೭೬

ಊರು ವನಹಳ್ಳಿ
ಸ್ಥಳ ದ್ಯಾಮವ್ವ ಗುಡಿ ಓಣಿ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಈ ಊರಿನಲ್ಲಿದ್ದ ಹಳೆಯ ದೇವಾಲಯ ಬಿದ್ದು ಹೋಗಿದ್ದು, ಇತ್ತೀಚೆಗೆ ಮಣ್ಣಿನಲ್ಲಿ ಕೊಠಡಿಯೊಂದನ್ನು ನಿರ್ಮಿಸಿದ್ದಾರೆ. ಇದರಲ್ಲಿ ಹಳೆಯ ದೇವಾಲಯಕ್ಕೆ ಸೇರಿದ ಲಿಂಗ, ಗಣಪತಿ ಮತ್ತು ನಂದಿ ಶಿಲ್ಪಗಳನ್ನಿಟ್ಟು ಪೂಜಿಸಲಾಗುತ್ತಿದೆ.

೭೭

ಊರು ವನಹಳ್ಳಿ
ಸ್ಥಳ ಗೌಡರ ಓಣಿ
ಸ್ಮಾರಕ ಕಾಶಿವಿಶ್ವನಾಥ ಗುಡಿ
ಅಭಿಮುಖ ಪಶ್ಚಿಮ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆ ರಚನೆಯ ದೇವಾಲಯವಿದು. ಗರ್ಭಗೃಹ ಮತ್ತು ಮುಖಮಂಟಪಗಳಿವೆ. ಗರ್ಭಗೃಹದಲ್ಲಿರುವ ಲಿಂಗ ಹಳೆಯದು. ಬಹುಶಃ ಇದನ್ನು ಬೇರೆಡೆಯಿಂದ ತಂದಿಟ್ಟಂತೆ ಕಾಣುತ್ತದೆ.

೭೮

ಊರು ವನಹಳ್ಳಿ
ಸ್ಥಳ ಹಳೆ ಊರಿನ ನಿವೇಶನ
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಹಿಂದೂ-ಮುಸ್ಲಿಂ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚೆಗೆ ನಿರ್ಮಾಣಗೊಂಡಿರುವ ದೇವಾಲಯವಿದು. ಗರ್ಭಗೃಹ ಮತ್ತು ಮುಖಮಂಟಪಗಳಿವೆ. ಈ ಮೊದಲು ಮಾಳಿಗೆ ಶೈಲಿಯ ದೇವಾಲಯವಿತ್ತು. ಅದು ಬಿದ್ದು ಹೋದ ನಂತರ ಈಗಿನ ದೇವಾಲಯಗಳನ್ನು ಇದೇ ಊರಿನ ಚನ್ನಬಸಯ್ಯ ಹಿರೇಮಠ ಎಂಬುವರು ಕಟ್ಟಿಸಿದ್ದಾರೆ. ಗರ್ಭಗೃಹದ ಒಳಗೆ ಗೋಡೆಯಲ್ಲಿ ಸುತ್ತಲೂ ಕಮಾನುಗಳ ರಚನೆಯಿದ್ದು, ಅದರ ಮೇಲೆ ಗುಮ್ಮಟವನ್ನು ನಿರ್ಮಿಸಲಾಗಿದೆ. ಮುಖಮಂಟಪವನ್ನು ಹೆಂಚಿನಿಂದ ಮುಚ್ಚಲಾಗಿದೆ. ಹೊರ ಗೋಡೆಯನ್ನು ದಿಂಡುಗಲ್ಲು ಮತ್ತು ಸಿಮೆಂಟಿನಿಂದ ಕಟ್ಟಿದ್ದಾರೆ. ಗುಮ್ಮಟದ ತಳದಲ್ಲಿ ಸುತ್ತಲೂ ಅಲಂಕರಣವುಂಟು. ತುದಿಯಲ್ಲಿ ಆಮಲಕದ (ನೆಲ್ಲಿಕಾಯಿ) ರಚನೆಯನ್ನು ಬಿಡಿಸಲಾಗಿದೆ.

ಗರ್ಭಗೃಹದಲ್ಲಿರುವ ಲಿಂಗ ಹಳೆಯದು. ಸಮಭಂಗಿಯಲ್ಲಿ ನಿಂತ ವಿಷ್ಣುವಿನ ಪ್ರಾಚೀನ ಶಿಲ್ಪವನ್ನು ಗೋಡೆಯಲ್ಲಿ ಅಳವಡಿಸಿದ್ದಾರೆ. ಹೊರಭಾಗದಲ್ಲಿ ಭಗ್ನಗೊಂಡಿರುವ ಗಣಪತಿ, ನಂದಿ, ಮತ್ತಿತರ ಶಿಲ್ಪಾವಶೇಷಗಳು ಕಂಡು ಬರುತ್ತವೆ. ಇಲ್ಲಿನ ಹೊಲಗಳಲ್ಲಿ ಶಾತವಾಹನರ ಕಾಲದ ಚಿತ್ರಿತ ಕೆಂಪುಮಡಿಕೆ ಚೂರುಗಳು ದೊರೆಯುತ್ತವೆ.

೭೯

ಊರು ವನಹಳ್ಳಿ
ಸ್ಥಳ ಗೌಡರ ಓಣಿ
ಸ್ಮಾರಕ ರಾಮಲಿಂಗೇಶ್ವರ ಗುಡಿ
ಅಭಿಮುಖ ದಕ್ಷಿಣ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚೆಗೆ ನಿರ್ಮಿಸಿದ ಕೊಠಡಿಯಲ್ಲಿ ಹಳೆಯ ಲಿಂಗವಿದೆ. ಮೇಲ್ಭಾಗವನ್ನು ಕಲ್ನಾರು ಶೀಟಿನಿಂದ ಮುಚ್ಚಲಾಗಿದೆ. ಹೊರಭಾಗದಲ್ಲಿ ಹಳೆಯ ದೇವಾಲಯದ ಕೆಲವು ವಾಸ್ತು ಅವಶೇಷಗಳು ಕಂಡುಬರುತ್ತವೆ. ಇಲ್ಲಿದ್ದ ಗಣಪತಿ, ನಂದಿ ಮುಂತಾದ ಶಿಲ್ಪಾವಶೇಷಗಳು ಭಗ್ನಗೊಂಡಿದ್ದರಿಂದ, ಅವುಗಳನ್ನು ಹತ್ತಿರದ ಕುಡಿಯುವ ನೀರಿನ ಬಾವಿಯಲ್ಲಿ ಹಾಕಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

೮೦

ಊರು ವೀರಾಪುರ
ಸ್ಥಳ ಕೋಟೂರು ರಸ್ತೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಭಗ್ನಗೊಂಡಿರುವ ಕೊಠಡಿಯಲ್ಲಿ ನಾಲ್ಕು ಕಲ್ಲುಗುಂಡುಗಳಿವೆ. ಹೊರಭಾಗದಲ್ಲಿರುವ ಬಿಲ್ವವೃಕ್ಷದ ಕೆಳಗೆ ಭಗ್ನಗೊಂಡಿರುವ ಸಣ್ಣಲಿಂಗ ಮತ್ತು ಕೆಲವು ವಾಸ್ತು ಅವೇಷಗಳಿವೆ. ಈ ದೇವಾಲಯವನ್ನು ಸ್ಥಳೀಯರು ಕಲ್ಮೇಶ್ವರ ಗುಡಿ ಎಂದು ಕರೆಯುತ್ತಾರೆ.

೮೧

ಊರು ಶಿಬಾರಗಟ್ಟಿ
ಸ್ಥಳ ಊರ ನಡುವೆ
ಸ್ಮಾರಕ ಈಶ್ವರ ದೇವರು
ಅಭಿಮುಖ ದಕ್ಷಿಣ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚಿನ ದೇವಾಲಯವಿದು. ಗರ್ಭಗೃಹ ಮತ್ತು ಸಭಾಗೃಹಗಳಿವೆ. ಗರ್ಭಗೃಹದ ಗೋಡೆಯನ್ನು ಕಲ್ಲು ಮತ್ತು ಮಣ್ಣಿನಿಂದ ಒರಟಾಗಿ ಕಟ್ಟಲಾಗಿದೆ. ಚಾವಣಿಯನ್ನು ಕಲ್ಲಿನ ಹಲಗೆಗಳನ್ನು ಅಷ್ಟಮೂಲೆಗಳಲ್ಲಿ ಬಳಸಿ ಮುಚ್ಚಲಾಗಿದೆ. ಮುಂದಿನ ಸಭಾಗೃಹ ಹೆಂಚಿನದು.

ಗರ್ಭಗೃಹದಲ್ಲಿ ಹಳೆಯದೆನ್ನಬಹುದಾಗ ಸಣ್ಣಲಿಂಗವಿದ್ದು, ಇದರ ರುದ್ರಭಾಗ ಬಿಳಿ ವರ್ಣದ್ದಾಗಿದೆ.

೮೨

ಊರು ಶೇಡಬಾಳ
ಸ್ಥಳ ಗುಡ್ಡದ ಮೇಲೆ
ಸ್ಮಾರಕ ಬನಶಂಕರಿ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಒಳಗೊಂಡಿರುವುದು. ಗರ್ಭಗೃಹದಲ್ಲಿ ಬನಶಂಕರಿ ಶಿಲ್ಪ ಮತ್ತು ಹಳೆಯ ಲಿಂಗವಿದೆ. ಈ ಶಿಲ್ಪಗಳು ಭೂಮಿಯಲ್ಲಿ ದೊರೆತವೆಂದು ಸ್ಥಳೀಯರು ತಿಳಿಸುತ್ತಾರೆ. ಬನಶಂಕರಿಗೆ ಸಿಂಹವಾಹನವಿದ್ದು, ಅದನ್ನು ಇತ್ತೀಚೆಗೆ ಸಿಮೆಂಟಿನಿಂದ ಮಾಡಿಸಿದ್ದಾರೆ.

೮೩

ಊರು ಸತ್ತೂರು
ಸ್ಥಳ ಊರ ದಕ್ಷಿಣ ವಲಯ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯದ ಭಾಗವಾಗಿ ಗರ್ಭಗೃಹ ಮಾತ್ರ ಉಳಿದಿದೆ. ಇದರ ಮೇಲೆ ಮಣ್ಣು ತುಂಬಲಾಗಿದೆ. ಗರ್ಭಗೃಹಕ್ಕೆ ದ್ವಾರವಿಲ್ಲ.

ಗರ್ಭಗೃಹದಲ್ಲಿ ಲಿಂಗವಿದೆ. ಹೊರಗೆ ಭಗ್ನಗೊಂಡ ಕಾರ್ತಿಕೇಯ, ಗಣಪತಿ, ಸೂರ್ಯ, ದಕ್ಷ, ಸರಸ್ವತಿ, ಸ್ತಮಾತೃಕೆಯರ ಶಿಲ್ಪಫಲಕ, ಲಿಂಗ, ರುದ್ರಭಾಗ, ನಾಗ ಮತ್ತಿತರ ಶಿಲ್ಪಾವೇಷಗಳು ಕಂಡುಬರುತ್ತವೆ. ಈ ಊರಿನ ಬಸವಣ್ಣನ ಗುಡಿ ಮುಂಭಾಗದಲ್ಲಿ ವೀರಸತಿಗಲ್ಲಿದೆ.

೮೪

ಊರು ಸಿಂಗನಹಳ್ಳಿ
ಸ್ಥಳ ಹಳ್ಳದ ದಂಡೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಕಲ್ಲು ಮತ್ತು ಮಣ್ಣಿನ ಭಗ್ನ ಕೊಠಡಿಯೇ ದೇವಾಲಯ. ಒಳಭಾಗದಲ್ಲಿ ಪ್ರಾಚೀನ ಲಿಂಗವಿದ್ದು, ಅದರ ರುದ್ರಭಾಗವಿಲ್ಲ. ಹೊರಬಾಗದಲ್ಲಿ. ಭಗ್ನಗೊಂಡ ಶಾಸನಗಳು, ಭಗ್ನ ಗಣಪತಿ ಮತ್ತಿತರ ಅವಶೇಷಗಳು ಕಂಡುಬರುತ್ತವೆ.

ಇಲ್ಲಿರುವ ಶಾಸನಗಳು ಕ್ರಮವಾಗಿ ಕ್ರಿ.ಶ. ೧೧೨೩-೨೪ ಮತ್ತು ಕ್ರಿ.ಶ. ೧೧೩೬ ಕ್ಕೆ ಸೇರಿವೆ (ಸೌಇಇ XV : ೭, ೨೨೭). ಇವು ಬ್ರಹ್ಮಸಭೆಯನ್ನು ಮತ್ತು ಜಯಕೇಶಿ ಹಾಗೂ ಮೈಳಲದೇವಿಯರು ನೀಡಿದ ದಾನವನ್ನು ಉಲ್ಲೇಖಿಸಿವೆ. ಅಂದರೆ ಮೇಲಿನ ದೇವಾಲಯವು ಗೋವೆ ಕದಂಬರಿಂದ ದಾನದತ್ತಿಗಳನ್ನು ಪಡೆದಿದೆ. ಹಾಗಾಗಿ ಇಲ್ಲಿ ಪ್ರಾಚೀನ ದೇವಾಲಯವಿದ್ದು, ಅದು ನಶಿಸಿದ ನಂತರ ಈಗಿನ ಗುಡಿಯನ್ನು ನಿರ್ಮಿಸಿರುವುದು ಸ್ಪಷ್ಟವಾಗುವುದು.

೮೫

ಊರು ಸಿದ್ಧಾಪುರ
ಸ್ಥಳ ಊರ ದಕ್ಷಿಣ
ಸ್ಮಾರಕ ಸಿದ್ಧಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮೂಲತಃ ಇದು ತ್ರಿಕೂಟ ದೇವಾಲಯ. ಪ್ರಧಾನ ಗರ್ಭಗೃಹವು ಅರ್ಧಮಂಟಪವನ್ನು ಹೊಂದಿದ್ದು, ಉತ್ತರ ಮತ್ತು ದಕ್ಷಿಣದ ಗರ್ಭಗೃಹಗಳು ನವರಂಗಕ್ಕೆ ಹೊಂದಿಕೊಂಡಿವೆ. ದೇವಾಲಯ ಭಗ್ನಗೊಂಡಿದ್ದು, ನವರಂಗದ ಚಾವಣಿ ಸಂಪೂರ್ಣವಾಗಿ ಹಾಳಾಗಿ ತೆರದ ಸ್ಥತಿಯಲ್ಲಿದೆ. ಅರ್ಧಮಂಟಪದ ಪ್ರವೇಶದಲ್ಲಿ ಅಲಂಕರಣಕ್ಕಾಗಿ ನಿಲ್ಲಿಸಿದ್ದ ಎರಡು ಕಂಬಗಳಲ್ಲಿ ಈಗ ಒಂದನ್ನು ಮಾತ್ರ ಕಾಣಬಹುದು. ನವರಂಗ ಭಾಗವು ನಕ್ಷತ್ರಾಕಾರದಲ್ಲಿದೆ. ಕಂಬಗಳು ಸರಳವಾಗಿದ್ದು, ಚೌಕರಚನೆಯವು. ಕಂಬಗಳ ಮೇಲ್ಭಾಗದ ನಾಲ್ಕು ಮುಖಗಳಲ್ಲಿ ತ್ರಿಭುಜದ ಉಬ್ಬುರಚನೆಗಳ ಅಲಂಕರಣವಿದೆ. ದೇವಾಲಯದ ಹೊರಗೋಡೆಯಲ್ಲಿ ಯಾವುದೇ ಅಲಂಕರಣವಿಲ್ಲ. ನಯವಾದ ಸಣ್ಣ ಚಪ್ಪಡಿಕಲ್ಲುಗಳನ್ನು ಜೋಡಿಸಿ ಗೋಡೆ ನಿರ್ಮಿಸಿದ್ದಾರೆ. ಇವೆಲ್ಲವೂ ಅಪಾಯದ ಅಂಚಿನಲ್ಲಿವೆ. ನವರಂಗದ ಮಧ್ಯಭಾಗದಲ್ಲಿ ಬಿಲ್ವವೃಕ್ಷ ಬೆಳೆದು ನಿಂತಿದೆ. ಹೊರಭಾಗದಲ್ಲಿ ದೇವಾಲಯದ ಕಂಬ ಮೊದಲಾದ ವಾಸ್ತು ಅವಶೇಷಗಳು ಬಿದ್ದಿವೆ.

ಪ್ರಧಾನ ಗರ್ಭಗೃಹ ಮತ್ತು ನವರಂಗದ ನಾಲ್ಕು ಮೂಲೆ ಅಂಕಣಗಳಲ್ಲಿ ಇತ್ತೀಚೆಗೆ ಹೊಸದಾಗಿ ಮಾಡಿಸಿದ ಲಿಂಗಗಳನ್ನು ಪ್ರತಿಷ್ಠಾಪಿಸಿದ್ದಾರೆ. ಉಳಿದೆರಡು ಗರ್ಭಗೃಹಗಳಲ್ಲಿ ಲಿಂಗಗಳಿಲ್ಲ. ನವರಂಗದಲ್ಲಿ ಗಣಪತಿಯ ಉಬ್ಬುಶಿಲ್ಪಳಫಲಕವಿದೆ. ಹೊರಭಾಗದಲ್ಲಿ ಹಳೆಯ ಲಿಂಗಗಳು, ಭಗ್ನಗೊಂಡ ನಂದಿ ಮತ್ತಿತರ ಶಿಲ್ಪಾವಶೇಷಗಳಿವೆ. ಈ ದೇವಾಲಯದ ಲಿಂಗವೊಂದನ್ನು ವೀರಾಪುರದ ಗ್ರಾಮಸ್ಥರು ಒಯ್ದು, ಅಲ್ಲಿನ ಮಡಿವಾಳಜ್ಜನ ಮಠದ ಮುಂದೆ ಇಟ್ಟಿದ್ದಾರೆಂದು ಸ್ಥಳೀಯರು ತಿಳಿಸುತ್ತಾರೆ. ಇದೇ ಊರಿನಲ್ಲಿ ದೊಡ್ಡ ನಂದಿಶಿಲ್ಪವಿದ್ದು, ನಿಧಿ ಆಸೆಯಿಂದ ಉದ್ದುದ್ದವಾಗಿ ಸೀಳಿದ್ದಾರೆ. ಈ ಶಿಲ್ಪವಿರುವಲ್ಲಿ ಕೆಲವು ವಾಸ್ತು ಅವಶೇಷಗಳು ಕಂಡುಬರುತ್ತವೆ. ಬಹುಶಃ ಇಲ್ಲಿ ಒಂದು ಶಿವಾಲಯವಿದ್ದು, ಅದು ಕಾಲಾಂತರದಲ್ಲಿ ಹಾಳಾಗಿರಬಹುದು. ಇದು, ಇಲ್ಲಿನ ಶಾಸನಗಳು ಉಲ್ಲೇಖಿಸುವ ಮೂಲಸ್ಥಾನದೇವರಿರಬಹುದು.

ಇಲ್ಲಿನ ಶಾಸನಗಳು ಗೋವೆ ಕದಂಬರ ಕಾಲಕ್ಕೆ ಸೇರಿವೆ. ದೇವಾಲಯದ ಮುಂದಿರುವ ಕ್ರಿ.ಶ.೧೧೫೮ರ ಶಾಸನವು, ಹೊಸವೊಳಲದ ತೋಂಟಿಗರು ಮತ್ತು ಪ್ರಜೆಗಳು ಪಂಚಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ಭೂದಾನ ನೀಡಿದರೆಂದಿದೆ (ಸೌಇಇ XV : ೨೨೯). ಹನುಮಂತದೇವರ ಗುಡಿ ಮುಂದಿರುವ ಕ್ರಿ.ಶ.೧೧೨೦ರ ಶಾಸನವು, ಪೊಸವೊಳಲದ ಮೂಲಸ್ತಾನ ದೇವರಿಗೆ ಭೂಮಿ ಮತ್ತು ಹಣವನ್ನು ದಾನ ಮಾಡಿದ ಬಗ್ಗೆ ತಿಳಿಸುವುದು (ಅದೇ XI : ii ೧೯೪). ಶಿವಮಂಟಪದ ಮುಂದಿರುವ ಕ್ರಿ.ಶ ೧೧೩೫ರ ಶಾಸನದಲ್ಲಿ ಪೊಸವೊಳಲದ ಮೂಲಸ್ತಾನ ದೇವರಿಗೆ ಹಳ್ಳಗಾವುಂಡ ಎಂಬುದನ್ನು ದಾನ ನೀಡಿದ ಉಲ್ಲೇಖವುಂಟು (ಅದೇ XV : ೧೪). ಇಲ್ಲಿನ ಭಗವತಿ ಪಾದಪೀಠದ ಶಾಸನವು ಅಸ್ಪಷ್ಟವಿದೆ. ಈ ಶಾಸನಗಳ ಮಾಹಿತಿಯಿಂದ ಈ ಊರಿನ ಪ್ರಾಚೀನ ಹೆಸರು ಹೊಸವೊಳಲು ಎಂದು ತಿಳಿದುಬರುವುದು. ಮೇಲೆ ಹೇಳಿದ ಸಿದ್ದಲಿಂಗೇಶ್ವರ ದೇವಾಲಯದ ಮೂಲ ಹೆಸರು ಪಂಚಲಿಂಗೇಶ್ವರ ಎಂದಿರಬಹುದು. ಏಕೆಂದರೆ ಈ ದೇವಾಲಯದಲ್ಲಿ ಜೀರ್ಣೋದ್ಧಾರಗೊಂಡ ಕುರುಹುಗಳು ಕಂಡುಬರುತ್ತವೆ.

೮೬

ಊರು ಹಂಗರಿಕಿ
ಸ್ಥಳ ಊರ ಮುಂಭಾಗ
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚಿನ ದೇವಾಲಯವಿದು. ದಿಂಡುಗಲ್ಲಿನಿಂದ ನಿರ್ಮಿಸಿರುವ ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಹೊಂದಿದೆ. ಗರ್ಭಗೃಹದ ಚಾವಣಿ ಕಲ್ಲಿನದು. ಸಭಾಗೃಹದ ಚಾವಣಿಯನ್ನು ಸೀಮೆಹೆಂಚಿನಿಂದ ಮುಚ್ಚಲಾಗಿದೆ. ದೇವಾಲಯದ ಮುಂಭಾಗದಲ್ಲಿ ಹಳೆ ದೇವಾಲಯದ ಕಂಬಗಳು ಕಂಡುಬರುತ್ತವೆ.

ಗರ್ಭಗೃಹದಲ್ಲಿರುವ ಲಿಂಗ ಸಣ್ಣದಿದ್ದು, ಪ್ರಾಚೀನವಾದುದೆನ್ನಬಹುದು.

೮೭

ಊರು ಹಂಗರಕಿ
ಸ್ಥಳ ಗರಗ ರಸ್ತೆ
ಸ್ಮಾರಕ ಸಿದ್ಧಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇದು ಇತ್ತೀಚಿನ ದೇವಾಲಯ. ಗರ್ಭಗೃಹ ಮತ್ತು ಸಭಾಗೃಹಗಳನ್ನು ಹೊಂದಿದೆ. ಗೋಡೆ ದಿಂಡುಗಲ್ಲಿನದು. ಗರ್ಭಗೃಹದ ಚಾವಣಿಯಲ್ಲಿ ಕಲ್ಲನ್ನು ಹಾಸಲಾಗಿದೆ. ಸಭಾಗೃಹದ ಚಾವಣಿಯನ್ನು ಸೀಮೆ ಹೆಂಚಿನಿಂದ ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿರುವ ಲಿಂಗ ಹಳೆಯದಿದ್ದು, ಕಲ್ಯಾಣ ಚಾಲುಕ್ಯರ ಕಾಲದ್ದೆನ್ನಬಹುದು.

೮೮

ಊರು ಹನುಮನಕೊಪ್ಪ
ಸ್ಥಳ ಲೋಕೂರ ಅಗಸಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಸ್ಥಳೀಯ ಶೈಲಿಯಲ್ಲಿರುವ ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿರುವ ದೇವಾಲಯವಿದು. ಗರ್ಭಗೃಹದಲ್ಲಿರುವ ಲಿಂಗ ಪ್ರಾಚೀನವಾದುದು. ಲಿಂಗದ ಹಿಂಭಾಗದಲ್ಲಿ ಸುಮಾರು ೧೭-೧೮ನೆಯ ಶತಮಾನಕ್ಕೆ ಸೇರುವ ಭೈರವಿ ಶಿಲ್ಪವಿದೆ. ಸಭಾಗಮಂಟಪದಲ್ಲಿರುವ ನಂದಿಶಿಲ್ಪ ಇತ್ತೀಚಿನದು. ಉಳಿದಂತೆ ಇನ್ಯಾವುದೇ ಪ್ರಾಚೀನ ಶಿಲ್ಪಾವಶೇಷಗಳು ಕಾಣಬರುವುದಿಲ್ಲ.

೮೯

ಊರು ಹನುಮನಾಳ
ಸ್ಥಳ ಮೆಳಪ್ಪನ ಹೊಲ
ಸ್ಮಾರಕ ಕಲ್ಮೇಶ್ವರ ಲಿಂಗ
ಅಭಿಮುಖ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ಗ್ರಾಮದ ಮೆಳಪ್ಪ ಮಡಿವಾಳರ ಜಮೀನಿನಲ್ಲಿರುವ ಬೇವಿನ ಮರದ ಕೆಳಗೆ ಹಳೆಯ ಲಿಂಗ, ಲಿಂಗದ ಯೋನಿಪೀಠ, ನಂದಿ ಮತ್ತಿತರ ಭಗ್ನಶಿಲ್ಪಾವಶೇಷಗಳು ಕಂಡುಬರುತ್ತವೆ. ಈ ಶಿಲ್ಪಾವಶೇಷಗಳು ಇದೇ ಜಮೀನಿನ ಭೂಮಿಯಲ್ಲಿ ದೊರೆತಿವೆ. ಊರಿನ ಮೆಳಮ್ಮ ದೇವಿಯ ಗುಡಿ ಮುಂಭಾಗದಲ್ಲಿ ಭಗ್ನಗೊಂಡಿರುವ ಭೈರವಿ ಮತ್ತು ವೀರನೊಬ್ಬನ ಶಿಲ್ಪಗಳಿವೆ. ಇಲ್ಲಿ ಮೆಳಮ್ಮ ಎಂಬುದು ಮಾಳಮ್ಮ ಎಂಬುದರ ರೂಪಾಂತರವಿರಬಹುದು.

೯೦

ಊರು ಹಳ್ಳಿಗೇರಿ
ಸ್ಥಳ ಊರ ಪೂರ್ವ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಕೊಠಡಿಯಲ್ಲಿ ಪ್ರಾಚೀನ ಕಾಲದ ಲಿಂಗ ಹಾಗು ಸಣ್ಣ ನಂದಿಶಿಲ್ಪವಿದೆ. ಹೊರಭಾಗದಲ್ಲಿ ಗಣಪತಿ ಮತ್ತಿತರ ಶಿಲ್ಪಾವಶೇಷಗಳಿವೆ. ಇದರಿಂದ ಇಲ್ಲಿ ಹಳೆಯ ದೇವಾಲಯವಿದ್ದು, ಅದು ಹಾಳಾಗಿರುವುದನ್ನು ಗ್ರಹಿಸಬಹುದಾಗಿದೆ.