೭೧

ಊರು ಹರ್ಲಾ;ಉರ
ಸ್ಮಾರಕ ಬಸವೇಶ್ವರ
ಸ್ಥಳ ಊರಿನ ಮಧ್ಯ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ

ಇದೇ ದೇವಾಲಯದ ಸಮೀಪ ಬಸವೇಶ್ವರ ದೇವಾಲಯವಿದ್ದು, ಅದನ್ನು ಪ್ರಾಚೀನ ಕಾಲದ ಗುಡಿಯ ವಾಸ್ತು ಭಾಗಗಳನ್ನು ಉಪಯೋಗಿಸಿ ಇತ್ತೀಚೆಗೆ ನಿರ್ಮಿಸಿದ್ದಾರೆ. ಇದರಲ್ಲಿ ಗರ್ಭಗೃಹ ಹಾಗೂ ಮುಖಮಂಟಪ ಮಾತ್ರಿವಿದೆ. ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗವಿದೆ. ಅಲ್ಲಿಯೇ ಬಸವ ಮತ್ತು ವೀರಭದ್ರರ ಶಿಲ್ಪಗಳನ್ನು ಇಡಲಾಗಿದೆ. ದೇವಾಲಯದ ಮುಂದೆ ಎರಡು ಶಾಸನಗಳಿವೆ.

ಈ ದೇವಾಲಯದ ಸಮೀಪ ವೀರೂಪಾಕ್ಷೇಶ್ವರ ದೇವಾಲಯವಿದೆ. ಉತ್ತರಾಭಿಮುಖವಾಗಿರುವ ಈ ದೇವಾಲಯವು ಬಹುತೇಕ ಹಾಳಾಗಿದೆ. ದೇವಾಲಯದ ಸಮೀಪದಲ್ಲಿ ಲಿಂಗ ಮತ್ತು ಗಣೇಶನ ಶಿಲ್ಪವಿದೆ. ಪೂರ್ವ ಭಾಗಕ್ಕೆ ಬಾವಿ ಇದೆ.

೭೨

ಊರು ಹರ್ಲಾಪುರ
ಸ್ಮಾರಕ ಕಲ್ಲೇಶವರ (ಮೈಲಾರಲಿಂಗ)
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ

 

ದೇವಾಲಯದ ಅದರ ಗರ್ಭಗೃಹದಲ್ಲಿ ಚಾಲುಕ್ಯ ಶೈಲಿಯ ಲಿಂಗಗಳಿವೆ. ಇಲ್ಲಿನ ಲಿಂಗಗಳನ್ನು ಹಂಸಪೀಠಗಳ ಮೇಲೆ ಇಡಲಾಗಿದೆ. ದೇವಾಲಯದ ಮುಂಭಾಗಕ್ಕೆ ಹಸ್ತಿಹಸ್ತಾ ಫಲಕವಿದೆ. ಈ ದೇವಾಲಯವನ್ನು ಸ್ಥಳೀಯರು ಮೈಲಾರಲಿಂಗ ದೇವಾಲಯವೆನ್ನುತ್ತಾರೆ.

ಇದೇ ಊರಿನ ಮಧ್ಯಭಾಗದಲ್ಲಿ ಗರ್ಭಗೃಹ ಮತ್ತು ಮುಖಮಂಟಪಗಳಿರುವ ದಕ್ಷಿಣಾಭಿಮುಖ ಹನುಮಂತನ ಗುಡಿ ಇದೆ. ಗರ್ಭಗೃಹದಲ್ಲಿ ಹನುಮನ ಸ್ಥಾನಿಕ ಮೂರ್ತಿ ಇದೆ. ಮುಖಮಂಟಪವನ್ನು ಮರದ ಕಂಬ ಹಾಗೂ ಚಪ್ಪಡಿಕಲ್ಲುಗಳನ್ನು ಹಾಕಿ ನಿರ್ಮಿಸಲಾಗಿದೆ. ಕಲ್ಯಾಣ ಚಾಲುಕ್ಯ ಶೈಲಿಯ ಹಸ್ತಿ ಹಸ್ತಾ ಫಲಕ ದೇವಾಲಯದ ಮುಂಭಾಗಕ್ಕಿದೆ. ಪೌಳಿಗೋಡೆ ಇದ್ದು, ಅದರಲ್ಲಿ ಸತಿ ಕಲ್ಲು ಮತ್ತು ವೀರಗಲ್ಲುಗಳಿವೆ.

ಇದೇ ಊರಿನ ವಾಯುವ್ಯಕ್ಕೆ ಇತ್ತೀಚಿನ ರಂಗನಾಥನ ಗುಡಿ ಇದೆ. ಅದರ ಮುಂಭಾಗಕ್ಕೆ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗ ಮತ್ತು ರಂಗನಾಥನ ಶಿಲ್ಪವಿದೆ.

ಊರ ವಿರಕ್ತಮಠದಲ್ಲಿರುವ ರಾಷ್ಟ್ರಕೂಟ ಅರಸ ಎರಡನೇ ಕೃಷ್ಣನ ಕ್ರಿ.ಶ. ೮೬೯ರ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೮೯; ಪು. ೧೪, SII, XI, Pt. I, No. 23) ಅಸ್ಪಷ್ಟವಾಗಿದೆ. ಕೊಟ್ರಪ್ಪನ ಮಠದ ಎದುರು ಇರುವ ಕ್ರಿ.ಶ. ೧೧೭೧ರ ಶಾಸನವು ವೀರನೊಬ್ಬನ ಮರಣವನ್ನು ತಿಳಿಸುತ್ತದೆ (ಧಾ.ಜಿ.ಶಾ.ಸೂ, ಸಂ.ಗ. ೧೯೦; ಪು. ೧೪, SII, XV, No. 118). ಇದು ಕಲಚುರಿ ಸೋವಿದೇವನ ಕಾಲದ್ದಾಗಿದೆ. ಹನುಮಂತ ದೇವರಗುಡಿಯಲ್ಲಿರುವ ಕ್ರಿ.ಶ. ಸುಮಾರು ೧೭ನೇ ಶತಮಾನದ ಶಾಸನವು (ಧಾ.ಜಿ.ಶಾ.ಸೂ, ಸಂ.ಗ. ೧೯೧; ಪು. ೧೪, SII, XV, No. 721) ನಾರಣಪುರುದ ಕಾಚನಾಯಕನಿಂದ ಹರಿಹರಪುರದಲ್ಲಿ ದತ್ತಿಬಿಟ್ಟ ವಿಷಯವನ್ನು ತಿಳಿಸುತ್ತದೆ.

೭೩

ಊರು ಹಲೇ ಬೆನಕಾಪುರ
ಸ್ಮಾರಕ ಆಂಜನೇಯ
ಸ್ಥಳ ಊರಿನ ಮಧ್ಯದಲ್ಲಿ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ-ಹೊಯ್ಸಳ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

 

ಈ ದೇವಾಲಯವು ಚೌಕಾಕಾರದ ಗರ್ಭಗೃಹ ಮತ್ತು ಅದರ ಮೇಲೆ ಶಿಖರವನ್ನು ಹೊಂದಿದೆ. ಉಳಿದಂತೆ ದೇವಾಲಯದ ಇತರೆ ಭಾಗಗಳು ನಾಶವಾಗಿವೆ. ಗರ್ಭಗೃಹದಲ್ಲಿ ಚಾಲುಕ್ಯ-ಹೊಯ್ಸಳ ಶೈಲಿಯ ಆಂಜನೇಯನ ಮೂರ್ತಿಯಿದೆ. ಅಲ್ಲದೆ ಈ ಮೂರ್ತಿಯ ಸಮೀಪದಲ್ಲಿಯೇ ಮಹೇಶ್ವರಿಯ(?) ಮೂರ್ತಿಯ ಆಕರ್ಷಕವಾಗಿದೆ. ದೇವಾಲಯದ ಅಧಿಷ್ಠಾನ ಹಾಗೂ ಭಿತ್ತಿ ಸರಳವಾಗಿದೆ.

೭೪

ಊರು ಹಾದಲಗೇರಿ
ಸ್ಮಾರಕ ವೆಂಕಟೇಶ್ವರ
ಸ್ಥಳ ಊರಿನ ಮಧ್ಯದಲ್ಲಿ
ಕಾಲ ಕ್ರಿ.ಶ. ೧೧-೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ

ಪ್ರಾಚೀನ ದೇವಾಲಯವನ್ನು ಮರು ನಿರ್ಮಿಸಲಾಗಿದೆ. ಗುಡಿಯ ಮುಂಭಾಗದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಕಂಬ ಮತ್ತು ಬೋಧಿಗೆಗಳಿವೆ. ಗರ್ಭಗೃಹದಲ್ಲಿ ಚಾಲುಕ್ಯ ಶೈಲಿಯ ಸಿಂಹಲಾಂಛನ ಪೀಠವಿರುವುದರಿಂದ ಇದೊಂದು ಪ್ರಾಚೀನ ಜೈನ ಬಸದಿಯಾಗಿರುವ ಸಾಧ್ಯತೆಗಳಿವೆ. ಪ್ರಾಚೀನ ದೇವಾಲಯದ ಅವಶೇಷಗಳನ್ನು ಗ್ರಮಾದಲ್ಲಿ ಕಾಣಬಹುದು.

೭೫.

ಊರು ಹಿರೇಹಂದಿಗೋಳ
ಸ್ಮಾರಕ ಅಂಬರೇಶ
ಸ್ಥಳ ಊರಲ್ಲಿ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಚೌಕಾಕಾರದ ಗರ್ಭಗೃಹ, ಅಂತರಾಳ ಮತ್ತು ಮುಖಮಂಟಪಗಳು ದೇವಾಲಯದಲ್ಲಿದೆ. ಗರ್ಭಗೃಹವು ಚೌಕಾಕಾರವಾಗಿದ್ದು ಅದರಲ್ಲಿ ಲಿಂಗವಿದೆ. ಇದರ ಉತ್ತರ, ಪಶ್ಚಿಮ ಮತ್ತು ದಕ್ಷಿಣ ಗೋಡೆಯಲ್ಲಿ ಕಪಾಟುಗಳಿವೆ. ಗರ್ಭಗೃಹದ ದ್ವಾರವು ಸರಳವಾಗಿದೆ. ಅಂತರಾಳವು ಸರಳವಾಗಿದ್ದು, ಅದರ ಛತ್ತಿನಲ್ಲಿ ಅರಳಿದ ಪದ್ಮವಿದೆ. ಮುಖಮಂಟಪವೂ ಸಹ ಸರಳವಾಗಿದೆ.

ದೇವಾಲಯದ ಅಧಿಷ್ಠಾನವು ಭಾಗಶಃ ಕಂಡುಬರುತ್ತದೆ. ಉಳಿದವು ಮಣ್ಣಿನಲ್ಲಿನ ಹೂತಿದೆ. ಭಿತ್ತಿಯು ಸರಳವಾಗಿದೆ. ದೇವಾಲಯ ಮುಂಭಾಗದಲ್ಲಿ ಬಸವ, ಉಮಾಮಹೇಶ್ವರ ಮೂರ್ತಿಶಿಲ್ಪಗಳು ಕಲ್ಯಾಣ ಚಾಲುಕ್ಯ ಶೈಲಿಯಲ್ಲಿವೆ.

ಇದೇ ಗ್ರಮಾದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ರಾಮಲಿಂಗ ದೇವಾಲಯವಿದೆ. ಇದು ಪೂರ್ವಾಭಿಮುಖವಾಗಿದ್ದು ಈಗ ಚೌಕಾಕಾರದ ಗರ್ಭಗೃಹ ಮಾತ್ರವಿದೆ.

ಈ ದೇವಾಲಯದ ಎದುರಿನಲ್ಲಿರುವ ಕ್ರಿ.ಶ. ಸುಮಾರು ೧೨ನೇ ಶತಮಾನದ ಶಾಸನವೊಂದು ತ್ರಿಕೂಟೇಶ್ವರ ದೇವರ ಸ್ತುತಿಯನ್ನು ಉಲ್ಲೇಖಿಸಿದೆ. (ಧಾ.ಜಿ.ಶಾ.ಸೂ, ಸಂ.ಗ. ೧೯೩; KI, V, No. 101) ಇದೇ ಗ್ರಾಮದ ಉಡಚವ್ವನ ಗುಡಿ ಬಳಿಯ ಶಾಸನವು ರಾಷ್ಟ್ರಕೂಟರ ಅರಸ ಖೊಟ್ಟಿಗನ ಕಾಲಕ್ಕೆ ಸೇರಿದ್ದು (ಕ್ರಿ.ಶ. ೯೭೦) ಅದು ಮಾರಸಿಂಗ ಪೆರ್ಮಾಡಿ ಪುಲಿಗೆರೆ-೩೦೦ ಆಳುತ್ತಿರುವಾಗ ಕೊಂತದ ಪೆಗ್ಗಳಯ್ಯನಿಂದ ಸುವರ್ಣದಾನ ನೀಡಿದ ವಿವರವನ್ನು ದಾಖಲಿಸಿದೆ. (ಧಾ.ಜಿ.ಶಾ.ಸೂ, ಸಂ.ಗ. ೧೯೨; SII, XI, pt-I, No. 43; KI, V, No. 4)

೭೬

ಊರು ಹಿರೇಹಂದಿಗೋಳ
ಸ್ಮಾರಕ ಹನುಮಂತ
ಸ್ಥಳ ಊರಿನ ಪಶ್ಚಿಮಕ್ಕೆ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇದು ಚೌಕಾಕಾರದ ಗರ್ಭಗೃಹ ಮತ್ತು ಮುಖಮಂಟಪವಿರುವ ದೇವಾಲಯ. ಗರ್ಭಗೃಹದಲ್ಲಿ ಹನುಮಂತನ ಮೂರ್ತಿಯಿದೆ. ಈ ದೇವಾಲಯವನ್ನು ಪ್ರವೇಶಿಸಲು ಹಸ್ತಿಹಸ್ತಾಫಲಕಗಳಿರುವ ಮೆಟ್ಟಿಲುಗಳಿವೆ. ಇಡೀ ದೇವಾಲಯವನ್ನು ಮಣ್ಣು ಮತ್ತು ಕಟ್ಟಿಗೆಯಿಂದ ನಿರ್ಮಿಸಲಾಗಿದೆ. ಈ ದೇವಾಲಯದ ಬಳಿ ಎರಡು ದೇವಿಯ ಶಿಲ್ಪಗಳು ಮತ್ತು ವೀರಗಲ್ಲುಗಳಿವೆ. ಇದೇ ಊರಿನ ದುರುಗಮ್ಮನ ಗುಡಿಯಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಹಲವು ಶಿಲ್ಪಗಳಿವೆ.

೭೭

ಊರು ಹಿರೇಹಂದಿಗೋಳ
ಸ್ಮಾರಕ ಈಶ್ವರ
ಸ್ಥಳ ಬಸ್ಟ್‌ಸ್ಟ್ಯಾಂಡ್ ಬಳಿ
ಕಾಲ ಕ್ರಿ.ಶ. ೧೮-೧೯ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ

ಇದೇ ಊರಿನ ಬಸ್‌ಸ್ಟ್ಯಾಂಡ್‌ಬಳಿ ಪೂರ್ವಾಭಿಮುಖವಾಗಿರುವ ಕಲ್ಯಾಣ ಚಾಲುಕ್ಯರ ಕಾಲದ ಈಶ್ವರ ದೇವಾಲಯವಿದೆ. ಪ್ರಾಚೀನ ದೇವಾಲಯ ಭಾಗಗಳನ್ನು ಬಳಸಿ ಗರ್ಭಗೃಹ ಮಾತ್ರವಿರುವ ದೇವಾಲಯವನ್ನು ಇತ್ತೀಚಿಗೆ ನಿರ್ಮಿಸಲಾಗುತ್ತದೆ. ಇದು ಚೌಕಾಕಾರವಾಗಿದ್ದು, ಅದರಲ್ಲಿ ಶಿವಲಿಂಗವಿದೆ. ಅದರ ಮುಚ್ಚಿಗೆಯಲ್ಲಿ ಪದ್ವಮವಿದೆ. ಇದರ ಬಾಗಿಲುವಾಡ ಸರಳವಾಗಿದ್ದು, ಅದರಲ್ಲಿ ಯಾವುದೇ ಶಿಲ್ಪಗಳಿಲ್ಲ. ದೇವಾಲಯದ ಹೊರಭಾಗವನ್ನು ಹೊಸದಾಗಿ ಸಿಮೆಂಟ್ ಹಾಕಿ ನಿರ್ಮಿಸಿದ್ದಾರೆ.

ಇದೇ ಊರಿನ ಯಲಬುರ್ಗಮಠದ ಓಣಿಯಲ್ಲಿ ಈಶ್ವರನ ವಿಗ್ರಹವನ್ನು ಮನೆಯ ಒಂದು ಕೊಠಡಿಯಲ್ಲಿಟ್ಟಿದ್ದಾರೆ. ಮೂಲ ಗುಡಿಯು ನೆಲಸಮವಾದ ನಂತರ ಲಿಂಗವಿರುವ ಭಾಗವನ್ನು ಮಾತ್ರಬಿಟ್ಟಿಉ ಉಳಿದ ಭಾಗದಲ್ಲಿ ಜನರು ಮನೆ ನಿರ್ಮಿಸಿಕೊಂಡಿ ಈ ಗುಡಿಯನ್ನು ಮನೆಯಂತೆ ಬಳಸುತ್ತಿದ್ದಾರೆ.

೭೮

ಊರು ಹುಯಿಲಗೊಳ
ಸ್ಮಾರಕ ಕಲ್ಮೇಶ್ವರ (ಈಶ್ವರ)
ಸ್ಥಳ ಊರಿನ ಮಧ್ಯಕ್ಕೆ
ಕಾಲ ಆಧುನಿಕ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ

ಕಲ್ಯಾಣ ಚಾಲುಕ್ಯ ಶೈಲಿಯ ದೇವಾಲಯವನ್ನು ಸಂಪೂರ್ಣವಾಗಿತ್ತು ಗರ್ಭಗೃಹ ಮತ್ತು ಮುಖಮಂಟಪವಿರುವ ದೇವಾಲಯವನ್ನು ಈಗ ಕಟ್ಟಲಾಗಿದೆ. ಕಲ್ಯಾಣ ಚಾಲುಕ್ಯ ಶೈಲಿಯ ಹಲವು ಮೂರ್ತಿಗಳನ್ನು ಈ ದೇವಾಲಯದ ಮೂಲೆಯಲ್ಲಿ ಇಡಲಾಗಿದೆ. ಅವುಗಳಲ್ಲಿ ಲಿಂಗ, ಸೂರ್ಯನಾರಾಯಣ, ಬಸವ, ನಾಗರಕಲ್ಲುಗಳು, ನಾಗ ಮತ್ತು ಯಕ್ಷ ಶಿಲ್ಪಗಳಿವೆ.

ಇದೇ ಊರಿನ ಮಧ್ಯಭಾಗದಲ್ಲಿ ಹನುಮಂತನ ಗುಡಿ ಇದ್ದು, ಅದು ದಕ್ಷಿಣಾಭಿಮುಖವಾಗಿದೆ. ಅದರಲ್ಲಿ ಸುಂದರ ಹನುಮಂತನ ವಿಗ್ರಹವಿದೆ. ಕೇವಲ ಗರ್ಭಗೃಹವನ್ನು ಮಾತ್ರ ಹೊಂದಿರುವ ಈ ದೇವಾಲಯ ಸರಳವಾಗಿದೆ. ದೇವಾಲಯದ ಬಳಿ ಒಂದು ದೊಡ್ಡ ನಶಿಸಿದ ಕಲ್ಯಾಣ ಚಾಲುಕ್ಯರ ಕಾಲದ ಶಾಸನ ಹಾಗೂ ಶಾಸನೋಕ್ತ ವೀರಗಲ್ಲುಗಳಿವೆ. ಮಾರಸಿಂಗಯ್ಯನೆಂಬವನು ಮರಣ ಹೊಂದಿದ ಬಗ್ಗೆ ಒಂದು ವೀರಗಲ್ಲು ವಿವರಿಸುತ್ತದೆ (ಧಾ.ಜಿ.ಶಾ.ಸೂ, ಸಂ.ಗ. ೧೯೭; ಪು. ೧೪, SII, XV, No. 562). ಇಲ್ಲಿನ ಕಲ್ಮೇಶ್ವರ ದೇವಾಲಯದ ವೇದಿಕೆ ಮೇಲೆ ಎರುವ ಶಾಸನವು ಕ್ರಿ.ಶ. ೧೫೬೩ರಲ್ಲಿ ಮುತ್ಯಪನೆಂಬುವನು ಕಲಿನಾಥದೇವರಿಗೆ ನೀಡಿದ ಹೊನ್ನ ದಾನದ ಕುರಿತು ಮಾಹಿತಿ ನೀಡುತ್ತದೆ. (ಧಾ.ಜಿ.ಶಾ.ಸೂ, ಸಂ.ಗ. ೧೯೯; ಪು. ೧೪), SII, XV, No. 692) ಹನುಮಂತ ದೇವರ ಗುಡಿ ಶಾಸನವು ಕ್ರಿ.ಶ. ೧೫೩೬ರಲ್ಲಿ ಹೊಲಿಗೊಳ ಮತ್ತು ಗಾವರವಾಡ ಗ್ರಾಮಗಳ ಸೀಮಾ ನಿರ್ಮಾಣಕ್ಕಾಗಿ ಬಿಟ್ಟ ದಾನವನ್ನು ಕುರಿತು ವಿವರಿಸುತ್ತದೆ (ಧಾ.ಜಿ.ಶಾ.ಸೂ, ಸಂ.ಗ. ೧೯೮; ಪು. ೧೪, SII, XV, No. 687.

೭೯

ಊರು ಹುಯಿಲಗೊಲ
ಸ್ಮಾರಕ ಲಕ್ಷ್ಮಿನಾರಾಯಣ
ಸ್ಥಳ ಊರಲ್ಲಿ
ಕಾಲ ಆಧುನಿಕ
ಶೈಲಿ ಸ್ಥಳೀಯ
ಅಭಿಮುಖ ಪೂರ್ವ
ಸ್ಥಿತಿ ಮಧ್ಯಮ
ಸಂರಕ್ಷಣೆ

ಹನುಮಂತರಾವ ಹುಯಿಲಗೊಳ ಅವರು ಬ್ರಿಟಿಷರಿಂದ ಜಹಗೀರು ಪಡೆದು ಈ ದೇವಾಲಯವನ್ನು ಕಟ್ಟಿಸಿದರೆಂದು ಸ್ಥಳೀಯರು ಹೇಳುತ್ತಾರೆ. ಇದು ಗರ್ಭಗೃಹ, ಅಂತರಾಳ ಮತ್ತು ತೆರೆದ ಮುಖಮಂಟಪವನ್ನೊಳಗೊಂಡಿದೆ. ಗರ್ಭಗೃಹದಲ್ಲಿ ಲಕ್ಷ್ಮೀನಾರಾಯಣನ ಸುಂದರ ವಿಗ್ರಹವಿದೆ. ಲಕ್ಷ್ಮೀಯ ವಿಷ್ಣುವಿನ ತೊಡೆಯ ಮೇಲೆ ಆಸೀನವಾಗಿರುವಂತಿರುವ ಈ ಮೂರ್ತಿಯು ಅತ್ಯಂತ ಅಕರ್ಷಕವಾಗಿದೆ. ಗರ್ಭಗೃಹ ಮತ್ತು ಅಂತರಾಳದ ದ್ವಾರಗಳು ಮತ್ತು ಲಲಾಟಗಳು ಸರಳವಾಗಿದ್ದು, ದ್ವಾರದ ಕೆಳಭಾಗದಲ್ಲಿ ಪದ್ಮಗಳ ಅಲಂಕಾರವಿದೆ. ಮುಖಮಂಟಪದಲ್ಲಿ ಆಧಿನಿಕ ಶೈಲಿಯ ನಾಲ್ಕು ಕಂಬಗಳಿವೆ. ಮುಖಮಂಟಪ ಪ್ರವೇಶಿಸಲು ಮೆಟ್ಟಿಲುಗಳಿವೆ. ಇದರ ಎದುರು ಗರುಡಗಂಭವಿದೆ. ದೇವಾಲಯದ ಅಧಿಷ್ಠಾನ ಮತ್ತು ಭಿತ್ತಗಳು ಸರಳವಾಗಿವೆ.

ಇದೇ ಊರಿನಲ್ಲಿ ಇತ್ತೀಚೆಗೆ ನಿರ್ಮಿಸಿದ ರಾಮಲಿಂಗ ದೇವಾಲಯವಿದ್ದು, ಅದರಲ್ಲಿ ಗರ್ಭಗೃಹ, ಅಂತರಾಳ ಮತ್ತು ಮುಖಮಂಟಪಗಳಿವೆ. ದೇವಾಲಯದ ಎದುರಿನಲ್ಲಿ ಶಾಸನೋಕ್ತ ವೀರಗಲ್ಲು ಮತ್ತು ಚಾಮರದಾರರ ಶಿಲ್ಪಗಳಿವೆ.

೮೦

ಊರು ಹುಲಕೋಟೆ
ಸ್ಮಾರಕ ಕಲ್ಮೇಶ್ವರ (ಸೋಮೇಶ್ವರ)
ಸ್ಥಳ ಊರಿನ ಮಧ್ಯದಲ್ಲಿ
ಕಾಲ ಕ್ರಿ.ಶ. ೧೨-೧೩ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಈ ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಹೊಂದಿದೆ. ಗರ್ಭಗೃಹವು ಚೌಕಾಕಾರದ್ದಾಗಿದ್ದು, ಅದರಲ್ಲಿ (ಈಶ್ವರ) ಶಿವಲಿಂಗವಿದೆ. ಇದನ್ನು ಸ್ಥಳೀಯರು ಕಲ್ಮೇಶ್ವರ ಹಾಗೂ ಸೋಮೇಶ್ವರನೆಂದು ಕರೆಯುತ್ತಾರೆ. ಗರ್ಭಗೃಹದ ಭಿತ್ತಿಯ ಒಳಭಾಗದ ಮೂರು ದಿಕ್ಕುಗಳಲ್ಲಿ ಚಿಕ್ಕ ದೇವಕೋಷ್ಠಕಗಳಿವೆ. ಇದರ ದ್ವಾರವು ನಾಲ್ಕು ಶಾಖೆಗಳಿಂದ ಕೂಡಿದೆ. ಆರಂಭದ ಮೂರು ಶಾಖೆಗಳು ಸರಳವಾಗಿದ್ದು, ಅಸ್ಪಷ್ಟವಾಗಿವೆ. ಆದರೆ ಕೊನೆಯ ಶಾಖೆಯು ಸ್ತಂಭಶಾಖೆಯಾಗಿದ್ದು, ಅಲಂಕೃತವಾಗಿದೆ. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ.

ತೆರೆದ ಅಂತರಾಳ ಮುಂದಿರುವ ಭಿತ್ತಿಯಲ್ಲಿ ಎರಡು ಕಡೆ ದೇವಕೋಷ್ಠಗಳಿವೆ. ನವರಂಗದಲ್ಲಿ ನಾಲ್ಕು ಚೌಕಾಕಾರದ ಕಂಬಗಳಿದ್ದು, ಮುಚ್ಚಿಗೆಯಲ್ಲಿ ಪದ್ಮವಿದೆ, ನವರಂಗದಲ್ಲಿ ನಂದಿಯ ವಿಗ್ರಹವನ್ನು ಇಡಲಾಗಿದೆ. ನವರಂಗದ ಉತ್ತರದ ಭಿತ್ತಿಯಲ್ಲಿ ಮೂರು, ದಕ್ಷಿಣದ ಪ್ರವೇಶ ದ್ವಾರದ ಎರಡುಬದಿಯಲ್ಲಿ ತಲಾ ಒಂದು ಮತ್ತು ಪೂರ್ವ ಪ್ರವೇಶ ದ್ವಾರದ ಪಕ್ಕ ಒಂದು ದೇವಕೋಷ್ಠಗಳಿವೆ.

ನವರಂಗದ ಪೂರ್ವ ಹಾಗೂ ದಕ್ಷಿಣ ದ್ವಾರಗಳು ವಿವಿಧ ಶಾಖೆಗಳಿಂದ ಅಲಂಕೃತಗೊಂಡಿವೆ. ಇಲ್ಲಿನ ಯಾವುದೇ ದ್ವಾರದಲ್ಲಿ ದ್ವಾರಪಾಲಕರ ಶಿಲ್ಪಗಳು ಇಲ್ಲ.

ದೇವಾಲಯದ ಅಧಿಷ್ಠಾನ ಸರಳವಾಗಿದೆ. ಭಿತ್ತಿಯನ್ನು ಸೈಜುಗಲ್ಲಿನಿಂದ ಇತ್ತಿಚೀಗೆ ನಿರ್ಮಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಲಿಂಗ, ಗಣೇಶ ಹಾಗೂ ಬಸವನ ಶಿಲ್ಪಗಳಿವೆ.