೯೧

ಊರು ಹಳ್ಳಿಗೇರಿ
ಸ್ಥಳ ಹಳ್ಳದ ದಂಡೆ
ಸ್ಮಾರಕ ಸಿದ್ದಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಇತ್ತೀಚೆಗೆ ನಿರ್ಮಿಸಿರುವ ದೇವಾಲಯವಿದು. ಆರ್.ಸಿ.ಸಿ. ರಚನೆಯ ಕೊಠಡಿಯಲ್ಲಿ ಪ್ರಾಚೀನ ಕಾಲದ ಲಿಂಗವಿದೆ. ಹೊರಭಾಗದಲ್ಲೂ ವೇದಿಕೆಯ ಮೇಲೆ ಪ್ರಾಚೀನಕಾಲದ ಲಿಂಗವನ್ನು ಕಾಣಬಹುದು. ಇದರಿಂದ ಇಲ್ಲಿ ಪ್ರಾವೀನ ದೇವಾಲಯ ಇತ್ತೆಂಬುದು ಸ್ಪಷ್ಟವಾಗುತ್ತದೆ. ದೇವಾಲಯದೊಳಗೆ ಈಗಲೂ ಮರವೊಂದಿದ್ದು, ಅದರ ಕೆಳಗೆ ಮೇಳೆ ಹೇಳಿದ ಲಿಂಗಗಳಿದ್ದವು. ಅಂದರೆ ಮರವನ್ನು ಸೇರಿಸಿಕೊಂಡು ಈಗಿನ ದೇವಾಲಯವನ್ನು ನಿರ್ಮಿಸಿದ್ದಾರೆ.

೯೨

ಊರು ಹಳೆತೇಗೂರು
ಸ್ಥಳ ಊರಿಂದ ಪೂರ್ವಕ್ಕೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಚಕ್ಕೆಕಲ್ಲಿನ ಕೊಠಡಿಯ ದೇವಾಲಯವಿದು. ಕೆಲವು ವರ್ಷಗಳ ಹಿಂದೆ ನಿರ್ಮಿಸಿದ್ದಾರೆ. ಈ ಗುಡಿಯ ಹೊರಭಾಗದಲ್ಲಿ ಪ್ರಾಚೀನ ದೇವಾಲಯದ ವಾಸ್ತುಭಾಗಗಳು ಮತ್ತು ಮೂರ್ತಿ ಶಿಲ್ಪಾವಶೇಷಗಳು ಕಂಡುಬರುತ್ತವೆ. ಸಮೀಪದಲ್ಲಿರುವ ವಿಠ್ಠಲದೇವಾಲಯದ ಹಿಂಭಾಘದ ಜಮೀನಿನಲ್ಲಿ ಮುದ್ರಾಭಂಗಿಯಲ್ಲಿ ಧ್ಯಾನಸ್ಥಿತಿಯಲ್ಲಿರುವ ಶಿಲ್ಪವಿದೆ. ತೇಗೂರಿನ ಚಾವರಿ ಹತ್ತಿರವಿರುವ ಕ್ರಿ.ಶ. ೧೦೮೨ ರ ಶಾಸನವು ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರುತ್ತದೆ. ಜಯದೇವಗಾವುಂಡ ಎಂಬುವನು ಕಲಿದೇವ ದೇವಾಲಯವನ್ನು ನವೀಕರಿಸಿ ದಾನ ಮಾಡಿದನೆಂದಿದೆ (ಸೌಇಇ xi – ii : ೧೨೮). ಮೇಲೆ ಹೇಳಿದ ಪ್ರಾಚೀನ ದೇವಾಲಯದ ವಾಸ್ತು ಮತ್ತು ಶಿಲ್ಪಾವಶೇಷಗಳು ತೇಗೂರಿನ ಶಾಸನೋಕ್ತ ಕಲಿದೇವ ದೇವಾಲಯಕ್ಕೆ ಸಂಬಂಧಿಸಿರಬಹುದೆ?

೯೩

ಊರು ಹಾರೋಬೆಳವಡಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚೆಗೆ ದಿಂಡುಗಲ್ಲಿನ ಕೊಠಡಿಯೊಂದನ್ನು ನಿರ್ಮಿಸಿದ್ದಾರೆ. ಅದರಲ್ಲಿ ಹಳೆಯ ದೇವಾಲಯಕ್ಕೆ ಸೇರಿದ ಲಿಂಗವಿದೆ. ಹೊರಭಾಗದಲ್ಲಿ ಲಿಂಗ, ಮಹಿಷಮರ್ದಿನಿ, ನಾಗ ಮತ್ತಿತ್ತರ ಶಿಲ್ಪಾವಶೇಷಗಳು ಕಂಡುಬರುತ್ತವೆ. ಊರಿನ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಭೈರವಿ, ಚತುರ್ಮುಖ ಬ್ರಹ್ಮನ ಎರಡು ಶಿಲ್ಪಗಳು ಮತ್ತು ದಕ್ಷನ ಶಿಲ್ಪಗಳಿವೆ.

೯೪

ಊರು ಹಿರೇಮಲ್ಲಿಗವಾಡ
ಸ್ಥಳ ಧಾರವಾಡದ ರಸ್ತೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಗೃಹವನ್ನು ಒಳಗೊಂಡಿದೆ. ಗರ್ಭಗೃಹವು ಆರ್.ಸಿ.ಸಿ. ರಚನೆಯದು. ಮರದ ಕಂಬಗಳಿರುವ ಸಭಾಗೃಹದ ಮೇಲೆ ಸೀಮೆ ಹೆಂಚನ್ನು ಹೊದಿಸಲಾಗಿದೆ. ದೇವಾಲಯದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಲಿಂಗವಿದೆ. ಹೊರಗೆ ಸಣ್ಣದಾದ ನಂದಿ, ನಾಗ ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ.

೯೫

ಊರು ಹಿರೇಮಲ್ಲಿಗವಾಡ
ಸ್ಥಳ ಊರ ಮುಂಭಾಗ
ಸ್ಮಾರಕ ಮಲ್ಲಿಕಾರ್ಜೂನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿದೆ. ಹೊಸ ಲಿಂಗ ಮತ್ತು ನಂದಿ ಶಿಲ್ಪಗಳನ್ನು ಪ್ರತಿಷ್ಠಾಪಿಸಿದ್ದಾರೆ. ಕಲ್ಯಾಣ ಚಾಲುಕ್ಯರ ಕಾಲದ ಲಿಂಗ, ನಂತರದ ಕಾಲದ ನಂದಿ ಮತ್ತಿತರ ಶಿಲ್ಪಾವಶೇಷಗಳು ಹೊರಭಾಗದಲ್ಲಿವೆ. ಮುಂಭಾಗದಲ್ಲಿರುವ ಶಾಸನ ಬಹುಶಃ ಅಪ್ರಕಟಿತವಿರಬಹುದು. ಶಾಸನವು ಈ ದೇವಾಲಯದ ರಚನೆಯ ಕಾಲವನ್ನು ೧೯ನೆಯ ಶತಮಾನಕ್ಕೆ ನಿರ್ದೇಶಿಸುತ್ತದೆ.

೯೬

ಊರು ಹುಲಿಕೆರಿ
ಸ್ಥಳ ಹೊಲದ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ಊರಹೊರಗೆ ಹೊಲದ ನಡುವೆ ಮರದ ಕೆಳಗೆ ಲಿಂಗ, ನಂದಿ ಶಿಲ್ಪಗಳು, ದಕ್ಷ, ಕಾರ್ತಿಕೇಯ, ಭಗ್ನಗೊಂಡಿರುವ ಶಾಸನ ಮತ್ತಿತರ ಶಿಲ್ಪಾವಶೇಷಗಳಿವೆ. ಇವು ಹಳೆಯ ದೇವಾಲಯವೊಂದಕ್ಕೆ ಸಂಬಂಧಿಸಿವೆ. ದೇವಾಲಯವು ಹಾಳಾದ ನಂತರ ಶಿಲ್ಪಗಳನ್ನು ಮರದ ಕೆಳಗಿಟ್ಟಿರಬೇಕು.

೯೭

ಊರು ಹೆಬ್ಬಳ್ಳಿ
ಸ್ಥಳ ಊರ ಪೂರ್ವ
ಸ್ಮಾರಕ ಚಂಗಳಮ್ಮನ ಗುಡಿ
ಅಭಿಮುಖ ಉತ್ತರ
ಕಾಲ ಕ್ರಿ.ಶ.೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದ ನವರಂಗಭಾಗ ಮಾತ್ರ ಉಳಿದಿದೆ. ಉತ್ತರಕ್ಕೆ ಪ್ರವೇಶದ್ವಾರವುಂಟು. ನವರಂಗದ ಪಶ್ಚಿಮಭಾಗದಲ್ಲಿ ಎತ್ತರದ ಪೀಠದ ಮೇಲೆ ದೇವಿ ಶಿಲ್ಪವನ್ನು ಈಗ್ಗೆ ೩೦ ವರ್ಷಗಳ ಹಿಂದೆ ಪ್ರತಿಷ್ಠಾಪಿಸಿದ್ದಾರೆ. ಮಧ್ಯದ ನಾಲ್ಕು ಕಂಬಗಳು ಚೌಕ ಮತ್ತು ಪಟ್ಟಿಗಳ ರಚನೆಯಿಂದ ಕೂಡಿದೆ. ಮೇಲ್ಛಾವಣಿ ಜೀರ್ಣೋದ್ಧಾರಗೊಂಡಿದೆ. ಬಾಗಿಲುವಾಡಗಳಲ್ಲಿ ಅರ್ಧಕಂಬಗಳ ಅಲಂಕರಣವುಂಟು. ಹೊರಭಾಗವನ್ನು ಕಾಡುಗಲ್ಲಿನ ಗೋಡೆಯಿಂದ ಮುಚ್ಚಲಾಗಿದೆ.

ದೇವಿ ಶಿಲ್ಪವು ಸುಮಾರು ೩ ಅಡಿ ಎತ್ತರವಿದ್ದು, ಕೈಗಳಲ್ಲಿ ಕಳಸ ಮತ್ತು ಕಮಲದ ಹೂವನ್ನು ಹಿಡಿದಿದ್ದಾಳೆ. ಹೊರಭಾಗದಲ್ಲಿ ಬಿದ್ದಿದ್ದ ಬಾಹುಬಲಿ ಶಿಲ್ಪವನ್ನು ಈಗ ಒಳಗಿಡಲಾಗಿದೆ.

ಈ ಊರಿನ ಶಾಸನವೊಂದು ಜೈನರ ಸಂಘ ಮತ್ತು ಗಣವನ್ನು ಉಲ್ಲೇಖಿಸಿ ಮೊರಬ ಗ್ರಾಮವನ್ನು ದತ್ತಿ ನೀಡಿದ ಬಗ್ಗೆ ತಿಳಿಸುತ್ತದೆ(ಕಲಬುರ್ಗಿ : ಧಾ ಜಿ ಶಾ ಸೂ). ಹೀಗೆ ಶಾಸನ ಮತ್ತು ಶಿಲ್ಪಗಳ ಅಸ್ತಿತ್ವದಿಂದಾಗಿ ಮೇಲೆ ಹೇಳಿದ ದೇವಾಲಯ ಮೂಲತಃ ಜೈನಬಸದಿ ಇರಬೇಕು?

೯೮

ಊರು ಹೆಬ್ಬಳ್ಳಿ
ಸ್ಥಳ ಊರ ನಡುವೆ
ಸ್ಮಾರಕ ಶಂಭುಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ.೧೧-೧೨ನೆಯ ಶತಮಾನ
ಶೈಲಿ ಸೇವುಣ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಊರಿನ ಮಧ್ಯಭಾಗದಲ್ಲಿರುವ ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಹೊಂದಿದೆ. ಮುಂಭಾಗದಲ್ಲಿರುವ ಗುಮ್ಮಟರಚನೆಯ ಪ್ರವೇಶಮಂಟಪವನ್ನು ಈಚಿನ ಶತಮಾನಗಳಲ್ಲಿ ನಿರ್ಮಿಸಲಾಗಿದೆ. ಪ್ರವೇಶಮಂಟಪ ಕಮಾನುದ್ವಾರದಿಂದ ಅಲಂಕರಣಗೊಂಡಿದೆ. ಗರ್ಭಗೃಹದ್ವಾರದ ಲಲಾಟಬಿಂಬದಲ್ಲಿ ಗಣಪತಿಯ ಉಬ್ಬುಶಿಲ್ಪವುಂಟು. ಅಂತರಾಳದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳಷ್ಟು ಸುಂದರವಾಗಿಲ್ಲ. ನವರಂಗದಲ್ಲಿ ದೇವಕೋಷ್ಠಗಳಿದ್ದು, ಕೆಳಗೆ ಅಧಿಷ್ಠಾನ ಮತ್ತು ಮೇಲೆ ಶಿಖರಗಳ ಅಲಂಕರಣವನ್ನು ಹೊಂದಿವೆ. ಮಧ್ಯದ ಕಂಬಗಳು ಚೌಕ ಮತ್ತು ಬಹುಮುಖ ರಚನೆಯವು. ಭುವನೇಶ್ವರಿಯಲ್ಲಿ ಕಮಲವನ್ನು ಮತ್ತು ಮೂಲೆಗಳಲ್ಲಿ ಕೀರ್ತಿಮುಖಗಳನ್ನು ಬಿಡಿಸಲಾಗಿದೆ. ದೇವಾಲಯದ ದ್ವಾರಗಳ ಮೇಲೆ ನಾಗರಶಿಖರ ಮತ್ತು ಸಿಂಹಗಳ ಉಬ್ಬುರಚನೆಗಳನ್ನು ಅಲಂಕರಣಕ್ಕಾಗಿ ಬಿಡಿಸಿರುವುದನ್ನು ಕಾಣಬಹುದು. ಪ್ರವೇಶಮಂಟಪದ ಗುಮ್ಮಟಗಳನ್ನು ಗಾರೆ ಮತ್ತು ಚಕ್ಕೆಕಲ್ಲುಗಳನ್ನು ಬಳಸಿ ನಿರ್ಮಿಸಿದ್ದಾರೆ. ಇದು ಬಹುಶಃ ಸವಣೂರು ನವಾಬರ ಕಾಲದಲ್ಲಿ ನಿರ್ಮಾನವಾಗಿರಬೇಕು? ದೇವಾಲಯದ ಮುಂಭಾಗದಲ್ಲಿ ಎರಡು ಕಂಬಗಳ ಶಿಲಾತೋರಣವಿದೆ. ಈ ಊರಿನಲ್ಲಿ ಅಲ್ಲಲ್ಲಿ ಹಳೆಯದೇವಾಲಯಕ್ಕೆ ಸೇರಿದ ದುಂಡಾದ ಕಂಬಗಳು ಕಂಡುಬರುತ್ತವೆ. ದೇವಾಲಯವು ಅಧಿಷ್ಠಾನ ಹೊಂದಿದ್ದು, ಭಿತ್ತಿ ಜೀರ್ಣೋದ್ಧಾರಗೊಂಡಿದೆ.

ದೇವಾಲಯದಲ್ಲಿ ಲಿಂಗ, ನಂದಿ, ಮಹಿಷಮರ್ದಿನಿ, ದೇವಿ ಮತ್ತು ನಂತರದ ಕಾಲದ ಲಕ್ಷ್ಮೀನಾರಾಯಣ ಶಿಲ್ಪಗಳಿವೆ.

ದೇವಾಲಯದಲ್ಲಿರುವ ಕ್ರಿ.ಶ.೨೩೪೪ ಮತ್ತು ೧೨೪೮ ರ ಶಾಸನಗಳು ಕ್ರಮವಾಗಿ ಸಿಂಘಣ ಮತ್ತು ಕನ್ನರದೇವನ ಕಾಲಕ್ಕೆ ಸೇರಿವೆ. ದೇವರಿಗೆ ಮತ್ತು ಬ್ರಹ್ಮ ಪುರಿಯ ಬ್ರಾಹ್ಮಾಣರಿಗೆ ಅಧಿಕಾರಿಗಳು ನೀಡಿದ ದಾನಗಳನ್ನು ಉಲ್ಲೇಖಿಸಲಾಗಿದೆ. (ಕಲಬುರ್ಗಿ : ಧಾ ಜಿ ಶಾ ಸೂ). ಮತ್ತೊಂದು ಶಾಸನ ೧೨ನೆಯ ಶತಮಾನಕ್ಕೆ ಸೇರಿದ್ದು, ಯಾಪನೀಯ ಸಂಘ ಮತ್ತು ಪುನ್ನಾಗವೃಕ್ಷ ಮೂಲಗಣವನ್ನು ಉಲ್ಲೇಖಿಸಿ, ಮೊರಬಗ್ರಾಮವನ್ನು ದತ್ತಿ ನೀಡಿದ ಬಗ್ಗೆ ತಿಳಿಸುತ್ತದೆ (ಅದೇ).

೯೯

ಊರು ಹೊಲ್ತಿಕೋಟೆ
ಸ್ಥಳ ಗೌಡರ ಓಣಿ
ಸ್ಮಾರಕ ಈಶ್ವ ಲಿಂಗ
ಅಭಿಮುಖ ಪೂರ್ವ
ಕಾಲ ಕ್ರಿ.ಶ.೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯವಿಲ್ಲ. ಬಡಿಗೇರ ಎಂಬುವರ ಮನೆ ಪಕ್ಕದಲ್ಲಿ ಕಲ್ಯಾಣ ಚಾಳುಕ್ಯರ ಕಾಲದ ಲಿಂಗವಿದೆ. ಈ ಲಿಂಗವನ್ನು ರಾಗಿಲ್ಲಾಪುರ (ಹಾಳೂರು) ದಿಂದ ತಂದಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ.