೪೬

ಊರು ಪಡೇಸೂರು
ಸ್ಥಳ ಕೆರೆ ದಂಡೆ
ಸ್ಮಾರಕ ಬಸವಣ್ಣ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇತ್ತೀಚಿನ ದೇವಾಲಯವಿದು. ಎರಡು ಗರ್ಭಗೃಹ ಮತ್ತು ಒಂದು ಸಭಾಮಂಟಪಗಳನ್ನು ಒಳಗೊಂಡಿದೆ. ಮೊದಲ ಗರ್ಭಗೃಹದಲ್ಲಿ ನಂದಿ ಶಿಲ್ಪವಿದ್ದು, ಎರಡನೆಯ ಗರ್ಭಗೃಹದಲ್ಲಿ ಲಿಂಗವಿದೆ. ಈ ಶಿಲ್ಪಗಳು ಸಹ ಇತ್ತೀನವು. ಆದರೆ ಹೊರಭಾಗದಲ್ಲಿ ಭಗ್ನಗೊಂಡ ನಂದಿ ಮತ್ತು ನಾಗಶಿಲ್ಪಗಳಿವೆ. ಎದುರಿಗಿರುವ ಮರದ ಕೆಳಗೆ ಮಹಿಷಮರ್ದಿನಿಯ ಉಬ್ಬುಶಿಲ್ಪದ ಫಲಕವಿದೆ. ಇದೇ ಊರಿನ ಸಿದ್ದಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಪ್ರಾಚೀನ ಲಿಂಗ, ಲಿಂಗದ ಬ್ರಹ್ಮಭಾಗ ಕಂಡುಬರುತ್ತವೆ. ಈ ಶಿಲ್ಪಾವಶೇಷಗಳಿಂದ ಇಲ್ಲಿ ಪ್ರಾಚೀನ ಶಿವಾಲಯವಿದ್ದ ಬಗ್ಗೆ ಸ್ಪಷ್ಟ ಸೂಚನೆಗಳು ದೊರೆಯುತ್ತವೆ.

೪೭

ಊರು ಬಲ್ಲರವಾಡ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆಶೈಲಿಯ ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಹಳೆಯ ಲಿಂಗವಿದೆ. ಹೊರಭಾಗದಲ್ಲಿ ಹಳೆಯ ನಂದಿ, ನಾಗ ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ. ಇದರಿಂದಾಗಿ ಇಲ್ಲಿ ಹಳೆಯ ದೇವಾಲಯವಿದ್ದು, ಅದು ಕಾಲಾಂತರದಲ್ಲಿ ಹಾಳಾಗಿರುವುದು ವೇದ್ಯವಾಗುತ್ತದೆ.

೪೮

ಊರು ಬಳ್ಳೂರು
ಸ್ಥಳ ಊರ ನಡುವೆ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆಶೈಲಿಯ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳಿರುವ ದೇವಾಲಯದಲ್ಲಿ ಪ್ರಾಚೀನ ಲಿಂಗವಿದೆ. ನಂದಿಶಿಲ್ಪ ಇತ್ತೀಚಿನದು. ಹೊರಭಾಗದಲ್ಲಿ ನಾಗಶಿಲ್ಪ ಮತ್ತು ಚತುರ್ಮುಖಬ್ರಹ್ಮನ ಶಿಲ್ಪಾವಶೇಷಗಳಿವೆ. ದೇವಾಲಯದ ಹತ್ತಿರ ಲಿಂಗವೊಂದು ಜಗತಿಯ ಮೇಲಿದ್ದು, ರುದ್ರಭಾಗದ ಬದಲಿಗೆ ಮುಖದ ಶಿಲ್ಪವನ್ನು ಅಳವಡಿಸಿದ್ದಾರೆ. ಇದನ್ನು ಸ್ಥಳೀಯರು ಜುಂಜಪ್ಪ ಎಂದು ಕರೆಯುತ್ತಾರೆ.

ಈ ಊರಿನ ೧೩ ನೆಯ ಶತಮಾನದ ಶಾಸನವೊಂದು ಬಾದಾಮ್ಮಯ್ಯ ಎಂಬುವನನ್ನು ಉಲ್ಲೇಖಿಸುತ್ತದೆ (ಸೌಇಇ xv : ೬೩೫).

೪೯

ಊರು ಬೆಳವಟಿಗೆ
ಸ್ಥಳ ಊರ ನಡುವೆ
ಸ್ಮಾರಕ ರಾಮಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆರಚನೆಯ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳಿರುವ ದೇವಾಲಯದಲ್ಲಿ ಪ್ರಾಚೀನ ಕಾಲಕ್ಕೆ ಸೇರಿದ ಲಿಂಗವಿದೆ. ಹಳೆಯ ದೇವಾಲಯ ಬಿದ್ದುಹೋದ ನಂತರ ಈಗಿನದನ್ನು ನಿರ್ಮಿಸಿಕೊಂಡಿದ್ದಾರೆ. ಗರ್ಭಗೃಹ ಹೊರಭಿತ್ತಿಯನ್ನು ದಿಂಡುಗಲ್ಲಿನಿಂದ ಕಟ್ಟಲಾಗಿದೆ. ಸಭಾಮಂಟಪದ ಹೊರಗೋಡೆ ಮಣ್ಣಿನದು.

ಗರ್ಭಗೃಹದಲ್ಲಿ ಯೋನಿಪೀಠವಿಲ್ಲದ ಲಿಂಗವಿದೆ. ಇದನ್ನು ನಿಧಿ ಆಸೆಯಿಂದ ಭಗ್ನಗೊಳಿಸಿದ್ದಾರೆ. ಲಿಂಗದ ಮುಂದಿರುವ ನಂದಿಶಿಲ್ಪವೂ ಭಗ್ನಗೊಂಡಿದೆ. ಸಭಾಮಂಟಪದಲ್ಲಿ ಎರಡು ಹಳೆಯ ಲಿಂಗಗಳು ಹಾಗೂ ಇತ್ತೀಚಿನ ನಂದಿಶಿಲ್ಪಗಳಿವೆ. ಹೊರಭಾಗದಲ್ಲಿ ನಾಗಶಿಲ್ಪಗಳು ಮತ್ತು ವೀರಗಲ್ಲು ಕಂಡುಬರುತ್ತವೆ. ಇದೇ ಊರಿನ ಪಂಚಲಿಂಗೇಶ್ವರ ದೇವಾಲಯದಲ್ಲಿ ಒಂದೆಡೆ ಐದು ಲಿಂಗಗಳಿವೆ. ಒಂದು ಲಿಂಗ ಹಳೆಯದಿದ್ದು, ಉಳಿದು ನಂತರದ ಕಾಲಕ್ಕೆ ಸೇರಿವೆ.

ಇಲ್ಲಿರುವ ಕ್ರಿ.ಶ. ೧೦೯೩ರ ಆರನೆಯ ವಿಕ್ರಮಾದಿತ್ಯನ ಶಾಸನವು, ಬೈರುಂಬರ ಮಲ್ಲಿಮಯ್ಯನು ಬೆಳವಟಿಗೆಯಲ್ಲಿ ಬೈರುಂಭೇಶ್ವರ ದೇವಾಲಯವನ್ನು ಕಟ್ಟಿಸಿ ಭೂದಾನ ಮಾಡಿದನೆಂದಿದೆ. (ಸೌಇಇXI-ii : ೧೩೮). ಇದರಿಂದ ಮೇಲಿನ ರಾಮಲಿಂಗೇಶ್ವರ ಗುಡಿಯ ಪ್ರಾಚೀನ ಹೆಸರು ಬೈರುಂಭೇಶ್ವರ ಎಂದು ತಿಳಿದುಬರುವುದು. ಹಾಗೂ ಬೆಳವಟಿಗೆಯ ಮೂಲ ಹೆಸರು ಬೆಳ್ಳವಟ್ಟಿಗೆ ಎಂದಿದೆ. ಉಳಿದೆರಡು ಶಾಸನಗಳು ವಿಜಯನಗರ ಕಾಲಕ್ಕೆ ಸೇರಿದ್ದು, ನಾವಿದರಿಗೆ ನೀಡಿದ ಸುಂಕವಿನಾಯಿತಿ ಮತ್ತು ಕೆರೆಯನ್ನು ಅಗೆದವರಿಗೆ ನೀಡಿದ ದಾನವನ್ನು ಕುರಿತಿವೆ (ಅದೇ          xv ೨೬೦).

೫೦

ಊರು ಬೆಳಹಾರ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆ ಕಟ್ಟಡದ ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಸಭಾಮಂಟಪದ ದಕ್ಷಿಣ ಮತ್ತು ಪೂರ್ವದಿಕ್ಕುಗಳಲ್ಲಿ ಪ್ರವೇಶದ್ವಾರಗಳಿವೆ. ಗರ್ಭಗೃಹದಲ್ಲಿ ಪ್ರಾಚೀನ ಲಿಂಗವಿದೆ. ಸಭಾಮಂಟಪದಲ್ಲಿರುವ ನಂದಿಶಿಲ್ಪ ಇತ್ತೀಚಿನದು. ಹೊರಭಾಗದಲ್ಲಿ ಸೂರ್ಯನ ಪಾಣಿಪೀಠ, ಮತ್ತಿತರ ಶಿಲ್ಪಾವಶೇಷಗಳಿವೆ. ಹಿಂಭಾಗದಲ್ಲಿರುವ ಮರದ ಕೆಳಗೆ ಭಗ್ನ ನಂದಿಶಿಲ್ಪವಿದೆ. ಈ ಊರಿನ ಆಂಜನೇಯ ದೇವಾಲಯದ ಎದುರು ಗಜಲಕ್ಷ್ಮಿ, ವೀರಗಲ್ಲು ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ.

೫೧

ಊರು ಬ್ಯಾಲಾಳ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆ ಕಟ್ಟಡದ ದೇವಾಲಯವಿದು. ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಭಿತ್ತಿ ಮಣ್ಣಿನದು. ಗರ್ಭಗೃಹದಲ್ಲಿರುವ ಲಿಂಗ ಹಳೆಯದು. ಅಂತರಾಳದಲ್ಲೂ ಹಳೆಯ ಲಿಂಗದ ರುದ್ರಭಾಗ, ಭಗ್ನಗೊಂಡ ನಂದಿ ಮತ್ತು ನಾಗಶಿಲ್ಪಗಳಿವೆ.

ಇಲ್ಲಿನ ಕ್ರಿ.ಶ. ೧೧೦೨-೩ ರ ಶಾಸನವು ತ್ರುಟಿತವಾಗಿದ್ದು, ಭೂದಾನವನ್ನು ಉಲ್ಲೇಖಿಸುತ್ತದೆ. (ಸೌಇಇ XI-ii : ೧೮೫). ಹನುಮಂತದೇವರ ಗುಡಿ ಮುಂದಿರುವ ಸುಮಾರು ೧೩ನೆಯ ಶತಮಾನದ ಶಾಸನವು ಬೊಮ್ಮರಸನ ಹೆಸರಿನ ದೇವತೆಯನ್ನು ಉಲ್ಲೇಖಿಸುತ್ತದೆ. (ಅದೇ xv : ೬೩೬).

೫೨

ಊರು ಭೋಗಾನೂರು
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆ ಶೈಲಿಯ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಮುಂಭಾಗದಲ್ಲಿ ಹಳೆಯ ದೇವಾಲಯದ ವಾಸ್ತು ಮತ್ತು ಶಿಲ್ಪಾವಶೇಷಗಳು ಕಂಡುಬರುತ್ತವೆ.

ಗರ್ಭಗೃಹದಲ್ಲಿ ಹಳೆಯಲಿಂಗವಿದ್ದು, ಸಭಾಮಂಟಪದಲ್ಲಿ ನಂದಿಶಿಲ್ಪವಿದೆ. ಈ ಊರಿನ ಆಂಜನೇಯ ದೇವಾಲಯದ ಮುಂಭಾಗದಲ್ಲಿ ವೀರಗಲ್ಲೊಂದನ್ನು ಕಾಣಬಹುದು. ಕಲ್ಮೇಶ್ವರ ದೇವಾಲಯದ ಮುಂದಿರುವ ನಂದಿಕಂಬದ ಮೇಲಿರುವ ಶಾಸನವು ಸು. ೧೨ನೆಯ ಶತಮಾನಕ್ಕೆ ಸೇರಿದ್ದು, ನಂದಿಕಂಬ ನಿಲ್ಲಿಸಿದ ಬಗ್ಗೆ ಉಲ್ಲೇಖಿಸುತ್ತದೆ (ಸೌಇಇ xv : ೫೮೫). ಈ ದೇವಾಲಯದ ಪಕ್ಕದಲ್ಲಿ ಗೋಣುಮರವಿದೆ. ಸಾಮಾನ್ಯವಾಗಿ ಹಳೆಯ ಶಿವಾಲಯಗಳಿರುವಲ್ಲಿ ಗೋಣುಮರಗಳು ಕಂಡುಬರುತ್ತವೆ. ಇದೊಂದು ಕುತೂಹಲಕಾರಿ ಸಂಗತಿ.

೫೩

ಊರು ಮಜ್ಜಿಗುಡ್ಡ
ಸ್ಥಳ ಕೆರೆ ಗುಡ್ಡದ ಮೇಲೆ
ಸ್ಮಾರಕ ಈಶ್ವರ ಗುಡಿ
ಅಭಿಮುಖ ಪಶ್ಚಿಮ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಕ್ರಿ.ಶ. ೧೯೬೦ ರ ಸುಮಾರಿನಲ್ಲಿ ನಿರ್ಮಿಸಿರುವ ಕೊಠಡಿಯಲ್ಲಿ ಹಳೆಯ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಹೊರಭಾಗದಲ್ಲಿ ಕಲ್ಯಾಣ ಚಾಲುಕ್ಯರ ಶಾಸನ, ನಾಗಶಿಲ್ಪಗಳು ಮತ್ತು ಹಳೆಯ ದೇವಾಲಯದ ಕಂಬ ಮತ್ತಿತರ ವಾಸ್ತು ಅವಶೇಷಗಳಿವೆ. ಈ ಕೊಠಡಿಯ ಹಿಂಭಾಗದಲ್ಲಿ ಹಳೆಯ ದೇವಾಲಯವಿತ್ತೆಂದು ಸ್ಥಳೀಯರು ತಿಳಿಸುತ್ತಾರೆ.

೫೪

ಊರು ಮಣಕವಾಡ
ಸ್ಥಳ ಕೆರೆ ಹತ್ತಿರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಸ್ಥಳೀಯ ಶೈಲಿಯಲ್ಲಿರುವ ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಪ್ರಾಚೀನ ಲಿಂಗ, ಹೊರಭಾಗದಲ್ಲಿ ವೀರಗಲ್ಲು, ಶಾಸನ ಮತ್ತಿತರ ಶಿಲ್ಪಾವಶೇಷಗಳಿವೆ. ದೇವಾಲಯದ ಬಳಿ ಗೋಸಾಸದ ಕಲ್ಲುಗಳು ಸಹ ಕಂಡುಬರುತ್ತವೆ. ಈ ಎಲ್ಲ ಶಿಲ್ಪಾವಶೇಷಗಳಿಂದ ಇಲ್ಲಿ ಪ್ರಾಚೀನ ದೇವಾಲಯವಿತ್ತೆಂದು ಸ್ಪಷ್ಟವಾಗುತ್ತದೆ. ಅಲ್ಲದೆ ಹಳೆಯ ದೇವಾಲಯ ಬಿದ್ದುಹೋದ ನಂತರ ಈಗಿನ ದೇವಾಲಯವನ್ನು ನಿರ್ಮಿಸಿರಬೇಕು.

೫೫

ಊರು ಮೊರಬ
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆಶೈಲಿಯಲ್ಲಿ ಇತ್ತೀಚೆಗೆ ನಿರ್ಮಿಸಿರುವ ದೇವಾಲಯವಿದು. ಹೊಸದಾಗಿ ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ. ಮೊದಲಿದ್ದ ಹಳೆಯ ಲಿಂಗವನ್ನು ಗರ್ಭಗೃಹದ ನೆಲದಲ್ಲಿ ಹುಗಿದು, ಅದರ ಮೇಲೆ ಹೊಸ ಲಿಂಗವನ್ನು ಪ್ರತಿಷ್ಠಾಪಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಇಲ್ಲಿರುವ ಎರಡು ಶಾಸನಗಳು ಕ್ರಿ.ಶ. ೧೧ ಮತ್ತು ೧೨ನೆಯ ಶತಮಾನಗಳಿಗೆ ಸೇರಿದ್ದು, ಕ್ರಮವಾಗಿ ನೊಳಂಬಸಮುದ್ರಕೆರೆಗೆ ಬಿಟ್ಟ ಭೂದಾನವನ್ನು ಮತ್ತು ಕೆಲವು ವ್ಯಕ್ತಿಗಳನ್ನು ಉಲ್ಲೇಖಿಸುತ್ತದೆ (ಸೌಇಇ XI-ii         ೧೨೪; xv : ೫೮೮). ಊರಿನ ಉಳಿದ ಶಾಸನಗಳು, ಜೈನಯತಿಯ ನಿಷದಿ ಮತ್ತು ಭೂದಾನಗಳನ್ನು ಪ್ರಸ್ತಾಪಿಸುತ್ತವೆ. ಈ ಎಲ್ಲಾ ಪ್ರಾಚ್ಯಾವಶೇಷಗಳಿಂದ ಇಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯವಿತ್ತೆಂಬುದು ಸ್ಪಷ್ಟವಾಗುತ್ತದೆ.

೫೬

ಊರು ಯಮನೂರು
ಸ್ಥಳ ಕೆರೆ ಹತ್ತಿರ
ಸ್ಮಾರಕ ಈಶ್ವರದೇವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿರುವ ಲಿಂಗ ಹಳೆಯದು. ಅದರ ಮೇಲೆ ಸಿಮೆಂಟ್‌ಲೇಪನ ಮಾಡಲಾಗಿದೆ. ನಂದಿಶಿಲ್ಪ ಇತ್ತೀಚಿನದು. ಜಿಲ್ಲೆಯಲ್ಲಿ ಬಹುತೇಕ ಹಳೆಯ ದೇವಾಲಯಗಳು ನಾಶಗೊಂಡಿದ್ದು, ಬದಲಿಗೆ ಸ್ಥಳೀಯ ಶೈಲಿಯಲ್ಲಿ ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡ ದೇವಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೆಲವೆಡೆ ಹಳೆಯ ಶಿಲ್ಪಗಳನ್ನು ಪೂಜಿಸುತ್ತಿದರೆ, ಮತ್ತೆ ಕೆಲವೆಡೆ ಹೊಸದಾಗಿ ಮಾಡಿಸಿದ ಶಿಲ್ಪಗಳನ್ನು ಪ್ರತಿಷ್ಠಿಸಿ ಪೂಜಿಸಲಾಗುತ್ತದೆ. ಹೀಗಾಗಿ ಹೊರಹಾಕಲ್ಪಟ್ಟ ಹಳೆಯ ಶಿಲ್ಪಗಳು ಅನಾಥ ಸ್ಥಿತಿಯಲ್ಲಿದ್ದು, ನಾಶಗೊಳ್ಳುತ್ತವೆ.

೫೭

ಊರು ಶಿರಕೋಳ
ಸ್ಥಳ ಗುಡಿ ಓಣಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಸಿಮೆಂಟ್‌ರಚನೆಯ ದೇವಾಲಯವಿದು. ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳಿರುವ ದೇವಾಲಯವು ಮುಂಭಾಗದಲ್ಲಿ ಉಪ್ಪರಿಗೆಯನ್ನು ಹೊಂದಿದೆ. ಗರ್ಭಗೃಹ ಮತ್ತು ಅಂತರಾಳಗಳು ಆರ್.ಸಿ.ಸಿ. ನಿರ್ಮಾಣವಾಗಿದ್ದು, ಸಭಾಮಂಟಪವನ್ನು ಮರದ ತೊಲೆ ಮತ್ತು ಜಂತಿಗಳನ್ನು ಬಳಸಿ ಮಾಳಿಗೆ ಶೈಲಿಯಲ್ಲಿ ನಿರ್ಮಿಸಲಾಗಿದೆ. ಮುಂಭಾಗದಲ್ಲಿ ಶಿಲಾಸ್ತಂಭವುಂಟು.

ಗರ್ಭಗೃಹದಲ್ಲಿ ನೆಲಮಟ್ಟದಲ್ಲಿರುವ ಚೌಕರಚನೆಯ ಲಿಂಗವಿದೆ. ರುದ್ರಭಾಗ ದಪ್ಪದಿದ್ದು, ಬಹುಶಃ ಬೇರೆಯದನ್ನು ಅಳವಡಿಸಿರಬಹುದು. ಹೊರಭಾಗದಲ್ಲಿ ನಾಗಶಿಲ್ಪವಿದೆ.

೫೮

ಊರು ಶಿರೂರು
ಸ್ಥಳ ಊರ ನಡುವೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಹೊಸದಾಗಿ ನಿರ್ಮಾಣಗೊಂಡಿರುವ ದೇವಾಲಯವಿದು. ಹೊರಭಾಗದಲ್ಲಿರುವ ಗೋಸಾಸದ ಕಲ್ಲಿನಲ್ಲಿ, ಶಾಸನ ಮತ್ತು ಮೂರು ಹಂತದ ಉಬ್ಬುಶಿಲ್ಪಗಳಿವೆ. ಶಾಸನದ ಅಕ್ಷರಗಳು ಸವೆದಿವೆ. ಮೂರು ಹಂತದಲ್ಲಿ ಕಲಶ, ನೇಗಿಲು ಹಾಗೂ ಗೋವು ಮತ್ತು ಗೋವಿನ ಉಬ್ಬು ಶಿಲ್ಪಗಳನ್ನು ಬಿಡಿಸಲಾಗಿದೆ. ಅಲ್ಲದೆ ನಾಗರಾಜ ಮತ್ತಿತರ ದೇವತೆಗಳ ಅಪೂರ್ಣ ಶಿಲ್ಪಾವಶೇಷಗಳಿವೆ. ಇದರಿಂದ ಇಲ್ಲಿ ಪ್ರಾಚೀನ ದೇವಾಲಯವಿತ್ತೆಂಬುದು ಸ್ಪಷ್ಟವಾಗುತ್ತದೆ.

೫೯

ಊರು ಶಿಶುವಿನಹಳ್ಳಿ
ಸ್ಥಳ ಕೆರೆ ಹತ್ತಿರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆ ಶೈಲಿಯ ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಭಗ್ನಗೊಂಡಿರುವ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಭಗ್ನಗೊಂಡ ಭಾಗಗಳನ್ನು ಸಿಮೆಂಟಿನಿಂದ ತುಂಬಲಾಗಿದೆ. ದೇವಾಲಯಕ್ಕೆ ದಕ್ಷಿಣದಿಂದ ಪ್ರವೇಶಿಸಬೇಕು. ಅಂದರೆ ಲಿಂಗ ಪೂರ್ವಾಭಿಮುಖವಾಗಿದ್ದರೂ, ದಕ್ಷಿಣದಲ್ಲಿ ಬಾಗಿಲನ್ನು ಇಡಲಾಗಿದೆ. ಇದರಿಂದ ಇಲ್ಲಿ ಪ್ರಾಚೀನ ದೇವಾಲಯವಿದ್ದು, ಅದು ಬಿದ್ದುಹೋದ ನಂತರ ತಮ್ಮ ಅನುಕೂಲಕ್ಕೆ ತಕ್ಕಂತೆ ಈಗಿನ ದೇವಾಲಯವನ್ನು ನಿರ್ಮಿಸಿಕೊಂಡಿದ್ದಾರೆ.

ಈ ಊರಿನಲ್ಲಿ ರಾಷ್ಟ್ರಕೂಟರ ಒಂದನೇ ಅಮೋಘವರ್ಷನ ಕ್ರಿ.ಶ. ೮೭೨ ಶಾಸನವಿದ್ದು, ಬೆಳ್ವೂಲ ಮೂನೂರರ ಅಧಿಕಾರಿ ದೇವಣಯ್ಯನು ಸಿಸುಳಹಾಳದ ಬ್ರಾಹ್ಮಣರಿಗೆ ತುಪ್ಪದ ಮೇಲಿನ ಸುಂಕ ವಿನಾಯಿತಿ ಮಾಡಿದ ಉಲ್ಲೇಖವುಂಟು (ಸೌಇಇ XI-i : ೧೪). ಕ್ರಿ.ಶ. ೧೨ನೆಯ ಶತಮಾನದ ವೀರಗಲ್ಲೊಂದು ಗೋಗ್ರಹಣ ಮತ್ತು ಸಿಸುಹಳ್ಳಿಯನ್ನು ಪ್ರಸ್ತಾಪಿಸದೆ (ಅದೇ xv : ೫೯೦). ಉಳಿದೆರಡು ಶಾಸನಗಳು ಕ್ರಮವಾಗಿ ೧೩ ಮತ್ತು ೧೫ ನೆಯ ಶತಮಾನಕ್ಕೆ ಸೇರಿದ್ದು, ದಾನಗಳನ್ನು ಉಲ್ಲೇಖಿಸುತ್ತವೆ. ಈ ಶಾಸನಗಳಿಂದ ಶಿಶುವಿನಹಳ್ಳಿ ಗ್ರಾಮವು ಪ್ರಾಚೀನ ಕಾಲದಿಂದಲೂ ಮಹತ್ವದ ಸ್ಥಳವಾಗಿರುವುದು ಕಂಡುಬರುತ್ತದೆ.

೬೦

ಊರು ಶೆಲವಡಿ
ಸ್ಥಳ ಕೆರೆ ಹತ್ತಿರ
ಸ್ಮಾರಕ ಕಫಲೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಮಾಳಿಗೆ ರಚನೆಯ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳಿವೆ. ಮಣ್ಣಿನ ಗೋಡೆಯನ್ನು ತೆಗೆದು ಇತ್ತೀಚೆಗೆ ಸಿಮೆಂಟ್‌ ಗೋಡೆಯನ್ನು ನಿರ್ಮಿಸಿದ್ದಾರೆ. ಗರ್ಭಗೃಹ ದ್ವಾರದಲ್ಲಿ ಹಳೆಯ ದೇವಾಲಯದ ಹೊಸ್ತಿಲು ಶಿಲೆಯನ್ನು ಕಾಣಬಹುದು. ಹಳೆ ದೇವಾಲಯದ ನವರಂಗದ ಮಧ್ಯದ ಅರ್ಧವೃತ್ತ ವೇದಿಕೆ ಶಿಲೆಯನ್ನು ಸಭಾಮಂಟಪದ ಮೆಟ್ಟಿಲಾಗಿ ಅಳಡಿಸಿದ್ದಾರೆ.

ದೇವಾಲಯದಲ್ಲಿರುವ ಲಿಂಗ ಹಳೆಯದು. ಸಭಾಮಂಟಪದಲ್ಲೂ ಹಳೆಯ ಲಿಂಗ ಮತ್ತು ನಂದಿ ಶಿಲ್ಪಗಳಿವೆ. ಹೊರಆವರಣ ಗೋಡೆಯಲ್ಲಿ ಸಪ್ತಮಾತೃಕೆಯರ ಎರಡು ಶಿಲ್ಪಫಲಕಗಳು, ಎರಡು ವೀರಗಲ್ಲುಗಳು, ಲಿಂಗವೊಂದರ ಗಜಲಕ್ಷ್ಮಿ ಮೊದಲಾದ ಶಿಲ್ಪಾವಶೇಷಗಳು ಕಂಡುಬರುತ್ತವೆ.