ಗದಗ ತಾಲ್ಲೂಕು

ಗದಗ ತಾಲ್ಲೂಕು

 

ಊರು ಅಸುಂಡಿ
ಸ್ಮಾರಕ ಈಶ್ವರ
ಸ್ಥಳ ಊರಿನ ಮಧ್ಯದಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ ರಾ.ಪು.ಇ.

ಈ ದೇವಾಲಯ ಗರ್ಭಗೃಹ ಮತ್ತು ಅಂತರಾಳಗಳನ್ನು ಒಳಗೊಂಡಿದೆ. ಗರ್ಭಗೃಹವು ಚೌಕಾಕಾರವಾಗಿದ್ದು, ಅದರಲ್ಲಿ ಲಿಂಗವಿದೆ. ಇದರ ಮುಚ್ಚಿಗೆಯಲ್ಲಿ ವೃತ್ತಾಕಾರದ ಭಾಗದ ಮಧ್ಯದಿಂದ ಕಮಲದ ಮೊಗ್ಗು ಇಳಿಬಿದ್ದ ರೀತಿಯ ಅಲಂಕರಣವಿದೆ. ಗರ್ಭಗೃಹದ ದ್ವಾರವು ನಾಲ್ಕು ಶಾಖೆಗಳನ್ನೊಳಗೊಂಡಿದ್ದು, ಅದರಲ್ಲಿ ಸ್ತಂಭ ಶಾಖೆಗಳು ಇವೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ಇದರ ಎರಡೂ ಬದಿಗಳಲ್ಲಿ ಹೂಮೊಗ್ಗಿನ ಅಲಂಕರಣೆಯಿದೆ. ಅಂತರಾಳದಲ್ಲಿ ನಂದಿಯ ವಿಗ್ರಹವಿದೆ. ಇದರ ಮುಚ್ಚಿಗೆಯಲ್ಲಿ ಕಮಲದ ಮೊಗ್ಗು ಇಳಿಬಿದ್ದ ರೀತಿಯ ಅಲಂಕಾರವಿದೆ. ಆದರೆ ಎರಡೂ ಬದಿಯ ಭಿತ್ತಿಗಳಲ್ಲಿ ಜಾಲಾಂಧ್ರಗಳಿವೆ. ಇದರ ಲಲಾಟದಲ್ಲಿ ತ್ರಿಮೂರ್ತಿಗಳಿದ್ದು, ಅವರ ಬಳಿ ಚಾಮರಧಾರಿಣಿಯರಿದ್ದಾರೆ.

ದೇವಾಲಯದ ಅಧಿಷ್ಠಾನವು ಸರಳ ಭಾಗಗಳಿಂದ ಕೂಡಿದೆ. ಭಿತ್ತಿಯ ಹೊರಭಾಗವನ್ನು ಸಣ್ಣ ಕಲ್ಲುಗಳನ್ನು ಉಪಯೋಗಿಸಿ ಕಟ್ಟಲಾಗಿದೆ. ಭಿತ್ತಿಯ ಭಾಗವು ಅಲ್ಲಲ್ಲಿ ಭಾಗಶಃ ಹಾಳಾಗಿದೆ. ಗರ್ಭಗೃಹದ ಉತ್ತರ ಮತ್ತು ಪಶ್ಚಿಮದ ಭಿತ್ತಿಗಳಲ್ಲಿ ಪ್ರನಾಳಗಳಿವೆ. ದೇವಾಲಯದ ಮೇಲಿನ ಶಿಖರ ಭಾಗವು ಈಗ ಉಳಿದಿಲ್ಲ.

ಇದೇ ಗ್ರಾಮದಲ್ಲಿ ಆಧುನಿಕ ಶೈಲಿಯ ಮಲಿಯಮ್ಮ ದೇವಾಲಯವಿದೆ. ಇದು ಪೂರ್ವಾಭಿಮುಖವಾಗಿದ್ದು, ಗರ್ಭಗೃಹದಲ್ಲಿ ಲಿಂಗ, ವಿಶಿಷ್ಠ ರೀತಿಯ ಕಿರೀಟ ಹೊಂದಿರುವ ಸ್ತ್ರೀಮೂರ್ತಿ ಶಿಲ್ಪಗಳು ಮತ್ತು ಗಣೇಶ ಹಾಗೂ ಹಸು ಮತ್ತು ಕರುವಿನ ಶಿಲ್ಪಗಳಿವೆ. ದೇವಾಲಯದ ಸಮೀಪವಿರುವ ಬೇವಿನ ಮರದಡಿಯಲ್ಲಿ ಮೂರು ಆಕರ್ಷಕ ಸ್ತ್ರೀಮೂರ್ತಿಗಳಿವೆ. ಅವು ೧. ಬಲತೊಡೆಯ ಮೇಲೆ ಶಿಶುವನ್ನೆತ್ತಿಕೊಂಡಿರುವ ಸ್ತ್ರೀಮೂರ್ತಿ ೨. ಬಲಗೈಯಲ್ಲಿ ಖಡ್ಗ, ಎಡಗೈಯಲ್ಲಿ ಕಪಾಲ ಹಿಡಿದು ಕುಳಿತ ಸ್ತ್ರೀಮೂರ್ತಿ ಮತ್ತು ೩. ಅಸ್ಪಷ್ಟ ಆಯುಧಗಳನ್ನು ಹಿಡಿದು ಕುಳಿತ ಸ್ತ್ರೀಶಿಲ್ಪ ಈ ಮೂರು ಆಸೀನ ಶಿಲ್ಪಗಳು ಕ್ರಿ.ಶ. ಸುಮಾರು ೧೦-೧೧ನೇ ಶತಮಾನದ ನಿರ್ಮಿತಿಗಳಾಗಿವೆ. ಅವುಗಳು, ಕ್ರಮವಾಗಿ ಬನದವ್ವ, ಉಡಚವ್ವ ಮತ್ತು ಮಾಚಕವ್ವೆಯೆಂದು ಗುರುತಿಸಲಾಗಿದೆ. ಈ ದೇವಿಯರ ಶಿಲ್ಪಗಳಲ್ಲಿ ಮುಖಭಾಗವನ್ನು ಉಗ್ರರೂಪವಾಗಿಯೂ ಮತ್ತು ದೊಡ್ಡ ಶ್ಥನಗಳನ್ನು ತೋರಿರುವುದು ವಿಶೇಷವಾಗಿದೆ. (ಧಾ.ಜಿ.ಗ್ಯಾ, ಪು. ೮೮೯-೮೯೦.) ಈ ಗುಡಿಯ ಎದುರು ಇರುವ ಕಲ್ಯಾಣ ಚಾಲುಕ್ಯ ಅರಸ ಎರಡನೆಯ ಜಯಸಿಂಹನ ಕ್ರಿ.ಶ. ೧೦೨೬ರ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೨; ಪುಟ, ೮, SII, XI, Pt. 1, No. 63) ಬಾಚಯ್ಯನಾಯಕನಿಂದ ಭೋಗೇಶ್ವರ ದೇವರಿಗೆ ಭೂದಾನ ಮಾಡಿದುದನ್ನು ಉಲ್ಲೇಖಿಸಿದೆ. ಇದೇ ಗುಡಿಯ ಗೋಡೆಯಲ್ಲಿನ ಯಾದವ ಅರಸ ರಾಮಚಂದ್ರನ ಕ್ರಿ.ಶ. ೧೨೮೯ರ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೫; ಪುಟ. ೮, SII, XV, Pt. 1, No. 201)ಲ ಊರ ದೇವತೆಗೆ ಭೂದಾನ ನೀಡಿದ ವಿಷಯವನ್ನು ದಾಖಲಿಸಿದೆ. ಊರಿನ ಉಡಚವ್ವನಗುಡಿ ಹಿಂದೆ ದೊರೆತ ರಾಷ್ಟ್ರಕೂಟ ಅರಸನ ಕ್ರಿ.ಶ. ೯೨೫ರ ಶಾಸನವು ಗ್ರಾಮದಲ್ಲಿ ದೊರೆತ ಅತ್ಯಂತ ಪ್ರಾಚೀನ ಶಾಸನವಾಗಿದೆ. (ಧಾ.ಜಿ.ಶಾ.ಸೂ, ಸಂ.ಗ. ೧, ಪುಟ. ೮, SII, XI, Pt. No. 34) ಇದು ಧೋರ ಜಿನಾಲಯದ ಚಂದ್ರಪ್ರಭಭಟ್ಟನು ಪಸಲುಂಡಿಯನ್ನು ಆಳುವಾಗ ನಾಗಯ್ಯನು ಮಾಡಿದ ಭೂದಾನವನ್ನು ಕುರಿತು ಪ್ರಸ್ತಾಪಿಸಿದೆ. ಈ ಶಾಸನದಿಂದ ಆಸುಂಡಿ ಗ್ರಾಮದ ಪ್ರಾಚೀನ ಹೆಸರು ಪಸಲುಂಡಿ ಎಂದು ತಿಳಿಯಬರುತ್ತದೆ. ಗ್ರಾಮದ ಮಲ್ಲಿದೇವಿಕಟ್ಟೆ. ಬಳಿಯಿರುವ ಕಲ್ಯಾಣ ಚಾಲುಕ್ಯ ಅರಸ ಒಂದನೇ ಸೊಮೇಶ್ವರನ ಕ್ರಿ.ಶ. ೧೦೬೪ರ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೪; ಪುಟ. ೮, SII, XI, Pt. 1, No. 100) ತ್ರುಟಿತವಾಗಿದ್ದು, ಶಾಂತರಾಶಿಪಂಡಿತರ ಕಾಲು ತೊಳೆದು ಭೂದಾನ ಮಾಡಿದ ವಿಷಯನ್ನು ತಿಳಿಸುತ್ತದೆ.

೨.

ಊರು ಅಸುಂಡಿ
ಸ್ಮಾರಕ ಹನುಮಂತ
ಸ್ಥಳ ಊರಿನ ಪಶ್ಚಿಮಕ್ಕೆ
ಕಾಲ ಆಧುನಿಕ
ಶೈಲಿ ಸ್ಥಳೀಯ
ಅಭಿಮುಖ ದಕ್ಷಿಣ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಎರಡು ಹಂತದ ಮುಖಮಂಟಪವನ್ನು ಹೊಂದಿದೆ. ಗರ್ಭಗೃಹವು ಚೌಕಾಕಾರವಾಗಿದ್ದು ಅದರಲ್ಲಿ ಹನುಮಂತನ ಪ್ರತಿಮೆ ಇದೆ. ಇದರ ದ್ವಾರ ಮತ್ತು ಲಲಾಟಗಳು ಸರಳವಾಗಿವೆ. ಗರ್ಭಗೃಹದ ಮುಂಭಾಗದ ಮಂಟಪದಲ್ಲಿ ಮರದ ಕಂಬಗಳಿವೆ. ದೇವಾಲಯವನ್ನು ಪ್ರವೇಶಿಸಲು ಮರದ ಮೆಟ್ಟಿಲುಗಳಿವೆ. ದೇವಾಲಯದ ಮೇಲ್ಛಾವಣಿಯನ್ನು ಹಲಗೆ ಮತ್ತು ಕಡಪಕಲ್ಲುಗಳನ್ನು ಬಳಿಸಿ ಕಟ್ಟಲಾಗಿದೆ. ದೇವಾಲಯದ ಅಧಿಷ್ಠಾನ ಮತ್ತು ಹೊರಭಾಗದ ಭಿತ್ತಿಗಳು ಸರಳವಾಗಿವೆ. ಅಲ್ಲದೆ ದೇವಾಲಯದ ಸುತ್ತಲೂ ಇತ್ತೀಚಿಗೆ ನಿರ್ಮಿಸಿದ ಪ್ರಕಾರ ಗೋಡೆಯಿದೆ.

ಗುಡಿಯ ಸಮೀಪ ರಾಷ್ಟ್ರಕೂಟರ ಕಾಲದ ಭಗ್ನ ಸಪ್ತಮಾತೃಕೆಯರ ಶಿಲ್ಪ ಹಾಗೂ ಸೂರ್ಯನ ಮೂರ್ತಿಶಿಲ್ಪಗಳು ಇಲ್ಲಿ ಇದ್ದವೆಂದು ತಿಳಿದುಬರುತ್ತದೆ. (ಧಾಜಿಗ್ಯಾ ಪು. ೮೯೦) ಗುಡಿಯ ಎದರು ಇರುವ ಕಲ್ಯಾಣ ಚಾಲುಕ್ಯ ಅರಸ ಒಂದನೆ ಸೋಮೇಶ್ವರನ ಕ್ರಿ.ಶ. ೧೦೫೩ರ ಶಾಸನದಲ್ಲಿ (ಧಾ.ಜಿ.ಶಾ.ಸೂ, ಸಂ.ಗ. ೩; ಪುಟ ೮, SII, XI, Pt. 1, No. 89) ಶೌಚಾಯ ನಾಯಕನಿಂದ ಸೋಮೇಶ್ವರ ದೇವರಿಗೆ ಭೂದಾನ ಮಾಡಿದ ವಿಷಯವಿದೆ.

ಊರು ಕಣಗಿನಹಾಳ
ಸ್ಮಾರಕ ಕಲ್ಮೇಶ್ವರ
ಸ್ಥಳ ಊರಿನ ಪೂರ್ವ
ಕಾಲ ಕ್ರಿ.ಶ. ೧೦-೧೧ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖಮಂಟಪಗಳನ್ನೊಳಗೊಂಡಿದೆ. ಗರ್ಭಗುಡಿಯು ಚೌಕಕಾರವಾಗಿದ್ದು, ಅದರಲ್ಲಿರುವ ಶಿವಲಿಂಗವನ್ನು ಸ್ಥಳೀಯರು ಕಲ್ಮೇಶ್ವರನೆಂದು ಕರೆಯುತ್ತಾರೆ. ಇದು ಕಲ್ಯಾಣ ಚಾಲುಕ್ಯ ಶೈಲಿಯಲ್ಲಿದೆ. ಗರ್ಭಗೃಹದ ದ್ವಾರ ಮತ್ತು ಲಲಾಟಗಳು ಸರಳವಾಗಿವೆ. (ಧಾ.ಜಿ.ಗ್ಯಾ, ಪು. ೧೨೯) ಅದರ ಮುಂದಿನ ಅಂತರಾಳದ ದ್ವಾರ ಮತ್ತು ಲಲಾಟಗಳು ಸಹ ಸರಳವಾಗಿದೆ. ಅದರ ಮುಂದಿರುವ ನವರಂಗದಲ್ಲಿ ಉಮಾಮಹೇಶ್ವರ, ನಾಗರಕಲ್ಲು, ಮಾಧವನ ಮೂರ್ತಿ ಶಿಲ್ಪಗಳಿವೆ. ಸ್ಥಾನಿಕನಾಗಿರುವ ಮಾಧವನು ಚತುರ್ಭುಜಧಾರಿಯಾಗಿದ್ದು ಮೇಲಿನ ಕೈಗಳಲ್ಲಿ ಪದ್ಮಗಳಿವೆ. ಕೆಳಗಿನ ಕೈಗಳ ಮುಂಭಾಗ ಭಗ್ನವಾಗಿರುವುದರಿಂದ ಆ ಕೈಗಳಲ್ಲಿ ಹಿಡಿದ ಆಯೂಧಗಳು ಯಾವುದೆಂದು ತಿಳಿದುಬರುತ್ತಿಲ್ಲ. ಕಿರೀಟಧಾರಿಯಾಗಿರುವ ಈ ಮೂರ್ತಿಯ ದೇಹದ ಮೇಲೆ ವಿವಿಧ ಬಗೆಯ ಆಭರಣಗಳ ಕೆತ್ತನೆಯು ಆಕರ್ಷಕವಾಗಿದೆ. ನವರಂಗದ ದ್ವಾರ ಮತ್ತು ಲಲಾಟ ಭಾಗಗಳು ಸರಳವಾಗಿವೆ. ನವರಂಗ ಮತ್ತು ಮುಖಮಂಟಪಗಳಲ್ಲಿ ಚೌಕಾಕೃತಿ, ಘಂಟೆಗಳಾಕೃತಿ ಮತ್ತು ವೃತ್ತಾಕಾರದ ಕಂಬಗಳಿದ್ದು ಅವುಗಳ ಮೇಲೆ ಮಾಲಾ ಮತ್ತು ಬಳೆಗಳ ಅಲಂಕಾರಗಳಿವೆ. ಮುಖಮಂಟಪವನ್ನು ಪ್ರವೇಶಿಸಲು ಮೆಟ್ಟಲುಗಳಿವೆ.

ದೇವಾಲಯದ ಮೇಲ್ಛಾವಣಿಯನ್ನು ಹಲಗೆ ಮತ್ತು ಬಂಡೆಗಳನ್ನು ಉಪಯೋಗಿಸಿ ಕಟ್ಟಲಾಗಿದೆ. ದೇವಾಲಯದ ಅಧಿಷ್ಠಾನ ಮತ್ತು ಭಿತ್ತಿ ಸರಳವಾಗಿದೆ. ಗುಡಿಗೆ ಶಿಖರವಿಲ್ಲ.

೪.

ಊರು ಕಣಗಿನಹಾಳ
ಸ್ಮಾರಕ ನಾರಾಯಣ
ಸ್ಥಳ ಊರಲ್ಲಿ
ಕಾಲ ಕ್ರಿ.೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯ ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಹೊಂದಿದೆ. ಗರ್ಭಗೃಹವು ಚೌಕಾಕಾರವಾಗಿದ್ದು ಅದರಲ್ಲಿನ ಪೀಠದ ಮೇಲೆ ನಾರಾಯಣ ಪ್ರತಿಮೆಯಿದೆ. ಗರ್ಭಗೃಹದ ದ್ವಾರವು ನಾಲ್ಕು ಸರಳ ಶಾಖೆಗಳಿಂದ ಕೂಡಿದ್ದು ಅದರ ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ಇದರ ಮುಂದಿರುವ ಅಂತರಾಳವು ಸರಳವಾಗಿದೆ. ಅದರ ದ್ವಾರ ಮತ್ತು ಲಲಾಟವು ಸಹ ಸರಳವಾಗಿದೆ. ಅಂತರಾಳದ ಮುಂಭಾಗದಲ್ಲಿ ನಾಲ್ಕು ಕಂಬಗಳಿರುವ ನವರಂಗವಿದೆ. ಈ ಕಂಬಗಳು ಚೌಕ, ವೃತ್ತ ಮತ್ತು ಘಂಟೆಯಾಕಾರದಲ್ಲಿದ್ದು, ಬಳೆ ಮತ್ತು ಮಾಲೆಗಳ ಅಲಂಕಾರವನ್ನು ಹೊಂದಿದೆ.

ದೇವಾಲಯಕ್ಕೆ ಸರಳ ಅಧೀಷ್ಠಾನವಿದೆ. ಗರ್ಭಗೃಹದ ಉತ್ತರ ಭಾಗಕ್ಕೆ ಯಾಳಿಮುಖದ ಪ್ರನಾಳವಿದೆ. ದೇವಾಲಯದ ಹೊರಭಿತ್ತಿಯು ಸರಳವಾಗಿದ್ದು ಯಾವುದೇ ಶಿಲ್ಪಗಳನ್ನು, ಅಥವಾ ಅಲಂಕಾರ ಹೊಂದಿಲ್ಲ. ದೇವಾಲಯದ ಮೇಲೆ ಇದ್ದ ಶಿಖರವಿದ್ದ ಕುರುಹುಗಳನ್ನು ಗರ್ಭಗೃಹದ ಮೇಲ್ಭಾಗದಲ್ಲಿ ಕಾಣಬಹುದು. ದೇವಾಲಯವನ್ನು ಕಾಲಕಾಲಕ್ಕೆ ಜೀರ್ಣೋದ್ಧಾರವನ್ನು ಮಾಡಿರುವುದರಿಂದ ದೇವಾಲಯದ ಪ್ರಾಚೀನ ಕುರುಹುಗಳನ್ನು ಇಂದಿಗೂ ಕಾಣಬಹುದು.

ಗುಡಿಯಲ್ಲಿ ಸಿಂಧರ ಅರಸ ಪೆರ್ಮಾಡಿಯ ಕಾಲದ ಕ್ರಿ.ಶ. ಸುಮಾರು ೧೨ನೇ ಶತಮಾನದ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೫, ಪುಟ ೮, SII, XV, P.1, No. 235). ಸಿಂಧ ಮಹಾಮಂಡಲೇಶ್ವರ ಆಚರಸ, ಅರಸಿ ಮಹಾದೇವಿ ಹಾಗೂ ಕುಮಾರ ಪೆರ್ಮಾಡಿ ಭೂಪರನ್ನು ಉಲ್ಲೇಖಿಸಿದೆ.

೫.

ಊರು ಕಣವಿ
ಸ್ಮಾರಕ ಕಲ್ಗುಡಿ (ಕಲ್ಮೇಶ್ವರ)
ಸ್ಥಳ ಊರಿನ ಕೆರೆ ದಂಡೆಯಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ ರಾ.ಪು.ಇ.

ದೇವಾಲಯ ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಒಳಗೊಂಡಿದೆ. ಗರ್ಭಗೃಹವು ಚೌಕಾಕಾರವಾಗಿದ್ದು, ಅದರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಉತ್ತರದ ಗೋಡೆಯಲ್ಲಿ ಕಪಾಟು ಇದೆ. ಗರ್ಭಗೃಹದ ಮುಚ್ಚೆಗೆಯೂ ಚೌಕ, ವೃತ್ತಾಕಾರವಾಗಿದ್ದು, ಅದರಲ್ಲಿ ಕಮಲದ ಹೂವಿನ ರೀತಿಯ ಅಲಂಕಾರವಿದೆ. ಇದರ ದ್ವಾರವು ಸ್ತಂಭ ಶಾಖೆಯನ್ನೊಳಗೊಂಡಿದೆ. ಅದರ ಲಲಾಟದಲ್ಲಿ ಯಾವುದೇ ಶಿಲ್ಪಗಳಿಲ್ಲ. ಆಯತಾಕಾರದ ಅಂತರಾಳವು ಗರ್ಭಗೃಹದ ಮುಂದಿದೆ. ಇದರ ದ್ವಾರವು ನಾಲ್ಕು ಸರಳಶಾಖೆಗಳಿಂದ ಕೂಡಿದ್ದು ಅದರಲ್ಲಿ ಸ್ತಂಭಶಾಖೆ ಎದ್ದು ಕಾಣುತ್ತದೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. (ದಾಜಿಗ್ಯಾ, ಪು. ೯೧೨-೧೩).

ಅಂತರಾಳದ ಮುಂಭಾಗಕ್ಕೆ ತೆರೆದ ನವರಂಗವಿದ್ದು, ಮಧ್ಯದಲ್ಲಿ ನಾಲ್ಕು ಕಂಬಗಳಿವೆ. ಇವುಗಳು ಚೌಕ, ಅಷ್ಟಕೋನ ಮತ್ತು ಘಂಟಾಕೃತಿಯಲ್ಲಿವೆ. ಬೋದಿಗೆಗಳನ್ನು ಹೊತ್ತು ನಿಂತಿರುವ ಯಾಳಿಗಳು ಗಮನ ಸೆಳೆಯುತ್ತವೆ. ನವರಂಗದ ಭುವನೇಶ್ವರಿಯಲ್ಲಿ ಕಮಲದ ಮೊಗ್ಗಿನ ಅಲಂಕಾರವಿದೆ. ನವರಂಗವನ್ನು ಪ್ರವೇಶಿಸಲು ಪೂರ್ವ, ಉತ್ತರ ಹಾಗೂ ದಕ್ಷಿಣದಲ್ಲಿ ಪ್ರವೇಶದ್ವಾರಗಳಿವೆ. ನವರಂಗದ ಮಧ್ಯೆ ವೇದಿಗೆ ಇದೆ.

ಅಧಿಷ್ಠನಾದಲ್ಲಿ, ಉಪಾನ, ಪದ್ಮ, ಕಂಪನಗಳ ಮುರು ಪಟ್ಟಿಕೆಗಳನ್ನು ಮತ್ತು ಕುಮುದಗಳನ್ನು ಕಾಣಬಹುದು. ಭಿತ್ತಿ ಭಾಗದಲ್ಲಿ ಅರೆಗಂಭಗಳು ಮತ್ತು ಶಿಖರದ ಮಾದರಿಗಳನ್ನು ಕೆತ್ತಿರುವುದನ್ನು ಕಾಣಬಹುದು. ಗರ್ಭಗೃಹದ ಉತ್ತರ ಭಾಗದ ಭಿತ್ತಿಯಲ್ಲಿ ಪ್ರನಾಳವಿದೆ. ದೇವಾಲಯದ ಮೇಲಿದ್ದ ಮೂಲ ಶಿಖರ ನಾಶವಾಗಿದ್ದು. ಆದರ ಕೆಲಭಾಗಗಳು ಮಾತ್ರ ಇಂದು ಉಳಿದಿವೆ.

ದೇವಾಲಯದ ಹೊರಗಡೆ ನಾಗರಕಲ್ಲುಗಳಿವೆ. ಗುಡಿಯ ಗೋಡೆಯಲ್ಲಿರುವ ಕಲ್ಯಾಣ ಚಾಲುಕ್ಯ ಅರಸ ಆರನೆ ವಿಕ್ರಮಾದಿತ್ಯನ ಕ್ರಿ.ಶ. ೧೧೦೫ರ ಶಾಸನವು (ಧಾಜಿಶಾಸೂ, ಸಂ. ಗ. ೧೬, SII, XI, P. II. No. 156), ಕಣಿಯ ಅಜ್ಜಗಾವುಂಡನಿಂದ ಮೂಲಸ್ಥಾನ ದೇವರಿಗೆ ನೀಡಿದ ಭೂದಾನವನ್ನು ಕುರಿತು ದಾಖಲಿಸಿದೆ. ಈ ಊರಿಗೆ ಕಣಿಯ ಎಂಬ ಪ್ರಾರಂಭಿಕ ಹೆಸರಿತ್ತೆಂದು ಇರದಿಂದ ತಿಳಿಯಬಹುದು. ಮೈಲಾರಲಿಂಗ ಗುಡಿಯ ಬಳಿಯ ಶಾಸನವು ಕಲ್ಯಾಣ ಚಾಲುಕ್ಯ ಅರಸ ಎರಡನೆ ಜಗದೇಕಮಲ್ಲನ ಕ್ರಿ.ಶ. ೧೧೪೨ರ ತೇದಿಯ ಶಾಸನ (ಧಾಜಿಶಾಸೂ, ಸಂ. ಗ. ೧೭ ಪುಟ. ೮), ಮೂಲಸ್ಥಾನದೇವರ ತೋಟದ ಪೆರ್ಜುಂಕ ಮತ್ತು ವಡ್ಡರಾವುಳಗಳ ದಾನದ ಕುರಿತು ಹೇಳುತ್ತದೆ. ಅದೇ ಕಲ್ಲಿನಲ್ಲಿ ಇದೇ ಅರಸನ ಕ್ರಿ.ಶ. ೧೧೪೩ರ ಶಾಸನವು (ಧಾಜಿಶಾಸು, ಸಂ.ಗ. ೧೮) ಕೇಣೀಕಾರ ಮಾರಮರಸಾದಿಗಳಿಂದ ಸುಂಕದಾನವನ್ನು ದಾಖಲಿಸಿದೆ. ಈಶ್ವರ ಗುಡಿಯ ಗೋಡೆಯಲ್ಲಿನ ಅಲಚುರಿ ಅರಸ ಸೋವಿದೇವನ ಕ್ರಿ.ಶ. ೧೧೭೩ರ ಶಾಸನ (ಧಾಜಿಶಾಸೂ, ಸಂ ಗ. ೧೯; ಪುಟ ೮, SII, SV, No. 121)ಚಾವುಂಡನಾಯಕನಿಂದ ಮೂಲಸ್ಥಾನ ದೇವರಿಗೆ ದಾನವನ್ನು ತಿಳಿಸುತ್ತದೆ. ಇದೇ ಶಾಸನದಲ್ಲಿ ಸಿಂಧರ ಅರಸ ಬಿಜ್ಜಳ (ಧಾಜಿಶಾಸೂ, ಸಂ.ಗ. ೨೦, ಪುಟ, ೮, SII, XV, No. 121) ಬಲದೇವನಾಯಕನಿಂದ ಈ ದೇವರಿಗೆ ದಾನ ನೀಡಿದ್ದನ್ನು ಉಲ್ಲೇಖಿಸಿದೆ. ಮತ್ತೆರಡು ವೀರಗಲ್ಲುಗಳು (ಧಾಜಿಶಾಸೂ, ಸಂ ಗ. ೨೧ ಮತ್ತು ೨೨ ಪುಟ ೮) ಕೆಲವು ವ್ಯಕ್ತಿಗಳ ಮರಣವನ್ನು ದಾಖಲಿಸಿದೆ. ಇವು ಕ್ರಿ.ಶ. ೧೩ ಮತ್ತು ೧೫ನೇ ಶತಮಾನಕ್ಕೆ ಸೇರಿದವುಗಳಾಗಿವೆ.

ಊರು ಕದಡಿ
ಸ್ಮಾರಕ ಕಲ್ಲೇಶ್ವರ
ಸ್ಥಳ ಊರಿನ ಆಗ್ನೇಯಕ್ಕೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದ ಗರ್ಭಗೃಹವನ್ನು ಹೊರತುಪಡಿಸಿ ಅದರ ಮುಂದಿನ ಭಾಗಗಳೆಲ್ಲಾ ನಶಿಸಿ ಹೋಗಿವೆ. ಗರ್ಭಗೃಹದಲ್ಲಿ ಲಿಂಗವಿದೆ. ಇದರ ಮುಂದಿನ ಮುಚ್ಚಿಗೆ ಸಹಾ ಇತ್ತೀಚೆಗೆ ಬಿದ್ದು ಹೋಗಿದೆ. ಗರ್ಭಗೃಹದ ದ್ವಾರ ಮತ್ತು ಲಲಾಟಗಳುಸರಳವಾಗಿವೆ. ದೇವಾಲಯದ ಅಧಿಷ್ಠಾನ ಮತ್ತು ಭಿತ್ತಿಗಳು ಸಹ ಸರಳವಾಗಿವೆ.

ದೇವಾಲಯದ ಸಮೀಪವೇ ಹನುಮಂತನ ಚಿಕ್ಕ ಗುಡಿಯಿದೆ. ದಕ್ಷಿಣಾಭಿಮುಖವಾಗಿರುವ ಈ ಗುಡಿಯಲ್ಲಿ ಹನುಂತನ ಮೂರ್ತಿಶಿಲ್ಪವಿದೆ. ಈ ಗುಡಿಯ ಮುಂಭಾಗದಲ್ಲಿ ಮೂರು ವೀರಗಲ್ಲುಗಳು, ಅವುಗಳ ಪಕ್ಕದಲ್ಲಿ ನಾರಾಯಣನ ಮೂರ್ತಿಶಿಲ್ಪವಿದೆ. ಅದರ ತ್ರುಟಿತ ಪ್ರಭಾವಳಿಯ ಭಾಗದಲ್ಲಿ ದ್ವಾದಶ ಮೂರ್ತಿಗಳ ಉಬ್ಬುಶಿಲ್ಪಗಳಿವೆ.

ಊರು ಕಲ್ಲೂರು
ಸ್ಮಾರಕ ಕಲ್ಲೇಶ್ವರ
ಸ್ಥಳ ಊರಿನ ವಾಯವ್ಯಕ್ಕೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯಕ್ಕೆ ಗರ್ಭಗೃಹ ಮತ್ತು ಮುಖಮಂಟಪಗಳಿವೆ. ಗರ್ಭಗೃಹವು ಚೌಚಾಚಾರವಾಗಿದ್ದು ಅದರಲ್ಲಿ ಲಿಂಗವಿದೆ. ಇದರ ಮುಚ್ಚಿಗೆಯಲ್ಲಿ ಅರಳಿದ ತಾವರೆಯನ್ನು ಕೆತ್ತಲಾಗಿದೆ. ಇದರ ದ್ವಾರವು ಸರಳವಾಗಿದೆ. ಮುಖಮಂಟಪವು ಎರಡು ಹಂತದಲ್ಲಿ ನಿರ್ಮಾಣವಾಗಿದೆ. ಇದನ್ನು ಪ್ರವೇಶಿಸಲು ಮೆಟ್ಟಿಲುಗಳು ಇವೆ. ಮುಖಮಂಟಪದ ಭಾಗವನ್ನು ೧೯೨೧ರಲ್ಲಿ ಹೊಸದಾಗಿ ಕಟ್ಟಲಾಗಿದೆ. ಪಶ್ಚಿಮ ಹಾಗೂ ಉತ್ತರದ ಗೋಡೆಗಳಲ್ಲಿ ಕಪಾಟುಗಳಿವೆ.

ದೇವಾಲಯದ ಅಧಿಷ್ಠಾನ ಹಾಗೂ ಭಿತ್ತಿ ಸರಳವಾಗಿದ್ದು ಅದರ ಮೇಲೆ ಶಿಖರವಿಲ್ಲ. ದೇವಾಲಯದ ಮುಂದೆ ಶಾಸನಕಲ್ಲು ಮತ್ತು ನಾಗರಕಲ್ಲುಗಳಿವೆ.

ಈ ಗುಡಿಯ ಎದುರು ಇರುವ ತೇದಿಯಲ್ಲಿದ್ದ ಕ್ರಿ.ಶ. ಸುಮಾರು ೧೫ನೇ ಶತಮಾನದ ಶಾಸನವು (ಧಾಜಿಶಾಸೂ, ಸಂ ಗ. ೨೩, ಪುಟ ೮, SII, XV, No. 672) ಮಲ್ಲಿಕಾರ್ಜುನ ದೇವರಿಗೆ ಮುಳಗುಂದ ವಳಿತದ ಕಲೂರ ಗ್ರಾಮವನ್ನು ದಾನ ನೀಡಿದ ವಿಷಯ ದಾಖಲಿಸಿದೆ.

ಊರು ಕಳಾಸಪುರ
ಸ್ಮಾರಕ ಹಾಳು ಈಶ್ವರ
ಸ್ಥಳ ಊರಿನ ಹೊರಭಾಗದಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಆಧುನಿಕ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ ರಾ.ಪು.ಇ.

ಈ ದೇವಾಲಯ ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಹೊಂದಿದೆ. ಮೂಲಗರ್ಭಗೃಹದಲ್ಲಿ ಲಿಂಗವಿದ್ದು, ಅದರ ಮುಚ್ಚಿಗೆಯಲ್ಲಿ ಅರಳಿದ ಪದ್ಮವಿದೆ. ಇದರ ದ್ವಾರದಲ್ಲಿ ಐದು ಸರಳ ಶಾಖೆಗಳಿವೆ. ಲಲಟಾದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪ ಇದೆ. ತೆರೆದ ಅಂತರಾಳವು ಸರಳವಾಗಿದೆ. ನವರಂಗದಲ್ಲಿ ನಾಲ್ಕು ಚೌಕ ಮತ್ತು ವೃತ್ತಾಕಾರದ ಅಲಂಕೃತ ಕಂಬಗಳಿವೆ. ನವರಂಗದ ಭುವನೇಶ್ವರಿಯಲ್ಲಿ ಅರಳಿದ ವೃತ್ತಾಕಾರದ ಪದ್ಮವಿದೆ. ನವರಂಗದ ಮುಂಭಾಗ ಬಿದ್ದುಹೋಗಿದ್ದು, ಸ್ಥಳೀಯರು ಅದನ್ನು ಜೀರ್ಣೋದ್ಧಾರ ಮಾಡಲು ಮುಂದಾಗಿದ್ದಾರೆ.

ದೇವಾಲಯದ ಅಧಿಷ್ಠಾನವು ಉಪಾನ, ಕುಮುದ ಹಾಗೂ ಪದ್ಮಗಳಿಂದ ಕೂಡಿದೆ. ಅಧಿಷ್ಠಾನದ ಮೇಲಿನ ಭಿತ್ತಿಯನ್ನು ಶಿಖರದ ಮಾದರಿಗಳಿಂದ ಮತ್ತು ಕೋಷ್ಟದಿಂದ ಅಲಂಕರಿಸಲಾಗಿದೆ. ಭಿತ್ತಿಯ ಮೇಲಿನ ಬಹುತೇಕ ಭಾಗಗಳು ನಶಿಸಿವೆ. ಮೂಲ ಗರ್ಭಗೃಹದ ಮೇಲಿ ಇದ್ದಿರಬಹುದಾದ ಶಿಖರ ಇಂದು ಸಂಪೂರ್ಣ ನಾಶವಾಗಿದೆ.

ಇದೇ ಊರಿನ ಮ್ಯಾಗಲ ಓಣಿ ಬಳಿಯ ಊರ ಬಾವಿ ಹತ್ತಿರ ಮತ್ತೊಂದು ಈಶ್ವರ ದೇವಾಲಯವಿದೆ. ಇದು ಈ ಮೇಲಿನ ದೇವಾಲಯದ ರೀತಿಯ ವಾಸ್ತು ವೈಶಿಷ್ಠ್ಯಗಳನ್ನೊಳಗೊಂಡಿದೆ. ಇದರ ಶೈಲಿಯ ಆಧಾರದ ಮೇಲೆ ಇವೆರಡೂ ದೇವಾಲಯಗಳು ಕಲ್ಯಾಣ ಚಾಲುಕ್ಯರ ಕಾಲಾವಧಿಯಲ್ಲಿ ನಿರ್ಮಾಣವಾಗಿರಬಹುದೆಂದು ಹೇಳಬಹುದಾಗಿದೆ.

ಇದೇ ದೇವಾಲಯದ ಸಮೀಪದಲ್ಲಿ ಶಂಕ್ರಮ್ಮ ಎಂದು ಸ್ಥಳೀಯರಿಂದ ಕರೆಯಿಸಿಕೊಳ್ಳುವ ದುರ್ಗಿಯ ಆಸೀನ ಶಿಲಾಮೂರ್ತಿಯಿದೆ. ಕ್ರಿ.ಶ. ೧೨ನೇ ಶತಮಾನಕ್ಕೆ ಸೇರಿದ ಈ ಮೂರ್ತಿಯು ಚತುರ್ಭುಜಗಳನ್ನು ಹೊಂದಿದ್ದು, ಮೇಲಿನ ಬಲಗೈನಲ್ಲಿ ತ್ರಿಶೂಲ, ಎಡಗೈಯಲ್ಲಿ ಢಮರು, ಹಾಗೂ ಕೆಳಗಿನ ಬಲಗೈಯಲ್ಲಿ ಖಡ್ಗ ಮತ್ತು ಎಡಗೈಯಲ್ಲಿ ಕಪಾಲವಿದೆ. ಕಿರೀಟ ಮುಖಿಯಾಗಿರುವ ಈ ಮೂರ್ತಿಶಿಲ್ಪವು ವಿವಿಧ ಹಾರ ಮತ್ತು ಆಭರಣಗಳಿಂದ ಅಲಂಕೃತವಾಗಿದೆ.

ಊರಿನ ವೀರಭದ್ರ ದೇವರ ದೇವಾಲಯದಲ್ಲಿರುವ ಕ್ರಿ.ಶ. ೧೫ನೇ ಶತಮಾನದ ಶಾಸನವು (ಧಾಜಿಶಾಸು, ಸಂ ಗ ೨೪, ಪುಟ ೮, SII, XV, No. 670) ಸೋಮನಾಥ ದೇವಾಲಯಕ್ಕೆ ತಿಂಗಿನ ಸುಂಕದಾನ ನೀಡಿದ ವಿಷಯವನ್ನು ದಾಖಲಿಸಿದೆ.

ಊರು ಕಿರಟಗೇರಿ
ಸ್ಮಾರಕ ಕಲ್ಮೇಶ್ವರ
ಸ್ಥಳ ಊರಿನ ಈಶಾನ್ಯಕ್ಕೆ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ ರಾ.ಪು.ಇ.

ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಮತ್ತು ಮುಖಮಂಟಪಗಳಿವೆ. ಚೌಕಾಕಾರವಾಗಿರುವ ಗರ್ಭಗೃಹದಲ್ಲಿ ಲಿಂಗವಿದೆ. ಇದರ ದ್ವಾರ ಮತ್ತು ಲಲಟಾಗಳು ಸರಳವಾಗಿವೆ. ಗರ್ಭಗೃಹದ ಮುಂದೆ ಎರಡು ಹಂತದ ಅಂತರಾಳವಿದೆ. ಅದನ್ನು ಪ್ರವೇಶಿಸಲು ಮೆಟ್ಟಿಲುಗಳಿವೆ. ಅಂತರಾಳದಲ್ಲಿ (ವೃತ್ತಾಕಾರದ) ಎರಡು ಮರದ ಕಂಬಗಳಿವೆ. ಇದರ ಮುಂದಿನ ಮುಖಮಂಟಪವೂ ಸಹ ಎರಡು ಹಂತದಿಂದ ಕೂಡಿದ್ದು ಅದರಲ್ಲಿಯೂ ವೃತ್ತಾಕಾರದ ನಾಲ್ಕು ಮರದ ಕಂಬಗಳಿವೆ. ಇದನ್ನು ಪ್ರವೇಶಿಸಲು ಪೂರ್ವ ದಿಕ್ಕಿನಲ್ಲಿ ಮೆಟ್ಟಿಲುಗಳಿವೆ.

ಇದೇ ಊರಿನ ಮಧ್ಯಭಾಗದಲ್ಲಿ ಎತ್ತರದ ಜಗತಿ ಮೇಲೆ ನಿರ್ಮಿಸಿದ ಹನುಮಂತನ ದೇವಾಲಯವಿದೆ. ದಕ್ಷಿಣಾಭಿಮುಖವಾಗಿರುವ ಈ ದೇವಾಲಯವು ಸರಳ ಚೌಕಾಕಾರದ ಗರ್ಭಗೃಹವನ್ನು ಮಾತ್ರ ಹೊಂದಿದೆ. ಅದರಲ್ಲಿ ಹನುಂತನ ವಿಗ್ರಹವಿದೆ. ದೇವಾಲಯದ ಮುಂಭಾಗದಲ್ಲಿ ಸಿಂಹಲಾಂಛನವಿರುವ, ಕಲ್ಯಾಣ ಚಾಲುಕ್ಯ ಶೈಲಿಯ ಪೀಠ ಹಾಗೂ ಎರಡು ವೀರಗಲ್ಲುಗಳು ಇವೆ.

೧೦

ಊರು ಕುರ್ತುಕೋಟಿ
ಸ್ಮಾರಕ ಈಶ್ವರ
ಸ್ಥಳ ಊರಿನ ದಕ್ಷಿಣ ದಿಕ್ಕಿಗೆ
ಕಾಲ ಕ್ರಿ.ಶ. ೦೯-೧೦ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಸಾಧಾರಣ
ಸಂರಕ್ಷಣೆ ರಾ.ಪು.ಇ.

ಊರಿನ ದಕ್ಷಿಣ ಭಾಗದಲ್ಲಿರುವ ಕೆರೆಯ ದಂಡೆಯ ಮೇಲೆ ಪರಸ್ಪರಾಭಿಮುಖವಾಗಿರುವ ಈಶ್ವರ ಮತ್ತು ನರಸಿಂಹ ದೇವಾಲಯಗಳಿವೆ. ಈಶ್ವರ ದೇವಾಲಯ ಗರ್ಭಗೃಹ ಮತ್ತು ಮುಖಮಂಟಪವನ್ನು ಒಳಗೊಂಡಿದೆ. ಗರ್ಭಗೃಹ ಆಯತಾಕಾರವಾಗಿದ್ದು, ಅದರಲ್ಲಿ ಶಿವಲಿಂಗವಿದೆ. ಹಳೆಯ ದೇವಾಲಯದ ಕಂಬಗಳನ್ನು ಉಪಯೋಗಿಸಿ ಈಶ್ವರ ಗುಡಿಯನ್ನು ನಿರ್ಮಾಣ ಮಾಡಲಾಗಿದೆ. ಇದರ ಮುಚ್ಚಿಗೆ ಮತ್ತು ದ್ವಾರಗಳು ಸರಳವಾಗಿವೆ. ಮುಖಮಂಟಪದಲ್ಲಿ ನಂದಿ ವಿಗ್ರಹವನ್ನು ಇಡಲಾಗಿದೆ. ನವರಂಗದಲ್ಲಿನ ಕಂಬಗಳು ಸುಂದರವಾಗಿವೆ. (ಧಾಜಿಗ್ಯಾ ಪು. ೯೧೫) ನವರಂಗದ ಮುಚ್ಚಿಗೆ ಮತ್ತು ದ್ವಾರ ಸರಳ ರೀತಿಯಲ್ಲಿವೆ. ನವರಂಗದಲ್ಲಿ ಮಹಿಷಿಮರ್ದಿನಿ ಶಿಲ್ಪ ಹಾಗೂ ನಾಗರಕಲ್ಲುಗಳಿವೆ. ದೇವಾಲಯದ ಮೇಲ್ಚಾವಣಿಯನ್ನು ಕಡಪಕಲ್ಲಿನಿಂದ ನಿರ್ಮಿಸಲಾಗಿದೆ. ದೇವಾಲಯದ ಹೊರಭಾಗದ ಅಧಿಷ್ಠಾನ ಮತ್ತು ಭಿತ್ತಿಗಳು ಸರಳವಾಗಿವೆ. ಭಿತ್ತಿಯನ್ನು ಸುಣ್ಣದ ಕಲ್ಲು ಮತ್ತು ಮಣ್ಣಿನಿಂದ ಕಟ್ಟಲಾಗಿದೆ.

ಕಲ್ಮೇಶ್ವರ ಗುಡಿಯ ಬಳಿಯಿರುವ ಬಾದಾಮಿ ಚಾಲುಕ್ಯ ಅರಸ ವಿಜಯಾದಿತ್ಯನ ಕಾಲದ ಶಾಸನ (ಧಾಜಿಶಾಸೂ ಸಂ ಗ ೨೫, ಪುಟ ೮, SII, XI, P.I, No. 2) ಲೋಕೆತಿಮ್ಮಡಿ ಕುರುತ್ತಕುಂಟೆಯನ್ನಾಳುವಾಗ ಮುಣಪನು ದಾನ ನೀಡಿದ ವಿಷಯವನ್ನು ದಾಖಲಿಸಿದೆ. ವೀರಭದ್ರದೇವರ ಗುಡಿಯ ಸಮೀಪದ ಶಾಸನವು ರಾಷ್ಟ್ರಕೂಟರ ಅರಸ ಮೂರನೇ ಕೃಷ್ಣನ ಕಾಲಕ್ಕೆ ಸೇರಿದೆ. ಅದರ ತೇದಿಯು ಕ್ರಿ.ಶ. ೯೪೬. (ಧಾಜಿಶಾಸೂ, ಸಂ ಗ ೨೬), ಪುಟ ೮, SII, XI, P.I, No. 37), ಅದು ಮೂಲಸ್ಥಾನದೇವರಿಗೆ ನಾಗಗಾವುಂಡ ದಾನ ನೀಡಿದ ವಿಷಯ ದಾಖಲಿಸಿದೆ. ಇನ್ನೊಂದು ಶಾಸನವು ಕಲ್ಯಾಣ ಚಾಲುಕ್ಯ ಅರಸ ಆರನೆ ವಿಕ್ರಮಾದಿತ್ಯನ ಕ್ರಿಶ. ೧೦೮೨ರ ಶಾಸನವು (ಧಾಜಿಶಾಸು, ಸಂ ಗ. ೨೭; ಪುಟ ೮, SII, XI, P.I. No. 127) ದಂಡನಾಯಕ ವಾಮದೇವಯ್ಯನು ಕೆರೆಗೆ ನೀಡಿದ ಭೂದಾನವನ್ನು ಹೇಳಿದೆ. ಶಾಸನಗಳು ಈ ಊರನ್ನು ಕುರುತ್ತಕುಂಟೆ, ಕುರುತ್ತಕೊಟ್ಟೆ ಹಾಗೂ ಅಗ್ರಹಾರ ಕುರುತ್ತಕೊಂಟೆ ಎಂದು ಉಲ್ಲೇಖಿಸುತ್ತವೆ.