೨೧

ಊರು ಮಲ್ಲಾಪುರ
ಸ್ಮಾರಕ ರಾಮಲಿಂಗಯ್ಯ (ಮಲ್ಲಯ್ಯ)
ಸ್ಥಳ ತುಂಗಭದ್ರಾನದಿದಂಡೆ (ಹೊಸ ಸಿಂಗಟಾಲೂರು ಹತ್ತಿರ)
ಕಾಲ  
ಶೈಲಿ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಪ್ರಾಚೀನ ಮಲ್ಲಾಪುರ ಗ್ರಾಮ ಅನೇಕ ಕಾರಣಗಳಿಂದಾಗಿ ಸಂಪೂರ್ಣವಾಗಿ ಸ್ಥಳಾಂತರಗೊಂಡಿದೆ. ತುಂಗಭದ್ರಾ ನದಿಯ ದಂಡೆಯ ಮೇಲೇಯೆ ಇದ್ದ ಗ್ರಾಮ ನೆರೆ ಹಾವಳಿ ಕಾರಣಗಳಿಂದ ನಿರ್ವಸತಿ ಪ್ರದೇಶವಾಗಿ ಮಾರ್ಪಟ್ಟಿರುವ ಸಾಧ್ಯತೆಗಳು ಹೆಚ್ಚಾಗಿವೆ. ಇಲ್ಲಿರುವ ದೇವಾಲಯವೊಂದನ್ನು ಹೊರತುಪಡಿಸಿ ಅಲ್ಲಿ ಪ್ರಾಚೀನ ಗ್ರಾಮದ ಯಾವ ಅವಶೇಷಗಳು ಉಳಿದುಬಂದಿಲ್ಲ. ಮಲ್ಲಾಪುರ ಗ್ರಾಮದಿಂದಲೇ ತಮ್ಮ ಪೂರ್ವಜರು ಗುಳೇ ಹೋದ ಮಾಹಿತಿಯನ್ನು ಸುತ್ತಲಿರುವ ಶಿಂಗಟಾಲೂರು ಹಾಗೂ ಶಿರನಹಳ್ಳಿ ಗ್ರಾಮಗಳಲ್ಲಿರುವ ಕೆಲವು ಸಮುದಾಯಗಳು ನೀಡುತ್ತವೆ.

ಮಲ್ಲಾಪುರದಲ್ಲಿರುವ ಮಲ್ಲಯ್ಯ ದೇವಾಲಯ ಗರ್ಭಗೃಹ, ತೆರೆದ ಅಂತರಾಳ ಹಾಗೂ ನವರಂಗವನ್ನು ಹೊಂದಿದೆ. ದೇವಾಲಯದ ರಚನೆಯ ಶೈಲಿ ಹಾಗೂ ಲಕ್ಷಣ ಗಮನಿಸಿದರೆ ಅನೇಕ ಬಗೆಯಲ್ಲಿ ಸಂಶಯ ಹುಟ್ಟುತ್ತದೆ. ಗುಡಿಯಲ್ಲಿರುವ ಕಂಬಗಳು ಕಲ್ಯಾಣ ಚಾಲುಕ್ಯರ ಆಡಳಿತಾವಧಿಯ ಪೂರ್ವದಲ್ಲಿ ರಚನೆಯಾಗಿರುವ ಲಕ್ಷಣಗಳನ್ನು ಹೊಂದಿವೆ ಎಂದು ಭಾಸವಾಗುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಈ ದೇವಾಲಯ ರಾಷ್ಟ್ರಕೂಟರ ಕಾಲದಲ್ಲಿ ರಚನೆಯಾಗಿರುವುದೇ? ಎಂದು ಊಹಿಸಿವುದು ಅಸಾಧ್ಯ. ನವರಂಗದಲ್ಲಿರುವ ಗಿಡ್ಡನೆಯ ಕಂಬಗಳು, ಅವುಗಳಲ್ಲಿರುವ ಬೋಧಿಗೆಗಳು, ಗರ್ಭಗೃಹ ನವರಂಗದಲ್ಲಿರುವ ಚೌಕಾಕಾರದ ಭುವನೇಶ್ರಿ ಕೆತ್ತನೆ ಹಾಗೂ ಹೊರಗಿಟ್ಟಿರುವ ನಕ್ಷತ್ರಾಕಾರದ ತಳ ವಿನ್ಯಾಸದ ಪ್ರಾಚೀನಲಿಮಗ ಕಲ್ಯಾಣ ಚಾಲುಕ್ಯರ ಪೂರ್ವಕಾಲದಲ್ಲಿ ನಿರ್ಮಾನವಗಿರುವ ಲಕ್ಷಣವುಲ್ಳವುಗಳು ಎಂದು ಪರಿಗಣಿಸಬಹುದು.

ಗರ್ಭಗೃಹದಲ್ಲಿ ಲಿಂಗವಿದೆ. ತೆರೆದ ಅಂತರಾಳ ಬರಿದಾಗಿದೆ. ನವರಂಗ ಎಂಟು ಕಂಬಗಳನ್ನು ಒಳಗೊಂಡಿದೆ. ಅವು ಹದಿನಾರು ಪಟ್ಟಿಕೆಯ ದುಂಡಾಕಾರದ ಫಲಕ ಹಾಗೆ ಚೌಕಾಕಾರದ ಬೋಧಿಗೆಯನ್ನು ಹೊಂದಿವೆ. ನವರಂಗದಲ್ಲಿ ಸುಂದರ ಹಾಗೂ ಆಕರ್ಷಣೆಯಿಂದ ಕೂಡಿದ ಭುವನೇಶ್ರಿಯನ್ನು ಕೆತ್ತಲಾಗಿದೆ. ದೇವಾಲಯದ ಅಧಿಷ್ಠಾನ ಭಾಗ ಮಣ್ಣಿನಲ್ಲಿ ಮುಚ್ಚಿಹೋಗಿದೆ. ಹೀಗಾಗಿ ಅಧಿಷ್ಠಾನದ ಸ್ಪಷ್ಟ ಮಾಹಿತಿ ಪಡೆಯುವುದು ಕಷ್ಟಸಾಧ್ಯ. ಶಿಖರಭಾಗ ಬಿದ್ದುಹೋಗಿದೆ. ದೇವಾಲಯದ ಹೊರಗೋಡೆ ಸಹ ಅಲ್ಲಲ್ಲಿ ತ್ರುಟಿತಗೊಂಡಿದೆ. ಪ್ರಾಚೀನ ಲಿಂಗ, ನಾಗ ಶಿಲ್ಪ ಹಾಗೂ ಕೆಲವು ಪ್ರಾಚ್ಯಾವಶೇಷಗಳು ದೇವಾಲಯದ ಸುತ್ತಲೂ ಅನಾಥವಾಗಿ ಬಿದ್ದಿವೆ. ಮಲ್ಲಯ್ಯನ ಗುಡಿಗೆ ಸಂಬಂಧಿಸಿದಂತೆ ಯಾವುದೇ ಲಿಖಿತ ಆಧಾರಗಳು ಕಂಡುಬಂದಿಲ್ಲ. ಈ ಗುಡಿಯ ಪಕ್ಕದಲ್ಲಿ ಹನುಂತನ ಚಿಕ್ಕ ದೇವಾಲಯ ಒಂದಿದೆ.

೨೨

ಊರು ಮುಂಡರಗಿ
ಸ್ಮಾರಕ ಮಲ್ಲಿಕಾರ್ಜುನ
ಸ್ಥಳ ಗುಡ್ಡದ ಮೇಲೆ
ಕಾಲ ೧೬-೧೭ನೇ ಶತಮಾನ
ಶೈಲಿ ಆಧುನಿಕ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಕನಕ ನರಸಿಂಹಸ್ವಾಮಿ ದೇವಾಲಯದ ಸಮೀಪ ಗುಡ್ಡದ ಮೇಲ್ಭಾಗದಲ್ಲಿ ಮಲ್ಲಿಕಾರ್ಜುನ ದೇವಾಲಯವನ್ನು ನಿರ್ಮಿಸಲಾಗಿದೆ. ಗರ್ಭಗೃಹ ಹಾಗೂ ಮಂಟಪವನ್ನು ಹೊಂದಿರುವ ಈ ಸ್ವಾರಕ ಸುಮಾರು ನಾಲ್ಕು ಶತಮಾನಗಳ ಹಿಮದೆ ರಚನೆಯಾಗಿರುವಂಥದ್ದು. ಗರ್ಭಗೃಹದಲ್ಲಿ ಲಿಂಗವಿದ್ದು, ಕಂಬರಹಿತವಾದ ಮಂಟಪ ಈ ದೇವಾಲಯಕ್ಕಿದೆ. ಗುಡಿಯ ಸುತ್ತಲೂ ಆವರಣ (ಕಾಂಪೌಂಡ್)ವನ್ನು ಕಟ್ಟಿದ್ದಾರೆ. ಶಿವನಿಗೆ ಸಂಬಂಧಿಸಿದ ಈ ದೇವಾಲಯ ಮುಂಡರಗಿ ಗ್ರಾಮದ ನಾಮ ಸೂಚಕವಾಗಿ ಪರಿಗಣಿಸಲಾಗಿದೆ. ಶಿವ(ಮೃಢ)ನು ವಾಸಿಸುವ ಗಿರಿ(ಸ್ಥಳ)ಯು ಮೃಡಗಿರಿಯಾಗಿ ನಂತರ ಕಾಲಾವಧಿಯಲ್ಲಿ ಮುಂಡರಗಿ ಆಗಿ ಪರಿವರ್ತನೆ ಆಗಿದ್ದಿರಬಹುದೆಂಬ ಅಭಿಪ್ರಾಯವನ್ನು ಹಲವು ವಿದ್ವಾಂಸರು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸರ್ವೇಸಾಧಾರಣವಾಗಿ ಸ್ಥಳೀಯ ವಿದ್ವಾಂಸರೆಲ್ಲ ಇದನ್ನೇ ನಂಬಿ ಮುಂಡರಗಿ ಇತಿಹಾಸ ರಚಿಸಿದ್ದುಂಟು. ಆದರೆ ಸ್ಪಷ್ಟವಾಗಿ ನಂಬಬಹುದಾದ ಮಾಹಿತಿ ಆಧಾರ ಇದಲ್ಲವೆಂಬುದು ಮೇಲುನೋಟದಲ್ಲಿ ಕಾಣುತ್ತದೆ. ಕಾರಣ ಗುಡ್ಡದ ಮೇಲಿರುವ ದೇವಾಲಯ ಇತ್ತೀಚೆಗೆ ನಿರ್ಮಾಣವಾಗಿರುವಂತದ್ದು, ಹಾಗೂ ಬಲವಾಗಿ ನಂಬಬಹುದಾದ ಯಾವ ಮಾಹಿತಿಗಳು ಈವರೆಗೂ ಸಿಕ್ಕಿಲ್ಲ. ಇನ್ನು ಕೆಲವರು “ಮುಂಡ” ಎಂಬ “ಜನಾಂಗ”ವು ಇಲ್ಲಿನ ಪರಿಸರದಲ್ಲಿ ವಾಸವಾಗಿದ್ದರಿಂದ ಈ ಹೆಸರು ಬಂದಿರುವ ಸಾಧ್ಯತೆಗಳಿವೆಯೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಹಾಗೂ ವ್ಯಾಪಕ ಅಧ್ಯಯನಗಳ ಮೂಲಕ ಈ ವಿಷಯದ ಕಗ್ಗಂಟನ್ನು ಬಿಡಿಸಬಹುದು.

ಇದೇ ದೇವಾಲಯದಲ್ಲಿ ಒಂದು ಶಾಸನ ಕಂಡುಬಂದಿದೆ. ಕ್ರಿ.ಶ. ೧೬ನೇ ಶತಮಾನ್ಕೆಕ ಸಂಬಂಧಿಸಿದ ಈ ಶಾಸನ ಪ್ರಕಟಗೊಂಡಿರುವುದು (ಧಾ.ಜಿ.ಶಾ.ಸೂ, ಸಂ. ರೋ. ೪೩ ಪು. ೪೧; SII, XV, No. 701). ಮಹಾದೇವರಾಯ, (ಎರಡನೆ ದೇವಾರಯ ಆಗಿರಬಹುದು) ಹರಿಹರದೇವ (ಎರಡನೇ ಹರಿಹರ ಆಗಿರಬಹುದು) ಅರಸರ ಉಲ್ಲೇಖ ಈ ಶಾಸನದಲ್ಲಿದ್ದು. ಕುಂಬಾರ, ಬಣಜಿಗ ಹಾಗೂ ಗೌಡಾದಿಗಳ ಬಗೆಗೂ ಮಾಹಿತಿ ಇದೆ. ಆದರೆ ಅತಿ ತೃಟಿತ ಶಾಸನವಾಗಿರುವುದರಿಂದ ನಿರ್ದಿಷ್ಟವಾದ ಅಭಿಪ್ರಯಕ್ಕೆ ಬರುವುದು ಕಷ್ಟ. ಸಿಕ್ಕಿರುವ ಶಾಸನ ಮಾಹಿತಿಯಿಂದ ನಮಗೆ ತಿಳಕಿಯಬಹುದಾದ ಮುಖ್ಯ ಅಂಶವೆಂದರೆ, ವಿಜಯನಗರಕಾಲದಲ್ಲಿ ಇಲ್ಲೊಂದು ಸ್ಮಾರಕ ಕಟ್ಟಿರಬಹುದು. ಅದು ಬಿದ್ದುಹೋಗಿರುವ ಕಾರಣದಿಂದ ಅಲ್ಲಿಯೇ ಹೊಸದೊಂದು ಗುಡಿಯನ್ನು ೧೭-೧೮ನೇ ಶತಮಾನದಲ್ಲಿ ಕಟ್ಟಿರಬಹುದೆಂದು ಊಹಿಸಬಹುದು. ಪ್ರಾಚೀನ ಶಾಸನವನ್ನು ಗುಡಿಯಲ್ಲಿ ಉಳಿಸಿಕೊಂಡು ಬರಲಾಗಿದೆ.

ಇದೇ ಗುಡ್ಡದ ಮೇಲೆ ಐತಿಹಾಸಿಕ ಪ್ರಸಿದ್ಧವಾದ ಮುಂಡರಗಿ ಕೋಟೆ ಇದೆ. ಸ್ವಾತಂತ್ರ್ಯ ಹೋರಾಟದ ಪ್ರಾರಂಬದ ಕಾಲಘಟ್ಟದಲ್ಲಿ (೧೯ನೇ ಶತಮಾನದ ಪೂರ್ವಾವಧಿ) ಈ ಕೋಟೆಯು ಈ ಪ್ರದೇಶದ ರಾಜಕೀಯ ನಿರ್ಣಾಯಕ ಹೋರಾಟಗಳಲ್ಲಿ ಪಾತ್ರವಹಿಸಿರುವ ಸಂಗತಿ ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ಕೋಟೆಯನ್ನು ವಿಜಯನಗರ ಆಡಳಿತದ ಕಾಲಾವಧಿಯ ನಂತವೇ ಕಟ್ಟಿರುವ ಸಾಧ್ಯತೆಗಳಿವೆ. ಅಳಿದುಳಿದ ಕೋಟೆಯ ಅವಶೇಷಗಳು ನಮಗೆ ಈವರೆಗೂ ಕಂಡು ಬರುತ್ತವೆ.

ಮುಂಡರಗಿ ಪಟ್ಟಣದ ಇತಿಹಾಸದಲ್ಲಿ ಉಲ್ಲೇಖಿಸಲೇಬೇಕಾದ ಇನ್ನೆರಡು ಪ್ರಮುಖ ಸಂಗತಿಗಳೆಂದರೆ ಒಂದು ಅನ್ನದಾನ ಹಾಗೂ ತೋಂಟದ ಸಿದ್ಧಲಿಮಗ ಯತಿಗಳಿಗೆ ಸಂಬಂಧಿಸಿದ ಮಠಗಳು. ಆದರೆ ಇವು ಆಧುನಿಕ ಕಾಲದ ಐತಿಹಾಸಿಕ ಸಂಗತಿಗಳಾಗಿದ್ದರಿಂದ ಅವುಗಳ ಬಗೆಗಿನ ಮಾಹಿತಿ ಕೈಬಿಡಲಾಗಿದೆ.

೨೩

ಊರು ಮುಂಡರಗಿ
ಸ್ಮಾರಕ ಕನಕ ನರಸಿಂಹಸ್ವಾಮಿ
ಸ್ಥಳ ಗುಡ್ಡದ ಮೇಲೆ
ಕಾಲ ೧೬-೧೭ನೇ ಶತಮಾನ
ಶೈಲಿ ಆಧುನಿಕ
ಅಭಿಮುಖ ಉತ್ತರ
ಸ್ಥಿತಿ ಸಾಧಾರಣ
ಸಂರಕ್ಷಣೆ

ಮುಂಡರಗಿ ಪಟ್ಟಣದ ಮಧ್ಯೆ ಇರುವ ಗುಡ್ಡದ (ಗಿರಿ) ಕೆಳಭಾಗದಲ್ಲಿ ಕನಕ ನರಿಸಂಹ ಸ್ವಾಮಿ ದೇವಾಲಯವಿದೆ. ಸುಮಾರು ಇನ್ನೂರು ಮೆಟ್ಟಿಲು ಏರಿಕೊಂಡು ಗುಡಿಯನ್ನು ತಲುಪಬೇಕು. ಆಧುನಿಕ ಕಾಲಾವಧಿಯಲ್ಲಿ ನಿರ್ಮಾಣವಾಗಿದ್ದರೂ ದೇವಾಲಯಕ್ಕೆ ಸಂಬಂಧಿಸಿದಂತೆ ಹಲವಾರು ಐತಿಹ್ಯಗಳು ಪ್ರಾಚೀನವಾದವು. ಈ ಐತಿಹ್ಯಗಳು ಮುಂಡರಗಿ ಪಟ್ಟಣ ಇತಿಹಾಸ ಕಟ್ಟಿಕೊಡುವಲ್ಲಿ ಬಹುಮುಖ್ಯ ಪಾತ್ರವಹಿಸಿದೆ.

ಕನಕ ನರಸಿಂಹಸ್ವಾಮಿ ದೇವಾಲಯ ಗರ್ಭಗೃಹ ಹಾಗೂ ನವರಂಗವನ್ನು ಮಾತ್ರ ಹೊಂದಿದ್ದು ಮುಂಭಾಗದಲ್ಲಿ ವಿಸ್ತಾರವಾದ ಬಯಲಿದೆ. ಗರ್ಭಗೃಹದಲ್ಲಿ ಉದ್ಭವ ಶಿಲೆಯೊಂದಿದ್ದು ಮುಂಭಾಗದಲ್ಲಿ ವಿಸ್ತಾರವಾದ ಬಯಲಿದೆ. ಗರ್ಭಗೃಹದಲ್ಲಿ ಉದ್ಭವ ಶಿಲೆಯೊಂದಿದದ್ದು ಅದನ್ನೇ ನರಸಿಂಹಸ್ವಾಮಿ ಎಂದು ಪೂಜಿಸಲಾಗುತ್ತದೆ. ಗರ್ಭಗೃಹದ ಬಾಗಿಲವಾಡ, ಒಳಗೋಡೆ ಹಾಗೂ ಹೊರಗೋಡೆಯ ಭಾಗಗಳು ತುಮಬಾರ ಸರಳವಾಗಿವೆ. ನವರಂಗ ತಕ್ಕಮಟ್ಟಿಗೆ ವಿಶಾಲವಾಗಿದ್ದು ಅದರಲ್ಲಿಯ ಕಂಬಗಳೂ ಆಧುನಿಕ ಕಾಲದಲ್ಲಿ ನಿರ್ಮಾಣವಾಗಿವೆ. ಹೆಚ್ಚಿನ ಜನಾಕರ್ಷಣೆ ಹಾಗೂ ಅದರಕ್ಕೆ ಒಳಗಾಗಿರುವ ಈ ಗುಡಿಗೆ ಭಕ್ತಿ ಸೇವೆಯ ರೂಪದಲ್ಲಿ ಸುಣ್ಣಬಣ್ಣ ಬಳೆಯಲಾಗಿದೆ.

ಮೇಲೆ ವಿವರಿಸಿದ ಕನಕ ನರಸಿಂಹಸ್ವಾಮಿ ದೇವಾಲಯ ಕುರಿತಂತೆ ಹಲವಾರು ಐತಿಹ್ಯಗಳಿವೆ. ಕ್ರಿ.೧೫-೧೬ನೇ ಶತಮಾನದ ಕಾಲಾವಧಿಯಲ್ಲಿ ಕನಕನಾಯಕನೆಂಬ ಬೇಡರ ಒಡೆಯನು ಮುಂಡರಗಿ ಪರಿಸರವನ್ನು ಆಳುತ್ತಿದ್ದ. ಆಲ್ಲದೆ ಇದೇ ದೇವಾಲಯದ ಕೆಳಭಾಗ ಪ್ರದೇಶದಲ್ಲಿ ಆಗನು ಆಡಳಿತ ಪಟ್ಟಣವನ್ನು ಸಹ ನಿರ್ಮಿಸಿರುವ ಬಗ್ಗೆ ಮಾಹಿತಿ ಇದೆ. ವಿಜಯನಗರ ಪತನಾನಂತರ ಅನೇಕ ಸ್ಥಳೀಯ ಅಧಿಕಾರಿಗಳು ತಮ್ಮ ಪಾಳೆಯಪಟ್ಟುಗಳನ್ನು ಪ್ರತ್ಯೇಕವಾಗಿ ರಚಿಸಿಕೊಂಡು ಆಡಳಿತ ನಡೆಸಿದರು. ಅಂಥವರಲ್ಲಿ ಮುಂಡರಗಿಯ ಕನಕನಾಯಕನು ಒಬ್ಬನಾಗಿರಬಹುದೆಂದು ತಿಳಿಯಬಹುದು. ಹಲವಾರು ಧರ್ಮಕಾರ್ಯಘಲನ್ನು ಮಾಡಿದ ಈ ಬೇಡರ ಒಡೆಯರು ನಾಡಿನಲ್ಲಿ ಪ್ರಸಿದ್ಧಿ ಪಡೆದಿರುವ ಮುಂಡರಗಿಯ ಅನ್ನದಾನಿ ಮಠದ ಸ್ಥಾಪನೆಗೂ ಅದರ ಪೋಷಣೆಗೆ ಹೆಚ್ಚಿನ ಸಹಾಯ ಸಹಕಾರ ನೀಡಿದ ಬಗೆಗೆ ಹೇಳಿಕೆಗಳಿವೆ. ಅಂಥ ಐತಿಹ್ಯ ಪುರುಷನ ಸ್ಮರಣಾರ್ಥ ಈ ದೇವಾಲಯವನ್ನು ಕಟ್ಟಿಸಿದ್ದಾರೆಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಇನ್ನು ಹಲವಾರು ಐತಿಹ್ಯಗಳು ಪಟ್ಟಣದ ಬಗ್ಗೆ ಹೆಚ್ಚಿನ ವಿವರಣೆ ನೀಡುತ್ತವೆ. ಆದರೆ ಭಾಗಶಃ ಅವೆಲ್ಲವು ಹೆಚ್ಚಿನ ಗೊಂದಲಗಳಿಂದ ಕೂಡಿರುವುದರಿಂದ ಅವನ್ನು ಕೈಬಿಡಲಾಗಿದೆ.

೨೩

ಊರು ಮೇವುಂಡಿ
ಸ್ಮಾರಕ ವೆಂಕಟರಮಣ (ವೇಂಕಟೇಶ್ವರ)
ಸ್ಥಳ ಗ್ರಾಮದಲ್ಲಿ
ಕಾಲ ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ದಕ್ಷಿಣ
ಸ್ಥಿತಿ ಕನಿಷ್ಠ
ಸಂರಕ್ಷಣೆ

ವಿಶಾಲವಾದ ಆವರಣ ಈ ದೇವಾಲಯಕ್ಕಿದೆ. ಇಡೀ ಆವರಣಕ್ಕೆ ಒಂದೇ ಹೆಬ್ಬಗಿಲು ನಿರ್ಮಿಸಲಾಗಿದೆ. ಈ ದೇವಾಲಯ ಗರ್ಭಗೃಹ ಹಾಗೂ ನವರಂಗವನ್ನು ಹೊಂದಿರುವುದು. ಖಡ್ಗಾಸನ (ನಿಂತಿರುವ)ದಲ್ಲಿರುವ ವಿಷ್ಣಶಿಲ್ಪವು ಗರ್ಭಗೃಹದಲ್ಲಿದೆ. ಎತ್ತರ ಪೀಠದ ಮೇಲೆ ಈ ಶಿಲ್ಪವನ್ನಿಟ್ಟಿದ್ದಾರೆ. ನಿತ್ಯವೂ ಅದು ಪೂಜೆಗೊಳ್ಪಡುತ್ತದೆ.

ನವರಂಗವು ನಾಲ್ಕು ಕಂಬಗಳನ್ನೊಳಗೊಂಡಿರುವುದು. ಅವುಗಳಲ್ಲಿ ಎರಡು ಚೌಕಾಕಾರವು ಉಳಿದೆರಡು ದುಂಡಾಕೃತಿಯವು (ತಿರುಗಣಿ ಕಂಬಗಳು). ವೃತ್ತಾಕಾರದ ಫಲಕ ಹಾಗೂ ಚೌಕಾಕಾರದ ಬೋಧಿಗೆಗಳನ್ನು ಕಂಬಗಗಳಿಗೆ ಅಳವಡಿಸಲಾಗಿದೆ. ಸುಂದರ ಅಲಂಕರಣೆಯಿಂದ ಕೂಡಿರುವ ಎರಡು ಶಿಲ್ಪಗಳನ್ನು ನವರಂಗದಲ್ಲಿಡಲಾಗಿದೆ. ಹಾಯಾಗಿ ಕೈರೂರಿ ಮಲಗಿರಿವು ಅನಂತಶಯನ ಶಿಲ್ಪವು ಆಕರ್ಷಕವಾದುದು. ಅಲ್ಲದೇ ಇಲ್ಲಿರುವ ವಿಷ್ಣು ಶಿಲ್ಪವು ಸಹ ಅಷ್ಟೇ ಸೌಂದರ್ಯದಿಂದ ಕೂಡಿದೆ. ದೇವಾಲಯದ ಹೊರಗೋಡೆ ಹಾಗೂ ಮುಂಭಾಗವನ್ನು ಸಿಮೆಂಟಿನಿಂದ ದುರಸ್ತಿಗೊಳಿಸಲಾಗಿದೆ. ಗೋಡೆಯ ಮುಂಭಾಗದಲ್ಲಿ ನಾಲ್ಕು ಶಾಸನಗಳಿವೆ.

ಇಲ್ಲಿರುವ ನಾಲ್ಕು ಶಾಸನಗಳು ಪ್ರಕಟವಾಗಿವೆ (ಧಾ.ಜಿ.ಶಾ.ಸೂ, ಸಂ. ರೋ. ೪೪, ೪೬, ೪೮ ಮತ್ತು ೪೯ ಪು. ೪೧; SII, XI, pt. I, No. 11, 22 and 3). ಆದರೆ ಅವುಗಳಲ್ಲಿ ಎರಡು ಶಾಸನಗಳು ಮಾತ್ರ ವೆಂಕಟರಮಣ ಗುಡಿಗೆ ಸಂಬಂಧಿಸಿದವು ಎಂದು ಅಭಿಪ್ರಾಯಪಡಬಹುದು. ಕ್ರಿ.ಶ. ೧೧೯೬ರ ತೇದಿವುಳ್ಳ ಶಾಸನ ಹೊಯ್ಸಳ ಎರಡನೆಯ ವೀರಬಲ್ಲಾಳನ ಕಾಲಕ್ಕೆ ಸೇರಿದ್ದು. ನಖರರು (ವ್ಯಾಪಾರಿಗಳು) ಹಾಗೂ ಮುಮ್ಮರಿದಂಡರು, ಮಹಾಜನರು ದೇವುಗಗೆರೆಯ ಬಿಲ್ಲೇಶ್ವರ ದೇವರಿಗೆ ಕೆಲವು ಮತ್ತರ ಭೂಮಿಯನ್ನು ದನ ಮಾಡಿದ ಉಲ್ಲೇಕಿವಿದೆ. ಅಲ್ಲದೆ ಅದೇ ಶಿಲಾಶಾಸನದ ಹಿಂಭಾಗದಲ್ಲಿ ಮತ್ತೊಂದು ವಿವರ ದಾಖಲಿಸಲಾಗಿದೆ. ಅದೆಂದರೆ ಅಯ್ಯಾವೊಳೆಯ ಐನೂರ್ವರು ದೇಹುತಗೆರೆ ಬಿಲ್ಲೇಶ್ವರ ದೇವರಿಗೆ ಸುಂಕ ಬಿಟ್ಟಿರುವ ಮಾಹಿತಿ ಇದೆ. ಈ ಎರಡು ವಿವರಗಳನ್ನು ಗಮನಿಸಿ ಅಭಿಪ್ರಾಯಪಡುವುದಾದರೆ ಬಹುಶಃ ಇಂದಿನ ವೆಂಕಟರಮಣ ಗುಡಿ ಬಿಲ್ಲೇಶ್ವರನೆಂದು ಕರೆಯಲ್ಪಡುತ್ತಿತ್ತು ಎಂಬುದನ್ನು ಪರಿಶಿಲಿಸಬೇಕಾಗಿದೆ. ಶೈವ ಆರಾಧನೆ ಕೇಂದ್ರವಾಗಿದ್ದ ಬಿಲ್ಲೇಶ್ವರ ಕಾಲಾನಂತರ ವೈಷ್ಣವ ಭಕ್ತಿಕೇಂದ್ರವಾಗಿ ಮಾರ್ಪಟ್ಟಿರುವ ಸಾಧ್ಯತೆಗಳಿವೆ. ಈ ಗುಡಿಯು ರಾಷ್ಟ್ರಕೂಟರ ಕಾಲದಿಂದ ವಿಜಯನಗರದವರೆಗೂ ಹಂತಹಂತವಗಿ ಮಾರ್ಪಡುತ್ತಾ ಬಂದಿರುವ ಸೂಚನೆಗಳಿವೆ. ಅಲ್ಲದೇ ಇಂದಿನ ಮೇವುಂಡಿ ಗ್ರಾಮವು ಶಾಸನದಲ್ಲಿ ಉಲ್ಲೇಖಿತವಾಗಿರುವ ದೇಹುತಗೆರೆ ಗ್ರಾಮವಾಗಿತ್ತೆಂಬುದು ಕುತೂಹಲದ ಸಂಗತಿಯಾಗಿ ಉಳಿದುಕೊಳ್ಳುತ್ತದೆ.

೨೫

ಊರು ಮೇವುಂಡಿ
ಸ್ಮಾರಕ ದಿಡಿಗೇಶ್ವರ (ನೀಲಕಂಠೇಶ್ವರ)
ಸ್ಥಳ ಗದಗ-ಮುಂಡರಗಿ ರಸ್ತೆಯಲ್ಲಿ
ಕಾಲ ೧೩-೧೪ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮೇವುಂಡಿ ಗ್ರಾಮದ ಹೊರ ವಲಯದಲ್ಲಿರುವ ದಿಡಿಗೇಶ್ವರ ದೇವಾಲಯವನ್ನು ನೀಲಕಂಠೇಶ್ವರನೆಂದೂ ಕರೆಯುತ್ತಾರೆ. ದೇವಾಲಯದ ರಚನೆಯ ಮಾದರಿಯನ್ನು ಗಮನಿಸಿದರೆ ಇದು ೧೩ನೇ ಶತಮಾನದ ಕೊನೆಯ ಕಾಲಘಟ್ಟದಲ್ಲಿ ನಿರ್ಮಿತವಾಗಿದೆ ಎಂಬುದನ್ನು ತಿಳಿಯಬಹುದು. ಈ ದೇವಾಲಯ ನಿರಾಲಂಕಾರದಿಂದ ಕೂಡಿರುವ ಸ್ಮಾರಕವಾಗಿ ಕಂಡುಬರುತ್ತದೆ.

ಇದು ಗರ್ಭಗೃಹ, ಅಂತರಳ ಹಾಗೂ ನವರಂಗಗಳು ಒಳಗೊಂಡಿದ್ದು, ಗರ್ಭಗೃಹದಲ್ಲಿ ಲಿಂಗವಿದೆ. ಭುವನೇಶ್ವರಿಯ ಕೆತ್ತನೆಯನ್ನು ಕೂಡ ಮಾಡಿದ್ದಾರೆ. ಬಾಗಿಲವಾಡ ಸರಳತೆಯಿಂದ ಕೂಡಿದೆ. ಅಂತರಾಳ ಬರಿದಾಗಿದೆ. ಜಾಲಂಧರಗಳಿಂದ ರೂಪಿತವಾಗಿರುವ ಬಾಗಿಲವಾಡ ಸಹ ಅತ್ಯಂತ ಸರಳ ರಚನೆ. ಗರ್ಭಗೃಹ ಹಾಗೂ ಅಂತರಾಳದ ಬಾಗಿಲವಾಡದಲ್ಲಿರುವ ಲಲಾಟ ಬರಿದಾಗಿದೆ.

ನವರಂಗ ಚಿಕ್ಕದಾಗಿದ್ದು ಅದರಲ್ಲಿರುವ ಕಂಬಗಳನ್ನು ಬಹುಶಃ ಇತ್ತೀಚೆಗೆ ಜೋಡಿಸಿರಬಹುದು. ನಾಲ್ಕು ಕಂಬಗಳ ಮಧ್ಯೆ ನಂದಿ ಶಿಲ್ಪವನ್ನಿಡಲಾಗಿದೆ. ನವರಂಗದ ಮೇಲ್ಛಾವಣಿಯನ್ನು ರಿಪೇರಿ ಮಾಡಲಾಗಿದೆ. ನವರಂಗಕ್ಕಿರುವ ಬಾಗಿಲವಾಡ ಸಹ ನಿರಲಂಕಾರದಿಂದ ಕೂಡಿದೆ.

ದೇವಾಲಯದ ಮುಂಭಾಗದಲ್ಲಿ ಅವಶೇಷಗಳು ಬಿದ್ದಿವೆ. ಅವುಗಳಲ್ಲಿ ನಾಗಶಿಲ್ಪ, ನಂದಿ ಹಾಗೂ ಕುಳಿತಿರುವ ವೀರಭದ್ರನ ತ್ರುಟಿತ ಶಿಲ್ಪಗಳು ಸೇರಿವೆ. ದೇವಾಲಯದ ಸ್ತಂಭಗಳ ಬಿಡಿ ತುಣುಕುಗಳು ಆವರಣದಲ್ಲಿವೆ. ಅಧಿಷ್ಠಾನದ ಹೆಚ್ಚಿನ ಭಾಗ ಮಣ್ಣಿನಲ್ಲಿ ಹೂತುಹೋಗಿದೆ. ದೇವಾಲಯವನ್ನು ಸುಣ್ಣ, ಗಾರೆ ಹಾಗೂ ಸಿಮೆಂಟಿನಿಂದ ಬಳಿಯಲಾಗಿದೆ. ಕದಂಬ-ನಾಗರ ಶಿಖರ ದಿಡಿಗೇಶ್ವರನ ಗುಡಿಗೆ ಇರುವುದು. ಈ ಶಿಖರದಿಂದ ದೇವಾಲಯದ ಸೌಂದರ್ಯ ಹೆಚ್ಚಿರುವುದು. ಸ್ಥೂಪಿ ಹಾಗೂ ಕಲಶವನ್ನು ಶಿಕರವು ಹೊಂದಿದೆ.

ದಿಡಿಗೇಶ್ವರನ ದೇವಾಲಯದ ನವರಂಗದಲ್ಲಿ ಶಾಸನವೊಂದಿದೆ. ಅದು ಪ್ರಕಟಗೊಂಡಿದೆ (ಧಾ.ಜಿ.ಶಾ.ಸೂ, ಸಂ.ರೋ. ೫೧, ಪು. ೪೨; SII, XV, No. 168, 22 and 30_.ಯಾದವ ಸಿಂಘಣನ ಕಾಲದ ಈ ಶಾಸನ ಕ್ರಿ.ಶ. ೧೨೨೩ರ ತೇದಿಯುಳ್ಳದ್ದು. ಪುರುಷೋತ್ತಮ ನಾಯಕನ ಮಡದಿ ಹೀರುಬಾಯಿ ಮಾಡಿದ ದಾನಕಾರ್ಯದ ಬಗೆಗಿರುವ ಮಾಹಿತಿಯನ್ನು ಈ ಶಾಸನ ಒಳಗೊಂಡಿದೆ.

೨೬

ಊರು ಮೇವುಂಡಿ
ಸ್ಮಾರಕ ಈಶ್ವರ
ಸ್ಥಳ ದಿಡಿಗೇಶ್ವರ ದೇವಾಲಯದ ಆವರಣ
ಕಾಲ ೧೩-೧೪ನೇ ಶತಮಾನ
ಶೈಲಿ
ಅಭಿಮುಖ ದಕ್ಷಿಣ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದಿಡಿಗೇಶ್ವರ ದೇವಾಲಯದ ಆವರಣದಲ್ಲಿ ದಕ್ಷಿಣಾಭಿಮುಖವಗಿರುವ ಈಶ್ವರನ ದೇವಾಲಯ ನಿರಾಲಂಕಾರದಿಂದ ಕೂಡಿದೆ. ಒಂದು ಚಿಕ್ಕಮಂಟಪದ ಹಾಗೆ ಕಾಣುವ ಈ ಗುಡಿಯಲ್ಲಿ ಲಿಂಗವನ್ನಿಡಲಾಗಿದೆ. ಹೊರ ಮತ್ತು ಒಳಗೋಡೆಗಳು ಅಲಂಕಾರ ರಹಿತವಾಗಿವೆ. ಅಧಿಷ್ಠಾನವು ಸಹ ಸಾದಾ ರಚನೆಯದ್ದು. ಇದಕ್ಕೂ ಕೂಡಾ ಶಿಖರವಿಲ್ಲ. ಮೇಲ್ಛಾವಣಿಯನ್ನು ಗಾರೆ-ಗಚ್ಚುಗಳಿಂದ ದುರಸ್ತಿಗೊಳಿಸಲಾಗಿದೆ.

ದೇವಾಲಯದ ಮುಂಭಾಗದಲ್ಲಿ ಸುಂದರವಾದ ಶಿಲ್ಪವೊಂದಿದೆ. ಆದರೆ ಅದರ ಕೈಗಳು ತುಂಡರಿಸಿವೆ. ಕುಳಿತಿರುವ ಈ ಶಿಲ್ಪ ನೀಳವಾದ ಕಿರೀಟಕ್ಕೆ, ಅದರ ಹಿಂಭಾಗದಲ್ಲಿ ಚಂದ್ರಾವಳಿ ಹಾಗೂ ಕಿರೀಟವನ್ನು ಮಣಿಸರಗಳಿಂದ ಅಲಂಕಾರಗೊಳಿಸಲಾಗಿದೆ. ಕೊರಳಲ್ಲಿ ಮಣಿಸರ ಕೆತ್ತನೆಮಾಡಿ ಕೈಗೆ ತೋಬಂದಿಯನ್ನು ತೋಡಿಸಲಾಗಿದೆ. ಇದೇ ಶಿಲ್ಪದ ಪಕ್ಕದಲ್ಲಿ ದೇವಾಲಯಕ್ಕೆ ಸಂಬಂಧಿಸಿದ ಕೆಲವು ನಾಗ ಶಿಲ್ಪಗಳನ್ನು ಇಡಲಾಗಿದೆ.

೨೭

ಊರು ಮೇವುಂಡಿ
ಸ್ಮಾರಕ ಕುಪ್ಪೇಶ್ವರ
ಸ್ಥಳ ಗ್ರಾಮದಲ್ಲಿ
ಕಾಲ
ಶೈಲಿ
ಅಭಿಮುಖ ಉತ್ತರ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಅತ್ಯಂತ ಪ್ರಾಚೀನವಾದ ಈ ದೇವಾಲಯ ನಾಶದ ಅಂಚಿನಲ್ಲಿದೆ. ಈಗ ಬಿದ್ದು ಹೋತಿರುವ ಗರ್ಭಗೃಹ ಹಾಗೂ ನವರಂಗಗಳನ್ನು ಸ್ಥಳೀಯವಾಗಿ ಸಿಗುವ ಚಕ್ಕೆ ಕಲ್ಲುಗಳಿಂದ ದುರಸ್ತಿಗೊಳಿಸಲಾಗಿದೆ. ಪ್ರಾಚೀನ ದೇವಾಲಯದ ಬಾಗಿಲವಾಡದ ಅವಶೇಷ ಹಾಗೂ ಲಿಂಗ-ಪೀಠ ಭಾಗಗಳನ್ನು ಮಾತ್ರ ಕಾಣುತ್ತೇವೆ. ಎತ್ತರದ ಕಟ್ಟೆಯ ಮೇಲೆ ನಿರ್ಮಾಣವಾಗಿದ್ದ ಈ ದೇವಾಲಯದ ಅಧಿಷ್ಠಾನ ಕಂಡುಬರುವುದಿಲ್ಲ. ಮೇಲ್ಛಾವಣಿ ಹೆಚ್ಚಿನ ದುರಸ್ತಿಕಾರ್ಯಕ್ಕೆ ಒಳಗಾಗಿದೆ.

ದೇವಾಲಯಕ್ಕೆ ಸಂಬಂಧಿಸಿದ ಶಾಸನಗಳು ವೆಂಕಟರಮಣ ಗುಡಿಯ ಮುಂಭಾಗದಲ್ಲಿವೆ. ಅವು ಪ್ರಕಟಗೊಂಡಿವೆ. ಕ್ರಿ.ಶ. ೯ನೇ ಶತಮಾನಕ್ಕೆ ಸೇರಿದ ಈ ಶಾಸನಗಳು ರಾಷ್ಟ್ರಕೂಟ ಎರಡನೆಯ ಕೃಷ್ಣನ ಕಾಲಕ್ಕೆ ಸೇರಿದವು. ಕೋಗಳಿ-೫೦೦, ಮಾಸವಾಡಿ ೧೪೦, ಹಾಗೂ ಪುಲಿಗೆರೆ-೨೦೦ರ ಭಾಗಗಳನ್ನು ಆಳುತ್ತಿದ್ದ “ಕುಪ್ಪೆರಸ”ನು ಮೇವುಂಡಿಯನ್ನು ಉಪರಾಜಛಾನಿ ಪಟ್ಟನವಾಗಿ ಮಾಡಿಕೊಂಡಿದ್ದನು. ಅಲ್ಲದೇ ಶಾಸನಗಳಲ್ಲಿ ಮೇಲ್ವಿಡಿ, ಮೆಲ್ವಿಡಿ, ಹಾಗೂ ಮಡೆಳವಡಿ ನಾಡೆಂದು ಬೇರೆ ಬೇರೆ ಹೆಸರುಗಳಿಂದ ಉಲ್ಲೇಖಿಸಿರುವುದನ್ನು ತಿಳಿಯಬಹುದು. ಮಹಾಸಾಮಂತನಾದ “ಕುಪ್ಪೆರಸ”ನು ಕೊಯಿಗೇಶ್ವರ ದೇವಾಲಯವನ್ನು ಮೇವುಂಡಿಯಲ್ಲಿ ಕಟ್ಟಿಸಿ ಹಲವು ದಾನಕಾರ್ಯಗಳನ್ನು ಮಾಡಿದನು. ಅಲ್ಲದೇ ನಿರ್ವಹಣೆಗಾಗಿ ವೇದವಾಹಕ ಭಟ್ಟಾರಕನೆಂಬ ಬ್ರಾಹ್ಮಣನಿಗೆ ಉಪಭೋಗಕ್ಕಾಗಿ ಭೂಮಿಯನ್ನು ದನ ನೀಡಿದನು. ಈ ಶಾಸನವನ್ನು ಮಾಕಿವಯ್ಯ ಎಂಬ ಲಿಪಿಕಾರ ಕಂಡರಿಸಿದ್ದಾನೆ.

ಕ್ಷೇತ್ರಕಾರ್ಯಾವಧಿಯಲ್ಲಿ ಕೊಯಿಗೇಶ್ವರ ಎಂಬ ದೇವಾಲಯ ಕಂಡುಬಂದಿಲ್ಲ. ಕುಪ್ಪೇಶ್ವರ ಎಂಬ ಮುರುಕಲು ದೇವಾಲಯ ಮಾತ್ರ ಗ್ರಾಮದ ಬಸ್‌ನಿಲ್ದಾಣದ ಸಮೀಪ ಕಂಡುಬರುತ್ತದೆ. ಬಹುಶಃ ಕೊಯಿಗೇಶ್ವರ ಎಂಬ ಹೆಸರಿನ ಬಳಕೆ ಕಡಿಮೆಯಾಗಿ ಈ ದೇವಾಲಯವನ್ನು ಕಟ್ಟಿಸಿರುವ ಕುಪ್ಪೆಯ ಅರಸನ ಹೆಸರಿನಿಂದಲೇ ಕರೆಯುವ ರೂಢಿ ಹೆಚ್ಚಾಗಿರಬಹುದು. ಗ್ರಾಮದಲ್ಲಿರುವ ಕಲ್ಮೇಶ್ವರ, ಹಾಗೂ ಬಸವಣ್ಣನ ಪ್ರಾಚೀನ ದೇವಾಲಯಗಳೂ ಸಂಪೂರ್ಣವಾಗಿ ಹೊಸ ಕಟ್ಟಡಗಳನ್ನೇ ಮೈದಾಳಿಕೊಂಡು ನಿಮತಿವೆ. ಹೀಗಾಗಿ ಅವುಗಳಿಗೆ ಸಂಬಂಧಿಸಿದ ಕೆಲವು ಪ್ರಾಚ್ಯಾವಶೇಷಗಳು ಮಾತ್ರ ಗುಡಿಯ ಮುಂಭಾಗದಲ್ಲಿ ಕಂಡುಬರುತ್ತವೆ. ರಾಷ್ಟ್ರಕೂಟರ ಕಾಲದ ವೀರಗಲ್ಲು ಶಾಸನ ಗ್ರಾಮದ ಬಸವಣ್ಣನ ಗುಡಿಯ ಮುಂಭಾಗದಲ್ಲಿದೆ. ಸಮಾಜ ಸುಧಾರಕ ಬಸವಣ್ಣನವರು ಮೇವುಂಡಿಗೆ ಭೇಟಿ ನೀಡಿರುವ ಐತಿಹ್ಯವನ್ನು ಗ್ರಾಮಸ್ಥರು ಉಲ್ಲೇಖಿಸುತ್ತಾರೆ. ಮೇವುಂಡಿ ಗ್ರಾಮ ಮುಖ್ಯವಾಗಿ ಪರಿಗಣಿತವಾಗುವುದು ಶಾಸನಕವಿ ’ಮಲ್ಹಾರಿ’ಯಿಂದ ’ಮೇವುಂಡಿ ಮಲ್ಹಾರಿ’ ಎಂಬ ಹೆಸರಿನಿಂದ ಚಿರಪರಿಚಿತವಾಗಿರುವ ವ್ಯಕ್ತಿ ಇದೇ ಗ್ರಾಮದವನೆಂಬುದು ಗಮನಾರ್ಹ ಸಂಗತಿ.

೨೮

ಊರು ಶಿರೂರು
ಸ್ಮಾರಕ ಮಳಗೇಶ್ವರ (ಈಶ್ವರ)
ಸ್ಥಳ ಶಿರೂರ-ಚುರ್ಚಿಹಾಳ ರಸ್ತೆ
ಕಾಲ ೧೧ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪಶ್ಚಿಮ
ಸ್ಥಿತಿ ಕನಿಷ್ಠ
ಸಂರಕ್ಷಣೆ

ವಿಶಾಲವಾದ ಈ ದೇವಾಲಯ ಸದ್ಯ ಗರ್ಭಗೃಹ ಹಾಗೂ ಅಂತರಾಳ ಭಾಗವನ್ನು ಮಾತ್ರ ಹೊಂದಿದೆ. ನವರಂಗದ ಭಾಗದ ಸಂಪೂರ್ಣವಾಗಿ ನಾಶವಾಗಿರುವುದು. ಕಲ್ಯಾಣ ಚಾಲುಕ್ಯರ ಪ್ರಾರಂಭ ಕಾಲದಲ್ಲಿ ನಿರ್ಮಾಣವಾಗಿರುವ ಈ ಸ್ಮಾರಕಕ್ಕೆ ಉಸುಕು ಕಲ್ಲನ್ನು ಬಳಕೆ ಮಾಡಲಾಗಿದೆ. ಗರ್ಭಗೃಹದಲ್ಲಿ ಲಿಂಗವಿದ್ದು ಒಳಗೋಡೆಯಲ್ಲಿನ ಅರ್ಧ ಕಂಬಗಳು ಕಾಣುತ್ತವೆ. ಬಾಗಿಲವಾಡೆ ಅರ್ಧಕಂಬಗಳ ರಚನೆಯಿಂದ ಕೂಡಿದೆ. ಸುಂದರವಾಗ ಭುವನೇಶ್ವರಿ ಗರ್ಭಗೃಹದಲ್ಲಿದೆ. ಲಲಾಟ ಬರಿದಾಗಿದೆ. ತಕ್ಕಮಟ್ಟಿಗೆ ವಿಶಾಲವಾಗಿರುವ ಅಂತರಾಳ ಬರಿದಾಗಿದ್ದು ಅದರ ಒಳಗೋಡೆಯಲ್ಲಿಯೂ ಅರ್ಧಕಂಬಗಳು ಕಂಡು ಬರುತ್ತವೆ. ಬಾಗಿಲವಾಡದ ಇಕ್ಕೆಲುಗಳಲ್ಲಿ ಜಾಲಂಧರವನ್ನು ಅಳವಡಿಸಲಾಗಿದೆ.

ದೇವಾಲಯದ ನವರಂಗ ನಾಶವಾಗಿದೆ. ಅಧಿಷ್ಠಾನ ಮಣ್ಣಿನಲ್ಲಿ ಹೂತು ಹೋಗಿದೆ. ಹೊರಗೋಡೆಗಳು ನಿರಾಲಂಕಾರದಿಂದ ಕೂಡಿವೆ. ಗುಡಿಗೆ ನಾಗರ ಶೈಲಿಯ ಸುಂದರವಾದ ಶಿಖರವಿದೆ. ಶಿಖರಕ್ಕಿರುವ ಕಲಶ, ಮತ್ತು ಸ್ತೂಪಿ ಭಾಗವು ಬಿದ್ದುಹೋಗಿದೆ.

ಗುಡಿಯ ಮುಂಭಾಗದಲ್ಲಿ ಇತ್ತೀಚೆಗೆ ನಿರ್ಮಿಸಿದ ಚಿಕ್ಕದಾದ ಗುಡಿಯೊಂದಿದ್ದು ಅದರಲ್ಲಿ ನಂದಿಯ ಎರಡು ಶಿಲ್ಪಗಳನ್ನಿಡಲಾಗಿದೆ. ಗುಡಿಯ ಮುಂಭಗಲದಲ್‌ಇ ನಾಲ್ಕು ವೀರಗಲ್ಲು ಶಾಸನ ಫಲಕಿಗಳನ್ನು ಹೂಳಿಡಲಾಗಿದೆ. ಇದೇ ಗುಡಿಯ (ಮಳಗೇಶ್ವರ) ಹಿಂಭಾಗದಲ್ಲಿ ಇನ್ನೊಂದು ತ್ರುಟಿತ ಶಾಸನ ಹಾಗೂ ಕೆಲವು ಬಿಡಿ ಶಿಲ್ಪಗಳ ಅವಶೇಷಗಳಿವೆ ಮಳಗೇಶ್ರ ಗುಡಿಯಿಂದ ಸ್ವಲ್ಪದೂರದಲ್ಲಿ ಪ್ರಾಚೀನ ದೇವಾಲಯದ ಭಗ್ನಗೊಂಡಿರುವ ಶಿಲ್ಪಾವಶೇಷಗಳನ್ನು ಇಡಲಾಗಿದೆ. ಅದರಲ್ಲಿನ ಸಪ್ತಮಾತೃಕೆಯ ಶಿಲ್ಪ ಹಾಗೂ ನಂದಿ ಶಿಲ್ಪ ಗಮನಸೆಳೆಯುತ್ತವೆ. ಈ ಶಿಲ್ಪಗಳು ಬಹುಶಃ ಮಳಗೇಶ್ವರ ದೇವಾಲಯಕ್ಕೆ ಸಂಬಂಧಪಟ್ಟವುಗಳಾಗಿರಬಹುದು.

ಈ ದೇವಾಲಯಕ್ಕೆ ಸಂಬಂಧಪಟ್ಟ ಮೂರು ಶಾಸನಗಳು ಪ್ರಕಟಗೊಂಡಿವೆ (ಧಾ.ಜಿ.ಶಾ.ಸೂ. ಸಂ. ರೋ. ೫೫, ೫೭ ಮತ್ತು ೫೮ ಪು. ೪೨; SII, XI, pt. II, No. 206, SII, XV No. 202 and 204). ಇವು ಕ್ರಿ.ಶ. ೧೧ ಮತ್ತು ೧೨ನೇ ಶತಮಾನಕ್ಕೆ ಸೇರಿದ ಶಾಸನಗಳಾಗಿವೆ. ರಾಣಿ ಬಾಗಲಮಹಾದೇವಿಯ ವಿನಂತಿಯ ಮೇರೆಗೆ ಮಾವನಾದ ಪರ್ಗ್ಗಡೆ ಮಾರ್ತಾಂಡಯ್ಯನು ಮಳಗೇಶ್ವರ ದೇವಾಲಯಕ್ಕೆ ಸುವರ್ಣ ಗದ್ಯಾಣಗಳ ದಾನ ಮಾಡಿರುವ ಉಲ್ಲೇಖವನ್ನು ಈ ಪ್ರಕಟಿತ ಶಾಸನ ನೀಡುತ್ತದೆ. ಕ್ರಿ.ಶ. ೧೨೯೧೨ ತೇದಿವುಳ್ಳ ಎರಡು ಶಾಸನಗಳು ಯಾದವ ರಾಮಚಂದ್ರನ ಆಡಳಿತಾವಧಿಗೆ ಸಂಬಂಧಿಸಿವೆ. ಸ್ಥಳೀಯ ನಾಯಕನೊಬ್ಬನು (ಬಹುಶಃ ಕಾಮನಾಯಕ ಇರಬಹುದು) ಸ್ವಯಂ ಭೂಲಿಂಗ (ಮಳಗೇಶ್ವರರ) ದೇವಾಲಯಕ್ಕೆ ಭೂದಾನ ನೀಡಿರುವ ಮಾಹಿತಿಯನ್ನು ಒಳಗೊಂಡಿವೆ.

ಮಳಗೇಶ್ವರ ಗುಡಿಯ ಸಮೀಪದಲ್ಲಿ ಹನುಮಂತನು ಗುಡಿಯಿದ್ದು ಅದು ಅರ್ವಾಚೀನದ್ದು. ಆದರೆ ಗುಡಿಯ ಮುಂಭಾಗದಲ್ಲಿ ಪ್ರಾಚೀನ ಕಾಲಕ್ಕೆ ಸೇಢರಿದ ಕೆಲವು ಬಿಡಿಶಿಲ್ಪಗಳಿವೆ. ಸ್ತ್ರೀ-ಪುರುಷ ಶಿಲ್ಪ ಹಾಗೂ ತ್ರುಟಿತವಾದ ತ್ರಿಶೂಲ (ಶಿಬಾರದಲ್ಲಿ ಉಪಯೋಗಿಸಿರುವ) ಮಾದರಿಯ ಶಿಲ್ಪವನ್ನು ಇಲ್ಲಿಡಲಾಗಿದೆ.

೨೯

ಊರು ಶಿರೂರು
ಸ್ಮಾರಕ ಸಿದ್ದೇಶ್ವರ
ಸ್ಥಳ ಶಿರೂರ-ಚುರ್ಚಿಹಾಳ ರಸ್ತೆ (ಪಾಟೀಲರ ತೋಟದಲ್ಲಿ)
ಕಾಲ ೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದ್ದ ಈ ಪ್ರಾಚೀನ ಸ್ಮಾರಕ ಈಗ ಸಂಪೂರ್ಣವಾಗಿ ನೆಲಕಚ್ಚಿದೆ. ಎತ್ತರದ ಕಟ್ಟೆಯ ಮೇಲೆ ಈ ಗುಡಿ ನಿರ್ಮಾಣವಾಗಿತ್ತು. ಮುರಿದು ಬಿದ್ದಿರುವ ದೇವಾಲಯದ ಗರ್ಭಗೃಹದ ಜಾಗದಲ್ಲಿ ಲಿಂಗ ಹಾಗೂ ಇತರೆ ಕೆಲವು ಅವಶೇಷಗಳಿವೆ. ಹೊರಗೋಡೆಯ ಭಾಗಗಳು, ತುಣುಕುಗಳಾಗಿ ಬಿದ್ದಿರುವ ಕಂಬಗಳು ಹಾಗೂ ತೊಲೆಗಳು ಆವರಣದಲ್ಲಿ ಕಾಣುತ್ತೇವೆ.

ಕಪ್ಪುಕಲ್ಲಿನಲ್ಲಿ ನಿರ್ಮಾಣವಾಗಿದ್ದ ಸುಮದರ ದೇವಾಲಯದ ಅಧಿಷ್ಠಾನದ ಭಾಗ ಸ್ಪಷ್ಟವಾಗಿ ಕಾಣುತ್ತದೆ. ಉಪಾನ, ಜಗತಿ, ಗಳ, ತ್ರಿಪಟ್ಟ ಕುಮುದ, ಕಪೋತ ಹಾಗೂ ಈ ಕಪೋತದ ಮೇಲ್ಭಾಗದಲ್ಲಿ ಮತ್ತೊಂದು ಅಲಂಕಾರ ಪಟ್ಟಿಯನ್ನು ಸುತ್ತಲೂ ಅಳವಡಿಸಲಾಗಿದೆ. ಇದರ ಮೇಲೆ ಅಲಂಕರಣೆಯಿಂದ ಕೂಡಿರುವ ಗೋಡೆಯನ್ನು ರಚಿಸಲಾಗಿದೆ. ಬಿದ್ದುಹೋಗಿರುವ ಈ ಸ್ಮಾರಕದ ಸುತ್ತಲೂ ಮುಳ್ಳಿನ ಕಂಟಿಗಳು ಬೆಳೆದಿರುವುದರಿಂದ ಗುಡಿಯನ್ನು ಪ್ರವೇಶಿಸುವುದೇ ಕಷ್ಟಕರವಾದ ಕಾರ್ಯ. ದೇವಾಲಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಗಳು ಕಂಡುಬಂದಿಲ್ಲ.

ಗ್ರಾಮಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಶಾಸನಗಳು ಪ್ರಕಟಗೊಂಡಿವೆ (ಧಾ.ಜಿ.ಶಾ.ಸೂ, ಸಂ.ರೋ. ೫೩, ೫೪ ಮತ್ತು ೫೬ ಪು. ೪೨; SII, XI, pt. I, No. 75 and 82, SII, XI – pt. II, No. 207). ಅವುಗಳಲ್ಲಿ ಮೂರು ಮಳಗೇಶ್ವರ ದೇವಾಲಯಕ್ಕೆ ಸಂಬಂಧಪಟ್ಟವುಗಳಾಗಿದ್ದರೆ ಉಳಿದವು ಬೇರೆ ಬೇರೆ ಮಾಹಿತಿ ನೀಡುವ ಆಕರಗಳಾಗಿವೆ. ಕ್ರಿ.ಶ. ೧೧ನೇ ಶತಮಾನದ ಕಾಲಾವಧಿಗೆ ಈ ಶಾಸನಗಳು ಸೇರಿವೆ. ಕುಂಚವಡುಗ ದಾಸಯ್ಯನು ಸಿರಿವೂರದ (ಶಿರೂರು) ಸಿರಿವಾಗಿಲ (ಅಗಸಿ ಬಾಗಿಲು ಆಗಿದ್ದಿರಬಹುದು?) ಕಟ್ಟಿಸಿ ಅದರ ನಿರ್ವಹಣೆಗೆ ದಾನಬಿಟ್ಟಿರುವ ಉಲ್ಲೇಖ ನೀಡುತ್ತದೆ. ಕ್ರಿ.ಶ. ೧೦೪೮ರ ಶಾಸನದಲ್ಲಿ ಮಹಸಾಮಂತಾಧಿಪತಿ ದಾಸರಸನು ಸಿರಿವೂರನ್ನಾಳುವಾಗ ಕೆಲವು ಯತಿಗಳಿಗೆ ದಾನ ಕೊಟ್ಟಿರುವ ಮಾಹಿತಿ ಇದೆ. ಕಲ್ಯಾಣ ಚಾಲುಕ್ಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ ಶಾಸನವೊಂದು ಯಾದವ ಮಹಾಮಂಡಳೇಶ್ವರನೊಬ್ಬನ ಬಿರುದು ಬಾವಲಿಗಳನ್ನು ಕುರಿತು ವಿವರಣೆ ನೀಡುತ್ತವೆ.

೩೦

ಊರು ಶಿರೂರು
ಸ್ಮಾರಕ ಕೃಷ್ಣ
ಸ್ಥಳ ಗ್ರಾಮದ ದಕ್ಷಿಣಕ್ಕೆ
ಕಾಲ ೧೩-೧೪ನೇ ಶತಮಾನ
ಶೈಲಿ ವಿಜಯನಗರ ಪೂರ್ವ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಎತ್ತರದ ಕಟ್ಟೆಯ ಮೇಲೆ ನಿರ್ಮಣವಾಗಿರುವ ಈ ದೇವಾಲಯವನ್ನು ಮೆಟ್ಟಿಲುಗಳ ಸಹಾಯದಿಂದ ಏರಿಕೊಮಡು ಪ್ರವೇಶಿಸಬೇಕಾಗುತ್ತದೆ. ಗರ್ಭಗೃಹ ಹಾಗೂ ನವರಂಗ ಇದರ ಭಾಗಗಳೂ. ದೇವಾಲಯ್ಕೆಡಕ ನವರಂಗದ ಮೂಲಕ ಎರಡು ಪ್ರವೇಶ ದ್ವಾರಗಳಿವೆ (ಪೂರ್ವ ಹಾಗೂ ಉತ್ತರ). ಸ್ಥಳೀಯವಾಗಿ ಸಿಗುವ ಉಸುಕು ಕಲ್ಲನ್ನು ದೇವಾಲಯದ ರಚನೆಯಲ್ಲಿ ಬಳಕೆ ಮಾಡಲಾಗಿದೆ.

ಗರ್ಭಗೃಹದಲ್ಲಿ ನಾಲ್ಕು ಅಡಿ ಎತ್ತರದ ಕೃಷ್ಣನ (ಮುರುಳಿ ಮೋಹನ) ವಿಗ್ರಹವನ್ನಿಟ್ಟು ಪೂಜಿಸುತ್ತಾರೆ. ಚತುರ್ಭುಜವುಳ್ಳ ಈ ಶಿಲ್ಪವು ಸುಂದರವಾಗಿದೆ. ಹಿಂಬದಿಯ ಕೈಗಳಲ್ಲಿ ಶಂಖ ಹಾಗೂ ಚಕ್ರವನ್ನು ಹಿಡಿದಿದ್ದರೆ, ಉಳಿದೆರಡು ಕೈಗಳಲ್ಲಿ ಕೊಳಲನ್ನು ಹಿಡಿದು ನಿಂತಿದೆ. ಈ ಶಿಲ್ಪದ ಎಡ ಮತ್ತು ಬಲ ಭಾಗದಲ್ಲಿ ಸ್ತ್ರೀಯರ ಎರಡು ಉಬ್ಬುಶಿಲ್ಪಗಳನ್ನು ಕೆತ್ತಿದ್ದು ಇವು ಬಹುಶಃ ಕೃಷ್ಣನ ಪತ್ನಿಯರ (ರುಕ್ಮಿಣಿ ಹಾಗೂ ಸತ್ಯಭಾಮೆ) ಶಿಲ್ಪಗಳಾಗಿರಬಹುದು. ಅಲ್ಲದೆ ಇದೇ ಶಿಲ್ಪದ ಪೀಠ ಭಾಗದಲ್ಲಿ ಮತ್ತೆ ಮೂರು ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದೆ. ಅವು ಭಕ್ತರ ಶಿಲ್ಪಗಳಾಗಿವೆ. ಗರ್ಭಗೃಹದಲ್ಲಿ ಸುಮದರವಾದ ಭುವನೇಶ್ವರಿಯನ್ನು ಕೆತ್ತಲಾಗಿದೆ. ಬಾಗಿಲವಾಡ ಐದು ಅರ್ಧ ಪಟ್ಟಿಕೆಗಳಿಂದ, ಉಬ್ಬುಶಿಲ್ಪ ಹಾಗೂ ಲತಾ ಬಳ್ಳಿ ಸುರುಳಿಗಳಿಂದ ನಿರ್ಮಿತವಾಗಿದೆ. ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬು ಶಿಲ್ಪವನ್ನು ಕೆತ್ತಲಾಗಿದೆ.

ನವರಂಗ ನಾಲ್ಕು ಕಂಬಗಳಿಂದ ಕೂಡಿದ್ದು ಇಲ್ಲಿರುವ ಕಂಬಗಳು ಬಳಪದ ಕಲ್ಲಿನಲ್ಲಿ ರಚಿಸಲ್ಪಟ್ಟಿವು. ಅವುಗಳಲ್ಲಿ ಎರಡು ಕಂಬಗಳು ಗಂಟೆ ಆಕಾರದವುಗಳಾದರೆ ಉಳಿದೆರಡು ಕಮಲ ಮೊಗ್ಗನ್ನು ತಿರುವಿ ಇಟ್ಟಾಗ ತೋರುವ ಮಾದರಿಯಲ್ಲಿ ಇವೆ. ಈ ಎಲ್ಲ ಕಂಬಗಳಿಗೆ ವೃತ್ತಾಕಾರದ ಫಲಕ ಹಾಗೂ ಚೌಕಾಕಾರದ ಬೋಧಿಗೆಗಳನ್ನು ಅಳವಡಿಸಲಾಗಿದೆ. ನಾಲ್ಕು ಕಂಬಗಳನ್ನೊಳಗೊಂಡಂತೆ ಬುವನೇಶ್ವರಿಯನ್ನು ಕೆತ್ತಲಾಗಿದೆ. ನವರಂಗಕ್ಕಿರುವ ಎರಡು ಬಾಗಿಲವಾಡಗಳನ್ನು ಸಲವಲ್ಪಮಟ್ಟಿಗೆ ಅಲಂಕರಿಸಲಾಗಿದೆ. ಉತ್ತರಾಭಿಮುಖ ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬಶಿಲ್ಪವಿದ್ದರೆ ಪೂರ್ವಾಭಿಮುಖ ಬಾಗಿಲವಾಡದ ಲಲಾಟ ಬರಿದಾಗಿದೆ.

ಹೊರಗೋಟೆಯಲ್ಲಿ ಹಲವು ಭಂಗಿಯಲ್ಲಿರುವ ಮಿಧುನ ಶಿಲ್ಪಗಳನ್ನು ಗುಡಿಯ ಸುತ್ತಲೂ ಅಳವಡಿಸಿದೆ. ಅವುಗಳಲ್ಲಿ ಒಬ್ಬ ವೀರ ಯೋಧನ ಶಿಲಾ ಫಲಕವು ಸಹ ಇದೆ. ದೊಡ್ಡದಾಗಿರುವ ಈ ಫಲಕವು ಸುಮದರವಾಗಿರುವುದು. ದೇವಾಲಯದ ಅಧಿಷ್ಠಾನ ಭಾಗ ಸಾದಾ ರಚನೆಯಿಂದ ಕೂಡಿದೆ. ಒಟ್ಟಾರೆ ಗುಡಿಯ ನಿರ್ಮಾಣದಲ್ಲಿ ಪ್ರಯೋಗವಾಗಿರುವ ಮಾದರಿಯನ್ನು ಗಮನಿಸದರೆ ಈ ದೇವಾಲಯ ಕಲ್ಯಾಣದ ಚಾಲುಕ್ಯರ ಕಾಲಾನಂತರವೇ ನಿರ್ಮಾಣವಾಗಿದ್ದಿರಬಹುದೆಂದು ಊಹಿಸಬಹುದು.

ಕೃಷ್ಣನ ಗುಡಿಯ ಸಮೀಪದಲ್ಲಿ ಪ್ರಾಚೀನ ಕಾಲದ ಒಂದು ಬಾವಿ ಇದೆ. ಬೆನಕಪ್ಪನ ಬಾವಿ ಎಂದು ಕರೆಯಲಾಗುವ ಇದು ಎರಡು ಕಂಬಗಳನ್ನೊಳಗೊಂಡಿರುವ ತೋರಣವನ್ನು ಹೊಂನದಿದೆ. ಉಳಿದಂತೆ ಪ್ರಾಚ್ಯಾವಶೇಷಗಳು ಬಿದ್ದಿವೆ. ಬಾವಿಯ ಸುತ್ತಲೂ ಗಿಡ-ಗಂಟಿಗಳು ಬೆಳೆದಿದ್ದು ಪ್ರವೇಶಿಸುವುದು ಕಷ್ಟಸಾಧ್ಯ.