೧೧

ಊರು ಕಾಲಕಾಲೇಶ್ವರ ಗುಡ್ಡ
ಸ್ಮಾರಕ ಕಳಕಪ್ಪನ ಗುಡಿ (ಕಾಲಕಾಲೇಶ್ವರ)
ಸ್ಥಳ ಕಳಕಪ್ಪನ ಗುಡ್ಡ
ಕಾಲ ೧೨-೧೩ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ದಕ್ಷಿಣ
ಸ್ಥಿತಿ ಸಾಧಾರಣ
ಸಂರಕ್ಷಣೆ

ಸುಮಾರು ಎರಡನೂರು ಅಡಿ ಎತ್ತರದ ಗುಡ್ಡದ ಮೇಲೆ ಕಾಲಕಾಲೇಶ್ವರ ದೇವಾಲಯ ಸ್ಥಾಪನೆಗೊಂಡಿದೆ. ನೂರಾರು ಮೆಟ್ಟಿಲುಗಳನ್ನು ದೇವಾಲಯವನ್ನು ತಲುಪಬೇಕಾಗುತ್ತದೆ. ರಮಣೀಯವಾಗಿ ಕಾಣುವ ಈ ಸ್ಥಳವು ಪ್ರಕೃತಿ ದತ್ತವಾದ ಗುಹೆ (ಗವಿ) ಗಳಿಂಧ ಇನ್ನು ಹೆಚ್ಚಿನ ಆಕರ್ಷಣೆ ಪಡೆದಿರುವುದು. ಸಹಜವಾಗಿ ನಿರ್ಮಾಣವಾದ ಗುಹೆಗಳನ್ನು ದೇವಾಲಯವನ್ನಾಗಿ ಪರಿವರ್ತಿಸಲಾಗಿದೆ. ದಕ್ಷಿಣಾಭಿಮುಖ ಪ್ರವೇಶದ್ವಾರದ ಮೂಲಕ ಗುಡಿಗಳನ್ನು ಪ್ರವೇಶಿಸಬೇಕಾಗುತ್ತದೆ. ಕಾಲಕಾಲೇಶ್ವರಲನೆಂಬ ಹೆಸರಿನಿಂದ ಪೂಜಿಸಲ್ಪಡುತ್ತಿರುವ ವೀರಭದ್ರನ ಶಿಲ್ಪವು ದೇವಾಲಯದ ಮುಖ್ಯ ಕೇಂದ್ರ. ನೈಸರ್ಗಿಕವಾಗಿ ನಿರ್ಮಾಣವಾದ ಇತರ ಗೂಡುಗಳಲ್ಲಿ ಬೇರೆ ಬೇರೆ ಶಿಲ್ಪಗಳನ್ನಿಡಲಾಗಿದೆ.

ವಿಶಾಲವಾದ ತೆರದ ನವರಮಗ (ಮೇಲ್ಛಾವಣಿ ಇಲ್ಲದ), ಮುಖಮಂಟಪ ಹಾಗೂ ಗರ್ಭಗೃಹಗಳು ದೇವಾಲಯಕ್ಕಿವೆ. ಗರ್ಭಗೃಹದಲ್ಲಿ ನಿಂತ ವೀರಭದ್ರನ ಶಿಲ್ಪವಿರುವುದು. ಅದು ಉದ್ದನೆಯ ಕಿರೀಟ ಭಾಗವನ್ನು ಹೊಂದಿದ್ದು ನೋಡಲು ಸುಂದರವಾಗಿ ಕಾಣುತ್ತದೆ. ಇದೇ ಗುಡಿಯ ಮೂಲಕ ಇನ್ನೊಂದು ಗುಡಿಯನ್ನು ಪ್ರವೇಶಿಸುತ್ತೇವೆ. ಅದು ಸಹ ಗರ್ಭಗೃಹ ಹಾಗೂ ನವರಂಗವನ್ನು ಹೊಂದಿರುವುದು. ಈ ಗುಡಿಯ ಗರ್ಭಗೃಹದಲ್ಲಿ ಲೋಹದಿಂದ ಮಾಡಿರುವ ವೀರಭದ್ರನ ಶಿಲ್ಪವಿದ್ದು ಅದನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಆದರೆ ದೇವಾಲಯ ಮಾತ್ರ ಪ್ರಾಚೀನ ಕಾಲದ್ದು. ಬಹುಶಃ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿರುವ ಸಾಧ್ಯತೆಗಳಿವೆ. ಪ್ರಾಚೀನ ದೇವಾಲಯವನ್ನು ಭಾಗಶಃ ನವೀಕರಿಸಿ ಕಟ್ಟಲಾಗಿದ್ದು ಹೀಗಾಗಿ ಅಲ್ಲಿರುವ ಪ್ರಾಚೀನ ಶಿಲ್ಪಗಳನ್ನು ಗೋಡೆ ಹಾಗೂ ಗೂಡುಗಳಲ್ಲಿ ಇಡಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಶಿವ, ವಿಷ್ಣು ಹಾಗೂ ಬ್ರಹ್ಮನ ಮೂರ್ತಿಶಿಲ್ಪಗಳಿವೆ. ಮಹಿಷಾಸುರಮರ್ದಿನಿಯ ಶಿಲ್ಪ ಹಾಗೂ ಕೈಮುಗಿದು ಕುಳಿತಿರುವ ದ್ವಾರಪಾಲಕ ಶಿಲ್ಪಗಳನ್ನು ಈ ಗುಡಿಯಲ್ಲಿಟ್ಟಿದ್ದಾರೆ. ಪ್ರಾಚೀನ ಸಪ್ತಮಾತೃಕೆಯ ಶಿಲ್ಪ, ನಾಗಶಿಲ್ಪ ಹಾಗೂ ಮಹಾಸತಿ ಶಿಲ್ಪಗಳು ಇಲ್ಲಿವೆ. ಮಹಾಸತಿ ಶಿಲ್ಪವನ್ನು ನೆಲಹಾಸಕ್ಕೆ ಉಪಯೋಗಿಸಲಾಗಿದೆ. ಇಲ್ಲಿನ ಇನ್ನೊಂದು ಗಮನಾರ್ಹ ಶಿಲ್ಪವೆಂದರೆ ಅಧಿಕಾರಿ ದಂಪತಿಗಳಿದ್ದು, ಈ ಅಧಿಕಾರಿಯ ತಲೆಗೆ ಮುಂಡಾಸ (ಪೇಟಾ) ಸುತ್ತಿದ್ದು ಗಡ್ಡವನ್ನು ಬಿಟ್ಟಿದ್ದಾನೆ. ಗಂಭೀರ ಮುಖ ಭಾವವನ್ನು ಹೊಂದಿರುವ ಈ ಶಿಲ್ಪದಲ್ಲಿರುವ ದಂಪತಿಗಳು ಬಹುಶಃ ದೇವರ ಸ್ಮರಣೆಗೆ ಕುಳಿತಿದ್ದಿರಬಹುದು. ಕುದುರೆಯ ಮೇಲೆ ಕುಳಿತು ಸವಾರಿ ಮಾಡುತ್ತಿರುವ ಇನ್ನೊಂದು ಶಿಲ್ಪ ಹೆಚ್ಚಿನ ಆಕರ್ಷಣೆಯಿಂದ ಕೂಡಿದೆ. ಭಗ್ನಗೊಂಡಿರುವ ಗಣಪತಿ ಹಾಗೂ ನಂದಿ ಶಿಲ್ಪಗಳು ಕೂಡ ಗುಡಿಯ ಆವರಣದಲ್ಲಿವೆ. ಇತ್ತೀಚೆಗೆ ನಿರ್ಮಿಸಿದ ಕೆಲವು ಶಿಲ್ಪಗಳನ್ನು ಅಲ್ಲಲ್ಲಿ ಇಡಲಾಗಿದೆ.

ದೇವಾಲಯಕ್ಕೆ ಪ್ರವೇಶ ದ್ವಾರವನ್ನು ನಿರ್ಮಿಸಿದ್ದು ಅದರ ಅಧಿಷ್ಠಾನದಲ್ಲಿ ಚಿಕ್ಕ ಚಿಕ್ಕ ಕಂಬಗಳನ್ನು ಕೆತ್ತಿದ್ದಾರೆ. ಅಲ್ಲದೆ ದ್ವಾರ ಬಾಗಿಲದ ಎರಡು ಕಡೆಯಲ್ಲಿ ದ್ವಾರಶಿಲ್ಪಗಳನ್ನು ಇಡಲಾಗಿದೆ. ಇಲ್ಲಿರುವ ನಂದಿ ಶಿಲ್ಪವು ದೊಡ್ಡದು. ಸುಮಾರು ಅಡಿ ಎತ್ತರವಾಗಿದೆ. ಈ ಶಿಲ್ಪದ ಬಗ್ಗೆ ಕೆಲವು ಐತಿಹ್ಯಗಳಿವೆ. ನಂದಿಶಿಲ್ಪವು ಪ್ರತಿವರ್ಷ ಬೆಳೆಯುತ್ತಾ ಬಂದಿದೆ. ಹಾಗೂ ಇದರ ಇನ್ನೊಂದು ವಿಶೇಷ ಅಂದರೆ ನಂಧಿಯನ್ನು ವಿಧವೆಯರರು ಮಾತ್ರ ಪೂಜಿಸುವುದು. ಅಂಥ ಆಚರಣೆ ಯಾವ ಕಾಲದಲ್ಲಿ ಯಾವ ಕಾರಣಕ್ಕಾಗಿ ರೂಢಿಯಲ್ಲಿ ಬಂದಿರುವ ಬಗೆಗೆ ವಿಶೇಷ ಅಧ್ಯಯನ ಕೈಗೊಳ್ಳಬೇಕಾಗಿರುವುದು ಅವಶ್ಯಕ.

ಕಳಕಪ್ಪನ ಗುಡ್ಡ ಅಥವಾ ಕಾಲಕಾಲೇಶ್ವರ ಸ್ಥಳದಲ್ಲಿ ಒಟ್ಟು ಐದು ಶಾಸನಗಳು ದೊರಕಿದ್ದು ಅವು ಪ್ರಕಟವಾಗಿವೆ. (ಧಾ.ಜಿ.ಶಾ.ಸೂ, ಸಂ.ರೋ ೨೬, ೨೭, ೨೮, ೨೯ ಮತ್ತು ೩೦ ಪು.೧೭; SII, XV-No 165 and SII, XV No. 245) ಕಲ್ಯಾಣ ಚಾಲುಕ್ಯ ನಾಲ್ಕನೇ ಸೋಮೇಶ್ವರನ ಕಾಲಕ್ಕೆ ಸಂಬಂಧಿಸಿದ ಶಾಸನ ಕ್ರಿ.ಶ. ೧೧೯೪ರ ತೇದಿಯದ್ದು. ಸಿಂದವಂಶದ (ಬಹುಶಃ ಯಲಬುರ್ಗಿಯ ಸಿಂದ ವಂಶದವನಿರಬಹುದು) ಆಚಿದೇವರಸನಿಂದ ಕಾಳಕಾಳೇರ್ಶವರ ದೇವರಿಗೆ ಭೂಮಿಯನ್ನು ದಾನ ಮಾಡಿರುವ ಉಲ್ಲೇಖವಿದೆ. ಅದೇ ಶಾಸನದಲ್ಲಿ ರಾಜೂರ ಗ್ರಾಮದ ಸಾಯಿಮ ಗಾವುಂಡ ಮತ್ತು ಉಗುರ ಮುನ್ನೂರ್ವರಿಂದ ಕಾಳಕಾಳೇಶ್ವರ ದೇವರಿಗೆ ಭೂಮಿಯನ್ನು ದಾನ ಮಾಡಿರುವ ಮಾಹಿತಿ ಇದೆ. ಅದು ಕ್ರಿ.ಶ. ೧೨೨೦ರ ಕಾಲವನ್ನು ಸೂಚಿಸುವ ಹಾಗೂ ಯಾದವ ಸಿಂಘಣನ ಕಾಲದ್ದು. ಇದೇ ದೇವಾಲಯದ ಇನ್ನೊಂದು ಶಾಸನ ವಿಜಯನಗರದರಸ ಎರಡನೆಯ ಹರಿಹರನಿಗೆ ಸಂಬಂಧಿಸಿದ್ದು. ಅದು ತೃಟಿತವಾಗಿದ್ದು ಬೊಮ್ಮಗೌಡನ ಉಲ್ಲೇಖ ನೀಡುತ್ತದೆ. ಕಾಳಕಾಳೇಶ್ವರನ ಲಿಂಗದ ಪ್ರಭಾವಳಿಯಲ್ಲಿರುವ ಮತ್ತೊಂದು ಶಾಸನವು ಮಹಾದೇವನ ಮಗ ನಾರಾಯಣ ದಾತೆಯನಿಂದ ಕಾಳಕಾಳೇಶ್ವರನಿಗೆ ಪ್ರಭಾವಳಿಯನ್ನು ಕಾಣಿಕೆ ರೂಪದಲ್ಲಿ ನೀಡಿರುವ ಮಾಹಿತಿಯನ್ನು ನೀಡುತ್ತದೆ. ಈ ಶಾಸನದ ಕಾಲ ಹಾಗೂ ಸಂಬಂಧಿಸಿದ ಕರ್ತೃವಿನ ಬಗೆಗೆ ಸ್ಪಷ್ಟಮಾಹಿತಿ ಇಲ್ಲ. ಶಾಸನದಲ್ಲಿ ಉಲ್ಲೇಖಿತ ಮಹಾದೇವ ಹಾಗೂ ಅವನ ಮಗ ನಾರಾಯಣ ದಾತೆಯು ಗಜೇಂದ್ರಗ್ರಡ ಅರಸರಿಗೆ ಸಂಬಂಧಿಸಿದ ಹೆಸರುಗಳು ಎಂಬುದನ್ನು ಗಮನಿಸುವುದು ಅವಶ್ಯ.

ನಿಸರ್ಗ ನಿರ್ಮಿತ ಕಾಲಕಾಲೇಶ್ವರ ಗುಡ್ಡದ ಪ್ರದೇಶದಲ್ಲಿ ಪ್ರಾಚೀನ ಮಾನವನ ವಸತಿಗೆ ಸಂಬಂಧಿಸಿದ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಆಗಿರುವ ಸಾಧ್ಯತೆಗಳಿವೆ. ಬೃಹತ್‌ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಹಾಗೂ ಇತಿಹಸ ಆರಂಭಯುಗದ ಮಾನವನ ಚಟುವಟಿಕೆಯಲ್ಲಿ ಬಳಕೆಗಿರುವ ಸಲಕರಣೆಗಳು ಈ ಪ್ರದೇಶದಲ್ಲಿ ಸಿಕ್ಕಿವೆ. (ಇಂ.ಆ.ರಿ.೧೯೬೪-೬೫ ಪುಟ.೩೧).

೧೨

ಊರು ಕುರುಹಟ್ಟಿ
ಸ್ಮಾರಕ ಸೋಮೇಶ್ವರ
ಸ್ಥಳ ಕಲ್ಯಾಣ ಚಾಲುಕ್ಯ
ಕಾಲ ಪೂರ್ವ
ಶೈಲಿ ಕೆರೆಯ ದಂಡೆ
ಅಭಿಮುಖ ೧೨ನೇ ಶತಮಾನ
ಸ್ಥಿತಿ ಕನಿಷ್ಠ
ಸಂರಕ್ಷಣೆ —-

ಕೆರೆಯ ದಂಡೆಯ ಮೇಲಿರುವ ಪ್ರಾಚೀನ ಸೋಮೇಶ್ವರನ ದೇವಾಲಯ ಸಂಪೂರ್ಣವಾಗಿ ಹಾಳಾಗಿದೆ. ಗ್ರಾಮಸ್ಥರು ಹಾಳಾದ ದೇವಾಲಯವನ್ನು ಹೊಸದಾಗಿ ನಿರ್ಮಿಸಿದ್ದಾರೆ. ಆದರೆ ಪ್ರಾಚೀನ ಗರ್ಭಗೃಹವನ್ನು ಹಾಗೆ ಉಳಿಸಿಕೊಳ್ಳಲಾಗಿದೆ. ದೇವಾಲಯವು ಗರ್ಭಗೃಹ ಹಾಗೂ ಮಂಟಪಗಳನ್ನು ಹೊಂದಿದೆ. ಪ್ರಾಚೀನ ಸೋಮೇಶ್ವರ ದೇವಾಲಯದ ಪ್ರಾಚ್ಯಾವಶೇಷಗಳಾದ ಮಹಿಷಾಸುರಮರ್ದಿನಿಯ ಹಾಗೂ ವೀರಭದ್ರನ ಶಿಲ್ಪಗಳನ್ನು ಮುಂಭಾಗದಲ್ಲಿಯೇ ಇಡಲಾಗಿದೆ. ಅಲ್ಲದೇ ಶಾಸನ ಶಿಲ್ಪವು ಸಹ ಇಲ್ಲಿದೆ. ಇನ್ನುಳಿದಂತೆ ಯಾವಗ ಕುರುಹುಗಳು ಕಂಡುಬಂದಿಲ್ಲ.

ಕ್ರಿ.ಶ. ೧೨ನೇಋ ಶತಮಾನಕ್ಕೆ ಸೇರಿದ ಗ್ರಾಮದ ಶಾಸನವು ಪ್ರಕಟಗೊಂಡಿದೆ. (ಧಾ.ಜಿ.ಶಾ.ಸೂ, ಸಂ.ರೋ ೩೨, ಲಪು.೧೭; SII, XV – No.84) ಈ ಶಾಸನವು ಸಂಪೂರ್ಣವಾಗಿ ತೃಟಿತಗೊಂಡಿರುವುದು. ಭೂಮಿಯನ್ನು ದಾನ ಮಾಡಿದ ಅಸ್ಪಷ್ಟ ಮಾಹಿತಿಯನ್ನು ಮಾತ್ರ ನೀಡುತ್ತದೆ.

೧೩

ಊರು ಕುಂಟೋಜಿ
ಸ್ಮಾರಕ ಚನ್ನಬಸವೇಶ್ವರ
ಸ್ಥಳ ಗ್ರಾಮದ ವಾಯವ್ಯ
ಕಾಲ ೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪಶ್ಚಿಮ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಕುಂಟೋಜಿ ಗ್ರಾಮದಿಂದ ಸುಮಾರು ೨ ಕಿಮೀ ದೂರದಲ್ಲಿರುವ ಈ ದೇವಾಲಯ ಸಂಪೂರ್ಣವಾಗಿ ಹಾಳಾಗಿರುವುದು. ಪ್ರಾಚೀನ ಕಾಲದಲ್ಲಿ ಈಶ್ವರನೆಂದು ಕರೆಯಲ್ಪಡುತ್ತಿದ್ದ ಈ ಗುಡಿಯು ಹಲವಾರು ಕಾರಣಗಳಿಗಾಗಿ ನಶಿಸಿಹೋಗಿದೆ. ಇದರ ಸಂಬಂಧವಾಗಿರುವ ಕೀರ್ತಿಮುಖ, ನಂದಿಶಿಲ್ಪ, ಒಡೆದು ಹೋಗಿರುವ ಅಧಿಷ್ಠಾನ ಭಾಗಗಳು ಹಾಗೂ ಇತರ ಚಿಕ್ಕ ಅವಶೇಷಗಳನ್ನು ಈಗಲೂ ಕಾಣುತ್ತೇವೆ.

ಹಾಳಾದ ಗುಡಿಯನ್ನು ಸ್ಥಳೀಯರು ಸದ್ಯ ಶರಣಬಸವೇಶ್ವರ ಗದ್ದುಗೆಯನ್ನಾಗಿ ಪರಿವರ್ತಿಸಿ ಶಿಖರ ಭಾಗದಲ್ಲಿ ಗುಮ್ಮಟನ್ನು ನಿರ್ಮಿಸಿದ್ದಾರೆ. ಪ್ರತಿವರ್ಷವು ಸಪ್ತಾಹ (ವಿಶೇಷ ಪೂಜಾ) ಕಾರ್ಯಕ್ರಮಗಳನ್ನು ಗ್ರಾಮಾಸ್ಥರು ನೆರವೇರಿಸಿರುತ್ತಾರೆ. ಗುಲ್ಬರ್ಗಾದ ಶರಣ ಬಸವೇಶ್ವರರಿಗೆ ಅವರದೇ ಪ್ರಮುಖ ಇತಿಹಾಸವಿದೆ. ಕೊಡೆಕಲ್‌ ಶರಣ ಸಂಪ್ರದಾಯ ಹಾಗೂ ಗುಲ್ಬರ್ಗಾದ ಬಂದೇನವಾಜರು ಸೇರಿ ಹಿಂದೂ ಮುಸ್ಲಿಂ ಭಾವೈಕ್ಯತೆ ಪಂಥವನ್ನು ಪ್ರಾರಂಭಿಸಿ ಎಲ್ಲ ಜನರಲ್ಲಿ ಐಕ್ಯತೆಯ ಸಮನ್ವಯತೆ ಸಾಧಿಸುವ ಪ್ರಯತ್ನ ಮಾಡಿ ಯಶಸ್ವಿಯಾದ ಹಾಗೇ ಶರಣ ಬಸವೇಶ್ವರರು ಹಿಂದೂ-ಮುಸ್ಲಿಂ ಐಕ್ಯತೆಗೆ ಶ್ರಮಿಸಿದ ದೊಡ್ಡ ಶರಣ ಇಂಥ ಮಹಾನುಭಾವ ಅನುಯಾಯಿಗಳು ರೋಣ ತಾಲೂಕಿನಲ್ಲಿ ಲಕ್ಷಾನುಗಟ್ಟಲೇ ಇರುವರು. ಬಹುಶಃ ಆ ಸಾಂಪ್ರದಾಯದಲ್ಲಿ ನಂಬಿಕೆ ಇರುವ ಭಕ್ತರುಗಳು ಈ ಗದ್ದುಗೆಯನ್ನು ಸ್ಥಾಪಿಸಿದ್ದಿರಬಹುದು.

ಕಲ್ಯಾಣ ಚಾಲುಕ್ಯ ಎರಡನೆಯ ಸೋಮೇಶ್ವರನ (ಕ್ರಿ.ಶ.೧೦೭೨) ಕಾಲದ ಶಾಸನವು ಪ್ರಕಟವಾಗಿದೆ. (ಧಾ.ಜಿ.ಶಾ.ಸೂ, ಸಂ.ರೋ ೩೧ ಪು.೧೭; SII, XI-I No 112, SII XV, No. 237) ಈಶ್ವರನ ದೇವಾಲಯದ ಹತ್ತಿರವೆ ಈ ಶಾಸನವು ದೊರಕಿದ್ದು ಇದು ನಕರೇಶ್ವರ ದೇವಾಲಯದ ಬಗೆಗೆ ಉಲ್ಲೇಖ ನೀಡುತ್ತದೆ. ಸ್ಥಳೀಯ ನೇಕರರು (ವ್ಯಾಪಾರಿಗಳು) ದೇವರಿಗೆ ದಾನ ನೀಡಿರುವ ಮಾಹಿತಿ ಇದೆ.

ಶರಣ ಬಸವೇಶ್ವರರ ಗದ್ದುಗೆಯ ಹತ್ತಿರದ ಗುಡ್ಡದಲ್ಲಿ ಪ್ರಾಕೃತಿಕವಾಗಿ ನಿರ್ಮಾಣವಾದ ಮೂರು ಗವಿಗಳಿವೆ. ಬಹುಶಃ ಈ ತಾಣವು ಆದಿ ಮಾನವನ ಚಟುವಟಿಕೆಯ ಕೇಂದ್ರಗಳಾಗಿರುವ ಸಾಧ್ಯತೆಗಳಿವೆ. ಸು. ೧೦೦ ಅಡಿ ಎತ್ತರವಾಗಿರುವ ಗುಡ್ಡದಲ್ಲಿ ಈ ಗವಿಗಳಿವೆ. ಗವಿಗಳಿಗೆ ಪ್ರವೇಶವು ಅಷ್ಟು ಸುಗಮವಾಗಿಲ್ಲ. ಆದರೂ ಸ್ಥಳೀಯರು ತಮ್ಮ ಸಹಾಸಗಳಿಂದ ಕೆಲವು ದೇವಮೂರ್ತಿಗಳನ್ನು ಇಲ್ಲಿನ ಗವಿಗಳಲ್ಲಿ ಸ್ಥಾಪಿಸಿದ್ದಾರೆ. ಪ್ರತಿ ವರ್ಷವು ಅಲ್ಲಿ ಗ್ರಾಮಸ್ಥರು ವಿಶೇಷ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ. ಕುಂಟೋಜಿ ಗ್ರಾಮ ಪರಿಸರದಲ್ಲಿ ಇತಿಹಾಸ ಆರಂಭ ಕಾಲದ ಕೆಲವು ಕುರುಹುಗಳು ಕಂಡುಬಂದಿವೆ. ಅಂತಹ ವರದಿಗಳು ಇಂಡಿಯನ್‌ ಆಯಂಟಿಕ್ವೇರಿ ರಿಪೋರ್ಟ್‌ನಲ್ಲಿ (೧೯೬೪-೬೫) ಪ್ರಕಟಗೊಂಡಿವೆ.

೧೪

ಊರು ಕೊಡಗಾನೂರು
ಸ್ಮಾರಕ ಕಂಚೇಶ್ವರ
ಸ್ಥಳ ಗ್ರಾಮದಲ್ಲಿ
ಕಾಲ ೧೨-೧೩ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಚೌಕಾಕಾರದ ಈ ದೇವಾಲಯ ಗರ್ಭಗೃಹ, ಅಂತರಾಳ ಹಾಗೂ ಮಂಟಪಗಳನ್ನು ಹೊಂದಿರುವುದು. ಗರ್ಭಗೃಹದಲ್ಲಿ ಲಿಂಗವಿದ್ದು ಇದು ಚೌಕಾಕಾರದ್ದಾಗಿದ್ದು ಆಕಾರದಲ್ಲಿ ದೊಡ್ಡದಾಗಿದೆ. ಗರ್ಭಗೃಹಕ್ಕೆ ಸಾದಾ ಬಾಗಿಲವಾಡವಿದೆ. ತೆರೆದ ಅಂತರಾಳ ದೇವಾಲಯಕ್ಕಿದೆ. ನಂದಿಯ ಶಿಲ್ಪವನ್ನು ಇಲ್ಲಿ ಇಡಲಾಗಿದೆ.

ನವರಂಗ ಮಂಟಪವು ತಕ್ಕಮಟ್ಟಿಗೆ ದೊಡ್ಡದಾಗಿದ್ದು ಕಲ್ಯಾಣ ಚಾಲುಕ್ಯ ಮಾದರಿಯ ಕಂಬಗಳನ್ನು ಒಳಗೊಂಡಿದೆ. ಚೌಕಾಕಾರದ ಈ ಕಂಬಗಳ ಮೇಲೆ ತ್ರಿಕೋನ ಪಟ್ಟಿಕೆಗಳನ್ನು ಕಂಡರಿಸಿದ್ದಾರೆ. ಇವು ಆಕಾರದಲ್ಲಿ ಗಿಡ್ಡನೆಯವುಗಳು. ಅವುಗಳು ಬೋಧಿಗೆ ಹಾಗೂ ಫಲಕಗಳನ್ನು ಹೊಂದಿವೆ. ಅಂತರಾಳ ಹಾಗೂ ನವರಂಗಕ್ಕೆ ಇತ್ತೀಚೆಗೆ ಹೊಸದಾಗಿ ಬಾಡಿಲವಾಡವನ್ನು ನಿರ್ಮಿಸಲಾಗಿದೆ. ನವರಂಗದಲ್ಲಿರುವ ನಾಲ್ಕು ಕಂಬಗಳಲ್ಲಿ ಒಂದರ ಮೇಲೆ ಶಾಸನವನ್ನು ಕೆತ್ತಲಾಗಿದೆ. ಬಹುಶಃ ಇದೊಂದು ಅಪ್ರಕಟಿತ ಶಾಸನ.

ದೇವಾಲಯದ ಅಧಿಷ್ಠಾನವುಗಳ, ಕಪೋತ ಹಾಗೂ ತ್ರಿಪಟ್ಟ ಕುಮದ ಭಾಗಗಳನ್ನು ಹೊಂದಿದೆ. ಆದರೂ ಅಧಿಷ್ಠಾನದ ಹೆಚ್ಚಿನ ಭಾಗವು ಮಣ್ಣಿನಲ್ಲಿ ಹೂತುಹೋಗಿದೆ. ಹೊರ ಗೋಡೆಯ ಅರ್ಧಕಂಬಗಳನ್ನು ಹೊಂದಿರುವುದು. ಹಾಗೂ ಅವು ನಕ್ಷತ್ರಾಕಾರದ ರಚನೆಯನ್ನು ಒಳಗೊಂಡಿವೆ. ಕಲ್ಯಾಣ ಚಾಲುಕ್ಯ ಮಾದರಿಯ ಶಿಖರವನ್ನು ಹೊಂದಿದ್ದು ಈ ದೇವಾಲಯದ ಶೀಖರ ಸದ್ಯ ಬಿದ್ದು ಹೋಗುವ ಸಾಧ್ಯತೆಗಳಿವೆ. ಈಗ ಕೇವಲ ಎರಡು ತಲಗಳು ಮಾತ್ರ ಇದ್ದು ಪ್ರತಿ ತಲವು ಮುಗಿದ ನಂತರ ಚಿಕ್ಕ ಚಿಕ್ಕ ಕಂಬಗಳಿಂದ ಕೂಡಿದ ಮಂಟಪವು ಶಿಖರ ಭಾಗದಲ್ಲಿ ಸುತ್ತಲೂ ಮುಂದುವರೆದಿದೆ. ಪ್ರತಿ ತಲದಲ್ಲಿಯೂ ಕೀರ್ತಿ ಮುಖ ಫಲಕಗಳನ್ನು ಅಳವಡಿಸಲಾಗಿದೆ. ಒಟ್ಟಾರೆ ಪ್ರಾಚೀನವಾದ ಈ ದೇವಾಲಯ ಹೆಚ್ಚಿನ ಅನಾಧಾರದಿಂದ ನಾಶವಾಗುವ ಸ್ಥಿತಿಗೆ ಬಂದು ತಲುಪಿದೆ.

೧೫

ಊರು ಕೊಡಗಾನೂರು
ಸ್ಮಾರಕ ವೀರಭದ್ರ
ಸ್ಥಳ ಗ್ರಾಮದಲ್ಲಿ
ಕಾಲ ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಉತ್ತರ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಪ್ರಾಚೀನವಾದ ಈ ದೇವಾಲಯ ದುರಸ್ತಿ ಕಾರ್ಯಗಳಿಗೆ ಒಳಗಾಗಿರುವುದು. ಗರ್ಭಗೃಹ, ಅಂತರಾಳ, ಅದರ ಜೋಡಣೆಯಾಗಿ ಇನ್ನೊಂದು ಅಂತರಾಳದ ಭಾಗ ಹಾಗೂ ಮಂಟಪಗಳನ್ನು ಹೊಂದಿದೆ. ಮುಖ್ಯ ಗರ್ಭಗೃಹದಲ್ಲಿ ಲಿಂಗವಿದ್ದು ಅದು ಪ್ರಾಚೀನತೆಯಿಂದ ಕೂಡಿದೆ. ಅಂತರಾಳ ಹಾಗೂ ಅದರ ಮುಂದಿನ ಜೋಡಣೆಗಳೆರಡು ಬರಿದಾಗಿವೆ.

ಮಂಟಪ ಭಾಗವು ಹೆಚ್ಚಿನ ದುರಸ್ತಿಕಾರ್ಯಗಳಿಗೆ ಒಳಗಾಗಿದ್ದು ಇದೇ ಮಂಟಪದಲ್ಲಿ ಇನ್ನೆರಡು ಗರ್ಭಗೃಹಗಳನ್ನು ನಿರ್ಮಿಸಲಾಗಿದೆ. ಮಂಟಪವು ನಾಲ್ಕು ಕಂಬಗಳನ್ನು ಒಳಗೊಂಡಿರುವುದು. ಮಂಟಪದಲ್ಲಿ ಅನೇಕ ಬಿಡಿಶಿಲ್ಪಗಳನ್ನು ಇಡಲಾಗಿದೆ. ಗಣಪತಿ, ವೀರಭದ್ರ, ಕಾಳಮ್ಮ (ಇದಕ್ಕೆ ಸೂರ್ಯಪೀಠವನ್ನು ಜೋಡಿಸಲಾಗಿದೆ.) ನಂದಿ ಹಾಗೂ ಅನಂತಶಯನ ಶಿಲ್ಪಗಳು ಸೇರಿವೆ. ಮಂಟಪದಲ್ಲಿ ನಿರ್ಮಿಸಿದ ಎರಡು ಚಿಕ್ಕ ಗರ್ಭಗೃಹಗಳಲ್ಲಿ ಲಿಂಗಗಳನ್ನು ಇಟ್ಟಿದ್ದಾರೆ. ಇವುಗಳಲ್ಲದೆ ಭಗ್ನಗೊಂಡಿರುವ ಸಪ್ತಮಾತೃಕೆಯ ಶಿಲ್ಪ ಹಾಗೂ ಭೈರವಿ ಶಿಲ್ಪಗಳನ್ನು ಮಂಟಪದಲ್ಲಿಡಲಾಗಿದೆ. ದೇವಾಲಯದ ಮುಂಭಾಗದಲ್ಲಿ ಶಾಸನ ಶಿಲ್ಪವಿದೆ.

ಕ್ರಿ.ಶ. ೧೨೩೨ರ ತೇದಿವುಳ್ಳ ಯಾದವ ಸಿಂಘಣ ಕಾಲದ ಶಾಸನ ಕೊಡಗಾನೂರನಲ್ಲಿದೆ (ಧಾ.ಜಿ.ಶಾ.ಸೂ, ಸಂ.ರೋ ೩೩, ಪು.೧೭; SII, XV No 174). ಇದು ಅತೀ ತೃಟಿತವು ಹಾಗೂ ಅಸ್ಪಷ್ಟವಾಗಿರುವುದು. ಕೊಡಗಾನೂರು ಗ್ರಾಮ ಮತ್ತು ದೊಡ್ಡೇಶ್ವರ ಎಂಬ ಉಲ್ಲೇಖ ಇದರಲ್ಲಿದೆ. ಬಹುಶ ಶಾಸನದಲ್ಲಿ ಉಲ್ಲೇಖಿತ ದೊಡ್ಡೇಶ್ವರ ದೇವಾಲಯ ಈಗಿನ ವೀರಭದ್ರನ ದೇವಾಲಯಾಗಿದ್ದಿರಬಹುದೇ? ಅಥವಾ ಇಲ್ಲಿರುವ ಶಾಸನವನ್ನೂ ಬೇರೆ ಕಡೆಯಿಂದ ತಂದು ಇಲ್ಲಿ ಇಟ್ಟಿದ್ದಾರೆಯೇ? ಅಥವಾ ದೊಡ್ಡೇಶ್ವರ ಸ್ಮಾರಕ ಸಂಪೂರ್ಣವಾಗಿ ಬಿದ್ದು ಹೋಗಿದೆಯೇ ಎಂಬ ನಾನಾ ಪ್ರಶ್ನೆಗಳು ಹಾಗೆ ಉಳಿದುಕೊಳ್ಳುತ್ತವೆ.

೧೬

ಊರು ಕೊಡಗಾನೂರು
ಸ್ಮಾರಕ ದಾಸಮೇಶ್ವರ
ಸ್ಥಳ ಗ್ರಾಮದಲ್ಲಿ
ಕಾಲ ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ —-

ಪೂರ್ವಾಭಿಮುಖವಾದ ಈ ಸ್ಮಾರಕ ತ್ರಿಕೂಟ ರಚನೆ. ಮೂರು ಗರ್ಭಗೃಹಗಳು, ಅಂತರಾಳಗಳು ಹಾಗೂ ಇವುಗಳನ್ನೆಲ್ಲ ಒಳಗೊಂಡಂತೆ ಒಂದು ಬೃಹತ್ತಾದ ನವರಂಗವನ್ನು ನಿರ್ಮಿಸಲಾಗಿದೆ. ಮುಖ್ಯ ಗರ್ಭಗೃಹವು ಲಿಂಗವನ್ನು ಹೊಂದಿದೆ. ಅದರ ಬಾಗಿಲ ವಾಡವನ್ನು ಅರ್ಧಪಟ್ಟಿಕೆ ಹಾಗೂ ಪುಷ್ಪ ಅಲಂಕಾರದಿಂದ ಅಂದಗೊಳಿಸಲಾಗಿದೆ. ಅಂತರಾಳವು ಬರಿದಾಗಿದೆ. ಉಳಿದೆರಡು ಗರ್ಭಗೃಹಗಳಲ್ಲಿ ಲಿಂಗವನ್ನಿಟ್ಟಿದ್ದಾರೆ. ಇವು ಉತ್ತರ ಹಾಗೂ ದಕ್ಷಿಣಾಭಿಮುವಾಗಿವೆ. ದಕ್ಷಿಣಾಭಿಮುಖ ಗರ್ಭಗೃಹದಲ್ಲಿ ವಿಷ್ಣು ಲಕ್ಷ್ಮೀಯರ ಶಿಲ್ಪಗಳನ್ನು ಇಡಲಾಗಿದೆ. ಇವುಗಳ ಬಾಗಿಲವಾಡಗಳನ್ನು ಸಹ ಪಟ್ಟಿಕೆ ಹಾಗೂ ಪುಷ್ಪ ಅಲಂಕಾರದಿಂದ ಅಂದಗೊಳಿಸಲಾಗಿದೆ. ಈ ಎರಡು ಗರ್ಭಗೃಹಗಳಿಗೆ ತೆರೆದ ಅಂತರಾಳಗಳಿವೆ. ಹಾಗೂ ಅಂತರಾಳಗಳ ಮೂಲೆಗಳಲ್ಲಿ ಅರ್ಧಕಂಬಗಳನ್ನು ಜೋಡಿಸಲಾಗಿದೆ. ಇವುಗಳು ಷಟ್‌ಕೋನಾಕೃತಿಯ ಕೆತ್ತನೆ ಹಾಗೂ ಕಮಲದ ಅಲಂಕಾರದಿಂದ ಕೂಡಿವೆ.

ಮೂರು ಗರ್ಭಗೃಹಗಳನ್ನೊಳಗೊಂಡಂತೆ ಒಂದು ದೊಡ್ಡದಾದ ನವರಂಗವಿದೆ. ಅದರಲ್ಲಿ ಕೋಷ್ಠ (ಗೂಡು) ಗಳನ್ನು ನಿರ್ಮಿಸಲಾಗಿದೆ. ಅವು ಬರಿದಾಗಿವೆ. ಇಲ್ಲಿರುವ ನಾಲ್ಕು ಕಂಬಗಳು ತಿರುಗಣಿಯ ಕಂಬಗಳಾಗಿವೆ. ಅವುಗಳ ಮೇಲೆ ಎಲೆಬಳ್ಳಿಗಳ ಚಿತ್ರಗಳನ್ನು ಬಿಡಿಸಲಾಗಿದೆ. ಹಾಗೂ ಕಂಬಗಳಲ್ಲಿ ಬೋಧಿಗೆಗಳನ್ನು ಅಳವಡಿಸಿದ್ದಾರೆ. ನಾಲ್ಕು ಕಂಬಗಳನ್ನು ಒಳಗೊಂಡಂತೆ ಎತ್ತರದ ಕಟ್ಟೆಯನ್ನು ನಿರ್ಮಿಸಲಾಗಿದೆ. ಹಾಗೂ ಸುಂದರವಾದ ಭುವನೇಶ್ವರಿಯನ್ನು ಕೆತ್ತಲಾಗಿದೆ. ಅದು ಕಮಲದ ಹೂವಿನ ಆಕಾರದ ಅಂದದ ಕೆತ್ತನೆಯಾಗಿರುವುದು. ನವರಂಗದಲ್ಲಿ ಕಕ್ಷಾಸನವನ್ನು ನಿರ್ಮಿಸಲಾಗಿದ್ದು ಅವುಗಳಲ್ಲಿ ಅರ್ಧಕಂಬಗಳನ್ನು ಜೋಡಿಸಲಾಗಿದೆ. ನವರಂಗದಲ್ಲಿ ಅಪ್ರಕಟಿತ ಶಿಲಾಶಾಸನವೊಂದಿದೆ.

ದೇವಾಲಯಕ್ಕೆ ಮಂಜೂರಿನ ಭಾಗವನ್ನು ರಚಿಸಲಾಗಿದೆ. ಬಹುಶಃ ದೇವಾಲಯದ ಶಿಖರ ಭಾಗವು ನಾಶವಾಗಿರಬಹುದು. ದೇವಾಲಯಕ್ಕೆ ಅಧಿಷ್ಠಾನವಿದ್ದು ಅದು ಸಾದಾ ರಚನೆಯಿಂದ ಕೂಡಿರುವುದು. ಉಪಾನ, ಜಗತಿ ಕಪೋತ ಹಾಗೂ ಗಳ ಭಾಗಗಳು ಮಾತ್ರ ಇವೆ. ಇತ್ತೀಚೆಗೆ ದೇವಾಲಯವನ್ನು ದುರಸ್ತಿಗೊಳಿಸಿ ಜಾಲಾಂಧ್ರ ಕಟ್ಟೆಯನ್ನು ಹೊಸದಾಗಿ ಜೋಡಿಸಿ, ಕಟ್ಟಲಾಗಿದೆ. ಪ್ರಾಚೀನವಾದ ಈ ದೇವಾಲಯದಲ್ಲಿರುವ ಶಾಸನವನ್ನು ಪ್ರಕಟಗೊಳಿಸಿದರೆ ಬಹುಶಃ ದೇವಾಲಯದ ಬಗೆಗೆ ಹೆಚ್ಚಿನ ಮಾಹಿತಿಗಳು ದೊರಕುವುದರಲ್ಲಿ ಸಂಶಯವಿಲ್ಲ.

೧೭

ಊರು ಕೊಡಗಾನೂರು
ಸ್ಮಾರಕ ನಾರಾಯಣ
ಸ್ಥಳ ಗ್ರಾಮದಲ್ಲಿ
ಕಾಲ ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಆಯತಾಕಾರದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಆಯತಾಕಾರದ ಗರ್ಭಗೃಹ ಹಾಗೂ ಅಂತರಾಳಗಳನ್ನು ಹೊಂದಿರುವುದು. ದೇವಾಲಯಕ್ಕಿರುವ ನವರಂಗ ಮಾತ್ರ ದೊಡ್ಡದಾಗಿದೆ. ಗರ್ಭಗೃಹದಲ್ಲಿ ಅಗಲವಾದ ಪೀಠವಿದ್ದು ಅದರಲ್ಲಿ ಬ್ರಹ್ಮನ, ಲಕ್ಷ್ಮೀ ನಾರಾಯಣನ ಹಾಗೂ ನಂದಿಯ ಶಿಲ್ಪವನ್ನು ಇಡಲಾಗಿದೆ. ನಂದಿಯ ಶಿಲ್ಪ ಇಟ್ಟಿರುವ ಜಾಗದಲ್ಲಿ ಬಹುಶಃ ಶಿವನಿಗೆ ಸಂಬಂಧಿಸಿದ ಶಿಲ್ಪವಿದ್ದಿರಬಹುದು. ಆದರೆ ಅದು ಹಾಳಾದ ನಂತರ ಶಿವನ ಪ್ರಾತಿನಿಧಿಕವಾಗಿ ನಂದಿಯ ಶಿಲ್ಪವನ್ನು ಇಡಲಾಗಿದೆ ಎಂದು ತಿಳಿಯಬಹುದು. ಹಾಗೂ ಇಲ್ಲಿರುವ ತ್ರಿಮೂರ್ತಿಗಳನ್ನು ಗಮನಿಸಿದರೆ ಇದು ಬ್ರಹ್ಮ ವಿಷ್ಣು ಹಾಗೂ ಮಹೇಶ್ವರರಿಗೆ ಸೇರಿದ ತ್ರಿಮೂರ್ತಿ ದೇವಾಲಯ ಆಗಿದ್ದಿರಬಹುದೆಂದು ಗಮನಿಸಬಹುದು. ಅಲ್ಲದೆ ಇದೇ ಪೀಠದಲ್ಲಿ ನವಿಲು ವಾಹನ ರೂಢ ಷಣ್ಮುಖನ ಶಿಲ್ಪವನ್ನು ಸಹ ಕಾಣುತ್ತೇವೆ. ಗರ್ಭಗೃಹದ ಬಾಗಿಲವಾಡವು ಐದು ಶಾಖೆಗಳಿಂದ ನಿರ್ಮಾಣವಾಗಿದೆ. ಹಾಗೂ ಬಾಗಿಲವಾಡದ ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪವನ್ನು ಕೆತ್ತಿದ್ದಾರೆ. ಆಯತಾಕಾರದ ಅಗಲವಾದ ತೆರದ ಅಂತರಾಳ ದೇವಾಲಯಕ್ಕಿರುವುದು. ಅಂತರಾಳದಲ್ಲಿ ಕಟ್ಟೆಯನ್ನು ನಿರ್ಮಿಸಲಾಗಿದೆ. ಇಲ್ಲಿ ನಾಲ್ಕು ಕಂಬಗಳನ್ನು ಜೋಡಿಸಲಾಗಿದೆ. ಆ ಕಂಬಗಳು ಪಟ್ಟಿಕೆ ಹಾಗೂ ತ್ರಿಕೋನ ಉಬ್ಬು ಕೆತ್ತನೆಗಳನ್ನು ಹೊಂದಿವೆ.

ನವರಂಗವು ವಿಶಾಲವಾಗಿದೆ. ಹದಿನೆಂಟು ಕಂಬಗಳನ್ನು ಹೊಂದಿದೆ. ಇವು ಚೌಕಾಕಾರದ ಕಂಬಗಳು. ಕಮಲ ಪುಷ್ಪ ಕೆತ್ತನೆಯನ್ನು ಸಹ ಈ ಕಂಬಗಳು ಒಳಗೊಂಡಿರುವುವು. ಬೋಧಿಗೆಗಳನ್ನು ಕಂಬಗಳಲ್ಲಿ ಅಳವಡಿಸಲಾಗಿದೆ. ಗೋಡೆಯಲ್ಲಿ ಅರ್ಧಕಂಬಗಳನ್ನು ಕೂಡಾ ಜೋಡಿಸಲಗಿದೆ. ನವರಂಗದ ಮಧ್ಯದಲ್ಲಿನ ನಾಲ್ಕು ಕಂಬಗಳನ್ನೊಳಗೊಂಡಂತೆ ಅವುಗಳ ಮೇಲಿನ ಮೇಲ್ಛಾವಣಿಯು ತೆರೆದು ಕೊಂಡಿದೆ. ಸಾದಾ ಬಾಗಿಲವಾಡದ ರಚನೆ ಹಾಗೂ ಅದರಲ್ಲಿ ಲಲಾಟವನ್ನು ಕಂಡರಿಸಲಾಗಿದೆ. ನವರಂಗದಲ್ಲಿ ಸಪ್ತಮಾತೃಕೆ ಶಿಲ್ಪವನ್ನಿಡಲಾಗಿದೆ.

ದೇವಾಲಯಕ್ಕೆ ಸಾದಾ ಹೊರಗೋಡೆಯಿದೆ. ಅಧಿಷ್ಠಾನ ಭಾಗವು ಮಣ್ಣಲ್ಲಿ ಹೂತುಹೋಗಿದೆ. ಮೇಲ್ಛಾವಣಿಯ ಭಾಗವು ನೈಸರ್ಗಿಕ ವಿಕೋಪಗಳಿಂದ ದಿನದಿಂದ ದಿನಕ್ಕೆ ನಾಶವಾಗುತ್ತಿದೆ. ದೇವಾಲಯಕ್ಕೆ ಅಂದವಾದ ಶಿಖರ ಇತ್ತು. ಆದರೆ ಅದು ಕೂಡಾ ನಾಶವಾಗಿ ಸ್ವಲ್ಪ ಭಾಗ ಮಾತ್ರ ಉಳಿದುಕೊಂಡಿದೆ. ಈ ವಿಮಾನದ ತಲ ಭಾಗವನ್ನು ಮಾತ್ರ ಕಾಣುತ್ತೇವೆ.

೧೮

ಊರು ಕೊಡಗಾನೂರು
ಸ್ಮಾರಕ ಬಸವಣ್ಣ
ಸ್ಥಳ ಗ್ರಾಮದಲ್ಲಿ
ಕಾಲ ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ —-

ಪ್ರಾಚೀನ ದೇವಾಲಯವನ್ನು ಮರು ನಿರ್ಮಿಸಲಾಗಿದೆ. ಸದ್ಯ ಗರ್ಭಗೃಹ ಅಂತರಾಳ ಹಾಗೂ ನವರಂಗಗಳು ಇವೆ. ಗರ್ಭಗೃಹದಲ್ಲಿ ಭೈರವನ ಶಿಲ್ಪವಿದ್ದು ಅದಕ್ಕೆ ಇಳಿಬಿದ್ದ ಜಟೆ ಇದೆ. ಕೊರಳಲ್ಲಿ ರುಂಡಮಾಲೆ, ಕೈಯಲ್ಲಿ ತ್ರಿಶೂಲ ಹಾಗೂ ಡಮರು ಅಲ್ಲದೇ ಕೆಳಗೆ ನಾಯಿಗಳಿವೆ. ಇದೊಂದು ನಗ್ನ ಭೈರವನ ಶಿಲ್ಪವಾಗಿದ್ದು ಆದರೆ ಇತ್ತೀಚೆಗೆ ಶಿಲ್ಪದ ಶಿಶ್ನಕ್ಕೆ ಸಿಮೆಂಟನ್ನು ಬಳಿಯಲಾಗಿದೆ. ಗರ್ಭಗೃಹದಲ್ಲಿ ನಂದಿಯ ಶಿಲ್ಪವನ್ನು ಇಡಲಾಗಿದೆ. ಅಂತರಾಳದಲ್ಲಿ ಸರಸ್ವತಿ ಶಿಲ್ಪವನ್ನು ಇಡಲಾಗಿದ್ದು ಇದು ನೋಡಲು ತುಂಬಾ ಆಕರ್ಷಕವಾಗಿದೆ.

ಗರ್ಭಗೃಹ ಹಾಗೂ ಅಂತರಾಳಗಳ ಬಾಗಿಲವಾಡಗಳು ಗಿಡ್ಡದಾಗಿವೆ. ಹಾಗೂ ಅವು ಸಾದಾ ಕೆತ್ತನೆಯವುಗಳು. ಇತ್ತೀಚೆಗೆ ದೇವಾಲಯಕ್ಕೆ ಹೊಸದಾದ ನವರಂಗವನ್ನು ಕೂಡಾ ಸ್ಥಳೀಯರು ನಿರ್ಮಿಸಿದ್ದಾರೆ.. ಪ್ರಾಚೀನ ದೇವಾಲಯ ಕಂಬಗಳನ್ನು, ನಿಂತಭಂಗಿಯಲ್ಲಿರುವ ಪಾರ್ಶ್ವನಾಥನ ಶಿಲ್ಪ, ಹೆಡೆ ಎತ್ತಿ ನಿಂತಿರುವ ಆದಿಶೇಷನ ಶಿಲ್ಪಗಳನ್ನು ದೇವಾಲಯದ ಮುಂಭಾಗದಲ್ಲಿಡಲಾಗಿದೆ. ಅತ್ಯಂತ ಮುಖ್ಯವಾದ ಪ್ರಾಚ್ಯಾ ವಶೇಷವೆಂದರೆ ಶಾಸನಶಿಲ್ಪ ಬಹುಶಃ ಇದೊಂದು ಅಪ್ರಕಟಿತ ಶಾಸನವಾಗಿರಬಹುದು.

೧೯

ಊರು ಕೋಚಲಾಪುರ
ಸ್ಮಾರಕ ಮಲ್ಲಯ್ಯ ಅಜ್ಜಯ್ಯನ ಗುಡಿ
ಸ್ಥಳ ಗ್ರಾಮದ ಪಶ್ಚಿಮ
ಕಾಲ ೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ —-

ಈ ಗುಡಿಯು ಪ್ರಾಚ ಈನ ಕಾಲದ್ದೆ. ಆದರೆ ಸದ್ಯ ಅದನ್ನು ಅನೇಕ ಬಗೆಯ ದುರಸ್ತಿ ಕಾರ್ಯಗಳಿಗೆ ಒಳಪಡಿಸಲಾಗಿದೆ. ಕೇವಲ ಗರ್ಭಗೃಹವನ್ನು ಮಾತ್ರ ಹೊಂದಿದ್ದು ಉಳಿದೆಲ್ಲ, ಭಾಗಗಳು ಬಿದ್ದುಹೋಗಿವೆ. ಉಳಿದಿರುವ ಗರ್ಭಗೃಹಕ್ಕೆ ಲಪೂರ್ವ ಹಾಗೂ ದಕ್ಷಿಣಾಭಿಮುಖವಾಗಿ ಪ್ರವೇಶದ್ವಾರಗಳನ್ನು ನಿರ್ಮಿಸಿದ್ದಾರೆ. ಪ್ರಾಚೀನ ಕಾಲದ ಲಿಂಗವನ್ನು ಗರ್ಭಗೃಹದಲ್ಲಿ ಇಡಲಾಗಿದೆ. ವಿಜಯನಗರ ನಂತರ ಕಾಲದ ನಾಲ್ಕು ಕಂಬಗಳನ್ನು ಗರ್ಭಗೃಹದಲ್ಲಿ ಅಳವಡಿಸಿದ್ದಾರೆ. ಗೋಡೆಯಲ್ಲಿ ಅರ್ಧಕಂಬಗಳ ರಚನೆಗಳಿವೆ. ದೇವಾಲಯಕ್ಕೆ ಹೊಸದಾಗಿ ಶಿಖರವನ್ನು ನಿರ್ಮಿಸಿದ್ದಾರೆ.

೨೦

ಊರು ಕೋಡಿಕೊಪ್ಪ
ಸ್ಮಾರಕ ಮೂಲ ಬ್ರಹ್ಮೇಶ್ವರ
ಸ್ಥಳ ಗ್ರಾಮದಲ್ಲಿ
ಕಾಲ ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ —-

ಈ ದೇವಾಲಯವು ಗರ್ಭಗೃಹ, ಅಂತರಾಳ, ಮಂಟಪ ಹಾಗೂ ಮುಖ ಮಂಟಪಗಳನ್ನು ಹೊಂದಿರುವುದು. ಪ್ರಾಚೀನವಾದ ಈ ಸ್ಮಾರಕ ಹಲವಾರು ಕಾರಣಗಳಿಂದಾಗಿ ಭಗ್ನಾವಸ್ಥೆಗೆ ಬಂದು ತಲಪಿದೆ. ಗರ್ಭಗೃಹ ಹಾಗೂ ಅಂತರಾಳವು ಬರಿದಾಗಿವೆ. ಅಂತರಾ ಳದ ಇಕ್ಕೆಲುಗಳಲ್ಲಿ ಜಾಲಾಂಧ್ರಗಳನ್ನು ನಿರ್ಮಿಸಿದ್ದಾರೆ. .ಮಂಟಪ (ನವರಂಗ) ದಲ್ಲಿ ನಾಲ್ಕು ಕಂಬಗಳಿದ್ದು ಅವು ತಿರುಗಣಿಯ ಆಕಾರದವುಗಳು. ಕಲ್ಯಾಣ ಚಾಲುಕ್ಯರ ಶೈಲಿಯ ಈ ಕಂಬಗಳ ಮಧ್ಯೆ ಎತ್ತರದ ಕಟ್ಟೆ ಹಾಗೂ ಮೇಲ್ಛಾವಣಿಯ ಒಳಭಾಗದಲ್ಲಿ ಸುಂದರವಾದ ಭುವನೇಶ್ವರಿಯನ್ನು ಕೆತ್ತಿದ್ದಾರೆ. ಮಂಟಪದಲ್ಲಿ ಮೂರು ಕೋಷ್ಠಕಗಳಿದ್ದು ಅವುಗಳಲ್ಲಿ ಎರಡು ಬರಿದಾಗಿವೆ. ಉತ್ತರಾಭಿಮುಖವಾದ ಕೋಷ್ಠಕ (ಗೂಡು) ದಲ್ಲಿ ಪಾರ್ವತಿಯ ಶಿಲ್ಪವನ್ನು ಇಡಲಾಗಿದೆ.

ದೇವಾಲಯಕ್ಕೆ ಮುಖಮಂಟಪದ ರಚನೆ ಇರುವುದು. ಹಾಗೂ ಇಲ್ಲಿ ‘ಕಕ್ಷಾಸನ (ಕಟ್ಟೆ) ಇದೆ. ಈ ಕಟ್ಟೆಯಲ್ಲಿ ಎರಡು ಚಿಕ್ಕ ಕಂಬಗಳು ಸಹ ಇವೆ. ಮುಖಮಂಟಪದ ಬಾಗಿಲ ನಾಡಿನಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪವಿದೆ. ಅಲ್ಲದೆ ಇಲ್ಲಿರುವ ಕಟ್ಟೆಯ ಮೇಲೆ ಶಾಸನಗಳನ್ನು ಇಟ್ಟಿದ್ದಾರೆ. ಈ ಶಾಸನಗಳು ಪ್ರಕಟವಾಗಿವೆ.

ಮೂಲ ಬ್ರಹ್ಮೇಶ್ವರ ದೇವಾಲಯದ ಅಧಿಷ್ಠಾನವು ನಿರಾಲಂಕರಣೆಯದ್ದು. ದೇವಾಲಯದ ಗೋಡೆಗಳಲು ಸಹ ಸಾದಾ ರಚನೆಯಿಂದ ಕೂಡಿವೆ. ಕದಂಬ-ನಾಗರ ಶೈಲಿಯ ಶಿಖರವಚು ದೇವಾಲಯಕ್ಕಿರುವುದು. ಆದರೆ ಶಿಖರದ ಮೇಲಿನ ಕಳಸ, ಹಾಗೂ ಸ್ಥೂಪಿ ಭಾಗಗಳು ಬಿದ್ದುಹೋಗಿವೆ.

ಕ್ರಿ.ಶ.೧೨ನೆಯ ಶತಮಾನದ ಕಾಲಾವಧಿಗೆ ಸಂಬಂಧಿಸಿದ ಮೂರು ಶಾಸನಗಳು ಪ್ರಕಟಗೊಂಡಿವೆ. (ಧಾ.ಜಿ.ಶಾ.ಸೂ, ಸಂ.ರೋ ೩೪, ೩೫ ಹಾಗೂ ೩೬ ಪು.೧೭; SII, XI, pt. II. No. 170, JBRAS, XI, p. 247, SII, XV, No.28). ಪ್ರಕಟವಾಗಿರುವ ಇಲ್ಲಿನ ಯಾವೊಂದು ಶಾಸನವು ಗ್ರಾಮದ (ಕೋಡಿಕೊಪ್ಪ) ಬಗೆಗೆ ಆಗಲಿ ಇಲ್ಲಿನ ದೇವಾಲಯದ ಬಗ್ಗೆ ಆಗಲಿ ಯಾವುದೇ ಮಾಹಿತಿ ನೀಡುವುದಿಲ್ಲ. ಕಾರಣ ಕೋಡಿಕೊಪ್ಪ ಗ್ರಾಮವು ಇತ್ತೀಚೆಗೆ ನಿರ್ಮಾಣವಾಗಿದ್ದಿರಬಹುದು. ಈ ಗ್ರಾಮವು ಮೊದಲು ಪ್ರಾಚೀನ ನರೇಗಲ್‌ ಪಟ್ಟಣದ ಭಾಗವಾಗಿದ್ದಿರಬಹುದಾದ ಸಾಧ್ಯತೆಗಳಿವೆ.

ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ (ಕ್ರಿ.ಶ. ೧೧೨೨) ಕಾಲಕ್ಕೆ ಸೇರಿದ ಒಂದು ಶಾಸನವು ಮೂಲ ಬ್ರಹ್ಮೇಶ್ವರ ಗುಡಿಯಲ್ಲಿ ದೊರಕಿದೆ. ಮಹಾಮಂಡಲೇಶ್ವರ ಆಚರಸನಿಂದ ಕಿರುನರೆಯಂಗಲ್ಲದ ಮಲ್ಲೇಶ್ವರ ದೇವಾಲಯಕ್ಕೆ ಭೂದಾನ ಮಾಡಿರುವ ಉಲ್ಲೇಖವಿದೆ. ಎರಡನೆಯ ಜಗದೇಕಮಲ್ಲನ (ಕ್ರಿ.ಶ. ೧೧೪೪) ಕಾಲದ ಇನ್ನೊಂದು ಶಾಸನವು ತುಂಬುಲಿಗ ಸಾಸಿರ್ವರು ಮತ್ತು ಉಗುರು ಮನ್ನೂರ್ವರಿಂದ ಕಿಸುಕಾಡು ೭೦ ರಲ್ಲಿಯ ಕಿರುನೆರೆಯಂಗಲ್ಲದ ಮೂಲಸ್ಥಾನದ ಬ್ರಹ್ಮೇಶ್ವರ ದೇವರಿಗೆ ಎಣ್ಣೆ ಗಾಣ ಮತ್ತು ಹಣದಾನ ಮಾಡಿರು ಉಲ್ಲೇಖವಿದೆ. ಈ ಎರಡು ಶಾಸನಗಳನ್ನು ಪರಿಶೀಲಿಸಿದಾಗ ನಮಗೆ ತಿಳಿದುಬರುವ ಸಂಗತಿಗಳೆಂದರೆ, ಮೂಲ ಬ್ರಹ್ಮೇಶ್ವರನೆಂದು ಈಗ ಕರೆಯುತ್ತಿರುವ ದೇವಾಲಯವನ್ನು ಪ್ರಾಚೀನ ಶಾಸನಗಳಲ್ಲಿ ಮೊಲ್ಲೇಶ್ವರ ಮತ್ತು ಬ್ರಹ್ಮೇಶ್ವರನೆಂದು ಕರೆದಿದ್ದಾರೆ ಹಾಗೂ ಇಂದಿನ ಕೋಡಿಕೊಪ್ಪ ಗ್ರಾಮವು ಅಂದಿನ ಕಿರುನರೆಯಂಗಲ (ನರೇಗಲ್‌)ದ ಭಾಗವೇ ಆಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ನಾಲ್ಕನೆಯ ಸೋಮೇಶ್ವರನ ಕಾಲದ ಇನ್ನೊಂದು ಶಾಸನ ಈ ದೇವಾಲಯದಲ್ಲಿದೆ. ಚಾಲುಕ್ಯರ ಸಾಮಾಂತನಾದ ಸಿಂದವೀರ ಬಿಜ್ಜಣದೇವನ ಉಲ್ಲೇಖವನ್ನು ಈ ಶಾಸನ ನೀಡುತ್ತದೆ. ಹೆಚ್ಚಿನ ಮಾಹಿತಿಯನ್ನು ಇದು ಒಳಗೊಂಡಿಲ್ಲ. ಆವಾರ್ಚಿನ ಕಾಲದ ಹುಚ್ಚಿರೇಶ್ವರ ಗದ್ದುಗೆ ಕೋಡಿಕೊಪ್ಪ ಗ್ರಾಮದಲ್ಲಿದೆ. ಹಟಯೋಗಿ ಹಾಗೂ ಸಿದ್ಧಿಪುರುಷರಾದ ಹುಚ್ಚಿರಪ್ಪಜ್ಜ ಅನೇಕ ಪವಾಡಗಳನ್ನು ಮೆರೆದಿದ್ದಾನೆ. ಹೀಗಾಗಿ ಸುತ್ತಲಿನ ಪ್ರದೇಶಗಳಲ್ಲಿ ಈ ಗದ್ದುಗೆ ಹೆಚ್ಚಿನ ಮಹತ್ವ ಪಡೆದಿರುವುದು.