೨೧

ಊರು ಲಕ್ಷ್ಮೇಶ್ವರ
ಸ್ಮಾರಕ ಬಾಳೇಶ್ವರ
ಸ್ಥಳ ಊರಿನಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹ, ಅಂತರಾಳ ನವರಂಗ ಹಾಗೂ ಮುಖಮಂಟಪಗಳನ್ನು ಈ ದೇವಾಲಯ ಹೊಂದಿದೆ. ಗರ್ಭಗೃಹವು ಚೌಕಾಕಾರವಾಗಿದ್ದು, ಅದರಲ್ಲಿ ದೊಡ್ಡ ಶಿವಲಿಂಗವಿದೆ. ಗರ್ಭಗೃಹದ ಬಾಗಿಲವಾಡವು ಅಧಿಕ ಅಲಂಕರಣೆಗಳಿಲ್ಲದೆ ಇರುವುದು ಕಂಡುಬರುತ್ತದೆ. ಅಂತರಾಳ ಭಾಗವು ಗರ್ಭಗೃಹವನ್ನು ನವರಂಗದಿಂದ ಬೇರ್ಪಡಿಸುತ್ತದೆ. ಇದರ ಬಾಗಿಲವಾಡವು ಸರಳವಾಗಿದೆ. ಇಡೀ ದೇವಾಲಯವು ಎತ್ತರದ ಜಗತಿಯ ಮೇಲೆ ಇದೆ. ಈ ದೇವಾಲಯದ ಹೊರ ಭಿತ್ತಿಯಲ್ಲಿ ಅಧಿಕ ಅಲಂಕರಣೆಗಳು ಇರುವುದು ಗಮನಾರ್ಹ. ದೇವಾಲಯದ ಒಳಭಾಗದಲ್ಲಿ ಅಷ್ಟಾಗಿ ಅಲಂಕರಣೆಗಳು ಕಾಣಸಿಗುವುದಿಲ್ಲ. ಹೊರ ಭಿತ್ತಿಯ ಶಿಲ್ಪಗಳು ಬಾದಾಮಿ ಚಾಲುಕ್ಯ ಮತ್ತು ರಾಷ್ಟ್ರಕೂಟರ ಕಾಲದ ಶಿಲ್ಪ ಲಕ್ಷಣಗಳನ್ನು ಹೊಂದಿದ್ದು, ಅವುಗಳು ಅವರ ಕಾಲದಲ್ಲಿಯೇ ರಚನೆಗೊಂಡಿರುವಂತೆ ಭಾಸವಾಗುತ್ತವೆ. ಇಲ್ಲಿರುವ ಕೆಲವು ಶಿಲ್ಪಗಳು, ಮುಖ್ಯವಾಗಿ ಮಕರಗಳು ಲಕ್ಷ್ಮೇಶ್ವರದಲ್ಲಿರುವ ಬಾದಾಮಿ ಚಾಲುಕ್ಯರ ಕಾಲದ್ದೆಂದು ಪರಿಗಣಿಸಲಾಗಿರುವ ಶಂಖ ಬಸದಿಯ ಮಕರಗಳನ್ನು ಹೋಲುವುದು ವಿಶಿಷ್ಟವಾಗಿದೆ.

ನವರಂಗದಲ್ಲಿ ನಾಲ್ಕು ಕಂಬಗಳಿದ್ದು, ಅವುಗಳು ಛಾವಣಿಯ ಭುವನೇಶ್ವರಿಯನ್ನು ಆಧರಿಸಿವೆ. ನಾಲ್ಕು ಕಂಬಗಳು ಘನಾಕೃತಿಯ ಕಂಬಗಳಾಗಿವೆ. ಇದರ ಮುಂಭಾಗದಲ್ಲಿ ಮುಖಮಂಟಪವಿದ್ದು, ಅದರಲ್ಲಿ ಎರಡು ಕಂಬಗಳಿವೆ.

ದೇವಾಲಯದ ಹೊರಭಿತ್ತಿಯಲ್ಲಿ ಅನೇಕ ಉಬ್ಬುಶಿಲ್ಪಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಅಷ್ಟಭುಜ ನಟರಾಜ, ಗಜಸಂಹಾರಮೂರ್ತಿ (ಗಜಾಸುರ), ನಾಟ್ಯ ಗಣಪತಿ, ಕಾಳಿ, ಮಹಿಷಾಸುರಮರ್ದಿನಿ, ಅರ್ಧನಾರೀಶ್ವರ, ವೃಷಭಾರೂಢಶಿವ, ಉಗ್ರನರಸಿಂಹ, ಮುಂತಾದವು ಸೇರಿವೆ. ಇವುಗಳ ವಿನ್ಯಾಸ ಮತ್ತು ಶೈಲಿಯು ಕಲ್ಯಾಣ ಚಾಲುಕ್ಯರ ಪೂರ್ವ ಕಾಲಕ್ಕೆ ಸೇರುತ್ತವೆ. ಶಿಲ್ಪದ ದೃಷ್ಟಿಯಿಂದ, ಈ ದೇವಾಲಯವನ್ನು ಕಲ್ಯಾಣ ಚಾಲುಕ್ಯರ ಪ್ರಾರಂಭ ಕಾಲಕ್ಕೆ ಸೇರಿಸಬಹುದಾಗಿದೆ.

೨೨

ಊರು ಲಕ್ಷ್ಮೇಶ್ವರ
ಸ್ಮಾರಕ ಸಹಸ್ರಲಿಂಗ
ಸ್ಥಳ ಗ್ರಾಮದಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹ ಮತ್ತು ಅಂತರಾಳ ಭಾಗಗಳನ್ನು ದೇವಾಲಯ ಹೊಂದಿದೆ. ಗರ್ಭಗೃಹದಲ್ಲಿ ಚಾಲುಕ್ಯ ಶೈಲಿಯ ಪೀಠದ ಮೇಲೆ ಶಿವಲಲಿಂಗವಿದೆ. ಅದರ ರುದ್ರಭಾಗದಲ್ಲಿ ೯೯೯ ಕಿರುಲಿಂಗಗಳನ್ನು ಕೆತ್ತಿದ್ದಾರೆ. ಅಂತರಾಳದ ಬಲ ಹಾಗೂ ಎಡ ಗೋಡೆಗಳ ಕಲ್ಲು ಸರಿದು ಕೆಳಗೆ ಬಿದ್ದು, ಶಿಥಿಲಾವಸ್ಥೆಯಲ್ಲಿದೆ. ಅಂತರಾಳದ ಬಾಗಿಲ ಇಕ್ಕೆಲಗಳಲ್ಲಿ ಜಾಲಾಂಧ್ರಗಳು ಇದ್ದ ಬಗ್ಗೆ ಕುರುಹುಗಳಿವೆ. ಇಂದು ಅವುಗಳು ಇಲ್ಲ. ಗರ್ಭಗೃಹದ ಹೊರ ಭಿತ್ತಿಯಲ್ಲಿ ಕೆಲವು ದೇವತೆಗಳ ಉಬ್ಬುಶಿಲ್ಪಗಳಿವೆ. ದೇವಾಲಯಕ್ಕೆ ಅಧಿಷ್ಠಾನ ಮತ್ತು ಶಿಖರ ಭಾಗಗಳಿಲ್ಲ. ಸಮೀಪದ ಬಸವ ವಿಗ್ರಹದ ಪಾದಪೀಠದಲ್ಲಿನ ಕ್ರಿ.ಶ. ಸುಮಾರು ೧೨ನೇ ಶತಮಾನದ ಶಾಸನವು (ಧಾ.ಜಿ.ಶಾ. ಸೂ, ಸಂ. ಸಿ.೫೯, ಪು. ೩೮; SII, XX, No. 205) ಬಾಚಿರಾಜನು ವಾಗ್ದೇವಿಯನ್ನು ಪ್ರತಿಷ್ಠಾಪಿಸಿದನೆಂದು ದಾಖಲಿಸಿದೆ.

೨೩

ಊರು ಲಕ್ಷ್ಮೇಶ್ವರ
ಸ್ಮಾರಕ ಲಕ್ಷ್ಮೇಶ್ವರ (ಲಕ್ಷ್ಮೀಲಿಂಗ ಗುಡಿ)
ಸ್ಥಳ ಊರ ಹಿರೇಬಣದಲ್ಲಿ
ಕಾಲ ಕ್ರಿ.ಶ.೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ ರಾ.ಪು.ಇ

ಇದು ತ್ರಿಕೂಟ ದೇವಾಲಯ. ಈ ದೇವಾಲಯದ ಹೆಸರಿನಿಂದಲೇ ಈ ಊರಿಗೆ ಲಕ್ಷ್ಮೇಶ್ವರ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ದೇವಾಲಯದಲ್ಲಿ ತಲಾ ಮೂರು ಗರ್ಭಗೃಹಗಳು ಹಾಗೂ ಅಂತರಾಳಗಳು ಮತ್ತು ಒಂದು ನವರಂಗವಿದೆ. ಇದರ ಮುಂಭಾಗದಲ್ಲಿ ಮುಖಮಂಟಪವಿದೆ. ಮುಖ್ಯ ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಶಿವಲಿಂಗವಿದೆ. ಗರ್ಭಗೃಹದ ಬಾಗಿಲವಾಡವು ಸಹ ಅಲಂಕರಣೆಯನ್ನು ಹೊಂದಿರುವುದರೊಂದಿಗೆ ಅದರ ಇಕ್ಕೆಲಗಳಲ್ಲಿಯೂ ಜಾಲಾಂಧ್ರಗಳನ್ನು ಕಾಣಬಹುದು. ಬಾಗಿಲ ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ಎಡಭಾಗದಲ್ಲಿರುವ, ಅಂದರೆ ಉತ್ತರಾಭಿ ಮುಖವಾಗಿರುವ ಗರ್ಭಗೃಹದ ಬಾಗಿಲವಾಡವು ಸಹ ಅಲಂಕರಣೆಗಳು ಮತ್ತು ಜಾಲಾಂಧ್ರಗಳನ್ನು ಹೊಂದಿವೆ. ಗರ್ಭಗೃಹದಲ್ಲಿ ಶಿವಲಿಂಗ ಅಥವಾ ಇನ್ನಾವುದೇ ಮೂರ್ತಿಶಿಲ್ಪಗಳಿಲ್ಲ. ಇದನ್ನು ಹೋಲುವಂತೆಯೇ ದಕ್ಷಿಣಾಭಿಮುಖದ ಗರ್ಭಗೃಹದ ಬಾಗಿಲವಾಡವು ಅಲಂಕರಣೆಗಳು ಮತ್ತು ಜಾಲಾಂಧ್ರಗಳನ್ನು ಹೊಂದಿವೆ. ಚಾಲುಕ್ಯ ಶೈಲಿಯ ಕಂಬಗಳು ಭುವನೇಶ್ವರಿಯನ್ನು ಆಧರಿಸಿವೆ. ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರು, ಸಂಗೀತಗಾರರು, ಸಪ್ತಮಾತೃಕೆಯರ ಹಾಗೂ ಕಮಲದ ಹೂವಿನ ಉಬ್ಬುಶಿಲ್ಪ ಹಾಗೂ ಕೆತ್ತನೆಗಳಿವೆ. ನವರಂಗದ ನಾಲ್ಕು ದಿಕ್ಕುಗಳಲ್ಲಿ ಪ್ರವೇಶ ದ್ವಾರಗಳಿವೆ. ಅಂತರಾಳದ ದ್ವಾರ ಲಲಾಟದಲ್ಲಿ ಜೈನ ತೀರ್ಥಂಕರ ಉಬ್ಬುಶಿಲ್ಪಗಳಿವೆ. ನವರಂಗದ ಮುಂಭಾಗದ ಮುಖಮಂಟಪದಲ್ಲಿ ಅನೇಕ ಅಲಂಕೃತ ಕಂಬಗಳಿವೆ. ಇದಕ್ಕೆ ಮೂರು ದಿಕ್ಕುಗಳಲ್ಲೂ ಪ್ರವೇಶ ದ್ವಾರಗಳನ್ನು ಅಳವಡಿಸಲಾಗಿದೆ. ಈ ಮಂಟಪದಲ್ಲಿರುವ ಸೂರಿನ ಭುವನೇಶ್ವರಿಯಲ್ಲಿ ಅಧಿಕ ಅಲಂಕರಣೆಗಳನ್ನು ಕೆತ್ತಲಾಗಿದೆ. ದೇವಾಲಯಕ್ಕೆ ಅಧಿಷ್ಠಾನವಿದ್ದು ಅದರಲ್ಲಿ ವಿವಿಧ ಅಲಂಕಾರಿಕ ಪಟ್ಟಿಗಳಾದ ಹಂಸಲತೆಗಳು, ಮಣಿಸರ ಮುಂತಾದವುಗಳಿವೆ. ದೇವಾಲಯದ ಹೊರ ಭಿತ್ತಿಯಲ್ಲಿ ವಿಷ್ಣು, ಶಿವ, ಮುಂತಾದ ಪ್ರಮುಖ ದೇವತೆಗಳ ಉಬ್ಬುಶಿಲ್ಪಗಳಿವೆ. ಕೆಲವು ದೇವಕೋಷ್ಟಗಳಿದ್ದು, ಅದರಲ್ಲಿ ಯಾವುದೇ ಮೂರ್ತಿಶಿಲ್ಪಗಳಿಲ್ಲ. ನವರಂಗದ ದಕ್ಷಿಣ ಭಿತ್ತಿಯಲ್ಲಿ ಅನೇಕ ಮಿಥುನ ಶಿಲ್ಪಗಳಿವೆ. ಇದೇ ಊರಿನ ಶಂಖ ಬಸದಿಯಲ್ಲಿಯೂ ಇಂತಹ ಮಿಥುನ ಶಿಲ್ಪಗಳಿವೆ. ಶಂಖ ಬಸದಿ ಮತ್ತು ಸೋಮನಾಥ ದೇವಾಲಯದಂತೆಯೇ ಈ ಗುಡಿಯು ದೊಡ್ಡ ಸಂಕೀರ್ಣ ದೇವಾಲಯವಾಗಿದೆ. ಸದರಿ ದೇವಾಲಯದಲ್ಲಿ ಅನೇಕ ಶಾಸನಗಳಿವೆ. ಕಲಚುರಿ ಸಂಕಮ ಆಳ್ವಿಕೆಯ ಕಾಲದ ಶಾಸನವು (ಕ್ರಿ.ಶ. ೧೧೭೯) (ಧಾ.ಜಿ.ಶಾ.ಸೂ, ಸಂ. ಸಿ. ೫೭), ಪು. ೩೮; SII, xx, No. 167) ಲಕ್ಷಣೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕಾಗಿ ತ್ರಿಲೋಚನ ಪಂಡಿತರಿಗೆ ದಾನ ನೀಡಿದುದನ್ನು ದಾಖಲಿಸಿದೆ. ನವರಂಗದ ಛಾವಣಿಯಲ್ಲಿನ ಶಾಸನವು (ಧಾ.ಜಿ.ಶಾ.ಸೂ, ಸಂ. ಸಿ.೩೧, ಪು.೩೭) ರಾಷ್ಟ್ರಕೂಟ ಮೂರನೇ ಇಂದ್ರನ ಕಾಲಕ್ಕೆ ಸೇರಿದುದಾಗಿದೆ. ಅದರ ತೇದಿಯು ಕ್ರಿ.ಶ. ೯೭೧. ಇದು ನಾಗಗಾವುಂಡ, ಚಾವುಂಡನಾಯಕ ಮತ್ತು ಪುಲಿಗೆರೆ ಮುನ್ನೂರಮ್ಮ ಉಲ್ಲೇಖಿಸುತ್ತದೆ. ದೇವಾಲಯವನ್ನು ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಿದ್ದು, ನಂತರದ ಅರಸು ಮನೆತನಗಳು ಹಲವಾರು ವಾಸ್ತು ಭಾಗಗಳನ್ನು ದೇವಾಲಯಕ್ಕೆ ಅಳವಡಿಸಿ, ವಿಸ್ತರಿಸಿರುವುದನ್ನು ಕಂಡುಕೊಳ್ಳಬಹುದು.

೨೪

ಊರು ಲಕ್ಷ್ಮೇಶ್ವರ
ಸ್ಮಾರಕ ಈಶ್ವರ (ಅಗ್ನಿಸೋಮೇಶ್ವರ)
ಸ್ಥಳ ಡಾ.ಮಲ್ಲಾಡ ಕಾಲನಿ ಹಿಂದೆ
ಕಾಲ  ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಹೊಂದಿದೆ. ಸದರಿ ದೇವಾಲಯವನ್ನು ಅಗ್ನಿಸೋಮೇಶ್ವರ ಮತ್ತು ಬಸವಣ್ಣನ ಗುಡಿಯೆಂದು ಸ್ಥಳೀಯರು ಕರೆಯುತ್ತಾರೆ. ಗರ್ಭಗೃಹದಲ್ಲಿ ಪ್ರಾಚೀನ ಕಾಲದ ಶಿವಲಿಂಗವಿದೆ. ಅದರ ಭಿತ್ತಿಯಲ್ಲಿ ಎರಡು ಕಡೆ ಕಟ್ಟೆಯಿದೆ. ಅಂತರಾಳದ ಬಾಗಿಲವಾಡವು ಸರಳವಾಗಿದೆ. ಅದರ ಮುಂಭಾಗದಲ್ಲಿ ನವರಂಗವಿದ್ದು ಅದಕ್ಕೆ ದಕ್ಷಿಣ ಗೋಡೆಯಲ್ಲಿ ದ್ವಾರವಿದೆ. ಅದನ್ನು ಈಗ ಇಟ್ಟಿಗೆಗಳಿಂದ ಮುಚ್ಚಲಾಗಿದೆ. ನವರಂಗದ ಪೂರ್ವಾಭಿಮುಖ (ಅಂತರಾಳ) ಗೋಡೆಯಲ್ಲಿ ದ್ವಾರದ ಪಕ್ಕ ಎರಡು ಖಾಲಿ ದೇವಕೋಷ್ಟಗಳಿವೆ. ನವರಂಗದ ಮಧ್ಯ ಭಾಗದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳಿದ್ದು, ಅದರ ಕೆಳಗೆ ವೇದಿಕೆಯಿದೆ. ವೇದಿಕೆಯ ಮಧ್ಯ ನಂದಿ (ಬಸವ) ಯ ಶಿಲ್ಪವಿದೆ. ನವರಂಗದ ಛಾವಣಿಯಲ್ಲಿ ಕಮಲ ದಳದ ಭುವನೇಶ್ವರಿಯಿದೆ. ನವರಂಗ ದ್ವಾರದ ಲಲಾಟದಲ್ಲಿ ಯಾವ ಬಿಂಬವೂ ಇಲ್ಲ. ದ್ವಾರದ ಇಕ್ಕೆಲಗಳಲ್ಲಿ ಕಕ್ಷಾಸನವಿದ್ದು, ಅದರಲ್ಲಿ ಎರಡು ಕಂಬಗಳು ಇವೆ. ದೇವಾಲಯದ ಅಧಿಷ್ಠಾನವು ಭಾಗಶಃ ಕಂಡುಬರುತ್ತದೆ. ಏಳು ತಲಗಳ ಕದಂಬ ನಾಗರ ಶಿಖರವಿದೆ. ಅದರ ಮೇಲಿನ ತಲಗಳಲ ಶಿಖರ ಹಾಗೂ ಸ್ತೂಪಿಗಳು ಪ್ರಸ್ತುತ ಇಲ್ಲ. ಈ ದೇವಾಲಯದ ಲಲಾಟದಲ್ಲಿ ಜಿನಬಿಂಬಿವಿದೆ ಆದ್ದರಿಂದ, ಇದು ಮೊದಲಿಗೆ ಜೈನ ಬಸದಿಯಾಗಿತ್ತೆಂದು ಹೇಳಬಹುದು ಎಂದು ಧಾರವಾಡ ಜಿಲ್ಲಾ ಗ್ಯಾಸೆಟಿಯರ್ ನಲ್ಲಿ (ಪು.೧೦೧೧) ಉಲ್ಲೇಖಿಸಲಾಗಿದೆ.

೨೫

ಊರು ಲಕ್ಷ್ಮೇಶ್ವರ
ಸ್ಮಾರಕ ಓಗಲಿಂಗೇಶ್ವರ
ಸ್ಥಳ ಊರಿನ ಪ್ರಧಾನ ಅಂಚೆ ಕಛೇರಿ ಹಿಂಭಾಗ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಈ ದೇವಾಲಯ ಹೊಂದಿದೆ. ಗರ್ಭಗೃಹದ ಬಾಗಿಲವಾಡವು ಸರಳವಾಗಿದ್ದು, ಲಲಾಟದಲ್ಲಿ ಉಬ್ಬುಶಿಲ್ಪವಿಲ್ಲ. ಗರ್ಭ ಗೃಹದಲ್ಲಿ ಒಂದು ಗದ್ದುಗೆಯಿದೆ. ಇದನ್ನೇ ಈಗ ಓಗಲಿಂಗೇಶ್ವರ ದೇವರೆಂದು ಪೂಜಿಸಲಾಗುತ್ತಿದೆ. ಈ ಗದ್ದುಗೆಯನ್ನು ನಂತರ ಕಾಲದಲ್ಲಿ ನಿರ್ಮಿಸಿರಬೇಕು. ಗರ್ಭಗೃಹದ ಮುಂಭಾಗದಲ್ಲಿ ಅಂತರಾಳವಿದ್ದು. ಅದರ ಬಾಗಿಲವಾಡವು ಸಹ ಸರಳವಾಗಿದೆ. ಅದರ ಲಲಾಟದಲ್ಲಿಯೂ ಸಹ ಉಬ್ಬುಶಿಲ್ಪವಿಲ್ಲ.

ನವರಂಗದಲ್ಲಿ ನಾಲ್ಕು ಕಂಬಗಳು ಮಧ್ಯ ಭಾಗದಲ್ಲಿದ್ದು, ಅವುಗಳು ಛಾವಣಿಯ ಭುವನೇಶ್ವರಿಯ ಭಾಗವನ್ನು ಆಧರಿಸಿವೆ. ಕೆಳಭಾಗದಲ್ಲಿ ಕಂಬಗಳ ನಡುವೆ ವೇದಿಕೆಯಿದೆ. ನವರಂಗದ ಕಂಬಗಳು ಕಲ್ಯಾಣ ಚಾಲುಕ್ಯ ಶೈಲಿಯದಾಗಿದೆ. ನವರಂಗದ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಕಕ್ಷಾಸನ ಕಟ್ಟೆಯಿದೆ. ಅದರಲ್ಲಿ ಎರಡು ಕಂಬಗಳಿವೆ. ಈ ಭಾಗವನ್ನು ಪ್ರವೇಶ ಮಂಟಪವೆಂದು ಕರೆಯಬಹುದು ಮತ್ತು ಇದು ಮುಖ್ಯ ಗುಡಿಗೆ ಸೇರಿದಂತೆಯೇ ಇದೆ. ಗುಡಿಯ ಮುಂಭಾಗ ಎರಡು ಕಟ್ಟೆಗಳಿವೆ. ಬಹುಶಃ ಇವು ಗದ್ದುಗೆಗಳಿರಬೇಕು. ದೇವಾಲಯವು ಒಂದು ಹುಟ್ಟು ಬಂಡೆಯ ಮೇಲೆ ನಿರ್ಮಿಸಲಾಗಿದೆ. ದೇವಾಲಯದ ಅಧಿಷ್ಠಾನ ಭಾಗವು ಕಂಡುಬರುತ್ತದೆ ಹಾಗೂ ಇದಕ್ಕೆ ಕದಂಬ ನಾಗರ ಶೈಲಿಯ ತಲಗಳಿವೆ. ಪ್ರಸ್ತುತ ಶಿಖರ ಭಾಗವು ಇಲ್ಲ. ಈ ದೇವಾಲಯವು ಅತ್ಯಂತ ಹೀನ ಸ್ಥಿತಿಯಲ್ಲಿದ್ದಿದ್ದು, ಇತ್ತೀಚಿನ ದಿನಗಳಲ್ಲಿ ಕೆಲವು ಆಸಕ್ತರು ದೇವಾಲಯವನ್ನು ಸ್ವಚ್ಛಗೊಳಿಸಿ, ಸಿಮೆಂಟ್‌ ಬಳಸಿ ಚಿಕ್ಕ ಪುಟ್ಟ ರಿಪೇರಿಗಳನ್ನು ಮಾಡುತ್ತಿದ್ದಾರೆ. ಗುಡಿಯ ಆವರಣವನ್ನು ಸ್ವಚ್ಛವಾಗಿ ಇಡುವುದರೊಂದಿಗೆ ಅದರ ಸಂರಕ್ಷಣೆಯನ್ನು ಸಹ ಅವರಿಗೆ ತಿಳಿದಂತೆ ಮಾಡುತ್ತಿದ್ದಾರೆ.

೨೬

ಊರು ಲಕ್ಷ್ಮೇಶ್ವರ
ಸ್ಮಾರಕ ಈಶ್ವರ (ಮೂಗ ಬಸವಣ್ಣ)
ಸ್ಥಳ ಹುಬ್ಬಳ್ಳಿ ರಸ್ತೆಯ ಬಲಭಾಗದಲ್ಲಿ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ ರಾ.ಪು.ಇ

ಚೌಕಾಕಾರ ಗರ್ಭಗೃಹ ಮತ್ತು ತೆರೆದ ಅರ್ಧಮಂಟಪವು ಈ ದೇವಾಲಯಕ್ಕಿದೆ. ಗರ್ಭಗೃಹದಲ್ಲಿ ಪ್ರಾಚೀನ ಕಾಲದ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗ ಮತ್ತು ಅದರ ಮುಂದೆ ಬಸವನ ಶಿಲ್ಪವಿದೆ. ಗರ್ಭಗೃಹದ ಗಿಡ್ಡ ಬಾಗಿಲವಾಡವು ಸರಳವಾಗಿದೆ. ಅದರ ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ಅರ್ಧಮಂಟಪದಲ್ಲಿ ಸರಳ, ವೃತ್ತಾಕಾರದ ಎರಡು ಕಿರು ಕಂಬಗಳಿವೆ. ಕೆಳಭಾಗದಲ್ಲಿ ಚೌಕಾಕಾರವಾಗಿದ್ದು, ನಡುವಿನಲ್ಲಿ ಪಟ್ಟಿಯನ್ನು ಗಮನಿಸಬಹುದು. ಅದರ ಮೇಲ್ಭಾಗದಲ್ಲಿ ಫಲಕವಿದೆ. ಅರ್ಧಮಂಟಪದ ಮುಂದಿನ ಭಾಗದ ಉತ್ತರ ಮತ್ತು ದಕ್ಷಿಣದ ಗೋಡೆಗಳನ್ನು ಚಕ್ಕೆ ಕಲ್ಲುಗಳಿಂದ ವಿಸ್ತರಿಸಲಾಗಿದೆ. ಅದರ ನೆಲಕ್ಕೆ ಕಡಪ ಕಲ್ಲುಗಳನ್ನು ಹಾಸು ಬಂಡೆಗಳಾಗಿ ಬಳಸಲಾಗಿದೆ. ದೇವಾಲಯದ ಅಧಿಷ್ಠಾನದ ಭಾಗವು ಭಾಗಶಃ ಕಾಣಬರುತ್ತದೆ. ಕಲ್ಲಿನ ಈ ದೇವಾಲಯಕ್ಕೆ ಪಿರಮಿಡ್‌ ಆಕಾರದ ತಲ ಹಾಗೂ ಗೋಲಾಕಾರದ ಶಿಖರ ಮತ್ತು ಸ್ತೂಪಿ ಇವೆ. ಈ ದೇವಾಲಯವು ಅಗ್ನಿಸೋಮೇಶ್ವರ ಗುಡಿಯ ನೇರ ಸರಳ ರೇಖೆಯಲ್ಲಿದೆ. ಇಲ್ಲಿಂದಲೇ ಅಗ್ನಿಸೋಮೇಶ್ವರ ಗುಡಿಯ ನೇರ ಸರಳ ರೇಖೆಯಲ್ಲಿದೆ. ಇಲ್ಲಿಂದಲೇ ಅಗ್ನಿಸೋಮೇಶ್ವರ ಗುಡಿಯನ್ನು ಕಾಣಬಹುದು.

೨೭

ಊರು ಲಕ್ಷ್ಮೇಶ್ವರ
ಸ್ಮಾರಕ ಅಗಸ್ತ್ಯೇಶ್ವರ
ಸ್ಥಳ ಅಗಸ್ತ್ಯ ತೀರ್ಥದ ಬಳಿ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇದು ದ್ವಿಕೂಟ ದೇವಾಲಯ. ನೆಲಮಟ್ಟದಿಂದ ಸ್ವಲ್ಪ ಕೆಳಭಾಗದಲ್ಲಿರುವ ಈ ಗುಡಿಯಲ್ಲಿ ಎರಡು ಗರ್ಭಗೃಹ, ಎರಡು ಅಂತರಾಳ ಮತ್ತು ಒಂದು ನವರಂಗಗಳಿವೆ. ಪೂರ್ವಾಭಿಮುಖ ಗರ್ಭಗೃಹಕ್ಕೆ ಬೀಗ ಹಾಕಲಾಗಿದೆ. ಪಶ್ಚಿಮಾಭಿಮುಖದ ಗರ್ಭದಲ್ಲಿಯೂ ಪ್ರವೇಶ ದ್ವಾರವಿದೆ. ಈ ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಅದರ ಮುಂದಿರುವ ಅಂತರಾಳದಲ್ಲಿ ಬಸವನ ಶಿಲ್ಪವಿದೆ. ಗರ್ಭಗೃಹ ಮತ್ತು ಅಂತರಾಳದ ಬಾಗಿಲವಾಡಗಳು ಸರಳವಾಗಿವೆ. ನವರಂಗದಲ್ಲಿ ನಾಲ್ಕು ಕಂಬಗಳಿದ್ದು, ಅದು ಛಾವಣಿಯನ್ನು ಆಧರಿಸಿವೆ. ಈ ಭಾಗದಲ್ಲಿ ಕಂಬಗಳಲ ನಡುವೆ ವೇದಿಕೆಯು ಸಹ ಇದೆ. ನವರಂಗದ ಉತ್ತರ ಮತ್ತು ದಕ್ಷಿಣ ಗೋಡೆಗಳಲ್ಲಿ ಕಿರು ಪ್ರವೇಶ ದ್ವಾರಗಳಿವೆ. ದೇವಾಲಯದ ಎಲ್ಲಾ ಮೂರು ಬಾಗಿಲುಗಳು ಅತ್ಯಂತ ಕಿರಿದಾಗಿವೆ. ದೇವಾಲಯಕ್ಕೆ ಅಧಿಷ್ಠಾನ ಮತ್ತು ಶಿಖರಗಳಿಲ್ಲ.

ಗುಡಿಯ ಉತ್ತರಕ್ಕೆ, ಮೆಟ್ಟಿಲುಗಳಿರುವ ವಿಶಾಲವಾದ ಬಾವಿಯಿದೆ . ಪೂರ್ವದಲ್ಲಿಯೂ ಆಳವಾದ ಮೆಟ್ಟಿಲುಗಳಿರುವ ಬಾವಿಯಿದೆ. ಉತ್ತರದಲ್ಲಿರುವ ಬಾವಿಯಲ್ಲಿ ಗಂಡಸರು ಮಾತ್ರ ಸ್ನಾನ ಮಾಡಬಹುದೆಂದು ಹಾಗೂ ಪೂರ್ವದ ಬಾವಿಯಲ್ಲಿ ಸ್ತ್ರೀಯರು ಮತ್ರ ಸ್ನಾನಮಾಡಬಹುದು ಹಾಗೂ ಪೂರ್ವದ ಬಾವಿಯಲ್ಲಿ ಸ್ತ್ರೀಯರು ಮತ್ರ ಸ್ನಾನಮಾಡಬಹುದು ಎಂದು ಸ್ಥಳೀಯರು ತಿಳಿಸುತ್ತಾರೆ. ಪೂರ್ವದ ಬಾವಿಯಲ್ಲಿ ಅಸ್ತಿ ಅವಶೇಷಗಳನ್ನು ಸಹ ಹಾಕುತ್ತಾರೆ. ಪ್ರಸ್ತುತ ಎರಡೂ ಬಾವಿಗಳಲ್ಲಿ ನೀರಿಲ್ಲ.

ಮುಖ್ಯ ದೇವಾಲಯದ ಪಕ್ಕದಲ್ಲಿ ಒಂದು ಕೋಣೆಯಿರುವ ಗುಡಿಯಿದೆ. ಇದರ ಬಾಗಿಲವಾಡವು ಸರಳವಾಗಿದೆ. ಗುಡಿಗೆ ಅಧಿಷ್ಠಾನವಿಲ್ಲ. ಗುಡಿಯನ್ನು ಎತ್ತರದ ಜಗತಿಯ ಮೇಲೆ ನಿರ್ಮಿಸಲಾಗಿದೆ. ಗುಡಿಯಲ್ಲಿ ಒಂದು ಶಿಲ್ಪವಿದೆ. ಇದನ್ನು ಹೆಣ್ಣು ದೇವತೆಯೆಂದು ಪೂಜಿಸಲಾಗುತ್ತಿದೆ. ಎರಡೂ ಗುಡಿಗಳ ನಡುವೆ ಶಾಸನದ ಕಲ್ಲು ಇದೆ. ಇಲ್ಲಿನ ಒಂದು ಶಾಸನವು (ಧಾ.ಜಿ.ಶಾ.ಸೂ, ಸಂ. ಸಿ.೮೬, ಪು. ೩೯; SII, XX, No. 420) ಈಚಿನ ಲಿಪಿಯಲ್ಲಿದೆ. ಅದು ತಿಮ್ಮಣ್ಣನು ರಾಮಚಂದ್ರದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿದನೆಂದು ತಿಳಿಸುತ್ತದೆ.

೨೮

ಊರು ಲಕ್ಷ್ಮೇಶ್ವರ
ಸ್ಮಾರಕ ಈಶ್ವರ
ಸ್ಥಳ ಸಹಸ್ರಲಿಂಗ ಗುಡಿಯ ಹತ್ತಿರ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಚೌಕಾಕಾರವಾಗಿರುವ ಕಲ್ಲುಗಳಿಂದ ರಚಿಸಿರುವ ಈ ಗುಡಿಯಲ್ಲಿ ಗರ್ಭಗೃಹ ಒಂದೇ ಇದೆ. ಅದರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಶಿವಲಿಂಗವಿದೆ. ಗುಡಿಯ ಬಾಗಿಲವಾಡವು ಸರಳವಾಗಿದೆ. ದೇವಾಲಯಕ್ಕೆ ಅಧಿಷ್ಠಾನ ಮತ್ತು ಶಿಖರಗಳಿಲ್ಲ.

೨೯

ಊರು ಲಕ್ಷ್ಮೇಶ್ವರ
ಸ್ಮಾರಕ (ಬಾಳೇಶ್ವರ) ಕೋಡಿಯಲ್ಲಮ್ಮ
ಸ್ಥಳ ಊರಿನಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹ, ಅಂತರಾಳ ನವರಂಗ ಹಾಗೂ ಮುಖಮಂಟಪಗಳನ್ನು ಈ ದೇವಾಲಯ ಹೊಂದಿದೆ. ಗರ್ಭಗೃಹವು ಚೌಕಾಕಾರವಾಗಿದ್ದು, ಅದರಲ್ಲಿ ದೊಡ್ಡ ಶಿವಲಿಂಗವಿದೆ. ಗರ್ಭಗೃಹದ ಬಾಗಿಲವಾಡವು ಹೆಚ್ಚಿನ ಅಲಂಕರಣೆಗಳಿಲ್ಲದೆ ಇರುವುದು ಕಂಡುಬರುತ್ತದೆ. ಅಂತರಾಳ ಭಾಗವು ಗರ್ಭಗೃಹವನ್ನು ನವರಂಗದಿಂದ ಬೇರ್ಪಡಿಸುತ್ತದೆ. ಇದರ ಬಾಗಿಲ ವಾಡವು ಸರಳವಾಗಿದೆ. ಇಡೀ ದೇವಾಲಯವು ಎತ್ತರದ ಜಗತಿಯ ಮೇಲೆ ಇದೆ. ಈ ದೇವಾಲಯದ ಹೊರ ಭಿತ್ತಿಯಲ್ಲಿ ಅಧಿಕ ಅಲಂಕರಣೆಗಳು ಇರುವುದು ಗಮನಾರ್ಹ. ದೇವಾಲಯದ ಒಳಭಾಗದಲ್ಲಿ ಅಷ್ಟಾಗಿ ಅಲಂಕರಣೆಗಳು ಕಾಣಸಿಗುವುದಿಲ್ಲ. ಹೊರ ಭಿತ್ತಿಯ ಶಿಲ್ಪಗಳು ಬಾದಾಮಿ ಚಾಲುಕ್ಯ ಮತ್ತು ರಾಷ್ಟ್ರಕೂಟರ ಕಾಲದ ಶಿಲ್ಪ ಲಕ್ಷಣಗಳನ್ನು ಹೊಂದಿದ್ದು, ಅವುಗಳು ಅವರ ಕಾಲದಲ್ಲಿಯೇ ರಚನೆಗೊಂಡಿರುವಂತೆ ಭಾಸವಾಗುತ್ತವೆ. ಇಲ್ಲಿರುವ ಕೆಲವು ಶಿಲ್ಪಗಳು, ಮುಖ್ಯವಾಗಿ ಮಕರಗಳು ಲಕ್ಷ್ಮೇಶ್ವರದಲ್ಲಿರುವ ಬಾದಾಮಿ ಚಾಲುಕ್ಯರ ಕಾಲದ್ದೆಂದು ಪರಿಗಣಿಸಲಾಗಿರುವ ಶಂಖ ಬಸದಿಯ ಮಕರಗಳನ್ನು ಹೋಲುವುದು ವಿಶಿಷ್ಟವಾಗಿದೆ.

ನವರಂಗದಲ್ಲಿ ನಾಲ್ಕು ಕಂಬಗಳಿದ್ದು, ಅವುಗಳು ಛಾವಣಿಯ ಭುವನೇಶ್ವರಿಯನ್ನು ಆಧರಿಸಿವೆ. ನಾಲ್ಕು ಕಂಬಗಳು ಘನಾಕೃತಿಯ ಕಂಬಗಳಾಗಿವೆ. ಇದರ ಮುಂಭಾಗದಲ್ಲಿ ಮುಖಮಂಟಪವಿದ್ದು, ಅದರಲ್ಲಿ ಎರಡು ಕಂಬಗಳಿವೆ.

ದೇವಾಲಯದ ಹೊರಭಿತ್ತಿಯಲ್ಲಿ ಅನೇಕ ಉಬ್ಬುಶಿಲ್ಪಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಅಷ್ಟಭುಜ ನಟರಾಜ, ಗಜಸಂಹಾರಮೂರ್ತಿ (ಗಜಾಸುರ), ನಾಟ್ಯ ಗಣಪತಿ, ಕಾಳಿ, ಮಹಿಷಾಸುರಮರ್ದಿನಿ, ಅರ್ಧನಾರೀಶ್ವರ, ವೃಷಭಾರೂಢಶಿವ, ಉಗ್ರನರಸಿಂಹ, ಮುಂತಾದವು ಸೇರಿವೆ. ಇವುಗಳ ವಿನ್ಯಾಸ ಮತ್ತು ಶೈಲಿಯು ಕಲ್ಯಾಣ ಚಾಲುಕ್ಯರ ಪೂರ್ವ ಕಾಲಕ್ಕೆ ಸೇರುತ್ತವೆ. ಶಿಲ್ಪದ ದೃಷ್ಟಿಯಿಂದ, ಈ ದೇವಾಲಯವನ್ನು ಕಲ್ಯಾಣ ಚಾಲುಕ್ಯರ ಪ್ರಾರಂಭ ಕಾಲಕ್ಕೆ ಸೇರಿಸಬಹುದಾಗಿದೆ.

೩೦

ಊರು ಲಕ್ಷ್ಮೇಶ್ವರ
ಸ್ಮಾರಕ ಈಶ್ವರ
ಸ್ಥಳ ಶಿಗ್ಲಿನಾಕ (ಹಜರತ್‌ ಸಯ್ಯದ್‌ ಮಲ್ಲಿಕ್‌ ದರ್ಗಾ)
ಕಾಲ ಕ್ರಿ.ಶ. ೧೭-೧೮ನೇ ಶತಮಾನ
ಶೈಲಿ ಸ್ಥಳೀಯ
ಅಭಿಮುಖ ಉತ್ತರ
ಸ್ಥಿತಿ ಕನಿಷ್ಠ
ಸಂರಕ್ಷಣೆ ಲಕ್ಷ್ಮೇಶ್ವರ

ಗರ್ಭಗೃಹ ಮಾತ್ರವೇ ಇರುವ ಈ ದೇವಾಲಯದಲ್ಲಿ ಶಿವಲಿಂಗವಿದೆ. ಗುಡಿಗೆ ಬಾಗಿಲವಾಡವು ಸರಳವಾಗಿದ್ದು, ಅಲಂಕರಣೆಗಳಿಲ್ಲದ ಸಾದಾ ಅಧಿಷ್ಠಾನವಿದೆ. ಗುಡಿಗೆ ಪಿರಮಿಡ್‌ ಆಕಾರದ ತಲಗಳು, ಗೋಲಾಕಾರದ ಶಿಖರವಿದೆ. ಈ ಗುಡಿಯ ಪಕ್ಕದಲ್ಲಿ ಇನ್ನೊಂದು ಕಲ್ಲಿನ ಗುಡಿಯಿದ್ದು, ಅದನ್ನು ಮನೆಯಂತೆ ಬಳಸಲಾಗುತ್ತಿದೆ.