೩೧

ಊರು ಜಾವೂರ
ಸ್ಥಳ ಕೆರೆ ಹತ್ತಿರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆ ಕಟ್ಟಡದ ದೇವಾಲಯವಿದು. ಗಭೃಗೃಹ ಮತ್ತು ಸಭಾಮಂಟಪಗಳಿರುವ ದೇವಾಲಯದಲ್ಲಿ ಪ್ರಾಚೀನ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಇದರಿಂದ ಇಲ್ಲಿ ಪ್ರಾಚೀನ ಶಿವಾಲಯವಿತ್ತೆಂದು ಸ್ಪಷ್ಟವಾಗುವುದು.

ಈ ಊರಿನ ಹನುಮಂತದೇವರ ಗುಡಿ ಮುಂದಿರುವ ಕಂಬದ ಶಾಸನವು ಕ್ರಿ.ಶ. ೧೩ನೆಯ ಶತಮಾನಕ್ಕೆ ಸೇರಿದ್ದು, ಬೀಚಿಶೆಟ್ಟಿ ಎಂಬುವನು ಸಕಳಚಂದ್ರಭಟ್ಟಾರಕ ದೇವರಿಗೆ ಜಾವೂರ ಗ್ರಾಮವನ್ನು ಪುನರ್ದತ್ತಿಯಾಗಿ ನೀಡಿದನೆಂದು ತಿಳಿಸುತ್ತದೆ (ಸೌಇಇ xv : ೬೮೭).

೩೨

ಊರು ತಡಹಾಳ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯ ಮಾಳಿಗೆ ರಚನೆಯದು. ಹಳೆಯ ದೇವಾಲಯ ಬಿದ್ದುಹೋದ ನಂತರ ಇದನ್ನು ನಿರ್ಮಿಸಿದ್ದಾರೆ. ಗರ್ಭಗೃಹ ಮತ್ತು ಸಭಾಮಂಟಪಗಳಿವೆ. ಹೊರಗೋಡೆಯನ್ನು ಇಟ್ಟಿಗೆ ಮತ್ತು ಸಿಮೆಂಟಿನಿಂದ ನಿರ್ಮಿಸಿ ಜೀರ್ಣೋದ್ಧಾರಗೊಳಿಸಿದ್ದಾರೆ.

ಗರ್ಭಗೃಹದಲ್ಲಿರುವ ಲಿಂಗ ಹಳೆಯದು. ಗಾತ್ರದಲ್ಲಿ ದೊಡ್ಡದು. ಲಿಂಗದ ವಿಷ್ಣು ಭಾಗವನ್ನು ಸಿಮೆಂಟಿನಿಂದ ಪ್ಲಾಸ್ಟರ್ ಮಾಡಲಾಗಿದೆ. ಲಿಂಗದ ಬಳಿ ಕಮಲ ಹಿಡಿದು ಕುಳಿತ ಪುರುಷಶಿಲ್ಪವಿದೆ. ಹೊರಗೆ ನಾಗ, ಭೈರವ, ಭಗ್ನಗೊಂಡಿರುವ ಮಹಾವೀರನ ಶಿಲ್ಪ ಹಾಗೂ ಹಳೆಯ ದೇವಾಲಯದ ಅಲಂಕೃತ ಹೊಸ್ತಿಲು ಭಗ್ನಾವಶೇಷಗಳು ಕಂಡುಬರುತ್ತವೆ. ಈ ಊರಿನಲ್ಲಿ ಜೈನಬಸದಿ ಇದ್ದ ಬಗ್ಗೆ ಸೂಚನೆಗಳಿವೆ.

೩೩

ಊರು ತಲಿಮೊರಬ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಇತ್ತೀಚೆಗೆ ನಿರ್ಮಿಸಿರುವ ದೇವಾಲಯವಿದು. ಗರ್ಭಗೃಹವು ಮತ್ತು ಸಭಾಮಂಟಪಗಳಿರುವ ದೇವಾಲಯದಲ್ಲಿ ಪ್ರಾಚೀನ ಲಿಂಗವಿದೆ. ಗರ್ಭಗೃಹವು ಗುಮ್ಮಟಾಕಾರದ ಶಿಖರವನ್ನು ಹೊಂದಿದೆ. ಉಳಿದಂತೆ ದೇವಾಲಯವು ಮಾಳಿಗೆಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ಶಿಸ್ತಾದ ಮರದ ಜಂತಿ, ತೊಲೆ ಮತ್ತು ಕಂಬಗಳನ್ನು ಬಳಸಿದ್ದಾರೆ. ಮುಂಭಾಗದಲ್ಲಿರುವ ಪ್ರವೇಶದ್ವಾರವು ಆವರಣಗೋಡೆಯಿಂದ ಕೂಡಿದೆ.

ಗರ್ಭಗೃಹದಲ್ಲಿ ಲಿಂಗ ಮತ್ತು ವಿಷ್ಣು ಶಿಲ್ಪಗಳಿವೆ. ಇಲ್ಲಿರುವ ಲಿಂಗದ ರುದ್ರಭಾಗವನ್ನು ಕಾಶಿಯಿಂದ ತಂದಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ. ಸಭಾಮಂಟಪದಲ್ಲಿರುವ ನಂದಿ ಶಿಲ್ಪ ಇತ್ತೀಚಿನದು. ಗೋಡೆಯಲ್ಲಿ ಗಜಲಕ್ಷ್ಮಿ, ಗಣಪತಿ ಮತ್ತು ಆಂಜನೇಯ ಶಿಲ್ಪಗಳು ಕಂಡುಬರುತ್ತವೆ. ಈ ದೇವಾಲಯದ ಹತ್ತಿರವಿರುವ ಸಿದ್ಧಲಿಂಗೇಶ್ವರ ಮತ್ತು ರಾಮಲಿಂಗೇಶ್ವರ ಎಂಬ ಸಣ್ಣ ಗುಡಿಗಳಲ್ಲಿ ಪ್ರಾಚೀನ ಲಿಂಗಗಳು ಕಂಡುಬರುತ್ತವೆ. ಈ ಎಲ್ಲ ಶಿಲ್ಪಾವಶೇಷಗಳು, ಇಲ್ಲಿ ಪ್ರಾಚೀನ ಶಿವಾಲಯ ಇತ್ತೆಂಬುದನ್ನು ಸ್ಪಷ್ಟಪಡಿಸುತ್ತವೆ.

ಈ ಊರಿನ ಪಂಚಮುಖಿ ಹನುಮಂತದೇವರ ಗುಡಿಯಲ್ಲಿರುವ ಕ್ರಿ.ಶ.೧೮೪೧ ರ ಶಾಸನವು, ಶ್ರೀದತ್ತಾತ್ರೇಯ ಅವಧೂತ ಎಂದು ಉಲ್ಲೇಖಿಸಿದೆ (ಸೌಇಇ xv : ೭೩೩).

೩೪

ಊರು ತಿರ್ಲಾಪುರ
ಸ್ಥಳ ಊರ ನಡುವೆ
ಸ್ಮಾರಕ ಮಾರುತಿ ದೇವಾಲಯ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ
ಸಂರಕ್ಷಣೆ

ಮಾರುತಿ ದೇವಾಲಯದ ಆವರಣದಲ್ಲಿ ಲಕ್ಷ್ಮಿನಾರಾಯಣ, ವೀರಭದ್ರ, ರಾಮದೇವರು, ಈಶ್ವರ, ಗಣೇಶ, ಪಾಂಡುರಂಗ ಮತ್ತು ಹೇಮರಡ್ಡಿ ಮಲ್ಲಮ್ಮನ ಬಿಡಿ ದೇವಾಲಯಗಳಿವೆ. ಈ ದೇವಾಲಯಗಳು ಮಾಳಿಗೆ ರಚನೆಯಾಗಿದ್ದು, ಶಿಸ್ತಾದ ಮರದ ಜಂತಿ, ತೊಲೆ ಮತ್ತು ಕಂಬಗಳನ್ನು ಬಳಸಿ ನಿರ್ಮಿಸಲಾಗಿದೆ. ಆವರಣದ ಪ್ರವೇಶದ್ವಾರ ದಕ್ಷಿಣಕ್ಕಿದೆ.

ಮೇಲೆ ಹೇಳಿದ ಗುಡಿಗಳಲ್ಲಿರುವ ಶಿಲ್ಪಗಳು ಇತ್ತೀಚಿನವು. ಇದೇ ಆವರಣದಲ್ಲಿರುವ ಬನ್ನಿಮರದ ಕೆಳಗೆ ಸೂರ‍್ಯನ ಪಾಣಿಪೀಠ, ನಂದಿ ಮತ್ತಿತರ ಪ್ರಾಚೀನ ಶಿಲ್ಪಾವಶೇಷಗಳಿವೆ. ಇದರಿಂದ ಇಲ್ಲಿ ಪ್ರಾಚೀನ ದೇವಾಲಯವಿತ್ತೆಂಬ ಸೂಚನೆಗಳು ದೊರೆಯುತ್ತವೆ. ಆವರಣದ ಮಧ್ಯದಲ್ಲಿ ಎತ್ತರವಾದ ಶಿಲಾಸ್ತಂಭವನ್ನು ಕಾಣಬಹುದು.

ಈ ಊರಿನ ದಕ್ಷಿಣಕ್ಕಿರುವ ಹೊಲದಲ್ಲಿ ಸು. ೧೬ನೆಯ ಶತಮಾನದ ಶಾಸನವಿದ್ದು, ಸೀರೆಕೋಣೆ ಗ್ರಾಮಕ್ಕೆ ವಿಠಲಾಪುರವೆಂಬ ಹೆಸರಿತ್ತೆಂದು ತಿಳಿಸುವುದು (ಸೌಇಇxv : ೭೧೨).

೩೫

ಊರು ತುಪ್ಪದ ಕುರಹಟ್ಟಿ
ಸ್ಥಳ ಊರ ನಡುವೆ
ಸ್ಮಾರಕ ಶಂಕರಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ.೯-೧೦ನೆಯ ಶತಮಾನ
ಶೈಲಿ ರಾಷ್ಟ್ರಕೂಟ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹ ಮತ್ತು ಅಂತರಾಳಗಳು ಪ್ರಾಚೀನ ರಚನೆಗಳಾಗಿದ್ದು, ಸಭಾಮಂಟಪ ಮಾಳಿಗೆ ರಚನೆಯದು. ಗರ್ಭಗೃಹ ಮತ್ತು ಅಂತರಾಳಗಳ ಅಧಿಷ್ಠಾನವೂ ಸೇರಿದಂತೆ ಹೊರಭಿತ್ತಿ ಜೀರ್ಣೋದ್ಧಾರಗೊಂಡಿದೆ. ಗರ್ಭಗೃಹದ ಒಳಭಾಗದಲ್ಲಿ ಭಿತ್ತಿಗೆ ಹೊಂದಿಕೊಂಡಂತೆ ಮೂರು ದಿಕ್ಕುಗಳಲ್ಲಿ ಎರಡೆರಡು ಹೆಚ್ಚುವರಿ ಕಂಬಗಳನ್ನು ಅಳವಡಿಸಲಾಗಿದೆ. ಗರ್ಭಗೃಹದ್ವಾರವು ಅರ್ಧಕಂಬಗಳ ಅಲಂಕರಣದಿಂದ ಕೂಡಿದ್ದು, ದ್ವಾರಬಂಧನ ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಉಬ್ಬುಶಿಲ್ಪವನ್ನು ಬಿಡಿಸಲಾಗಿದೆ. ಅಂತರಾಳದ್ವಾರದ ಇಕ್ಕೆಲಗಳಲ್ಲಿ ಚೌಕಕಿಂಡಿಗಳ ಅಲಂಕರಣದ ಜಾಲಂಧ್ರಗಳನ್ನು ಅಳವಡಿಸಿದೆ. ಅವುಗಳ ಪಕ್ಕದಲ್ಲಿ ದೇವಕೋಷ್ಠಗಳಿವೆ. ಇದರಿಂದ ನವರಂಗ ಭಾಗವಿತ್ತೆಂಬುದು ಸುಸ್ಪಷ್ಟವಾಗುವುದು. ಅಂದರೆ ನವರಂಗ ಹಳಾದನಂತರ ಈಗಿರುವ ಮಾಳಿಗೆ ಶೈಲಿಯ ಸಭಾಮಂಟಪವನ್ನು ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿ ಎತ್ತರವಾದ ವೇದಿಕೆ ಮೇಲೆ ಲಿಂಗವನ್ನಿಡಲಾಗಿದೆ. ಅಂತರಾಳದಲ್ಲಿ ನಂದಿ ಮತ್ತು ಪತ್ನಿ ಸಮೇತನಾದ ದಕ್ಷಣ ಶಿಲ್ಪಗಳಿವೆ. ಹೊರಭಾಗದಲ್ಲಿ ಮಹಾವೀರ, ಲಿಂಗದ ರುದ್ರಭಾಗ, ಭಗ್ನಗೊಂಡಿರುವ ಸಪ್ತಮಾತೃಕೆಯರ ಶಿಲ್ಪಫಲಕ, ಪಾಣಿಪೀಠ ಮೊದಲಾದ ಶಿಲ್ಪಾವಶೇಷಗಳಿವೆ.

ದೇವಾಲಯದ ಮುಂಭಾಗದಲ್ಲಿರುವ ಶಾಸನದ ಅಕ್ಷರಗಳು ಸವೆದಿದ್ದು, ಅಸ್ಪಷ್ಟವಿದೆ. ಈ ಶಾಸನವನ್ನು ದಾಖಲಿಸುವಾಗ ಮೇಲಿನ ದೇವಾಲಯವನ್ನು ಪಂಚಲಿಂಗೇಶ್ವರ ಗುಡಿ ಎಂದು ಹೆಸರಿಸಿದ್ದಾರೆ. ಉಳಿದೆರಡು ಶಾಸನಗಳು ಹನಮಂತದೇವರ ಗುಡಿ ಮುಂದಿವೆ. ಒಂದು ಶಾಸನ ರಾಷ್ಟ್ರಕೂಟರ ಕಾಲಕ್ಕೆ ಸೇರಿದ್ದು, ಕ್ರಿ.ಶ.೯-೧೦ನೆಯ ಶತಮಾನಕ್ಕೆ ನಿರ್ದೇಶಿಸಲಾಗಿದೆ. ಇದು ದೇವಾಲಯಕ್ಕೆ ನೀಡಿದ ಭೂದಾನವನ್ನು ಉಲ್ಲೇಖಿಸಿದೆ (ಕಲಬುರ್ಗಿ  ದಾ ಜಿ ಶಾ ಸೂ). ಮತ್ತೊಂದು ಶಾಸನ ಕ್ರಿ.ಶ. ೧೧ನೆಯ ಶತಮಾನಕ್ಕೆ ಸೇರಿದದು, ಅಸ್ಪಷ್ಟವಿದೆ.

೩೬

ಊರು ನವಲಗುಂದ
ಸ್ಥಳ ಮಂಜುನಾಥ ನಗರ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ.೯-೧೦ನೆಯ ಶತಮಾನ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಣ್ಣು ಮತ್ತು ಕಲ್ಲುಗಳನ್ನು ಬಳಸಿ ಮಾಳಿಗೆ ಶೈಲಿಯಲ್ಲಿ ನಿರ್ಮಿಸಲಾದ ಕೊಠಡಿಯೇ ದೇವಾಲಯ. ಒಳಗೆ ಪ್ರಾಚೀನ ಲಿಂಗವಿದೆ. ಹೊರಭಾಗದಲ್ಲಿ ಹಳೆಯ ದೇವಾಲಯದ ವಾಸ್ತು ಅವಶೇಷಗಳು ಬಿದ್ದಿವೆ.

ಕೊಠಡಿಯಲ್ಲಿರುವ ಲಿಂಗವು ಸ್ವಯಂಭು ರಚನೆಯಾಗಿದ್ದು, ಬೋದಿಗೆ ಪೀಠದ ಮೇಲಿಡಲಾಗಿದೆ. ಈ ಲಿಂಗದ ರುದ್ರಭಾಗವನ್ನು ಬದಲಾಯಿಸಿದ್ದಾರೆ. ಹೊರಭಾಗದಲ್ಲಿರುವ ನಂದಿಶಿಲ್ಪ ಇತ್ತೀಚಿನದು.

೩೭

ಊರು ನವಲಗುಂದ
ಸ್ಥಳ ವಿನಾಯಕ ಪೇಟೆ
ಸ್ಮಾರಕ ಗಣಪತಿ ದೇವಾಲಯ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಶಿರಸಂಗಿ ಸಂಸ್ಥಾನದ ಅರಸ ಎರಡನೆಯ ಜಾಯಗೊಂಡ ಎಂಬುವನು ಈ ದೇವಾಲಯವನ್ನು ನಿರ್ಮಿಸಿದನೆಂದು ಸ್ಥಳೀಯರು ತಿಳಿಸುತ್ತಾರೆ. ಗರ್ಭಗೃಹ, ಅಂತರಾಳ, ನವರಂಗ ಮತ್ತು ಸಭಾಮಂಟಪಗಳಿರುವ ದೇವಾಲಯವನ್ನು ಕಲ್ಯಾಣ ಚಾಲುಕ್ಯರ ಶೈಲಿಯನ್ನು ಅನುಕರಿಸಿ ನಿರ್ಮಿಸಲಾಗಿದೆ. ಗರ್ಭಗೃಹ ಮತ್ತು ಅಂತರಾಳಗಳ ದ್ವಾರಗಳು ರಚನೆಯಲ್ಲಿ ಈ ಭಾಗದ ವಸತಿ ಗೃಹಗಳ ದ್ವಾರಗಳನ್ನು ಹೋಲುತ್ತವೆ. ಲಲಾಟಬಿಂಬಗಳಲ್ಲಿ ಕಮಲವನ್ನು ಬಿಡಿಸಲಾಗಿದೆ. ನವರಂಗದಲ್ಲಿ ದುಂಡನೆಯ ಕಂಬಗಳಿವೆ. ಮಧ್ಯದಲ್ಲಿ ಎತ್ತರದ ಚೌಕ ವೇದಿಕೆಯಿದ್ದು, ಚಾವಣಿಯ ಭುವನೇಶ್ವರಿಯಲ್ಲಿ ಕಮಲವನ್ನು ಬಿಡಿಸಲಾಗಿದೆ. ದುಂಡನೆಯ ನಾಲ್ಕು ಕಂಬಗಳು ಬಳೆಗಳ ಅಲಂಕರಣವನ್ನು ಹೊಂದಿವೆ. ದೇವಕೋಷ್ಠಗಳಿದ್ದು, ಕಂಬ ಮತ್ತು ಶಿಖರಗಳಿಂದ ಅಲಂಕೃತಗೊಂಡಿವೆ. ನವರಂಗವನ್ನು ಪ್ರವೇಶಿಸಲು ಉತ್ತರ, ದಕ್ಷಿಣ ಮತ್ತು ಪೂರ್ವದಿಕ್ಕುಗಳಲ್ಲಿ ದ್ವಾರಗಳುಂಟು. ಮುಂದಿರುವ ಸಭಾಮಂಟಪವನ್ನು ಸಾಗುವಾನಿ ಮರ ಬಳಸಿ ಮಾಳಿಗೆ ಶೈಲಿಯಲ್ಲಿ ನಿರ್ಮಿಸಿದ್ದಾರೆ. ಇದು ಉಪ್ಪರಿಗೆಯನ್ನು ಹೊಂದಿದ್ದು, ಚಿತ್ತಾಕರ್ಷಕವಾದ ಪ್ರವೇಶದ್ವಾರವನ್ನು ಹೊಂದಿದೆ. ಇಲ್ಲಿ ಈಗ ಶಾಲೆ ನಡೆಯುತ್ತಿದೆ. ಅಧಿಷ್ಠಾನದ ಮೇಲಿರುವ ಹೊರಭಿತ್ತಿ ನಿರಾಡಂಬರವಾಗಿದೆ. ಗರ್ಭಗೃಹದ ಮೇಲೆ ಸಣ್ಣ ಶಿಖರವಿದೆ.

ಗರ್ಭಗೃಹದಲ್ಲಿ ಎತ್ತರದ ಪಾಣಿಪೀಠದ ಮೇಲೆ ಗಣಪತಿ ಶಿಲ್ಪವಿದೆ. ಸುಮಾರು ನಾಲ್ಕು ಅಡಿ ಎತ್ತರವಿರುವ ಗಣಪತಿ ಶಿಲ್ಪಕ್ಕೆ ಕೀರ್ತಿಮುಖದ ಅಲಂಕರಣವುಂಟು.

೩೮

ಊರು ನವಲಗುಂದ
ಸ್ಥಳ ಗುಡ್ಡನಕೇರಿ ಓಣಿ
ಸ್ಮಾರಕ ಗೋವಿಂದರಾಜ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಸರಳ ರಚನೆಯದು. ಗರ್ಭಗೃಹ ಮತ್ತು ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ಅನಂತಶಯನ ಶಿಲ್ಪವಿದ್ದು, ಗಾರೆಯ ಕಮಾನಿನ ಅಲಂಕರಣವನ್ನು ಕಾಣಬಹುದು. ಸಭಾಮಂಟಪದ ಮಧ್ಯದ ತೊಲೆಯಲ್ಲಿ ರಾಮ, ಸೀತೆ, ಆಂಜನೇಯ ಮತ್ತು ಸಪ್ತಋಷಿಗಳ ಉಬ್ಬುಶಿಲ್ಪಗಳುಂಟು. ಚೌಕ ಮತ್ತು ಅಷ್ಟಮುಖ ರಚನೆಯ ಕಂಬಗಳಿವೆ. ದೇವಾಲಯವನ್ನು ಮರಳುಗಲ್ಲಿನಲ್ಲಿ ನಿರ್ಮಿಸಿರುವುದು ಇಲ್ಲಿನ ವಿಶೇಷ. ಮುಂಭಾಗದ ಚಾವಣಿ ಇಳಿಜಾರಾಗಿದ್ದು, ಮೇಲೆ ಕೈಪಿಡಿ ಗೋಡೆಯನ್ನು ನಿರ್ಮಿಸಲಾಗಿದೆ. ಇದರ ಮೇಲೆ ಹೂಜಿಯಾಕಾರದ ಅಲಂಕಾರಿಕ ಕೆತ್ತನೆಗಳಿವೆ. ದೇವಾಲಯದ ಹಿಂಭಾಗದಲ್ಲಿ ದಾಸನಬಾವಿ ಇದೆ.

೩೯

ಊರು ನವಲಗುಂದ
ಸ್ಥಳ ಮಂಜುನಾಥ ನಗರ
ಸ್ಮಾರಕ ನವಿಲೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆ ಕಟ್ಟಡವಾಗಿರುವ ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ೧೧-೧೨ನೆಯ ಶತಮಾನಕ್ಕೆ ಸೇರುವ ಲಿಂಗವಿದೆ. ಲಿಂಗವು ಚೌಕರಚನೆಯದಾಗಿದ್ದು, ಬ್ರಹ್ಮಭಾಗ ನೆಲದೊಳಗಿದೆ. ಸಪ್ತಮಾತೃಕೆಯರ ಶಿಲ್ಪಫಲಕ, ಗಣಪತಿ, ನಂದಿ ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ. ಇವೆಲ್ಲವೂ ಇಲ್ಲಿ ಪ್ರಾಚೀನ ದೇವಾಲಯ ಇತ್ತೆಂಬುದನ್ನು ದೃಢಪಡಿಸುತ್ತವೆ.

೪೦

ಊರು ನವಲಗುಂದ
ಸ್ಥಳ ಹಿರೇಮಠದ ಓಣಿ
ಸ್ಮಾರಕ ವೀರಭದ್ರೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ.೧೭-೧೮ನೆಯ ಶತಮಾನ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಮಾಳಿಗೆ ಶೈಲಿಯ ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಸಭಾಮಂಟಪದಲ್ಲಿ ಮರದ ಕಂಬಗಳನ್ನು ಅಳವಡಿಸಿದ್ದಾರೆ. ಕಂಬಗಳು ಚೌಕರಚನೆಯವು. ಬೋದಿಗೆಯಲ್ಲಿ ತಲೆಕೆಳಗಾದ ಕಮಲದ ಮೊಗ್ಗುಗಳನ್ನು ಬಿಡಿಸಿರುವುದರಿಂದ ಸೌಂದರ‍್ಯ ಇಮ್ಮಡಿಸಿದೆ. ಈ ಭಾಗದ ವಿಜಯನಗರೋತ್ತರ ಶೈಲಿಗೆ ಒಂದು ಉತ್ತಮ ಉದಾಹರಣೆ ಎನ್ನಬಹುದು.

ಗರ್ಭಗೃಹದಲ್ಲಿ ವೀರಭದ್ರದೇವರ ಶಿಲ್ಪವಿದೆ. ಸಭಾಮಂಟಪದ ಗೂಡುಗಳಲ್ಲಿ ನಾಗ, ನಂದಿ ಮತ್ತಿತರ ಶಿಲ್ಪಗಳುಂಟು.

ಈ ದೇವಾಲಯದ ಹಿಂಬದಿಯಲ್ಲಿರುವ ಹಿರೇಮಠದಲ್ಲಿ ಭಾರಿ ಗಾತ್ರದ ಮರದ ಕಂಬಗಳನ್ನು ಅಳವಡಿಸಿದ್ದು, ಸೂಕ್ಷ್ಮ ಕೆತ್ತನೆಗಳ ಅಲಂಕರಣವನ್ನು ಕಾಣಬಹುದು. ಬೋದಿಗೆ ಮತ್ತು ತೊಲೆಗಳಲ್ಲೂ ಸಹ ಅಲಂಕಾರಿಕ ಕೆತ್ತನೆಗಳಿವೆ. ಮಲೆನಾಡಿನ ಮರದ ಕೆತ್ತನೆಯನ್ನು ನೆನಪಿಸುತ್ತವೆ.

೪೧

ಊರು ನವಲಗುಂದ
ಸ್ಥಳ ಗುಡ್ಡನಕೇರಿ ಓಣಿ
ಸ್ಮಾರಕ ವೆಂಕಟೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೭-೧೮ನೆಯ ಶತಮಾನ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಸಭಾಮಂಟಪ ಮತ್ತು ಪ್ರವೇಶಮಂಟಪಗಳನ್ನು ಒಳಗೊಂಡಿದೆ. ಸಭಾಮಂಟಪದಲ್ಲಿ ದುಂಡನೆಯ ಭಾರಿ ಗಾತ್ರದ ಕಂಬಗಳು ಕಂಡುಬರುತ್ತವೆ. ಕಂಬಗಳು ರಚನೆಯಲ್ಲಿ ಕಲ್ಯಾಣ ಚಾಲುಕ್ಯರ ತಿರುಗಣೆಯಂತ್ರದ ಕಂಬಗಳನ್ನೇ ಹೋಲುತ್ತವೆ. ಸಭಾಮಂಟಪದ ಚಾವಣಿಯಲ್ಲಿ ಹಾಗೂ ತೊಲೆಗಳಲ್ಲಿ ಕಮಲಗಳನ್ನು ಅಲಂಕರಣಕ್ಕಾಗಿ ಬಿಡಿಸಲಾಗಿದೆ. ಭಾರಿ ಗಾತ್ರದ ತೊಲೆ, ಕಂಬ ಮತ್ತು ಬೋದಿಗೆಗಳನ್ನು ಬಳಸಿರುವುದು ಸಭಾ ಮಂಟಪದ ವಿಶೇಷ. ಇದರ ಮುಂದಿರುವ ಪ್ರವೇಶಮಂಟಪ ಮಾಳಿಗೆ ಶೈಲಿಯದು. ಮುಂದಿನ ಚಾವಣಿ ಇಳಿಜಾರಾಗಿದ್ದು, ತಗಡನ್ನು ಹೊದಿಸಲಾಗಿದೆ. ಚಾವಣಿಯನ್ನು ಎರಡು ಮರದ ಕಂಬಗಳು ಹೊತ್ತಿವೆ. ಗರ್ಭಗೃಹದ ಮೇಲೆ ನಾಲ್ಕು ಹಂತದ ಶಿಖರವಿದ್ದು, ಕಳಸವನ್ನು ಹೊಂದಿದೆ. ಗರ್ಭಗೃಹದಲ್ಲಿ ವೆಂಕಟೇಶ್ವರ ಹಾಗೂ ಅಮೃತಶಿಲೆಯ ಉಗ್ರನರಸಿಂಹನ ಶಿಲ್ಪಗಳಿವೆ.

ಸುಮಾರು ೧೭-೧೮ನೆಯ ಶತಮಾನದಲ್ಲಿ ಬಂದು ನೆಲೆಸಿರುವ ಪಾಠಕ್‌ ವಂಶದವರು (ಕನೌಜ್‌ ಬ್ರಾಹ್ಮಣರು), ತಿರುಪತಿಗೆ ಹೋಗಲು ಅನಾನುಕೂಲವಾಗಲು, ಇಲ್ಲಿಯೇ ವೆಂಕಟೇಶ್ವರ ದೇವಾಲಯವನ್ನು ನಿರ್ಮಿಸಿದರೆಂದು ಅವರ ವಂಶಿಕರು ತಿಳಿಸುತ್ತಾರೆ. ಈ ಕನೌಜ್‌ ಬ್ರಾಹ್ಮಣರು ಬಹುಶಃ ಮರಾಠ ಸೈನ್ಯದಲ್ಲಿದ್ದು, ನವಲಗುಂದದಲ್ಲಿ ನೆಲೆಸಿದಂತೆ ಕಂಡುಬರುತ್ತದೆ. ಪ್ರಸ್ತುತ ಕೃಷಿಕರಾಗಿದ್ದಾರೆ.

೪೨

ಊರು ನವಲಗುಂದ
ಸ್ಥಳ ಬೆಣ್ಣೆ ಹಳ್ಳದ ಹತ್ತಿರ
ಸ್ಮಾರಕ ಸಿದ್ಧಲಿಂಗೇಶ್ವರ ಗುಡಿ
ಅಭಿಮುಖ ಉತ್ತರ
ಕಾಲ ಕ್ರಿ.ಶ.೧೭-೧೮ನೆಯ ಶತಮಾನ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ತೆರೆದ ಆವರಣದ ನಡುವೆ ಇರುವ ಕೊಠಡಿಯೇ ದೇವಾಲಯ. ಜೀರ್ಣೋದ್ಧಾರಗೊಂಡಿರುವ ಕೊಠಡಿಯಲ್ಲಿ ಪ್ರಾಚೀನ ಕಾಲಕ್ಕೆ ಸೇರುವ ಲಿಂಗವಿದೆ. ಹೊರಗೋಡೆಯನ್ನು ಗಾರೆಯಿಂದ ಮುಚ್ಚಲಾಗಿದೆ. ಕೊಠಡಿಯ ಮೇಲೆ ಮೆಟ್ಟಿಲಾಕಾರದ ಶಿಖರವಿದ್ದು, ತುದಿಯಲ್ಲಿ ಸಣ್ಣಗುಮ್ಮಟದ ಅಲಂಕರಣವುಂಟು. ಬಹುಶಃ ಹಳೆಯ ದೇವಾಲಯ ಬಿದ್ದುಹೋದ ನಂತರ ಈಗಿರುವ ಕೊಠಡಿಯನ್ನು ನಿರ್ಮಿಸಿರಬೇಕು.

೪೩

ಊರು ನಾಗನೂರು
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ದೇವಾಲಯವಿದು. ಆರ್.ಸಿ.ಸಿ. ಕಟ್ಟಡದ ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಹಳೆಯಲಿಂಗ, ನಂದಿ, ನಾಗ, ಭಗ್ನಗೊಂಡಿರುವ ಭೈರವ ಮತ್ತು ಗಣಪತಿ ಶಿಲ್ಪಗಳಿವೆ.

ಗರ್ಭಗೃಹಕ್ಕೆ ಮರದ ಬಾಗಿಲನ್ನು ಅಳವಡಿಸಿದ್ದಾರೆ. ದ್ವಾರದ ಲಲಾಟಬಿಂಬದಲ್ಲಿ ಗಣಪತಿಯ ಉಬ್ಬುಶಿಲ್ಪವನ್ನು ಬಿಡಿಸಲಾಗಿದೆ. ಬಾಗಿಲನ್ನು ಸಮೀಪದ ನರಗುಂದಲ್ಲಿ ಸಿದ್ಧಪಡಿಸಲಾಗಿದೆ.

೪೪

ಊರು ನಾಗರಹಳ್ಳಿ
ಸ್ಥಳ ಊರ ಪೂರ್ವ ಮೂಲೆ
ಸ್ಮಾರಕ ನೀಲಮ್ಮನ ಮಠ
ಅಭಿಮುಖ ಉತ್ತರ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆ ರಚನೆಯ ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಉತ್ತರಾಭಿಮುಖವಾಗಿರುವ ಗರ್ಭಗೃಹದಲ್ಲಿ ಲಿಂಗವನ್ನು ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸಲಾಗಿದೆ. ಎದುರಿಗೆ ನಂದಿಯನ್ನಿಡಲಾಗಿದೆ. ಲಿಂಗ ಮತ್ತು ನಂದಿಯ ನಡುವೆ ದಕ್ಷಿಣದ ಗೋಡೆಗೆ ಹೊಂದಿಕೊಂಡಂತೆ ನೀಲಮ್ಮನ ಗದ್ದಿಗೆಯನ್ನು ನಿರ್ಮಿಸಿದ್ದಾರೆ. ಗರ್ಭಗೃಹದಲ್ಲಿರುವ ಲಿಂಗ ಪ್ರಾಚೀನವಾದುದು. ಆದರೆ ನಂದಿ ಇತ್ತೀಚಿನದು.

ಈ ಊರಿನ ಶಾಸನವೊಂದು ಕ್ರಿ.ಶ. ೧೨ನೆಯ ಶತಮಾನಕ್ಕೆ ಸೇರಿದ್ದು, ಶಾಂತಿನಾಥ ದೇವರಿಗೆ ನೀಡಿದ ದಾನವನ್ನು ಉಲ್ಲೇಖಿಸುವುದು (ಸೌಇಇxv : ೫೮೯).

೪೫

ಊರು ನಾವಳ್ಳಿ
ಸ್ಥಳ ಊರ ಉತ್ತರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೨-೧೩ನೆಯ ಶತಮಾನ
ಶೈಲಿ ಹೊಯ್ಸಳ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಹೊಂದಿದೆ. ಗರ್ಭಗೃಹದ್ವಾರವು ಅರ್ಧಕಂಬಗಳು ಮತ್ತು ಪಟ್ಟಿಗಳ ಅಲಂಕರಣದಿಂದ ಕೂಡಿದ್ದು, ತಳಭಾಗದಲ್ಲಿ ದ್ವಾರಪಾಲಕರು ಮತ್ತು ಇತರ ಉಬ್ಬುಶಿಲ್ಪಗಳಿವೆ. ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಉಬ್ಬುಶಿಲ್ಪವನ್ನು ಬಿಡಿಸಲಾಗಿದೆ. ಅಂತರಾಳದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳಿವೆ. ನವರಂಗದಲ್ಲಿ ದೇವಕೋಷ್ಠಗಳಿದ್ದು, ಬಿಡಿಶೀಲ್ಪಗಳನ್ನು ಇಡಲಾಗಿದೆ. ಮಧ್ಯದ ಕಂಬಗಳನ್ನು ತಿರುಗಣೆ ಯಂತ್ರದಿಂದ ಕಡೆದಿದ್ದು, ಬಳೆ ಮತ್ತು ಮಣಿಹಾರಗಳ ಅಲಂಕರಣಗಳಿಂದ ಕೂಡಿವೆ. ನವರಂಗವು ಪೂರ್ವ ಮತ್ತು ದಕ್ಷಿಣದಲ್ಲಿ ಪ್ರವೇಶದ್ವಾರಗಳನ್ನು ಹೊಂದಿದ್ದು, ಅರ್ಧಕಂಬಗಳ ಅಲಂಕರಣದಿಂದ ಕೂಡಿವೆ. ಸರಳವಾದ ಅಧಿಷ್ಠಾನದ ಮೇಲಿರುವ ಭಿತ್ತಿಯಲ್ಲಿ ಯಾವುದೇ ಅಲಂಕರಣವಿಲ್ಲದೆ ಸಪಾಟಾಗಿದೆ. ಗರ್ಭಗೃಹದ ಮೇಲಿರುವ ಶಿಖರ ಕದಂಬನಾಗರ ಶೈಲಿಯದು. ಶಿಖರದ ಪ್ರತಿ ಹಂತದ ಮಧ್ಯದಲ್ಲಿ ಶಿಲ್ಪಫಲಕವನ್ನು ಅಳವಡಿಸಲಾಗಿದೆ. ಶಿಖರವು ಸುಖನಾಸವನ್ನು ಹೊಂದಿದ್ದು, ಮುಖಭಾಗದಲ್ಲಿ ನಟರಾಜನ ಉಬ್ಬು ಶಿಲ್ಪವನ್ನು ಕಾಣಬಹುದು. ಮೇಲಿರಿಸಿದ್ದ ಹೊಯ್ಸಳ ಲಾಂಛನಶಿಲ್ಪ ಭಗ್ನಗೊಂಡಿದೆ.

ದೇವಾಲಯದಲ್ಲಿ ಲಿಂಗ, ನಂದಿ, ಸೂರ್ಯ, ಮಹಿಷಮರ್ದಿನಿ, ವಿಷ್ಣು, ಭೈರವಿ ಮೊದಲಾದ ಶಿಲ್ಪಗಳಿವೆ. ಹೊರಭಾಗದಲ್ಲಿ ಭಗ್ನಗೊಂಡಿರುವ ಸಿಂಹ, ಉಮಾಮಹೇಶ್ವರ, ಮಹಾವೀರ, ಮಹಿಷಮರ್ದಿನಿ, ಭೈರವಿ ಪಾಣಿಪೀಠ ಮೊದಲಾದ ಶಿಲ್ಪಾವಶೇಷಗಳಿವೆ. ಇವು ಹೊಯ್ಸಳರ ಕಾಲಕ್ಕೂ ಸ್ವಲ್ಪ ಪ್ರಾಚೀನವೆನಿಸುತ್ತವೆ.

ದೇವಾಲಯದ ಮುಂದಿರುವ ಕ್ರಿ.ಶ. ೧೧೨೧ರ ಶಾಸನವು ಆರನೆಯ ವಿಕ್ರಮಾದಿತ್ಯನ ಕಾಲದ್ದು (ಸೌಇಇ XI-iii : ೧೭೧). ಶಾಸನವು ದಂಡನಾಯಕ ಸಾಯಿಪಯ್ಯಾದಿಗಳಿಂದ ಅಗ್ರಹಾರ ನಾ‌ಪ್ಪೊಳೆಯ ಕಲಿದೇವರಿಗೆ ದಾನ ಎಂದು ಉಲ್ಲೇಖಿಸಿದೆ. ನಾವಳ್ಳಿಯ ಪ್ರಾಚೀನ ಹೆಸರು ನಾಪ್ಪೊಳೆ ಎಂದು ಹಾಗೂ ದೇವರ ಹೆಸರು ಕಲಿದೇವ ಎಂದು ಮೇಲಿನ ಶಾಸನದಿಂದ ತಿಳಿದುಬರುತ್ತದೆ. ಬಹುಶಃ ಹೊಯ್ಸಳರು ಸ್ವತಂತ್ರರಾದ ಮೇಲೆ ಇಲ್ಲಿದ್ದ ಹಳೆಯ ದೇವಾಲಯವನ್ನು ಕೆಡವಿ, ಈಗಿರುವ ದೇವಾಲಯವನ್ನು ನಿರ್ಮಿಸಿರಬೇಕು. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ.