ಶಿರಹಟ್ಟಿ ತಾಲ್ಲೂಕು ನಕ್ಷೆ

ಶಿರಹಟ್ಟಿ ತಾಲ್ಲೂಕು ನಕ್ಷೆ

ಊರು ಕುಂದ್ರಳ್ಳಿ
ಸ್ಮಾರಕ ಬಸವ
ಸ್ಥಳ ಊರ ಹೊರಗೆ ಕರೆ ದಂಡೆಯ ಮೇಲೆ
ಕಾಲ ಕ್ರಿ.ಶ . ೧೭-೧೮ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಚೌಕಾಕಾರ ಗರ್ಭಗೃಹ ಮತ್ತು ಅಂತರಾಳ ಅಥವಾ ಮುಖಮಂಟಪಗಳನ್ನು ಈ ದೇವಾಲಯ ಹೊಂದಿದೆ. ಗರ್ಭಗೃಹದಲ್ಲಿ ಲಿಂಗವಿದೆ. ಮುಖಮಂಟಪದಲ್ಲಿ ಎರಡು ಬಸವ ಶಿಲ್ಪಗಳನ್ನು ಇರಿಸಲಾಗಿದೆ. ಕಣಶಿಲೆಯ ಈ ಗುಡಿಗೆ ಸರಳ ಶಿಖರವಿದೆ. ದೇವಾಲಯಕ್ಕೆ ಹೊಂದಿದಂತೆ ಉತ್ತರಕ್ಕೆ ಕುಂದ್ರಳ್ಳಿ ಕೆರೆಯಿದೆ.

ಊರು ಗುಲಗಂಜಿಕೊಪ್ಪ
ಸ್ಮಾರಕ ದುಂಡಿ ಬಸವೇಶ್ವರ
ಸ್ಥಳ ಊರಿನ ಪೂರ್ವಕ್ಕೆ
ಕಾಲ ಕ್ರಿ.ಶ. ೧೮-೧೯ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ

ಒಂದು ಗರ್ಭಗೃಹ ಮಾತ್ರವಿರುವ ಈ ಗುಡಿಯಲ್ಲಿ ಲಿಂಗವಿದೆ. ಕಿರು ಬಾಗಿಲು ಇದ್ದು, ಅದರ ಬಾಗಿಲವಾಡವು ಸರಳವಾಗಿದೆ. ಗುಡಿಗೆ ಅಧಿಷ್ಠಾನ ಮತ್ತು ಶಿಖರಗಳಿಲ್ಲ. ಈ ಗುಡಿಯ ಪಕ್ಕದಲ್ಲಿನ ನೈಸರ್ಗಿಕ ಹುಟ್ಟುಬಂಡೆಯು ಬಸವನ ಆಕಾರದಲ್ಲಿದೆ. ಇದನ್ನೇ ಸ್ಥಳೀಯರು ದುಂಡಿ ಬಸವನೆಂದು ಪೂಜಿಸುತ್ತಾರೆ. ಇದಕ್ಕೆ ಛಾವಣಿಯಿಲ್ಲ. ಈ ಬಂಡೆಯಿರುವ ಸ್ಥಳದ ಸುತ್ತಲೂ ಸಿಮೆಂಟ್‌ನಿಂದ ನಿರ್ಮಿಸಿದ ಪ್ರದಕ್ಷಿಣಾಪಥ ಮತ್ತು ಮೂರು ಕಡೆಗಳಲ್ಲಿಯೂ, ಪೂರ್ವ ದಿಕ್ಕು ಹೊರತುಪಡಿಸಿ, ಸುಮಾರು ಆರು ಅಡಿ ಎತ್ತರದ ಗೋಡೆಯನ್ನು ಕಟ್ಟಲಾಗಿದೆ. ದೇವಾಲಯದ ಆವರಣದಲ್ಲಿ ದಕ್ಷಿಣಾಭಿ ಮುಖವಾಗಿ ಹನುಮಂತನ ಒಂದು ಶಿಲ್ಪವನ್ನು ಬಯಲಿನಲ್ಲಿ ಇರಿಸಲಾಗಿದೆ.

ಊರು ಚಿಲಗೇರ (ಜಲ್ಲಿಗೇರ)
ಸ್ಮಾರಕ ಕಲ್ಲಮಲ್ಲಪ್ಪ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೮ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಕಲ್ಲಮಲ್ಲಪ್ಪ ಗುಡಿಯಲ್ಲಿ ಗರ್ಭಗೃಹ ಮಾತ್ರವೇ ಇದ್ದು, ಅತ್ಯಂಥ ಶಿಥಿಲಾವಸ್ಥೆಯಲ್ಲಿದೆ. ಗರ್ಭಗೃಹದ ಭಿತ್ತಿಗಳನ್ನು ಬಿಡಿಗಲ್ಲುಗಳಿಂದ ರಚಿಸಲಾಗಿದೆ. ಬಾಗಿಲವಾಡಕ್ಕೆ ನಯಗೊಳಿಸಿದ ಕಲ್ಲನ್ನು ಬಳಸಲಾಗಿದೆ. ಗುಡಿಗೆ ಛಾವಣಿ ಇರುವುದಿಲ್ಲ. ಗರ್ಭಗೃಹದ ನೆಲಮಟ್ಟದಲ್ಲಿ ಒಂದು ಲಿಂಗವನ್ನು ಇರಿಸಲಾಗಿದೆ. ಈ ಗುಡಿಯ ಪಕ್ಕದಲ್ಲಿ ಇಂತಹದೇ ರಚನೆಯಿದ್ದು, ಅದರಲ್ಲಿ ಕೆಲವು ನಾಗ ಶಿಲ್ಪಗಳು ಮತ್ತು ಬಸವನ ಶಿಲ್ಪವನ್ನು ಇಡಲಾಗಿದೆ. ಛಾವಣಿಗೆ ಸಹ ಬಿಡಿಗಲ್ಲುಗಳನ್ನು ಬಳಸಿ ಮುಚ್ಚಲಾಗಿದೆ. ಈ ಗುಡಿಯ ದ್ವಾರವು ವಿಶಾಲವಾಗಿದೆ.

ಊರು ಛಬ್ಬಿ
ಸ್ಮಾರಕ ಭೋಗೇಶ್ವರ (ಈಶ್ವರ)
ಸ್ಥಳ ಹನುಮಂತ ದೇವರ ಗುಡಿ ಪಕ್ಕ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಮತ್ತು ಆಯತಾಕಾರದ ಮುಖಮಂಟಪಗಳಿವೆ. .ಗರ್ಭಗೃಹವನ್ನು ಗ್ರಾನೈಟ್‌ (ಕಣ) ಶಿಲೆಯಿಂದ ರಚಿಸಲಾಗಿದೆ. ಗರ್ಭಗೃಹದ ಬಾಗಿಲವಾಡ ಮತ್ತು ಅದರ ಲಲಾಟವು ಸರಳವಾಗಿದೆ. ಅಲ್ಲಿ ಗಜಲಕ್ಷ್ಮೀ ಅಥವಾ ಯಾವುದೇ ದೇವತೆಯ ಉಬ್ಬುಶಿಲ್ಪಗಳಿಲ್ಲ. ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯರ ಶೈಲಿಯ ಲಿಂಗ ಹಾಗೂ ಅದರ ಮುಂದೆ ಬಸವನ ಶಿಲ್ಪವಿದೆ. ಪಶ್ಚಿಮದ ಭಿತ್ತಿಯಲ್ಲಿ ಉದ್ದನೆಯ ಮುಂಚಾಚಿದೆ (ಕಟ್ಟೆಯಂತಿದೆ). ಅದೇ ಭಿತ್ತಿಗೆ ಒರಗಿದಂತೆ ಕೆಲವು ಶಿಲ್ಪಗಳಿವೆ. ಅವುಗಳಲ್ಲಿರುವ ದೇವತೆಗಳು ಯಾವುದೆಂದು ನಿಖರವಾಗಿ ತಿಳಿದು ಬರುವುದಿಲ್ಲ. ಅಂತರಾಳವು ಸಹ ಸರಳವಾಗಿದ್ದು, ಅದರ ಬಾಗಿಲ ಇಕ್ಕೆಲಗಳಲ್ಲಿ ಒಂದೇ ಸಾಲಿನಲ್ಲಿರುವಂತೆ ಮೂರು ಕಿಂಡಿಗಳಿರುವ ಜಾಲಾಂಧ್ರಗಳಿವೆ. ಅದರ ಮುಂಭಾಗದಲ್ಲಿ ಆಯತಾಕಾರದ ತೆರದ ಮಂಟಪವಿದೆ. ಅದಕ್ಕೆ ಹೆಂಚಿನ ಮಾಡನ್ನು ಹೊದಿಸಲಾಗಿದೆ. ಈ ಭಾಗದ ಭಿತ್ತಿಯ ಕೋಷ್ಟಗಳಲ್ಲಿ ಕ್ರಮವಾಗಿ ಬಲ ಮತ್ತು ಎಡ ಬದಿಗಳಲ್ಲಿ ಸೂರ್ಯನ ಪಾಣಿಪೀಠ ಹಾಗೂ ಲಿಂಗವಿದೆ. ಕೋಷ್ಟದ ಕೆಳಭಾಗದಲ್ಲಿ ಅಧಿಷ್ಠಾನವನ್ನು ಕಾಣಬಹುದು. ಗರ್ಭ ಗೃಹದ ಹಿಂಬದಿಯಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಭಿತ್ತಿಯನ್ನು ಸ್ಪಷ್ಟವಾಗಿ ಕಾಣಬಹುದು. ಅಧಿಷ್ಠಾನದ ಭಾಗವು ಮಣ್ಣಲ್ಲಿ ಹೂತಿರುವುದರಿಂದ ಅಧಿಷ್ಠಾನದ ಭಾಗಗಳು ಕಂಡುಬರುವುದಿಲ್ಲ. ದೇವಾಲಯಕ್ಕೆ ಶಿಖರವಿಲ್ಲ. ಊರಿನಲ್ಲಿ ಕೆಲವು ವಾಸ್ತು ಅವಶೇಷಗಳು ಕಾಣಸಿಗುತ್ತವೆ. ಶಿರಹಟ್ಟಿ-ಬೆಳ್ಳಟ್ಟಿ ರಸ್ತೆಯಲ್ಲಿ, ಎಡಬದಿಯ ಒಂದು ನಿವೇಶನದಲ್ಲಿ ಜೈನ ತೀರ್ಥಂಕರರ ಮೂರ್ತಿಶಿಲ್ಪಗಳು ಬಿದ್ದಿವೆ. ಆ ಭಾಗದಲ್ಲಿಯೇ ದೇವಾಲಯದ ಮಾಸ್ತು ಅವಶೇಷಗಳನ್ನು ಸಹ ಕಾಣಬಹುದು.

ಧಾರವಾಡದ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನಲ್ಲಿಯೂ ಛಬ್ಬಿ ಎಂಬ ಗ್ರಾಮವಿದೆ. ಹುಬ್ಬಳ್ಳಿಯಿಂದ ಆಗ್ನೇಯಕ್ಕೆ ೧೬ ಕಿ.ಮೀ. ದೂರದಲ್ಲಿರುವ ಈ ಗ್ರಾಮವನ್ನು ಶಾಸನಗಳು ‘ಸಬ್ಬಿ’ ಛಬ್ಬಿ’ ಎಂದು ಉಲ್ಲೇಖಿಸಿವೆ. ಇದು ‘ಸಬ್ಬಿ-೩೦’ ಎಂಬ ಆಡಳಿತ ವಿಭಾಗವಾಗಿದ್ದು, ಹಲಸಿಗೆ-೧೨೦೦೦ ಎಂಬ ಹಿರಿಯ ಆಡಳಿತ ವಿಭಾಗಕ್ಕೆ ಒಳಪಟ್ಟಿತ್ತು. ಇಲ್ಲಿರುವ ಶಾಸನಗಳು ಊರಿನ ಧೋರ ಜಿನಾಲಯದ ಕನಕನಂದಿಯ ನಿಷಿಧಿಗೆಯನ್ನು ಉಲ್ಲೇಖಿಸುತ್ತದೆ. ಕ್ರಿ.ಶ. ೧೨ನೇ ಶತಮಾನದ ತೀರ್ಥಂಕರರ ಪಾದ ಪೀಠದ ಶಾಸನವು ತೀರ್ಥಂಕರರನ್ನು ಇಲ್ಲಿ ಪ್ರತಿಷ್ಠಾಪಿಸಿರುವ ಮಾಹಿತಿಯನ್ನು ನೀಡುತ್ತದೆ. ಇಲ್ಲಿ ತೀರ್ಥಂಕರರ ಮೂರ್ತಿ ಶಿಲ್ಪಗಳಿವೆ. (ಧಾ.ಜಿ.ಗ್ಯಾ, ಪು.೯೪೨).

ಶಿರಹಟ್ಟಿ ತಾಲೂಕಿನ ಛಬ್ಬಿಯಲ್ಲಿಯೂ ತೀರ್ಥಂಕರರ ಮೂರ್ತಿಶಿಲ್ಪಗಳಿವೆ. ಬಹುಶಃ ಛಬ್ಬಿ ಎಂಬ ಊರು ಪ್ರಾಚೀನ ಕಾಲದ ಜೈನ ಕೇಂದ್ರಗಳಾಗಿರುವ ಸಾಧ್ಯತೆಗಳಿವೆ. ಪ್ರಸ್ತುತ ಈ ಊರಿನಲ್ಲಿ ಯಾವ ಜೈನ ಬಸದಿಗಳು ಉಳಿದಿಲ್ಲ.

ಊರು ಛಬ್ಬಿ
ಸ್ಮಾರಕ ಮಾನಜ್ಜನವರ ಮಠ
ಸ್ಥಳ ಊರ ಪಶ್ಚಿಮದ ಗುಡ್ಡದ ಮೇಲೆ
ಕಾಲ ಕ್ರಿ.ಶ. ೧೮-೧೯ನೇ ಶತಮಾನ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಊರ ಪಶ್ಚಿಮಕ್ಕೆ ಸುಮಾರು ಒಂದು ಕಿಮೀ ದೂರದಲ್ಲಿರುವ ಗುಡ್ಡದಲ್ಲಿ ಏಕ ಕೋಣೆಯ ಎರಡು ದೇವಾಲಯಗಳಿವೆ. ಇದನ್ನು ಸ್ಥಳೀಯರು ಮಾನಜ್ಜನವರ ಮಠವೆಂದು ಕರೆಯುತ್ತಾರೆ. ಬಲ ಭಾಗದಲ್ಲಿರುವ ಗುಡಿಯಲ್ಲಿ ಪ್ರಾಚೀನ ಕಾಲದ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಗುಡಿಯ ಮೇಲೆ ಪಿರಮಿಡ್‌ ಆಕಾರದ ಶಿಖರ ಭಾಗ ಹಾಗೂ ಗೋಲಾಕರದ ಸ್ತೂಪಿಯಿದೆ. ಇದನ್ನು ಸಿಮೆಂಟ್‌ನಿಂದ ಕಟ್ಟಲಾಗಿದೆ. ಬಲಭಾಗದ ಗರ್ಭಗೃಹದಲ್ಲಿ ಆಧುನಿಕ ಕಾಲದ ಲಿಂಗವಿದೆ. ಅದರ ಮುಂದೆ ಇರುವ ಮರದ ಕೆಳಗೆ ಇತ್ತೀಚೆಗೆ ನಿರ್ಮಿಸಿದ ಬಸವನ ಶಿಲ್ಪವಿದೆ. ಎರಡು ಗುಡಿಗಳಿಗೂ ಸೇರಿದಂತೆ ಕಾಂಪೌಂಡ್‌ ಗೋಡೆಯಿದೆ. ದೇವಾಲಯಗಳ ಪಕ್ಕದಲ್ಲಿ ಹೊಂಡವಿದೆ. ಅಲ್ಲಿಯ ಹೊಂಡಕ್ಕೆ ಬೆಟ್ಟದ ಬಂಡೆಗಳ ನಡುವಿನಿಂದ ನೀರು ಹಾಯ್ದು ಬರುತ್ತದೆ. ಕಲ್ಲುಗಳ ನಡುವೆ ನೀರಿನ ಒರತೆಯಿದೆ. ಆ ನೀರು ವರ್ಷ ಪೂರ್ತಿ ಬತ್ತುವುದಿಲ್ಲ ಎಂದು ಸ್ಥಳೀಯರು ತಿಳಿಸುತ್ತಾರೆ. ಹೆಚ್ಚುವರಿ ನೀರು ಕಿರು ಹಳ್ಳವಾಗಿ ಹರಿಯುತ್ತದೆ.

ಊರು ತಂಗೋಡ
ಸ್ಮಾರಕ ಕಲ್ಲಮಠ (ಕಲ್ಮಠ)
ಸ್ಥಳ ಇಟಗಿ ರಸ್ತೆಯ ಬಲಬದಿಗೆ
ಕಾಲ ಕ್ರಿ.ಶ. ೧೨-೧೩ಲನೇ ಶತಮಾನ
ಶೈಲಿ  ಕಲ್ಯಾಣ ಚಾಲುಕ್ಯ
ಅಭಿಮುಖ ಉತ್ತರ
ಸ್ಥಿತಿ ಸಾಧಾರಣ
ಸಂರಕ್ಷಣೆ

ಉದ್ದನೆಯ ಸಾಲು ಮಂಟಪದಂತೆ ತೋರುವ ಈ ಸ್ಮಾರಕವು ಬಹುಶಃ ಮಠವಾಗಿರುವ ಸಾಧ್ಯತೆಗಳಿವೆ. ಆಯತಾಕಾರದ ತಲವಿನ್ಯಾಸವನ್ನು ಹೊಂದಿದ್ದು, ಮುಂಭಾಗದಲ್ಲಿ, ಎರಡು ಸಾಲುಗಳಲ್ಲಿ ತಲಾ ನಾಲ್ಕು ಕಂಬಗಳಿರುವ ಮುಖಮಂಟಪವಿದೆ. ಮಂಟಪದ ಕಂಬಗಳು ಸರಳವಾಗಿದ್ದು,; ಚೌಕಾಕಾರ ಪೀಠ ಮತ್ತು ಆರು ಭಾಘ ಮತ್ತು ಅದರ ಮೇಲೆ ಚೌಕಾಕಾರ ಭಾಗಗಳಿವೆ. ಮಂಟಪದ ಮಧ್ಯ ಭಾಗದಲ್ಲಿ ಒಂದು ಪ್ರವೇಶ ದ್ವಾರವಿದ್ದು, ಅದರ ಮೂಲಕ ಮಂಟಪದ ಹಿಂಭಾಗದ ಕೋಣೆಯನ್ನು ಪ್ರವೇಶಿಸಬಹುದಾಗಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಈ ಭಾಗವು ಗರ್ಭಗೃಹವಾಗಿರುತ್ತದೆ. ಆದರೆ ಈ ಕಟ್ಟಡದಲ್ಲಿ ಇದು ಉದ್ದನೆಯ ಸಭಾಂಗಣದಂಥೆ ಇದೆ. ಮಂಟಪದ ಪೂರ್ವ ಮತ್ತು ಪಶ್ಚಿಮ ಭಾಗದ ಭಿತ್ತಿಗಳು ಸ್ವಲ್ಪ ಮುಂಚಾಚಿದೆ . ಗರ್ಭಗೃಹ ಭಾಗದಂತಿರುವ ಭಾಗದಲ್ಲಿ ಗೋಡೆಯ ಎರಡೂ ಕಡೆಗಳಲ್ಲಿ ಜಾಲಾಂಧ್ರಗಳಿವೆ. ಮಂಟಪದಲ್ಲಿರುವ ಎರಡು ಕಂಬಗಳು ರಾಷ್ಟ್ರಕೂಟರ ಕಾಲದ ಶೈಲಿಯಲ್ಲಿಯೂ ಮತ್ತೆರಡು ಕಲ್ಯಾಣ ಚಾಲುಕ್ಯ ಶೈಲಿಯಲ್ಲಿವೆ. ಮಂಟಪದ ಮುಂಭಾಗದಲ್ಲಿ ಒಂದು ಪಾಣಿಪೀಠವಿದೆ. ಇಸ್ಲಾಮಿಕ್‌ ಶೈಲಿಯ ಕಮಾನಿನ ಅಲಂಕರಣೆಯ ತಲಾ ಒಂದು ಗೂಡು ಪೂರ್ವ ಮತ್ತು ಪಶ್ಚಿಮದ ಭಿತ್ತಿಯಲ್ಲಿ ಕಾಣಬಹುದು. ಇವೆಲ್ಲಕ್ಕೂ ಸರಳವಾಗಿರುವ ಎತ್ತರದ ಅಧಿಷ್ಠಾನವಿದೆ. ಪ್ರಸ್ತರದ ಮೇಲ್ಭಾಗದಲ್ಲಿ ಇಟ್ಟಿಗೆಯ ರಚನೆ ಇತ್ತೆಂಬುದು ಅಲ್ಲಿನ ಅವಶೇಷಗಳಿಂದ ತಿಳಿಯಬಹುದು. ಇದನ್ನು ಹೊರತುಪಡಿಸಿದರೆ, ಶಿಖರಭಾಗ ಅಥವಾ ಇತರೆ ಯಾವ ವಾಸ್ತು ಭಾಗಗಳೂ ಕಂಡುಬರುವುದಿಲ್ಲ. ಕಟ್ಟಡದ ವಾಸ್ತು ರಚನೆಯನ್ನು ಆಧರಿಸಿ, ಇದು ಮಠ ಅಥವಾ ಪಾಠಶಾಲೆಯಾಗಿ ಉಪಯೋಗಿಸಿರುವ ಸಾಧ್ಯತೆಗಳಿವೆ. ಕಟ್ಟಡದ ಪಕ್ಕದಲ್ಲಿಯೇ ಸ್ವತಂತ್ರವಾಗಿರುವ ಕೆಲವು ಕೊಠಡಿಗಳಲ್ಲಿ ಮೂರು ಶಿಲ್ಪಗಳಿವೆ. ಕಟ್ಟಡದ ಮುಂಭಾಗದಲ್ಲಿ ಕೆಲವು ಮೃತ್ಪಾತ್ರೆಗಳ ಚೂರುಗಳು ದೊರಕಿವೆ. ಕಟ್ಟಡ ನಿರ್ಮಾಣಕ್ಕೆ ಗ್ರಾನೈಟ್‌ (ಕಣ) ಶಿಲೆಯನ್ನು ಬಳಸಲಾಗಿದೆ.

ಊರು ತೆಗ್ಗಿನ ಬಾವನೂರು
ಸ್ಮಾರಕ ಈಶ್ವರ
ಸ್ಥಳ ಊರ ಮಧ್ಯೆ
ಕಾಲ ಕ್ರಿ.ಶ.೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಪ್ರಸ್ತುತ ದೇವಾಲಯವನ್ನು ನೂತನವಾಗಿ ಕಟ್ಟಲಾಗುತ್ತಿದೆ. ಪ್ರಾಚೀನ ದೇವಾಲಯದ ಅವಶೇಷಗಳು ಅಲ್ಲಲ್ಲಿ ಹರಡಿಕೊಂಡಿದೆ. ಪ್ರಾಚೀನ ಕಾಲದ ಶಿವಲಿಂಗವನ್ನು ಗರ್ಭ ಗೃಹದಲ್ಲಿ ಇರಿಸಲಾಗಿದೆ. ಗರ್ಭಗೃಹದ ಭಾಗವನ್ನು ಇಟ್ಟಿಗೆಯಿಂದ ಕಟ್ಟಲಾಗಿದೆ. ಅದಕ್ಕೆ ಛಾವಣಿಯಿಲ್ಲ. ನವರಂಗದ ಭಾಗದಲ್ಲಿ ಅಡಿಪಾಯನ್ನು ಮಾತ್ರವೇ ಹಾಕಲಾಗಿದ್ದು, ಗೋಡೆ ಮತ್ತು ಕಂಬಗಳಿಗೆ ಆಧಾರವಾಗುವ ಕಬ್ಬಿಣದ ಸಲಾಕೆಗಳನ್ನು ಜೋಡಿಸಲಾಗಿದೆ. ಗರ್ಭಗೃಹದಲ್ಲಿನ ಲಿಂಗದ ಹಿಂಭಾಗದ ಗೋಡೆಗೆ ನಾಗರಕಲ್ಲನ್ನು ಇರಿಸಲಾಗಿದೆ. ಪ್ರಾಚೀನ ವಾಸ್ತು ಅವಶೇಷಗಳು ದೇವಾಲಯದ ಮುಂಭಾಗ ಮತ್ತು ಹಿಂಭಾಗಗಳಲ್ಲಿಯೂ ಬಿದ್ದಿವೆ. ಪ್ರಾಚೀನ ನಂದಿ ಶಿಲ್ಪ ಹಾಗೂ ಒಂದು ಮೂರ್ತಿಶಿಲ್ಪವು ಪೊದರುಗಳ ನಡುವೆ ಬಿದ್ದಿರುವುದನ್ನು ಕಾಣಬಹುದು. ನವರಂಗದ ದಕ್ಷಿಣ ಭಾಗದಲ್ಲಿ, ಅಡಿಪಾಯಕ್ಕೆ ಆನಿಸಿದಂತೆ ಶಾಸನದ ಕಲ್ಲಿದೆ. ಧಾ.ಜಿ.ಶಾ. ಸೂಚಿಯಲ್ಲಿ (ಸಂ.೪ ಪ.೩೬) ನಮೂದಿಸಲಾಗಿರುವ ಕಲ್ಮೇಶ್ವರ ದೇವಾಲಯದ ಬಳಿ ಇದ್ದ ಶಾಸನವು ಪ್ರಸ್ತುತ ಶಾಸನವೇ ಆಗಿರಬೇಕು. ಶಾಸನವು ಕಲ್ಯಾಣ ಚಾಲುಕ್ಯ ಅರಸ ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ್ದು, ಅದರ ತೇದಿಯು ಕ್ರಿ.ಶ. ೧೧೧೯ ಆಗಿದೆ. ಇದು ಬಾನಲೂರ ಮಲ್ಲಗಾವುಂಡನಿಂದ ಗಂಗರಾಶಿದೇವರಿಗೆ ಭೂದಾನ ನೀಡಿದ ವಿಷಯವನ್ನು ದಾಖಲಿಸಿದೆ. ಈ ಹಿಂದೆ ಇದ್ದ ಕಲ್ಮೇಶ್ವರ ದೇವಾಲಯ ಶಿಥಿಲವಾಗಿದ್ದರಿಂದ ಅಲ್ಲಿ ನೂತನ ದೇವಾಲಯವನ್ನು ನಿರ್ಮಿಸುತ್ತಿರಬೇಕು. ಸದರಿ ಸ್ಥಳದಲ್ಲಿಯೇ ಅನೇಕ ವಾಸ್ತು ಅವಶೇಷಗಳು ಇರುವುದರಿಂದ,ಅವುಗಳು ಕಲ್ಮೇಶ್ವರ ದೇವಾಲಯಕ್ಕೆ ಸಂಬಂಧಿಸಿದ್ದಿರಬೇಕು ಎಂದು ಅಭಿಪ್ರಾಯ ಪಡಬಹುದು.

ಊರು ದೇವಿಹಾಳ (ಶ್ರೀಮಂತಗಡ)
ಸ್ಮಾರಕ ಹೂಳಲಮ್ಮ
ಸ್ಥಳ ಬೆಟ್ಟದ ಮೇಲಿರುವ ಕೋಟೆಯೊಳಗೆ
ಕಾಲ ಕ್ರಿ.ಶ. ೧೭-೧೮ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ ರಾ.ಪು.ಇ.

ದೇವಿಹಾಳ ಗ್ರಾಮದ ಪಶ್ಚಿಮ ಭಾಗದಲ್ಲಿರುವ ಎತ್ತರವಾದ ಗುಡ್ಡದ ಮೇಲೆ ಇರುವ ಕೋಟೆಯೊಳಗೆ ಹೊಳಲಮ್ಮನ ದೇವಾಲಯವಿದೆ. ಗುಡಿಯಲ್ಲಿ, ಗರ್ಭಗೃಹ, ಅಂತರಾಳ ಮತ್ತು ವೇದಿಕೆಯುಳ್ಳ ನವರಂಗವಿದೆ. ಗರ್ಭಗೃಹದಲ್ಲಿ ಪ್ರಾಚೀನ ಹೊಳಲಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ದೇವಿಯ ವಿಗ್ರಹವು ವಿಜಯನಗರೋತ್ತರ ಶೈಲಿಯಲ್ಲಿದೆ. ಇದು ಆದಿಲಕ್ಷ್ಮಿಯ ಅವತಾರವೆಂದೂ ಕರೆಯಲಾಗುತ್ತದೆ. ಆದರೆ ಮೂರ್ತಿಯು ಕಾಳಿ ಸ್ವರೂಪದ್ದಾಗಿರಬೇಕೆಂದು ತೋರುತ್ತದೆ. ದೇವಿಯನ್ನು ವಸ್ತ್ರ ಮತ್ತು ಹೂವುಗಳಿಂದ ಅಲಂಕರಿಸಿರುವುದರಿಂದ ಮೂಲ ಸ್ವರೂಪ ಗೋಚರಿಸುವುದಿಲ್ಲ. ಗರ್ಭಗೃಹದ ಒಳ ಭಿತ್ತಿ ಮತ್ತು ನೆಲವನ್ನು ಹೊಳಪು ಕಲ್ಲು (ಟೈಲ್ಸ್) ಬಳಸಿ ನವೀಕರಿಸಲಾಗಿದೆ. ಇದರಿಂದ ಗರ್ಭಗೃಹದ ಮೂಲ ಸ್ವರೂಪ ಕಾಣಸಿಗುವುದಿಲ್ಲ. ದ್ವಾರದ ಬಾಗಿಲವಾಡವು ಸರಳವಾಗಿದೆ. ಗರ್ಭಗೃಹದ ಮುಂಭಾಗದಲ್ಲಿ ಅಂತರಾಳವಿದೆ. ಈ ಭಾಗವನ್ನು ಸಹ ನವೀಕರಿಸಲಾಗಿದೆ. ನವರಂಗದಲ್ಲಿ ಕಣಶಿಲೆಯ ನಾಲ್ಕು ಮುಖ್ಯ ಕಂಬಗಳು ದೊಡ್ಡ ಗಾತ್ರದ್ದಾಗಿದ್ದು, ಅವುಗಳು ಭುವನೇಶ್ವರಿಯನ್ನು ಆಧರಿಸಿವೆ. ಇದರೊಂದಿಗೆ ಗಾತ್ರದಲ್ಲಿ ಕಿರಿದಾದ ಮತ್ತು ನಾಲ್ಕೂ ಕಂಬಗಳು ಈ ದೊಡ್ಡ ಕಂಬಗಳ ಪಕ್ಕದಲ್ಲಿವೆ. ನವರಂಗದಲ್ಲಿನ ಕಂಬಗಳು ಕಲ್ಯಾಣ ಚಾಲುಕ್ಯ ಶೈಲಿಯಲ್ಲಿವೆ. ನವರಂಗದ ಮಧ್ಯದಲ್ಲಿ ವೇದಿಕೆಯಿದೆ. ಇದಕ್ಕೆ ಸಹ ಕಣಶಿಲೆಯನ್ನು ಬಳಸಲಾಗಿದೆ. ನವರಂಗದ ಉತ್ತರ ಮತ್ತು ದಕ್ಷಿಣ ಗೋಡೆಗಳಲ್ಲಿ ಪ್ರವೇಶ ದ್ವಾರವಿದೆ. ಮುಖ್ಯ ಪ್ರವೇಶ ದ್ವಾಋವು ಪೂರ್ವದಲ್ಲಿದ್ದು, ಅದನ್ನು ಕೆಲವು ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದು. ಪ್ರವೇಶ ದ್ವಾರದ ಮೇಲೆ ಚಾಮುಂಡಿ ಮತ್ತು ಇತರೆ ಪರಿವಾರ ದೇವತೆಗಳ ಗಾರೆಯ (ಅಥವಾ ಸಿಮೆಂಟ್‌ನ) ವರ್ಣಲೇಪಿತ ಶಿಲ್ಪಗಳನ್ನು ಇರಿಸಲಾಗಿದೆ. ಇಡೀ ದೇವಾಲಯವು ಎತ್ತರದ ಕಟ್ಟೆಯ ಮೇಲಿದೆ. ಆಧುನಿಕ ಶಿಖರವು ದೇವಾಲಯಕ್ಕಿದೆ . ದೇವಾಲಯವನ್ನು ನವೀಕರಿಸಿರುವುದರಿಂದ ಮೂಲ ವಸ್ತು ಶೈಲಿಯು ಗೋಚರಿಸುವುದಿಲ್ಲ.

ಮುಖ್ಯ ದೇವಾಲಯದ ಪಕ್ಕದಲ್ಲಿಯೇ ಇತರೆ ದೇವತೆಗಳ ಗುಡಿಗಳಿವೆ. ಅದರಲ್ಲಿ ಈಶ್ವರನ ಗುಡಿಯು ಪ್ರಮುಖವಾಗಿದೆ. ಇದನ್ನು ಸಹ ನವೀಕರಿಸಲಾಗಿದೆ. ದೇವಾಲಯದ ಪಕ್ಕದಲ್ಲಿ ಹಾಗೂ ಸನಿಹದಲ್ಲಿ ದೇವಾಲಯದ ಪರಿಚಾರಕರ ವಸತಿ ಗೃಹಗಳು, ಭಕ್ತಾದಿಗಳು ತಂಗಲು ವಸತಿ ಕೊಠಡಿಗಳು ಇವೆ. ದೇವಾಲಯಕ್ಕೆ ಸಂಬಂಧಿಸಿದ ಕಲ್ಯಾಣ ಮಂಟಪವಿದೆ. ಈ ದೇವಾಲಯದ ಪ್ರಧಾನ ದೇವತೆಯಾದ ಹೊಳಲಮ್ಮ ದೇವಿಯು ಛತ್ರಪತಿ ಶಿವಾಜಿಯ ಆರಾಧ್ಯ ದೇವತೆ ಆಗಿದ್ದಳು. ಪ್ರಸ್ತುತ ಕೋಟೆಯನ್ನು ಛತ್ರಪತಿ ಶಿವಾಜಿಯು ನಿರ್ಮಿಸಿದನೆಂದು ತಿಳಿಯಬರುತ್ತದೆ. ಇಲ್ಲಿನ ಜನಪದ ಮತ್ತು ಮೌಖಿಕ ಪರಂಪರೆಯಂತೆ, ದೇವಿಹಾಳದ ಸುತ್ತಮುತ್ತಲಿನ ಪ್ರದೇಶವು ರಣದುಲ್ಲಾ ಖಾನ್‌ ಎಂಬ ಮುಸ್ಲಿಮ್‌ ಅರಸನ ಅಧೀನದಲ್ಲಿತ್ತು. ಇವನು ಗುಡ್ಡದ ಮೇಲೆ ಶಿಥಿಲಾವಸ್ಥೆಯಲ್ಲಿದ್ದ ಗುಡ್ಡದಮ್ಮನ ದೇವಾಲಯವನ್ನು ಕೆಡವಿ ತನ್ನ ಸಂಪತ್ತನ್ನು ನೆಲದಲ್ಲಿ ರಹಸ್ಯವಾಗಿ ಬಚ್ಚಿಟ್ಟನು. ಆಕ್ರಮಣಕಾರರಿಗೆ ಈ ಸಂಪತ್ತು ದೊರೆಯದಂತೆ ಮಾಡಿ ಪ್ರಾಚೀನ ದೇವಾಲಯವಿದ್ದ ಸ್ಥಳದಲ್ಲಿ ಒಂದು ಹೊಸ ದೇವಾಲಯ ನಿರ್ಮಿಸಿ ಅದರಲ್ಲಿ ಮೂರ್ತಿಯನ್ನು ಸ್ಥಾಪಿಸಿ ಹೊಳ್ಳಮ್ಮ ಎಂದು ಹೆಸರಿಸಿದ. ತನ್ನ ಸಂಪತ್ತಿಗೆ ಆ ದೇವತೆಯನ್ನು ರಕ್ಷಿಸುವ ಸಲುವಾಗಿ ಸ್ಥಾಪಿಸಿದನೆಂದೂ, ಆತ ತನ್ನ ಸಂಪತ್ತನ್ನೂ ತೆಗೆದುಕೊಳ್ಳಬೇಕೆನ್ನುವಾಗ ಹೊಳ್ಳಮ್ಮ (ಹೊರಳಮ್ಮ) ಎಂದಾಕ್ಷಣ ದೇವತೆಯು ಹೊರಳಿ ನೆಲಮನೆಯಲ್ಲಿದ್ದ ಸಂಪತ್ತಿರುವ ಸ್ಥಳಕ್ಕೆ ಹೋಗಲು ಅನುವು ಮಾಡಿಕೊಡುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದ ಎನ್ನಲಾಗುತ್ತದೆ.

ಔರಂಗಜೇಬನ ಸೆರೆಯಲ್ಲಿದ್ದ ಶಿವಾಜಿಯ ಕನಸಿನಲ್ಲಿ ದೇವಿಯ (ಹೊಳಲಮ್ಮ ದೇವಿ) ಧ್ಯಾನ ಮಾಡುವಂತೆ ಪ್ರೇರಣೆಯಾಯಿತು. ಸೆರೆಯಿಂದ ಬಿಡುಗಡೆಯಾದ ಬಳಿಕದ ದೇವಿಯು ಅವನಿಗೆ ಖಡ್ಗವನ್ನು ನೀಡಿ ರಣದುಲ್ಲಾಖಾನನ ಸಂಪತ್ತನ್ನು ಕಾಯುವ ಕೆಲಸಕ್ಕೆ ಗುರಿ ಮಾಡಿದ್ದರಿಂದ ಅವನನ್ನು ಬಲಿತೆಗೆದುಕೊಳ್ಳುವಂತೆ ಆಶೀರ್ವದಿಸಿದಳು. ಅದಕ್ಕೆ ಅನುಗುಣವಾಗಿ ಶಿವಾಜಿಯು ರಣದುಲ್ಲಾಖಾನನ ಮೇಲೆ ದಾಳಿ೮ ನಡೆಸಿ ರುಣದುಲ್ಲಾಖಾನನನ್ನು ಕೊಂದು, ಅವನ ಸಂಸ್ಥಾನವನ್ನು ವಶಪಡಿಸಿಕೊಂಡು ಬೆಟ್ಟದ ಮೇಲೆ ವಿಜಯ ಪತಾಕೆಯನ್ನು ಹಾರಿಸಿದ. ದೇವಿಯ ಆಜ್ಞಾನುಸಾರವಾಗಿ ನೆಲಮನೆಯ ಸಂಪತ್ತನ್ನು ತೆಗೆದು, ನೆಲಮನೆಯನ್ನು ಮುಚ್ಚಿಸಿ, ಆ ಸ್ಥಳದಲ್ಲಿ ಈಗ ಇರುವ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಎಂದು ಹೇಳಲಾಗುತ್ತದೆ. ದೇವಿಹಾಳದಲ್ಲಿ ನೆಲೆಸುವುದಕ್ಕಾಗಿ, ಈ ಪೂರ್ವದಲ್ಲಿ ನಿರ್ಮಿಸಿದ ಕೋಟೆಗಳಾದ ಸಿಂಹಗಡ, ಪರುಷಗಡ, ಗಜೇಂದ್ರಗಡ ಮತ್ತು ನಾಗೇಂದ್ರಗಡಗಳಂತೆ ಇಲ್ಲಿ ‘ಹಂತಗಡ’ ಎಂಬ ಕೋಟೆಯನ್ನು ಶಿವಾಜಿ ಕಟ್ಟಿಸಿದನು. ಇಲ್ಲಿ ಉಳಿದೆಲ್ಲಾ ಕೋಟೆ (ಗಡ) ಗಳಿಗಿಂಥ ಹೆಚ್ಚು ಸಂಪತ್ತನ್ನು ಇರಿಸಿದ್ದರಿಂದ, ಅವನ ಗುರು ಶ್ರೀರಾಮದಾಸರು ಈ ಕೋಟೆಗೆ ಶ್ರೀಮಂತಗಡ ಎಂದು ಹೆಸರಿಟ್ಟರು.

ಈ ಕೋಟೆಯ ಸುಮಾರು ೨೫ ಎಕರೆಯಷ್ಟು ಪ್ರದೇಶದಲ್ಲಿ ಆವರಿಸಿದ್ದು, ಉತ್ತರ ದಿಕ್ಕಿಗೆ ಮುಖ್ಯ ದ್ವಾರವಿದೆ. ಕೋಟೆಯನ್ನು ಏರಲು ಅನುವಾಗುವಂತೆ, ಒಳಭಾಗದಲ್ಲಿ ಮೆಟ್ಟಿಲುಗಳನ್ನು ಇರಿಸಲಾಗಿದೆ. ಕೋಟೆ ಗೋಡೆಯು ಸುಮಾರು ೨೫ ಅಡಿ ಎತ್ತರ ೧೨ ಅಡಿ ಅಗಲವಿದೆ. ಇಲ್ಲಿಯೂ ಹುಡೇವುಗಳಿವೆ. ಇದನ್ನು ಶಿವಾಜಿ ಸ್ಥಾಪಿಸಿದ ಎನ್ನಲಾಗುತ್ತದೆ. ಕೋಟೆಯ ಸುತ್ತಲೂ ಕಳ್ಳಗಿಂಡಿಗಳಿವೆ. ರಣದುಲ್ಲಾಖಾನನ ಕೇಂದ್ರ ಸ್ಥಳವಾದ ಇಂದಿನ ರಣತೂರು ಗ್ರಾಮವನ್ನು ಬೆಟ್ಟದ ಮೇಲಿಂದ ನೋಡಬಹುದು. ಅಲ್ಲಿ ಅಂದಿನ ಕೆಲವು ಭವ್ಯ ಕಟ್ಟಡಗಳ ಅವಶೇಷಗಳನ್ನು ಇಂದಿಗೂ ಕಾಣಬಹುದು. ಈ ಪ್ರದೇಶದಲ್ಲಿಯೇ ಶಿವಾಜಿಗೂ ಮತ್ತು ರಣದುಲ್ಲಾಖಾನನಿಗೂ ಯುದ್ಧ ನಡೆಯಿತೆಂದು ಹೇಳಲಾಗುತ್ತದೆ. ಇಲ್ಲಿರುವ ರಣಗಟ್ಟೆಯಮ್ಮನ ದಿಬ್ಬ ಇರುವುದರಿಂದ ಇದು ರಣಭೂಮಿ ಎಂದು ಸ್ಥಳೀಯರು ಹೇಳುತ್ತಾರೆ. ಇದರಿಂದಾಗಿಯೇ ಈ ಊರಿಗೆ ರಣತೂರು ಎಂದು ಹೆಸರು ಬಂದಿದೆ ಎನ್ನಲಾಗುತ್ತದೆ.

ಕೋಟೆಯಲ್ಲಿಯೇ ಮದ್ದುಗುಂಡುಗಳನ್ನು ತಯಾರಿಸುತ್ತಿದ್ದರು ಎನ್ನಲಾಗಿದೆ. ಕೋಟೆಯಲ್ಲಿ ಐದು ಪ್ರಸಿದ್ಧ ಹೊಂಡಗಳಿವೆ. ಅವುಗಳು ಸ್ನಾನದ ಹೊಂಡ, ಆನೆಯ ಹೊಂಡ, ಮದ್ದಿನ ಹೊಂಡ, ಮುಟ್ಟುದೋಷ ಹೊಂಡ ಮತ್ತು ಮುಸುರಿ ಹೊಂಡ. ಬರಗಾಲ ಮತ್ತು ಬೇಸಿಗೆಯಲ್ಲಿಯೂ ಇಲ್ಲಿನ ನೀರು ಬತ್ತುವುದಿಲ್ಲ ಎಂದು ಸ್ಥಳೀಯರು ತಿಳಿಸುತ್ತಾರೆ. ಇಂದು ಈ ಕೋಟೆಯನ್ನು ಡಾಂಬರು ರಸ್ತೆಯ ಮೂಲಕ ತಲುಪಬಹುದಾಗಿದೆ. ಹಬ್ಬ-ಹರಿದಿನಗಳು, ವಾರ್ಷಿಕ ಉತ್ಸವ, ಜಾತ್ರೆಗಳು ಇಲ್ಲಿ ನಿರಂತರವಾಗಿ ನಡೆಯುತ್ತವೆ.

ಗುಡಿಯ ಕಂಬವೊಂದರಲ್ಲಿರುವ ಶಾಸನವು ಕ್ರಿ.ಶ ೧೬ನೇ ಶತಮಾನಕ್ಕೆ ಸೇರಿದೆ. ಅದು ಕೆಲವು ದೇವರಿಗೆ ಭೂಮಿ ದಾನ ನೀಡಿದುದನ್ನು ಉಲ್ಲೇಖಿಸುತ್ತದೆ. (ಧಾ.ಜಿ.ಶಾ.ಸೂ, ಸಂ. ಸಿ.೫, ಪು.೩೬) ಇನ್ನೊಂದು ಕಂಬದಲ್ಲಿರುವ ಶಾಸನವು ತ್ರುಟಿತ ಹಾಗೂ ಅಸ್ಪಷ್ಟವಾಗಿದೆ ಕೂಡಿದೆ. (ಧಾ.ಜಿ.ಶಾ.ಸೂ, ಸಂ. ಸಿ.೬, ಪು. ೩೬)

ಊರು ಬೆಳ್ಳಟ್ಟಿ (ಕಪ್ಪಲಟ್ಟಿ)
ಸ್ಮಾರಕ ಹನುಮಂತ
ಸ್ಥಳ ಮಾಚೇಮನಹಳ್ಳಿ ರಸ್ತೆ
ಕಾಲ ಕ್ರಿ.ಶ ೧೭-೧೮ನೇ ಶತಮಾನ
ಶೈಲಿ ವಿಜಯನಗರೋತ್ಯರ
ಅಭಿಮುಖ ದಕ್ಷಿಣ
ಸ್ಥಿತಿ ಸಾಧಾರಣ
ಸಂರಕ್ಷಣೆ

ಗರ್ಭಗೃಹ ಮತ್ತು ತೆರೆದ ನವರಂಗ ಭಾಗಗಳನ್ನು ಈ ದೇವಾಲಯ ಹೊಂದಿದೆ. ಗರ್ಭಗೃಹವು ಚಾಕಾಕಾರವಾಗಿದ್ದು, ಕಲ್ಲಿನಿಂದ ಕಟ್ಟಲಾಗಿದೆ. ಅದರಲ್ಲಿ ಹನುಮಂತನ ಶಿಲ್ಪವನ್ನು ಇರಿಸಲಾಗಿದೆ. ಗರ್ಭಗೃಹದ ಬಾಗಿಲವಾಡವು ಸರಳವಾಗಿದೆ. ನವರಂಗದಲ್ಲಿ ನಾಲ್ಕು ಕಂಬಗಳು ಭುವನೇಶ್ವರಿಯನ್ನು ಆಧರಿಸಿವೆ. ನವರಂಗದ ದಕ್ಷಿಣ ಭಾಗವು ತೆರೆದಿದೆ. ಅಲ್ಲಿನ ಕಂಬಗಳ ಕೆಳಭಾಗವು ಉದ್ದವಾಗಿ ಮತ್ತು ಚೌಕಾಕಾರವಾಗಿದ್ದು, ಮೇಲಿನ ಭಾಗವು ದುಂಡಗಿದೆ. ದೇವಾಲಯಕ್ಕೆ ಅಧಿಷ್ಠಾನ ಮತ್ತು ಶಿಖರಗಳಿಲ್ಲ. ಗುಡಿಯ ಪಶ್ಚಿಮದ ಗೋಡೆಗೆ ಸೇರಿದಂತೆ ಒಂದು ಗರ್ಭಗೃಹವನ್ನು ನಿರ್ಮಿಸಲಾಗಿದೆ. ಮುಖ್ಯ ಗುಡಿಯ ಎದುರು ಒಂದು ಕಟ್ಟೆಯಲ್ಲಿ ನಾಗರಶಿಲ್ಪಗಳನ್ನು ಇರಿಸಲಾಗಿದೆ.

ಕಲ್ಯಾಣ ಚಾಲುಕ್ಯರ ಅರಸ ಆರನೆಯ ವಿಕ್ರಮಾದಿತ್ಯನ ಕಾಲದ ಕ್ರಿ.ಶ. ೧೧೨೨ರ ಶಾಸನವು ಯಾದವ ವಂಶದ ಮಹಾಮಂಡಳೇಶ್ವರ ಪೆರ್ಮಾಡಿ ಅರಸರ ವಿನಂತಿಯ ಮೇರೆಗೆ ಪೆರ್ಗಡೆ ಚಾದಿಸೆಟ್ಟಿಯು ಕಪಿಲೇಶ್ವರ ದೇವರಿಗೆ ಭೂದಾನ ನೀಡಿದ ವಿಷಯವನ್ನು ದಾಖಲಿಸಿದೆ. (ಧಾ.ಜಿ.ಶಾ.ಸೂ, ಸಂ.ಸಿ.೭, ಪು. ೩೬).

೧೦

ಊರು ಬೆಳ್ಳಟ್ಟಿ (ಕಪ್ಪಲಟ್ಟಿ)
ಸ್ಮಾರಕ ರಾಮಲಿಂಗೇಶ್ವರ ಮಠ
ಸ್ಥಳ ಗ್ರಾಮದ ಕೆರೆಯದಂಡೆ
ಕಾಲ ಕ್ರಿ.ಶ. ೧೦-೧೧ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಬೆಳ್ಳಟ್ಟಿಯಿಂದ ಶಿರಹಟ್ಟಿಗೆ ಹೋಗುವ ಮಾರ್ಗದ ಬಲಬದಿಯ ಗುಡ್ಡದಲ್ಲಿರುವ ಈ ದೇವಾಲಯವನ್ನು ರಾಮಲಿಂಗೇಶ್ವರ ಮಠವೆಂದು ಕರೆಯುತ್ತಾರೆ. ಸ್ವಾಭಾವಿಕ ಗುಡ್ಡದ ಕಲ್ಲು ಗವಿಯ ಬಂಡೆಗಳ ನಡುವೆ ಗರ್ಭಗೃಹದಂತಹ ನೈಸರ್ಗಿಕ ರಚನೆಯಿದ್ದು ಅದರಲ್ಲಿ ಪ್ರಾಚೀನ ಕಾಲದ ಶಿವಲಿಂಗವಿದೆ. ಇದು ಶೈಲಿಯ ದೃಷ್ಟಿಯಿಂದ ಕ್ರಿ.ಶ. ಸುಮಾರು ೧೦-೧೧ನೇ ಶತಮಾನಕ್ಕೆ ಸೇರಬಹುದಾಗಿದೆ. ಗರ್ಭಗೃಹ ಭಾಗದ ಮುಂದೆ ತೆರೆದ ಅರ್ಧ ಮಂಟಪ, ನವರಂಗ ಹಾಗೂ ಅದರ ಮುಂದೆ ತೆರೆದ ಅಂಗಣವಿದೆ. ಈ ದೇವಾಲಯದಲ್ಲಿಯೆ ಕಲ್ಯಾಣ ಚಾಲುಕ್ಯ ಶೈಲಿಯ ದ್ವಾರಪಾಲಕ ಮತ್ತು ಗಣಪತಿಯ ಶಿಲ್ಪಗಳಿವೆ. ರಾಮಲಿಂಗಮಠದ ಪಕ್ಕದಲ್ಲಿಯೇ ಕ್ರಿ.ಶ. ೧೭-೧೮ನೇ ಶತಮಾನದಲ್ಲಿ ನಿರ್ಮಿಸಿರಬಹುದಾದ ಎರಡು ಗರ್ಭಗೃಹಗಳಿರುವ ಗುಡಿಗಳಿವೆ. ಒಂದು ಗರ್ಭಗೃಹದಲ್ಲಿ ಓರ್ವ ಸ್ವಾಮಿಗಳ ಮೂರ್ತಿಶಿಲ್ಪವಿದೆ. ಅದರ ಪಕ್ಕದ ಗರ್ಭಗೃಹ ಖಾಲಿಯಾಗಿದೆ. ಇದಕ್ಕೆ ಶಿಖರವಿಲ್ಲ. ಈ ಮಠವು ವಿದ್ಯಾರ್ಥಿಗಳ ವಾಸ ಸ್ಥಾನವಾಗಿದೆ.

ಈ ದೇವಾಲಯಕ್ಕೆ ಹೋಗುವ ಮಾರ್ಗದ ಬಲಬದಿಯಲ್ಲಿ ರೇಣುಕ ಎಲ್ಲಮ್ಮನ ದೇವಾಲಯವಿದ್ದು, ಇದರ ಹೊರಭಿತ್ತಿ ಮತ್ತು ಆವರಣದಲ್ಲಿ ಕೆಲವು ಉಬ್ಬುಶಿಲ್ಪ ಮತ್ತು ಬಿಡಿ ಶಿಲ್ಪಗಳಿವೆ. ದೇವಾಲಯವನ್ನು ಸಾಕಷ್ಟು ನವೀಕರಿಸಿರುವುದರಿಂದ, ಪ್ರಾಚೀನ ಕುರುಹುಗಳು ಅಷ್ಟಾಗಿ ಈಗ ಉಳಿದಿಲ್ಲ.

ಬೆಳ್ಳಟ್ಟಿಯಲ್ಲಿ ಹಲವಾರು ಶಾಸನಗಳಿರುವುದಾಗಿ ವರದಿಯಾಗಿದೆ. ಆದರೆ, ಇಂದು ಕೆಲವು ಮಾತ್ರ ಲಭ್ಯವಿದೆ. ಶಾಸನಗಳಲ್ಲಿ ಬೆಳ್ಳಟ್ಟಿ ಎಂದು ಉಲ್ಲೇಖಿತವಾಗಿರುವ ಈ ಊರು ಪ್ರಾಚೀನ ಕಪ್ಪಲಟ್ಟಿ, ಬೆಳ್ಳಟ್ಟಿ, ಮುಂತಾದ ಎರಡೂ ಅಥವಾ ಮೂರು ಗ್ರಾಮಗಳೂ ಸೇರಿ ಬೆಳ್ಳಟ್ಟಿ ಆಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಜೋಗಿ ಬಂಡೆಯ ಮೇಲಿನ ಕ್ರಿ.ಶ. ೯೯೦ರ ಶಾಸನವು (ಧಾ.ಜಿ.ಶಾ.ಸೂ, ಸಂ.ಸಿ.೮, ಪು.೩೬) ಅತ್ಯಂತ ಪ್ರಾಚೀನವಾಗಿದ್ದು, ಅದು ಪೆರ್ಗ್ಗಡೆ ಅಮ್ಮ ವರ್ಮನು ಬೆಳ್ಳಟ್ಟಿ ಗಣದ ಬಸದಿ ನಿರ್ಮಿಸಿದನೆಂದು ತಿಳಿಸುತ್ತದೆ. ಕ್ರಿ.ಶ. ಸು. ೧೨ನೆಯ ಶತಮಾನದ ಯಲ್ಲಮ್ಮ ದೇವಾಲಯದ ಗೋಡೆಯ ವೀರಗಲ್ಲು ಶಾಸನವು ತ್ರುಟಿತ ಹಾಗೂ ಅಸ್ಪಷ್ಟವಾಗಿದೆ (ಧಾ.ಜಿ.ಶಾ.ಸೂ, ಸಂ.ಸಿ.೯, ಪು. ೩೬). ಹೊಯ್ಸಳರ ಅರಸ ಇಮ್ಮಡಿ ನರಸಿಂಹನ ಕಾಲದ ಶಾಸನವು (ಧಾ.ಜಿ.ಸೂ, ಸಿ. ಸಂ. ೧೦. ಪು. ೩೬) ಮಾಧವ ದೇವರ ಪ್ರತಿಷ್ಠ ಮಾಡಿ ದಾನ ನೀಡಿದ ವಿಷಯವನ್ನು ದಾಖಲಿಸಿದೆ. ಕ್ರಿ.ಶ. ಸು. ೧೫ನೇ ಶತಮಾನದ ಶಾಸನವು (ಧಾ.ಜಿ.ಶಾ.ಸೂ, ಸಂ.ಸಿ. ೧೧, ಪು. ೩೬) ಮಲ್ಲಿಕಾರ್ಜುನ ದೇವಾಲಯದ ಭೂಮಿಯ ಸೀಮಾ ವಿವರಗಳನ್ನು ನೀಡುತ್ತದೆ. ಮತ್ತೊಂದು ಶಾಸನವು (ಧಾ.ಜಿ.ಶಾ.ಸೂ, ಸಂ. ಸಿ. ೧೨, ಪು. ೩೬) ಕ್ರಿ.ಶ. ಸುಮಾರು ೧೬ನೇ ಶತಮಾನಕ್ಕೆ ಸೇರಿದ್ದು ಇದು ಭಂಡಿವಾಡೆಯ ನಾಯಕಾದಿಗಳು ಸವಣೂರ ಸೀಮೆಯಲ್ಲಿ ಭೂದಾನ ಮಾಡಿದ ವಿಷಯವನ್ನು ತಿಳಿಸುತ್ತದೆ.

ಊರ ಗುಡ್ಡದ ಬಳಿ ಇರುವ ಬಸದಿಯು ಬೆಳ್ಳಟ್ಟಿ ಗಣದ ಬಸದಿಯಾಗಿದೆ. ಇಂದು ಈ ಕಬಸದಿಯನ್ನು ಪೂರ್ಣವಾಗಿ ನವೀಕರಿಸಿರುವುದರಿಂದ ಅದರಲ್ಲಿ ಪ್ರಾಚೀನ ಕುರುಹುಗಳು ಯಾವುದೂ ಉಳಿದಿಲ್ಲ. ಇಲ್ಲಿ ತೀರ್ಥಂಕರರ ಕೆಲವು ಮೂರ್ತಿಶಿಲ್ಪಗಳಿವೆ.