ಇಂದಿನ ಗದಗ ಜಿಲ್ಲೆಯು ಗದಗ, ನರಗುಂದ, ಮುಂಡರಗಿ, ರೋಣ ಮತ್ತು ಶಿರಹಟ್ಟಿ ಎಂಬ ಐದು ತಾಲೂಕುಗಳನ್ನು ಒಳಗೊಂಡಿದೆ. ಹಳೆಯ ಧಾರವಾಡ ಜಿಲ್ಲೆಯ ಭಾಗವಾಗಿದ್ದ ಈ ಐದು ತಾಲೂಕುಗಳನ್ನು ಬೇರ್ಪಡಿಸಿ ೧೯೯೯ರಲ್ಲಿ ನೂತನ ಜಿಲ್ಲೆಯನ್ನಾಗಿ ರಚಿಸಲಾಯಿತು. ಅದೇ ಸಂದರ್ಭದಲ್ಲಿ ಏಳು ತಾಲೂಕುಗಳನ್ನು ಒಳಗೊಂಡ ಹಾವೇರಿ ಹೆಸರಿನ ಹೊಸ ಜಿಲ್ಲೆಯು ಅಸ್ತಿತ್ವಕ್ಕೆ ಬಂದಿತು. ತುಂಗಭದ್ರಾ ನದಿಯು ಬಳ್ಳಾರಿ ಹಾಗೂ ಹಾವೇರಿ ಜಿಲ್ಲೆಗಳನ್ನು ಗದಗ ಜಿಲ್ಲೆಗಳಿಂದ ಬೇರ್ಪಡಿಸಿದರೆ, ವಾಯುವ್ಯಕ್ಕೆ ಧಾರವಾಡ ಹಾಗೂ ಆಗ್ನೇಯದಲ್ಲಿ ಬಾಗಲಕೋಟೆ ಜಿಲ್ಲೆಯು ಗದಗ ಜಿಲ್ಲೆಯನ್ನು ಸುತ್ತುವರೆದಿದೆ. ತುಂಗಭದ್ರೆ ಮತ್ತು ಮಲಪ್ರಭೆ ಹಾಗೂ ಅವುಗಳ ಉಪ ನದಿಗಳು ಜಿಲ್ಲೆಯ ಮುಖ್ಯ ಜಲ ಮೂಲಗಳಾಗಿವೆ. ಹೆಚ್ಚಿನಾಂಶ ಎರೆ (ಕಪ್ಪು) ಮಣ್ಣಿನಿಂದ ಕೂಡಿರುವ ಸಮತಟ್ಟಾದ ಪ್ರದೇಶವನ್ನು ಈ ಜಿಲ್ಲೆಯು ಒಳಗೊಂಡಿದೆ.

ಶಾಸನ ಮತ್ತು ಸಾಹಿತ್ಯ ಆಕರಗಳಲ್ಲಿ ಕೇಂದ್ರ ಸ್ಥಳವಾದ ಗದಗಿನ ಹೆಸರನ್ನು ಅನೇಕ ಬಗೆಯಲ್ಲಿ ಬಳಸಲಾಗಿದೆ. ಇದನ್ನು ಕುರಿತಾದ ಹಲವು ನಿಷ್ಪತ್ತಿಗಳು ಶಾಸನಗಳಲ್ಲಿ ವ್ಯಕ್ತವಾಗಿವೆ. ಈ ಊರನ್ನು ‘ಗಲದುಗ’, ‘ಕಲ್‌ದುಗ’, ‘ಗರದಗುದ’, ‘ಕರ್ತುಕ’, ‘ಕರದುಗ’ ಮತ್ತು ‘ಗದುಗು’ ಎಂದು ಉಲ್ಲೇಖಿಸಲಾಗಿದ್ದು ವ್ಯಕ್ತವಾಗಿರುವ ಈ ಪದಗಳನ್ನು ಅರ್ಥೈಸುವುದು ಕಷ್ಟಕರವಾಗಿದೆ. ಕ್ರಿ.ಶ. ೧೦೦೨ರ ಅಹವಮಲ್ಲನ ಶಾಸನವು ಗದಗದ ತ್ರಿಕೂಟೇಶ್ವರ ದೇವಾಲಯದಲ್ಲಿದ್ದು, ಊರನ್ನು ‘ಕರ್ದುಗಿನ’ ಎಂದು ಉಲ್ಲೇಖಿಸದೆ. ಊರಿಗೆ ಅಂಟಿಕೊಂಡಿರುವ ಬೆಟಗೇರಿಯನ್ನು ರಾಷ್ಟ್ರಕೂಟ ಅರಸ ಇಂದ್ರನ ಕ್ರಿ.ಶ. ೯೧೮ರ ಶಾಸನವು ‘ಪಟ್ಟಕೆರೆ’ ಎಂದು ಉಲ್ಲೇಖಿಸಿದೆ. ಮುಂದೆ ಬಟ್ಟಕೆರೆಯು ಬೆಟಗೇರಿ ಆಯಿತು. ಇರಿವ ಬೆಡಂಗ ಸತ್ಯಾಶ್ರಯನ ಕ್ರಿ.ಶ. ೧೦೦೮ರ ಶಾಸನವು (ವೀರನಾರಾಯಣ ಗುಡಿ) ಊರನ್ನು ‘ಕಲದುಗ ಅಗ್ರಹಾರ’ ಎಂದು ದಾಖಲಿಸಿದೆ. ಗದಗವು ಬೆಳ್ವೊಲ-೩೦೦ರ ಆಡಳಿತ ವಿಭಾಗದಲ್ಲಿನ ಒಂದು ಮುಖ್ಯ ಪಟ್ಟಣವಾಗಿತ್ತೆಂದು ಶಾಸನ ಅಧ್ಯಯನಗಳಿಂದ ತಿಳಿಯಬಹುದು.

ನರಗುಂದ, ಗದಗ ಜಿಲ್ಲೆಯ ಅತಿ ಚಿಕ್ಕ ತಾಲೂಕು. ಶಾಸನಗಳಲ್ಲಿ ನರಗುಂದ, ಪಿರಿಯ ನರಗುಂದ ಎಂಬ ಬೇರೆ ಬೇರೆ ಹೆಸರಿನ ಉಲ್ಲೇಖಗಳಿವೆ. ಬೆಳ್ವೊಲ-೩೦೦ರ ಆಡಳಿತ ವಿಭಾಗದ ಚಿಕ್ಕ ಘಟಕವಾಗಿದ್ದ ಕೊಣ್ಣೂರು-೩೦ರ ಆಡಳಿತ ವಿಭಾಗದಲ್ಲಿ ನರಗುಂದ ಒಂದು ಮಹಾ ಅಗ್ರಹಾರವಾಗಿತ್ತು. ಚರಿತ್ರೆ ಉದ್ದಕ್ಕೂ ಅನೇಕ ಏಳು ಬೀಳುಗಳನ್ನು ಕಂಡಿರುವ ಈ ಪ್ರದೇಶವನ್ನು ವಸಾಹತುಶಾಹಿ ಸಂದರ್ಭದಲ್ಲಿ ಸ್ಥಳೀಯ ಆಡಳಿತಗಾರ ನರಗುಂದ ಬಾಬಾಸಾಹೇಬ ಬ್ರಿಟಿಷ ಸ್ವಾಮ್ಯವನ್ನು ಧಿಕ್ಕರಿಸಿ ನೇಣುಗಂಬಕ್ಕೆ ಏರಿರುವುದು ಇತಿಹಾಸವಾಗಿದೆ. ಇತ್ತೀಚಿನ ಹೋರಾಟಗಳಲ್ಲಿ ನರಗುಂದ ರೈತ ಚಳವಳಿ ಕರ್ನಾಟಕ ಚರಿತ್ರೆಯಲ್ಲಿ ಸದಾಕಾಲ ದಾಖಲಾಗಿ ಉಳಿದಿರುವ ಮಹತ್ವದ ಸಂಗತಿಯಾಗಿದೆ.

ಮುಂಡರಗಿ ಗದಗ ಜಿಲ್ಲೆಯ ಮತ್ತೊಂದು ಮಹತ್ವದ ಸಾಂಸ್ಕೃತಿಕ ತಾಲೂಕಾಗಿದೆ. ಈ ಊರಿನ ಪ್ರಾಚೀನ ಹೆಸರು ‘ಮೃಡಗಿರಿ’ ಆಗಿದ್ದು ನಂತರ ಕಾಲಾವಧಿಯಲ್ಲಿ ಮುಂಡರಗಿ ಎಂಬ ರೂಪವನ್ನು ಪಡೆದು ಪ್ರಸಿದ್ಧಿಗೆ ಬಂದಿತೆಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಆದರೆ ಈ ಊರಿಗೆ ಸಂಬಂಧಿಸಿದ ಸ್ಥಳನಾಮದ ವಿವರಗಳನ್ನು ಮರುಪರಿಶೀಲಿಸಿದಾಗ ಬೇರೆ ಸಂಗತಿಗಳು ತಿಳಿದುಬರುವವು. ಮುಂಡರು ಎಂಬ ಬುಡಕಟ್ಟು ಸಮುದಾಯ ನೂರಾರು ವರ್ಷಗಳ ಕಾಲ ಈ ಪ್ರದೇಶದ ಸುತ್ತಲೂ ವಾಸಿಸುತ್ತಿದ್ದ ಕುರುಹುಗಳು ತಿಳಿದುಬಂದಿವೆ. ಮೂಲತಃ ಬೇಟೆ ಸಂಸ್ಕೃತಿಯ ಈ ಸಮುದಾಯ ಕಾಲಕ್ರಮೇಣ ಮೂಲ ವೃತ್ತಿಗಳನ್ನು ಹಾಗೂ ಅಲೆದಾಟವನ್ನು ಬದಲಾಯಿಸಿಕೊಂಡು ಸ್ಥಿರಜೀವನವನ್ನು ಸಮುದಾಯದ ಪ್ರಯುಕ್ತವಾಗಿ ಈ ಪ್ರದೇಶಕ್ಕೆ ಮುಂಡರಗಿ ಎಂಬ ಹೆಸರು ಬಂದಿರುವ ಸಂಗತಿಯನ್ನು ಕೆ.ಜಿ. ಕುಂದಣಗಾರ ಅವರು ವ್ಯಕ್ತಪಡಿಸಿದ್ದರೆ (ಈ ವಿಚಾರವನ್ನು ಮಹಲಿಂಗ ಯಾಳಗಿ ಅವರಿಂದ ಪಡೆಯಲಾಗಿದೆ). ಪ್ರಸ್ತುತ ಯೋಜನೆಯ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಮೇಲಿನ ಅಭಿಪ್ರಾಯಕ್ಕೆ ಪೂರಕವಾದ ಹಲವಾರು ಮಾಹಿತಿಗಳು ಕಂಡುಬಂದಿವೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಗುಡ್ಡದ ಮೇಲೆ ಶಿವ (ಮೃಡ)ನ ದೇವಸ್ಥಾನ ಒಂದಿದ್ದು ಈ ಸಂಬಂಧವಾಗಿ ಮೃಡಗಿರಿಯು ಮುಂಡರಗಿಯಾಗಿರುವ ಸಾಧ್ಯತೆಗಳನ್ನು ಸ್ಥಳೀಯರು ವ್ಯಕ್ತಪಡಿಸುತ್ತಾರೆ. ಮುಂಡರಗಿಯ ಗ್ರಾಮನಾಮ ನಿಷ್ಪತ್ತಿಯನ್ನು ಮುಂಡರ+ಕೆಯ್=ಮುಂಡರಗೆ ಎಂದು ನಿರ್ಣಯಿಸಲಾಗಿದೆ. ಆದರೆ ಮುಂಡರಗಿ ಗ್ರಾಮನಿಷ್ಪತ್ತಿಯನ್ನು ಜನಾಂಗವಾಚಿಯಾಗಿ ಪರಿಗಣಿಸುವುದು ಸೂಕ್ತವಾದುದು.

ರೋಣ ತಾಲೂಕು ಜಿಲ್ಲೆಯ ದೊಡ್ಡ ವಿಸ್ತಾರ ತಾಲೂಕಾಗಿದೆ. ಇದೊಂದು ಪ್ರಾಚೀನ ಅಗ್ರಹಾರವಾಗಿತ್ತು. ಶಾಸನಗಳಲ್ಲಿ ಈ ಪಟ್ಟಣವನ್ನು ರೋಣ ಎಂದು ಉಲ್ಲೇಖಿಸಲಾಗಿದೆ. ಇದು ಪುಲಿಗೆರೆ-೩೦೦ಕ್ಕೆ ಸೇರಿತ್ತು. ಕ್ರಿ.ಶ. ೭-೮ನೇ ಶತಮಾನಕ್ಕೆ ಸೇರಿದ ಬಾದಾಮಿ ಚಾಲುಕ್ಯರ ಶಾಸನವು ಶ್ರೀ ರೋಣದ ಶಿವಾಲಯ ಎಂದು ದಾಖಲಿಸಿದೆ. ಆದರೆ ಮಹಾಭಾರತದ ದ್ರೋಣಾಚಾರ್ಯನ ಹೆಸರನಿಂದ ಈ ಪಟ್ಟಣಕ್ಕೆ ದ್ರೋಣಪುರವೆಂಬ ಹೆಸರು ಬಂದಿದೆ ಎಂದು ಸ್ಥಳೀಯರ ಅಭಿಪ್ರಾಯ. ಗ್ರಾಮದ ಬಸವಣ್ಣನ ಗುಡಿಯಲ್ಲಿರುವ ದ್ರೋಣನ ಶಿಲ್ಪವು ಈ ಊರಿನ ಪ್ರಾಚೀನ ಇತಿಹಾಸವನ್ನು ತಿಳಿಸುವ ಮಹತ್ವದ ಕುರುಹು ಆಗಿದೆ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಇಲ್ಲಿರುವ ಶಿಲ್ಪ(ದ್ರೋಣ)ದಿಂದ ಈ ಪಟ್ಟಣಕ್ಕೂ ಈ ಹೆಸರು ಬಂದಿರುವ ಐತಿಹ್ಯಗಳು ಪ್ರಚಲಿತದಲ್ಲಿವೆ. ಆದರೆ ೮ರಿಂದ ೧೬ನೇ ಶತಮಾನದವರೆಗಿನ ಕಾಲಾವಧಿಯ ಸುತ್ತಲಿನ ಈ ಪ್ರದೇಶದಲ್ಲಿಯ ಶಾಸನಗಳು ರೋಣ ಪಟ್ಟಣವನ್ನು ‘ಮಹಾ ಅಗ್ರಹಾರ ಓಣ’ ಎಂಬುದಾಗಿ ಮಾತ್ರ ಉಲ್ಲೇಖಿಸಿವೆ. ಹೀಗಾಗಿ ದ್ರೋಣಚಾರ್ಯರಿಗೆ ಈ ಊರಿನ ಹೆಸರನ್ನು ಕಲ್ಪಿಸಿ ಇತಿಹಾಸ ರಚಿಸುವುದು ಸಮಂಜಸವಾಗಲಾರದ ಸಂಗತಿಯಾಗಿದೆ. ಈ ಪಟ್ಟಣಕ್ಕೆ ಹೊಂದಿಕೊಂಡಂತೆ ಅನೇಕ ಕೆರೆಗಳು ನಿರ್ಮಾಣವಾಗಿವೆ. ಈ ಕೆರೆಗಳ (ದ್ರೋಣ) ಸಂಬಂಧವಾಗಿ ಗ್ರಾಮನಿಷ್ಪತಿಯನ್ನು ವಿವೇಚಿಸುವುದು ಸರಿಯಾದುದೆಂದು ಅಭಿಪ್ರಾಯಿಸಬಹುದು.

ಶಿರಹಟ್ಟಿ ತಾಲೂಕು ಜಿಲ್ಲೆಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಕರ್ನಾಟಕದ ಮಧ್ಯಕಾಲೀನ ಸಮಾಜೋ-ಧಾರ್ಮಿಕ ಸುಧಾರಣೆಯ ಕಾಲಾವಧಿಯಲ್ಲಿ ಈ ತಾಲೂಕಿನಲ್ಲಿ ಹಲವಾರು ಕಾರ್ಯಚಟುವಟಿಕೆಗಳು ಘಟಿಸಿರುವುದು ಇತಿಹಾಸವಾಗಿದೆ. ಸಂತಶಿಶುನಾಳ ಷರೀಫರು, ನವಲಗುಂದದ ನಾಗಲಿಂಗಸ್ವಾಮಿಗಳು, ಶಿರಹಟ್ಟಿಯ ಫಕೀರೇಶ, ಗೋವಿಂದ ಪಂಡಿತ ಹಾಗೂ ರಂಭಾಪುರಿ ಪೀಠದ ರೇಣುಕಾಚಾರ್ಯ ಮಹಾಸ್ವಾಮಿಗಳೂ ಸಮಾಜ ಸುಧಾರಣ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಬದುಕಿಗೆ ಹೊಸ ದಿಕ್ಕನ್ನು ಕಲ್ಪಿಸಿದರು. ಇಂಥ ಮಹತ್ವದ ಶಿರಹಟ್ಟಿ ಪಟ್ಟಣವನ್ನು ಪ್ರಾಚೀನ ಶಾಸನಗಳಲ್ಲಿ ‘ಶಿರಹಪುರ’ ಎಂದು ಕರೆಯಲಾಗಿತ್ತು. ಶಿರಹಪುರಕ್ಕೆ, ಕಾಲ ಕ್ರಮದಲ್ಲಿ ಹಟ್ಟಿ ಎಂಬ ಪದವು ‘ಪರ’ದ ಬದಲಿಗೆ ಸೇರಿ, ಶಿರಹಟ್ಟಿಯಾಯಿತು.

ಗದಗ ಜಿಲ್ಲೆಯು ಪ್ರಾಕೃತಿಕ ಸಂಪನ್ಮೂಲಗಳು ಹಾಗೂ ಹಿತಮಿತವಾದ ಹವಾಮಾನವನ್ನು ಒಳಗೊಂಡ ಪ್ರದೇಶ. ಜಿಲ್ಲೆಯಲ್ಲಿ ಪ್ರಮುಖವಾಗಿ ಎರೆಮಣ್ಣು (ಕಪ್ಪುಮಣ್ಣು) ಇದ್ದು, ಕೃಷಿಗೆ ಸಹಕಾರಿಯಾಗಿದೆ. ಜಿಲ್ಲೆಯ ಈಶಾನ್ಯಕ್ಕೆ ಮತ್ತು ಪಕ್ಕದ ಧಾರವಾಡ ಜಿಲ್ಲೆಯಲ್ಲಿ ಕಲಾದಗಿ ಶಿಲಾಶ್ರೇಣಿಯು ಸೇರಿದ ಮರಳುಗಲ್ಲು ಹರಡಿಕೊಂಡಿದೆ. ಈ ಶಿಲಾಶ್ರೇಣಿಯು ಹೆಚ್ಚಾಗಿ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಕಾಣುತ್ತೇವೆ. ಈ ಶಿಲಾವರ್ಗದಲ್ಲಿ ಬೆಣಚು ಕಲ್ಲು, ಸುಣ್ಣಕಲ್ಲು ಮತ್ತು ಜೇಡಿಯ ಚಿಪ್ಪುಕಲ್ಲುಗಳಿರುವುದನ್ನು ಗಮನಿಸಬಹುದು. ಕಲಾದಗಿ ಶಿಲಾಶ್ರೇಣಿಯೊಂದಿಗೆ ನೆರೆಯ ಧಾರವಾಡ ಜಿಲ್ಲೆಯಲ್ಲಿ ವಿಶೇಷವಾಗಿ ಕಂಡುಬರುವ ಕ್ರಿಸ್ಟ್‌ಲೈನ್‌ಸಿಸ್ಟ್ (Crystalline Cist) ಅಥವಾ ‘ಧಾರ್ವಾರ್ ಸಿಸ್ಟಸ್ಸ್’ನ (ಧಾರವಾಡ ಶಿಲೆ) ಸ್ಪಟಿಕಾತ್ಮಕ ಶಿಲಾಪದರಗಳ ರಚನೆಯು ಈ ಜಿಲ್ಲೆಯಲ್ಲಿಯೂ ವಿಸ್ತರಿಸಿಕೊಂಡಿದೆ. ಗ್ರಾನೈಟ್, ನೀಸ್, ಪೆಂಟೆಕಲ್ಲು (ಗಂಗ್ರಾಮರೇಟ್), ಸಿಕತಶಿಲೆ (Sand Stone, ಮರಳುಗಲ್ಲು), ಮುಂತಾದ ಅನೇಕ ಬಗೆಯ ಕಲ್ಲುಗಳು ಅಲ್ಲಲ್ಲಿ ಕಂಡುಬರುತ್ತವೆ. ಈ ಶಿಲಾಶ್ರೇಣಿಯೊಂದಿಗೆ ಅನೇಕ ಅಮೂಲ್ಯ ಖನಿಜ ಸಂಪತ್ತುಗಳು ಸಹ ಇವೆ. ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತಗುಡ್ಡಗಳ ಶ್ರೇಣಿಯಲ್ಲಿ ಕಬ್ಬಿಣದ ಅದಿರು ದೊರಕುತ್ತದೆ. ಇದೇ ಗುಡ್ಡಗಳ ಶ್ರೇಣಿಯಲ್ಲಿ ಚಿನ್ನದ ಅದಿರು ಅಲ್ಪ ಪ್ರಮಾಣದಲ್ಲಿದ್ದು, ವಾಣಿಜ್ಯ ಬಳಕೆಗೆ ಉತ್ಪಾದನೆಯಾಗುವಷ್ಟು ಹೆಚ್ಚಿನ ಪ್ರಮಾಣದಲ್ಲಿ ದೊರಕುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಹೆಮಟೈಟ್, ಕಬ್ಬಿಣ-ಬೆಣಚು ಮಿಶ್ರಿತ ಶಿಲಾರೂಪದ ನಿಕ್ಷೇಪಗಳು, ಡೋಣಿ ಹಳ್ಳದ ಪರಿಸರದಲ್ಲಿ ತಾಮ್ರದ ಅದಿರಿನ ಚೂರುಗಳು ಕಂಡುಬಂದಿವೆ. ಮುಂಡರಿಗೆ ತಾಲೂಕಿನಲ್ಲಿ ಕಣಶಿಲೆಯನ್ನು ಗಣಿಗಾರಿಕೆಯ ಮೂಲಕ ತೆಗೆದು ಬಳಸಿಕೊಳ್ಳಲಾಗುತ್ತಿದೆ. ಇದೇ ಪ್ರದೇಶದಲ್ಲಿ ವರ್ಣಗಳಿಂದ ಕೂಡಿದ ಸುಣ್ಣಶಿಲೆಯ ನಿಕ್ಷೇಪವು ಸಾಕಷ್ಟು ಪ್ರಮಾಣದಲ್ಲಿ ದೊರಕಿವೆ.

ಜಿಲ್ಲೆಯಲ್ಲಿ ಅಂತರ್ಜಲ ನಿಕ್ಷೇಪ ಸಹ ಸಾಕಷ್ಟು ಪ್ರಮಾಣದಲ್ಲಿರುವುದು ಇಲ್ಲಿನ ಜಲಸಂಪತ್ತಿಗೆ ಪೂರಕವಾಗಿವೆ. ಜಿಲ್ಲೆಯಲ್ಲಿ ತುಂಗಭದ್ರಾ ನದಿಯು ದಕ್ಷಿಣ ಭಾಗದಲ್ಲಿ ಉತ್ತರ ಭಾಗಗಳಾದ ನರಗುಂದ ಮತ್ತು ರೋಣ ತಾಲೂಕುಗಳನ್ನು ಬಾಲಕೋಟೆ ಜಿಲ್ಲೆಯಿಂದ ಬೇರ್ಪಡಿಸುತ್ತದೆ. ಹರಿಯುವ ನದಿಗಳಲ್ಲದೇ ಜಿಲ್ಲೆಯಲ್ಲಿ ಅನೇಕ ಹಳ್ಳಗಳಿದ್ದು, ಮಳೆಗಾಲದಲ್ಲಿ ಪ್ರವಹಿಸಿ, ನದಿಗೆ ನೀರನ್ನು ಪೂರೈಸುತ್ತವೆ. ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ಅನೇಕ ಗುಡ್ಡಗಳಲ್ಲಿ ಸಂಗ್ರಹಗೊಳ್ಳುವ ನೀರು ತುಂಗಭದ್ರಾ ನದಿಗೆ ಜಲವನ್ನು ಪೂರೈಸುತ್ತವೆ. ಹಿರೇಹಳ್ಳ ಮತ್ತು ಮಾಗಡಿಹಳ್ಳಗಳು ಪ್ರಮುಖ ಹಳ್ಳಗಳಾಗಿವೆ. ನದಿಗಳೊಂದಿಗೆ ಅನೇಕ ಕೆರೆಗಳು ಜಿಲ್ಲೆಯ ನೀರಿನ ಬೇಡಿಕೆಯನ್ನು ಪೂರೈಸುವ ಪ್ರಯತ್ನದಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಕುಡಿಯುವುದಕ್ಕೆ ಮತ್ತು ಕೃಷಿಗೆ ಕೆರೆಯ ನೀರನ್ನು ಬಳಸಿಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿರುವ ಪುರಾತನ ಹಾಗೂ ದೊಡ್ಡ ಕೆರೆ ಮುಂಡರಗಿ ತಾಲೂಕಿನ ಡಂಬಳದಲ್ಲಿದೆ. ಶಿರಹಟ್ಟಿ ತಾಲೂಕಿನಲ್ಲಿರುವ ಮಾಗಡಿ ಕೆರೆಯು ಸಹ ದೊಡ್ಡದಾಗಿದ್ದು, ಈ ಕೆರೆಗೆ ವಿವಿಧ ದೇಶಗಳಿಂದ ಪಕ್ಷಿಗಳು ವಲಸೆ ಬಂದು ತಮ್ಮ ಸಂತಾನಭಿವೃದ್ಧಿ ಮಹತ್ವಕಾರ್ಯ ಪೂರೈಸಿಕೊಂಡು ತಮ್ಮ ಮೂಲ ಸ್ಥಾನಕ್ಕೆ ತೆರಳುತ್ತವೆ. ಇಂದು ಜಿಲ್ಲೆಯಲ್ಲಿ ಎಲ್ಲಾ ಬಗೆಯ ಕಾಡು ಪ್ರಾಣಿಗಳು ಮತ್ತು ಪಕ್ಷಿ ಸಂಕುಲಗಳನ್ನು ಈ ಪರಿಸರದಲ್ಲಿ ಕಾಣುತ್ತೇವೆ. ಪ್ರಾಣಿ ಸಂಪತ್ತಿನೊಂದಿಗೆ ಸಸ್ಯ ಸಂಪತ್ತು ಸಹ ವಿಫುಲವಾಗಿದೆ. ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕುಗಳಲ್ಲಿ ಅರಣ್ಯ ಸಂಪತ್ತು ಹೇರಳವಾಗಿದೆ. ಸಾಮಾಜಿಕ ಅರಣ್ಯಗಳು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ವಾರ್ಷಿಕವಾಗಿ ಸರಾಸರಿ ೫೦೦ ಮಿ.ಮೀ. ಮಳೆಯಾಗುತ್ತದೆ. ಸಾಮಾನ್ಯವಾಗಿ ಅಧಿಕ ಮತ್ತು ಕನಿಷ್ಠ ತಾಪಮಾನವನ್ನು ಗದಗ ಜಿಲ್ಲೆಯು ಹೊಂದಿದೆ (ಧಾ.ಜೊ.ಗ್ಯಾ, ಪು. ೧೧೩೮) ಗದಗ ಜಿಲ್ಲೆಯು ಆತಳಿತಾತ್ಮಕವಾಗಿ ಧಾರವಾಡ ಜಿಲ್ಲೆಯಿಂದ ವಿಭಜನೆ ಹೊಂದಿದ್ದರೂ, ಪಕ್ಕದ ಹಾವೇರಿ ಮತ್ತು ಧಾರವಾಡ ಜಿಲ್ಲೆಗಳನ್ನು ನೈಸರ್ಗಿಕ ಹಾಗೂ ಸಾಂಸ್ಕೃತಿಕವಾಗಿ ಹೋಲುವುದು ಗಮನಾರ್ಹ.

ಪ್ರಾಗಿತಿಹಾಸ

ಗದಗ ಜಿಲ್ಲೆಯ ಹಲವಾರು ಗ್ರಾಮಗಳು ಪ್ರಾಗಿತಿಹಾಸಕಾಲದ ಅವಶೇಷಗಳ ಮುಖ್ಯ ನೆಲೆಗಳಾಗಿವೆ. ಪುರಾತತ್ವ ಅನ್ವೇಷಣೆ ಕಾರ್ಯಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಅಲ್ಲಲ್ಲಿ ನಡೆದಿದ್ದರೂ ವ್ಯವಸ್ಥಿತವಾದ ಹುಡುಕಾಟ ಹಾಗೂ ಉತ್ಖನನಗಳು ಈವರೆಗೂ ನಡೆದಿಲ್ಲ. ಹೀಗಾಗಿ ದೊರೆತಿರುವ ಮಾಹಿತಿಗಳಿಂದಲೇ ಇಲ್ಲಿಯ ಪ್ರಾಗಿತಿಹಾಸವನ್ನು ತಿಳಿಯಬೇಕು. ನರಗುಂದದಲ್ಲಿ ೨, ಮುಂಡರಗಿಯಲ್ಲಿ ೧, ರೋಣದಲ್ಲಿ ೭ ಮತ್ತು ಶಿರಹಟ್ಟಿಯ ೩ ನೆಲೆಗಳಲ್ಲಿ ಹಳೆಶಿಲಾಯುಗ ಕಾಲಕ್ಕೆ ಸೇರಿದ ಆಯುಧಗಳು (ಕೈ ಗೊಡಲಿ) ದೊರಕಿವೆ (ಶಿವತಾರಕ್, ಕೆ.ಬಿ., ಪು. ೧೪೪-೧೬೧). ಗದಗ ತಾಲೂಕಿನಲ್ಲಿ ಈ ಕಾಲದ ಯಾವುದೇ ಅವಶೇಷಗಳು ದೊರಕಿಲ್ಲ ಹಾಗೂ ಮಧ್ಯ ಮತ್ತು ಅಂತ್ಯ ಹಳೇಶಿಲಾಯುಗದ ಅವಶೇಷಗಳು ಸಹ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಇದರಂತೆಯೇ, ಸೂಕ್ಷ್ಮಶಿಲಾಯುಗಕ್ಕೆ ಸಂಬಂಧಿಸಿದ ಸೂಕ್ಷ್ಮ ಶಿಲಾಯುಧಗಳಾಗಲಿ ಅಥವಾ ಆ ಕಾಲದ ಇನ್ನಿತರೆ ಕುರುಹುಗಳು ಪತ್ತೆಯಾಗಿಲ್ಲ. ನಂತರದಲ್ಲಿ ನೂತನ ಶಿಲಾಸಂಸ್ಕೃತಿಯ ಶಿಲಾಯುಧಗಳು ಈ ಜಿಲ್ಲೆಯಲ್ಲಿ ದೊರಕಿವೆ. ಮುಂಡರಗಿ ತಾಲೂಕನ್ನು ಹೊರತುಪಡಿಸಿ, ಉಳಿದೆಲ್ಲಾ ತಾಲೂಕುಗಳಲ್ಲಿಯೂ ನೂತನ ಶಿಲಾಯುಗದ ಅವಶೇಷಗಳು ದೊರಕಿವೆ. ಶಿಲಾ ತಾಮ್ರಯುಗಕ್ಕೆ ಸೇರಿದ ನೆಲೆಗಳು ರೋಣ ತಾಲೂಕಿನಲ್ಲಿ ಮಾತ್ರವೇ ದೊರತಿದ್ದು ಜಿಲ್ಲೆಯ ಉಳಿದ ಭಾಗಗಳಲ್ಲಿ ದೊರೆತಿಲ್ಲ. ಹಿರೇಹಾಳದಲ್ಲಿ ನೂತನ ಶಿಲಾಯುಗ ಕಾಲಕ್ಕೆ ಸೇರಿದ ಬ್ರಹ್ಮಗಿರಿ ಮಾದರಿಯ ಕಂದು ವರ್ಣದ ಮಡಿಕೆ ಚೂರುಗಳು ಮತ್ತು ಇಬ್ಬದಿ ನೀಳಚಕ್ಕೆಯ ಮಹತ್ವದ ಅವಶೇಷಗಳು ದೊರಕಿವೆ.

ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದ ಕುರುಹುಗಳು ಜಿಲ್ಲೆಯ್ಲಲಿ ಲಭ್ಯವಾಗಿವೆ. ಬೃಹತ್ ಶಿಲಾಯುಗದ ಗೋರಿಗಳು ಮತ್ತು ವಸತಿನೆಲೆಗಳು ಸಹ ಇಲ್ಲಿ ಪತ್ತೆಯಾಗಿವೆ. ಗದಗ ಮತ್ತು ಮುಂಡರಗಿ ತಾಲೂಕಿಗಳಲ್ಲಿ ಈ ಸಂಸ್ಕೃತಿಗೆ ಸೇರಿದ ಯಾವ ಕುರುಹುಗಳು ದೊರಕಿಲ್ಲ. ಆದರೆ ಕಲಕೇರಿ ಗ್ರಾಮದ ಪರಿಸರದಲ್ಲಿ (ಬಸವಣ್ಣಗುಡ್ಡ) ದೊರಕುವ ಅವಶೇಷಗಳು ಬೃಹತ್ ಶಿಲಾಯುಗಕ್ಕೆ ಸೇರಿದವೆನ್ನಬಹುದು. ಬೃಹತ್ ಶಿಲಾಯುಗ ಕಾಲಕ್ಕೆ ಸೇರಿದ ವಸತಿ ನೆಲಗಳು ರೋಣದ ಗೌಡತೇರಿ ಮತ್ತು ಹಿರೇಹಾಳ್ ಗ್ರಾಮಗಳಲ್ಲಿ ದೊರಕಿವೆ. ಶಿರಹಟ್ಟಿ ತಾಲೂಕಿನ ಇಟಗಿಯಲ್ಲಿ ಈ ಸಂಸ್ಕೃತಿಗೆ ಸೇರಿದ ಅವಶೇಷಗಳು ಲಭ್ಯವಾಗಿವೆ. ಈ ಮೂರು ನೆಲೆಗಳಲ್ಲಿ ಕಪ್ಪು-ಕೆಂಪು ದ್ವಿವರ್ಣದ ಮಡಕೆಗಳು ದೊರಕಿವೆ.

ಬೃಹತ್ ಶಿಲಾಯುಗದ ಗೋರಿಗಳು ಗದಗ ಮತ್ತು ಮುಂಡರಗಿ ತಾಲೂಕುಗಳನ್ನು ಹೊರತುಪಡಿಸಿ ಉಳಿದೆಲ್ಲಾ ತಾಲೂಕುಗಳಲ್ಲಿ ದೊರಕಿವೆ. ರೋಣ ಮತ್ತು ಶಿರಹಟ್ಟಿ ತಾಲೂಕುಗಳಲ್ಲಿ ಅನುಕ್ರಮವಾಗಿ ಈ ಅವಶೇಷಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಗಮನಾರ್ಹ. ಈ ಸಂಸ್ಕೃತಿಗೆ ಸೇರಿದ ಶಿಲಾವೃತ್ತದ ಗೋರಿಗಳು ಉಣಚಗೇರಿ, ಉದಗಟ್ಟಿ ಮತ್ತು ಗೌಡಗೇರಿಗಳಲ್ಲಿ ಕಂಡುಬಂದಿವೆ. ಅಸ್ತಿಪಾತ್ರೆ, ದಫನಗಳು ಮತ್ತು ಇತರೆ ಮಾದರಿಯ ಗೋರಿಗಳು ಗಜೇಂದ್ರಗಡ, ಗೌಡಗೇರಿ, ಗೋಗೇರಿ ಮತ್ತು ರಾಜೂರುಗಳಲ್ಲಿ ದೊರಕಿವೆ. ಗೌಡಗೇರಿಯಲ್ಲಿ ವಾಸ್ತವ್ಯ ನೆಲೆ ಮತ್ತು ಗೋರಿಗಳೆರಡೂ ದೊರಕಿದ್ದು, ಅಧ್ಯಯನದ ದೃಷ್ಟಿಯಿಂದ ಮಹತ್ವವನ್ನು ಪಡೆದಿವೆ. ಈ ಸಂಸ್ಕೃತಿಗೆ ಸೇರಿದ ಗೋರಿಯ ಮಾದರಿಗಳೊಂದಿಗೆ ಅಸ್ತಗಳು, ಕಪ್ಪು-ಕೆಂಪು ಮೃತ್ಪಾತ್ರೆ ಹಾಗೂ ಇತರೆ ಅವಶೇಷಗಳು ಸಹ ದೊರಕಿವೆ. ಶಿಹಟ್ಟಿ ತಾಲೂಕಿನ ಅದರಹಳ್ಳಿ, ಇಟಗಿ, ದೇವಿಹಾಳ, ಬೆಳಗಟ್ಟಿ, ಬೆಳ್ಳಟ್ಟಿ, ಸೋಗಿವಾಳ ಮತ್ತು ಹೊಸೂರುಗಳಲ್ಲಿ ಬೃಹತ್‌ಶಿಲಾಯುಗದ ಕಾಲದ ಗೋರಿ ನೆಲೆಗಳು ಪತ್ತೆಯಾಗಿವೆ. ಅದರಹಳ್ಳಿಯಲ್ಲಿ ಶವಕುಣಿಗಳೊಂದಿಗೆ ಶಿಲಾವೃತ್ತಗಳು ಇರುವ ಗೋರಿಗಳು ದೊರಕಿವೆ. ಇಟಗಿಯಲ್ಲಿ ಕಪ್ಪು-ಕೆಂಪು ಬಣ್ಣದ ಮಡಕೆಗಳು ದೊರೆತ ಬಗೆಗೆ ಮಾಹಿತಿಯಿದೆ. ಬೆಳ್ಳಟ್ಟಿಯಲ್ಲಿ ಕಲ್ಮನೆಗಳೂ ದೊರಕಿವೆ. ಸೋಗಿವಾಳ ಮತ್ತು ಹೊಸೂರುಗಳಲ್ಲಿ ಶಿಲಾವೃತ್ತಗಳು ಇರುವ ಕುರಿತು ವರದಿಗಳಿವೆ. ಇಲ್ಲಿ ವೈಜ್ಞಾನಿಕವಾದ ಉತ್ಖನನಗಳನ್ನು ಕೈಗೊಂಡರೆ, ವಾಸ್ತವ್ಯದ ನೆಲೆ ಹಾಗೂ ಗೋರಿಗಳ ನಡುವಿನ-ಅಂತರ್ ಸಂಬಂಧಗಳ ಬಗೆಗೆ ಬೆಳಕನ್ನು ಚೆಲ್ಲಬಹುದು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಆದಿಇತಿಹಾಸ ಕಾಲಕ್ಕೆ ಸೇರಿದ ನೆಲೆಗಳು ಹಾಗೂ ಅವಶೇಷಗಳು ದೊರಕಿವೆ. ಕೊಲ್ಲೂರು (ಗದಗ ತಾ) ನೆಲೆಯು ಈ ಸಂಸ್ಕೃತಿಗೆ ಸೇರಿದ್ದಾಗಿದೆ. ಇಲ್ಲಿ ಕೆಂಪು ಲೇಪನದಡಿ (Red Slip) ಬಿಳಿ ವರ್ಣದ ಚಿತ್ರಿತ ಮಡಿಕೆಗಳಿರುವುದು ಪತ್ತೆಯಾಗಿದೆ. ಈ ಮೃತ್ಪಾತ್ರೆಗಳನ್ನು ರಸೆಟ್ ಲೇಪಿತ ಮೃತ್ಪಾತ್ರೆ ಎಂದು ಹೆಸರಿಸಲಾಗಿದೆ. ನರಗುಂದ ತಾಲೂಕಿನ ವಾಸನವು ಸಹ ಆದಿಇತಿಹಾಸ ಕಾಲದ ನೆಲೆಯಾಗಿದ್ದು ಇಲ್ಲಿ ಶಾತವಾಹನರ ಕಾಲದ ಪ್ರಾಕೃತ ಶಾಸನವು ದೊರಕಿದೆ. ಇಲ್ಲಿ ದೊರೆತ ಅವಶೇಷಗಳು ಮತ್ತು ಶಾಸನದಿಂದ ಇದು ಶಾತವಾಹನರ ಕಾಲದ ನೆಲೆಯುಂದು ದೃಢವಾಗಿ ಹೇಳಬಹುದು. ಮುಂಡರಗಿ ತಾಲೂಕಿನ ಶೀರನಹಳ್ಳಿಯು ಇತಿಹಾಸ ಆರಂಭಕಾಲದ ನೆಲೆಯಾಗಿದೆ.

ರೋಣ ತಾಲೂಕಿನ ಉದಗಟ್ಟಿ, ಕಾಲಕಲೇಶ್ವರ, ಕುಂಟೋಜಿ, ಬೆಣಚಮಟ್ಟಿ, ಹಿರೇಹಾಳ್ ಮತ್ತು ಹೊಸಹಳ್ಳಿಗಳಲ್ಲಿ ಆದಿಇತಿಹಾಸ ಕಾಲದ ಅವಶೇಷಗಳು ಪತ್ತೆಯಾಗಿವೆ. ಈ ಸಂಸ್ಕೃತಿಗೆ ಸೇರಿದ ನೆಲೆಗಳು ಶಿರಹಟ್ಟಿ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಬಗೆಗೆ ಕುರುಹುಗಳಿವೆ. ಇಲ್ಲಿರುವ ನೆಲೆಗಳಲ್ಲಿ ಆದಿಇತಿಹಾಸ ಕಾಲಕ್ಕೆ ಸಂಬಂಧಿಸಿದ ನೆಲೆಗಳಲ್ಲಿ ಕಪ್ಪು-ಕೆಂಪು ಬಣ್ಣದ ಮೃತ್ಪಾತ್ರೆ, ಕಪ್ಪು ವರ್ಣ ಹಾಗೂ ಕೆಂಪು ಲೇಪನದಡಿಯ ಬಿಳಿ ವರ್ಣ ಚಿತ್ರವುಳ್ಳ ಮಡಿಕೆಯ ಚೂರುಗಳು, ಸುಡಾವೆಮಣ್ಣಿನ ಮಣಿಗಳೂ, ಕಟ್ಟಡದ (ಇಟ್ಟಿಗೆಯ) ಅವಶಷಗಳು ದೊರಕಿವೆ. ಇಟಗಿಯಲ್ಲಿ ಕಟ್ಟಡದ ಕೆಲವು ಅವಶೇಷಗಳು ಪತ್ತೆಯಾಗಿವೆ. ಈ ನೆಲೆಗಳಲ್ಲಿ ಕೆಲವನ್ನು ಉತ್ಖನನಕ್ಕೆ ಒಳಪಡಿಸಿದರೆ, ಉತ್ತಮ ಫಲಿತಾಂಶಗಳೂ ದೊರಕುವ ಸಾಧ್ಯತೆಗಳಿವೆ. ಕೃಷಿ ಚಟುವಟಿಕೆಯ ವಿಸ್ತರಣೆಗಳಿಂದ ಇಂದು ಹಲವಾರು ನೆಲೆಗಳು ನಾಶಗೊಳ್ಳುತ್ತಲಿವೆ.

ಆದಿಇತಿಹಾಸ ಕಾಲಕ್ಕೆ ಸಂಬಂಧಿಸಿದ ನೆಲೆಯಾದ ವಾಸನದಲ್ಲಿ ನರಗುಂದ ಶಾತವಾಹನರ ಕಾಲದ ಅನೇಕ ಕುರುಹುಗಳು ಪತ್ತೆಯಾಗಿವೆ. (ಧಾ.ಜಿ.ಗ್ಯಾ, ಪು. ೫೩ ಮತ್ತು ೧೦೧೨-೧೩) ಶಾತವಾಹನೋತ್ತರ ಅರಸುಮನೆಗಳ ಶಾಸನಗಳು, ವಾಸ್ತು ನಿರ್ಮಿತಿಗಳು, ಶಿಲ್ಪಗಳು ಹಾಗೂ ವೀರಗಲ್ಲುಗಳು ದೊರಕಿವೆ. ಶಾಸನ ಮತ್ತು ಸಾಹಿತ್ಯಿಕ ಆಧಾರಗಳಿಂದ ಜಿಲ್ಲೆಯ ರಾಜಕೀಯ, ಸಮಾಜೋ-ಧಾರ್ಮಿಕ ಆರ್ಥಿಕ, ದೇವಾಲಯ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಇತಿಹಾಸದ ಸಮಗ್ರತೆಯನ್ನು ಪಡೆಯಬಹುದು.

ಇತಿಹಾಸ

ಶಿಷ್ಟ ಆಕರಗಳೊಂದಿಗೆ ಪರಿಶಿಷ್ಟ ಆಕರಗಳು ಸಹ ಇತಿಹಾಸವನ್ನು ರಚಿಸುವಲ್ಲಿ ಹೆಚ್ಚಿನ ಸಹಕಾರಿಯಾಗಿವೆ. ಜನಪದರಲ್ಲಿ ರೂಢಿಗತವಾಗಿ ಬಂದಿರುವ ನಂಬಿಕೆ, ಐತಿಹ್ಯ ಮತ್ತು ಪೌರಾಣಿಕ ಮೂಲಗಳಿಂದಲೂ ಭಿನ್ನಬಗೆಯ ಚರಿತ್ರೆಯ ರಚನೆಯ ಪ್ರಯತ್ನಗಳು ಈ ದಿನಗಳಲ್ಲಿ ಹೆಚ್ಚಾಗಿ ನಡೆದಿವೆ. ಅಂಥ ಪರಿಶಿಷ್ಟ ಆಕರಗಳು ಈ ಜಿಲ್ಲೆಯ ಇತಿಹಾಸ ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ಈ ಪ್ರದೇಶದಲ್ಲಿರುವ ಹಲವಾರು ಊರುಗಳು, ಸ್ಥಳಗಳು ಮತ್ತು ತೀರ್ಥಗಳನ್ನು ಪುರಾಣಗಳ ಘಟನೆಗಳಿಗೆ ಸಂಬಂಧ ಕಲ್ಪಸಿ ಅವುಗಳೆಲ್ಲವುಗಳ ಪ್ರಾಚೀನತೆಯನ್ನು ಗುರುತಿಸುವ ಯತ್ನ ಮಾಡಲಾಗಿದೆ. ಗದಗ ಜಿಲ್ಲೆ ಹಾಗೂ ಇದೇ ತಾಲೂಕಿನಲ್ಲಿರುವ ಲಕ್ಕುಂಡಿಯನ್ನು ರಾಮಾಯಣದ ನಾಯಕ ಶ್ರೀರಾಮನು ನಿರ್ಮಿಸಿದನೆಂದು ಪರಿಗಣಿಸಲಾಗಿದೆ. ಇದಕ್ಕೆ ಪೂರಕವಾಗಿ ಇದು ರಾಮನು ನಿರ್ಮಿಸಿದ ಮಹಾಗ್ರಾಮವೆಂದು ಕ್ರಿ.ಶ. ೧೧-೧೨ನೇ ಶತಮಾನದ ಶಾಸನಗಳು ಉಲ್ಲೇಖಿಸತ್ತವೆ. ರೋಣ ಪಟ್ಟಣವು ಮೊದಲು ದ್ರೋಣಪುರವಾಗಿದ್ದು ಕ್ರಮೇಣ ರೋಣ ಎಂಬ ಹೆಸರು ಬಂದಿರುವ ಐತಿಹ್ಯವನ್ನು ಜನ ಇಂದಿಗೂ ಹೇಳುತ್ತಾರೆ. ರೋಣದ ಬಸವನ ದೇವಾಲಯದಲ್ಲಿರುವ ಶಿಲ್ಪವನ್ನು ಐತಿಹ್ಯದ ಪೂರಕವಾಗಿ ಸ್ಥಳೀಯರು ಬಳಸಿಕೊಳ್ಳುತ್ತಾರೆ. ಕೇಂದ್ರಸ್ಥಾನ ಗದಗನಲ್ಲಿ ಜನಮೇಜಯನು ಯಜ್ಞ ಮಾಡಿ ಒಂದು ಅಗ್ರಹಾರ ಸ್ಥಾಪಿಸಿದನೆಂದು, ಹೇಳುವ ಮೂಲಕ ಪುರಾಣಗಳ ಕಾಲಕ್ಕೆ ಸಂಬಂಧ ಕಲ್ಪಿಸಲಾಗುತ್ತದೆ. ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಉಲ್ಲೇಖಗೊಂಡಿರುವ ಅನೇಕ ಊರುಗಳ ಹೆಸರು, ತೀರ್ಥಗಳು ಮತ್ತು ಸ್ಥಳಗಳನ್ನು ತಮ್ಮ ಪ್ರದೇಶದೊಂದಿಗೆ ಅನ್ವರ್ಥಿಸಿಕೊಳ್ಳುವ ಕ್ರಿಯೆಯು ಸರ್ವೇಸಾಮಾನ್ಯವಾಗಿ ಎಲ್ಲ ಕಡೆಗೂ ಇರುವುದನ್ನು ಗಮನಿಸಬಹುದು. ಈ ಜಿಲ್ಲೆಯು ಸಹ ಹೊರತಾಗಿಲ್ಲ. ಇಲ್ಲಿರುವ ಅನೇಕ ಶಾಸನಗಳಲ್ಲಿ ಐತಿಹ್ಯ ಮತ್ತು ಪುರಾಣಗಳ ಉಲ್ಲೇಖಗಳನ್ನು ಅನ್ವಯಿಸಿಕೊಂಡು ವಿವರಣೆ ನೀಡಿರುವ ಮಾಹಿತಿಗಳಿವೆ.

ಐತಿಹಾಸಿಕ ಕಾಲಘಟ್ಟದಲ್ಲಿ ಆಳ್ವಿಕೆ ಮಾಡಿದ ಮೌರ್ಯರ ಯಾವ ಕುರುಹುಗಳು ಜಿಲ್ಲೆಯಲ್ಲಿ ದೊರಕಿಲ್ಲ. ನಂತರ ಆಳ್ವಿಕೆ ಮಾಡಿದ ಶಾತವಾಹಣರ ಆಡಳಿತಕ್ಕೆ ಈ ಪ್ರದೇಶವು ಸೇರಿತ್ತೆಂಬುದು, ಇಲ್ಲಿ ದೊರಕಿರುವ ಶಾಸನ ಮತ್ತು ಅವಶೇಷಗಳಿಂದ ಸ್ಪಷ್ಟವಾಗುತ್ತದೆ. ಇವರ ಕಾಲದ ಅನೇಕ ನಾಣ್ಯಗಳು ಸಹ ದೊರಕಿವೆ. ನರಗುಂದ ತಾಲೂಕಿನ ವಾಸನ ಗ್ರಾಮದಲ್ಲಿ ವಾಸಿಷ್ಠಪುತ್ರ ಶ್ರೀಪುಳಮಾವಿಯ ಒಂದು ಪ್ರಾಕೃತ ಶಾಸನವು ದೊರಕಿದೆ. ಪ್ರಸ್ತುತ ಶಾಸನವು ಮಹಾದೇವ ಚಂಡಶಿವನ ದೇವಾಯತನ ಹಾಗೂ ಶಿಲ್ಪಿಯನ್ನು ಕುರಿತು ಉಲ್ಲೇಖಿಸುತ್ತದೆ. ಕರ್ನಾಟಕದಲ್ಲಿ ಇದುವರೆಗೂ ತಿಳಿದು ಬಂದಿರುವ ಅತಿ ಪ್ರಾಚೀನ ಶೈವ ದೇವಾಲಯದ ಉಲ್ಲೇಖ ಇದಾಗಿದೆ. ಇಂದು ಆ ದೇವಾಲಯದ ಯಾವ ಕುರುಹುಗಳು ವಾಸನ ಗ್ರಾಮದಲ್ಲಿಲ್ಲ. ಊರಿನಲ್ಲಿರುವ ಕೆಲವು ದೇವಾಲಯಗಳನ್ನು ನವೀಕರಿಸಿ ನಿರ್ಮಿಸಿರುವುದರಿಂದ ಪ್ರಾಚೀನ ಕುರುಹುಗಳು ಇಂದು ಲಭ್ಯವಾಗಿಲ್ಲ. ಶಾಸನೋಕ್ತವಾಗಿರುವ ಈ ದೇವಾಲಯವು ಕರ್ನಾಟಕದ ಅತೀ ಪ್ರಾಚೀನ ಶೈವ ದೇವಾಲಯವೆಂಬುದರಲ್ಲಿ ಸಂದೇಹವಿಲ್ಲ. ಇವರ ಕಾಲಕ್ಕೆ ಸೇರಿದ ಅನೇಕ ನೆಲೆಗಳು ಈ ಜಿಲ್ಲೆಯಲ್ಲೂ ಹಾಗೂ ನೆರೆಯ ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿವೆ. ಶಾತವಾಹನರ ಕಾಲದಲ್ಲಿ ಅನೇಕ ನಗರಗಳು ರೂಪಗೊಂಡು ವ್ಯಾಪಾರ ವಹಿವಾಟುಗಳನ್ನು ನಿರ್ವಹಿಸುತ್ತಿದ್ದುದರ ಬಗ್ಗೆ ಆಧಾರಗಳಿವೆ.

ಬನವಾಸಿ ಕದಂಬರ ಆಳ್ವಿಕೆಗೆ ಈ ಪ್ರದೇಶವು ಒಳಪಟ್ಟಿದ್ದರೂ, ಅವರ ಕಾಲದ ಕುರುಹುಗಳು ಲಭ್ಯವಾಗಿಲ್ಲ. ಕ್ರಿ.ಶ. ಆರನೆಯ ಶತಮಾನದಲ್ಲಿ ಅಂತ್ಯಗೊಂಡ ಇವರ ಆಳ್ವಿಕೆಯ ತರುವಾಯ ಬಾದಾಮಿಯ ಚಾಲುಕ್ಯರು ಈ ಪ್ರದೇಶವನ್ನು ತಮ್ಮ ಹಿಡಿತದಲ್ಲಿರಿಸಿಕೊಂಡರು. ಅವರ ಪ್ರರಂಭಿಕ ಕಾಲದ ಶಾಸನಗಳಲ್ಲಿ ಅವರನ್ನು ಚಳುಕ್ಯರು ಎಂದು ಸಂಭೋದಿಸಲಾಗಿದೆ. ಬಾದಾಮಿ ಚಾಳುಕ್ಯರ ಕಾಲಕ್ಕೆ ಸೇರಿದ ಸುಮಾರು ೧೫೦ಕ್ಕೂ ಹೆಚ್ಚಿನ ಶಾಸನಗಳು ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ದೊರಕಿವೆ. ಗದಗ ಜಿಲ್ಲೆಯಲ್ಲಿಯೂ ಸಹ ಅವರ ಕಾಲದ ಶಾಸನಗು, ಶಿಲ್ಪ ಹಾಗೂ ವಾಸ್ತು ಅವಶೇಷಗಳ ಕಂಡುಬಂದಿವೆ. ಅವೆಲ್ಲವೂ ಆ ಕಾಲದ ಆಡಳಿತ ಹಾಗೂ ಅಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತವೆ. ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದಲ್ಲಿ ಬಾದಾಮಿ ಚಾಲುಕ್ಯರ ಶಾಸನಗಳು ದೊರಕಿವೆ. ಇವುಗಳು ಈ ಊರನ್ನು ಪುಲಿಗೆರೆ ಎಂದು ಉಲ್ಲೇಖಿಸುತ್ತವೆ. ಇದು ಪ್ರಾಚೀನ ಆಡಳಿತ ವಿಭಾಗದ ಮುಖ್ಯ ಕೇಂದ್ರವೂ ಸಹ ಆಗಿತ್ತು. ಶಿಗ್ಗಾವಿಯ ತಾಮ್ರಪಟವು ಲಕ್ಷ್ಮೇಶ್ವರದಲ್ಲಿ ಬಸದಿಗೆ ನೀಡಿದ ದಾನಗಳ ವಿವರಗಳನ್ನು ತಿಳಿಸುವುದರೊಂದಿಗೆ ೧೪ ಜಲಾಶಯಗಳ ಬಗೆಗೆ ಮಾಹಿತಿಯನ್ನು ನೀಡಿರುವುದು ಗಮನಾರ್ಹ. ಇಮ್ಮಡಿ ಪುಲಿಕೇಶಿಯ (ಕ್ರಿ.ಶ. ೬೦೯-೬೪೨) ಕಾಲದಲ್ಲಿ ಸೇಂದ್ರಕ ವಂಶದ ದುರ್ಗಶಕ್ತಿಯ ಇಂದಿನ ಹುಬ್ಬಳ್ಳಿ ಪ್ರಾಂತ್ಯದಲ್ಲಿ ಆಡಳಿತ ನಡೆಸುತ್ತಿದ್ದನು. ಇವನು (ಲಕ್ಷ್ಮೇಶ್ವರ) ಪುಲಿಗೆರೆಯ ಶಂಖ ಬಸದಿಗೆ (ಜಿನಾಲಯಕ್ಕೆ) ೫೦೦ ನಿವರ್ತನ ಭೂಮಿಯನ್ನು ದಾನ ಮಾಡಿದನು. ವಿನಯಾದಿತ್ಯನು (ಕ್ರಿ.ಶ.೬೮೧-೯೮) ಇದೇ ಜಿನಾಲಯಕ್ಕೆ ಹಡತಿಲೆ ಎಂಬ ಗ್ರಾಮವನ್ನು ದಾನ ನೀಡಿದ ವಿಷಯವು ಮತ್ತೊಂದು ಶಾಸನದಲ್ಲಿ ಉಲ್ಲೇಖಗೊಂಡಿದೆ. ಇವನ ಮಗ ಕ್ರಿ.ಶ. ೬೯೬ರಲ್ಲಿ ಪಟ್ಟಕ್ಕೆ ಬಂದನು. ಸಹೋದರಿ ಕುಂಕುಮದೇವಿಯು ಪಿಲಿಗೆರೆಯಲ್ಲಿ ಕಟ್ಟಿಸಿದ ಅನೆಸೆಷ್ಷೆ ಬಸಿದಿಗೆ ಗುಡಗೇರಿ (ಗುಡ್ಡಿಗೆರೆ) ಗ್ರಾಮವನ್ನು ವಿಜಯಾದಿತ್ಯನು ದಾನ ನೀಡಿದನು. ಶಂಖ ಬಸದಿಯ ಪರಿಸರದ ಜಿನಭಟ್ಟಾರಕ ಬಸದಿಗೆ, ಸೆಂಬೊಳಲ್ (ಇಂದಿನ ಶ್ಯಾಬಾಳ) ಗ್ರಾಮವನ್ನು ನೀಡಿದನೆಂದು ಹಾಗೂ ಉದಯದೇವ ಪಂಡಿತನೆಂಬ ಜಯನ ಗುರುವಿಗೆ ಕದ್ದಮ ಎಂಬು ಗ್ರಾಮವನ್ನು ಅರಸನು ನೀಡಿದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಇದೇ ವಂಶದ ವಿಕ್ರಮಾದಿತ್ಯನ ಉತ್ತರಾಧಿಕಾರಿ ಇಮ್ಮಡಿ ಕೀರ್ತಿವರ್ಮನು (ಕ್ರಿ.ಶ. ೭೪೪-೫೧) ಪುಲಿಗೆರೆಯ ಧವಳ ಜಿನಾಲಯಕ್ಕೆ ೫೦ ಮತ್ತರು ಭೂಮಿಯನ್ನು ದಾನ ನೀಡಿದನೆಂದು ಶಾಸನ ತಿಳಿಸುತ್ತದೆ. ಅರಸ ಮತ್ತು ಆಗಿನ ಕುಟುಂಬ ವರ್ಗದವರು ನೇರವಾಗಿ ಈ ಪ್ರದೇಶಗಳಲ್ಲಿ ದೇವಾಲಯ, ಜಿನಾಲಯ ಮತ್ತು ನೀರಾವರಿ ಕಾಮಗಾರಿಗಳನ್ನು ಕೈಗೊಂಡಿದ್ದರೆಂದು ತಿಳಿದುಬರುತ್ತದೆ. ಇವರ ಕಾಲದ ಸಾಮಂತ ಆಧಿಕಾರಿಗಳು ಹಾಗೂ ಸಮಾಜದ ಇತರೆ ವ್ಯಕ್ತಿಗಳು ಕೈಗೊಂಡ ಕಾಮಗಾರಿಗಳ ಬಗೆಗೆ ಸಾಕ್ಷ್ಯಾಧಾರಗಳು ದೊರಕಿವೆ. ಇಂದಿಗೂ ಅವರ ಕಾಲದಲ್ಲಿ ನಿರ್ಮಿಸಿದಂತಹ ಜಿನಾಲಯ ಉಳಿದುಬಂದಿವೆ.

ಬಾದಾಮಿ ಚಾಳುಕ್ಯರ ನಂತರ ರಾಷ್ಟ್ರಕೂಟರು ಈ ಪ್ರದೇಶದಲ್ಲಿ ಆಳ್ವಿಕೆ ಮಾಡಿದರು. ಇವರ ಕಾಲದ ಅನೇಕ ಶಾಸನಗಳು ಜಿಲ್ಲೆಯಲ್ಲಿ ಕಂಡುಬಂದಿವೆ. ಗದಗ ತಾಲೂಕು ನೀಲಗುಂದದ ಶಾಸನದಲ್ಲಿ ನಿರ್ಗುಂದ ಅಗ್ರಹಾರದ ಸುಂಕ ಸಂಗ್ರಹಿಸುವ ಮತ್ತು ವಿನಾಯ್ತಿ ನೀಡುವ ಅಧಿಕಾರವು ಅಲ್ಲಿಯ ಮಹಾಜನರಿಗೆ ಅಮೋಘವರ್ಷನು ಗೋಸಹಸ್ರದಾನ ನೀಡಿರುವ ಬಗೆಗೆ ಶಾಸನ ಉಲ್ಲೇಖಿಸುತ್ತದೆ. ರಾಷ್ಟ್ರಕೂಟ ಅರಸ ಕೃಷ್ಣನ ಶಾಸನಗಳು ಜಿಲ್ಲೆಯಲ್ಲಿ ದೊರಕಿವೆ. ಅವನ ಕಾಲದಲ್ಲಿ ಗದಗ ತಾಲೂಕಿನ ಚಿಂಚಿಲ ಮತ್ತು ಸೊರಟೂರುಗಳು ಮುಖ್ಯ ಅಗ್ರಹಾರಗಳಾಗಿದ್ದವು ಎಂಬ ಮಾಹಿತಿಯನ್ನು ಶಾಸನಗಳು ದಾಖಲಿಸಿವೆ. ಇದೇ ತಾಲೂಕಿನ ಮುಳಗುಂದದಲ್ಲಿ ಚೀಕಾರ್ಯ ಎಂಬುವನು ಬಸದಿಯನ್ನು ನಿರ್ಮಿಸಿದನೆಂದು ತಿಳಿಸುತ್ತದೆ. ಕುಪ್ಪದೇವರಸ ಎಂಬಾತನು ತಾನು ಕಟ್ಟಿಸಿದ ಕುಪ್ಪೇಶ್ವರ ದೇವಾಲಯದ ದೇವರಿಗೆ (ಕುಪ್ಪೇಶ್ವರ) ದಾನವನ್ನು ನೀಡಿದ ವಿಚಾರ ತಿಳಿಸಿದರೆ, ಇನ್ನೊಂದೆಡೆ ಮೇಳವಿಡು (ಮೇವುಂಡಿ, ಮುಂಡರಗಿ ತಾ) ಎಂಬಲ್ಲಿ ಕೊಯಿಗೇಶ್ವರ ದೇವಾಲಯಕ್ಕೆ ದಾನ ದತ್ತಿಗಳನ್ನು ನೀಡಲಾದ ಸಂಗತಿಗಳನ್ನು ಶಾಸನಗಳು ಉಲ್ಲೇಖಿಸುತ್ತವೆ. ಲಕ್ಷ್ಮೇಶ್ವರದ ಒಂದು ಶಾಸನವು (ಕ್ರಿ.ಶ. ೯೧೭) ಪುಲಿಗೆರೆ-೩೦೦ ಎಂಬ ಆಡಳಿತ ವಿಭಾಗ ಹಾಗೂ ನಾಡಗೌಡ ಚಾವುಂಡನಾಯಕನನ್ನು ಕುರಿತು ಉಲ್ಲೇಖಿಸುತ್ತದೆ. ನರಗುಂದ ತಾಲೂಕಿನ ದಂಡಾಪುರದ ಶಾಸನವು ಧೋರ ಎಂಬ ಅಧಿಕಾರಿಯು ಅಲ್ಲಿಯ ಹಿರಿಯ ಕೆರೆಯನ್ನು (ಪೆರ್ಗ್ಗೆರೆ) ದುರಸ್ತಿ ಮಾಡಿಸಿದನೆಂದು ದಾಖಲಿಸಿದೆ.

ರಾಷ್ಟ್ರಕೂಟ ಅರಸರು ವಿದ್ಯಾಕೇಂದ್ರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಇವರ ಕಾಲದಲ್ಲಿ ಅಸ್ಥಿತ್ವದಲ್ಲಿದ್ದ ವಿದ್ಯಾಕೇಂದ್ರಗಳು ಇಂಗಿನ ಗದಗ ಜಿಲ್ಲೆಯಲ್ಲಿರುವುದು ಗಮನಾರ್ಹ. ಗದಗ ತಾಲೂಕಿನ ಸೊರಟೂರಿನಲ್ಲಿರುವ ದೇವಾಲಯಕ್ಕೆ ಸಂಬಂಧಿಸಿದ ಮಠದಲ್ಲಿ ವಿದ್ಯಾರ್ಥಿಗಳ ಪೋಷಣೆಗಾಗಿ ಪೆರ್ಗಡೆ ಆಚಪ್ಪಯ್ಯ ಮತ್ತು ಗೌಡ ಸಣ್ಣ ಕಟ್ಟೆಯಮ್ಮ ದಾನ ನೀಡಿದರೆಂದು ಶಾಸನ ಉಲ್ಲೇಖಿಸದೆ. ಇದೇ ತಾಲೂಕಿನ ನಾಗಾವಿಯ ರಾಮೇಶ್ವರ ದೇವಾಲಯಕ್ಕೆ ವಿದ್ಯಾದಾನ ಮತ್ತು ಸತ್ರಕ್ಕೆ ಕ್ರಿ.ಶ. ೯೬೯ರಲ್ಲಿ ಖೊಟ್ಟಿಗನು ದಾನ ನೀಡಿದ ವಿಷಯ ಶಾಸನದಲ್ಲಿದೆ. ಸೊರಟೂರು ಮತ್ತು ನಾಗಾವಿ ಊರುಗಳ ನಡುವಿನ ಅಂತರ ೧೦ ಕಿಮೀಗಳು. ರೋಣ ತಾಲೂಕಿನ ಸವಡಿಯಲ್ಲಿ ಗಂಗರ ವತ್ಸಯ್ಯನು ಶಿವ ದೇವಾಲಯ ಕಟ್ಟಸಿದನೆಂದು ತಿಳಿದುಬರತ್ತದೆ. ಗುತ್ತಿಯ ಗಂಗನು ಪುಲಿಗೆರೆ-೩೦೦ನ್ನು ಆಳುತ್ತಿದ್ದ ವಿಷಯವನ್ನು ಖೊಟ್ಟಿಗನ ಕ್ರಿ.ಶ. ೯೭೦ರ ಶಾಸನ ದಾಖಲಿಸಿದೆ. ರಾಷ್ಟ್ರಕೂಟರ ಕಾಲದಲ್ಲಿ ಗದಗಿನ ತ್ರಿಕೂಟ ದೇವಾಲಯ ನಿರ್ಮಿಸಿರಬೇಕೆಂದು ಡಾ. ಅ. ಸುಂದರ ಅವರು ಅಭಿಪ್ರಾಯಪಡುತ್ತಾರೆ. ಜಿಲ್ಲೆಯ ಅಸುಂಡಿ, ಕೊಣ್ಣೂರು, ಮುಳಗುಂದ, ಸವಡಿ ಮುಂತಾದ ಊರುಗಳಲ್ಲಿ ಇವರ ಕಾಲಕ್ಕೆ ಸಂಬಂಧಿಸಿದ ದೇವಾಲಯಗಳಿದ್ದು ಹಾಗೂ ಇವುಗಳೆಲ್ಲ ಕರ್ನಾಟಕದಲ್ಲಿರುವ ದೇವಾಲಯಗಳಲ್ಲಿಯೇ ವಿಶೇಷ ಸ್ಥಾನ ಪಡೆದವುಗಳು.

ರಾಷ್ಟ್ರಕೂಟ ಅರಸ ಖೊಟ್ಟಗನನ್ನು ಕಲ್ಯಾಣದ ಚಾಳುಕ್ಯರ ಅರಸ ಎರಡನೆಯ ತೈಲನು ಸದೆ ಬಡಿದು ಮಾಮ್ಯಖೇಟವನ್ನು (ಮಳಖೇಡ) ವಶಪಡಿಸಿಕೊಂಡ. ಕಲ್ಯಾಣ ಚಾಳುಕ್ಯರ ಆಳ್ವಿಕೆಯು ಪ್ರಾರಂಭಗೊಂಡ ತರುವಾಯ ಉತ್ತರ ಕರ್ನಾಟಕದ ಬಹುತೇಕ ಭಾಗಗಳು ಅವರ ನೇರ ಸಂಪರ್ಕಕ್ಕೆ ಒಳಗಾಗುತ್ತವೆ. ಇವರ ಕಾಲದ ಶಾಸನ, ಶಿಲ್ಪ ಮತ್ತು ದೇವಾಲಯಗಳು ಇಂದಿನ ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬಳ್ಳಾರಿ, ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹೇರಳವಾಗಿ ದೊರಕುತ್ತವೆ. ಶಾಸನಗಳು ಅಂದಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ವಿಷಯಗಳನ್ನು ದಾಖಲಿಸಿದರೆ, ಅವರ ಕಾಲದ ದೇವಾಲಯಗಳು ವಾಸ್ತುಶಿಲ್ಪದ ಪ್ರಯೋಗ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ನಮ್ಮ ಮುಂದಿಡುತ್ತವೆ. ಜಿಲ್ಲೆಯ ಪುಲಿಗೆರೆ-೩೦೦ರಲ್ಲಿ ಅರಸರ (ತೈಲನ) ಪ್ರಾಂತ್ಯಾಧಿಕಾರಿಯಾಗಿ ಶೋಭನರಸನು ಕ್ರಿ.ಶ. ೧೦೮೦ರಲ್ಲಿ ಆಳುತ್ತಿದ್ದನು. ಇವನು ಬೆಳ್ವಲ-೩೦೦ಕ್ಕೆ ಸಹ ಅಧಿಕಾರಿಯಾಗಿದ್ದನೆಂದು ಶಾಸನಗಳಿಂದ ತಿಳಿಯಬಹುದು. ಪುಲಿಗೆರೆ-೩೦೦ ಬಾದಾಮಿ ಚಾಳುಕ್ಯರ ಕಾಲದಿಂದಲೂ ಮುಖ್ಯ ಸ್ಥಾನ ಪಡೆದುಕೊಂಡಿತ್ತು. ಅರಸ ಸತ್ಯಾಶ್ರಯನ (ಕ್ರಿ.ಶ. ೯೯೭-೧೦೦೬) ಸಹೋದರ ದಸವರ್ಮನ (ಯಶೋವರ್ಮ) ಮಗನೇ ಐದನೇ ವಿಕ್ರಮಾದಿತ್ಯ (ಕ್ರಿ.ಶ. ೧೦೦೮-೧೦೧೫). ಇವನ ಕಾಲದಲ್ಲಿ ಜೀವಿಸಿದ್ದ ದಾನಚಿಂತಾಮಣಿ ಅತ್ತಿಮಬ್ಬೆಯು ಓರ್ವ ಚಾಳುಕ್ಯ ಸೇನಾನಿಯ ವಿಧವೆಯಾಗಿದ್ದಳು. ಇವಳು ಕ್ರಿ.ಶ. ೧೦೦೯ರಲ್ಲಿ ಲಕ್ಕುಂಡಿಯಲ್ಲಿ ಬ್ರಹ್ಮಜಿನಾಲಯವನ್ನು ನಿರ್ಮಿಸಿದಳು. ವಿಕ್ರಮಾದಿತ್ಯನ ಸಹೋದರಿ ಅಕ್ಕಾದೇವಿ ಕಿಸುನಾಡು-೭೦ನ್ನು ಆಳುತ್ತಿದ್ದು, ಇಂದಿನ ರೋಣ ತಾಲೂಕಿನ ಸೂಡಿಯಲ್ಲಿ ಅಗ್ರಹಾರ (ಕ್ರಿ.ಶ. ೧೦೧೦ರಲ್ಲಿ) ಸ್ಥಾಪಿಸಿದಳೆಂದು ತಿಳಿದುಬರುತ್ತದೆ. ಇದೇ ವಂಶದ ಅರಸ ಜಯಸಿಂಹನ ಕಾಲದಲ್ಲಿ ಶೌಚನಾಯಕನೆಂಬ ಅಧಿಕಾರಿಯು ಅಸುಂಡಿಯ ಸೋಮೇಶ್ವರ ದೇವಾಲಯಕ್ಕೆ ದಾನ ನೀಡಿದನು. ಕುಂಟೋಜಿಯಲ್ಲಿನ ನಕರೇಶ್ವರ ದೇವರಿಗೆ ಊರಿನ ನಕರರು ದಾನ ನೀಡಿದರೆಂಬ ಉಲ್ಲೇಖವಿದೆ. ಇವನ ನಂತರ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯನು (ಕ್ರಿ.ಶ. ೧೦೭೬-೧೧೨೭) ಪಟ್ಟಕ್ಕೆ ಬಂದನು. ಇವನ ಕಾಲದಲ್ಲಿ ಅನೇಕ ಪ್ರಜಾಹಿತಾತ್ಮಕ ಕೆಲಸಗಳು ಸಾಗಿದವು. ಇವನು ಪದೇ ಪದೇ ತೊಂದರೆ ನೀಡುತ್ತಿದ್ದ ಪರಮಾರರ ರಾಜ್ಯದ ಮೇಲೆ ಮೂರು ಬಾರಿ ದಾಳಿ ಮಾಡಿ ಅವರ ರಾಜಧಾನಿ ಪಟ್ಟಣ ಧಾರದ ಮೇಲೆ ದಾಳಿ ಮಾಡಿ ಅಲ್ಲಿ ವಿಜಯಸ್ತಂಭವನ್ನು ಸ್ಥಾಪಿಸಿದನು. ಇವನ ಸಹೋದರ ಜಯಸಿಂಹನು ಪುಲಿಗೆರೆ ಮತ್ತು ಬೆಳ್ವೊಲ ಪ್ರದೇಶಗಳ ಆಡಳಿತಾಧಿಕಾರಿಯಾಗಿದ್ದನು. ಹಲವಾರು ದೇವಾಲಯಗಳ ನಿರ್ಮಾಣ, ದೇವಾಲಯಗಳಿಗೆ ದಾನ ದತ್ತಿಗಳ ಪುನರ್‌ನವೀಕರಣ, ಹೊಸ ದಾನಗಳ ನೀಡುವಿಕೆ, ಮುಂತಾದ ಕೆಲಸಗಳು ವಿಕ್ರಮಾದಿತ್ಯನ ಕಾಲದಲ್ಲಿ ನಡೆದವು. ಅನೇಕ ಹೊಸ ದೇವಾಲಯಗಳು ಈತನ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡವು. ಸೋಮೇಶ್ವರ ಭಟ್ಟೋಪಾಧ್ಯಾಯ ಪ್ರಭಾಕರ ವ್ಯಾಖ್ಯಾನ ಶಾಲೆಯನ್ನು ಲಕ್ಕುಂಡಿಯಲ್ಲಿ ನಿರ್ಮಿಸಿದನು. ಮುದ್ದಿಮಯ್ಯನಾಯಕನು ಗದಿನಲ್ಲಿ ಶಂಕರನಾರಾಯಣ ದೇವಾಲಯ, ಕೆರೆ ಮತ್ತು ಛತ್ರ (ಸತ್ರ)ವನ್ನು ನಿರ್ಮಿಸಿದನೆಂದು ಗದಗಿನ ಶಾಸನ ದಾಖಲಿಸಿದೆ. ಲಕ್ಷ್ಮೇಶ್ವರದಲ್ಲಿ ದಂಡನಾಯಕ ಅನಂತಮಯ್ಯನು ಸೂಳಿಗೆರೆಯನ್ನು ಜಿರ್ಣೋದ್ಧಾರ ಮಾಡಿ ಅದರ ಪೋಷಣೆಗೆ ದಾನ ನೀಡಿದನು. ಲಕ್ಷ್ಮೇಶ್ವರದಲ್ಲಿ ರಾಮೇಶ್ವರ ದೇವಾಲಯದ ಮಠದಲ್ಲಿ ಕೌಮರ ವ್ಯಾಕರಣ ಭೋದಿಸುವ ಉಪಾಧ್ಯಾಯರಿಗೆ ಕ್ರಿ.ಶ. ೧೧೨೩ರಲ್ಲಿ ದಾನ ನೀಡಿದನೆಂದು ಶಾಸನವು ತಿಳಿಸುತ್ತದೆ. ಇವನ ನಂತರದ ಅರಸರುಗಳಾದ ಮೂರನೇ ಸೋಮೇಶ್ವರ (ಕ್ರಿ.ಶ. ೧೧೨೭-೧೧೩೯), ಇಮ್ಮಡಿ ಜಗದೇಮಲ್ಲ, ಮುಮ್ಮಡಿ ತೈಲನ (೧೧೪೯-೧೧೬೨) ಕಾಲದವರೆವಿಗೂ ದೇವಾಲಯಗಳ ನಿರ್ಮಾಣ ಹಾಗೂ ಅವುಗಳಿಗೆ ದಾನ ನೀಡಿ ಪೋಷಿಸುವ ಮಹತ್ವದ ಕೆಲಸಗಳು ಜರುಗಿದವು.

ಈ ವಂಶಕ್ಕೆ ಸೇರಿದವನಾದ, ತರಿಕಾಡು ನಾಡುಗಳ ಮಾಂಡಳಿಕ, ಹಾಗೂ ಆರನೇ ವಿಕ್ರಮಾದಿತ್ಯನ ಮಗಳ (ಸಾವಳದೇವಿ) ಮಗ ಕಳಚೂರಿ ಇಮ್ಮಡಿ ಬಿಜ್ಜಳನು ಕಲ್ಯಾಣವನ್ನು ಗೆದ್ದನು. ಕ್ರಿ.ಶ. ೧೧೬೨ರಿಂದ ೧೧೮೪ರವರೆಗೆ ಕಲಚೂರಿಗಳು ಕಲ್ಯಾಣದಿಂದ ಆಳಿದರು. ಈ ಬಿಜ್ಜಳನ ಸಹೋದರ ಮೈಲುಗಿಯು ಬೆಳ್ವೊಲ-೩೦೦ನ್ನು ಮುಳಗುಂದದಿಂದ ಆಳುತ್ತಿದ್ದನು ಎಂದು ಬೆಟಗೇರಿ ಶಾಸನ ತಿಳಿಸುತ್ತದೆ. ಕಲಚುರಿ ಅರಸರು ಈ ಪ್ರದೇಶವನ್ನು (ಗದಗ ಜಿಲ್ಲೆ) ತಮ್ಮ ಹಿಡಿತದಲ್ಲಿರಿಸಿಕೊಂಡು ಆಳ್ವಿಕೆಯನ್ನು ನಡೆಸುತ್ತಿದ್ದರು. ಇವರ ಕಾಲದ ಶಾಸನಗಳು ಅನೇಕ ಮಾಹಿತಿಗಳನ್ನು ನೀಡುತ್ತವೆ. ಇವರ ವಾಸ್ತು ನಿರ್ಮಾಣಗಳು ಕಲ್ಯಾಣದ ಚಾಳುಕ್ಯರ ಶೈಲಿಯನ್ನು ಯಥಾವತ್ತಾಗಿ ಅನುಕರಿಸಿರುವುದು ಗಮನಾರ್ಹ. ಇವರ ಕಾಲದಲ್ಲಿ ಬಿಜ್ಜಳನ ಭಂಡಾರಿ ಬಸವಣ್ಣನವರು ವೀರಶೈವ ಜಾಗೃತಿಗೆ ಕಾರಣೀಭೂತರಾದರು. ಅರಸ ಸಂಕಮನ ಕಾಲದಲ್ಲಿ ರೋಣದ ಎರಡು ದೇವಾಲಯಗಳಿಗೆ ದಾನ ನೀಡಿದ ವಿಷಯ ಶಾಸನದಲ್ಲಿ ದಾಖಲಾಗಿದೆ. ಇವರ ಆಳ್ವಿಕೆಯ ಅಂತಿಮ ಅವಧಿಯಲ್ಲಿ ಇವರ ಮಾಂಡಳಿಕರಾಗಿದ್ದ ಸೇವುಣ, ಯಾದವ, ಕಾಕತೀಯ ಮತ್ತು ಹೊಯ್ಸಳರು ಸ್ವತಂತ್ರವಾಗಿ ಅಳತೊಡಗಿದರು.

ಚಾಳುಕ್ಯರ ಆಳ್ವಕೆಯ ಅವಧಿಯಲ್ಲಿ ಮಾಂಡಳಿಕರಾಗಿ ಕಾರ್ಯನಿರ್ವಹಿಸುತ್ತದ್ದ ಹಾನಗಲ್ಲು ಕದಂಬರು, ಗುತ್ತಲದ ಗುತ್ತರು, ಗೋವೆಯ ಕದಂಬರು, ಸಿಂದರು ಮತ್ತು ನೂರಂಬಾಡದ ಕದಂಭರು ಗದಗ ಜಿಲ್ಲೆಯ ಕೆಲವು ಪ್ರದೇಶಗಳ ಮೇಲೆ ಪ್ರಾಸಂಗಿಕವಾಗಿ ತಮ್ಮ ಹಿಡಿತವನ್ನು ಕೆ ಕಾಲದವರೆಗೆ ಸ್ಥಾಪಿಸಿರುವ ಸಂಗತಿಗಳನ್ನು ತಿಳಿಯಬಹುದು. ಇವರ ಕಾಲದ ಶಾಸನ ಮತ್ತು ಇತರೆ ಆಧಾರಗಳು ಅತ್ಯಲ್ಪ ಪ್ರಮಾಣದಲ್ಲಿ ಇಲ್ಲಿ ದೊರಕುತ್ತವೆ. ಗೋವೆಯ ಕದಂಬರ ಅರಸ ಎರಡನೆಯ ಜಯಕೇಶಿಯು ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯಕ್ಕೆ ಕ್ರಿ.ಶ. ೧೧೨೮ರಲ್ಲಿ ದಾನ ನೀಡಿ, ಅಲ್ಲಿ ‘ಗಳಿಗೆ’ ಸ್ಥಾಪಿಸಿದನೆಂದು ಶಾಸನ ಉಲ್ಲೇಖಿಸಿದೆ. ನಂತರ ಇದು ಘಟಿಕಾಸ್ಥಾನವಾಗಿ ಪರಿವರ್ತನೆಗೊಂಡಿರಬೇಕು. ಕ್ರಿ.ಶ. ೧೧೩೮ರಲ್ಲಿ ಇದೆ ದೇವಾಲಯಕ್ಕೆ ನಿಟ್ಟೂರು ಗ್ರಾಮವನ್ನು ದಾನ ನೀಡುತ್ತಾನೆ. ದೇವಗಿರಿಯ ಸೇವುಣರ ಅರಸ ಭಿಲ್ಲಮನು ಕ್ರಿ.ಶ. ೧೧೯೦ರಲ್ಲಿ ಹೇರೂರಿನಲ್ಲಿ ಬೀಡುಬಿಟ್ಟಾಗ ಗದುಗಿನ ತ್ರಿಕೂಟೇಶ್ವರ ದೇವಾಲಯಕ್ಕೆ ಹಿರೇಹಂದಿಗೋಲ ಗ್ರಾಮವನ್ನು ದಾನ ಮಾಡಿದನೆಂದು ಗದುಗಿನ ಶಾಸನ ಉಲ್ಲೇಖಿಸುತ್ತದೆ. ಸೇವುಣರ ಅಧಿಕಾರಿಗಳು ಬಳ್ವೊಲ-೩೦೦ ಮತ್ತು ಪುಲಿಗೆರೆ-೩೦೦ ಪ್ರದೇಶಗಳ ಮಾಡಲಿಕರಾಗಿದ್ದರು ಹಾಗೂ ಅವರ ಅಧಿಕಾರಿಗಳು ಇಲ್ಲಿನ ದೇವಾಲಯಗಳಿಗೆ ದಾನ ದತ್ತಿಗಳನ್ನು ನೀಡಿದ್ದಾರೆಂದು ಶಾಸನಗಳು ಉಲ್ಲೇಖಿಸುತ್ತವೆ. ಅರಸ ಸಿಂಘಣನು ಗದಗಿನ ತ್ರಿಕೂಟೇಶ್ವರ ದೇವಾಲಯಕ್ಕೆ ಊರ ಎಪ್ಪತ್ತರೆಡು ಮಹಾಜನಗಳು ನೀಡಿದ ಭೂದಾನಕ್ಕೆ ಅನುಮತಿಯನ್ನು ನೀಡಿದನೆಂದು ಕ್ರಿ.ಶ. ೧೨೧೩ರ ಶಾಸನವು ತಿಳಿಸುತ್ತದೆ. ಇದೇ ಅರಸನು ಕ್ರಿ.ಶ. ೧೨೧೫ರಲ್ಲಿ ನಾಗವಿಯ (ಗದಗ ತಾ) ಮಹಾಬಲೇಶ್ವರ ದೇವಾಲಯಕ್ಕೆ ದಾನ ಮಾಡಿದನೆಂದು ಇನ್ನೊಂದು ಶಾಸನ ಉಲ್ಲೇಖಿಸಿದೆ. ಕ್ರಿ.ಶ. ೧೨೨೭ರಲ್ಲಿ ಸಂಗಯ್ಯನು ಲಕ್ಷ್ಮೇಶ್ವರದ ಸೋಮನಾಥ ದೇವಾಲಯದ ಆವರಣದಲ್ಲಿ ರಮ್ಮೇಶ್ವರ ಗುಡಿಯನ್ನು ಕಟ್ಟಿಸಿದನೆಂದು ಮತ್ತು ಬೀಚಿಸೆಟ್ಟಿಯೆಂಬ ದಂಡನಾಯಕನ ಮಗಳು ರಾಜಲದೇವಿ ಕ್ರಿ.ಶ. ೧೨೪೭ರಲ್ಲಿ ಶ್ರೀ ವಿಜಯಬಸದಿಯನ್ನು ಜೀರ್ಣೋದ್ಧಾರ ಮಾಡಿ ದಾನ ನೀಡಿದಳೆಂದು ಲಕ್ಷ್ಮೇಶ್ವರದ ಶಾಸನಗಳು ದಾಖಲಿಸಿವೆ. ಇದೇ ವಂಶದ ದೊರೆ ರಾಮಚಂದ್ರನು (ಕ್ರಿ.ಶ. ೧೨೭೧-೧೩೧೨) ಕಾಲದಲ್ಲಿ ಡಂಬಳದ ಭೋಗ ದೇವಾಲಯಕ್ಕೆ ಕ್ರಿ.ಶ. ೧೨೮೩ರಲ್ಲಿ ಭೂದಾನ ಮಾಡಿದ ವಿಷಯವು ಶಾಸನದಿಂದ ತಿಳಿದುಬರುತ್ತದೆ. ಅಲ್ಲಿಯ ನಗರ ಜಿನಾಲಯಕ್ಕೆ ಕ್ರಿ.ಶ. ೧೨೮೯ರಲ್ಲಿ ಸೇನಾನಿ ಸಾಳುವ ಚಾವುಂಡನು ಸುಂಕವನ್ನು ದಾನ ನೀಡಿದನೆಂದು ಶಾಸನ ತಿಳಿಸುತ್ತದೆ. ಸರ್ವಾಧಿಕಾರಿ ಕನ್ನರದೇವನು ಹುಲಿಗೆರೆ (ಪುಲಿಗೆರೆ > ಲಕ್ಷ್ಮೇಶ್ವರ) ಮತ್ತು ಪಾಡ್ಯನಾಡುಗಳ ಅಧಿಕಾರಿಯಾಗಿದ್ದನು ಎಂದು ಶಾಸನಗಳಿಂದ ತಿಳಿಯಬರುತ್ತದೆ.

ಕಲ್ಯಾಣ ಚಾಳುಕ್ಯಯ ಮಂಡಳಿಕರಾಗಿದ್ದ ಹೊಯ್ಸಳರು, ಸ್ವಾತಂತ್ರ್ಯ ಘೋಷಿಸಿ, ಆಳ್ವಿಕೆಯನ್ನು ನಡೆಸಿದರು. ಇವರ ವಂಶದ ಅರಸರು ಗದಗ ಜಿಲ್ಲೆಯ ಕೆಲವು ಭಾಗಗಳ ಮೇಲೆ ಚಿಕ್ಕ ಪುಟ್ಟ, ದಂಡಯಾತ್ರೆಗಳನ್ನು ಮಾಡಿದ್ದಾರೆ. ವಿಷ್ಣುವರ್ಧನನು, ಚಾಳುಕ್ಯ ಆರನೆಯ ವಿಕ್ರಮಾದಿತ್ಯನ ಮರಣದ ನಂತರ ತುಂಗಭದ್ರಾ ನದಿ ದಾಟಿ ಲಕ್ಕುಂಡಿಯವರೆಗೆ ಬಂದನು. ಎರಡನೆಯ ಬಲ್ಲಾಳನು (ಕ್ರಿ.ಶ. ೧೧೭೩-೧೨೨೦) ಲಕಚುರಿಗಳನ್ನು ಸೋಲಿಸಿ, ಬೋಳ್ವಲವನ್ನು ವಶಪಡಿಸಿಕೊಂಡನು. ಕ್ರಿ.ಶ. ೧೧೮೭ರಲ್ಲಿ ಚಾಲುಕ್ಯ ಅರಸ ನಾಲ್ಕನೆಯ ಸೋಮೇಶ್ವರನನ್ನು ಗೆದ್ದನು. ಗದಗ ತಾಲೂಕು ಸೊರಟೂರಲ್ಲಿ ಕಾಳಗ ನಡೆಸಿ, ಸೇವುಣ ಭಿಲ್ಲಮನನ್ನು ಭಾರಿ ಕಾಳಗದಲ್ಲಿ ಸೋಲಿಸಿದನು. ಅವನು ಲಕ್ಕುಂಡಿಯಲ್ಲಿ ನೆಲಸಿದನೆಂದು ಅವನ ಕಾಲದ ಶಾಸನಗಳಿಂದ ತಿಳಿದು ಬರುತ್ತದೆ. ಕ್ರಿ.ಶ. ೧೧೯೨ರಲ್ಲಿ ಅವನು ಗದುಗಿನ ತ್ರಿಕೂಟೇಶ್ವರ ದೇವಾಲಯಕ್ಕೆ ಹೊಂಬಳಲು (ಹೊಂಬಳ) ಗ್ರಾಮವನ್ನು ದಾನ ನೀಡಿದನು. ಮುಂಡರಗಿ ತಾಲೂಕಿನ ಮೇವುಂಡಿಯ ವ್ಯಾಪಾರಿಗಳು ಭಿಲ್ಲೇಶ್ವರ ದೇವರಿಗೆ ದಾನ ನೀಡಿದರೆಂದು ಅವನ ಕಾಲದ ಶಾಸನವು ತಿಳಿಸುತ್ತದೆ. ಲಕ್ಕುಂಡಿಯ ನಾಗನ ಬಾವಿಗೆ ಇಬ್ಬರು ಸುವರ್ಣ ದಾನ ಮಾಡಿದ ವಿಚಾರ ಶಾಸನದಲ್ಲಿದ್ದು, ವೇದಿಕೆಯ ರಾಜನನ್ನು ಚಕ್ರವರ್ತಿಯೆಂದು ಶಾಸನ ಬಣ್ಣಿಸಿದೆ. ಇಲ್ಲಿಯ ಕಾಶಿವಿಶ್ವೇಶ್ವರ ದೇವಾಲಯದ ಶಾಸನ ಊರಲ್ಲಿರುವ ಮಧುಸೂಧನ ದೇವಾಲಯಕ್ಕೆ ಅಗ್ರಹಾರದ ಮಹಾಜನರು ಕ್ರಿ.ಶ. ೧೨೦೨ರಲ್ಲಿ ದಾನ ನೀಡಿದರೆಂದು ಉಲ್ಲೇಖಿಸಿದೆ. ಈ ದೇವಾಲಯವನ್ನು ಚೋಳರು ನಾಶಮಾಡಿದರೆಂದು ನಂತರ ಅದನ್ನು ಬಲ್ಲಾಳನು ಜಿರ್ಣೋದ್ಧಾರ ಮಾಡಿದನೆಂದು ಅಭಿಪ್ರಾಯಪಡಲಾಗಿದೆ. ಗದಗ ತಾಲೂಕಿನ ನಾಗಾವಿಯಲ್ಲಿ ಮಹಾಬಲೇಶ್ವರ ದೇವಾಲಯಕ್ಕೆ ದಾನ ನೀಡಿದ ವಿಷಯ ತಿಳಿಸುವ ಶಾಸನದಲ್ಲಿ ಈ ಅರಸನ ಉಲ್ಲೇಖವಿದೆ. ಈತನ ದಂಡು ಲಕ್ಕುಂಡಿಯಲ್ಲಿದ್ದ ಸೇವುಣರ ಕೋಟೆಯನ್ನು ನಾಶಪಡಿಸಿತು. ದೆಹಲಿ ಸುಲ್ತಾನರ ಆಕ್ರಮಣ ಮತ್ತು ಕುಮ್ಮಟದ ಕಂಪಿಲರಾಯನೊಂದಿಗೆ ಹೋರಾಟ ಮುಂತಾದವುಗಳಿಂದ ಅವನು ದುರ್ಬಲನಾದನು. ಅವನು ಕ್ರಿ.ಶ. ೧೩೪೩ರಲ್ಲಿ ತೀರಿಕೊಂಡನು. ಅವನ ಮಗ ವಿರೂಪಾಕ್ಷ ಬಲ್ಲಾಳನು ಕ್ರಿ.ಶ. ೧೩೪೬ರಲ್ಲಿ ತೀರಿಕೊಂಡನು. ಅವನ ಮಗ ವಿರೂಪಾಕ್ಷ ಬಲ್ಲಾಳನು ಕ್ರಿ.ಶ. ೧೩೪೬ರಲ್ಲಿ ಅಸುನೀಗಿದನು. ಕ್ರಿ.ಶ. ೧೩೩೬ರಲ್ಲಿನ ವಿಜಯನಗರ ಸಾಮ್ರಾಜ್ಯವು ಪ್ರಾರಂಭಗೊಂಡಿತು.

ವಿಜಯನಗರದ ಪ್ರಾರಂಭಿಕ ಮನೆತನವಾದ ಸಂಗಮರ ಕಾಲದ ಕುರುಹುಗಳು ಗದಗ ಜಿಲ್ಲೆಯಲ್ಲಿ ಲಭ್ಯವಿದೆ. ಕುಮಾರರಾಮನ (ಕಂಪಿಲನ ಮಗ) ದೇವಾಲಯ, ಶಿಲ್ಪ ಮುಂತಾದವುಗಳು ಇಲ್ಲಿ ಹಾಗೂ ನೆರೆಯ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೊರಕುತ್ತವೆ. ಲಕ್ಷ್ಮೇಶ್ವರದಲ್ಲಿ ಕಂಪಿಲರಾಯನು ಮಡಿದಾಗ ಸಾರ್ವತ್ರಿಕವಾಗಿ ದುಃಖವನ್ನು ಸೂಚಿಸುವ ಶಾಸನವಿದೆ. (SII. XX, No.294) ಕಂಪಿಲನ ಕೆಲಸವನ್ನು ಸಂಗಮ ಸಹೋದರರು ಮುಂದುವರೆಸುವರೆಂಬ ನಂಬಿಕೆಯನ್ನು ಇಲ್ಲಿಯ ಸ್ಥಳಿಯರು ಹೊಂದಿದ್ದರು ಎನ್ನುವ ಭಾವನೆಗಳಿವೆ. ಈ ನಿಟ್ಟಿನಲ್ಲಿ ಸಂಗಮರ ಕಾಲದಲ್ಲಿ ಜಿಲ್ಲೆಯಲ್ಲಿನ ಅನೇಕ ಪ್ರಾಚೀನ ದೇವಾಲಯಗಳ ಜೀಣೋದ್ಧಾರ ಮಾಡಲಾಗಿದೆ. ಇದು ವಿಜಯನಗರ ಶೈಲಿಯಲ್ಲಿದ್ದು, ಕೆಲವು ವ್ಯಕ್ತಿಗಳ ಶಿಲ್ಪ ಮತ್ತು ಅವರ ಹೆಸರಿರುವ ಶಾಸನಗಳಿವೆ. ಇದೇ ಗುಡಿಯನ್ನು ಕ್ರಿ.ಶ. ೧೩೫೩ರಲ್ಲಿ ಚಿಕ್ಕಕೆರೆಯ ನಾಯಕನು, ಸಾವಣ್ಯ ಒಡೆಯನ ಕಾಲದಲ್ಲಿ ಜೀರ್ಣೋದ್ಧಾರ ಮಾಡಿರುವ ಬಗೆಗೆ ಶಾಸನವೂ ಉಲ್ಲೇಖಿಸಿದೆ. ಸಾವಣ್ಯನು ಕಂಪಣನ ಮಗ ಸಾಯಣನಿರಬಹುದು. ಕ್ರಿ.ಶ. ೧೪೧೨ರಲ್ಲಿ (ಹರಿಹರನ ಕಾಲ) ಲಕ್ಷ್ಮೇಶ್ವರವು ವಿಜಯನಗರದ ಭಾಗವಾಗಿತ್ತೆಂದು ಒಂದು ಶಾಸನ ತಿಳಿಸುತ್ತದೆ. ಹರಿಹರನ ತ್ರುಟಿತ ಶಾಸನವು ರೋಣ ತಾಲೂಕಿನ ಕಳಕಪ್ಪನ (ಕಾಲಕಾಲೇಶ್ವರ) ಗುಡ್ಡದಲ್ಲಿದೆ.

ಸಾಳುವ ಮತ್ತು ತುಳುವ ವಂಶದ ಹೊರೆಗಳ ಕಾಲದ ಶಾಸನಗಳು, ಜಿಲ್ಲೆಯಲ್ಲಿ ದೊರಕುತ್ತವೆ. ಕೃಷ್ಣದೇವರಾಯನ ಕಾಲದಲ್ಲಿ ಕ್ರಿ.ಶ. ೧೫೨೦ರಲ್ಲಿ ಗದಗಿನಲ್ಲಿ ತಿಮ್ಮಪ್ಪನಾಯಕ ಅಯ್ಯ ಎಂಬುವನು ಅರವಟ್ಟಿಗೆಗೆ ದಾನ ನೀಡಿದನೆಂದು ಶಾಸನ ದಾಖಲಿಸಿದೆ. ರೋಣ ತಾಲೂಕು ಡಾಡಗೋಳಿಯಲ್ಲಿ ಹನುಮಂತ ದೇವರ ಪೂಜೆಗೆ ದಾನ ನೀಡಿದ ವಿವರಗಳಿವೆ. ಅಚ್ಯುತರಾಯನ ಒಂದು ಶಾಸನವು ಗದಗಿನಲ್ಲಿ ಬ್ರಾಹ್ಮಣರಿಗೆ ‘ಅನಂದನಿಧಿ’ ದಾನವನ್ನು ಕ್ರಿ.ಶ. ೧೫೩೯ರಲ್ಲಿ ನೀಡಿದನೆಂದು ತಿಳಿಸುತ್ತದೆ. ಗದಗಿನ ವೀರನಾರಾಯಣ ದೇವಾಲಯದಲ್ಲಿದ್ದ ಕುಮಾರವ್ಯಾಸನಿಗೆ ವೀರನಾರಾಯಣ ದೇವರು ಪ್ರಸನ್ನನಾದನೆಂದು, ಶಾಸನದಲ್ಲಿ ಕವಿಯ ಹೆಸರನ್ನು ಉಲ್ಲೇಖಿಸಲಾಗಿದೆ. ವೀರನಾರಾಯಣ ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ ಜೀರ್ಣೋದ್ಧಾರ ಮಾಡಿರುವುದು ಕಂಡುಬರುತ್ತದೆ. ಮೂಲ ಮೂರ್ತಿಯನ್ನು ಸಹ ಇವರ ಕಾಲದಲ್ಲಿ ಜೀರ್ಣೋದ್ಧಾರ ಮಾಡಿರುವುದು ಕಂಡುಬರುತ್ತದೆ. ಮೂಲ ಮೂರ್ತಿಯನ್ನು ಸಹ ಇವರ ಕಾಲದಲ್ಲಿ ಹೊಸದಾಗಿ ರಚಿಸಿ, ಪ್ರತಿಷ್ಠಾಪಿಸಿರಬಹುದೆಂದು ಡಾ. ಅ. ಸುಂದರ ಅವರು ಅಭಿಪ್ರಾಯಪಡುತ್ತಾರೆ. ಕಲ್ಯಾಣ ಚಾಳುಕ್ಯರ ಶೈಲಿಯನ್ನು ಇಲ್ಲಿ ಕಾಣಬಹುದು. ಸದಾಶಿವರಾಯನ ಕಾಲದ ಶಾಸನಗಳು ಜಿಲ್ಲೆಯಲ್ಲಿವೆ. ಲಕ್ಷ್ಮೇಶ್ವರದ ಶಾಲನದಲ್ಲಿ ‘ಲಕ್ಷ್ಮುಮಣೇಶ್ವರ ನಾಡನೂರ ಇಪ್ಪತ್ತು ಗ್ರಾಮ ಅಗ್ರಹಾರ ದೇವಸ್ಥಾನ ಪುರದೊಳಗೆ ನಾವಿದರಿಗೆ ಮದುವೆ’ ಮತ್ತು ಇತರೆ ಸುಂಕಗಳನ್ನು ವಿನಾಯಿತಿ ನೀಡಿದ ವಿಷಯವಿದೆ. ಗದಗ ತಾಲೂಕಿನ ಕೋಡಮಚುಗಿ ಗ್ರಾಮಕ್ಕೆ ‘ಸದಾಶಿವಸಮುದ್ರ’ ಎಂದು ಹೆಸರಿಸಿರುವುದು ಶಾಸನಾಧಾರದಿಂದ ತಿಳಿದು ಬರುತ್ತದೆ. ಲಕ್ಷ್ಮೇಶ್ವರದ ಇನ್ನೊಂದು ಶಾಸನವು (ಕ್ರಿ.ಶ. ೧೫೪೭), ಹುಲಿಗೆರೆಯ ನಾಡ ಎಲ್ಲ ಜನರ ಮದುವೆ ಸುಂಕವನ್ನು ಸಂಪೂರ್ಣವಾಗಿ ವಿನಾಯಿತಿ ನೀಡಿದ ಉಲ್ಲೇಖವನ್ನು ಹೊಂದಿದೆ. ಈ ವಿನಾಯಿತಿಯನ್ನು ಸುಡಗಾಡ ಲಿಂಗಸೆಟ್ಟಿಯೆಂಬುವನು ಜನರ ಪರವಾಗಿ ರಾಜಧಾನಿಗೆ ತೆರಳಿ ಬಿನ್ನಹ ಮಾಡಿ ಪಡೆದನೆಂದು ಶಾಸನದಲ್ಲಿ ವಿವರಿಸಲಾಗಿದೆ. ವಿಜಯನಗರದ ಅರಸು ದೇವಾಲಯಗಳನ್ನು ಜೀರ್ಣೋದ್ಧಾರ ಮತ್ತು ಅವುಗಳಿಗೆ ದಾನಗಳನ್ನು ನೀಡುವ ಕೆಲಸವನ್ನು ಜಿಲ್ಲೆಯಲ್ಲಿನ ಹಲವಾರು ಊರುಗಳಲ್ಲಿ ಮಾಡಿದ್ದಾರೆಂಬುದು ಅವರ ಕಾಲದ ಶಾಸನಗಳಿಂದ ತಿಳಿಯಬಹುದು. ವಿಜಯನಗರ ಅರಸರ ಮಾಂಡಳಿಕರು ಲಕ್ಷ್ಮೇಶ್ವರ, ಡಂಬಳ ಮುಂತಾದ ಊರುಗಳಲ್ಲಿ ಇದ್ದು ಆತಳಿತವನ್ನು ನಿರ್ವಹಿಸುತ್ತಿದ್ದರು ಎಂದು ಸಾಹಿತ್ಯದ ಕೃತಿಯಾದ ‘ವಿರೂಪಾಕ್ಷ ವಸಂತೋತ್ಸವದ ಚಂಪೂ’ವಿನಲ್ಲಿ ಉಲ್ಲೇಖಿತಗೊಂಡಿದೆ. ಹಂಪೆಯ ವಿರೂಪಾಕ್ಷ ದೇವಾಲಯದ ಮುಖ್ಯ ಗೋಪುರವನ್ನು ಬಿಷ್ಟಪ್ಪಯ್ಯನ ಗೋಪುರ ಎಂದು ಕರೆಯಲಾಗುತ್ತದೆ. ಇವನು ವಿಜಯನಗರ ಅರಸರ ಕಾಲದಲ್ಲಿ ಅಧಿಕಾರಿಯಾಗಿದ್ದ. ಇವನು ಮೂಲತಃ ಮುಂಡರಗಿ ತಾಲೂಕಿನ ವಿಠಲಾಪುರದವನೆಂಬ ಪ್ರತೀತಿ ಇದೆ.

ವಿಜಯನಗರ ಅರಸರ ಸಮಕಾಲೀನರಾದ ಬಹಮನಿ ಅರಸರ ಪ್ರಭಾವವು ಗದಗ ಜಿಲ್ಲೆಯಲ್ಲಿ ಕೆಲಕಾಲದವರೆಗೆ ಇದ್ದರೂ ಪೂರ್ಣಪ್ರಮಾಣದ ಹತೋಟಿಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಬಿಜಾಪುರದ ಆದಿಲ್‌ಷಾಹಿಗಳು ಬಹುಮನಿ ಅರಸರ ನಂಗರ ಗದಗಜಿಲ್ಲೆಯ ಪ್ರದೇಶವನ್ನು ವಿಜನಗರ ಅರಸರಿಂದ ಪಡೆದುಕೊಂಡರು. ಕ್ರಿ.ಶ. ೧೫೭೩ರಲ್ಲಿ ವಿಜಾಪುರದ ಅಲಿ ಆದಿಲ್‌ಷಾಹಿಗಳ ಅಧೀನದಲ್ಲಿ ಹಲವಾರು ಕಿರು ಮನೆಗನಗಳು ಹಾಗೂ ನಾಡಗೌಡಗಳು (ಉದಾ. ದೇಸಾಯಿಗಳು) ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದರು. ಕ್ರಿ.ಶ. ೧೫೭೬ರ ಲಕ್ಷ್ಮೇಶ್ವರದ ಶಾಸನವು ಮಲ್ಲಿಕಾರ್ಜುನ ದೇವಾಲಯಕ್ಕೆ ಗೌಡಗೆರೆ ಗ್ರಾಮ ದಾನ ನೀಡಿದ ವಿಷಯ ದಾಖಲಿಸಿದೆ. ಬರಿಗಿದೇವನಾಯಕನು ಏದ್ಲಿಖಾನನ ಪರವಾಗಿ ತನ್ನ ಅಮರ ಮೊಖಾಶಿ ನಾಯಕ ತನಕ್ಕೆ ನೀಡಿದ ‘ಹುಲಿಗೆರೆ ನಾಡ ಲಕ್ಷ್ಮಣೇಶ್ವರ ಸೀಮೆಯ ಒಳಗಣ ಗೌಡಗೆರೆ ಗ್ರಾಮ’ ನೀಡಲಾಗಿತ್ತೆಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ದಾನಿಯು ತನ್ನನ್ನು ಶ್ರೀಮನ್ಮಹಾರಾಜ ಎಂದು ಕರೆದುಕೊಂಡಿದ್ದಾನೆ. ಆದಿಲ್‌ಷಾಹಿಗಳು ಈ ಪ್ರದೇಶದ ಮೇಲೆ ಹಿಡಿತ ಸಾಧಿಸಿದ ನಂತರ ಅವರ ಮಾಂಡಳಿಕರಾಗಿ ಜೈನ ಮತ್ತು ಲಿಂಗಾಯತ ದೇಸಾಯಿಗಳು ಜಿಲ್ಲೆಯ ಲಕ್ಷ್ಮೇಶ್ವರ, ಡಂಬಳ, ಗೋವನಕೊಪ್ಪ, ಸೊರಟೂರು, ಶಿರಹಟ್ಟಿ ಮತ್ತು ನೆರೆಯ ಹಾವೇರಿ ಜಿಲ್ಲೆಯ ಸವಣೂರು, ಗುತ್ತಲ ಮುಂತಾದ ಊರುಗಳಲ್ಲಿ ದೇಸಾಯಿಗಳಾಗಿ ಆಡಳಿತ ನಿರ್ವಹಿಸಿದರು. ಆದಿಲ್‌ಷಾಹಿ ಕಾಲದ ಶಾಸನಗಳು ಲಕ್ಷ್ಮೇಶ್ವರ ಮತ್ತು ಶಿರಹಟ್ಟಿಗಳಲ್ಲಿ ದೊರಕಿವೆ. ಇವರ ಕಾಲದ ಮಸೀದಿಗಳು (ಈಗ ನವೀಕರಿಸಲಾಗಿದೆ) ಗದಗ, ಲಕ್ಷ್ಮೇಶ್ವರ, ಮತ್ತು ಶಿರಹಟ್ಟಿಗಳಲ್ಲಿ ಇವೆ. ಲಕ್ಷ್ಮೇಶ್ವರದ ಕ್ರಿ.ಶ. ೧೬೧೨ರ ಶಾಸನವು ಅಂಕುಶ್‌ಖಾನ್ ಎಂಬ ಅಧಿಕಾರಿ ಊರಿನಲ್ಲಿ ಧರ್ಮಶಾಲೆ ಮತ್ತು ಬಾವಿಗಳನ್ನು ಕಟ್ಟಿಸಿದನೆಂದು ತಿಳಿಸುತ್ತದೆ. ಇವರ ಆಡಳಿತಾವಧಿಯ ಕೊನೆಯಲ್ಲಿ ಅಂದರೆ ಕ್ರಿ.ಶ. ೧೬೭೬ರಲ್ಲಿ ಆಸುಪಾಸಿನಲ್ಲೂ ಜಿಲ್ಲೆಯ ರೋಣ ತಾಲೂಕಿನ ಪ್ರದೇಶವು ಶಿವಾಜಿಯ ವಶದಲ್ಲಿತ್ತು. ಜಿಲ್ಲೆಯ ನರಗುಂದ ತಾಲೂಕಿನ ಪ್ರದೇಶವು ಮರಾಠರ ಅಧೀನದಲ್ಲಿತ್ತೆಂದು ದಾಖಲೆಗಳು ತಿಳಿಸುತ್ತವೆ.

ಆದಿಲ್‌ಷಾಹಿಗಳ ಅಂತ್ಯದ ಬಳಿಕ ಈ ಪ್ರದೇಶಗಳು ದೆಹಲಿಯ ಮುಘಲರ ವಶಕ್ಕೆ ಈ ಪ್ರಾಂತ್ಯವು ಸೇರಿತು. ಅವುಗಳಲ್ಲಿ ಲಕ್ಷ್ಮೇಶ್ವರ, ಗದಗ ಮತ್ತು ಬೆಟಗೇರಿ ಪ್ರಾಂತ್ಯಗಳು ಒಳಗೊಂಡಿದ್ದು ಇವುಗಳು ಮುಘಲರ ಅಧೀನರಾದ ಸವಣೂರು ನವಾಬರ ವಶದಲ್ಲಿದ್ದವು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ೧೯೪೮ರಲ್ಲಿ ಸವಣೂರು ಸಂಸ್ಥಾನವು ಭಾರತದ ಒಕ್ಕೂಟಕ್ಕೆ ಸೇರುವವರೆಗೆ ಸವನೂರು ನವಾಬರ ಆಡಳಿತದಲ್ಲಿ ಈ ಪ್ರದೇಶದ ಬಹುಭಾಗಗಳು ಇದ್ದವು.

ರಾಜಕೀಯ ಬೆಳವಣಿಗೆಗಳು ಸಮಾಜದ ಎಲ್ಲಾ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿ ಪರಿಣಾಮ ಉಂಟುಮಾಡಿವೆ. ಅದಕ್ಕೆ ಗದಗ ಜಿಲ್ಲೆಯೂ ಹೊರತಾಗಿಲ್ಲ. ಈ ಎಲ್ಲಾ ಏರಿಳಿತಗಳ ಮಧ್ಯೆ ಅನೇಕ ಮಹತ್ವದ ದೇವಾಲಯಗಳು ನಿರ್ಮಾಣವಾಗಿವೆ. ಅವುಗಳು ಸಮಾಜೋ-ಧಾರ್ಮಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಗಾಢವಾದ ಪ್ರಭಾವ ಬೀರಿವೆ. ಡಂಬಳ, ಗದಗ, ರೋಣ, ಲಕ್ಕುಂಡಿ, ಲಕ್ಷ್ಮೇಶ್ವರ ಹಾಗೂ ಕೊಣ್ಣೂರು ಮುಂತಾದ ಸ್ಥಳಗಳಲ್ಲಿ ಐತಿಹಾಸಿಕವಾಗಿ ಮರೆಯಲಾರದ ವಾಸ್ತು ನಿರ್ಮಿತಿಗಳಿವೆ. ಇವುಗಳ ಸಾಂಸ್ಕೃತಿಕ ಜಾಲವನ್ನು ವಿಸ್ತರಿಸಿ ಅವುಗಳ ಮಹತ್ವವನ್ನು ಅಧ್ಯಯನಗಳ ಮೂಲಕ ಹೆಚ್ಚಿಸುವ ಜರೂರಿದೆ.