೩೧

ಊರು ಜೋಗಿಎಲ್ಲಾಪುರ
ಸ್ಥಳ ಊರ ಅಗಸಿ ಹತ್ತಿರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಚಕ್ಕೆಕಲ್ಲು ಮತ್ತು ಮಣ್ಣಿನ ಒರಟುಗೋಡೆಯ ಕುಬ್ಜ ಕೊಠಡಿಯಲ್ಲಿ ಭಗ್ನಗೊಂಡಿರುವ ಹಳೆಯ ಲಿಂಗವಿದೆ. ಯೋನಿಪೀಠವು ನೆಲಮಟ್ಟದಲ್ಲಿದ್ದು, ಭಗ್ನಗೊಂಡಿದೆ. ರುದ್ರಭಾಗವಾಗಿ ಒರಟುಗುಂಡೊಂದನ್ನು ಇಟ್ಟಿದ್ದಾರೆ. ಲಿಂಗದ ಮುಂಭಾಗದಲ್ಲಿ ಒರಟುಕಲ್ಲು ಗುಂಡುಗಳನ್ನು ನೆಲದಲ್ಲಿ ಹುಗಿಯಲಾಗಿದೆ.

೩೨

ಊರು ಡೋರಿ
ಸ್ಥಳ ಊರ ಉತ್ತರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಒಂದೇ ಕೊಠಡಿಯ ದೇವಾಲಯವಿದು. ಮೇಲೆ ಹೆಂಚನ್ನು ಹೊದಿಸಲಾಗಿದೆ. ಕೊಠಡಿಯಲ್ಲಿ ಪ್ರಾಚೀನ ದೇವಾಲಯಕ್ಕೆ ಸಂಬಂಧಿಸಿದ ಲಿಂಗದ ಭಗ್ನಭಾಗಗಳಿವೆ. ಹೊರಗೆ ಐದು ಪಾಣಿಪೀಠಗಳಿವೆ. ಈ ಶಿಲ್ಪಾವಶೇಷಗಳಿಂದ ಇಲ್ಲಿ ಪ್ರಾಚೀನ ಶಿವಾಲಯವಿತ್ತೆಂದು ಸ್ಪಷ್ಟವಾಗುತ್ತದೆ.

೩೩

ಊರು ತಡಕೋಡ
ಸ್ಥಳ ತಿಮ್ಮಾಪುರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೨-೧೩ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಒಳಗೊಂಡಿದೆ. ಗರ್ಭಗೃಹ ದ್ವಾರ ಸರಳರಚನೆಯದು. ಲಲಾಟಬಿಂಬದಲ್ಲಿದ್ದ ಉಬ್ಬುಶಿಲ್ಪವನ್ನು ಭಗ್ನಗೊಳಿಸಲಾಗಿದೆ. ಇಕ್ಕೆಲಗಳಲ್ಲಿ ಚಾಮರಗಳನ್ನು ಬಿಡಿಸಲಾಗಿದೆ. ಇದೇ ರೀತಿ ಅಂತರಾಳ ದ್ವಾರದ ಲಲಾಟಬಿಂಬದಲ್ಲೂ ಉಬ್ಬುಶಿಲ್ಪ ಭಗ್ನಗೊಂಡಿದ್ದು, ಜಿನನನ್ನು ಹೋಲುತ್ತದೆ. ಹಾಗು ಚಾಮರಗಳನ್ನು ಕಾಣಬಹುದು. ಬಾಗಿಲುವಾಡಗಳಲ್ಲಿ ಅರ್ಧಕಂಬಗಳ ಅಲಂಕರಣವುಂಟು. ಅರ್ಧಕಂಬಗಳು ರಚನೆಯಲ್ಲಿ ಸ್ಥಳೀಯ ಶೈಲಿಯಲ್ಲಿವೆ. ನವರಂಗದಲ್ಲಿರುವ ಕಂಬಗಳು ಚೌಕ ಅಲಂಕರಣದವು. ದೇವಕೋಷ್ಠಗಳಿದ್ದು, ಸೂಕ್ಷ್ಮದ್ವಾರ ಮತ್ತು ಶಿಖರಗಳಿಂದ ಅಲಂಕೃತವಾಗಿವೆ. ಚಾವಣಿ ಮತ್ತು ಭಿತ್ತಿಭಾಗಗಳು ಜೀರ್ಣೋದ್ಧಾರಗೊಂಡಿವೆ.

ದೇವಾಲಯದಲ್ಲಿ ಲಿಂಗ, ನಂದಿ, ಗಣಪತಿ ಮತ್ತು ಭೈರವಿಶಿಲ್ಪಗಳಿವೆ. ಬೈಲಹೊಂಗಲ ರಸ್ತೆಯಲ್ಲಿ ದೀಪದ ಕಂಬಕ್ಕೆ ಒರಗಿಸಿದ ಸರಸ್ವತಿಯ ಭಗ್ನಶಿಲ್ಪವಿದೆ.

ದೇವಾಲಯದಲ್ಲಿರುವ ಯಾದವ ರಾಮಚಂದ್ರನ ಕ್ರಿ.ಶ. ೧೨೮೨ರ ಶಾಸನವು, ಕನ್ನರದೇವನ ಅರಸಿಯ ಆದೇಶದ ಮೇರೆಗೆ ಸರ್ವಾಧಿಕಾರಿ ಮಾಯಿದೇವನು ಬಸದಿಯನ್ನು ನಿರ್ಮಿಸಿದನೆಂದಿದೆ (ಸೌಇಇ : XV : ೧೯೯). ಮತ್ತೊಂದು ಶಾಸನದಲ್ಲಿ ಜೈನಯತಿಗಳ ಉಲ್ಲೇಖವಿದ್ದು, ಚಂದ್ರನಾಥ ತೀರ್ಥಂಕರನ ಸ್ತೋತ್ರದ ಉಲ್ಲೇಖವಿದೆ. ಮೇಲೆ ತಿಳಿಸಿದ ಲಲಾಟಬಿಂಬದ ಉಬ್ಬುಶಿಲ್ಪಗಳು ಮತ್ತು ಶಾಸನಾಧಾರಗಳಿಂದ ಈ ದೇವಾಲಯ ಮೂಲತಃ ಜೈನಬಸದಿಯಾಗಿದ್ದು, ನಂತರದ ಕಾಲದಲ್ಲಿ ಶೈವದೇವಾಲಯವನ್ನಾಗಿ ಪರಿವರ್ತಿಸಲಾಗಿದೆ. ಮೇಲಿನ ದೇವಾಲಯವು ಯಾದವರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಕಾಲನಿರ್ದೇಶಿತವಾಗಿದೆ. ಹಾಗಾಗಿ ಇದು ಮಹತ್ವದ ಸ್ಮಾರಕವೆನ್ನಬಹುದು.

೩೪

ಊರು ತಡಕೋಡ
ಸ್ಥಳ ಹಾಳೂರು
ಸ್ಮಾರಕ ಸಿದ್ದೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಹೊಂದಿದೆ. ಗೋಡೆ ಚಕ್ಕೆಕಲ್ಲಿನದು. ಸಭಾಗೃಹದಲ್ಲಿ ಚೌಕ ಮತ್ತು ಅಷ್ಟಮುಖ ರಚನೆಯ ಕಂಬಗಳು ಕಂಡುಬರುತ್ತವೆ. ಪ್ರಾಚೀನ ದೇವಾಲಯವು ಬಿದ್ದು ಹೋದನಂತರ ಈಗಿರುವ ದೇವಾಲಯವನ್ನು ನಿರ್ಮಿಸಿಕೊಂಡಿದ್ದಾರೆ. ಹಿಂದೆ ಇದು ಸಿದ್ದಾಪುರ ಗ್ರಾಮವಾಗಿತ್ತು. ಬ್ರಿಟಿಷರ ಕಿರುಕುಳದಿಂದ ಈ ಊರನ್ನು ತೆರವು ಮಾಡಿದ ಜನರು ತಡಕೋಡದಲ್ಲಿ ನೆಲಸಿದರಂತೆ. ಸಿದ್ದಾಪುರ ದೇಸಗತಿ ಗ್ರಾಮವಾಗಿತ್ತು.

ಗರ್ಭಗೃಹದಲ್ಲಿರುವ ಲಿಂಗ ಕಲ್ಯಾಣ ಚಾಲುಕ್ಯರ ಕಾಲದ್ದು. ಸಭಾಗೃಹದಲ್ಲಿ ಭಗ್ನಗೊಂಡಿರುವ ಗಣಪತಿ ಮತ್ತು ನಂದಿ ಶಿಲ್ಪಾವಶೇಷಗಳಿವೆ. ದೇವಾಲಯದ ಹಿಂಭಾಗದಲ್ಲಿ ಭಗ್ನಗೊಂಡಿರುವ ಸಪ್ತಮಾತೃಕೆಯರ ಶಿಲ್ಪಫಲಕವಿದೆ. ದೇವಾಲಯದ ಪಕ್ಕದಲ್ಲಿ ಬಾವಿಯುಂಟು.

ಸಭಾಗೃಹದಲ್ಲಿರುವ ಶಾಸನವು ಪ್ರಕಟಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

೩೫

ಊರು ತಲವಾಯಿ
ಸ್ಥಳ ಊರ ಮುಂಭಾಗ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಆರ್.ಸಿ.ಸಿ.
ಸ್ಥಿತಿ ಉತ್ತಮ
ಸಂರಕ್ಷಣೆ

ಇತ್ತೀಚೆಗೆ ನಿರ್ಮಿಸಿರುವ ದೇವಾಲಯವಿದು. ಗರ್ಭಗೃಹ ಮತ್ತು ತೆರದ ಸಭಾ ಮಂಟಪಗಳಿರುವ ಈ ಕಟ್ಟಡವನ್ನು ೧೯೯೭-೯೮ರ ಸಾಲಿನ ನೋಂದಣಿ ಶುಲ್ಕದ ಅನುದಾನದಲ್ಲಿ ನಿರ್ಮಿಸಿದ್ದು, ಸಭಾಭವನ ಎಂದು ಹೆಸರಿಸಲಾಗಿದೆ.

ಗರ್ಭಗೃಹದಲ್ಲಿ ವೇದಿಕೆಯ ಮೇಲೆ ಪ್ರಾಚೀನ ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ. ಹೊರ ಭಾಗದಲ್ಲಿ ಹಳೆಯ ಶಿಲ್ಪಾವಶೇಷಗಳು ಕಂಡುಬರುತ್ತವೆ. ಅವುಗಳಲ್ಲಿ ಭೈರವಿ, ವೀರ ಮತ್ತು ನಾಗಶಿಲ್ಪಗಳು ಪ್ರಮುಖವಾಗಿವೆ.

೩೬

ಊರು ತಲವಾಯಿ
ಸ್ಥಳ ಊರ ಈಶಾನ್ಯ ಮೂಲೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ತೆರದ ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ವೇದಿಕೆಯ ಮೇಲೆ ಪ್ರಾಚೀನ ಲಿಂಗವನ್ನು ಇಡಲಾಗಿದೆ. ಹೊರಭಾಗದಲ್ಲಿ ಭಗ್ನಗೊಂಡ ಶಾಸನಶಿಲ್ಪವಿದೆ. ಬಹುಶಃ ಇಲ್ಲಿ ಹಳೆಯ ದೇವಾಲಯವಿದ್ದು, ಅದು ಹಾಳಾದ ನಂತರ ಈಗಿರುವ ದೇವಾಲಯವನ್ನು ನಿರ್ಮಿಸಿರಬೇಕು. ಇದನ್ನು ಮೇಲಿನ ಶಿಲ್ಪಾವಶೇಷಗಳು ಪುಷ್ಠೀಕರಿಸುತ್ತವೆ.

೩೭

ಊರು ತೇಗೂರು
ಸ್ಥಳ ದುಬ್ಬನಮಟ್ಟಿ ಹೊಲ
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಹಿಂದು-ಮುಸ್ಲಿಂ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಸುಮಾರು ದಶಕಗಳ ಹಿಂದೆ ನಿರ್ಮಿಸಿರುವ ಒಂದೇ ಕೊಠಡಿಯ ದೇವಾಲಯವಿದು. ಮೇಲೆ ಸುತ್ತಲು ಮುಂಚಾಚಿದ ಸೂರಿನ ರಚನೆ ಇದ್ದು, ಅದಕ್ಕೆ ಆಧಾರವಾಗಿ ಕೆಳಭಾಗದಲ್ಲಿ ಕಲ್ಲಿನ ಜಂತಿಗಳನ್ನು ಅಳವಡಿಸಿದ್ದಾರೆ. ಗರ್ಭಗೃಹದ ಮೇಲಿರುವ ಗಾರೆಶಿಖರವು ಕಲಾತ್ಮಕವಾಗಿದ್ದು, ಸಣ್ಣಗೂಡುಗಳಿಂದ ಅಲಂಕರಣಗೊಂಡಿದೆ. ಶಿಖರದ ಮುಂಭಾಗದಲ್ಲಿ ಕಲ್ಲಿನ ಫಲಕವನ್ನು ಅಳವಡಿಸಿದ್ದು, ಅದರಲ್ಲಿ ನಿರ್ಮಾಣಕಾಲದಲ್ಲಿ ನಮೂದಿಸಲಾಗಿದೆ. ಅದು ಎತ್ತರದಲ್ಲಿರುವುದರಿಂದ ಹಾಗು ಮೇಲೇರಲು ಸಾಧ್ಯವಾಗದ ಕಾರಣ ಗ್ರಹಿಸಲಾಗಿಲ್ಲ. ಈ ಫಲಕದ ಕೆಳಗೆ ದೊಡ್ಡ ಗೂಡೊಂದನ್ನು ರಚಿಸಲಾಗಿದೆ.

ದೇವಾಲಯದಲ್ಲಿ ಹಳೆಯ ಲಿಂಗವಿದ್ದು, ರುದ್ರಭಾಗದಲ್ಲಿ ಗುಂಡನ್ನು ಅಳವಡಿಸಿದ್ದಾರೆ. ಲಿಂಗದ ಯೋನಿಪೀಠದ ಜಲಹರಿಯು ಕೀರ್ತಿಮುಖದ ಅಲಂಕರಣವನ್ನು ಹೊಂದಿದೆ.

ಈ ಊರಿನ ಚಾವಡಿ ಹತ್ತಿರವಿರುವ ಶಾಸನವು ಕ್ರಿ.ಶ. ೧೦೮೨ಕ್ಕೆ ಸೇರಿದ್ದು, ಆರನೆಯ ವಿಕ್ರಮಾದಿತ್ಯನದು. ಜಯದೇವಗಾವುಂಡ ಎಂಬುವನು ಕಲಿದೇವ ದೇವಾಲಯವನ್ನು ನವೀಕರಿಸಿ ದಾನ ಮಾಡಿದನೆಂದು ತಿಳಿಸುತ್ತದೆ. ಬಹುಶಃ ಈ ಶಾಸನ ಉಲ್ಲೇಖಿಸುವ ಕಲಿದೇವ, ಹಳೆ ತೇಗೂರಿನ ಕಲ್ಮೇಶ್ವರ ಇರಬಹುದು (ಸೌಇಇ XI-ii : ೧೨೮).

೩೮

ಊರು ದುಬ್ಬನಮಟ್ಟಿ
ಸ್ಥಳ ಊರ ದಕ್ಷಿಣ ಹೊಲ
ಸ್ಮಾರಕ ಕಲ್ಮೇಶ್ವರ ಲಿಂಗ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಹಿಂದು-ಮುಸ್ಲಿಂ
ಸ್ಥಿತಿ
ಸಂರಕ್ಷಣೆ

ತೆರೆದ ಬಯಲಿನ ಎತ್ತರದ ಸ್ಥಳದಲ್ಲಿ ಹಳೆಯ ಲಿಂಗ ಮತ್ತು ಭೈರವಿಶಿಲ್ಪಗಳಿವೆ. ಭೈರವಿಶಿಲ್ಪ ಭಗ್ನಗೊಂಡಿದೆ. ಇವು ಪ್ರಾಚೀನ ಶಿವಾಲಯವೊಂದಕ್ಕೆ ಸಂಬಂಧಿಸಿವೆ. ದೇವಾಲಯವು ಅವನತಿ ಹೊಂದಿದ್ದು, ಅದರ ನೆಲೆ ಯಾವುದೆಂಬುದು ತಿಳಿದುಬರುವುದಿಲ್ಲ.

೩೯

ಊರು ದೇವರಹುಬ್ಬಳ್ಳಿ
ಸ್ಥಳ ಊರ ದಕ್ಷಿಣ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚೆಗೆ ನಿರ್ಮಿಸಿರುವ ದೇವಾಲಯವಿದು. ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿರುವ ದೇವಾಲಯದಲ್ಲಿ ಪ್ರಾಚೀನ ಕಾಲದ ಲಿಂಗವಿದೆ. ಗರ್ಭಗೃಹದ ಚಾವಣಿ ಕಲ್ಲಿನದು. ಮೇಲೆ ಗಾರೆಶಿಖರವನ್ನು ರಚಿಸಿದ್ದಾರೆ. ಸಭಾಗೃಹದ ಚಾವಣಿಗೆ ಹೆಂಚನ್ನು ಹೊದಿಸಲಾಗಿದೆ. ಗೋಡೆಯನ್ನು ಸ್ಥಳೀಯವಾಗಿ ದೊರೆಯುವ ಚಕ್ಕೆಕಲ್ಲು ಮತ್ತು ಸಿಮೆಂಟಿನಿಂದ ಕಟ್ಟಲಾಗಿದೆ.

೪೦

ಊರು ದೇವರಹುಬ್ಬಳ್ಳಿ
ಸ್ಥಳ ಊರ ಉತ್ತರ
ಸ್ಮಾರಕ ರಂಗನಾಥ ದೇವಾಲಯ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಒಳಗೊಂಡಿದೆ. ಗರ್ಭಗೃಹದ ಬಾಗಿಲುವಾಡಗಳಲ್ಲಿ ಅರ್ಧಕಂಬಗಳ ಅಲಂಕರಣೆಯುಂಟು, ಇದಕ್ಕೆ ಹೊಂದಿಕೊಂಡಂತೆ ಗೋಡೆಗಂಬಗಳಿವೆ. ಅಂತರಾಳದ್ವಾರವು ಅರ್ಧಕಂಬಗಳ ಅಲಂಕರಣೆಯನ್ನು ಹೊಂದಿದ್ದು, ಇಕ್ಕೆಲಗಳಲ್ಲಿ ಜಾಲಂಧ್ರಗಳನ್ನು ಕಾಣಬಹುದು. ಇದನ್ನು ಹೊಂದಿಕೊಂಡಂತೆ ಗೋಡೆಗಂಬಗಳಿವೆ. ನವರಂಗದಲ್ಲಿ ಚೌಕ ಮತ್ತು ದುಂಡುರಚನೆಯ ಕಂಬಗಳಿವೆ. ದುಂಡನೆಯ ಭಾಗವು ಬಳೆಗಳ ಅಲಂಕರಣದಿಂದ ಕೂಡಿದೆ. ಅಂತರಾಳದಿಂದ ಕೂಡಿದೆ. ಅಂತರಾಳದಿಂದ ಪ್ರವೇಶಮಂಟಪದವರೆಗೆ ಮೇಲ್ಭಾಗದಲ್ಲಿ ಮಹಡಿ ಇದ್ದು, ಹೆಂಚಿನ ಚಾವಣಿಯನ್ನು ನಿರ್ಮಿಸಲಾಗಿದೆ. ಗರ್ಭಗೃಹದ ಮೇಲಿರುವ ಶಿಖರ ಸಿಮೆಂಟಿನದು.

ಗರ್ಭಗೃಹದಲ್ಲಿರುವ ವಿಷ್ಣುವಿನ ಶಿಲ್ಪವು ಕೀರ್ತಿಮುಖ ಸಹಿತ ಯಾಳ ಮತ್ತು ಲತಾ ಬಳ್ಳಿಗಳ ಅಲಂಕರಣದಿಂದ ಕೂಡಿದೆ. ಚತುರ್ಭುಜ ವಿಷ್ಣು ಶಿಲ್ಪವು ನೋಡಲು ಸುಂದರವಾಗಿದ್ದು, ಎತ್ತರವಾದ ಪಾಣಿಪೀಠದ ಮೇಲಿದೆ.

ಈ ದೇವಾಲಯದ ಹತ್ತಿರವಿರುವ ಕೋಡಿ ಬಸವಣ್ಣನ ಗುಡಿ ಮುಂದಿರುವ ಕ್ರಿ.ಶ. ೧೨೦೬ರ ಶಾಸನ ಜನಕೇಶಿಯದು. ಅಗ್ರಹಾರ ಹುಪ್ಪವಳ್ಳಿಯ ಮಹಾಜನರು ಮಹಾಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಿ, ದೇವಾಲಯಕ್ಕೆ ಭೂದಾನ ಮಾಡಿದ ಉಲ್ಲೇಖವಿದೆ (ಸೌಇಇ xv : ೨೩೨ : ಕಇ V : ೬೬). ಬಹುಶಃ ಇದು ಮೇಲಿನ ದೇವಾಲಯಕ್ಕೆ ಸಂಬಂಧಿಸಿದ ಶಾಸನವಿರಬಹುದು. ದೇವರ ಹುಬ್ಬಳ್ಳಿಯ ಪ್ರಾಚೀನ ಹೆಸರು ಹುಪ್ಪವಳ್ಳಿ ಎಂದಿದೆ. ಮೇಲಿನ ದೇವಾಲಯದಿಂದಾಗಿ ಹುಪ್ಪವಳ್ಳಿಯನ್ನು ದೇವರ ಹುಬ್ಬಳ್ಳಿ ಎಂದು ಕರೆಯಲಾಗಿದೆ.

೪೧

ಊರು ಧಾರವಾಡ
ಸ್ಥಳ ಸೈದಾಪುರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಉತ್ತರ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಹೊಸದಾಗಿ ನಿರ್ಮಾಣಗೊಂಡ ಆರ್.ಸಿ.ಸಿ. ದೇವಾಲಯವಿದು. ಈ ಮೊದಲು ಸೀಮೆಹೆಂಚಿನ ಹಳೆಯ ದೇವಾಲಯವಿತ್ತು. ಗರ್ಭಗೃಹದಲ್ಲಿರುವ ಲಿಂಗ ಹಳೆಯದು. ಉಳಿದಂತೆ ಯಾವುದೇ ಶಿಲ್ಪಾವಶೇಷಗಳು ಕಾಣಬರುವುದಿಲ್ಲ.

೪೨

ಊರು ಧಾರವಾಡ
ಸ್ಥಳ ಮದಿಹಾಳ
ಸ್ಮಾರಕ ಈಶ್ವರ ದೇವಾಲಯ
ಅಭಿಮುಖ ಪಶ್ಚಿಮ
ಕಾಲ ೧೮೩೨
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಪ್ರಸ್ತುತ ಈಶ್ವರ ದೇವಾಲಯವು ಲಕ್ಷ್ಮೀನರಸಿಂಹ ದೇವಾಲಯದ ಆವರಣದಲ್ಲಿದೆ. ಈ ದೇವಾಲಯಗಳನ್ನು ಕ್ರಿ.ಶ.೧೮೩೨ ರಲ್ಲಿ ಶ್ರೀನಿವಾಸರಾವ್ ಎಂಬುವರು ಕಟ್ಟಿಸಿದ್ದಾರೆ. ಆವರಣದ ಈಶಾನ್ಯ ಮೂಲೆಯಲ್ಲಿರುವ ಒಂದೇ ಕೊಠಡಿಯ ಈಶ್ವರ ದೇವಾಲಯದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಲಿಂಗವಿದೆ. ಬಹುಶಃ ಈ ಲಿಂಗವನ್ನು ಬೇರೊಂದು ದೇವಾಲಯದಿಂದ ತಂದು ಪ್ರತಿಷ್ಠಾಪಿಸಿರಬಹುದು. ಮಾಧ್ವ ಸಂಪ್ರದಾಯದ ಲಕ್ಷ್ಮೀನರಸಿಂಹ ದೇವಾಲಯದ ಆವರಣದಲ್ಲಿ ಶಿವಲಿಂಗವಿರುವುದು ಗಮನಾರ್ಹ.

೪೩

ಊರು ಧಾರವಾಡ
ಸ್ಥಳ ವಿದ್ಯಾಗಿರಿ
ಸ್ಮಾರಕ ಮೈಲಾರಲಿಂಗೇಶ್ವರ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಗರ್ಭಗೃಹ ಮತ್ತು ನವರಂಗಗಳಿರುವ ದೇವಾಲಯವು ಜೀರ್ಣೋದ್ಧಾರಗೊಂಡಿದೆ. ಗರ್ಭಗೃಹದ ಬಾಗಿಲನ್ನು ಸ್ಥಳೀಯ ಶೈಲಿಯಲ್ಲಿ ರಚಿಸಿ ಅಳವಡಿಸಿದ್ದಾರೆ. ನವರಂಗದಲ್ಲಿ ತಿರುಗಣೆ ಯಂತ್ರದಿಂದ ಕಡೆದ ಕಂಬಗಳಿದ್ದು, ಬಳೆಗಳ ಅಲಂಕರಣವನ್ನು ಹೊಂದಿವೆ. ಗೋಡೆಗಳಲ್ಲಿರುವ ಕಂಬಗಳು ಚೌಕ ಮತ್ತು ಒಳಹೊರ ರಚನೆಗಳಿಂದ ಕೂಡಿವೆ. ಜೀರ್ಣೋದ್ಧಾರದ ವೇಳೆ ಗರ್ಭಗೃಹವನ್ನು ಅಗಲಗೊಳಿಸಿ, ಅರ್ಧಮಂಟಪವನ್ನು ಕೈಬಿಟ್ಟಿರುವಂತೆ ಕಾಣುತ್ತದೆ. ಗೋಡೆ ದಿಂಡುಗಲ್ಲಿನದು. ಹೊರಭಾಗದಲ್ಲಿ ದೇವಾಲಯದ ಹಳೆಯ ವಾಸ್ತು ಅವಶೇಷಗಳಿವೆ.

ಗರ್ಭಗೃಹದ ಗೋಡೆಯಲ್ಲಿರುವ ಗೂಡಿನಲ್ಲಿ ಮೈಲಾರಲಿಂಗೇಶ್ವರನ ಪ್ರತಿಮೆ ಇದೆ. ಕೆಳಗೆ ನೆಲಮಟ್ಟದಲ್ಲಿ ಲಿಂಗವಿದೆ. ನವರಂಗದಲ್ಲಿರುವ ನಂದಿ ಇತ್ತೀಚಿನದು. ಹೊರಭಾಗದಲ್ಲಿ ಭಗ್ನಗೊಂಡಿರುವ ನಂದಿ, ಮತ್ತಿತರ ಶಿಲ್ಪಾವಶೇಷಗಳಿವೆ.

೪೪

ಊರು ಧಾರವಾಡ
ಸ್ಥಳ ಎಸ್.ಡಿ.ಎಂ. ಕಾಲೇಜ್
ಸ್ಮಾರಕ ಸೋಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಸುಂದರವಾದ ಪರಿಸರದಲ್ಲಿದೆ. ಗರ್ಭಗೃಹ, ಅರ್ಧಮಂಟಪ ಮತ್ತು ನವರಂಗಗಳನ್ನು ಒಳಗೊಂಡಿರುವ ದೇವಾಲಯವು ಜೀರ್ಣೋದ್ಧಾರಗೊಂಡಿದೆ. ಗರ್ಭಗೃಹದಲ್ಲಿ ಭಿತ್ತಿಗೆ ಹೊಂದಿಕೊಂಡಂತೆ ಎರಡೆರೆಡು ಕಂಬಗಳನ್ನು ಮೂರೂ ಕಡೆ ಅಳವಡಿಸಲಾಗಿದೆ. ಇದರಿಂದ ಒಳ ಭಿತ್ತಿಯ ಭದ್ರತೆ ಮತ್ತು ಅಲಂಕರಣ ಹೆಚ್ಚುವುದಲ್ಲದೆ, ಮೇಲಿನ ಚಾವಣಿ ಭಾರವನ್ನು ಸಮರ್ಥವಾಗಿ ಹೊರಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗರ್ಭಗೃಹವನ್ನು ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಉಬ್ಬು ಶಿಲ್ಪವಿದೆ. ಬಾಗಿಲುವಾಡಗಳಲ್ಲಿ ಅರ್ಧಕಂಬಗಳು ಮತ್ತು ತಳದಲ್ಲಿ ದ್ವಾರಪಾಲಕರ ಉಬ್ಬು ಶಿಲ್ಪಗಳನ್ನು ಬಿಡಿಸಲಾಗಿದೆ. ಉಳಿದಂತೆ ಪಟ್ಟಿಗಳಲ್ಲಿ ಯಾವುದೇ ಕೆತ್ತನೆಗಳಿಲ್ಲ. ಅರ್ಧಮಂಟಪದ ಒಳಚಾವಣಿಯನ್ನು ಕಮಾನಿನಾಕಾರದಲ್ಲಿ ಜೀರ್ಣೋದ್ಧಾರ ಮಾಡಿದ್ದಾರೆ. ಹಾಗು ದಕ್ಷಿಣ ಮತ್ತು ಉತ್ತರದಲ್ಲಿ ಪ್ರವೇಶದ್ವಾರಗಳನ್ನು ಹೊಂದಿದೆ. ನವರಂಗದಲ್ಲಿರುವ ಕಂಬಗಳು ಚೌಕ ಮತ್ತು ಪಟ್ಟಿಗಳ ಅಲಂಕರಣದಿಂದ ಕೂಡಿವೆ. ಉಳಿದಂತೆ ಗೋಡೆಗಂಬಗಳು, ತೊಲೆಗಳು ಮತ್ತು ಶಿಲಾಚಪ್ಪಡಿಗಳನ್ನು ಬದಲಿಸಲಾಗಿದೆ. ಆದರೆ ಒಳಚಾವಣಿಯ ಮಧ್ಯದಲ್ಲಿರುವ ಭುವನೇಶ್ವರಿಯಲ್ಲಿ ನಾಲ್ಕು ಸುತ್ತುಗಳ ಕಮಲದಳಗಳ ಅಲಂಕರಣವಿದ್ದು, ನಾಲ್ಕೂಮೂಲೆಗಳಲ್ಲಿ ಕೀರ್ತಿಮುಖದ ರಚನೆಗಳನ್ನು ಬಿಡಿಸಲಾಗಿದೆ. ನವರಂಗದ ಪೂರ್ವದಿಕ್ಕಿನಲ್ಲಿ ಪ್ರವೇಶದ್ವಾರವಿದೆ. ಈ ದ್ವಾರವು ಇತ್ತೀಚಿನ ರಚನೆಯಾಗಿದ್ದು, ಪ್ರಾಚೀನ ಹೊಸ್ತಿಲನ್ನು ಹೊಂದಿದೆ. ಗರ್ಭಗೃಹದ ಹೊರಭಿತ್ತಿ ಮತ್ತು ಉಳಿದ ಭಿತ್ತಿ ಭಾಗಗಳು ಜೀರ್ಣೋದ್ಧಾರಗೊಂಡಿವೆ. ಗರ್ಭಗೃಹದ ಮೇಲೆ ಮೆಟ್ಟಿಲಾಕಾರದ ಶಿಖರವಿದ್ದು, ಕಳಸವನ್ನು ಒಳಗೊಂಡಿರುವುದು. ಮೇಲೆ ತಿಳಿಸಿದಂತೆ ಗರ್ಭಗೃಹದಲ್ಲಿ ಭಿತ್ತಿಗೆ ಹೊಂದಿಕೊಂಡಂತೆ ಮೂರು ಭಾಗಗಳಲ್ಲಿ ಜೋಡಿ ಕಂಬಗಳನ್ನು ಅಳವಡಿಸಿದೆ. ಇದು ಈ ಭಾಗದಲ್ಲಿ, ಅದರಲ್ಲೂ ಗೋವೆ ಕದಂಬರ ದೇವಾಲಯಗಳಲ್ಲಿ ಬೆಳೆದು ಬಂದ ವಿಶಿಷ್ಠವಾಸ್ತು ಶೈಲಿಯನ್ನಬಹುದು. ಇದೇ ರೀತಿಯ ವಾಸ್ತುರಚನೆಗಳು ಧಾರವಾಡ ಜಿಲ್ಲೆಯ ಇತರೆಡೆಗಳಲ್ಲಿ ವಿರಳವಾಗಿ ಕಂಡು ಬರುತ್ತವೆ. ದೇವಾಲಯದಲ್ಲಿ ಸೊಮೇಶ್ವರನ ಸ್ವಯಂಭುಲಿಂಗವಿದೆ. ಲಿಂಗವು ದೊಡ್ಡದಿದ್ದು, ನೆಲಮಟ್ಟದಲ್ಲಿದೆ. ದೂರದ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ನವರಂಗದಲ್ಲಿರುವ ಗೂಡುಗಳಲ್ಲಿ ಗಣಪತಿ ಮತ್ತು ಮಹಿಷಮರ್ದಿನಿ ಶಿಲ್ಪಗಳಿವೆ. ಮುಂದಿರುವ ಆಂಜನೇಯ ಗುಡಿಯಲ್ಲಿ ಸಪ್ತಮಾತೃಕೆಯರ ಶಿಲ್ಪಫಲಕ ಮತ್ತು ನಾಗಶಿಲ್ಪಗಳು ಕಂಡು ಬರುತ್ತವೆ.

೪೫

ಊರು ನರೇಂದ್ರ
ಸ್ಥಳ ಕುಂಬಾರ ಓಣಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಹೊಂದಿದೆ. ಗರ್ಭಗೃಹವನ್ನು ಕಲ್ಲಿನಿಂದ ನಿರ್ಮಿಸಲಾಗಿದ್ದು, ಸಭಾಗೃಹವನ್ನು ಮಾಳಿಗೆಶೈಲಿಯಲ್ಲಿ ಕಟ್ಟಲಾಗಿದೆ. ಮುಂಭಾಗದಲ್ಲಿರುವ ಪ್ರವೇಶಮಂಟಪಕ್ಕೆ ಸೀಮೆಹೆಂಚಿನ ಚಾವಣಿಯನ್ನು ಹೊದಿಸಲಾಗಿದೆ.

ಗರ್ಭಗೃಹದಲ್ಲಿರುವ ಹಳೆಯ ಲಿಂಗವು ವೇದಿಕೆ ಮೇಲಿದೆ. ಸಭಾಗೃಹದಲ್ಲಿರುವ ನಂದಿಶಿಲ್ಪ ಇತ್ತೀಚಿನದು. ಹೊರಭಾಗದಲ್ಲಿ ಕುಬ್ಜ ವಿಷ್ಣು ಶಿಲ್ಪ, ಲಿಂಗದ ರುದ್ರಭಾಗ ಮತ್ತು ಶಾಸನವೊಂದು ಕಂಡುಬರುತ್ತದೆ. ಇದೇ ಊರಿನ ಧಾರವಾಡ ರಸ್ತೆಯಲ್ಲಿರುವ ವೀರಣ್ಣಗುಡಿಯ ಮುಂಭಾಗದಲ್ಲಿ ವೀರಗಲ್ಲೊಂದಿದೆ. ಅದರಲ್ಲಿ ಎರಡು ಕಂಬಗಳ ಮೇಲಿರುವ ತೊಲೆಗೆ ಅಳವಡಿಸಿರುವ ಚೌಕಟ್ಟಿನಲ್ಲಿ ವ್ಯಕ್ತಿಯೊಬ್ಬನು ನಿಂತಿದ್ದಾನೆ. ಇದರ ಮೇಲಿನ ಹಂತದಲ್ಲಿ ಅವನನ್ನು ಅಪ್ಸರೆಯರು ಸ್ವರ್ಗಕ್ಕೆ ಒಯ್ಯುವಂತೆ ಚಿತ್ರಿಸಲಾಗಿದೆ. ಬಹುಶಃ ಇದು ವ್ಯಕ್ತಿಯೊಬ್ಬನ ಬಲಿದಾನವನ್ನು ಸೂಚಿಸುತ್ತದೆ. ಈ ವೀರಗಲ್ಲಿನ ಪಕ್ಕದಲ್ಲಿ ವಿಷ್ಣುಶಿಲ್ಪ ಮತ್ತು ಹಳೆಯ ದೇವಾಲಯದ ವಾಸ್ತು ಅವಶೇಷಗಳು ಕಂಡುಬರುತ್ತವೆ.