೪೬

ಊರು ನರೇಂದ್ರ
ಸ್ಥಳ ಕುಂಬಾಪುರ ಮಹಲ್
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದ ಭಾಗವಾಗಿ ಉಳಿದಿರುವ ಗರ್ಭಗೃಹ ಇತ್ತೀಚೆಗೆ ಜೀರ್ಣೋದ್ಧಾರಗೊಂಡಿದೆ. ಗರ್ಭಗೃಹದ ಮೇಲೆ ಆರ್.ಸಿ.ಸಿ. ಚಾವಣಿಯನ್ನು ಹಾಕಿದ್ದಾರೆ. ಹೊರಗೋಡೆಯನ್ನು ಸಹ ಸಿಮೆಂಟಿನಿಂದ ಮುಚ್ಚಲಾಗಿದೆ. ಗರ್ಭಗೃಹದ ಬಾಗಿಲುವಾಡಗಳಲ್ಲಿ ಅರ್ಧಕಂಬಗಳ ರಚನೆಯನ್ನು ಕಾಣಬಹುದು.

ಗರ್ಭಗೃಹದಲ್ಲಿರುವ ಲಿಂಗ ಹಳೆಯದು. ಇದರ ಪಕ್ಕದಲ್ಲಿ ಲಿಂಗವೊಂದರ ರುದ್ರಭಾಗವಿದೆ. ಹೊರಭಾಗದಲ್ಲಿ ಇತ್ತೀಚಿನ ನಂದಿ ಶಿಲ್ಪವಿದೆ.

ದೇವಾಲಯದ ಹೊರಗೆ ಆಗ್ನೇಯ ಮೂಲೆಯಲ್ಲಿ ಶಾಸನವಿದೆ. ಕ್ರಿ.ಶ. ೧೧೨೫ರ ಈ ಶಾಸನವು ಆರನೆಯ ವಿಕರಮಾದಿತ್ಯನ ಕಾಲಕ್ಕೆ ಸೇರಿದೆ. ದಂಡನಾಯಕ ಸಿಂಗರಸನು ಕುಂದೂರಲ್ಲಿ ಕಟ್ಟಿಸಿದ ಶಿವಾಲಯಕ್ಕೆ ಮಹಾಮಂಡಲೇಶ್ವರ ಎರಡನೆಯ ಜಯಕೇಶಿ ಮತ್ತು ಮೈಳಲದೇವಿಯರು ನೀಡಿದ ಭೂದಾನವನ್ನು ಉಲ್ಲೇಖಿಸುತ್ತದೆ (ಎಇ XIII : ಪು. ೨೯೮-೩೧೬). ಈಗಿನ ನರೇಂದ್ರದ ಪ್ರಾಚೀನ ಹೆಸರು ಕುಂದೂರು ಎಂದಿರಬಹುದು. ಪ್ರಾಚೀನ ಕುಂದೂರು ೧೦೦೦ ಪ್ರದೇಶವನ್ನು ನರೇಂದ್ರದ ಪರಿಸರವೆಂದು ಗುರುತಿಸಲಾಗಿದೆ (ಧಾ ಜಿ ಗ್ಯಾ : ಪು. ೭೦).

೪೭

ಊರು ನರೇಂದ್ರ
ಸ್ಥಳ ಖಾನಾಪುರ ಓಣಿ
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದಿಂಡುಗಲ್ಲುಗಳಿಂದ ನಿರ್ಮಿಸಿದ ದೇವಾಲಯವಿದು. ಒಳಗೆ ಹಳೆಯ ಪಾಣಿಪೀಠದಲ್ಲಿ ರುದ್ರಭಾಗವನ್ನು ಅಳವಡಿಸಿ ಮಲ್ಲಿಕಾರ್ಜುನಲಿಂಗವೆಂದು ಪೂಜಿಸಲಾಗುತ್ತಿದೆ. ಇದನ್ನು ಇನ್ನೊಂದು ಪಾಣಿಪೀಠದ ಮೇಲೆ ಕೂರಿಸಲಾಗಿದೆ. ಬಹುಶಃ ಈ ಶಿಲ್ಪಾವಶೇಷಗಳನ್ನು ಬೇರೆಡೆಯಿಂದ ತಂದು ಇಟ್ಟಿರಬಹುದು.

೪೮

ಊರು ನರೇಂದ್ರ
ಸ್ಥಳ ಕೆರೆ ದಂಡೆ
ಸ್ಮಾರಕ ಶಂಕರಲಿಂಗನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ
ಸಂರಕ್ಷಣೆ

ಪ್ರಾಚೀನ ದೇವಾಲಯವು ನಶಿಸಿದ ನಂತರ, ಈಗಿನ ದೇವಾಲಯವನ್ನು ದಿಂಡುಗಲ್ಲಿನಲ್ಲಿ ನಿರ್ಮಿಸಿದ್ದಾರೆ. ಗರ್ಭಗೃಹ ಮತ್ತು ಸಭಾಗೃಹಗಳಿವೆ. ಮುಂಭಾಗದಲ್ಲಿ ಹಳೆಯ ದೇವಾಲಯದ ವಾಸ್ತು ಅವಶೇಷಗಳು ಕಂಡುಬರುತ್ತವೆ.

ಗರ್ಭಗೃಹದಲ್ಲಿರುವ ಲಿಂಗ ಹಳೆಯದು. ಹೊರಭಾಗದಲ್ಲಿ ನಾಗಶಿಲ್ಪ ಮತ್ತು ಶಾಸನವಿದೆ. ಇಲ್ಲಿನ ಶಿಲ್ಪಾವಶೇಷಗಳು ಮತ್ತು ಶಾಸನ, ಇಲ್ಲಿದ್ದ ಪ್ರಾಚೀನ ದೇವಾಲಯದ ಮೇಲೆ ಬೆಳಕು ಚೆಲ್ಲುತ್ತವೆ. ಶಾಸನದ ಕಾಲವನ್ನು ಕ್ರಿ.ಶ. ೧೧೨೩, ೧೮,೧೬ ಎನ್ನಲಾಗಿದೆ. ಆರನೆಯ ವಿಕ್ರಮಾದಿತ್ಯನ ಈ ಶಾಸನವು ಮಹಾಮಂಡಲೇಶ್ವರ ಜಯಕೇಶಿಯಾದಿಗಳಿಂದ ಅರಕೆರೆಯ ಶಂಕರದೇವರಿಗೆ ನೀಡಿದ ಭೂದಾನವನ್ನು ಉಲ್ಲೇಖಿಸುತ್ತದೆ (ಎಇ XIII : ಪು. ೩೧೬-೩೨೬). ಇದರಿಂದ ಮೇಲಿನ ಕೆರೆಯ ಪ್ರಾಚೀನ ಹೆಸರು ಅರಕೆರೆ ಎಂದಿರಬಹುದು. ಅಥವಾ ಅಲ್ಲಿನ ಗ್ರಾಮದ ಹೆಸರಾಗಿರಬಹುದು. ಈಗ ಅಲ್ಲಿ ಯಾವುದೇ ಊರಿಲ್ಲ.

೪೯

ಊರು ನವಲೂರು
ಸ್ಥಳ ಕೆರೆ ದಂಡೆ
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಇತ್ತೀಚಿನ ದೇವಾಲಯವಿದು. ಗರ್ಭಗೃಹ ಮತ್ತು ಸಭಾಗೃಹ ಹೊಂದಿರುವ ದೇವಾಲಯದಲ್ಲಿ ಪ್ರಾಚೀನ ಕಾಲದ ಲಿಂಗವಿದೆ. ಗರ್ಭಗೃಹದ ಚಾವಣಿ ಕಲ್ಲಿನದು. ಸಭಾಗೃಹದ ಚಾವಣಿ ಆರ್.ಸಿ.ಸಿ.ರಚನೆಯದಾಗಿದೆ. ಹೊರಗೆ ಹಳೆಯ ದೇವಾಲಯಕ್ಕೆ ಸೇರಿದ ವಾಸ್ತು ಅವಶೇಷಗಳಿವೆ. ಗರ್ಭಗೃಹದಲ್ಲಿ ಹಳೆಯ ಲಿಂಗವಿದೆ. ಸಭಾಗೃಹದಲ್ಲಿರುವ ನಂದಿ ಇತ್ತೀಚಿನದು. ಗುಡಿ ಮುಂದೆ ಮರದಕೆಳಗಿರುವ ಗೂಡಿನಲ್ಲಿ ಮೈಲಾರಲಿಂಗನ ಸವೆದ ಶಿಲ್ಪವಿದೆ. ಇದು ವಿಜಯನಗರೋತ್ತರ ಕಾಲದ ರಚನೆಯೆನ್ನಬಹುದು. ಈ ಗೂಡಿನ ಮೇಲೆ ಹಳೆಯ ದೇವಾಲಯಕ್ಕೆ ಸೇರಿದ ಸೂಕ್ಷ್ಮರಚನೆಯ ಶಿಖರದ ಶಿಲ್ಪವನ್ನಿಡಲಾಗಿದೆ. ಕೆಲವೇ ಮೀಟರ್ ಗಳ ಅಂತರದಲ್ಲಿ ಮನೆಯೊಂದಕ್ಕೆ ಸೇರಿದಂತಿರುವ ಗೂಡೊಂದರಲ್ಲಿ ಸಪ್ತಮಾತೃಕೆಯರ ಶಿಲ್ಪಫಲಕವನ್ನು ಅಳವಡಿಸಿದ್ದಾರೆ.

ಧಾರವಾಡ ಕ್ರಿ.ಶ. ೯ನೆಯ ಶತಮಾನದ ವೀರಗಲ್ಲು ಶಾಸನವು, ಅಗ್ರಹಾರ ನವಿಲೂರನ್ನು ಉಲ್ಲೇಖಿಸುತ್ತದೆ (ಕಲಬುರ್ಗಿ : ಧಾ ಜಿ ಶಾ ಸೂ).

೫೦

ಊರು ನವಲೂರು
ಸ್ಥಳ ಕೆರೆ ಹತ್ತಿರ
ಸ್ಮಾರಕ ರಾಮಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಇಲ್ಲಿದ್ದ ಪ್ರಾಚೀನ ಕಾಲದ ದೇವಾಲಯವು ನಾಶಗೊಂಡಿದೆ. ಈ ದೇವಾಲಯಕ್ಕೆ ಸಂಬಂಧಿಸಿದ ಲಿಂಗ ಅದೇ ಸ್ಥಳದಲ್ಲಿದ್ದು, ೧೯೮೬ರಲ್ಲಿ ಗರ್ಭಗೃಹ ಮತ್ತು ಸಭಾಗೃಹಗಳನ್ನು ನಿರ್ಮಿಸಿದ್ದಾರೆ. ಈ ಮೊದಲಿನ ದೇವಾಲಯ ಉತ್ತರಭಿಮುಖವಾಗಿದ್ದಂತೆ ಕಾಣುತ್ತದೆ. ಏಕೆಂದರೆ ಈಗಲೂ ಲಿಂಗವು ಉತ್ತರಾಭಿಮುಖವಾಗಿದೆ. ಆದರೆ ಹೊಸ ದೇವಾಲಯವನ್ನು ಪೂರ್ವಾಭಿಮುಖವಾಗಿ ನಿರ್ಮಿಸಿದ್ದಾರೆ. ಗರ್ಭಗೃಹದ ಚಾವಣಿಯನ್ನು ಶಿಲಾಚಪ್ಪಡಿಗಳಿಂದ ಮುಚ್ಚಲಾಗಿದೆ. ಗೋಡೆಯನ್ನು ದಿಂಡುಗಲ್ಲಿನಿಂದ ಕಟ್ಟಿದ್ದಾರೆ. ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾಪಥವಿದೆ.

ಗರ್ಭಗೃಹದಲ್ಲಿರುವ ಲಿಂಗದ ಜಲಹರಿ ಪೂರ್ವಕ್ಕಿದೆ. ಅಂದರೆ ಲಿಂಗವು ಉತ್ತರಾಭಿಮುಖವಾಗಿ ಪ್ರತಿಷ್ಠಾಪನೆಗೊಂಡಿದೆ. ಸಮಾನ್ಯವಾಗಿ ರಾಮನ ಹೆಸರಿನಲ್ಲಿ ಪ್ರತಿಷ್ಠಾಪನೆಗೊಂಡ ಲಿಂಗಗಳು ಉತ್ತರಾಭಿಮುಖವಾಗಿರುತ್ತದೆ. ಲಿಂಗವು ಸುಂದರವಾಗಿದ್ದು, ಉಪಾನ, ಕಂಠ, ತ್ರಿಪಟ್ಟಕುಮುದ, ಕಂಠ ಮತ್ತು ಕಪೋತಗಳ ರಚನೆಯನ್ನು ಒಳಗೊಂಡಿದೆ. ರುಧ್ರಭಾಗವು ಪ್ರಮಾಣಬದ್ಧವಾಗಿದ್ದು ಆಕರ್ಷಕವಾಗಿದೆ. ಹಿಂಭಾಗದ ಕೆರೆ ದಂಡೆಯಲ್ಲಿ, ಪ್ರಾಚೀನ ದೇವಾಲಯದ ಭಗ್ನಗೊಂಡಿರುವ ನಂದಿ ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ.

೫೧

ಊರು ನಾಯಕನ ಹುಲಿಕಟ್ಟೆ
ಸ್ಥಳ ಧಾರವಾಡ ರಸ್ತೆ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ

ವೇದಿಕೆಯ ಮೇಲಿರುವ ಗೂಡಿನಲ್ಲಿ ಹಳೆಯಲಿಂಗವಿದೆ. ಗೂಡಿನ ಮೇಲೆ ಸಣ್ಣ ಶಿಖರವಿದೆ. ಹೊರಗೆ ಇತ್ತೀಚಿನ ನಂದಿಶಿಲ್ಪವಿದೆ. ಇದನ್ನು ಗುತ್ತಿಗೆದಾರರೊಬ್ಬರು ಕಟ್ಟಿಸಿಕೊಟ್ಟಿದ್ದಾರೆ.

೫೨

ಊರು ನಿಗದಿ
ಸ್ಥಳ ಕೆರೆ ದಂಡೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ.೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿದೆ. ಗರ್ಭಗೃಹವು ಜೀರ್ಣೋದ್ಧಾರಗೊಂಡಿದ್ದು, ಚಕ್ಕೆಕಲ್ಲು ಮತ್ತು ಮಣ್ಣಿನ ಗೋಡೆಯನ್ನು ನಿರ್ಮಿಸಿದ್ದಾರೆ. ಸಭಾಗೃಹವನ್ನು ಕಲ್ಲುಚಪ್ಪಡಿಗಳಿಂದ ಕಟ್ಟಲಾಗಿದೆ. ಗರ್ಭಗೃಹದ ಮೇಲೆ ಮಣ್ಣುತುಂಬಿದೆ. ಮುಂಭಾಗದಲ್ಲಿ ಕೆಲವು ವಾಸ್ತು ಅವಶೇಷಗಳು ಕಂಡುಬರುತ್ತವೆ.

ಗರ್ಭಗೃಹದಲ್ಲಿ ಲಿಂಗವಿದ್ದು, ಸಭಾಗೃಹದಲ್ಲಿ ನಂದಿ ಶಿಲ್ಪವಿದೆ. ಲಿಂಗ ರಚನೆಯಲ್ಲಿ ಸರಳವಾಗಿದ್ದರೂ, ಸುಂದರವಾಗಿದೆ.

ಗುಡಿ ಎದುರು ಆರನೆಯ ವಿಕ್ರಮಾದಿತ್ಯನ ಕ್ರಿ.ಶ. ೧೧೧೧ ರ ಶಾಸನವಿದೆ (ಸೌಇಇ XXI : ii ೧೬೦). ಚಾವುಂಡಗಾವುಂಡನು ಮೂಲಸ್ಥಾನದೇವರ ಪ್ರತಿಷ್ಠಾಪನೆಗಾಗಿ ತೇಜೋರಾಶಿ ಪಂಡಿತರಿಗೆ ಭೂಮಿಯನ್ನು ದಾನಮಾಡುತ್ತಾನೆ.

೫೩

ಊರು ನೀರಲಕಟ್ಟಿ
ಸ್ಥಳ ಕೆರೆ ದಂಡೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಹಳೆಯ ದೇವಾಲಯ ನಶಿಸಿದ ನಂತರ, ಈಗಿನ ದೇವಾಲಯವನ್ನು ೧೯೫೮ ರಲ್ಲಿ ನಿರ್ಮಿಸಿದ್ದಾರೆ. ಗರ್ಭಗೃಹ ಮತ್ತು ಸಭಾಗೃಹಗಳಿರುವ ದೇವಾಲಯವು ಕಲ್ಲಿನಲ್ಲಿ ನಿರ್ಮಾಣಗೊಂಡಿದೆ.

ಗರ್ಭಗೃಹದಲ್ಲಿರುವ ಲಿಂಗ ಇತ್ತೀಚಿನದು. ಸಭಾಗೃಹದಲ್ಲಿ ಹಳೆಯ ದೇವಾಲಯಕ್ಕೆ ಸೇರಿದ ಸೂರ್ಯಶಿಲ್ಪವಿದೆ. ನಂದಿಶಿಲ್ಪ ಇತ್ತೀಚಿನದು. ಹೊರಭಾಗದಲ್ಲಿ ವೀರಗಲ್ಲು, ಶಾಸನ ಮತ್ತಿತರ ವಾಸ್ತು ಅವಶೇಷಗಳು ಕಂಡುಬರುತ್ತವೆ. ಶಾಸನ ಅಪ್ರಕಟಿತವಿರುವಂತೆ ಕಂಡುಬರುತ್ತದೆ. ಅಕ್ಷರಗಳು ಸವೆದಿವೆ.

೫೪

ಊರು ಬಾಡ
ಸ್ಥಳ ಊರ ಹೊರಗೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಇತ್ತೀಚಿನದು. ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿರುವ ದೇವಾಲಯವನ್ನು ಕಲ್ಲಿನಲ್ಲಿ ನಿರ್ಮಿಸಲಾಗಿದೆ. ಪಕ್ಕದಲ್ಲಿ ಕೆರೆಯುಂಟು.

ಗರ್ಭಗೃಹದಲ್ಲಿ ಎತ್ತರದ ವೇದಿಕೆಯ ಮೇಲೆ ಯೋನಿಪೀಠ ಮತ್ತು ರುದ್ರಭಾಗವಿರುವ ಪ್ರಾಚೀನ ಲಿಂಗವಿದೆ. ಹೊರಗೆ ಹಳೆಯ ದೇವಾಲಯದ ಕಂಬ ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ.

ದೇವಾಲಯದ ಬಳಿ ಇರುವ ಕ್ರಿ.ಶ. ೧೨ನೆಯ ಶತಮಾನದ ಶಾಸನದಲ್ಲಿ, ಈಶ್ವರ ಮತ್ತು ಕೇಶವ ದೇವರಿಗೆ ನೀಡಿದ ಭೂದಾನದ ಉಲ್ಲೇಖವಿದೆ. ಈ ಎಲ್ಲ ಪ್ರಾಚ್ಯಾವಶೇಷಗಳಿಂದ ಇಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯವಿದ್ದು, ಅನವತಿಗೊಂಡಿರುವುದು ಸ್ಪಷ್ಟವಾಗುತ್ತದೆ.

೫೫

ಊರು ಬೆಣಚಿ
ಸ್ಥಳ ಕೆರೆ ದಂಡೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಸೀಮೆಹೆಂಚಿನ ದೇವಾಲಯವಿದು. ಗರ್ಭಗೃಹ ಮತ್ತು ಸಭಾಗೃಹಗಳಿರುವ ದೇವಾಲಯದಲ್ಲಿ ಅಷ್ಟೇನೂ ಪ್ರಾಚೀನವಲ್ಲದ ಲಿಂಗವಿದೆ. ಲಿಂಗದ ರುದ್ರಭಾಗದಲ್ಲಿ ಶಿವನ ಮುಖವನ್ನು ಬಿಡಿಸಿದೆ. ಸಭಾಗೃಹದಲ್ಲಿ ನಂದಿ ಶಿಲ್ಪವಿದೆ. ಹೊರಗೆ ಪ್ರಾಚೀನ ದೇವಾಲಯದ ಹೊಸ್ತಿಲು ಮತ್ತಿತರ ವಾಸ್ತು ಅವಶೇಷಗಳು ಕಂಡುಬರುತ್ತವೆ.

೫೬

ಊರು ಬೇಲೂರು
ಸ್ಥಳ ಊರ ಪೂರ್ವ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿರುವ ದೇವಾಲಯವನ್ನು ಹಸಿಇಟ್ಟಿಗೆಯಿಂದ ನಿರ್ಮಿಸಿದ್ದಾರೆ. ಚಾವಣಿ ಸಂಪೂರ್ಣವಾಗಿ ಹಾಳಾಗಿದ್ದು, ಅದರ ಮರದ ಕಂಬ, ತೊಲೆ ಮತ್ತು ಜಂತಿಗಳು ಯಥಾಸ್ಥತಿಯಲ್ಲಿವೆ.

ಗರ್ಭಗೃಹದಲ್ಲಿ ಹಳೆಯ ಸಣ್ಣಲಿಂಗವಿದ್ದು, ರುದ್ರಭಾಗದಲ್ಲಿ ಮುಖವನ್ನು ರಚಿಸಿ ಕಂತಿ ಮಾಡಿಸಿದ್ದಾರೆ. ಸಭಾಗೃಹದಲ್ಲಿರುವ ಸೂರ್ಯಶಿಲ್ಪ ಭಗ್ನಗೊಂಡಿದೆ. ದೇವಾಲಯದ ಪಕ್ಕದಲ್ಲಿ ಹಳೆಯ ದೇವಾಲಯಕ್ಕೆ ಸಂಬಂಧಿಸಿದ ಪಾಣಿಪೀಠವೊಂದು ಕಂಡುಬರುತ್ತದೆ.

೫೭

ಊರು ಭೋಗೂರು
ಸ್ಥಳ ಊರ ದಕ್ಷಿಣ ರಸ್ತೆ
ಸ್ಮಾರಕ ಈಶ್ವರ ಲಿಂಗ
ಅಭಿಮುಖ ಪೂರ್ವ
ಕಾಲ ಕ್ರಿ.ಶ.೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯವು ನೆಲಸಮಗೊಂಡಿದೆ. ಗರ್ಭಗೃಹವಿದ್ದಲ್ಲಿ ಲಿಂಗ, ನಂದಿ, ನಾಗ ಮತ್ತಿತರ ಶಿಲ್ಪಾವಶೇಷಗಳಿವೆ. ಇವೆಲ್ಲವೂ ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯಕ್ಕೆ ಸಂಬಂಧಿಸಿವೆ. ಶಿಲ್ಪಾವಶೇಷಗಳ ಸುತ್ತಲೂ ಗಿಡಗಂಟಿಗಳು ಬೆಳದಿವೆ.

೫೮

ಊರು ಭೋಗೂರು
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

೧೯೯೩ರಲ್ಲಿ ನಿರ್ಮಿಸಿದ ದೇವಾಲಯವಿದು. ಈ ಮೊದಲು ಮಾಳಿಗೆ ರಚನೆಯ ದೇವಾಲಯವಿತ್ತು. ಇದಕ್ಕೂ ಮೊದಲು ಪ್ರಾಚೀನ ದೇವಾಲಯವಿದ್ದು, ಅದು ನಶಿಸಿದ ನಂತರ ಮಾಳಿಗೆ ದೇವಾಲಯವನ್ನು, ನಂತರ ಈಗಿರುವ ದೇವಾಲಯವನ್ನು ನಿರ್ಮಿಸಿದಂತೆ ಕಾಣುತ್ತದೆ. ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಹೊಂದಿದೆ.

ಗರ್ಭಗೃಹದಲ್ಲಿ ಹಳೆಯ ಲಿಂಗವಿದೆ. ಸಭಾಗೃಹದಲ್ಲಿ ಇತ್ತೀಚಿನ ದೊಡ್ಡ ನಂದಿ ಶಿಲ್ಪವಿದ್ದು, ಸಮೀಪದ ಹೆಬ್ಬಳ್ಳಿಯಲ್ಲಿ ಮಾಡಿಸಿದ್ದಾರೆ. ಈ ನಂದಿ ಶಿಲ್ಪದ ಕಲ್ಲನ್ನು ಸವದತ್ತಿ ಬಳಿಯ ಯಡ್ರಾವಿಯಿಂದ ತರಲಾಗಿದೆ. ಗರ್ಭಗೃಹದ ಹೊರಭಿತ್ತಿಯಲ್ಲಿ ಸಪ್ತಮಾತೃಕೆಯರ ಎರಡು ಶಿಲ್ಪಫಲಕಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಒಂದು ಕಲ್ಯಾಣಚಾಲುಕ್ಯ ಶೈಲಿಯಲ್ಲಿದ್ದು, ಮತ್ತೊಂದು ಮಧ್ಯಕಾಲೀನ ರಚನೆಯಂತಿದೆ. ಪತ್ನ ಸಹಿತನಾದ ದಕ್ಷನ ಶಿಲ್ಪವೂ ಇದೆ. ಹೊರಗೆ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಪ್ರಾಚೀನ ಲಿಂಗ, ನಂದಿ, ಭಗ್ನಗೊಂಡ ಸೂಯ್ಯ, ಭೈರವ, ಗಣಪತಿ, ವಿಷ್ಣು ಗಜಲಕ್ಷ್ಮಿ ಮತ್ತಿತರ ಶಿಲ್ಪಾವಶೇಷಗಳಿವೆ. ಹತ್ತಿರದ ಅರಳಿಕಟ್ಟಿಯಲ್ಲಿ ಹಳೆಯ ನಂದಿಶಿಲ್ಪ ಮತ್ತು ಎರಡು ವೀರಗಲ್ಲು ಶಿಲ್ಪಗಳು ಕಂಡುಬರುತ್ತವೆ.

೫೯

ಊರು ಭೋಕ್ಯಾಪುರ
ಸ್ಥಳ ಕೆರೆ ಕೆಳಗೆ
ಸ್ಮಾರಕ ವೀರಭದ್ರೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅರ್ಧಮಂಟಪ ಮತ್ತು ನವರಂಗಗಳನ್ನು ಒಳಗೊಂಡಿದೆ. ಗೋಡೆಯನ್ನು ಕಾಡುಗಲ್ಲು ಮತ್ತು ಮಣ್ಣಿನಿಂದ ನಿರ್ಮಿಸಿ, ಮೇಲೆ ಸಿಮೆಂಟ್ ಹಚ್ಚಲಾಗಿದೆ. ಗರ್ಭಗೃಹ ದ್ವಾರ ನಂತರದ ಕಾಲದ್ದು. ನವರಂಗದ ಕಂಬಗಳು ಸರಳವಾಗಿದ್ದು, ಚೌಕ ಮತ್ತು ಅಷ್ಟಮುಖ ರಚನೆಯಲ್ಲಿವೆ.

ದೇವಾಲಯದಲ್ಲಿ ಲಿಂಗವಿದ್ದು ಪೂಜೆಗೊಳ್ಳುತ್ತಿವೆ. ಲಿಂಗದ ಹಿಂಭಾಗದಲ್ಲಿ ವೀರಭದ್ರನ ಶಿಲ್ಪವಿರುವುದರಿಂದ ದೇವಾಲಯವನ್ನು ವೀರಭದ್ರೇಶ್ವರ ಗುಡಿ ಎಂದು ಕರೆಯುತ್ತಾರೆ. ಅರ್ಧಮಂಟಪದಲ್ಲಿ ಭಗ್ನಗೊಂಡ ನಂದಿಶಿಲ್ಪವಿದೆ. ಹೊರಗೆ ಸಪ್ತಮಾತೃಕೆಯರ ಶಿಲ್ಪಫಲಕ, ದಕ್ಷ ಹಾಗೂ ಭಿನ್ನಗೊಂಡಿರುವ ಶಿಲ್ಪಗಳಿವೆ. ಈ ಭಿನ್ನಗೊಂಡ ಶಿಲ್ಪವು ಚತುರ್ಭುಜವನ್ನು ಹೊಂದಿದೆ. ಬಲ ಮೇಲಿನ ಕೈಯನ್ನು ಮೇಲೆತ್ತಿದ್ದು, ಕೆಳಗಿನ ಕೈಯಲ್ಲಿ ಗುಂಡನೆಯ ವಸ್ತುವೊಂದನ್ನು ಹಿಡಿದಿದೆ. ಎಡ ಮೇಲಿನ ಕೈ ಭಗ್ನಗೊಂಡಿದ್ದು, ಕೆಳಗಿನ ಕೈಯಲ್ಲಿ ದಂಡ ಹಿಡಿದಿದೆ. ಶಿಲ್ಪವು ರಚನೆಯಲ್ಲಿ ಒರಟಾಗಿದ್ದರೂ, ಪ್ರಾಚೀನ ರಚನೆಯಂತೆ ಕಂಡುಬರುತ್ತದೆ.

ಇಲ್ಲಿನ ಕ್ರಿ.ಶ.೧೧೬೩ ರ ಶಾಸನವನ್ನು, ಗೋವೆ ಕಂದಂಬ ಪೆರ್ಮಾಡಿದೇವನದು. ಅರಸನು ಅರಸಿಂಗೆರೆಯ ಸ್ವಯಂಭುದೇವರಿಗೆ ಭೂಮಿ ಮತ್ತು ಗೃಹದಾನ ಮಾಡಿದನೆಂದಿದೆ. ಈ ಶಾಸನದಿಂದ ಮೇಲೆ ಹೇಳಿದ ದೇವಾಲಯದ ಹಳೆಯ ಹೆಸರು ಸ್ವಯಂಭೂ ದೇವರೆಂದು, ಸ್ಥಳನಾಮ ಅರಸಿಂಗೆರೆ ಎಂದು ತಿಳಿದುಬರುತ್ತದೆ. ಬಹುಶಃ ಈ ಅರಸಿಂಗೆರೆ ಗ್ರಾಮ ಮುಂದೆ ಭೋಕ್ಯಾಪುರ ಎಂದು ಕರೆಸಿಕೊಂಡಿರಬೇಕು. ಈಗ ಭೋಕ್ಯಾಪುರ ಗ್ರಾಮವು ಹಾಳುಬಿದ್ದಿದ್ದು, ಈ ದೇವಾಲಯದ ಪ್ರದೇಶವನ್ನು ಅದೇ ಹೆಸರಿನಿಂದ ಕರೆಯುತ್ತಾರೆ.

೬೦

ಊರು ಮಂಡಿಹಾಳ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಹೊಸದಾಗಿ ನಿರ್ಮಿಸಿರುವ ದೇವಾಲಯವಿದು. ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿದೆ. ಈ ದೇವಾಲಯದ ಹಿಂಭಾಗದಲ್ಲಿ ಹಳೆ ದೇವಾಲಯದ ನಿವೇಶನವಿದ್ದು, ಮರದ ಕೆಳಗೆ ಹಳೆಯ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಗರ್ಭಗೃಹದಲ್ಲಿ ಇತ್ತೀಚಿನ ಲಿಂಗ ಮತ್ತು ನಂದಿ ಶಿಲ್ಪಗಳಿವೆ.