೬೧

ಊರು ಶೆಲವಡಿ
ಸ್ಥಳ ಊರ ನಡುವೆ
ಸ್ಮಾರಕ ರಾಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಒಂದೇ ಕೊಠಡಿಯ ದೇವಾಲಯವಿದು. ಇತ್ತೀಚೆಗೆ ನಿರ್ಮಿಸಿದ್ದಾರೆ. ಇಲ್ಲಿರುವ ಲಿಂಗ ಮತ್ತು ನಂದಿ ಶಿಲ್ಪಗಳು ಸಹ ಇತ್ತೀಚಿನವು. ಆದರೆ ದೇವಾಲಯದ ಹೊರಭಾಗದಲ್ಲಿ ಹಳೆಯ ದೇವಾಲಯದ ಲಿಂಗ, ನಂದಿ, ಗಣೇಶ ಮತ್ತು ವೀರಗಲ್ಲು ಶಿಲ್ಪಾವಶೇಷಗಳು ಬಿದ್ದಿವೆ. ಸಮೀಪದ ವೀರಭದ್ರ ದೇವಾಲಯದ ಮುಂಭಾಗದಲ್ಲಿ ಹಳೆಯ ದೇವಾಲಯದ ಹೊಸ್ತಿಲಿನ ವಾಸ್ತುಶಿಲ್ಪಾವಶೇಷವಿದೆ.

೬೨

ಊರು ಶ್ಯಾನವಾಡ
ಸ್ಥಳ ಊರ ಉತ್ತರ ಮೂಲೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪಶ್ಚಿಮ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇದೊಂದು ಸಣ್ಣಗುಡಿ. ಮಾಳಿಗೆ ಕೊಠಡಿಯಲ್ಲಿ ಪ್ರಾಚೀನ ಲಿಂಗವಿದೆ. ಮೊದಲಿಗೆ ಪೂರ್ವಕ್ಕೆ ದ್ವಾರವಿತ್ತು. ಈಗ ಅದನ್ನು ಮುಚ್ಚಿ ಪಶ್ಚಿಮಕ್ಕೆ ದ್ವಾರವನ್ನಿಡಲಾಗಿದೆ. ಕೊಠಡಿಯ ಮುಂಭಾಗದಲ್ಲಿ ಹೆಂಚಿನ ಪಡಸಾಲೆಯುಂಟು.

ಲಿಂಗದ ಮುಂದಿರುವ ನಂದಿಶಿಲ್ಪ ಇತ್ತೀಚಿನದು. ಹೊರಭಾಗದಲ್ಲಿ ಆಂಜನೇಯ, ನಾಗ ಮತ್ತಿತರ ಶಿಲ್ಪಾವಶೇಷಗಳಿವೆ.

೬೩

ಊರು ಹನಸಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆ ಶೈಲಿಯ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳಿರುವ ದೇವಾಲಯದಲ್ಲಿ ಹೊಸದಾಗಿ ರಚಿಸಿದ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಹೊರಭಾಗದಲ್ಲಿ ಬೇವಿನಮರದ ಕೆಳಗೆ ಹಳೆಯ ಲಿಂಗ, ವೀರಗಲ್ಲು ಮತ್ತು ಸಪ್ತಮಾತೃಕೆಯರ ಶಿಲ್ಪಾವಶೇಷಗಳಿವೆ.

೬೪

ಊರು ಹಳ್ಳಿಕೇರಿ
ಸ್ಥಳ ಕೆರೆ ಹತ್ತಿರ
ಸ್ಮಾರಕ ಕಳಕಪ್ಪ ಗುಡಿ
ಅಭಿಮುಖ ಪೂರ್ವ
ಕಾಲ ೧೯೨೦
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಮಾಳಿಗೆ ರಚನೆಯಾಗಿದ್ದು, ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಭಿತ್ತಿ ಭಾಗವನ್ನು ದಿಂಡುಗಲ್ಲಿನಿಂದ ನಿರ್ಮಿಸಿದ್ದಾರೆ. ಗರ್ಭಗೃಹದ ಮೇಲೆ ಆಮಲಕ ರಚನೆಯ ಗುಮ್ಮಟವಿದೆ. ತುದಿಯಲ್ಲಿ ಐದು ಕಳಸಗಳನ್ನು ಅಳವಡಿಸಲಾಗಿದೆ. ಗುಮ್ಮಟಕ್ಕೆ ಆಧಾರವಾಗಿ ಒಳಚಾವಣಿ ಭಾಗದಲ್ಲಿ ಕಬ್ಬಿಣದ ಕಂಬಿಗಳನ್ನು ಅಳವಡಿಸಿದ್ದಾರೆ. ಗರ್ಭಗೃಹದಲ್ಲಿ ಹಳೆಯದೆನ್ನಬಹುದಾದ ಎರಡು ಲಿಂಗಗಳಿವೆ. ಸಭಾಮಂಟಪದಲ್ಲಿ ಇತ್ತೀಚಿನ ಎರಡು ನಂದಿಶಿಲ್ಪಗಳಿವೆ. ಹೊರಗೆ ಮರದ ಕೆಳಗೆ ಹಳೆಯ ಲಿಂಗದ ರುದ್ರಭಾಗ, ಭಗ್ನಗೊಂಡ ಗಣಪತಿ ಮತ್ತು ನಾಗಶಿಲ್ಪಗಳಿವೆ. ಕೆಲವು ವಾಸ್ತುಭಾಗಗಳು ಸಹ ಕಂಡುಬರುತ್ತವೆ. ಇಲ್ಲಿರುವ ಚತುರ್ಮುಖ ಬ್ರಹ್ಮನ ಶಿಲ್ಪಕ್ಕೆ ಸುತ್ತಲೂ ಕಟ್ಟೆ ಕಟ್ಟಿದ್ದಾರೆ.

೬೫

ಊರು ಹಾಳ್‌ ಕುಸುಗಲ್
ಸ್ಥಳ ಕೆರೆ ಹತ್ತಿರ
ಸ್ಮಾರಕ ಸಿದ್ಧಲಿಂಗದೇವರ ಗುಡಿ
ಅಭಿಮುಖ ಪಶ್ಚಿಮ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ
ಸಂರಕ್ಷಣೆ

ಇದೀಗ ಹೊಸದಾಗಿ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ. ಹೊಸ ದೇವಾಲಯವು ಸಾಲಾಗಿ ಮೂರು ಗರ್ಭಗೃಹಗಳು ಹಾಗೂ ಸಭಾಮಂಟಪವೊಂದನ್ನು ಒಳಗೊಂಡಿದೆ.

ಹಳೆಯ ಲಿಂಗ, ನಂದಿ, ನಾಗ ಮತ್ತಿತರ ಭಗ್ನಾವಶೇಷಗಳು ಹೊರಭಾಗದಲ್ಲಿದೆ.

ಇಲ್ಲಿರುವ ಶಾಸನ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದ್ದು, ಅಕ್ಷರಗಳು ಸವೆದಿವೆ. ಈ ಎಲ್ಲ ಪ್ರಾಚ್ಯಾವಶೇಷಗಳಿಂದ ಇಲ್ಲಿ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದ ದೇವಾಲಯವಿತ್ತೆಂದು ಸ್ಪಷ್ಟವಾಗುವುದು.

೬೬

ಊರು ಹೆಬ್ಬಾಳ
ಸ್ಥಳ ಕಲ್ಮೇಶ್ವರ ಓಣಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ
ಸಂರಕ್ಷಣೆ

ಇತ್ತೀಚೆಗೆ ಹೊಸದಾಗಿ ನಿರ್ಮಿಸುತ್ತಿರುವ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ಪ್ರಾಚೀನ ದೇವಾಲಯಕ್ಕೆ ಸಂಬಂಧಿಸಿದ ಭಗ್ನ ಶಿಲ್ಪಾವಶೇಷಗಳಿವೆ. ಹಳೆಯ ದೇವಾಲಯ ಬಿದ್ದುಹೋದ ನಂತರ ಈಗಿನ ದೇವಾಲಯ ನಿರ್ಮಾಣಗೊಳ್ಳುತ್ತಿದೆ.