ಧಾರವಾಡ ತಾಲೂಕು

ಧಾರವಾಡ ತಾಲೂಕು

ಊರು ಅಗಸನಹಳ್ಳಿ
ಸ್ಥಳ ಊರ ಮುಂಭಾಗ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ
ಸಂರಕ್ಷಣೆ

ಹಳೆಯ ಮಾಳಿಗೆ ದೇವಾಲಯವನ್ನು ಕೆಡವಿ ಹೊಸದಾಗಿ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ. ಜೊತೆಗೆ ಹೊಸ ಲಿಂಗ ಮತ್ತು ನಂದಿ ಶಿಲ್ಪಗಳನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ಹಳೆಯ ದೇವಾಯದ ಲಿಂಗ, ನಂದಿ, ವೀರಗಲ್ಲು ಮತ್ತಿತರ ಶಿಲ್ಪಾವಶೇಷಗಳು ಹೊರ ಭಾಗದಲ್ಲಿವೆ.

ಊರು ಅಮ್ಮಿನಬಾವಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೨-೧೩ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯರು
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ತೆರೆದ ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದ್ವಾರದ ಮೇಲಿನ ಫಲಕದಲ್ಲಿ ದ್ರಾವಿಡ ಶಿಖರಗಳನ್ನು ಉಬ್ಬುಶಿಲ್ಪಗಳಲ್ಲಿ ಬಿಡಿಸಲಾಗಿದೆ. ಅಂತರಾಳದ್ವಾರದ ಫಲಕದಲ್ಲಿ ಮಕರತೋರಣದ ಅಲಂಕರಣವುಂಟು. ಬಾಗಿಲುವಾಡಗಳ ಇಕ್ಕೆಲಗಳಲ್ಲಿ ಜಾಲಂಧ್ರಗಳಿವೆ. ಬಾಗಿಲುವಾಡಗಳಲ್ಲಿ ಅರ್ಧಕಂಬ ಮತ್ತು ಲತಾಬಳ್ಳಿಗಳ ರಚನೆಯನ್ನು ಕಾಣಬಹುದು. ತೆರೆದ ಸಭಾಮಂಟಪವನ್ನು ೧೯೯೧ರಲ್ಲಿ ನಿರ್ಮಿಸಿದ್ದಾರೆ. ದೇವಾಲಯವು ಅಧಿಷ್ಠಾನದ ಮೇಲಿದ್ದು, ಹೊರಗೋಡೆಯನ್ನು ಕಲ್ಲು ಮತ್ತು ಸಿಮೆಂಟಿನಿಂದ ಕಟ್ಟಲಾಗಿದೆ.

ದೇವಾಲಯದಲ್ಲಿ ಲಿಂಗ, ನಂದಿ, ಭೈರವಿ ಮತ್ತು ವಿಷ್ಣು ಶಿಲ್ಪಗಳಿವೆ. ಮುಂಭಾಗದ ಗೋಡೆಯಲ್ಲಿ ಕೀರ್ತಿಮುಖದ ಅಲಂಕರಣವಿರುವ ನಾಗಶಿಲ್ಪವನ್ನು ಅಳವಡಿಸಲಾಗಿದೆ.

ಈ ಊರಿನ ಎರಡು ಶಾಸನಗಳು ಕ್ರಮವಾಗಿ ಕ್ರಿ.ಶ.೧೦೭೧-೭೨ ಮತ್ತು ಕ್ರಿ.ಶ. ೧೧೪೬ರ ಕಾಲಕ್ಕೆ ಸೇರಿದ್ದು, ಅಮ್ಮಯ್ಯನ ಬಾವಿಯ ಶಿವಾಲಯವನ್ನು ಮತ್ತು ಸ್ವಯಂಭು ಮೂಲಸ್ತಾನ ದೇವರನ್ನು ಉಲ್ಲೇಖಿಸುತ್ತವೆ (ಸೌಇಇ XI-ii : ೧೨೧; XV : ೩೧). ಈ ಎರಡೂ ಶಾಸನಗಳಲ್ಲಿ ಉಲ್ಲೇಖಗೊಂಡಿರುವ ದೇವಾಲಯಗಳು ಒಂದೇ ದೇವಾಲಯವೆ ಎಂಬುದನ್ನು ಪರಿಶೀಲಿಸಬೇಕಾಗಿದೆ. ಹಾಗು ಮೇಲಿನ ಕಲ್ಮೇಶ್ವರ ದೇವಾಲಯವು, ಶಾಸನೋಕ್ತ ದೇವಾಲಯಗಳಲ್ಲಿ ಯಾವುದು ಎಂಬುದನ್ನು ಗುರುತಿಸಬೇಕಾಗಿದೆ. ಈ ದೇವಾಲಯದ ವೀರಗಲ್ಲು ಕ್ರಿ.ಶ. ೧೨೪೩ರ ಗೋವೆ ಕದಂಬ ತ್ರಿಭುವನ ಮಲ್ಲನ ಆಳ್ವಿಕೆಗೆ ಸೇರಿದೆ. ತ್ರಿಭುವನ ಮಲ್ಲದೇವನ ಮಹಾಪಸಾಯಿತನಾದ ಮಾಯಿನಾಯಕನ ವೀರಮರಣವನ್ನು ಉಲ್ಲೇಖಿಸುವುದು(ಸೌಇಇ XV : ೨೩೧). ಕ್ರಿ.ಶ. ೧೨೮೪ರ ಶಾಸನವೊಂದು, ಅಮ್ಮಿನಬಾವಿಯ ಮಡಿವಾಳರು ಮಾಚಿದೇವನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದರೆಂದಿದೆ (ಕ.ಭಾ. : ೬-೪).

ಊರು ಅಮ್ಮಿನಬಾವಿ
ಸ್ಥಳ ಊರ ನಡುವೆ
ಸ್ಮಾರಕ ನೇಮಿನಾಥ ಜಿನಾಲಯ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೨-೧೩ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಜಿನಾಲಯವು ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಒಳಗೊಂಡಿದ್ದು, ಜೀರ್ಣೋದ್ಧಾರಗೊಂಡಿದೆ. ನವರಂಗದಲ್ಲಿ ತಿರುಗಣೆ ಯಂತ್ರದಿಂದ ಕಡೆದ ಕಂಬಗಳಿವೆ.ಕಂಬಗಳು ಬಳೆಗಳ ಮತ್ತು ಸೂಕ್ಷ್ಮಕೆತ್ತನೆಯ ಅಲಂಕರಣದಿಂದ ಕೂಡಿವೆ. ನವರಂಗದ ಮುಂದಿರುವ ಸಭಾಮಂಟಪವನ್ನು ಸಿಮೆಂಟಿನಿಂದ ಇತ್ತೀಚೆಗೆ ನಿರ್ಮಿಸಲಾಗಿದೆ. ಗರ್ಭಗೃಹದ ಮೇಲೆ ಶಿಖರವುಂಟು.

ಗರ್ಭಗೃಹದಲ್ಲಿ ನೇಮಿನಾಥ ಶಿಲ್ಪವಿದೆ. ಮುಂದಿನ ಅಂತರಾಳದಲ್ಲಿ ಪಾರ್ಶ್ವನಾಥ, ಆದಿನಾಥ ಮತ್ತು ಮಹಾವೀರರ ಶಿಲ್ಪಗಳಿವೆ. ಹಾಗು ಇಪ್ಪತ್ತನಾಲ್ಕು ತೀರ್ಥಂಕರರ ಸೂಕ್ಷ್ಮ ಶಿಲ್ಪಗಳು ಕಂಡುಬರುತ್ತವೆ. ಉಳಿದಂತೆ ಲೋಹಶಿಲ್ಪಳಿವೆ.

ಬಸದಿಯ ಮೇಲ್ಛಾವಣಿಯಲ್ಲಿರುವ ಕ್ರಿ.ಶ. ೧೦೭೧-೭೨ರ ಶಾಸನವು, ಕಂಬ ಜಯಕೇಶಿ ಗೋವೆಯನ್ನಾಳುವಾಗ, ಶಿವದಾಸಯ್ಯ ಎಂಬುವನು ಅಮ್ಮಯ್ಯನಬಾವಿಯಲ್ಲಿ ಶಿವಾಲಯವನ್ನು ನಿರ್ಮಿಸಿ ಭೂದಾನ ಮಾಡಿದನೆಂದಿದೆ (ಸೌಇಇXI-ii : ೧೨೧). ಬಸದಿ ಎದುರಿನ ಎರಡು ಶಾಸನಗಳು, ಕ್ರಮವಾಗಿ ಕ್ರಿ.ಶ. ೧೧೧೨ ಮತ್ತು ೧೧೪೬ ಕ್ಕೆ ಸೇರಿವೆ (ಸೌಇಇXI-ii : ೧೯೧ : -XV ೩೧). ಇವು ಆದಿತ್ಯದೇವನ ಸತ್ರಕ್ಕೆ ಸೇರಿದ ಭೂದಾನವನ್ನು ಮತ್ತು ಸ್ವಯಂಭು ಮೂಲಸ್ಥಾನದೇವರಿಗೆ ನೀಡಿದ ಭೂದಾನವನ್ನು ಉಲ್ಲೇಖಿಸುತ್ತವೆ. ಸು. ೧೨ನೆಯ ಶತಮಾನದ ವರ್ಧಮಾನ ಪೀಠದಲ್ಲಿರುವ ಶಾಸನವು, ಬಮ್ಮಿಶೆಟ್ಟಿ ಎಂಬುವನು ಚಂದ್ರನಾಥನ ವಿಗ್ರಹವನ್ನು ಮಾಡಿಸಿದನೆಂದಿದೆ (ಕಲಬುರ್ಗಿ : ಧಾ ಜಿ ಶಾ ಸೂ). ಅಂದರೆ ವರ್ಧಮಾನ ಶಿಲ್ಪವು ವಾಸ್ತವಾಗಿ ಚಂದ್ರನಾಥನ ಶಿಲ್ಪವಾಗಿದೆ. ಇನ್ನೊಂದು ಶಾಸನ ನೇಮಿನಾಥನ ಪೀಠದ ಮೇಲಿದ್ದು, ೧೮೯೨ರಲ್ಲಿ ಬಲ್ಲಾಳರಾವ ಒಡೆಯರ್ ದೇಸಾಯಿ ಅವರಿಂದ ನೇಮಿನಾಥ ವಿಗ್ರಹ ಸ್ಥಾಪನೆಗೊಂಡಿತೆಂದು ತಿಳಿಸುತ್ತದೆ. ಮೇಲಿನ ಜಿನಾಲಯ ಪ್ರಾಚೀನವಾಗಿದ್ದು, ಅಲ್ಲಿ ಪ್ರತಿಷ್ಠಾಪಿಸಿರುವ ನೇಮಿನಾಥ ಶಿಲ್ಪ ಇತ್ತೀಚಿನದು. ಹಾಗು ಬಸದಿಯ ಜೀರ್ಣೋದ್ಧಾರದ ಸಂದರ್ಭದಲ್ಲಿ ಈ ಊರಿನ ಶಿವಾಲಯವೊಂದರ ವಾಸ್ತು ಅವಶೇಷಗಳನ್ನು ತಂದು ಬಳಸಿರಬೇಕು.

ಊರು ಅಮ್ಮಿನಬಾವಿ
ಸ್ಥಳ ಊರ ನಡುವೆ
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೨-೧೩ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಜೀರ್ಣೋದ್ಧಾರಗೊಂಡಿದ್ದು, ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಹೊಂದಿದೆ. ಕಟ್ಟಡವು ಕುಬ್ಜವಾಗಿದ್ದು, ಸರಳರಚನೆಯದು. ಗರ್ಭಗೃಹದ ಬಾಗಿಲುವಾಡಗಳಲ್ಲಿ ಅರ್ಧಕಂಬಗಳನ್ನು ಬಿಡಿಸಲಾಗದೆ. ಲಲಾಟಬಿಂಬವಿಲ್ಲ. ಬದಲಿಗೆ ಕದಂಬನಾಗರ ಶೈಲಿಯ ತೋರಣವಿದೆ. ಅಂತರಾಳದ ಬಾಗಿಲುವಾಡಗಳಲ್ಲಿ ಅರ್ಧಕಂಬಗಳನ್ನು ಬಿಡಿಸಲಾಗಿದೆ. ಇಕ್ಕೆಲಗಳಲ್ಲಿ ಜಾಲಂಧ್ರಗಳಿವೆ. ನವರಂಗದಲ್ಲಿ ನಾಲ್ಕು ದೇವಕೋಷ್ಠಗಳಿವೆ. ಕಂಬಗಳು ಗಿಡ್ಡಗಿದ್ದು, ಸಣ್ಣ ಗಾತ್ರದವು. ಇವು ಚೌಕ ಮತ್ತು ಅಷ್ಟಮುಖ ರಚನೆಗಳನ್ನು ಹೊಂದಿವೆ. ನೈರುತ್ಯ ಮೂಲೆಯ ಕಂಬದಲ್ಲಿ ಕೀರ್ತಿಮುಖ ಮತ್ತು ಹಾರಗಳ ಅಲಂಕರಣವಿದೆ. ಜೀರ್ಣೋದ್ಧಾರದ ಸಂದರ್ಭದಲ್ಲಿ ಉತ್ತರದ ಗೋಡೆಗೆ ಶಾಸನವೊಂದನ್ನು ಅಳವಡಿಸಿದ್ದಾರೆ, ಹಾಗು ನವರಂಗಕ್ಕೆ ಹೊಂದಿಕೊಂಡಂತೆ ಮುಂಭಾಗದಲ್ಲಿ ಕಮಾನುದ್ವಾರವನ್ನು ನಿರ್ಮಿಸಿದ್ದಾರೆ. ಮೇಲೆ ಗುಮ್ಮಟಾಕಾರದ ಶಿಖರವಿದೆ.

ಗರ್ಭಗೃಹದಲ್ಲಿ ಲಿಂಗ, ಅಂತರಾಳದಲ್ಲಿ ನಂದಿ ಹಾಗು ನವರಂಗದಲ್ಲಿನ ದೇವಕೋಷ್ಠಗಳಲ್ಲಿ ನಾಗ, ಕಾಲಭೈರವ, ಭೈರವ ಮತ್ತು ತ್ರಿಭಂಗಿಯಲ್ಲಿರುವ ಭೈರವ ಶಿಲ್ಪಗಳಿವೆ. ಇಲ್ಲಿನ ಶಿಲ್ಪವೊಂದನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದವರು ತೆಗೆದುಕೊಂಡು ಹೋದರೆಂದು ಸ್ಥಳೀಯರು ತಿಳಿಸುತ್ತಾರೆ.

ಇಲ್ಲಿರುವ ಕ್ರಿ.ಶ. ೧೧೬೩ರ ಶಾಸನವು, ಗೋವೆ ಕದಂಬರ ಪೆರ್ಮಾಡಿದೇವನ ಕಾಲದ್ದು. ಮಾಡಬೊಪ್ಪನು ತ್ರಿಣೇಯನ ಗಣಪೂಜೆಗೆ ನೀಡಿದ ಭೂದಾನದ ಉಲ್ಲೇಖವಿದೆ (ಸೌಇಇ XV : ೨೨೮).

ಊರು ಅಳಣಾವರ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೨-೧೩ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ಹೆಂಚಿನಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದ ಬಾಗಿಲುವಾಡಗಳಲ್ಲಿ ಅರ್ಧಕಂಬಗಳನ್ನು ಬಿಡಿಸಲಾಗಿದೆ. ಅಂತರಾಳದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳನ್ನು ಅಳವಡಿಸಿದೆ. ದ್ವಾರದ ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ. ಮೇಲಿರುವ ಫಲಕದಲ್ಲಿ ಮಕರತೋರಣದ ಅಲಂಕರಣವಿದ್ದು, ಬ್ರಹ್ಮ, ಮಹೇಶ್ವರ ಮತ್ತು ವಿಷ್ಣುವಿನ ಉಬ್ಬುಶಿಲ್ಪಗಳಿವೆ. ಅಂತರಾಳದ ಒಳಚಾವಣಿಯಲ್ಲಿ ಸೂಕ್ಷ್ಮ ಕೆತ್ತನೆಗಳ ಅಲಂಕರಣವುಂಟು. ಇದರ ಮುಂದಿರುವ ಮಂಟಪವನ್ನು ಇತ್ತೀಚೆಗೆ ನಿರ್ಮಿಸಿದ್ದು, ಮೇಲೆ ಹೆಂಚನ್ನು ಹೊದಿಸಲಾಗಿದೆ. ಗರ್ಭಗೃಹ ಮತ್ತು ಅಂತರಾಳಗಳ ಹೊರಗೋಡೆ ಬಿದ್ದು ಹೋಗಿದೆ.

ಗರ್ಭಗೃಹದಲ್ಲಿ ಎತ್ತರದ ವೇದಿಕೆ ಮೇಲೆ ಲಿಂಗವನ್ನಿಟ್ಟಿದ್ದಾರೆ. ಮುಂಭಾಗದ ಮಂಟಪದಲ್ಲಿ ದೊಡ್ಡ ನಂದಿಶಿಲ್ಪವಿದೆ. ಹೊರಗೆ ಗಣಪತಿ, ಮಹಿಷಮರ್ದಿನಿ, ವಿಷ್ಣು, ನಾಗ, ಭೈರವ, ಭೈರವಿ ಮತ್ತಿತರ ಭಗ್ನಶಿಲ್ಪಾವಶೇಷಗಳಿವೆ. ಹಾಗೂ ದೇವಾಲಯದ ಶಿಖರದ ಸ್ತೂಪಿ ಮತ್ತಿತರ ವಾಸ್ತು ಅವಶೇಷಗಳು ಕಂಡುಬರುತ್ತದೆ.

ದೇವಾಲಯದ ಮುಂದಿರುವ ಶಾಸನ ಸುಮಾರು ೧೨ನೆಯ ಶತಮಾನಕ್ಕೆ ಸೇರಿದದು, ತ್ರುಟಿತವಾಗಿದೆ. ಈ ಊರಿನ ಉಳಿದೆರಡು ಶಾಸನಗಳು ಗೋವೆ ಕದಂಬರಿಗೆ ಸೇರಿದ್ದು. ಒಂದು ಬಸದಿಗೆ ನೀಡಿದ ಭೂದಾನ ತಿಳಿಸುತ್ತದೆ. (ಸೌಇಇXV : ೨೨೫). ಮತ್ತೊಂದು ಅತಿ ತ್ರುಟಿತವಾಗಿದೆ.

ಊರು ಉಪ್ಪಿನ ಬೆಟಗೇರಿ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಜೀರ್ಣೋದ್ಧಾರಗೊಂಡಿದ್ದು, ಗರ್ಭಗೃಹ, ಅರ್ಧಮಂಟಪ ಮತ್ತು ನವರಂಗಗಳನ್ನು ಹೊಂದಿದೆ. ಗರ್ಭಗೃಹದ ಬಾಗಿಲುವಾಡಗಳಲ್ಲಿ ಅರ್ಧಕಂಬಗಳ ರಚನೆಯುಂಟು. ಅರ್ಧಮಂಟಪದ ಪ್ರವೇಶದಲ್ಲಿರುವ ಶಿಲಾತೊಲೆಯನ್ನು ಸಣ್ಣ ಗಾತ್ರದ ಎರಡು ಕಂಬಗಳು ಹೊತ್ತಿನಿಂತಿವೆ. ನವರಂಗದ ಕಂಬಗಳು ಗಿಡ್ಡಗಿದ್ದು, ಸರಳ ಚೌಕ ಮತ್ತು ಅಷ್ಟಮುಖಗಳ ರಚನೆಯವು. ಹೊರಗೋಡೆಯನ್ನು ಸಿಮೆಂಟಿನಿಂದ ಮುಚ್ಚಲಾಗಿದೆ. ಗರ್ಭಗೃಹದ ಮೇಲೆ ಸಿಮೆಂಟಿನ ಶಿಖರವುಂಟು. ದೇವಾಲಯದ ಸುತ್ತಲೂ ಇತ್ತೀಚೆಗೆ ಪ್ರಾಕಾರ ಗೋಡೆಯನ್ನು ನಿರ್ಮಿಸಿದ್ದಾರೆ.

ದೇವಾಲಯದಲ್ಲಿ ಲಿಂಗ, ನಂದಿ, ಗಣಪತಿ ಮತ್ತು ನಾಗಶಿಲ್ಪಗಳಿವೆ.

ಊರು ಉಪ್ಪಿನ ಬೆಟಗೇರಿ
ಸ್ಥಳ ಊರ ನಡುವೆ
ಸ್ಮಾರಕ ಯಲ್ಲಮ್ಮನ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೭-೧೮ನೆಯ ಶತಮಾನ
ಶೈಲಿ ಹಿಂದು-ಮುಸ್ಲಿಂ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಗೃಹಗಳನ್ನು ಹೊಂದಿದೆ. ಗರ್ಭಗೃಹ ಕಲ್ಲಿನ ನಿರ್ಮಾಣವಾಗಿದ್ದು, ಸುಸ್ಥಿತಿಯಲ್ಲಿದೆ. ಮಾಳಿಗೆ ರಚನೆಯ ಸಭಾಗೃಹ ಬಿದ್ದು ಹೋಗಿದ್ದು, ಅದರ ಮರದ ಕಂಬಗಳಷ್ಟೆ ನಿಂತಿವೆ. ಕಂಬಗಳು ದಪ್ಪವಾಗಿದ್ದು, ಸುಮಾರು ೨೦ ಅಡಿ ಎತ್ತರ ಹೊಂದಿವೆ. ದೇವಾಲಯವು ಆ ಕಾಲಕ್ಕೆ ಭವ್ಯರಚನೆ ಎಂದೇ ಹೇಳಬೇಕು. ಸುತ್ತಲೂ ಪ್ರಾಕಾರಮಂಟಪವಿದ್ದು, ಕಮಾನುಗಳ ರಚನೆಯನ್ನು ಒಳಗೊಂಡಿದೆ. ಸ್ಥಳೀಯವಾಗಿ ದೊರೆಯುವ ಸಣ್ಣ ಚಕ್ಕೆಕಲ್ಲು ಮತ್ತು ಗಾರೆಯನ್ನು ಬಳಸಿ ಕಮಾನುಗಳನ್ನು ರಚಿಸಲಾಗಿದೆ. ಪ್ರಕಾರ ಮಂಟಪದ ಮೇಲಿನ ಕೈಪಿಡಿ ಗೋಡೆಯಲ್ಲಿ ಕಮಲದ ದಳಗಳ ಅಲಂಕರಣವಿದೆ. ಮುಂಭಾಗದಲ್ಲಿ ಅಲಂಕೃತ ಕಮಾನಿನ ಮಹಾದ್ವಾರ ಮಂಟಪವಿದೆ. ಇದರ ಮೇಲೆ ಇದ್ದ ಅಂತಸ್ತಿನ ಕಮಾನುರಚನೆಗಳು ಭಗ್ನಗೊಂಡಿವೆ. ಗರ್ಭಗೃಹದ ಮೇಲೆ ಗಾರೆಶಿಖರವಿದ್ದು, ತುದಿಯಲ್ಲಿ ಕಳಸವನ್ನು ಹೊಂದಿದೆ. ಶಿಖರದ ತಳದ ನಾಲ್ಕು ಮೂಲೆಗಳಲ್ಲಿ ಕಳಸಗಳನ್ನು ಅಳವಡಿಸಲಾಗಿತ್ತು. ಆದರೆ ಈಗ ಉಳಿದಿರುವುದು ನೈರುತ್ಯ ಮೂಲೆಯ ಕಳಸ ಮಾತ್ರ. ದೇವಾಲಯದ ರಚನೆ ನಿಜಕ್ಕೈ ಅದ್ಭುತ. ಈ ಪ್ರಮಾಣದ ರಚನೆ, ಆ ದೇವಾಲಯದ ಅಂದಿನ ಧಾರ್ಮಿಕ ಮಹತ್ವವನ್ನು ತಿಳಿಸುತ್ತದೆ. ಈ ದೇವಾಲಯವನ್ನು ನೋಡಿ, ಸವದತ್ತಿ ಎಲ್ಲಮ್ಮನ ದೇವಸ್ಥಾನವನ್ನು ಕಟ್ಟಿಸಿದ್ದಾರೆ ಎಂದು ಸ್ಥಳೀಯರು ತಿಳಿಸುತ್ತಾರೆ. ಗರ್ಭಗೃಹದಲ್ಲಿ ದೇವಿಯ ಶಿಲ್ಪವಿದ್ದು, ಪೂಜೆಗೊಳ್ಳುತ್ತಿದೆ.

ಊರು ಕನಕೂರು
ಸ್ಥಳ ಊರ ಮುಂಭಾಗ
ಸ್ಮಾರಕ ಕನಕಾದೇವಿ
ಅಭಿಮುಖ ದಕ್ಷಿಣ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚೆಗೆ ನಿರ್ಮಿಸಿರುವ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಮಹಿಷಮರ್ದಿನಿಯ ಎರಡು ಶಿಲ್ಪಗಳು ಹಾಗು ಕುಬೇರನ ಶಿಲ್ಪಗಳಿವೆ. ಮಹಿಷಮರ್ದಿನಿಯ ಶಿಲ್ಪಗಳು ಕ್ರಮವಾಗಿ ೨ ಅಡಿ ಮತ್ತು ೧.೫ ಅಡಿ ಎತ್ತರವನ್ನು ಹೊಂದಿವೆ. ಈ ಶಿಲ್ಪಗಳು ಪ್ರಾಚೀನವಾದವು. ಸಭಾಮಂಟಪದಲ್ಲಿ ಭೈರವಿಯ ಮೂರು ಶಿಲ್ಪಗಳಿವೆ. ಕಾಲಭೈರವನ ಶಿಲ್ಪವು ತ್ರಿಭಂಗಿಯಲ್ಲಿದ್ದು, ಪ್ರಾಚೀನವಾದದ್ದು. ಈ ಎಲ್ಲ ಶಿಲ್ಪಾವಶೇಷಗಳು ಇಲ್ಲಿ ಪ್ರಾಚೀನ ಶಿವಾಲಯವಿದ್ದ ಬಗ್ಗೆ ಬೆಳಕು ಚೆಲ್ಲುತ್ತವೆ. ಹೊರ ಭಾಗದಲ್ಲಿ ನಾಗ ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ. ಹಾಗು ಮಾತಂಗಿಯ ಸಣ್ಣ ದೇವಾಲಯವಿದೆ. ಈ ದೇವಾಲಯದ ಕಂಬದಲ್ಲಿರುವ ಕ್ರಿ.ಶ. ೧೧೦೪ರ ಆರನೆಯ ವಿಕ್ರಮಾದಿತ್ಯನ ಶಾಸನವು, ಜಯಕೇಶಿ ಅರಸನು ವಾಮನ ಭಟ್ಟೋಪಾಧ್ಯಾಯನಿಗೆ ಕನಕಾಪುರ ಗ್ರಾಮವನ್ನು ದಾನ ನೀಡಿದನೆಂದು ತಿಳಿಸುತ್ತದೆ (ಸೌಇಇXI : ii : ೧೫೪).

ಈ ಊರಿನ ವಿಠಲ ದೇವಾಲಯದ ಸಭಾಮಂಟಪದ ಗೂಡಿನಲ್ಲಿ ಸಿಂಹದ ಮೇಲೆ ಕುಳಿತು, ತೊಡೆಯ ಮೇಲೆ ಪುರುಷನನ್ನು ಕೂರಿಸಿಕೊಂಡಿರುವ ಸ್ತ್ರೀ ದೇವತೆಯ ಶಿಲ್ಪವಿದೆ. ಬಲಗೈಯಲ್ಲಿ ಅಂಡಾಕಾರದ ವಸ್ತುವೊಂದನ್ನು (ಕಳಸವಿರಬಹುದು?) ಹಿಡಿದಿದ್ದಾಳೆ. ಎಡಗೈಯಲ್ಲಿ ಪುರುಷನನ್ನು ಹಿಡಿದುಕೊಂಡಿದ್ದಾಳೆ. ದೇವತೆಯ ಮೇಲ್ಭಾಗದಲ್ಲಿ ಸವೆದ ಸೂಕ್ಷ್ಮ ಜಿನಬಿಂಬವಿದ್ದು, ಇಕ್ಕೆಲುಗಳಲ್ಲಿ ಲತಾಬಳ್ಳಿಯನ್ನು ಬಿಡಿಸಲಾಗಿದೆ. ಎಡಭಾಗದಲ್ಲಿ ಸಿಂಹದ ತಲೆಮೇಲೆ ನಿಂತಿರುವ ಶಿಲ್ಪವಿದ್ದು, ಇದರ ಮೇಲೆ ಛತ್ರಿಯನ್ನು ಹಿಡಿದ ವ್ಯಕ್ತಿಯೊಬ್ಬನ ಶಿಲ್ಪವನ್ನು ಕಾಣಬಹುದು. ದೇವಿಯ ಬಾಯಲ್ಲಿ ಕೋರೆಹಲ್ಲುಗಳಿವೆ. ಪ್ರಭಾವಳಿಯಲ್ಲಿ ಹೂವಿನದಳಗಳಿವೆ. ಬಹುಶಃ ಶಿಲ್ಪವು ಜೈನಪರಂಪರೆಗೆ ಸಂಬಂಧಿಸಿದ್ದು. ಕುಷ್ಮಾಂಡಿನಿಯ ಶಿಲ್ಪವಿರಬಹುದು.

ಊರು ಕನಕೂರು
ಸ್ಥಳ ಊರ ದಕ್ಷಿಣ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೩ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ
ಸಂರಕ್ಷಣೆ

ದೇವಾಲಯವು ಸಂಪೂರ್ಣವಾಗಿ ಬಿದ್ದುಹೋಗಿದ್ದು, ಅದೇ ಸ್ಥಳದಲ್ಲಿ ಲಿಂಗ, ನಂದಿ ಮತ್ತಿತರ ಶಿಲ್ಪಾವಶೇಷಗಳು ತೆರದಸ್ಥಿತಿಯಲ್ಲಿವೆ. ಮುಂಭಾಗದಲ್ಲಿ ಬಿದ್ದಿರುವ ಶಾಸನ ಅಪ್ರಕಟಿತವಾಗಿದ್ದು, ಲಿಪಿ ದೃಷ್ಠಿಯಿಂದ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದೆ. ಶಾಸನದ ಕೆಲವು ಸಾಲುಗಳು ಸವೆದಿದ್ದು, ಕೆಳಭಾಗದ ಬಲಮೂಲೆಯು ಭಗ್ನಗೊಂಡಿದೆ. ಆದರೂ ಶಾಸನದ ಪ್ರತಿಯನ್ನು ಪಡೆಯಬಹುದಾಗಿದೆ.

೧೦

ಊರು ಕನಕೂರು
ಸ್ಥಳ ಊರ ಮುಂಭಾಗ
ಸ್ಮಾರಕ ರಾಮಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಸ್ಥಳೀಯ ಶೈಲಿಯಲ್ಲಿ ನಿರ್ಮಿಸಿರುವ ದೇವಾಲಯ ಇತ್ತೀಚಿನದು. ಗರ್ಭಗೃಹ ಮತ್ತು ಸಭಾಮಂಟಪಗಳಿರುವ ದೇವಾಲಯದ ಗೋಡೆಯನ್ನು ಕಲ್ಲು ಮತ್ತು ಮಣ್ಣಿನಿಂದ ನಿರ್ಮಿಸಿದ್ದಾರೆ. ಮೊದಲಿಗೆ ಇದು ಮಾಳಿಗೆ ಕಟ್ಟಡದ ಗುಡಿಯಾಗಿತ್ತು. ನಂತರ ಅದನ್ನು ಕೆಡವಿ ಈಗಿರುವ ದೇವಾಲಯವನ್ನು ನಿರ್ಮಿಸಿದ್ದಾರೆ. ಲಿಂಗವೊಂದರ ರುದ್ರಭಾಗವನ್ನು ನೆಲದಲ್ಲಿ ನಿಲ್ಲಿಸಿ ಪೂಜಿಸಲಾಗುತ್ತಿದೆ. ಹೊರಭಾಗದಲ್ಲಿ ಭಗ್ನಗೊಂಡಿರುವ ನಂದಿ ಶಿಲ್ಪವನ್ನು ಕಾಣಬಹುದು. ಮುಂಭಾಗದಲ್ಲಿ ಶಾಸನವೊಂದನ್ನು ನಿಲ್ಲಿಸಲಾಗಿದ್ದು, ಅಕ್ಷರಗಳು ಸಂಪೂರ್ಣವಾಗಿ ಸವೆದಿದೆ.

೧೧

ಊರು ಕಬ್ಬೆನೂರು
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

೧೯೪೦ರಲ್ಲಿ ನಿರ್ಮಿಸಿದ ದಿಂಡುಗಲ್ಲಿನ ದೇವಾಲಯವಿದು. ಗರ್ಭಗೃಹ ಮತ್ತು ಸಭಾಗೃಹಗಳಿವೆ. ಸಭಾಗೃಹದ ಚಾವಣಿ ಕಾಂಕ್ರೀಟ್ ರಚನೆಯದು.

ಗರ್ಭಗೃಹದಲ್ಲಿ ಎರಡು ಹಳೆಯ ಲಿಂಗಗಳಿವೆ. ನಂದಿ ಇತ್ತೀಚಿನದು. ಉಳಿದಂತೆ ಯಾವುದೇ ಶಿಲ್ಪಗಳು ಕಂಡುಬರುವುದಿಲ್ಲ.

೧೨

ಊರು ಕರಡಿಗುಡ್ಡ
ಸ್ಥಳ ಗುಡ್ಡದ ಮೇಲೆ
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ದಕ್ಷಿಣ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಎತ್ತರವಾದ ಗುಡ್ಡದ ಮೇಲಿದೆ. ಈ ಗುಡ್ಡದಲ್ಲಿ ಅನೇಕ ಗವಿಗಳಿದ್ದು, ಬಹುಶಃ ಈ ಗವಿಗಳಲ್ಲಿ ಹಿಂದೆ ಕರಡಿಗಳು ವಾಸವಿದ್ದ ಕಾರಣ, ಇದನ್ನು ಕರಡಿಗುಡ್ಡ ಎಂದು ಕರೆದಿರಬಹುದು. ಈ ಗುಡ್ಡದ ತಪ್ಪಲಲ್ಲಿ ನೆಲಸಿದ ಊರಿಗೂ ಕರಡಿಗುಡ್ಡವೆಂದು ಕರೆಯಲಾಯಿತು. ಜನರು ವ್ಯವಸಾಯಕ್ಕೆ ಯೋಗ್ಯವಲ್ಲದ ಗುಡ್ಡ ಮತ್ತು ಅದರ ತಪ್ಪಲು ಪ್ರದೇಶವನ್ನು ತಮ್ಮ ವಸತಿಗಾಗಿ ಬಳಸಿಕೊಂಡಿದ್ದಾರೆ. ಸುತ್ತಲೂ ವ್ಯವಸಾಯಯೋಗ್ಯವಾದ ವಿಶಾಲವಾದ ಬಯಲುಪ್ರದೇಶವಿದೆ.

ದೇವಾಲಯವು ದಕ್ಷಿಣಾಭಿಮುಖವಾಗಿದೆ. ಗರ್ಭಗೃಹವು ಉತ್ತರಾಭಿಮುಖವಾಗಿದ್ದು, ಲಿಂಗವು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪನೆಗೊಂಡಿದೆ. ಸಭಾಂಗಣವು, ದಕ್ಷಿಣದಲ್ಲಿ ಪ್ರವೇಶ ದ್ವಾರವನ್ನು ಹೊಂದಿದೆ. ಇದನ್ನು ಏರಲು ಮೆಟ್ಟಿಲುಗಳಿವೆ. ಮುಂಭಾಗದಲ್ಲಿ ಪ್ರವೇಶದ್ವಾರ ಮಂಟಪವಿದ್ದು, ಪ್ರಾಕಾರದಿಂದ ಕೂಡಿದೆ. ದೇವಾಲಯವು ಈ ಮೊದಲು ಮಾಳಿಗೆ ಕಟ್ಟಡವಾಗಿತ್ತು. ಇತ್ತೀಚೆಗೆ ಆರ್.ಸಿ.ಸಿ. ಕಟ್ಟಡ ನಿರ್ಮಿಸಿದ್ದಾರೆ. ಮೇಲೆ ಶಿಖರವಿದೆ.

ಗರ್ಭಗೃಹದಲ್ಲಿ ಎರಡು ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಸಣ್ಣ ಲಿಂಗವನ್ನು ಮಲ್ಲಯ್ಯ ಎಂದು, ದೊಡ್ಡಲಿಂಗವನ್ನು ಈಶ್ವರ ದೇವರೆಂದು ಕರೆಯುತ್ತಾರೆ. ಹೊರಗೆ ಆವರಣದ ಕಟ್ಟಡಯಲ್ಲಿ ಭಗ್ನಗೊಂಡಿರುವ ಗಣಪತಿ, ಕುದುರೆ ಮೇಲೆ ಕುಳಿತ ಪೇಠದಾರಿ ವ್ಯಕ್ತಿ, ಪತ್ನಿ ಸಹಿತ ದಕ್ಷ ಮತ್ತಿತರ ಪ್ರಾಚೀನ ಶಿಲ್ಪಾವಶೇಷಗಳಿವೆ. ಇವೆಲ್ಲವೂ ಕಾಲಮಾನದಲ್ಲಿ ೧೨-೧೩ ನೆಯ ಶತಮಾನಕ್ಕೆ ಸೇರುತ್ತವೆ. ಈ ಹಿನ್ನೆಲೆಯಲ್ಲಿ ಇಲ್ಲಿ ಪ್ರಾಚೀನ ಮಲ್ಲಿಕಾರ್ಜುನ ದೇವಾಲಯದ ಅಸ್ತಿತ್ವವನ್ನು ಗುರುತಿಸಬಹುದು. ಹೊರಭಾಗದಲ್ಲಿರುವ ದೊಡ್ಡ ಚಪ್ಪಲಿಗಳನ್ನು ಜನರು ಪೂಜಿಸುತ್ತಾರೆ. ಈ ಊರಿನಲ್ಲಿ ಹೆಚ್ಚಿನ ಜನರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು ಈ ದೇವಾಲಯಕ್ಕೆ ನಿಷ್ಠೆಯಿಂದ ನಡೆದುಕೊಳ್ಳುತ್ತಾರೆ.

೧೩

ಊರು ಕಲ್ಲೂರು
ಸ್ಥಳ ಊರ ನಡುವೆ
ಸ್ಮಾರಕ ಈಶ್ವರ ದೇವರು
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಮಾಳಿಗೆ ರಚನೆಯದು. ಗರ್ಭಗೃಹ, ಅಂತರಾಳ ಮತ್ತು ಸಭಾಗೃಹಗಳಿರುವ ದೇವಾಲಯವಿದು. ಸಭಾಗೃಹದಲ್ಲಿ ಪ್ರಾಚೀನ ದೇವಾಲಯದ ಮಕರತೋರಣವಿದೆ.

ಗರ್ಭಗೃಹದಲ್ಲಿರುವ ಲಿಂಗ ಮತ್ತು ನಂದಿಶಿಲ್ಪಗಳು ಇತ್ತೀಚಿನವು. ಸಭಾಗೃಹದಲ್ಲಿ ಗಣಪತಿ, ಉಮಾಮಹೇಶ್ವರ, ತ್ರಿಭಂಗಿಯಲ್ಲಿರುವ ಮಹಾಕಾಲ, ಸೂರ್ಯ, ನಾಗ ಮತ್ತಿತರ ಶಿಲ್ಪಾವಶೇಷಗಳಿವೆ. ಇದರಿಂದ ಇಲ್ಲಿ ಪ್ರಾಚೀನ ದೇವಾಲಯವಿದ್ದು, ಅದು ಹಾಳಾದ ನಂತರ ಈಗಿನ ಮಾಳಿಗೆ ದೇವಾಲಯವನ್ನು ನಿರ್ಮಿಸಿದಂತೆ ಕಾಣುತ್ತದೆ. ಈ ದೇವಾಲಯದ ದಕ್ಷಿಣಕ್ಕೆ ಮೈಲಾರಲಿಂಗಪ್ಪನ ಗುಡಿ ಇದೆ. ಇಲ್ಲಿ ಮೈಲಾರಲಿಂಗಪ್ಪ ಮತ್ತು ಮಾಳಚಿದೇವಿ ಕುದುರೆ ಮೇಲೆ ಕುಳಿತ ಶಿಲ್ಪವಿದೆ. ಶಿಲ್ಪದ ತಳಭಾಗದಲ್ಲಿ ಶಿರವೊಂದನ್ನು ಬಿಡಿಸಲಾಗಿದೆ. ಇದರ ಕೆಳಗೆ ನಾಯಿಯನ್ನು ತೋರಿಸಲಾಗಿದೆ. ಈ ಶಿಲ್ಪ ಸುಮಾರು ೧೦೦ ವರ್ಷಗಳ ಹಿಂದಿನದಿರಬಹುದು.

೧೪

ಊರು ಕಲ್ಲೂರು
ಸ್ಥಳ ಮಂಡಿಹಾಳ ರಸ್ತೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಜೀರ್ಣೋದ್ಧಾರಗೊಂಡ ಗರ್ಭಗೃಹವನ್ನು ಮತ್ತು ನಾಡಹೆಂಚಿನ ಸಭಾಗೃಹವನ್ನು ಹೊಂದಿದೆ. ಈ ಗರ್ಭಗೃಹದ ಚಾವಣಿಯು ಭಗ್ನಗೊಂಡಿದೆ. ಗರ್ಭಗೃಹದ ಹೊರಗೋಡೆಯನ್ನು ಮಣ್ಣು ಮತ್ತು ಚಕ್ಕೆಕಲ್ಲಿನ ಗೋಡೆಯಿಂದ ಮುಚ್ಚಿದ್ದಾರೆ.

ಗರ್ಭಗೃಹದಲ್ಲಿ ಲಿಂಗವಿದೆ. ಹೊರಗೆ ನಂದಿ, ನಾಗ, ವೀರಗಲ್ಲು, ಭಗ್ನಶಾಸನ ಮತ್ತಿತರ ಶಿಲ್ಪಾವಶೇಷಗಳಿವೆ. ಇದೇ ಊರಿನ ಬಸ್ ನಿಲ್ದಾಣದ ಬಳಿ ಸಾಲಾಗಿ ನೆಟ್ಟಿರುವ ವೀರಗಲ್ಲುಗಳಿವೆ. ಇವುಗಳಲ್ಲಿ ಹಂದಿ ಬೇಟೆಯ ಉಬ್ಬುಶಿಲ್ಪವನ್ನು ಬಿಡಿಸಲಾಗಿದೆ.

೧೫

ಊರು ಕಲ್ಲೆ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ

ಮೊದಲಿಗೆ ಮಾಳಿಗೆ ಶೈಲಿಯ ದೇವಾಲಯವಿತ್ತು. ಇತ್ತೀಚೆಗೆ ಅದನ್ನು ಕೆಡವಿ ಆರ್.ಸಿ.ಸಿ. ಕಟ್ಟಡವನ್ನು ನಿರ್ಮಿಸುತ್ತಿದ್ದಾರೆ. ಹೊರಭಾಗದಲ್ಲಿ ಭಗ್ನಗೊಂಡಿರುವ ಎರಡು ಲಿಂಗಗಳು ಮತ್ತು ನಂದಿ ಶಿಲ್ಪಗಳಿವೆ. ಇವು ಹಳೆಯ ದೇವಾಲಯಕ್ಕೆ ಸಂಬಂಧಿಸಿವೆ.