೫೧

ಊರು ಸೂಡಿ
ಸ್ಮಾರಕ ಮಲ್ಲಿಕಾರ್ಜುನ
ಸ್ಥಳ ಗ್ರಾಮದ ಪ್ರವೇಶದಲ್ಲಿ
ಕಾಲ ೧೦-೧೧ನೇ ಶತಮಾನ
ಶೈಲಿ ರಾಷ್ಟ್ರಕೂಟ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಸೂಡಿಯ ಮಲ್ಲಿಕಾರ್ಜುನ ದೇವಾಲಯ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಹಲವು ದೇವಾಲಯಗಳಲ್ಲಿ ಮಹತ್ವವಾದುದು. ರಾಷ್ಟ್ರಕೂಟ ರಚನಾ ಶೈಲಿಯನ್ನು ಉಳಿಸಿಕೊಂಡು ಕಲ್ಯಾಣ ಚಾಲುಕ್ಯರ ಆಡಳಿತದ ಪ್ರಥಮ ಪಾದದಲ್ಲಿ ನಿರ್ಮಾಣವಾಗಿರುವಂತಹ ದೇವಾಲಯವಿದು. ಎತ್ತರದ ಕಟ್ಟೆಯ ಮೇಲೆ ವಿಸ್ತಾರವಾಗಿ ರಚನೆಯಾಗಿರುವ ಈ ಗುಡಿಯು ಕಲಾ ಅಧ್ಯಯನ ದೃಷ್ಟಿಯಿಂದ ಪ್ರಮುಖವಾದುದು. ಇದೊಂದು ತ್ರಿಕೂಟ ರಚನೆಯಾಗಿದೆ.

ಮಲ್ಲಿಕಾರ್ಜುನ ದೇವಾಲಯ ಮೂರು ಗರ್ಭಗೃಹಗಳಿಂದ ಕೂಡಿದೆ. ಮುಖ್ಯ ಗರ್ಭಗೃಹಕ್ಕೆ ಅಂತರಾಳವಿದ್ದರೆ ಉಳಿದೆರಡು (ದಕ್ಷಿಣ-ಉತ್ತರ ಅಭಿಮುಖ ಹೊಂದಿರುವ) ಗರ್ಭಗೃಹಗಳನ್ನು ಒಳಗೊಂಡಂತೆ ವಿಶಾಲವಾದ ನವರಂಗವಿದೆ. ದೇವಾಲಯಕ್ಕೆ ಮುಖಮಂಟಪ ಇದೆ. ದೇವಾಲಯದಲ್ಲಿನ ಕಂಬಗಳು ಗಾತ್ರದಲ್ಲಿ ದೊಡ್ಡದವುಗಳು.

ಪೂರ್ವಾಭಿಮುಖವಾಗಿರುವ ಗರ್ಭಗೃಹದಲ್ಲಿ ಹುದುಗಿ ಹೋಗಿರುವ ಲಿಂಗವಿದೆ. ಒಳಗೋಡೆಯ ಮಝೂರು ಕಡೆಗಳಲ್ಲೂ ಮಂಟಪಕಾರದ ಗೂಡುಗಳಿವೆ. ಇವುಗಳಿಗೆ ಸಾದಾ ರಚನೆಯ ಪಟ್ಟಿಕೆಗಳನ್ನು ನಿರ್ಮಿಸಿ ಅಂದಗೊಳಿಸಲಾಗಿದೆ. ಈ ಪಟ್ಟಿಕೆಗಳಲ್ಲಿ ಹಲವಾರು ಬಿಡಿ ಶಿಲ್ಪಗಳನ್ನು ಕಂಡರಿಸಿದ್ದಾರೆ. ಲಲಾಟದಲ್ಲಿ ಗಜಲಕ್ಷ್ಮೀ ಶಿಲ್ಪವನ್ನು ಕೆತ್ತಲಾಗಿದೆ. ಗೋಡೆ ಕಂಬಗಳು ಗರ್ಭಗೃಹದಲ್ಲಿ ಇವೆ. ಇವುಗಳನ್ನು ಗಂಟೆ ಆಕಾರದ, ತ್ರಿಕೋನ ಪಟ್ಟಿಕೆಯ ಅಲಂಕಾರದಿಂದ ಅಂದಗೊಳಿಸಲಾಗಿದೆ.

ತೆರೆದ ಅಂತರಾಳವು ಎರಡು ಕಂಬಗಳನ್ನು ಹೊಂದಿದ್ದು ಶಿಲಾಬಂಧದಿಂದ ಅವುಗಳನ್ನು ಜೋಡಿಸಲಾಗಿದೆ. ಈ ಜೋಡಣೆಯಲ್ಲಿ ಯಾಳಿ ರಚನೆ ಇದೆ. ಹಾಗೂ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರದ ಬಿಡಿ ಉಬ್ಬುಶಿಲ್ಪಗಳನ್ನು ಇದರಲ್ಲಿ ಕೆತ್ತಲಾಗಿದೆ. ಚೌಕಾಕಾರದ ಹಾಗೂ ಗಾತ್ರದಲ್ಲಿ ದೊಡ್ಡದಾದ ಕಂಬಗಳ ಮೇಲೆ ಮಣಿಸರ ಹಾಗೂ ಇತರ ಅಲಂಕಾರಗಳಿಂದ ಅಂದಗೊಳಿಸಿ ಅವುಗಳ ಸೌಂದರ್ಯವನ್ನು ಇನ್ನು ಹೆಚ್ಚಿಸಲಾಗಿದೆ. ಅಂತರಾಳದಲ್ಲಿಯೂ ಗೋಡೆಕಂಬಗಳನ್ನು ಅಳವಡಿದ್ದು ಅವುಗಳನ್ನು ಸಹ ಹಲವಾರು ಕೆತ್ತನೆಗಳಿಂದ ಸುಂದರಗೊಳಿಸಲಾಗಿದೆ.

ಉತ್ತರ-ದಕ್ಷಿಣ ಅಭಿಮುಖವಾಗಿರುವ ಎರಡು ಗರ್ಭಗೃಹಗಳು ವಿಸ್ತಾರದಿಂದ ಕೂಡಿವೆ. ಇವುಗಳಿಗೆ ಅಂತರಾಳಗಳಿಲ್ಲ. ಈ ಎರಡು ಗರ್ಭಗೃಹದ ಒಳಗೋಡೆಯಲ್ಲಿ ಗೋಡೆ ಕಂಬಗಳಿದ್ದು ಅವುಗಳು ಗಂಟೆ ಆಕಾರದ ಹಾಗೂ ತ್ರಿಕೋನ ಪಟ್ಟಿಯ ರಚನೆಯ ಕಂಬಗಳು. ಈ ಗರ್ಭಗೃಹಗಳು ತೆರದವುಗಳು. ಬಾಗಿಲವಾಡಗಳಿಲ್ಲ. ಉತ್ತರಾಭಿಮುಖ ಗರ್ಭಗೃಹದಲ್ಲಿ ಅನಂತಶಯನ ಸುಂದರ ಶಿಲ್ಪವಿದೆ. ನಾಭಿಉ ಮೂಲಕ ಬಂದಿರುವ ಕಮಲದಲ್ಲಿ ಲಕ್ಷ್ಮೀ ಹಾಗೂ ಪಾದದ ಬಳಿ ಇನ್ನೊಂದು ಲಕ್ಷ್ಮೀ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಶಿಲ್ಪದ ಪ್ರಭಾವಳಿಯ ಸುತ್ತಲೂ ಸುಂದರವಾದ ಚಿಕ್ಕ-ಚಿಕ್ಕ ಬಿಡಿ ಶಿಲ್ಪಗಳನ್ನು ಕಂಡರಿಸಲಾಗಿದೆ. ದಕ್ಷಿಣಾಭಿಮುಖ ಗರ್ಭಗೃಹದಲ್ಲಿ ನಿಂತಿರುವ ಶಿವ-ಪಾರ್ವತಿಯರ ಶಿಲ್ಪಗಳಿವೆ. ಕೈಯಲ್ಲಿ ಡಮರು, ತ್ರಿಶೂಲ ಹಾಗೂ ಕೆಳ ಭಾಗದಲ್ಲಿ ನಂದಿ ಹಾಗೂ ಗಣಪತಿಯ ಶಿಲ್ಪಗಳನ್ನು ಕೆತ್ತಲಾಗಿದೆ.

ಮೂರು ಗರ್ಭಗೃಹಗಳನ್ನೊಳಗೊಂಡಂತೆ ವಿಶಾಲವಾದ ನವರಂಗವಿದೆ. ಇದರಲ್ಲಿನ ನಾಲ್ಕು ಕಂಬಗಳು ಗಾತ್ರದಲ್ಲಿ ದೊಡ್ಡವು ಹಾಗೂ ಸೌಂದರ್ಯದಿಂದ ಮನಮೋಹಕವಾಗಿವೆ. ತಟ್ಟೆ ಅಕಾರದ ಫಲಕಗಳನ್ನು ಹೊಂದಿ ನಿರ್ಮಾಣವಾದ ಕಂಬಗಳು ಹಾಗೂ ಗಂಟೆ ಆಕಾರದ ಕಂಬಗಳಲ್ಲಿ ದೊಡ್ಡದಾಗಿರುವ ಬೋಧಿಗೆಗಳನ್ನು ಅಳವಡಿಸಲಾಗಿದೆ. ಕಂಬಗಳು ಹಾಗೂ ಮೇಲ್ಛಾವಣಿಯ ಮಧ್ಯೆ ದೊಡ್ಡ ತೊಲೆಗಳಿವೆ. ಭುವನೇಶ್ವರಿಯನ್ನು ಸುಂದರವಾಗಿ ಕೆತ್ತಲಾಗಿದೆ. ಇದು ಕಮಲ ಪುಷ್ಟ ಮಾದರಿಯದ್ದು. ನವರಂಗದ ಬಾಗಿಲವಾಡವು ಐದು ಶಾಖೆಗಳಿಂದ ನಿರ್ಮಾಣವಾಗಿದೆ. ಇದರಲ್ಲೂ ಬಿಡಿ ಶಿಲ್ಪಗಳನ್ನು ಕಂಡರಿಸಿದ್ದಾರೆ. ಇದರ ಬಾಗಿಲವಾಡಕ್ಕೆ ಸುಣ್ಣ-ಬಣ್ಣ ಬಳಿಯಲಾಗಿದೆ. ಹೀಗಾಗಿ ಸ್ಪಷ್ಟವಾಗಿ ಇಲ್ಲಿರುವ ಕೆತ್ತನೆಯ ಕಾಣುವುದಿಲ್ಲ. ನವರಂಗದಲ್ಲಿ ಗಣಪತಿ, ಮಹಿಷಾಸುರಮರ್ದಿನಿ ಹಾಗೂ ತ್ರುಟಿತವಾತಿರುವ ಸ್ತ್ರೀ ಶಿಲ್ಪಗಳನ್ನು ಇಡಲಾಗಿದೆ.

ನವರಂಗಕ್ಕೆ ಹೊಂದಿಕೊಂಡಂತೆ ತೆರದ ಮುಖಮಂಟಪವಿದೆ. ಇದರ ಪ್ರವೇಶಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಮುಖ ಮಂಟಪದಲ್ಲಿರುವ ಕಂಬಗಳು ಕೆತ್ತನೆಯಿಂದ ಕೂಡಿವೆ. ಮುಖಮಂಟಪದಲ್ಲಿ ಭುವನೇಶ್ವರಿಯನ್ನು ರಚಿಸಲಾಗಿದೆ.

ಅಧಿಷ್ಠಾನವು ಉಪಾನ, ಜಗತಿ, ಗಳ, ತ್ರಿಪಟ್ಟ ಕುಮುದ ಹಾಗೂ ಕಪೋತ ಭಾಗಗಳನ್ನು ಹೊಂದಿದೆ. ಹೊರಗೋಡೆಯು ಸೂಕ್ಷ್ಮವಾಗಿ ಕೆತ್ತಿರುವ ಪಂಜರಗಳಿಂದಲೂ ಹಾಗೂ ಅವುಗಳನ್ನು ವಿವಿಧ ವಿನ್ಯಾಸದ ಶಿಖರಗಳಿಂದಲೂ ಅಂದಗೊಳಿಸಲಾಗಿದೆ. ಮುಖ್ಯ ಗರ್ಭಗೃಹದ ಮೇಲೆ ಶಿಖರವಿದ್ದು ಇದು ವೇಸರ ಮಾದರಿಯದ್ದು. ಮೂರು ತಲಗಳನ್ನು ಹೊಂದಿರುವ ಶಿಖರವು ಪ್ರಕೃತಿ ವಿಕೋಪಗಳಿಂದಾಗಿ ದಿನೆ ದಿನೇ ಕ್ಷೀಣಿಸುತ್ತಿದೆ. ಶಿಖರದಲ್ಲಿನ ಶಾಲ ಹಾಗೂ ಕೂಟಗಳು ಆಕರ್ಷಕವಾಗಿವೆ.

ಮಲ್ಲಿಕಾರ್ಜುನ ಗುಡಿಗೆ ಸಂಬಂಧಿಸಿದ ಎರಡು ಶಾಸನಗಳು ಪ್ರಕಟವಾಗಿವೆ. (ಧಾ.ಜಿ.ಶಾ.ಸೂ, ಸಂ.ರೋ ೯೪ ಮತ್ತು ೯೫, ಪು.೧೯; SII, XI. pt.I No.91, EI, XV p. 80-83 ಮತ್ತು SII, XI, pt.I No.93) ಕಲ್ಯಾಣ ಚಾಲುಕ್ಯ ಒಂದನೆಯ ಸೋಮೇಶ್ವರನ ಕಾಲಕ್ಕೆ ಸಂಬಂಧಿಸಿದ ಕ್ರಿ.ಶ.೧೦೫೪ರ ತೇದಿ ಶಾಸನವು, ಅಕ್ಕಾದೇವಿಯ ಕಿಸುಕಾಡು-೭೦ ತುರುಗೆರೆ-೬೦ ರ ಆಡಳಿತ ವಿಭಾಗಗಳನ್ನು ಆಳುತ್ತಿರುವಾಗ ಪ್ರಧಾನ ನಾಡ ಪೇರ್ಗಡೆಯಾದಿಗಳಿಂದ ಅಕ್ಕೇಶ್ವರ ದೇವಾಲಯಕ್ಕೆ ಭೂಮಿದಾನ ಮಾಡಿರುವ ಮಾಹಿತಿ ಇದೆ. ೧೧ನೇ ಶತಮಾನದ ಮಧ್ಯ ಭಾಗದವರೆಗೂ ಪ್ರಸ್ತುತ ಗದಗ ಹಾಗೂ ಬಾಗಲಕೋಟೆ ಜಿಲ್ಲೆಯ ವಿಸ್ತಾರ ಪ್ರದೇಶಗಳಲ್ಲಿ ವಿಶೇಷವಾಗಿ ಆಡಳಿತ ನಿರ್ವಹಿಸಿದ ಅಕ್ಕಾದೇವಿಯು ಆಕಾಲದ ಮಹತ್ವದ ಪ್ರಾಚೀನ ಆಡಳಿತಗಾರಳಾಗಿದ್ದಳು. ಅವಳನ್ನು ಸ್ಮರಿಸುವ ಹಾಗೂ ಅವಳು ದಾನ-ದತ್ತಿಗಳನ್ನು ಹೇರಳವಾಗಿ ನೀಡಿರುವ ನೂರಾರು ಉಲ್ಲೇಖಗಳು ಈ ಪ್ರದೇಶದ ಶಾಸನಗಳಲ್ಲಿ ಬರುತ್ತವೆ. ಬಹುಶಃ ಎಲ್ಲರ ಮನ್ನಣೆಗಳಿಸಿದ್ದ ಈ ರಾಣಿಯ ಗೌರವಕ್ಕಾಗಿ ಅಕ್ಕೇಶ್ವರ ದೇವಾಲಯ ಕಟ್ಟಿಸಿರುವ ಸಾಧ್ಯತೆಗಳಿವೆ. ಕಾಲಾನಂತರ ಅಕ್ಕೇಶ್ವರ ದೇವಾಲಯ ಮಲ್ಲಿಕಾರ್ಜುನ ಹೆಸರಿನ ದೇವಾಲಯವಾಗಿ ಪರಿವರ್ತನೆಯಾಗಿದೆ. ಇನ್ನೊಂದು ಶಾಸನ ಕ್ರಿ.ಶ.೧೦೫೮ರ ತೇದಿಯ ತನ್ನ ಹೆಸರಿನ (ಅಕ್ಕೇಶ್ವರ) ದೇವಾಲಯಕ್ಕೆ ಅಕ್ಕಾದೇವಿಯು ದಾನ-ದತ್ತಿಗಳನ್ನು ನೀಡಿರುವ ಶಾಸನ ಮರ್ಯಾದೆಯ ಪುನಃಸ್ಥಾಪನೆ ಮಾಡಿದ ಉಲ್ಲೇಖವಿದೆ.

ಜೋಡು ಕಲಶದ (ನಾಗೇಶ್ವರ) ದೇವಾಲಯ, ಮಲ್ಲಿಕಾರ್ಜುನ, ನಗರೇಶ್ವರ ಹಾಗೂ ಕಲ್ಮೇಶ್ವರ ದೇವಾಲಯಗಳಲ್ಲದೇ ಅಚಲೇಶ್ವರ, ಬ್ರಹ್ಮೇಶ್ವರ ಹಾಗೂ ಪಂಚಲಿಂಗೇಶ್ವರ ದೇವಾಲಯಗಳ ಬಗೆಗೂ ಇಲ್ಲಿರುವ ಶಾಸನಗಳಲ್ಲಿ ಉಲ್ಲೇಖವಿದೆ. ಆದರೆ ಈ ದೇವಾಲಯಗಳ ಬಗೆಗೆ ಸ್ಪಷ್ಟವಾದ ಯಾವ ಕುರುಹುಗಳು ಕಂಡುಬರುವುದಿಲ್ಲ. ಅಥವ ಗ್ರಾಮದಲ್ಲಿ ಅಲ್ಲಲ್ಲಿ ನಾಶವಾಗಿ ಬಿದ್ದಿರುವ ಸ್ಮಾರಕಾವಶೇಷಗಳು ಇಲ್ಲಿ ಹೆಸರಿಸಿರುವ ಪ್ರಾಚೀನ ದೇವಾಳಯಗಳಾದ್ದಾಗಿರಬಹುದು. ಅವುಗಳಲ್ಲಿ ಈ ಎಲ್ಲ ಸಂಗತಿಗಳನ್ನು ಹೆಚ್ಚಿನ ಅಧ್ಯಯನಗಳಿಂದ ಮಾತ್ರ ತಿಳಿಯಬಹುದು.

ಮಲ್ಲಿಕಾರ್ಜುನ ಗುಡಿಯ ಎಡಭಾಗದಲ್ಲಿ ಇನ್ನೊಂದು ಗುಡಿ ಇದೆ. ಅದರ ಹೆಸರು ತಿಳಿದುಬಂದಿಲ್ಲ. ಒಂದು ಚಿಕ್ಕ ಗರ್ಭಗೃಹ ಹಾಗೂ ತೆರೆದ ಅಂತರಾಳ ದೇವಾಲಯಕ್ಕಿದೆ. ಇದರಲ್ಲಿರುವ ಕಂಬಗಳು ರಾಷ್ಟ್ರಕೂಟರ ಆಡಳಿತದ ಕೊನೆಯ ಘಟ್ಟದಲ್ಲಿ ನಿರ್ಮಾಣವಾದವುಗಳೆಂದು ತಿಳಿದುಬರುತ್ತದೆ. ಗರ್ಭಗೃಹ ಹಾಗೂ ಅಂತರಾಳ ಬರಿದಾಗಿವೆ. ಈ ದೇವಾಲಯ ನಾಲ್ಕು ತಲಗಳುಳ್ಳ ವಿಮಾನ (ಶಿಖರ)ವನ್ನು ಹೊಂದಿದ್ದು ಅದರಲ್ಲಿ ಕೀರ್ತಿ ಮುಖ ಹಾಗೂ ಶಿಲಾಫಲಕಗಳನ್ನು ಅಳವಡಿಸಲಾಗಿದೆ. ಶಿಖರವು ಗ್ರೀವ, ಸ್ಥೂಪಿ ಹಾಗೂ ಕಲಶಗಳನ್ನು ಹೊಂದಿದೆ. ದೇವಾಲಯದ ಹೊರಗೋಡೆಯನ್ನು ನಾಗರಶೈಲಿ ಶಿಖರ ಪಟ್ಟಿಕೆಗಳಿಂದ ಅಂದಗೊಳಿಸಲಾಗಿದೆ. ಅಧಿಷ್ಠಾನದಲ್ಲಿ ಉಪಾನ, ಗಳ, ಕಪೋತ ಭಾಗಗಳು ಇವೆ.

೫೨

ಊರು ಸೂಡಿ
ಸ್ಮಾರಕ ಜೋಡಿ ಕಲಶ ದೇವರು
ಸ್ಥಳ ಗ್ರಾಮದ ದಕ್ಷಿಣದಲ್ಲಿ
ಕಾಲ ೧೧-೧೨ನೇ ಶತಮಾನ
ಶೈಲಿ ರಾಷ್ಟ್ರಕೂಟ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ರಾಷ್ಟ್ರಕೂಟ ಲಕ್ಷಣಗಳನ್ನು ಮೈಗೂಡಿಸಿಕೊಂಡು ಕಲ್ಯಾಣ ಚಾಲುಕ್ಯರ ಆಡಳಿತ ಅವಧಿಯ ಪ್ರಥಮ ಪಾದದಲ್ಲಿ ನಿರ್ಮಾಣವಾದ ಸೂಡಿಯ ಜೋಡಿಕಲಶದ ಹಾಗೂ ಮಲ್ಲಿಕಾರ್ಜುನ ದೇವಾಲಯಗಳು ಕರ್ನಾಟಕದ ವಾಸ್ತುಶಿಲ್ಪ ಅಧ್ಯಯನದಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಜೋಡಿಕಲಶದ ದೇವಾಲಯ ದ್ವಿಕೂಟ ರಚನೆಯದು. ಎತ್ತರದ ಜಗತಿಯ ಮೇಲೆ ನಿರ್ಮಾಣವಾಗಿದ್ದು ನಕ್ಷತ್ರಾಕಾರದ ತಲವಿನ್ಯಾಸ ಹೊಂದಿದೆ. ಸದ್ಯ ಜೋಡಿ ಕಲಶದ ದೇವಾಲಯವೆಂದು ಕರೆಯುತ್ತಿದ್ದರೂ ಶಾಸನದಲ್ಲಿ ಇದನ್ನು ನಾಗೇಶ್ವರ ದೇವಾಲಯವೆಂದು ಉಲ್ಲೇಖಿಸಲಾಗಿದೆ.

ಪೂರ್ವ-ಪಶ್ಚಿಮಾಭಿಮುಖವಾಗಿರುವ ಎರಡು ಗರ್ಭಗೃಹಗಳಲ್ಲಿದ್ದ, ವಿಗ್ರಹಗಳು ನಾಶವಾಗಿವೆ. ತಕ್ಕಮಟ್ಟಿಗೆ ವಿಸ್ತಾರವಾಗಿರುವ ಗರ್ಭಗೃಹದ ಒಳಗೋಡೆಗಳಲ್ಲಿ ಮೂರು ಕೋಷ್ಠಕ (ಗೂಡು) ಗಳನ್ನು ರಚಿಸಲಾಗಿದೆ. ಅಲ್ಲದೇ ಈ ಗೂಡುಗಳನ್ನು ಅರ್ಧಕಂಬ, ಯಾಳಿ, ಹಾಗೂ ಲಕ್ಷ್ಮೀ ಶಿಲ್ಪಗಳಿಂದ ಅಂದಗೊಳಿಸಲಾಗಿದೆ. ಯಾಳಿಯ ತೋರಣದಿಂದ ಗೂಡುಗಳ ಸೌಂದರ್ಯವನ್ನು ಹೆಚ್ಚಿಸಲಾಗಿದೆ. ಹಾಗೂ ಗೂಡುಗಳ ಲಲಾಟದಲ್ಲಿ ಕೈಯಲ್ಲಿ ಕಮಲದ ಹೂಗಳನ್ನು ಹಿಡಿದು ಕುಳಿತಿರುವ ಲಕ್ಷ್ಮೀ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಗರ್ಭಗೃಹದ ಒಳಭಾಗದ ನಾಲ್ಕು ಮೂಲೆಗಳಲ್ಲಿ ಅರ್ಧಕಂಬಗಳಿವೆ. ಅವುಗಳಿಗೆ ಬೋಧಿಗೆಗಳನ್ನು ಅಳವಡಿಸಲಾಗಿದೆ. ಸುಂದರವಾದ ಭುವನೇಶ್ವರಿ ಕೆತ್ತನೆ ಗರ್ಭಗೃಹದಲ್ಲಿದೆ.

ಪಶ್ಚಿಮಕ್ಕೆ ಮುಖ ಮಾಡಿರುವ ಗರ್ಭಗೃಹದ ಬಾಗಿಲವಾಡವು ವಿಶೇಷ ಕೆತ್ತನೆಗಳಿಂದ ಕೂಡಿದ್ದು ನೋಡಲು ಆಕರ್ಷಕವಾಗಿರುವುದು. ಐದು ಶಾಖೆಗಳನ್ನು ಹೊಂದಿದ್ದು ಪ್ರತಿ ಪಟ್ಟಿಯಲ್ಲಿ ಚಿಕ್ಕ – ಚಿಕ್ಕ ಉಬ್ಬುಶಿಲ್ಪಗಳ ಕುಸುರಿನ ಕೆಲಸವನ್ನು ಕಲಾಕಾರ ಸೊಗಸಾಗಿ ಚಿತ್ರಿಸಿದ್ದಾನೆ. ಅವುಗಳಲ್ಲಿ ನರ್ತನ ಮಾಡುತ್ತಿರುವ ಸ್ತ್ರೀಯ ಶಿಲ್ಪಗಳು ಮನಮೋಹಕವಾಗಿವೆ. ಸುತ್ತಲೂ ಮಣಿಸರ ಹಾಗೂ ಹೂಬಳ್ಳಿಯಿಂದ ಅಲಂಕಾರವನ್ನು ಹೆಚ್ಚಿಸಲಾಗಿದೆ. ಬಾಗಿಲವಾಡದ ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪವಿದೆ. ಅದರ ಮೇಲ್ಭಾಗದಲ್ಲಿ ಕೆಲವು ಬೇರೆ ಬೇರೆ ಉಬ್ಬುಶಿಲ್ಪಗಳನ್ನು ಸಹ ಬಿಡಿಸಲಾಗಿದೆ.

ಮೇಲೆ ವಿವರಿಸಿದ ಗರ್ಭಗೃಹಕ್ಕೆ ಹೊಂದಿಕೊಂಡ ಅಂತರಾಳವು ಚೌಕಾಕಾರದ ಎರಡು ಕಂಬಗಳನ್ನು ಹೊಂದಿರುವುದು. ಹಾಗೂ ಇದೊಂದು ತೆರದ ಅಂತರಾಳವಾಗಿದೆ. ಇಲ್ಲಿರುವ ಕಂಬಗಳು ನಕ್ಷತ್ರಾಕಾರದ ಬೋಧಿಗೆಗಳನ್ನು ಹೊಂದಿವೆ. ಬಾಗಿಲವಾಡದ ಮೇಲಿನ ಚೌಕಟ್ಟನ್ನು ಯಾಳಿ ಹಾಗೂ ಕೀರ್ತಿಮುಖ ಕೆತ್ತನೆಗಳಿಂದ ಅದರ ಅಂದವನ್ನು ಹೆಚ್ಚಿಸಲಾಗಿದೆ. ತೋರಣ ಅಲಂಕಾರದ ಮಧ್ಯೆ ಎರಡು ಕೈಯಗಳಲ್ಲಿ ಕಮಲ ಪುಷ್ಪ ಹಿಡಿದು ನಿಂತಿರುವ ಸೂರ್ಯನ ಉಬ್ಬುಶಿಲ್ಪವಿದೆ. ಅಲ್ಲದೆ ಸೂರ್ಯನ ಉಬ್ಬುಶಿಲ್ಪದ ಆಚೆ-ಈಚೆ ಕೈಯಲ್ಲಿ ಕಮಲ ಹೂವನ್ನು ಹಿಡಿದು ಕುಳಿತಿರುವ ಚಿಕ್ಕ-ಚಿಕ್ಕ ಎರಡು ಶಿಲ್ಪಗಳು ಇವೆ.

ಪೂರ್ವಾಭಿಮುಖ ಗರ್ಭಗೃಹದಲ್ಲಿ ನಕ್ಷತ್ರಾಕಾರದ ಕೆತ್ತನೆಯ ಸುಂದರ ಲಿಂಗವಿದೆ. ಪೀಠದಿಂದ ಮೇಲ್ಭಾಗದವರೆಗೂ ಇದು ನಕ್ಷತ್ರಾಕಾರದ ರಚನೆಯನ್ನು ಹೊಂದಿದೆ. ಈ ಗರ್ಭಗೃಹದ ಒಳಗೋಡೆಯಲ್ಲಿ ಮೂರು ಗೂಡುಗಳಿವೆ. ಮೂರು ಗೂಡುಗಳನ್ನು ಯಾಳಿ ಕೆತ್ತನೆಯಿಂದ ಅಂದಗೊಳಿಸಲಾಗಿದೆ. ಕೀರ್ತಿಮುಖದ ಅಲಂಕಾರವಿದೆ. ಹಾಗೂ ಪ್ರತಿ ಗೂಡಿನ ಲಲಾಟದಲ್ಲಿ ಬ್ರಹ್ಮ, ವಿಷ್ಣು ಹಾಗೂ ಶಿವನ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದೆ. ಈ ಶಿಲ್ಪಗಳು ಆಯುಧ ಧಾರಿಗಳಾಗಿವೆ. ಭುವನೇಶ್ವರಿಯು ಕಮಲ ಪುಷ್ಪದ ಮಾದರಿಯ ಸುಂದರವಾದ ಆಕೃತಿ. ಪಶ್ಚಿಮಾಭಿಮುಖ ಗರ್ಭಗೃಹದ ಬಾಗಿಲವಾಡದಲ್ಲಿರುವ ಎಲ್ಲ ವಿವರ ಅಲಂಕಾರಗಳು ಪೂರ್ವಾಭಿಮುಖ ಗರ್ಭಗೃಹದ ಬಾಗಿಲವಾಡದಲ್ಲಿರುವ ಎಲ್ಲ ವಿವರ ಅಲಂಕಾರಗಳು ಪೂರ್ವಾಭಿಮುಖ ಗರ್ಭಗೃಹದ ಬಾಗಿಲವಾಡದಲ್ಲಿಯೂ ಇವೆ. ತೆರದ ಅಂತರಾಳ ಇದಕ್ಕಿದ್ದು ಇದರ ತೋರಣವನ್ನು ಯಾಳಿ ಹಾಗೂ ಕೀರ್ತಿಮುಖ ಕೆತ್ತನೆಯಿಂದ ಸುಂದರಗೊಳಿಸಲಾಗಿದೆ. ತೋರಣದ ಮಧ್ಯ ಭಾಗದಲ್ಲಿ ತ್ರಿಶೂಲ ಹಾಗೂ ಡಮರು ಧಾರಿ ಶಿವನ ಶಿಲ್ಪವನ್ನು ಕಂಡರಿಸಿದ್ದು ಈ ಶಿಲ್ಪದ ಇಕ್ಕೆಲಗಳಲ್ಲಿ ಗಣಪತಿ ಹಾಗೂ ನವಿಲ ವಾಹನ ರೂಢನಾದ ಷಣ್ಮುಖನ ಉಬ್ಬು ಶಿಲ್ಪಗಳನ್ನು ಕೂಡಾ ಕೆತ್ತಲಾಗಿದೆ.

ಒಂಬತ್ತು ಅಂಕಣಗಳನ್ನು ಹೊಂದಿರುವ ನವರಂಗವು ಎರಡು ಕಡೆಗಳಲ್ಲಿ ಪ್ರವೇಶವನ್ನು ಹೊಂದಿದೆ. ತಿರುಗಣಿಯ ಕಂಬಗಳು ಮಧ್ಯದಲ್ಲಿ ಗಂಟೆ ಆಕಾರದ ರಚನೆ ಹೊಂದಿವೆ. ಸುಂದರವಾದ ಬೋಧಿಗೆಗಳನ್ನು ಕಂಬಗಳಿಗೆ ಅಳವಡಿಸಲಾಗಿದೆ. ನವರಂಗದಲ್ಲಿ ಗೋಡೆ (ಅರ್ಧ) ಕಂಬಗಳು ಕಾಣುತ್ತವೆ. ಇವುಗಳ ಮೇಲೆ ಎಲೆ-ಬಳ್ಳಿಯ ರಚನೆಯನ್ನು ಮಾಡಲಾಗಿದೆ. ನವರಂಗದಲ್ಲಿ ಕಕ್ಷಾಸನವಿದೆ. ಇದರಲ್ಲೂ ಸಹ ಕಂಬಗಳನ್ನು ಅಳವಡಿಸಲಾಗಿದೆ. ಪೂರ್ವಾಭಿಮುಖ ಗರ್ಭಗೃಹದ ಎದುರಾಗಿ ನವರಂಗದಲ್ಲಿ ಸುಂದರ ಕೆತ್ತನೆಯ ಗಾತ್ರದಲ್ಲಿ ದೊಡ್ಡದಾದ ನಂದಿಯ ವಿಗ್ರಹವನ್ನಿಡಲಾಗಿದೆ. ಕಕ್ಷಾಸನದಲ್ಲಿರುವ ಹಾಗೂ ಉಳಿದ ಕಂಬಗಳು ಅಗಲವಾದ ತಟ್ಟೆಯಾಕಾರದ ಫಲಕಗಳನ್ನು ಒಳಗೊಂಡಿವೆ. ನವರಂಗದಲ್ಲಿ ಎರಡು ಶಾಸನ ಶಿಲ್ಪಗಳಿವೆ.

ದೇವಾಲಯದ ಹೊರ ಗೋಡೆಯು ಹೆಚ್ಚಿನ ಅಲಂಕಾರದಿಂದ ಕೂಡಿದೆ. ಭಿತ್ತಿಯ ಮೇಲ್ಭಾಗದಲ್ಲಿ ಅರ್ಧ ಕಂಬಗಳ ರಚನೆ ಮೂರು ಪಟ್ಟಿಕೆವುಳ್ಳ ಕಂಬಗಳು ಹಾಗೂ ಕೋಷ್ಠಕಗಳಂತೆ ಭಾಸವಾಗುವ ಮಂಟಪಗಳನ್ನು ಹೊರ ಭಿತ್ತಿಯಲ್ಲಿ ರಚಿಸಿದ್ದಾರೆ. ಅಲಕ್ಷದಿಂದಾಗಿ ಸುಂದರ ಭಿತ್ತಿಯು ದಿನೇ ದಿನೇ ಸವೆದು ಹೋಗುತ್ತಿದೆ.

ಅಧಿಷ್ಠಾನವು ಉಪಾನ, ಜಗತಿ, ಗಳ, ತ್ರಿಪಟ್ಟ ಕುಮುದು ಹಾಗೂ ಕಪೋತ ಭಾಗಗಳನ್ನು ಹೊಂದಿರುವುದು. ಅಧಿಷ್ಠಾನದ ತುಸು ಮೇಲ್ಭಾಗದಲ್ಲಿ ಸುತ್ತಲೂ ಕುದುರೆ, ಸಿಂಹ ಹಾಗೂ ಬೇರೆ ಬೇರೆ ಪ್ರಾಣಿಗಳ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದ್ದು ಇದರಿಂದ ದೇವಾಲಯದ ಅಧಿಷ್ಠಾನ ಸೌಂದರ್ಯ ಹೆಚ್ಚಿದೆ. ಕಕ್ಷಾಸನದ ಹೊರ ಗೋಡೆಯಲ್ಲಿ ಅರ್ಧಕಂಬದ ರಚನೆ ಇದೆ. ಇಲ್ಲಿಯು ಕೂಡಾ ಗಜ, ಸಿಂಹ, ಹುಲಿ ಹಾಗೂ ಇತರೆ ಪ್ರಾಣಿಗಳ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ನವರಂಗದ ಪ್ರವೇಶದ್ವಾರದ ಮೆಟ್ಟಿಲುಗಳ ಇಕ್ಕೆಲಗಳಲ್ಲಿ ಆನೆಯ (ಗಜ) ಶಿಲ್ಪಗಳನ್ನು ಹೂಳಿಡಲಾಗಿದೆ.

ಚಾಲುಕ್ಯ ಮಾದರಿ ಅಥವಾ ವೇಸರ ಶೈಲಿಯ ಎರಡು ಶಿಖರಗಳಿವೆ. ಇವು ನಾಲ್ಕು ತಲಗಳನ್ನು ಹೊಂದಿದ್ದು ಕಲಶ, ಗ್ರೀವ ಹಾಗೂ ಸ್ಥೂಪಿ ಭಾಗಗಳನ್ನು ಒಳಗೊಂಡಿವೆ. ಶಿಖರದ ಸುಖನಾಸ ಭಾಗವು (ಪೂರ್ವ ಗರ್ಭಗೃಹದ ಮೇಲಿನ ಶಿಖರ) ಹಾಳಾಗಿದೆ. ಪ್ರತಿ ತಲದಲ್ಲೂ ಕೀರ್ತಿಮುಖ ಫಲಕಗಳನ್ನು ಅಳವಡಿಸಲಾಗಿದೆ. ಅಲ್ಲಲ್ಲಿ ದುರಸ್ತಿ ಕಾರ್ಯವನ್ನು ಸಹ ಮಾಡಲಾಗಿದೆ. ಪಶ್ಚಿಮಾಭಿಮುಖ ಗರ್ಭಗೃಹದ ಮೇಲಿನ ವಿಮಾನವು ಮೆಟ್ಟಿಲಾಕಾರದ್ದು. ಅದು ಹಲವು ದುರಸ್ತಿ ಕಾರ್ಯಗಳಿವೆ ಒಳಗಾಗಿದೆ.

ದೇವಾಲಯಕ್ಕೆ ಸಂಬಂಧಿಸಿದಂತೆ ಎರಡು ಶಾಸನಗಳು ಪ್ರಕಟವಾಗಿವೆ. (ಧಾಜಿಶಾಸೂ ಸಂ.ರೋ ೯೨ ಮತ್ತು ೯೬, ಪು.೧೯; SII, XI, pt. No. 55, EI XV p. 75-76 ಮತ್ತು SII, pt.I No.91, EI, XV p. 0-83). ಕ್ರಿ.ಶ.೧೦೭೦ರ ತೇದಿವುಳ್ಳ ಕಲ್ಯಾಣ ಚಾಲುಕ್ಯ ಒಂದನೆಯ ಸೋಮೇಶ್ವರನ ಶಾಸನದಲ್ಲಿ ದೇವಾಳಯ ನಿರ್ಮಾಣದ ಬಗ್ಗೆ ಮಾಹಿತಿ ಇದೆ. ಮಹಾಸಾಮಾಂತಾಧಿಪತಿ ಮನೆವೆರ್ಗಡೆ ದಂಡನಾಯಕ ನಾಗದೇವನಿಂದ ನಾಗೇಶ್ವರ ದೇವಾಲಯ ನಿರ್ಮಾಣ ಹಾಗೂ ಅದಕ್ಕೆ ದಾನ ನೀಡಿರುವ ಉಲ್ಲೇಖವನ್ನು ನೀಡುತ್ತದೆ. ಇದರಲ್ಲಿ ಹೆಸರಿಸಿದ ನಾಗೇಶ್ವರ ದೇವಾಲಯ ಇಂದಿನ ಜೋಡುಕಲಶದ ದೇವಾಲಯ ಆಗಿರುವ ಸಾಧ್ಯತೆ ಇದೆ. ಈ ದೇವಾಲಯ ಎರಡು ಶಿಖರಗಳನ್ನು ಹೊಂದಿರುವುದರಿಂದ ಸಾಮಾನ್ಯವಾಗಿ ಜೋಡು (ಎರಡು) ಕಲಶ (ಶಿಖರ) ಎಂಬ ಹೆಸರು ಅನ್ವರ್ಥಕವಾಗಿ ಬಂದಿರಬಹುದು. ಗ್ರಾಮಸ್ಥರು ತಮಗೆ ಅನುಕೂಲವಾಗುವ ಹಾಗೂ ಎಲ್ಲರಿಗೂ ಬೇಗನೆ ತಿಳಿಯುವ ದೃಷ್ಟಿಯಿಂದ ಈ ತರಹದ ಹೆಸರಿನಿಂದ ಕರೆಯುವ ವಾಡಿಕೆ ರೂಢಿಗತವಾಗಿರಬೇಕು. ಹಲವು ಗ್ರಾಮಗಳಲ್ಲಿರುವ ಅನೇಕ ದೇವಾಲಯಗಳಿಂದ ಈ ಮಾದರಿಯ ಶಿಖರ ಇರುವುದನ್ನು ಕಾಣುತ್ತೇವೆ.

ಜೋಡು ಕಲಶದ ಗುಡಿಯ ಹತ್ತಿರ ಇನ್ನೊಂದು ಶಾಸನ ದೊರಕಿದೆ. ಆದರೆ ಈ ಗುಡಿಗೆ ಸಂಬಂಧಿಸಿದ ಶಾಸನವಲ್ಲ. ಕ್ರಿ.ಶ.೧೦೧೦ರ ತೇದಿವುಳ್ಳ ಈ ಶಾಸನವು ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸಂಬಂಧಿಸಿದ್ದು. ಸಹೋದರಿ ಅಕ್ಕಾದೇವಿ ಕಿಸುಕಾಡು (ಪಟ್ಟದಕಲ್ಲು) -೭೦ರ ಆಡಳಿತ ವಿಭಾಗವನ್ನು ಆಳುತ್ತಿದ್ದಾಗ ಸೂಡಿಯ ಗಾವುಂಡ ಹಾಗೂ ಸೆಟ್ಟಿಯರ ಸಮ್ಮುಖದಲ್ಲಿ ಸೂಡಿ ಬ್ರಹ್ಮಪುರಿಯ ಮಹಾಜನರಿಗೆ ಭೂಮಿಯನ್ನು ಒಪ್ಪಿಸಿರುವ ಬಗೆಗೆ ಮಾಹಿತಿ ಇದೆ. ಅರಸಿಬೀದಿ (ಅರಸಿನ ಬಿಡ್ಡಿ) (ಹುನಗುಂದ ತಾಲೂಕು) ಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಿರ್ವಹಿಸುತ್ತಿದ್ದ ಅಕ್ಕಾದೇವಿಯ ಪ್ರಸ್ತುತ ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಹಲವಾರು ದೇವಾಲಯಗಳನ್ನು ನಿರ್ಮಾಣ ಮಾಡಿ ಅವುಗಳಿಗೆ ಅನೇಕ ದಾನ-ದತ್ತಿ ನೀಡುವ ಮೂಲಕ ಪೋಷಣೆ ಮಾಡಿರುವ ನೂರಾರು ಉಲ್ಲೇಖಗಳು ಈ ಭಾಗದಲ್ಲಿ ದೊರಕಿರುವ ಹಲವಾರು ಶಾಸನಗಳಿಂದ ತಿಳಿದು ಬರುವ ಸಂಗತಿಯಾಗಿದೆ.

೫೩

ಊರು ಸೂಡಿ
ಸ್ಮಾರಕ ನಗರೇಶ್ವರ
ಸ್ಥಳ ಹುಡೇದ ಗಡ್ಡಿ ಓಣಿ
ಕಾಲ ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ನಗರೇಶ್ವರ ದೇವಾಲಯ ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ನಕ್ಷತ್ರಾಕಾರ ಪೀಠವುಳ್ಳ ಲಿಂಗವು ಗರ್ಭಗೃಹದಲ್ಲಿದೆ. ಇದೊಂದು ಸುಂದರ ಕೆತ್ತನೆಯದು. ಬಾಗಿಲವಾಡದಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪವಿದೆ. ಅಂತರಾಳದಲ್ಲಿ ಸವೆದು ಹೋಗಿರುವ ಶಿಲ್ಪವೊಂದನ್ನಿಡಲಾಗಿದೆ. ಬಾಗಿಲವಾಡವು ಸಾದಾ ರಚನೆಯದು. ಹಾಗೂ ಅದರ ಲಲಾಟದಲ್ಲಿ ಶಿಲ್ಪ ಫಲಕವನ್ನು ಜೋಡಿಸಲಾಗಿದೆ. ಅದು ಸ್ಪಷ್ಟವಾಗಿ ಏನು ಎಂಬುದು ಗೊತ್ತಾಗುವುದಿಲ್ಲ. ಅಂತರಾಳದ ಇಕ್ಕೆಲಗಳಲ್ಲಿ ಜಾಲಾಂಧ್ರಗಳನ್ನು ನಿರ್ಮಿಸಲಾಗಿದೆ.

ನವರಂಗವು ಭಾಗಶಃ ಶಿಥಿಲಗೊಂಡಿದೆ. ಇಲ್ಲಿರುವ ನಾಲ್ಕು ಕಂಬಗಳು ಸುಂದರ ರಚನೆಯವುಗಳು. ಈ ಕಂಬಗಳನ್ನು ಉಬ್ಬುಶಿಲ್ಪ, ಮಣಿಸರ ಅಲಂಕಾರದಿಂದ ಹಾಗೂ ಗಂಟೆ ಆಕಾರದ ರಚನೆಯಿಂದ ಅಂದಗೊಳಿಸಲಾಗಿದೆ. ನವರಂಗದಲ್ಲಿರುವ ಗೋಡೆಯ ಕಂಬಗಳು ಸಹ ಅಲಂಕಾರದಿಂದ ಕೂಡಿವೆ.

ಈ ದೇವಾಲಯಕ್ಕೆ ಸಂಬಂಧಿಸಿದಂತೆ ಶಾಸನವೊಂದು ಪ್ರಕಟವಾಗಿದೆ (ಧಾ.ಜಿ.ಶಾ.ಸೂ, ಸಂ.ರೋ ೧೦೨ ಪು.೧೯; SII, XI.pt.II No.164, EI,XV p. 105-08 ಮತ್ತು SII, pt.I No.91, EI, XV p. 0-83). ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲದ ಕ್ರಿ.ಶ.೧೧೧೩ರ ತೇದಿವುಳ್ಳ ಶಾಸನ ಗ್ರಾಮದ ಚಾವಡಿಯ ಮುಂಭಾಗದಲ್ಲಿದೆ. ಮಹಾಸಾಮಾಂತ ದಡಿಗನಿಂದ ಸೂಡಿಯ ನಗರೇಶ್ವರ ದೇವಾಲಯಕ್ಕೆ ಭೂಮಿಯನ್ನು ದಾನ ಕೊಟ್ಟಿರುವ ಉಲ್ಲೇಖವಿದೆ.

ಗ್ರಾಮದಲ್ಲಿ ಬಸವೇಶ್ವರ ದೇವಾಲಯವಿದ್ದು ಅದರ ಮುಂಭಾಗದಲ್ಲಿ ಸಿಂಹ ಲಾಂಛನವೊಂದಿದೆ. ಇಲ್ಲಿ ಎರಡು ಶಾಸನಗಳು ಇದ್ದು ಅವು ಪ್ರಕಟವಾಗಿವೆ (ಧಾ.ಜಿ.ಶಾ.ಸೂ, ಸಂ.ರೋ ೯೯ ಮತ್ತು ೧೦೦, ಪು.೧೯; SII, XI. pt.II No.130 ಮತ್ತು ೧೩೧ ಹಾಗೂ EI, XV p. 100-05). ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲದ ಶಾಸನಗಳು, ದಂಡನಾಯಕ ಶ್ರೀವಲ್ಲಭನಿಂದ ಸೋಮೇಶ್ವರಪಂಡಿತನ ಮಗನಿಗೆ ಮುದಿಯನೂರು ಗ್ರಾಮವನ್ನು ದಾನಮಾಡಿರುವ ಉಲ್ಲೇಖ ಒಂದು ಶಾಸನದಲ್ಲಿದ್ದರೆ, ಇನ್ನೊಂದು ಶಾಸನದಲ್ಲಿ ವಿಕ್ರಮನ ಪಿರಿಯರಿಸಿ ಲಕ್ಷಾದೇವಿಯ ಸೂಂಡಿಯ ಅಚಲೇಶ್ವರ ದೇವಾಲಯದ ಸೋಮೇಶ್ವರ ಪಂಡಿತ ದೇವರಿಗೆ ಪೊಂಗಲಿ ಗ್ರಾಮದಾನ ಮಾಡಿರುವ ಮಾಹಿತಿ ಇದೆ. ಬ್ರಹ್ಮಪುರಿ ಸೂಡಿಯಲ್ಲಿ ಸೋಮೇಶ್ವರ ಪಂಡಿತ ಹಾಗೂ ಆತನ ಕುಟುಂಬ ತುಂಬಾ ಘನವಾದ ಸ್ಥಾನ-ಮಾನ ಹೊಂದಿತ್ತು ಎಂಬುದು ಈ ಶಾಸನ ಉಲ್ಲೇಖಗಳಿಂದ ತಿಳಿದು ಬರುತ್ತದೆ.

೫೪

ಊರು ಸೂಡಿ
ಸ್ಮಾರಕ ಕೆಂಚಮ್ಮನ ಗುಡಿ
ಸ್ಥಳ ರೋಣ – ಗಜೇಂದ್ರಗಡ
ಕಾಲ ೧೧-೧೨ ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ದಕ್ಷಿಣ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಪ್ರಾಚೀನ ದೇವಾಲಯ ಇದ್ದಿರಬಹುದಾದ ಸ್ಥಳದಲ್ಲಿ ಸದ್ಯ ಈಗ ಕೆಂಚಮ್ಮನ ಗುಡಿ ಇದೆ. ಇದನ್ನು ಇತ್ತೀಚೆಗೆ ಕಟ್ಟಲಾಗಿದೆ. ಈ ಗುಡಿಯ ಸುತ್ತಲೂ ಪ್ರಾಚೀನ ದೇವಾಲಯದ ಅವಶೇಷಗಳು ಬಿದ್ದಿವೆ. ಅವುಗಳಲ್ಲಿ ಸುಂದರ ಕೆತ್ತನೆಯ ಕಂಬಗಳಿವೆ. ಇವುಗಳು ಅಧಿಷ್ಠಾನ (ಬುಡ) ದಲ್ಲಿ ಕಪೋತ, ಗಳ ಉಪಾನ ಹಾಗೂ ಜಗತಿ ಭಾಗಗಳನ್ನು ಹೊಂದಿವೆ. ಅಲ್ಲದೆ ಕಂಬದ ಮೇಲೆ ಸ್ತ್ರೀಯರ ಸುಂದರವಾದ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಈ ಶಿಲ್ಪಗಳು ಕಿರೀಟವನ್ನು ಸಹ ಹೊಂದಿವೆ. ಅಂಥ ಆಕರ್ಷಕ ಕಂಬವನ್ನು ಒಂದು ಎತ್ತರದ ಕಟ್ಟೆಯ ಮೇಲೆ ನಿಲ್ಲಿಸಲಾಗಿದೆ. ಹಾಗೂ ಇದನ್ನು ದೈವಿರೂಪದಲ್ಲಿಯು ಪೂಜಿಸಲಾಗುತ್ತಿದೆ. ಒಟ್ಟಿನಲ್ಲಿ ಇಲ್ಲೊಂದು ಸುಂದರವಾದ ಪ್ರಾಚೀನ ದೇವಾಲಯ ಇತ್ತು ಎಂಬುದು ಮುಖ್ಯವಾದ ಸಂಗತಿ.

೫೫                                   

ಊರು ಸೂಡಿ
ಸ್ಮಾರಕ ನೆಲಮನೆ ದೇವಾಲಯ
ಸ್ಥಳ ಗ್ರಾಮದಲ್ಲಿ ಹುಡೇವಗಡ್ಡಿ
ಕಾಲ ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗುಡಿಯ ಮೇಲೆ ಮಣ್ಣು ಆವರಿಸಿದ್ದು ನೆಲ ಮಾಳಿಗೆಯಲ್ಲಿ ದೇವಾಲಯ ಗೋಚರಿಸುವುದು. ಆಯಾತಾಕರದಲ್ಲಿರುವ ಈ ದೇವಾಲಯವನ್ನು ಟಂಕಶಾಲೆ ಹಾಗೂ ಕಲ್ಮೇಶ್ವರ ದೇವಾಲಯವೆಂದು ಕರೆಯುತ್ತಾರೆ. ಗರ್ಭಗೃಹ ಆಯಾತಾಕಾರದ ಮಂಟಪ ಹಾಗೂ ಇವುಗಳನ್ನೆಲ್ಲೊಳಗೊಂಡಂತೆ ಕಂಬಗಳುಳ್ಳ ಮಂಟಪ ಇದೆ. ಈ ಮಂಟಪದ ಮೇಲ್ಛಾವಣಿ ಇಲ್ಲ. ಮಂಟಪದ ಮೂಲಕವೇ ಗುಡಿಗೆ ಪ್ರವೇಶ ಇರುವುದು. ಪ್ರವೇಶ ದ್ವಾರದಲ್ಲಿ ದ್ವಾರಪಾಲಕ ಶಿಲ್ಪಗಳಿವೆ. ಹಾಗೂ ಬಾಗಿಲವಾಡದ ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬು ಶಿಲ್ಪವಿದೆ. ಇಲ್ಲಿರುವ ಕಂಬಗಳು ಕಲ್ಯಾಣ ಚಾಲುಕ್ಯ ಕಾಲಾವಧಿಯಲ್ಲಿ ನಿರ್ಮಾಣವಾದವುಗಳೆಂದು ಗುರುತಿಸಬಹುದು.

ಇದೊಂದು ಟಂಕಶಾಲೆ ಆಗಿತ್ತು ಎಂಬ ಮಾಹಿತಿ ಅತೀ ಮಹತ್ವದು. ಪ್ರಾಚೀನ ಕಾಲದಲ್ಲಿ ಅದರಲ್ಲೂ ಕಲ್ಯಾಣ ಚಾಲುಕ್ಯರ ಆಡಳಿತ ಕಾಲಾವಧಿಯಲ್ಲಿ ಸೂಡಿ ಗ್ರಾಮವು ಅತ್ಯಂತ ಪ್ರಮುಖ ಪಾತ್ರವಹಿಸಿರುವುದನ್ನು ಶಾಸನಾಧಾರಗಳಿಂದ ತಿಳಿಯುತ್ತೇವೆ. ಈ ಪಟ್ಟಣವು ಬ್ರಹ್ಮಪುರಿ ಹಾಗೂ ಅಗ್ರಹಾರವಾಗಿತ್ತು. ಅಲ್ಲದೆ ಆಡಳಿತ ಉಪವಿಭಾಗವು ಆಗಿ ಕಾರ್ಯನಿರ್ವಹಿಸಿರುವ ಬಗೆಗೆ ಮಾಹಿತಿ ಇದೆ. ಹೀಗಾಗಿ ನಾಣ್ಯಗಳನ್ನು ಟಂಕಿಸುವ ಕಾರ್ಯವು ಇಲ್ಲಿ ನಡೆದಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಕಲ್ಮೇಶ್ವರ ದೇವಾಲಯದ ಉಲ್ಲೇಖವಿರುವ ಶಾಸನವೊಂದು ಪ್ರಕಟವಾಗಿದೆ (ಧಾ.ಜಿ.ಶಾ.ಸೂ.ಸಂ.ರೋ ೧೦೧ ಪು.೧೯;SII, XI. pt.II No.153). ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲದ ಕ್ರಿ.ಶ.೧೧೦೩ರ ತೇದಿವುಳ್ಳ ಶಾಸನವು ಒತ್ತೋಜನ ಸೂಂಡಿಯ ಕಲಮೇಶ್ವರ ದೇವಾಲಯದ ನಂದಾದೀವಿಗಾಗಿ ಸುವರ್ಣದಾನ ನೀಡಿರುವ ಉಲ್ಲೇಖವಿದೆ.

೫೬

ಊರು ಸೂಡಿ
ಸ್ಮಾರಕ ರಸದಬಾವಿ
ಸ್ಥಳ ಗ್ರಾಮದ ಬಸ್‌ ನಿಲ್ದಾಣ
ಕಾಲ ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪಶ್ಚಿಮ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಈ ಬಾವಿಯು ವಾಸ್ತುಶಿಲ್ಪ ಅಧ್ಯಯನ ದೃಷ್ಟಿಯಿಂದ ಮಹತ್ವವಾದುದು. ಒಂದು ಸುಂದರ ದೇವಾಲಯದಷ್ಟೇ ಗುಣ ಲಕ್ಷಣಗಳನ್ನು ಹೊಂದಿ ನಿರ್ಮಾಣವಾಗಿರುವಂತೆ ಕಾಣುತ್ತದೆ. ವಿಶಾಲವಾದ ಬಾವಿಯನ್ನು ಬೃಹದಾಕಾರದ ಕಲ್ಲುಗಳಿಂದ (ಕಣಶಿಲೆ ಹಾಗೂ ಕಪ್ಪುಶಿಲೆ) ಗಳಿಂದ ನಿರ್ಮಿಸಲಾಗಿದೆ. ಪ್ರವೇಶದಲ್ಲಿ ದೊಡ್ಡ ಹೆಬ್ಬಾಗಿಲನ್ನು ನಿಲ್ಲಿಸಿದ್ದಾರೆ. ಈ ಹೆಬ್ಬಾಗಿಲಿನಿಂದ ನೀರಿನ ತಗ್ಗಿನವರೆಗೆ ಅಂದರೆ ಮೂವತ್ತು ಮೂಟರಗಳವರೆಗೆ ಮೆಟ್ಟಿಲುಗಳನ್ನು ಜೋಡಿಸಿದ್ದಾರೆ. ಸುಮಾರು ಹತ್ತು ಮೀಟರ್ ಗಳ ಅಗಲವಾದ ದಾರಿ ನೀರಿನ ತಗ್ಗಿನವರೆಗೆ ಇದೆ. ಅಖಂಡ ಶಿಲೆಗಳನ್ನು ಜೋಡಿಸಿ ಈ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಇಳಿಯುತ್ತಾ ಬಾವಿಯನ್ನು ಪ್ರವೇಶಿಸಬೇಕು. ಮೂವತ್ತು ಮೀಟರ್ ಗಳ ವರೆಗೆ ಇಕ್ಕೆಲಗಳಲ್ಲಿ ಭದ್ರವಾದ ಗೋಡೆಯನ್ನು ನಿರ್ಮಿಸಿದ್ದಾರೆ. ಹಾಗೂ ಈ ಗೋಡೆಯ ಭಾಗದಲ್ಲಿ ಕೋಷ್ಠಕಗಳನ್ನು ರಚಿಸಲಾಗಿದೆ. ಇಲ್ಲಿರುವ ಕೋಷ್ಠಕ ಅಥವಾ ಗೂಡುಗಳನ್ನು ಶಿಖರಗಳಿಂದ ಅಲಂಕಾರ ಮಾಡಲಾಗಿದೆ. ಈ ಗೋಡೆಯ ಕೆಳಭಾಗದಲ್ಲಿ ಅಧಿಷ್ಠಾನವಿದ್ದು ಅದು ಉಪಾನ, ಜಗತಿ, ಗಳ, ತ್ರಿಪಟ್ಟುಕುಮುದ ಹಾಗೂ ಕಪೋತ ಭಾಗಗಳನ್ನು ಹೊಂದಿದೆ. ಒಟ್ಟಾರೆ ಗುಡಿಯನ್ನು ನೋಡಿದ ತಕ್ಷಣ ಆಗುವ ಅನುಭವ ಈ ಬಾವಿಯನ್ನು ನೋಡಿದಾಗಲು ಆಗುತ್ತದೆ. ಜಲ ಮೂಲವನ್ನು ಒದಗಿಸುತ್ತಿದ್ದ ಇಂಥ ಪ್ರಾಚೀನ ಬಾವಿಯನ್ನು ಜೋಡುಕಳಸದ ಹಾಗೂ ಮಲ್ಲಿಕಾರ್ಜುನ ಗುಡಿಗಳಿಗೆ ಹಾಗೂ ಇದೇ ಸಂಕೀರ್ಣದಲ್ಲಿರುವ ಇನ್ನಿತರ ಚಿಕ್ಕಪುಟ್ಟ ಗುಡಿಗಳ ನಿತ್ಯ ನಿರ್ವಹಣೆಗಾಗಿ ಈ ಬಾವಿಯ ನೀರನ್ನು ಉಪಯೋಗಿಸುತ್ತಿದ್ದರು ಎಂಬ ಪ್ರತೀತವಿದೆ. ಈ ಬಾವಿಯ ನಿರ್ಮಾಣ ಹಾಗೂ ಚರಿತ್ರೆಯ ಬಗೆಗೆ ಯಾವ ದಾಖಲಾತಿಗಳು ಈವರೆಗೂ ಸಿಕ್ಕಿಲ್ಲ.

೫೭

ಊರು ಸೂಡಿ
ಸ್ಮಾರಕ ಗಣೇಶ (ಕಡ್ಲೇಕಾಲು ಗಣಪ)
ಸ್ಥಳ ರಸದಬಾವಿ ಎಡಭಾಗ
ಕಾಲ ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಜೋಡು ಕಳಸದ ದೇವಾಲಯದ ಸಂಕೀರ್ಣದಲ್ಲಿ ಗಣೇಶನ ದೇವಾಲಯವಿದೆ. ಎತ್ತರದ ಜಗತಿಯ ಮೇಲೆ ನಿರ್ಮಾಣವಾದ ಈ ದೇವಾಲಯದ ಗರ್ಭಗೃಹ ಮಾತ್ರವಿದೆ. ಇದರಲ್ಲಿ ಹಂಪೆಯಲ್ಲಿರುವ ಕಡಲೆಕಾಳು ಗಣೇಶನ ಏಕ ಶಿಲಾ ವಿಗ್ರಹದಂತೆ ಬೃಹದಾಕಾರ ಗಣೇಶನ ವಿಗ್ರಹ ಇಲ್ಲಿದೆ. ಕುಳಿತಿರುವ ಗಣಪ ವಿಗ್ರಹವು ಯಜ್ಞೋಪವಿತವನ್ನು ಧರಿಸಿದೆ. ಸ್ಥಳೀಯವಾಗಿ ಸಿಗುವ ಕಣಶಿಲೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಗರ್ಭರ್ಗೃಹದಲ್ಲಿ ತಿರುಗಣಿಯಾಕಾರದ ಎರಡು ಕಂಬಗಳಿವೆ. ಹಾಗೂ ಈ ದೇವಾಲಯ (ಗರ್ಭಗೃಹ) ಕ್ಕೆ ಇತ್ತೀಚೆಗೆ ಬಾಗಿಲವಾಡವನ್ನು ಬೇರೆಲ್ಲಿಂದಲೊ ತಂದು ಜೋಡಿಸಿದಂತೆ ಭಾಸವಾಗುತ್ತದೆ.

ಗರ್ಭಗೃಹದ ಮುಂಭಾಗದಲ್ಲಿ ಎರಡು ಶಿಲ್ಪಗಳನ್ನು ಇಡಲಾಗಿದೆ. ಕೈಯಲ್ಲಿ ತ್ರಿಶೂಲ ಹಾಗೂ ಡಮರು ಹಿಡಿದಿದ್ದರೆ ಇನ್ನರ್ಧ ಶಿಲ್ಪವು ಸ್ತ್ರೀ ವೇಷಧಾರಣಿ. ಇದೊಂದು ಅರ್ಧ ನಾರೀಶ್ವರ ಶಿಲ್ಪ. ತಲೆಯನ್ನು ಕಿರೀಟದಿಂದ ಅಲಂಕಾರ ಮಾಡಲಾಗಿದೆ. ಈ ಶಿಲ್ಪಗಳ ಕಿರೀಟವನ್ನು ಗಮನಿಸಿದರೆ ಇವು ಬಾದಾಮಿ ಗುಹೆಯಲ್ಲಿರುವ ಶಿಲ್ಪಗಳ ಕಿರೀಟದಂತೆ ಹೋಲಿಕೆಯಾಗುತ್ತವೆ. ಇಲ್ಲಿರುವ ಗಣಪತಿ ವಿಗ್ರಹ ಹಾಗೂ ಬಿದ್ದಿರುವ ಎರಡು ಬಿಡಿ ಶಿಲ್ಪಗಳು ಬಹುಶಃ ಕಲ್ಯಾಣ ಚಾಲುಕ್ಯ ಪೂರ್ವದಲ್ಲಿ ಅಂದರೆ ರಾಷ್ಟ್ರಕೂಟ ಕಾಲದಲ್ಲಿ ನಿರ್ಮಾಣವಾದವುಗಳೆಂಬುದನ್ನು ಅಭಿಪ್ರಾಯಪಡಬಹುದು.

ಗಣಪತಿಯ ಗುಡಿಯ ಹಿಂಭಾಗದಲ್ಲಿ ಕಪ್ಪುಶಿಲೆಯಲ್ಲಿ ನಿರ್ಮಾಣವಾದ ಬೃಹದಾಕಾರದ ನಂದಿ ವಿಗ್ರಹವಿದೆ. ನಯವಾದ ಕೆತ್ತನೆಯಿಂದ ರಚನೆಯಾಗಿದ್ದರಿಂದ ತುಂಬಾ ಆಕರ್ಷಕವಾಗಿ ಕಾಣುವುದು. ಒಟ್ಟಿನಲ್ಲಿ ಮಲ್ಲಿಕಾರ್ಜುನ, ಜೋಡುಕಲಶದ, ಗಣೇಶ, ನಂದಿ ಹಾಗೂ ರಸದ ಬಾವಿಯ ಸ್ಮಾರಕಗಳನ್ನು ಗಮನಿಸಿದಾಗ ಬಹುಶಃ ಇವುಗಳನ್ನೆಲ್ಲ ಒಳಗೊಂಡಂತೆ ಬೃಹದಾಕಾರದ ದೇವಾಲಯ ಸಮುಚ್ಚಯ ಇದ್ದಿರಬಹುದೆಂಬ ಸಂಗತಿ ಗೊತ್ತಾಗುತ್ತದೆ. ಸೂಡಿ ಗ್ರಾಮ ಒಂದನ್ನೇ ಪ್ರತ್ಯೇಕವಾಗಿ ವಿವರ ಅಧ್ಯಯನ ಮಾಡುವುದರಿಂದ ನಮಗೆ ಇನ್ನು ಹೆಚ್ಚಿನ ಹಾಗೂ ವಿಶೇಷ ಮಾಹಿತಿಗಳು ಸಿಗುವುದರಲ್ಲಿ ಸಂಶಯವಿಲ್ಲ.

೫೮

ಊರು ಹಿರೇಹಾಳ
ಸ್ಮಾರಕ ರಾಮಲಿಂಗ
ಸ್ಥಳ ಗ್ರಾಮದಲ್ಲಿ
ಕಾಲ ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಕಲ್ಯಾಣ ಚಾಲುಕ್ಯ ಕಾಲದ ನಿರ್ಮಿತ ಈ ದೇವಾಲಯವು ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿರುವುದು. ಗರ್ಭಗೃಹದಲ್ಲಿ ಲಿಂಗವಿದ್ದು ನಿತ್ಯವು ಪೂಜಿಸಲ್ಪಡುತ್ತದೆ. ಇಲ್ಲಿರುವ ಒಳಗೋಡೆಯಲ್ಲಿ ಸುತ್ತಲೂ ಎತ್ತರದ ಕಟ್ಟೆಯನ್ನು ಕಟ್ಟಲಾಗಿದೆ. ಇದರ ಬಾಗಿಲವಾಡವು ಪಂಚಶಾಖೆಗಳಿಂದ ಕೂಡಿದ್ದು ಬಲಭಾಗದಲ್ಲಿ ಸೂರ್ಯನ ಬಿಡಿ ಶಿಲ್ಪವನ್ನಿಡಲಾಗಿದೆ. ಇದು ಪ್ರಭಾವಳಿಯನ್ನು ಹೊಂದಿದ್ದು ನೋಡಲು ಆಕರ್ಷಕವಾಗಿದೆ. ಅಂತರಾಳದಲ್ಲಿ ನಂದಿಯನ್ನೂ ಇಡಲಾಗಿದೆ.

ವಿಶಾಲವಾದ ನವರಂಗ ದೇವಾಲಯಕ್ಕೆ ಇರುವುದು. ಮಧ್ಯಭಾಗದಲ್ಲಿ ದೊಡ್ಡದಾಗಿರುವ ನಾಲ್ಕು ಕಂಬಗಳಿದ್ದು ಅವು ಚೌಕಾಕಾರದವು. ಬೋಧಿಗೆ ಹಾಗೂ ಫಲಕಗಳನ್ನು ಈ ಕಂಬಗಳು ಹೊಂದಿವೆ. ನಾಲ್ಕು ಕಂಬಗಳನ್ನೊಳಗೊಂಡಂತೆ ಎತ್ತರದ ಕಟ್ಟೆಯಿದೆ. ಗೋಡೆಯ ಪ್ರತಿ ಮೂಲೆಯಲ್ಲಿ ಅರ್ಧಕಂಬಗಳಿವೆ. ನವರಂಗದಲ್ಲಿ ನಾವು ವಿಶೇಷವಾಗಿ ಪರಿಗಣಿಸಬಹುದಾದ ಸಂಗತಿಗಳೆಂದರೆ ಎರಡೂ ಗೋಡೆಗಳಲ್ಲಿ ದೊಡ್ಡದಾದ ಕೋಷ್ಟಕ (ಗೂಡು) ಗಳನ್ನು ನಿರ್ಮಿಸಲಾಗಿದೆ. ಅವು ಚಿಕ್ಕ ಗರ್ಭಗೃಹದಷ್ಟು ವಿಸ್ತಾರವಾಗಿವೆ. ಹಾಗೂ ಈ ಗೂಡುಗಳಿಂದ ದೇವಾಲಯ ತ್ರಿಕೂಟದಂತೆ ಭಾಸವಾಗುತ್ತದೆ. ನವರಂಗಕ್ಕಿರುವ ಸಾದಾ ಬಾಗಿಲವಾಡದ ಚೌಕಟ್ಟುಗಳು ಈವರೆಗೂ ಉಳಿದುಕೊಂಡು ಬಂದಿವೆ.

ದೇವಾಲಯದ ಹೊರಗೋಡೆಯಲ್ಲಿ ಅರ್ಧಕಂಬಗಳನ್ನು ಹಾಗೂ ಅರ್ಧ ಮಂಟಪಗಳನ್ನು ಕೆತ್ತಲಾಗಿದೆ. ಇಲ್ಲಿರುವ ಅರ್ಧಮಂಟಪಗಳು ಶಿಖರಗಳನ್ನು ಹೊಂದಿದ್ದು ಅವು ವೇಸರ ಮಾದರಿಯವುಗಳು. ದೇವಾಲಯದ ಅಧಿಷ್ಠಾನವು ಕಪೋತ, ಗಳ, ತ್ರಿಪಟ್ಟಕುಮುದ ಹಾಗೂ ಇನ್ನಿತರೆ ಅಲಂಕರಣೆಯ ಭಾಗಗಳನ್ನು ಹೊಂದಿದೆ. ಅಧಿಷ್ಠಾನದಲ್ಲಿರುವ ಈ ರಚನೆಗಳು ಪುನರಾವರ್ತನೆಯಾಗಿವೆ. ದೇವಾಲಯದ ಮೇಲ್ಛಾವಣಿಯ ಸವೆದು ಹೋಗಿದ್ದು ಅದನ್ನು ಸಂರಕ್ಷಿಸುವ ತುರ್ತುಗಳಿವೆ. ಶಿಖರ ಭಾಗವು ಬಿದ್ದು ಹೋಗಿದೆ.

ಗುಡಿಯ ಮೂಲೆಯಲ್ಲಿ ಕಲ್ಯಾಣ ಚಾಲುಕ್ಯ ಕಾಲಾವಧಿಗೆ ಸೇರಿದ ತೃಟಿತ ಶಾಸನವಿದೆ. ಇದೇ ಗುಡಿಯ ಬಲಭಾಗದಲ್ಲಿ ವೆಂಕಟರಮಣ ದೇವಾಲಯವಿದೆ. ಈ ದೇವಾಲಯಕ್ಕೆ ಶಿಖರ, ಸ್ಥೂಪಿ ಹಾಗೂ ಕಲಶ ಭಾಗಗಳಿವೆ. ಹಿರೇಹಾಳ ಗ್ರಾಮದಲ್ಲಿ ಮಧ್ಯ ಕಾಲಾವಧಿಯಲ್ಲಿ ನಿರ್ಮಾಣಮಾಡಿದ ಸುಂದರ ಬಾವಿ ಇದೆ. ಕಲ್ಯಾಣ ಚಾಲುಕ್ಯ ಮೂರನೆಯ ಸೋಮೇಶ್ವರನ ಕಾಲ (ಕ್ರಿ.ಶ .೧೧೩೦) ಕ್ಕೆ ಸೇರಿದ ಇಲ್ಲಿಯ ಶಾಸನವು ಪಿರಿಯಮಠದ ಆಚಾರ್ಯ ಸೋಮೇಶ್ವರ ಪಂಡಿತರಿಗೆ ಗ್ರಾಮದ ಮಹಾಜನರಿಂದ ಭೂಮಿಯನ್ನು ದಾನ ಮಾಡಿರುವ ಉಲ್ಲೇಖವನ್ನು ಹೊಂದಿದೆ. ಹಾಗೂ ಇದೇ ಊರಿನಲ್ಲಿರುವ ಇನ್ನೊಂದು ಶಾಸನವು ಅಲ್ಲಿನ ಶಿವಾಲಯಕ್ಕೆ ಭೂದಾನ ಮಾಡಿರುವ ಸಂಗತಿಯನ್ನು ವಿವರಿಸುತ್ತದೆ.

೫೯

ಊರು  ಹುನಗುಂಡಿ
ಸ್ಮಾರಕ  ಕಲ್ಮೇಶ್ವರ
ಸ್ಥಳ  ಗ್ರಾಮದಲ್ಲಿ
ಕಾಲ ೧೧-೧೨ ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಪ್ರಾಚೀನವಾಗಿದ್ದ ಕಲ್ಮೇಶ್ವರ ದೇವಾಲಯವನ್ನು ಸಂಪೂರ್ಣವಾಗಿ ಕೆಡವಿ ಕಟ್ಟಲಾಗಿದೆ. ಗರ್ಭಗೃಹ ಹಾಗೂ ಮಂಟಪ ದೇವಾಲಯದ ಭಾಗಗಳು. ಗ್ರಾಮದ ಪ್ರಾಚೀನ ಇತಿಹಾಸವನ್ನು ವಿವರಿಸುವ ವೀರಗಲ್ಲು, ಮಾಸ್ತಿಗಲ್ಲು ಹಾಗೂ ಅಪ್ರಕಟಿತ ಶಾಸನವೊಂದನ್ನು ಗುಡಿಯ ಮುಂಭಾಗದಲ್ಲಿ ಇಟ್ಟಿದ್ದಾರೆ. ಇವು ಗ್ರಾಮದಲ್ಲಿರುವ ಮುಖ್ಯ ಪ್ರಾಚ್ಯಾವಶೇಷಗಳಾಗಿವೆ.