೨೧.

ಊರು ಚಿಂಚಲಿ
ಸ್ಮಾರಕ ಕಲ್ಮೇಶ್ವರ
ಸ್ಥಳ ಊರಿನ ವಾಯುವ್ಯಕ್ಕೆ
ಕಾಲ ಕ್ರಿಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದಲ್ಲಿ ಪ್ರಾಚೀನ ಕಾಲದ ಗರ್ಭಗೃಹ ಮಾತ್ರ ಉಳಿದಿದ್ದು ಅದರ ಮುಂದೆ ಇತ್ತೀಚಿಗೆ ನಿರ್ಮಿಸಿದ ಆಧುನಿಕ ಶೈಲಿಯ ಮುಖಮಂಟಪವಿದೆ. ಗರ್ಭಗೃಹದ ಪಶ್ಚಿಮ ಮತ್ತು ದಕ್ಷಿಣದ ಭಿತ್ತಿಗಳಲ್ಲಿ ದೇವಕೋಷ್ಠಗಳಿವೆ. ಭುವನೇಶ್ವರಿಯಲ್ಲಿ ಯಾವದೇ ಅಲಂಕಾರವಿರದೆ ಸರಳವಾಗಿದೆ. ಇದರ ಬಾಗಿಲವಾಡವು ಹಾಳಾಗಿದ್ದು ಹೊಸ್ತಿಲು ಮಾತ್ರ ಉಳಿದುಕೊಂಡಿದೆ. ಮುಖಮಂಟಪದಲ್ಲಿ ಸರಳವಾದ ನಾಲ್ಕು ಕಂಬಗಳಿದ್ದು, ದೇವಾಲಯದ ಮೇಲ್ಛಾವಣಿಯನ್ನು ಕಡಪಕಲ್ಲು ಮತ್ತು ಮರ ಬಳಸಿ ನಿರ್ಮಿಸಲಾಗಿದೆ. ಈ ದೇವಾಲಯದ ಅಧಿಷ್ಠಾನ ಮತ್ತು ಭಿತ್ತಿ ಭಾಗಗಳು ಸರಳವಾಗಿವೆ. ಮಲ್ಲಿಕಾರ್ಜುನ ದೇವಾಲಯದ ಗೋಡೆಯ ಮೇಲಿರುವ ಶಾಸನವು ಕಲ್ಯಾಣ ಚಾಲುಕ್ಯರ ಅರಸ ನಾಲ್ಕನೇ ಸೋಮೇಶ್ವರನ ಕಾಲಕ್ಕೆ ಸೇರಿದ್ದು ಅದು ಕ್ರಿ.ಶ. ೧೦೮೫ರಲ್ಲಿ ಜಕ್ಕಯ್ಯನಿಂದ ಮಲ್ಲಿಕಾರ್ಜುನ ದೇವರಿಗೆ ಭೂದಾನ ನೀಡಿದ ವಿವರಗಳನ್ನು ದಾಖಲಿಸಿದೆ. (ಧಾ.ಜು.ಶಾಸೂ, ಸಂ.ಗ. ೮೪; ಪು. ೧೧, SII, XV, No. 64).

೨೨.

ಊರು ಚಿಂಚಲಿ
ಸ್ಮಾರಕ ನಗರೇಶ್ವರ
ಸ್ಥಳ ಊರಿನ ಈಶಾನ್ಯಕ್ಕೆ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯಕ್ಕೆ ಗರ್ಭಗೃಹ, ಅಂತರಾಳ, ಅರ್ಧಮಂಟಪ ಮತ್ತು ನವರಂಗಗಳಿವೆ. ಗರ್ಭಗೃಹವು ಆಯತಾಕಾರವಾಗಿದ್ದು, ಅದರಲ್ಲಿ ಶಿವಲಿಂಗವಿದೆ. ಇದರ ದ್ವಾರವು ಮೂರು ಶಾಖೆಗಳಿಂದ ಕೂಡಿದ್ದು, ಮಧ್ಯದಲ್ಲಿ ಸ್ತಂಭಶಾಖೆಗಳಿವೆ. ಲಲಾಟವು ಸರಳವಾಗಿದೆ. ಗರ್ಭಗೃಹದ ಮುಂದೆ ಅಂತರಾಳವಿದೆ. ಅದರ ಮುಂದೆ ತೆರೆದ ಅರ್ಧಮಂಟಪವಿದ್ದು, ಅದರ ಉತ್ತರ ಮತ್ತು ಪಶ್ಚಿಮ ಭಾಗದ ಒಳಭಿತ್ತಿಗಳಲ್ಲಿ ದೇವಕೋಷ್ಠಗಳಿವೆ. ಇವುಗಳ ದ್ವಾರವನ್ನು ಬಾಗಿಲವಾಡದ ರೀತಿಯಲ್ಲಿ ಸಿಂಗರಿಸಲಾಗಿದೆ. ಅರ್ಧಮಂಟಪದ ಮುಂಭಾಗದಲ್ಲಿ ನವರಂಗವಿದ್ದು, ಅದರ ಮುಂಭಾಗದ ಸಂಪೂರ್ಣ ನಶಿಸಿಹೋಗಿದೆ. ಇದರಲ್ಲಿ ಪ್ರಸ್ತುತ ಎರಡು ಕಂಬಗಳು ಮಾತ್ರ ಉಳಿದಿವೆ. ಇವುಗಳು ಚೌಕ-ವೃತ್ತ, ಗಂಟೆಯಾಕಾರದಲ್ಲಿದ್ದು ಅಲಂಕೃತವಾಗಿದೆ. ನವರಂಗದಲ್ಲಿ ಒಂದು ಶಾಸನವಿದೆ. (ಧಾಜಿಗ್ಯಾಪು. ೯೩೬)

ಅಧಿಷ್ಠಾನವು ಉಪಾನ, ಪದ್ಮ, ತ್ರಿಪಟ್ಟಕುಮದ ಮತ್ತು ಪದ್ಮಗಳಿಂದ ಅಲಂಕೃತವಾಗಿದೆ. ನವರಂಗಭಾಗದ ಭಿತ್ತಿಯನ್ನು ಇತ್ತೀಚಿಗೆ ಸೈಜುಗಲ್ಲು ಮತ್ತು ಸಿಮೆಂಟ್‌ನಿಂದ ಕಟ್ಟಲಾಗಿದೆ.

ದೇವಾಲಯದ ಹೊರಭಾಗದ ತೇರಿನಗಡ್ಡಿ ಓಣಿಯಲ್ಲಿರುವೆ ಒಂದು ಕಂಬದಲ್ಲಿ ರಾಷ್ಟ್ರಕೂಟ ಅರಸ ಒಂದನೆ ಅಮೋಘವರ್ಷನ ಕಾಲದ ಶಾಸನವು (ಧಾಜಿಶಾಸೂ, ಸಂ.ಗ. ೭೯; ಪು. ೧೦, SII, XI, Pt. 1, No. 15) ಚಿಂಚಿಲದ ಐವತ್ತಾರು ಮಹಾಜನರ ಪಾದಪ್ರಕ್ಷಾಲನಗೈಯ್ಹು (ಕಾಲುಗೊಳೆದು) ಗೋಸಹಸ್ರದಾನ ಮಾಡಿದ ಉಲ್ಲೇಖವಿದೆ. ಇದೇ ಅರಸನ ಕಾಲದ ಇನ್ನೊಂದು ಶಾಸನ (ಧಾಜಿಶಾಸೂ, ಸಂ.ಗ. ೮೦; ಪು. ೧೦) ದೇವಣ್ಣಯ್ಯ, ಚಿಂಚಿಲ ಹಾಗೂ ಕುಂದಯ್ಯ ಸೆಟ್ಟಿ ಎಂಬ ಹೆಸರುಗಳ ಉಲ್ಲೇಖವಿದೆ. ಇದೇ ಅರಸುಮನೆತನದ ಎರಡನೇ ಕೃಷ್ಣನ ಕ್ರಿ.ಶ. ೮೯೭ರ ಶಾಸನ (ಧಾಜಿಶಾಸೂ, ಸಂ.ಗ. ೮೧; ಪು. ೧೦, SII, XI, pt. I, No. 24) ಚಿಂಬಿಲದ ಐವತ್ತಾರು ಮಹಾಜನರ ಸಮ್ಮುಖದಲ್ಲಿ ವೀರಗಲ್ಲು ನಿಲ್ಲಿಸಿದುದನ್ನು ದಾಖಲಿಸಿದೆ. ಇದೇ ಆರಸನ ಕಾಲದ (ಕ್ರಿ.ಶ. ೯೦೪) ಶಾಸನವು ಮತ್ಸಯ್ಯ ಬೆಳ್ವೊಲ ಮುನ್ನೂರರ ಸುಂಕವನ್ನಾಳುತ್ತಿರುವಾಗ ದಾನ ನೀಡಿದದ್ದನ್ನು ತಿಳಿಸುತ್ತದೆ. (ಧಾಜುಶಾಸೂ, ಸಂ.ಗ. ೮೨, ಪು. ೧೦, SII, XI, pt. 1, No. 27) ಕರಿದೇವರ ಗುಡಿಯ ಶಾಸನವು ಕಲ್ಯಾಣ ಚಾಲುಕ್ಯ ಅರಸ ಎರಡನೇ ಸೋಮೇಶ್ವರನ ಕಾಲಕ್ಕೆ ಸೇರಿದೆ. ಅದರ ತೇದಿಯು ಕ್ರಿ.ಶ. ೧೦೬೯ ಇದು ನಾಗೇಶ್ವರ ದೇವರಿಗೆ ಹೂದೋಟ ದಾನ ನೀಡಿದುದನ್ನು ತಿಳಿಸುತ್ತದೆ (ಧಾಜಿಶಾಸೂ, ಸಂ. ಗ. ೮೩; ಪು. ೧೧, SI, XI, pt. I, No. 108).

೨೩.

ಊರು ಚಿಂಚಲಿ
ಸ್ಮಾರಕ ಶಿವ
ಸ್ಥಳ ಊರಿನ ಪಶ್ಚಿಮಕ್ಕೆ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದಲ್ಲಿ ಗರ್ಭಗೃಹ ಮಾತ್ರ ಇದ್ದು, ಇದನ್ನು ಸಂಪೂರ್ಣ ನವೀಕರಿಸಲಾಗಿದೆ. ಇದರಲ್ಲಿ ಶಿವಲಿಂಗವಿದೆ. ಇದರ ಭುವನೇಶ್ವರಿಯಲ್ಲಿ ಅರಳಿದ ತಾವರೆಯ ಅಲಂಕಾರವಿದೆ. ದ್ವಾರವನ್ನು ಇತ್ತೀಚಿಗೆ ಮರದಿಂದ ನಿರ್ಮಿಸಲಾಗಿದೆ. ಇದಕ್ಕೆ ಮರದ ಬಾಗಿಲಿದೆ. ಅಧಿಷ್ಠಾನ ಮತ್ತು ಗುಡಿಯ ಭಿತ್ತಿ ಭಾಗಗಳು ಸರಳವಾಗಿವೆ.

ಈ ದೇವಾಲಯದ ಎದುರು ಆಯತಾಕಾರದ ಗರ್ಭಗೃಹವಿದ್ದು, ಅದರಲ್ಲಿ ನಂದಿ ಇದೆ. ಇದರ ಮುಂಭಾಗದಲ್ಲಿ ಇತ್ತೀಚೆಗೆ ಮುಖಮಂಟಪ ನಿರ್ಮಿಸಲಾಗಿದೆ.

೨೪.

ಊರು ಚಿಂಚಲಿ
ಸ್ಮಾರಕ ಶಿವ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ಗರ್ಭಗೃಹವು ಚೌಕಾಕಾರವಾಗಿದ್ದು, ಅದರಲ್ಲಿ ಚಾಲುಕ್ಯ ಶೈಲಿಯ ಲಿಂಗವಿದೆ. ಇದರ ಮೆಚ್ಚಿಗೆಯಲ್ಲಿ ಕಮಲದ ಮೊಗ್ಗಿನ ಅಲಂಕಾರವಿದೆ. ಇದರ ದ್ವಾರವು ಸರಳವಾಗಿದ್ದು, ಲಲಾಟದಲ್ಲಿ ಯಾವುದೇ ಶಿಲ್ಪಗಳಿಲ್ಲ. ಅಂತರಾಳದ ದ್ವಾರವು ಸರಳವಾಗಿದ್ದು, ಲಲಾಟದಲ್ಲಿ ಯಾವುದೇ ಶಿಲ್ಪಗಳಿಲ್ಲ. ಅಂತರಾಳದ ದ್ವಾರವು ಮೂರು ಶಾಖೆಗಳಿಂದ ಕೂಡಿದ್ದು ಸರಳವಾಗಿದೆ. ಅಲ್ಲದೆ ದ್ವಾರದ ಪಕ್ಕದಲ್ಲಿ ಜಾಲಾಂಧ್ರಗಳಿವೆ.

ನವರಂಗದಲ್ಲಿ ಚೌಕ, ಅಷ್ಟ ಮತ್ತು ವೃತ್ತಾಕಾರದ ಅಲಂಕರಣೆಯ ಕಂಬಗಳಿವೆ. ಅಧಿಷ್ಠಾನವು ಸರಳವಾಗಿದೆ. ಭಿತ್ತಿಯನ್ನು ಸೈಜುಕಲ್ಲು ಮತ್ತು ಸಿಮೆಂಟಿನಿಂದ ಕಟ್ಟಲಾಗಿದೆ. ಈ ದೇವಾಲಯದ ಗರ್ಭಗೃಹ ಮತ್ತು ಅಂತರಾಳಗಳು ಹಾಗೂ ನವರಂಗದ ಕಂಬಗಳನ್ನು ಮಾತ್ರ ಚಾಲುಕ್ಯ ಶೈಲಿಯಲ್ಲಿದ್ದು, ಉಳಿದ ಭಾಗಗಳು ಚಾಲುಕ್ಯೇತರ ಶೈಲಿಯಲ್ಲಿವೆ.

೨೫.

ಊರು ನರಸಾಪುರ
ಸ್ಮಾರಕ ಹನುಂತ
ಸ್ಥಳ ಊರಿನ ಪಶ್ಚಿಮಕ್ಕೆ
ಕಾಲ ಕ್ರಿ.ಶ. ೧೭-೧೮ನೇ ಶತಮಾನ
ಶೈಲಿ ಸ್ಥಳೀಯ
ಅಭಿಮುಖ ದಕ್ಷಿಣ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಆಯತಾಕಾರದ ಗರ್ಭಗೃಹ ಮತ್ತು ಎರಡು ಹಂತದ ಮುಖ ಮಂಟಪವನ್ನು ಹೊಂದಿದೆ. ಗರ್ಭಗೃಹದಲ್ಲಿ ಚಾಲುಕ್ಯ ಶೈಲಿಯ ಎರಡು ಲಿಂಗಗಳಿವೆ. ಪಕ್ಕದಲ್ಲಿಯೇ ಹನುಮಂತನ ವಿಗ್ರಹವಿದೆ. ಮುಖಮಂಟಪದ ಮೊದಲ ಹಂತದಲ್ಲಿ ಎರಡು ಕಂಬಗಳಿದ್ದು ಅಲ್ಲಿ ಸಪ್ತಮಾತೃಕೆಯರ ಶಿಲ್ಪಗಳಿವೆ. ಮುಖಮಂಟಪದ ಎರಡನೆ ಹಂತದಲ್ಲೂ ಎರಡು ಕಂಬಗಳಿವೆ. ಈ ಮಂಟಪವನ್ನು ಪ್ರವೇಶಿಸಲು ಮೆಟ್ಟಿಲುಗಳಿವೆ. ದೇವಾಲಯದ ಅಧಿಷ್ಠಾನ ಮತ್ತು ಭಿತ್ತಿಯು ಸರಳವಾಗಿವೆ.

೨೬.

ಊರು ನಾಗಸಮುದ್ರ
ಸ್ಮಾರಕ ಕಲ್ಮೇಶ್ವರ
ಸ್ಥಳ ಊರಿನ ಪಶ್ಚಿಮಕ್ಕೆ
ಕಾಲ ಕ್ರಿ.ಶ. ೧೭-೧೮ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಉತ್ತರ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯದಲ್ಲಿ ಒಂದರ ಪಕ್ಕದಲ್ಲೊಂದರಂತೆ (ಒಂದೇ ಸಾಲಿನಲ್ಲಿರುವ) ಮೂರು ಚೌಕಾಕಾರದ ಗರ್ಭಗೃಹಗಳು ಮತ್ತು ಅವುಗಳ ಮುಂದೆ ಎರಡು ಹಂತದಲ್ಲಿ ನಿರ್ಮಿಸಿದ ಮುಖಮಂಟಪವಿದೆ. ಉತ್ತರಕ್ಕೆ ಮುಖಮಾಡಿರುವ ಈ ದೇವಾಲಯಗಳಲ್ಲಿ ಪಶ್ಚಿಮ ಭಾಗಕ್ಕಿರುವ ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಅದರ ಎದುರಿನಲ್ಲೇ ಬಸವನ ವಿಗ್ರಹವಿದೆ. ಮಧ್ಯದ ಗರ್ಭಗೃಹದಲ್ಲಿ ಹನುಮಂತನ ಮೂರ್ತಿ ಇದೆ. ಕ್ರಿ.ಶ. ೧೭-೧೮ನೇ ಶತಮಾನದಲ್ಲಿ ನಿರ್ಮಿಸಿರಬಹುದಾದ ಈ ಮೂರ್ತಿಶಿಲ್ಪ ಆಕರ್ಷಣೀಯವಾಗಿದೆ. ಪೂರ್ವದ ಗರ್ಭಗೃಹದಲ್ಲಿ ಮಹೇಶ್ವರಿಯ ಮೂರ್ತಿಯಿದ್ದು, ಅದು ಸಹ ಕ್ರಿ.ಶ. ೧೭-೧೮ನೇ ಶತಮಾನಕ್ಕೆ ಸೇರಿರಬಹುದೆಂದು ಹೇಳಬಹುದು. ಹನುಮಂತನ ಗುಡಿಯಲ್ಲಿ ಚೌಕ, ಅಷ್ಠಕೋನಾಕಾರದ ಆಕರ್ಷಣೀಯ ನಾಲ್ಕು ಕಂಬಗಳಿದ್ದು, ಉಳಿದ ಗುಡಿಗಳಲ್ಲಿ ಯಾವದೇ ಕಂಬಗಳಿಲ್ಲ. ಈ ಮೂರು ಗರ್ಭಗೃಹಗಳ ಮುಚ್ಚಿಗೆಯನ್ನು ಹಾಸು ಬಂಡೆಗಳಿಂದ ಮುಚ್ಚಲಾಗಿದೆ.

ಮುಖಮಂಟಪವನ್ನು ಇತ್ತೀಚಿಗೆ ನಿರ್ಮಿಸಲಾಗಿದೆ. ಇದರ ಮೇಲ್ಛಾವಣೆಗೆ ಮರದ ಹಲಗೆಗಳನ್ನು ಉಪಯೋಗಿಸಲಾಗಿದೆ. ತೆರೆದ ಮಂಟಪವನ್ನು ಪ್ರವೇಶಿಸಲು ಉತ್ತರದ ಕಡೆ ಮೆಟ್ಟಿಲುಗಳಿವೆ. ದೇವಾಲಯದ ಮುಂಭಾಗದಲ್ಲಿ ಸಿಂಹಲಾಂಛನವಿರುವ ಪೀಠ, ಬೃಹತ್‌ಕಲ್ಲಿನ ಬೋದಿಗೆಗಳು ಮತ್ತು ತ್ರುಟಿತ ಶಾಸನಗಳಿವೆ. ಪ್ರಾಯಶಃ ಇಲ್ಲಿ ಪ್ರಾಚೀನ ದೇವಾಲಯವಿದ್ದು, ಅದು ಬಿದ್ದ ನಂತರ ಈ ಗುಡಿಯನ್ನು ನಿರ್ಮಿಸಿರಬೇಕೆನಿಸುತ್ತದೆ.

೨೭

ಊರು ನಾಗಾವಿ
ಸ್ಮಾರಕ ಮಲ್ಲೇಶ್ವರ
ಸ್ಥಳ ಊರಿನ ದಕ್ಷಿಣಕ್ಕೆ
ಕಾಲ ಕ್ರಿ.ಶ. ೧೦-೧೧ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ ರಾ.ಪು.ಇ.

ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ಗರ್ಭಗೃಹವು ಚೌಕಾಕಾರವಾಗಿದ್ದು ಅದರಲ್ಲಿ ಲಿಂಗವಿದೆ. ಗರ್ಭಗೃಹದ ಪೂರ್ವ, ಉತ್ತರ ಮತ್ತು ದಕ್ಷಿಣ ಗೋಡೆಗಳಲ್ಲಿ ಅರೆಗಂಬಗಳ ನಡುವೆ ಮೂರು ಕೋಷ್ಠಗಳಿವೆ. ಈ ಗೂಡುಗಳ ಮುಚ್ಚಿಗೆಯಲ್ಲಿ ಅರಳಿದ ಪದ್ಮದ ಅಲಂಕಾರವಿದೆ. ಗರ್ಭಗೃಹದ ದ್ವಾರವು ಮೂರು ಶಾಖೆಗಳಿಂದ ಕೂಡಿದ್ದು, ಲಲಾಟವು ಸರಳವಾಗಿದೆ. ಚೌಕಾಕಾರದ ಅಂತರಾಳದಲ್ಲಿ ಪಶ್ಚಿಮ ಮತ್ತು ದಕ್ಷಿಣದ ಗೋಡೆಗಳ ಒಳಭಾಗದಲ್ಲಿ ಅರೆಗಂಬಗಳ ವಿನ್ಯಾಸವಿದೆ. ಇದರ ಮುಚ್ಚಿಗೆಯಲ್ಲಿ ಕಮಲದ ಅಲಂಕಾರವಿದೆ. ದ್ವಾರವು ಮೂರು ಶಾಖೆಗಳಿಂದ ಅಲಂಕೃತವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ಇದರ ಎರಡೂ ಬದಿಗಳಲ್ಲಿ ಬಾಳೆಹೂವಿನ ಅಲಂಕಾರವಿದೆ. ಲಲಾಟದ ಮೇಲೆ ಮತ್ತು ದ್ವಾರದ ಬದಿಗೆ ಜಾಲಾಂಧ್ರಗಳಿವೆ. ಅಂತರಾಳದ ಮುಂಭಾಗದಲ್ಲಿ ಪ್ರಾಯಶಃ ಇತ್ತೀಚೆಗೆ ಕಟ್ಟಲಾಗಿರುವ ನವರಂಗವಿದೆ. ಇದರಲ್ಲಿ ಪ್ರಾಚೀನ ಕಾಲದ ವೃತ್ತಾಕಾರದ ನಾಲ್ಕು ಕಂಬಗಳಿವೆ. ಆಗ್ನೇಯ ಭಾಗದ ಕಂಬದಲ್ಲಿ ಶಾಸನವಿದೆ.

ಅಧಿಷ್ಠಾನವು ಉಪಾನ, ಪದ್ಮ, ತ್ರಿಪಟ್ಟಕುಮುದ ಮತ್ತು ಪದ್ಮಗಳಿಂದ ಅಲಂಕೃತವಾಗಿದೆ. ಭಿತ್ತಿಯಲ್ಲಿ ದೇವಕೋಷ್ಠಗಳನ್ನು, ಕಿರು ಶಿಖರದ ಮಾದರಿಗಳನ್ನು ಕೆತ್ತಲಾಗಿದೆ. ದೇವಾಲಯದ ಮೇಲೆ ಶಿಖರವಿದ್ದು, ಅದು ಮೂರು ತಲಗಳನ್ನು ಹೊಂದಿದೆ. ಶಿಖರವು ಶಾಲಾ, ಕೂಟ ಮತ್ತು ಪಂಚರಗಳಿಂದ ಅಲಂಕೃತವಾಗಿದ್ದು, ಸ್ತೂಪಿ ಇಲ್ಲ. ಆದರೆ ಸುಖನಾಸಿಯು ಉತ್ತುಮ ಸ್ಥಿತಿಯಲ್ಲಿದೆ. ಇದೇ ಊರಿನ ಯಲ್ಲಮ್ಮ ಗುಡಿಯ ಬಳಿ ಲಿಂಗ, ಸಪ್ತಮಾತೃಕೆಯರ ಶಿಲ್ಪ, ವೀರಗಲ್ಲು ಮತ್ತು ದೇವತಾ ಪೀಠಗಳಿವೆ.

ಊರಿನ ನಾಗಾರ್ಜುನ ಗುಡಿ ಎದರು ಇರುವ ರಾಷ್ಟ್ರಕೂಟರ ಅರಸ ಖೊಟ್ಟಿಗನ ಕ್ರಿ.ಶ. ೯೬೯ರ ಶಾಸನವು (ಧಾಜಿಶಾಸೂ, ಸಂ.ಗ. ೮೫; ಪು. ೧೧, SII, XI, pt. I, No. 41) ರಾಮೇಶ್ವರ ದೇವಾಲಯಕ್ಕೆ ಶಿಕ್ಷಣಕ್ಕಾಗಿ ದಾನ ನೀಡಿದ ವಿಷಯವನ್ನು ಉಲ್ಲೇಖಿಸಿದೆ. (ಧಾಜಿಗ್ಯಾ, ಪು. ೯೬೪) ಆದ್ದರಿಂದ ಇದು ವಿದ್ಯಾಕೇಂದ್ರವೆಂದು ದೃಢಪಡುತ್ತದೆ. ಕೋಡಿ ಬವಣ್ಣನ ಗುಡಿ ಕಂಬದಲ್ಲಿನ ಹೊಯ್ಸಳ ಎರಡನೆ ಬಲ್ಲಾಳನ ಕ್ರಿ.ಶ. ೧೨೧೧ರ ಶಾಸನವು ಧರ್ಮರಾಶಿ ಪಂಡಿತರಿಂದ (ಧಾಜಿಶಾಸೂ, ಸಂ.ಗ. ೮೬; ಪು. ೧೧, SII, SV, No. 221) ನಾಗಾಯಿಯ ಮಹಾಬಳೇಶ್ವರದೇವರಿಗೆ ದಾನ ಮಾಡಿದ ವಿಷಯವನ್ನು ಪ್ರಸ್ತಾಪಿಸಿದೆ. ಇಲ್ಲಿಯ ಇನ್ನೊಂದು ಶಾಸನವು ಯಾದವರ ಸಿಂಘಣನ ಕಾಲಕ್ಕೆ ಸೇರಿದೆ. ಅದರ ತೇದಿಯು ಕ್ರಿ.ಶ. ೧೨೧೫ (ಧಾಜಿಶಾಸೂ, ಸಂ.ಗ. ೮೭; ಪು. ೧೧, SII, XV, No. 162) ಬೊಮ್ಮೋಜನಿಂದ ಮಹಾಬಳೇಶ್ವರದೇವರಿಗೆ ದಾನ ನೀಡಿದ್ದನ್ನು ಶಾಸನ ದಾಖಲಿಸಿದೆ. ಇದೇ ಅರಸನ ಕ್ರಿ.ಶ. ೧೨೪೪ರ ಶಾಸನವು (ಧಾಜಿಶಾಸೂ ಶಂ.ಗ. ೮೯; ಪು. ೧೧, SII, XV, No. 181) ಮಹಾಬಲದೇವರಿಗೆ ಸುಂಕದಾನ ನೀಡಿದ ವಿಷಯವಿದೆ. ಇದೆ ಅರಸುಮನೆತನದ ಕನ್ನರನ ಕಾಲದ ಕ್ರಿ.ಶ. ೧೨೫೫ರ ಶಾಸನವು (ಧಾಜಿಶಾಸೂ, ಸಂ.ಗ. ೯೦; ಪು. ೧೧, SII, XV, No. 189) ಕೆಲವು ನಾಯಕರು ಮಹಾಬಲೇಶ್ವರ ದೇವರಿಗೆ ದಾನ ನೀಡಿದರೆಂದು ಉಲ್ಲೇಖಿಸಿದೆ.

೨೮.

ಊರು ನಾರಾಯಣಪುರ
ಸ್ಮಾರಕ ಹನುಮಂತ
ಸ್ಥಳ ಊರಿನ ಈಶಾನ್ಯಕ್ಕೆ
ಕಾಲ ಕ್ರಿ.ಶ. ೧೦-೧೧ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ದಕ್ಷಿಣ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದಲ್ಲಿ ಆಯತಾಕಾರದ ಗರ್ಭಗೃಹವಿದೆ. ಅದರ ಮುಂಭಾಗದಲ್ಲಿ ಇದ್ದಿರಬಹುದಾದ ಪ್ರಾಚೀನ ಕಾಲದ ಇತರೆ ವಾಸ್ತುಭಾಗಗಳು ನಶಿಸಿವೆ. ಗರ್ಭಗೃಹದಲ್ಲಿ ಕ್ರಿ.ಶ. ೧೭-೧೮ನೇ ಶತಮಾನಕ್ಕೆ ಸೇರಿದ ಆಂಜನೇಯನ ಮೂರ್ತಿಶಿಲ್ಪವಿದೆ. ಇದೇ ಗರ್ಭಗೃಹದ ಪೂರ್ವಭಾಗಕ್ಕೆ ನಾರಾಯಣನ ಶಿಲ್ಪವಿದೆ. ಈ ಮೂರ್ತಿಯ ಮೇಲಿನ ಬಲಗೈನಲ್ಲಿ ಚಕ್ರ, ಮೇಲಿನ ಎಡಕೈನಲ್ಲಿ ಶಂಖ, ಕೆಳಗಿನ ಬಲಗೈನಲ್ಲಿ ಗದೆ ಇದ್ದು, ಕೆಳ ಎಡಗೈ ಕಟ ಹಸ್ತವಾಗಿದೆ. ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿರಬಹುದಾದ ಈ ಮೂರ್ತಿಯು ಕಿರೀಟ ಮುಖಿಯಾಗಿರುವ ಸ್ಥಾನಿಕ ಮೂರ್ತಿಯು ವಿವಿಧ ರೀತಿಯ ಆಭರಣ ಮತ್ತು ಹಾರಗಳನ್ನು ಧರಿಸಿದೆ. ಪ್ರಭಾವಳಿಯಲ್ಲಿ ಮಕರತೋರಣವಿದ್ದು, ಕೆಳಗಿನ ಎಡಭಾಗದಲ್ಲಿ ಚಾಮರಧಾರಣಿ, ಬಲಗಡೆ ಅಂಜಲಿ ಹಸ್ತನಾಗಿರುವ ಭಕ್ತನ ಶಿಲ್ಪವಿದೆ, ಪೀಠರದ ಮೇಲೆ ಗರುಡನ ಉಬ್ಬುಶಿಲ್ಪವಿದೆ. ದೇವಾಲಯವನ್ನು ಮಾಳಗಿ ರೀತಿಯಲ್ಲಿ ಕಟ್ಟಲಾಗಿದ್ದು, ಅಧಿಷ್ಠಾನ ಮತ್ತು ಭಿತ್ತಿ ಸರಳವಾಗಿದೆ.

ಊರಿನ ಉತ್ತರಕ್ಕೆ ದುರುಗಮ್ಮನ ಕಟ್ಟಿಯಿದ್ದು, ಅಲ್ಲಿ ಭಗ್ನಗೊಂಡಿರುವ ಗಣೇಶನ ಚಿಕ್ಕ ವಿಗ್ರಹವಿದೆ. ಊರಿನ ಪ್ರವೇಶ ದ್ವರದ ಬಳಿ ಬಸವಣ್ಣನ ದೇವಾಲಯವಿದೆ. ಇದು ಮಾಳಿಗೆ ಕಟ್ಟಡವಾಗಿದ್ದು, ಗರ್ಭಗೃಹ ಮತ್ತು ಮುಖಮಂಟಪಗಳಿವೆ. ಅದರಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗ ಮತ್ತು ನಂದಿಗಳು ಗರ್ಭಗೃಹದಲ್ಲಿವೆ.

೨೯

ಊರು ನೀರಳಗಿ
ಸ್ಮಾರಕ ಈಶ್ವರ
ಸ್ಥಳ ಊರಿನ ಉತ್ತರಕ್ಕೆ
ಕಾಲ ಕ್ರಿ.ಶ. ಸು. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಸಂಪೂರ್ಣ ನಶಿಸಿಹೋಗಿರುವ ಈ ದೇವಾಲಯಲದಲ್ಲಿ ಗರ್ಭಗೃಹ ಮತ್ತು ಬಾಗಿಲವಾಡ ಮಾತ್ರ ಉಳಿದಿದೆ. ಹಾಳು ಬಿದ್ದಿರುವ ಈ ದೇವಾಲಯದಲ್ಲಿ ಚಿಕ್ಕದಾದ ಪಾಣಿಪೀಠವಿದೆ. ಅದರ ಬಳಿ ಶಿಥಿಲವಾದ ದೇವಿಯ ಮೂರ್ತಿಶಿಲ್ಪವಿದೆ. ನಶಿಸಿಹೋಗಿರುವ ಶಾಸನವೊಂದು ಅಲ್ಲಿಯೇ ಇದ್ದು, ಅದರ ವಿವರ ಲಭ್ಯವಾಗಿಲ್ಲ.

೩೦.

ಊರು ನೀರಳಗಿ
ಸ್ಮಾರಕ ಕಲ್ಲೇಶ್ವರ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಊರಿನ ಮಧ್ಯಭಾಗದಲ್ಲಿರುವ ಈ ದೇವಾಲಯವನ್ನು ಇತ್ತೀಚಿಗೆ ಆರ್‌.ಸಿ.ಸಿಯಿಂದ ನಿರ್ಮಿಸಲಾಗಿದೆ. ಚೌಕಾಕಾರದ ಗರ್ಭಗೃಹ ಮತ್ತು ಮುಖಮಂಟಪಗಳನ್ನೊಳಗೊಂಡಿರುವ ಈ ದೇವಾಲಯದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಇದರ ಸಮೀಪದಲ್ಲಿಯೇ ದಕ್ಷಿಣಾಭಿಮುಖವಾಗಿರುವ ಆಂಜನೇಯನ ದೇವಾಲಯವಿದೆ. ಇದನ್ನು ಮಣ್ಣು ಮತ್ತು ಬಿದರಿನಿಂದ ನಿರ್ಮಿಸಲಾಗಿದೆ. ಕೇವಲ ಗರ್ಭಗೃಹ ಮಾತ್ರವಿರುವ ಈ ದೇವಾಲಯದಲ್ಲಿ ಕಣ್ಮನ ಸೆಳೆಯುವ ೧೭-೧೮ನೇ ಶತಮಾನದ ಆಂಜನೇಯನ ಪ್ರತಿಮೆ ಇದೆ. ದೇವಾಲಯದ ಮುಂಭಾಗದಲ್ಲಿ ಬ್ರಹ್ಮ, ಗಣೇಶ ಮತ್ತು ಭೈರವನ ಮೂರ್ತಿಸಿಲ್ಪಗಳಿವೆ. ಅಲ್ಲದೆ ಮೂರು ಶಾಸನಗಳು ಮತ್ತು (ಎರಡು ಸಂಪೂರ್ಣ ನಶಿಸಿಹೋಗಿವೆ) ಎರಡು ಕಿರು ವೀರಗಲ್ಲುಗಳಿವೆ. ಊರಿನ ಮುಂದೆ ಎರುವ ಗಜಲಕ್ಷ್ಮಿಯ ವಿಗ್ರಹವನ್ನು ಸ್ಥಳೀಯರ ‘ಬಾದುಬ್ಬೆ’ ಎಂದು ಕರೆಯುತ್ತಿದ್ದು, ಬರ್ಭಿಣಿ ‘ಸ್ತ್ರೀ’ಯರಿಗೆ ಹೆರಿಗೆ ಆಗುವ ವೇಳೆ ಈ ವಿಗ್ರಹವನ್ನು ಮುಗಚಿ ಹಾಕಿದರೆ ಹೆರಿಗೆ ಸುಲಭವಾಗುತ್ತದೆ ಎಂದು ಇಲ್ಲಿನ ಜನರ ನಂಬಿಕೆ.