೩೧.

ಊರು ನೀಲಗುಂದ
ಸ್ಮಾರಕ ಕಲ್ಮೇಶ್ವರ
ಸ್ಥಳ ಊರಿನ ಪಶ್ಚಿಮಕ್ಕೆ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯದಲ್ಲಿ ಗರ್ಭಗೃಹ ಮತ್ತು ನವರಂಗಗಳಿವೆ. ಚೌಕಾಕಾರ ಗರ್ಭಗೃಹದಲ್ಲಿ ಲಿಂಗವಿದೆ. ಇದರ ಮುಚ್ಚಿಗೆಯಲ್ಲಿ ಕಮಲವನ್ನು ಅರಳಿದ ರೀತಿಯಲ್ಲಿ ಕೆತ್ತಲಾಗಿದೆ. ಗರ್ಭಗೃಹದ ಉತ್ತರ ಭಿತ್ತಿಯಲ್ಲಿ ಗೂಡುಗಳಿವೆ. ಇದರ ದ್ವಾರವು ಸರಳವಾಗಿದ್ದು, ಲಲಾಟದಲ್ಲೂ ಯಾವುದೇ ಶಿಲ್ಪವಿಲ್ಲ. ಚೌಕಾಕಾರದ ಅಂತರಾಳ ದ್ವರ ಮತ್ತು ಲಲಾಟಗಳು ಸರಳವಾಗಿವೆ. ಆದರೆ ದ್ವಾರದ ಎರಡೂ ಬದಿಗಳಲ್ಲಿ ಜಾಲಾಂಧ್ರಗಳಿವೆ. ನವರಂಗವು ಚೌಕಾಕಾರವಾಗಿದ್ದು ಮಧ್ಯದಲ್ಲಿ ನಾಲ್ಕು ಕಂಬಗಳಿವೆ. ಕಂಬಗಳು ಚೌಕ, ವೃತ್ತ ಮತ್ತು ಎಂಟು, ಹದಿನಾರು ಮುಖದ ಆಕಾರದಲ್ಲಿದ್ದು, ಅವುಗಳ ಮೇಲೆ ಮಾಲಾಲಂಕಾರ ಹಾಗೂ ಬಳೆಗಳ ಅಲಂಕಾರವನ್ನು ಮಾಡಲಾಗಿದೆ. ಕಂಬಗಳ ಮೇಲೆ ವೃತ್ತಕಾರಾದ ಫಲಕ ಮತ್ತು ಬೋದಿಗೆಗಳಿವೆ. ನವರಂಗವನ್ನು ಪ್ರವೇಶಿಸಲು ದಕ್ಷಿಣ ಮತ್ತು ಪೂರ್ವದಲ್ಲಿ ಪ್ರವೇಶ ದ್ವಾರಗಳಿವೆ. ಈ ದ್ವಾರಗಳು ತಲಾ ನಾಲ್ಕು ಶಾಖೆಗಳಿಂದ ಕೂಡಿದ್ದು ಅವುಗಳಲ್ಲಿನ ಸ್ತಂಭಶಾಖೆಯು ಹೆಚ್ಚು ಅಲಂಕೃತವಾಗಿದೆ. ಲಲಾಟವು ಸರಳವಾಗಿದೆ.

ದೇವಾಲಯದ ಅಧಿಷ್ಠಾನದಲ್ಲಿ ಪದ್ಮ, ತ್ರಿಪಟ್ಟಕುಮದ, ಪದ್ಮಗಳಿವೆ. ಭಿತ್ತಿ ಭಾಗವು ಸರಳವಾಗಿದೆ. ನವರಂಗದ ಹೊರಭಾಗದ ಭಿತ್ತಿಯನ್ನು ಸೈಜುಗಲ್ಲು ಮತ್ತು ಸಿಮೆಂಟ್‌ನಿಂದ ಇತ್ತೀಚೆಗೆ ಕಟ್ಟಲಾಗಿದೆ. ದೇವಾಲಯದ ಮೇಲೆ ಶಿಖರವಿಲ್ಲ. ದೇವಾಲಯದ ಹೊರಭಾಗದಲ್ಲಿ ಒಂದು ಶಾಸನ, ಒಂದು ವೀರಗಲ್ಲು ಮತ್ತು ಮೂರು ನಾಗರ ಕಲ್ಲುಗಳಿವೆ. ದೇವಾಲಯದ ಬಳಿ ಇರುವ ಕಲ್ಯಾಣ ಚಾಲುಕ್ಯರ ಅರಸ ಆರನೇ ವಿಕ್ರಮಾದಿತ್ಯನ ಕಾಲದ ಶಾಸನ ಬಲವರ್ಮಯ್ಯ ಮತ್ತು ಭೋಗಾದಿತ್ಯ ದೇವರ ಪ್ರಶಸ್ತಿಯನ್ನು ಉಲ್ಲೇಖಿಸಿದೆ (ಧಾಜಿಶಾಸೂ, ಸಂ.ಗ. ೯೩; SII, XI, pt. II, No. 204). ಗ್ರಾಮದ ಪಶ್ಚಿಮದ ಹೊಲದಲ್ಲಿರುವ ಕ್ರಿ.ಶ. ೧೫೨೪ರ ಶಾಸನವು (ಧಾಜಿಶಾಸೂ, ಸಂ.ಗ. ೯೪; SII, XV, No. 285) ಮುಳಗುಂದ ಸಿದ್ಧೇಶ್ವರ ದೇವರಿಗೆ ವೆಂಗಲ ನಾಯಕ ನೀಡಿದ ಭೂದಾನವನ್ನು ಕುರಿತು ತಿಳಿಸುತ್ತದೆ.

೩೨.

ಊರು ನೀಲಗುಂದ
ಸ್ಮಾರಕ ಶಿವ
ಸ್ಥಳ ಕಲ್ಮೇಶ್ವರ ಗುಡಿಯ ಪಕ್ಕ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯದ ಪಕ್ಕದಲ್ಲಿ ಮತ್ತೊಂದು ಶೈವ ದೇವಾಲಯವಿದೆ. ಇದು ಗರ್ಭಗೃಹ, ಅಂತರಾಳ, ಮತ್ತು ಮುಖ ಮಂಟಪಗಳನ್ನು ಹೊಂದಿದೆ. ಚೌಕಾಕಾರದ ಗರ್ಭಗೃಹದಲ್ಲಿ ಲಿಂಗವಿದೆ. ಇದರ ದ್ವಾರವು ಸರಳವಾಗಿರುವ ಒಂದು ಶಾಖೆಯಿಂದ ಕೂಡಿದ್ದು, ಲಲಾಟದಲ್ಲಿ ಯಾವುದೇ ಉಬ್ಬುಶಿಲ್ಪವಿಲ್ಲ. ಗರ್ಭಗೃಹದಂತೆಯೇ ತೆರೆದ ಅಂತರಾಳವು ಸರಳವಾಗಿದ್ದು ಇದರ ಮುಂದಿರುವ ಮುಖಮಂಟಪವು ಹಾಳಾಗಿದೆ. ಈ ದೇವಾಲಯದ ಹೊರಭಾಗವು ಸಂಪೂರ್ಣ ಹಾಳಾಗಿದ್ದು ಇತ್ತೀಚೆಗೆ ಮಣ್ಣು ಕಲ್ಲುಗಳಿಂದ ಮುಚ್ಚಲಾಗಿದೆ.

೩೩.

ಊರು ನೀಲಗುಂದ
ಸ್ಮಾರಕ ನಾರಾಯಣ
ಸ್ಥಳ ಊರಿನ ವಾಯವ್ಯ ದಿಕ್ಕಿಗೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ತೆರೆದ ಅಂತರಾಳ ಮತ್ತು ನವರಂಗಗಳಿಂದ ಕೂಡಿದೆ. ಗರ್ಭಗೃಹ ಚೌಕಾಕಾರವಾಗಿದ್ದು, ದರಲ್ಲಿ (ಇತ್ತೀಚಿನ ಕಾಲದ) ನಾರಾಯಣ ಮೂರ್ತಿಯನ್ನು ಪೀಠದ ಮೇಲೆ ಇರಿಸಲಾಗಿದೆ. ಗರ್ಭಗೃಹದ ಮುಚ್ಚಿಗೆಯಲ್ಲಿ ಕಮಲದ ಅಲಂಕರಣವಿದೆ. ಇದರ ದ್ವಾರದಲ್ಲಿ ವಜ್ರ, ಸ್ತಂಭ, ಲತಾ-ಪುಷ್ಪಗಳ ಶಾಖೆಗಳಿವೆ. ತೆರೆದ ಅಂತರಾಳದ ಮುಚ್ಚಿಗೆಯಲ್ಲಿ ಕಮಲದ ಅಲಂಕಾರವಿದೆ. ಇದರ ದ್ವಾರವು ವಿವಿಧ ಶಾಖೆಗಳಿಂದ ಅಲಂಕೃತವಾಗಿದ್ದು, ಲಲಾಟ ಭಾಗದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ನವರಂಗದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳಿವೆ. ಇವು ಚೌಕ, ವೃತ್ತ, ಗಂಟೆಯಾಕಾರದಲ್ಲಿದ್ದು, ವಿವಿಧ ರೀತಿಗಳಿಂದ ಅಲಂಕಾರದಿಂದ ಕೂಡಿದೆ ನವರಂಗದಲ್ಲಿ ಸೂರ್ಯನಾರಾಯಣ ಮತ್ತು ಭಗ್ನ ಉಮಾಮಹೇಶ್ವರ ಮೂರ್ತಿಶಿಲ್ಪಗಳಿವೆ. ನವರಂಗದ ಮುಚ್ಚಿಗೆಯಲ್ಲಿ ಅರಳಿದ ಕಮಲವಿದೆ. ನವರಂಗದ ದಕ್ಷಿಣ ಮತ್ತು ಪೂರ್ವಕ್ಕೆ ಪ್ರವೇಶ ದ್ವಾರವಿದೆ. ದ್ವಾರದ ಮೇಲೆ ಶಾಲಾಶಿಖರದ ಮಾದರಿಗಳನ್ನು ಕೆತ್ತಲಾಗಿದೆ.

ದೇವಾಲಯದ ಅಧಿಷ್ಠಾನದಲ್ಲಿ ಉಪಾನ, ಪದ್ಮ, ತ್ರಿಪಟ್ಟ ಕುಮುದಗಳ ಭಾಗಗಳಿವೆ. ಭಿತ್ತಿಯು ಪೂರ್ಣಕುಂಭ, ಕುಡ್ಯಸ್ತಂಭ, ಶಿಖರದ ಮಾದರಿ ಮತ್ತು ದೇವಕೋಷ್ಠಗಳಿಂದ ಅಲಂಕೃತವಾಗಿದೆ. ಗರ್ಭಗೃಹದ ಮೇಲೆ ತ್ರಿತಳ ಶಿಖರ ಹಾಗೂ ಸ್ತೂಪಿ ಇದೆ.

ಈ ಗ್ರಾಮದ ಅಂಗಡಿ ರಾಚಪ್ಪನ ಮನೆಯ ಹತ್ತಿರ ದೊರೆತ ರಾಷ್ಟ್ರಕೂಟ ಅರಸ ಒಂದನೆ ಅಮೋಘವರ್ಷನ ಕ್ರಿ.ಶ. ೮೬೬ರ ಶಾಸನವು (ಧಾಜಿಶಾಸು, ಸಂ.ಗ. ೯೧; ಪು. ೧೧, I, VI, pp. 98-108), ದೇವಣ್ಣಯ್ಯನು ಬೆಳ್ವೊಲ-೩೦೦ನ್ನು ಆಳುತ್ತಿರುವಾಗ ನೀಗುರಂದ್ ಮಹಾಜನರಿಗೆ ಬಿಟ್ಟ ತುಪ್ಪದ ಸುಂಕದಾನವನ್ನು ಕುರಿತು ವಿವರಿಸುತ್ತದೆ. (ಧಾಜಿಗ್ಯಾ, ಪು. ೯೬೯-೭೦). ಇಲ್ಲಿನ ಅಗಸಿಯ ಹತ್ತಿರ ಇರುವ ಶಾಸನವು ಕಲ್ಯಾಣ ಚಾಲುಕ್ಯ ಅರಸ ಮೂರನೇ ತೈಲನ ಕಾಲದ್ದಾಗಿದ್ದು, ಅದು ಶೋಭರಸನು ವಿಷ್ಣುಭಟ್ಟನಿಗೆ ನೀರ್ಗುಂದ ಗ್ರಾಮದಲ್ಲಿ ಭೂಮಿಯನ್ನು ದಾನ ನೀಡಿದನೆಂದು ತಿಳಿಸುತ್ತದೆ. (ಧಾಜಿಶಾಸೂ, ಸಂ.ಗ. ೯೨; ಪು. ೧೧, EI, IV, pp. 204-108).

೩೪.

ಊರು ನೀಲಗುಂದ
ಸ್ಮಾರಕ ಸೋಮೇಶ್ವರ
ಸ್ಥಳ ಊರ ವಾಯವ್ಯಕ್ಕೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ ರಾ.ಪು.ಇ.

ಇದು ಗರ್ಭಗೃಹ, ತೆರೆದ ಅಂತರಾಳ ಮತ್ತು ನವರಂಗಗಳನ್ನು ಹೊಂದಿದೆ. ಗರ್ಭಗೃಹವು ಚೌಕಾಕಾರವಾಗಿದ್ದು ಅದರಲ್ಲಿ ಶಿವಲಿಂಗವಿದೆ. ಇದರ ಮುಚ್ಚಿಗೆಯಲ್ಲಿ ಅರಳಿದ ಕಮಲವಿದೆ. ಇದರ ದ್ವಾರವು ನಾಲ್ಕು ಶಾಖೆಗಳಿಂದ ಕೂಡಿದ್ದು, ಲಲಾಟ ಸರಳವಾಗಿದೆ. ತೆರೆದ ಅಂತರಾಳದ ಮುಚ್ಚಿಗೆಯಲ್ಲಿ ಅರಳಿದ ಕಮಲದ ಅಲಂಕರಣವಿದೆ. ನವರಂಗದಲ್ಲಿ ಅಲಂಕೃತ ನಾಲ್ಕು ಕಂಬಗಳಿದ್ದು, ಅವುಗಳಲ್ಲಿ ಚೌಕ, ವೃತ್ತ ಮತ್ತು ಗಂಟೆಯ ಅಲಂಕಾರವಿದೆ. ಪುಷ್ಪಕಾರದ ಬೋದಿಗೆಗಳಿವೆ. ಮುಚ್ಚಿಗೆಯಲ್ಲಿ ಕಮಲದ ಅಲಂಕಾರವಿದೆ. ನವರಂಗದಲ್ಲಿ ಕಕ್ಷಾಸನದ ಬದಲು ಜಗುಲಿಯಿದೆ. ಇಲ್ಲಿನ ಕಂಬವೊಂದರ ಮೇಲೆ ಶಾಸನವಿದೆ.

ದೇವಾಲಯಕ್ಕೆ ಉಪಾನ, ಪದ್ಮ, ತ್ರಿಪಟ್ಟಕುಮುದ ಅಧೋಪದ್ಮಗಳಿರುವ ಅಧಿಷ್ಠಾನವಿದೆ. ಸರಳವಾಗಿರುವ ಭಿತ್ತಿಯಿದೆ. ಭಿತ್ತಿಯ ಕೆಲಭಾಗಗಳು ಅಲ್ಲಲ್ಲಿ ನಶಿಸಿದೆ. ಮೂರು ಹಂತದ (ತಳದ) ಶಿಖರವಿದೆ. ಇದು ಶಾಲಾ, ಕೂಟ, ಪಂಜರಗಳೊಂದಿಗೆ ಸುಖನಾಸಿಯಿದೆ. ದಕ್ಷಿಣದ ಗರ್ಭಗೃಹದ ಮೇಲಿದ್ದ ಶಿಖರವು ನಶಿಸಿದೆ.

೩೫.

ಊರು ಪಾಪನಾಶಿ
ಸ್ಮಾರಕ ಕಲ್ಲೇಶ್ವರ
ಸ್ಥಳ ಊರಿನ ನೈರುತ್ಯಕ್ಕೆ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿಂದ ಕೂಡಿದೆ. ಗರ್ಭಗೃಹವು ಚೌಕಾಕಾರವಾಗಿದ್ದು ಅದರಲ್ಲಿ ಕಲ್ಲೇಶ್ವರ ಎಂದು ಕರೆಯಲ್ಪಡುವ ಶಿವಲಿಂಗವಿದೆ. ಪೂರ್ವ ಮತ್ತು ದಕ್ಷಿಣದ ಭಿತ್ತಿಯ ಬಲಭಾಗದಲ್ಲಿ ಕಪಾಟುಗಳಿವೆ. ಉತ್ತರದ ಗೋಡೆಯಲ್ಲಿ ದೇವಕೋಷ್ಠವಿದೆ. ಇದರ ಮುಚ್ಚಿಗೆಯಲ್ಲಿ ಅರಳಿದ ತಾವರೆ ಇದೆ. ಗರ್ಭಗೃಹದ ಪ್ರವೇಶ ದ್ವಾರವು ಐದು ಶಾಖೆಗಳಿಂದ ಕೂಡಿದ್ದು, ಇವುಗಳಲ್ಲಿ ಸ್ತಂಭಶಾಖೆಯನ್ನು ಹೊರತುಪಡಿಸಿ ಉಳಿದವುಗಳು ಸರಳವಾಗಿವೆ.

ಗರ್ಭಗೃಹದ ಮುಂಭಾಗದಲ್ಲಿನ ಚೌಕಾಕಾರದ ಅಂತರಾಳವು ಸರಳವಾಗಿದೆ. ದ್ವಾರವು ಪಂಚಶಾಖೆಗಳಿಂದ ಅಲಂಕೃತವಾಗಿದ್ದು, ಸರಳವಾಗಿದೆ. ಅದರಲ್ಲಿನ ಪುಷ್ಟ ಮತ್ತು ವಜ್ರಶಾಖೆಗಳು ಹೆಚ್ಚು ಅಲಂಕೃತವಾಗಿದೆ. ಈ ದ್ವಾರದ ಎರಡೂ ಬದಿಗಳು ಹಾಗೂ ಲಲಾಟದ ಮೇಲ್ಭಾಗದಲ್ಲಿ ಜಾಲಾಂಧ್ರಗಳಿವೆ.

ನವರಂಗದಲ್ಲಿ ಚೌಕ-ವೃತ್ತಾಕಾರದ ನಾಲ್ಕು ಕಂಬಗಳಿವೆ. ಇದರ ಭುವನೇಶ್ವರಿಯಲ್ಲಿ ಅರಳಿದ ತಾವರೆಯ ಅಲಂಕಾರವಿದೆ. ಮೂಲತಃ ಈ ಭಾಗದ ಸುತ್ತ ಇದ್ದ ಗೋಡೆ ಬಿದ್ದು ಹೋಗಿರುವ ಸಾಧ್ಯತೆ ಇದೆ. ನಾಲ್ಕು ಕಂಬಗಳ ಮಧ್ಯಭಾಗದಲ್ಲಿ ನಂದಿ ವಿಗ್ರಹವನ್ನು ಇತ್ತೀಚೆಗೆ ಪ್ರತಿಷ್ಠಾಪಿಸಲಾಗಿದೆ.

ದೇವಾಲಯದ ಅಧಿಷ್ಠಾನದ ಬಹುತೇಕ ಭಾಗಗಳು ಮಣ್ಣಲ್ಲಿ ಮುಚ್ಚಿವೆ. ಅದರ ಮೇಲಿನ ಕಪೋತ ಭಾಗ ಮಾತ್ರ ಕಂಡುಬರುತ್ತದೆ. ಹೊರ ಭಿತ್ತಿಯಲ್ಲಿ ಅರೆಗಂಬಗಳ ವಿನ್ಯಾಸ ಹಾಗೂ ಶಿಖರದ ಮಾದರಿಗಳನ್ನು ಇತ್ತೀಚಿಗೆ ಸಿಮೆಂಟಿನಿಂದ ಮಾಡಿದ್ದಾರೆ. ದೇವಾಲಯದ ಸುತ್ತಲೂ ಈಚೆಗೆ ನಿರ್ಮಿಸಿದ ಪ್ರಕಾರವಿದೆ.

ಇದೇ ಊರಿನ ಮಧ್ಯಭಾಗದಲ್ಲಿ ದುರ್ಗಮ್ಮ ದೇವಾಲಯವಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯವನ್ನು ಹಳೆಯ ಬುನಾದಿಯ ಮೇಲೆ ನಿರ್ಮಿಸಿದಂತೆ ಕಂಡುಬರುತ್ತದೆ. ಇದೇ ಗ್ರಾಮದಲ್ಲಿನ ಹನುಮಂತರಾಯ ದೇವಾಲಯವನ್ನು ಹಳೆಯ ದೇವಾಲಯದ ಚಾಲುಕ್ಯ ಶೈಲಿಯ ಕಂಬಗಳನ್ನು ಬಳಸಿ ಇತ್ತೀಚಿಗೆ ನಿರ್ಮಿಸಿದ್ದಾರೆ.

೩೬.

ಊರು ಬಳಗಾನೂರು
ಸ್ಮಾರಕ ಕಾಶಿವಿಶ್ವನಾಥ
ಸ್ಥಳ ಊರಿನ ಪೂರ್ವಕ್ಕೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವಾಭಿಮುಖ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಸ್ಥಳೀಯರಿಂದ ಕಾಶಿವಿಶ್ವನಾಥ ಎಂದು ಕರೆಯಲ್ಪಡುವ ಈ ದೇವಾಲಯವನ್ನು ಇತ್ತೀಚಿನ ದಿನಗಳಲ್ಲಿ ಪುನರ್‌ನಿರ್ಮಿಸಲಾಗಿದೆ. ಇದು ಕೇವಲ ಗರ್ಭಗೃಹ ಮಾತ್ರ ಹೊಂದಿದ್ದು, ಅದರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಅಕ್ಕಮಹಾದೇವಿ, ಶರಣಬಸಪ್ಪ ಮತ್ತು ಗಣೇಶನ ಶಿಲ್ಪಗಳನ್ನು ಇತ್ತೀಚಿಗೆ ಪ್ರತಿಷ್ಠಾಪಿಸಲಾಗಿದೆ. ಉಳಿದಂತೆ ಯಾವುದೇ ವಾಸ್ತುವೈಶಿಷ್ಟ್ಯಗಳನ್ನು ಈ ದೇವಾಲಯ ಒಳಗೊಂಡಿಲ್ಲ. ಈ ಗ್ರಾಮದ ವೀರಭದ್ರ ಗುಡಿಯ ಎದುರಿನಲ್ಲಿ ಕಲ್ಯಾಣ ಚಾಲುಕ್ಯರ ಒಂದನೇ ಸೋಮೇಶ್ವರನ ಕ್ರಿ.ಶ. ೧೦೫೫ರ ಶಾಸನವು ಭೂದಾನ ಮಾಡಿದ ವಿಷಯವನ್ನು ಉಲ್ಲೇಖಿಸುತ್ತದೆ. (ಧಾ.ಜಿ.ಶಾ.ಸೂ, ಸಂ.ಗ. ೯೫; ಪು. ೧೧, SII, XI, pt. I, No. 90) ಇಲ್ಲಿಯ ಚಾವಡಿ ಎದುರು ಹೊಯ್ಸಳರ ಎರಡನೇ ಬಲ್ಲಾಳನ ಕ್ರಿ.ಶ. ಸುಮಾರು ೧೩ನೇ ಶತಮಾನದ ಶಾಸನವಿದ್ದು, ಅದು ಭೂದಾನ ಮಾಡಿದ ಮಾಹಿತಿ ನೀಡುತ್ತದೆ. (ಧಾ.ಜಿ.ಶಾ.ಸೂ, ಸಂ.ಗ. ೯೬; ಪು. ೧೧, SII, XI, No. 223). ಇಲ್ಲಿನ ವಿರಕ್ತಮಠದ ಹತ್ತಿರದ ಇದೇ ಕಾಲದ ಶಾಸನವು (ಕ್ರಿ.ಶ. ೧೮೮೬) ದೇಪರಸನಿಂದ ಭೂದಾನ ನೀಡಿದ ವಿವರವನ್ನು ದಾಖಲಿಸುತ್ತದೆ (ಧಾ.ಜಿ.ಶಾ.ಸೂ, ಸಂ.ಗ. ೯೭; ಪು. ೧೧, SII, XV., No 624).

೩೭

ಊರು ಬಳಗಾನೂರು
ಸ್ಮಾರಕ ಹನುಮಂತ
ಸ್ಥಳ ಊರಿನ ಪಶ್ಚಿಮಕ್ಕೆ
ಕಾಲ ಕ್ರಿ.ಶ. ೧೭-೧೮ನೇ ಶತಮಾನ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಚೌಕಾಕಾರದ ಗರ್ಭಗೃಹ ಮತ್ತು ಎರಡು ಹಂತದಲ್ಲಿ ನಿರ್ಮಿಸಿದ ಮುಖಮಂಟಪನ್ನು ಹೊಂದಿದೆ. ಗರ್ಭಗೃಹದ ಹನುಮಂತನ ಮೂರ್ತಿಯಿದ್ದು ಆಕರ್ಷಕವಾಗಿದೆ. ಪ್ರಾಯಶಃ ಇದು ೧೭-೧೮ನೇ ಶತಮಾನದಲ್ಲಿ ನಿರ್ಮಿತವಾಗಿರಬಹುದು. ಗರ್ಭಗೃಹದ ಮುಂದಿನ ತೆರೆದ ಮುಖಮಂಟಪವನ್ನು ಇತ್ತೀಚಿಗೆ ನಿರ್ಮಿಸಲಾಗಿದೆ. ಈ ದೇವಾಲಯದ ಭಿತ್ತಿ ಮತ್ತು ಅಧಿಷ್ಠಾನವು ಸರಳವಾಗಿದೆ. ದೇವಾಲಯಕ್ಕೆ ಪ್ರಕಾರವಿದೆ. ಬಾದಾಮಿ ಚಾಲುಕ್ಯರ ಕಾಲದ ಗಜಲಕ್ಷ್ಮೀ, ತ್ರುಟಿತ ಸಪ್ತಮಾತೃಕೆಯರ ಶಿಲ್ಪಗಳಿವೆ. ಪ್ರಕಾರ ದ್ವಾರದ ಎರಡೂ ಬದಿಗಳಲ್ಲಿ ಎರಡು ಶಾಸನಗಳಿವೆ.

೩೮

ಊರು ಬೆಟಗೇರಿ
ಸ್ಮಾರಕ ಕಲ್ಮೇಶ್ವರ
ಸ್ಥಳ ಮಲ್ಲರಾಯನ ಕಟ್ಟೆಯ ಹತ್ತಿರ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ಗರ್ಭಗೃಹವು ಚೌಕಾಕಾರವಾಗಿದ್ದು, ಅದರಲ್ಲಿ ಲಿಂಗವಿದೆ. ಇದರ ಮುಚ್ಚಿಗೆ ಸರಳವಾಗಿದೆ. ದ್ವಾರವು ನಾಲ್ಕು ಶಾಖೆಗಳಿಂದ ಕೂಡಿದ್ದು, ಲಲಾಟವು ಸರಳವಾಗಿದೆ. ಇದರ ಮುಂಭಾಗಕ್ಕೆ ಅಂತರಾಳವಿದೆ. ಇದರ ಮಧ್ಯದಲ್ಲಿ ಎರಡು ಕಂಬಗಳಿದ್ದು ಅವು ಎಂಟು ಹದಿನಾರು ಮುಖಗಳನ್ನೊಳಗೊಂಡಿದೆ. ಕಂಬಗಳ ಮೇಲೆ ಬಸವ ಮೊದಲಾದ ವಿಗ್ರಹಗಳನ್ನು ಕೆತ್ತಲಾಗಿದೆ. ನವರಂಗವು ಅಲಂಕೃತ ನಾಲ್ಕು ಕಂಬಗಳಿಂದ ಕೂಡಿದೆ.

ಗುಡಿಯ ಅಧಿಷ್ಠಾನವು ಕಂಪ, ಗಳ, ಪದ್ಮ, ಉಪಾನ, ತ್ರಿಪಟ್ಟಕುಮುದ ಮತ್ತು ಪದ್ಮಗಳಿಂದ ಕೂಡಿದ್ದು, ಕಪೋತಗಳಿಂದ ಅಲಂಕೃತವಾಗಿದೆ. ಭಿತ್ತಿಯಲ್ಲಿ ಅಲ್ಲಲ್ಲಿ ಶಿಖರದ ಮಾದರಿಗಳು ಹಾಗೂ ಕುಡ್ಯಸ್ತಂಭಗಳು ಇವೆ. ನವರಂಗದ ಉತ್ತರ, ದಕ್ಷಿಣ ಮತ್ತು ಪೂರ್ವದ ಲಳ ಭಿತ್ತಿಯ ಮಧ್ಯಭಾಗದಲ್ಲಿ ದೇವಕೋಷ್ಠಗಳಿವೆ. ಈ ದೇವಕೋಷ್ಠಗಳನ್ನು ಉತ್ತಮವಾಗಿ ಅಲಂಕರಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ಬಸವ, ಲಿಂಗ, ನಾಗರಕಲ್ಲು ಹಾಗೂ ಶಾಸನಗಳಿವೆ. ಶಾಸನವು ರಾಷ್ಟ್ರಕೂಟ ಅರಸ ಎರಡನೇ ಕೃಷ್ಣನ ಕಾಲಕ್ಕೆ ಸೇರಿದ್ದು ಕ್ರಿ.ಶ. ೯೮೮, ಅದು ಕಲಿಗಳ್ಳ ಎಂಬ ವೀರನ ಮರಣವನ್ನು ತಿಳಿಸುತ್ತದೆ. (ಧಾ.ಜಿ.ಶಾ.ಸೂ. ಸಂ.ಗ. ೯೮; ಪು. ೧೧, SII, XI, pt.I, No. 21; EI, XII, pp. 187-190)

೩೯

ಊರು ಅಂತೂರು-ಬೆಂತೂರು
ಸ್ಮಾರಕ ನಾರಾಯಣ
ಸ್ಥಳ ಊರಿನ ದಕ್ಷಿಣಕ್ಕೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯದಲ್ಲಿ ಗರ್ಭಗೃಹ ಮತ್ತು ಅಂತರಾಳಗಳು ಮಾತ್ರವಿದ್ದು, ಅದರ ಮುಂದಿನ ನವರಂಗದ ಭಾಗಗಳು ಸಂಪೂರ್ಣ ನಶಿಸಿಹೋಗಿ ಅದರ ಅಧಿಷ್ಠಾನ ಭಾಗ ಮಾತ್ರ ಉಳಿದುಕೊಂಡಿದೆ. ಗರ್ಭಗೃಹವು ಚೌಕಾಕಾರವಾಗಿದ್ದು ಅದರಲ್ಲಿ ನಾರಾಯಣನ ಮೂರ್ತಿಶಿಲ್ಪ ಇದೆ. ಅಲ್ಲಿಯೇ ಸೂರ್ಯನಾರಾಯಣನ ಪೀಠಗಳಿವೆ. (ನಾರಾಯಣ ಮೂರ್ತಿಯಿರುವ ಕೆಳಗಿನ ಪೀಠವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅಲ್ಲಿ ಪ್ರಾಯಶಃ ಲಿಂಗವಿದ್ದಿರಬಹುದೆಂಬುದು ತಿಳಿಯುತ್ತದೆ.) ನಾರಾಯಣನ ಮೂರ್ತಿ ಕೀರಿಟಧಾರಿಯಾಗಿದ್ದು, ಸ್ಥಾನಿಕ ಭಂಗಿಯಲ್ಲಿದೆ. ಚತುರ್ಭುಜಧಾರಿಯಾಗಿರುವ ಈ ಮೂರ್ತಿಯ ಮೇಲಿನ ಬಲಗೈನಲ್ಲಿ ಶಂಖ, ಮೇಲಿನ ಎಡಗೈನಲ್ಲಿ ಚಕ್ರ, ಕರಳಗಿನ ಎಡಗೈನಲ್ಲಿ ಗದೆ ಇದೆ. ಈ ಮೂರ್ತಿಯ ಕೆಳಭಾಗದ ಎರಡೂ ಕಡೆ ಶ್ರೀದೇವಿ ಹಾಗೂ ಭೂ ದೇವಿಯರಿದ್ದಾರೆ. ಈ ಮೂರ್ತಿಯ ಮೇಲಿನ ಭಾಗದಲ್ಲಿ ಮಕರತೋರಣ ಯುಕ್ತ ಪ್ರಭಾವಳಿ ಇದೆ. ಗರ್ಭಗೃಹದ ಮುಚ್ಚಿಗೆಯಲ್ಲಿ ಕಮಲದ ಮೊಗ್ಗು ಇಳಿಬಿದ್ದ ರೀತಿಯ ಅಲಂಕಾವಿದೆ. ಇದರ ದ್ವಾರವು ನಾಲ್ಕು ಶಾಖೆಗಳಿಂದ ಕೂಡಿದ್ದು, ಲಲಾಟ ಸರಳವಾಗಿದೆ. ಅಂತರಾಳವು ಸರಳವಾಗಿದ್ದು, ಅದರ ಮೇಲಿನ ಮುಚ್ಚಿಗೆಯಲ್ಲಿ ಕಮಲದ ಮೊಗ್ಗಿನ ಅಲಂಕಾರವಿದೆ. ಈ ದೇವಾಲಯದ ಹೊರಭಾಗವನ್ನು ಸಣ್ಣಕಲ್ಲುಗಳಿಂದ ನಿರ್ಮಿಸಲಾಗಿದ್ದು, ಕೆಲಕಾಲಕ್ಕೆ ದುರಸ್ಥಿ ಮಾಡಿರುವುದು ಗೋಚರವಾಗುತ್ತದೆ.

೪೦

ಊರು ಬೆಂತೂರು
ಸ್ಮಾರಕ ಶಂಭುಲಿಂಗೇಶ್ವರ
ಸ್ಥಳ ಊರಿನ ವಾಯವ್ಯಕ್ಕೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಮತ್ತು ಇತ್ತೀಚಿಗೆ ನಿರ್ಮಿಸಿದ ಎರಡು ಕಂಬಗಳ ಮುಖಮಂಟಪವನ್ನೊಳಗೊಂಡಿದೆ. ಚೌಕಾಕಾರದ ಗರ್ಭಗೃಹದಲ್ಲಿ ಶಿವಲಿಂಗವಿದೆ. ಇದರ ಉತ್ತರ ಮತ್ತು ಪಶ್ಚಿಮಕ್ಕೆ ಕಪಾಟುಗಳಿವೆ. ಮುಚ್ಚಿಗೆ ಸರಳವಾಗಿದ್ದು, ದ್ವಾರದಲ್ಲಿ ನಾಲ್ಕು ಅಲಂಕೃತ ಶಾಖೆಗಳಿವೆ. ಲಲಾಟದಲ್ಲಿ ಯಾವದೇ ಉಬ್ಬುಶಿಲ್ಪಗಳಿಲ್ಲ. ಅಂತರಾಳದ ಮುಚ್ಚಿಗೆಯನ್ನು ಹೊಸದಾಗಿ ನಿರ್ಮಿಸಲಾಗಿದೆ. ದ್ವಾರವು ಸರಳ ಶಾಖೆಗಳಿಂದ ಕೂಡಿದ್ದು, ಲಲಾಟವು ಸರಳವಾಗಿದೆ. ಆದರೆ ದ್ವಾರದ ಎರಡು ಬದಿಗಳಲ್ಲಿ ಪುಷ್ಪ ಜಾಲಾಂಧ್ರಗಳಿವೆ. ನವರಂಗದಲ್ಲಿ ಸುಂದರ ನಾಲ್ಕು ಕಂಬಗಳಿವೆ. ಅವು ಚೌಕ, ವೃತ್ತ ಹಾಗು ಗಂಟೆಯಾಕಾರದ ಅಲಂಕರಣೆಯಿಂದ ಕೂಡಿದೆ. ಈ ಕಂಬಗಳಿಗೆ ಪುಷ್ಟ ಬೋಧಿಗೆಗಳಿವೆ. ಮುಚ್ಚಿಗೆಯ ಭಾಗದಲ್ಲಿ ಕಮಲದ ಮೊಗ್ಗಿನ ರೀತಿಯ ಅಲಂಕಾರವಿದೆ. ನವರಂಗದಲ್ಲಿ ಸಪ್ತಮಾತೃಕೆಯರ ಫಲಕವನ್ನು ಇಡಲಾಗಿದೆ. ನವರಂಗವನ್ನು ಪ್ರವೇಶಿಸಲು ಪೂರ್ವ ಹಾಗೂ ದಕ್ಷಿಣಕ್ಕೆ ದ್ವಾರಗಳಿವೆ ದಕ್ಷಿಣ ದ್ವಾರವು ನಾಲ್ಕು ಶಾಖೆಗಳಿಂದ ಮತ್ತು ಸರಳ ಲಲಾಟದಿಂದ ಕೂಡಿದೆ. ನವರಂಗದಲ್ಲಿನ ಮುಂಭಾಗದ ಎರಡು ಕಂಬಗಳಲ್ಲಿ ಶಾಸನಗಳಿವೆ. ದೇವಾಲಯದ ಅಧಿಷ್ಠಾನವು ಪಟ್ಟಿಕೆಗಳಿಂದ ಕೂಡಿದೆ. (ಧಾಜಿಗ್ಯಾ, ಪು. ೯೭೯) ಭಿತ್ತಿಯು ಸರಳವಾಗಿದೆ. ಮರದ ಎರಡು ಕಂಬ ಮತ್ತು ಹಲಗೆಗಳನ್ನು ಬಳಸಿ ಸರಳ ಮುಖಮಂಟಪವನ್ನು ನಿರ್ಮಿಸಲಾಗಿದೆ.

ಊರಿನ ಅನ್ನದಾನಪ್ಪ ತುಪ್ಪರಿಯವರ ಮನೆಯ ಗೋಡೆಯಲ್ಲಿನ ವೀರಗಲ್ಲು ಶಾಸನವು ರಾಷ್ಟ್ರಕೂಟರ ಅರಸ ಒಂದನೇ ಅಮೋಘವರ್ಷನ ಕ್ರಿ.ಶ. ೮೬೪ರ ಕಾಲದ್ದಾಗಿದೆ. (ಧಾ.ಜಿ.ಶಾ.ಸೂ. ಸಂ.ಗ. ೯೯; ಪು. ೧೧, SII, XI, pt. I, No. 10) ಶಾಸನವು ಸಾಕಷ್ಟು ತೃಟಿತವಾಗಿದೆ. ಊರ ಕೆರೆಯ ಸಮೀಪದ ಕಲ್ಯಾಣ ಚಾಲಕ್ಯ ಅರಸ ಒಂದನೇ ಸೋಮೇಶ್ವರನ ಕ್ರಿ.ಶ. ೧೦೪೩ರ (ಧಾಜಿಶಾಸೂ ಸಂ.ಗ. ೧೦೦) ಶಾಸನವು ಬೆಳ್ವೊಲ ಹಾಗೂ ಬೆಣತೂರ ಅಗ್ರಹಾರಗಳನ್ನು ಉಲ್ಲೇಖಿಸಿದೆ. ಇದೇ ಅರಸನ ಕ್ರಿ.ಶ. ೧೦೪೯ರ ಶಾಸನವು (ಧಾಜಿಶಾಸೂಸಂಗ ೧೦೧; ಪು. ೧೧, SII, XI, pt. I, No. 81) ಎರಡುನೂರರ ಪಡರ್ಗಡೆಯ ಮಗ ಮಾದಿರಾಜನು ಗೋಗ್ರಹಣದಲ್ಲಿ ಆಕಳುಗಳನ್ನು ರಕ್ಷಿಸಿದನೆಂದು ದಾಖಲಿಸಿದೆ. ಇದೇ ದೇವಾಲಯದಲ್ಲಿನ ಕಬಂದಲ್ಲಿರುವ ಹೊಯ್ಸಳ ಅರಸ ಇಮ್ಮಡಿ ಬಲ್ಲಾಳನ ಕ್ರಿ.ಶ. ೧೨೦೦ರ ಶಾಸನ (ಧಾ.ಜಿ.ಶಾಸೂ.ಸಂ.ಗ. ೧೦೨ ಪು. ೧೧, SII, XV, No. ೨೧೫) ಸ್ವಯಂಭೂದೇವರಿಗೆ ಸುವರ್ಣದಾನ ಮಾಡಿದ ವಿಷಯವನ್ನು ದಾಖಲಿಸಿದೆ. ಇವನ ಕ್ರಿ.ಶ. ೧೨೦೫ರ ಶಾಸನ (ಧಾ.ಜಿ.ಶಾ.ಸೂ.ಸಂ.ಗ. ೧೦೩; ಪು. ೧೧, SII, XV, pt. I, No. 218) ಸೋಮಯ್ಯನ ಸ್ವಯಂಭೂದೇವರಿಗೆ ಸುವರ್ಣದಾನ ನೀಡಿದನೆಂದು ತಿಳಿಸುತ್ತದೆ. ಯಾದವರ ಸಿಂಘಣನ ಕ್ರಿ.ಶ. ೧೨೧೪ರ ಶಾಸನವು ಹಿರಿಯಕೆರೆಗೆ ಭೂದಾನ ಮಾಡಿದ ವಿಷಯ ತಿಳಿಸಿದರೆ (ಧಾ.ಜಿ.ಶಾ.ಸೂ. ಸಂ.ಗ. ೧೦೪; ಪು. ೧೧, SII, XV, No. 161) ಬೆಣಗೂರದ ಸೋಮನಾಥಭಟ್ಟನಿಗೆ ಬೂದಾನ ಮಾಡಿದ ವಿಷಯ ಹಾಗೂ ಇನ್ನೊಂದು ಕಂಬದ ಮೇಲಿನ ಮತ್ತೊಂದು ಶಾಸನವು ವೈಜಕಬ್ಬೆಯು ನಿರ್ಮಿಸಿದ ಕಂಬ ಎಂದು ತಿಳಿಸುತ್ತದೆ. (ಧಾ.ಜಿ.ಶಾ.ಶೂ.ಸಂ.ಗ. ೧೦೫; ಪು. ೧೧, ಮತ್ತು ೧೦೬).