃಹತ್‌ ಶಿಲಾಯುಗದ ಕುರುಹುಗಳು ಕಂಡುಬಂದಿವೆ (ಇಂ.ಆರಿ.೧೯೬೪೫೬ ಪುಟ.೩೧).

೨೨

ಊರು ಗಜೇಂದ್ರಗಡ
ಸ್ಮಾರಕ ಮಲ್ಲೋಜ ಬಾವಿ
ಸ್ಥಳ ಕುಷ್ಟಗಿ – ಗಜೇಂದ್ರಗಡ ರಸ್ತೆ
ಕಾಲ ೧೮-೧೯ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ  

ಗಜೇಂದ್ರಗಡ ಪ್ರದೇಶವನ್ನು ಆಳ್ವಿಕೆ ಮಾಡಿದ ಸ್ಥಳೀಯ ಘೋರ್ಪಡೆ ಮನೆತನ ಕೃಷಿ ಉಪಯೋಗಕ್ಕಾಗಿ ಈ ಬಾವಿಯನ್ನು ನಿರ್ಮಿಸಿದ್ದಾರೆ. ಬೃಹದಾಕಾರದ ಬಾವಿಯನ್ನು ಸುಮಾರು ನಲವತ್ತು ಅಡಿಗಳವರೆಗೆ ಆಳವಾಗಿ ತೋಡಲಾಗಿದೆ. ಗಟ್ಟಿಯಾದ ಕಟ್ಟಡವನ್ನು ಶಿಲ್ಪಗಳಿಂದ ಸುಂದರಗೊಳಿಸಲಾಗಿದೆ. ಪವಿತ್ರವಾದ ತೀರ್ಥದ ಕಲ್ಪನೆಯ ದೃಷ್ಟಿಯಿಂದ ಬಾವಿಯಲ್ಲಿ ಕೆಲವು ಚಿಕ್ಕ ಗರ್ಭಗೃಹಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಲಿಂಗಗಳನ್ನಿಡಲಾಗಿದೆ. ಬಾವಿಯಿಂದ ನೀರನ್ನು ಮೇಲಕ್ಕೆತ್ತಲು ಸುಮಾರು ಮುವತ್ತು ಅಡಿ ಏತನ್ನು ನಿರ್ಮಿಸಲಾಗಿದೆ. ಗರುಡ, ವಾನರ, ಮಿಥುನ, ದ್ವಾರಪಾಲಕ ಹಾಗೂ ಯಾಳಿಗಳ ಉಬ್ಬುಶಿಲ್ಪಗಳನ್ನು ಬಾವಿಯು ಒಳಗೋಡೆಯಲ್ಲಿ ಸುತ್ತಲೂ ನಿರ್ಮಿಸಲಾಗಿದೆ. ಅಲ್ಲದೆ ಮೀನು, ಹಾವು (ನಾಗ) ಹಾಗೂ ಆಮೆಯ ಉಬ್ಬುಶಿಲ್ಪಗಳನ್ನು ಅಲ್ಲಿಲ್ಲಿ ಕೆತ್ತಿದ್ದಾರೆ. ಪ್ರಾಚೀನ ಪ್ರಮುಖ ಸ್ಮಾರಕವಾದ ಈ ಬಾವಿಯು ನೂರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಜೀವ ಮೂಲವಾಗಿತ್ತು. ಸ್ಥಳೀಯರ ಅಲಕ್ಷ ಹಾಗೂ ಅಂತರ ಜಲ ಕುಸಿತದಿಂದ ಇಂಥ ಪ್ರಮುಖ ನೀರಿನ ಮೂಲ ಬತ್ತಿಹೋಗಿ ನಾಶದ ಸ್ಥಿತಿಗೆ ಬಂದು ತಲುಪಿದೆ.

೨೩

ಊರು ಜಕ್ಕಲಿ
ಸ್ಮಾರಕ ಕಲ್ಲೇಶ್ವರ
ಸ್ಥಳ ಗ್ರಾಮದಲ್ಲಿ
ಕಾಲ ೧೮-೧೯ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ —-

ಜಕ್ಕಲಿ ಗ್ರಾಮದಲ್ಲಿರುವ ಪ್ರಾಚೀನ ಕಾಲದ ಮೂರು ದೇವಾಲಯಗಳು ಸಂಪೂರ್ಣವಾಗಿ ಬಿದ್ದುಹೋಗಿದ್ದು ಅವುಗಳನ್ನು ಸ್ಥಳೀಯರು ಮತ್ತೆ ಪುನಃ ನಿರ್ಮಿಸಿದ್ದಾರೆ. ಕಲ್ಮೇಶ್ವರ ದೇವಾಲಯ ಗ್ರಾಮದ ಮಧ್ಯಭಾಗದಲ್ಲಿದ್ದು ಪೂರ್ವಾಭಿಮುಖವಾಗಿದೆ. ಹಳೆಯ ಗುಡಿಯ ಅವಶೇಷಗಳನ್ನು ಹೊಸದಾಗಿ ನಿರ್ಮಿಸಿರುವ ಗುಡಿಯ ಆವರಣದಲ್ಲಿ ಇಟ್ಟಿದ್ದಾರೆ. ಒಂದು ವೀರಗಲ್ಲು ಹಾಗೂ ಗಣಪತಿಯ ಶಿಲ್ಪವನ್ನು ಇಲ್ಲಿಡಲಾಗಿದೆ. ಸದ್ಯ ದೇವಾಲಯವು ಗರ್ಭಗೃಹ ಹಾಗೂ ಮಂಟಪಗಳನ್ನು ಹೊಂದಿರುವುದು.

ಸಿದ್ದೇಶ್ವರ (ಸಂಗಮೇಶ್ವರ) ನೆಂಬ ಹೆಸರಿನ ದೇವಾಲಯವು ಗ್ರಾಮದಲ್ಲಿದೆ. ಇದನ ನು ಸಹ ನವೀಕರಿಸಿದ್ದಾರೆ. ಗರ್ಭಗೃಹದಲ್ಲಿ ಪ್ರಾಚೀನ ಲಿಂಗವಿದೆ. ಗುಡಿಯ ಮುಂಭಾಗದಲ್ಲಿ ಶಾಸನ ಶಿಲ್ಪವನ್ನಿಡಲಾಗಿದೆ. ಅಲ್ಲದೇ ದೇವಾಲಯದ ಆವರಣದಲ್ಲಿ ಪ್ರಾಚೀನವಾದ ಬಾವಿ ಸಹ ಇದ್ದಿರುವ ಕುರುಹುಗಳಿವೆ.

ಪ್ರಾಚೀನ ವೀರಭದ್ರನ ದೇವಾಲಯವೊಂದು ಜಕ್ಕಲಿ ಗ್ರಾಮದಲ್ಲಿತ್ತು. ಅದು ಬಿದ್ದು ಹೋದನಂತರ ಅದನ್ನು ಸಹ ಪುನರ್ ನಿರ್ಮಿಸಿದ್ದಾರೆ. ಗರ್ಭಗೃಹದಲ್ಲಿ ವೀರಭದ್ರನ ಪ್ರಾಚೀನ ಶಿಲ್ಪವಿದೆ. ಹಾಗೂ ದೇವಾಲಯದ ಮುಂಭಾಗದಲ್ಲಿ ಎರಡು ಶಿಲ್ಪಗಳಿದ್ದು ಅವುಗಳಲ್ಲಿ ಒಂದು ಪುರುಷನ ಶಿಲ್ಪವಾಗಿದ್ದರೆ ಇನ್ನೊಂದು ಸ್ತ್ರೀ ಶಿಲ್ಪವಾಗಿದೆ. ಪುರುಷನ ಶಿಲ್ಪವು ಎರಡು ಕೈಗಳನ್ನು ಮುಗಿದು ದೇವರಲ್ಲಿ ಧ್ಯಾನ್ಯಾಸಕ್ತನಾಗಿ ನಿಂತಿರುವುದು. ಸ್ತ್ರೀ ಶಿಲ್ಪವು ಎರಡು ಕೈಗಳನ್ನು ಕೆಳಬಿಟ್ಟು ನಿಂತಿದೆ.

ಜಕ್ಕಲಿ ಗ್ರಾಮದಲ್ಲಿರುವ ಒಟ್ಟು ಐದು ಶಾಸನಗಳು ಪ್ರಕಟಗೊಂಡಿವೆ (ಧಾ.ಜಿ.ಶಾ.ಸೂ, ಸಂ.ರೋ ೪೦, ೪೧, ೪೨, ೪೩ ಹಾಗೂ ೪೪ ಪು.೧೭; SII, XI pt. II. No 3, SSI, XV No. 91, SII, XI pt. II No.166 SII, XI pt. II No 168 ಹಾಗೂ SII, XV 18). ಅವುಗಳಲ್ಲಿ ಒಂದು ಬಾದಾಮಿ ಚಾಲುಕ್ಯ ವಿಜಯಾದಿತ್ಯನ ಕಾಲಕ್ಕೆ ಸೇರಿದ್ದಾಗಿದ್ದರೆ ಉಳಿದವು ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸಂಬಂಧಿಸಿದವುಗಳು. ಬಾದಾಮಿ ಚಾಲುಕ್ಯರ ಕಾಲದ ಶಾಸನವು ಅಪೂರ್ಣವಾಗಿದ್ದು ಕೇವಲ ಜಕ್ಕಲಿ ಎಂಬ ಮಾಹಿತಿಯನ್ನು ಮಾತ್ರ ನೀಡುತ್ತದೆ. ಸಂಗಮೇಶ್ವರ ಗುಡಿಯಲ್ಲಿನ ಎರಡು ಶಾಸನಗಳು ಕ್ರಿಶ ೧೨ನೇ ಶತಮಾನಕ್ಕೆ ಸೇರಿದವು. ಎಡ ಗೋಡೆಯಲ್ಲಿರುವ ಶಾಸನವು ಅತ್ಯಂತ ತ್ರುಟಿತವಾಗಿದ್ದು ಹಾಗೂ ಅಸ್ಪಷ್ಟವಾಗಿದೆ. ಹೀಗಾಗಿ ಯಾವುದೇ ಮಹತ್ವದ ವಿವರಗಳು ಸಿಕ್ಕುವುದಿಲ್ಲ. ಇದೇ ಗುಡಿಯ ಮುಂಭಾಗದಲ್ಲಿರುವ ಕ್ರಿ.ಶ.೧೧೨೦ರ (ಆರನೆಯ ವಿಕ್ರಮಾದಿತ್ಯ) ತೇದಿವುಳ್ಳ ಶಾಸನವು, ಜಕ್ಕಲಿಯ ಇನ್ನೂರು ಮಹಾಜನರ ವಿನಂತಿಯ ಮೇರೆಗೆ ಕುಮಾರ ಸೋವಿ ದೇವರಸರು ಸೋಮೇಶ್ವರ ದೇವರಿಗೆ ಭೂಮಿಯನ್ನು ದಾನ ಕೊಟ್ಟಿರುವ ಮಾಹಿತಿಯನ್ನು ನೀಡುತ್ತದೆ. ಇಂದಿನ ಸಂಗಮೇಶ್ವರ ಹಾಗೂ ಸಿದ್ಧೇಶ್ವರನೆಂಬ ಹೆಸರಿನಿಂದ ಕರೆಯಲ್ಪಡುತ್ತಿರುವ ದೇವಾಲಯವನ್ನು ಶಾಸನದಲ್ಲಿ ಸೋಮೇಶ್ವರನೆಂದು ಕರೆದಿದ್ದಾರೆ. ಹಾಗೂ ಇದೊಂದು ಪ್ರಸಿದ್ಧ ಹಾಗೂ ಮುಖ್ಯವಾದ ದೇವಾಲಯ ಕೇಂದ್ರವಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ.

ಕಲ್ಮೇಶ್ವರ ದೇವಾಲಯದ ಮುಂಭಾಗದಲ್ಲಿರುವ ಶಾಸನವು ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ್ದು (ಕ್ರಿ.ಶ. ೧೧೧೭). ಇದು ಸಹ ಹೆಚ್ಚಿನ ಹಾನಿಗೊಳಗಾಗಿದ್ದು, ಬಸದಿಯೊಂದರ ಜೀರ್ಣೋದ್ಧಾರಕ್ಕಾಗಿ ದಾನ ನೀಡಿರುವ ಉಲ್ಲೇಖವನ್ನು ಹೊಂದಿದೆ. ಆದರೆ ಪ್ರಾಚೀನ ಬಸದಿಯ ಯಾವ ಕುರುಹುಗಳು ಗ್ರಾಮದಲ್ಲಿ ಕಂಡುಬಂದಿಲ್ಲ.

ವೀರಭದ್ರನ ಗುಡಿಯ ಮುಂಭಾಗದಲ್ಲಿ ಕಲ್ಯಾಣ ಚಾಲುಕ್ಯ ಮೂರನೆಯ ಸೋಮೇಶ್ವರನ ಕಾಲಕ್ಕೆ (ಕ್ರಿ.ಶ.೧೧೩೯) ಸೇರಿದ ಶಾಸನವಿದೆ. ದಂಡನಾಯಕ ಮಹಾದೇವಯ್ಯನು ಜಕ್ಕಲಿಯ ಕೆರೆಯ ನಿರ್ಮಾಣಕ್ಕಾಗಿ ಭೂಮಿಯನ್ನು ದಾನ ಕೊಟ್ಟಿರುವ ಉಲ್ಲೇಖವನ್ನು ಹೊಂದಿದೆ. ಶಾಸನದಲ್ಲಿ ಉಲ್ಲೇಖಿಸಿರುವ ದಂಡನಾಯಕ ಮಹಾ ದೇವಯ್ಯನೆಂದರೆ ಬಹುಶಃ ಇಟ್ಟಗಿಯಲ್ಲಿ ಜಗತ್ಪ್ರಸಿದ್ಧ ಮಹಾದೇವ ದೇವಾಲಯದ ನಿರ್ಮಾಣಕಾರ ದಂಡನಾಯಕ ಮಹಾದೇವಯ್ಯನೇ ಆಗಿರಬಹುದು. ಪ್ರಾಚೀನ ಇಟ್ಟಗಿ, (ಯಲ್ಬುರ್ಗಾ ತಾಲೂಕು) ಹಾಗೂ ಜಕ್ಕಲಿ (ರೋಣ ತಾಲೂಕು) ಗ್ರಾಮಗಳು ಮಾಸವಾಡಿ- ೧೪೦ರ ಆಡಳಿತ ವಿಭಾಗಕ್ಕೆ ಒಳಪಟ್ಟಿದ್ದವು. ಹಾಗೂ ಆ ಆಡಳಿತದ ವಿಭಾಗ ಹಲವು ದಶಕಗಳ ಕಾಲ ಕಲ್ಯಾಣ ಚಾಲುಕ್ಯರ ಸುಪರ್ದಿಗೆ ಒಳಗಾಗಿತ್ತು ಎಂಬುದನ್ನು ಗಮನಿಸಬಹುದು. ಜಿಲ್ಲೆಯ ಇತಿಹಾಸದಲ್ಲಿ ತನ್ನದೇ ಛಾಪು ಮೂಡಿಸಿರುವ ಜಕ್ಕಲಿ ಗ್ರಾಮವನ್ನು ಜಾಣ ಜಕ್ಕಲಿ ಎಂದು ಸಹ ಕರೆಯುತ್ತಾರೆ.

೨೪

ಊರು ಜಿಗೇರಿ
ಸ್ಮಾರಕ ಹನುಮಂತ
ಸ್ಥಳ ಕೆರೆಯ ದಂಡೆ
ಕಾಲ ೧೬-೧೭ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ದಕ್ಷಿಣ
ಸ್ಥಿತಿ ಕನಿಷ್ಠ
ಸಂರಕ್ಷಣೆ

ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣವಾಗಿರುವ ಈ ದೇವಾಲಯ ದುಸ್ಥಿತಿಯಲ್ಲಿದೆ. ಗರ್ಭಗೃಹ, ಅಂತರಾಳ ಹಾಗೂ ಪೂರ್ತಿಯಾಗಿ ಬಿದ್ದುಹೋಗಿರುವ ನವರಂಗದ ಭಾಗಗಳನ್ನು ಹೊಂದಿರುವುದು. ಅದರ ಈ ದೇವಾಲಯ ಗೋಡೆಗಳು ಗೋಡೆಗಳು ಸಹ ಭಾಗಶಃ ಕ್ಷೀಣಿಸಿವೆ. ಗರ್ಭಗೃಹದಲ್ಲಿ ಹನುಮಂತನ ಶಿಲ್ಪವಿದೆ. ಗುಡಿಯ ಹಿಂಭಾಗದಲ್ಲಿ ಬಾವಿ ಇದ್ದು ಅದು ಸಹ ಬತ್ತಿ ಹೋಗಿರುವುದು. ವಿಜಯನಗರ ನಂತರ ಕಾಲದಲ್ಲಿ ನಿರ್ಮಾಣವಾಗಿರುವ ಒಂದು ಹುಡೇವು (ಬುರುಜು) ಗ್ರಾಮದಲ್ಲಿ ಇದೆ. ಆದರೆ ಇದರ ಬಗೆಗೆ ಹೆಚ್ಚಿನ ಮಾಹಿತಿಗಳಿಲ್ಲ.

ಜಿಗೇರಿ ಗ್ರಾಮದ ಬಸ್‌ ನಿಲ್ದಾಣದ ಬಳಿ ಎರಡು ಶಾಸನಗಳಿವೆ. ಬಹುಶಃ ಅವು ಅಪ್ರಕಟಿತವಾದವು. ಇಲ್ಲಿಯು ಸಹ ಇನ್ನೆರಡು ಚಿಕ್ಕ ದೇವಾಲಯಗಳಿವೆ. ಅವುಗಳ ರಚನಾ ವಿನ್ಯಾಸ ಗಮನಿಸಿದರೆ ವಿಜಯನಗರ ನಂತರ ಕಾಲದಲ್ಲಿ ನಿರ್ಮಾಣವಾದವುಗಳೆಂಬುದನ್ನು ತಿಳಿಯಬಹುದು. ಗ್ರಾಮಕ್ಕೆ ಹಾಗೂ ಅಲ್ಲಿರುವ ದೇವಾಲಯಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

೨೫

ಊರು ತೋಟಗಂಟಿ
ಸ್ಮಾರಕ ಕಲ್ಮೇಶ್ವರ
ಸ್ಥಳ ಗ್ರಾಮದ ಪಶ್ಚಿಮ
ಕಾಲ ೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ —-

ಇದೊಂದು ಕಲ್ಯಾಣ ಚಾಲುಕ್ಯರ ನಿರ್ಮಿತಿ. ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದ್ದ ಈ ದೇವಾಲಯದಲ್ಲಿ ಸದ್ಯ ಗರ್ಭಗೃಹ ಹಾಗೂ ಅಂತರಾಳ ಭಾಗಗಳು ಮಾತ್ರ ಉಳಿದುಕೊಂಡಿವೆ. ನವರಂಗದ ಭಾಗವು ಅಲ್ಲಲ್ಲಿ ಬಿದ್ದಿದ್ದು, ಈ ಭಾಗವು ಹಾಗೇ ಉಳಿದುಕೊಂಡು ಬಂದಿದೆ. ನವರಂಗದ ನಾಲ್ಕು ಕಂಬಗಳನ್ನೊಳಗೊಂಡು ರಚನೆಯಾಗಿರುವ ಎತ್ತರದ ಕಟ್ಟೆ (Rised Platform) ಯನ್ನು ಇದುವರೆಗೂ ಕಾಣುತ್ತೇವೆ.

ಸ್ವಲ್ಪಮಟ್ಟಿಗೆ ವಿಸ್ತಾರವಾಗಿರುವ ಗರ್ಭಗೃಹವು ಲಿಂಗವನ್ನು ಹೊಂದಿರುವುದು. ಮೇಲ್ಭಾಗದಲ್ಲಿ ಭುವನೇಶ್ವರಿಯ ಅಲಂಕರಣೆ ಬಿಡಿಸಲಾಗಿದೆ. ಗರ್ಭಗೃಹದ ಒಳಗೋಡೆಯಲ್ಲಿ ಸುತ್ತಲೂ ಎತ್ತರದ ಕಟ್ಟೆಯನ್ನು ರಚಿಸಿದ್ದಾರೆ. ಬಾಗಿಲವಾಡವು ಪಟ್ಟಿಕೆಗಳನ್ನು ಹೊಂದಿರುವುದು. ಅಲ್ಲದೇ ಅದು ಸಾದಾ ರಚನೆಯಿಂದ ಕೂಡಿದೆ. ದೇವಾಲಯದ ಅಂತರಾಳವು ಬರಿದಾಗಿದೆ. ಅದರ ಬಾಗಿಲವಾಡವು ಪಂಚ ಪಟ್ಟಿಕೆಗಳಿಂದ ರಚನೆಯಾಗಿರುವುದು.

ಪ್ರಾಚೀನ ದೇವಾಲಯದ ಅಧಿಷ್ಠಾನ ಹಾಗೂ ಹೊರಗೋಢೆಯ ಭಾಗಗಳು ಹೆಚ್ಚಿನ ಅಲಂಕರಣೆಯಿಂದ ಕೂಡಿವೆ. ಅಧಿಷ್ಠಾನ ಭಾಗವು ಉಪಾನ, ಜಗತಿ, ಗಳ, ಕಪೋತ ಹಾಗೂ ತ್ರಿಪಟ್ಟಕುಮುದ ರಚನೆಯನ್ನು ಸ್ಪಷ್ಟವಾಗಿ ಹೊಂದಿರುವುದು. ಅಧಿಷ್ಠಾನದಲ್ಲಿರುವ ಜಗತಿ ಭಾಗವು ಸ್ವಲ್ಪಮಟ್ಟಿಗೆ ಎತ್ತರದವಾಗಿದೆ.

ಹೊರಗೋಡೆಯು ಅನೇಕ ರೀತಿಯ ಅಲಂಕರಣೆಯಿಂದ ಕೂಡಿರುವುದು. ಅರ್ಧ ಕಂಬಗಳನ್ನು, ಪಂಚಶಾಖೆಯನ್ನು ಹೊಂದಿರುವ ಕಂಬಗಳ ಅಲಂಕರಣೆ ಹಾಗೂ ಹೊರಗೋಡೆಯಲ್ಲಿ ಕೆತ್ತಿರುವ ಅರ್ಧಕಂಬಗಳ ಮೇಲೆ ಚಿಕ್ಕ ಶಿಖರಗಳನ್ನು ನಿರ್ಮಿಸಿದ್ದಾರೆ. ಅಲ್ಲದೇ ಕೀರ್ತಿಮುಖ, ಯಾಳಿ ಹಾಗೂ ಗಜ ಸವಾರಿ ಅಲಂಕಾರವನ್ನು ಗೋಡೆಯ ಭಾಗದಲ್ಲಿ ವಿಶೇಷವಾಗಿ ಕೆತ್ತಲಾಗಿದೆ.

ಗರ್ಭಗೃಹದ ಹೊರಗೋಡೆಯಲ್ಲಿ ಮೂರು ಕಡೆಗಳಲ್ಲಿ ಕೋಷ್ಟಗಳಿವೆ. ಇಲ್ಲಿರುವ ಎಲ್ಲ ಕೋಷ್ಠಗಳು ಬರಿದಾಗಿವೆ . ಅವುಗಳ ಮೇಲಿನ ಶಿಖರ ರಚನೆ ಆಕರ್ಷಕವಾಗಿದೆ. ಈ ಶಿಖರ ಕೆತ್ತನೆಯಲ್ಲಿ ಏಳು ತಲಗಳನ್ನು ನಿರ್ಮಿಸಿದ್ದು ಪ್ರತಿ ತಲದಲ್ಲಿ ಕೀರ್ತಿಮುಖ ಹಾಗೂ ಕಪೋತಗಳನ್ನು ರಚಿಸಿದ್ದಾರೆ. ಚಿಕ್ಕ ಶಿಖರದಲ್ಲಿ ಎರಡು ತಲಗಳ ನಂತರ ಅರ್ಧಕಂಬಗಳ ಮಂಟಪವನ್ನು ಕಂಡರಿಸಲಾಗಿದೆ. ಶಿಖರವು ಗ್ರೀವ, ಕಳಸ, ಮತ್ತು ಸ್ಥೂಪಿ ಭಾಗಗಳನ್ನು ಸಹ ಹೊಂದಿದೆ.

ದೇವಾಲಯದ ಮೇಲ್ಛಾವಣಿ ಹಾಗೂ ಶಿಖರವು ಸಂಪೂರ್ಣವಾಗಿ ಬಿದ್ದುಹೋಗಿದೆ. ಆದರೆ ಸ್ಥಳೀಯವಾಗಿ ಸಿಗುವ ಕಲ್ಲು-ಗಾರೆಗಳಿಂಧ ಮೇಲ್ಛಾವಣೆಯನ್ನು ಮಾತ್ರ ದುರಸ್ತಿಗೊಳಿಸಿದ್ದಾರೆ. ಸುಂದರವಾದ ಕೆತ್ತನೆಗಳಿಂದ ಕೂಡಿರುವ ಈ ಪ್ರಾಚೀನ ದೇವಾಲಯದ ಬಗೆಗೆ ಯಾವುದೇ ಲಿಖಿತ ಮಾಹಿತಿಗಳು ಲಭ್ಯವಾಗಿಲ್ಲ.

೨೬

ಊರು ತೋಟಗಂಟಿ
ಸ್ಮಾರಕ ಮಲ್ಲಯ್ಯ
ಸ್ಥಳ ಗ್ರಾಮದಲ್ಲಿ
ಕಾಲ ೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಉತ್ತರ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಉತ್ತರಾಭಿಮುಖವಾಗಿರುವ ಪ್ರಾಚೀನ ದೇವಾಲಯದ ಹೆಚ್ಚಿನ ಭಾಗಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಹೊಸ ದೇವಾಲಯದ ಗರ್ಭಗೃಹದಲ್ಲಿ ಪೀಠದ ಮೇಲೆ ಉಮಾ-ಮಹೇಶ್ವರ ಶಿಲ್ಪವನ್ನಿಟ್ಟು ಪೂಜಿಸುತ್ತಾರೆ. ಗ್ರಾಮಸ್ಥರು ಇದನ್ನೇ ಮಲ್ಲಯ್ಯನೆಂದು ಕರೆಯುವ ವಾಡಿಕೆ ಇದೆ. ಕೈಯಲ್ಲಿ ಡಮರು, ತ್ರಿಶೂಲ, ಖಡ್ಗ ಹಾಗೂ ಫಲಹಾರ ಪುಷ್ಪಗಳನ್ನು ಒಳಗೊಂಡಿದೆ. ಅಲ್ಲದೇ ಅಪರಿಪೂರ್ಣವಾದ ಮಹಿಷಾಸುರ ಮರ್ದಿನಿಯ ಶಿಲ್ಪವನ್ನು ಸಹ ಇಡಲಾಗಿದೆ. ಪ್ರಾಚೀನ ದೇವಾಲಯದ ಅವಶೇಷಗಳನ್ನು ಇವೆ. ದೇವಾಲಯದ ಆವರಣದಲ್ಲಿ ಸ್ಥಳೀಯರು ಇಡಲಾಗಿದೆ.

೨೭

ಊರು ನರೇಗಲ್ಲು
ಸ್ಮಾರಕ ಸೋಮೇಶ್ವರ, (ನಾರಾಯಣ) (ಬಸದಿ)
ಸ್ಥಳ ಗ್ರಾಮದಲ್ಲಿ
ಕಾಲ ೧೦ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಉತ್ತರ
ಸ್ಥಿತಿ ಸಾಧಾರಣ
ಸಂರಕ್ಷಣೆ

ಮೂಲತಃ ಇದೊಂದು ಬಸದಿ. ಹಾಗೂ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾದ ಕರ್ನಾಟಕದಲ್ಲಿನ ರಾಷ್ಟ್ರಕೂಟರ ಒಂದು ದೊಡ್ಡ ದೇವಾಲಯ. ಇದೊಂದು ವಿಶಿಷ್ಟ ಬಗೆಯ ತಲವಿನ್ಯಾಸ ಹೊಂದಿರುವ ತ್ರಿಕೂಟ ರಚನೆ ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ (ಕರ್ನಾಟಕ ಚರಿತೆ-ಸಂಪುಟ-೨ ಪುಟ. ೨೪೭).

ಸ್ಥಳೀಯರು ದೇವಾಲಯವನ್ನು ಸೋಮೇಶ್ವರ, ನಾರಾಯಣ, ಬಸದಿ ಹಾಗೂ ಕಲ್ಗುಡಿ ಎಂಬ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಗರ್ಭಗೃಹ, ತೆರೆದ ಅಂತರಾಳ ಇವುಗಳನ್ನೊಳಗೊಂಡಂತೆ ಒಂದು ನವರಂಗ ಹಾಗೂ ಮಹಾಮಂಟಪಗಳನ್ನು ಈ ದೇವಾಲಯ ಹೊಂದಿದೆ. ಮಹಾಮಂಟಪದಲ್ಲಿ ಎರಡೂ ಕಡೆಗಳಲ್ಲಿ ಆಯಾತಾಕಾರದ ಎರಡು ಕೋಣೆಗಳಿದ್ದು ಅದರಲ್ಲಿನ ಉದ್ಧವಾದ ಪೀಠದಲ್ಲಿ ಇಪ್ಪತ್ತನಾಲ್ಕು ರಂಧ್ರಗಳಿದ್ದು ಪ್ರತಿ ರಂಧ್ರದಲ್ಲೂ ತೀರ್ಥಂಕರ ಶಿಲ್ಪಗಳನ್ನು ಸ್ಥಾಪಿಸಲಾಗಿತ್ತು ಎಂಬುದು ಗಮನಿಸಬೇಕಾದ ವಿಷಯ. ಮುಖ್ಯ ಗರ್ಭಗೃಹದಲ್ಲಿ ಒಂದು ಜಿನಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾಮಂಟಪದಲ್ಲಿರುವ ಆಯತಾಕಾರದ ಗರ್ಭಗೃಹಗಳೆರಡರಲ್ಲೂ ಚತುರ್ವಿಂಶತಿ (ಇಪ್ಪತ್ತನಾಲ್ಕು ತೀರ್ಥಂಕರರು) ಜಿನರ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಆದರೆ ಅದರಲ್ಲಿದ್ದ ಯಾವ ಶಿಲ್ಪಗಳು ಈ ಹೊತ್ತು ಇಲ್ಲವಾಗಿವೆ.

ಪ್ರಾಚೀನ ಬಸದಿಯು ಬದಲಾವಣೆಗೊಂಡು ದೇವಾಲಯವಾಗಿದೆ. ಸದ್ಯ ಗರ್ಭಗೃಹದಲ್ಲಿ ಲಿಂಗವಿದೆ. ಅದರ ಪೀಠವು ನಕ್ಷತ್ರಾಕಾರದ್ದು. ಗರ್ಭಗೃಹದ ಬಾಗಿಲ ವಾಡವು ಸುಂದರ ಕೆತ್ತನೆಯಿಂದ ಕೂಡಿದೆ ಹಾಗೂ ಎರಡು ಕಡೆಗೆ ಕೋಷ್ಠಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಕೂಡಾ ಶಿಖರ ಕೆತ್ತನೆಗಳಿಂದ ಅಂದಗೊಳಿಸಲಾಗಿದೆ.

ತೆರೆದ ಅಂತರಾಳದಲ್ಲಿ ನಂದಿ ಹಾಗೂ ಆಮೆ (ಕೂರ್ಮಣ) ಶಿಲ್ಪಗಳನ್ನಿಡಲಾಗಿದೆ. ವಿಶಾಲವಾದ ನವರಂಗವು ನಾಲ್ಕು ಕಂಬಗಳನ್ನೊಳಗೊಂಡ ಎತ್ತರ ಕಟ್ಟೆಯನ್ನು ಹೊಂದಿದೆ. ಇಲ್ಲಿರುವ ಕಂಬಗಳು ಬುಡದಲ್ಲಿ ಚೌಕಾಕಾರದವು, ಮಧ್ಯಭಾಗದಲ್ಲಿ ಗಂಟೆ ಆಕಾರದ ಕೆತ್ತನೆಯಿಂದ ಕೂಡಿದ್ದು ಮೇಲ್ಭಾಗದಲ್ಲಿ ತಿರುಗಣಿಯ ಆಕಾರವನ್ನು ಹೊಂದಿರುವವು. ತಟ್ಟೆಯಾಕಾರದ ಫಲಕ ಹಾಗೂ ಬೋಧಿಗೆಗಳನ್ನು ಈ ಕಂಬಗಳು ಹೊಂದಿವೆ. ನವರಂಗದಲ್ಲಿ ಕೋಷ್ಠ (ಗೂಡು) ಗಳಿದ್ದು ಅವು ಬರಿದಾಗಿವೆ. ಅವುಗಳನ್ನು ನಾಗರ ಶೈಲಿಯ ಸುಂದರ ಶಿಖರಗಳಿಂದ ಅಂದಗೊಳಿಸಲಾಗಿದೆ. ಈ ಶಿಖರಗಳು ಸ್ಥೂಪಿ, ಹಾಗೂ ಕಲಶದ ಭಾಗಗಳನ್ನು ಹೊಂದಿವೆ. ಚೌಕಾಕಾರದ ಸುಂದರ ಕೆತ್ತನೆಯ ಜಾಲಾಂಧ್ರಗಳನ್ನು ನವರಂಗದ ಬಾಗಿಲವಾಡದ ಎರಡು ಕಡೆಗಳಲ್ಲಿ ಅಳವಡಿಸಲಾಗಿದೆ.

ವಿಶಾಲವಾದ ಮಹಾಮಂಟಪ ದೇವಾಲಯಕ್ಕಿದ್ದು ಸುಮಾರು ಹದಿನೆಂಟು ಕಂಬಗಳನ್ನು ಹಾಗೂ ಉಳಿದಂತೆ ಗೋಡೆ ಕಂಬಗಳನ್ನು ಹೊಂದಿದೆ. ಇಲ್ಲಿಯು ಸಹ ಮಧ್ಯದ ನಾಲ್ಕು ಕಂಬಗಳನ್ನೊಳಗೊಂಡಂತೆ ಎತ್ತರದ ಕಟ್ಟೆಯನ್ನು ನಿರ್ಮಿಸಲಾಗಿದೆ. ಈ ಹಿಂದೆ ವಿವರಿಸಿದಂತೆ ಮಂಟಪದಲ್ಲಿ ಇನ್ನೆರಡು ಆಯತಾಕಾರದ ಗರ್ಭಗೃಹ ಅಥವ ಕೋಣೆಗಳಿವೆ. ಇವುಗಳನ್ನು ಪ್ರತ್ಯೇಕ ಗರ್ಭಗೃಹಗಳೆಂದು ಪರಿಗಣಿಸಿದರೆ ಇದೊಂದು ವಿಶಿಷ್ಟ ತಳವಿನ್ಯಾಸ ಹೊಂದಿರುವ ಕರ್ನಾಟಕದಲ್ಲಿನ ತ್ರಿಕೂಟ ದೇವಾಲಯಗಳಲ್ಲೊಂದಾಗುತ್ತದೆ. ಸಾಲಾಗಿ ಮೂರು ಗರ್ಭಗೃಹಗಳನ್ನೊಳಗೊಂಡ ತ್ರಿಕೂಟ ರಚನೆ ಅಥವಾ ಮುಖ್ಯ ಗರ್ಭಗೃಹದ ಇಕ್ಕೆಲಗಳಲ್ಲಿ ಎದುರುಬದರಾಗಿದ್ದು ಅವುಗಳನ್ನೆಲ್ಲ ಒಳಗೊಂಡಂತೆ ಒಂದು ನವರಂಗ ಅಥವ ಮಂಟಪ ರಚನೆ ತ್ರಿಕೂಟಗಳಲ್ಲಿರುವುದು ಸಾಮಾನ್ಯ. ಆದರೆ ನರೇಗಲ್ಲದಲ್ಲಿನ ಸೋಮೇಶ್ವರ ದೇವಾಲಯದ ಮುಖ್ಯ ಗರ್ಭಗೃಹ ಪ್ರತ್ಯೇಕವಾಗಿದ್ದು ಉಳಿದೆರಡು ಗರ್ಭಗೃಹಗಳು ಮಹಾಮಂಟಪಗಳನ್ನೊಳಗೊಂಡಂತೆ ರಚನೆಯಾಗಿರುವುದು ವಿಶಿಷ್ಟವಾದುದು. ಇಲ್ಲಿರುವ ಆಯಾತಾಕರದ ಎರಡು ಗರ್ಭಗೃಹಗಳಿಗೆ ಗಾಳಿ ಹಾಗೂ ಬೆಳಕು ಬರಲು ಜಾಲಾಂಧ್ರಗಳನ್ನು ಸಹ ಅಳವಡಿಸಲಾಗಿದೆ. ಸದ್ಯ ಎರಡು ಗರ್ಭಗೃಹದಲ್ಲಿ ಲಕ್ಷ್ಮೀನಾರಾಯಣ ಹಾಗೂ ಬಲಭಾಗದ ಗರ್ಭಗೃಹದಲ್ಲಿ ಲಿಂಗ ಶಿಲ್ಪವನ್ನಿಡಲಾಗಿದೆ. ಇವುಗಳ ಬಾಗಿಲವಾಡಗಳು ಸುಂದರ ಕೆತ್ತನೆಯಿಂದ ಕೂಡಿವೆ. ಇದರಲ್ಲಿರುವ ಉದ್ದನೆಯ ಪೀಠದಲ್ಲಿ ಇಂದು ಯಾವ ಜೈನ ವಿಗ್ರಹಗಳಿಲ್ಲ. ಪ್ರಾಚೀನ ಜೈನ ಬಸದಿ ಹಲವಾರು ಮಾರ್ಪಾಡುಗಳಿಗೊಳಗಾಗಿ ಶಿವದೇವಾಲಯವಾಗಿ ಪರಿವರ್ತನೆಯಾಗಿದೆ. ದೇವಾಲಯಕ್ಕೆ ಶಿಖರವಿದೆ. ಮೂರು ತಲಗಳಲ್ಲಿರುವ (ಚಾಲುಕ್ಯ ಮಾದರಿ) ಈ ಶಿಖರವು ಸುಖನಾಸಿಯನ್ನು ಹೊಂದಿದೆ. ಕಲಶ, ಸ್ಥೂಪಿ ಹಾಗೂ ಪ್ರತಿ ತಲದಲ್ಲೂ ಶಿಲಾಫಲಕಗಳನ್ನು ಅಳವಡಿಸಲಾಗಿದೆ.

ದೇವಾಲಯವನ್ನು ಕಟ್ಟಿಸಿರುವ ಬಗೆಗೆ ಸ್ಪಷ್ಟವಾದ ಆಧಾರಗಳಿವೆ. (ಧಾ.ಜಿ.ಶಾ.ಸೂ, ಸಂ.ರೋ ೪೫ ಪು.೧೭; SII, XI Pt. I. No38) ರಾಷ್ಟ್ರಕೂಟ ಮೂರನೆಯ ಕೃಷ್ಣನ ಸಾಮಂತ ಗಂಗರಸ ಎರಡನೆಯ ಬೂತುಗನ ರಾಣಿ ಪದ್ಮಬ್ಬರಸಿಯಿಂದ ಈ ಬಸದಿ ನಿರ್ಮಾಣವಾಗಿದೆ. ಹಾಗೆ ಅವರ ದಾನ ನೀಡಿರುವ ಖಚಿತ ಮಾಹಿತಿ ಇದೆ. ಈ ಶಾಸನದ ಕಾಲ ಕ್ರಿ.ಶ. ೯೫೦ರ ಇಲ್ಲಿನ ಮೂರು ಶಾಸನಗಳು (ಧಾ.ಜಿ.ಶಾ.ಸೂ, ಸಂ.ರೋ ೪೭, ೫೦ ಹಾಗೂ ೪೯ ಪು.೧೭;SII, XI pt. I. No38, SSI, XI pt. II. No. 155 ಹಾಗೂ SII, XV No. 138) ಬ್ರಹ್ಮೇಶ್ವರ, ರೇವಣಸಿದ್ಧೇಶ್ವರ ಹಾಗೂ ಕೇದಾರ ದೇವರಗಳ ಬಗೆಗೆ ಉಲ್ಲೇಖವನ್ನು ಹೊಂದಿವೆ. ಕ್ರಿ.ಶ.೧೧೦೫ರ ತೇದಿಯ ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲದ ಶಾಸನ ಉಲ್ಲೇಖ, ಮಹಾಮಂಡಳೇಶ್ವರ ಬ್ರಹ್ಮರಸನು ಬ್ರಹ್ಮೇಶ್ವರ ದೇವರನ್ನು ಪ್ರತಿಷ್ಠಾಪಿಸಿ ಭೂಮಿಯನ್ನು ದಾನ ಮಾಡಿರುವುದನ್ನು ಬ್ರಹ್ಮೇಶ್ವರ ತಿಳಿಸುತ್ತದೆ. ರೇವಣೇಶ್ವರ ದೇವಾಲಯಕ್ಕೆ ದಾನ ನೀಡಿರುವ ಮಾಹಿತಿಯನ್ನು ಒಂದು ಶಾಸನ (೧೧೮೩ ಕ್ರಿ.ಶ) ಒಳಗೊಂಡಿದ್ದರೆ ಇನ್ನೊಂದು ಶಾಸನವು (ಕ್ರಿ.ಶ.೧೧೮೦) ಮಹಾಪ್ರಧಾನ ಕೇಶವಯ್ಯನಿಂದ ಕೇಡಾರ ದೇವಾಲಯಕ್ಕೆ ಭೂಮಿದಾನ ಮಾಡಿರುವ ಉಲ್ಲೇಖವನ್ನೊಳಗೊಂಡಿದೆ. ಆದರೆ ಮೇಲೆ ವಿವರಿಸಿದ ಶಾಸನಗಳಲ್ಲಿ ವ್ಯಕ್ತವಾಗಿರುವ ಪ್ರಾಚೀನ ದೇವಾಲಯಗಳಲ್ಲಿ ಇಂದು ಯಾವುದೇ ದೇವಾಲಯ ಕಂಡುಬರುತ್ತಿಲ್ಲ. ಬಹುಶಃ ಈ ದೇವಾಲಯಗಳ ಹೆಸರುಗಳು ಕಾಲಾಂತರದಲ್ಲಿ ಬದಲಾವಣೆಯಾಗಿರಬಹುದೇ? ಅಥವಾ ಅವುಗಳು ನಾಶವಾಗಿ ಹೋಗಿರಬಹುದೆ? ಎಂಬುದನ್ನು ವಿಶೇಷ ಕ್ಷೇತ್ರಾಧ್ಯಯನದಿಂದ ಮಾತ್ರ ತಿಳಿಯಬಹುದು. ದೇವರನ್ನು ಪ್ರತಿಷ್ಠಾಪಿಸಿರುವ ಬಗೆಗೆ ರೇವಣೇಶ್ವರ ದೇವಾಲಯಕ್ಕೆ ಸುವರ್ಣದಾನ ನೀಡಿರುವ ಹಾಗೂ ಮಹಾಪ್ರಧಾನ ಕೇಶವಯ್ಯನಿಂದ ಕೇದಾರ ದೇವರಿಗೆ ಭೂಮಿಯನ್ನು ದಾನ ಮಾಡಿರುವ ಉಲ್ಲೇಖಗಳಿವೆ. ಆದರೆ ಇಲ್ಲಿ ಉಲ್ಲೇಖಿತ ಯಾವ ದೇವಾಲಯಗಳು ಇಂದು ಕಂಡುಬರುತ್ತಿಲ್ಲ. ಬಹುಶಃ ಪ್ರಾಚೀನ ದೇವಾಲಯಗಳು ಬೇರೆ ಹೆಸರಿನೊಂದಿಗೆ ಮಾರ್ಪಾಡವಾಗಿರಬಹುದು ಅಥವಾ ಸಂಪೂರ್ಣವಾಗಿ ಬಿದ್ದುಹೋಗಿರಬಹುದು ಎಂಬ ವಿಚಾರ ಕ್ಷೇತ್ರದ ವಿವರ ಅಧ್ಯಯನ ಕೈಗೊಂಡಾಗ ಮಾತ್ರ ತಿಳಿಯುವಂಥದ್ದು.

೨೮

ಊರು ನರೇಗಲ್ಲು
ಸ್ಮಾರಕ ಕಲ್ಮೇಶ್ವರ
ಸ್ಥಳ ಗ್ರಾಮದ ಹೊರ ಭಾಗ
ಕಾಲ ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಪ್ರಾಚೀನ ದೇವಾಲಯದ ನವರಂಗ ಬಿದ್ದಿದ್ದು ಸದ್ಯ ಗರ್ಭಗೃಹ ಹಾಗೂ ಅಂತರಾಳ ಭಾಗಗಳು ಮಾತ್ರ ಇವೆ. ಇವು ಸಹ ನಾಶದ ಅಂಚಿಗೆ ಬಂದು ತಲುಪಿವೆ. ಗರ್ಭಗೃಹ ಹಾಗೂ ಅಂತರಾಳದಲ್ಲಿ ಭುವನೇಶ್ವರಿಯನ್ನು ಕೆತ್ತಲಾಗಿದೆ. ಹೊರಭಿತ್ತಿಯು ಸವೆಯುತ್ತಾ ಹೋಗುತ್ತಿದೆ. ನವರಂಗವು ಬಿದ್ದಿದ್ದು ಅದರಲ್ಲಿರುವ ಎರಡು ತಿರುಗಣಿಯ ಕಂಬಗಳು ಮಾತ್ರ ಉಳಿದುಕೊಂಡಿವೆ. ಅಲ್ಲದೇ ತೋರಣ ಕಂಬಗಳೆರಡಿದ್ದು ಅವು ಆನೆ ಹಾಗೂ ಯಾಳಿ ರಚನೆಗಳಿಂದ ಅಲಂಕೃತಗೊಂಡಿವೆ.

ನರೇಗಲ್ಲ ಕೆರೆಯ ದಂಡೆಯ ಮೇಲೆ ಈಶ್ವರ ಗುಡಿ ಒಂದಿದೆದ. ಈ ದೇವಾಲಯವು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಪ್ರಾಚೀನ ಗರ್ಭಗೃಹ ಹಾಗೂ ಅದರಲ್ಲಿರುವ ಲಿಂಗಮಾತ್ರ ಉಳಿದುಕೊಂಡಿವೆ.

೨೯

ಊರು ನರೇಗಲ್ಲು
ಸ್ಮಾರಕ ಕಲ್ಮೇಶ್ವರ
ಸ್ಥಳ ಗ್ರಾಮದಲ್ಲಿ
ಕಾಲ ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮುಖಮಂಟಪ ಭಾಗಗಳನ್ನು ಹೊಂದಿರುವುದು. ಗರ್ಭಗೃಹದಲ್ಲಿ ಲಿಂಗವಿದೆ. ಅಂತರಾಳದಲ್ಲಿ ನಂದಿಯ ಶಿಲ್ಪವನ್ನಿಡಲಾಗಿದೆ. ನವರಂಗವು ಸಾದಾ ಕೆತ್ತನೆಯ ನಾಲ್ಕು ಕಂಬಗಳನ್ನು ಹೊಂದಿರುವುದು. ಇದಕ್ಕೆ ಮುಖ ಮಂಟಪವಿದ್ದು ಅದರಲ್ಲೂ ನಾಲ್ಕು ಕಮಬಗಳಿವೆ. ದೇವಾಲಯವನ್ನು ಪ್ರವೇಶಿಸಬೇಕು. ಲಲಿತಾಸನದಲ್ಲಿ ಕುಳಿತ ಶಿವನ ಶಿಲ್ಪ, ಸಪ್ತಮಾತೃಕೆಯ ಲಿಂಗ ಹಾಗೂ ನಂದಿ ಶಿಲ್ಪಗಳು ದೇವಾಲಯದಲ್ಲಿವೆ.

ಕಲ್ಮೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಮೂರು ಶಾಸನಗಳು ಪ್ರಕಟವಾಗಿವೆ. (ಧಾ.ಜಿ.ಶಾ.ಸೂ, ಸಂ.ರೋ ೫೩, ೫೪ ಹಾಗೂ ೪೬ ಪು. ೧೭; SII, XI pt. II, No. 199, JBBRAJ, SI p. 244 ಮತ್ತು SII, XI pt. 149) ಯಾದವ ಕನ್ನರ ಅರಸನ ಕಾಲದ ಒಂದು ಶಾಸನವು ಅತಿ ತ್ರುಟಿತವಾಗಿದ್ದು ಕಲಿದೇವರಿಗೆ ಭೂಮಿಯನ್ನು ದಾನ ಮಾಡಿರುವ ಉಲ್ಲೇಖವಿದೆ. ಇನ್ನೊಂದು ಶಾಸನವು ತೇದಿ ಹಾಗೂ ಯಾವ ವಂಶದ ಆಡಳಿತಕ್ಕೆ ಸಂಬಂಧಪಟ್ಟ ಶಾನ ಎಂಬ ಸ್ಪಷ್ಟ ಮಾಹಿತಿ ಇಲ್ಲ. ಸ್ಥಳೀಯ ಶ್ರೀಮಂತ ಗಾವುಂಡನಿಂದ ಮೂಲಸ್ಥಾನ ದೇವಾಲಯಕ್ಕಾಗಿ ನೀಲಕಂಠ ಪಂಡಿತರಿಗೆ ಭೂಮಿಯನ್ನು ದಾನ ಮಾಡಿರುವ ಉಲ್ಲೇಖವಿದೆ. ಈಗೀನ ಕಲ್ಮೇಶ್ವರ ದೇವಾಲಯವನ್ನು ಕಲಿ ದೇವರು ಹಾಗೂ ಮೂಲಸ್ಥಾನ ದೇವರೆಂದು ಶಾಸನದಲ್ಲಿ ಹೇಳಲಾಗಿದೆ. ಗ್ರಾಮದ ಹಿರೇಬಾವಿಯ ಹತ್ತಿರ ಸಿಕ್ಕಿರುವ ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಶಾಸನದಲ್ಲಿ ಅಧಿಕಾರಿ ಮಾರಸಿಂಗ ಗಾವುಂಡನಿಮದ ಬಾವಿಯ ಮಠದ ಕಲಿದೇವರಿಗೆ ಭೂಮಿಯನ್ನು ಆತನು ದಾನ ಮಾಡಿರುವ ಉಲ್ಲೇಖವಿದೆ.

೩೦

ಊರು ನರೇಗಲ್ಲು
ಸ್ಮಾರಕ ತ್ರಿಪುರಾಂತಕ
ಸ್ಥಳ ಗ್ರಾಮದಲ್ಲಿ
ಕಾಲ ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮುಂಭಾಗದಲ್ಲಿ ಎತ್ತರದ ಎಟ್ಟೆಯನ್ನು ಈ ದೇವಾಲಯ ಒಳಗೊಂಡಿದೆ. ಗರ್ಭಗೃಹದಲ್ಲಿ ಲಿಂಗವಿದೆ. ತೆರೆದ ಅಂತರಾಳದಲ್ಲಿ ಬಸವ ಅಥವಾ ನಂದಿಯ ವಿಗ್ರಹವಿದೆ. ನವರಂಗವು ನಾಲ್ಕು ಕಂಬಗಳನ್ನು ಹಾಗೂ ಗೋಡೆಯ ಅರ್ಧಕಂಬಗಳನ್ನು ಹೊಂದಿರುವುದು. ನಾಲ್ಕು ಕಂಬಗಳ ಮಧ್ಯದಲ್ಲಿ ಎತ್ತರದ ಕಟ್ಟೆ ಇದೆ. ಹಾಗೂ ಭುವನೇಶ್ವರಿ ಕೆತ್ತನೆಯನ್ನು ಹೊಮದಿದೆ. ಗರ್ಭಗೃಹ ಹಾಗೂ ನವರಂಗಕ್ಕೆ ಸಾದಾ ಬಾಗಿಲವಾಡಗಳಿವೆ. ದೇವಾಲಯದ ಹೊರ ಭಿತ್ತಿಯಲ್ಲಿ ಕೋಷ್ಠ(ಗೂಡು)ಗಳನ್ನು ನಿರ್ಮಿಸಲಾಗಿದೆ. ಅವು ಬರಿದಾಗಿವೆ. ಗುಡಿಯಲ್ಲಿ ಹಾಗೂ ಹೊರ ಭಾಗದಲ್ಲೊಂದು ಹೀಗೆ ಎರಡು ಶಾಸನಗಳಿವೆ. ದೇವಾಲಯಕ್ಕೆ ದ್ರಾವಿಡ ಮಾದರಿಯ ಶಿಖರವಿದೆ.

ತ್ರಿಪುರಾಂತಕ ದೇವಾಲಯದಲ್ಲಿರುವ ಎರಡು ಶಾಸನಗಳು ಪ್ರಕಟವಾಗಿವೆ. (ಧಾ.ಜಿ.ಶಾ.ಸೂ, ಸಂ.ರೋ. ೪೮ ಹಾಗೂ ೫೨ ಪು. ೧೭; SII, XV No. 42, JBBRAS, XI p. 239 ಮತ್ತು SII, XV No. 211) ಕಲ್ಯಾಣ ಚಾಲುಕ್ಯ ಎರಡನೆಯ ಜಯಸಿಂಹನ ಶಾಸನವು ತಿಪ್ಪಣ್ಣಯ್ಯ ನಾಯಕನಿಂದ ನೆರೆಯಂಗಲ್ಲದ ತಿಪ್ಪಣೇಶ್ವರ ದೇವಾಲಯಕ್ಕಾಗಿ ತ್ರಿಲೋಚನ ಪಂಡಿತ ದೇವರಿಗೆ ಭೂಮಿಯನ್ನು ದಾನ ಮಾಡಿರುವ ಉಲ್ಲೇಖವನ್ನು ನೀಡುತ್ತದೆ. ಶಾನದಲ್ಲಿ ಉಲ್ಲೇಖಿತ ತಿಪ್ಪಣೇಶ್ವರ ದೇವಾಲಯವು ಕಾಲಾನಂತರದಲ್ಲಿ ತ್ರಿಪುರಾಂತಕ ದೇವಾಲಯವಾಗಿ ಮಾರ್ಪಾಡಾಗಿರುವ ಸಾಧ್ಯತೆಗಳಿವೆ. ಮತ್ತೊಂದು ಶಾನ ಹೊಯ್ಸಳ ಅರಸ ಎರಡನೆಯ ವೀರಬಲ್ಲಾಳನ ಕಾಲಕ್ಕೆ ಸೇರಿದುದು (ಕ್ರಿ.ಶ. ೧೧೯೭). ಶಾನವು ತ್ರುಟಿತವಾಗಿದ್ದು ಹೆಚ್ಚಿನ ಮಾಹಿತಿಯ ಲಭ್ಯತೆ ಇಲ್ಲ. ಸ್ಥಳೀಯ ಹಂಪನಾಯಕನ ವೀರಮರಣ ಹೊಂದಿರುವ ಬಗೆಗೆ ವಿವರಿಸುತ್ತವೆ. ಬಹುಶಃ ಜನಮನ್ನಣೆಗಳಿಸಿದ ಅಧಿಕಾರ ಈಗನಾಗಿದ್ದಿರಬಹುದು.