ದೇವಾಲಯಗಳು

ಜಿಲ್ಲೆಯಲ್ಲಿಯೇ ಪ್ರಾಚೀನ ದೇವಾಲಯವು ನರಗುಂದ ತಾಲೂಕಿನ ವಾಸನ ಗ್ರಾಮದಲ್ಲಿ ಇತ್ತೆಂಬುದು ಇತ್ತೀಚಿನ ಸಂಶೋಧನೆಗಳಿಂದ ದೃಢಪಟ್ಟಿದೆ. ಇಂದು ಈ ದೇವಾಲಯದ ಯಾವ ಅವಶೇಷಗಳು ಇಲ್ಲ. ಈ ಊರಿನಲ್ಲಿ ದೊರಕಿರುವ ಶಾತವಾಹನರ ಅರಸ ವಾಸಿಷ್ಠಿಪುತ್ರ ಶ್ರೀಪುಳಮಾವಿಯ ಒಂದು ಪ್ರಾಕೃತ ಶಾಸನವು ದೊರಕಿದೆ. ಇದರಲ್ಲಿ ಮಹಾದೇವ ಚಂಡಿಶಿವನ ದೇವಾತನ ಹಾಗೂ ಶಿಲ್ಪಿಯೋರ್ವನ ಉಲ್ಲೇಖವಿದೆ. ಕರ್ನಾಟಕದಲ್ಲಿ ನಿರ್ಮಾಣವಾಗಿರುವ ಅತಿ ಪ್ರಾಚೀನ ದೇವಾಲಯ ಇದಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ (ಧಾ.ಜೊ.ಗ್ಯಾ. ಪು. ೫೩). ೧೯೮೦ರ ದಶಕದಲ್ಲಿ ಇಲ್ಲಿ ನಡೆಸಲಾದ ಉತ್ಖನನದಿಂದ ಶಾತವಾಹನರ ಕಾಲದ ಶಾಸನ ಹಾಗೂ ಉಲ್ಲೇಖಿತ ದೇವಾಲಯದ ತಳಪಾಯ ಮತ್ತು ಮೂರ್ತಿಶಿಲ್ಪಗಳು ದೊರಕಿದ್ದು ಇದನ್ನು ಚಂಡಿಶಿವನ ದೇವಾಲಯವೆಂದು ತರ್ಕಿಸಲಾಗಿದೆ. ಸಿಕ್ಕಿರುವ ಅವಶೇಷಗಳು ಇಟ್ಟಿಗೆಯಿಂದ ರಚಿಸಲ್ಪಟ್ಟವೆ. ಇದರ ಕಾಲಾವಧಿ ಕ್ರ.ಶ. ಎರಡನೆಯ ಶತಮಾನವೆಂದು ತೀರ್ಮಾನಿಸಲಾಗಿದೆ (ಧಾ.ಜಿ. ಗ್ಯಾ.ಪು. ೧೦೧೨-೧೩). ನೆರೆಯ ಜಿಲ್ಲೆ ಬೆಳಗಾವಿಯ ಹೊರ ವಲಯದಲ್ಲಿರುವ ವಡಗಾಂವ ಮಾಧವಪುರದ ಉತ್ಖನನದಲ್ಲಿ ಶಾತವಾಹನರ ಕಾಲದ ಅನೇಕ ಕುರುಹುಗಳು, ಹಾಗೂ ನಾಣ್ಯಗಳು ದೊರಕಿವೆ. ವಾಸನವು ಭೌಗೋಳಿಕವಾಗಿ ಮೇಲೆ ಉಲ್ಲೇಖಿಸಿದ ನೆಲೆಗೆ ಸಮೀಪವಿರುವುದರಿಂದ ಇದು ಸಹ ಆದಿಇತಿಹಾಸ ಕಾಲದನೆಲೆಯಾಗಿತ್ತೆಂಬುದು ಅನುಮಾನವಿಲ್ಲ. ಬೃಹತ್‌ಶಿಲಾಯುಗ ಸಂಸ್ಕೃತಿಯ ಅವಶೇಷಗಳು ಲಹ ಈ ಊರಲ್ಲಿ ದೊರಕಿವೆ. ವಡಗಾಂ ಮಾಧವಪುರದಲ್ಲಿಯೂ ಶಾತವಾಹನರ ಕಾಲಕ್ಕೆ ಸೇರಿದ ಮೂರ್ತಿಶಿಲ್ಪಗಳು ಮತ್ತು ನಾಣ್ಯಗಳು ದೊರಕಿವೆ. ಪೂರ್ಣ ಪ್ರಮಾಣದ ದೇವಾಲಯವು ವಾಸನದಲ್ಲಿ ದೊರಕಿದ್ದರೆ ಕರ್ನಾಟಕದ ದೇವಾಲಯಗಳ ಅಧ್ಯಯನ ಇನ್ನೂ ಹೆಚ್ಚಿನ ಮಹತ್ವ ಪಡೆಯಬಹುದಗಿತ್ತು. ಬನವಾಸಿಯ ಕದಂಬರ ಆಳ್ವಿಕೆಗೆ ಈ ಪ್ರದೇಶವು ಬಹುವರ್ಷಗಳ ಕಾಲ ಒಳಪಟ್ಟಿದ್ದರೂ ಆ ಕಾಲಕ್ಕೆ ಸೇರಿದ ಯಾವ ದೇವಾಲಯಗಳು ನಮಗೆ ಲಭ್ಯವಿಲ್ಲ.

ಬಾದಾಮಿ ಚಾಲುಕ್ಯರಸ ಇಮ್ಮಡಿ ಪುಲಕೇಶಿಯ ಕಾಲದ ಶಾಸನವು ಲಕ್ಷ್ಮೇಶ್ವರದ ಶಂಖಬಸದಿಯ ಎಡಗೋಡೆಯಲ್ಲಿದೆ. ಸದರಿ ಶಾಸನವು ಊರಿನಲ್ಲಿರುವ ಅತ್ಯಂತ ಪ್ರಾಚೀನ ಶಾಸನವಾಗಿದೆ. (SH. XX. No. 3, IA, VIII, pp. 106-07; ಧಾ.ಜಿ.ಗ್ಯಾ.ಪು. ೨೬). ಸೇಂದ್ರವಂಶದ ದುರ್ಗಶಕ್ತಿಯ ಶಂಖ ಜಿನಾಲಯಕ್ಕೆ ಭೂಮಿಯನ್ನು ದಾನ ಮಾಡಿದ ವಿಷಯವನ್ನು ಈ ಶಾಸನ ತಿಳಿಸುತ್ತದೆ. ಪುಲಿಕೇಶಿ ಆಡಳಿತ ಅವಧಿಯಲ್ಲಿ ಆತನ ಅಧೀನ ಅಧಿಕಾರಿ ಕಟ್ಟಿದ ಈ ಗುಡಿಯು ಹಲವಾರು ಮಾರ್ಪಾಡುಗಳಿಗೆ ಒಳಗಾಗಿದೆ. ಹೀಗಾಗಿ ಬಾದಾಮಿ ಚಾಲುಕ್ಯರ ಮೂಲ ಶೈಲಿಯು ದೇವಾಲಯದಲ್ಲಿ ದಟ್ಟವಾಗಿ ಉಳಿದು ಬಂದಿಲ್ಲ. ಶಂಖ ಜಿನಾಲಯಕ್ಕೆ ಬಾದಾಮಿ ಚಾಲುಕ್ಯ ವಂಶದ ಅರಸರುಗಳು ಹಾಗೂ ಈ ಕಾಲಕ್ಕೆ ಸೇರಿದ ಅನೇಕ ವ್ಯಕ್ತಿಗಳು ದಾನ ದತ್ತಿಗಳನ್ನು ನೀಡಿದ್ದಾರೆ. ಕ್ರಿ.ಶ. ೬೮೩ರ ಬಾದಾಮಿ ಚಾಲುಕ್ಯ ಅರಸ ವಿನಯಾದಿತ್ಯನ ಶಾಸನವು (SII, XX, No. 4) ಶಂಖ ಜಿನಾಲಯಕ್ಕೆ ಬೆಳ್ವೊಲ ಮುನ್ನೂರದ ಹಡಗಿಲೆ ಎಂಬ ಗ್ರಾಮವನ್ನು ದಾನ ನೀಡಿದ ವಿವರವನ್ನು ನೀಡುತ್ತದೆ. ಇದೇ ವಂಶದ ವಿಜಯಾದಿತ್ಯನ ಕ್ರಿ.ಶ. ೭೨೩ರ ಶಾಸನವು (SII, XX, No. 5; IA, VII, p. 100) ಜಿನಾಲಯಕ್ಕೆ ಸಂಬೊಳಲ ಗ್ರಾಮವನ್ನು ನೀಡಿದ ಬಗ್ಗೆ ಉಲ್ಲೇಖಿಸತ್ತದೆ. ಇದೇ ಅರಸನ ಕ್ರಿ.ಶ. ೭೩೦ರ ಶಾಸನವು (SII, XX, No. 6) ಶಂಖ ಜಿನಾಲಯಕ್ಕಾಗಿ ನಿರವದ್ಯ ಪಂಡಿತರಿಗೆ ಕದ್ದಮ ಗ್ರಾಮವನ್ನು ದಾನ ಮಾಡಿದ ವಿವರಗಳಿವೆ. ಈ ಶಾಸನದ ಲಿಪಿಯು ೧೧ನೇ ಶತಮಾನದ್ದೆಂದು ಅಭಿಪ್ರಾಯಪಡಲಾಗಿದೆ. ಬಸದಿಯಲ್ಲಿನ ಬಾದಾಮಿ ಚಾಲುಕ್ಯ ಅರಸ ಇಮ್ಮಡಿ ವಿಕ್ರಮಾದಿತ್ಯನ ಕ್ರಿ.ಶ. ೭೩೫ ಶಾಸನವು (SII, XX, No. 7; IA, VII, p. 106-107) ಬಾಹುಬಲಿ ಶ್ರೀಷ್ಠಿಯ ವಿನಂತಿಯ ಮೇರೆಗೆ ಅರಸನಿಂದ ಧವಳ ಜಿನಾಲಯ ಮತ್ತು ದಾನಶಾಲೆಗಳಿಗೆ ನೀಡಿದ ದಾನಗಳನ್ನು ದಾಖಲಿಸುತ್ತದೆ. ಬಸದಿಯ ಎಡಗೋಡೆಯಲ್ಲಿ ಗಂಗ ಅರಸುಮನೆಗನದ ಅರಸ ಇಮ್ಮಡಿ ಮಾರಸಿಂಹನ ಕ್ರಿ.ಶ. ೯೬೮-೬೯ರ ಶಾಸನವು (SII, XX, No. 244) ಶಂಖ ಜಿನಾಲಯಕ್ಕೆ ಮೊಳಗೆರೆ ನಿಗ್ಗಲ ಗ್ರಾಮ ನೀಡಿದುದನ್ನು ತಿಳಿಸುತ್ತದೆ. ಇದೇ ಅರಸನ ತೇದಿವುಳ್ಳ ಇನ್ನೊಂದು ಶಾಸನವು ಎಡಗೋಡೆಯಲ್ಲಿದೆ (SII, XX, No. 245). ಅದು ಗಂಗ ಕಂದರ್ಪನು ಜಿನಾಲಯಕ್ಕಾಗಿ ಜಯದೇವ ಪಂಡಿತನಿಗೆ ದಾನ ನೀಡಿದ ವಿಷಯವನ್ನು ಉಲ್ಲೇಖಿಸತ್ತದೆ. ಊರ ಬಸಿಬಣದ ಬ್ರಹ್ಮದೇವರ ಗುಡಿಯ ಬಳಿಯ ಶಾಸನದಲ್ಲಿ (SII, XX, No. 246). ಜಿನಾಲಯಕ್ಕೆ ದಾನ ನೀಡಿದ ವಿಷಯವಿದೆ. ಬಸದಿಯ ಕಂಬದಲ್ಲಿದರುವ ಶಾಸನವು ವಿಯನಗರ ಅರಸ ಒಂದನೆಯ ದೇವರಾಯನ ಕಾಲಕ್ಕೆ ಸೇರಿದುದಾಗಿದೆ (SII, XX, No. 232). ಇದರ ತೇದಿಯು ಕ್ರಿ.ಶ. ೧೪೧೨. ಇದು ಸೋಮೇಶ್ವರ ದೇವರ ಆಚಾರ್ಯ ಶಿವರಾಮಯ್ಯ ಮತ್ತು ಶಂಖ ಬಸದಿಯ ಆಚಾರ್ಯರನ್ನು ಕುರಿತು ಉಲ್ಲೇಖಿಸುತ್ತದೆ. ಇಂದು ಶಂಖ ಬಸದಿಯು ಅತ್ಯಂತ ಸಂಕೀರ್ಣವಾದ ದೇವಾಲಯವಾಗಿದ್ದು ಕಲ್ಯಾಣ ಚಾಲುಕ್ಯ ಶೈಲಿಯ ಎಲ್ಲ ಅಂಶಗಳನ್ನು ಅದರಲ್ಲಿ ಕಾಣಬಹುದು. ಲಕ್ಷ್ಮೇಶ್ವರದ ಶಂಖ ಬಸದಿಯಲ್ಲಿ ಆದಿಕವಿ ಪಂಪನು ‘ಆದಿನಾಥ ಪುರಾಣ’ವನ್ನು ರಚಿಸಿದನೆಂಬ ಪ್ರತೀತವಿದೆ. ಈ ಬಸಿದಿಗೆ ಸಂಬಂಧಿಸಿದಂತೆ ಬಾದಾಮಿ ಚಾಲುಕ್ಯರ ಕಾಲದಿಂದ ವಿಜಯನಗರ ಕಾಲದವರೆಗಿನ ಶಾಸನಗಳಿವೆ. ಊರಲ್ಲಿನ ಲಳೆಯ ತಾಲೂಕು ಕಛೇರಿಯು ಹಿಂದಿರುವ ಕ್ರಿ.ಶ. ೧೫೩೮ರ (SII, XX, No. 36, IA, VIII, pp. 106-07; ಧಾ.ಜಿ.ಗ್ಯಾ.ಪು. ೭೯) ಶಾಸನದಲ್ಲಿ ಶಂಖ ಬಸದಿಯ ಜೈನ ಮತ್ತು ಸೋಮನಾಥ ದೇವಾಲಯದ ಶೈವ ಸಮುದಾಯದ ನಡುವಿನ ಕಲಹ ಅಥವಾ ವ್ಯಾಜ್ಯವನ್ನು ಜೈನರ ಪರವಾಗಿ ನಿರ್ಣಯಿಸಿದ ಉಲ್ಲೇಖವಿದೆ. ಪ್ರಾಚೀನ ಕರ್ನಾಟಕದಲ್ಲಿ ಪ್ರಬಲವಾಗಿದ್ದ ಎರಡು ಭಿನ್ನ ಪಂಥಗಳಲ್ಲಿ ವ್ಯಾಜ್ಯಗಳು ನಡೆದು ಒಂದು ಕೋಮಿನ ಪರವಾಗಿ ನ್ಯಾಯ ನಿರ್ಣಯವಾಗಿರುವುದು ಚರ್ಚೆಯ ಸಂಗತಿಯಾಗಿದೆ. ಕ್ರಿ.ಶ. ೧೨ನೇ ಶತಮಾನದ ಒಂದು ಶಾಸನವು ಮುಂಡರಗಿ ತಾಲುಕಿನ ಕಲಕೇರಿಯಲ್ಲಿ ಪಾರ್ಶ್ವನಾಥ ಬಸದಿಯನ್ನು ಭಾಮುಕೀರ್ತಿ ಸಿದ್ಧಾಂತಿದೇವನ ಶಿಷ್ಯ ಹಾಲಿಗಾವುಂಡನು ನಿರ್ಮಿಸಿದನೆಂದು ತಿಳಿಸುತ್ತದೆ. ಆದರೆ ಇಂದು ಬಸದಿಯ ಯಾವ ಕುರುಹುಗಳು ಗ್ರಾಮದಲ್ಲಿ ಇಲ್ಲ. ಅನೇಕ ಬಸದಿಗಳನ್ನು ಜಿಲ್ಲೆಯ ಹಲವಾರು ಭಾಗಗಳಲ್ಲಿ ನಿರ್ಮಿಸಲಾಗಿದೆ. ಆದರೆ ಅವುಗಳಲ್ಲಿ ಇಂದು ಬೆರಳೆಣೆಕೆಯಷ್ಟು ಮಾತ್ರ ಉಳಿದುಬಂದಿವೆ.

ರಾಷ್ಟ್ರಕೂಟರ ಕಾಲದ ಶಾಸನಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ್ಲಲಿ ದೊರಕಿವೆ. ಅವರ ಕಾಲದಲ್ಲಿ ದೇವಾಲಯ ನಿರ್ಮಾಣ ಹಾಗೂ ಅವುಗಳ ನಿರ್ವಹಣೆಗೆ ದಾನ ದತ್ತಿಗಳನ್ನು ನೀಡುವುದು, ಅಗ್ರಹಾರಗಳ ಸ್ಥಾಪನೆ, ಕೆರೆ ಕಟ್ಟುವಿಕೆ ಮತ್ತು ಹಲವಾರು ಪ್ರಜಾಹಿತಾತ್ಮಕ ಕೆಲಸಗಳನ್ನು ಮಾಡಿದರೆಂಬುದನ್ನು ತಿಳಿಯಬಹುದು. ಇವರ ಕಾಲದಲ್ಲಿ ನಿರ್ಮಿಸಿದ ದೇವಾಲಯವು ಗದಗ ಮತ್ತು ಗದಗ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ದೊರಕಿವೆ. ಇತ್ತೀಚೆಗೆ ಲಕ್ಕುಂಡಿಯಲ್ಲಿ ನಡೆಸಿದ ಉತ್ಖನನದಲ್ಲಿ ರಾಷ್ಟ್ರಕೂಟರ ಕಾಲಕ್ಕೆ ಸೇರಿದ ಅನೇಕ ಅವಶೇಷಗಳನ್ನು ಅ.ಸುಂದರ ಮತ್ತು ಆರ್. ಗೋಪಾಲ್‌ರಾವ್‌ರವರು ಶೋಧಿಸಿದ್ದಾರೆ (ಪುರಾತತ್ವ, ಸಂ. ೩೫, ಪು. ೧೭೦-೧೭೧). ಕರ್ನಾಟಕದಲ್ಲಿರುವ ಇವರ ಕಾಲದ ದೇವಾಲಯಗಳ ಪೈಕಿ ಮುಖ್ಯವಾದ ಎರಡು ಗುಡಿಗಳು ಗದಗ ಜಿಲ್ಲೆಯಲ್ಲಿರುವುದು ಗಮನಾರ್ಹ.

ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಆ ಕಾಲದ ದೇವಾಲಯವಿದೆ. ಶಾಸನಗಳು ಈ ಊರಿನ ಹೆಸರು ಕೋಳನೂರು ಎಂದು ಹಾಗೂ ಇದು ಬೆಳ್ವೊಲ-೩೦೦ ಎಂಬ ಪ್ರಾಚೀನ ಆಡಳಿತ ವಿಬಾಗದಲ್ಲಿ ಸೇರಿತ್ತೆಂದು ತಿಳಿಸುತ್ತವೆ. ಕೋಳನೂರು-೩೦ರ ಘಟಕವು ಮೇಲೆ ವಿವರಿಸಿದ ಆಡಳಿತ ವಿಭಾಗದಲ್ಲಿತ್ತು. ಕೊಳನೂರು ಅಥವಾ ಕೊಣ್ಣೂರು ಗ್ರಾಮದಲ್ಲಿ ರಾಷ್ಟ್ರಕೂಟರ ಮೂರು ಶಾಸನಗಳು ಕೊರಕಿವೆ. ರಾಷ್ಟ್ರಕೂಟ ಅರಸ ಒಂದನೆಯ ಅಮೋಘವರ್ಷನ ಕ್ರಿ.ಶ. ೮೬೦ರ ಶಾಸನವು ಕೊಳನೂರು ಬಸದಿಗೆ ಅರಸನು ಗ್ರಾಮವನ್ನು ದಾನ ಮಾಡಿದನೆಂದು ತಿಳಿಸುತ್ತದೆ.

ಊರಲ್ಲಿರುವ ಪರಮೇಶ್ವರ ಗುಡಿಯು (ಇಂದು ಉಮಾರಾಮೇಶ್ವರ ಎಂದು ಕರೆಯಲಾಗುತ್ತಿದೆ) ಅತ್ಯಂತ ಮಹತ್ವದ್ದಾಗಿದೆ. ಕರ್ನಾಟಕದಲ್ಲಿಯೇ ನಕ್ಷತ್ರಾಕಾರ ತಳವಿನ್ಯಾಸವಿರು ಅತ್ಯಂತ ಪ್ರಾಚೀನ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಷ್ಟ್ರಕೂಟರ ಕಾಲದಲ್ಲಿ ಇದು ಮೂಲತಃ ಪಾರ್ಶ್ವನಾಥ ಬಸದಿಯಾಗಿತ್ತು. ಇದನ್ನು ಅಮೋಘರ್ಷನ ಸೇನಾನಿ ಬಂಕೆಯನು ನಿರ್ಮಿಸಿದನು. ಕಾಲಕ್ರಮದಲ್ಲಿ ಶೈವರ ಪ್ರಭಾವಕ್ಕೆ ಒಳಗಾದ. ಈ ಬಸದಿಯನ್ನು ಪರಮೇಶ್ವರ ಗುಡಿಯಾಗಿ ಪರಿವರ್ತಿಸಲಾಗಿದೆ (ಧಾ.ಜಿ.ಗ್ಯಾ.ಪು. ೬೨ ಮತ್ತು ೯೨೦). ದೇವಾಲಯದಲ್ಲಿ ಗರ್ಭಗೃಹ, ಅರ್ಧಮಂಟಪ, ನವರಂಗ ಹಾಗೂ ರಂಗಮಂಟಪಗಳಿವೆ. ನವರಂಗದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳಿವೆ. ರಂಗಮಂಟಪದಲ್ಲಿ ವಿಜಯನಗರ ಶೈಲಿಯ ಕಂಬಗಳು ಕಂಡುಬರುತ್ತವೆ. ರಂಗಮಂಟಪದ ಹೊರ ಪ್ರಕಾರದಲ್ಲಿ ಎತ್ತರದ ಗೋಡೆ ಮತ್ತು ಮಹಾದ್ವಾರದ ಮೇಲ್ಭಾಗದಲ್ಲಿ ವಿಜಯನಗರ ಕಾಲದ ರಾಯಗೋಪುರಗಳು ಇವೆ. ರಂಗಮಂಟಪದ ಕಂಬಗಳ ಮೇಲೆ ದಶಾವತಾರದ ಹಲವಾರು ಉಬ್ಬುಶಿಲ್ಪಗಳಿವೆ. ಅವುಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ಗರ್ಭಗೃಹದ ಮೇಲೆ ಕದಂಬ ನಾಗರ ಶೈಲಿಯ ಶಿಖರವಿದೆ. ಅದರ ಮುಂಭಾಗದಲ್ಲಿ ಸುಕನಾಸಿ ಇದೆ.

ಈ ದೇವಾಲಯವನ್ನು ಕ್ರಿ.ಶ. ಸುಮಾರು ೧೦ನೇ ಶತಮಾನದಲ್ಲಿ ನಿರ್ಮಿಸಿರಬಹುದೆಂದು ಡಾ. ಅ.ಸುಂದರ ಅವರು ಅಭಿಪ್ರಾಯಪಡುತ್ತಾರೆ. (ಧಾ.ಜಿ.ಗ್ಯಾ, ಪು. ೯೨೭-೨೮). ದೇವಾಲಯದಲ್ಲಿನ ಕ್ರಿ.ಶ. ೧೦೩೭ರ ಶಾಸನವು ದೋಯಿಯಪ್ಪ ಪೆರ್ಗಡೆ ಎಂಬ ಅಧಿಕಾರಿ ಬಾರನಾರಾಯಣ ನಿರ್ಮಿಸಿದನೆಂದು ತಿಳಿಸುತ್ತದೆ. ಆದ್ದರಿಂದ ಪ್ರಸ್ತುತ ಶಾಸನೋಕ್ತ ಬಾರಾನಾರಾಯಣ (ದೇವಾಲಯ) ಗುಡಿಯೇ ವೀರನಾರಾಯಣ ಗುಡಿಯೆಂದು, ಅದನ್ನು ಕ್ರಿ.ಶ. ೧೦ನೇ ಶತಮಾನದ ಅಂತ್ಯದಲ್ಲಿ ನಿರ್ಮಿಸಿರುವ ಸಾಧ್ಯತೆಗಳಿವೆಯೆಂದು ಅವರ ಅಭಿಪ್ರಾಯಪಡುತ್ತಾರೆ. ನಂತರದ ಅರಸುಮನೆತನಗಳು ದೇವಾಲಯವನ್ನು ವಿಸ್ತರಿಸಿದರು ಎಂಬುದು ಗುಡಿಯ ವಾಸ್ತು ಶೈಲಿಯಿಂದ ಗೋಚರಿಸುತ್ತದೆ. ವಿಜಯನಗರ ಅರಸರ ಕಾಲದಲ್ಲಿ ರಂಗಮಂಟಪ, ಗೋಪುರ ಮತ್ತು ಹೊರ ಪ್ರಕಾರ ಗೋಡೆಗಳು ನಿರ್ಮಾಣಗೊಂಡವು. ೧೯೬೨ರಲ್ಲಿಯೂ ಸಹ ರಾಯಗೋಪುರವನ್ನೂ ನವೀಕರಿಸಲಾಗಿದೆ. ಈ ಪೂರ್ವದಲ್ಲಿ ಗೋಪುರದಲ್ಲಿದ್ದ ಮಿಥುನ ಶಿಲ್ಪಿಗಳನ್ನು ಸಹ ಅದೇ ಜಾಗದಲ್ಲಿ ಇರಿಸಿ ನವೀಕರಿಸಿಲಾಗಿದೆ.

ಸ್ಥಳೀಯರ ನಂಬಿಕೆಯಂತೆ ಈ ದೇವಾಲಯವನ್ನು ಹೊಯ್ಸಳ ವಿಷ್ಣವರ್ಧನನು ಕಟ್ಟಿಸಿದನು. ಆದರೆ ಎರಡನೇ ಬಲ್ಲಾಳನು ನಿರ್ಮಿಸಿದನೆಂದು ಎ.ಎಂ. ಅಣ್ಣಿಗೇರಿಯವರು ಅಭಿಪ್ರಾಯಪಡುತ್ತಾರೆ. ಅಲ್ಲದೇ ವಿಜಯನಗರ ಕಾಲದಲ್ಲಿ ದೇವಾಲಯವನ್ನು ವಿಸ್ತರಿಸಿರುವುದು ಖಚಿತವೆಂದು ಹಾಗೂ ಗರ್ಭಗೃಹದಲ್ಲಿರುವ ಮೂಲ ವಿಗ್ರಹವು ವಿಜಯನಗರ ಶೈಲಿಯಲ್ಲಿದೆ ಎಂಬುದು ಡಾ. ಅ. ಸುಂದರ ಅವರ ಅಭಿಪ್ರಾಯ.

ರಂಗಮಂಟಪದಲ್ಲಿರುವ ಒಂದು ಕಂಬದ ಮುಂದೆ ಕುಳಿತು ಗದುಗಿನ ನಾರಾಯಣಪ್ಪ (ಕುಮಾರವ್ಯಾಸ) ತನ್ನ ಪ್ರಸಿದ್ದ ‘ಕರ್ನಾಟಕ ಭಾರತ ಕಥಾ ಮಂಜರಿ’ ಅಥವಾ ಗದುಗಿನ ‘ಭಾರತ ಮಹಾಕಾವ್ಯ’ವನ್ನು ರಚಿಸಿದನೆಂದು ಸ್ಥಳೀಯರ ನಂಬಿಕೆಯಾಗಿದೆ. ದೇವಾಲಯದ ಆವರಣದಲ್ಲಿ ಅನೇಕ ಗುಡಿಗಳಿವೆ. ಅವುಗಳಲ್ಲಿ ರಾಘವೇಂದ್ರ ಸ್ವಾಮಿಗಳ ಬೃಂದಾವನ ಮತ್ತು ಆಂಜನೇಯನ ಗುಡಿ ಪ್ರಮುಖವಾದುದು.

ವೀರನಾರಾಯಣ ಗುಡಿಯ ಉತ್ತರ ದಿಕ್ಕಿನ ಪ್ರಕಾರ ಗೋಡೆಯಲ್ಲಿರುವ ರಾಷ್ಟ್ರಕೂಟ ಅರಸ ನಿರುಪಮ ಕ್ರಿ.ಶ. ೯೧೯ರ ಶಾಸನವು ಬೆಳ್ವೊಲದ ಅಧಿಕಾರಿಯಾದ ಮಹಾಶ್ರೀಮಂತ ಹಾಗೂ ಮಹಾಜನ ನಡುವೆ ಆದ ಭಟ್ಟಿಕೆರೆಯ ತಿರೆಗೆ ಒಪ್ಪಂದದ ಉಲ್ಲೇಖವಿದೆ (ಧಾ.ಜೊ.ಶಾ.ಸೂ. ಸಂ.ಗ ೩೮). ಗೋಪುರದ ಮೇಲ್ಛಾವಣಿಯಲ್ಲಿರುವೆ ಶಾಸನವು (ಧಾ.ಜಿ.ಶಾ.ಸೂ.ಸಂ.ಗ. ೪೦) ದೇಸಿಂಗನು ಕಳ್‌ದುಗು ಅಗ್ರಹಾರವನ್ನು ಮುತ್ತಿದ ವಿಷಯವನ್ನು ತಿಳಿಸುತ್ತದೆ. ಬಾವಿಯ ಸಮೀಪದ ಶಾಸನವು (ಧಾ.ಜಿ.ಶಾ.ಸೂ. ಸಂ.ಗ ೪೨; SII, XI, pp. 1. No. 72, EI, XIX, pp. 89-97; IA II, pp. 217-22) ದಾಮೋದರ ಸೆಟ್ಟಿಯಿಂದ ತ್ರೈಪುರುಷದೇವರಿಗೆ ಭೂದಾನ ಮಾಡಿದ್ದನ್ನು ದಾಖಲಿಸಿದೆ. ಇದು ಕಲ್ಯಾಣ ಚಾಲುಕ್ಯ ಅರಸ ಎರಡನೆ ಜಯಸಿಂಹನ ಕ್ರಿ.ಶ. ೧೦೩೭ರ ಕಾಲಕ್ಕೆ ಸೇರಿದ ಶಿಲಾಶಾಸನವಾಗಿದೆ. ಗುಡಿಯ ಹತ್ತಿರದ ಬ್ರಾಹ್ಮಣರ ಮನೆ ಹಿಂಭಾಗದಲ್ಲಿರವು ಶಾಸನದಲ್ಲಿ (ಧಾ.ಜಿ.ಶಾ.ಸೂ.ಸಂ.ಗ. ೪೩) ಮಹಾಮಂಡಲೇಶ್ವರ ಚೋಲಗೊಂಡ ಮಾರರಸನಿಂದ ದೇವಾಲಯ ಮತ್ತು ಮಠಗಳಿಗಾಗಿ ತತ್ಪುರಷಜೀಯನಿಗೆ ಭೂದಾನ ಮಾಡಿದ ವಿಷಯವಿದೆ. ಇದರ ಕಾಲವು ಒಂದನೇ ಸೋಮೇಶ್ವರನ ಕ್ರಿ.ಶ. ೧೦೬೫ ಆಗಿದೆ. ಆದರೆ ಲಿಪಿಯು ಔಚಿನದ್ದಾಗಿರುವುದರಿಂದ, ಶಾಸನವು ಮೂಲ ಶಾಸನದ ಪ್ರತಿಯೆಂದು ಭಾವಿಸಲಾಗಿದೆ. ರಂಗಮಂಟಪದ ಪಕ್ಕದಲ್ಲಿರುವ (ಧಾ.ಜಿ.ಶಾ.ಸೂ, ಸಂ.ಗ. ೪೪; EI, XV, pp. 348) ಕಲ್ಯಾನ ಚಾಲುಕ್ಯ ಅರಸ ಆರನೆಯ ವಿಕ್ರಮಾದಿತ್ಯನ ಕ್ರಿ.ಶ. ೧೦೯೯ರ ತೇದಿಯ ಶಾಸನವು ದಂಡನಾಯಕ ಸೋಮೇಶ್ವರ ಭಟ್ಟೋಪಾಧ್ಯಾಯರಿಂದ ಲಕ್ಕುಂಡಿಯಲ್ಲಿ ಪ್ರಭಾಕರ ವ್ಯಾಖ್ಯಾನ ಶಾಲೆಯ ನಿರ್ಮಾಣ ಹಾಗೂ ದಾನವನ್ನು ಕುರಿತು ದಾಖಲಿಸಿದೆ. ವಿಕ್ರಮಾದಿತ್ಯನಿಂದ ವಿಕ್ರಮವರ್ಷ ಪ್ರಾರಂಭವಾಗಿರುವುದನ್ನು ಈ ಶಾಸನವು ತಿಳಿಸುತ್ತದೆ. ಉಮಾಮಹೇಶ್ವರ ವಿಗ್ರಹದ ಹತ್ತಿರವಿರುವ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೪೫) ಕ್ರಿ.ಶ. ೧೧ನೇ ಶತಮಾನಕ್ಕೆ ಸೇರಿದ್ದು, ವಾವನರಸನ ಪತ್ನಿ ರೇವಕಬ್ಬರಸಿ ಉಮಾಮಹೇಶ್ವರ ಶಿಲ್ಪ ಮಾಡಿಸಿದ್ದನ್ನು ತಿಳಿಸುತ್ತದೆ. ಪ್ರಕಾರದಲ್ಲಿರುವ ಆರನೇ ವಿಕ್ರಮಾದಿತ್ಯನ ಕ್ರಿ.ಶ. ೧೧೦೧ರ ಶಾಸನವು (ಧಾ.ಜಿ.ಶಾ.ಸೂ,ಸಂ.ಗ. ೪೬) ಮದ್ದಿಮಯ್ಯನಾಯಕನು ಶಂಕರನಾರಾಯಣ ದೇವಾಲಯ, ಕೆರೆ ಹಾಗೂ ಸತ್ರ ನಿರ್ಮಿಸಿ, ಭೂಮಿ ಮತ್ತು ಹಣವನ್ನು ದಾನ ಮಾಡಿದನೆಂದು ತಿಳಿಸುತ್ತದೆ. ಇಲ್ಲಿರುವ ಕಲಚುರಿ ಬಿಜ್ಜಳನ ಕ್ರಿ.ಶ. ೧೧೬೨ರ ಶಾಸನವು ಭೋಗೇಶ್ವರಿಗೆ ನೀಡಿದ ದಾನವನ್ನು ದಾಖಲಿಸಿದೆ (ಧಾ.ಜಿ.ಶಾ.ಸೂ, ಸಂ.ಗ. ೫೨; SII, XV, No. 103). ಮತ್ತೊಂದು ಶಾಸನವು ನಾಲ್ಕನೇ ಸೋಮೇಶ್ವರನ ಕ್ರಿ.ಶ. ೧೧೮೫ರ ಕಾಲಕ್ಕೆ ಸೇರಿದ್ದು, ವಿಷ್ಣುವರ್ಧನ ಬೀಚೆಸೆಟ್ಟಿಯು ದೇವರಿಗೆ ದಾನ ಮಾಡಿದುದನ್ನು ತಿಳಿಸುತ್ತದೆ (ಧಾ.ಜಿ.ಶಾ.ಸೂ, ಸಂ.ಗ. ೫೪; SII, XV, No. ೬೬). ಉತ್ತರ ದಿಕ್ಕಿನ ಪ್ರಕಾರದಲ್ಲಿರುವ ಇವನ ಕಾಲದ ಕ್ರಿ.ಶ. ೧೧೮೬ರ ಶಾಸನವು ವಿಷ್ಣುವರ್ಧನ ಬೀಚೆಸೆಟ್ಟಿಯಿಂದ ಯಮೇಶ್ವರದೇವರಿಗೆ ಹಣ ದಾನ ನೀಡಿದುದನ್ನು ದಾಖಲಿಸಿದೆ (ಧಾ.ಜಿ.ಶಾ.ಸೂ, ಸಂ.ಗ. ೫೫).

ಪ್ರಕಾರದ ಹೊರಗೆ ವಿಜಯನಗರ ಅರಸ ಕೃಷ್ಣದೇವರಾಯನ ಕಾಲದ ಕ್ರಿ.ಶ. ೧೫೨೦ರ ಶಾಸನವು ತಿಮ್ಮಪ್ಪನಾಯಕ ಅಯ್ಯನಿಂದ ಅರವಟ್ಟಿಗೆಗಳಿಗಾಗಿ ನಾಯನಪ್ಪ ನಾಯಕನಿಗೆ ಭೂದಾನ ಮಾಡಿದ ವಿಷಯವನ್ನು ಉಲ್ಲೇಖಿಸದೆ. (ಧಾ.ಜಿ.ಶಾ.ಸೂ, ಸಂ.ಗ. ೬೬). ಬಾವಿಯ ಬಳಿಯಿರುವ (ಧಾ.ಜಿ.ಶಾ.ಸೂ, ಸಂ.ಗ ೬೭ SII, XV, No. 253) ವಿಜಯನಗರ ಅರಸ ಅಚ್ಯುತರಾಯನ ಕ್ರಿ.ಶ. ೧೫೩೬ರ ಶಾಸನವು ಅರಸನಿಂದ ಬ್ರಾಹ್ಮಣರಿಗೆ ಆನಂಧನಿಧಿ ದಾನ ಹಾಗೂ ಕುಮಾರವ್ಯಾಸನನ್ನು ಉಲ್ಲೇಖಿಸುತ್ತದೆ. ಪೂರ್ವದಿಕ್ಕಿನ ಪ್ರಕಾರದಲ್ಲಿರುವ ಇದೇ ಅರಸನ ಕ್ರಿ.ಶ. ೧೫೪೦ರ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೬೯) ಆನಂದನಿಧಿ ದಾನದ ಬಗೆಗೆ ವಿವರಿಸುತ್ತದೆ.

ಗುಡಿಯ ಪೂರ್ವದಿಕ್ಕಿನ ಗೋಪುರದ ಮೇಲ್ಚಾವಣಿಯಲ್ಲಿರುವ ತೇದಿಯಿಲ್ಲದ ಶಾಸನವು ಬಾಯಿಕಟ್ಟೆಯಿಂದ ಭಟ್ಟವೃತ್ತಿ ಮತ್ತು ಚಟ್ಟವೃತ್ತಿಗಳಿಗೆ ಭೂಮಿ ಹಾಗು ಹಣದಾನ ನೀಡಿದ ವಿಷಯ ತಿಳಿಸುವುದು (ಧಾ.ಜಿ.ಶಾ.ಸೂ, ಸಂ.ಗ. ೭೨). ದಕ್ಷಿಣ ಗೋಪುರದ ಕಂಬದಲ್ಲಿರುವ ತೇದಿ ಇಲ್ಲದ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೭೩) ಮಹಾದೇವ ಮಂತ್ರಿಯಿಂದ ಕಲಿದೇವಸ್ವಾಮಿ ದೇವಾಲಯವೆಂದು ಕರೆಯುವ ಜೈನಮಂದಿರದ ಮಹಾಮಂಟಪ ಜೀರ್ಣೋದ್ಧಾರವನ್ನು ಕುರಿತು ಉಲ್ಲೇಖಿಸಿದೆ. ಕೋನೇರಿತೀರ್ಥದ ಹನುಮಂತದೇವರ ಗುಡಿ ಹಿಂದೆ ಇರುವ ಶಾಸನವು (ಧಾಜಿಶಾಸೂ ಸಂ.ಗ. ೭೪) ಲೊಕ್ಕಿಗೊಂಡಿಯ ಸಾವಿರ ಮಹಾಷಜರನ್ನು ಕುರಿತು ಉಲ್ಲೇಖಿಸಿದೆ. ಎರಡೂ ದೇವಾಲಯಗಳನ್ನು ಕಾಲಕಾಲಕ್ಕೆ ಜೀರ್ಣೋದ್ಧಾರ ಮಾಡಿರುವುದರಿಂದ, ಮೂಲ ವಾಸ್ತು ಶೈಲಿಗಳ ಬಗೆಗೆ ಖಚಿತವಾಗಿ ಹೇಳಲು ಕಷ್ಟಸಾಧ್ಯವಾಗಿದೆ.

ರಾಷ್ಟ್ರಕೂಟರ ಅರಸ ಕೃಷ್ಣ ಅಥವಾ ಕನ್ನರನ ಶಾಸನಗಳು ಜಿಲ್ಲೆಯಲ್ಲಿ ದೊರಕಿವೆ. ಇವನ ಬಹುತೇಕ ಶಾಸನಗಳು ತಮಿಳುನಾಡಿನ ಉತ್ತರ ಭಾಗದಲ್ಲಿ ದೊರಕಿವೆ. ಅರಸ ಕನ್ನರ ಉತ್ತರಭಾರತದಲ್ಲಿಯೂ ತನ್ನ ರಾಜ್ಯವನ್ನು ವಿಸ್ತರಿಸಿದ್ದನೆಂದು ಜಬ್ಬಲಪುರದ ಬಳಿಯ ಜುರಾದಲ್ಲಿ ದೊರಕಿರುವ ಕನ್ನಡ ಶಾಸನದಿಂದ ಸ್ಪಷ್ಟವಾಗುತ್ತದೆ. ಇವನ ಕಾಲದಲ್ಲಿ ಗದಗ ತಾಲೂಕಿನ ಸೊರಟೂರಿನ ದೇವಾಲಯಕ್ಕೆ ಸೇರಿದ ಮಠದ ವಿದ್ಯಾರ್ಥಿಗಳ ಪೋಷಣೆಗೆ ಪೆರ್ಗಡೆ ಆಚಪಯ್ಯ ಹಾಗೂ ಗೌಡ ಸಣ್ಣಕಟ್ಟೆಯಮ್ಮ ದಾನ ನೀಡಿರುವುದನ್ನು ಕ್ರಿ.ಶ. ೯೫೦ ಶಾಸನ ತಿಳಿಸುತ್ತದೆ. ಇವನ ನಂತರದ ಅರಸ ಖೊಟ್ಟಗನು ಗದಗ ತಾಲೂಕು ನಾಗಾವಿಯಲ್ಲಿರುವ ರಾಮೇಶ್ವರ ದೇವಾಲಯಕ್ಕೆ ವಿದ್ಯಾದಾನ ಮತ್ತ ಸತ್ರವನ್ನು ನಡೆಸಲು ಕ್ರಿ.ಶ. ೬೯೬ರಲ್ಲಿ ದಾನ ನೀಡಿದ್ದಾನೆ. ರೋಣ ತಾಲೂಕಿನ ಸವಡಿಯಲ್ಲಿನ ಶಾಸನವು ಕ್ರಿ.ಶ. ೯೭೧ರಲ್ಲಿ ಗಂಗರ ವಗ್ಸಯ್ಯನು ಶಿವಾಲಯ ನಿರ್ಮಿಸಿದನೆಂದು ತಿಳಿದುಬರುತ್ತದೆ. ಕುರ್ತುಕೋಟಿಯಲ್ಲಿ ಹಾಗೂ ಇತರೆ ಊರುಗಳಲ್ಲಿ ಅನೇಕ ಕೆರೆಗಳ ನಿರ್ಮಾಣ, ದೇವಾಲಯಗಖ ಜೀಣೋದ್ಧಾರ, ಬಸದಿಗಳ ನಿರ್ಮಾನ, ವಿದ್ಯಾದಾನಕ್ಕೆ ಪ್ರೋತ್ಸಾಹ, ಅಗ್ರಹಾರಗಳ ಸ್ಥಾಪನೆ ಮುಂತಾದ ಕಾರ್ಯಗಳು ಇವರ ಕಾಲದಲ್ಲಿ ಜರುಗಿವೆ. ಇವನ ಕಾಲದಲ್ಲಿ ಜಿಲ್ಲೆಯ ಅಸುಂಡಿ, ಕುರ್ತುಕೋಟಿ (ಗದಗ ತಾ) ಮೂಲಸ್ಥಾನ ದೇವರ (ಈಶ್ವರ) ಮತ್ತು ಆದಿತ್ಯ ದೇವಾಲಯಗಳು ಇದ್ದ ಬಗೆಗೆ ಉಲ್ಲೇಖವಿದೆ. ವೇಮುಂಡಿಯಲ್ಲಿ ಕುಪ್ಪೇಶ್ವರ ಮತ್ತು ಕೊಯಿಗೇಶ್ವರ ದೇವಾಲಯಗಳ ಬಗೆಗೆ ಶಾಸನಗಳು ಉಲ್ಲೇಖಿಸುತ್ತವೆ. ಇವರು ಗರುಡಧ್ವಜರಾದರೂ (ವೈಷ್ಣವ) ಇವರ ಕಾಲದಲ್ಲಿ ಶೈವ ದೇವಾಲಯಗಳು ನಿರ್ಮಿಸಿರುವುದು ಕುತೂಹಲಕಾರಿ ಅಂಶ.

ಇವರ ಕಾಲದಲ್ಲಿ ದೇವಾಲಯಗಳನ್ನು ನಿರ್ಮಿಸಿದ್ದರೂ, ನಂತರದ ಹಲವಾರು ಅರಸು ಮನೆತನಗಳವರು ಸತತವಾಗಿ ಜೀಣೋದ್ಧಾರ ಕಾರ್ಯ ಕೈಗೊಂಡಿದ್ದರಿಂದ, ಮೂಲ ಶೈಲಿಯು ಇಂದು ಕಾಣಸಿಗುವುದಿಲ್ಲ. ವಾಸ್ತುಶೈಲಿಯ ಕೆಲವೊಂದು ಅಂಶಗಳು ಮಾತ್ರವೇ ದೊರಕಿದ್ದು, ಅವುಗಳ ಸಹಾಯದಿಂದ ರಾಷ್ಟ್ರಕೂಟರ ದೇವಾಲಯ ವಾಸ್ತುಶೈಲಿಯನ್ನು ಅರಿಯಬಹುದಾಗಿದೆ.

ರಾಷ್ಟ್ರಕೂಟರ ತರುವಾಯ ಕಲ್ಯಾಣ ಚಾಲುಕ್ಯರು ಈ ಭಾಗದಲ್ಲಿ ತಮ್ಮ ಅಸ್ತಿತ್ವವನ್ನು ಮೆರೆದರು. ಇವರ ಕಾಲದಲ್ಲಿ ನಿರ್ಮಾಣಗೊಂಡ ನೂರಾರು ದೇವಾಲಯಗಳು ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಾದ ಹಾವೇರಿ, ಧಾರವಾಡ, ಬಳ್ಳಾರಿ, ರಾಯಚೂರು, ಬಾಗಲಕೋಟೆ ಮತ್ತು ದಾವಣಗೆರೆಗಳಲ್ಲಿ ಕಾಣಬಹುದು. ಜಿಲ್ಲೆಯಲ್ಲಿ ದೊರಕಿರುವ ಬಹುಪಾಲು ದೇವಾಲಯಗಳು ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ ಇರುವುದು ಗಮನಾರ್ಹ. ದೇವಾಲಯ ನಿರ್ಮಾಣದೊಂದಿಗೆ ಅವುಗಳ ನಿರ್ವಹಣೆ, ಜೀರ್ಣೋದ್ಧಾರ ಮುಂತಾದ ಕಾರ್ಯಗಳಿಗೆ ಅನೇಕ ದಾನ-ಕತ್ತಿಗಳನ್ನು ನೀಡಿ ದೇವಾಲಯ ಸಂಸ್ಕೃತಿಗೆ ಒಂದು ಹೊಸ ಆಯಾಮವನ್ನು ನೀಡಿದರೆಂಬುದರಲ್ಲಿ ಸಂಶಯವಿಲ್ಲ. ಹೊಸೂರಿನಲ್ಲಿ (ಗದಗ ತಾ.) ಆಯಿಚಗಾವುಂಡನೆಂಬುವನು ಬಸದಿಯನ್ನು (ಕ್ರಿ.ಶ. ೧೦೩೦) ಇವರ ಕಾಲದಲ್ಲಿ ಕಟ್ಟಸಿದನು. ಇಂದು ಇದು ಈಶ್ವರ ದೇವಾಲಯವಾಗಿ ಪರಿವರ್ತಿತವಾಗಿದೆ. ಲಕ್ಕುಂಡಿ (ಗದಗ ತಾ) ಹಾಗೂ ಲಕ್ಷ್ಮೇಶ್ವರಗಳಲ್ಲಿ (ಶಿಹಟ್ಟಿ ತಾ) ಇವರ ಕಾಲದ ಭವ್ಯ ಬಸದಿ ಹಾಗೂ ದೇವಾಲಯಗಳಿವೆ. ಮುಳುಗುಂದ-೩೦ ನಾಡಿನಲ್ಲಿ ಒಂದು ಬಸದಿಯು ಸೋಮೇಶ್ವರನ ಕಾಲದಲ್ಲಿ ನಿರ್ಮಿತವಾಯಿತೆಂದು ತಿಳಿಯಬರುತ್ತದೆ. ಇಲ್ಲಿಯೇ ಒಂದು ನಾಟಕಶಾಲೆಯು ಸಹ ನಿರ್ಮಾಣವಾಯಿತೆಂದು ಶಾಸನ ತಿಳಿಸುತ್ತದೆ. ದೇವಾಲಯದೊಂದಿಗೆ ಪ್ರಜಾಹಿತಾತ್ಮಕ ಕೆಲಸವಾಗಿ ರಾಜಪುತ್ರಿ ಅಕ್ಕಾದೇವಿಯು ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯಲ್ಲಿ ತುಂಗಭದ್ರಾ ನದಿಗೆ ಅಡ್ಡವಾಗಿ ಸೇತುವೆ (ಆಣೆಕಟ್ಟು)ಕಟ್ಟಿ ಅದರ ರಕ್ಷಣೆ ಮತ್ತು ನಿರ್ವಹಣೆಗೆ ಭೂದಾನ ಮಾಡಿರುವುದು ಒಂದು ಮಹತ್ವದ ಕಾರ್ಯವಾಗಿದೆ. ಈ ವಿಷಯವನ್ನು ಕ್ರಿ.ಶ. ೧೦೫೦ ಶಾಸನ ತಿಳಿಸುತ್ತದೆ.

ಇದೇ ವಂಶದ ಆರನೇ ವಿಕ್ರಮಾದಿತ್ಯನು (ಕ್ರಿ.ಶ. ೧೦೭೬-೧೧೨೭) ಕಲ್ಯಾಣ ಚಾಲುಕ್ಯ ಸಾಮ್ರಾಜ್ಯವನ್ನು ವಿಸ್ತರಿಸುವುದರೊಂದಿಗೆ ಅನೇಕ ದೇವಾಲಯ, ಕೆರೆ, ಜಲಾಶಯ, ಅಗ್ರಹಾರ ಮತ್ತು ಬಾವಿಗಳನ್ನು ಸ್ಥಾಪಿಸಿ ತನ್ನ ಹೆಸರನ್ನು ಅಜರಾಮರವಾಗಿಸಿಕೊಂಡ. ಇವನ ಕಾಲದಲ್ಲಿ ಆಸ್ಥಾನಕವಿ (ಕಾಶ್ಮೀರ ಮೂಲವಾಸಿ) ಬಿಲ್ಣನು ‘ವಿಕ್ರಮಾಂಕ ದೇವಚರಿತಂ’ ಕಾವ್ಯ ರಚಿಸಿದನು. ಕಾವ್ಯದ ನಾಯಕ ವಿಕ್ರಮಾಂಕನು ಅರಸ ವಿಕ್ರಮಾದಿತ್ಯನೇ ಆಗಿದ್ದಾನೆ. ಇವನ ಕಾಲದಲ್ಲಿ ಹಿಂದು ಕಾನೂನಿನ ಮೂಲ ಆಕರ ಗ್ರಂಥವೆಂದು ಪರಿಗಣಿತವಾಗಿರುವ ‘ಮಿತಾಕ್ಷರ’ವನ್ನು ವಿಜ್ಞಾನೇಶ್ವರನು ರಚಿಸಿದ್ದಾನೆ. ಅನೇಕ ಮಹತ್ವದ ಸಾಹಿತ್ಯ ಕೃತಿಗಳು ಇವನ ಕಾಲದಲ್ಲಿಯೇ ರಚನೆಯಾದವು. ಅನೇಕಾನೇಕ ಕವಿಗಳು ತಮ್ಮ ಪ್ರತಿಭೇಯನ್ನು ತೋರಿದ್ದು ಈ ಅರಸನ ಉತ್ತೇಜನದಿಂದಲೇ ಎಂದರೆ ಅತಿಶಯೋಕ್ತಿಯಾಗಲಾರದು. ಇವನ ಕಾಲದಲ್ಲಿ ಗದುಗಿನ ಶಂಕರನಾರಾಯಣಗುಡಿ, ಲಕ್ಷ್ಮೇಶ್ವರದ ಸೋಮನಾಥ ದೇವಾಲಯಕ್ಕೆ ದಾನ ಹಾಗೂ ಸೂಳಿಗೆರೆ ಮತ್ತು ಚಿಕ್ಕಹಂದಿಗೋಳದಲ್ಲಿ ಮಾಧವೇಶ್ವರ ದೇವಾಲಯ ನಿರ್ಮಿಸಿದನೆಂದು ತಿಳಿಯಬರುತ್ತದೆ.

ಲಕ್ಕುಂಡಿಯ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖ ಮಂಟಪಗಳಿಂದ ಕೂಡಿದೆ. ಗರ್ಭಗೃಹದಲ್ಲಿ ಚೌಚಾಚಾರದ ಲಿಂಗವಿದೆ. ಪಶ್ಚಿಮ, ದಕ್ಷಿಣ ಮತ್ತು ಉತ್ತರದ ಭಿತ್ತಗಳಲ್ಲಿ ಗೂಡುಗಳಿವೆ. ಇದರ ಛತ್ತಿನಲ್ಲಿ ಬಹು ದಳದ ತಾವರೆ ಇದೆ. ಬಾಗಿಲವಾಡವು ವಜ್ರ, ನಾಗ, ನಾಗಿಣಿ, ಗಂಧರ್ವ, ಸ್ತಂಭ, ಲತಾ, ಶಾಖೆಗಳಿಂದ ಅಲಂಕೃತವಾಗಿದ್ದು ಅದರ ಕೆಳಭಾಗದಲ್ಲಿ ಚಾಮರ ಧಾರಿಣಿಯರಿದ್ದಾರೆ. ತೆರೆದ ಅಂತರಾಳದ ಛತ್ತಿನಲ್ಲಿ ಅರಳಿದ ಬಹು ದಳಗಳ ತಾವರೆ ಇದೆ. ಇದರ ಉತ್ತರ ಮತ್ತು ದಕ್ಷಿಣದ ಭಿತ್ತಿಗಳಲ್ಲಿ ಜಾಲಾಂಧ್ರಗಳಿವೆ.

ನವರಂಗದ ಮಧ್ಯಭಾಗದಲ್ಲಿ ಸ್ವಲ್ಪ ಎತ್ತರದ ವೇದಿಕೆಯ ಮೇಲೆ ನಾಲ್ಕು ಕಂಬಗಳಿವೆ. ಇವುಗಳನ್ನು ಗಂಟೆ, ಮಾಲೆಗಳಿಂದ ಅಲಂಕರಿಸಲಾಗಿದೆ. ಕಂಬ ಬೋಧಿಗೆ ಮತ್ತು ತೊಲೆಗಳಲ್ಲಿ ವಿವಿಧ ಶಿಲ್ಪಗಳಿಂದ ಅಲಂಕರಿಸಲಾಗಿದೆ. ಇಲ್ಲಿನ ಭುವನೇಶ್ವರಿಯಲ್ಲಿ ಅರಳಿದ ಬಹು ದಳಗಳ ತಾವರೆ ಇದೆ.

ನವರಂಗದ ಒಳಭಾಗದ ಭಿತ್ತಿಯಲ್ಲಿನ ಗೋಡೆಗಂಭಗಳು ಹೆಚ್ಚು ಹೊರ ಬಂದಿರುವುದರಿಂದ ಪ್ರತಿ ಭಾಗದಲ್ಲೂ ಗೂಡುಗಳು ನಿರ್ಮಾಣವಾಗಿವೆ. ವಾಯುವ್ಯ ಭಾಗದ ಗೂಡಿನಲ್ಲಿ ಸಪ್ತಮಾತೃಕೆಯರು ಮತ್ತು ದಕ್ಷಿಣ ಭಾಗದ ಗೂಡನ್ಲಲಿ ಗಣೇಶನ ಶಿಲ್ಪಗಳನ್ನಿಡಲಾಗಿದೆ. ನವರಂಗವನ್ನು ಪ್ರವೇಶಿಸಲು ದಕ್ಷಿಣ ಹಾಗೂ ಪೂರ್ವದಲ್ಲಿ ಪ್ರವೇಶ ದ್ವಾರಗಳಿದ್ದು, ಅವು ನನ್ನೇಶ್ವರ ದೇವಾಲಯದ ದ್ವಾರಗಳಂತೆ ಅಲಂಕೃತವಾಗಿವೆ. ದಕ್ಷಿಣ ದ್ವಾರದ ಲಲಾಟದ ಮೇಲಿನ ಭಾಗದಲ್ಲಿ ಏಕದಶರುದ್ರ, ಅದರ ಮೇಲೆ ಶಿವನ ಶಿಲ್ಪಗಳಿದ್ದು ನಯನಮನೋಹರವಾಗಿದೆ. ಲಕ್ಷ್ಮೇಶ್ವರದ ಊರಿನ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ಸೋಮನಾಥ ದೇವಾಲಯವು ಪ್ರಸಿದ್ಧಿಯನ್ನು ಪಡೆದಿದೆ. ಈ ಗುಡಿಯನ್ನು ಪುಲಿಗೆರೆ ಸೋಮೇಶ್ವರ ದೇವಾಲಯ ಎಂದೂ ಕರೆಯಲಾಗುತ್ತದೆ. ಪ್ರಸ್ತುತ ದೇವಾಲಯವು ಪೂರ್ವ, ಉತ್ತರ ಮತ್ತ ದಕ್ಷಿಣ ಭಾಗಗಳಲ್ಲಿ ಮೂರು ಅಗಸೆ ದ್ವಾರಗಳನ್ನು ಹೊಂದಿದ್ದು, ಪ್ರಾಚೀನ ಕೋಟೆಯ ಒಳಭಾಗದಲ್ಲಿದೆ.

ಈ ದೇವಾಲಯವು ಅತ್ಯಂತ ಸಂಕೀರ್ಣತೆಯಿಂದ ಕೂಡಿದ್ದು, ದೇವಾಲಯದ ಒಳಗೆ ಹಲವಾರು ಕಿರು ದೇವಾಲಯಗಳಿರುವುದರಿಂದ, ಇದನ್ನು ದೇವಾಲಯ ಸಮುಚ್ಚಯವೆಂದು ಕರೆಯುವುದು ಹೆಚ್ಚು ಸಮಂಜಸ. ಮುಖ್ಯ ದೇವಾಲಯವು ಪೂರ್ವಾಭಿಮುಖವಾಗಿದೆ. ಇದರಲ್ಲಿ ಗರ್ಭಗೃಹ, ಅಂತರಾಳ, ನವರಂಗ ಮತ್ತು ವಿಶಾಲವಾದ ಮುಖಮಂಟಪಗಳಿವೆ. ಗರ್ಭಗೃಹವನ್ನು ಇತ್ತೀಚಿನ ದಿನಗಳಲ್ಲಿ ನವೀಕರಿಸಲಾಗಿದ್ದು, ಒಳಭಿತ್ತಿಯಲ್ಲಿ ಹಾಗೂ ನೆಲಕ್ಕೆ ಹೊಳಪುಕಲ್ಲುಗಳನ್ನು (ಟೈಲ್ಸ್) ಅಳವಡಿಸಿರುವುದರಿಂದ ಪ್ರಾಚೀನ ಅಂಶಗಳು ಗೋಚರಿಸುವುದಿಲ್ಲ. ಅಂತರಾಳ ಭಾಗವನ್ನು ಸಹ ಇದೇ ರೀತಿಯಾಗಿ ನವೀಕರಿಸಿರುವುದರಿಂದ ಪ್ರಾಚೀನ ಅಂಶಗಳು ಇಂದು ನಮಗೆ ಲಭ್ಯವಿಲ್ಲ. ಗರ್ಭಗೃಹದಲ್ಲಿ ಸಾಮಾನ್ಯವಾಗಿ ಶಿವನನ್ನು ಲಿಂಗದ ರೂಪದಲ್ಲಿ ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ಆದರೆ ಇಲ್ಲಿ ಲಿಂಗರೂಪಿ ಶಿವನ ಬದಲು ವೃಷಭಾರೂಡ ಶಿವ ಮತ್ತು ಪಾರ್ವತಿಯ ಅತೀ ಸುಂದರ ಶಿಲ್ಪವನ್ನು ಮೂರ್ತಿರೂಪದಲ್ಲಿ ಪೂಜಿಸಲಾಗುತ್ತದೆ. ಶಿವನು ನಂದಿಯ (ವೃಷಭ) ಮೇಲೆ, ಮುಂಭಾಗದಲ್ಲಿ ಕುಳಿತಿದ್ದು ಅವನ ಹಿಂಭಾಗದಲ್ಲಿ ಪಾರ್ವತಿಯು ಕುಳಿತಿದ್ದಾಳೆ. ಈ ಶಿಲ್ಪವು ಕಲ್ಯಾಣ ಚಾಲುಕ್ಯ ಶೈಲಿಯಲ್ಲಿದ್ದು ಅತ್ಯಂತ ಸುಂದರವಾಗಿದೆ. ಇದು ಅಪರೂಪವೂ ಹೌದು. ಅಂತರಾಳದ ಬಾಗಿಲು ನವರಂಗಕ್ಕೆ ತೆರೆದುಕೊಳ್ಳುತ್ತದೆ. ಅದರ ಬಾಗಿಲವಾಡವು ಕೆಲವು ಅಲಂಕರಣೆಗಳಿಂದ ಕೂಡಿದ್ದು, ಅದರ ಇಕ್ಕೆಲಗಳಲ್ಲಿ ಜಾಲಾಂಧ್ರಗಳಿವೆ. ನವರಂಗದಲ್ಲಿ ಘನಾಕೃತಿಯ ನಾಲ್ಕು ಕಂಬಂಗಲು ಭುವನೇಶ್ವರಿ ಭಾಗವನ್ನು ಆಧರಿಸಿವೆ. ನವರಂಗದ ಕೆಳಭಾಗದಲ್ಲಿ ವೇದಿದೆಯಿದೆ. ನವರಂಗದ ಬಲಭಾಗದಲ್ಲಿ ಒಂದು ಶಿವಲಿಂಗ ಹಾಗೂ ಗಣಪತಿಯ ಮೂರ್ತಿಶಿಲ್ಪವನ್ನು ಒಂದು ಕಟ್ಟೆಯ ಮೇಲೆ ಪ್ರತಿಷ್ಠಾಪಿಸಲಾಗಿದೆ. ಈ ಲಿಂಗವನ್ನು ಆದಯ್ಯನ ಲಿಂಗವೆಂದು ಕರೆಯಲಾಗುತ್ತದೆ. ಆದಯ್ಯನು ಪರಮ ಶಿವಭಕ್ತನಾಗಿದ್ದು ಅವನು ಈ ದೇವಾಲಯದಲ್ಲಿದ್ದ ಜೈನ ಮೂರ್ತಿಯನ್ನು ಭಗ್ನಗೊಳಿಸಿ ಶಿವನ ಮೂತಿಯನ್ನು ಪ್ರತಿಷ್ಠಾಪಿಸಿದನೆಂದು ಹರಿಹರನ ಆದಯ್ಯನ ರಗಳೆಯಲ್ಲಿ ಪ್ರಸ್ತಾಪಿಸಲಾಗಿದೆ. ನವರಂಗದ ಪೂರ್ವ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಪ್ರವೇಶ ದ್ವಾರಗಳಿವೆ. ಪೂರ್ವ ದ್ವಾರದ ಮುಂದೆ ಮುಖ ಮಂಟಪವಿದೆ. ಉತ್ತರ ಮತ್ತು ದಕ್ಷಿಣ ದ್ವಾರಗಳ ಮುಂಭಾಗದಲ್ಲಿ ಪ್ರವೇಶ ಮಂಟಪಗಳನ್ನು ನಿರ್ಮಿಸಿದ್ದು, ಅದರಲ್ಲಿ ಕಿರು ಕಕ್ಷಾಸನವಿದೆ.

ನವರಂಗದ ಮುಂಭಾಗದಲ್ಲಿ, ಅದಕ್ಕೆ ಹೊಂದಿಕೊಂಡಂತೆ ಅಂತರಾಳ ಭಾಗವೆಂದು ಕರೆಯಬಹುದಾದ ವಾಸ್ತು ಭಾಗದ ಮುಂದೆ ಹಲವಾರು ಅಲಂಕೃತ ಕಂಬಗಳ ಮುಖ ಮಂಟಪವಿದೆ. ಇದಕ್ಕೂ ಪೂರ್ವ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಪ್ರವೇಶ ದ್ವಾರಗಳಿವೆ. ಮುಖಮಂಟಪದ ಭುವನೇಶ್ವರಿಯನ್ನು ಆಕರ್ಷಕವಾಗಿ ಅಲಂಕರಿಸಲಾಗಿದೆ. ಅದರಲ್ಲಿ ಹೆಚ್ಚಾಗಿ ಕೆಳಮುಖ ಅಥವಾ ಅಧೋಮುಖದ ಕಮಲದ ಹೂವಿನ ಕೆತ್ತನೆಯಿದೆ. ದೇವಾಲಯಕ್ಕೆ ಅಧಿಷ್ಠಾನ ಮತ್ತು ಗರ್ಭಗೃಹದ ಮೇಲೆ ಬಹುಕೋನಾಕಾರದ ಕದಂಬ ನಾಗರ ಶೈಲಿಯ ಶಖರವಿದೆ. ಶಿಖರದಲ್ಲಿ ಇಂದು ಕಾಣುತ್ತಿರುವ ಲೋಹದ ಕಲಶವನ್ನು ರಂಭಾಪುರಿಯ ಪಂಚಾಚಾರ್ಯ ವೀರಗಂಗಾಧರ ಸ್ವಾಮಿಗಳು ಪ್ರತಿಷ್ಠಾಪಿಸಿದರೆಂದು ತಿಳಿದುಬರುತ್ತದೆ. ದೇವಾಲಯದ ಹೊರಭಾಗದ ಭಿತ್ತಿಗಳಲ್ಲಿ ಹಲವಾರು ದೇವತೆಗಳ ಮೂರ್ತಿಶಿಲ್ಪಗಳನ್ನು ಕೆತ್ತಲಾಗಿದೆ. ಕಾಲನ ತುಳಿತಕ್ಕೆ ಸಿಲುಕಿ ಇಂದು ಅನೇಕ ಶಿಲ್ಪಗಳು ನಶಿಸಿವೆ. ಉಳಿದಿರುವ ಶಿಲ್ಪಗಳು ಅಂದಿನ ಕಲಾ ಶೈಲಿಯನ್ನು ನಮ್ಮ ಮುಂದಿಡುತ್ತವೆ. ಆರು ಬಾಹುಗಳ ಶಿವ, ಗಣೇಶ, ಅಷ್ಟದಿಕ್ಪಾಲಕರು, ಯಕ್ಷ, ಯಕ್ಷಿಯ, ಗಂಧರ್ವ ಮತ್ತು ಸಾಲಭಂಜಿಕೆಯರ ಶಿಲ್ಪಗಳು ಪ್ರಮುಖವಾಗಿ ಗಮನ ಸೆಳೆಯುತ್ತವೆ. ಹೊರಭಾಗದ ಛಾವಣಿಯಲ್ಲಿ ವಿಷ್ಣು, ಭೈರವ, ನಟರಾಜ, ಗಣಪತಿ, ವೀರಭದ್ರ, ಹರಿಹರ, ವೇಣುಗೋಪಾಲ ಮುಂತಾದ ಶಿಲ್ಪಗಳಿವೆ. ದಕ್ಷಿಣದಲ್ಲಿ ಕೆತ್ತಲಾಗಿರುವ ಒಂದು ಧ್ಯಾನಸಕ್ತ ಆಸೀನ ಮೂರ್ತಿಶಿಲ್ಪ ಇದೆ. ಅದು ಜಿನನನ್ನು ಹೋಲುತ್ತದೆ. ಅದರ ಮೇಲೆ ಮುಕ್ಕೊಡೆಯಿರುವುದರಿಂದ ವಿದ್ವಾಂಸರ ಚರ್ಚೆಗೆ ಗ್ರಾಸವಾಗಿದೆ. ಗುಡಿಯ ದಕ್ಷಿಣ ಶಿಕರಭಾಗದಲ್ಲಿ ಬ್ರಹ್ಮ, ಶಿವ, ಯಕ್ಷರನ್ನು, ಪಶ್ಚಿಮದಲ್ಲಿ ಶಕ್ತಿ, ಸರಸ್ವತಿಯರನ್ನು ಮತ್ತು ಉತ್ತರಭಾಗದಲ್ಲಿ ದೇವತೆಗಳ ವಿವಿಧ ಅವತಾರಗಳನ್ನು ಕೆತ್ತಲಾಗಿದೆ.

ದೇವಾಲಯ ಸಮುಚ್ಚಯದಲ್ಲಿ ಪಶ್ಚಿಮಾಭಿಮುಖವಾಗಿ, ಎರಡು, ದಕ್ಷಿಣಾಭಿಮುಖವಾಗಿ ಮೂರು, ಉತ್ತರಾಭಿಮುಖವಾಗಿ ಮೂರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿವೆ. ಇವುಗಳು ಸಾಮಾನ್ಯವಾಗಿ ಗರ್ಭಗೃಹ ಮತ್ತು ನವರಂಗ ಭಾಗಗಳನ್ನು ಹೊಂದಿವೆ. ಕೆಲವು ಗುಡಿಗಳಲ್ಲಿ ಲಿಂಗ ಅಥವಾ ಬೇರೆ ಮೂರ್ತಿಶಿಲ್ಪಗಳು ಇದ್ದರೆ, ಇನ್ನುಳಿದವುಗಳಲ್ಲಿ ಯಾವ ದೇವತೆಯ ಮೂರ್ತಿಶಿಲ್ಪಗಳಿಲ್ಲ. ದೇವಾಲಯಗಳನ್ನು ಸಾಲುದೀಪ ಮಂಟಪಗಳೆಂದು ಕೆಲವರು ಉಲ್ಲೇಖಿಸುತ್ತಾರೆ. ಇವುಗಳಲ್ಲಿ ಕೆಲವು ಅತ್ಯಂತ ಶಿಥಿಲಾವಸ್ಥೆಯಲ್ಲಿವೆ. ದೇವಾಲಯದ ಪಕ್ಕದಲ್ಲಿ, ಉತ್ತರಕ್ಕೆ, ಗಣಪತಿಯ ಗುಡಿಯಿದೆ. ಅದರ ಹಿಂಭಾಗ ಒಂದು ದ್ವಿಕೂಟ ದೇವಾಲಯವಿದ್ದು, ಅದರಲ್ಲಿ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ಅದರ ಮುಂಭಾಗವಿರುವ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಕಕ್ಷಾಸನವಿದೆ. ಈ ಗುಡಿಗಳು ವಿಜಯನಗರೋತ್ತರ ಕಾಲದ್ದೆಂದು ಅಭಿಪ್ರಾಯಪಡಲಾಗಿದೆ.

ಗುಡಿಯ ಉತ್ತರ ದ್ವಾರದ ಮುಂದೆ ಒಂದು ಹೊಂಡವಿದೆ. ಅಲ್ಲಿಂದ ಮುಂದೆ ಸಾಗಿದರೆ ಮತ್ತೊಂದು ಪ್ರವೇಶ ದ್ವಾರವಿದೆ. ಈ ದ್ವಾರದ ಮುಂಭಾಗದಲ್ಲಿ ಕೆಲವು ಶಾಸನ ಕಲ್ಲು ಹಾಗೂ ವೀರಗಲ್ಲುಗಳನ್ನು ಸಾಲಾಗಿ ಇರಿಸಲಾಗಿದೆ. ಪ್ರವೇಶ ದ್ವಾರದಿಂದ ಹೊರ ದ್ವಾರದವರೆಗೆ ಇಕ್ಕೆಲಗಳಲ್ಲಿ ೬ ಸೋಪಾನಗಳಿರುವ ಉದ್ದನೆಯ ಕಟ್ಟೆಯಿದೆ. ಇದರ ಹಿಂಭಾಗದಲ್ಲಿಯೂ ಕೆಲವು ಸಾಲುಮಂಟಪಗಳು ಇದ್ದಿರಬೇಕು. ಅವುಗಳು ಇಂದು ಅತಿಕ್ರಮಣಕ್ಕೆ ಒಳಗಾಗಿ ನಶಿಸಿವೆ. ದಕ್ಷಿಣ ದ್ವಾರಮಂಟಪದಲ್ಲಿ ನಗಾರಿಖಾನೆಯಿದ್ದು ವಿಜಯನಗರ ಕಾಲದ ಸಾಲಭಂಜಿಕೆಯರ ಉಬ್ಬುಶಿಲ್ಪ ಹಾಗೂ ಕಂಬಗಳಿವೆ. ಇದೇ ದ್ವಾರದ ಎಡ ಬದಿಯಲ್ಲಿ ಸೋಮೇಶ್ವರ ಹಾಗೂ ಶಿವರಾಮ ಒಡೆಯರ ಮೂತಿ ಶಿಲ್ಪಗಳಿವೆ.

ಮುಖ್ಯ ದೇವಾಲಯದ ಹಿಂಭಾಗದಲ್ಲಿ ಒಂದು ದೊಡ್ಡ ಬಾವಿಯಿದ್ದು, ಅದಕ್ಕೆ ಸುಂದರವಾದ ಪಾವಟಿಗೆಗಳನ್ನು ಇರಿಸಲಾಗಿದೆ. ಧಾರವಾಡ ಜಿಲ್ಲೆ ಗ್ಯಾಸೆಟಿಯರ್, ಇದನ್ನು ಪುಷ್ಕರಣಿಯೆಂದು ನಮೂದಿಸಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿನ ‘ಪುಷ್ಕರಣಿ’ಯ ಹೂಳನ್ನು ತೆಗೆದು ಸ್ವಚ್ಛಗೊಳಿಸಿದಾಗ ಸುಂದರವಾದ ಬಾವಿಯು ಬೆಳಕಿಗೆ ಬಂದಿದೆ. ಈ ಪುಷ್ಕರಣಿಯನ್ನು ಗೌರಿ ಎಂಬ ಭಕ್ತೆಯು ಕಟ್ಟಸಿದಳೆಂದು ಸ್ಥಳೀಯರು ತಿಳಿಸುತ್ತಾರೆ. ಪ್ರಸ್ತುತ ಬಾವಿಗೆ ಸಂಬಂಧಿಸಿದಂತೆ ಇತ್ತೀಚೆಗೆ (೨೦೦೫) ಒಂದು ಶಾಸನವು ಪತ್ತೆಯಾಗಿದೆ. ದೇವಾಲಯಕ್ಕೆ ಸಂಭಂಧಿಸಿದಂತೆ ೪೦ಕ್ಕೂ ಹೆಚ್ಚಿನ ಶಾಸನಗಳು ದೊರಕಿವೆ. ಕ್ರಿ.ಶ. ೧೩೫೩ರ ವಿಜಯನಗರ ಕಾಲದ ಶಾಸನವು ಚಳ್ಳಕೆರೆ ನಾಯಕನೆಂಬ ಅಧಿಕಾರಿಯು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುವುದನ್ನು ತಿಳಿಸಿದರೆ, ಕ್ರಿ.ಶ. ೧೩೯೨ರ ಮತ್ತೊಂದು ಶಾಸನವು ದೇವಾಲಯದ ದಕ್ಷಿಣ ದ್ವಾರವನ್ನು ಜೀರ್ಣೋದ್ಧಾರ ಮಾಡಿದುದನ್ನು ಉಲ್ಲೇಖಿಸುತ್ತದೆ.

ದೇವಾಲಯದಲ್ಲಿ ಇಂದಿಗೂ ಪೂಜೆಯು ನಡೆಯುತ್ತಿದೆ. ಈ ಸಮಯದಲ್ಲಿ ಪಠಿಸುವ ಒಂದು ಶ್ಲೋಕದಲ್ಲಿ ಇಲ್ಲಿಯ ಸೋಮನಾಥನು ಸೌರಾಷ್ಟ್ರದಿಂದ ಬಂದನೆಂದು ತಿಳಿಸುವ ಮೂಲಕ ದೇವರ ಮೂಲದ ಬಗೆಗೆ ವಿವರಿಸುತ್ತದೆ. ಸಾಹಿತ್ಯದಲ್ಲಿ ಈ ಕುರಿತು ಕೆಲವು ಉಲ್ಲೇಖಗಳು ನಮಗೆ ದೊರಕುತ್ತವೆ. ಈಗಾಗಲೇ ಪ್ರಸ್ತಾಪಿಸಿದಂತೆ ಶಿವಭಕ್ತ ಆದಯ್ಯನು ಸೌರಾಷ್ಟ್ರದಲ್ಲಿರುವ ಸೋಮನಾಥನಂತೆ ಮೂರ್ತಿಯನ್ನು ಮಾಡಿಸಿ ಇಲ್ಲಿ ಪ್ರತಿಷ್ಠಾಪಿಸಿದನೆಂದು ನಂಬಲಾಗಿದೆ. ಪಾಲ್ಕುರಿಕೆ ಸೋಮನಾಥನ ‘ಪಂಡಿತಾರಾಧ್ಯ ಚರಿತ್ರಮು’ ಮತ್ತು ಭೀಮಕವಿಯ ‘ಬಸವಪುರಾಣ’, ಮತ್ತು ‘ವೀರಶೈವಾಮೃತ ಪುರಾಣ’, ಲಕ್ಕಣ ದಂಡೇಶನ ‘ಶಿವತತ್ವ ಚಿಂತಾಂಣಿ, ರಾಘವಾಂಕನ ‘ಸೋಮನಾಥ ಚರಿತೆ’ ಎಂಬ ಮುಂತಾದ ಹಳಗನ್ನಡ ಸಾಹಿತ್ಯ ಗ್ರಂಥಗಳಲ್ಲಿ ಈ ದೇವರನ್ನು ಕುರಿತು ಪ್ರಸ್ತಾಪಿಸಲಾಗಿದೆ. ಕಾವ್ಯಗಳಲ್ಲಿನ ವಿವರಣೆಯಂತೆ ಆದಯ್ಯನು ಸೌರಾಷ್ಟ್ರದಿಂದ ಪುಲಿಗೆರೆಗೆ (ಲಕ್ಷ್ಮೇಶ್ವರ) ಬಂದು ಇಲ್ಲಿಯ ಜೈನ ಪಾರಿಸೆಟ್ಟಿಯ ಮಗಳು ಪದ್ವಾವತಿಯನ್ನು ಮೋಹಿಸಿ ನಂತರ ಮದುವೆಯಾಗುತ್ತಾನೆ. ಅವನ ಪತ್ನಿಯು ತಂದೆಯ ಮಾತಿಗೆ ಕಿವಿಗೊಡದೆ ಹೂಜೇಶ್ವರ ದೇವಸ್ಥಾನದಲ್ಲಿ ಶಿವದೀಕ್ಷೆಯನ್ನು ಪಡೆದು ಜೈನ ಮತವನ್ನು ತೊರೆಯುತ್ತಾಳೆ. ಶಿವನ ಮಹಿಮೆ ಹಾಗೂ ಹಿರಿಮೆಯನ್ನು ಲೋಕಕ್ಕೆ ಸಾರಲು ಆದಯ್ಯನೇ ಸೌರಾಷ್ಟ್ರದ ಸೋಮೇಶ್ವರನನ್ನು ಪುಲಿಗೆರೆಗೆ ತಂದು ಪ್ರತಿಷ್ಠಾಪಿಸಿದನೆಂದು ಹೇಳಲಾಗುತ್ತದೆ. ಅದರಂತೆಯೇ ಈ ದೇವಾಲಯವು ಮೂಲತಃ ಜೈನ ಬಸದಿಯಾಗಿದ್ದು, ಅದರಲ್ಲಿ ಶಿವನನ್ನು ಪ್ರತಿಷ್ಠಾಪಿಸುವ ಮೂಲಕ ಶಿವಾಲಯವಾಗಿ ಪರಿವರ್ತಿಸಿದನು ಎನ್ನಲಾಗುತ್ತದೆ. ಆದರೆ ದೇವಾಲಯದಲ್ಲಿ ಜೈನರ ಶಿಲ್ಪ ಅಥವಾ ಜಿನ ಬಿಂಬಗಳು ಹಾಗೂ ಇನ್ನಿತರೆ ಪುರಾವೆಗಳು ದೊರಕಿಲ್ಲ. ಸಾಹಿತ್ಯದಲ್ಲಿ ಮಾತ್ರವೇ ಇದರ ಪ್ರಸ್ತಾಪವಿದೆ. ಪ್ರಾಚೀನ ಕರ್ನಾಟದಲ್ಲಿ ಶೈವ ಮತ್ತು ಜೈನ ಸಮುದಾಯದವರ ನಡುವೆ ಮತೀಯ ಸಂಘರ್ಷಗಳು ಆಗಾಗ ನಡೆಯುತ್ತಿದ್ದವು. ಆ ಧರ್ಮೀಯರು ಹೊಂದಿದ್ದ ಬಲಗಳ ಮೇಲೆ ನಿರ್ಣಯಗಳು ಆಗುತ್ತಿದ್ದವು.

ಸೋಮೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಅನೇಕ ಶಾಸನಗಳಿವೆ. ಕಲ್ಯಾಣ ಚಾಲುಕ್ಯರಿಂದ ವಿಜಯನಗರ ಅರಸರವರೆಗಿನ ಅನೇಕ ಶಾಸನಗಳು ದೇವಾಲಯಕ್ಕೆ ನೀಡಿದ ದಾನ-ದತ್ತಿ ಜೀರ್ಣೋದ್ಧಾರ ಕಾರ್ಯ, ಹಾಗೂ ಇದೇ ಸಮುಚ್ಚಯದಲ್ಲಿ ಹೊಸ ದೇವಾಲಯಗಳ ನಿರ್ಮಾಣ ಮತ್ತು ಹಲವಾರು ಮಹತ್ವದ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ನೆರವೇರಿಸಿರುವ ಬಗೆಗೆ ಮಾಹಿತಿಗಳಿವೆ.

ಕಲ್ಯಾಣ ಚಾಲುಕ್ಯ ಅರಸರ ಕಾಲದಲ್ಲಿ ದೇವಾಲಯಗಳು ಹೊಸ ಚೈತನ್ಯವನ್ನು ಪಡೆದವು. ಗುಡಿಗೆ ಸಾಮಾನ್ಯವಾಗಿ ಅಧಿಷ್ಠಾನವಿದ್ದು, ಅದರಲ್ಲಿ ಉಪಾಸನ, ಗಳ, ಕುಮುದ ಮತ್ತು ಜಗತಿ ಭಾಗಗಳಿರುತ್ತವೆ. ಭಿತ್ತಿಯು ಸರಳ ರಚನೆಯಿಂದ ಕೂಡಿರುತ್ತವೆ. ತಲಗಳುಳ್ಳ ಶಿಖರ ಭಾಗವನ್ನು ಕೆಲವೊಂದು ದೇವಾಲಯಗಳಲ್ಲಿ ಮಾತ್ರ ಕಾಣಬಹುದು. ಡಂಬಳ, (ಮುಂಡರಗಿ), ಲಕ್ಕುಂಡಿ, ಗದಗ ಮತ್ತು ಲಕ್ಷ್ಮೇಶ್ವರದಲ್ಲಿ ತಲಗಳುಳ್ಳ ಶಿಖರ ಭಾಗಗಳನ್ನು ಕಾಣಬಹುದು. ಇವರ ರಾಜಕೀಯ ಉತ್ತರಾಧಿಕಾರಿಗಳಾದ ಕಲಚೂರಿಗಳು ಕ್ಲಲ್ಯಾಣ ಚಾಲುಕ್ಯ ಶೈಲಿಯನ್ನು ಯಥಾವತ್ತಾಗಿ ಮುಂದುವರಿಸಿರುವರು. ಹಲವಾರು ಕಿರು ಅರಸುಮನೆಗನದವರು ಕಲ್ಯಾಣ ಚಾಲುಕ್ಯರ ಶೈಲಿಯನ್ನೇ ಮುಂದುವರೆಸಿರುವರು. ಮುಂಡರಗಿಯು ಕೋಟೆಯ ಆವರಣದಲ್ಲಿ ಜೈನಬಸದಿ ಇರುವ ಉಲ್ಲೇಖವನ್ನು ಕೆಲವು ವಿದ್ವಾಂಸರು ಮಾಡಿದ್ದಾರೆ. (ಮಹಾಲಿಂಗ ಯಾಳಗಿ (ಸಂ) ಮುಂಡರಗಿ ನಾಡ ದರ್ಶನ. ಪು. ೧೨). ಆದರೆ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಅಂಥ ಯಾವ ಕುರುಹುಗಳು ಕಂಡುಬಂದಿಲ್ಲ. ಜೈನ ಬಸದಿಯಲ್ಲದೇ ‘ನಗರ ಜಿನಾಲಯ’ದ ಉಲ್ಲೇಖ ಸಹ ಶಾಸನದಲ್ಲಿದೆ (ಧಾಜಿಶಾಸೂ, ಪು. ೪೦). ಕಲ್ಯಾಣ ಚಾಲುಕ್ಯೊಂದನೆಯ ಸೋಮೇಶ್ವರನ ಕಾಲದ ಕ್ರಿ.ಶ. ೧೦೫೯ರ ತೇದಿವುಳ್ಳ ಶಾನವೊಂದು ನಗರ ಜಿನಾಲಯ ಕುರಿತು ಮಾಹಿತಿ ನೀಡುತ್ತದೆ. ಈ ಶಾಸನದಲ್ಲಿ ಧರ್ಮವೊಲ (ಡಂಬಳ)ದ ಹದಿನಾರು ಸೆಟ್ಟಿಗಳ ಸಮ್ಮುಖದಲ್ಲಿ ಬೀರಯ್ಯ ಸೆಟ್ಟಿಯು ನಗರ ಜಿನಾಲಯಕ್ಕೆ ಸುವರ್ಣದಾನ ನೀಡಿದ ವಿವರವಿದೆ. ಆದರೆ ಸದ್ಯ ಡಂಬಳದಲ್ಲಿ ಈ ಹೆಸರಿನ ಯಾವ ಜಿನಾಲಯವು ಕಂಡುಬರುವುದಿಲ್ಲ. ಬಹುಶಃ ಇದು ಸಂಪೂರ್ಣವಗಿ ಬಿದ್ದು ನಾಶವಾಗಿರಬಹುದು.

ಪೇಠಾಲೂರಿನ ಕ್ರಿ.ಶ. ೧೧ನೇ ಶತಮಾನದ ಒಂದು ಶಾಸನ ಸ್ಥಳೀಯನಾದ ‘ಮರಳೋಜನ’ನನ್ನು “ಪ್ರಸಾದ ಚಕ್ರವರ್ತಿ” ಎಂದು ಉಲ್ಲೇಖಿಸಲಾಗಿದೆ. ಮರುಳೋಜನು ಬಹುಶಃ ಈ ಪ್ರದೇಶಗಳಲ್ಲೆಲ್ಲ ವಿಶಿಷ್ಟ ಬಗೆಯ ದೇವಾಲಯಗಳನ್ನು ಕಟ್ಟಿಸಿರುವ ಸಾಧ್ಯತೆಗಳಿವೆ.

ಕಲ್ಯಾಣದ ಚಾಲುಕ್ಯರ ಶೈಲಿಯಿಂದ ಪ್ರಭಾವಿತರಾಗಿ ದೇವಾಲಯಗಳನ್ನು ಕಟ್ಟುವುದರ ಮೂಲಕ ಹಾಗೂ ತಮ್ಮನ್ನು ಸ್ಥಳೀಯರ ಮಧ್ಯೆ ಶಾಶ್ವತವಾಗಿ ಗುರುತಿಸಿಕೊಳ್ಳುವ ಪ್ರಯತ್ನವಾಗಿ ಹಾಗೂ ತಮ್ಮನ್ನು ಸ್ಥಳೀಯರ ಮಧ್ಯೆ ಶಾಶ್ವತವಾಗಿ ಗುರುತಿಸಿಕೊಳ್ಳುವ ಪ್ರಯತ್ನವಾಗಿ ಸಾಮಂತ ಆಧಿಕಾರ ವರ್ಗ ತಮ್ಮ ಹೆಸರಿನಲ್ಲಿ ವಿಶಿಷ್ಠವಾಗಿರುವ ಅನೇಕ ದೇವಾಲಯಗಳನ್ನು ಕಟ್ಟಿರುವುದು ಹಲವಾರು ಆಧಾರಗಳಿಂದ ತಿಳಿದು ಬರುವುದು. ಅಂಥ ದೇವಾಲಯಗಳು ಸ್ಥಳೀಯ ಹಾಗೂ ಮುಖ್ಯವಾಗಿ ವೇಸರ (ಕಲ್ಯಾಣ ಚಾಲುಕ್ಯ) ಶೈಲಿಯ ಎರಡು ಮಿಶ್ರಣಗಳನ್ನು ಮೈಗೂಡಿಸಿಕೊಂಡು ಬೆಳೆದುಬಂದಿವೆ. ಅಂಥ ಮಾದರಿಯ ದೇವಾಲಯಗಳನ್ನು ಮುಂಡರಗಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಸೂಕ್ಷ್ಮವಾಗಿ ಗಮನಿಸಬಹುದು.

ಜಿಲ್ಲೆಯಲ್ಲಿ ಕದಂಬ ನಾಗರ ಶಿಖರ ಮಾದರಿಗಳ ದೇವಾಲಯಗಳು ದೊರಕಿವೆ. ಇವು ಸಹ ಕಲ್ಯಾಣ ಚಾಲುಕ್ಯರ ಮೂಲ ಶೈಲಿಯನ್ನೇ ಅನುಸರಿಸಿವೆ. ಹೊಯ್ಸಳರ ಕಾಲದ ದೇವಾಲಯಗಳೂ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವುದಿಲ್ಲವಾದರು ಇವರು ಇಲ್ಲಿಯ ದೇವಾಲಯಗಳಿಗೆ ದಾನ ದತ್ತಿಗಳನ್ನು ನೀಡಿರುವುದನ್ನು ಶಾಸನಗಳು ಉಲ್ಲೇಖಿಸಿವೆ. ವಿಜಯನಗರ ಕಾಲದಲ್ಲಿಯೂ ಸಹ ಇಲ್ಲಿನ ಗುಡಿಗಳ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಪ್ರಮಾಣದಲ್ಲಿ ನೆರವೇರಿಸಿದ್ದಾರೆ. ಆದರೆ ವಿಜನಗರ ಶೈಲಿಯ ದೇವಾಲಯಗಳು ಜಿಲ್ಲೆಯಲ್ಲಿ ವಿರಳವಾಗಿ ಕಂಡುಬರುತ್ತವೆ. ಅಪವಾದವೆಂದರೆ ಲಕ್ಷ್ಮೇಶ್ವರದ ಸೋಮನಾಥ ದೇವಾಲಯದ ದಕ್ಷಿಣ ದ್ವಾರವನ್ನು ರಚಿಸಿದರೆಂಬುದು ಅಲ್ಲಿಯ ಶಾಸನಗಳು ತಿಳಿಸುತ್ತವೆ. ಇದು ವಿಜಯನಗರ ಶೈಲಿಯ ಕೆಲ ಅಂಶಗಳನ್ನು ಒಳಗೊಂಡಿದೆಯಾದರೂ, ಬಹುತೇಕ ಕಲ್ಲಯಾಣ ಚಾಲುಕ್ಯ ಶೈಲಿಯನ್ನು ಅನುಕರಿಸಿರುವುದು ಗಮನಾರ್ಹ, ಅಚ್ಯುತರಾಯನ ಕಾಲದಲ್ಲಿ ‘ಆನಂಧನಿಧಿ’ ದಾನವನ್ನು ನೀಡಿದ್ದನ್ನು ಗದಗ ಮತ್ತು ಅಣ್ಣಿಗೆರೆಯ ಶಾಸನಗಳು ತಿಳಿಸುತ್ತವೆ.

ಕಲ್ಯಾಣ ಚಾಲುಕ್ಯರ ದೇವಾಲಯಗಳು ಸಾಮನ್ಯವಾಗಿ ಗರ್ಭಗೃಹ, ಅಂತರಾಳ ಮತ್ತು ನವರಂಗ ಭಾಗಗಳಿಂದ ಕೂಡಿರುತ್ತವೆ. ಕೆಲವು ದೇವಾಲಯಗಳ ನವರಂಗದ ಮುಂಭಾಗದಲ್ಲಿ ಪ್ರವೇಶ ಮಂಟಪ ಹೊಂದಿರುವುದನ್ನು ಕಾನಬಹುದು. ಲಕ್ಷ್ಮೇಶ್ವರದ ಸೋಮನಾಥ, ಶಂಖ ಜಿನಾಲಯ, ಲಕ್ಕುಂಡಿಯ ಕಾಶಿ ವಿಶ್ವನಾಥ, ಗದುಗಿನ ವೀರನಾರಾಯಣ, ಡಂಬಳ, ಪೇಠಾಲೂರು, ರೋಣ, ಸೂಡಿ, ಸವಡಿ ಹಾಗೂ ರಾಜೂರು ಗ್ರಾಮಗಳಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಪ್ರಮುಖ ದೇವಾಲಯಗಳು ನಿರ್ಮಾಣವಾಗಿ ಅವು ಆಡಳಿತ ಹಾಗೂ ಸಾಂಸ್ಕೃತಿಕ ಘಟಕಗಳಾಗಿ ಮಹತ್ವದ ಕಾರ್ಯನಿರ್ವಹಿಸಿರುವುದನ್ನು ತಿಳಿಯಬಹುದು.

ಈ ಪ್ರದೇಶದ ದೇವಾಲಯಗಳಲ್ಲಿರುವ ಕಂಬಗಳು ಆಕರ್ಷಕವಾಗಿ ರೂಪಿತವಾಗಿವೆ. ಮೊದಲ ನೋಟದಲ್ಲಿಯೆ ನೋಡುಗರ ಗಮನವನ್ನು ಸೆಳೆಯುತ್ತವೆ. ಸಾಮಾನ್ಯವಾಗಿ ಕಂಬಗಳು ಚತುರಸ್ತ್ರ ಆಕಾರದಲ್ಲಿದ್ದು, ಕಂಬದ ಮಧ್ಯ ಭಾಗವು ಕುಂಬಾಕಾರ ಅಥವಾ ಅಷ್ಟಕೋನಗಳಿಂದ ಕೂಡಿರುತ್ತವೆ. ಇವು ಘನಾಕೃತಿಯಲ್ಲಿದ್ದು, ನವರಂಗಕ್ಕೆ ಆಧಾರವಾಗಿವೆ. ಹಾಗೂ ಸಾಮಾನ್ಯವಾಗಿ ಅವು ಗಾತ್ರದಲ್ಲಿ ದೊಡ್ಡದಾಗಿವೆ. ತಿರುಗಣೆಯ ಕೆಲವು ಕಂಬಗಳು ಸೋಮನಾಥ, ಶಂಖ ಬಸದಿ, ಲಕ್ಕುಂಡಿ, ಡಂಬಳ, ಸೂಡಿ, ಸವಡಿ ಮತ್ತು ಗದಗ ದೇವಾಲಯಗಳಲ್ಲಿ ಕಾಣಬಹುದು. ನವರಂಗದ ನಾಲ್ಕು ಕಂಬಗಳ ಮಧ್ಯ ಸಾಮಾನ್ಯವಾಗಿ ವೇದಿಕೆಯಿರುವುದನ್ನು ಎಲ್ಲಾ ಗುಡಿಗಳಲ್ಲಿ ಕಣುತ್ತೇವೆ. ಭುವನೇಶ್ವರಿಯ ಭಾಗದಲ್ಲಿ ಸರೀ ಅಲಂಕೃಎಗಳಿದ್ದರೆ, ಕುಮುದ ಅಥವಾ ಇಳಿಬಿದ್ದ ಕಮಲದ ಮೊಗ್ಗಿನ ಅಲಂಕರಣೆ ಅಥವಾ ಪುಷ್ಟದಳಗಳ ಅಲಂಕರಣೆಯನ್ನು ಗಮನಿಸಬಹುದು. ನವರಗಂದ ಒಳಭಿತ್ತಿಯಲ್ಲಿ ದೇವಕೋಷ್ಠಗಳನ್ನು ಕೆಲವು ದೇವಾಲಯಗಳಲ್ಲಿ ಮಾತ್ರ ಕಾಣಬಹುದು. ಈ ದೇವಾಲಯಗಳಲ್ಲಿ ಅಂತರಾಳ ದ್ರಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳನ್ನು ಗಳಿ ಮತ್ತು ಬೆಳಕಿಗಾಗಿ ಅಳವಡಿಸಿರುತ್ತಾರೆ. ದೊಡ್ಡ ದೇವಾಲಯವಾದ ಸೋಮನಾಥ ಮತ್ತು ಶಂಖ ಬಸದಿಯ ಪ್ರವೇಶ ಮಫಟಪದ ಭಿತ್ತಿಗಳಲ್ಲಿಯೂ ಗಾಳಿ ಮತ್ತು ಬೆಳಕಿನ ವ್ಯವಸ್ಥೆಗೆ ಜಾಲಾಂಧ್ರಗಳನ್ನು ಅಳವಡಿಸಲಾಗಿದೆ. ಇವರ ದೇವಾಲಯಗಳಲ್ಲಿ ನಾಗರ ಮತ್ತು ದ್ರಾವಿಡ ಶೈಲಿಯ ಶಿಖರಗಳ ರಚನೆಗಳಿವೆ.

ಜಿಲ್ಲೆಯ ಶಿರಹಟ್ಟಿಯಲ್ಲಿ ಕೆಲವು ಮಸೀದಿ ಮತ್ತು ದರ್ಗಾಗಳಿವೆ. ಅದರಲ್ಲಿ ಲಕ್ಷ್ಮೇಶ್ವರದ ಜುಮ್ಮಾಮಸೀದಿಯು ಮುಖ್ಯವಾದುದು. ಈಮಸೀದಿಯನ್ನು ಆದಿಲ್‌ಷಾಹಿ ಅರಸ ಎರಡನೇ ಆದಿಲ್‌ಷಾನ ಕಾಲದಲ್ಲಿ ಲಕ್ಷ್ಮೇಶ್ವರದ ಆಡಳಿತಾಧಿಕಾರಿ ಅಂಕುಶ್‌ಖಾನನು ನಿರ್ಮಿಸಿದನು. ಊರಿನಲ್ಲಿರುವ ಹಿಂದು ಮತ್ತು ಜೈನ ದೇವಾಲಯಗಳಂತೆ ಈ ಮಸೀದಿಯು ಅತ್ಯಂತ ಆಕರ್ಷಕ ಸ್ಮಾರಕವಾಗಿವೆ. ಎತ್ತರದ ಕೋಟೆ ಗೋಡೆಯಂತೆ ಕಾಣಸಿಗುವ ಕಮಾನಿನ ದ್ವಾರದಿಂದ ಮಸೀದಿಯ ಪ್ರಾಂಗಣವನ್ನು ಪ್ರವೇಶಿಸಬಹುದು. ಈ ದ್ವಾರಕ್ಕೆ ಎರಡು ಮಿನಾರ್‌ಗಳಿವೆ. ದ್ವಾರದ ಮೇಲ್ಭಾಗವನ್ನು ಮೆಟ್ಟಲುಗಳ ಮೂಲಕ ತಲುಪಬಹುದು.

ಜುಮ್ಮಾ ಮಸೀದಿಯು ಎತ್ತವಾದ ಎರಡು ಮಿನಾರ್‌ಗಳು ಹಾಗೂ ಮೇಲೆ ಅರ್ಧಗೋಳಾಕಾರದ ಗುಮ್ಮಟವನ್ನು ಹೊಂದಿದೆ. ಕೆಳಭಾಗದಲ್ಲಿ ವಿಶಾಲವಾದ ಪ್ರಾರ್ಥನಾ ಸಭಾಂಗಣವಿದೆ. ಇದರಲ್ಲಿ ಷಟ್‌ಕೋನಾಕಾರವಾದ ಕಂಬಗಳು ಇವೆ. ಗುಮ್ಮಟ ಒಳಭಾಗ ಅರ್ಧಗೋಳಾಕಾರವಾಗಿದೆ. ಸಭಾ ಅಂಕಣಗಳನ್ನು ಇಲ್ಲಿ ಗಮನಿಸಬಹುದು. ಕಮಾನಿನ ಕಂಬಗಳು ಮಸೀದಿಯ ಛಾವಣಿಗೆ ಆಸರೆಯನ್ನು ನೀಡಿವೆ. ಮಸೀದಿಯ ಮುಂಭಾಗದಲ್ಲಿ, ಮೇಲೆ ಇಳಿಜಾರಿದ ಸಜ್ಜಾ ಅಲಂಕರಣೆಯಿದೆ. ಸಾಮಾನ್ಯವಾಗಿ ಈ ರೀತಿಯ ಅಲಂಕರಣೆಯು ಹಿಂದೂ ದೇವಾಲಯಗಳಲ್ಲಿ ಕಂಡುಬರುತ್ತವೆ. ಛಾವಣಿಯ ಸಜ್ಜಾ ಕೋಣಗಳಿಂದ ದ್ರಾವಿಡ ಶೈಲಿಯ ದೇವಾಲಯದಲ್ಲಿ ಕಂಡುಬರುಂತಹ ಕಲ್ಲಿನ ಸರಪಳಿಗಳನ್ನು ಇಳಿಬಿಡಲಾಗಿರುವುದು ಇದು ಅತ್ಯಂಗ ಆಕರ್ಷಕವಾಗಿದೆ. ಮಸೀದಿಯನ್ನು ನಿರ್ಮಿಸಿದಾಗ ಇಂತಹ ಅನೇಕ ಸರಪಳಿಗಳು ಇದ್ದಿರಬೇಕು. ಪ್ರಸ್ತುತ ತುಂಡರಿಸಿದ ಕಲ್ಲಿನ ಕೆಲವು ಸರಪಳಿಗಳು ಮಾತ್ರ ಕಾಣಸಿಗುತ್ತವೆ.

ಗುಮ್ಮಟದ ಒಳಭಾಗದಲ್ಲಿ ಕುಸುರಿ ಕೆಲಸವುಳ್ಳ ಹೂಬಳ್ಳಿಗಳ ಅಲಂಕರಣೆಯಿದೆ. ಗುಮ್ಮಟದ ಒಳಭಾಗದಲ್ಲಿಯೂ ಕೆಳಭಾಗದಿಂದ ಮೇಲಿನವರೆಗೆ ಕಮಲದ ದಳಗಳ ಅಲಂಕರಣೆಯನ್ನು ಗಮನಿಸಬಹುದು. ಇಲ್ಲಿರುವ ಮಿನಾರ್‌ಗಳು ಸಹ ಎತ್ತರ ಕೋನಾಕಾರವನ್ನು ಹೊಂದಿದ್ದು, ಅವುಗಳಲ್ಲಿ ಕಮಾನಿನಾಕಾರದ ಕಿಟಕಿಗಳನ್ನು ಇರಿಸಲಾಗಿದೆ. ಇಡೀ ಕಟ್ಟಡವು ಪ್ರಾಂಗಣದ ಮಧ್ಯದಲ್ಲದ್ದು, ಕೆವಲು ಮೆಟ್ಟಿಲ ಮೂಲ ಪ್ರವೇಶಿಸಬೇಕು. ಪ್ರಾರ್ಥನಾ ಸಭಾಂಗಣವು ಎತ್ತರದ ಗಜತಿಯ ಮೇಲೆ ನಿರ್ಮಾಣವಾಗಿದೆ. ಮಸೀದಿಯ ಎಡಮೂಲೆಯಲ್ಲಿ ಕಾರಂಜಿಯಿರುವ ಒಂದು ನೀರಿನ ತೊಟ್ಟಿಯಿದೆ. ಈ ಸ್ಮಾರಕವನ್ನು ರಾಜ್ಯ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಗಳ ನಿರ್ದೇಶನಾಲಯ ಸಂರಕ್ಷಿಸುತ್ತಲಿದೆ. ಸಭಾಂಗಣದ ಒಳಭಾಗವನ್ನು ಸಾಕಷ್ಟು ನವೀಕರಿಸಲಾಗಿದ್ದು, ಇಂದಿಗೂ ಇದನ್ನು ಬಳಸಲಾಗುತ್ತಿದೆ.

ಶಿರಹಟ್ಟಿಯ ಫಕೀರಸ್ವಾಮಿ ಮಠವು ಹಿಂದೂ ಮುಸ್ಲಿಮ್ ಭಾವೈಕ್ಯತೆಯನ್ನು ಸಾರುವ ಸ್ಥಳವಾಗಿದೆ. ಕಲ್ಲಿನಿಂದ ಕಟ್ಟಿರುವ ಮಠದ ವಾಸ್ತುಶೈಲಿಯಲ್ಲಿಯೂ ಇದನ್ನು ಕಾಣಬಹುದು. ಫಕೀರಸ್ವಾಮಿ ಮಠವು ಸ್ಮಾರಕವಾಗಿದೆ. ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿರುವ ಈ ಕಟ್ಟಡದ ನೆಲಮಟ್ಟದ ಕೆಳಗೆ ಫಕೀರಸ್ವಾಮಿಗಳ ಗದ್ದುಗೆಯಿದೆ. ಮಠದ ಆವರಣದಲ್ಲಿ ಬೇರೆ ಬೇರೆ ಸ್ವಾಮಿಗಳ ಗದ್ದಗೆಗಳನ್ನು ಸಹ ನಿರ್ಮಿಸಲಾಗಿದೆ. ಕಲ್ಲಿನಿಂದ ಕಟ್ಟಲಾಗಿರುವ ಪ್ರಸ್ತತ ಕಟ್ಟಡವನ್ನು ನವೀಕರಿಸಲಾಗಿದೆ. ಮೆಟ್ಟಿಲುಗಳ ಮೂಲಕ ಪ್ರವೇಶವನ್ನುಪಡೆದು, ವಿಶಾಲವಾದ ಸಭಾಂಗಣವನ್ನು ತಲುಪಬಹುದು. ಇಂಡೋ-ಇಸ್ಲಾಮಿಕ್ ಶೈಲಿಯ ಕಮಾನಿನ ಕಂಬಗಳು, ಅವುಗಳಿಗೆ ಸೂರನ್ನು ಇತ್ತೀಚಿಗೆ ನಿರ್ಮಿಸಲಾಗಿದೆ. ಗುಮ್ಮಟಾಕಾರದ ಗೋಲವು ಪ್ರಸ್ತರದ ಮೇಲಿದೆ. ಕಲ್ಲಿನಿಂದಲೇ ಸರಳ ಅಲಂಕರಣೆಯನ್ನು ಮಾಡಲಾಗಿದೆ. ಮಂಟಪದ ಕೆಳಭಾಗದಲ್ಲಿ ಗದ್ದುಗೆಯನ್ನು, ದಕ್ಷಿಣದಲ್ಲಿರುವ ದ್ವಾರದ ಮೂಲದ ಕಿರಿದಾದ ಮೆಟ್ಟಿಲುಗಳ ಸಹಾಯದಿಂದ ಪ್ರವೇಶಿಸಬಹುದು. ಮೇಲಿರುವ ಸಭಾಂಗಣದ ಮಧ್ಯೆ ಕಬ್ಬಿನದ ಸಲಾಕೆಗಳನ್ನು ತೆರೆದ ಭಾಗದಲ್ಲಿ ಅಲ್ಲಿಂದಲೇ ಗದ್ದುಗೆಯ ದರ್ಶನವನ್ನು ಮಾಡಲು ಅನುವು ಮಾಡಲಾಗಿದೆ. ಇದರ ಪಕ್ಕದಲ್ಲಿ ಮೆಟ್ಟಲುಗಳು ಇದ್ದು, ಪೂಜಾರಿಗಳು ಇಲ್ಲಿಂದ ಪ್ರವೇಶಿಸುತ್ತಾರೆ. ಜಾಲಂಧ್ರಗಳನ್ನು ಗೋಡೆಯಲ್ಲಿ ಅಳವಡಿಸಲಾಗಿದೆ. ಎತ್ತರದ ಅಧಿಷ್ಠಾನ ಅಥವಾ ಜಗುಲಿಯ ಮೇಲಿರುವ ಈ ಸ್ಮಾರಕದಲ್ಲಿ ನಿತ್ಯ ಪೂಜೆಗಳು ನಡೆಯುತ್ತವೆ. ಮುಖ್ಯ ಗದ್ದುಗೆಯ ಹಿಂಭಾಗದಲ್ಲಿ ಫಕೀರಸ್ವಾಮಿ ಮಠದ ಪರಂಪರೆಯ ಸ್ವಾಮಿಗಳ ಗದ್ದುಗೆಗಳಿವೆ. ಮುಖ್ಯ ಗದ್ದುಗೆಯ ಹಿಂಬದಿಯಲ್ಲಿರುವ ಗದ್ದುಗೆಯ ಪ್ರಸ್ತರದಲ್ಲಿ ಬೋಧಿಗೆಯ ಅಲಂಕರಣೆಯನ್ನು ಕಾಣುತ್ತೇವೆ.

ಅದೇ ಸಾಲಿನ ಕೊನೆಯ ಗದ್ದುಗೆಯು ತೆರೆದ ಮಂಟಪದಂತೆ ಇದ್ದು ಅದರಲ್ಲಿ ನಾಲ್ಕು ಕಂಬಗಳಿವೆ. ಇವೆಲ್ಲಾ ಗದ್ದುಗೆಗಳಿಗೆ ಮೆಟ್ಟಿಲುಗಳ ಮೂಲಕವೇ ಪ್ರವೇಶವಿದ್ದು ಎಲ್ಲವೂ ಎತ್ತರದ ಜಗಲಿ ಅಥವಾ (ಅಧಿಷ್ಠಾನ) ಕಟ್ಟೆಯ ಮೇಲೆಯೇ ನಿರ್ಮಿಸಲಾಗಿದೆ. ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಕಮಾನಿನ ಆಕಾರದಂತೆ ಇರುವ ಭವ್ಯವಾದ ಪ್ರವೇಶ ದ್ವಾರಗಳಿವೆ. ಗದ್ದುಗೆಗಳ ಸುತ್ತಲೂ ಅನೇಕ ವಸತಿ ಕೊಠಡಿಗಳನ್ನು ನಿರ್ಮಿಸಿದ್ದು, ಅವುಗಳನ್ನು ಭಕ್ತಾದಿಗಳಿಗೆ ನೀಡಲಾಗುತ್ತದೆ. ಹಿಂದೂ ಮುಸ್ಲಿಮ್ ಐಕ್ಯತೆಯನ್ನು ಸಾರುವ ಈ ಮಠದ ಪರಂಪರೆಯು ವಿಶಿಷ್ಟವಾಗಿದ್ದು, ಇಂದಿನ ಆಚರಣೆ ಮತ್ತು ಮಠದ ವಾಸ್ತುಶೈಲಿಯಲ್ಲಿಯೂ ಈ ಐಕ್ಯತೆಯನ್ನು ಗಮನಿಸಬಹುದು. ಈ ಮಠವು ಸಾಂಸ್ಕೃತಿಕವಾಗಿ ಮಹತ್ವದ ಕಾರ್ಯನಿರ್ವಹಿಸುತ್ತಲಿದೆ.

ಪ್ರಸ್ತುತ ಮಠವು ಸುಮಾರು ೩೦೦ ವರ್ಷಗಳಷ್ಟು ಪ್ರಾಚೀನವಾದುದೆಂದು ಅಭಿಪ್ರಾಯಪಡಲಾಗಿದೆ. ಮಠದಲ್ಲಿರುವ ಒಂದು ಶಾನ, (ಧಾರವಾಡ ಜಿಲ್ಲೆ ಗ್ಯಾಸೆಟೀಯರ್ ಪು. ೧೦೧೬). ಮಠವನ್ನು ಫಕೀರ ಚನ್ನವೀರಸ್ವಾಮಿಯವರಿಗೆ ಕ್ರಿ.ಶ. ೧೭೭೭ರಲ್ಲಿ ದಾನಬಿಟ್ಟ ವಿಷಯವನ್ನು (ಧಾ.ಜಿ.ಶಾ.ಸೂ, ಸಂ. ಸಿ. ೮೮, ಪು. ೩೯) ಉಲ್ಲೇಖಿಸುತ್ತದೆ. ಇನ್ನೊಂದು ಶಾಸನವು (ಧಾ.ಜಿ.ಶಾ.ಸೂ, ಸಂ. ಸಿ. ೮೯, ಪು. ೩೯) ಕಲಕೇರಿಯ ಚಿನ್ನಪ್ಪನಿಗೆ ಗೌಡನ ತಮ್ಮನು ಸೋಗಿವಾಳ ಗ್ರಾಮದ ಅರ್ಧಭಾಗವನ್ನು ಕ್ರಿ.ಶ. ೧೭೯೨ರಲ್ಲಿ ಮಾರಿದ ಅಂಶವನ್ನು ದಾಖಲಿಸಿದೆ.

ಶಿರಹಟ್ಟಿಯ ಆವ್ವಲಿಂಗವ್ವನ ಗುಡಿಯು ಕಪ್ಪುಶಿಲೆ ಮತ್ತು ಗ್ರಾನೈಟ್ (ಕಣ) ಶಿಲೆಯಿಂದ ಕಟ್ಟಲಾಗಿದೆ. ಈ ಕಟ್ಟಡವು ಅತ್ಯಂತ ಸುಂದರವಾಗಿದ್ದು, ನೋಡುಗರನ್ನು ತನ್ನತ್ತ ಆಕರ್ಷಿಸುತ್ತದೆ. ಇದು ದೇವಾಲಯವಲ್ಲ. ಈ ಕಟ್ಟಡವನ್ನು ಲಕ್ಷ್ಮೇಶ್ವರ ದೇಶಗತಿಯ ಸಂಸ್ಥಾಪಕಿಯಾದ ಅವ್ವಲಿಂಗವ್ವೆಯ ಸಮಾಧಿಗೆಂದು ನಿರ್ಮಿಸಲಾಗಿದೆಯೆಂದು, ಆದರೆ ಅವಳ ಮರಣಾನಂತರ ಅವಳ ಶವವನ್ನು ಇಲ್ಲಿ ಹೂಳಲಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಇದನ್ನು ಅವ್ವಲಿಂಗವ್ವನ ಮಠ ಹಾಗೂ ಅವ್ವಲಿಂಗವ್ವಗುಡಿ ಎಂದೂ ಸಹ ಸ್ಥಳೀಯರು ಕರೆಯುತ್ತಾರೆ. ಆದರೆ ಗರ್ಭಗೃಹ ಭಾಗದಂತಿರುವ ಸ್ಥಳದಲ್ಲಿ ಒಂದು ಸಮಾಧಿಯಿರುವುದನ್ನು ಕಾಣಬಹುದು. ಈ ಭಾಗಕ್ಕೆ ಪ್ರವೇಶಿರುವ ಉತ್ತರ ಮತ್ತು ಪೂರ್ವದ ಬಾಗಿಲುಗಳಿವೆ.

ದೇವಾಲಯದಂತೆ ಇರುವ ಈ ಕಟ್ಟಡದ ಕಂಬಗಳ ರಚನೆ, ವಿನ್ಯಾಸ ಮತ್ತು ನೋಟವು ದೇವಾಲಯದಂತೆ ಕಂಡುಬರುತ್ತದೆ. ಅರಮನೆಯಂತೆಯೂ ಸಹ ಈ ಕಟ್ಟಡದ ಕೆಲವು ಭಾಗಗಳನ್ನು ವಿನ್ಯಾಸಗೊಳಿಸಿರುವುದು ಗಮನಾರ್ಹವಾಗಿದೆ. ಕಟ್ಟಡವನ್ನು ಉತ್ತರ ಭಾಗದಿಂದ ಮೆಟ್ಟಿಲುಗಳ ಮೂಲಕ ಮಂಟಪ ಭಾಗಕ್ಕೆ ಪ್ರವೇಶವನ್ನು ಪಡೆಯಬಹುದು. ಮಂಟಪದ ಭಾಗವನ್ನು ಎರಡು ಹಂತಗಳಲ್ಲಿ ವಿನ್ಯಾಸಗೊಳಿಸಿದ್ದು ಪ್ರವೇಶದ ಭಾಗವನ್ನು ಮುಖಮಂಟಪವೆಂದು ಹೆಸರಿಸಬಹುದು. ಅದರ ಮೂಲಕ ನವರಂಗ ಅಥವಾ ಮಂಟಪದ ಭಾಗಕ್ಕೆ ತೆರಳಬಹುದು. ನವರಂಗ ಭಾಗವನ್ನು ಎತ್ತರಿಸಿ, ಜಗತ್ತಿಯ ಮೇಲೆ ನಿರ್ಮಿಸಲಾಗಿದೆ. ಮುಖಮಂಟಪ ಭಾಗದ ಪೂರ್ವ ಮತ್ತು ಪಶ್ಚಿಮಭಾಗಗಳಲ್ಲಿ ತೆರೆದ ಕೋಣೆ ಆಥವಾ ಮಂಟಪದ ಭಾಗದಂತಿರುವ ಎರಡು ಕೊಠಡಿಗಳಿವೆ. ಅವುಗಳಲ್ಲಿ ಕೋಷ್ಟಗಳಿವೆ. ಮುಖಮಂಟಪದ ಪ್ರವೇಶ ಭಾಗದಲ್ಲಿ ಎತ್ತರ ಹಾಗೂ ದಪ್ಪಗಿರುವ ಎರಡು ಕಂಬಗಳು ಸೂರನ್ನು ಆಧರಿಸಿವೆ. ಕಂಬಗಳ ಎರಡೂ ಕಡೆಗಳಲ್ಲಿ ಇತ್ತೀಚಿಗೆ ಕಬ್ಬಿಣದ ಸರಳಿನ ಜಾಲಾಂಧ್ರಗಳನ್ನು (ಗ್ರಿಲ್) ಅಳವಡಿಲಾಗಿದೆ. ಪೂರ್ವ ಮತ್ತು ಪಶ್ಚಿಮದ ಎರಡೂ ಕೊಠಡಿಯಂತಿರುವ ಭಾಗದ ಮೇಲೆ ಮಧ್ಯಕಾಲಿನೋತ್ತರ ಅರಮನೆಗಳಲ್ಲಿ ನಿರ್ಮಿಸುವ ಬಾಲ್ಕನಿಗಳಂತ ರಚನೆಗಳು ಇಕ್ಕೆಲಗಳಲ್ಲಿವೆ. ಮುಖ ಮಂಟಪದ ಒಳಬಾಗದಲ್ಲಿ ಸುಂದರ ಕೆತ್ತನೆಯ ಜಗತಿಯ ಭಾಗವಿದ್ದು, ಅದು ನವರಂಗಕ್ಕೆ ಆಧಾರವಾಗಿದೆ. ಹೊರಭಾಗದಲ್ಲಿ ಸುಂದರ ಕೆತ್ತನೆಗಳುಳ್ಳ ಅನೇಕ ಧಾರ್ಮಿಕ ಶಿಲ್ಪಗಳಿವೆ. ಸೂರಿನ (ಭುವನೇಶ್ವರಿ) ಭಾಗದಲ್ಲಿ ಕಮಲ, ಹೂವು ಮುಂತಾದ ಕೆತ್ತನೆಗಳಿವೆ. ಭುವನೇಶ್ವರಿಯ ಪ್ರತಿ ಭಾಗದ ಕಮಲದಳ ಮತ್ತು ಸರ್ಪಾಕೃತಿಯ ಕೆತ್ತನೆಗಳಿವೆ. ಮಾಡಿನ ಭಾಗದಲ್ಲಿಯೂ ಸುಂದರ ಕೆತ್ತನೆಗಳಿವೆ.

ನವರಂಗದ ಭಾಗದಲ್ಲಿ ತಿರುಗಣಿಯಿಂದ ರಚಿಸಿದ ಭಾಗದಲ್ಲಿ ಸುಂದರವಾದ ನಾಲ್ಕು ಕಂಬಗಳಿವೆ. ಪೂರ್ವದ ಗೋಡೆಯಲ್ಲಿ ಕಮಾನಿನ ರಚನೆಯುಳ್ಳ ಕೋಷ್ಟಕವಿದೆ. ಈ ಭಾಗದಿಂದ ಗರ್ಭಗೃಹದಂತಿರುವ ಭಾಗವನ್ನು ಪ್ರವೇಶಿಸಬಹುದು. ಗರ್ಭಗೃಹದ ಮುಖ್ಯದ್ವಾರದ ಲಲಾಟದಲ್ಲಿ ಶಿವಲಿಂಗ ಅದರ ಹಿಂದೆ ಸರ್ಪದ ಉಬ್ಬುಶಿಲ್ಪಗಳಿವೆ. ಬಾಗಿಲವಾಡವು ಅಲಂಕೃತ ಕೆತ್ತನೆಗಳಿಂದ ಕೂಡಿ ಅಲಂಕೃತವಾಗಿದೆ. ಅದರ ಕೆಳಬದಿಗಳಲ್ಲಿ ದ್ವಾರಪಾಲಕರ ಉಬ್ಬುಶಿಲ್ಪಗಳಿವೆ. ಛಾಮರಧಾರಣಿಯ ಉಬ್ಬುಶಿಲ್ಪ ಹಾಗೂ ಇನ್ನಿತರೆ ಸೂಕ್ಷ್ಮ ಕೆತ್ತನೆಗಳಿವೆ. ಮುಖ್ಯದ್ವಾರದ ಎರಡೂ ಬದಿಗಳಲ್ಲಿ ಎರಡೂ ಕಡೆ ದ್ವಾರದಂತೆ ಇದೆ. ಎಡಬದಿಯ ಕೊಠಡಿಯಲ್ಲಿ ದೊಡ್ಡ ಕೋಷ್ಟದಂತೆ ರೂಪಿಸಲಾಗಿದೆ. ಬಲಬದಿಯ ದ್ವಾರದಲ್ಲಿ ಮೆಟ್ಟಲುಗಳು ಇದ್ದು, ಅದರ ಮೂಲಕ ಕಟ್ಟಡದ ಮೇಲ್ಭಾಗವನ್ನು ತಲುಪಬಹುದು. ಈ ಎರಡೂ ದ್ವಾರಗಳ ಲಲಾಟಬಿಂಬಗಳಲ್ಲಿ ಗಣಪತಿಯ ಉಬ್ಬುಶಿಲ್ಪಗಳಿವೆ. ದೂರದಿಂದ ನೋಡಿದರೆ ಇವೆರಡೂ ಗರ್ಭಗೃಹದಂತೆಯೇ ಭಾಸವಾಗುತ್ತದೆ. ಕಣಶಿಲೆಯಿಂದ ಮೆಟ್ಟಿಲುಗಳನ್ನು ರಚಿಸಲಾಗಿದೆ.

ಗರ್ಭಗೃಹದ ಭಾಗವನ್ನು ಸದ್ಯ ಮುಚ್ಚಲಾಗಿದೆ. ಒಳಭಾಗದಲ್ಲಿ ತಿರುಗಣಿ ಯಂತ್ರದಿಂದ ರಚಿಸಿದ ಕಲ್ಯಾಣ ಚಾಲುಕ್ಯ ಶೈಲಿಯ ಕಂಬಗಳು ಹಾಗು ಅವುಗಳ ನಡುವೆ ಒಂದು ಸಮಾಧಿಯಿದೆ ಪೂರ್ವದ ಬಾಗಿಲಲ್ಲಿ ಅತ್ಯಂತ ಕಲಾತ್ಮಕ ದ್ವಾರಶಾಖೆ, ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪಗಳ ಕೆತ್ತನೆಗಳನ್ನು ಕಾಣಬಹುದು. ಇಲ್ಲಿ ಎರಡು ಮೆಟ್ಟಿಲುಗಳಿವೆ. ಕಟ್ಟಡದ ಪೂರ್ವ ಹಾಗೂ ಪಶ್ಚಿಮದ ಹೊರಭಾಗಗಳಲ್ಲಿ ಎಂಟು ಕಂಬಗಳ ಸಾಲುಗಳ ಉದ್ದನೆಯ ತೆರೆದ ಮಂಟಪವಿದೆ. ಪೂರ್ವ ಭಾಗದ ಮಂಟಪ ಅಥವಾ ಪಡಸಾಲೆಯನ್ನು ಸಾರ್ವಜನಿಕರು ಅತಿಕ್ರಮಿಸಿದ್ದಾರೆ. ಪಶ್ಚಿಮ ಭಾಗವು ತೆರೆದಿದ್ದು, ಅತಿಕ್ರಮಣಕ್ಕೆ ಒಳಗಾಗಿಲ್ಲ. ಕಟ್ಟಡದ ಅಧಿಷ್ಠಾನ ಭಾಗವು ಕಂಡುಬರುತ್ತದೆ. ಕಟ್ಟಡಕ್ಕೆ ಪ್ರಸ್ತರ ಭಾಗವಿದ್ದು, ಶಿಖರ ಭಾಗವಿಲ್ಲ. ಈ ಸುಂದರ ಸ್ಮಾರಕ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ.

ಈ ಸ್ಮಾರಕದ ಪೂರ್ವಭಾಗದಲ್ಲಿ, ಪಕ್ಕದಲ್ಲಿಯೇ, ಇನ್ನೊಂದು ಕಟ್ಟಡವಿದ್ದು, ಇದನ್ನು ಸಹ ಕಲ್ಲಿನಿಂದಲೇ ರಚಿಸಲಾಗಿದೆ. ಇದರಲ್ಲಿ ಗರ್ಭಗೃಹ ಮತ್ತು ಅರ್ಧಂಟಪದ ಭಾಗವಿದ್ದು, ಅರ್ಧಮಂಟಪದ ಪಶ್ಚಿಮ ಗೋಡೆಯಲ್ಲಿ ಕಮಾನಿನ ದ್ವಾರವಿದೆ. ಅವ್ವಲಿಂಗವ್ವನ ಗುಡಿಯಿಂದ ಈ ಬಾಗಿಲ ಮೂಲಕ ಪ್ರವೇಶಿಸಬಹುದು. ಅರ್ಧಮಂಟಪದ ಭಾಗದಲ್ಲಿಯೇ ಎರಡು ಕಲ್ಲಿನ ಕಂಬಗಳಿವೆ. ಗುಡಿಗೆ ಆಧಿಷ್ಠಾನವಿದ್ದು, ಶಿಖರ ಭಾಗವಿಲ್ಲ. ಗರ್ಭಗೃಹದ ಬಾಗಿಲವಾಡವು ಸರಳವಾಗಿದೆ. ಇವೆರಡೂ ಕಟ್ಟಡಗಳನ್ನು ಸರಿಸುಮಾರು ೩೦೦ ವರ್ಷಗಳ ಹಿಂದೆ ರಚಿಸಲಾಗಿದೆಎಂದು ಅಭಿಪ್ರಾಯಪಡಲಾಗಿದೆ. ಈ ಕಟ್ಟಡಗಳನ್ನು ನಿರ್ಮಿಸಿದವರ ಬಗೆಗೆ ಖಚಿತವಾದ ಮಾಹಿತಿಯಿರುವುದಿಲ್ಲ. ಶೈಲಿಯ ದೃಷ್ಟಿಯಿಂದ, ಇವು ಪ್ರಾಚೀನ ಕಾಲದ್ದೆಂದು ಭಾಸವಾಗುವಂತೆ ರಚಿಸಲಾಗಿದೆ. ಎರಡೂ ಸ್ವಮಾರಕಗಳನ್ನು ರಕ್ಷಿಸುವುದು ಇಂದಿನ ಅಗತ್ಯವಾಗಿದೆ.

ಪ್ರಾಚೀನ, ಮಧ್ಯ ಹಾಗೂ ಆಧುನಿಕ ಕಾಲಾವಧಿಯಲ್ಲಿ ತನ್ನದೇ ಆದ ಸಾಂಸ್ಕೃತಿಕ ಮಹತ್ವ ಪಡೆದಿರುವ ಗದಗ ಜಿಲ್ಲೆಯು ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನನ್ನು ವಿಶಿಷ್ಟವಾಗಿ ಗುತುತಿಸಿಕೊಂಡಿರುವ ಪ್ರಮುಖ ಜಿಲ್ಲೆ. ಮುಖ್ಯವಾದ ಸ್ಮಾರಕ ಅವಶೇಷಗಳನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಪ್ರಾಚೀನ ಸಾಂಸ್ಕೃತಿಕ ಹೆಗ್ಗುರುಗುಗಳ ಸಂರಕ್ಷಣೆಯ ಅಲಕ್ಷತೆಯೂ ಇಂದಿಗೂ ಅವ್ಯಾಹತವಾಗಿ ನಡೆಯುತ್ತಾ ಬಂದಿರುವುದು ವಿಷಾದನೀಯ ಸಂಗತಿ. ಇವೆಲ್ಲವುಗಳನ್ನು ಸಂರಕ್ಷಿಸಿ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಉನ್ನತಗೊಳಿಸುವ ಹಾಗೂ ವಿಸ್ತರಿಸುವ ಮಹತ್ವದ ಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಳ್ಳಬೇಕಾಗಿರುವುದು ಅವಶ್ಯಕವಾಗಿದೆ. ಕಾಲಮಿತಿಯ ಚೌಕಟ್ಟಗೆ ಒಳಗಾಗಿ ಪ್ರಸ್ತುತ ಯೋಜನೆಯಲ್ಲಿ ಪ್ರಾಚೀನ ಸಾಂಸ್ಕೃತಿಕ ಅವಶೇಷಗಳ ಪರಿಚಯಾತ್ಮಕ ಹಾಗೂ ಸ್ವಲ್ಪ ಮಟ್ಟಿನ ಪರಿಶೀಲನಾತ್ಮಕ ಅಧ್ಯಯನ ಮಾಡುವ ಪ್ರಯತ್ನವನ್ನು ಮಾಡಿದ್ದೇವೆ. ಕ್ಷೇತ್ರಕಾರ್ಯಾವಧಿಯಲ್ಲಿ ಜಿಲ್ಲೆಯ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಒಟ್ಟು ಸುಮಾರು ೨೫೦ಕ್ಕಿಂತ ಹೆಚ್ಚಿನ ದೇವಾಲಯಗಳ ಕುರಿತ ಸಮಗ್ರ ಮಾಹಿತಿಯನ್ನು ಈ ಕೃತಿಯಲ್ಲಿ ನೀಡುವ ಪ್ರಯತ್ನ ಮಾಡಿದ್ದೇವೆ. ಪ್ರಾಕೃತಿಕ ಅನಾನುಕೂಲಗಳಿಂದ ಬೆರಳೆಣಿಕೆಯ ದೇವಾಲಯ ಮಾಹಿತಿ ಅಲಭ್ಯವಾಗಿದೆ. ಒಟ್ಟಾರೆ ವಾಸ್ತು ಶೈಲಿಯ ಹಿನ್ನೆಲೆಯಲ್ಲಿ ಈ ಜಿಲ್ಲೆಗೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ ಅಧ್ಯಯನಗಳ ಜರೂರಿದೆ.

ಸಿ.ಎಸ್. ವಾಸುದೇವನ್
ರಮೇಶ ನಾಯಕ