೧೧

ಊರು ಮಾಗಡಿ
ಸ್ಮಾರಕ ಉಡಚಮ್ಮ
ಸ್ಥಳ ಮಾಗಡಿ ಶಿರಹಟ್ಟಿ ರಸ್ತೆ
ಕಾಲ ಕ್ರಿ.ಶ. ೧೮ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಇಲ್ಲಿರುವ ಉಡಚಮ್ಮನ ಗುಡಿಯನ್ನು ಪ್ರಾಚೀನ ಕಾಲದ ಅನೇಕ ವಾಸ್ತು ಅವಶೇಷಗಳನ್ನು ಬಳಸಿ ಕಟ್ಟಲಾಗಿದೆ. ಗರ್ಭಗೃಹ ಮತ್ತು ವಿಶಾಲವಾದ ನವರಂಗವನ್ನು ಗುಡಿಯು ಹೊಂದಿದೆ. ಗರ್ಭಗೃಹದಲ್ಲಿ ‘ಸ್ವಯಂಭೂ’ ಉಡಚವ್ವನ ಮೂರ್ತಿಶಿಲ್ಪವಿದೆ. ಗರ್ಭಗೃಹದ ಬಾಗಿಲವಾಡದಲ್ಲಿ ಪಂಚಶಾಖೆಗಳಿವೆ. ಅದರ ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ಈ ಬಾಗಿಲವಾಡವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿದೆ. ನವರಂಗದಲ್ಲಿರುವ ನಾಲ್ಕು ಕಂಬಗಳು ಛಾವಣಿಯ ಭುವನೇಶ್ವರಿಯನ್ನು ಆಧರಿಸಿವೆ. ದೇವಾಲಯಕ್ಕೆ ಅಧಿಷ್ಠಾನವಿಲ್ಲ ಆದರೆ ಇತ್ತೀಚಿನ ಶಿಖರವಿದೆ. ದೇವಾಲಯವು ಒಂದು ಕಾಂಪೌಂಡ್‌ ಆವರಣದಲ್ಲಿದೆ. ಈ ದೇವಾಲಯವನ್ನು ಇಲ್ಲಿಯೇ ಇದ್ದಿರಬಹುದಾದ ಪ್ರಾಚೀನ ದೇವಾಲಯದ ವಾಸ್ತು ಅವಶೇಷಗಳನ್ನು ಬಳಸಿ ಕಟ್ಟಲಾಗಿದೆ ಎಂದರೆ ತಪ್ಪಾಗಲಾರದು. ಗುಡಿಯಲ್ಲಿ ವೀರಗಲ್ಲು ಮತ್ತು ತ್ರುಟಿತ ಶಾಸನ ಕಲ್ಲಿದೆ.

ಗುಡಿಯ ಮುಂದಿರುವ ಕಟ್ಟೆಯ ಬಳಿ ಎರಡು ವೀರಗಲ್ಲುಗಳು ಮತ್ತು ಪೀಠದಲ್ಲಿರುವ ಚತುರ್ಮುಖ ಬ್ರಹ್ಮನ ತಲೆಯ ಭಾಗ ಇವೆ. ಗುಡಿಯ ಮುಂದೆ ವಿಶಾಲವಾದ ಕೆರೆ ಇದೆ. ಇದನ್ನು ಮಾಗಡಿ ಕೆರೆಯೆಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾ, ಚೀನಾ, ಬರ್ಮಾ ಮತ್ತು ಇತರೆ ದೇಶಗಳಿಂದ ಸಾವಿರಾರು ಪಕ್ಷಿಗಳು ಪ್ರತಿ ವರ್ಷ ನವೆಂಬರ್ ತಿಂಗಳಿಂದ ಫೆಬ್ರವರಿ ತಿಂಗಳವರೆಗೆ ವಲಸೆ ಬರುತ್ತವೆ. ಈ ಕೆರೆಯನ್ನು ಸುಂದರ ಪಕ್ಷಿಧಾಮವನ್ನಾಗಿಸುವ ಪ್ರಯತ್ನವನ್ನು ಅರಣ್ಯ ಇಲಾಖೆಯು ನಡೆಸುತ್ತಿದೆ. ಈ ಕೆರೆಯು ಇಂದು ವಲಸೆ ಪಕ್ಷಿಗಳಿಗಾಗಿ ಪ್ರಸಿದ್ಧಿಯನ್ನು ಹೊಂದುತ್ತಲಿದೆ.

೧೨

ಊರು ಮಾಗಡಿ
ಸ್ಮಾರಕ ನೀಲಮ್ಮನ ಮಠ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೮-೧೯ನೇ ಶತಮಾನ
ಶೈಲಿ ಸ್ಥಳೀಯ
ಅಭಿಮುಖ ಉತ್ತಮ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಊರ ಮಧ್ಯದಲ್ಲಿರುವ ಈ ದೇವಾಲಯವು ಮನೆಯಂತಿದೆ. ಅದು ಇಂದು ಸಂಪೂರ್ಣವಾಗಿ ಬಿದ್ದಿದೆ. ಪ್ರಸ್ತುತ, ಪ್ರವೇಶ ದ್ವಾರ ಮತ್ತು ಮಣ್ಣಿನ ಗೋಡೆಯು ಉಳಿದಿದೆ. ಮರದ ಕಂಬಗಳು ಹಾಗೂ ಹೆಂಚಿನ ಸೂರು ಎಲ್ಲವೂ ನೆಲದಲ್ಲಿ ಬಿದ್ದಿವೆ. ಇದನ್ನು ಸ್ಥಳೀಯರು ನೀಲಮ್ಮನ ಮಠವೆಂದು ಕರೆಯುತ್ತಾರೆ. ಕಟ್ಟಿಗೆ ಮಡಿಗೆಯ ಈ ಕಟ್ಟಡದಲ್ಲಿ ಪ್ರಾಚೀನ ಕುರುಹುಗಳು ಇಂದು ಉಳಿದಿಲ್ಲ. ಸದರಿ ಕಟ್ಟಡದ ಮುಂದೆ ದೊಡ್ಡ ಶಿಲಾ ಶಾಸನವಿದೆ. ಅದರ ಪಕ್ಕದಲ್ಲಿಯೇ ಭಗ್ನ ಬಸವನ ಶಿಲ್ಪವಿದೆ. ಗುಡಿ ಪಕ್ಕದಲ್ಲಿ ದೊಡ್ಡ ಶಿವಲಿಂಗವು ಸಹ ಇದೆ. ಲಿಂಗ ಮತ್ತು ನಂದಿಯ ಶಿಲ್ಪಗಳು ಕಲ್ಯಾಣ ಚಾಲುಕ್ಯ ಶೈಲಿಯಲ್ಲಿವೆ. ಸಮೀಪದ ಬಾವಿಯ ಬಳಿ ಕೆಲವು ವೀರಗಲ್ಲುಗಳು ಬಿದ್ದಿವೆ.

ಪ್ರಸ್ತುತ ಶಾಸನದ (ಧಾ.ಜಿ.ಶಾ.ಸೂ, ಸಂ.ಸಿ.೧೩, ಪು. ೩೬) ತೇದಿಯು ಕ್ರಿ.ಶ. ೯೭೦ ಆಗಿದೆ. ಛಲದಂಕಕಾರನ ಆಡಳಿತದಲ್ಲಿ ಬಲ್ಲವರಸನು ಬನವಾಸಿಯನ್ನು ಆಳುತ್ತಿದ್ದಾಗ ಸಕಳರಾಶಿ ಪಂಡಿತರಿಗೆ ಕಯಿಕಜ್ಜ ಗ್ರಾಮವನ್ನು ದಾನ ನೀಡಿದ ವಿಷಯವನ್ನು ದಾಖಲಿಸಿದೆ. ಇದರಿಂದ ಈ ಊರು ರಾಷ್ಟ್ರಕೂಟರ ಕಾಲದಲ್ಲಿಯೇ ಅಸ್ಥಿತ್ವದಲ್ಲಿತ್ತು ಎಂಬುದು ತಿಳಿಯಬರುತ್ತದೆ. ಈ ಊರಿಗೆ ಸಮೀಪವಿರುವ ಯಳವತ್ತಿಯಲ್ಲಿರುವ ಕ್ರಿ.ಶ. ೧೧೯೫ರ ಶಾಸನವು (ಧಾ.ಜಿ.ಶಾ.ಸೂ, ಸಂ.ಸಿ.೧೯, ಪು. ೩೬) ಮಾಗಡಿ ಊರನ್ನು ಮಾಗುಂಡಿ ಎಂದು ಉಲ್ಲೇಖಿಸಿದೆ. ವಿಜಯನಗರ ಅರಸ ಕೃಷ್ಣದೇವರಾಯನ ಕಾಲದ ಅಪ್ರಕಟಿತ ಶಾಸನವು ಊರನ್ನು ಮಾಗಡೆ ಎಂದು ದಾಖಲಿಸಿದೆ (ಧಾ.ಜಿ.ಗ್ಯಾ. ಪು.೯೮೮).

೧೩

ಊರು ಮಾಗಡಿ
ಸ್ಮಾರಕ ರಾಮಲಿಕಂಗ
ಸ್ಥಳ ಮಾಗಡಿ-ಶಿರಹಟ್ಟಿ ರಸ್ತೆ
ಕಾಲ ಕ್ರಿ.ಶ.ಸು.೧೯ನೇ ಶತಮಾನ
ಶೈಲಿ ಆಧುನಿಕ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಸಂಪೂರ್ಣವಾಗಿ ಶಿಥಿಲವಾಗಿರುವ ದೇವಾಲಯದ ಗರ್ಭಗೃಹದಲ್ಲಿ ಒಂದು ಲಿಂಗವಿದೆ. ಗರ್ಭಗೃಹದ ಬಾಗಿಲವಾಡವು ಮಾತ್ರವೇ ಉಳಿದಿದ್ದು, ಅದು ಸರಳವಾಗಿದೆ. ಭಿತ್ತಿ ಮತ್ತು ಛಾವಣಿಯು ಇಲ್ಲ. ಕಲ್ಲಿನ ಮಂಟಪವು ಗುಡಿಯ ಪಕ್ಕದಲ್ಲಿದೆ. ಲಿಂಗವು ಕಲ್ಯಾಣ ಚಾಲುಕ್ಯ ಶೈಲಿಯಲ್ಲಿದೆ. ಪಕ್ಕದಲ್ಲಿರುವ ಮಂಟಪವು ಅರ್ಧಭಾಗದಷ್ಟು ನೆಲದಲ್ಲಿ ಹುದುಗಿದೆ.

೧೪

ಊರು ಮಾಚೇನಹಳ್ಳಿ
ಸ್ಮಾರಕ ಸೋಮೇಶ್ವರ
ಸ್ಥಳ ಊರ ಮಧ್ಯೆ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ಪ್ರಾಚೀನ ದೇವಾಲಯವನ್ನು ಪ್ರಸ್ತುತ ನವೀಕರಣಗೊಳಿಸಲಾಗುತ್ತಿದ್ದು, ಬಿದ್ದಿರುವ ನವರಂಗ ಭಾಗವನ್ನು ಸಿಮೆಂಟ್‌ನಿಂದ ಕಟ್ಟಲಾಗುತ್ತಿದೆ. ಗರ್ಭಗೃಹ ಮತ್ತು ಅಂತರಾಳದ ಭಾಗಗಳು ಮಾತ್ರವೇ ಪ್ರಾಚೀನವಾಗಿವೆ. ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದ್ದು ಅದರ ಮುಂದೆ ಇತ್ತೀಚಿನ ಬಸವನ ಶಿಲ್ಪವಿದೆ. ಗರ್ಭಗೃಹದ ಬಾಗಿಲವಾಡವು ಸರಳವಾಗಿದೆ. ಅಂತರಾಳ ಭಾಗದ ಬಾಗಿಲವಾಡವು ಸರಳವಾಗಿದ್ದು, ಲಲಾಟದಲ್ಲಿ ಯಾವ ಮೂರ್ತಿ ಶಿಲ್ಪಗಳು ಇಲ್ಲ. ಬಾಗಿಲವಾಡದ ಇಕ್ಕೆಲಗಳಲ್ಲಿ ಜಾಲಾಂಧ್ರಗಳಿವೆ. ಅವುಗಳಿಗೆ ಪೇಂಟ್‌ ಹಚ್ಚಲಾಗಿರುವುದರಿಂದ ಮೂಲ ವಾಸ್ತು ಸ್ವರೂಪವನ್ನು ಕಳೆದುಕೊಂಡಿವೆ. ನವರಂಗದ ಎಡಬದಿಯಲ್ಲಿ, ಅಂತರಾಳದ ಎರಡ ಹೊರ ಭಿತ್ತಿಯಲ್ಲಿ ತ್ರುಟಿತ ಶಾಸನವಿದೆ. ನವರಂಗದಲ್ಲಿ ಸಿಮೆಂಟ್‌ನಿಂದ ನಿರ್ಮಿಸಿದ ನಾಲ್ಕು ಕಂಬಗಳು ಆರ್.ಸಿ.ಸಿ. ಸೂರನ್ನು ಹೊತ್ತಿದೆ. ದೇವಾಲಯಕ್ಕೆ ಶಿಖರವಿಲ್ಲ. ಅಧಿಷ್ಠಾನ ಭಾಗವು ಮಣ್ಣಲ್ಲಿ ಹೂತಿದ್ದು ಈಗ ಕಂಡುಬರುತ್ತಿಲ್ಲ. ಗರ್ಭಗೃಹದ ಹೊರ ಭಿತ್ತಿಯಲ್ಲಿ ಪ್ರಾಚೀನ ಗುಡಿಯ ಲಕ್ಷಣಗಳನ್ನು ಕಾಣಬಹುದು. ಕಣಶಿಲೆಯ ಸುಂದರ ಕಟ್ಟಡ ರಚನೆಯು ಗಮನ ಸೆಳೆಯುತ್ತದೆ. ದೇವಾಲಯದ ಮುಂದೆ ಹಾಗೂ ಅಕ್ಕಪಕ್ಕದಲ್ಲಿ ಪ್ರಾಚೀನ ದೇವಾಲಯದ ವಾಸ್ತು ಅವಶೇಷಗಳು ಬಿದ್ದಿವೆ.

ದೇವಾಲಯದ ಮುಂದೆ ಬಳಪದ ಕಲ್ಲಿನ ಒಂದು ವೀರಗಲ್ಲು ಇದೆ. ಅದರಲ್ಲಿ ಎರಡು ಪಟ್ಟಿಕೆಗಳು ಮಾತ್ರವೇ ಇದ್ದು, ಕಲ್ಲು ಅರ್ಧವಾಗಿ ಒಡೆದು ಎರಡು ತುಂಡಾಗಿದೆ. ದೇವಾಲಯದ ಎಡಬದಿಯ ಕಟ್ಟೆಯ ಮೇಲೆ ಕೆಲವು ಶಿಲ್ಪಗಳನ್ನು ಇಡಲಾಗಿದೆ. ಊರಿನ ಹೊಲದಲ್ಲಿ ಮತ್ತೊಂದು ಶಾಸನವಿರುವ ಕಲ್ಲು ಇದೆಯೆಂದು ಸ್ಥಳೀಯರು ತಿಳಿಸಿದ್ದಾರೆ. ಪಕ್ಕದ ಮಜ್ಜೂರು ಗ್ರಾಮದಲ್ಲಿ ಒಂದು ವೀರಗಲ್ಲು ಇದೆ. ನವರಂಗದಲ್ಲಿರುವ ಶಾಸನವು ಕಲ್ಯಾಣ ಚಾಲುಕ್ಯ ಅರಸ ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದುದಾಗಿದೆ. ತೇದಿಯ ಭಾಗವು ತ್ರುಟಿತವಾಗಿದೆ. ಈ ಶಾಸನವು ಭೂಧಾನ ನೀಡುದ ವಿಷಯವನ್ನು ದಾಖಲಿಸಿದೆ. (ಧಾ.ಜಿ.ಶಾ.ಸೂ, ಸಂ.ಸಿ.೧೪, ಪು. ೩೬).

೧೫

ಊರು ಮುಕ್ತಿಮಂದಿರ
ಸ್ಮಾರಕ ಮುಕ್ತಿಮಂದಿರ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೯೪೦
ಶೈಲಿ ಆಧುನಿಕ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ

ಈ ಸ್ಮಾರಕಕ್ಕೆ ಮತ್ತು ಊರಿಗೆ ಮುಕ್ತಿಮಂದಿರವೆಂದು ಕರೆಯಲಾಗುತ್ತದೆ. ಬಾಳೆ ಹೊನ್ನೂರಿನ ರಂಭಾಪುರಿ ಪೀಠದ ಲಿಂಗೈಕ್ಯ ರೇಣುಕಾ ವೀರಗಂಗಾಧರಸ್ವಾಮಿಗಳು ೧೯೪೦ ರಲ್ಲಿ ಈ ಪ್ರದೇಶದಲ್ಲಿ ವಾಸಿಸಲು ಆರಂಭಿಸಿ, ಅಲ್ಲಿದ್ದ ಕಾಡನ್ನು ಕಡಿದು ಕೃಷಿ ಮಾಡಿ, ದೀನ ದಲಿತರಿಗೆ ಕೃಷಿ ಉತ್ಪನ್ನಗಳನ್ನು ನೀಡುತ್ತಲಿದ್ದರು. ಜೊತೆಗೆ ಧರ್ಮದ ಸಂದೇಶವನ್ನು ಸಹ ನೀಡುತ್ತಿದ್ದರು. ಇವರ ಕಾಯಕ ಭೂಮಿಯು ಮುಂದೆ ತಪೋವನವಾಗಿ ರೂಪಾಂತರಗೊಂಡಿತು. ಇವರು ಎಲ್ಲಾ ಧರ್ಮಗಳು ಒಂದೇ ಮತ್ತು ಅವುಗಳು ಮುಕ್ತಿಯನ್ನು ನೀಡುತ್ತವೆ ಎಂಬ ತತ್ವವನ್ನು ಸಾರಿದರು. ಎಲ್ಲ ಧರ್ಮಗಳನ್ನು ಪ್ರತಿನಿಧಿಸುವಂತೆ ಮುಕ್ತಿಮಂಟಪವನ್ನು ನಿರ್ಮಿಸಲಾಗಿದೆ. ಸ್ವಾಮಿಗಳು ಲಿಂಗೈಕ್ಯರಾದಾಗ ಅವರ ಶರೀರವನ್ನು ಇಲ್ಲಿ ಸಮಾಧಿ ಮಾಡಿ ಗದ್ದುಗೆಯನ್ನು ನಿರ್ಮಿಸಿದ್ದಾರೆ. ಈ ಮಂಟಪದ ಗದ್ದುಗೆ ಕೊಠಡಿಯ ಭಾಗದ ಮೇಲೆ ಆಧುನಿಕ ಶಿಖರವನ್ನು ನಿರ್ಮಿಸಲಾಗಿದೆ. ಪ್ರಸ್ತರ ಭಾಗ ಮತ್ತು ಶಿಖರದ ಪ್ರತಿ ತಲದಲ್ಲಿಯೂ ಕಿರು ಲಿಂಗಗಳನ್ನು ಸ್ಥಾಪಿಸಲಾಗಿದೆ. ಸದರಿ ಮಂಟಪದ ಹಿಂಭಾಗದಲ್ಲಿ ಸಾಲು ಕೊಠಡಿಗಳನ್ನು ನಿರ್ಮಿಸಿ ಪ್ರತಿ ಕೊಠಡಿಯಲ್ಲಿಯೂ ಸರ್ವಧರ್ಮಗಳ ಪ್ರಮುಖ ಆಚಾರ್ಯರ ಮೂರ್ತಿಶಿಲ್ಪಗಳನ್ನು ಇರಿಸಲಾಗಿದೆ. ಮಠದಲ್ಲಿ ದಾಸೋಹ ಮನೆ, ಸಂಸ್ಕೃತ ಪಾಠಶಾಲೆ, ಗುರುಕುಲ, ಉದ್ಯಾನವನ, ಮುಂತಾದವುಗಳಿವೆ. ಈಗ ತ್ರಿಕೋಟಿಲಿಂಗಗಳನ್ನು ಸ್ಥಾಪಿಸಲಾಗುತ್ತಿದೆ.

೧೯ನೇ ಶತಮಾನದಲ್ಲಿದ್ದ ಸಂತ ಶಿಶುನಾಳ ಷರೀಫರು ಈ ಭಾಗದಲ್ಲಿ ಸಂಚರಿಸುವಾಗ ಒಂದೆಡೆ ಕುಳಿತು ಚಿಲುಮೆ ಸೇದುವಾಗ ಅದರಿಂದ ಹರಳು ಜಾರಿಬಿತ್ತು. ಹರಳಿಗೆ ಎರಡು ಕಲ್ಲುಗಳನ್ನು ಇಟ್ಟು ಗುಡಿಯಂತೆ ನಿರ್ಮಿಸಿ ಪ್ರಸಿದ್ಧಿಯನ್ನು ಹೊಂದು ಎಂದು ಶೀರ್ವದಿಸಿದ್ದರಿಂದ ಈ ಸ್ಥಳವು ಧಾರ್ಮಿಕ ಕ್ಷೇತ್ರವಾಗಿ ಬೆಳೆಯಿತು ಎನ್ನುವುದು ಇಲ್ಲಿಯ ಜನಪದರ ನಂಬಿಕೆಯಾಗಿದೆ. ಮುಕ್ತಿಮಂದಿರವು ಇಂದು ಅರ್ಧ ಭಾಗ ಶಿರಹಟ್ಟಿ ತಾಲೂಕಿನಲ್ಲಿಯೂ ಇನ್ನು ಉಳಿದಿರ್ಧ ಭಾಗ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿದೆ. ಹರ್ಲಾಪುರವು ಸಮೀಪದ ಗ್ರಾಮವಾಗಿದೆ.

೧೬

ಊರು ಯತ್ತಿನಹಳ್ಳಿ
ಸ್ಮಾರಕ ಕಲ್ಮೆಶ್ವರ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೭-೧೮ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ

ಮನೆಯಂತೆ ಕಾಣುವ ಈ ದೇವಾಲಯದಲ್ಲಿ ಗರ್ಭಗೃಹ ಮತ್ತು ಮುಂದೆ ತೆರೆದ ಅರ್ಧಮಂಟಪಗಳಿವೆ. ಗರ್ಭಗೃಹದಲ್ಲಿ ಪ್ರಾಚೀನ ಶಿವಲಿಂಗವಿದೆ. ಅರ್ಧಮಂಟಪದಲ್ಲಿ ಮರದ ಎರಡು ಕಂಬಗಳಿವೆ. ಅವುಗಳು ಹೆಂಚಿನ ಸೂರನ್ನು ಆಧರಿಸಿವೆ. ಗರ್ಭಗೃಹದ ಬಾಗಿಲವಡವು ಸರಳವಾಗಿದೆ. ದೇವಾಲಯದ ಮುಂದೆ ಒಂದು ಕಟ್ಟೆಯಿದೆ. ಅದರಲ್ಲಿ ಬಸವನ ಶಿಲ್ಪವನ್ನು ಇಡಲಾಗಿದೆ. ಲಿಂಗವನ್ನು ಹೊರತುಪಡಿಸಿ, ಉಳಿದೆಲ್ಲಾ ಭಾಗಗಳು ಇತ್ತೀಚಿನ ನಿರ್ಮಿತಿಗಳಾಗಿವೆ.

೧೭

ಊರು ಯಳವತ್ತಿ
ಸ್ಮಾರಕ ಗುಂಡೇಶ್ವರ (ಗುಂಡಲಿಂಗ)
ಸ್ಥಳ ಊರ ಕೆರೆಯ ದಂಡೆ ಮೇಲೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಶಿವಲಿಂಗವು ನೆಲಮಟ್ಟದಲ್ಲಿದೆ. ಇದನ್ನು ಸ್ವಯಂಭೂ ಲಿಂಗವೆಂದು ಕರೆಯಲಾಗುತ್ತದೆ. ಗರ್ಭಗೃಹದ ಬಾಗಿಲವಾಡವು ಸರಳವಾಗಿದೆ. ಅಂತರಾಳ ಭಾಗದ ಬಾಗಿಲವಾಡವು ಸರಳವಾಗಿದ್ದು, ಅದು ನವರಂಗಕ್ಕೆ ತೆರೆದುಕೊಳ್ಳುತ್ತದೆ. ನವರಂಗದಲ್ಲಿನ ನಾಲ್ಕು ಕಂಬಗಳು ಭುವನೇಶ್ವರಿಯನ್ನು ಆಧರಿಸಿವೆ. ಕೆಳಗೆ ವೇದಿಕೆಯಿರುವುದನ್ನು ಕಾಣಬಹುದು. ನವರಂಗದ ಕಂಬಗಳು ಘನಾಕೃತಿಯದ್ದಾಗಿದ್ದು, ಕೆಳ ಭಾಗವು ಚೌಕ, ಅದರ ಮೇಲೆ ಮಧ್ಯದ ಭಾಗವು ಅಷ್ಟ ಪಟ್ಟಿಗಳು ಹಾಗೂ ಅದರ ಮೇಲ್ಭಾಗ ಚೌಕವಾಗಿದೆ. ಕಂಬದ ಮೇಲಿನ ಭಾಗದಲ್ಲಿ ಫಲಕವನ್ನು ಕಾಣಬಹುದು. ಕಲ್ಯಾಣ ಚಾಲುಕ್ಯ ಶೈಲಿಯ ಈ ಕರಿಶಿಲೆಯ ಕಂಬಗಳು ಆಕರ್ಷಕವಾಗಿವೆ. ನವರಂಗದ ಅಂತರಾಳದ ದ್ವಾರದ ಇಕ್ಕೆಲಗಳ ಗೋಡೆಗಳಲ್ಲಿ ದೇವಕೋಷ್ಠಗಳಿವೆ. ಎಡಬದಿಯಲ್ಲಿ ಸೂರ್ಯನ ಪಾಣಿಪೀಠವಿದೆ. ಬಲಬದಿಯಲ್ಲಿ ಪೀಠವೊಂದೇ ಇದೆ. ಉತ್ತರಾಭಿಮುಖ ಗೋಡೆಯಲ್ಲಿ ಎರಡು ದೇವಕೋಷ್ಟಗಳಿದ್ದು ಒಂದರಲ್ಲಿ ಗಣಪತಿ ಶಿಲ್ಪ ಮತ್ತೊಂದರಲ್ಲಿ ಸಪ್ತಮಾತೃಕೆಯರ ಶಿಲಾಫಲಕವಿದೆ. ದಕ್ಷಿಣಾಭಿಮುಖ ಒಳ ಭಿತ್ತಿಯಲ್ಲಿಯೂ ಮೂರು ದೇವಕೋಷ್ಟಗಳಿವೆ. ಒಂದರಲ್ಲಿ ಪೀಠ, ಮತ್ತೊಂದರಲ್ಲಿ ಸಪ್ತಮಾತೃಕೆ ಶಿಲಾಫಲಕ ಮತ್ತು ಇನ್ನೊಂದರಲ್ಲಿ ನಾಗಶಿಲ್ಪವಿದೆ. ಗುಡಿಯ ಪ್ರವೇಶ ದ್ವಾರವು ಸರಳವಾಗಿದ್ದು, ಅದರ ಮೇಲೆ ಉಬ್ಬು ಶಿಲ್ಪಗಳ ಸಾಲಿನ ಒಂದು ಶಿಲಾಫಲಕ ಇರಿಸಲಾಗಿದೆ. ಅದರಲ್ಲಿರುವ ದೇವತೆಗಳು ಯಾವುದೆಂದು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗಿಲ್ಲ. ಗರ್ಭಗೃಹದ ಮೇಲೆ ಆಧುನಿಕ ಶೈಲಿಯ ಶಿಖರವಿದೆ. ಗುಡಿಯ ಅಧಿಷ್ಠಾನವು ಈಗ ಕಂಡುಬರುವುದಿಲ್ಲ. ನವರಂಗದ ಛಾವಣಿಯಲ್ಲಿ ಭುವನೇಶ್ವರಿ ಹಾಗೂ ನವರಂಗದ ಛಾವಣಿಯ ಪ್ರತಿ ಅಂಕರಣಗಳಲ್ಲಿಯೂ ಕಮಲದಳ ಅಲಂಕರಣೆಯಿರುವ ಕಲ್ಲು ಇದೆ. ಇದು ಆಕರ್ಷಕವಾಗಿದೆ. ಈ ದೇವಾಲಯವನ್ನು ಸಾಕಷ್ಟು ನವೀಕರಿಸಿರುವುದರಿಂದ ಪ್ರಾಚೀನ ಕುರುಹುಗಳು ಅಷ್ಟಾಗಿ ಕಂಡುಬರುವುದಿಲ್ಲ.

ಮುಖ್ಯದ್ವಾರದ ಮುಂಭಾಗದ ಪ್ರವೇಶ ಮಂಟಪದಲ್ಲಿ, ಕಲ್ಯಾಣ ಚಾಲುಕ್ಯ ಶೈಲಿಯ ಎರಡು ಕಂಬಗಳಿವೆ. ಅದರ ಇಕ್ಕೆಲಗಳಲ್ಲಿ ಕೊಠಡಿಗಳನ್ನು ನಿರ್ಮಿಸಿ, ದೇವಾಲಯದ ಕಛೇರಿಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಗುಡಿಯ ಮುಂಭಾಗದಲ್ಲಿರುವ ಗುಂಡೇಶ್ವರ ಕೆರೆಯ ದಂಡೆಯ ಮೇಲಿನ ಕಟ್ಟೆಯ ಮೇಲೆ ದೀಪಸ್ತಂಭವನ್ನು ಇರಿಸಲಾಗಿದೆ. ಈ ಕೆರೆಯ ಬಹು ಪ್ರಾಚೀನವಾಗಿದ್ದು ಇಂದಿಗೂ ಅದನ್ನು ಬಳಸಲಾಗುತ್ತಿದೆ. ದೇವಾಲಯದ ಹೊರಗೆ ಮತ್ತು ಒಳಗೆ ಶಿಲಾಶಾಸನಗಳಿವೆ.

ಮುಖ್ಯ ಗುಡಿಯ ದಕ್ಷಿಣಕ್ಕೆ ಇತ್ತೀಚೆಗೆ ನಿರ್ಮಿಸಿದ ದೇವಾಲಯವಿದ್ದು ಅದರಲ್ಲಿ ಗರ್ಭಗೃಹ ಮತ್ತು ತೆರೆದ ನವರಂಗವಿದೆ. ಗರ್ಭಗೃಹದಲ್ಲಿ ಈಶ್ವರ ಮತ್ತು ಪಾರ್ವತಿಯರ ಮೂರ್ತಿಶಿಲ್ಪಗಳಿವೆ. ನವರಂಗದಲ್ಲಿನ ನಾಲ್ಕು ಕಂಬಗಳು ಛಾವಣಿಯನ್ನೂ ಆಧರಿಸಿವೆ. ಎರಡೂ ದೇವಾಲಯಗಳು ಕೆರೆಯ ದಂಡೆಯ ಮೇಲೆ ಇದೆ. ಗುಡಿಯ ಸುತ್ತಲೂ ಕಿರು ಕಾಂಪೌಂಡ್‌ ರಚನೆ ಇದೆ. ಇದರಿಂದ ಮುಖ್ಯ ಗುಡಿಗೆ ಪ್ರದಕ್ಷಿಣಾಪಥ ವಿದ್ದಂತೆ ಭಾಸವಾಗುತ್ತದೆ. ದೇವಾಲಯದ ಹೊರಗೆ ಪ್ರಾಚೀನ ಲಿಂಗವೊಂದನ್ನು ಮರದ ಕೆಳಗೆ ಇರಿಸಲಾಗಿದೆ. ಗುಡಿಯ ಹಿಂಭಾಗ ಒಂದು ಬಾವಿಯಿದೆ.

ಊರಿನಲ್ಲಿ ಕೋಟೆಯಿದ್ದು ಅದಕ್ಕೆ ಭವ್ಯವಾದ ಪ್ರವೇಶ ದ್ವಾರವಿದೆ. ಗುಂಡಲಿಂಗ ದೇವಾಲಯದ ಆವರಣದ ಕಂಬದಲ್ಲಿನ ಶಾಸನವು ಕ್ರಿ.ಶ. ಸು. ೮ನೆಯ ಶತಮಾನಕ್ಕೆ ಸೇರಿದ್ದು, ಪಳ್ತಿಯ ಮಳ್ತವೂರದ ಮಾದೆಗೋವಜ್ಜನ ಮಗ, ಶ್ರೀಕುಮಾರನು ಮಾಡಿಸಿದ ಕಂಬ ಎಂದು ಉಲ್ಲೇಖಿಸುತ್ತದೆ (ಧಾ.ಜಿ.ಶಾ.ಸೂ, ಸಂ. ಸಿ.೧೩, ಪು.೩೬). ಇನ್ನೊಂದು ಶಾಸನವು ಕಲ್ಯಾಣ ಚಾಲುಕ್ಯ ಅರಸ ತ್ರಿಭುವನಮಲ್ಲ (ವೀರಗಂಗಿ) ಕ್ರಿ.ಶ. ೧೧೫೧ರ ಕಾಲಕ್ಕೆ ಸೇರಿದ್ದು, ಎಳವತಿ ಮಹಾಗ್ರಾಮದ ನೂರಿಪತ್ತು ಮಹಾಜನರು ಗುಂಡೇಶ್ವರ ದೇವರಿಗೆ ಬಿಟ್ಟ ಭೂಮಿಯ ದಾನದ ವಿವರಗಳನ್ನು ನೀಡುತ್ತದೆ (ಧಾ.ಜಿ.ಶಾ.ಸೂ, ಸಂ. ಸಿ. ೧೬, ಪು. ೩೬). ಕಲಚೂರಿ ಅರಸ ಬಿಜ್ಜಳನ ಕಾಲದ ೧೧೫೮ರ ಶಾಸನವು (ಧಾ.ಜಿ.ಶಾ.ಸೂ, ಸಂ. ಸಿ. ೧೭. ಪು.೩೬) ನಾಗೇಶ್ವರ ದೇವಾಲಯದ ಆಚಾರ್ಯ ದೇವರಾಶಿ ಪಂಡಿತರಿಗೆ ದಾನ ನೀಡಿದುದನ್ನು ತಿಳಿಸುತ್ತದೆ. ಕಲ್ಯಾಣ ಚಾಲುಕ್ಯ ಅರಸ ಮೂರನೇ ತೈಲನ ಕಾಲದ ಶಾಸನದ (ಕಲಚುರಿ ಬಿಜ್ಜಳನ ಕಾಲ) ತೇದಿಯು ಕ್ರಿ.ಶ. ೧೧೫೯ (ಧಾ.ಜಿ.ಶಾ.ಸೂ, ಸಂ. ಸಿ. ೧೮, ಪು.೩೬). ಇದು ದಂಡನಾಯಕ ಹರಿದೇವನಿಂದ ಗುಂಡೇಶ್ವರ ದೇವರಿಗೆ ಉಮ್ಮಚ್ಚಿಗೆ ಗ್ರಾಮವನ್ನು ನೀಡಿದ ಮಾಹಿತಿಯನ್ನು ನೀಡುತ್ತದೆ. ಆವರಣದಲ್ಲಿಯ ಹೊಯ್ಸಳ ಅರಸ ಇಮ್ಮಡಿ ವೀರಬಲ್ಲಾಳನ ಕ್ರಿ.ಶ. ೧೧೯೫ರ ಶಾಸನವು (ಧಾ.ಜಿ.ಶಾ.ಸೂ, ಸಂ. ಸಿ. ೧೯. ಪು. ೩೬) ಮಾಗುಂಡಿಯ (ಇಂದಿನ ಮಾಗಡಿ) ನೀಲಕಂಠದೇವರ ಶಿಷ್ಯ ಸಿಮನಬಲ್ಲಯ್ಯನಿಂದ ಗುಂಡನಾಥದೇವರ ಪುಷ್ಕರಣೆಯನ್ನು ನಿರ್ಮಿಸಿ, ದಾನ ನೀಡಿದುದನ್ನು ದಾಖಲಿಸಿದೆ. ಕ್ರಿ.ಶ.ಸು. ೧೨ನೆಯ ಶತಮಾನದ ಶಾಸನವು (ದಾ.ಜಿ.ಶಾ.ಸೂ, ಸಂ. ಸಿ. ೨೦, ಪು. ೩೬) ಸೂಸಿಕಲ್ಲರ ಶಂಕರಯ್ಯನು ಗುಂಡೇಶ್ವರ ದೇವಾಳಯದ ನೆಲ್ಲಕ್ಕಿ, ಕಂಬ ಮುಂತಾದವುಗಳನ್ನು ಮಾಡಿಸಿದ ವಿಷಯವನ್ನು ತಿಳಿಸುತ್ತದೆ. ಊರಿಂದ ೩ ಕಿಮೀ ದೂರದಲ್ಲಿರುವ ಹೊಲದಲ್ಲಿ ಕ್ರಿ.ಶ. ೧೮೧೯ರ ಶಾಸನವಿದೆ (ಧಾ.ಜಿ.ಶಾ.ಸೂ, ಸಂ. ಸಿ. ೨೧, ಪು.೩೭). ಇದು ನರಸಿಂಹಭಟ್ಟನ ಸರ್ವಮಾನ್ಯದ ದತ್ತಿ ಎಂದು ಉಲ್ಲೇಖಿಸಿದೆ.

೧೮

ಊರು ಲಕ್ಷ್ಮೇಶ್ವರ
ಸ್ಮಾರಕ ಶಂಖ ಬಸದಿ
ಸ್ಥಳ ಊರ ಮಧ್ಯೆ
ಕಾಲ ಕ್ರಿ.ಶ. ೭-೮ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ ರಾ.ಪು.ಇ

ಊರಿನಲ್ಲಿರುವ ಸೋಮನಾಥ ದೇವಾಲಯದಷ್ಟೇ ಸುಂದರ ಹಾಗೂ ಮುಖ್ಯ ದೇವಾಲಯ ಇದಾಗಿದೆ. ಸದರಿ ದೇವಾಲಯದಲ್ಲಿರುವ ಗೋಡೆಯ ಮೇಲಿರುವ ಬಾದಾಮಿ ಚಾಲುಕ್ಯ ಅರಸ ಇಮ್ಮಡಿ ಪುಲಕೇಶಿಯ ಕಾಲದ ಶಾಸನವಿದೆ. ಇದರಿಂದಾಗಿ, ಈ ದೇವಾಲಯವನ್ನು ಕ್ರಿ.ಶ. ೭-೮ನೇ ಶತಮಾನದಲ್ಲಿ ನಿರ್ಮಿಶಿರಬಹುದೆಂದು ಅಭಿಪ್ರಾಯ ಪಡಬಹುದು. ಆದರೆ ಗುಡಿಯನ್ನು ಕಾಲ ಕಾಲಕ್ಕೆ ಜೀರ್ಣೋದ್ಧಾರ ಮಾಡಿ, ವಿವಿಧ ಅರಸುಮನೆತನದವರು ಹೊಸ ವಾಸ್ತು ಭಾಗಗಳನ್ನು ಸೇರ್ಪಡೆ ಗೊಳಿಸಿದ್ದಾರೆ. ಇಂದು ಇದು ಅತ್ಯಂತ ಸಂಕೀರ್ಣವಾದ ಕಲ್ಯಾಣ ಚಾಲುಕ್ಯ ಶೈಲಿಯ ಗುಡಿಯಂತೆ ಗೋಚರಿಸುತ್ತದೆ.

ಚೌಕಾಕಾರದ ಗರ್ಭಗೃಹದಲ್ಲಿ ಪ್ರಾಚೀನ ಜೈನ ಪಾಣಿಪೀಠದ ಮೇಲೆ ಧ್ಯಾನಮುದ್ರೆಯಲ್ಲಿರುವ ಕುಳಿತ ನೇಮಿನಾಥ ತೀರ್ಥಂಕರರ ವಿಗ್ರಹವನ್ನು ೧೯೮೭ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದರಲ್ಲಿ ೨೨ನೇ ತೀರ್ಥಂಕರನಾದ ನೇಮಿನಾಥನ ವಿಗ್ರಹವನ್ನು ಮೊದಲಿಗೆ ಪ್ರತಿಷ್ಠಾಪಿಸಿದ್ಧಿರಬಹುದು ಎಂದು ತೀರ್ಥಂಕರರ ಲಾಂಛನವಾದ ಶಂಖದಿಂದ ತಿಳಿಯಬಹುದು. ಇಂದು ನೇಮಿನಾಥನ ವಿಗ್ರಹವು ಇಲ್ಲ. ಇವನ ಲಾಂಛನವಾದ ಶಂಖದಿಂದಲೇ ಇದಕ್ಕೆ ಶಂಖ ಬಸದಿಯೆಂದು ಹೆಸರು ಬಂದಿರುವ ಸಾಧ್ಯತೆಗಳಿವೆ. ಸಾಹಿತ್ಯ ಕೃತಿಯಾದ ‘ಶಂಖ ಜಿನೋದ್ಭವ’ದಲ್ಲಿ ಕವಿಯು ‘ಶ್ರೀ ನೇಮಿನಾಥಾಯನಮ’ ಎಂದು ಪ್ರಾರಂಭಿಸುವುದನ್ನು ಇಲ್ಲಿ ಸ್ಮರಿಸಬಹುದು. ಕೆಲವು ವಿದ್ವಾಂಸರು ಇಲ್ಲಿ ಶಾಂತಿನಾಥ ತೀರ್ಥಂಕರನ ವಿಗ್ರಹವಿದ್ದಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಗರ್ಭ ಗೃಹದ ಬಾಗಿಲವಾಡದ ಎರಡೂ ಪಕ್ಕಗಳಲ್ಲಿ ಜ್ವಾಲಮಾಲಿನಿ, ವೃಕ್ಷ, ಯಕ್ಷ ಮತ್ತು ಯಕ್ಷಿಯರ ಶಿಲ್ಪಗಳಿವೆ. ಇವು ನಂತರದ ಕಾಲದವುಗಳಾಗಿವೆ. ಗರ್ಭಗೃಹದಲ್ಲಿ ನೇಮಿನಾಥ ಮತ್ತು ಅನೇಕ ಜೈನ ತೀರ್ಥಂಕರ ಕಂಚಿನ ಮೂರ್ತಿಗಳಿವೆ. ಗರ್ಭಗೃಹವನ್ನು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನವೀಕರಿಸಿರುವುದನ್ನು ಕಾಣಬಹುದು. ಬಾಗಿಲ ಲಲಾಟದಲ್ಲಿ ಜಿನಬಿಂಬವಿದೆ. ನವರಂಗದ ಮಧ್ಯೆ ನಾಲ್ಕು ಕಂಬಗಳಿದ್ದು ಅವು ಭುವನೇಶ್ವರಿಯನ್ನು ಆಧರಿಸಿದೆ. ಉತ್ತರಾಭಿಮುಖ ಗೋಡೆಯಲ್ಲಿ ಕೊಠಡಿಯಂತಿರುವ ದೊಡ್ಡ ದೇವಕೋಷ್ಠವಿದ್ದು, ಅದರಲ್ಲಿ ಧರಣೇಂಧ್ರ ಯಕ್ಷ ಮತ್ತು ಯಕ್ಷಿ ಶ್ರೀಪದ್ಮಾವತಿಯ ಮೂರ್ತಿಶಿಲ್ಪಗಳಿವೆ. ದಕ್ಷಿಣಾಭಿಮುಖ ಭಿತ್ತಿಯಲ್ಲಿಯೂ ಕೊಠಡಿಯಾಕಾರದ ಕೋಷ್ಟದಲ್ಲಿರುವ ಪೀಠದಲ್ಲಿ ಪಂಚಪರಮೇಷ್ಟಿಗಳನ್ನು ಇರಿಸಲಾಗಿದೆ. ನವರಂಗದ ಮುಂಭಾಗದಲ್ಲಿ ಮತ್ತೊಂದು ನವರಂಗದ ಭಾಗವಿದೆ. ಇದರ ಪೂರ್ವದ ಗೋಡೆಯನ್ನು ಅರ್ಧಮಾತ್ರ ನಿರ್ಮಿಸಲಾಗಿದೆ. ಮೇಲಿನ ಭಾಗದ ಗೋಡೆಯನ್ನು ಕಟ್ಟಿಲ್ಲ. ಈ ಭಾಗದ ಉತ್ತರ ಗೋಡೆಯಲ್ಲಿ ಕಿಟಕಿಯಿದೆ. ನವರಂಗದ ಬಾಗಿಲವಾಡದ ಇಕ್ಕೆಲಗಳಲ್ಲಿ ಜಾಲಾಂಧ್ರಗಳಿವೆ.

ಎರಡನೆಯ ನವರಂಗದ ಮುಂಭಾಗದಲ್ಲಿ ವಿಶಾಲವಾದ ಮುಖಮಂಟಪವಿದೆ. ಇದರಲ್ಲಿ ಆಕರ್ಷಕ ೧೬ ಕಂಬಗಳಿವೆ. ಈ ಮಂಟಪಕ್ಕೆ ಮೂರು ದ್ವಾರಗಳಿವೆ. ಇದರಲ್ಲಿಯೇ, ದಕ್ಷಿಣ ಭಾಗದಲ್ಲಿ ಎತ್ತರವಾದ ಚೌಕಾಕಾರದ ಪೀಠದ ಮೇಲೆ ರೇಖಾನಾಗರ ಶಿಖರ ಮಾದರಿಯ ಕಿರುಗೋಪುರ ಉಳ್ಳ ಮಂಟಪದಲ್ಲಿ ಕಪ್ಪು ಶೀಲೆಯ ಕಿರು ಕಂಬದ ರಚನೆಯಲ್ಲಿ ಸಹಸ್ರ ಜಿನಬಿಂಬಗಳನ್ನು ನಾಲ್ಕು ಭಾಗಗಳಲ್ಲಿ ಅಳವಡಿಸಲಾಗಿದೆ. ಈ ಶಿಲ್ಪಾಕೃತಿಯು ಊರಿನ ಹೊಲದಲ್ಲಿ ದೊರಕಿದ್ದು, ಅದನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆಯೆಂದೂ, ಇದು ಅತ್ಯಂತ ಅಪರೂಪದ ಶಿಲ್ಪವೆಂದು ಸ್ಥಳೀಯರು ತಿಳಿಸುತ್ತಾರೆ. ಇಲ್ಲಿಯ ಮೂಲೆಯಲ್ಲಿ ಚೈತ್ಯಾಲಯವನ್ನು ಹೋಲುವ ಶಿಲಾಶಾಸನವಿದೆ. ಗೋಡೆಯಲ್ಲಿಯೂ ಶಾಸನದ ಕಲ್ಲಿದೆ. ಈ ಸಭಾಂಗಣ ಹಾಗೂ ದೇವಾಲಯವು ಎತ್ತರದ ಅಧಿಷ್ಠಾನದ ಮೇಲಿದೆ.

ಬಸದಿಯ ಮುಖ್ಯದ್ವಾರದ ಲಲಾಟದಲ್ಲಿ ಚಾಲುಕ್ಯ ಶೈಲಿಯ ಮುಕ್ಕೊಡೆಯಿರುವ ಜಿನಬಿಂಬಿವಿದೆ. ದ್ವಾರವನ್ನು ಕೆಲವು ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದಾಗಿದೆ. ಇದರ ಇಕ್ಕೆಲಗಳಲ್ಲಿ ಅಲಂಕೃತ ಜಾಲಾಂಧ್ರಗಳಿವೆ. ಗರ್ಭಗೃಹದ ಮೇಲೆ ಪ್ರಾಚೀನ ಶಿಖರವಿದ್ದು, ಕಾಲಕ್ರಮದಲ್ಲಿ ಬಿದ್ದಿದೆ. ಇದನ್ನು ಅವೈಜ್ಞಾನಿಕವಾಗಿ ಜೀರ್ಣೋದ್ಧಾರ ಮಾಡಲಾಗಿದೆ. ಕೆಲವು ದೊಡ್ಡ ಬಿಡಿಶಿಲ್ಪಗಳನ್ನು ಸಹ ಭಿತ್ತಿ ಮತ್ತು ಶಿಖರ ಭಾಗಗಳಲ್ಲಿ ಇರಿಸಿ ಕಟ್ಟಲಾಗಿದೆ.

ಇದೇ ಬಸದಿಯಲ್ಲಿ ಆದಿಕವಿ ಪಂಪನು ‘ಆದಿನಾಥ ಪುರಾಣ’ವನ್ನು ರಚಿಸಿದನೆಂದು ನಂಬಲಾಗಿದೆ. ಬಸದಿಗೆ ಸಂಬಂಧಿಸಿದಂತೆ ಬಾದಾಮಿ ಚಾಲುಕ್ಯರ ಕಾಲದಿಂದ ಪ್ರಾರಂಭಿಸಿ ವಿಜಯನಗರ ಕಾಲದವರೆಗಿನ ಶಾಸನಗಳಿವೆ. ಹಳೆಯ ತಾಲೂಕು ಕಛೇರಿಯ ಹಿಂದಿರುವ ಒಂದು ಶಾಸನದಲ್ಲಿ (ಧಾ.ಜಿ.ಶಾ.ಸೂ, ಸಂ. ಸಿ. ೭೯, ಪು.೩೯ SII, XX, No. 321) (ಕ್ರಿ.ಶ. ೧೫೩೮) ಶಂಖ ಬಸದಿಯ ಜೈನ ಮತ್ತು ಸೋಮನಾಥ ದೇವಾಲಯದ ಶೈವರ ನಡುವಿನ ಕಲಹ ಅಥವಾ ವ್ಯಾಜ್ಯವನ್ನು ಜೈನರ ಪರವಾಗಿ ನಿರ್ಣಯಿಸಿದ ಉಲ್ಲೇಖವಿದೆ. ಬಸದಿಯ ಮುಂದೆ ದೀಪಸ್ತಂಭ (ಮಾನಸ್ತಂಭ) ವಿದೆ. ದೇವಾಲಯದ ಆವರಣದಲ್ಲಿ ಕೆಲವು ವಾಸ್ತು ಅವಶೇಷಗಳು ಮತ್ತು ಶಿಲ್ಪಗಳನ್ನು ಇರಿಸಲಾಗಿದೆ. ದೇವಾಲಯದ ಹೊರಭಿತ್ತಿಯಲ್ಲಿ, ಮುಖ್ಯವಾಗಿ ಮುಖಮಂಟಪದ ಭಿತ್ತಿಯಲ್ಲಿ ಅನೇಕ ಕಿರು ಮಿಥುನ ಉಬ್ಬುಶಿಲ್ಪಗಳಿವೆ. ಬಹುತೇಕ ಉಬ್ಬುಶಿಲ್ಪಗಳನ್ನು ನಾಶಪಡಿಸಲಾಗಿದೆ. ಇಂದು ಕೆಲವು ಮಾತ್ರವೇ ಉಳಿದಿವೆ.

ದೇವಾಲಯದ ದಕ್ಷಿಣ ಭಾಗದಲ್ಲಿಯೂ ಬಸದಿಗಳು ಇದ್ದುವೆನ್ನುವುದಕ್ಕೆ ಸಾಕ್ಷಿಯಾಗಿ ಅಧಿಷ್ಠಾನ ಮತ್ತು ಗರ್ಭಗೃಹದ ಭಾಗಗಳು ಇವೆ. ಅವುಗಳನ್ನು ಇಂದು ವಾಸದ ಮನೆಗಳಾಗಿ ಪರಿವರ್ತಿಸಿ ಉಪಯೋಗಿಸಲಾಗುತ್ತಿದೆ. ಉತ್ತರ ಭಾಗದಲ್ಲಿ ಸಹ ಶಿಥಿಲಾವಸ್ಥೆಯಲ್ಲಿರುವ ಬಸದಿಯಿದೆ. ಅದರಲ್ಲಿ ಗರ್ಭಗೃಹ ಮತ್ತು ಅರ್ಧಮಂಟಪವಿದೆ. ಇದರ ಹಿಂಭಾಗದಲ್ಲಿಯೂ ಮಂಟಪ ಹಾಗೂ ವಾಸ್ತು ಅವಶೇಷಗಳನ್ನು ಕಾಣಬಹುದು. ಈ ಸ್ಮಾರಕವು ರಾಜ್ಯ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ಇಲಾಖೆಯ ಸಂರಕ್ಷಣೆಯಲ್ಲಿದೆ. ನಿತ್ಯವೂ ಇಲ್ಲಿ ಪೂಜೆ ನಡೆಯುತ್ತದೆ.

ಬಸದಿಯ ಎಡಗೋಡೆಯಲ್ಲಿರುವ ಶಾಸನವು, ಅತ್ಯಂತ ಪ್ರಾಚೀನವಾದುದಾಗಿದೆ (ಧಾ.ಜಿ.ಶಾ.ಸೂ, ಸಂ. ಸಿ.೨೩, ಪು.೩೭ SII, xx, No .3; IA, VII, pp. 106-07). ಬಾದಾಮಿ ಚಾಲುಕ್ಯ ಅರಸ ಇಮ್ಮಡಿ ಪುಲಕೇಶಿಯ ಕಾಲದ ಈ ಶಾಸನವು ಸೇಂದ್ರವಂಶದ ದುರ್ಗಶಕ್ತಿಯು ಶಂಖಜಿನಾಲಯಕ್ಕೆ ಭೂಮಿಯನ್ನು ದಾನ ಮಾಡಿದ ವಿಷಯವನ್ನು ತಿಳಿಸುತ್ತದೆ. ಕ್ರಿ.ಶ. ೬೮೩ರ ಬಾದಾಮಿ ಚಾಲುಕ್ಯ ಅರಸ ವಿನಯಾದಿತ್ಯನ ಶಾಸನವು (ಧಾ.ಜಿ.ಶಾ.ಸೂ, ಸಂ. ಸಿ.೨೪, ಪು. ೩೭; SII, XX, No. 4) ಶಂಖ ಜಿನಾಲಯಕ್ಕೆ ಬೆಳ್ವೂಲಮುನೂರದ ಹಡಗಿಲೆ ಎಂಬ ಗ್ರಾಮವನ್ನು ದಾನ ನೀಡಿದ ವಿವರವನ್ನು ನೀಡುತ್ತದೆ. ಇದೇ ವಂಶದ ವಿಜಯಾದಿತ್ಯನ ಕ್ರಿ.ಶ. ೭೨೩ರ ಶಾಸನವು (ಧಾ.ಜಿ.ಶಾ.ಸೂ, ಸಂ. ಸಿ. ೨೫, ಪು. ೩೭; SII, XX, No. 5; IA, VII, p. 100) ಜಿನಾಲಯಕ್ಕೆ ಸಂಬೊಳಲ ಗ್ರಾಮವನ್ನು ನೀಡಿದ ಬಗ್ಗೆ ಉಲ್ಲೇಖಿಸುತ್ತದೆ. ಇದೇ ಅರಸನ ಕ್ರಿ.ಶ. ೭೩೦ರ ಶಾಸನವು (ಧಾ.ಜಿ.ಶಾ.ಸೂ, ಸಂ. ಸಿ.೨೭, ಪು.೩೭; SII, XX, No. 6) ಶಂಖ ಜಿನಾಲಯಕ್ಕಾಗಿ ನಿರವದ್ಯ ಪಂಡಿತರಿಗೆ ಕದ್ದಮ ಗ್ರಾಮವನ್ನು ದಾನ ಮಾಡಿದ ವಿವರಗಳಿವೆ. ಈ ಶಾಸನದ ಲಿಪಿಯು ೧೧ನೇ ಶತಮಾನದ್ದೆಂದು ಅಭಿಪ್ರಾಯಪಡಲಾಗಿದೆ. ಬಸದಿಯಲ್ಲಿನ ಬಾದಾಮಿ ಚಾಲುಕ್ಯ ಅರಸ ಇಮ್ಮಡಿ ವಿಕ್ರಮಾದಿತ್ಯನ ಕ್ರಿ.ಶ. ೭೩೫ ಶಾಸನವು (ಧಾ.ಜಿ.ಶಾ.ಸೂ, ಸಂ. ಸಿ. ೨೮, ಪು. ೩೭; SII, XX, No.7; IA, VII, p.. 106-107) ಬಾಹುಬಲಿ ಶ್ರೇಷ್ಠಿಯ ವಿನಂತಿಯ ಮೇರೆಗೆ ಅರಸನಿಂದ ಧವಳ ಜಿನಾಲಯ ಮತ್ತು ದಾನಶಾಲೆಗಳಿಗೆ ನೀಡಿದ ದಾನಗಳನ್ನು ದಾಖಲಿಸುತ್ತದೆ. ಬಸದಿಯ ಎಡಗೋಡೆಯಲ್ಲಿ ಗಂಗ ಅರಸುಮನೆತನದ ಅರಸ ಇಮ್ಮಡಿ ಮಾರಸಿಂಹನ ಕ್ರಿ.ಶ. ೯೬೮-೬೯ರ ಶಾಸನವು (ಧಾ.ಜಿ.ಶಾ.ಸೂ, ಸಂ. ಸಿ. ೩೨, ಪು. ೩೭; SII, XX, No.244) ಶಂಖ ಜಿನಾಲಯಕ್ಕೆ ಮೊಳಗೆರೆ ನಿಗ್ಗಲ ಗ್ರಾಮ ನೀಡಿದುದನ್ನು ತಿಳಿಸುತ್ತದೆ. ಇದೇ ಅರಸನ ಇದೇ ತೇದಿಯ ಇನ್ನೊಂದು ಶಾಸನವು ಎಡಗೋಡೆಯಲ್ಲಿದೆ (ಧಾ.ಜಿ.ಶಾ.ಸೂ, ಸಂ. ಸಿ. ೩೩, ಪು. ೩೭; SII, XX, No. 245). ಅದು ಗಂಗ ಕಂದರ್ಪನು ಜಿನಾಲಯಕ್ಕಾಗಿ ಜಯದೇವ ಪಂಡಿತನಿಗೆ ದಾನ ನೀಡಿದ ವಿಷಯವನ್ನು ಉಲ್ಲೇಖಿಸುತ್ತದೆ. ಊರ ಬಸಿಬಣದ ಬ್ರಹ್ಮದೇವರ ಗುಡಿಯ ಬಳಿಯ ಶಾಸನದಲ್ಲಿ (ಧಾ.ಜಿ.ಶಾ.ಸೂ, ಸಂ. ಸಿ.೩೪, ಪು.೩೭; SII, XX, No. 232). ಇದರ ತೇದಿಯು ಕ್ರಿ.ಶ. ೧೪೧೨. ಇದು ಸೋಮೇಶ್ವರ ದೇವರ ಆಚಾರ್ಯ ಶಿವರಾಮಯ್ಯ ಮತ್ತು ಶಂಖ ಬಸದಿಯ ಆಚಾರ್ಯರನ್ನು ಕುರಿತು ಉಲ್ಲೇಖಿಸುತ್ತದೆ.

೧೯

ಊರು ಲಕ್ಷ್ಮೇಶ್ವರ
ಸ್ಮಾರಕ ಸೋಮನಾಥ (ಸೋಮೇಶ್ವರ)
ಸ್ಥಳ ಊರ ಮಧ್ಯೆ (ಪುಲಿಗೆರೆ ಬಣದಲ್ಲಿ)
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ ರಾ.ಪು.ಇ

ಲಕ್ಷ್ಮೇಶ್ವರ ಊರಿನ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ಈ ದೇವಾಲಯ ಪ್ರಸಿದ್ಧಿಯನ್ನು ಪಡೆದಿದೆ. ಈ ಗುಡಿಯನ್ನು ಪುಲಿಗೆರೆ ಸೋಮೇಶ್ವರ ದೇವಾಲಯ ಎಂದೂ ಕರೆಯಲಾಗುತ್ತದೆ. ಪ್ರಸ್ತುತ ದೇವಾಲಯವು ಪೂರ್ವ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಮೂರು ಅಗಸೆ ದ್ವಾರಗಳನ್ನು ಹೊಂದಿದ್ದು, ಪ್ರಾಚೀನ ಕೋಟೆ ಗೋಡೆಯ ಒಳಭಾಗದಲ್ಲಿದೆ. ಇತ್ತೀಚಿನ ನಗರೀಕರಣದಿಂದ ಪ್ರಾಚೀನ ಕೋಟೆ ಗೋಡೆಯ ಕೆಲವು ಭಾಗಗಳನ್ನು ಮಾತ್ರವೇ ಕಾಣಬಹುದು.

ಈ ದೇವಾಲಯವು ಅತ್ಯಂತ ಸಂಕೀರ್ಣತೆಯಿಂದ ಕೂಡಿದ್ದು, ದೇವಾಲಯದ ಒಳಗೆ ಹಲವಾರು ಕಿರು ದೇವಾಲಯಗಳಿರುವುದರಿಂದ, ಇದನ್ನು ದೇವಾಲಯ ಸಮುಚ್ಚಯವೆಂದು ಕರೆಯುವುದು ಹೆಚ್ಚು ಸಮಂಜಸ. ಮುಖ್ಯ ದೇವಾಲಯವು ಪೂರ್ವಾಭಿಮುಖವಾಗಿದೆ. ಇದರಲ್ಲಿ ಗರ್ಭಗೃಹ, ಅಂತರಾಳ, ನವರಂಗ ಮತ್ತು ವಿಶಾಲವಾದ ಮುಖಮಂಟಪಗಳಿವೆ. ಗರ್ಭಗೃಹವನ್ನು ಇತ್ತೀಚಿನ ದಿನಗಳಲ್ಲಿ ನವೀಕರಿಸಲಾಗಿದ್ದು, ಒಳಭಿತ್ತಿಯಲ್ಲಿ ಹಾಗೂ ನೆಲಕ್ಕೆ ಹೊಳಪುಕಲ್ಲುಗಳನ್ನು (ಟೈಲ್ಸ್‌) ಅಳವಡಿಸಿರುವುದರಿಂದ ಪ್ರಾಚೀನ ಅಂಶಗಳು ಗೋಚರಿಸುವುದಿಲ್ಲ. ಅಂತರಾಳ ಭಾಗವನ್ನು ಸಹ ಇದೇ ರೀತಿಯಾಗಿ ನವೀಕರಿಸಿರುವುದರಿಂದ ಪ್ರಾಚೀನ ಅಂಶಗಳು ಇಂದು ನಮಗೆ ಲಭ್ಯವಿಲ್ಲ. ಗರ್ಭಗೃಹದಲ್ಲಿ ಸಾಮಾನ್ಯವಾಗಿ ಶಿವನನ್ನು ಲಿಂಗದ ರೂಪದಲ್ಲಿ ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ಆದರೆ ಇಲ್ಲಿ ಲಿಂಗರೂಪಿ ಶಿವನ ಬದಲು ವೃಷಭಾರೂಢ ಶಿವ ಮತ್ತು ಪಾರ್ವತಿಯ ಅತೀ ಸುಂದರ ಶಿಲ್ಪವನ್ನು ಮೂರ್ತಿರೂಪದಲ್ಲಿ ಪೂಜಿಸಲಾಗುತ್ತಿದೆ. ಶಿವನು ನಂದಿಯ (ವೃಷಭ) ಮೇಲೆ ಮುಂಭಾಗದಲ್ಲಿ ಕುಳಿತಿದ್ದು ಅವನ ಹಿಂಭಾಗದಲ್ಲಿ ಪಾರ್ವತಿಯು ಕುಳಿತಿದ್ದಾಳೆ. ಈ ಶಿಲ್ಪವು ಚಾಲುಕ್ಯ ಶೈಲಿಯಲ್ಲಿದ್ದು ಅತ್ಯಂತ ಸುಂದರವಾಗಿದೆ. ಇದು ಅಪರೂಪವೂ ಹೌದು. ಅಂತರಾಳದ ಬಾಗಿಲು ನವರಂಗಕ್ಕೆ ತೆರೆದುಕೊಳ್ಳುತ್ತದೆ. ಅದರ ಬಾಗಿಲವಾಡವು ಕೆಲವು ಅಲಂಕರಣೆಗಳಿಂದ ಕೂಡಿದ್ದು, ಅದರ ಇಕ್ಕೆಲಗಳಲ್ಲಿ ಜಾಲಾಂಧ್ರಗಳಿವೆ. ನವರಂಗದಲ್ಲಿ ಘನಾಕೃತಿಯ ನಾಲ್ಕು ಕಂಬಗಳು ಭುವನೇಶ್ವರಿ ಭಾಗವನ್ನು ಆದರಿಸಿವೆ. ನವರಂಗದ ಬಲಭಾಗದಲ್ಲಿ ಒಂದು ಶಿವಲಿಂಗ ಹಾಗೂ ಗಣಪತಿಯ ಮೂರ್ತಿಶಿಲ್ಪವನ್ನೂ ಒಂದು ಕಟ್ಟೆಯ ಮೇಲೆ ಪ್ರತಿಷ್ಠಾಪಿಸಲಾಗಿದೆ. ಈ ಲಿಂಗವನ್ನು ಆದಯ್ಯನ ಲಿಂಗವೆಂದು ಕರೆಯಲಾಗುತ್ತದೆ. ಆದಯ್ಯನು ಪರಮ ಶಿವಭಕ್ತನಾಗಿದ್ದು ಅವನು ಈ ದೇವಾಲಯದಲ್ಲಿದ್ದ ಜೈನ ಮೂರ್ತಿಯನ್ನು ಭಗ್ನಗೊಳಿಸಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಿದನೆಂದು ಹರಿಹರನ ಆದಯ್ಯನ ರಗಳೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ವಿಷಯವನ್ನು ಕುರಿತು ಮುಂದೆ ಚರ್ಚಿಸಲಾಗುವುದು. ನವರಂಗದ ಪೂರ್ವ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಪ್ರವೇಶ ದ್ವಾರಗಳಿವೆ. ಪೂರ್ವ ದ್ವಾರದ ಮುಂದೆ ಮುಖಮಂಟಪವಿದೆ. ಉತ್ತರ ಮತ್ತು ದಕ್ಷಿಣ ದ್ವಾರಗಳ ಮುಂಭಾಗದಲ್ಲಿ ಪ್ರವೇಶ ಮಂಟಪಗಳನ್ನು ನಿರ್ಮಿಸಿದ್ದು, ಅದರಲ್ಲಿ ಕಿರು ಕಕ್ಷಾಸನವಿದೆ.

ನವರಂಗದ ಮುಂಭಾಗದಲ್ಲಿ, ಅದಕ್ಕೆ ಹೊಂದಿಕೊಂಡಂತೆ ಅಂತರಾಳ ಭಾಗವೆಂದು ಕರೆಯಬಹುದಾದ ವಾಸ್ತು ಭಾಗದ ಮುಂದೆ ಹಲವಾರು ಅಲಂಕೃತ ಕಂಬಗಳ ಮುಖ ಮಂಟಪವಿದೆ. ಇದಕ್ಕೂ ಪೂರ್ವ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಪ್ರವೇಶ ದ್ವಾರಗಳಿವೆ. ಮುಖಮಂಟಪದ ಭುವನೇಶ್ವರಿಯನ್ನು ಆಕರ್ಷಕವಾಗಿ ಅಲಂಕರಿಸಲಾಗಿದೆ. ಅದರಲ್ಲಿ ಅಧಿಕವಾಗಿ ಕೆಳಮುಖ ಅಥವಾ ಅಧೋಮುಖದ ಕಮಲದ ಹೂವಿನ ಕೆತ್ತನೆಯಿದೆ. ದೇವಾಲಯಕ್ಕೆ ಅಧಿಷ್ಠಾನ ಮತ್ತು ಗರ್ಭಗೃಹದ ಮೇಲೆ ಬಹುಕೋನಾಕಾರದ ಕದಂಬ ನಾಗರ ಶೈಲಿಯ ಶಿಖರವಿದೆ. ಶಿಖರದಲ್ಲಿ ಇಂದು ಕಾಣುತ್ತಿರುವ ಲೋಹದ ಕಲಶವನ್ನು ರಂಭಾಪುರಿಯ ಪಂಚಾಚಾರ್ಯ ವೀರಗಂಗಾಧರ ಸ್ವಾಮಿಗಳು ಪ್ರತಿಷ್ಠಾಪಿಸಿದರೆಂದು ತಿಳಿದುಬರುತ್ತದೆ. ದೇವಾಲಯದ ಹೊರಭಾಗದ ಭಿತ್ತಿಗಳಲ್ಲಿ ಹಲವಾರು ದೇವತೆಗಳ ಮೂರ್ತಿಶಿಲ್ಪಗಳನ್ನು ಕೆತ್ತಲಾಗಿದೆ. ಕಾಲನ ತುಳಿತಕ್ಕೆ ಸಿಲುಕಿ ಇಂದು ಅನೇಕ ಶಿಲ್ಪಗಳು ನಶಿಸಿವೆ. ಉಳಿದಿರುವ ಶಿಲ್ಪಗಳು ಅಂದಿನ ಕಲಾ ಶೈಲಿಯನ್ನು ನಮ್ಮ ಮುಂದಿಡುತ್ತವೆ. ಆರು ಬಾಹುಗಳ ಶಿವ, ಗಣೇಶ, ಅಷ್ಟದಿಕ್ಪಾಲಕರು, ಯಕ್ಷ, ಯಕ್ಷಿಯ, ಗಂಧರ್ವ ಮತ್ತು ಸಾಲಭಂಜಿಕಯೆರ ಶಿಲ್ಪಗಳು ಪ್ರಮುಖವಾಗಿ ಗಮನ ಸೆಳೆಯುತ್ತವೆ. ಹೊರಭಾಗದ ಛಾವಣಿಯಲ್ಲಿ ವಿಷ್ಣು, ಭೈರವ, ನಟರಾಜ, ಗಣಪತಿ, ವೀರಭದ್ರ, ಹರಿಹರ, ವೇಣುಗೋಪಾಲ ಮುಂತಾದ ಶಿಲ್ಪಗಳಿವೆ. ದಕ್ಷಿಣದಲ್ಲಿ ಕೆತ್ತಲಾಗಿರುವ ಒಂದು ಧ್ಯಾನಸಕ್ತ ಮೂರ್ತಿಯು ಕುಳಿತಿರುವಂತೆ ಇದೆ. ಅದು ಜಿನನ್ನು ಹೋಲುತ್ತದೆ. ಅದರ ಮೇಲೆ ಮುಕ್ಕೊಡೆಯಿರುವುದರಿಂದ ವಿದ್ವಾಂಸರ ಚರ್ಚೆಗೆ ಗ್ರಾಸವಾಗಿದೆ. ಗುಡಿಯ ದಕ್ಷಿಣ ಶಿಖರಭಾಗದಲ್ಲಿ ಬ್ರಹ್ಮ, ಶಿವ, ಯಕ್ಷರನ್ನು, ಪಶ್ಚಿಮದಲ್ಲಿ ಶಕ್ತಿ, ಸರಸ್ವತಿಯರನ್ನು ಮತ್ತು ಉತ್ತರಭಾಗದಲ್ಲಿ ದೇವತೆಗಳ ವಿವಿಧ ಅವತಾರಗಳನ್ನು ಕೆತ್ತಲಾಗಿದೆ.

ದೇವಾಲಯ ಸಮುಚ್ಚಯದಲ್ಲಿ ಪಶ್ಚಿಮಾಭಿಮುಖವಾಗಿ, ಎರಡು, ದಕ್ಷಿಣಾಭಿಮುಖವಾಗಿ ಮೂರು, ಉತ್ತರಾಭಿಮುಖವಾಗಿ ಮೂರಕ್ಕಿಂತ ಅಧಿಕ ದೇವಾಲಯಗಳಿವೆ. ಇವುಗಳು ಸಾಮಾನ್ಯವಾಗಿ ಗರ್ಭಗೃಹ ಮತ್ತು ನವರಂಗ ಭಾಗಗಳನ್ನು ಹೊಂದಿವೆ. ಕೆಲವು ಗುಡಿಗಳಲ್ಲಿ ಲಿಂಗ ಅಥವಾ ಬೇರೆ ಮೂರ್ತಿಶಿಲ್ಪಗಳು ಇದ್ದರೆ, ಇನ್ನುಳಿದವುಗಳಲ್ಲಿ ಯಾವ ದೇವತೆಯ ಮೂರ್ತಿಶಿಲ್ಪಗಳಿಲ್ಲ. ದೇವಾಲಯಗಳನ್ನು ಸಾಲುದೀಪ ಮಂಟಪಗಳೆಂದು ಕೆಲವರು ಉಲ್ಲೇಖಿಸುತ್ತಾರೆ. ಇವುಗಳಲ್ಲಿ ಕೆಲವು ಅತ್ಯಂತ ಶಿಥಿಲಾವಸ್ಥೆಯಲ್ಲಿವೆ. ದೇವಾಲಯದ ಪಕ್ಕದಲ್ಲಿ, ಉತ್ತರಕ್ಕೆ, ಗಣಪತಿಯ ಗುಡಿಯಿದೆ. ಅದರ ಹಿಂಭಾಗ ಒಂದು ದ್ವಿಕೂಟ ದೇವಾಲಯವಿದ್ದು, ಅದರಲ್ಲಿ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ಅದರ ಮುಂಭಾಗವಿರುವ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಕಕ್ಷಾಸನವಿದೆ. ಪ್ರಸ್ತುತ ಈ ಗುಡಿಯಲ್ಲಿ ಅಯ್ಯಪ್ಪನ ಕಂಚಿನ ಮೂರ್ತಿ ಮತ್ತು ಛಾಯಚಿತ್ರವನ್ನು ಇರಿಸಿ ಪೂಜಿಸಲಾಗುತ್ತದೆ. ಈ ಗುಡಿಗಳು ವಿಜಯನಗರೋತ್ತರ ಕಾಲದ್ದೆಂದು ಅಭಿಪ್ರಾಯಪಡಲಾಗಿದೆ.

ಗುಡಿಯ ಉತ್ತರ ದ್ವಾರದ ಮುಂದೆ ಒಂದು ಹೊಂಡವಿದೆ. ಅಲ್ಲಿಂದ ಮುಂದೆ ಸಾಗಿದರೆ ಮತ್ತೊಂದು ಪ್ರವೇಶ ದ್ವಾರವಿದೆ. ಈ ದ್ವಾರದ ಮುಂಭಾಗದಲ್ಲಿ ಕೆಲವು ಶಾಸನ ಕಲ್ಲು ಹಾಗೂ ವೀರಗಲ್ಲುಗಳನ್ನು ಸಾಲಾಗಿ ಇರಿಸಲಾಗಿದೆ. ಪ್ರವೇಶ ದ್ವಾರದಿಂದ ಹೊರ ದ್ವಾರದವರೆಗೆ ಇಕ್ಕೆಲಗಳಲ್ಲಿ ೬ ಸೋಪಾನಗಳಿರುವ ಉದ್ದನೆಯ ಕಟ್ಟೆಯಿದೆ. ಇದರ ಹಿಂಭಾಗದಲ್ಲಿಯೂ ಕೆಲವು ಸಾಲುಮಂಟಪಗಳು ಇದ್ದಿರಬೇಕು. ಅವುಗಳು ಇಂದು ಅತಿಕ್ರಮಣಕ್ಕೆ ಒಳಗಾಗಿ ನಶಿಸಿವೆ. ದಕ್ಷಿಣ ದ್ವಾರಮಂಟಪದಲ್ಲಿ ನಗಾರಿಖಾನೆಯಿದ್ದು ವಿಜಯನಗರ ಕಾಲದ ಸಾಲಭಂಜಿಕೆಯರ ಉಬ್ಬುಶಿಲ್ಪ ಹಾಗೂ ಕಂಬಗಳಿವೆ. ಇದೇ ದ್ವಾರದ ಎಡ ಬದಿಯಲ್ಲಿ ಸೋಮೇಶ್ವರ ಹಾಗೂ ಶಿವರಾಮ ಒಡೆಯರ ಮೂರ್ತಿ ಶಿಲ್ಪಗಳಿವೆ.

ಮುಖ್ಯ ದೇವಾಲಯದ ಹಿಂಭಾಗದಲ್ಲಿ ಒಂದು ದೊಡ್ಡ ಬಾವಿಯಿದ್ದು, ಅದಕ್ಕೆ ಸುಂದರವಾದ ಪಾವಟಿಗೆಗಳನ್ನು ಇರಿಸಲಾಗಿದೆ. ಧಾರವಾಡ ಜಿಲ್ಲೆ ಗ್ಯಾಸೆಟಿಯರ್, ಇದನ್ನು ಪುಷ್ಕರಣಿಯೆಂದು ನಮೂದಿಸಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿನ ‘ಪುಷ್ಕರಣಿ’ಯ ಹೂಳನ್ನು ತೆಗೆದು ಸ್ವಚ್ಛಗೊಳಿಸಿದಾಗ ಸುಂದರವಾದ ಬಾವಿಯು ಬೆಳಕಿಗೆ ಬಂದಿದೆ. ಈ ಪುಷ್ಕರಣಿಯನ್ನು ಗೌರಿ ಎಂಬ ಭಕ್ತೆಯು ಕಟ್ಟಿಸಿದಳೆಂದು ಸ್ಥಳೀಯರು ತಿಳಿಸುತ್ತಾರೆ. ಪ್ರಸ್ತುತ ಬಾವಿಗೆ ಸಂಬಂಧಿಸಿದಂತೆ ಇತ್ತೀಚಿಗೆ (೨೦೦೫) ಒಂದು ಶಾಸನವು ಪತ್ತೆಯಾಗಿದೆ. ದೇವಾಲಯಕ್ಕೆ ಸಂಬಂಧಿಸಿದಂತೆ ೩೦ಕ್ಕೂ ಅಧಿಕವಾದ ಶಾಸನಗಳು ದೊರಕಿವೆ. ಕ್ರಿ.ಶ. ೧೩೫೩ರ ವಿಜಯನಗರ ಕಾಲದ ಶಾಸನವು ಚಳ್ಳಕೆರೆ ನಾಯಕನೆಂಬ ಅಧಿಕಾರಿಯು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುವುದನ್ನು ತಿಳಿಸಿದರೆ, ಕ್ರಿ.ಶ. ೧೩೯೨ ಮತ್ತೊಂದು ಶಾಸನವು ದೇವಾಲಯದ ದಕ್ಷಿಣ ದ್ವಾರವನ್ನು ಜೀರ್ಣೋದ್ಧಾರ ಮಾಡಿದುದನ್ನು ಉಲ್ಲೇಖಿಸುತ್ತದೆ.

ದೇವಾಲಯದಲ್ಲಿ ಇಂದಿಗೂ ಪೂಜೆಯು ನಡೆಯುತ್ತಿದೆ. ಇಲ್ಲಿ ಪಠಿಸುವ ಒಂದು ಶ್ಲೋಕದಲ್ಲಿ ಇಲ್ಲಿಯ ಸೋಮನಾಥನು ಸೌರಾಷ್ಟ್ರದಿಂದ ಬಂದನೆಂದು ದೇವರ ಮೂಲದ ಬಗೆಗೆ ತಿಳಿಸುತ್ತದೆ. ಸಾಹಿತ್ಯದಲ್ಲಿ ಈ ಕುರಿತು ಕೆಲವು ಉಲ್ಲೇಖಗಳು ನಮಗೆ ದೊರಕುತ್ತವೆ. ಈಗಾಗಲೇ ಪ್ರಸ್ತಾಪಿಸಿದಂತೆ ಶಿವಭಕ್ತ ಆದಯ್ಯನು ಸೌರಾಷ್ಟ್ರದಲ್ಲಿರುವ ಸೋಮನಾಥನಂತೆ ಮೂರ್ತಿಯನ್ನು ಮಾಡಿಸಿ ಇಲ್ಲಿ ಪ್ರತಿಷ್ಠಾಪಿಸಿದನೆಂದು ನಂಬಲಗಿದೆ. ಸಮಕಾಲೀನ ಸಾಹಿತ್ಯದಿಂದ ಪಾಲ್ಕುರಿಕೆ ಸೋಮನಾಥನ ‘ಪಂಡಿತಾರಾಧ್ಯ ಚರಿತ್ರಮು’ ಮತ್ತು ‘ಬಸವಪುರಾಣ’, ಭೀಮಕವಿಯ ‘ವೀರಶೈವಾಮೃತ ಪುರಾಣ’, ಲಕ್ಕಣ ದಂಡೇಶನ ‘ಶಿವತತ್ವ ಚಿಂತಾಮಣಿ’, ರಾಘವಾಂಕನ ‘ಸೋಮನಾಥ ಚರಿತೆ’ ಮುಂತಾದವುಗಳಲ್ಲಿ ಈ ದೇವರನ್ನು ಕುರಿತು ಪ್ರಸ್ತಾಪಿಸಲಾಗಿದೆ. ಕಾವ್ಯಗಳಲ್ಲಿನ ವಿವರಣೆಯಂತೆ ಆದಯ್ಯನು ಸೌರಾಷ್ಟ್ರದಿಂದ ಪುಲಿಗೆರೆಗ (ಲಕ್ಷ್ಮೇಶ್ವರ) ಬಂದು ಇಲ್ಲಿಯ ಜೈನ ಪಾರಿಸೆಟ್ಟಿಯ ಮಗಳು ಪದ್ಮಾವತಿಯನ್ನು ಮೋಹಿಸಿ ನಂತರ ಮದುವೆಯಾಗುತ್ತಾನೆ. ಅವನ ಪತ್ನಿಯು ತಂದೆಯ ಮಾತಿಗೆ ಕಿವಿಗೊಡದೆ ಹೂಜೇಶ್ವರ ದೇವಸ್ಥಾನದಲ್ಲಿ ಶಿವದೀಕ್ಷೆಯನ್ನು ಪಡೆದು ಜೈನಮತವನ್ನು ತೊರೆಯುತ್ತಾಳೆ. ಶಿವನ ಮಹಿಮೆ ಹಾಗೂ ಹಿರಿಮೆಯನ್ನು ಲೋಕಕ್ಕೆ ಸಾರಲು ಆದಯ್ಯನೇ ಸೌರಾಷ್ಟ್ರದ ಸೋಮೇಶ್ವರನನ್ನು ಪುಲಿಗೆರೆಗೆ ತಂದು ಪ್ರತಿಷ್ಠಾಪಿಸಿದನೆಂದು ನಂಬಲಾಗುತ್ತಿದೆ. ಅದರಂತೆಯೇ ಈ ದೇವಾಲಯವು ಮೂಲತಃ ಜೈನ ಬಸದಿಯಾಗಿದ್ದು, ಅದರಲ್ಲಿ ಶಿವನನ್ನು ಪ್ರತಿಷ್ಠಾಪಿಸುವ ಮೂಲಕ ಶಿವಾಲಯವಾಗಿ ಪರಿವರ್ತಿಸಿದನು ಎನ್ನಲಾಗುತ್ತದೆ. ಆದರೆ ದೇವಾಲಯದಲ್ಲಿ ಜೈನರ ಶಿಲ್ಪ ಅಥವಾ ಜಿನ ಬಿಂಬಗಳು ಹಾಗೂ ಇನ್ನಿತರೆ ಪುರಾವೆಗಳು ದೊರಕಿಲ್ಲ. ಸಾಹಿತ್ಯದಲ್ಲಿ ಮಾತ್ರವೇ ಇದರ ಪ್ರಸ್ತಾಪವಿದೆ. ಮಧ್ಯಕಾಲೀನ ಕರ್ನಾಟಕದಲ್ಲಿ ಶೈವ ಮತ್ತು ಜೈನ ಸಮುದಾಯದವರ ನಡುವೆ ಮತೀಯ ಸಂಘರ್ಷಗಳು ನಡೆಯುತ್ತಲಿದ್ದವು ಎಂಬುದು ಇದರಿಂದ ದೃಢಪಡುತ್ತದೆ.

ಸೋಮೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಅನೇಕ ಶಾಸನಗಳಿವೆ. ದೇವಾಲಯದ ಪಕ್ಕದಲ್ಲಿರುವ ಕಲ್ಯಾಣ ಚಾಲುಕ್ಯ ಅರಸ ಆರನೆಯ ವಿಕ್ರಮಾದಿತ್ಯನ ಕ್ರಿ.ಶ. ೧೦೭೭ರ ಶಾಸನವು (ಧಾ.ಜಿ.ಶಾ.ಸೂ, ಸಿ.ಸಂ. ೩೭, ಪು. ೩೭) ಪುಲಿಗೆರೆಯ ದೇವಾಲಯಕ್ಕೆ ಅರಸನು ಪುರ್ನದತ್ತಿಯನ್ನು ನೀಡಿದನೆಂದು ದಾಖಲಿಸುತ್ತದೆ. ಇದೇ ಅರಸನ ಕಾಲದ ಕ್ರಿ.ಶ. ೧೧೦೨ರ ಶಾಸನದಲ್ಲಿ (ಧಾ.ಜಿ.ಶಾ.ಸೂ, ಸಂ. ಸಿ. ೪೧, ಪು. ೩೭; SII, XX, No.66; EI, XVI, pp. 31-35) ದಂಡನಾಯಕ ಮಾಧವಭಟ್ಟನು ಸುಂಕದಾನವನ್ನು ದೇವಾಲಯಕ್ಕೆ ನೀಡಿದನೆಂದು ದಾಖಲಿಸಿದೆ. ಗುಡಿಯ ಆವರಣದಲ್ಲಿರುವ ಕ್ರಿ.ಶ. ೧೧೦೭ರ, ಇದೇ ಅರಸನ ಕಾಲದ ಶಾಸನವು (ಧಾ.ಜಿ.ಶಾ.ಸೂ, ಸಂ. ಸಿ.೪೨, ಪು. ೩೭; SII, xx, No. 122) ಸೋಮನಾಥ ದೇವರಿಗೆ ಮಹಾಮಂಡಳೇಶ್ವರ ತೈಲದೇವನಿಂದ ಕಲ್ಲವಣ ಗ್ರಾಮ ಹಾಗೂ ದಂಡನಾಯಕರಿಂದ ಹಣವನ್ನು ದಾನ ಮಾಡಿದ ಬಗ್ಗೆ ಉಲ್ಲೇಖಿಸಿದೆ. ಇದೇ ಅರಸನ ಕ್ರಿ.ಶ. ೧೧೧೨ರ ಶಾಸನವು (ಧಾ.ಜಿ.ಶಾ.ಸೂ. ಸಂ.ಸಿ. ೪೩, ಪು.೩೭; SII, XX, No. 74) ದಂಡನಾಯಕ ಅನಂತಮಯ್ಯನು ಸೋಮೇಶ್ವರ ದೇವಾಲಯಕ್ಕೆ ಸೇರುವಂತೆ, ತಾನು ನಿರ್ಮಿಸಿದ ಸೂಳೆಗೆರೆಗೆ ದಾನ ನೀಡಿದನೆಂದು ತಿಳಿಸುತ್ತದೆ. ಯಾದವ ಅರಸ ಸಿಂಘಹಣನ ಕಾಲದ ಕ್ರಿ.ಶ. ೧೧೧೫ರ ಶಾಸನದಲ್ಲಿ (ಧಾ.ಜಿ.ಶಾ.ಸೂ, ಸಂ. ಸಿ.೪೪; ವು.೩೭ SII, xx, No. 191) ತೆಲ್ಲಿಗೆ ಐವತ್ತರಿಂದ, ಬಹುಶಃ ಈ ದೇವಾಲಯಕ್ಕೆ ನೀಡಿದ ದಾನದ ವಿವರಗಳಿವೆ. ಇವನ ಕಾಲದ ಮತ್ತೊಂದು ಶಾಸನ ವು (ಧಾ.ಜಿ.ಶಾ.ಸೂ, ಸಂ. ಸಿ.೪೬; ಪು.೩೭ SII, xx, No.207) ದೇವಾಲಯಕ್ಕೆ ಕೆಲವು ದಾನಗಳನ್ನು ನೀಡಿದ್ದನ್ನು ದಾಖಲಿಸಿದೆ. ಕಲ್ಯಾಣ ಚಾಲುಕ್ಯ ಅರಸ ಆರನೆ ವಿಕ್ರಮಾದಿತ್ಯ ಕಾಲದ ಕ್ರಿ.ಶ. ೧೧೨೨ರ ಶಾಸನದಲ್ಲಿ (ಧಾ.ಜಿ.ಶಾ.ಸೂ. ಸಂ. ಸಿ. ೪೭, ಪು. ೩೭; SII. XX, No. 81) ದಂಡನಾಯಕ ನಾಗವರ್ಮಯ್ಯನು ಪುಲಿಗೆರೆಯ ನೂರಿಪ್ಪತ್ತು ಮಹಾಜನರಿಂದ ಭೂಮಿಯನ್ನು ಕೊಂಡು ಸೋಮೇಶ್ವರ ದೇವಾಲಯಕ್ಕೆ ದಾನ ಮಾಡಿದ ವಿವರಗಳಿವೆ. ಇದೇ ವಂಶದ ಮೂರನೆಯ ಸೋಮೇಶ್ವರನ ಕಾಲದ ಕ್ರಿ.ಶ . ೧೧೨೮ರ ಶಾಸನವು (ಧಾ.ಜಿ.ಶಾ.ಸೂ. ಸಂ. ಸಿ.೪೯, ಪು.೩೮; SII, XX, No. 99) ಮಹಾಮಂಡಳೇಶ್ವರ ಜಯಕೇಶಿ ದೇವನಿಂದ ಸೋಮೇಶ್ವರ ದೇವಾಲಯದ ಘಳಿಗೆಗೆ ನೀಡಿದ ದಾನವನ್ನು ಕುರಿತು ತಿಳಿಸುತ್ತದೆ. ಇದೇ ವಂಶದ ಎರಡನೆ ಜಯಕೇಶಿ ದೇವನು ಇದೇ ಗ್ರಾಮವನ್ನು ಗುಡಿಗೆ ದಾನ ನೀಡಿದನೆಂದು ತಿಳಿಸುತ್ತದೆ. ಇವನ ಕಾಲದ ಮತ್ತೊಂದು ಶಾಸನವು (ದಾ.ಜಿ.ಶಾ. ಸೂ, ಸಂ.೫೧, ಪು. ೩೮; SII, xx, No. 107) ಮೇಲೆ ಉಲ್ಲೇಖಿಸಿದ ಮಹಾಮಂಡಳೇಶ್ವರನು ನಿಟ್ಟೂರು ಜಗದೇಕಮಲ್ಲನ ಕ್ರಿ.ಶ. ೧೨ನೇ ಶತಮಾನದ ಶಾಸನವು (ಧಾ.ಜಿ.ಶಾ.ಸೂ, ಸಂ. ಸಿ.೫೨, ಪು. ೩೮; SII, xx, 129) ಪುಲಿಗೆರೆಯ ದೇವಸ್ಥಾನ ಮತ್ತು ಸೇವಕರಿಗೆ ದಾನ ನೀಡಿದ ವೃತ್ತಿಗಳ ವಿವರಗಳಿವೆ. ಇವನ ಕಾಲದ ಇನ್ನೊಂದು ಶಾಸನದಲ್ಲಿ (ಧಾ.ಜಿ.ಶಾ.ಸೂ. ಸಂ. ಸಿ.೫೩, ಪು.೩೮; SII, xx, No. 117; EI, XVI, pp. 44-52) ದಂಡನಾಯಕ ಮೇಚರಸನು ಗುಡಿಗೆ ಭೂಮಿಯನ್ನು ದಾನ ನೀಡಿದನೆಂದು ಉಲ್ಲೇಖಿಸುತ್ತದೆ. ಸೋಮೇಶ್ವರ ದೇವಾಲಯದ ಪೂರ್ವದ್ವಾರದ ಎಡಭಾಗದಲ್ಲಿನ ಕಂಬದ ಮೇಲಿರುವ ಸುಮಾರು ಕ್ರಿ.ಶ. ೧೩ನೇ ಶತಮಾನದ ಶಾಸನವು (ಧಾ.ಜಿ.ಶಾ.ಸೂ, ಸ ಂ. ೬೯, ಪು. ೩೮; SII, XX, No.331) ಸೌರಾಷ್ಟ್ರದಿಂಧ ಬಂದ ಗುರುನಾಗೇಶ್ವರನು ಸೋಮನಾಥ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದನೆಂದು ತಿಳಿಸುತ್ತದೆ. ವಿಜಯನಗರ ಅರಸರ ಪ್ರಾರಂಭಿಕ ಕಾಲದ ಪಾವಣ್ಯ ಒಡೆಯನ ಕ್ರಿ.ಶ. ೧೩೫೩ರ ಶಾಸನವು (ಧಾ.ಜಿ.ಶಾ.ಸೂ. ಸಂ.೭೦, ಪು. ೩೮) ಚಿಕ್ಕಕೆರೆಯ ನಾಯಕನು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿದನೆಂದು ಉಲ್ಲೇಖಿಸಿದೆ. ಇನ್ನೊಂದು ಶಾಸನದಲ್ಲಿ (ಧಾ. ಜಿ.ಶಾ.ಸೂ, ಸಂ.ಸಿ.೭೧, ಪು. ೩೮; SII, XX, No. 366) ಭೈರವದೇವನು ದೇವಾಲಯದ ದಕ್ಷಿಣ ದ್ವಾರವನ್ನು ಜೀರ್ಣೋದ್ಧಾರ ಮಾಡಿಸಿದನೆಂದು ದಾಖಲಿಸಿದೆ. ಗುಡಿಯ ದಕ್ಷಿಣ ದ್ವಾರದಲ್ಲಿರುವ ಕೆಲವು ಶಿಲ್ಪಗಳ ಕೆಳಗೆ ಹೆಸರನ್ನು ಕೆತ್ತಲಾಗಿದೆ. ಶಿಲ್ಪದಲ್ಲಿರುವ ವ್ಯಕ್ತಿಗಳ ಹೆಸರುಗಳೆಂದು ಸುಲಭವಾಗಿ ಅರಿಯಬಹುದು (ಧಾ.ಜಿ. ಶಾ.ಸೂ, ಸಂ. ಸಿ.೭೨ ಮತ್ತು ೭೩). ದೇವಾಲಯದ ಪೂರ್ವ ದ್ವಾರದ ಕಂಬದಲ್ಲಿನ ಶಾಸನವು (ಧಾ.ಜಿ.ಶಾ.ಸೂ, ಸಂ.ಸಿ.೭೬, ಪು. ೩೯; SII, XX, No. 380) ಸೋಮನಾಥ ದೇವರಿಗೆ ಸುಂಕ ದಾನವನ್ನು ನೀಡಿದ್ದರ ಬಗೆಗೆ ಉಲ್ಲೇಖಿಸುತ್ತದೆ. ವಿಜಯನಗರದ ಅರಸ ಸದಾಶಿವರಾಯನ ಕಾಲದ ಕ್ರಿ.ಶ. ೧೫೪೭ರ ಶಾಸನ (ಧಾ.ಜಿ.ಶಾ.ಸೂ, ಸಂ. ಸಿ.೮೦, ಪು. ೩೯; SII, XX, No. 238) ಹುಲಿಗೆರೆ ನಾಡಿನಲ್ಲಿ ಮದುವೆ ಸುಂಕವನ್ನು ವಿನಾಯಿತಿ ಮಾಡಿದ ಉಲ್ಲೇಖವಿದೆ. ಇದೇ ಅರಸನ ಇದೇ ಕಾಲದ ಇನ್ನೊಂದು ಶಾಸನ (ಧಾ.ಜಿ.ಶಾ.ಸೂ, ಸಂ. ಸಿ.೮೨, ಪು.೩೯; SII, XX, No. 242) ಮದುವೆಯ ತೆರಿಗೆಯನ್ನು ಬಿಟ್ಟ ವಿಷಯ ದಾಖಲಿಸಿದೆ. ಇವನ ಇದೇ ತೇದಿಯ ಮಗದೊಂದು ಶಾಸನವು (ಧಾ.ಜಿ.ಶಾ.ಸೂ, ಸಂ.ಸಿ.೮೧, ಪು.೩೯; SII, XX, No.239) ತಿಮ್ಮೋಜ ನಾವಿದನಿಗೆ ಸುಂಕವನ್ನು ಬಿಟ್ಟ ಎಂದು ತಿಳಿಸುತ್ತದೆ.

೨೦

ಊರು ಲಕ್ಷ್ಮೇಶ್ವರ
ಸ್ಮಾರಕ ಅನಂತನಾಥ ಬಸದಿ (ಚಿಕ್ಕ ಬಸದಿ)
ಸ್ಥಳ ಊರ ಮಧ್ಯೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ ರಾ.ಪು.ಇ

ಇದು ತ್ರಿಕೂಟ ದೇವಾಲಯ. ಇದರಲ್ಲಿ ಮೂರು ಗರ್ಭಗೃಹಗಳು, ಮೂರು ಅಂತರಾಳಗಳು, ಅದರ ಮುಂದೆ ನವರಂಗ ಮತ್ತು ವಿಶಾಲವಾದ ಮುಖಮಂಟಪಗಳಿವೆ. ಮುಖ್ಯ ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಪಾಣಿಪೀಠದ ಮೇಲೆ ಸ್ಥಾನಿಕ ಅನಂತನಾಥ ತೀರ್ಥಂಕರರ ವಿಗ್ರಹವಿದೆ. ಅದರ ಹಿಂದೆ ಇರುವ ಪ್ರಭಾವಳಿಯಲ್ಲಿ ಮುಕ್ಕೊಡೆಯಿದೆ. ಮುಂದಿರುವ ಅಂತರಾಳದ ಬಾಗಿಲವಾಡದಲ್ಲಿ ಪಂಚ ಶಾಖೆಗಳನ್ನು ಕಾಣಬಹುದು. ಲಲಾಟದಲ್ಲಿ ಯಾವ ಬಿಂಬವೂ ಇಲ್ಲ. ದಕ್ಷಿಣದ ಎಡಗಡೆ ಇರುವ ಗರ್ಭಗೃಹದಲ್ಲಿ ನಿಂತ ಭಂಗಿಯಲ್ಲಿರುವ ಚಂದ್ರಪ್ರಭ ತೀರ್ಥಂಕರರ ಮೂರ್ತಿಶಿಲ್ಪವಿದೆ. ಅದರ ಹಿಂದೆ ಅಲಂಕೃತ ನಾಗ ಪ್ರಭಾವಳಿ ಇದೆ. ಉತ್ತರದ ಬಲಭಾಗದ ಗರ್ಭಗೃಹದಲ್ಲಿ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಯಿದೆ. ಗುಡಿಯ ಮೂರು ಅಂತರಾಳಗಳ ಬಾಗಿಲವಾಡಗಳೂ ಅಲಂಕರಣೆಯನ್ನು ಹೊಂದಿದ್ದು ಅವುಗಳ ಇಕ್ಕೆಲಗಳಲ್ಲಿ ಜಾಲಾಂಧ್ರಗಳನ್ನು ಕಾಣಬಹುದು. ನವರಂಗದ ಮಧ್ಯದಲ್ಲಿ ಚಾಲುಕ್ಯ ಶೈಲಿಯ ಆಕರ್ಷಕ ನಾಲ್ಕು ಕಂಬಗಳು ಭುವನೇಶ್ವರಿಯನ್ನು ಹೊತ್ತಿವೆ. ನವರಂಗದ ಎಡಭಾಗದಲ್ಲಿ ಬ್ರಹ್ಮೇಂದ್ರ ಮತ್ತ ಬಲಭಾಗದಲ್ಲಿ ಯಕ್ಷಿ ಪದ್ಮಾವತಿಯ ಶಿಲ್ಪವಿದೆ. ಬಸದಿಯಲ್ಲಿ ಪ್ರಾಚೀನ ಕಾಲದ ಅನೇಕ ಜೈನ ತೀರ್ಥಂಕರರ ಕಂಚಿನ ಪ್ರತಿಮೆಗಳಿವೆ. ಊರಿನಲ್ಲಿರುವ ಮಹಂತ ಮಠದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಅನೇಕ ಬಿಡಿ ಶಿಲ್ಪಗಳನ್ನು ಇರಿಸಲಾಗಿದೆ.