೩೧

ಊರು ಲಕ್ಷ್ಮೇಶ್ವರ
ಸ್ಮಾರಕ ಜುಮ್ಮಾ ಮಸೀದಿ (ಕಲ್ಲುಮಸೀದಿ)
ಸ್ಥಳ ಊರ ಪೇಟೆಯ ಬಣದಲ್ಲಿ
ಕಾಲ ಕ್ರಿ.ಶ. ೧೬೧೭
ಶೈಲಿ ಇಂಡೋ-ಇಸ್ಲಾಮಿಕ್‌
ಅಭಿಮುಖ ಉತ್ತರ
ಸ್ಥಿತಿ ಉತ್ತಮ
ಸಂರಕ್ಷಣೆ ರಾ.ಪು.ಇ

ಈ ಮಸೀದಿಯನ್ನು ಆದಿಲ್‌ಷಾಹಿ ಅರಸ ಎರಡನೇ ಅರಸ ಎರಡನೇ ಆದಿಲ್‌ಷಾನ ಕಾಲದಲ್ಲಿ ಲಕ್ಷ್ಮೇಶ್ವರದ ಆಡಳಿತಾಧಿಕಾರಿ ಅಂಕುಶ್‌ಖಾನನ ನಿರ್ಮಿಸಿದನೆಂದು ತಿಳಿದುಬರುತ್ತದೆ. ಊರಿನಲ್ಲಿರುವ ಹಿಂದೂ ಮತ್ತು ಜೈನ ದೇವಾಲಯಗಳಂತೆ ಈ ಮಸೀದಿಯು ಅತ್ಯಂತ ಆಕರ್ಷಕ ಸ್ಮಾರಕವಾಗಿದೆ. ಎತ್ತರದ ಕೋಟೆ ಗೋಡೆಯಂತೆ ಕಾಣಸಿಗುವ ಕಮಾನಿನ ದ್ವಾರದಿಂದ ಮಸೀದಿಯ ಪ್ರಾಂಗಣವನ್ನು ಪ್ರವೇಶಿಸಬಹುದು. ಈ ದ್ವಾರಕ್ಕೆ ಎರಡು ಮಿನಾರ್ ಗಳು ಇವೆ. ದ್ವಾರದ ಮೇಲ್ಭಾಗವನ್ನು ಮೆಟ್ಟಿಲುಗಳ ಮೂಲಕ ತಲುಪಬಹುದು.

ಜುಮ್ಮಾ ಮಸೀದಿಯು ಎತ್ತರವಾದ ಎರಡು ಮಿನಾರ್ ಗಳು ಹಾಗೂ ಮೇಲೆ ಅರ್ಧಗೋಳಾಕಾರದ ಗುಮ್ಮಟವನ್ನು ಹೊಂದಿದೆ. ಕೆಳಭಾಗದಲ್ಲಿ ವಿಶಾಲವಾದ ಪ್ರಾರ್ಥನಾ ಸಭಾಂಗಣವಿದೆ. ಇದರಲ್ಲಿ ಷಟ್‌ಕೋನಾಕಾರವಾದ ಕಂಬಗಳು ಇವೆ. ಗುಮ್ಮಟ ಒಳಭಾಗ ಅರ್ಧಗೋಳಾಕಾರವಾಗಿದೆ. ಸಭಾ ಅಂಕಣಗಳನ್ನು ಇಲ್ಲಿ ಗಮನಿಸಬಹುದು. ಕಮಾನಿನ ಕಂಬಗಳಲು ಮಸೀದಿಯ ಛಾವಣಿಗೆ ಆಸರೆಯನ್ನು ನೀಡಿವೆ. ಮಸೀದಿಯ ಮುಂಭಾಗದಲ್ಲಿ , ಮೇಲೆ ಇಳಿಜಾರಿದ ಸಜ್ಜಾ ಅಲಂಕರಣೆಯಿದೆ. ಸಾಮಾನ್ಯವಾಗಿ ಈ ರೀತಿಯ ಅಲಂಕರಣೆಯು ಹಿಂದೂ ದೇವಾಲಯಗಳಲ್ಲಿ ಕಂಡುಬರುತ್ತವೆ. ಛಾವಣಿಯ ಸಜ್ಜಾಕೋನಗಳಿಂದ ದ್ರಾವಿಡ ಶೈಲಿಯ ದೇವಾಲಯದಲ್ಲಿ ಕಂಡುಬರುವಂತಹ ಕಲ್ಲಿನ ಸರಪಳಿಗಳನ್ನು ಇಳಿಬಿಡಲಾಗಿರುವುದು ಅತ್ಯಂತ ಆಕರ್ಷಕವಾಗಿದೆ. ಮಸೀದಿಯನ್ನು ನಿರ್ಮಿಸಿದಾಗ ಇಂತಹ ಅನೇಕ ಸರಪಳಿಗಳು ಇದ್ದಿರಬೇಕು. ಪ್ರಸ್ತುತ ತುಂಡರಿಸಿದ ಕಲ್ಲಿನ ಕೆಲವು ಸರಪಳಿಗಳು ಕಾಣಸಿಗುತ್ತವೆ.

ಗುಮ್ಮಟದ ಒಳಭಾಗದಲ್ಲಿ ಕುಸುರಿ ಕೆಲಸವುಳ್ಳ ಹೂಬಳ್ಳಿಗಳ ಅಲಂಕರಣೆಯಿದೆ. ಗುಮ್ಮಟದ ಒಳಭಾಗದಲ್ಲಿಯೂ ಕೆಳಭಾಗದಿಂದ ಮೇಲಿನವರೆಗೆ ಕಮಲದ ದಳಗಳ ಅಲಂಕರಣೆಯನ್ನು ಗಮನಿಸಬಹುದು. ಇಲ್ಲಿರುವ ಮಿನಾರ್ ಗಳು ಸಹ ಎತ್ತರ ಕೋನಾಕಾರವನ್ನು ಹೊಂದಿದ್ದು, ಅವುಗಳಲ್ಲಿ ಕಮಾನಿನಾಕಾರದ ಕಿಟಕಿಗಳನ್ನು ಇರಿಸಲಾಗಿದೆ. ಇಡೀ ಕಟ್ಟಡವು ಪ್ರಾಂಗಣದ ಮಧ್ಯದಲ್ಲಿದ್ದು, ಕೆಲವು ಮೆಟ್ಟಿಲ ಮೂಲಕ ಪ್ರವೇಶಿಸಬಹುದು. ಪ್ರಾರ್ಥನಾ ಸಭಾಂಗಣವು ಎತ್ತರದ ಜಗತಿಯ ಮೇಲೆ ನಿರ್ಮಿಸಲಾಗಿದೆ. ಮಸೀದಿಯ ಎಡಮೂಲೆಯಲ್ಲಿ ಕಾರಂಜಿಯಿರುವ ಒಂದು ನೀರಿನ ತೊಟ್ಟಿಯಿದೆ. ಈ ಸ್ಮಾರಕವನ್ನು ರಾಜ್ಯ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯವು ಸಂರಕ್ಷಿಸುತ್ತಲಿದೆ. ಸಭಾಂಗಣದ ಒಳಭಾಗವು ಸಾಕಷ್ಟು ನವೀಕರಿಸಲಾಗಿದ್ದು, ಇಂದಿಗೂ ಇದನ್ನು ಬಳಸಲಾಗುತ್ತಿದೆ.

೩೨

ಊರು ಲಕ್ಷ್ಮೇಶ್ವರ
ಸ್ಮಾರಕ ಹಜರತ್‌ ಸಯ್ಯದ್‌ ಮಲಿಕ್‌ ಸದಾತ್‌ (ಗುಂಮಜ್‌ನಾನ)
ಸ್ಥಳ ಇಂಡೋ-ಇಸ್ಲಾಮಿಕ್‌
ಕಾಲ ಪೂರ್ವ
ಶೈಲಿ ಊರ ಶಿಗ್ಲಿನಾಕ
ಅಭಿಮುಖ ಕ್ರಿ.ಶ ೧೭-೧೮ನೆ
ಸ್ಥಿತಿ ಕನಿಷ್ಠ
ಸಂರಕ್ಷಣೆ ಲಕ್ಷ್ಮೇಶ್ವರ

ಕಲ್ಲಿನಿಂದ ಕಟ್ಟಲಾಗಿರುವ ಚೌಕಾರಾದ ದರ್ಗಾ ಸುಂದರ ಕಟ್ಟಡವಾಗಿದೆ. ಎತ್ತರದ ವೇದಿಕೆಯ ಮೇಲಿರುವ ದರ್ಗಾದ ಪ್ರವೇಶ ದ್ವಾರವನ್ನು ಕೆಲವು ಮೆಟ್ಟಿಲುಗಳ ಮೂಲಕ ತಲುಪಬಹುದು. ದರ್ಗಾದ ಬಾಗಿಲವಾಡವು ಸರಳ ಹಾಗೂ ಸುಂದರವಾಗಿ ರಚಿಸಲಾಗಿದೆ. ದರ್ಗಾದ ಒಳಗೆ ಚೌಕಾಕಾರದ ಸಭಾಂಗಣವಿದ್ದು ಅದರಲ್ಲಿ ಹಜರತ್‌ ಸಯ್ಯದ್‌ ಮಲಿಕ್‌ನ ಗೋರಿ ಇದೆ. ಸಭಾಂಗಣದ ಉತ್ತರ ಮತ್ತು ದಕ್ಷಿಣ ಗೋಡೆಗಳಲ್ಲಿ ಜಾಲಾಂಧ್ರಗಳನ್ನು ಅಳವಡಿಸಲಾಗಿದೆ. ಒಳಭಾಗದಲ್ಲಿ ಕಮಾನಿನಾಕಾರದಂತೆ ರಚಿಸಲಾಗಿದ್ದು, ಮೇಲೆ ಸಾಗಿದಂತೆ ವೃತ್ತಾಕಾರದ ಗುಮ್ಮಟದ ಒಳಭಾಗವನ್ನು ಸುಂದರವಾಗಿ ಮೂಡಿಸಲಾಗಿದೆ. ಗುಮ್ಮಟದ ಒಳಭಾಗವು ಟೊಳ್ಳಾಗಿರುವಂತೆ (Hallow) ನಿರ್ಮಿಸಿರುವುದು ಗಮನಾರ್ಹ. ಹೊರಭಾಗದಿಂದ ನೋಡಿದರೆ ಸುಂದರ ಗುಮ್ಮಟವು ಕಾಣಸಿಗುತ್ತದೆ. ನಾಲ್ಕು ಮೂಲೆಗಳಲ್ಲಿ ಮಿನಾರ್ ಗಳು ಇವೆ. ಸಜ್ಜಾ ಭಾಗದಲ್ಲಿ, ಅಂದರೆ ಗೋಡೆ ಮುಗಿದು ಛಾವಣಿಯು ಪ್ರಾರಂಭವಾಗುವ ಸ್ಥಳದಲ್ಲಿ ಹಿಂದೂ ದೇವಾಲಯಗಳಿರುವಂತಹ ಸಜ್ಜಾ ಅಲಂಕರಣೆಯನ್ನು ಕಲ್ಲಿನಿಂದ ಮಾಡಲಾಗಿದೆ. ದರ್ಗಾದ ಮುಂದೆಯೇ ಸುಂದರವಾದ ಮೆಟ್ಟಿಲುಗಳಿರುವ ಒಂದು ಬಾವಿಯಿದೆ. ಇಂಗ್ಲೀಷ್‌ನ ಅಕ್ಷರ ‘ಎಲ್‌’ ಆಕಾರದಂತೆ ರಚಿಸಿರುವ ಮೆಟ್ಟಿಲುಗಳನ್ನು ಬಳಸಿ ನೀರು ಇರುವ ಸ್ಥಳವನ್ನು ತಲುಪಬಹುದು. ಬಾವಿಯ ಪ್ರವೇಶ ದ್ವಾರಕ್ಕೆ ಕಲ್ಲಿನ ತೋರಣವಿರುವ ಅಲಂಕರಣೆಯಿದೆ. ಬಾವಿಯಲ್ಲಿನ ನೀರನ್ನು ಮೇಲೆ ಎತ್ತಲು ರಾಟಿಗಳನ್ನು ಬಳಸಲು ಕಲ್ಲಿನ ವೇದಿಕೆಯನ್ನು ನಿರ್ಮಿಸಲಾಗಿದೆ, ನೀರು ಮೇಲೆತ್ತಿದ ನಂತರ ಅದನ್ನು ಹಾಯಿಸಲು ಕಲ್ಲಿನ ಕಾಲುವೆಯನ್ನು ಸಹ ನಿರ್ಮಿಸಲಾಗಿದೆ. ಕಾಲುವೆಯ ಮೂಲಕ ಹರಿಯುವ ನೀರು ಒಂದು ಕಲ್ಲಿನ ತೊಟ್ಟಿಯಲ್ಲಿ ಸಂಗ್ರಹಿಸಲು ಕಲ್ಲಿನ ತೊಟ್ಟಿಯನ್ನು ನಿರ್ಮಿಸಲಾಗಿದೆ. ಇದಕ್ಕೆ ಹೌಜ್‌ (Hauz) ಎಂದು ಕರೆಯಲಾಗುತ್ತದೆ. ಈ ಕಲ್ಲಿನ ತೊಟ್ಟಿಯಲ್ಲಿ ಸಂಗ್ರಹಗೊಂಡ ನೀರು ಮುಂದೆ ಗದ್ದೆಗಳಿಗೆ ಹಾಯಿಸಲಾಗುತ್ತಿತ್ತು. ಇಂದು ನಗರ ಬೆಳೆದಿರುವ ಕಾರಣ ಗದ್ದೆಗಳು ಹಾಗೂ ಈ ಸ್ಮಾರಕಕ್ಕೆ ಸಂಬಂಧಿಸಿದ ಕಾಲುವೆಗಳು ಇಲ್ಲ. ಆದರೆ ಬಾವಿ, ಕಾಲುವೆಯ , ಕೆಲ ಭಾಗಗಳು ಮತ್ತು ಕಲ್ಲಿನ ತೊಟ್ಟಿಯು ನಮಗೆ ಇಂದು ಕಾಣಸಿಗುತ್ತವೆ.

೩೩

ಊರು ವರವಿ
ಸ್ಮಾರಕ ಮೌನೇಶ್ವರ
ಸ್ಥಳ ವಿಜಯನಗರೋತ್ತರ
ಕಾಲ ಪೂರ್ವ
ಶೈಲಿ ಊರ ಮಜ್ಜೂರ ರಸ್ತೆಯಲ್ಲಿ
ಅಭಿಮುಖ ಕ್ರಿ.ಶ. ೧೭-೧೮ನೇ ಶತಮಾನ
ಸ್ಥಿತಿ ಉತ್ತಮ
ಸಂರಕ್ಷಣೆ ವರವಿ

ಗರ್ಭಗೃಹ, ಅಂತರಾಳ ಮತ್ತು ತೆರೆದ ನವರಂಗ ಅಥವಾ ಮುಖಮಂಟಪಗಳನ್ನು ಈ ದೇವಾಲಯವು ಹೊಂದಿದೆ. ಗರ್ಭಗೃಹದಲ್ಲಿ ಶಿವಲಿಂಗವಿದ್ದು, ಈ ಭಾಗವನ್ನು ಸಾಕಷ್ಟು ನವೀಕರಿಸಲಾಗಿದೆ. ಹೊಳಪು ಕಲ್ಲುಗಳನ್ನು (ಟೈಲ್ಸ್‌) ಗೋಡೆಗೆ ಹಾಗೂ ನೆಲಕ್ಕೆ ಅಳವಡಿಸಲಾಗಿದೆ. ಗರ್ಭಗೃಹದ ಬಾಗಿಲು ಅತ್ಯಂತ ಕಿರಿದಾಗಿದ್ದು, ಪ್ರವೇಶವನ್ನು ಪಡೆಯುವಾಗ ಬಗ್ಗಿಕೊಂಡು ಒಳಗೆ ತೆರಳಬೇಕು. ಶಿವಲಿಂಗವನ್ನು ಮೌನೇಶ್ವರನೆಂದು ಕರೆಯಲಾಗುತ್ತದೆ. ಅಂತರಾಳವು ಗರ್ಭಗೃಹದ ಮುಂಭಾಗದಲ್ಲಿದ್ದು, ಇದನ್ನು ಸಹ ನವೀಕರಿಸಲಾಗಿದೆ. ಈ ಕಾರಣದಿಂದಾಗಿ ಪ್ರಾಚೀನ ಅಂಶಗಳು ಗೋಚರಿಸುವುದಿಲ್ಲ. ಗರ್ಭಗೃಹದಂತೆ ಅಂತರಾಳಕ್ಕೆ ಸಹ ಗಿಡ್ಡನೆಯ ದ್ವಾರವಿದೆ.

ಅಂತರಾಳದ ಮುಂದಿನ ಭಾಗವನ್ನು ತೆರೆದ ನವರಂಗ ಅಥವಾ ಮುಖಮಂಟಪ ಅಥವಾ ಮಹಾಮಂಟಪವೆಂದು ಹೆಸರಿಸಬಹುದು. ಇದರಲ್ಲಿ ಕಮಾನಿನ ಆಕಾರದಲ್ಲಿರುವ ಕಂಬಗಳು ಸೂರನ್ನು ಎತ್ತಿಹಿಡಿದಿವೆ. ಈ ಕಮಾನುಗಳು ಇಂಡೋ-ಇಸ್ಲಾಮಿಕ್‌ ವಾಸ್ತುರಚನೆಯಿಂದ ಪ್ರೇರೇಪಿತವಾಗಿದೆ. ಮಂಟಪದ ಭಾಗವನ್ನು ಸಹ ಸಾಕಷ್ಟು ನವೀಕರಿಸಲಾಗಿದೆ. ಎರಡು ಮೆಟ್ಟಿಲುಗಳ ಮೂಲಕ ಈ ಭಾಗವನ್ನು ಪ್ರವೇಶಿಸಬಹುದು.

ದೇವಾಲಯಕ್ಕೆ ಡೂಮ್‌ನ (ಗೋ ಆಕಾರ) ಶಿಖರವಿದೆ. ಅದರ ಪಕ್ಕದಲ್ಲಿ ಕಿರು ಗೋಲಗಳ ಅಲಂಕರಣೆಯನ್ನು ಕಾಣಬಹುದು. ಗುಡಿಯ ಮುಂದೆ ಒಂದು ಕಿರು ಕಲಶವಿರುವ ಮಂಟಪದಲ್ಲಿ ಬಸವಣ್ಣನನ್ನು (ಶಿವನ ವಾಹನ) ಇರಿಸಲಾಗಿದೆ. ಮುಖ್ಯ ದೇವಾಲಯದ ಅಧಿಷ್ಠಾನ ಭಾಗಗಳು ಈಗ ಕಂಡುಬರುತ್ತಿಲ್ಲ.

ಮುಖ್ಯ ದೇವಾಲಯದ ದಕ್ಷಿಣಕ್ಕೆ, ಎಡಬದಿಗೆ ದೇವಾಲಯವಿದ್ದು ಅದರಲ್ಲಿ ಲಿಂಗವನ್ನು ಇರಿಸಲಾಗಿದೆ. ಅದರ ಹಿಂಭಾಗದಲ್ಲಿ ವಿರೂಪಾಕ್ಷ ಗುಡಿಯಿದ್ದು, ಅದರಲ್ಲಿ ಗರ್ಭಗೃಹ ಮತ್ತು ಅರ್ಧಮಂಟಪಗಳಿವೆ. ಅರ್ಧಮಂಟಪದಲ್ಲಿ ಎರಡು ಕಂಬಗಳಿವೆ. ಮುಖ್ಯ ದೇವಾಲಯದ ಹಿಂಬದಿಯಲ್ಲಿ ಕಛೇರಿ ಮತ್ತು ಕೊಠಡಿಗಳು ಇವೆ. ಮುಖ್ಯ ದೇವಾಲಯ ಮತ್ತು ಇತರೆ ದೇವಾಲಯಗಳು ಸೇರಿದಂತೆ ಸುತ್ತಲೂ ಪ್ರಾಂಗಣದ ಗೋಡೆ ಇದೆ. ಈ ಸಂಕೀರ್ಣದಲ್ಲಿಯೇ ಭಕ್ತಾದಿಗಳು ಉಳಿದುಕೊಳ್ಳಲು ಕೊಠಡಿಗಳನ್ನು ನಿರ್ಮಿಸಲಾಗಿದೆ. ಸಂಕೀರ್ಣಕ್ಕೆ ಪೂರ್ವದಲ್ಲಿರುವ ಮುಖ್ಯ ದ್ವಾರ ಹಾಗೂ ಉತ್ತರದಲ್ಲಿರುವ ಮತ್ತೊಂದು ದ್ವಾರದಿಂದ ಗುಡಿಯ ಸಮುಚ್ಛಯವನ್ನು ಪ್ರವೇಶಿಸಬಹುದು. ದೇವಾಲಯ ಸಮುಚ್ಚಯದ ಪಕ್ಕದಲ್ಲಿಯೇ ಕಿರು ಹಳ್ಳವಿದೆ. ಇದನ್ನು ವರವಿ ಹಳ್ಳವೆಂದು ಸ್ಥಳೀಯರು ಕರೆಯುತ್ತಾರೆ. ಈ ಹಳ್ಳಕ್ಕೆ ಒಂದು ತೀರ್ಥದಿಂದ (ಹೊಂಡದಿಂದ) ನೀರು ಸದಾ ಜಿನುಗುತ್ತಿರುತ್ತದೆ. ಕಾಶಿಯಿಂದ ಗಂಗೆಯೇ ಇಲ್ಲಿ ಹರಿದು ಬರುತ್ತಾಳೆಂಬುದು ಸ್ಥಳೀಯರ ನಂಬಿಕೆ. ಅವರಿಗೆ ಇದು ಪವಿತ್ರ ತೀರ್ಥವಾಗಿದೆ. ದೇವಾಲಯದ ಸಮೀಪವೇ ಕಾಳಿಕಾದೇವಿಯ ಗುಡಿಯಿದೆ. ಇದರಲ್ಲಿ ಕಾಳಿಕಾ ದೇವಿಯ ಮೂರ್ತಿಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯ ಸಮುಚ್ಛಯವು ಕಣಿವೆಯಂತಿರುವ ಭಾಗದಲ್ಲಿದೆ. ಇದರ ಸಮೀಪವೇ ಕುರಿಹೆಜ್ಜೆ ಎಂಬ ಹೆಬ್ಬಂಡೆಯಲ್ಲಿ ಕುರಿ ಹೆಜ್ಜೆಯಂತೆ ಮೂಡಿರುವ ಆಕಾರವು ಜನರನ್ನು ಆಕರ್ಷಿಸುತ್ತದೆ. ಈ ಕ್ಷೇತ್ರವು ವಿಶ್ವಕರ್ಮ ಸಮುದಾಯದವರಿಗೆ ಪ್ರಮುಖ ಕ್ಷೇತ್ರವಾಗಿದ್ದು, ಆ ಸಮುದಾಯದವರು ಇಲ್ಲಿ ಪೂಜಿಸುತ್ತಾರೆ. ವಿವಾಹಾದಿ ಶುಭಕಾರ್ಯಗಳನ್ನು ಈ ಕ್ಷೇತ್ರದಲ್ಲಿ ನಡೆಸುತ್ತಾರೆ.

೩೫

ಊರು ಶಿರಹಟ್ಟಿ
ಸ್ಮಾರಕ ಫಕೀರಸ್ವಾಮಿ ಮಠ
ಸ್ಥಳ ಊರಿನ ಉತ್ತರಕ್ಕೆ
ಕಾಲ ಕ್ರಿ.ಶ. ೧೭-೧೮ನೇ ಶತಮಾನ
ಶೈಲಿ ಇಂಡೋ-ಇಸ್ಲಾಮಿಕ್‌
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ

ಫಕೀರಸ್ವಾಮಿ ಮಠವು ಕಲ್ಲಿನಿಂದ ಕಟ್ಟಿರುವ ಸ್ಮಾರಕವಾಗಿದೆ. ಇದರಲ್ಲಿ ಫಕೀರಸ್ವಾಮಿಯವರ ಗದ್ದುಗೆಯಿದೆ. ಈ ಮಠದ, ಅನೇಕ ಸ್ವಾಮಿಗಳ ಗದ್ದುಗೆಯು ಮಠದ ಆವರಣದಲ್ಲಿದೆ. ಇಂಡೋ-ಇಸ್ಲಾಮಿಕ್‌ ಶೈಲಿಯಲ್ಲಿರುವ ಈ ಮಠದ ನೆಲಮಟ್ಟದ ಕೆಳಭಾಗದಲ್ಲಿ ಫಕೀರಸ್ವಾಮಿಗಳ ಗದ್ದುಗೆಯಿದೆ. ಕಲ್ಲಿನಿಂದ ಕಟ್ಟಲಾಗಿರುವ ಪ್ರಸ್ತುತ ಕಟ್ಟಡವನ್ನು ನವೀಕರಿಸಲಾಗಿದೆ. ಮೆಟ್ಟಿಲುಗಳ ಮೂಲಕ ಪ್ರವೇಶವನ್ನು ಪಡೆದು, ವಿಶಾಲವಾದ ಮೇಲಿನ ಸಭಾಂಗಣವನ್ನು ತಲುಪಬಹುದು. ಇಂಡೋ-ಇಸ್ಲಾಮಿಕ್‌ ಶೈಲಿಯ ಕಮಾನಿನ ಕಂಬಗಳು, ಅವುಗಳಿಗೆ ಸೂರನ್ನು ಇತ್ತೀಚಿಗೆ ನುಣುಪಾದ ಗ್ರಾನೈಟ್‌ ಶಿಲೆಯನ್ನು ಹೊದಿಸಲಾಗಿದೆ. ಗುಮ್ಮಟಾಕಾರದ ಗೋಲವು ಪ್ರಸ್ತರ ಭಾಗದ ಮೇಲಿದೆ. ಕಲ್ಲಿನಿಂದಲೇ ಸರಳ ಅಲಂಕರಣೆಯನ್ನು ಮಾಡಲಾಗಿದೆ. ಮಂಟಪದ ಕೆಳಭಾಗದಲ್ಲಿ ಗದ್ದುಗೆಯನ್ನು, ದಕ್ಷಿಣದಲ್ಲಿರುವ ದ್ವಾರದ ಮೂಲಕ ಪ್ರವೇಶಿಸಿ ಕಿರಿದಾದ ಮೆಟ್ಟಿಲುಗಳ ಸಹಾಯದಿಂದ ತಲುಪಬಹುದು. ಮೇಲಿರುವ ಸಭಾಂಗಣದ ಮಧ್ಯೆ ಕಬ್ಬಿಣದ ಸಲಾಕೆಗಳನ್ನು ತೆರೆದ ಭಾಗದಲ್ಲಿ ಅಲ್ಲಿಂದಲೇ ಗದ್ದುಗೆಯ ದರ್ಶನವನ್ನು ಮಾಡಲು ಅನುವು ಮಾಡಲಾಗಿದೆ. ಇದರ ಪಕ್ಕದಲ್ಲಿ ಮೆಟ್ಟಿಲುಗಳು ಇದ್ದು, ಪೂಜಾರಿಗಳು ಇಲ್ಲಿಂದ ಪ್ರವೇಶಿಸುತ್ತಾರೆ. ಜಾಲಾಂಧ್ರಗಳನ್ನು ಗೋಡೆಯಲ್ಲಿ ಅಳವಡಿಸಲಾಗಿದೆ. ಎತ್ತರದ ಅಧಿಷ್ಠಾನ ಅಥವಾ ಜಗಲಿಯ ಮೇಲಿರುವ ಈ ಸ್ಮಾರಕದಲ್ಲಿ ನಿತ್ಯ ಪೂಜೆಗಳು ನಡೆಯುತ್ತವೆ. ಮುಖ್ಯ ಗದ್ದುಗೆಯ ಹಿಂಭಾಗದಲ್ಲಿ ಫಕೀರಸ್ವಾಮಿ ಮಠದ ಪರಂಪರೆಯ ಸ್ವಾಮಿಗಳ ಗದ್ದುಗೆಗಳಿವೆ. ಮುಖ್ಯ ಗದ್ದುಗೆಯ ಹಿಂಬದಿಯಲ್ಲಿರುವ ಗದ್ದುಗೆಯ ಪ್ರಸ್ತರದಲ್ಲಿ ಬೋಧಿಗೆಯ ಅಲಂಕರಣೆಯನ್ನು ಕಾಣಬಹುದು.

ಅದೇ ಸಾಲಿನ ಕೊನೆಯ ಗದ್ದುಗೆಯು ತೆರೆದಮಂಟಪದಂತೆ ಇದ್ದು ಅದರಲ್ಲಿ ನಾಲ್ಕು ಕಂಬಗಳಿವೆ. ಇವೆಲ್ಲಾ ಗದ್ದುಗೆಗಳಿಗೆ ಮೆಟ್ಟಿಲುಗಳ ಮೂಲಕವೇ ಪ್ರವೇಶವಿದ್ದು ಎಲ್ಲವೂ ಎತ್ತರದ ಜಗಲಿ ಅಥವಾ (ಅಧಿಷ್ಠಾನ) ಕಟ್ಟೆಯ ಮೇಲೆಯೇ ನಿರ್ಮಿಸಲಾಗಿದೆ. ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಕಮಾನಿನ ಆಕಾರದಂತೆ ಇರುವ ಭವ್ಯವಾದ ಪ್ರವೇಶ ದ್ವಾರಗಳಿವೆ. ಗದ್ದುಗೆಗಳ ಸುತ್ತಲೂ ಅನೇಕ ವಸತಿ ಕೊಠಡಿಗಳನ್ನು ನಿರ್ಮಿಸಿದ್ದು, ಅವುಗಳನ್ನು ಭಕ್ತಾದಿಗಳಿಗೆ ನೀಡಲಾಗುತ್ತದೆ. ಅದೇ ಸಾಲಿನಲ್ಲಿ ಮಠದ ಕಾರ್ಯಾಲಯ ಹಾಗೂ ಪೀಠದಲ್ಲಿರುವ ಸ್ವಾಮಿಗಳ ವಾಸಗೃಹಗಳಿವೆ. ಆವರಣದಲ್ಲಿ ಮಠಕ್ಕೆ ಸಂಬಂಧಿಸಿದ ಮಾರಾಟ ಮಳಿಗೆ ನೀಡಲಾಗುತ್ತದೆ. ಆವರಣದಲ್ಲಿ ಮಠಕ್ಕೆ ಸಂಬಂಧಿಸಿದ ಮಾರಾಟ ಮಳಿಗೆ ಮತ್ತು ಸಿಬ್ಬಂದಿಗಳಿಗೆ ವಸತಿ ಕೊಠಡಿಗಳಿವೆ. ಪೂರ್ವ ಭಾಗದಿಂದಲೂ ಮಠವನ್ನು ಪ್ರವೇಶಿಸಬಹುದು. ಹಿಂದೂ-ಮುಸ್ಲಿಮ್‌ ಐಕ್ಯತೆಯನ್ನು ಸಾರುವ ಈ ಮಠದ ಪರಂಪರೆಯು ವಿಶಿಷ್ಟವಾಗಿದ್ದು, ಇಂದಿನ ಆಚರಣೆ ಮತ್ತು ಮಠದ ವಾಸ್ತುಶೈಲಿಯಲ್ಲಿಯೂ ಈ ಐಕ್ಯತೆಯನ್ನು ಗಮನಿಸಬಹುದು. ಈ ಮಠವು ಸಾಂಸ್ಕೃತಿಕವಾಗಿ ಕಾರ್ಯನಿರ್ವಹಿಸುತ್ತಲಿದೆ.

ಪ್ರಸ್ತುತ ಮಠವು ಸುಮಾರು ೩೦೦ ವರ್ಷಗಳಷ್ಟು ಪ್ರಾಚೀನವೆಂದು ಅಭಿಪ್ರಾಯಪಡಲಾಗಿದೆ. (ಧಾರವಾಡ ಜಿಲ್ಲೆ ಗ್ಯಾಸೆಟಿಯರ್, ಪು. ೧೦೧೬). ಮಠದಲ್ಲಿರುವ ಒಂದು ಶಾಸನ, ಮಠವನ್ನು ಫಕೀರ ಚನ್ನವೀರಸ್ವಾಮಿಯವರಿಗೆ ಕ್ರಿ.ಶ. ೧೭೭೭ರಲ್ಲಿ ದಾನಬಿಟ್ಟ ವಿಷಯವನ್ನು ಉಲ್ಲೇಖಿಸುತ್ತದೆ. (ದಾ. ಜಿ. ಶಾ. ಸೂ, ಸಂ. ಸಿ. ೮೮, ಪು. ೩೯) ಇನ್ನೊಂದು ಶಾಸನವು (ಧಾ. ಜಿ. ಶಾ. ಸೂ, ಸಂ. ಸಿ. ೮೯, ಪು. ೩೯) ಕಲಕೇರಿಯ ಚಿನ್ನಪ್ಪನಿಗೆ ಗೌಡನ ತಮ್ಮನು ಸೋಗಿವಾಳ ಗ್ರಾಮದ ಅರ್ಧಭಾಗವನ್ನು ಕ್ರಿ.ಶ.೧೭೯೨ರಲ್ಲಿ ಮಾರಿದ ಅಂಶವನ್ನು ದಾಖಲಿಸಿದೆ.

೩೬

ಊರು ಶಿರಹಟ್ಟಿ
ಸ್ಮಾರಕ ಅವ್ವಲಿಂಗವ್ವನ ಗುಡಿ
ಸ್ಥಳ ಜಿ.ಪಂಚಾಯಿತಿ ಕಛೇರಿ ಹತ್ತಿರ
ಕಾಲ ಕ್ರಿ.ಶ. ೧೭-೧೮ನೇ ಶತಮಾನ
ಶೈಲಿ ಇಂಡೋ-ಇಸ್ಲಾಮಿಕ್‌
ಅಭಿಮುಖ ಉತ್ತರ
ಸ್ಥಿತಿ ಕನಿಷ್ಠ
ಸಂರಕ್ಷಣೆ ಶಿರಹಟ್ಟಿ

ಕಪ್ಪುಶಿಲೆ ಮತ್ತು ಗ್ರಾನೈಟ್‌ (ಕಣ) ಶಿಲೆಯಿಂದ ಕಟ್ಟಲಾಗಿರುವ ಈ ಕಟ್ಟಡವು ಅತ್ಯಂತ ಸುಂದರವಾಗಿದ್ದು, ನೋಡುಗರನ್ನು ತನ್ನತ್ತ ಆಕರ್ಷಿಸುತ್ತದೆ. ಇದು ದೇವಾಲಯವಲ್ಲ. ಈ ಕಟ್ಟಡವನ್ನು ಲಕ್ಷ್ಮೇಶ್ವರ ದೇಶಗತಿಯ ಸಂಸ್ಥಾಪಕಿಯಾದ ಅವ್ವಲಿಂಗವ್ವೆಯ ಸಮಾಧಿಗೆಂದು ನಿರ್ಮಿಸಲಾಯಿತೆಂದು ಆದರ ಅವಳ ಮರಣಾಂತರ ಅವಳ ಶವವನ್ನು ಇಲ್ಲಿ ಹೂಳಲಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಇದನ್ನು ಅವ್ವಲಿಂಗವ್ವನ ಮಠ ಹಾಗೂ ಅವ್ವಲಿಂಗವ್ವಗುಡಿ ಎಂದೂ ಸಹ ಸ್ಥಳೀಯರು ಕರೆಯುತ್ತಾರೆ. ಆದರೆ ಗರ್ಭಗೃಹ ಭಾಗದಂತಿರುವ ಸ್ಥಳದಲ್ಲಿ ಒಂದು ಸಮಾಧಿಯಿರುವುದನ್ನು ಕಾಣಬಹುದು. ಈ ಭಾಗಕ್ಕೆ ಪ್ರವೇಶವಿರುವ ಉತ್ತರ ಮತ್ತು ಪೂರ್ವದ ಬಾಗಿಲುಗಳಿಗೆ ಬೀಗವನ್ನು ಹಾಕಿದ್ದಾರೆ. ಇದರ ಕೀಲಿ ಹಾಗೂ ಕಟ್ಟಡವು ಯಾರ ವಶದಲ್ಲಿದೆ ಎಂಬುದು ತಿಳಿದುಬರುತ್ತಿಲ್ಲ. ಆದ್ದರಿಂದ ಒಳಭಾಗದ ವಿವರಣೆಯನ್ನು ಇಲ್ಲಿ ಕೊಡಲು ಸಾಧ್ಯವಾಗುತ್ತಿಲ್ಲ.

ದೇವಾಲಯದಂತೆ ಇರುವ ಈ ಕಟ್ಟಡದ ಕಂಬಗಳ ರಚನೆ, ವಿನ್ಯಾಸ ಮತ್ತು ನೋಟವು ದೇವಾಲಯದಂತೆ ಕಂಡುಬರುತ್ತದೆ. ಅರಮನೆಯಂತೆಯೂ ಸಹ ಈ ಕಟ್ಟಡದ ಕೆಲವು ಭಾಗಗಳನ್ನು ವಿನ್ಯಾಸಗೊಳಿಸಿರುವುದು ಗಮನಾರ್ಹವಾಗಿದೆ. ಕಟ್ಟಡವನ್ನು ಉತ್ತರ ಭಾಗದಿಂದ ಮೆಟ್ಟಿಲಗಳ ಮೂಲಕ ಮಂಟಪ ಭಾಗಕ್ಕೆ ಪ್ರವೇಶ ಪಡೆಯಬಹುದು. ಮಂಟಪದ ಭಾಗವನ್ನು ಎರಡು ಹಂತಗಳಲ್ಲಿ ವಿನ್ಯಾಸಗೊಳಿಸದ್ದು ಪ್ರವೇಶದ ಭಾಗವನ್ನು ಮುಖಮಂಟಪವೆಂದು ಹೆಸರಿಸಬಹುದು. ಅದರ ಮೂಲಕ ನವರಂಗ ಅಥವಾ ಮಂಟಪದ ಭಾಗಕ್ಕೆ ತೆರಳಬಹುದು. ನವರಂಗ ಭಾಗವನ್ನು ಎತ್ತರಿಸಿ, ಜಗತ್ತಿಯ ಮೇಲೆ ನಿರ್ಮಿಸಲಾಗಿದೆ. ಮುಖಮಂಟಪ ಭಾಗದ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ತೆರೆದ ಕೋಣೆ ಅಥವಾ ಮಂಟಪದ ಭಾಗದಂತಿರುವ ಎರಡು ಕೊಠಡಿಗಳಿವೆ. ಅವುಗಳಲ್ಲಿ ಕೋಷ್ಟಗಳಿವೆ. ಮುಖಮಂಟಪದ ಪ್ರವೇಶ ಭಾಗದಲ್ಲಿ ಎರಡು ಎತ್ತರ ಹಾಗೂ ದಪ್ಪಗಿರುವ ಕಂಬಗಳು ಸೂರನ್ನು ಆಧರಿಸಿವೆ. ಕಂಬಗಳ ಎರಡೂ ಕಡೆಗಳಲ್ಲಿ ಇತ್ತೀಚಿಗೆ ಕಬ್ಬಿಣದ ಸರಳಿನ ಜಾಲಾಂಧ್ರಗಳನ್ನು (ಗ್ರಿಲ್‌) ಅಳವಡಿಸಲಾಗಿದೆ. ಇಂದು ಒಂದು ಬದಿಗೆ ಮಾತ್ರ ಇದೆ. ಪೂರ್ವ ಮತ್ತು ಪಶ್ಚಿಮದ ಎರಡೂ ಕೊಠಡಿಯಂತಿರುವ ಭಾಗದ ಮೇಲೆ ಮಧ್ಯಕಾಲಿನೋತ್ತರ ಕಾಲದ ಅರಮನೆಗಳಲ್ಲಿ ನಿರ್ಮಿಸುವ ಬಾಲ್ಕನಿಗಳು ಎರಡೂ ಕಡೆಗಳಲ್ಲಿವೆ. ಮುಖಮಂಟಪದ ಒಳಭಾಗದಲ್ಲಿ ಸುಂದರ ಕೆತ್ತನೆಯ ಜಗತಿಯ ಭಾಗವಿದ್ದು, ಅದು ನವರಂಗಕ್ಕೆ ಆಧಾರವಾಗಿದೆ. ಹೊರಭಾಗದಲ್ಲಿ ಸುಂದರ ಕೆತ್ತನೆಗಳುಳ್ಳ ಅನೇಕ ಧಾರ್ಮಿಕ (?) ಶಿಲ್ಪಗಳಿವೆ. ಸೂರಿನ (ಭುವನೇಶ್ವರಿ) ಭಾಗದಲ್ಲಿ ಕಮಲ, ಹೂವು ಮುಂತಾದ ಕೆತ್ತನೆಗಳಿವೆ. ಭುವನೇಶ್ವರಿಯ ಪ್ರತಿ ಭಾಗದಲ್ಲಿ ಕಮಲದಳ ಮತ್ತು ಸರ್ಪಾಕೃತಿಯ ಕೆತ್ತನೆಗಳಿವೆ. ಮಾಡಿನ ಭಾಗದಲ್ಲಿಯೂ ಸುಂದರ ಕೆತ್ತನೆಗಳಿವೆ.

ನವರಂಗದ ತಿರುಗಣಿಯಿಂದ ರಚಿಸಿದ ಸುಂದರವಾದ ನಾಲ್ಕು ಕಂಬಗಳಿವೆ. ಪೂರ್ವದ ಗೋಡೆಯಲ್ಲಿ ಕಮಾನಿನ ರಚನೆಯುಳ್ಳ ಕೋಷ್ಟವಿದೆ. ಈ ಭಾಗದಿಂದ ಗರ್ಭಗೃಹದಂತಿರುವ ಭಾಗವನ್ನು ಪ್ರವೇಶಿಸಬಹುದು. ಗರ್ಭಗೃಹದ ಮುಖ್ಯ ದ್ವಾರದ ಲಲಾಟದಲ್ಲಿ ಶಿವಲಿಂಗ ಅದರ ಹಿಂದೆ ಸರ್ಪದ ಉಬ್ಬುಶಿಲ್ಪಗಳಿವೆ. ಬಾಗಿಲವಾಡವು ಅಲಂಕೃತ ಕೆತ್ತನೆಗಳಿಂದ ಕೂಡಿ ಅಲಂಕೃತವಾಗಿದೆ. ಅದರ ಕೆಳಬದಿಗಳಲ್ಲಿ ದ್ವಾರಪಾಲಕರ ಉಬ್ಬುಶಿಲ್ಪಗಳಿವೆ. ಚಾಮರಧಾರಣಿಯ ಉಬ್ಬುಶಿಲ್ಪ ಹಾಗೂ ಇನ್ನಿತರೆ ಸೂಕ್ಷ್ಮ ಕೆತ್ತನೆಗಳಿವೆ. ಮುಖ್ಯದ್ವಾರದ ಎರಡೂ ಬದಿಗಳಲ್ಲಿ ಎರಡೂ ಕಡೆ ದ್ವಾರದಂತೆ ಇದೆ. ಎಡಬದಿಯ ಕೊಠಡಿಯ ಭಾಗವನ್ನು ದೊಡ್ಡ ಕೋಷ್ಟದಂತೆ ರೂಪಿಸಲಾಗಿದೆ. ಬಲಬದಿಯ ದ್ವಾರದಲ್ಲಿ ಮೆಟ್ಟಿಲುಗಳು ಇದ್ದು, ಅದರ ಮೂಲಕ ಕಟ್ಟಡದ ಮೇಲ್ಭಾಗವನ್ನು ತಲುಪಬಹುದು. ಈ ಎರಡೂ ದ್ವಾರಗಳ ಲಲಾಟಬಿಂಬಗಳಲ್ಲಿ ಗಣಪತಿಯ ಉಬ್ಬುಶಿಲ್ಪಗಳಿವೆ. ದೂರದಿಂದ ನೋಡಿದರೆ ಇವೆರಡೂ ಗರ್ಭಗೃಹದಂತೆಯೇ ಭಾಸವಾಗುತ್ತದೆ. ಕಣಶಿಲೆಯಿಂದ ಮೆಟ್ಟಿಲುಗಳನ್ನು ರಚಿಸಲಾಗಿದೆ.

ಗರ್ಭಗೃಹದ ಭಾಗವು ಪ್ರಸ್ತುತ ಮುಚ್ಚಲಾಗಿದೆ. ಒಳಭಾಗದಲ್ಲಿ ತಿರುಗಣಿ ಯಂತ್ರದಿಂದ ರಚಿಸಿದ ಕಲ್ಯಾಣ ಚಾಲುಕ್ಯ ಶೈಲಿಯ ಕಂಬಗಳು ಹಾಗೂ ನಡುವಿನಲ್ಲಿ ಒಂದು ಸಮಾಧಿಯಿರುವುದನ್ನು ಬಾಗಿಲ ಕಿಂಡಿಯಿಂದ ನೋಡಬಹುದು. ಉಳಿದ ವಾಸ್ತು ಅಂಶಗಳು ಗಮನಕ್ಕೆ ಬರುವುದಿಲ್ಲ. ಈ ಭಾಗಕ್ಕೆ ಪೂರ್ವದಿಂದಲೂ ಪ್ರವೇಶವಿರುವುದನ್ನು ಕಾಣಬಹುದು. ಈ ಬಾಗಿಲನ್ನು ಸಹ ಮುಚ್ಚಲಾಗಿದೆ. ಪೂರ್ವದ ಬಾಗಿಲಲ್ಲಿ ಅತ್ಯಂತ ಕಲಾತ್ಮಕವಾದ ದ್ವಾರಶಾಖೆ, ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪಗಳ ಕೆತ್ತನೆಗಳನ್ನು ಕಾಣಬಹುದು. ಇಲ್ಲಿ ಎರಡು ಮೆಟ್ಟಿಲುಗಳಿವೆ. ಕಟ್ಟಡದ ಪೂರ್ವ ಹಾಗೂ ಪಶ್ಚಿಮದ ಹೊರಭಾಗಗಳಲ್ಲಿ ಎಂಟು ಕಂಬಗಳ ಸಾಲುಗಳ್ಳುಳ್ಳ ಉದ್ದನೆಯ ತೆರೆದಮಂಟಪವಿದೆ. ಪೂರ್ವ ಭಾಗದ ಮಂಟಪ ಅಥವಾ ಪಡಸಾಲೆಯನ್ನು ಸಾರ್ವಜನಿಕರು ಅತಿಕ್ರಮಿಸಿದ್ದಾರೆ. ಪಶ್ಚಿಮ ಭಾಗವು ತೆರೆದಿದ್ದು, ಅತಿಕ್ರಮಣಕ್ಕೆ ಒಳಗಾಗಿಲ್ಲ. ಕಟ್ಟಡದ ಅಧಿಷ್ಠಾನ ಭಾಗವು ಕಂಡುಬರುತ್ತದೆ. ಕಟ್ಟಡಕ್ಕೆ ಪ್ರಸ್ತರ ಭಾಗವಿದ್ದು, ಶಿಖರ ಭಾಗವಿಲ್ಲ. ಕಟ್ಟಡದ ಮೇಲ್ಭಾಗದಲ್ಲಿ ಹುಲ್ಲು ಮತ್ತು ಗಿಡಗಂಟಿಗಳು ಬೆಳೆದಿರುವುದನ್ನು ಕಾಣಬಹುದು. ಮಳೆಗಾಲದಲ್ಲಿ ಮಳೆ ನೀರು ಕಟ್ಟಡದ ಮೇಲ್ಭಾಗದಲ್ಲಿ ಶೇಖರಗೊಂಡು, ಕಟ್ಟಡದ ಒಳಗೆ ಸೋರುತ್ತದೆ. ಈ ಸುಂದರ ಸ್ಮಾರಕ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ.

ಈ ಸ್ಮಾರಕದ ಪೂರ್ವಭಾಗದಲ್ಲಿ, ಪಕ್ಕದಲ್ಲಿಯೇ, ಇನ್ನೊಂದು ಕಟ್ಟಡವಿದ್ದು, ಇದನ್ನು ಸಹ ಕಲ್ಲಿನಿಂದಲೇ ರಚಿಸಲಾಗಿದೆ. ಇದರಲ್ಲಿ ಗರ್ಭಗೃಹ ಮತ್ತು ಅರ್ಧಮಂಟಪದ ಭಾಗವಿದ್ದು, ಅರ್ಧಮಂಟಪದ ಪಶ್ಚಿಮ ಗೋಡೆಯಲ್ಲಿ ಕಮಾನಿನ ದ್ವಾರವಿದೆ. ಅವ್ವಲಿಂಗವ್ವನ ಗುಡಿಯಿಂದ ಈ ಬಾಗಿಲ ಮೂಲಕ ಪ್ರವೇಶಿಸಬಹುದು. ಅರ್ಧಮಂಟಪದ ಭಾಗದಲ್ಲಿಯೇ ಕಲ್ಲಿನ ಎರಡು ಕಂಬಗಳಿವೆ. ಗುಡಿಗೆ ಅಧಿಷ್ಠಾನವಿದ್ದು, ಶಿಖರ ಭಾಗವಿಲ್ಲ. ಗರ್ಭಗೃಹದ ಬಾಗಿಲವಾಡವು ಸರಳವಾಗಿದೆ. ಇದರ ಬಾಗಿಲಿಗೆ ಬೀಗವನ್ನು ಹಾಕಲಾಗಿದ್ದು, ಕೀಲಿ ಯಾರ ವಶದಲ್ಲಿದೆ ಎಂಬುದು ತಿಳಿಯುತ್ತಿಲ್ಲ. ಇವೆರಡೂ ಕಟ್ಟಡಗಳನ್ನು ಸರಿಸುಮಾರು ೩೦೦ ವರ್ಷಗಳ ಹಿಂದೆ ರಚಿಸಲಾಗಿದೆಯೆಂದು ಅಭಿಪ್ರಾಯಪಡಲಾಗಿದೆ. ಈ ಕಟ್ಟಡಗಳನ್ನು ನಿರ್ಮಿಸಿದವರ ಬಗೆಗೆ ಖಚಿತವಾದ ಮಾಹಿತಿಯಿರುವುದಿಲ್ಲ. ಶೈಲಿಯ ದೃಷ್ಟಿಯಿಂದ, ಇವು ಪ್ರಾಚೀನ ಕಾಲದ್ದೆಂದು ಭಾಸವಾಗುವಂತೆ ರಚಿಸಲಾಗಿದೆ. ಎರಡೂ ಸ್ಮಾರಕಗಳನ್ನು ರಕ್ಷಿಸುವುದು ಇಂದಿನ ಅಗತ್ಯವಾಗಿದೆ.

೩೭

ಊರು ಶಿರಹಟ್ಟಿ
ಸ್ಮಾರಕ ಲಕ್ಷ್ಮೀನಾರಾಯಣ
ಸ್ಥಳ ಊರ ಕೋಟೆ ವಾಡೆಯ ಒಳಗೆ
ಕಾಲ ಕ್ರಿ.ಶ. ೧೭-೧೮ನೇ ಶತಮಾನ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ ರಾ.ಪು.ಇ

ಈ ದೇವಾಲಯವು ವಿಶಿಷ್ಟವಾಗಿದೆ. ಗರ್ಭಗೃಹ ಮತ್ತು ಅದರ ಮುಂಭಾಗದಲ್ಲಿ ಅರ್ಧಮಂಟಪವಿದೆ. ಇವೆರಡರ ಮುಂಭಾಗದಲ್ಲಿ ನವರಂಗದಂತಹ ವಿಶಾಲವಾದ ಅಂಗಣವುಳ್ಳ ಮಂಟಪ ಭಾಗವಿದೆ. ಗರ್ಭಗೃಹ ಮತ್ತು ಅರ್ಧಮಂಟಪದ ಭಾಗಗಳನ್ನು ಕಲ್ಲಿನಿಂದ ರಚಿಸಲಾಗಿದೆ. ಗರ್ಭಗೃಹದಲ್ಲಿ ಲಕ್ಷ್ಮೀನಾರಾಯಣರ ಅಮೃತಶಿಲೆಯ ಮೂರ್ತಿ ಶಿಲ್ಪವನ್ನು ಕಟ್ಟೆಯ ಮೇಲೆ ಪ್ರತಿಷ್ಠಾಪಿಸಲಾಗಿದೆ. ಗರ್ಭಗೃಹ ಮತ್ತು ಅಧ್ಮಂಟಪದ ಭಾಗಗಳು ಸಾಕಷ್ಟು ನವೀಕರಣಕ್ಕೆ ಒಳಗಾಗಿದೆ. ಸದರಿ ದೇವಾಲಯವನ್ನು ಪೂರ್ವದಿಂದ ಪ್ರವೇಶಿಸಬಹುದು. ಮಧ್ಯದ ಅಂಗಳ (ನವರಂಗದ) ಭಾಗವನ್ನು ಕಲ್ಲಿನಿಂದ ರಚಿಸಿದ್ದರೂ, ಅಧಿಕವಾಗಿ ಮರವನ್ನು ಬಳಸಲಾಗಿದೆ. ಇಲ್ಲಿ ಪೂರ್ವ ಮತ್ತು ಪಶ್ಚಿಮದಲ್ಲಿ ತಲಾ ಎರಡು, ಉತ್ತರ ಮತ್ತು ದಕ್ಷಿಣ ಗೋಡೆಗಳಲ್ಲಿ ತಲಾ ಮೂರು ಬಾಗಿಲುಗಳಿವೆ. ಅಧಿಷ್ಠಾನ ಮತ್ತು ನೆಲಹಾಸಿಗೆ ಕಲ್ಲನ್ನು ಬಳಸಲಾಗಿದೆ. ಉಳಿದಂತೆ ಎಲ್ಲವೂ ಮರದ ರಚನೆಗಳಾಗಿವೆ. ಅಂಗಳದಲ್ಲಿ ವಿಶಿಷ್ಟವಾದ ಕಮಾನಿನ ರಚನೆಯುಳ್ಳ ಕೋಷ್ಟವನ್ನು ಕಿರುಗುಡಿಯಂತೆ ನಿರ್ಮಿಸಿ ಅದರಲ್ಲಿ ಗರುಡನ ಮೂರ್ತಿಯನ್ನು ಇರಿಸಲಾಗಿದೆ. ದೇವಾಲಯಕ್ಕೆ ಆಧುನಿಕ ಶಿಖರವಿದೆ. ಅಂಗಳದ ಮೇಲ್ಭಾಗದಲ್ಲಿ ಮಹಡಿ (ಬಾಲ್ಕನಿ) ಇದೆ. ದೇವಾಲಯವು ಕೋಟೆ ಅಥವಾ ವಾಡೆಯ ಒಳಗೆ ಇದ್ದು, ಗುಡಿಯ ಸುತ್ತಲೂ ಅನೇಕ ಮನೆಗಳು ಇವೆ.

ಶಿರಹಟ್ಟಿಯು ಪ್ರಾಚೀನ ಕಾಲದಿಂದ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ. ದಾ.ರ. ಬೇಂದ್ರೆ ಅವರ ಹುಟ್ಟೂರು. ಶಿರಹಟ್ಟಿಯ ಪ್ರಾಚೀನ ಹೆಸರು ‘ಶಿರಹಪುರ’. ಬಿಜಾಪುರದ ಸುಲ್ತಾನರ ಕಾಲದಲ್ಲಿ ಈ ಪ್ರದೇಶವು ಲಕ್ಷ್ಮೇಶ್ವರ ಭಾಗವಾಗಿತ್ತು. (ಧಾ.ಜಿ.ಗ್ಯಾ, ಪು. ೧೯೧೬). ಬಿಜಾಪುರ ಸುಲ್ತಾನರ ಕಾಲದಲ್ಲಿ, ಕೆಲವು ಕಾಲದವರೆಗೆ ಈ ಪ್ರದೇಶವು ಅಂಕುಶಖಾನನ ಜಹಗೀರಾಗಿತ್ತು. ನಂತರ ಇದನ್ನು ಲಕ್ಷ್ಮೇಶ್ವರದೊಂದಿಗೆ ಖಾನಗೌಡ ಎಂಬ ಶಿರಹಟ್ಟಿ ದೇಸಾಯಿಯು ೧೬೦೭ರಲ್ಲಿ ದೇಶಗತಿಯಾಗಿ ಪಡೆದನು. ೧೬೮೬ರ ನಂತರದ ರಾಜಕೀಯ ಬೆಳವಣಿಗೆಯಿಂದ ಶಿರಹಟ್ಟಿ ದೇಸಾಯಿ ಸವಣೂರ ನವಾಬರೊಂದಿಗೆ ರಾಜಿ ಮಾಡಿಕೊಂಡರು. ಮುಂದೆ ೧೭೫೬ರಲ್ಲಿ ಸವಣೂರು ನವಬೂರು ತಮ್ಮ ಸಂಸ್ಥಾನವನ್ನು ಮರಾಠಾ ಪೇಶ್ವೆಗಳಿಗೆ ಒಪ್ಪಿಸಿದಾಗ ಶಿರಹಟ್ಟಿಯು ದೇಶಗತಿಯಾಗಿಯೇ ಮುಂದುವರೆಯಿತು. ಮುಂದೆ ಪೇಶ್ವೆಗಳು ಸವಣೂರು ಸಂಸ್ಥಾನವನ್ನು ಪಟವರ್ಧನ ಮನೆತನಕ್ಕೆ ಜಾಹಗೀರಾಗಿ ಕೊಟ್ಟ ನಂತರ ೧೮೦೧ರಲ್ಲಿ ವಿಭಜನೆಗೊಂಡು ಶಿರಹಟ್ಟಿಯು ಸಾಂಗ್ಲಿ ಸಂಸ್ಥಾನದ ಪಾಲಾಗಿ ಬಾಹುಸಾಹೇಬ್‌ ಲಾಗು ಎಂಬಾತನ ಅಧೀನಕ್ಕೆ ಬಂದಿತು. ನಂತರ ೧೮೭೮ರ ತರುವಾಯ ಪುರಸಭೆಯು ಪ್ರಾರಂಭಗೊಂಡು, ಸ್ವಾತಂತ್ಯ್ರಾನಂತರ ಧಾರವಾಡ ಜಿಲ್ಲೆಗೆ ಸೇರಿತು. ಧಾರವಾಡ ಜಿಲ್ಲೆಯು ವಿಭಜನೆಯಾದ ನಂತರ ಗದಗ ಜಿಲ್ಲೆಗೆ ಸೇರಿದೆ.

ಅಂಕುಶಖಾನ್‌ ಅಥವಾ ಖಾನಗೌಡನು ಇಲ್ಲಿ ಕೋಟೆಯನ್ನು ನಿರ್ಮಿಸಿದನೆಂದು ಅಭಿಪ್ರಾಯಪಡಲಾಗಿದೆ. ಕೋಟೆಯ ಭಾಗಗಳ, ಸಾಕಷ್ಟು ನಶಿಸಿದ್ದು, ಅದರ ಕೆಲವು ಭಾಗಗಳು ಮಾತ್ರ ಇಂದು ಕಾಣಸಿಗುತ್ತವೆ. ದ್ವಾರಗಳು, ಬಾಗಿಲು ಹಾಗೂ ಕೋಟೆ ಗೋಡೆಯ ಪಳಿಯುಳಿಕೆಗಳನ್ನು ಅಲ್ಲಲ್ಲಿ ಕಾಣಬಹುದು. ಈ ಕೋಟೆಯೊಳಗೆ ಲಕ್ಷ್ಮೀನಾರಾಯಣ ಗುಡಿಯಿದೆ.

೩೮

ಊರು ಶಿರಹಟ್ಟಿ
ಸ್ಮಾರಕ ಮುರುಗೇಶ್ವರ ಕಲ್ಮಠ
ಸ್ಥಳ ಅವ್ವಲಿಂಗವ್ವನ ಗುಡಿಯ ಹತ್ತಿರ
ಕಾಲ ಕ್ರಿ.ಶ. ೧೭-೧೮ನೇ ಶತಮಾನ
ಶೈಲಿ ಜಯನಗರೋತ್ತರ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹ ಮತ್ತು ಅರ್ಧಮಂಟಪ ಭಾಗಗಳನ್ನು ಈ ಕಲ್ಮಠವು ಹೊಂದಿದೆ. ಅರ್ಧ ಮಂಟಪದ ಮುಂಭಾಗದಲ್ಲಿ ತೆರೆದ ಅಂಗಳ ಭಾಗವಿದೆ. ಇದರಲ್ಲಿ ಎರಡು ಕಂಬಗಳು ಸೂರನ್ನು ಆಧರಿಸಿವೆ. ಶಿಖರ ಮತ್ತು ಅಧಿಷ್ಠಾನ ಭಾಗಗಳು ದೇವಾಲಯಕ್ಕಿಲ್ಲ. ಗರ್ಭಗೃಹದಲ್ಲಿ ಗದ್ದುಗೆಯಿದೆ. ಇದು ಚಿತ್ರದುರ್ಗದ ಮುರುಘಾಮಠದ ಶಾಖೆಯೆಂದು ಸ್ಥಳೀಯರು ಹೇಳುತ್ತಾರೆ. ಈ ಮಠವನ್ನು ಕಲ್ಲು ಮತ್ತು ಗಚ್ಚುಗಾರೆಗಳಿಂದ ನಿರ್ಮಿಸಲಾಗಿದೆ. ಕಲ್ಮಠದ ಪ್ರಾಂಗಣವನ್ನು ಗಿಡ್ಡನೆಯ ದ್ವಾರದ ಮೂಲಕ ಪ್ರವೇಶಿಸಬಹುದು. ಪ್ರಾಂಗಣದ ಪೂರ್ವ ಭಾಗದಲ್ಲಿಯೂ ಬಾಗಿಲಿದೆ. ಪಶ್ಚಿಮದ ಪ್ರಾಂಗಣ ಅಥವಾ ಅಂಗಳದ ಭಾಗಕ್ಕೆ ಗೋಡೆಯಿಲ್ಲ. ಇಲ್ಲಿ ಒಬ್ಬ ಸ್ವಾಮಿಗಳು ಕೆಲವು ದಿನಗಳು ವಾಸಿಸುತ್ತಾರೆ ಎಂದು ಸ್ಥಳೀಯರು ತಿಳಿಸಿರುವರು.

೩೯

ಊರು ಹೆಬ್ಬಾಳು (ಹೆಬ್ಬಾಳ)
ಸ್ಮಾರಕ ರಾಮಲಿಂಗ ಮತ್ತು ಸೋಮಲಿಂಗ
ಸ್ಥಳ ಕಲ್ಯಾಣ ಚಾಲುಕ್ಯ
ಕಾಲ ಪೂರ್ವ
ಶೈಲಿ ಊರ ಶಾಲೆಯ ಪಕ್ಕದಲ್ಲಿ
ಅಭಿಮುಖ ಕ್ರಿ.ಶ. ೧೨-೧೩ನೇ ಶತಮಾನ
ಸ್ಥಿತಿ ಕನಿಷ್ಠ
ಸಂರಕ್ಷಣೆ

ರಾಮಲಿಂಗ ಮತ್ತು ಸೋಮಲಿಂಗ ದೇವಾಲಯಗಳು ಊರಿನಲ್ಲಿದೆ. ಪ್ರಸ್ತುತ ಅವುಗಳು ಯಾವ ಪ್ರಾಚೀನ ಸ್ವರೂಪವನ್ನು ಉಳಿಸಿಕಕೊಂಡಿಲ್ಲ. ಗುಡಿಗಳಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿರುವ ಎರಡು ಲಿಂಗಗಳಿವೆ. ಚೌಕಾಕಾರದ ಕೋಣೆಯನ್ನು ಚಕ್ಕೆ ಕಲ್ಲುಗಳಿಂದ ಅರ್ಧಭಾಗದಷ್ಟು ಗೋಡೆಯನ್ನು ನಿರ್ಮಿಸಿ ಅದರಲ್ಲಿ ಲಿಂಗಗಳನ್ನು ಇಡಲಾಗಿದೆ. ಅಧಿಷ್ಠಾನ, ಭಿತ್ತಿ ಮತ್ತು ಶಿಖರಗಳಿಲ್ಲದೇ ತೆರೆದ ಅಂಗಳದಲ್ಲಿ ಲಿಂಗಗಳಿವೆ. ಇವುಗಳಿಗೆ ರಾಮಲಿಂಗ ಮತ್ತು ಸೋಮಲಿಂಗ ಗುಡಿ ಎಂದು ಕರೆಯಲಾಗುತ್ತದೆ.

ಈ ಊರು ಬಹು ಪ್ರಾಚೀನವಾಗಿದ್ದು, ಇಲ್ಲಿ ರಾಷ್ಟ್ರಕೂಟರ ಕಾಲದ ಶಾಸನವಿದೆ. (ಧಾ.ಜಿ.ಶಾ.ಸೂ, ಸಂ.ಸಿ. ೯೧, ಪು. ೩೯; EI, IV, pp. 350-56). ಕ್ರಿ.ಶ. ೯೭೫ರ ತೇದಿಯ ಈ ಶಾಸನ ರಾಷ್ಟ್ರಕೂಟ ಅರಸ ಎರಡನೆಯ ಕೃಷ್ಣನ ಕಾಲದಲ್ಲಿ ಬುಜ್ಜಬ್ಬರಸಿಯು ಶಿವದೇವಾಲಯ ನಿರ್ಮಿಸಿ ಅದಕ್ಕೆ ಭೂಮಿಯನ್ನು ದಾನ ನೀಡಿದ ವಿಷಯವನ್ನು ದಾಖಲಿಸಿದೆ. ಗಂಗ ಅರಸುಮನೆತನದ ಮಾರಸಿಂಹನ ಅಜ್ಜಿ ಬುಜ್ಜಬ್ಬರಸಿಯು ಇಲ್ಲಿ ಒಂದು ಕೆರೆಯನ್ನು ನಿರ್ಮಿಸಿ ತೂಬನ್ನು ಅಳವಡಿಸಿದ ಉಲ್ಲೇಖವು ಶಾಸನದಲ್ಲಿ ಇದೆ. ಆದರೆ ಇಂದು ಇಲ್ಲಿ ಯಾವ ಕೆರೆಯು ಉಳಿದು ಬಂದಿಲ್ಲ. ಊರಿನಲ್ಲಿ ಮುಕ್ತೇಶ್ವರ, ಮೌನೀಶ್ವರ ಮತ್ತು ಬನಶಂಕರಿ ಗುಡಿಗಳಿವೆ. ಕೆಲವು ವೀರಗಲ್ಲು ಮತ್ತು ಕ್ರಿ.ಶ. ೧೦-೧೧ನೇ ಶತಮಾನಕ್ಕೆ ಸೇರಬಹುದಾದ ಕೆಲವು ವಾಸ್ತು ಅವಶೇಷಗಳು ಊರಲ್ಲಿರುವುದನ್ನು ಕಾಣಬಹುದು. ಈ ಊರು ಶಿಲ್ಪಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಮರದ ಕೆತ್ತನೆಗಳು, ಬಾಗಿಲು, ಬಾಗಿಲ ಚೌಕಟ್ಟು, ದೇವರ ವಾಹನ ಮುಂತಾದವುಗಳನ್ನು ಕಲಾತ್ಮಕವಾಗಿ ತಯಾರಿಸುವುದರಲ್ಲಿ ಇಲ್ಲಿಯ ಶಿಲ್ಪಗಳು ಹೆಸರುವಾಸಿಯಾಗಿದ್ದಾರೆ.

೪೦

ಊರು ಹೊಸೂರು (ವಡವಿ)
ಸ್ಮಾರಕ ರಾಮಲಿಂಗ ಮತ್ತು ಸೋಮಲಿಂಗ
ಸ್ಥಳ ಊರ, ಮಧ್ಯೆ, ವಡವಿ ರಸ್ತೆಯ
ಕಾಲ ಕ್ರಿ.ಶ.೧೯ನೇ ಶತಮಾನ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಪ್ರಾಚೀನ ಕಾಲದ ದೇವಾಲಯವಿದ್ದ ಸ್ಥಳದಲ್ಲಿ ದೇವಾಲಯಗಳಿವೆ. ಪ್ರಸ್ತುತ ಯಾವ ಪ್ರಾಚೀನ ಕುರುಹುಗಳು ಇಲ್ಲ. ಪ್ರಾಯಶಃ ಇದೇ ಸ್ಥಳದಲ್ಲಿದ್ದ ದೇವಾಲಯವನ್ನು ನವೀಕರಿಸಿರುವುದರಿಂದ ಕಟ್ಟಿಗೆ ಮಡಿಗೆಯ ದೇವಾಲಯವಿದಾಗಿದೆ. ಪ್ರಸ್ತುತ ದೇವಾಲಯದಲ್ಲಿ ಗರ್ಭಗೃಹ ಅದರ ಮುಂಭಾಗದಲ್ಲಿ ತೆರೆದ ಮುಖಮಂಟಪವಿದೆ. ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗ ಹಾಗೂ ಅದರ ಮುಂದೆ ಬಸವ (ನಂದಿ) ಶಿಲ್ಪ ಇದೆ. ಬಾಗಿಲವಾಡವು ಕಲ್ಲಿನ ಸರಳ ರಚನೆಯಾಗಿದೆ. ಮಂಟಪದ ಭಾಗವನ್ನು ಎರಡು ಭಾಗಗಳನ್ನಾಗಿಸುವಂತೆ, ಅರ್ಧ ಭಾಗವನ್ನು ಎತ್ತರದಲ್ಲಿ ನಿರ್ಮಿಸಲಾಗಿದೆ. ಅಲ್ಲಿ ಮರದ ಎರಡು ಸರಳ ಕಂಬಗಳು ಹಾಗೂ ಅದರ ಮುಂಭಾಗದಲ್ಲಿಯೂ ಎರಡು ಸರಳ ಕಂಬಗಳಿವೆ. ಗೋಡೆಗಳಲ್ಲಿಯೂ ಮರದ ಅರ್ಧಗಂಬಗಳಿವೆ. ದೇವಾಲಯದ ಸೂರಿಗೆ ಮರದ ತೊಲೆಯನ್ನು ಬಳಸಲಾಗಿದೆ. ಮಂಟಪದ ಮುಂಭಾಗಕ್ಕೆ ತಗಡಿನ ಶೀಟನ್ನು ಬಳಸಲಾಗಿದೆ. ಮೆಟ್ಟಿಲುಗಳ ಮೂಲಕ ದೇವಾಲಯಕ್ಕೆ ಪ್ರವೇಶವಿದೆ. ಅಧಿಷ್ಠಾನ ಮತ್ತು ಶಿಖರ ಭಾಗಗಳು ದೇವಾಲಯಕ್ಕಿಲ್ಲ.

ದೇವಾಲಯದ ಎಡಬದಿಗೆ, ಸನಿಹದಲ್ಲಿ ಊರ ಬಾವಿಯಿದ್ದು, ಅದರ ಸಮೀಪ ಗಜಲಕ್ಷ್ಮೀ ಉಬ್ಬುಶಿಲ್ಪ ಆಂಜನೇಯ, ಗಣಪತಿ ಮತ್ತು ಕೆಲವು ನಾಗರಶಿಲ್ಪಗಳಿವೆ. ಕಲ್ಯಾಣ ಚಾಲುಕ್ಯರ ಶೈಲಿಯ ಕಂಬಗಳು ಮತ್ತು ದೇವಾಲಯದ ವಾಸ್ತು ಅವಶೇಷಗಳನ್ನು ಅಲ್ಲಿ ಕಾಣಬಹುದು. ಊರ ಕಣವಾಡದವರ ಹೊಲದಲ್ಲಿ (ಪ್ರಸ್ತು ಒಂದು ಮನೆಯ ಹಿಂಬದಿಯಲ್ಲಿ) ಕ್ರಿ.ಶ. ೧೬೮೮ರ ಅಪೂರ್ಣ ಶಾಸನವಿದೆ (ಧಾ.ಜಿ.ಶಾ.ಸೂ, ಸಂ.ಸಿ.೯೨, ಪು.೯೨). ಇದು ಹಾವನೂರ ಲಖಮಗೌಡ ಹಾಗೂ ವಡವಿಯ ನಾಯಕ ಗೌಡಾದಿಗಳನ್ನು ಕುರಿತು ಉಲ್ಲೇಖಿಸಿದೆ.