ನವಲಗುಂದ ತಾಲೂಕು

ನವಲಗುಂದ ತಾಲೂಕು

 

ಊರು ಅಣ್ಣಿಗೇರಿ
ಸ್ಥಳ ಪೇಟೆ
ಸ್ಮಾರಕ ಅಮೃತೇಶ್ವರ ದೇವಾಲಯ ಸ್ಥಿತಿ
ಅಭಿಮುಖ ಪೂರ್ವ
ಕಾಲ ಕ್ರಿ. ಶ. ೧೨ನೆಯ ಶತಮಾನ
ಶೈಲಿ ಹೊಯ್ಸಳ
ಸ್ಥಿತಿ ಉತ್ತಮ
ಸಂರಕ್ಷಣೆ

ಅಣ್ಣಿಗೇರಿಯ ಅಮೃತೇಶ್ವರ ದೇವಾಲಯವು ಈ ಭಾಗದ ಹೆಸರಾಂತ ಸ್ಮಾರಕ. ಈಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಣೆಯಲ್ಲಿದೆ. ಗರ್ಭಗೃಹ, ಅಂತರಾಳ, ನವರಂಗ ಮತ್ತು ಸಭಾಮಂಟಪಗಳನ್ನು ಒಳಗೊಂಡಿರುವ ವೇಸರಶೈಲಿಯ ದೇವಾಲಯವಿದು. ಗರ್ಭಗೃಹದ ಬಾಗಿಲುವಾಡಗಳಲ್ಲಿ ಅರ್ಧಕಂಬ ಮತ್ತು ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಪಟ್ಟಿಗಳ ಅಲಂಕರಣವನ್ನು ಕಾಣಬಹುದು. ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಶಿಲ್ಪವಿದ್ದು, ಈ ದ್ವಾರಬಂಧಕ್ಕೆ ಕಲ್ಲಿನ ತೊಲೆಯು ಆಧಾರವಾಗಿದ್ದು, ಇದನ್ನು ಎರಡು ಕಂಬಗಳು ಹೊತ್ತಿವೆ. ಅಂತರಾಳದ್ವಾರವು ಸಹ ಸರಳವಾಗಿದ್ದು, ಅರ್ಧಕಂಬಗಳ ಅಲಂಕರಣವನ್ನು ಹೊಂದಿದೆ. ಲಲಾಟಬಿಂಬದಲ್ಲಿ ಕಮಲವನ್ನು ಬಿಡಿಸಲಾಗಿದೆ. ಬಹುಶಃ ಅಂತರಾಳ ಭಾಗವು ಮೊದಲಿಗೆ ಅರ್ಧಮಂಟಪವಾಗಿದ್ದು, ನಂತರದ ಕಾಲದಲ್ಲಿ ದ್ವಾರವನ್ನು ಅಳವಡಿಸಿರುವ ಲಕ್ಷಣಗಳಿವೆ. ಇಕ್ಕೆಲಗಳಲ್ಲಿ ಒರಟುರಚನೆಯ ಜಾಲಂಧ್ರಗಳುಂಟು.

ನವರಂಗಕ್ಕೆ ಪೂರ್ವ ಮತ್ತು ದಕ್ಷಿಣದಲ್ಲಿ ದ್ವಾರಗಳಿದ್ದು, ಪ್ರವೇಶಮಂಟಪಗಳನ್ನು ಹೊಂದಿದೆ. ದಕ್ಷಿಣದ್ವಾರದ ಪ್ರವೇಶಮಂಟಪದ ಮೇಲೆ ಶಿಖರವಿದ್ದು, ಇಳಿಜಾರಾದ ಸೂರಿನ ಅಲಂಕರಣವಿದೆ. ನವರಂಗದ ನಡುವಿನ ಕಂಬಗಳು ಚೌಕ ಮತ್ತು ನಿಮ್ನಪಟ್ಟಿಗಳ ಅಲಂಕರಣದಿಂದ ಕೂಡಿದೆ. ಈ ಪಟ್ಟಿಗಳ ಸುತ್ತಲೂ ಲತಾಪಟ್ಟಿಕೆಯ ಅಲಂಕರಣವಿದೆ. ಭುವನೇಶ್ವರಿಯಲ್ಲಿ ತಾವರೆಯ ಉಬ್ಬುರಚನೆಯುಂಟು. ಪೂರ್ವದ್ವಾರದಲ್ಲಿ ಅರ್ಧಕಂಬಗಳು ಮತ್ತು ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಪಟ್ಟಿಗಳ ಅಲಂಕರಣವನ್ನು ಕಾಣಬಹುದು. ಈ ಅಪೂರ್ವ ಕೆತ್ತನೆಗಳು ಭಗ್ನಗೊಂಡಿವೆ. ದ್ವಾರದ ತಳಭಾಗದಲ್ಲಿ ದ್ವಾರಪಾಲಕರು ಮತ್ತು ಸ್ತ್ರೀಯರ ಸುಂದರಶಿಲ್ಪಗಳಿದ್ದು, ವಿವಿಧ ಭಂಗಿಗಳಲ್ಲಿವೆ.

ಪೂರ್ವದ್ವಾರದ ಪ್ರವೇಶಮಂಟಪವು ಮೊದಲಿಗೆ ದಕ್ಷಿಣ, ಉತ್ತರ ಮತ್ತು ಪೂರ್ವಗಳಿಂದ ಪ್ರವೇಶವನ್ನು ಹೊಂದಿತ್ತು. ಆದರೆ ನಂತರದ ಕಾಲದಲ್ಲಿ ದಕ್ಷಿಣ ಮತ್ತು ಉತ್ತರದ ಪ್ರವೇಶಗಳನ್ನು ಸೇರಿಸಿಕೊಂಡು ಗೋಡೆ ನಿರ್ಮಿಸಲಾಯಿತು. ಪರಿಣಾಮವಾಗಿ ಉತ್ತರದಲ್ಲಿ ಕೊಠಡಿಯೊಂದನ್ನು ನಿರ್ಮಿಸಿ ಅದನ್ನು ನಗಾರಿಖಾನೆ ಎಂದು ಕರೆಯಲಾಗಿದೆ. ಈ ಪ್ರವೇಶ ಮಂಟಪಕ್ಕೆ ಹೊಂದಿಕೊಂಡಂತೆ ರಂಗಮಂಟಪ ಅಥವಾ ಸಭಾಮಂಟಪವಿದ್ದು, ನಕ್ಷತ್ರಾಕಾರದಲ್ಲಿದೆ. ಇದು ಪೂರ್ವ, ದಕ್ಷಿಣ ಮತ್ತು ಉತ್ತರಗಳಿಂದ ಪ್ರವೇಶವನ್ನು ಹೊಂದಿದೆ. ರಂಗಮಂಟಪವು ಮೊದಲಿಗೆ ತೆರೆದಸ್ಥಿತಿಯಲ್ಲಿದ್ದು, ನಂತರ ಮೇಲೆ ತಿಳಿಸಿದಂತೆ ಗೋಡೆಯನ್ನು ನಿರ್ಮಿಸಿ, ಮೂರು ದಿಕ್ಕುಗಳಲ್ಲಿ ದ್ವಾರಗಳನ್ನು ಅಳವಡಿಸಲಾಗಿದೆ. ಈ ದ್ವಾರಗಳು ಸಹ ಸೂಕ್ಷ್ಮ ಕೆತ್ತನೆಗಳ ಅಲಂಕರಣದಿಂದ ಕೂಡಿದೆ. ಈ ಗೋಡೆ ನಿರ್ಮಾಣದ ಸಮಯದಲ್ಲಿ ಕಟ್ಟಡದ ಮೇಲೆ ನಿರ್ಮಿಸಿದ ಕೈಪಿಡಿ ಗೋಡೆಯಲ್ಲಿ ಕೆಲವು ಶಿಲ್ಪಾವಶೇಷಗಳನ್ನು ಅಳವಡಿಸಲಾಗಿದೆ.

ಅಧಿಷ್ಠಾನದ ಮೇಲಿರುವ ದೇವಾಲಯದ ಹೊರಭಿತ್ತಿಯಲ್ಲಿ ಗೋಡೆಗಂಬ, ಅರ್ಧಕಂಬ ಮತ್ತು ದೇವಕೋಷ್ಠಗಳ ರಚನೆಗಳಿವೆ. ಗರ್ಭಗೃಹದ ಮೇಲೆ ತ್ರಿತಲಶಿಖರವಿದ್ದು, ಸುಖನಾಸವನ್ನು ಹೊಂದಿದೆ. ಶಿಖರದ ಮೇಲಿರುವ ಸ್ತೂಪಿಗೆ ಸಿಡಿಲುಬಡಿದಿದ್ದು, ಅದನ್ನು ಗಾರೆಯಿಂದ ದುರಸ್ತಿಗೊಳಿಸಿರುವುದು ತಿಳಿದುಬರುತ್ತದೆ. ತುದಿಯಲ್ಲಿ ಕಳಸವನ್ನು ಅಳವಡಿಸಲಾಗಿದೆ. ಕೈಪಿಡಿ ಗೋಡೆಯಲ್ಲಿ ವಿವಿಧ ಶಿಲ್ಪಗಳ ಅಲಂಕರಣವನ್ನು ಕಾಣಬಹುದು. ದೇವಾಲಯದ ಸುತ್ತಲಿರುವ ಗಿಡ್ಡನೆಯ ಪ್ರಾಕಾರಗೋಡೆ ಜೀರ್ಣೋದ್ಧಾರಗೊಳ್ಳುತ್ತಿದೆ. ಅಲ್ಲಲ್ಲಿ ವಾಸ್ತು ಅವಶೇಷಗಳು ಮತ್ತು ಭಗ್ನಶಿಲ್ಪಾವಶೇಷಗಳು ಬಿದ್ದಿವೆ. ಮಂಟಪವೊಂದು ನೈಋತ್ಯ ಮೂಲೆಯಲ್ಲಿದೆ. ದೇವಾಲಯದ ಮಹಾದ್ವಾರ ಮಂಟಪವು ಸುಂದರವಾದ ದುಂಡನೆಯ ಕಂಬಗಳಿಂದ ನಿರ್ಮಾಣವಾಗಿದೆ. ದೇವಾಲಯದಲ್ಲಿ ಪೂಜೆಗೊಳ್ಳುತ್ತಿರುವ ಅಮೃತೇಶ್ವರಲಿಂಗ ದೊಡ್ಡದಿದ್ದು, ಆಕರ್ಷಕವಾಗಿದೆ. ನವರಂಗದಲ್ಲಿ ಭಗ್ನಲಿಂಗಗಳಿವೆ. ರಂಗಮಂಟಪದಲ್ಲಿ ನಂದಿಶಿಲ್ಪವಿದೆ. ಹೊರಭಾಗದಲ್ಲಿ ಸಳನ ಭಗ್ನಶಿಲ್ಪ, ಸಿಂಹದ ಭಗ್ನಶಿಲ್ಪ, ನಂದಿ, ನಾಗರಾಜ, ಭೈರವಿ ಮತ್ತು ನಾಗಪ್ರತಿಮೆಗಳು ಕಂಡುಬರುತ್ತವೆ.

ಅಣ್ಣಿಗೇರಿಯ ಹೆಚ್ಚಿನ ಶಾಸನಗಳು, ಅಮೃತೇಶ್ವರ ದೇವಾಲಯಕ್ಕೆ ನೀಡಿದ ದಾನದತ್ತಿಗಳನ್ನು ಉಲ್ಲೇಖಿಸುತ್ತವೆ. ಹೆಚ್ಚಾಗಿ ಹೊಯ್ಸಳ ಅಧಿಕಾರಿಗಳು ಈ ದಾನದತ್ತಿಗಳನ್ನು ನೀಡಿದ್ದಾರೆ. ಕಾರಣ ಈ ದೇವಾಲಯವನ್ನು ಹೊಯ್ಸಳರು ನಿರ್ಮಿಸಿರುವುದು. ಹೊಯ್ಸಳ ಅಧಿಕಾರಿಗಳು ಅಮೃತೇಶ್ವರ ದೇವರಿಗೆ ಭೂಮಿದಾನ, ಸುವರ್ಣದಾನ, ಧಾನ್ಯದಾನ ಮತ್ತು ಸುಂಕದಾನಗಳನ್ನು ನೀಡಿದ ಉಲ್ಲೇಖಗಳಿವೆ. ಅಲ್ಲದೆ ಕಳಚೂರಿ ಮತ್ತು ಸೇವುಣರ ಅಧಿಕಾರಿಗಳು ಸಹ ದಾನದತ್ತಿಗಳನ್ನು ನೀಡಿದ್ದಾರೆ. ಈ ದೇವಾಲಯದ ಕ್ರಿ. ಶ. ೧೫೩೯ರ ಅಚ್ಯುತರಾಯನ ಶಾಸನವು ಇಲ್ಲಿನ ಬ್ರಾಹ್ಮಣರಿಗೆ ನೀಡಿದ ಆನಂದನಿಧಿ ದಾನವನ್ನು ಕುರಿತು ತಿಳಿಸುತ್ತದೆ. ಹೀಗೆ ಅಣ್ಣಿಗೇರಿಯು ವಿಜಯನಗರ ಕಾಲದವರೆಗೂ ತನ್ನ ಪ್ರಾಶಸ್ತ್ಯವನ್ನು ಉಳಿಸಿಕೊಂಡಿದ್ದುದು ಗಮನಾರ್ಹ ಸಂಗತಿ(ಸೌಇಇ xv ವ : ೧೦೦, ೨೧೩, ೨೧೬, ೨೧೭, ೨೨೪).

ಊರು ಅಣ್ಣಿಗೇರಿ
ಸ್ಥಳ ಹಳೆ ಅಮೃತೇಶ್ವರನಗರ
ಸ್ಮಾರಕ ಉಮಾಪಾರ್ವತಿ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದ್ದು, ಕ್ರಮವಾಗಿ ೧೯೦೩ ಮತ್ತು ೧೯೧೮ ರಲ್ಲಿ ನಿರ್ಮಾಣಗೊಂಡಿದೆ. ಸಭಾಮಂಟಪದಲ್ಲಿ ದುಂಡಾದ ಕಂಬಗಳು ಮತ್ತು ಅಲಂಕೃತ ಬೋದಿಗೆಗಳನ್ನು ಕಾಣಬಹುದು. ಅಂದರೆ ದೇವಾಲಯವು ಪ್ರಾಚೀನವಿದ್ದು, ಅದನ್ನು ಮೇಲೆ ಹೇಳಿದ ವರ್ಷಗಳಲ್ಲಿ ಪುನರ್‌ನಿರ್ಮಾಣ ಮಾಡಿದ್ದಾರೆ. ಮುಂದಿರುವ ಕಮಾನುದ್ವಾರ ಆಕರ್ಷಕವಾಗಿದ್ದು, ಮೇಲೆ ಕಮಾನುಗೂಡುಗಳ ಅಲಂಕರಣವುಂಟು. ಗರ್ಭಗೃಹದಲ್ಲಿರುವ ದೇವಿಯ ಶಿಲ್ಪವು ಕೈಗಳಲ್ಲಿ ತ್ರಿಶೂಲ, ಡಮರು, ಶಂಖ ಮತ್ತು ಅಭಯ ಹಸ್ತವನ್ನು ಹೊಂದಿದ್ದಾಳೆ. ಪಾಣಿಪೀಠದಲ್ಲಿ ಸಿಂಹಲಾಂಛನವಿದೆ. ಸಭಾಮಂಟಪದಲ್ಲಿರುವ ಹಳೆಯ ದೇವಿ ಶಿಲ್ಪವು ಗರುಡಲಾಂಛನದ ಪಾಣಿಪೀಠದ ಮೇಲಿದೆ. ಹೊರಭಾಗದಲ್ಲಿ ನಾಗ ಮತ್ತು ಸಪ್ತಮಾತೃಕೆಯರ ಭಗ್ನಶಿಲ್ಪಗಳಿವೆ. ಇದರಿಂದಾಗಿ ಇಲ್ಲಿ ಹಳೆಯ ದೇವಾಲಯವಿದ್ದುದು ಸುಸ್ಪಷ್ಟವಾಗುವುದು.

ಇಲ್ಲಿರುವ ಶಿಲಾಬರಹಗಳು, ಗರ್ಭಗೃಹವನ್ನು ವೀರವ್ವ ಕೋಂ ಚೆನ್ನಪ್ಪ ಬಳ್ಳೊಳ್ಳಿ ಅವರು ಮತ್ತು ಸಭಾಮಂಟಪವನ್ನು ತಿರಕಂಭಟ್ಟ ಅಮೃತಭಟ್ಟ ಘಳಗಿ ಅವರು ನಿರ್ಮಿಸಿದ್ದಾರೆ ಎಂದು ತಿಳಿಸುತ್ತವೆ. ಈ ಊರಿನ ಗುಲ್ಲಿಕೇರಿ ಬಸವಣ್ಣನ ಗುಡಿ ಎದುರು ಕ್ರಿ. ಶ. ೧೧೬೨ರ ಕಲಚೂರಿ ಬಿಜ್ಜಳ ಶಾಸನವಿದ್ದು, ಅಣ್ಣಿಗೇರಿಯ ಚಂಡಿಕಾದೇವಿಗೆ ಶ್ರೀಧರಯ್ಯ ದಂಡನಾಯಕ ಭೂದಾನ ಮಾಡಿದ ಉಲ್ಲೇಖವುಂಟು (ಸೌಇಇ xv : ೧೦೨). ಪ್ರಸ್ತುತ ದೇವಾಲಯದ ಸಭಾಮಂಟಪದಲ್ಲಿರುವ ಹಳೆಯ ದೇವಿ ಶಿಲ್ಪವೇ ಬಹುಶಃ ಶಾಸನದಲ್ಲಿ ಉಲ್ಲೇಖಗೊಂಡಿರುವ ಚಂಡಿಕಾದೇವಿಯ ಶಿಲ್ಪವಾಗಿರಬಹುದು.

ಊರು ಅಣ್ಣಿಗೇರಿ
ಸ್ಥಳ ಹೊಸಪೇಟೆ ಓಣಿ
ಕಾಲ ಕ್ರಿ. ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಮಾರಕ ಕಲ್ಮಠ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿಂದ ಕೂಡಿದೆ. ವಾಸ್ತವವಾಗಿ ಇದು ತ್ರಿಕೂಟಾಚಲ ದೇವಾಲಯ. ನವರಂಗದ ದಕ್ಷಿಣ ಮತ್ತು ಉತ್ತರದಲ್ಲಿ ದ್ವಾರಗಳಿದ್ದು, ಕೊಠಡಿಭಾಗಗಳು ಕಾಣಬರುವುದಿಲ್ಲ. ಗರ್ಭಗೃಹದ ಬಾಗಿಲುವಾಡಗಳು ಅರ್ಧಕಂಬಗಳ ಅಲಂಕರಣದಿಂದ ಕೂಡಿವೆ. ಲಲಾಟಬಿಂಬ ಸಪಾಟಾಗಿದ್ದು, ಮೇಲಿನ ಫಲಕದಲ್ಲಿ ನಾಗರ ಮತ್ತು ದ್ರಾವಿಡಶೈಲಿಯ ಶಿಖರಗಳನ್ನು ಸೂಕ್ಷ್ಮವಾಗಿ ಬಿಡಿಸಲಾಗಿದೆ. ಅಂತರಾಳದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳುಂಟು. ಲಲಾಟಬಿಂಬ ಸಪಾಟಾಗಿದೆ. ನವರಂಗದಲ್ಲಿ ತಿರುಗಣೆ ಯಂತ್ರದಿಂದ ಕಡೆದ ದುಂಡನೆಯ ಕಂಬಗಳಿವೆ. ನವರಂಗದ ದಕ್ಷಿಣದ್ವಾರದಲ್ಲಿ ಜಾಲಂಧ್ರಗಳ ಅಳವಡಿಕೆಯನ್ನು ಕಾಣಬಹುದು. ಉತ್ತರದ್ವಾರದ ಜಾಲಂಧ್ರಗಳು ಕಣ್ಮರೆಯಾಗಿವೆ. ಹೀಗಾಗಿ ಇದು ತ್ರಿಕೂಟ ದೇವಾಲಯವಾಗಿರುವ ಸೂಚನೆಗಳು ದೊರೆಯುತ್ತವೆ. ನವರಂಗದಲ್ಲಿ ಎಂಟು ದೇವಕೋಷ್ಠಗಳಿದ್ದು, ಅವುಗಳ ಮೇಲ್ಭಾಗದಲ್ಲಿ ಶಿಖರಗಳ ಉಬ್ಬುರಚನೆಯ ಅಲಂಕರಣವಿದೆ. ತೊಲೆಗಳ ಮೇಲೆ ನೃತ್ಯಗಾರರ ಮತ್ತು ಸಂಗೀತಗಾರರ ಉಬ್ಬುಶಿಲ್ಪಗಳಿದ್ದು, ನವರಂಗದ ಅಲಂಕರಣವನ್ನು ಹೆಚ್ಚಿಸಿವೆ. ಮಧ್ಯದ ವೇದಿಕೆಯು ಚೌಕ ಮತ್ತು ವೃತ್ತದ ರಚನೆಯಲ್ಲಿದೆ. ದೇವಾಲಯದ ಹೊರಗೋಡೆಯನ್ನು ದಿಂಡುಗಲ್ಲಿನಿಂದ ಜೀರ್ಣೋದ್ಧಾರ ಮಾಡಲಾಗಿದೆ. (೧೯೨೪)    ಹೊರಭಾಗದಲ್ಲಿ ಕಕ್ಷಾಸನದ ಭಾಗಗಳು ಬಿದ್ದಿದ್ದು, ರಂಗಮಂಟಪವಿದ್ದ ಸೂಚನೆಗಳು ದೊರೆಯುತ್ತವೆ.

ಗರ್ಭಗೃಹದಲ್ಲಿ ಲಿಂಗವಿದ್ದು, ಪೂಜೆಗೊಳ್ಳುತ್ತಿದೆ. ಈ ದೇವಾಲಯದ ಎದುರು ವರಕ ಬಸವೇಶ್ವರ ಎಂಬ ದೇವಾಲಯವಿದ್ದು, ಬೃಹತ್‌ ನಂದಿಶಿಲ್ಪವಿದೆ. ಇದು ಮೂಲತಃ ಮೇಲೆ ಹೇಳಿದ ತ್ರಿಕೂಟ ದೇವಾಲಯಕ್ಕೆ ಸೇರಿದ ಶಿಲ್ಪ. ರಂಗಮಂಟಪವಿದ್ದಲ್ಲಿ ಹಳೆಯ ರಸ್ತೆ ಬರಲಾಗಿ ತ್ರಿಕೂಟದೇವಾಲಯ ಮತ್ತು ನಂದಿಶಿಲ್ಪ ಪ್ರತ್ಯೇಕಗೊಂಡವು. ಈ ಶಿಲ್ಪವು ಸುಮಾರು ೧೦ ಅಡಿ ಎತ್ತರವಿದ್ದು, ೧೨ ಅಡಿ ಉದ್ದವಿದೆ. ಶಿಲ್ಪವು ಭಗ್ನಗೊಂಡಿದ್ದು, ಸಿಡಿಲು ಬಡಿದಿದೆ ಎಂದು ಸ್ಥಳೀಯರು ತಿಳಿಸುತ್ತಾರೆ. ೧೯೬೨ ರಲ್ಲಿ ಹಳೆಯ ಮಣ್ಣಿನ ದೇವಾಲಯವನ್ನು ಕೆಡವಿ, ಈಗಿನ ಮಾಳಿಗೆ ಶೈಲಿಯ ದೇವಾಲಯವನ್ನು ನಿರ್ಮಿಸಲಾಯಿತು. ಮುಂಭಾಗದಲ್ಲಿ ನಾಗ, ಗಣೇಶ, ಸಂಗೀತಗಾರರು ಮತ್ತು ಆನೆಸಾಲಿನ ಶಿಲ್ಪಫಲಕಗಳು ಕಂಡುಬರುತ್ತವೆ. ಇವೆಲ್ಲವು ಮೇಲೆ ಹೇಳಿದ ತ್ರಿಕೂಟಶಿವಾಲಯಕ್ಕೆ ಸಂಬಂಧಿಸಿವೆ.

ಊರು ಅಣ್ಣಿಗೇರಿ
ಸ್ಥಳ ಹೊರಕೇರಿ
ಕಾಲ ಕ್ರಿ. ಶ. ೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಮಾರಕ ಪವಾಡ ಬಸವಣ್ಣ
ಅಭಿಮುಖ ಉತ್ತರ
ಸ್ಥಿತಿ
ಸಂರಕ್ಷಣೆ

ದೇವಾಲಯವು ನೆಲಸಮಗೊಂಡಿದ್ದು, ಗರ್ಭಗೃಹದ ತಲರಚನೆ ಕಂಡುಬರುತ್ತದೆ. ಇಲ್ಲಿರುವ ನಂದಿ ಮತ್ತಿತರ ಶಿಲ್ಪಾವಶೇಷಗಳು ಕಲ್ಯಾಣ ಚಾಳುಕ್ಯ ಶೈಲಿಯಲ್ಲಿವೆ. ಜಲಹರಿ, ಮತ್ತಿತರ ವಾಸ್ತು ಅವಶೇಷಗಳನ್ನು ಕಾಣಬಹುದು. ಮುಂಭಾಗದಲ್ಲಿ ಕಲಚೂರಿ ಸೋವಿದೇವನ ಕ್ರಿ. ಶ. ೧೧೭೩ ರ ಶಾಸನವಿದ್ದು, ನಾಗ ಗಾವುಂಡನು ನಾಗೇಶ್ವರ ದೇವಾಲಯವನ್ನು ನಿರ್ಮಿಸಿ, ಭೂದಾನ ಮಾಡಿದನೆಂದು ತಿಳಿಸುತ್ತದೆ. (ಸೌಇಇ xv : ೧೨೨). ಇದರಿಂದ ಅಳಿದು ಹೋಗಿರುವ ದೇವಾಲಯವು ನಾಗೇಶ್ವರ ದೇವಾಲಯವೆಂದು ಸ್ಪಷ್ಟವಾಗುವುದಲ್ಲದೆ, ಮೇಲಿನ ನಂದಿ, ಮತ್ತಿತರ ಶಿಲ್ಪಾವಶೇಷಗಳು ನಾಗೇಶ್ವರ ದೇವಾಲಯಕ್ಕೆ ಸಂಬಂಧಿಸಿರುವುದು ಗಮನಾರ್ಹ.

ಊರು ಅಣ್ಣಿಗೇರಿ
ಸ್ಥಳ ಬಸ್ತಿ ಓಣಿ
ಸ್ಮಾರಕ ಪಾರ್ಶ್ವನಾಥ ಬಸದಿ
ಅಭಿಮುಖ ಪೂರ್ವ
ಕಾಲ ಕ್ರಿ. ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಬಸದಿಯು ಗರ್ಭಗೃಹ, ಅರ್ಧಮಂಟಪ, ನವರಂಗ, ಸಭಾಮಂಟಪ ಮತ್ತು ಪ್ರವೇಶ ಮಂಟಪಗಳನ್ನು ಒಳಗೊಂಡಿದೆ. ಅಧಿಷ್ಠಾನದ ಮೇಲಿರುವ ಹೊರಭಿತ್ತಿಯು ಜೀರ್ಣೋದ್ಧಾರಗೊಂಡಿದೆ. ಜೀರ್ಣೋದ್ಧಾರದ ಸಂದರ್ಭದಲ್ಲಿ ನವರಂಗದ ಕಂಬಗಳನ್ನು ಸಿಮೆಂಟಿನಿಂದ ಮುಚ್ಚಿದ್ದಾರೆ. ಸಭಾಮಂಟಪವು ಪೂರ್ವ, ದಕ್ಷಿಣ ಮತ್ತು ಉತ್ತರದಲ್ಲಿ ಪ್ರವೇಶ ದ್ವಾರಗಳನ್ನು ಹೊಂದಿದೆ. ಮೂರುದ್ವಾರಗಳು ಪ್ರವೇಶಮಂಟಪಗಳನ್ನು ಹೊಂದಿದ್ದು, ಮೇಲೇರಲು ಮೆಟ್ಟಿಲಾಕಾರದ ಶಿಖರವು ಸ್ತೂಪಿ ಮತ್ತು ಕಳಸಗಳಿಂದ ಕೂಡಿದೆ. ಬಸದಿಯ ಮೇಲೆ ಗಾರೆಯಿಂದ ನಿರ್ಮಿಸಿದ ಒರಟು ರಚನೆಯ ಕೈಪಿಡಿ ಗೋಡೆಯುಂಟು. ಮುಂಭಾಗದಲ್ಲಿ ಮಹಾದ್ವಾರವಿದೆ. ಗರ್ಭಗೃಹದಲ್ಲಿ ಪಾರ್ಶ್ವನಾಥನ ಶಿಲ್ಪ ಪೂಜೆಗೊಳ್ಳುತ್ತಿದ್ದು, ಸುಮಾರು ೫ ಅಡಿ ಎತ್ತರವಿದೆ. ನವರಂಗದಲ್ಲಿ ಶಾಂತಿನಾಥ, ಬ್ರಹ್ಮದೇವ, ಮಹಾವೀರ, ಸರಸ್ವತಿ, ಕುಷ್ಮಾಂಡಿನಿ, ಪದ್ಮಾವತಿ ಮತ್ತು ನಾಗಶಿಲ್ಪಗಳನ್ನು ಕಾಣಬಹುದು. ಆದಿನಾಥ ಮತ್ತು ಚತುರ್ವಿಂಶತಿ ತೀರ್ಥಂಕರರ ಅಮೃತಶಿಲೆಯ ಸಣ್ಣ ಶಿಲ್ಪಗಳಿವೆ. ಬಸದಿಯ ಮುಂದಿರುವ ಕ್ರಿ. ಶ. ೧೦೭೧-೭೨ ರ ಎರಡನೆಯ ಸೋಮೇಶ್ವರನ ಶಾಸನವು, ಅಣ್ಣಿಗೇರಿಯ ಬಸದಿಗೆ ನೀಡಿದ ದಾನವನ್ನು ಉಲ್ಲೇಖಿಸುತ್ತದೆ. (ಎಇ xv       ಪು ೩೪೭) ಕ್ರಿ. ಶ. ೧೨೬೭ ರ ಮತ್ತೊಂದು ಶಾಸನ, ಸ್ತ್ರೀಯೊಬ್ಬಳ ಮರಣವನ್ನು ತಿಳಿಸುತ್ತದೆ (ಸೌಇಇ xv : ೬೧೩).

ಊರು ಅಣ್ಣಿಗೇರಿ
ಸ್ಥಳ ಪುರಸಭೆ ಹಿಂಭಾಗ
ಸ್ಮಾರಕ ಪುರದ ವೀರಭದ್ರೇಶ್ವರ
ಅಭಿಮುಖ ಪೂರ್ವ
ಕಾಲ ಕ್ರಿ. ಶ. ೧೧-೧೨ನೆಯ ಶತಮಾನ
ಶೈಲಿ ಕದಂಬನಾಗರ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದ್ವಾರವು ಅರ್ಧಕಂಬಗಳ ಅಲಂಕರಣೆ ಹೊಂದಿದ್ದು, ಸರಳ ರಚನೆಯದು. ಅಂತರಾಳದ್ವಾರವನ್ನು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಲಲಾಟಬಿಂಬದಲ್ಲಿ ಗಜಲಕ್ಷ್ಮಿಶಿಲ್ಪವುಂಟು. ನವರಂಗದಲ್ಲಿರುವ ನಾಲ್ಕು ಕಂಬಗಳು ಚೌಕರಚನೆಯಲ್ಲಿದ್ದು, ಮುಖಭಾಗಗಳಲ್ಲಿ ಕಳಸಗಳ ಅಲಂಕರಣವಿದೆ. ನವರಂಗದ ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಪ್ರವೇಶದ್ವಾರಗಳಿವೆ. ಅಧಿಷ್ಠಾನದ ಮೇಲಿರುವ ಹೊರಭಿತ್ತಿ ಸರಳರಚನೆಯಾಗಿದ್ದು, ಮೇಲೆ ಕೈಪಿಡಿಯಲ್ಲಿ ಶಿಲ್ಪಫಲಕಗಳ ಅಳವಡಿಕೆಯನ್ನು ಕಾಣಬಹುದು. ನವರಂಗದ ಪೂರ್ವದ್ವಾರವು ಸಹ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿದ್ದು, ಲಲಾಟಬಿಂಬದಲ್ಲಿ ಗಣಪತಿಯ ಉಬ್ಬುಶಿಲ್ಪವನ್ನು ಬಿಡಿಸಲಾಗಿದೆ. ಭುವನೇಶ್ವರಿಯಲ್ಲಿ ಕಮಲದ ಅಲಂಕರಣವಿದೆ. ಸಭಾಮಂಟಪದ ಗೋಡೆಗಳನ್ನು ದೊಡ್ಡಗಾತ್ರದ ಕಲ್ಲುಗಳನ್ನು ಬಳಸಿ ನಿರ್ಮಿಸಿದ್ದಾರೆ. ಆದರೆ ಚಾವಣಿಯಲ್ಲಿ ಜಿಂಕ್‌ಶೀಟನ್ನು ಬಳಸಲಾಗಿದೆ. ಹಾಗಾಗಿ ಸ್ಥಳೀಯ ಶೈಲಿಯಲ್ಲಿರುವ ಸಭಾಮಂಟಪವು ಕೆಲವು ದಶಕಗಳ ಹಿಂದಿನ ನಿರ್ಮಾಣವೆನ್ನಬಹುದು. ಗರ್ಭಗೃಹದ ಮೇಲೆ ಕದಂಬನಾಗರಶೈಲಿಯ ಶಿಖರವಿದ್ದು, ಸುಖನಾಸದಿಂದ ಕೂಡಿದೆ.

ಗರ್ಭಗೃಹದಲ್ಲಿ ವೀರಭದ್ರ ಶಿಲ್ಪವಿದ್ದು, ಪೂಜೆಗೊಳ್ಳುತ್ತಿದೆ. ನವರಂಗದಲ್ಲಿ ನಂದಿ ಶಿಲ್ಪವನ್ನು ಕಾಣಬಹುದು. ಹೊರಗೋಡೆಯಲ್ಲಿ ಕೆಲವು ಬಿಡಿಶಿಲ್ಪಗಳನ್ನು ಅಳವಡಿಸಲಾಗಿದೆ. ಈ ಶಿಲ್ಪಗಳು ವಿಜಯನಗರೋತ್ತರ ಕಾಲದ ರಚನೆಗಳಂತೆ ಕಂಡುಬರುತ್ತವೆ. ಮುಂಭಾಗದಲ್ಲಿ ಮರದ ಕೆಳಗೆ ಭಗ್ನಗೊಂಡ ನಂದಿ ಶಿಲ್ಪವಿದೆ.

ಹೊರಭಾಗದಲ್ಲಿರುವ ಕ್ರಿ. ಶ. ೧೦೭೫-೭೬ ರ ಶಾಸನವು, ಅಣ್ಣಿಗೇರಿಯಲ್ಲಿ ಬಿಟ್ಟ ಭೂದಾನವನ್ನು ಉಲ್ಲೇಖಿಸುತ್ತದೆ (ಸೌಇಇ XI-i   ೧೧೫).ಇಲ್ಲಿನ ಕ್ರಿ.ಶ. ೧೧೮೪ ರ ನಾಲ್ಕನೆಯ ಸೋಮೇಶ್ವರನ ಶಾಸನವು ವೀರಬೊಮ್ಮರಸ ದಂಡನಾಯಕನು ಅಣ್ಣಿಗೇರಿಯ ಬೊಮ್ಮೇಶ್ವರ ದೇವಾಲಯ ಹಾಗೂ ಮಾಹೇಶ್ವರ ಸತ್ರಕ್ಕಾಗಿ ವೀರಗೊಗ್ಗಿ ದೇವರಸ ಎಂಬುವವನಿಗೆ ಭೂದಾನ ಮಾಡಿದನೆಂದು ತಿಳಿಸುವುದು (ಸೌಇಇ xv : ೫೯). ಮತ್ತೊಂದು ಶಾಸನ ಕಲಚೂರಿ ಸೋವಿದೇವನ ಕಾಲಕ್ಕೆ ಸೇರಿದ್ದು, ಇಬ್ಬರು ವ್ಯಕ್ತಿಗಳನ್ನು ಉಲ್ಲೇಖಿಸುತ್ತದೆ (ಸೌಇಇ xv : ೧೩೧). ಈ ಮೇಲಿನ ಶಾಸನಗಳಿಂದ ಪ್ರಸ್ತುತ ದೇವಾಲಯ ಮೂಲತಃ ಬೊಮ್ಮೇಶ್ವರ ದೇವಾಲಯವಾಗಿದ್ದು, ವಿಜಯನಗರೋತ್ತರ ಕಾಲಕ್ಕೆ ವೀರಭದ್ರನ ದೇವಾಲಯವಾಗಿ ಮಾರ್ಪಾಡಾಗಿರುವಂತೆ ಕಂಡುಬರುತ್ತದೆ.

ಊರು ಅಣ್ಣಿಗೇರಿ
ಸ್ಥಳ ಕುರುಬಗೇರಿ
ಸ್ಮಾರಕ ಬನಶಂಕರಿ ದೇವಾಲಯ
ಅಭಿಮುಖ ಪೂರ್ವ
ಕಾಲ ಕ್ರಿ. ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ತ್ರಿಕೂಟ ರಚನೆಯದು. ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿದ್ದು, ಉಳಿದೆರಡು ಗರ್ಭಗೃಹಗಳು ನವರಂಗಕ್ಕೆ ಹೊಂದಿಕೊಂಡಂತೆ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ನಿರ್ಮಾಣಗೊಂಡಿವೆ. ಅಂತರಾಳದ್ವಾರದ ಮೇಲೆ ಮಕರತೋರವಿದ್ದು, ನಡುವೆ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣುವಿನ ಉಬ್ಬುಶಿಲ್ಪಗಳನ್ನು ಕಡೆಯಲಾಗಿದೆ. ದ್ವಾರದ ಇಕ್ಕೆಲಗಳಲ್ಲಿ ಸುಂದರವಾದ ಹಾಗೂ ಬಾಗಿಲಳತೆಯ ಜಾಲಂಧ್ರಗಳಿವೆ. ನವರಂಗದಲ್ಲಿರುವ ದೇವಕೋಷ್ಠಗಳ ಮೇಲೆ ದ್ರಾವಿಡಶೈಲಿಯ ಶಿಖರಗಳ ಅಲಂಕರಣವುಂಟು. ನಡುವಿನ ನಾಲ್ಕು ಕಂಬಗಳು ತಿರುಗಣೆಯಂತ್ರದಿಂದ ಕಡೆದ ದುಂಡನೆಯ ಆಕಾರದವು. ಭುವನೇಶ್ವರಿಭಾಗ ಸಪಾಟಾಗಿದೆ. ನವರಂಗದ ಪೂರ್ವಗೋಡೆ ಮತ್ತು ದ್ವಾರ ಬಿದ್ದು ಹೋಗಿದೆ. ಅಧಿಷ್ಠಾನ ಭಗ್ನಗೊಂಡಿದ್ದು, ಹೊರಭಿತ್ತಿ ಬಿದ್ದುಹೋಗಿದೆ. ಗರ್ಭಗೃಹಗಳ ಮೇಲೆ ಮೆಟ್ಟಿಲಾಕಾರದ ಸಿಮೆಂಟಿನ ಕುಬ್ಜ ಶಿಖರಗಳನ್ನು ನಿರ್ಮಿಸಿದ್ದಾರೆ. ಹೊರಭಾಗದಲ್ಲಿ ವಾಸ್ತುಭಾಗಗಳು ಚೆಲ್ಲಾಡಿವೆ.

ಮುಖ್ಯ ಗರ್ಭಗೃಹದಲ್ಲಿ ಲಿಂಗದ ಬ್ರಹ್ಮಭಾಗದ ಮೇಲೆ ಪಾಣಿಪೀಠವಿಟ್ಟು, ಅದರ ಮೇಲೆ ನಂತರದ ಕಾಲದ ಭೈರವಿ ಶಿಲ್ಪವನ್ನಿಡಲಾಗಿದೆ. ದೇವಿಯು ತ್ರಿಶೂಲ, ಖಡ್ಗ, ಡಮರು ಮತ್ತು ಬಟ್ಟಲನ್ನು ಹಿಡಿದಿದ್ದಾಳೆ. ದಕ್ಷಿಣದ ಗರ್ಭಗೃಹದಲ್ಲಿ ಲಿಂಗವನ್ನು ಹಾಗೂ ಉತ್ತರದ ಗರ್ಭಗೃಹದಲ್ಲಿ ಲಿಂಗದ ಬ್ರಹ್ಮ ಭಾಗವನ್ನು ಕಾಣಬಹುದು. ಈ ವಿವರಗಳಿಂದ ದೇವಾಲಯ ಮೂಲತಃ ಶಿವಾಲಯವಾಗಿತ್ತೆಂದು ಸ್ಪಷ್ಪವಾಗುವುದು. ಅಲ್ಲಿರುವ ಭೈರವಿ ಶಿಲ್ಪದಿಂದಾಗಿ ಈ ದೇವಾಲಯವನ್ನು ಬನಶಂಕರಿ ದೇವಾಲಯವೆಂದು ಕರೆಯಲಾಗಿದೆ.

ಗುಡಿ ಎದುರು ಕಂಬದ ಮೇಲೆ ಬಾದಾಮಿ ಚಾಲುಕ್ಯರ ಇಮ್ಮಡಿ ಕೀರ್ತಿವರ್ಮನ ಕ್ರಿ.ಶ.೭೫೦-೫೨ ರ ಶಾಸನವಿದೆ. ಕಲಿಯಮ್ಮ ಎಂಬುವನು ಜೇಬುಳಗೇರಿಯನ್ನಾಳುವಾಗ ಚೇದಿಯ (ಜಿನಮಂದಿರ) ಕಟ್ಟಿಸಿದ ಉಲ್ಲೇಖವುಂಟು (ಸೌಇಇ XI-i : ೫).ಇಲ್ಲಿನ ಕ್ರಿ.ಶ. ೧೧೮೬-೮೮ ರ ಶಾಸನವು, ಬೆಳ್ವೊಲನಾಡಿನ ಪೆರ್ಗಡೆ ದಂಡನಾಯಕ ಕೇಶವ ಭಟ್ಟಯ್ಯನು ಅಣ್ಣಿಗೇರಿಯ ಐದು ಬ್ರಹ್ಮಪುರಿಗಳನ್ನು ಬ್ರಾಹ್ಮಣರಿಗೆ ದಾನಮಾಡಿದನೆಂದಿದೆ (ಸೌಇಇ xv : ೭೨).ಅಣ್ಣಿಗೇರಿಯು ೧೨ನೇ ಶತಮಾನದಲ್ಲೇ ದೊಡ್ಡ ಪಟ್ಟಣವಾಗಿದ್ದು, ಐದು ಬ್ರಹ್ಮಪುರಿಗಳನ್ನು ಒಳಗೊಂಡಿದ್ದುದು ಗಮನಾರ್ಹ ಸಂಗತಿ.

ಊರು ಅಣ್ಣಿಗೇರಿ
ಸ್ಥಳ ಗಳಗಿಯರ ಓಣಿ
ಸ್ಮಾರಕ ರಾಮಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ಇತ್ತೀಚೆಗೆ ನಿರ್ಮಾಣಗೊಂಡ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳಿರುವ ದೇವಾಲಯವು ಆರ್.ಸಿ.ಸಿ. ರಚನೆಯಾಗಿದೆ. ಗರ್ಭಗೃಹದಲ್ಲಿ ಭಗ್ಮಗೊಂಡಿರುವ ಲಿಂಗವಿದ್ದು, ಅದರ ಒಡೆದ ಅಂಚಿನಭಾಗಗಳನ್ನು ಸಿಮೆಂಟಿನಿಂದ ತುಂಬಲಾಗಿದೆ. ಸಭಾಮಂಟಪದಲ್ಲಿ ಇತ್ತೀಚಿನ ಗಣಪತಿ, ಅನ್ನಪೂರ್ಣೇಶ್ವರಿ, ದುರ್ಗ ಮತ್ತು ಭಗ್ನಗೊಂಡಿರುವ ನಂದಿಶಿಲ್ಪಗಳಿವೆ.

ಊರು ಅಣ್ಣಿಗೇರಿ
ಸ್ಥಳ ಡಂಬಳ ಮಠದ ಆವರಣ
ಸ್ಮಾರಕ ವೀರಭದ್ರೇಶ್ವರ ಗುಡಿ
ಅಭಿಮುಖ ಉತ್ತರ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಅಂತರಾಳಗಳಿಂದ ಕೂಡಿದ್ದು, ದಿಂಡುಗಳಲ್ಲಿನ ರಚನೆಯದು. ಬಾಗಿಲುವಾಡಗಳನ್ನು ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ ಕಡೆಯಲಾಗಿದೆ. ಬಾಗಿಲಿನ ಹೊಸ್ತಿಲುಗಳು ಪ್ರಾಚೀನವಾದವು. ಗರ್ಭಗೃಹದಲ್ಲಿ ಹಳೆಯ ಪಾಣಿಪೀಠದ ಮೇಲೆ ವೀರಭದ್ರದೇವರ ಶಿಲ್ಪವಿದೆ. ಅಂತರಾಳದಲ್ಲಿ ಲಿಂಗದ ಮೂರು ರುದ್ರಭಾಗಗಳಿವೆ. ನಂದಿಶಿಲ್ಪ ಇತ್ತೀಚಿನದು. ಹೊರಭಾಗದಲ್ಲಿ ಭಗ್ನಗೊಂಡಿರುವ ಲಿಂಗವನ್ನು ಕಾಣಬಹುದು. ಈ ಎಲ್ಲ ಪ್ರಾಚ್ಯಾವಶೇಷಗಳಿಂದ ಬಹುಶಃ ಇಲ್ಲಿ ಪ್ರಾಚೀನ ಶಿವಾಲಯವಿದ್ದಿರಬಹುದು. ಅದು ಹಾಳಾದ ನಂತರ ಈಗಿನ ದೇವಾಲಯವನ್ನು ನಿರ್ಮಿಸಿರಬೇಕು.

೧೦

ಊರು ಅಣ್ಣಿಗೇರಿ
ಸ್ಥಳ ಹಳೆ ಅಮೃತೇಶ್ವರ ನಗರ
ಸ್ಮಾರಕ ಹಳೆ ಅಮೃತೇಶ್ವರ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಕೆಲವು ದಶಕಗಳ ಹಿಂದೆ ನಿರ್ಮಾಣಗೊಂಡಿರುವ ದೇವಾಲಯವಿದು. ಗರ್ಭಗೃಹ ಮತ್ತು ತೆರೆದ ಮಂಟಪಗಳಿರುವ ದೇವಾಲಯದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಎರಡು ಕಂಬಗಳನ್ನು ಅಳವಡಿಸಿದ್ದಾರೆ. ಗರ್ಭಗೃಹದ ಚಾವಣಿಯಲ್ಲಿ ಶಿಲಾಚಪ್ಪಡಿಗಳನ್ನು ಕೋನಾಕಾರದಲ್ಲಿ ಅಡ್ಡಡ್ಡವಾಗಿ ಪೇರಿಸಲಾಗಿದೆ. ತೆರದಮಂಟಪ ಮಾಳಿಗೆ ಶೈಲಿಯ ರಚನೆಯದು. ಗರ್ಭಗೃಹದಲ್ಲಿರುವ ಲಿಂಗ ನೆಲಮಟ್ಟದಲ್ಲಿದೆ. ಲಿಂಗದ ಹಿಂಭಾಗದಲ್ಲಿ ಏಳುಕುದುರೆಗಳ ಲಾಂಛನದ ಶಿಲ್ಪಾವಶೇಷವನ್ನು ಕಾಣಬಹುದು. ಹಾಗೂ ಇತ್ತೀಚಿನ ದೇವಿಶಿಲ್ಪವೊಂದಿದೆ. ಹೊರಗೆ ಹಳೆಯ ಲಿಂಗದ ರುದ್ರಭಾಗವನ್ನು ನೆಲದಲ್ಲಿ ನಿಲ್ಲಿಸಲಾಗಿದೆ. ಜೊತೆಗೆ ತಿರುಗಣೆ ಯಂತ್ರದಿಂದ ಕಡೆದ ದುಂಡಾದ ಕಂಬಗಳು ಹಾಗೂ ಶಾಸನವೊಂದು ಕಂಡುಬರುತ್ತವೆ. ಈ ಎಲ್ಲಾ ಪ್ರಾಚ್ಯಾವಶೇಷಗಳಿಂದ ಇಲ್ಲಿ ಹಳೆಯ ದೇವಾಲಯವಿತ್ತೆಂಬುದು ಸ್ಪಷ್ಟವಾಗುತ್ತದೆ. ಅದು ಯಾವುದು ಎಂದು ಗುರುತಿಸಲಾಗಿಲ್ಲ.

೧೧

ಊರು ಅಣ್ಣಿಗೇರಿ
ಸ್ಥಳ ಸಂಗಾಪುರ ಪ್ರದೇಶ
ಸ್ಮಾರಕ ಹಾಳು ಗುಡಿ
ಅಭಿಮುಖ ಉತ್ತರ
ಕಾಲ ಕ್ರಿ.ಶ.೧೬-೧೭ನೆಯ ಶತಮಾನ
ಶೈಲಿ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಹಳೆಯ ದೇವಾಲಯವೊಂದರ ವಾಸ್ತು ಅವಶೇಷಗಳನ್ನು ಬಳಸಿಕೊಂಡು ಈ ಪುಟ್ಟ ಕಟ್ಟಡವನ್ನು ನಿರ್ಮಿಸಲಾಗಿದೆ. ಕೊಠಡಿ ಮತ್ತು ತೆರೆದಮಂಟಪಗಳಿರುವ ಈ ಕಟ್ಟಡವು ಬಳಪದ ಕಲ್ಲಿನ ರಚನೆ. ಕೊಠಡಿಯ ಬಾಗಿಲತೋರಣದಲ್ಲಿ ನಾಗರಶೈಲಿಯ ಶಿಖರಗಳ ಅಲಂಕರಣವಿದೆ. ಮಂಟಪದಲ್ಲಿ ಎರಡು ದುಂಡನೆಯ ಕಂಬಗಳಿವೆ. ಕಟ್ಟಡದ ಸುತ್ತಲೂ ಇತರ ವಾಸ್ತು ಅವಶೇಷಗಳು ಚೆಲ್ಲಾಡಿವೆ. ಬಲಭಾಗದಲ್ಲಿ ಶಿಕ್ಕೆ ದೇಸಾಯಿ ಮನೆತನದವರ ಸಮಾಧಿಗಳನ್ನು ಕಾಣಬಹುದು. ಬಹುಶಃ ಈ ಹಾಳುಗುಡಿ ಸಮಾಧಿ ಸ್ಮಾರಕವಾಗಿರಬಹುದು.

ಪಕ್ಕದಲ್ಲಿ ಅಪೂರ್ಣ ರಚನೆಯ ಜಿನಶಿಲ್ಪವೊಂದು ನೆಲದಲ್ಲಿ ಬಿದ್ದಿದೆ. ಅಲ್ಲದೆ ಶಾಸನೋಕ್ತ ನಿಷದಿಕಲ್ಲು ಮತ್ತು ಸಪ್ತಮಾತೃಕೆಯರ ಲಾಂಛನಗಳಿರುವ ಪಾಣಿಪೀಠ ಕಂಡುಬರುತ್ತವೆ.

೧೨

ಊರು ಅಣ್ಣಿಗೇರಿ
ಸ್ಥಳ ಕುರುಬರ ಓಣಿ
ಸ್ಮಾರಕ ಹನುಮಂತದೇವರ ಗುಡಿ
ಅಭಿಮುಖ ಪೂರ್ವ
ಕಾಲ ವಿಜಯನಗರೋತ್ತರ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಮಾಳಿಗೆಶೈಲಿಯಲ್ಲಿದ್ದು, ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಸುಮಾರು ಏಳುಅಡಿ ಎತ್ತರದ ಆಂಜನೇಯ ಶಿಲ್ಪವಿದೆ. ಹೊರಭಾಗದಲ್ಲಿ ಗರುಡಲಾಂಛನದ ಪಾಣಿಪೀಠದ ಮೇಲಿರುವ ವಿಷ್ಣುವಿನ ಶಿಲ್ಪ ಸಪ್ತಮಾತೃಕೆಯರ ಶಿಲ್ಪಫಲಕ, ಪದ್ಮಾಸನದಲ್ಲಿ ಕುಳಿತ ರುಂಡವಿಲ್ಲದ ಭಗ್ನಶಿಲ್ಪ (ಆಭರಣಗಳ ಅಲಂಕರಣವಿದೆ), ವಾಸ್ತುಭಾಗಗಳು ಮತ್ತು ಶಾಸನಗಳು ಕಂಡುಬರುತ್ತವೆ. ದೇವಾಲಯದ ಪ್ರವೇಶದ್ವಾರದಲ್ಲಿ ಲಿಂಗದ ಬ್ರಹ್ಮಭಾಗ, ವಿಷ್ಣು ಹಾಗೂ ಮುಂದಿರುವ ಬಸವಣ್ಣನ ಗುಡಿಯಲ್ಲಿ ಭಗ್ನಗೊಂಡಿರುವ ನಂದಿಶಿಲ್ಪಗಳಿವೆ. ಈ ಎಲ್ಲ ಶಿಲ್ಪಾವಶೇಷಗಳು, ಪ್ರಾಚೀನ ಶಿವಾಲಯವೊಂದಕ್ಕೆ ಸಂಬಂಧಿಸಿದ್ದು, ಅದು ನಶಿಸಿದ ನಂತರ ಅಲ್ಲಲ್ಲಿ ಬಿದ್ದಿವೆ.

ಹನುಮಂತ ದೇವಾಲಯದಲ್ಲಿರುವ ಕ್ರಿ.ಶ. ೧೧೫೭ ರ ಬಿಜ್ಜಳನ ಶಾಸನವು, ದಂಡನಾಯಕ ಶ್ರೀಧರಯ್ಯನು ಧೋರೇಶ್ವರ ದೇವರ ಜೀರ್ಣೋದ್ಧಾರಕ್ಕೆ ಭೂದಾನ ಮಾಡಿದನೆಂದಿದೆ (ಸೌಇಇ xv : ೯೬). ಇದರಿಂದ ಮೇಲೆ ಹೇಳಿದ ಶಿಲ್ಪಾವಶೇಷಗಳು ಧೋರೇಶ್ವರ ದೇವಾಲಯಕ್ಕೆ ಸಂಬಂಧಿಸಿರುವುದು ಸುಸ್ಪಷ್ಟ. ಹಾಗೂ ಈ ದೇವಾಲಯ ಬಿದ್ದುಹೋದ ನಂತರ, ಅದೇ ಸ್ಥಳದಲ್ಲಿ ಈಗಿನ ಹನುಮಂತದೇವರ ಗುಡಿಯನ್ನು ನಿರ್ಮಿಸಿರಬೇಕು. ಇಲ್ಲಿನ ಮತ್ತೊಂದು ಶಾಸನ ಯಾದವ ಕನ್ನರದೇವನ ಕಾಲಕ್ಕೆ ಸೇರಿದ್ದು, ಇದೇ ಊರಿನ ಅಮೃತೇಶ್ವರ ದೇವಾಲಯಕ್ಕೆ ಬಿಟ್ಟ ದಾನವನ್ನು ಉಲ್ಲೇಖಿಸುತ್ತದೆ.

ಸಮೀಪದ ಕಂಬದ ಹನುಮಪ್ಪನ ಗುಡಿಯಲ್ಲಿ ತಿರುಗಣೆ ಯಂತ್ರದಿಂದ ಕಡೆದ ದುಂಡಾದ ಚಾಳುಕ್ಯ ಶೈಲಿಯ ಕಂಬಗಳನ್ನು ಕಾಣಬಹುದು. ಬಹುಶಃ ಈ ಕಂಬಗಳನ್ನು ಬಿದ್ದುಹೋದ ಧೋರೇಶ್ವರ ದೇವಾಲಯದಿಂದ ತಂದು ನಿಲ್ಲಿಸಿರಬಹುದು.

೧೩

ಊರು ಅಡ್ನೂರು
ಸ್ಥಳ ಊರ ಮುಂಭಾಗ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯ ಇತ್ತೀಚಿನದು. ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿರುವ ದೇವಾಲಯದಲ್ಲಿ ಹಳೆಯ ಲಿಂಗವಿದೆ. ಹೊರಭಾಗದಲ್ಲಿ ನಂದಿ, ಗಣೇಶ, ನಾಗ ಮತ್ತೀತರ ಶಿಲ್ಪಾವಶೇಷಗಳಿವೆ. ಈ ದೇವಾಲಯದ ಹತ್ತಿರ ಎತ್ತರವಾದ ಸ್ತಂಭವಿದ್ದು, ಅದರ ಮೇಲೆ ನಂದಿ ಶಿಲ್ಪವಿದೆ.

೧೪

ಊರು ಅಮರಗೋಳ
ಸ್ಥಳ ಊರ ಈಶಾನ್ಯ ಮೂಲೆ
ಸ್ಮಾರಕ ಶಂಕರಲಿಂಗ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ಇಲ್ಲಿನ ದೇವಾಲಯವು ನಾಶಹೊಂದಿದ್ದು, ಅದೇ ಸ್ಥಳದಲ್ಲಿ ಲಿಂಗ, ಭಗ್ನಗೊಂಡ ನಂದಿ, ಭಗ್ನಗೊಂಡ ಗಣಪತಿ, ನಾಗ, ವಿಷ್ಣು ಹಾಗೂ ಶಾಸನದ ಭಗ್ನಾವಶೇಷಗಳು ಕಂಡುಬರುತ್ತವೆ. ಇದರಿಂದ ಅಮರಗೋಳದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯವಿತ್ತೆಂಬುದು ಸ್ಪಷ್ಟವಾಗುವುದು.

೧೫

ಊರು ಅರಹಟ್ಟಿ
ಸ್ಥಳ ಬೆಣ್ಣೆ ಹಳ್ಳದ ದಂಡೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಭಗ್ನಗೊಂಡಿರುವ ಕಲ್ಲು ಮತ್ತು ಮಣ್ಣಿನ ಕೊಠಡಿಯೇ ದೇವಾಲಯ. ಆದರೆ ಚಾವಣಿ ಇಲ್ಲ. ಗರ್ಭಗೃಹದಲ್ಲಿ ಹಳೆಯ ಲಿಂಗವಿದೆ. ಲಿಂಗವು ಬ್ರಹ್ಮಭಾಗ ಮತ್ತು ರುದ್ರಭಾಗಗಳನ್ನಷ್ಟೆ ಹೊಂದಿದೆ. ಅಂದರೆ ಯೋನಿಪೀಠವಿಲ್ಲ. ಗರ್ಭಗೃಹದ್ವಾರದ ಹೊಸ್ತಿಲು ಹಳೆಯ ದೇವಾಲಯಕ್ಕೆ ಸಂಬಂಧಿಸಿದೆ. ಇದರಿಂದ ಇಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯವಿದ್ದು, ಅದು ಹಾಳಾದ ನಂತರ ಮೇಲೆ ಹೇಳಿದ ಕೊಠಡಿಯನ್ನು ನಿರ್ಮಿಸಿದಂತೆ ಕಂಡುಬರುತ್ತದೆ. ಹೊಸ್ತಿಲು ಭಾಗವು ಕಮಲ, ಲತಾಬಳ್ಳಿ ಮತ್ತು ಮಂಡಿ ಮೇಲೆ ಕೈಯೂರಿ ಕುಳಿತ ಸೂಕ್ಷ್ಮಶಿಲ್ಪಗಳನ್ನು ಒಳಗೊಂಡಿದೆ.

ಹೊರಭಾಗದಲ್ಲಿ ಒರಟು ರಚನೆಯ ನಂದಿ ಶಿಲ್ಪವಿದೆ. ಪಕ್ಕದಲ್ಲಿ ಹರಿಯುವ ಬೆಣ್ಣೆಹಳ್ಳವು, ಪ್ರವಾಹದ ಸಂದರ್ಭದಲ್ಲಿ ಎರಡೂದಡಗಳನ್ನು ಕೊರೆದು ತನ್ನ ಪಾತ್ರವನ್ನು ವಿಸ್ತರಿಸಿಕೊಂಡಿರುವುದನ್ನು ಕಾಣಬಹುದು. ಬಹುಶಃ ಈ ಕಾರಣದಿಂದಲೇ ಹಳೆಯ ದೇವಾಲಯ ಹಾಳಾಗಿರಬಹುದು. ಈ ಊರಿನ ಕಲ್ಲಪ್ಪನ ಗುಡಿ ಮುಂದೆ ವೀರಗಲ್ಲಿನ ತುಂಡೊಂದು ಬಿದ್ದಿದೆ.