ಹುಬ್ಬಳ್ಳಿ ತಾಲುಕು

ಹುಬ್ಬಳ್ಳಿ ತಾಲುಕು

 

ಊರು ಅಗಡಿ
ಸ್ಥಳ ಊರಿಂದ ಈಶಾನ್ಯ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ
ಸಂರಕ್ಷಣೆ

ದುಸ್ಥಿತಿಯಲ್ಲಿರುವ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದ ಚಾವಣಿಯಲ್ಲಿ ಕಲ್ಲಿನ ಹಲಗೆಗಳನ್ನು ಹಾಸಿ ಮಣ್ಣು ತುಂಬಿದ್ದಾರೆ. ಸಭಾಮಂಟಪವನ್ನು ಮಣ್ಣಿನ ಗೋಡೆ ಮತ್ತು ಹಂಚಿನಿಂದ ನಿರ್ಮಿಸಲಾಗಿದೆ. ಈ ಮೊದಲು ಇಲ್ಲಿ ಹಳೆಯ ದೇವಾಲಯವಿತ್ತು. ಅದು ನಶಿಸಿದ ನಂತರ, ಈಗಿರುವ ಗರ್ಭಗೃಹವನ್ನು ಈಗ್ಗೆ ಸುಮಾರು ೪೦ ವರ್ಷಗಳ ಹಿಂದೆ ಕಟ್ಟಲಾಗಿದೆ.

ಗರ್ಭಗೃಹದಲ್ಲಿ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಸಭಾಮಂಟಪದಲ್ಲಿ ನಂದಿ, ಭೈರವ, ಭೈರವಿ ಮತ್ತು ನಾಗಶಿಲ್ಪಗಳು ಕಂಡುಬರುತ್ತವೆ. ಇವೆಲ್ಲವೂ ಪ್ರಾಚೀನ ದೇವಾಲಯಕ್ಕೆ ಸೇರಿದ ಶಿಲ್ಪಗಳು.

ಊರು ಅಗ್ರಹಾರ ತಿಮ್ಮಸಾಗರ
ಸ್ಥಳ ಊರ ಮುಂಭಾಗ
ಸ್ಮಾರಕ ರಾಮಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಸ್ಥಳೀಯ
ಸ್ಥಿತಿ
ಸಂರಕ್ಷಣೆ

ದೇವಾಲಯದ ಭಾಗವಾಗಿ ಉಳಿದುಬಂದಿರುವ ಗರ್ಭಗೃಹ ಜೀರ್ಣೋದ್ಧಾರಗೊಂಡಿದೆ. ಗರ್ಭಗೃಹದ ಗೋಡೆ ಪಿರಮಿಡ್‌ ಶೈಲಿಯಲ್ಲಿ ರಚನೆಗೊಂಡು, ಇದರ ಸುತ್ತಲೂ ಆರ್.ಸಿ.ಸಿ. ಸಭಾಂಗಣವನ್ನು ನಿರ್ಮಿಸಿದ್ದಾರೆ. ಹೊರಗೆ ಮುಂಭಾಗದಲ್ಲಿ ಕಮಾನುರಚನೆಯ ಮಂಟಪವಿದ್ದು, ಅದರಲ್ಲಿ ನಂದಿಶಿಲ್ಪವನ್ನಿಡಲಾಗಿದೆ.

ಗರ್ಭಗೃಹದಲ್ಲಿ ಲಿಂಗವಿದ್ದು, ಹಿಂಭಾಗದಲ್ಲಿ ಮಹಿಷಮರ್ದಿನಿ, ಭಗ್ನಗೊಂಡ ಲಕ್ಷ್ಮೀ ನಾರಾಯಣ ಮತ್ತು ನಾಗಶಿಲ್ಪಗಳಿವೆ. ಇವೆಲ್ಲವು ಹಳೆಯ ದೇವಾಲಯಕ್ಕೆ ಸಂಬಂಧಿಸಿವೆ.

ಊರು ಅಂಚಟಗೇರಿ
ಸ್ಥಳ ಕೆರೆ ಹತ್ತಿರ ತೋಟದಲ್ಲಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಹಳೆಯ ದೇವಾಲಯ ಅವನತಿಗೊಂಡ ಬಳಿಕ, ಈಗಿನ ದೇವಾಲಯವನ್ನು ನಿರ್ಮಿಸಿಕೊಂಡಿದ್ದಾರೆ. ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹ ಸುಮಾರು ೩೦ ವರ್ಷಗಳ ಹಿಂದಿನದು. ಇತ್ತೀಚೆಗೆ ಆರ್.ಸಿ.ಸಿ. ಸಭಾಮಂಟಪವನ್ನು ನಿರ್ಮಿಸಿದ್ದಾರೆ. ಗರ್ಭಗೃಹದ ಮೇಲೆ ಮೆಟ್ಟಿಲಾಕಾರದ ಗಾರೆಶಿಖರವಿದೆ.

ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಸ್ವಯಂಭು ಲಿಂಗವಿದೆ. ಹೊರಭಾಗದಲ್ಲಿ ಗಣಪತಿ ಮತ್ತು ನಾಗಶಿಲ್ಪಗಳು ಕಂಡುಬರುತ್ತವೆ.

ಊರು ಅದರಗುಂಚಿ
ಸ್ಥಳ ಊರ ನಡುವೆ
ಸ್ಮಾರಕ ದೊಡ್ಡೇಶ್ವರ ಗುಡಿ
ಅಭಿಮುಖ ದಕ್ಷಿಣ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ಅದರಗುಂಚಿ ಗ್ರಾಮದಲ್ಲಿರುವ ದೊಡ್ಡೇಶ್ವರ ದೇವಾಲಯ ಈಗ್ಗೆ ಕೆಲವು ದಶಕಗಳ ಹಿಂದಿನ ನಿರ್ಮಾಣ. ಸ್ಥಳೀಯರು ಗರ್ಭಗೃಹದಲ್ಲಿರುವ ಮಹಾವೀರನನ್ನು ದೊಡ್ಡಪ್ಪ ಅಥವಾ ದೊಡ್ಡೇಶ್ವರ ಎಂದು ಕರೆಯುತ್ತಾರೆ. ಸ್ಥಳೀಯ ಶೈಲಿಯಲ್ಲಿರುವ ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ದೇವಾಲಯದ ನಿರ್ಮಾಣಕ್ಕೆ ಬಳಸಿರುವ ಪ್ರಮುಖ ಸಾಮಗ್ರಿ ಕಲ್ಲು, ಗರ್ಭಗೃಹವು ದಕ್ಷಿಣ ಮತ್ತು ಪೂರ್ವಕ್ಕೆ ಪ್ರವೇಶದ್ವಾರಗಳನ್ನು ಹೊಂದಿದ್ದರೂ, ದೇವಾಲಯ ದಕ್ಷಿಣಾಭಿಮುಖವಾಗಿದೆ. ಗರ್ಭಗೃಹದ್ವಾರದ ಲಲಾಟಬಿಂಬದಲ್ಲಿ ನಿಂತಿರುವ ಗಣಪತಿಯ ಉಬ್ಬುಶಿಲ್ಪವುಂಟು. ಅಂತರಾಳದ ದ್ವಾರವನ್ನು ಮರದಿಂದ ಮಾಡಿದ್ದು, ಸೂಕ್ಷ್ಮ ಕೆತ್ತನೆಗಳ ಅಲಂಕರಣದಿಂದ ಕೂಡಿದೆ. ಲಲಾಟಬಿಂಬದಲ್ಲಿ ಗಣಪತಿ, ಶಿವಪಾರ್ವತಿ ಮತ್ತು ಅದರ ವಾಹನಗಳ ಸೂಕ್ಷ್ಮ ಶಿಲ್ಪಗಳಿವೆ. ದೇವಾಲಯದ ಮೇಲೆ ಸಣ್ಣದಾದ ಗಾರೆಶಿಖರವನ್ನು ನಿರ್ಮಿಸಿ, ಕಳಸವನ್ನು ಅಳವಡಿಸಲಾಗಿದೆ. ಸಭಾಮಂಟಪದಲ್ಲಿ ಮುಂಭಾಗದ ಅಂಕರಣಗಳಿಗೆ ಕಮಾನುಗಳ ಅಲಂಕರಣ ಮಾಡಿರುವುದರಿಂದ ದೇವಾಲಯದ ಸೌಂದರ್ಯ ಹೆಚ್ಚಿದೆ.

ಗರ್ಭದಲ್ಲಿ, ಪೀಠದ ಮೇಲೆ ಪದ್ಮಾಸನದಲ್ಲಿ ಕುಳಿತ ಮಹಾವೀರನ ಶಿಲ್ಪ ಭವ್ಯವಾದುದು. ಸಿಂಹಲಾಂಛನವಿರುವ ಪೀಠದಲ್ಲಿ ಮೂರು ಸಿಂಹಗಳನ್ನು ಬಿಡಿಸಲಾಗಿದೆ. ಮಧ್ಯದ ಸಿಂಹ ಅಭಿಮುಖವಾಗಿ ಕುಳಿತಿದ್ದು, ಎಡಬಲಗಳಲ್ಲಿ ನಿಂತಿರುವ ಸಿಂಹಗಳು ವಿರುದ್ಧ ದಿಕ್ಕಿಗೆ ಮುಖಮಾಡಿವೆ. ನೋಡುಗರಿಗೆ ಪೀಠದ ಭಾರವನ್ನು ಹೊತ್ತಿರುವಂತೆ ಕಂಡುಬರುತ್ತವೆ. ಪೀಠಕ್ಕೆ ಹೊಂದಿಕೊಂಡಂತೆ ಕಡೆದಿರುವ ಶಿಲ್ಪದ ಒಟ್ಟು ಎತ್ತರ ಸುಮಾರು ೮ ಅಡಿಗಳು. ಶಿಲ್ಪದ ಕಾಲ ಕ್ರಿ.ಶ.೧೨-೧೩ನೆಯ ಶತಮಾನವಿರಬಹುದು. ಎಣ್ಣೆ ಮತ್ತಿತರ ಲೇಪನಗಳಿಂದಾಗಿ ಶಿಲ್ಪದ ಮೂಲಸೌಂದರ್ಯ ಮರೆಯಾದಂತೆ ಕಾಣುವುದು. ಈಗ್ಗೆ ೨೦ ವರ್ಷಗಳ ಹಿಂದೆ ಹುಬ್ಬಳ್ಳಿಯ ಜೈನಸಮಾಜದವರು ಈ ಶಿಲ್ಪವನ್ನು ಕೊಂಡ್ಯೊಯ್ಯಲು ಪ್ರಯತ್ನಿಸಿದ್ದರು. ಆಗ ಊರಿನವರ ವಿರೋಧದಿಂದಾಗಿ ಮಹಾವೀರನ ಶಿಲ್ಪ ಅಲ್ಲಿಯೇ ಉಳಿಯಿತು. ಅಲ್ಲದೆ ಮುಂದೆ ಈ ಸಮಸ್ಯೆ ಬಾರದಿರಲೆಂದು, ಅದೇ ಗರ್ಭಗೃಹದ ನೈಋತ್ಯ ಮೂಲೆಯಲ್ಲಿ ದೊಡ್ಡ ಲಿಂಗವೊಂದನ್ನು ಪ್ರತಿಷ್ಠಾಪಿಸಿ, ಪೂರ್ವಕ್ಕೆ ಬಾಗಿಲನ್ನು ಇಟ್ಟರು. ಈ ಲಿಂಗಕ್ಕೆ ಅಭಿಮುಖವಾಗಿ ಹೊರಗೆ ನಂದಿಶಿಲ್ಪವನ್ನಿಡಲಾಗಿದೆ. ಮಹಾವೀರನ ಶಿಲ್ಪಕ್ಕೆ ವಿಭೂತಿಧಾರಣೆ ಮಾಡಿ ಪೂಜಿಸುತ್ತಿರುವ ಸ್ಥಳೀಯರು ಹೆಚ್ಚು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಈ ಶಿಲ್ಪವನ್ನು ಗಮನಿಸಿದಾಗ, ಇಲ್ಲಿ ದಕ್ಷಿಣಾಭಿಮುಖವಾಗಿದ್ದ ಮಹಾವೀರನ ಬಸದಿ ಇತ್ತೆಂಬುದು ಸುಸ್ಪಷ್ಟ. ಅದು ಬಿದ್ದುಹೋದ ನಂತರ ಈಗಿನ ಗುಡಿಯನ್ನು ನಿರ್ಮಿಸಿಕೊಂಡಿದ್ದಾರೆ.

ಊರು ಅದರಗುಂಚಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ಊರಿನ ಅಂಚಿಕಟ್ಟಿಯಲ್ಲಿರುವ ಕಲ್ಮೇಶ್ವರ ದೇವಾಲಯ ಇತ್ತೀಚಿನದು. ಇಲ್ಲಿ ಪ್ರಾಚೀನ ದೇವಾಲಯವಿದ್ದು, ಅದು ಹಾಳಾದ ನಂತರ ಈಗಿನ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯವು ಸಾಲಾಗಿ ನಿರ್ಮಿಸಿರುವ ಮೂರು ಗರ್ಭಗೃಹಗಳನ್ನು ಮತ್ತು ಸಭಾಮಂಟಪವನ್ನು ಒಳಗೊಂಡಿದೆ. ಕಲ್ಲಿನಿಂದ ನಿರ್ಮಿಸಿರುವ ದೇವಾಲಯದ ಮುಂಭಾಗದಲ್ಲಿ ಆರ್.ಸಿ.ಸಿ. ಪ್ರಾಂಗಣವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ.

ಮಧ್ಯದ ಗರ್ಭಗೃಹದಲ್ಲಿರುವ ಲಿಂಗ ಪ್ರಾಚೀನವಾದುದು. ಇದರ ಕಾಲ ಸುಮಾರು ಕ್ರಿ.ಶ. ೧೧-೧೨ನೆಯ ಶತಮಾನ. ಎಡಬಲಗಳಲ್ಲಿರುವ ಗರ್ಭಗೃಹಗಳಲ್ಲಿ ಕ್ರಮವಾಗಿ ಗಣಪತಿ ಮತ್ತು ಪಾರ್ವತಿಯ ಇತ್ತೀಚಿನ ಶಿಲ್ಪಗಳಿವೆ. ಸಭಾಮಂಟಪದಲ್ಲಿರುವ ನಂದಿಶಿಲ್ಪ ಸಹ ಇತ್ತೀಚಿನದು.

ಊರು ಅಮರಗೋಳ
ಸ್ಥಳ ಊರ ನಡುವೆ
ಸ್ಮಾರಕ ಬನಶಂಕರಿ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ. ಶ.೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ A.S.I.

ಜೀರ್ಣೋದ್ಧಾರಗೊಂಡಿರುವ ಪ್ರಸ್ತುತ ದೇವಾಲಯ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಕ್ಷಿತ ಸ್ಮಾರಕ. ದೇವಾಲಯವು ದ್ವಿಕೂಟವಾಗಿದ್ದು, ಪೂರ್ವ ಮತ್ತು ದಕ್ಷಿಣಕ್ಕೆ ಮುಖ ಮಾಡಿದ ಗರ್ಭಗೃಹಗಳನ್ನು ಹೊಂದಿದೆ. ಇವುಗಳಿಗೆ ಹೊಂದಿಕೊಂಡಂತೆ ಅರ್ಧಮಂಟಪಗಳಿದ್ದು, ನವರಂಗವಿದೆ. ನವರಂಗವು ಪೂರ್ವ ಮತ್ತು ದಕ್ಷಿಣದಲ್ಲಿ ಪ್ರವೇಶದ್ವಾರ ಮಂಟಪಗಳಿಂದ ಕೂಡಿದೆ. ಗರ್ಭಗೃಹದ ಬಾಗಿಲುವಾಡಗಳಲ್ಲಿ ಅರ್ಧಕಂಬಗಳ ಮತ್ತು ಸೂಕ್ಷ್ಮ ಕೆತ್ತನೆಗಳ ಅಲಂಕರಣವನ್ನು ಕಾಣಬಹುದು. ಲಲಾಟಬಿಂಬದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದ್ದು, ಮೇಲಿನ ಶಿಲಾಫಲಕದಲ್ಲಿ ಐದು ಮಂಟಪಗಳ ಸೂಕ್ಷ್ಮ ಉಬ್ಬುರಚನೆಗಳಿವೆ. ಮಧ್ಯದ ಮಂಟಪದಲ್ಲಿ ಗಣಪತಿಯ ಉಬ್ಬು ಶಿಲ್ಪವನ್ನು ಬಿಡಿಸಿದೆ. ದಕ್ಷಿಣಾಭಿಮುಖವಾಗಿರುವ ಗರ್ಭಗೃಹದ ಬಾಗಿಲುವಾಡಗಳು ಸರಳ ಅಲಂಕಾರದವು. ದ್ವಾರದ ಮೇಲಿನ ಫಲಕದಲ್ಲಿ ಶಿಖರಗಳ ಅಲಂಕರಣವಿರುವ ಮಂಟಪಗಳ ಉಬ್ಬುರಚನೆಗಳಿವೆ. ನವರಂಗದ ಕಂಬಗಳ ಮೇಲೆ ವಿಷ್ಣು, ಭೈರವ, ಚಂದ್ರ ಮೊದಲಾದ ದೇವತೆಗಳ ಉಬ್ಬುಶಿಲ್ಪಗಳನ್ನು ಬಿಡಿಸಲಾಗಿದೆ. ದೇವಾಲಯದ ಹೊರಭಿತ್ತಿಯು ಅಧಿಷ್ಠಾನದಿಂದ ಕೂಡಿದ್ದು, ಗೋಡೆಗಂಬ, ಅರ್ಧಕಂಬ ಮತ್ತು ದೇವಕೋಷ್ಠಗಳ ಅಲಂಕರಣದಿಂದ ನಕ್ಷತ್ರಾಕಾರದ ತಲವಿನ್ಯಾಸವನ್ನು ಹೊಂದಿದೆ. ಗರ್ಭಗೃಹದ ಮೇಲೆ ಒರಟು ಕಲ್ಲುಗಳನ್ನು ಪೇರಿಸಿ ರಚಿಸಿದ ಗೋಳಾಕಾರದ ಕಚ್ಚಾ ಮಾದರಿಯ ಶಿಖರವಿದೆ. ಶಿಖರವು ಸುಖನಾಸವನ್ನು ಹೊಂದಿದ್ದ ಸೂಚನೆಗಳು ಕಂಡುಬರುತ್ತವೆ. ಈ ದೇವಾಲಯವನ್ನು ಮರಳುಗಲ್ಲಿನಿಂದ ರಚಿಸಿರುವುದು ಗಮನಾರ್ಹ ಸಂಗತಿ.

ಪೂರ್ವಾಭಿಮುಖವಾಗಿರುವ ಗರ್ಭಗೃಹದಲ್ಲಿ ಪಾಣಿಪೀಠದ ಮೇಲೆ ಭಗ್ನಗೊಂಡ ಭೈರವಿ ಶಿಲ್ಪವನ್ನಿಡಲಾಗಿದೆ. ಇಲ್ಲಿನ ಕ್ರಿ.ಶ.೧೧೨೧ರ ಶಾಸನವು, ಸೌಧೊರೆ ಜಕ್ಕರಸ ಎಂಬುವನು ಹಲಸಿಗೆ ನಾಡಿನ ಉಣಕಲ್ಲ ಕಂಪಣಕ್ಕೆ ಸೇರಿದ ಅಂಬರಗೋಳದಲ್ಲಿ ಕೇಶವ ಮತ್ತು ಭೈವದೇವರ ಪ್ರತಿಷ್ಠಾಪನೆಯನ್ನು ಮಾಡಿಸಿದನೆಂದು ತಿಳಿಸುತ್ತದೆ (ಕಲಬುರ್ಗಿ : ಧಾ ಜಿ ಶಾ ಸೂ). ಅಂದರೆ ಮೇಲಿನ ಬನಶಂಕರಿ ದೇವಾಲಯವು, ವಾಸ್ತವವಾಗಿ ಕೇಶವ ಮತ್ತು ಭೈರವ ದೇವರ ದೇವಾಲಯವಾಗಿದೆ. ಹಾಗಾಗಿ ನವರಂಗದ ಕಂಬಗಳ ಮೇಲೆ ಭೈರವ ಆರಾಧನೆ ಮೇಲೆ ಬೆಳಕು ಚೆಲ್ಲುವುದರಿಂದ ಇದೊಂದು ಮಹತ್ವದ ಸ್ಮಾರಕ.

ಊರು ಇಂಗಳಹಳ್ಳಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ  

ಮಾಳಿಗೆ ರಚನೆಯ ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಪ್ರಾಚೀನ ಲಿಂಗವಿದ್ದು, ಪೂಜಿಸುತ್ತಿದ್ದಾರೆ. ಸಭಾಮಂಟಪದಲ್ಲಿ ನಂದಿ ಹಾಗೂ ಹೊರಭಾಗದಲ್ಲಿ ಭಗ್ನಗೊಂಡಿರುವ ಲಿಂಗ, ನಾಗ ಮತ್ತು ಸ್ತ್ರೀದೇವತೆಗಳ ಎರಡು ಶಿಲ್ಪಗಳಿವೆ. ಈ ಶಿಲ್ಪಗಳು ಕೈಯಲ್ಲಿ ಬಟ್ಟಲು ಹಿಡಿದಿವೆ. ಒಂದು ಶಿಲ್ಪದ ತೊಡೆಯ ಮೇಲೆ ಮಗುವನ್ನು ಬಿಡಿಸಲಾಗಿದೆ. ಸ್ಥಳೀಯರು ಈ ಸ್ತ್ರೀದೇವತೆಗಳನ್ನು ಜಂಗಿಮಾಳಮ್ಮ ಎಂದು ಕರೆಯುತ್ತಾರೆ.

ಈ ಊರಿನ ಮೈಲಾರಲಿಂಗಪ್ಪನ ಗುಡಿ ಎದುರು ವೀರಗಲ್ಲು ಮತ್ತು ಬಟ್ಟಲು ಹಿಡಿದ ಸ್ತ್ರೀದೇವತೆಯ ಶಿಲ್ಪವಿದೆ. ಹಾಗೂ ಉಡಚಮ್ಮನ ಗುಡಿಯ ಗೋಡೆಯಲ್ಲಿ ಶಿಲ್ಪಾವಶೇಷಗಳು ಕಂಡುಬರುತ್ತವೆ.

ಊರು ಇನಾಮ ವೀರಾಪುರ
ಸ್ಥಳ ಊರ ಉತ್ತರ
ಸ್ಮಾರಕ ಬಸವಣ್ಣ ದೇವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ  

ಒರಟುಕಲ್ಲು, ಮತ್ತು ಮಣ್ಣಿನ ಗೋಡೆಯ ಕೊಠಡಿಯಲ್ಲಿ ಹಳೆಯ ಲಿಂಗವಿದೆ. ಬಹುಶಃ ಹಳೆಯ ದೇವಾಲಯ ಬಹುಹಿಂದೆಯೇ ಹಾಳಾಗಿರಬೇಕು. ಆ ನಂತರ ಈಗಿನ ಮಣ್ಣಿನ ಕೊಠಡಿಯನ್ನು ನಿರ್ಮಿಸಿದಂತೆ ಕಾಣುತ್ತದೆ.

ಹೊರಭಾಗದಲ್ಲಿ ಭಗ್ನ ನಂದಿ, ಆಂಜನೇಯ ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ.

ಊರು ಉಣಕಲ್‌
ಸ್ಥಳ ಊರ ನಡುವೆ
ಸ್ಮಾರಕ ಚಂದ್ರಮೌಳೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ.೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ A.S.I.

ಊರ ನಡುವೆ ಎತ್ತರದ ಸ್ಥಳದಲ್ಲಿರುವ ದೇವಾಲಯವಿದು. ದೇವಾಲಯವು ತನ್ನ ವಾಸ್ತುವೈಶಿಷ್ಟ್ಯದಿಂದಾಗಿ ನೋಡುಗರ ಗಮನ ಸೆಳೆಯುತ್ತದೆ. ನಾಲ್ಕೂ ದಿಕ್ಕುಗಳಿಂದಲೂ ಪ್ರವೇಶವಿರುವ ಈ ದೇವಾಲಯದ ಮಧ್ಯಭಾಗದಲ್ಲಿ ಗರ್ಭಗೃಹವಿದ್ದು, ಸುತ್ತಲೂ ಪ್ರದಕ್ಷಿಣಾ ಪಥವನ್ನು ನಿರ್ಮಿಸಲಾಗಿದೆ. ಪೂರ್ವ ದಿಕ್ಕಿನಲ್ಲಿ ಮಾತ್ರ ಅಂತರಾಳವಿದ್ದು, ಉಳಿದ ದಿಕ್ಕುಗಳಲ್ಲಿ ಪ್ರವೇಶಮಂಟಪಗಳಿವೆ. ಪೂರ್ವ ದಿಕ್ಕಿನಲ್ಲಿ ಮಾತ್ರ ಅಂತರಾಳವಿದ್ದು, ಉಳಿದ ದಿಕ್ಕುಗಳಲ್ಲಿ ಪ್ರವೇಶ ಮಂಟಪಗಳಿವೆ. ಅಂತರಾಳದ ಮುಂದಿನ ನವರಂಗಭಾಗವು ಬಿದ್ದುಹೋಗಿದ್ದು, ಸಂಪೂರ್ಣವಾಗಿ ತೆರೆದ ಸ್ಥಿತಿಯಲ್ಲಿದೆ. ಗರ್ಭಗೃಹದ ನಾಲ್ಕೂ ದ್ವಾರಗಳು ಸೂಕ್ಷ್ಮ ಕೆತ್ತನೆಗಳ ಅಲಂಕರಣವನ್ನು ಒಳಗೊಂಡಿವೆ. ಅಂತರಾಳದ್ವಾರವು ಸಹ ಜಾಲಂಧ್ರ, ಅರ್ಧಕಂಬ ಮತ್ತು ಸೂಕ್ಷ್ಮ ಕೆತ್ತನೆಗಳ ಅಲಂಕರಣದಿಂದ ಕೂಡಿದೆ. ಲಲಾಟಬಿಂಬದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವುಂಟು. ಇದರ ಮೇಲಿರುವ ಮಕರತೋರಣದಲ್ಲಿ ಮೂರು ತೆರೆದ ಗೂಡುಗಳ ರಚನೆಯನ್ನು ಕಾಣಬಹುದು. ಅಂತರಾಳದ್ವಾರದ ಇಕ್ಕೆಲಗಳಲ್ಲಿ ದೇವಕೋಷ್ಟಕಗಳಿದ್ದು, ಅವುಗಳ ಮೇಲೆ ದ್ರಾವಿಡಶೈಲಿ ಶಿಖರದ ಅಲಂಕರಣವಿದೆ. ದೇವಾಲಯದ ಹೊರಭಿತ್ತಿಯು ಅಧಿಷ್ಠಾನವನ್ನು ಹೊಂದಿದ್ದು, ಗೋಡೆಗಂಬ, ಅರ್ಧಕಂಬ ಮತ್ತು ದೇವಕೋಷ್ಠಗಳ ರಚನೆಗಳಿಂದ ಅಲಂಕೃತಗೊಂಡಿದೆ.

ಗರ್ಭಗೃಹದಲ್ಲಿ ಲಿಂಗವಿದೆ. ಪಶ್ಚಿಮದ ಪ್ರವೇಶಮಂಟಪದಲ್ಲಿ ಚತುರ್ಮುಖ ಲಿಂಗವನ್ನಿಡಲಾಗಿದೆ. ಹೊರಭಾಗದಲ್ಲಿ ನಂದಿ, ಮತ್ತಿತರ ವಾಸ್ತು ಅವಶೇಷಗಳಿವೆ. ಈ ಊರಿನ ದಾನಮ್ಮದೇವಿಯ ಗುಡಿ ಮುಂದಿರುವ ಬಾವಿಯ ಕಟ್ಟಡಕ್ಕೆ ಚಂದ್ರಮೌನೇಶ್ವರ ದೇವಾಲಯದ ಕಕ್ಷಾಸನ, ಕಂಬ ಮತ್ತಿತರ ವಾಸ್ತು ಅವಶೇಷಗಳನ್ನು ಬಳಸಿದ್ದಾರೆ.

ಈ ಊರಿನ ಪಾದಪೀಠದ ಶಾಸನವೊಂದು ಕ್ರಿ.ಶ. ೧೨ನೆಯ ಶತಮಾನಕ್ಕೆ ಸೇರಿದ್ದು, ವಾಮದೇವ ಪಂಡಿತನಿಂದ ಉಗುರೇಶ್ವರದ ಕೇಶವದೇವರ ಸ್ಥಾಪನೆಯಾಯಿತೆಂದು ತಿಳಿಸುತ್ತದೆ (ಕಲಬುರ್ಗಿ       ಧಾ ಜಿ ಶಾ ಸೂ). ಮತ್ತೊಂದು ಶಾಸನದಲ್ಲಿ ಮಲ್ಲಿದೇವ ಎಂಬುವನು ಉಲ್ಲೇಖಗೊಂಡಿದ್ದಾನೆ.

೧೦

ಊರು ಉಮಚಗಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ  

ಇಲ್ಲಿ ಮೊದಲಿಗೆ ಹಳೆಯ ದೇವಾಲಯವಿತ್ತು. ಅದನ್ನು ಕೆಡವಿ ವಿಶಾಲವಾದ ಹಜಾರದಿಂದ ಕೂಡಿದ ಹೊಸ ದೇವಾಲಯವನ್ನು ಕಟ್ಟಿದ್ದಾರೆ. ಈ ಹಜಾರದ ನಡುವೆ ಎತ್ತರದ ವೇದಿಕೆಯಲ್ಲಿ ಕೋಡುಗಲ್ಲೊಂದನ್ನು ಅಳವಡಿಸಿ ಪೂಜಿಸುತ್ತಿದ್ದಾರೆ. ಹಜಾರದ ಒಂದು ಪಕ್ಕದಲ್ಲಿ ಪ್ರಾಚೀನ ದೇವಾಲಯಕ್ಕೆ ಸಂಬಂಧಿಸಿದ ಶಿಲ್ಪಾವಶೇಷಗಳಿವೆ. ಇಲ್ಲಿ ಪ್ರಾಚೀನ ದೇವಾಲಯವಿತ್ತೆಂಬುದನ್ನು ಸ್ವೀಕರಿಸಸುತ್ತವೆ.

೧೧

ಊರು ಕಟ್ನೂರು
ಸ್ಥಳ ಊರ ಮುಂಭಾಗ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ.೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ  

ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದ ದ್ವಾರ ಸರಳ ರಚನೆಯದು. ಲಲಾಟಬಿಂಬದಲ್ಲಿ ಗಣಪತಿಯ ಉಬ್ಬುಶಿಲ್ಪವುಂಟು. ಅಂತರಾಳದ್ವಾರದ ಮೇಲಿನ ಫಲಕದಲ್ಲಿ ಐದು ಸಣ್ಣಶಿಖರಗಳ ಉಬ್ಬು ಶಿಲ್ಪಗಳನ್ನು ಬಿಡಿಸಲಾಗಿದೆ. ದ್ವಾರದ ಎಡಭಾಗದಲ್ಲಿ ಮಾತ್ರ ಜಾಲಂಧ್ರವನ್ನು ಕಾಣಬಹುದು. ಬಲಭಾಗದ ಜಾಲಂಧ್ರವು ಬಹುಶಃ ಜೀರ್ಣೋದ್ಧಾರದ ಸಂದರ್ಭದಲ್ಲಿ ಹಾಳಾಗಿರಬಹುದು. ಸಭಾಮಂಟಪದಲ್ಲಿರುವ ದೇವಕೋಷ್ಠಗಳನ್ನು ನಾಗರಶೈಲಿಯ ಶಿಖರಗಳಿಂದ ಅಲಂಕರಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ಕಕ್ಷಾಸನದ ವಾಸ್ತು ಅವಶೇಷಗಳು ಚೆಲ್ಲಾಡಿವೆ. ಇದರಿಂದ ಸಭಾಮಂಟಪವು ಕಕ್ಷಾಸನವನ್ನೂ ಹೊಂದಿತ್ತೆಂದು ಗ್ರಹಿಸಬಹುದು. ನಡುವಿನ ನಾಲ್ಕು ಕಂಬಗಳು ಚೌಕ ಮತ್ತು ಬಹುಮುಖ ರಚನೆಗಳಿಂದ ಕೂಡಿವೆ. ದೇವಾಲಯದ ಹೊರಮೈಯನ್ನು ಸಿಮೆಂಟಿನಿಂದ ಮುಚ್ಚಿ ಜೀರ್ಣೋದ್ಧಾರ ಮಾಡಿದ್ದಾರೆ. ಗರ್ಭಗೃಹದ ಮೇಲೆ ಸಿಮೆಂಟಿನ ಸಣ್ಣದಾದ ಗೋಪುರವನ್ನು ಇತ್ತೀಚೆಗೆ ನಿರ್ಮಿಸಿದ್ದಾರೆ.

ದೇವಾಲಯದಲ್ಲಿ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಹೊರಭಾಗದಲ್ಲಿ ವೀರಗಲ್ಲುಗಳು ಕಂಡುಬರುತ್ತವೆ.

ಇಲ್ಲಿನ ಕ್ರಿ.ಶ. ೧೨೪೨ರ ಶಾಸನವೊಂದು, ಗೋವೆ ಕದಂಬರ ತ್ರಿಭುವನಮಲ್ಲನ ಕಾಲದ್ದು. ಕಟ್ಟಿನೂರ ಮೂಲಸ್ಥಾನದ ದೇವರಿಗೆ ಇಂದೆಯ ಸಾಹಣಿಯು ನೀಡಿದ ಭೂದಾನವನ್ನು ಉಲ್ಲೇಖಿಸುತ್ತದೆ (ಕಲಬುರ್ಗಿ : ಧಾ ಜಿ ಶಾ ಸೂ). ಇದರಿಂದಾಗಿ ಪ್ರಸ್ತುತ ಕಲ್ಮೇಶ್ವತ ದೇವಾಲಯವು, ಪ್ರಾಚೀನ ಮೂಲಸ್ಥಾನ ದೇವರ ದೇವಾಲಯವಾಗಿತ್ತೆಂಬ ಸಂಗತಿ ತಿಳಿದು ಬರುವುದಲ್ಲದೆ, ಸ್ಥಳನಾಮದ ಮೇಲೂ ಬೆಳಕು ಚೆಲ್ಲುವುದರಿಂದ ಇದೊಂದು ಮಹತ್ವದ ಶಾಸನವೆಂದು ಹೇಳಬಹುದು.

೧೨

ಊರು ಕಟ್ನೂರು
ಸ್ಥಳ ಬುಡರಸಿಂಗಿ ರಸ್ತೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಆರ್.ಸಿ.ಸಿ.
ಸ್ಥಿತಿ ಉತ್ತಮ
ಸಂರಕ್ಷಣೆ  

ಸ್ಥಳೀಯರು ಹಾಳುಗುಡಿ ಎಂದು ಕರೆಯುತ್ತಿದ್ದ ಈ ದೇವಾಲಯವನ್ನು ಕೆಡವಲಾಗಿದೆ. ಇದೇ ಸ್ಥಳದಲ್ಲಿ ಹೊಸದಾಗಿ ಒಂದು ಕೊಠಡಿಯ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ.

ಇಲ್ಲಿ ಪ್ರಾಚೀನ ಲಿಂಗ, ಭಗ್ನ ನಂದಿ ಮತ್ತಿತರ ಶಿಲ್ಪಾವಶೇಷಗಳಿವೆ. ಮುಂಭಾಗದಲ್ಲಿ ಹಳೆಯ ದೇವಾಲಯದ ವಾಸ್ತು ಅವಶೇಷಗಳು ಚೆಲ್ಲಾಡಿವೆ. ಈ ಶಿಲ್ಪಾವಶೇಷಗಳ ಕಾಲಮಾನ ಕ್ರಿ.ಶ.೧೧-೧೨ನೆಯ ಶತಮಾನವೆಂದು ಹೇಳಬಹುದು.

ಇಲ್ಲಿನ ನಂದಿಕಂಬದ ಮೇಲೆ ಯಾದವ ರಾಮಚಂದ್ರನ ಕಾಲದ ಶಾಸನವಿದ್ದು, ಅದರಲ್ಲಿ ಸೊನ್ನಲಿಗೆಯ ಕಪಿಲಸಿದ್ದ ಮಲ್ಲಿಕಾರ್ಜುನನಿಗೆ ಬಿಟ್ಟ ದಾನದ ಉಲ್ಲೇಖವಿದೆ (ಕಲಬುರ್ಗಿ : ಧಾ ಜಿ ಶಾ ಸೂ).

೧೩

ಊರು ಕಿರೇಸೂರು
ಸ್ಥಳ ಕೆರೆ ದಂಡೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ  

ಇತ್ತೀಚೆಗೆ ನಿರ್ಮಿಸಿರುವ ದೇವಾಲಯವು ಆರ್.ಸಿ.ಸಿ. ರಚನೆಯಾಗಿದ್ದು, ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ಹಳೆಯ ದೇವಾಲಯಕ್ಕೆ ಸಂಬಂಧಿಸಿದ ಲಿಂಗಗಳು, ಮತ್ತಿತರ ಶಿಲ್ಪಾಶೇಷಗಳು ಹೊರಗೆ ಮರದ ಕೆಳಗಿವೆ. ಇಲ್ಲಿ ಪ್ರಾಚೀನ ದೇವಾಲಯವಿದ್ದು, ಅದು ಬಿದ್ದುಹೋದ ನಂತರ ಈಗಿನ ದೇವಾಲಯವನ್ನು ನಿರ್ಮಿಸಿದ್ದಾರೆ. ಕ್ರಿ.ಶ. ೧೬೨೩ ರ ಶಾಸನವೊಂದರಲ್ಲಿ ಈ ದೇವಾಲಯಕ್ಕೆ ಬಾಗಿಲನ್ನು ನಿರ್ಮಿಸಿದ ಬಗ್ಗೆ ಉಲ್ಲೇಖವುಂಟು (ಕಲಬುರ್ಗಿ :         ಧಾ ಜಿ ಶಾ ಸೂ).

ಗರ್ಭಗೃಹದಲ್ಲಿ ಹಳೆಯ ಲಿಂಗದ ರುದ್ರಭಾಗದ ಸುತ್ತಲೂ ಸಿಮೆಂಟಿನ ಚೌಕಟ್ಟನ್ನು ರಚಿಸಿ, ಅದನ್ನೇ ಕಲ್ಮೇಶ್ವರ ಲಿಂಗವೆಂದು ಪೂಜಿಸುತ್ತಿದ್ದಾರೆ. ದೇವಾಲಯದ ಎದುರಿಗಿರುವ ಕಲ್ಲುಗೂಡಿನಲ್ಲಿ ಭಗ್ನಗೊಂಡಿರುವ ಲಿಂಗವನ್ನಿಡಲಾಗಿದೆ. ಇದರ ಪಕ್ಕದಲ್ಲಿರುವ ಸ್ತ್ರೀಶಿಲ್ಪವನ್ನು ಪದ್ಮಾವತಿ ಎಂದು ಕರೆಯುತ್ತಾರೆ. ಈ ಶಿಲ್ಪ ಇತ್ತೀಚಿನದು. ದೇವಾಲಯದ ಮುಂಭಾಗದಲ್ಲಿ ಗೋಸಾಸದ ಆರುಕಲ್ಲುಗಳು ಕಂಡುಬರುತ್ತವೆ. ಹತ್ತಿರದ ಕುರುಬರ ಓಣಿಯಲ್ಲಿ ಸುಂದರ ರಚನೆಯ ಗಜಲಕ್ಷ್ಮಿ ಶಿಲ್ಪಫಲಕವನ್ನು ವದಿಕೆಯ ಮೇಲೆ ಅಳವಡಿಸಿ, ಕಮಾನು ಅಲಂಕರಣದ ಕಾಂಕ್ರೀಟ್‌ಗೂಡನ್ನು ನಿರ್ಮಿಸಿದ್ದಾರೆ. ಶಿಲ್ಪವು ಮಕರತೋರಣ, ಕೀರ್ತಿಮುಖ ಮತ್ತು ಸೂಕ್ಷ್ಮ ಕೆತ್ತನೆಗಳ ಅಲಂಕರಣದಿಂದ ಕೂಡಿದ್ದು, ನೋಡುಗರ ಗಮನವನ್ನು ಸೆಳೆದು ಮನಸ್ಸಿಗೆ ಮುದವನ್ನು ನೀಡುತ್ತದೆ. ಶಿಲ್ಪದ ಪೀಠಭಾಗದಲ್ಲಿ ನೃತ್ಯಗಾರ್ತಿಯರ ಮತ್ತು ಸಂಗೀತಗಾರರ ಉಬ್ಬುಶಿಲ್ಪಗಳನ್ನು ಬಿಡಿಸಲಾಗಿದೆ.

ಬಿದ್ದುಹೋದ ಹಳೆಯ ದೇವಾಲಯದ ತೊಲೆಯಲ್ಲಿದ್ದ ಕ್ರಿ.ಶ. ೧೬೨೩ ರ ಶಾಸನವು, ಸಂಕನಗೌಡನ ಮಗ ಲಿಂಗನಗೌಡನು ಬಾಗಿಲನ್ನು ನಿರ್ಮಿಸಿದನೆಂದು ತಿಳಿಸುತ್ತದೆ. ಆದರೆ ಇಂದು ಹಳೆ ದೇವಾಲಯದ ಯಾವುದೇ ವಾಸ್ತು ಅವಶೇಷಗಳು ಕಂಡುಬರುವುದಿಲ್ಲ. ಬಹುಶಃ ಹಳೆ ದೇವಾಲಯದ ನೆಲದಲ್ಲಿ ಹುಗಿದಿರಬಹುದು. ಇದರೊಂದಿಗೆ ಶಾಸನವಿದ್ದ ತೊಲೆಯು ಸಹ ಮಣ್ಣು ಸೇರಿರಬಹುದು.

೧೪

ಊರು ಕುರಡಿಕೇರಿ
ಸ್ಥಳ ಊರ ಮುಂಭಾಗ
ಸ್ಮಾರಕ ಈಶ್ವರ ದೇವಾಲಯ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಹಳೆಯ ದೇವಾಲಯದ ಅವಸಾನದ ನಂತರ ಈಗಿನ ದೇವಾಲಯವನ್ನು ನಿರ್ಮಿಸಿದ್ದಾರೆ. ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿರುವ ದೇವಾಲಯ ಸ್ಥಳೀಯ ಶೈಲಿಯಲ್ಲಿದೆ. ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಿಂದ ಕಟ್ಟಿದ್ದಾರೆ.

ದೇವಾಲಯದಲ್ಲಿ ಹಳೆಯ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ದೇವಾಲಯದ ದಕ್ಷಿಣ ಗೋಡೆಯಲ್ಲಿದ್ದ ಶಾಸನವನ್ನು, ಈಗ ಮುಂಭಾಗದಲ್ಲಿರುವ ಶಿಬಾರಗಟ್ಟಿಯ ಬಳಿ ಇಡಲಾಗಿದೆ. ಶಾಸನವು, ಕಲ್ಯಾಣ ಚಾಲುಕ್ಯರ ಆರನೆಯ ವಿಕ್ರಮಾದಿತ್ಯನಿಗೆ ಸಂಬಂಧಿಸಿದ್ದು, ಕ್ರಿ.ಶ.೧೧೦೮ ರ ಕಾಲಕ್ಕೆ ಸೇರಿದೆ. ದಂಡನಾಯಕ ಅನಂತಪಾಳನ ಸುಂಕಾಧಿಕಾರಿ ನಾರಣದೇವನು ಭೊಜಂಗೇಶ್ವರ (ಭುಜಂಗೇಶ್ವರವಿರಬಹುದು) ದೇವಾಲಯಕ್ಕೆ ಸುಂಕದಾನವನ್ನು ನೀಡುತ್ತಾನೆ. ಇದರಿಂದ ಈಶ್ವರ ದೇವಾಲಯದ ಪ್ರಾಚೀನ ಹೆಸರು ಭೊಜಂಗೇಶ್ವರ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.

೧೫

ಊರು ಕುರಡಿಕೇರಿ
ಸ್ಥಳ ಕೆರೆ ದಂಡೆ
ಸ್ಮಾರಕ ಶಂಕರ ದೇವರು
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯ ನೆಲಸಮಗೊಂಡಿದೆ. ಗರ್ಭಗೃಹವಿದ್ದಲ್ಲಿ ಈಗ ಲಿಂಗ ಮತ್ತಿತರ ಶಿಲ್ಪಾವಶೇಷಗಳಿವೆ. ಬಹುತೇಕ ದೇವಾಲಯಗಳು ಹಾಳಾಗಿದ್ದರೂ, ಶಿಲ್ಪಾವಶೇಷಗಳು ಅಲ್ಲಿಯೇ ಇರುತ್ತವೆ. ಜನರ ಆರ್ಥಿಕಶಕ್ತಿ ಮತ್ತು ಸಂಬಂಧಗಳ ಕೊರತೆಗಳಿಂದಾಗಿ ಹೊಸ ದೇವಾಲಯಗಳು ನಿರ್ಮಾಣಗೊಂಡಿಲ್ಲ. ಪರಿಣಾಮವಾಗಿ ಹಳೆಯ ದೇವಾಲಯಗಳ ಶಿಲ್ಪಾವಶೇಷಗಳು ತೆರೆದ ಬಯಲಿನಲ್ಲಿ ಅನಾಥ ಸ್ಥಿತಿಯಲ್ಲಿವೆ.

ಕ್ರಿ.ಶ. ೧೧೨೬ ರ ಗೋವೆ ಕದಂಬರ ಎರಡನೆಯ ಜಯಕೇಶಿಯ ಶಾಸನವು, ಜಯಕೇಶಿ ದೇವನ ಪಟ್ಟಮಹಿಷಿ ಮೈಳಲದೇವಿಯು ಕುಡಿಯೇಶ್ವರ ದೇವರಿಗೆ ಸುಂಕವನ್ನು ದಾನ ನೀಡಿದಳೆಂದು ತಿಳಿಸುತ್ತದೆ (ಕಲಬುರ್ಗಿ : ಧಾ ಜಿ ಶಾ ಸೂ). ಅಂದರೆ ಈಗಿನ ಶಂಕರದೇವರು ಎಂದು ಕರೆಯುವ ಲಿಂಗ ಪ್ರಾಚೀನ ಕುಡಿಯೇಶ್ವರ ದೇವಾಲಯಕ್ಕೆ ಸಂಬಂಧಿಸಿದೆ. ಈ ಊರಿನ ಸ್ಥಳನಾಮವು ಅಲ್ಲಿನ ದೇವಾಲಯ ಮತ್ತು ಕೆರೆಯ ಮೂಲಗಳಿಂದ ಹುಟ್ಟಿಕೊಂಡಂತೆ ಕಾಣುವುದು.