೧೬

ಊರು ಅಳಗವಾಡಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆರಚನೆಯ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳಿರುವ ದೇವಾಲಯದಲ್ಲಿ ಪ್ರಾಚೀನ ಕಾಲಕ್ಕೆ ಸೇರಿದ ಲಿಂಗವಿದೆ. ಸಭಾಮಂಟಪದಲ್ಲಿ ಹಳೆಯ ಮತ್ತು ಇತ್ತೀಚಿನ ನಂದಿ ಶಿಲ್ಪಗಳಿವೆ. ದೇವಾಲಯದ ಗೋಡೆ ಮಣ್ಣಿನದು. ಹಳೆಯ ದೇವಾಲಯ ಬಿದ್ದುಹೋದ ನಂತರ ಈಗಿನ ದೇವಾಲಯವನ್ನು ಸುಮಾರು ದಶಕಗಳ ಹಿಂದೆ ನಿರ್ಮಿಸಿದ್ದಾರೆ. ಗರ್ಭಗೃಹದ ದ್ವಾರವು ಮರದ ರಚನೆಯಾಗಿದ್ದು, ಸೂಕ್ಷ್ಮ ಕೆತ್ತನೆಗಳಿಂದ ಅಲಂಕೃತವಾಗಿದೆ.

ಗರ್ಭಗೃಹದಲ್ಲಿರುವ ಲಿಂಗ ಎತ್ತರವಾದ ವೇದಿಕೆಯ ಮೇಲಿದೆ. ವೇದಿಕೆಯು ಎರಡು ಹಂತಗಳಿಂದ ಕೂಡಿದೆ.

೧೭

ಊರು ಅರೆಕುರಹಟ್ಟಿ
ಸ್ಥಳ ಕೆರೆ ದಂಡೆ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಹಳೆಯ ದೇವಾಲಯ ಬಿದ್ದುಹೋಗಿದ್ದು, ಇತ್ತೀಚೆಗೆ ಆರ್.ಸಿ.ಸಿ. ಕಟ್ಟಡದ ದೇವಾಲಯವನ್ನು ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ಸುಮಾರು ೨.೫ ಅಡಿ ಎತ್ತರದ ಪ್ರಾಚೀನ ಲಿಂಗವಿದೆ. ನಂದಿಶಿಲ್ಪ ಇತ್ತೀಚಿನದು. ಈ ದೇವಾಲಯವನ್ನು ಊರಿನ ಶಾನುಭೋಗರಾದ ದತ್ತಪ್ಪ ಎಂಬುವರು ನಿರ್ಮಿಸಿಕೊಟ್ಟಿದ್ದಾರೆ.

೧೮

ಊರು ಅರೆಕುರಹಟ್ಟಿ
ಸ್ಥಳ ಊರ ನಡುವೆ
ಸ್ಮಾರಕ ಬಸವಣ್ಣ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆ ಕಟ್ಟಡದ ದೇವಾಲಯವಿದು. ಗರ್ಭಗೃಹ ಬಿದ್ದುಹೋಗಿದ್ದು, ಸಭಾಮಂಟಪ ಭಗ್ನಗೊಂಡಿದೆ. ಗರ್ಭಗೃಹವಿದ್ದಲ್ಲಿ ಹಳೆಯ ಲಿಂಗವಿದ್ದು, ನಂತರದ ಕಾಲದ ನಂದಿಶಿಲ್ಪವಿದೆ. ಇತರ ಶಿಲ್ಪಾವಶೇಷಗಳು ಮಣ್ಣಿನಲ್ಲಿ ಸೇರಿವೆ. ಮುಂಭಾಗದಲ್ಲಿ ಕಾರ್ತಿಕೇಯನ ಎರಡು ಶಿಲ್ಪಗಳು, ಬ್ರಹ್ಮ, ನಂತರದ ಕಾಲದ ಗೋಪಾಲಕೃಷ್ಣ, ಶ್ರೀದೇವಿ ಮತ್ತು ಭೂದೇವಿಯರ ಶಿಲ್ಪಾವಶೇಷಗಳು ಕಂಡುಬರುತ್ತವೆ. ಈ ಎಲ್ಲ ಶಿಲ್ಪಾವಶೇಷಗಳಿಂದ ಇಲ್ಲಿ ಕ್ರಿ.ಶ.೧೧-೧೨ನೆಯ ಶತಮಾನದ ಶಿವಾಲಯವಿತ್ತೆಂದು ಗ್ರಹಿಸಬಹುದು.

ಈ ಊರಿನ ಆಂಜನೇಯ ಗುಡಿ ಎದುರು ಕ್ರಿ.ಶ. ೧೧೫೪ ರ ಮೂರನೇ ತೈಲನ ಶಾಸನವಿದ್ದು, ಕವಲೇಶ್ವರ ದೇವರಿಗೆ ನೀಡಿದ ದಾನಗಳ ಉಲ್ಲೇಖವಿದೆ (ಸೌಇಇ xv : ೪೯). ಬಹುಶಃ ಮೇಲಿನ ದೇವಾಲಯದ ಪ್ರಾಚೀನ ಹೆಸರು ಕವಲೇಶ್ವರ ಎಂದಿರಬಹುದು. ಕೆಲವು ಶಿವಾಲಯಗಳಲ್ಲಿ ನಂದಿಯನ್ನೇ ಹೆಚ್ಚು ಪೂಜಿಸಲಾಗಿ, ಅಂತಹ ದೇವಾಲಯಗಳನ್ನು ಬಸವಣ್ಣ ಗುಡಿ ಎಂದು ಕರೆಯುವ ವಾಡಿಕೆಯಿದೆ. ಅದೇ ರೀತಿ ಮೇಲಿನ ಶಿವಾಲಯವನ್ನು ಬಸವಣ್ಣ ಗುಡಿ ಎಂದು ಕರೆದಿದ್ದಾರೆ.

೧೯

ಊರು ಆಹೆಟ್ಟಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಣ್ಣಿನ ಹಳೆಯ ದೇವಾಲಯವನ್ನು ಕೆಡವಿ, ಈಗಿನ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯವು ಗರ್ಭವೃಹ ಮತ್ತು ಸಭಾಗೃಹಗಳನ್ನು ಹೊಂದಿದೆ. ಹೊಸ ಲಿಂಗ ಮತ್ತು ನಂದಿಯನ್ನು ಪ್ರತಿಷ್ಠಾಪಿಸಿದ್ದಾರೆ. ಹೊರಭಾಗದಲ್ಲಿರುವ ಕಟ್ಟೆಯಲ್ಲಿ ಹಳೆಯ ಲಿಂಗ, ನಂದಿ, ಗಣಪತಿ, ವಿಷ್ಣು, ನಾಗ (ಮೂರು) ಮತ್ತು ಪಾರ್ಶ್ವನಾಥ ಶಿಲ್ಪಗಳನ್ನು ಕ್ರಮಗಳನ್ನು ಕ್ರಮವಾಗಿ ಇಡಲಾಗಿದೆ. ಈ ಪ್ರಾಚೀನ ಶಿಲ್ಪಾವಶೇಷಗಳಿಂದ ಇಲ್ಲಿ ಪ್ರಾಚೀನ ಶಿವಾಲಯ ಇತ್ತೆಂಬುದು ಸ್ಪಷ್ಟವಾಗುತ್ತದೆ. ಹಾಗೂ ದೇವಾಲಯವು ಮೂರನೆಯ ಬಾರಿಗೆ ಪುನರ್ನಿರ್ಮಾಣಗೊಂಡಿರುವುದನ್ನು ಗ್ರಹಿಸಬಹುದು.

೨೦

ಊರು ಆಹೆಟ್ಟಿ
ಸ್ಥಳ ಊರ ನಡುವೆ
ಸ್ಮಾರಕ ಸೋಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಣ್ಣಿನಿಂದ ನಿರ್ಮಿಸಿದ್ದ ದೇವಾಲಯ ಬಿದ್ದುಹೋಗಿದೆ. ಗರ್ಭಗೃಹದಲ್ಲಿ ಹಳೆಯ ಲಿಂಗವಿದೆ. ಹೊರಗಿರುವ ನಂದಿ ಇತ್ತೀಚಿನದು. ವಿಷ್ಣು ಮತ್ತಿತರ ಪ್ರಾಚೀನ ಶಿಲ್ಪಾವಶೇಷಗಳು ಮಣ್ಣಿನಲ್ಲಿ ಬಿದ್ದಿವೆ. ಇಲ್ಲಿ ಮೊದಲಿಗೆ ಕಲ್ಲಿನ ದೇವಾಲಯವಿದ್ದು, ಅದು ಬಿದ್ದುಹೋದ ನಂತರ ಮಣ್ಣಿನ ದೇವಾಲಯವನ್ನು ನಿರ್ಮಿಸಲಾಯಿತು. ಇತ್ತೀಚೆಗೆ ಅದು ಸಹ ಬಿದ್ದುಹೋಗಿದೆ. ಈಗ ಮೂರನೆಯ ಬಾರಿಗೆ ಮೇಲಿನ ದೇವಾಲಯ ನಿರ್ಮಾಣವಾಗಬೇಕಾಗಿದೆ. ಹೀಗಾಗಿ ದೇವಾಲಯಗಳು ಆಗಾಗ್ಗೆ ಜೀರ್ಣೋದ್ಧಾರ ಕ್ರಿಯೆಗೆ ಒಳಗಾಗುತ್ತವೆ. ಅಲ್ಲದೆ ನಿರ್ಮಾಣ ಸಾಮಗ್ರಿಗಳು ಸಹ ಕಾಲಕಾಲಕ್ಕೆ ಬದಲಾಗುವುದನ್ನು ಮನಗಾಣಬಹುದು. ಅವು ಯಾವುದೇ ರೂಪ ಪಡೆದರೂ ಅಲ್ಲಿರುವ ಶಿಲ್ಪಾವಶೇಷಗಳಿಂದಾಗಿ ದೇವಾಲಯದ ಪ್ರಾಚೀನತೆಯನ್ನು ನಿರ್ಧರಿಸಬಹುದಾಗಿದೆ.

೨೧

ಊರು ಕಡದಹಳ್ಳಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹವು ಜೀರ್ಣೋದ್ಧಾರಗೊಂಡಿದ್ದು, ಹೊರಭಿತ್ತಿ ಭಾಗವನ್ನು ದೊಡ್ಡ ಕಲ್ಲುಗಳಿಂದ ನಿರ್ಮಿಸಿದ್ದಾರೆ. ಮೇಲೆ ಶಿಖರ ಮತ್ತು ಕಳಸವಿದೆ. ಕೈಪಿಡಿ ಭಾಗದಲ್ಲಿ ಹಳೆಯ ದೇವಾಲಯದ ವಾಸ್ತು ಅವಶೇಷಗಳಾದ ವೇಸರ ಮತ್ತು ನಾಗರಶೈಲಿಯ ಶಿಖರಗಳ ಸಣ್ಣ ರಚನೆಗಳನ್ನು ಅಳವಡಿಸಲಾಗಿದೆ. ಸಭಾಮಂಟಪವನ್ನು ಸಿಮೆಂಟಿನಿಂದ ನಿರ್ಮಿಸಿದ್ದಾರೆ.

ದೇವಾಲಯದಲ್ಲಿ ಲಿಂಗ ಮತ್ತು ನಂದಿ ಶಿಲ್ಪಗಳಿವೆ.

೨೨

ಊರು ಕರ್ಲವಾಡ
ಸ್ಥಳ ಕೆರೆ ಹತ್ತಿರ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆಶೈಲಿಯ ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಪ್ರಾಚೀನ ಲಿಂಗವಿದ್ದು, ಪೂಜೆಗೊಳ್ಳುತ್ತಿದೆ. ಲಿಂಗದ ಮುಂಭಾಗದಲ್ಲಿ ಸಣ್ಣ ನಂದಿಶಿಲ್ಪವನ್ನು ಕಾಣಬಹುದು. ಹೊರಭಾಗದಲ್ಲಿ ಗಣಪತಿ ಮತ್ತು ನಾಗಶಿಲ್ಪಗಳಿವೆ.

೨೩

ಊರು ಕಾಲವಾಡ
ಸ್ಥಳ ಊರ ನಡುವೆ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಮಾರಕ ಪಂಚಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಸ್ಥಿತಿ ಉತ್ತಮ
ಸಂರಕ್ಷಣೆ

ಹಳೆಯ ದೇವಾಲಯ ಬಿದ್ದುಹೋದ ಪರಿಣಾಮವಾಗಿ, ಇತ್ತೀಚೆಗೆ ಆರ್.ಸಿ.ಸಿ. ಕಟ್ಟಡದ ದೇವಾಲಯವನ್ನು ನಿರ್ಮಿಸಿದ್ದಾರೆ. ಗರ್ಭಗೃಹ ಮತ್ತು ಸಭಾಮಂಟಪಗಳಿರುವ ದೇವಾಲಯದಲ್ಲಿ ಪ್ರಾಚೀನ ಶಿಲ್ಪಗಳಿವೆ. ಗರ್ಭಗೃಹದಲ್ಲಿ ಪ್ರಾಚೀನ ಕಾಲಕ್ಕೆ ಸೇರಿದ ಐದು ಲಿಂಗಗಳಿವೆ. ಸಭಾಮಂಟಪದಲ್ಲಿ ನಂದಿ ಮತ್ತು ಗಣಪತಿ ಶಿಲ್ಪಗಳಿವೆ. ಹೊರಭಾಗದಲ್ಲಿ ಕೆಲವು ವಾಸ್ತುಅವಶೇಷಗಳು, ನಾಗ ಮತ್ತು ಗಣಪತಿ ಶಿಲ್ಪಗಳು ಕಂಡುಬರುತ್ತವೆ. ಪಕ್ಕದಲ್ಲಿರುವ ಆಂಜನೇಯ ದೇವಾಲಯದ ಹತ್ತಿರ ಗೋಸಾಸದ ಕಲ್ಲುಗಳು ಮತ್ತು ಚತುರ್ಮುಖ ಶಿಲ್ಪಗಳಿವೆ.

೨೪

ಊರು ಕಿತ್ತೂರು
ಸ್ಥಳ ತಿರ್ಲಾಪುರ ಜಮೀನು
ಸ್ಮಾರಕ ಕಲ್ಮೇಶ್ವರ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯವಿಲ್ಲ. ಆದರೆ ಹೊಲದ ನಡುವೆ ಎತ್ತರದ ಸ್ಥಳದಲ್ಲಿ ಪ್ರಾಚೀನ ಕಾಲಕ್ಕೆ ಸೇರಿದ ಲಿಂಗ ಹಾಗೂ ಭಗ್ನಗೊಂಡಿರುವ ಶಿಲ್ಪಾವಶೇಷಗಳು ಕಂಡುಬರುತ್ತವೆ. ವಿರಳವಾಗಿ ವಾಸ್ತು ಅವಶೇಷಗಳನ್ನು ಸಹ ಕಾಣಬಹುದು. ಈ ಎಲ್ಲ ಅವಶೇಷಗಳಿಂದ ಇಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಿವಾಲಯ ಇತ್ತೆಂಬುದು ಸ್ಪಷ್ಟವಾಗುತ್ತದೆ. ಅದು ಬಿದ್ದುಹೋದ ನಂತರ, ಮೇಲೆ ಹೇಳಿದ ಶಿಲ್ಪಾವಶೇಷಗಳು ಅದೇ ಸ್ಥಳದಲ್ಲಿವೆ.

ಇದೇ ಊರಿನ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಪ್ರಾಚೀನ ಜೈನಶಿಲ್ಪವಿದ್ದು, ಸುಮಾರು ೪ ಅಡಿ ಎತ್ತರವಿದೆ. ಇದು ಈ ಊರಿನಲ್ಲಿದ್ದ ಬಸದಿಯ ಬಗ್ಗೆ ಸೂಚನೆ ನೀಡುತ್ತದೆ.

೨೫

ಊರು ಕುಮಾರಗೊಪ್ಪ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಮಾಳಿಗೆ ಕಟ್ಟಡವಾಗಿದ್ದು, ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ ಇಳಿಜಾರಾದ ಹಂಚಿನ ಚಾವಣಿಯನ್ನು ನಿರ್ಮಿಸಲಾಗಿದೆ.

ಗರ್ಭಗೃಹದಲ್ಲಿ ಪ್ರಾಚೀನ ಕಾಲಕ್ಕೆ ಸೇರುವ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಹೊರಗೆ ಕೆಲವು ಶಿಲ್ಪಾವಶೇಷಗಳು ಕಾಣಬರುತ್ತವೆ. ಇದರಿಂದ ಇಲ್ಲಿ ಹಳೆಯ ದೇವಾಲಯವಿದ್ದ ಸೂಚನೆಗಳು ದೊರೆಯುತ್ತವೆ. ಇಲ್ಲಿರುವ ಶಾಸನಗಳೆರಡು ಕಲ್ಯಾಣ ಚಾಲುಕ್ಯರ ಕಾಲದವು. ಎರಡನೆಯ ಸೋಮೇಶ್ವರನ ಶಾಸನವು, ಮಂಡಳಿಕನೊಬ್ಬನನ್ನು ಉಲ್ಲೇಖಿಸುತ್ತದೆ. (ಸೌಇಇ XI-i : ೧೧೮). ಮತ್ತೊಂದು ಶಾಸನವು, ಚಾಮಿಕಬ್ಬೆ ಎಂಬುವಳು ತ್ರಿಭುವನತಿಲಕ ಬಸದಿಯ ಮುನಿಗಳ ಸತ್ರಕ್ಕೆ ಸುವರ್ಣದಾನ ಮಾಡಿದಳೆಂದು ತಿಳಿಸುವುದು (ಸೌಇಇ xv : ೫೮೭).

೨೬

ಊರು ಕೊಂಗವಾಡ
ಸ್ಥಳ ಊರ ನಡುವೆ
ಸ್ಮಾರಕ ವರಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹ ಜೀರ್ಣೋದ್ಧಾರಗೊಂಡಿದ್ದು, ಅಂತರಾಳ ಮತ್ತು ಸಭಾಮಂಟಪಗಳು ಮಾಳಿಗೆ ರಚನೆಯವು. ದೇವಾಲಯದ ಗೋಡೆ ಇಟ್ಟಿಗೆ ಮತ್ತು ಸಿಮೆಂಟಿನದು. ಗರ್ಭಗೃಹದ ಮೇಲೆ ಶಿಖರವಿದ್ದು, ಕಳಸವನ್ನು ಒಳಗೊಂಡಿದೆ.

ದೇವಾಲಯದಲ್ಲಿರುವ ಲಿಂಗ ಇತ್ತೀಚಿನದು. ಅಂತರಾಳದಲ್ಲಿ ನಂದಿಶಿಲ್ಪವುಂಟು. ಹೊರಭಾಗದಲ್ಲಿ ಭಗ್ನಗೊಂಡಿರುವ ಹಳೆಯ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಈ ಊರಿನ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಗಣೇಶ ಹಾಗೂ ವೀರಗಲ್ಲಿನ ತುಂಡು ಶಿಲ್ಪವಶೇಷಗಳು ಬಿದ್ದಿವೆ.

೨೭

ಊರು ಕೊಂಡಿಕೊಪ್ಪ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಉತ್ತರ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಹಳೆಯ ಮಣ್ಣಿನ ದೇವಾಲಯವನ್ನು ಕೆಡವಿ, ಇತ್ತೀಚೆಗೆ ಆರ್.ಸಿ.ಸಿ. ಕಟ್ಟಡದ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ. ಇಲ್ಲಿರುವ ಹಳೆಯ ಲಿಂಗವು ಯೋನಿಪೀಠ ಮತ್ತು ರುದ್ರಭಾಗವನ್ನು ಮಾತ್ರ ಹೊಂದಿದೆ. ನಂದಿ, ನಾಗಶಿಲ್ಪ, ವಿಷ್ಣು ಮತ್ತಿತರ ಶಿಲ್ಪಾವಶೇಷಗಳಿವೆ. ಇದರಿಂದ ಇಲ್ಲಿ ಪ್ರಾಚೀನ ದೇವಾಲಯವಿತ್ತೆಂಬುದು ಸ್ಪಷ್ಟವಾಗುತ್ತದೆ.

೨೮

ಊರು ಗುಡಿಸಾಗರ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಜೀರ್ಣೋದ್ಧಾರಗೊಂಡಿರುವ ಗರ್ಭಗೃಹವನ್ನು ಮತ್ತು ಮಾಳಿಗೆ ರಚನೆಯ ಸಭಾಮಂಟಪವನ್ನು ಹೊಂದಿದೆ. ಗರ್ಭಗೃಹದ ಗೋಡೆ ಮತ್ತು ಚಾವಣಿ ಭಾಗಗಳನ್ನು ನವೀಕರಿಸಿದ್ದಾರೆ. ಬಹುಶಃ ಪ್ರಾಚೀನ ದೇವಾಲಯ ಹಾಳಾದ ನಂತರ ಈಗಿರುವ ದೇವಾಲಯವನ್ನು ನಿರ್ಮಿಸಿರಬೇಕು.

ಗರ್ಭಗೃಹದಲ್ಲಿರುವ ಲಿಂಗ ಪ್ರಾಚೀನವಾದುದು. ಸಭಾಮಂಟಪದಲ್ಲಿ ಸಪ್ತಮಾತೃಕೆಯರ ಶಿಲ್ಪಫಲಕ, ಭಗ್ನಗೊಂಡಿರುವ ವಿಷ್ಣು, ಗಣಪತಿ ಮತ್ತು ನಾಗಶಿಲ್ಪಗಳು ಕಂಡುಬರುತ್ತವೆ. ನಂದಿ ಇತ್ತೀಚಿನದು. ಹೊರಭಾಗದಲ್ಲಿ ಭಗ್ನಗೊಂಡಿರುವ ನಂದಿಶಿಲ್ಪಗಳು, ಗಣಪತಿ, ವೀರಗಲ್ಲುಗಳು ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ. ಈ ಎಲ್ಲ ಶಿಲ್ಪಾವಶೇಷಗಳು, ಇಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಿವಾಲಯ ಇತ್ತೆಂಬುದನ್ನು ಖಾತರಿಪಡಿಸುತ್ತವೆ. ಈ ಊರಿನ ಆಂಜನೇಯ ದೇವಾಲಯದ ಮುಂಭಾಗದಲ್ಲಿ ವೀರಮಾಸ್ತಿಕಲ್ಲೊಂದನ್ನು ಕಾಣಬಹುದು.

ಈ ಊರಿನ ಶಾಸನವೊಂದು ವಿಜಯನಗರ ಕಾಲಕ್ಕೆ ಸೇರಿದ್ದು, ಸದಾಶಿವರಾಯನು ನಾವಿದ ನಾಗೋಜನಿಗೆ ಮಾನ್ಯದ ದಾನ ನೀಡಿದನೆಂದು ತಿಳಿಸುತ್ತದೆ. (ಸೌಇಇxv : ೨೫೭).

೨೯

ಊರು ಗುಮಗೋಳ
ಸ್ಥಳ ಊರ ನಡುವೆ
ಕಾಲ ಕ್ರಿ.ಶ. ೧೭-೧೮ನೆಯ ಶತಮಾನ
ಸ್ಮಾರಕ ರಾಮಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವನ್ನು ಮಣ್ಣು ಮತ್ತು ಕಲ್ಲುಗಳಿಂದ ನಿರ್ಮಿಸಿದ್ದು, ಭಗ್ನಗೊಂಡಿದೆ. ಎರಡು ಗರ್ಭಗೃಹಗಳಿದ್ದು, ದ್ವಾರಗಳು ಸುಮಾರು ಇನ್ನೊಂದು ವರ್ಷಗಳಷ್ಟು ಹಿಂದಿನವು. ಮೊದಲಿಗೆ ಇಲ್ಲಿ ಪ್ರಾಚೀನ ದೇವಾಲಯವಿದ್ದು, ನಂತರದ ಕಾಲದಲ್ಲಿ ಜೀರ್ಣೋದ್ಧಾರಗೊಂಡಿದೆ. ಚಾವಣಿ ಮಾಳಿಗೆ ಶೈಲಿಯದು. ಎರಡನೆ ಗರ್ಭಗೃಹದ ಮೂಲೆಗಳಲ್ಲಿ ಹಳೆಯ ದೇವಾಲಯದ ಕಂಬಗಳು ಕಂಡುಬರುತ್ತವೆ.

ಮೊದಲ ಗರ್ಭಗೃಹದಲ್ಲಿ ಲಿಂಗ, ನಂದಿ, ನಾಗ ಮತ್ತಿತರ ಶಿಲ್ಪಗಳಿಗೆ. ಎರಡನೆಯ ಗರ್ಭಗೃಹದಲ್ಲಿ ಒರಟುರಚನೆಯ ಲಿಂಗವೊಂದು ನೆಲಮಟ್ಟದಲ್ಲಿದೆ.

ಈ ಊರಿನ ೧೫೨೯ರ ಶಾಸನವು, ತೊರಗಲೆಮೇಂಠೆಯ ಗುಮ್ಮುಗೋಳದಲ್ಲಿ ನೀಡಿದ ದಾನವನ್ನು ಉಲ್ಲೇಖಿಸಿದೆ (ಸೌಇಇ xv : ೨೫೦).

೩೦

ಊರು ಚಿಲಕವಾಡ
ಸ್ಥಳ ಊರ ನಡುವೆ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆ ರಚನೆಯ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳಿರುವ ದೇವಾಲಯದಲ್ಲಿ ಪ್ರಾಚೀನ ಲಿಂಗವಿದೆ. ನಂದಿಶಿಲ್ಪ ಇತ್ತೀಚಿನದು. ಹೊರಭಾಗದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ. ಇದರಿಂದ ಇಲ್ಲಿ ಪ್ರಾಚೀನ ದೇವಾಲಯವಿದ್ದ ಬಗ್ಗೆ ತಿಳಿದುಬರುವುದು.