೪೧

ಊರು ರೋಣ
ಸ್ಮಾರಕ ಕಲ್ಮೇಶ್ವರ (ಈಶ್ವರ)
ಸ್ಥಳ ಪಟ್ಟಣದಲ್ಲಿ
ಕಾಲ ೧೦-೧೧ನೇ ಶತಮಾನ
ಶೈಲಿ ರಾಷ್ಟ್ರಕೂಟ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಕಲ್ಮೇಶ್ವರ ದೇವಾಲಯ ಗರ್ಭಗೃಹ, ಅಂತರಳ ಹಾಗೂ ವಿಶಾಲವಾದ ನವರಂಗಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಲಿಂಗವಿದ್ದು ಅದನ್ನು ನಿತ್ಯವು ಪೂಜಿಸುತ್ತಾರೆ. ದೊಡ್ಡದಾದ ಅಂತರಾಳ ಜೋಡಿಸಲಾಗಿದೆ. ಈ ತೋರಣದಲ್ಲಿ ಬಲಕ್ಕೆ ಬ್ರಹ್ಮ ಎಡಕ್ಕೆ ವಿಷ್ಟು ಹಾಗೂ ಮಧ್ಯದಲ್ಲಿ ನಟರಾಜನ (ಶಿವ) ಉಬ್ಬುಶಿಲ್ಪಗಳಿವೆ. ಶಿಲ್ಪಗಳ ಮಧ್ಯದಲ್ಲಿ ಚಿಕ್ಕ ಮಂಟಪಗಳನ್ನು ನಿರ್ಮಿಸಿದ್ದು ಆ ಮಂಟಪಗಳಲ್ಲಿ ಸ್ತ್ರೀದೇವತೆಗಳ ಚಿಕ್ಕದಾದ ಉಬ್ಬು ಶಿಲ್ಪಗಳನನ್‌ಉ ಕಂಡರಿಸಲಾಗಿದೆ. ಅಲ್ಲದೇ ಸುಂದರ ಪಟ್ಟಿಕೆಯಿಂದ ಇಡೀ ತೋರಣವನ್ನು ಅಂದಗೊಳಿಸಲಾಗಿದೆ. ತೋರಣ ಕಂಬಗಳಿಗೆ ಬೋಧಿಗೆಗಳನ್ನು ಸಹ ಅಳವಡಿಸಲಾಗಿದೆ.

ನವರಂಗವು ಗಂಟೆ ಆಕಾರದ ಸರಳ ರಚನೆಯ ಕಂಬಗಳನ್ನು ಹೊಮದಿದೆ. ಇಲ್ಲಿನ ಗೋಡೆಗಳಲ್ಲಿ ಕೋಷ್ಠಕ (ಗೂಡು)ಗಳನ್ನು ನಿರ್ಮಿಸಿದ್ದು ಅವು ಬರಿದಾಗಿವೆ. ಆದರೆ ಪ್ರಾಚೀನ ಶಿಲ್ಪಗಳ ಪೀಠ ಬಾಗಗಳನ್ನು ಇಲ್ಲಿರುವ ಕೋಷ್ಠಗಳಲ್ಲಿ ಈಗಲೂ ಕಾಣುತ್ತೇವೆ. ಒಳಗೋಡೆಯಲ್ಲಿ ಅರ್ಧಕಂಬಗಳ ರಚೆನೆಯು ಇದೆ. ಬಿಡಿ ಶಿಲ್ಪಗಳಾದ ಸಪ್ತಮಾತೃಕೆ, ಗಣಪತಿ ಹಾಗೂ ಲಿಂಗಗಳನ್ನು ನವರಂಗದಲ್ಲಿಡಲಾಗಿದೆ.

ದೇವಾಲಯಕ್ಕೆ ಒಂದು ಚಿಕ್ಕ ಮುಖಮಂಟಪವನ್ನು ನಿರ್ಮಿಸಲಾಗಿದೆ. ಇದರಲ್ಲಿರುವ ಕಂಬಗಳು ಅಷ್ಟಕೋನಾಕಾರದವು. ಮುಖಮಂಟಪದ ಮೇಲ್ಛಾವಣಿಯ ಕಪೋತದ ಭಾಗದಲ್ಲಿ ಕೆವಲು ಬಿಡಿ ಶಿಲ್ಪಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಪ್ರಾಣಿ ಹಾಗೂ ಪಕ್ಷಿಗಳ ಶಿಲ್ಪಗಳು ಸೇರಿವೆ. ಮುಖಮಂಟಪದ ಅಧಿಷ್ಠಾನ ಭಾಗವು ಮಣ್ಣಿನಲ್ಲಿ ಹೂತುಹೋಗಿದೆ.

ಕಲ್ಮೇಶ್ವರ ಗುಡಿಯ ಶಿಖರವು ಎರಡು ತಲಗಳಿಂದ ಕೂಡಿರುವುದು. ಅದರಲ್ಲಿ ಗ್ರೀವ ಹಾಗೂ ಕೀರ್ತಿಮುಖಗಲ ರಚನೆಯನ್ನು ಕಾಣುತ್ತೇವೆ. ಅಲ್ಲದೇ ಶಿಖರ ಭಗದಲ್ಲಿ ಕೆಲವು ಬಿಡಿ ಶಿಲ್ಪಗಳನ್ನು ಜೋಡಿಸಲಾಗಿದೆ. ಆದರೆ ಅವುಗಳು ನಾನಾ ಕಾಣಗಳಿಗಾಗಿ ಸವೆದು ಹೋಗಿದ್ದರಿಂದ ಅವುಳಗನ್ನು ಸ್ಪಷ್ಟವಾಗಿ ಗುರುತಿಸುವುದು ಕಷ್ಟಸಾಧ್ಯ. ದೇವಾಲಯವನ್ನು ಕಣಶಿಲೆಯಲ್ಲಿ ನಿರ್ಮಿಸಲಾಗಿದೆ.

ದೇವಾಲಯಕ್ಕೆ ಸಂಬಂಧಿಸಿದಂತೆ ಮೂರು ಶಾಸನಗಳು ಪ್ರಕಟಗೊಂಡಿವೆ. (ಧಾ.ಜಿ.ಶಾ.ಸೂ, ಸಂ.ರೋ ೭೮, ೮೦ ಮತ್ತು ೮೩ ಪು. ೧೮; SII, XI pt. I No. 59 EL, XI P. 222-26 ಮತ್ತು SII, XV 90) ಕ್ರಿ.ಶ. ೧೦೨೨ರ ತೇದಿವುಳ್ಳ ಶಾಸನ ಕಲ್ಯಾಣ ಚಾಲುಕ್ಯ ಎರಡನೆಯ ಜಯಸಿಂಹನಿಗೆ ಸಂಬಂಧಿಸಿದ್ದು, ಸಂಕಿಮಯ್ಯ ಕಟ್ಟಿಸಿದ ಮೂಲಸ್ಥಾನ ದೇವಾಲಯಕ್ಕೆ ಮಾಚಿಮಯ್ಯನು ಭೂಮಿಯ ದಾನಮಾಡಿರುವ ಉಲ್ಲೇಖವಿದೆ. ಶಾಸನದಲ್ಲಿ ಹೆಸರಿಲಾಗಿರುವ ಸಾಂಕಿಮಯ್ಯನು ಮಾಚಿಮಯ್ಯನ ತಮ್ಮನಾಗಿದ್ದಾನೆ. ಹಾಗೂ ಶಾಸನದಲ್ಲಿ ಉಲ್ಲೇಖಿತ ಮೂಲಸ್ಥಾನ ದೇವಾಲಯವು ಕಲ್ಮೇಶ್ವರ ದೇವಾಲಯವಾಗಿ ಮಾರ್ಪಟ್ಟಿರುವ ಸಾಧ್ಯತೆಗಳಿವೆ ಆರನೆಯ ವಿಕ್ರಮಾದಿತ್ಯನ (ಕ.ಚಾ) ಕಾಲದ ಒಂದು ಶಾಸನವು ಈ ದೇವಾಲಯದ ಹತ್ತಿರ ಸಿಕ್ಕಿದೆ. ಅದೊಂದು ತುಣುಕಾಗಿದ್ದು ಚಾಲುಕ್ಯ ಪ್ರಶಸ್ತಿಯ ಕೆಲವು ಸಾಲುಗಳು ಅದರಲ್ಲಿ ಉಲ್ಲೇಖಿತವಾಗಿವೆ. ಇನ್ನೊಂದು ಶಾಸನವು ೧೨ನೇ ಶತಮಾನಕ್ಕೆ ಸೇರಿದ್ದು. ಅದು ಕೂಡಾ ಕಲ್ಮೇಶ್ವರ ದೇವಾಲಯಕ್ಕೆ ಸುವರ್ಣದಾನ ನೀಡಿರುವ ಮಾಹಿತಿ ನೀಡುತ್ತದೆ. ಹಾಗೂ ಶಾಸನವು ಅತಿ ತ್ರುಟಿತವಾಗಿರುವುದರಿಮದ ಸ್ಪಷ್ಟವಾಗಿ ಏನನ್ನು ಹೇಳಲಿಕ್ಕಾಗದು.

೪೨

ಊರು ರೋಣ
ಸ್ಮಾರಕ ಲೋಕನಾಥ (ಬಸವೇಶ್ವರ)
ಸ್ಥಳ ಗೌಡರ ಓಣಿ
ಕಾಲ ೧೦-೧೧ನೇ ಶತಮಾನ
ಶೈಲಿ ರಾಷ್ಟ್ರಕೂಟ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇದೊಂದು ದ್ವಕೂಟ ದೇವಾಲಯ, ಪೂರ್ವ ಪಶ್ಚಿಮಾಬಿಮುಖವಾಗಿರು(ಎದುರು-ಬದರು)ವ ಎರಡು ಗರ್ಭಗೃಹಗಳಿವೆ. ಇವುಗಳೆರಡನ್ನೂ ಒಳಗೊಂಡಂತೆ ಒಂದು ನವರಂಗವಿದೆ. ಪಶ್ಚಿಮಾಭಿಮುಖ ಗರ್ಭಗೃಹದ ಸಮೀಪವೆ ದೇವಾಲಯಕ್ಕೆ ಪ್ರವೇಶವನ್ನು ಕಲ್ಪಸಿಲಾಗಿದೆ. ಆದರೆ ಪ್ರಾಚೀನ ಪ್ರವೇಶವನ್ನು ಮುಚ್ಚಿಸಿದ್ದರಿಮದ ಅದನ್ನು ನಿರ್ದಿಷ್ಟವಾಗಿ ಗುರುತಿಸುವುದು ಕಷ್ಟಸಾಧ್ಯ.

ಮುಖ್ಯ ಗರ್ಭಗೃಹದಲ್ಲಿ (ಪೂರ್ವಾಭಿಮುಖ) ಲಿಂಗವಿದೆ. ಅದರ ಬಾಗಿಲವಾಡವು ಸಾದಾ ರಚನೆಯದು ಹಾಗೂ ಪಟ್ಟಿಕೆಗಳನ್ನು ಹೊಂದಿದೆ. ಇದಕ್ಕೊಂದು ಅಂತರಾಳವಿದೆ. ಅದು ಬರಿದಾಗಿದೆ. ಪಶ್ಚಿಮಾಭಿಮುಖ ಗರ್ಭಗೃಹದಲ್ಲಿ ಲಿಂಗವಿದೆ. ಅದು ಪೀಠ ಹಾಗೂ ರುದ್ರಭಾಗಗಳನ್ನು ಹೊಮದಿರುವುದು. ಅದಕ್ಕಿರುವ ಅಂತರಾಳವು ಧಕ್ಕೆಗೊಳಗಾಗಿದೆ.

ನವರಂಗವು ನಾಲ್ಕು ಕಂಬಗಳನ್ನು ಒಳಗೊಂಡಿದೆ. ಹಾಗೂ ಗೋಡೆಯಲ್ಲಿ ಅರ್ಧ ಕಂಬಗಳಿವೆ. ನಂದಿ ಹಾಗೂ ಸಪ್ತಮಾತೃಕೆಯ ಶಿಲ್ಪಗಳನ್ನು ನವರಂಗದಲ್ಲಿಡಲಾಗಿದೆ. ವಿಶಾಲವಾದ ನವರಂಗವನ್ನು ದುರಸ್ತಿಗೊಳಿಸಲಾಗಿದೆ. ಇಲ್ಲಿರುವ ಕಂಬಗಳು ರಾಷ್ಟ್ರಕೂಟರ ಆಳ್ವಿಕೆಯ ಕೊನೆಯ ಘಟ್ಟದಲ್ಲಿ ನಿರ್ಮಾಣವಾದವುಗಳೆಂದು ಎಂದು ತಿಳಿದುಬರುವುದು.

ಅಧಿಷ್ಠಾನವು ಮಣ್ಣಿನಲ್ಲಿ ಸಂಪೂರ್ಣವಾಗಿ ಹೂತುಹೋಗಿರುವುದು. ಹೊರಗೋಡೆಯಲ್ಲಿ ಅರ್ಧಕಂಬಗಳನ್ನು ರಚಿಸಲಾಗಿದೆ. ಆದರೆ ಗೋಡೆಯ ಹೆಚ್ಚಿನ ಭಾಗವು ಸವೆದು ಹೋಗಿದೆ. ಹಾಗೂ ದೇವಾಲಯದ ಮೇಲ್ಛಾವಣಿಯ ಭಾಗಶಃ ನಾಶದ ಸ್ಥಿಗೆ ಬಂದು ತಲುಪಿದೆ. ಪ್ರಾಚೀನ ದೇವಾಲಯದ ಅನೇಕ ಅವಶೇಷಗಳು ಗುಡಿಯ ಸುತ್ತಲೂ ಬಿದ್ದಿವೆ. ಸೂರ್ಯನ ಪೀಠ ಹಾಗೂ ತೃಟಿತವಾದ ನಮಹಿಷಾಸುರ ಮರ್ದಿನಿಯ ಶಿಲ್ಪಗಳು ಇಲ್ಲಿವೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಮೇಲಕೆ ವಿವರಿಸಿದ ಮಾಹಿತಿಗಳಂತೆ ಲೋಕನಾಥ ದೇವಾಲಯದ ಸ್ಥತಿಗತಿಗಳಿದ್ದವು. ಆದರೆ ಇದೇ ದೇವಾಲಯ ಕಳೆದ ಇಪ್ಪತ್ತೈದು ವರ್ಷಗಳ ಹಿಮದೆ ಬೇರೆಯೆ ಸ್ಥಿತಿಯಲ್ಲಿತ್ತು. ಆ ಸಂದರ್ಭದಲ್ಲಿ ಕ್ಷೇತ್ರಕಾರ್ಯ ಕೈಗೊಂಡ ವಿದ್ವಾಂಸರು ಈ ದೇಢವಾಲಯದ ಬಗೆಗೆ ಕೆಳಗಿನ ಮಾಹಿತಿ ನೀಡಿದ್ದಾರೆ. ರೋಣದಲ್ಲಿ ಚಾಲುಕ್ಯ ವಾಸ್ತುಶಿಲ್ಪದ ಪ್ರಾರಂಭಿಕ ಹಂತದ ಕೆಲವು ದೇವಾಲಯಗಳಿವೆ. ಲೋಕನಾಥ ದೇವಾಲಯದಲ್ಲಿ ಒಂದು ಗರ್ಭಗೃಹ ಒಂದು ಅರ್ಧಮಂಟಪ ಮತ್ತು ಚೌಕಾಕಾರದ ಒಂದು ನವರಂಗ ಇದೆ. ದೇವಾಲಯದ ಹೊರಗೆ ತುಸು ದೂರದಲ್ಲಿ ಒಂದು ಗರ್ಭಗುಡಿಯಿದೆ. ಅದು ಸೂರ್ಯನಿಗಾಗಿಯೇ ನಂದಿಗಾಗಿಯೋ ನಿರ್ಮಿತವಾಗಿರಬೇಕು ಎಂಬ ಮಾಹಿತಿ ನೀಡಿದ್ದಾರೆ. (ಡಾ. ಎಸ್. ರಾಜಶೇಖರ, ಕರ್ನಾಟಕ ಚರಿತ್ರೆ, ಸಂಪುಟ ೨, ಪುಟ, ೨೫೪). ಆದರೆ ಅವರು ಉಲ್ಲೇಖಿಸಿದ ಸೂರ್ಯನ ಹಾಗೂ ನಂದಿಯ ಗುಡಿಯು ಪ್ರಸ್ತುತ ಸಂದರ್ಭಗಳಲ್ಲಿ ಇಲ್ಲ. ಹಾಗೂ ಮೂಲ ಗುಡಿಯು ಈಗ ದ್ವಕೂಟವಾಗಿ ಪರಿವರ್ತಿತವಾಗಿರುವುದು ಪ್ರಮುಖವಾದ ಸಂಗತಿ. ಸೂರ್ಯನ ಪೀಠವುಳ್ಳ ಅವಶೇಷದ ತುಂಡು ಮಾತ್ರ ದೇವಾಲಯದ ಆವರಣದಲ್ಲಿದೆ.

೪೩

ಊರು ರೋಣ
ಸ್ಮಾರಕ ಬಸವಣ್ಣ (ದ್ರೋಣಾಚಾರ್ಯ) ಗುಡಿ
ಸ್ಥಳ ಪಟ್ಟಣದಲ್ಲಿ
ಕಾಲ ೧೦-೧೧ನೇ ಶತಮಾನ
ಶೈಲಿ ರಾಷ್ಟ್ರಕೂಟ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಪ್ರಾಚೀನ ಬಸವಣ್ಣನ ದೇವಾಲಯವನ್ನು ಸ್ಥಳೀಯರು ಸಂಪೂರ್ಣವಾಗಿ ಮರು ನಿರ್ಮಿಸಿದ್ದಾರೆ. ಹೀಗಾಗಿ ಹಳೆಯ ದೇವಾಲಯದ ಕುರುಹುಗಳು ಉಳಿದಿಲ್ಲ. ಗರ್ಭಗೃಹ ಹಾಗೂ ದೊಡ್ಡದಾದ ಮಂಟಪವನ್ನು ಕಟ್ಟಲಾಗಿದೆ. ಅದರಲ್ಲಿ ಗಾರೆ, ಗಚ್ಚು ಹಾಗೂ ಕಬ್ಬಿಣವನ್ನು ಬಳಸಲಾಗಿದೆ. ಇಲ್ಲಿನ ಗೂಡಿನಲ್ಲಿ ಸಪ್ತಮಾತೃಕೆಯ ಶಿಲ್ಪವನ್ನಿಡಲಾಗಿದೆ.

ರೋಣ ಪಟ್ಟಣದ ಇತಿಹಾಸವನ್ನು ಕುರಿತಂತೆ ಪರಿಗಣಿಸುವಾಗ ಈ ದೇವಾಲಯ ಅತ್ಯಂತ ಪ್ರಮುಖವಾಗಿ ನಿಲ್ಲುವುದು. ಅದು ರೋಣದಲ್ಲಿ ನಿರ್ಮಾಣವಾಗಿರುವ ದೇವಾಲಯಗಳಲ್ಲಿ ಪತೀ ಪ್ರಾಚೀನವಾದುದು. ಈ ಗುಡಿಯಲ್ಲಿ ಒಟ್ಟು ನಾಲ್ಕು ಶಾಸನಗಳು ದೊರಕಿದ್ದು ಅವು ಪ್ರಕಟವಾಗಿವೆ. (ಧಾ.ಜಿ.ಶಾ.ಸೂ, ಸಂ.ರೋ ೭೫, ೭೬, ಹಾಗೂ ೭೯ ಪು. ೧೮; EL, XII p. 183-85, SII, XI, pt. I No. 491 EL, XII p. 185-87 ಮತ್ತು SII, XI pt. II NO. 159) ರಾಷ್ಟ್ರಕೂಟ ಒಂದನೆಯ ಅಮೋಘವರ್ಷನ ಕ್ರಿ.ಶ. ೮೭೪ರ ತೇದಿವುಳ್ಳ ಶಾಸನ ಇಲ್ಲಿದೆ. ಬಲ್ಲವರಸರಿಂದ ರೋಣದ ಮಹಾಜನರಿಗೆ ತುಪ್ಪದ ಸುಂಕ ದಾನ ಕೊಟ್ಟ ಉಲ್ಲೇಖವಿದೆ. ಮಹಾಜನರಿಂದ ರೋಣ ಪಟ್ಟಣವು ಆ ದಿನಗಳಲ್ಲಿ ಒಂದು ಪ್ರಸಿದ್ಧ ಅಗ್ರಹಾರವಾಗಿತ್ತೆಂಬುದು ಪ್ರಮುಖ ಸಂಗತಿ. ಈ ಶಾಸನವು ರಾಷ್ಟ್ರಕೂಟರಿಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಸಿಗುವ ಮೊದಲು ಶಾಸನವು ಆಗಿದೆ. ಇದೇ ಗುಡಿಯಲ್ಲಿರುವ ಇನ್ನೊಂದು ಶಾಸನ ತುರಗಬೆಡಂಗನದು. ಅದರ ಕಾಲ ಕ್ರಿ.ಶ. ೯ನೇ ಶತಮಾನ. ಮಹಾಜನರಿಗೆ (ಅಗ್ರಹಾರಕ್ಕೆ) ಬನಿಯ ಬಿಟ್ಟಿರುವ ಉಲ್ಲೇಖವಿದೆ. ಶಾಸನದಲ್ಲಿ ಉಲ್ಲೇಖಿತ ಬನಿಯ ಬಗೆಗೆ ಹೆಚ್ಚಿನ ಅಧ್ಯಯನ ಆಗಬೇಕಾಗಿದೆ.

ಮುಖ್ಯವಾದ ಇನ್ನೊಂದು ಸಂಗತಿ ಎಂದರೆ ಬಸವಣ್ಣನ ಗುಡಿಯಲ್ಲಿ ದ್ರೋಣಾಚಾರ್ಯ ಎಂಬ ಹೆಸರಿ ಒಂದು ಬಿಡಿ ಶಿಲ್ಪವನ್ನಿಡಲಾಗಿದೆ. ಸುಮಾರು ನಾಲ್ಕು ಅಡಿ ಎತ್ತರದ ಈ ಶಿಲ್ಪವು ಪದ್ಮಾಸನದಲ್ಲಿದೆ. ಬಸವಣ್ಣನ ದೇವಾಲಯದ ಒಂದು ಕೋಷ್ಠ(ಗೂಡಿ)ನಲ್ಲಿ ಇದನ್ನಿಡಲಾಗಿದೆ. ಹೇಹವನ್ನು ಮುತ್ತಿನ ಸರಗಳಿಂದ ಅಲಂಕಾರಗೊಳಿಸದ್ದಾರೆ. ಜಡೆಗಳನ್ನು ಎರಡು ಭುಜದ ಮೇಲೆ ಇಳಿಬಿದ್ದಿವೆ. ಕೊರಳಲ್ಲಿ ಸರದ ಅಲಂಕಾರವನ್ನು ಮಾಡಲಾಗಿದೆ. ಯಜ್ಞೋಪವಿತ ಇದ್ದು ಎದೆಯ ಹಾಗೂ ಉದರದ ಕೆಳ ಭಾಗದಲ್ಲಿ ಸರದ ಪಟ್ಟಿಯನ್ನು ಚಿತ್ರಿಸಿದ್ದಾರೆ. ಪದ್ಮಾಸನದಲ್ಲಿರುವ ಈ ಶಿಲ್ಪದ ಕೆಲಭಾಗದಲ್ಲಿ ಗದೆಯನ್ನು ಚಿತ್ರಿಸಲಾಗಿದೆ.

ಈ ಗುಡಿಯ ಬಲಗಡೆ (ಕಂಬಿ ಓಣಿ) ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲ್ಕೆ ಸೇರಿದ ಶಾಸನವೊಂದಿದೆ. ಕ್ರಿ.ಶ. ೧೧೧೧ ಇದರ ಕಾಲ. ಹೈಂಗಕುಲದ ನಾಗ ವಿಷ್ಣುವಿನಿಂದ ಮೂಲಸ್ಥಾನ ದೇವರಿಗೆ ಭೂಮಿ ಹಾಗೂ ಸುವರ್ಣ ದಾನ ಮಾಡಿರುವ ಉಲ್ಲೇಖವಿದೆ. ಶಾಸನ ಉಲ್ಲೇಖಿತ ಮೂಲಸ್ಥಾನ ದೇವರೆಂದರೆ ಈಗಿರುವ ಕಲ್ಮೇಶ್ವರ ದೇವಾಲಯ. ಇದೇ ಗುಡಿಯ ಮುಂಭಾಗದಲ್ಲಿ ಇನ್ನೊಂದು ಶಾಸನವಿದೆ. ಅದು ತೃಟಿತವು ಹಾಗೂ ಅಪೂರ್ಣವಾಗಿರುವುದರಿಂದ ಸ್ಪಷ್ಟವಾದ ಯಾವುದೇ ಮಾಹಿತಿ ಸಿಕ್ಕುವುದಿಲ್ಲ.

೪೪

ಊರು ರೋಣ
ಸ್ಮಾರಕ ಈಶ್ವರ ದೇವಾಲಯ
ಸ್ಥಳ ಮಾಳಗೌಡರ ಓಣಿ
ಕಾಲ ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ ಹಾಗೂ ಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಲಿಂಗವಿದ್ದು ಅದರ ಬಾಗಿಲವಾಡವು ಸಾದಾ ರಚನೆಯದ್ದು, ಅಂಗತರಾಳವು ಚಿಕ್ಕದಾಗಿದೆ. ಅದರಲ್ಲಿ ಗಂಟೆಯಾದಾರದ ಹಾಗೂ ಚೌಕಾಕಾರದ ಎರಡು ಕಂಬಗಳಿವೆ.

ನವರಂಗದಲ್ಲಿ ನಾಲ್ಕು ಕಂಬಗಳಿವೆ. ಅವು ತಿರುಗಣಿಯ ಮಾದರಿಯವುಗಳು. ಅಲ್ಲದೇ ಕಡಿಮೆ ಅಲಂಕಾರದಿಂದ ಕೂಡಿವೆ. ನವರಂಗದಲ್ಲಿ ನಂದಿಯ ಶಿಲ್ಪವನ್ನಿಡಲಾಗಿದೆ. ನವರಂಗದಲ್ಲಿ ಗೋಡೆಯ ಅರ್ಧಕಂಬಗಳು ಎಲೆ ಹಾಗೂ ಹಂಟೆ ಆಕಾರದ ರಚನೆಯನ್ನು ಹೊಂದಿವೆ. ನವರಂಗಕ್ಕೆ ಬಾಗಿಲವಾಡವಿದ್ದು ಅದು ಚಿಕ್ಕದಾಗಿ ಹಾಗೂ ಸಾದಾ ಕೆತ್ತನೆಯಿಂದ ಕೂಡಿದೆ.

ದೇವಾಲಯದ ಹೊರಗೋಡೆಯಲ್ಲಿಯು ಅರ್ಧಕಂಬಗಳನ್ನು ಕೆತ್ತಲಾಗಿದೆ. ಎರಡು ತಲಗಳನ್ನು ಹೊಂದಿರುವ ಶಿಖರವಿದೆ. ಆದರೆ ಪ್ರಕೃತಿ ವಿಕೋಪದಿಂದ ಶಿಖರವು ದಿನೇ ದಿನೇ ಕ್ಷೀಣಿಸುತ್ತಿದೆ. ದೇವಾಲಯದ ಅಧಿಷ್ಠಾನವು ಮಣ್ಣಿನಲ್ಲಿ ಹೂತುಹೋಗಿದೆ.

೪೫

ಊರು ರೋಣ
ಸ್ಮಾರಕ ಅನಂತಶಯನ ಗುಡಿ
ಸ್ಥಳ ಗ್ರಾಮದಲ್ಲಿ
ಕಾಲ ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಉತ್ತರ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಎತ್ತರದ ಕಟ್ಟೆಯ ಮೇಲೆ ನಿರ್ಮಣವಾದ ದೇವಾಲಯ, ಗರ್ಭಗೃಹ, ಅಂತರಾಳ ನವರಂಗಗಳನ್ನು ಹೊಂದಿರುವುದು. ಗರ್ಭಗೃಹದಲ್ಲಿರುವ ಪೀಠದ ಮೇಲೆ ಸುಂದರವಾದ ಅನಂತಶಯನ ಶಿಲ್ಪವನ್ನಿಟ್ಟಿದ್ದಾರೆ. ಅದನ್ನು ನಿತ್ಯವು ಪೂಜಿಸಲಾಗುತ್ತಿದೆ. ಗರ್ಭಗೃಹವು ಸಾದಾ ಬಾಗಿಲವಾಡವನ್ನು ಹಾಗೂ ಅದರಲ್ಲಿ ಪಟ್ಟಿಕೆಯ ರಚನೆಯನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪವಿದೆ. ತೆರದ ಅಂತರಾಳ ನವರಂಗಕ್ಕೆ ಹೊಂದಿಕೊಂಡಂತಿದೆ.

ನವರಂಗವು ಎತ್ತರವಾದ ಕಟ್ಟಯನ್ನೊಳಗೊಂಡ ನಾಲ್ಕು ಕಂಬಗಳನ್ನು ಒಳಗೊಂಡಿದೆ. ಇವು ಸರಳ ರಚನೆಯ ಕಂಬಗಳು. ಪೂರ್ವ ಹಾಗೂ ದಕ್ಷಿಣ ಗೋಡೆಯಲ್ಲಿ ಜಾಲಾಂಧ್ರಗಳನ್ನು ನಿರ್ಮಿಸಲಾಗಿದೆ. ಕಮಲದ ಹೂವಿನ ಆಕಾರದ ಭುವನೇಶ್ವರಿಯನದನು ನವರಂಗದಲ್ಲಿ ಕೆತ್ತಿದ್ದಾರೆ. ಆಂಜನೇಯ ಹಾಗೂ ನಾಗದೇವತೆಯ ಬಿಡಿ ಶಿಲ್ಪಗಳನ್ನು ಇಲ್ಲಿಡಲಾಗಿದೆ. ದೇವಾಲಯದ ಹೊರ ಗೋಡೆಯಲ್ಲಿ ಅರ್ಧಕಂಬಗಳನ್ನು ಕೆತ್ತಲಾಗಿದೆ.

ದೇವಾಲಯಕ್ಕೆ ವೇಸರ (ಚಾಲುಕ್ಯ) ಮಾದರಿ ಶಿಖರವಿದೆ. ಇದು ಎರಡು ತಲಗಳನ್ನು ಹೊಂದಿದ್ದು ಅದರಲ್ಲಿ (ಗ್ರೀವ, ಸ್ಥೂಪಿ ಹಾಗೂ ಕಲಶಗಳ ಭಾಗಗಳಿವೆ. ಮುಂಚಾಚಿದ ಸುಖನಾಸಿಯ ಕೆತ್ತನೆಯು ಇರುವುದು. ದೇವಾಲಯದ ಅಧಿಷ್ಠಾನದಲ್ಲಿ ಉಪಾನ, ಜಗತಿ, ಗಳ, ಕಪೋತ ಮತ್ತು ತ್ರಿಪಟ್ಟಕುಮುದ ಭಾಗಗಳಿವೆ. ಸ್ಥಳೀಯರ ನಿರ್ಲಕ್ಷದಿಂದಾಗಿ ಮಹತ್ವಪೂರ್ಣವಾದ ಈ ದೇವಾಲಯ ನಾಶದ ಸ್ಥಿತಿಗೆ ಬಂದು ತಲುಪಿದೆ.

೪೬

ಊರು ರೋಣ
ಸ್ಮಾರಕ ಪಾರ್ಶ್ವನಾಥ ಬಸದಿ
ಸ್ಥಳ ಗ್ರಾಮದಲ್ಲಿ
ಕಾಲ ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಪ್ರಾಚೀನ ಬಸದಿಯನ್ನು ದುರಸ್ತಿ ಕಾರ್ಯಕ್ಕೆ ಒಳಗು ಮಾಡಿದ್ದಾರೆ. ಮೂಲ ದೇವಾಲಯ ಪೂರ್ವಾಬಿಮುಖವಾಗಿತ್ತು. ಆದರೆ ರಿಪೇರಿ ಮಾಡಿದ್ದರಿಮದ ಈಗ ದಕ್ಷಿಣದಲ್ಲಿ ದೇವಾಲಯಕ್ಕೆ ಪ್ರವೇಶವನ್ನು ನಿರ್ಮಿಸಲಾಗಿದೆ. ಬಸದಿಯು ಗರ್ಭಗೃಹ ಹಾಗೂ ನವರಂಗಗಳನ್ನು ಹೊಂದಿರುವುದು. ಗರ್ಭಗೃಹದಲ್ಲಿ ಜಿನ (ಪಾರ್ಶ್ವನಾಥನ) ಶಿಲ್ಪವಿದೆ. ಸುಮಾರು ಎರಡರಿಂದ ಮೂರು ಅಡಿ ಎತ್ತರವಾಗಿರುವ ಈ ಶಿಲ್ಪವು ಸಮ (ನಿಂತ) ಭಂಗಿಯಲ್ಲಿದೆ. ಶಿಲ್ಪದ ತಲೆಯ ಹಿಂಬಾಗದಲ್ಲಿ ಪ್ರಭವಳಿಯಿದೆ. ಗರ್ಭಗೃಹದ ಬಾಗಿಲವಾಡವು ಪಂಚಶಾಖೆಗಳಿಂದ ಕೂಡಿದೆ.

ನವರಂಗವು ನಾಲ್ಕು ಕಂಬಗಳನ್ನು ಹೊಂದಿದ್ದು ಈ ನಾಲ್ಕು ಕಂಬಗಳನ್ನೊಳಗೊಂಡಂತೆ ಎತ್ತರದ ಕಟ್ಟೆಯಿದೆ. ತಿರುಗಣಿಯ ಮಾದರಿಯ ಕಂಬಗಳು ಗಾತ್ರದಲ್ಲಿ ದೊಡ್ಡವುಗಳಾಗಿವೆ. ನವರಂಗದ ಬಾಗಿಲವಾಡವನ್ನು ಇತ್ತೀಚೆಗೆ ದುರಸ್ತಿ ಮಾಡಲಾಗಿದೆ. ಪ್ರಾರಂಭದಲ್ಲಿ ನಿರ್ಮಾಣವಾದ ಬಾಗಿಲವಾಡವನ್ನು ಸಿಮೆಂಟಿನಿಂದ ಬಳಿದು ತಮಗೆ ತಕ್ಕಂತೆ ರೂಪಿಸಿಕೊಂಡಿದ್ದಾರೆ. ಗುಡಿಯ ಮೇಲ್ಭಾಗದಲ್ಲಿ ಇನ್ನೊಂದು ಚಿಕ್ಕ ಗುಡಿಯನ್ನು ನಿರ್ಮಿಸಿ ಅದರಲ್ಲೂ ಜಿನ ಶಿಲ್ಪವನ್ನು ಇಡಲಾಗಿದೆ. ಬಸದಿಯ ಮುಂದಿನ ದೀಪಸ್ತಂಭವನ್ನು ಸಿಮೆಂಟಿನಿಂದ ನಿರ್ಮಿಸಿ ಸುಣ್ಣ-ಬಣ್ಣ ಬಳಿಯಲಾಗಿದೆ. ಹೊರಗೋಡೆಯಲ್ಲಿ ಅರ್ಧಕಂಬಗಳ ರಚನೆಗಳಿವೆ. ದೇವಾಲಯದ ಅಧಿಷ್ಠನ ಭಾಗವು ಉಪಾನ, ಜಗತಿ, ಗಳ, ಕಪೋತಿ ಹಾಗೂ ಕುಮುದ ಭಾಗಗಳನ್ನು ಹೊಂದಿದೆ.

೪೭

ಊರು ಶಾಂತಗಿರಿ
ಸ್ಮಾರಕ ಶಾಂತೇಶ್ವರ
ಸ್ಥಳ ಗುಡ್ಡದ ಮೇಲೆ
ಕಾಲ ೧೭-೧೮ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಸುಮಾರು ಎರಡ ನೂರು ಅಡಿಗಳಿಗಿಂತ ಎತ್ತರದ ಗುಡ್ಡದ (ಗಿರಿ) ಮೇಲೆ ಶಾಂತೇಶ್ವರ ದೇವಾಲಯವಿದೆ. ಈ ದೇವಾಲಯವನ್ನು ಗಲುಪಲು ಗುಡ್ಡವನ್ನು ಬಳಸಿಕೊಳ್ಳುತ್ತಾ ಸಾಗಬೇಕು. ಈ ದೇವಾಲಯವು ಗರ್ಭಗೃಹ ಹಾಗೂ ಮಂಟಪಗಳನ್ನು ನೊಂದಿದೆ. ಪಕ್ಕದಲ್ಲಿ ಇನ್ನು ಚಿಕ್ಕ ಪುಟ್ಟ ದೇವಾಲಯಗಳಿವೆ. ಇದರ ಸಮೀಪ ಬಾವಿಯನ್ನು ನಿರ್ಮಿಸಲಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದ ಯಾವುದೇ ಲಿಖಿತ ಮಾಹಿತಿಗಳಿಲ್ಲ.

೪೮

ಊರು ಸವಡಿ
ಸ್ಮಾರಕ ನಾರಾಯಣ
ಸ್ಥಳ ಗ್ರಾಮದಲ್ಲಿ
ಕಾಲ ೧೦-೧೧ನೇ ಶತಮಾನ
ಶೈಲಿ ರಾಷ್ಟ್ರಕೂಟ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯವು ರಾಷ್ಟ್ರಕೂ ಆಡಳಿತದ ಕೊನೆಯ ಹಾಗೂ ಕಲ್ಯಾಣ ಚಾಲುಕ್ಯ ಪ್ರಾರಂಭದ ಅವಧಿಯಲ್ಲಿ ನಿರ್ಮಾಣವಾಗಿರುವಂಥದ್ದು. ಅನೇಕ ಮಾರ್ಪಾಡುಗಳಿಗೂ ಒಳಗಾಗಿದೆ. ಪೂರ್ವಾಭಿಮುಖವಿದ್ದ ಪ್ರವೇಶ ಬಾಗಿಲವನ್ನು ಮುಚ್ಚಲಾಗಿದೆ. ಸದ್ಯ ದಕ್ಷಿಣದಲ್ಲಿ ಪ್ರವೇಶವಿದೆ. ದೇವಾಲಯವು ಗರ್ಭಗೃಹ, ಅಂತರಾಳ ಹಾಗೂ ಮಂಟಪಗಳನ್ನು ಹೊಂದಿರುವುದು.

ಗರ್ಭಗೃಹದಲ್ಲಿ ನಾಲ್ಕು ಅಡಿ ಎತ್ತರದ ವಿಷ್ಣು (ನಾರಾಯಣ) ಶಿಲ್ಪವಿದೆ. ಸಮಭಂಗಿಯಲ್ಲಿರುವ ಈ ಶಿಲ್ಪವು ಕೆಳಭಾಗದಲ್ಲಿ ದೊಡ್ಡದಾದ ಪೀಠವನ್ನು ಕೂಡಾ ಹೊಂದಿದೆ. ಸಾದಾ ಕೆತ್ತನೆಯ ಬಾಗಿಲವಾಡವಿದ್ದು ಅದರ ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪವಿದೆ. ಗರ್ಭಗೃಹದಲ್ಲಿ ಎರಡು ಕಂಬಗಳಿದ್ದು ಒಂದು ಪಟ್ಟಿಕೆಗಳಿಂದ ಕೂಡಿದ್ದರೆ ಇನ್ನೊಂದು ನಕ್ಷತ್ರಾಕಾರದ್ದು. ಮಂಟಪವು ಕೂಡಾ ಬರಿದಾಗಿದೆ. ಭಗ್ನಗೊಂಡ ಸಪ್ತ ಮಾತೃಕೆಯ ಹಾಗೂ ಉಮಾಮಹೇಶ್ವರ ಶಿಲ್ಪಗಳನ್ನು ಈ ಮಂಟಪದಲ್ಲಿ ಇಲ್ಲಿಡಲಾಗಿದೆ.

ದೇವಾಲಯಕ್ಕೆ ಎತ್ತರವಾದ ಅಧಿಷ್ಠಾನವಿದೆ. ಉಪಾನ, ಜಗತಿ, ಗಳ, ತ್ರಿಪಟ್ಟ ಕುಮುದ ಭಾಗಗಳನ್ನು ಅಧಿಷ್ಠಾನ ಹೊಂದಿರುವುದು. ಪದರುಗಲ್ಲಿನಲ್ಲಿ ನಿರ್ಮಾಣವಾಗಿರುವ ದೇವಾಲಯ ದಿನದಿನಕ್ಕೆ ಸವೆದು ಹೋಗುತ್ತಿದೆ. ಶಿಖರ ಭಾಗವು ಬಿದ್ದಿದೆ.

ಹಳೆಗನ್ನಡ ಸಾಹಿತ್ಯದ ಮೊದಲ ಘಟ್ಟದಲ್ಲಿದ್ದ ಕವಿ ಒಂದನೆಯ ನಾಗವರ್ಮನು ಸವಡಿ ಗ್ರಾಮದವನೆಂಬ ಮಾಹಿತಿ ಇದೆ. ಈಗನು ಕನಾಟಕ ಕಾದಂಬರಿ ಹಾಗೂ ಮಹತ್ವಕೃತಿಗಳನ್ನು ರಚಿಸಿದ್ದನೆ. ಕ್ರಿ.ಶ. ೧೦೩೧ರ ಕಾಲಾವಧಿಯಲ್ಲಿದ್ದ ದುರ್ಗಸಿಂಹನು ಸವಡಿ ಗ್ರಾಮದವನು. ಕನ್ನಡದಲ್ಲಿ ಪಂಚತಂತ್ರ ಗ್ರಂಥವನ್ನು ರಚಿಸಿದ ಮಹಾನ್ ಗ್ರಂಥಕರ್ತ, ಕಿಸುಕಾಡು-೭೦ (ಪಟ್ಟದಕಲ್ಲು)ರ ಆಡಳಿತ ವಿಭಾಗದ ಅಗ್ರಹಾರ ಸಯ್ಯಡಿ (ಸವಡಿ)ಯವನೆಂದು ಹೇಳಿಕೊಂಡಿದ್ದಾನೆ. ದುರ್ಗಮಯನ ಹಾಗೂ ರೇವ ಕುಬ್ಬೆಯವರ ಮಗನೆಂದು ಸಹ ವಿವರಿಸಿದ್ದಾನೆ. ಪ್ರಾಚೀನ ಕನ್ನಡದ ಪ್ರಸಿದ್ಧ ಲೇಖನಾದ ದುರ್ಗಸಿಂಹನು ಕಲ್ಯಾಣ ಚಾಲುಕ್ಯ ಜಗದೇಕಮಲ್ಲನ ಆಜ್ಞೆಯಂತೆ ಸವಡಿಯಲ್ಲಿ ಹರಿ-ಹರ ಭುವನವನ್ನು ಕಟ್ಟಿಸಿದನೆಂಬ ಮಾಹಿತಿ ಇದೆ. ಪ್ರಾಚೀನ ಕನ್ನಡ ಸಾರಸ್ವತ ಲೋಕದಲ್ಲಿ ಭಿನ್ನ ಬಗೆಯಲ್ಲಿ ಕಥೆಗಳ ಮೂಲಕ ನೀತಿ ಬೋಧನೆಯನ್ನು ಪ್ರಾರಂಭಿಸಿದ ಈ ಕವಿಯು ಗ್ರಾಮದ ಬ್ರಹ್ಮೇಶ್ವರ ಹಾಗೂ ನಾರಾಯಣನ ದೇವಾಲಯ ಪರಿಸರದಲ್ಲಿ ತಂಗಿದ್ದನು ಎಂಬ ಪ್ರತೀತವಿದೆ.

೪೯

ಊರು ಸವಡಿ
ಸ್ಮಾರಕ ಬ್ರಹ್ಮದೇವರ ಗುಡಿ (ತ್ರಿಮೂರ್ತೇಶ್ವರ)
ಸ್ಥಳ ಗ್ರಾಮದಲ್ಲಿ
ಕಾಲ ೧೦-೧೧ನೇ ಶತಮಾನ
ಶೈಲಿ ರಾಷ್ಟ್ರಕೂಟ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಸ್ಥಳೀಯರ ಈ ಗುಡಿಯನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವ ವಾಡಿಕೆಯಿದೆ. ಬ್ರಹ್ಮೇಶ್ವರ ಬ್ರಹ್ಮದೇವರ ಗುಡಿ ತ್ರಿಮೂರ್ತೇಶ್ವರ, ಈಶ್ವರ ಹಾಗೂ ಕಲ್ಗುಡಿ ಎಂದು ಕರೆಯುತ್ತಾರೆ. ನಕ್ಷತ್ರಾಕಾರದ ಗಲವಿನ್ಯಾಸ ಹೊಂದಿರುವ ಈ ದೇವಾಲಯ ವಾಸ್ತುಶಿಲ್ಪ ಅಧ್ಯಯನ ದೃಷ್ಟಿಯಿಂದ ಮಹತ್ವದು ಉತ್ತರ ಕರ್ನಾಟಕ ಭಾಗದಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ರಚನೆಯಾಗಿರುವ ಹಲವಾರು ದೇವಾಲಯಗಳಲ್ಲಿ ಸವಡಿಯ ಬ್ರಹ್ಮೇಶ್ವರ ದೇವಾಲಯ ಪ್ರಮುಖವಾದುದು.

ಶಾಸನೋಕ್ತ ಉಲ್ಲೇಖವಿರುವ ರಾಷ್ಟ್ರಕೂಟರ ಕಾಲದ ದೇವಾಲಯ ಇದಾಗಿದೆ. ರಾಷ್ಟ್ರಕೂಟ ಒಂದನೆಯ ಅಮೋಘವರ್ಷನ ಕಾಲದಲ್ಲಿ ಕೊಣ್ಣುರಿನಲ್ಲಿ (ನರಗುಂದ ತಾಲೂಕು) ನಿರ್ಮಾನವಾದ ಬಸದಿಯ (ಪರಮೇಶ್ವರ ದೇವಾಲಯ) ಸಮಕಾಲೀನ ರಚನೆ ಸವಡಿಯ ಬ್ರಹ್ಮೇಶ್ವರ ದೇವಾಲಯ. ಈ ದೇವಾಲಯ ೯ನೇ ಶತಮಾನದ ಕೊನೆಯ ಘಟ್ಟದಲ್ಲಿ ನಿರ್ಮಾಣವಾಗಿದ್ದರೂ ವಿಜಯನಗರ ಅರಸ ಎರಡನೆಯ ದೇವೃಆಯನ ಕಾಲದವರೆಗೂ ಹೆಚ್ಚಿನ ಜೋಡಣೆಗಳು ದೇವಾಲಯಕ್ಕೆ ಸಂಬಂಧಪಟ್ಟಂತೆ ನಡೆದಿವೆ ಎಂಬುದು ಗಮನಾರ್ಹ ಸಂಗತಿ. ಅಂದರೆ ಸುಮಾರು ಆರು ಶತಮಾನಗಳ ಕಾಲ ಈ ದೇವಾಲಯ ತನ್ನ ಪ್ರಾಮುಖ್ಯತೆಯನ್ನು ಉಳಿಸಕೊಂಡು ಬಂದಿರುವುದು ಮಹತ್ವದ ವಿಚಾರವಾಗಿದೆ. ಅಲ್ಲದೆ ಇದೊಂದು ತ್ರೈಪುರುಷ ದೇವಾಲಯವು ಹೌದು.

ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಈ ದೇವಾಲಯ ಹೊಂದಿರುವುದು. ಈ ಎಲ್ಲ ಭಾಗಗಳು ಹೆಚ್ಚಿನ ವಿಸ್ತಾರದಿಂದ ಕೂಡಿದೆ ಗರ್ಭಗೃಹದಲ್ಲಿ ಲಿಂಗವಿದೆ. ಇದು ನೋಡಲು ಆಕರ್ಷವು ಹಾಗೂ ಎತ್ತರವಾಗಿದೆ. ಲಿಂಗದ ಮಧ್ಯ ಭಾಗದಲ್ಲಿ ರುದ್ರ ಭಾಗವಿದ್ದು ಎಡ ಮತ್ತು ಬಲಕ್ಕೆ (ಲಿಂಗಪೀಠದಲ್ಲಿ) ಬ್ರಹ್ಮ ಹಾಗೂ ವಿಷ್ಣುವಿನ ಸಮಭಂಗಿಯಲ್ಲಿರುವ ನಾಲ್ಕು ಅಡಿ ಎತ್ತರ ನಿಲುವಿನ ಸುಂದರ ಸಿಲ್ಪಗಳಿವೆ. ರಾಷ್ಟ್ರಕೂಟರ ಕಾಲದಲ್ಲಿ ಬೃಹತಾಕಾರದ ಲಿಂಗಗಳನ್ನು ನಿರ್ಮಿಸುವ ಪರಿಪಾಠ ಇತ್ತೆಂಬುದನ್ನು ಅವರ ಕಾಲದ ಹಲವಾರು ದೇವಾಲಯಗಳಿಂದ ಕಾಣುತ್ತೇವೆ.

ತೆರದ ಅಂತರಾಳವು ದೇವಾಲಯಕ್ಕಿದೆ. ಇತ್ತೀಚೆಗೆ ಕೆಲವು ಚಿಕ್ಕಪುಟ್ಟ ಮಾರ್ಪಾಡುಗಳನ್ನು ಕಂಡಿದೆ. ಅಂತರಾಳದಲ್ಲಿ ಕಂಬಗಳಿದ್ದು ಅವು ರಾಷ್ಟ್ರಕೂಟರ ರಚನಾ ಶೈಲಿಯನ್ನು ಮೈಗೂಡಿಸಿಕೊಂಡು ನಿರ್ಮಾಣವಾದವುಗಳು ಎಂಬುದನ್ನು ಸ್ಪಷ್ಟವಾಗಿ ತಿಳಿಯಬಹುದು. ದೊಡ್ಡ ಗಾತ್ರದ ಈ ಕಂಬಗಳಿಗೆ ದೊಡ್ಡ ಬೋಧಿಗೆಯನ್ನು ಆಳವಡಿಸಲಾಗಿದೆ.

ವಿಶಾಲವಾದ ನವರಂಗವು ದೇವಾಲಯಕ್ಕಿದೆ. ಅದು ಸುಮಾರು ಅರವತ್ತು ಕಂಬಗಳನ್ನು ಹೊಂದಿರುವುದು. ಈ ಕಂಬಗಳು ಆಯಾ ಕಾಲದಲ್ಲಿ ನಿರ್ಮಾಣವಾದ (ರಾಷ್ಟ್ರಕೂಟ, ಕಲ್ಯಾಣ ಚಾಲಯಕ್ಯ ಹಾಗೂ ವಿಜಯನಗರ ಕಾಲದಲ್ಲಿ ನಿರ್ಮಿತವಾದವು) ಅಲ್ಲದೇ ಅವುಗಳೆಲ್ಲ ಕಾಲಕಾಲಕ್ಕೆ ದುರಸ್ತಿಗೆ ಒಳಗಾಗಿರುವುದನ್ನು ಸಹ ಕಾಣಬಹುದು. ಎರಡನೆಯ ದೇವರಾಯನ (ವಿಜಯನಗರ) ಕಾಲದಲ್ಲಿ ಗುಡಿಯನ್ನು ಜೀಣೋದ್ಧಾರಗೊಳಿಸಿ ಅದರ ಪ್ರಯುಕ್ತ ಒಂದು ಶಾಸನವನ್ನು ಹಾಕಿಸಲಾಗಿದೆ. ಹಾಗೆಯೇ ಇತ್ತೀಚಿನ ಕಾಲದಲ್ಲಿ ದೇವಾಲಯವನ್ನು ಚಿಕ್ಕಪುಟ್ಟ ದುರಸ್ತಿ ಕಾರ್ಯಗಳಿಗೆ ಗುಡಿಯನ್ನು ಸ್ಥಳೀಯರು ಒಳಪಡಿಸಿದ್ದಾರೆ. ಪಾರ್ಶ್ವನಾಥನ ಶಿಲ್ಪ ನವರಂಗದಲ್ಲಿದೆ.

ದೇವಾಲಯದ ಹೊರ ಗೋಡೆಯ ಅಲಂಕಾರದಿಂದ ಕೂಡಿದೆ. ಉಬ್ಬುಶಿಲ್ಪಗಳು ಗೋಡೆಯ ಮೇಲಿವೆ. ರಾಮ-ಲಕ್ಷ್ಮಣ, ವರಹಾ, ಯಕ್ಷ-ಯಕ್ಷಿ ಹಾಗೂ ಗಣಪತಿಯ ಶಿಲ್ಪಗಳನ್ನು ಗೋಡೆಯ ಮೇಲೆ ಕೆತ್ತಲಾಗಿದೆ. ಗೋಡೆಯ ಮೇಲೆ ಅರ್ಧಶಿಖರ (ಗೋಡೆಯ ಶಿಖರ)ಗಳನ್ನು ಕುಡಾ ರಚಿಸಿದ್ದರೆ. ಇಲ್ಲಿರುವ ನಾಗರ ಮಾದರಿಯ ಶಿಖರವನ್ನು ತುಂಬಾ ಅಲಂಕಾರ ಮಾಡಿ ರಚಿಸಲಾಗಿದೆ. ಪದರುಗಲ್ಲಿನಲ್ಲಿ ನಿರ್ಮಾಣವಾದ ಈ ದೇವಾಲಯದ ಅಧಿಷ್ಠಾನವು ಎತ್ತರವಾಗಿದೆ. ಉಪಾನ, ಜಗತಿ, ಗಳ, ಕಪೋತ ಹಾಗೂ ತ್ರಿಪಟ್ಟ ಕುಮುದ ಭಾಗಗಳು ಹಾಗೂ ಕೆಲವು ಬಿಡಿ ಶಿಲ್ಪಗಳು ಅಧಿಷ್ಠಾನ ಭಾಗದಲ್ಲಿವೆ. ಬೃಹದಾಕಾರದ ದೇವಾಲಯಕ್ಕೆ ಸುಂದರವಾದ ಶಿಖರವಿದ್ದಿರುವ ಹಾಗಿದೆ. ಆದರೆ ಇಂದು ಅದು ಕಂಡುಬರುವುದಿಲ್ಲ. ಶಿಖರದ ಕೆಲವು ಕುರುಹುಗಳು ಆವರಣದಲ್ಲಿ ಬಿದ್ದಿವೆ.

ಸವಡಿಯ ಮೂರು ಶಾಸನಗಳು ಪ್ರಕಟವಾಗಿವೆ (ಧಾ.ಜಿ.ಶಾ.ಸೂ, ಸಂ.ರೋ. ೮೭, ೮೮, ಪು. ೧೯; Sii, XI, pt. I No. 42, Sii, XI, pt. II No. 129 ಮತ್ತು SSL XV 245). ಕ್ರಿ.ಶ. ೯೭೦ರ ರಾಷ್ಟ್ರಕೂಟ ಅರಸ ಖೊಟ್ಟಿಗನ ಶಾಸನವು ದೇವಾಲಯ ನಿರ್ಮಾಣದ ಬಗೆಗೆ ಮಾಹಿತಿ ನೀಡುತ್ತದೆ. ಆದರೆ ದೇವಾಲಯದ ಹೆಸರಿನ ಬಗೆಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ದೇವಾಲಯ ಮತ್ತು ಮಂಟಪಗಳ ರಚನೆ ಹಾಗೂ ವೆಂಗಿಯ ಗದುಗಯ್ಯನ ವರ್ಣನೆ ಇದೆ. ಶಾಸನವು ತ್ರುಟಿತವಾಗಿದ್ದರಿಂದ ವಿವರ ಮಾಹಿತಿ ಪಡೆಯುವುದು ಕಷ್ಟ. ಆದರೆ ಶಾಸನದಲ್ಲಿ ದೇವಾಲಯ ಮತ್ತು ಮಂಟಪದ ನಿರ್ಮಾಣದ ಬಗ್ಗೆ ಇರುವ ಉಲ್ಲೇಖ ಬಹುಶಃ ಸವಡಿಯ ಬ್ರಹ್ಮೇಶ್ವರ ದೇವಾಲಯ ಕುರಿತದ್ದೇ ಎಂಬುದರಲ್ಲಿ ಅನುಮಾನವಿಲ್ಲ. ಈ ಶಾಸನವು ಸ್ಥಳಾಂತರಗೊಂಡು ಗ್ರಾಮದ ಚಾವಡಿ (ಪಂಚಾಯಿತಿ) ಮುಂದಿರುವುದು. ಇದೇ ಸ್ಥಳದಲ್ಲಿರುವ ಇನ್ನೊಂದು ಶಾಸನ ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನದು. ಕ್ರಿ.ಶ. ೧೦೮೩ರ ತೇದಿಯದು. ಮಹಾಮಂಡಳೇಶ್ವರ ಭೂಲೋಕಮಲ್ಲ ಪೇರ್ಮಾಡಿ ಕಿಸುಕಾಡು-೭೦ (ಪಟ್ಟದಕಲ್ಲು), ಬಾಗಡಿಗೆ-೭೦) (ಬಾಗಲಕೋಟೆ), ಹಾಗೂ ನರಯಂಗಲ್ಲ-೧೨ (ನರೇಗಲ್ಲ)ನ್ನು ಆಳುವಾಗ ಮೂಲಸ್ಥಾನ ದೇವರಿಗೆ ದತ್ತಿ ಬಿಟ್ಟಿರುವ ಉಲ್ಲೇಖವಿದೆ. ಶಾಸನದಲ್ಲಿ ಉಲ್ಲೇಖವಾದ ಮೂಲಸ್ಥಾನ ದೇವರೆಂದರೆ ಬಹುಶಃ ಬ್ರಹ್ಮೇಶ್ವರ ದೇವಾಲಯವೇ ಆಗಿರಬಹುದು. ಮತ್ತೊಂದು ಮುಖ್ಯವಾದ ಶಾಸನ ಕ್ರಿ.ಶ. ೧೪೭೧ರದು. ವಿಜಯನಗರ ಎರಡನೆಯ ದೇವರಾಯನ ಕಾಲಕ್ಕೆ ಸಂಬಂಧಿಸಿದ್ದು. ಬಾದಾಮಿ ಸೀಮೆಯಲ್ಲಿ ಆಳುತ್ತಿದ್ದ ಚೌಡನಾಯಕನು ಇಲ್ಲಿನ ತ್ರೈಪುರುಷ (ಬ್ರಹ್ಮೇಶ್ವರ) ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ನವರಂಗದ ಕಂಬದ ಮೇಲೆ ಶಾಸನ ಹಾಕಿಸಿದ್ದಾನೆ. ಈ ಕುರಿತು ದೇವಾಲಯದ ವಿವರಣೆಯಲ್ಲಿ ಈ ಹಿಂದೆ ವಿವರಿಸಲಾಗಿದೆ.

೫೦

ಊರು ಸವಡಿ
ಸ್ಮಾರಕ ದೊಡ್ಡಪ್ಪನ ಗುಡಿ
ಸ್ಥಳ ಗ್ರಾಮದ ಈಶಾನ್ಯಕ್ಕೆ
ಕಾಲ ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಪ್ರಾಚೀನ ದೇವಾಲಯ ಭಾಗಶಃ ಬಿದ್ದು ಹೋದನಂತರ ಉಳಿದ ಕೆಲವು ಭಾಗಗಳನ್ನಿಟ್ಟುಕೊಂಡು ರಿಪೇರಿ ಮಾಡಿದ್ದಾರೆ. ಮೊದಲ ಗರ್ಭಗೃಹದ ಗೋಡೆಯ ಭಾಗ ಹಾಗೂ ಅದರಲ್ಲಿರುವ ಕೆಲವು ಕಂಬಗಳನ್ನು ಉಳಿಸಕೊಂಡಿದ್ದಾರೆ. ಗರ್ಭಗೃಹ, ಅಂತರಾಳ ಹಾಗೂ ನವರಂಗ ಭಾಗಗಳನ್ನು ಹೊಂದಿದ್ದು ಅಂತರಾಳ ಹಾಗೂ ನವರಂಗಗಳನ್ನು ದುರಸ್ತಿ ಮಾಡಲಾಗಿದೆ.

ಗರ್ಭಗೃಹದಲ್ಲಿ ಲಿಂಗವಿದ್ದು ಅದು ತ್ರುಟಿತಗೊಂಡಿದೆ. ನಕ್ಷತ್ರಾಕಾರದ ಪೀಠಭಾಗವನ್ನು ಹೊಂದಿರುವ ಲಿಂಗದ ರುದ್ರ ಭಾಗವು ಭಗ್ನಗೊಂಡಿದೆ. ಆಕಾರದಲ್ಲಿ ದೊಡ್ಡದಾಗಿರುವ ಈ ಲಿಂಗವು ನೋಡಲು ಸುಂದರವಾಗಿವೆ. ಗರ್ಭಗೃಹದಲ್ಲಿ ಬುವನೇಶ್ವರಿ ಭಾಗವನ್ನು ಕೆತ್ತಲಾಗಿದೆ. ಸರಳ ರಚನೆಯ ಬಾಗಿಲವಾಡವು ಇಕ್ಕೆಲಗಳಲ್ಲಿ ದ್ವಾರಪಾಲಕ ಉಬ್ಬು ಶಿಲ್ಪಗಳನ್ನು ಹೊಂದಿದೆ.

ಅಂತರಾಳ ಹಾಗೂ ನವರಂಗದ ಭಾಗಗಳನ್ನು ಇತ್ತೇಚೆಗೆ ಜೀರ್ಣೋದ್ಧಾರ ಮಾಡಲಾಗಿದೆ. ಉಮಾಮಹೇಶ್ವರ ಶಿಲ್ಪವನ್ನು ನವರಂಗದಲ್ಲಿಡಲಾಗಿದೆ. ಈ ಶಿಲ್ಪದಲ್ಲಿ ಎಡ ಹಾಗೂ ಬಲ ಭಾಗಕ್ಕೆ ಷಣ್ಮುಖ ಹಾಗೂ ಗಣಪನ ಉಬ್ಬುಶಿಲ್ಪಗಳಿವೆ. ಭಗ್ನಗೊಂಡಿರುವ ಸಪ್ತಮಾತೃಕೆ, ಸೂರ್ಯನ ಶಿಲ್ಪದ ಪೀಠ ಭಾಗ, ನಂದಿ ಹಾಗೂ ಅನಂತಶಯನ ಶಿಲ್ಪಗಳನ್ನು ಗುಡಿಯ ಮುಂಭಾಗದಲ್ಲಿಡಲಾಗಿದೆ. ದೇವಾಲಯದ ಹೊರ ಗೋಡೆಯಲ್ಲಿ ಮಿಥುನ ಶಿಲ್ಪವೊಂದಿದೆ.

ದೇವಾಲಯಕ್ಕೆ ಶಿಖರವಿತ್ತು. ಅದನ್ನು ಇಟ್ಟಿಗೆಯಲ್ಲಿ ರಚಿಸಲಾಗಿದೆ. ಆದರೆ ಅದು ಸದ್ಯ ನಾಶದ ಸ್ಥಿತಿಗೆ ಬಂದು ತಲುಪಿದೆ. ಹಾಗೂ ಕೆಲವು ಭಾಗಗಳು ಬಿದ್ದುಹೋಗಿವೆ. ದೇವಾಲಯದ ಮುಂಭಾಗದಲ್ಲಿ ಪ್ರಾಚೀನ ಕಾಲದ ಬಾವಿ ಇದೆ. ಅದು ಕೂಡಾ ಹಾಳಾಗಿರುವುದು.

ಸವಡಿ ಗ್ರಾಮ ಪರಿಸರವು ನೂತನ ಶಿಲಾಯುಗದ ಕುರುಹುಗಳನ್ನು ಹೊಂದಿದೆ. ಕಲ್ಲಿನ ಕೊಡಲಿ ಹಾಗೂ ಬ್ರಹ್ಮಗಿರಿಯ ಮಾದರಿಯ ಕಂದು ಬಣ್ಣದ ಮಡಕೆಯ ಚೂರುಗಳು ಇಲ್ಲಿ ಈ ಪ್ರದೇಶದಲ್ಲಿ ಕಂಡುಬಂದಿವೆ. (ಇಂ.ಆ.ರಿ.೧೯೬೭-೬೮ ಪುಟ ೭೬)