ರೋಣ ತಾಲ್ಲೂಕು

ರೋಣ ತಾಲ್ಲೂಕು

ಊರು ಅಬ್ಬಿಗೇರಿ
ಸ್ಮಾರಕ ಈಶ್ವರ
ಸ್ಥಳ ಕೆರೆಯ ದಂಡೆ
ಕಾಲ ಕ್ರಿ.ಶ. ೧೬-೧೭ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ದಕ್ಷಿಣ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗ್ರಾಮದ ಕೆರೆಯ ದಂಡೆಯ ಮೇಲೆ ಈ ದೇವಾಲಯವಿದ್ದು ಇದನ್ನು ನವೀಕರಿಸಲಾಗಿದೆ. ಗರ್ಭಗೃಹ, ಅಂತರಾಳ ಹಾಗೂ ಮಂಟಪ ಭಾಗಗಳನ್ನು ಈ ದೇವಾಲಯ ಹೊಂದಿರುವುದು. ಪ್ರಾಚೀನ ಗರ್ಭಗೃಹವನ್ನು ಹಾಗೇ ಉಳಿಸಿಕೊಂಡು ಉಳಿದ ಅಂಗಗಳನ್ನು ದುರಸ್ತಿಗೊಳಿಸಿದ್ದಾರೆ. ಗರ್ಭಗೃಹದಲ್ಲಿ ಲಿಂಗವಿದ್ದು ನಿತ್ಯವು ಪೂಜೆಗೊಳ್ಪಡುತ್ತದೆ. ಬಾಗಿಲವಾಡವು ಐದು ಪಟ್ಟಿಕೆಗಳ ಕೆತ್ತನೆಯಿಂದ ಕೂಡಿರುವುದು. ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪವಿದೆ. ದೇವಾಲಯಕ್ಕೆ ಅಂತರಾಳವಿದ್ದು ಅದರಲ್ಲಿ ನಂದಿ ವಿಗ್ರಹವನ್ನಿಡಲಾಗಿದೆ.

ತೆರೆದ ಮಂಟಪ ದೇವಾಲಯಕ್ಕಿದ್ದು ಅದನ್ನು ಪೂರ್ಣವಾಗಿ ನವೀಕರಿಸಲಾಗಿದೆ. ಈ ಮಂಟಪದಲ್ಲಿ ಪೂರ್ವಾಭಿಮುಖವಾದ ಎರಡು ಗೂಡುಗಳಿವೆ. ಒಂದರಲ್ಲಿ ವಿಘ್ನನ ಶಿಲ್ಪವನ್ನಟ್ಟಿದ್ದಾರೆ. ಮತ್ತೊಂದು ಖಾಲಿ ಇರುವುದು. ಮುಂಭಾಗದಲ್ಲಿ ಎರಡು ಕಂಬಗಳಿನ್ನಿಡಲಾಗಿದೆ. ಮಂಟಪದ ಪ್ರವೇಶಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ದೇವಾಲಯದ ಅಧಿಷ್ಠಾನ ಸರಳ ರಚನೆಯಿಂದ ಕೂಡಿದೆ. ಶಿಖರವು ಕದಂಬ=ನಾಗರ ಮಾದರಿಯದ್ದು.

ಅಬ್ಬಿಗೇರಿಯಲ್ಲಿರುವ ಈಶ್ವರ ದೇವಾಲಯದಲ್ಲಿ ಎರಡು ಶಾಸನಗಳಿದ್ದು ಅವು ಪ್ರಕಟಗೊಂಡಿವೆ. (ಧಾ.ಜಿ.ಶಾ.ಸೂ, ಸಂ.ರೋ ೨ ಮತ್ತು ೩, SII, XI-pt.II No 192 ಮತ್ತು ೨೦೫.ಪು.೧೬). ಎರಡು ಶಾಸನಗಳು ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸಂಬಂಧಿಸಿದ್ದು ಅವು ಕ್ರಮವಾಗಿ ಕ್ರಿ.ಶ. ೧೧೧೩ ಹಾಗೂ ೧೧೧೭ರ ತೇದಿಯನ್ನು ಒಳಗೊಂಡಿವೆ. ಹಾಗೂ ಈ ಶಾಸನಗಳು ದಾನ ನೀಡಿದ ಉಲ್ಲೇಖವನ್ನು ಪ್ರಸ್ತಾಪಿಸುತ್ತವೆ. ಆದರೆ ಈ ಎರಡು ಶಾಸನಗಳು ಭಾಗಶಃ ತೃಟಿತಗೊಂಡಿದ್ದು ಹೀಗಾಗಿ ಅಸ್ಪಷ್ಟ ಮಾಹಿತಿಗಳು ಮಾತ್ರ ಅವುಗಳಿಂದ ಸಿಕ್ಕುತ್ತದೆ.

ಊರು ಅಬ್ಬಿಗೇರಿ
ಸ್ಮಾರಕ ಜ್ಯೋತಿರ್ಲಿಂಗನ ಗುಡಿ
ಸ್ಥಳ ಗ್ರಾಮದ ಉತ್ತರ
ಕಾಲ ಕ್ರಿ.ಶ. ೧೬-೧೭ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ದಕ್ಷಿಣ
ಸ್ಥಿತಿ ಕನಿಷ್ಠ
ಸಂರಕ್ಷಣೆ  —

ಎರೆಬೇಲೆರಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಜ್ಯೋತಿರ್ಲಿಂಗನ ಗುಡಿ ತಕ್ಕಮಟ್ಟಿಗೆ ಪ್ರಾಚೀನವಾಗಿದೆ. ಗುಡಿಗೆ ಸುಣ್ಣಬಣ್ಣ ಬಳಿಯಲಾಗಿದ್ದು ಹಾಗೂ ಸಣ್ಣ – ಪುಟ್ಟ ರಿಪೇರಿ ಕೆಲಸವನ್ನು ಸಹ ಮಾಡಿದ್ದಾರೆ. ಹೀಗಾಗಿ ನಿರ್ದಿಷ್ಟವಾಗಿ ಗುಡಿಯ ನಿರ್ಮಾಣದ ಕಾಲ ಹಾಗೂ ಶೈಲಿಯ ಬಗೆಗೆ ವಿವರಿಸುವುದು ಕಷ್ಟಸಾಧ್ಯ.

ದೇವಾಲಯವು ಗರ್ಭಗೃಹ ಹಾಗೂ ನವರಂಗಗಳನ್ನು ಹೊಂದಿರುವುದು. ಗರ್ಭಗೃಹದಲ್ಲಿ ಲಿಂಗವಿದೆ. ತೆರೆದ ಅಂತರಾಳ ಭಾಗ ದೇವಾಲಯಕ್ಕಿದೆ. ಚೌಕಾಕಾರದ ನವರಂಗದಲ್ಲಿ ಗಿಡ್ಡನೆಯ ನಾಲ್ಕು ಕಂಬಗಳಿವೆ. ಅವುಗಳನ್ನೊಳಗೊಂಡಂತೆ ಎತ್ತರದ ಕಟ್ಟೆಯನ್ನು ನಿರ್ಮಿಸಲಾಗಿದೆ. ಗೂಡುಗಳಿದ್ದು ನವರಂಗದಲ್ಲಿ ಅವುಗಳೆಲ್ಲ ಬರಿದಾದವುಗಳು. ಜಾಲಾಂಧ್ರಗಳನ್ನು ಸಹ ಅಳವಡಿಸಲಾಗಿದೆ. ನವರಂಗಕ್ಕೆ ಹೊಂದಿಕೊಂಡ ಮುಂಭಾಗವನ್ನು ಪರಿಶೀಲಿಸಿದರೆ ಅದಕ್ಕೆ ಜೋಡಣೆಯಾಗಿ ಸಭಾ ಮಂಟಪವು ಇದ್ದಿರಬಹುದೆಂದು ಗೊತ್ತಾಗುವುದು.

ಇದೇ ಗುಡಿಯ ಆವರಣದಲ್ಲಿ ಬಾವಿಯೊಂದಿದೆ. ಅದರ ನಿರ್ವಹಣೆಗಾಗಿ ಭೂಮಿಯನ್ನು ದಾನ ಮಾಡಿರುವ ಉಲ್ಲೇಖವಿದೆ (ಕ್ರಿ.ಶ. ೧೭ನೇ ಶತಮಾನ). ಶಾಸನವು ಅತಿ ತ್ರುಟಿತವಾಗಿದ್ದರಿಂದ ಅದರ ನಿರ್ಮಾಣ, ಕಾಲ ಹಾಗೂ ಕಟ್ಟಿದವರ ವಿವರಗಳು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಹಿಂದೆ ವಿವರಿಸಿರುವ ಪ್ರಾಚೀನ ದೇವಾಲಯಗಳಲ್ಲದೇ ಇನ್ನೂ ಕೆಲವು ಹಳೆಯ ಅವಶೇಷಗಳು ಗ್ರಾಮದಲ್ಲಿವೆ. ಸುಟ್ಟಬಸಪ್ಪನ ಗುಡಿ ಹಾಗೂ ಗ್ರಾಮದ ಚಾವಡಿ (ನ್ಯಾಯಕಟ್ಟೆ) ಹತ್ತಿರ ಪ್ರಾಚೀನ ಕುರುಹುಗಳು ಕಂಡುಬಂದಿವೆ. ಜ್ಯೋತಿರ್ಲಿಂಗ ಹಾಗೂ ಈಶ್ವರ ದೇವಾಲಯಗಳಿಗೆ ಸಂಬಂಧಿಸಿದ ಶಾಸನಗಳನ್ನು ಹೊರತಪಡಿಸಿ ಇನ್ನೂ ಎಂಟು ಶಾಸನಗಳು ಪ್ರಕಟವಾಗಿವೆ. (ಧಾ.ಜಿ.ಶಾ.ಸೂ, ಸಂ.ರೋ ೧ ಮತ್ತು ೪ ಮತ್ತು ೫, ಪು.೧೬; SII, XI-II No 163, No 176 ಮತ್ತು SII, XV No.68). ಗ್ರಾಮದ ಚಾವಡಿ ಹತ್ತಿರ ಇರುವ ಕ್ರಿ.ಶ.೧೧೧೩ರ ತೇದಿವುಳ್ಳ ಶಾಸನವು (ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯ) ಮಹಾಮಂಡಲೇಶ್ವರ ಆಚರಸನಿಂದ ದೇವಿಂಗೆರೆಗೆ ಭೂಮಿಯನ್ನು ದಾನ ನೀಡಿರುವ ಮಾಹಿತಿಯನ್ನು ವಿವರಿಸುತ್ತದೆ. ಇದೇ ಸ್ಥಳದಲ್ಲಿರುವ ಇನ್ನೊಂದು ಶಾಸನವು ಕಲಚೂರಿ ಸೋವಿದೇವ (ಕ್ರಿ.ಶ. ೧೧೭೪) ನ ಕಾಲಕ್ಕೆ ಸಂಬಂಧಿಸಿದ್ದು. ಮಾಂಡಳಿಕ ಸಿಂದ ಬಮ್ಮರಸನು ಕುಪ್ಪೇಶ್ವರ ದೇವರಿಗೆ ಭೂದಾನ ಮಾಡಿ ಪುಣ್ಯಪ್ರಾಪ್ತಿ ಪಡೆದುಕೊಂಡಿರುವ ಮಾಹಿತಿ ಇದೆ. ಹಾಗೂ ಅದೇ ಕಲ್ಲಿನಲ್ಲಿ ದಾನ ಕಾರ್ಯದ ಇನ್ನು ಕೆಲವು ವಿವರಣೆಗಳಿವೆ. ಕಲ್ಯಾಣ ಚಾಲುಕ್ಯ ನಾಲ್ಕನೆಯ ಸೋಮೇಶ್ವರನು (ಕ್ರಿ.ಶ.೧೧೮೬) ಕುಪ್ಪೇಶ್ವರ ದೇವರಿಗೆ ಭೂಮಿಯನ್ನು ದಾನ ಮಾಡಿರುವ ಉಲ್ಲೇಖವಿದೆ.

ಸುಟ್ಟ ಬಸಪ್ಪನ ಗುಡಿಯ ಮುಂಭಾಗದಲ್ಲಿರುವ ಕ್ರಿ.ಶ. ೧೧೨೫ ಶಾಸನವು ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸಂಬಂಧಿಸಿದೆ. (ಧಾ.ಜಿ.ಶಾ.ಸೂ, ಸಂ.ರೋ ೪ ಪು.೧೬; SII, XI-II No. 176). ಮಹಾಜನರು ಅಬ್ಬೆಯಗೆರೆಯ ಸೋಮೇಶ್ವರ ದೇವರಿಗೆ ಭೂಮಿಯನ್ನು ದಾನವಾಗಿ ನೀಡುತ್ತಾರೆ. ಆದರೆ ಶಾಸನದಲ್ಲಿ ಉಲ್ಲೇಖಿತ ಸೋಮೇಶ್ವರನ ದೇವಾಲಯ ಯಾವುದು ಎಂಬುದು ಸ್ಪಷ್ಟತೆ ಇಲ್ಲ. ಬಹುಶಃ ಈಶ್ವರನ ದೇವಾಲಯವೇ ಶಾಸನದಲ್ಲಿ ಉಲ್ಲೇಖಿತವಾಗಿರುವ ಸೋಮೇಶ್ವರ ದೇವಾಲಯವಾಗಿರಬಹುದೇ? ಅಥವಾ ಈ ಹೆಸರಿನ ದೇವಾಲಯ ಪೂರ್ಣವಾಗಿ ಹಾಳಾಗಿ ಹೋಗಿರಬಹುದೇ? ಎಂಬುದು ಕುತೂಹಲದ ವಿಷಯ. ಚೌಕಿಮಠದ ಹತ್ತಿರ ಇನ್ನೊಂದು ಶಾಸನವು (ಧಾ.ಜಿ.ಶಾ.ಸೂ, ಸಂ.ರೋ ೭, ಪುಟ.೧೬; SII, XV No 243) ಕಂಡುಬಂದಿದೆ ಕ್ರಿ.ಶ. ೧೨ನೆಯ ಶತಮಾನದ್ದು. ಸಿಂದ ಬಿಜ್ಜಳನಿಗೆ ಸೇರಿದೆ. ಬಿಜ್ಜಣ ಹಾಗೂ ವಿಕ್ರಮರಿಂದ ಮೂಲಸ್ಥಾನ ದೇವರಿಗೆ ಭೂಮಿಯನ್ನು ದಾನ ನೀಡಿರುವ ಮಾಹಿತಿ ಇದೆ. ಇಲ್ಲಿ ಉಲ್ಲೇಖಿತವಾಗಿರುವ ಮೂಲಸ್ಥಾನ ದೇವರ ಬಗೆಗೆ ಹೆಚ್ಚಿನ ಮಾಹಿತಿ ಇಲ್ಲ.

ವಿಜಯನಗರ ಆಡಳಿತಕ್ಕೆ ಸಂಬಂಧಿಸಿದ ಎರಡು ಶಾಸನಗಳು (ಧಾ.ಜಿ.ಶಾ.ಸೂ, ಸಂ.ರೋ ೮ ಮತ್ತು ೯ ಪು.೧೬; SII, XV-II No.244 KI, VI 60) ಪ್ರಕಟವಾಗಿವೆ. ಕ್ರಿ.ಶ. ೧೩೭೯ರ ತೇದಿವುಳ್ಳ ಎರಡನೆಯ ಹರಿಹರನ ಕಾಲದ ಹಾಗೂ ಕ್ರಿ.ಶ. ೧೫೪೧ರ ಅಚ್ಯುತರಾಯನ ಕಾಲದ ಶಾಸನಗಳು ಇವಾಗಿವೆ. ಕ್ರಿ.ಶ.೧೩೭೯ರ ಕಾಲಕ್ಕೆ ಸಂಬಂಧಿಸಿದ ಶಾಸನದಿಂದ ಯರಿಗೇರಿಯ ಹೇಮಾದ್ರಿ ಆಚಾರ್ಯನಿಗೆ ಅರಸನು ಗ್ರಾಮದಾನ ಮಾಡಿರುವ ವಿಷಯ ತಿಳಿದುಬರುವುದು. ಉಡಚವ್ವನ ಗುಡಿಯ ಹತ್ತಿರ ಸಿಗುವ ಕ್ರಿ.ಶ.೧೫೪೧ರ ಶಾಸನವು ಹೊನ್ನಾಪುರದ ಯುದ್ಧದಲ್ಲಿ ತಿಮ್ಮಣನು ವೀರಮರಣ ಹೊಂದಿರುವ ಉಲ್ಲೇಖವನ್ನು ತಿಳಿಸುತ್ತದೆ. ವಿಜಯನಗರೋತ್ತರ ಕಾಲದ ಇನ್ನೊಂದು ಶಾಸನವು ಎಮ್ಮಿ ಕಲ್ಲು ಹೊಲದಲ್ಲಿ ಕಂಡುಬಂದಿರುವುದು. (ಧಾ.ಜಿ.ಶಾ.ಸೂ, ಸಂ.ರೋ ೧೧ ಪು.೧೬;SII, XI-II No 719). ಸ್ಥಳೀಯ (ಬರಿಗೆಯ) ನಾಯಕನೊಬ್ಬ ಭೂಮಿಯನ್ನು ದಾನ ಮಾಡಿರುವ ಮಾಹಿತಿ ಇದೆ. ಐತಿಹಾಸಿಕ ಮಹತ್ವವುಳ್ಳ ಈ ಪ್ರಾಚೀನ ಗ್ರಾಮದಲ್ಲಿ ಇತಿಹಾಸಪೂರ್ವದ ಯಾವ ಕುರುಹುಗಳು ಕಂಡುಬಂದಿಲ್ಲ.

ಊರು ಅಸೂಟಿ
ಸ್ಮಾರಕ ಕಲ್ಮೇಶ್ವರ
ಸ್ಥಳ ಗ್ರಾಮದಲ್ಲಿ
ಕಾಲ  
ಶೈಲಿ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಪೂರ್ವಕ್ಕೆ ಮುಖಮಾಡಿರುವ ಈ ದೇವಾಲಯ ಗ್ರಾಮದ ಮಧ್ಯಭಾಗದಲ್ಲಿದೆ. ಪ್ರಾಚೀನ ಗರ್ಭಗೃಹ ಅಂತರಾಳ ಹಾಗೂ ಮಂಟಪದ ಭಾಗಗಳು ಸಂಪೂರ್ಣವಾಗಿ ಬಿದ್ದಿವೆ. ಆದರೆ ಗರ್ಭಗೃಹವೊಂದನ್ನು ಮಾತ್ರ ಸ್ಥಳೀಯರು ಹೊಸದಾಗಿ ನಿರ್ಮಿಸಿದ್ದಾರೆ. ಪ್ರಾಚೀನ ಲಿಂಗ ಹಾಗೂ ನಂದಿ ಶಿಲ್ಪಗಳನ್ನು ದೇವಾಲಯದಲ್ಲಿ ಇಡಲಾಗಿದೆ. ಇತಿಹಾಸ ಕಥನವನ್ನು ತಿಳಿಹೇಳುವ ಗೋಸಾಸದ ಕಲ್ಲುಗಳನ್ನು ಗುಡಿಯ ಮುಂಭಾಗದಲ್ಲಿ ಇಟ್ಟಿದ್ದಾರೆ. ಕಲ್ಮೇಶ್ವರ ದೇವಾಲಯದ ಮುಂಭಾಗದಲ್ಲಿ ಬಸವಣ್ಣನ ಹೆಸರಿನ ಮತ್ತೊಂದು ದೇವಾಲಯ ಒಂದಿದೆ. ಅದು ಸಹ ಪ್ರಾಚೀನ ಕಾಲದ್ದೆ. ಆದರೆ ಅದನ್ನು ಕೂಡಾ ಸಂಪೂರ್ಣವಾಗಿ ನವೀಕರಿಸಿ ಕಟ್ಟಿದ್ದಾರೆ ಹಾಗೂ ಪ್ರಾಚ್ಯಾವಶೇಷಗಳನ್ನು (ನಂದಿ, ಗಣೇಶ ಹಾಗೂ ಲಿಂಗ) ಗುಡಿಯ ಆವರಣದಲ್ಲಿ ಇಡಲಾಗಿದೆ.

ಇದೇ ಗ್ರಾಮದಲ್ಲಿ ಪಂಚಲಿಂಗೇಶ್ವರನೆಂಬ ಪ್ರಾಚೀನ ದೇವಾಲಯ ಇದ್ದಿರುವ ಕುರುಹುಗಳಿವೆ. ಆದರೆ ಅದನ್ನು ಸಹ ಹೊಸದಾಗಿ ದುರಸ್ತಿ ಕಾರ್ಯಕ್ಕೆ ಒಳಪಡಿಸಿದ್ದಾರೆ. ಹಳೆಯ ದೇವಾಲಯದ ಲಿಂಗ ಹಾಗೂ ನಂದಿಶಿಲ್ಪಗಳನ್ನು ಸುರಕ್ಷಿತವಾಗಿ ದೇವಾಲಯದ ಆವರಣದಲ್ಲಿಡಲಾಗಿದೆ. ಅಸೂಟಿ ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ಶಾಸನ ಉಲ್ಲೇಖಗಳು ಈವರೆಗೂ ಕಂಡುಬಂದಿಲ್ಲ. ಆದರೆ ಇತಿಹಾಸಪೂರ್ವ ಯುಗದ ಪ್ರಾಚ್ಯಾವಶೇಷಗಳು ಗ್ರಾಮದ ಸುತ್ತಲೂ ಕಂಡುಬಂದಿವೆ. ಪ್ರಸಿದ್ಧ ಭೂಗರ್ಭ-ಪುರಾತತ್ವ ತಜ್ಞರಾದ ಪ್ರೊ.ಆರ್.ವ್ಹಿ ಜೋಶಿ ಅವರು ಅಸೂಟಿ ಸುತ್ತಲೂ ಅದಿ ಹಳೆಯ (Early) Palaeolithic) ಶಿಲಾಯುಗದ ಆಯುಧಗಳನ್ನು ಪತ್ತೇ ಹಚ್ಚಿ ಪ್ರಕಟಿಸಿದ್ದಾರೆ. (ಜೋಶಿ.ಆರ್.ವ್ಹಿ.೧೯೭೫, ಪ್ಲೈಸ್ಟೋಸೀನ್ ಸ್ಟಡೀಸ್‌ ಇನ್‌ ದಿ ಮಲಪ್ರಭಾ ಬೆಸನ್‌, ಪೂನಾ-ಧಾರವಾಡ). ಈ ನೆಲೆಯು ಕರ್ನಾಟಕದ ಪುರಾತತ್ವ ಅಧ್ಯಯನದಲ್ಲಿ ಹೆಚ್ಚಿನ ಮಹತ್ವ ಪಡೆದಿದೆ.

ಊರು  ಇಟಗಿ
ಸ್ಮಾರಕ  ಶಂಭುಲಿಂಗ ದೇವಾಲಯ
ಸ್ಥಳ  ಕಲ್ಯಾಣ ಚಾಲುಕ್ಯ
ಕಾಲ  ಪೂರ್ವ
ಶೈಲಿ  ಕೆರೆಯ ದಂಢೆ
ಅಭಿಮುಖ  ೧೨ನೆಯ ಶತಮಾನ
ಸ್ಥಿತಿ  ಕನಿಷ್ಠ
ಸಂರಕ್ಷಣೆ  —

ಪೂರ್ವಕ್ಕೆ ಮುಖಮಾಡಿರುವ ಪ್ರಾಚೀನ ಶಂಭುಲಿಂಗ ದೇವಾಲಯ, ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮಂಟಪಗಳನ್ನು ಹೊಂದಿದೆ. ಗ್ರಾಮದ ಕೆರೆಯ ದಂಡೆಯ ಮೇಲಿರುವ ಸ್ಮಾರಕ ಅಲಕ್ಷತೆಗೆ ಒಳಗಾಗಿದೆ. ಆದರೂ ಸ್ಥಳೀಯ ಜನತೆ ದೇವಾಲಯವನ್ನು ಸುರಕ್ಷಿತವಾಗಿಡುವ ಪ್ರಯತ್ನ ಮಾಡಿದ್ದಾರೆ.

ಗರ್ಭಗೃಹದಲ್ಲಿ ಲಿಂಗವಿದೆ. ಒಳ ಗೋಡೆಯಲ್ಲಿ ಅರ್ಧಕಟ್ಟೆಯನ್ನು ನಿರ್ಮಿಸಲಾಗಿದೆ. ಅದರ ಬಾಗಿಲವಾಡವು ಮೂರು ಪಟ್ಟಿಕೆಗಳನ್ನು ಒಳಗೊಂಡಿದೆ. ಮೊದಲನೆಯ ಪಟ್ಟಿಯಲ್ಲಿ ವಜ್ರಾಕೃತಿ ಕೆತ್ತನೆಯನ್ನು ಚಿತ್ರಿಸಲಾಗಿದೆ. ಎರಡನೆಯ ಪಟ್ಟಿಯು ಹೊಸೆದ ಹಗ್ಗದ ರೀತಿಯ ಅಲಂಕಾರದಿಂದ ಕೂಡಿದೆ. ಅಲ್ಲದೇ ಈ ಎರಡು ಪಟ್ಟಿಗಳ ಸುತ್ತಲೂ ಚಿಕ್ಕ ಗೆರೆಯ ಪಟ್ಟಿಗಳನ್ನು ನಿರ್ಮಿಸಲಾಗಿದೆ. ಗರ್ಭಗೃಹದ ಬಾಗಿಲವಾಡದ ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪವಿದೆ.

ಅಂತರಾಳವು ಬರಿದಾಗಿದೆ. ಇದರ ಬಾಗಿಲವಾಡವು ಕೂಡಾ ಮೇಲೆ ವಿವರಿಸಿರುವ ಗರ್ಭಗೃಹದ ಬಾಗಿಲವಾಡ ರೀತಿಯಲ್ಲಿಯೆ ನಿರ್ಮಿಸಲಾಗಿದೆ ಹಾಗೂ ಇಕ್ಕೆಲಗಳಲ್ಲಿ ಜಾಲಾಂಧ್ರ (ಕಿಟಕಿ) ಗಳನ್ನು ಅಳವಡಿಸಲಾಗಿದೆ. ಅಂತರಾಳದ ಬಾಗಿಲವಾಡಕ್ಕಿರುವ ಹೊಸ್ತಿಲು ಹಾಗೂ ಮೇಲ್ಭಾಗದಲ್ಲಿರುವ ಪಟ್ಟಿಕೆಯು ಸುಂದರವಾಗಿವೆ.

ದೇವಾಲಯದ ನವರಂಗ ವಿಶಾಲವಾಗಿದ್ದು ಅದರಲ್ಲಿ ನಾಲ್ಕು ಕಂಬಗಳಿವೆ. ಅವು ಅಲಂಕಾರವಾಗಿವೆ. ನಾಲ್ಕು ಕಂಬಗಳನ್ನೊಳಗೊಂಡಂತೆ ಒಂದು ಎತ್ತರದ ಕಟ್ಟೆಯಿದೆ. ಇಲ್ಲಿರುವ ಕಂಬಗಳನ್ನು ತಿರುಗಣಿ ಯಂತ್ರದಿಂದ ರಚಿಸಲಾಗಿದೆ. ಅಲಂಕಾರದಿಂದ ಕೂಡಿರುವ ಕಂಬಗಳು ಅಧಿಷ್ಠಾನ, ದಂಡ ಭಾಗ ಹಾಗೂ ಚೌಕಾಕಾರದ ಬೋಧಿಗೆಗಳನ್ನು ಹೊಂದಿವೆ. ನವರಂಗದ ಮೇಲ್ಛಾವಣಿಯಲ್ಲಿ ದೊಡ್ಡ ತೊಲೆಗಳನ್ನು ಜೋಡಿಸಲಾಗಿದೆ. ಭುವನೇಶ್ವರಿ ಕೆತ್ತನೆ ಮಾಡಲಾಗಿದೆ. ನವರಂಗದ ಗೋಡೆಯಲ್ಲಿರುವ ಅರ್ಧಕಂಬಗಳು ಹೆಚ್ಚಿನ ಅಲಂಕಾರದಿಂದ ಕೂಡಿವೆ. ಗಂಟೆ ಆಕಾರದ, ಷಟ್‌ಕೋನಾಕೃತಿಯ ಹಾಗೂ ಇನ್ನೂ ಹಲವು ಮಾದರಿಯ ಅಲಂಕಾರವನ್ನು ಅರ್ಧಕಂಬಗಳಲ್ಲಿ ಮಾಡಲಾಗಿದೆ. ನವರಂಗದಲ್ಲಿ ಒಟ್ಟು ನಾಲ್ಕು ಗೂಡುಗಳಿವೆ. ಇಲ್ಲಿಯ ಗೂಡುಗಳನ್ನು ಶಿಖರ ಕೆತ್ತನೆಯಿಂದ ಅಂದಗೊಳಿಸಲಾಗಿದೆ. ಈ ಶಿಖರಗಳು ವೇಸರ ಮಾದರಿಯವು.

ನವರಂಗದಲ್ಲಿನ ಗೂಡುಗಳಲ್ಲಲಿ ತ್ರುಟಿತವಾಗಿರುವ ಬಿಡಿ ಶಿಲ್ಪಗಳಿವೆ. ಕುಕ್ಕಟಾಸನದಲ್ಲಿ ಕುಳಿತ ಚಾಮುಂಡಿ (ಮಹಿಷಾಸುರ ಮರ್ದಿನಿ) ಶಿಲ್ಪವಿದೆ. ಇನ್ನುಳಿದ ಗೂಡುಗಳಲ್ಲಿ ನಂದಿ ಹಾಗೂ ಚತುರ್ಮುಖ ಬ್ರಹ್ಮನ ಶಿಲ್ಪಗಳನ್ನು ಇಡಲಾಗಿದೆ. ಇಲ್ಲಿರುವ ಶಿಲ್ಪಗಳು ಹೆಚ್ಚಿನಂಶ ಭಗ್ನಗೊಂಡವುಗಳು.

ವಿಶಾಲವಾಗಿರುವ ಮಂಟಪ ದೇವಾಲಯಕ್ಕಿದೆ. ಐದು ಕಡೆಗೆ ಪ್ರವೇಶ ನಿರ್ಮಿಸಲಾಗಿದೆ. ಈ ಮಂಟಪವು ಕಕ್ಷಾಸನ ಹೊಂದಿದೆ. ಈ ಕಟ್ಟೆಯಲ್ಲಿ ಕಂಬಗಳಿವೆ. ಇಲ್ಲಿರುವ ಕಂಬಗಳು ದುಂಡಾಕೃತಿ ಹಾಗೂ ಚೌಕಾಕಾರವಾಗಿವೆ. ಮಂಟಪದ ಮಧ್ಯಭಾಗದಲ್ಲಿ ನಾಲ್ಕು ಕಂಬಗಳನ್ನು ನಿಲ್ಲಿಸಲಾಗಿದೆ. ಭುವನೇಶ್ವರಿಯನ್ನು ಚಿತ್ರಿಸಲಾಗಿದೆ. ಮಂಟಪದ ಪ್ರವೇಶದಲ್ಲಿ ಗಜ ಶಿಲ್ಪಗಳನ್ನು ಇಡಲಾಗಿದೆ. ಮುಖ್ಯ ದ್ವಾರದಲ್ಲಿ ನಿಲ್ಲಿಸಿರುವ ಕಂಬಗಳು ಸುಂದರವಾಗಿವೆ. ಈ ಕಂಬಗಳಲ್ಲಿ ಚಿಕ್ಕ ಚಿಕ್ಕ ಕಂಬಗಳನ್ನು ಪ್ರತ್ಯೇಕವಾಗಿ ನಿರ್ಮಿಸಿ ಅವುಗಳನ್ನು ಜೋಡಿಸಿದಂತೆ ಕಾಣುತ್ತದೆ. ಮಂಟಪದ ಸುತ್ತಲೂ ಮಂಜೂರಿ (ಛತ್ತ) ನ ಭಾಗವನ್ನು ನಿರ್ಮಿಸಲಾಗಿದೆ. ಮಂಟಪದ ಹೊರಭಾಗದ ಅಧಿಷ್ಠಾನದಲ್ಲಿ ಗಳ ಹಾಗೂ ಕಪೋತಗಳನ್ನು ರಚಿಸಲಾಗಿದೆ. ಸುತ್ತಲೂ ಪುಷ್ಟಪಟ್ಟಿಕೆಯ ಅಲಂಕಾರವನ್ನು ಬಿಡಿಸಲಾಗಿದೆ.

ದೇವಾಲಯದ ಹೊರಗೋಡೆಯ ಭಾಗಗಳು ಹಾಗೂ ಅಧಿಷ್ಠಾನವು ಅಲ್ಲಲ್ಲಿ ಕ್ಷೀಣಿಸುತ್ತಿದೆ. ಅರ್ಧಕಂಬಗಳನ್ನು ಹೊರಗೋಡೆಯಲ್ಲಿ ನಿರ್ಮಿಸಲಾಗಿದೆ. ಹಾಗೂ ಗಚ್ಚನ್ನು ಸ್ಮಾರಕ ನಿರ್ಮಾಣದಲ್ಲಿ ಯಥೇಚ್ಛವಾಗಿ ಬಳಸಿದ್ದಾರೆ. ದೇವಾಲಯದ ಅಧಿಷ್ಠಾನದಲ್ಲಿ ಉಪಾನ, ಕಪೋತ ಹಾಗೂ ಗಳ ಭಾಗಗಳನ್ನು ರಚಿಸಲಾಗಿದೆ.

ಶಿಖರಭಾಗವು ಬಿದ್ದಿದೆ. ಬಿದ್ದುಹೋಗಿರುವ ಶಿಖರದ ಕುರುಹುಗಳು ದೇವಾಲಯದ ಆವರಣದಲ್ಲಿ ಕಂಡುಬರುತ್ತವೆ. ಶಿಖರ ಭಾಗದಲ್ಲಿದ್ದ ಕೀರ್ತಿಮುಖ ಹಾಗೂ ಇತರ ಫಲಕಗಳು ಹಾಗೆಯೆ ಉಳಿದಿವೆ.

ಕ್ರಿ.ಶ. ೧೦೫೪ರ ತೇದಿಯ ಶಾಸನವೊಂದು ಈ ದೇವಾಲಯಕ್ಕೆ ಸಂಬಂಧಿಸಿದಂತೆ ಪ್ರಕಟವಾಗಿದೆ. ಕಲ್ಯಾಣ ಚಾಲುಕ್ಯ ಒಂದನೆಯ ಸೋಮೇಶ್ವರನ ಕಾಲದ ಈ ಶಾಸನವು ಕಿಸುಕಾಡು (ಧಾಜಿಶಾಸೂ, ಸಂ, ರೋ, ೧೨, ಪು.೧೬) ನಾಡಿನಲ್ಲಿಯ ಇಟ್ಟಿಗೆಯ ಮಹಾ ಅಗ್ರಹಾರ, ಶ್ರೀಪತಿ ಚಮೂಪನ ಜನ್ಮಭೂಮಿ ಎಂದು ಉಲ್ಲೇಖಿಸಿದೆ . ಇಲ್ಲಿರುವ ವಿವರಣೆಯಿಂದ ಹಲವಾರು ಮಾಹಿತಿಗಳು ತಿಳಿದುಬರುತ್ತವೆ. ಕಿಸುಕಾಡು (ಪಟ್ಟದಕಲ್ಲು) ಕಲ್ಯಾಣ ಚಾಲುಕ್ಯರ ಉಪ ರಾಜಧಾನಿ ಪಟ್ಟಣಗಳಲ್ಲಿ ಪ್ರಮುಖಸ್ಥಾನ ಪಡೆದಿತ್ತು. ಇಂಥ ನಾಡಿನಲ್ಲಿರುವ ಇಟಗಿಯು ಮಹಾ ಅಗ್ರಹಾರವಾಗಿತ್ತು ಎಂಬುದು ತುಂಬಾ ಮುಖ್ಯವಾದುದು. ಅಲ್ಲದೆ ಇದೇ ಅಗ್ರಹಾರದಲ್ಲಿ ಶ್ರೀಪತಿ ಚಮೂಪನ ಜನ್ಮ ಪಡೆದಿರುವ ಬಗೆಗೆ ವಿವರಣೆ ಇದೆ. ಉಲ್ಲೇಖಿತ ಶ್ರೀಪತಿ ಚಮೂಪನು ಬಹುಶಃ ಬಹಳ ದೊಡ್ಡ ಸಾಧಕನೆ ಆಗಿರಬಹುದು. ಈ ಹೆಸರಿನ ಉಲ್ಲೇಖ ತಾಲೂಕಿನ ಹಾಗೂ ಸುತ್ತಲಿನ ಪ್ರದೇಶದ ಅನೇಕ ಶಾಸನಗಳಲ್ಲಿ ಕಂಡುಬರುತ್ತವೆ. ಅದರ ಬಗ್ಗೆ ಹೆಚ್ಚಿನ ಅಧ್ಯಯನದ ಜರೂರಿದೆ.

ಊರು ಇಟಗಿ
ಸ್ಮಾರಕ ಭೀಮಾಂಬಿಕೆ
ಸ್ಥಳ ಆಧುನಿಕ
ಕಾಲ ಉತ್ತರ
ಶೈಲಿ ಗ್ರಾಮದಲ್ಲಿ
ಅಭಿಮುಖ ೧೯ನೆಯ ಶತಮಾನ
ಸ್ಥಿತಿ ಸಾಧಾರಣ
ಸಂರಕ್ಷಣೆ

ತನ್ನದೇ ಆದ ಆದರ್ಶ ಗುಣಗಳಿಂದ ಲಕ್ಷಾನುಗಟ್ಟಲೇ ಜನರನ್ನು ಆಕರ್ಷಿಸಿರುವ ಭೀಮಾಂಬಿಕೆ ಉತ್ತರಕರ್ನಾಟಕದ ಎಲ್ಲ ಪ್ರದೇಶಗಳಲ್ಲೂ ಚಿರಪರಿಚಿತ. ಮಾನವತ್ವದಿಂದ ದೈವತ್ವಕ್ಕೇರಿದ ಮಹಾಸಾದ್ವಿ ಇವಳು. ಇಟಗಿ ಗ್ರಾಮದ ಬಡ ನೇಕಾರರ ಕುಟುಂಬದಲ್ಲಿ ಜನ್ಮತಾಳಿ ಬದುಕಿನುದ್ದಕ್ಕೂ ಅನೇಕ ಪವಾಡಗಳಿಂದ ಜನರ ಕಷ್ಟಗಳನ್ನು ದೂರಮಾಡಿ ಪರಿಹರಿಸಿದ ಅಧಿದೇವತೆ ಜನರಲ್ಲಿ ಕಾಯಕದ ಮಹತ್ವವನ್ನು ತಿಳಿಸಿ ಸದುದ್ದೇಶದ ಮಾರ್ಗದಲ್ಲಿ ನಡೆಯುವಂತೆ ಮಾಡಿದ ಧರ್ಮ ಸುಧಾರಕಿ. ಈ ದೇವತೆಯ ಹಾಗೂ ಅವಳ ತಾಯಿ ಹನುಮಮ್ಮಳ ಗದ್ದುಗೆ ಗ್ರಾಮದಲ್ಲಿದೆ. ನಿತ್ಯವು ಸಾವಿರಾರು ಸಂಖ್ಯೆಯಲ್ಲಿ ಜನರು ಈ ಸುಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಇಷ್ಟಗಳನ್ನು ಈಡೇರಿಸಿಕೊಳ್ಳುತ್ತಾರೆ.

ಊರು ಇಟಗಿ
ಸ್ಮಾರಕ ರಾಮಲಿಂಗ
ಸ್ಥಳ ಗ್ರಾಮದಲ್ಲಿ
ಕಾಲ ೧೯ನೆಯ ಶತಮಾನ
ಶೈಲಿ ಆಧುನಿಕ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಗ್ರಾಮದಲ್ಲಿರುವ ರಾಮಲಿಂಗನ ಗುಡಿಯೂ ಪ್ರಾಚೀನ ಕಾಲದ್ದಾಗಿದ್ದರೂ ಅದು ಅನೇಕ ಬದಲಾವಣೆಗೊಳಗಾಗಿ ಹೊಸ ನೋಟವನ್ನು ಪಡೆದು ನಿಂತಿದೆ. ಗರ್ಭಗೃಹ ಹಾಗೂ ಅಂತರಾಳದ ಭಾಗಗಳು ಮಾತ್ರ ಉಳಿದುಕೊಂಡಿವೆ. ಗರ್ಭಗೃಹದ ಒಳಗೋಡೆಯಲ್ಲಿ ಅರ್ಧ ಕಟ್ಟೆಯ ರಚನೆ ಮಾಡಲಾಗಿದೆ. ಪ್ರಾಚೀನ ಲಿಂಗ ಹಾಗೂ ನಾಗ ಶಿಲ್ಪಗಳು ಗರ್ಭಗೃಹದಲ್ಲಿವೆ. ಉಳಿದ ಹಾಗೆ ದೇವಾಲಯದ ಹೊರಗೋಡೆ, ಅಧಿಷ್ಠಾನ ಹಾಗೂ ಮೇಲ್ಛಾವಣಿಯ ಭಾಗಗಳನ್ನು ರಿಪೇರಿ ಮಾಡಲಾಗಿದೆ. ರಾಮಲಿಂಗನ ಗುಡಿಯ ಪಕ್ಕದಲ್ಲಿ ವೀರಭದ್ರನ ದೇವಾಲಯವೊಂದಿದೆ. ಅದನ್ನು ಸಹ ಹೊಸದಾಗಿ ಮರು ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ವೀರಭದ್ರನ ಶಿಲ್ಪವನ್ನಿಡಲಾಗಿದೆ. ದೇವಾಲಯಕ್ಕೆ ಸಂಬಂಧಿಸಿದ ಪ್ರಾಚೀನ ದಾಖಲೆಗಳಾವವು ಕಂಡುಬಂದಿಲ್ಲ.

ಊರು ಊಣಚಗೇರಿ
ಸ್ಮಾರಕ ಸಂಗಮೇಶ್ವರ (ಕಲ್ಗುಡಿ)
ಸ್ಥಳ ಕಲ್ಯಾಣ ಚಾಲುಕ್ಯ
ಕಾಲ ಪೂರ್ವ
ಶೈಲಿ ಗ್ರಾಮದಲ್ಲಿ
ಅಭಿಮುಖ ೧೨-೧೩ನೆಯ ಶತಮಾನ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯವನ್ನು ನಾನಾ ಹೆಸರುಗಳಿಂದ ಕರೆಯುತ್ತಾರೆ. ಅವುಗಳಲ್ಲಿ ಸಂಗಮೇಶ್ವರ, ಕಲ್ಗುಡಿ ಹಾಗೂ ಈಶ್ವರ ಎಂಬ ಹೆಸರುಗಳು ಪ್ರಮುಖವಾಗಿವೆ. ಪೂರ್ವಾಭಿಮುಖವಾಗಿರುವ ಈ ದೇವಾಲಯ ಪೂರ್ಣವಾಗಿ ಬಿದ್ದುಹೋಗುವ ಸ್ಥಿತಿಗೆ ಬಂದು ತಲುಪಿದೆ. ಗರ್ಭಗೃಹ, ಅಂತರಾಳ ಹಾಗೂ ನವರಂಗಗಳು ದೇವಾಲಯಕ್ಕಿವೆ. ದೇವಾಲಯದ ಭಾಗಗಳು ಹಾಗೂ ಮೇಲ್ಛಾವಣಿಯು ಅಲ್ಲಲ್ಲಿ ಕ್ಷೀಣಿಸಿದೆ.

ಗರ್ಭಗೃಹದಲ್ಲಿ ಇತ್ತೀಚೆಗೆ ನಿರ್ಮಿಸಿದ ಲಿಂಗವನ್ನಿಡಲಾಗಿದೆ. ಗರ್ಭಗೃಹಕ್ಕೆ ಸಾದಾ ಬಾಗಿಲವಾಡ ಇರುವುದು. ಗರ್ಭಗೃಹದಲ್ಲಿ ಭುವನೇಶ್ವರಿಯಿದೆ. ಅಂತರಾಳವು ಬಿದ್ದುಹೋಗುವ ಸ್ಥಿತಿಯಲ್ಲಿರುವುದು. ಅದರಲ್ಲಿ ನಂದಿಯನ್ನು ಇಡಲಾಗಿದೆ. ಅಂತರಾಲದ ಬಾಗಿಲವಾಡವನ್ನು ಜಾಲಾಂಧ್ರಗಳಿಂದ ನಿರ್ಮಿಸಲಾಗಿದೆ. ಎರಡು ಕಡೆಗೆ ಗೂಡುಗಳಿದ್ದು ಅವು ಸ್ಥಳೀಯ ಲಕ್ಷಣಗಳನ್ನೇ ಹೆಚ್ಚಾಗಿ ಪ್ರತಿನಿಧಿಸುವಂತಿವೆ. ಈ ಕಂಬಗಳು ತ್ರಿಕೋನಾಕೃತಿಯ ಪಟ್ಟಿಕೆ ಹಾಗೂ ಬಳ್ಳಿಯಾಕಾರದ ರಚನೆಗಳನ್ನು ಹೊಂದಿರುವುವು. ಈ ನಾಲ್ಕು ಕಂಬಗಳನ್ನೊಳಗೊಂಡಂತೆ ಭುವನೇಶ್ವರಿಯನ್ನು ಕೆತ್ತಲಾಗಿದೆ. ನವರಂಗಕ್ಕೆ ಮೂರು ಕಡೆಗಳಲ್ಲಿ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ನವರಂಗದಲ್ಲಿ ಕಕ್ಷಾಸನವಿದ್ದು ಅದು ಕೂಡಾ ಹಾಳಾಗಿದೆ.

ಪ್ರಾಚೀನ ದೇವಾಲಯದ ಶಿಖರ ಭಾಗವು ಬಿದ್ದಿರುವುದು. ಅಲ್ಲದೆ ಹೊರ ಗೋಡೆಯ ಭಾಗಗಳು ಸಹ ಅಲ್ಲಲ್ಲಿ ನೆಲಕಚ್ಚಿದೆ. ಈ ದೇವಾಲಯ ಎರಡು ಹಳ್ಳಗಳ (ಹಿರೇಹಳ್ಳ ಹಾಗೂ ಗೋರಿಹಳ್ಳ) ಸಂಗಮದಲ್ಲಿ ಸ್ಥಾಪಿತವಾಗಿದೆ. ಸಂಗಮೇಶ್ವರ ದೇವಾಲಯದ ಪಕ್ಕದಲ್ಲಿ ಹನುಮಂತನ ಗುಡಿಯನ್ನು ಕಟ್ಟಲಾಗಿದೆ. ಈ ದೇವಾಲಯದಲ್ಲಿ ಪ್ರಾಚೀನ ಸಂಗಮೇಶ್ವರ ದೇವಾಲಯದ ಅವಶೇಷಗಳನ್ನು ಇಟ್ಟಿರುವುದನ್ನು ಕಾಣುತ್ತೇವೆ.

ಊಣಚಗೇರಿ ಗ್ರಾಮಕ್ಕೆ ಸೇರಿದ ನಾಲ್ಕು ಶಾಸನಗಳು ಪ್ರಕಟವಾಗಿವೆ. (ಧಾ.ಜಿ.ಶಾ.ಸೂ, ಸಂ.ರೋ ೧೩ ಮತ್ತು ೧೪ ಪು.೧೬; SII, XI-II No 122, SII, XV, No. 237) ಗ್ರಾಮದ ಸಾರ್ವಜನಿಕ ಬಾವಿಯ ಬಳಿ ಸಿಕ್ಕಿರುವ ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲದ ಶಾಸನ (ಕ್ರಿ.ಶ.೧೦೭೨). ಕೂಂಟಗೆಯ ಕಲಿದೇವರಿಗೆ ದತ್ತಿ ಬಿಟ್ಟಿರುವ ಮಾಹಿತಿಯನ್ನು ನೀಡುವುದು. ಬಹುಶಃ ಉಣಚಗೇರಿ ಗ್ರಾಮವನ್ನು ಕೂಂಟಗೆ ಎಂದು ಕರೆಯುತ್ತಿದ್ದರು. ಅಥವಾ ಕುಂಟಗೆ ಎಂಬುದು ಗದಗ ತಾಲೂಕಿನಲ್ಲಿರುವ ಕೋಟ ಉಮ್ಮಚಗಿ ಆಗಿರಬಹುದೇ ಎಂಬುದು ಕುತೂಹಲದ ವಿಷಯ. ಹಾಗೂ ಶಾಸನ ಉಲ್ಲೇಖಿತ ಕಲಿದೇವರ ಬಗೆಗೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ). ಕ್ರಿ.ಶ.೧೧೬೫ ಸಿಂದ ವಂಶದ (ಯಲ್ಬುರ್ಗಿ ಸಿಂದರು) ಚಾವುಂಡರಸನು ದಾನ ನೀಡಿರುವ ಸಂಗತಿಯನ್ನು ಉಲ್ಲೇಖಿಸಲಾಗಿದೆ. ಆದರೆ ಶಾಸನವು ತೃಟಿತವಾಗಿದ್ದರಿಂದ ಹೆಚ್ಚಿನ ವಿಷಯ ತಿಳಿದು ಬರುವುದಿಲ್ಲ. ಚಾವುಂಡರಸನ ಆದೇಶದ ಮೇರೆಗೆ ಹೆಗ್ಗಡೆ ಈಶ್ವರಯ್ಯನು ಸಂಬಂಧಿಸಿದ ಈ ದೇವಾಲಯಕ್ಕೆ ದಾನ ನೀಡುತ್ತಾನೆ.

ಊರು ಊಣಚಗೇರಿ
ಸ್ಮಾರಕ ಕೃಷ್ಣಮೂರ್ತಿ ಗುಡಿ
ಸ್ಥಳ ಗ್ರಾಮದಲ್ಲಿ
ಕಾಲ ೧೮-೧೯ನೆಯ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಕನಿಷ್ಠ
ಸ್ಥಿತಿ ಕನಿಷ್ಠ
ಸಂರಕ್ಷಣೆ  —

ಉತ್ತರಕ್ಕೆ ಮುಖಮಾಡಿರುವ ಈ ದೇವಾಲಯವನ್ನು ವೇಣುಗೋಪಾಲಸ್ವಾಮಿ ಗುಡಿಯೆಂದು ಸಹ ಕರೆಯುತ್ತಾರೆ. ಚಿಕ್ಕದಾಗಿರುವ ಈ ದೇವಾಲಯದಲ್ಲಿ ವೇಣುಗೋಪಾಲನ ಶಿಲ್ಪವಿದೆ. ಶಿಲ್ಪಕ್ಕಿರುವ ಪ್ರಭಾವಳಿ ಸುಂದರವಾಗಿದೆ. ಪೀಠದ ಮೇಲೆ ಸ್ಥಾಪಿತವಾದ ಈ ಶಿಲ್ಪದ ಕೈಯಲ್ಲಿ ಕೊಳಲಿದ್ದು ಕೆಳಭಾಗದಲ್ಲಿ ಗೋವುಗಳ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಉಳಿದಂತೆ ದೇವಾಲಯವನ್ನು ಇತ್ತೀಚೆಗೆ ಮರು ನಿರ್ಮಿಸಿ ಕಟ್ಟಲಾಗಿದೆ.

ಗುಡಿಗೆ ಸಂಬಂಧಿಸಿದ ಶಾಸನವು ಪ್ರವೇಶದ್ವಾರದಲ್ಲಿದೆ. ಕ್ರಿ..೧೭೮೮ರ ಶಾಸನವು (ಧಾ.ಜಿ.ಶಾ.ಸೂ, ಸಂ.ರೋ ೧೬ ಪು.೧೬; SII, XV No 727) ಗಜೇಂದ್ರಗಡದ ಅರಸರಾದ ಘೋರ್ಪಡೆಯ ಮನೆತನಕ್ಕೆ ಸಂಬಂಧಿಸಿದ್ದು. ನರಸಪ್ಪನ ಮಗ ಕೊತವಾಲ ಅಯ್ಯಪ್ಪನು ಈ ದೇವಾಲಯವನ್ನು ಕಟ್ಟಿಸಿದ್ದಾನೆ ಎಂಬ ಸ್ಪಷ್ಟ ಮಾಹಿತಿ ಇದೆ.

ಕ್ರಿ.ಶ.೧೭ನೇ ಶತಮಾನದ ಇನ್ನೊಂದು ಶಾಸನ (ಧಾ.ಜಿ.ಶಾ.ಸೂ, ಸಂ.ರೋ ೧೫ ಪು.೧೬; SII, XV No 720) ಊಣಚಗೇರಿ ಗುಡ್ಡದ ಮೇಲಿರುವ ಅಯ್ಯನ ಕೊಳ್ಳದಲ್ಲಿ ಸಿಕ್ಕಿದೆ. ಅದು ಭಾಗಶಃ ತೃಟಿತವಾಗಿರುವುದು. ಲಿಂಗಪ್ಪನು ಕೊಳದ ಚನ್ನಬಸಪ್ಪನಿಗೆ ದಾನ ಕೊಟ್ಟಿರುವ ಉಲ್ಲೇಖ ಈ ಶಾಸನದಲ್ಲಿದೆ. ಶಾಸನದಲ್ಲಿ ಉಲ್ಲೇಖಿತ ಕೊಳದ ಚನ್ನಬಸಪ್ಪನು ಬಹುಶಃ ಧಾರ್ಮಿಕ ವ್ಯಕ್ತಿಯಾಗಿದ್ದಿರುಬಹುದೆಂದು ಊಹಿಸಬಹುದಾಗಿದೆ.

ಊಣಚಗೇರಿ ಗ್ರಾಮ ಪರಿಸರದಲ್ಲಿ ಬೃಹತ್‌ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಕಂಡುಬಂದಿವೆ. ಆ ಕಾಲದ ಗೋರಿಗಳು ಅಲ್ಲಲ್ಲಿ ಈಗಲೂ ಕಂಡುಬರುತ್ತವೆ (ಇಂ.ಆ.ರಿ. ೧೯೬೩-೬೪ ಪುಟ-೨೬ ಹಾಗೂ ೩೧).

ಊರು ಎರಿಬ್ಯಾಲೇರಿ
ಸ್ಮಾರಕ ರಾಮಲಿಂಗನ ಗುಡಿ
ಸ್ಥಳ ಕಲ್ಯಾಣ ಚಾಲುಕ್ಯ
ಕಾಲ ಪೂರ್ವ
ಶೈಲಿ ಗ್ರಾಮದ ದಕ್ಷಿಣ
ಅಭಿಮುಖ ೧೧-೧೨ನೆಯ ಶತಮಾನ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಪ್ರಾಚೀನ ರಾಮಲಿಂಗನ ಗುಡಿಯು ಹಲವು ದುರಸ್ತಿ ಕಾರ್ಯಗಳಿಗೆ ಒಳಗಾಗಿರುವುದು. ಗ್ರಾಮದ ದಕ್ಷಿಣ ಭಾಗದಲ್ಲಿ ಇರುವ ಈ ದೇವಾಲಯ ಪೂರ್ವಾಭಿಮುಖವಾಗಿದೆ. ದೇವಾಲಯದ ಹಳೆಯ ಅವಶೇಷಗಳಲ್ಲಿ ಲಿಂಗ ಹಾಗೂ ಒಂದು ಶಾಸನ ಮಾತ್ರ ಉಳಿದುಕೊಂಡು ಬಂದಿವೆ. ಹೊಸದಾಗಿ ನಿರ್ಮಾಣವಾಗಿರುವ ಈ ದೇವಾಲಯವು ಗರ್ಭಗೃಹ ಹಾಗೂ ಚಿಕ್ಕಮಂಟಪವನ್ನು ಹೊಂದಿದೆ. ಮುಂಭಾಗದಲ್ಲಿ ಶಾಸನ ಶಿಲ್ಪವನ್ನು ಇಟ್ಟಿದ್ದಾರೆ.

ರಾಮಲಿಂಗನ ಗುಡಿಯ ಸಮೀಪದಲ್ಲಿ ಕೆಲವು ಭಗ್ನಾವಶೇಷಗಳನ್ನು ಇಡಲಾಗಿದೆ. ಅವುಗಳಲ್ಲಿ ವಿಷ್ಣುಶಿಲ್ಪ ಹಾಗೂ ನಂದಿಶಿಲ್ಪಗಳಿವೆ. ಗುಂಗುರು ಕೂದಲಿನ ಒಂದು ಜಿನಶಿಲ್ಪವನ್ನು (ಬಹುಶಃ ಶಿಲ್ಪವು ಮಹಾವೀರನದ್ದಾಗಿರಬಹುದು) ಸಹ ಇಟ್ಟಿದ್ದಾರೆ. ಇದೇ ಗ್ರಾಮದ ಹನುಮಂತನ ಗುಡಿಯಲ್ಲಿ ಇನ್ನು ಕೆಲವು ಪ್ರಾಚ್ಯಾವಶೇಷಗಳನ್ನು ರಕ್ಷಿಸಿಡಲಾಗಿದೆ. ತೃಟಿತಗೊಂಡಿರುವ ಸಪ್ತಮಾತೃಕೆಯ ಹಾಗೂ ಸೂರ್ಯ, ಗಣಪತಿ, ಲಿಂಗ ಹಾಗೂ ನಂದಿ ಶಿಲ್ಪಗಳು ಇಲ್ಲಿವೆ.

ಕ್ರಿ.ಶ. ೧೦೪೫ರ ತೇದಿವುಳ್ಳ ಶಾಸನವೊಂದು ಪ್ರಕಟಗೊಂಡಿದೆ. (ಧಾ.ಜಿ.ಶಾ.ಸೂ, ಸಂ.ರೋ ೧೬ ಪು.೧೭; SII, XI No 120) ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲದ ಶಾಸನವು ಈ ವರೆಗೂ ರಾಮಲಿಂಗ ಗುಡಿಯ ಮುಂಭಾಗದಲ್ಲಿದೆ. ಅತಿ ತ್ರುಟಿತವಾಗಿರುವ ಈ ಮಾಹಿತಿ ಫಲಕವು ಬೇಲೂರಿನ ಜೋಗೇಶ್ವರ ಮತ್ತು ಬೋಳೇಶ್ವರ ದೇವರಿಗೆ ಕೆಲವು ಗಾವುಂಡರು ಭೂಮಿಯನ್ನು ದಾನ ಮಾಡಿರುವ ಉಲ್ಲೇಖವಿದೆ. ಶಾಸನದಲ್ಲಿ ಹೇಳಲಾಗಿರುವ ಬೇಲೂರು ಕ್ರಮೇಣ ಬ್ಯಾಲೂರು ಆಗಿದ್ದು, ಅಲ್ಲದೇ ಗ್ರಾಮದ ಸುತ್ತಲಿನ ಬಹುದೂರ ಪ್ರದೇಶವು ಕಪ್ಪು (ಎರೆ) ಮಣ್ಣಿನಿಂದ ಹರಡಿಕೊಂಡಿದ್ದರಿಂದ ಎರೆ ಅಥವಾ ಎರಿ ಎಂಬ ಪದವು ಗ್ರಾಮದ ಹೆಸರಿನ ಜೊತೆಗೆ ಸೇರಿಕೊಂಡಿದೆ ಎಂಬ ಅಭಿಪ್ರಾಯಪಡಬಹುದು. ಅಥವಾ ಪಕ್ಕದ ಬಾದಾಮಿ ತಾಲೂಕಿನಲ್ಲಿನ ಬೇಲೂರಿನಲ್ಲಿರುವ ದೇವಾಲಯಗಳ ಬಗೆಗೆ ಈ ಶಾಸನ ಉಲ್ಲೇಖಿಸಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವುದು ಅವಶ್ಯಕವಾಗಿದೆ. ಆದರೆ ಪ್ರಸ್ತುತ ಶಾಸನದಲ್ಲಿ ಉಲ್ಲೇಖಿತವಾದ ಜೋಗೇಶ್ವರ ಮತ್ತು ಬೋಳೇಶ್ವರ ದೇವಾಲಯಗಳು ಎರಿಬ್ಯಾಲೇರಿಯಲ್ಲಿರುವ ಬಗೆಗೆ ಖಚಿತವಾದ ಮಾಹಿತಿ ಸಿಗುವುದಿಲ್ಲ.

೧೦

ಊರು ಕರಮಡಿ
ಸ್ಮಾರಕ ಕಲ್ಮೇಶ್ವರ
ಸ್ಥಳ ಕಲ್ಯಾಣ ಚಾಲುಕ್ಯ
ಕಾಲ ಪೂರ್ವ
ಶೈಲಿ ಗ್ರಾಮದಲ್ಲಿ
ಅಭಿಮುಖ ೧೧-೧೨ನೆಯ ಶತಮಾನ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗ್ರಾಮದಲ್ಲಿ ಪ್ರಾಚೀನ ಕಾಲದ ಮೂರು ದೇವಾಲಯಗಳು ಇದ್ದಿರುವ ಬಗ್ಗೆ ಶಾಸನ ದಾಖಲಾತಿಗಳಿವೆ. ಕಲ್ಮೇಶ್ವರ, ಸೋಮೇಶ್ವರ ಹಾಗೂ ಹನುಮಂತನ ಗುಡಿಗಳು ಶಾಸನ ಉಲ್ಲೇಖಿತ ಹಳೆಯ ದೇವಾಲಯಗಳಾಗಿವೆ. ಆದರೆ ಈ ಮೂರು ಗುಡಿಗಳನ್ನು ಸಂಪೂರ್ಣವಾಗಿ ಹೊಸದಾಗಿ ಕಟ್ಟಿದ್ದಾರೆ. ಪ್ರಾಚೀನ ದೇವಾಲಯಗಳಿಗೆ ಸಂಬಂಧಿಸಿದ ಶಾಸನ ಶಿಲ್ಪಗಳು ಹಾಗೂ ಒಂದೆರಡು ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳನ್ನು ದೇವಾಲಯಗಳ ಮುಂಭಾಗದಲ್ಲಿ ಇಡಲಾಗಿದೆ. ಹೊಸದಾಗಿ ನಿರ್ಮಾಣವಾಗಿರುವ ಮೇಲೆ ಉಲ್ಲೇಖಿಸಿದ ದೇವಾಲಯಗಳು ಗರ್ಭಗೃಹ ಹಾಗೂ ಮಂಟಪಗಳನ್ನು ಮಾತ್ರ ಹೊಂದಿರುವುವು.

ಕರಮಡಿ ಗ್ರಾಮಕ್ಕೆ ಸಂಬಂಧಿಸಿದ ಮೂರು ಶಾಸನಗಳು ಪ್ರಕಟಗೊಂಡಿವೆ. (ಧಾ.ಜಿ.ಶಾ.ಸೂ, ಸಂ.ರೋ ೧೯,೨೦ ಹಾಗೂ ೨೧ ಪು.೧೬; SII, XI- No 17 SII, XV No 492 ಮತ್ತು SII, XV No 1) ಈ ಶಾಸನಗಳು ಗ್ರಾಮದಲ್ಲಿರುವ ದೇವಾಲಯಗಳ ಮುಂಭಾಗದಲ್ಲಿ ಈಗಲೂ ಇವೆ. ರಾಷ್ಟ್ರಕೂಟರ ಕಾಲದ ಎರಡು ಶಾಸನಗಳಿದ್ದು ಅವುಗಳಲ್ಲಿ ಒಂದು ಸಂಪೂರ್ಣವಾಗಿ ಸವೆದು ಹೋಗಿದ್ದು ಅದರಿಂಧ ಯಾವ ಮಾಹಿತಿ ದೊರಕುವುದಿಲ್ಲ. ಇನ್ನೊಂದು ಶಾಸನವು , ಕಾರೆಮಡಿಯ ಗ್ರಾಮದ ಅಗ್ರಹಾರದಲ್ಲಿರುವ ಮಹಾಜನರು ವಿದ್ಯೆ ಮೊದಲಾದವುಗಳಿಗಾಗಿ ಈಶಾನ್ಯ ರಾಶಿ ಭಟಾರನು ದೇವಾಲಯಕ್ಕೆ ಭೂಮಿಯನ್ನು ದಾನ ನೀಡಿರುವ ಉಲ್ಲೇಖವಿದೆ. ಕಲ್ಯಾಣ ಚಾಲುಕ್ಯ ಒಂದನೆಯ ಸೋಮೇಶ್ವರನ ಕಾಲದ ಶಾಸನವು, ಗ್ರಾಮದಲ್ಲಿದ್ದು ಬಲೇಶ್ವರ ದೇವಾಲಯದ ಸತ್ರಕ್ಕೆ ಗಂಗೆಯಜೀಯನಿಂದ ಹಣದಾನ ಕೊಟ್ಟಿರುವ ಮಾಹಿತಿ ನೀಡುತ್ತದೆ . ಶಾಸನದಲ್ಲಿ ಉಲ್ಲೇಖಿತವಾದ ಬಬ್ಬಲೇಶ್ವರ ದೇವಾಲಯದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಬಹುಶಃ ಸೋಮೇಶ್ವರ ದೇವಾಲಯವನ್ನೇ ಬಬಲೇಶ್ವರನೆಂದು ಕರೆದಿರುವ ಸಾಧ್ಯತೆಗಳಿವೆ ಎಂಬುದನ್ನು ಸಮಗ್ರ ಅಧ್ಯಯನಕ್ಕೆ ಒಳಪಡಿಸುವುದು ಸೂಕ್ತ.