೧೬

ಊರು ಕುಸುಗಲ್‌
ಸ್ಥಳ ಕಿಲ್ಲೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೯ನೆಯ ಶತಮಾನ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಕುಸುಗಲ್ಲಿನ ಕಿಲ್ಲೆ ಪ್ರದೇಶದಲ್ಲಿ, ಎತ್ತರದ ಸ್ಥಳದಲ್ಲಿರುವ ದೇವಾಲಯವು ಸುಮಾರು ೧೯ನೆಯ ಶತಮಾನದ ರಚನೆ ಎನ್ನಬಹುದು. ದಿಂಡುಗಲ್ಲಿನಿಂದ ಕಟ್ಟಿರುವ ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ಚಾವಣಿಯನ್ನು ಮರದ ಜಂತಿ, ತೊಲೆ ಮತ್ತು ಕಂಬಗಳನ್ನು ಬಳಸಿ ನಿರ್ಮಿಸಲಾಗಿದೆ. ಈ ದೇವಾಲಯವು ಕಿತ್ತೂರು ಚೆನ್ನಮ್ಮನ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.

ಗರ್ಭಗೃಹದಲ್ಲಿ ಹಳೆಯ ಲಿಂಗವಿದ್ದು, ಪೂಜಿಸುತ್ತಿದ್ದಾರೆ. ಸಭಾಮಂಟಪದಲ್ಲಿರುವ ನಂದಿಶಿಲ್ಪ ಇತ್ತೀಚಿನದು. ಬಹುಶಃ ಇಲ್ಲಿದ್ದ ಪ್ರಾಚೀನ ದೇವಾಲಯ ನಶಿಸಿದ ನಂತರ ಈಗಿರುವ ದೇವಾಲಯವನ್ನು ನಿರ್ಮಿಸಿರಬೇಕು.

೧೭

ಊರು ಕೋಳಿವಾಡ
ಸ್ಥಳ ಕುರುಬರ ಓಣಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ  

ದೇವಾಲಯ ಇತ್ತೀಚಿನದು. ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿರುವ ದೇವಾಲಯವನ್ನು ಕಲ್ಲಿನಿಂದ ನಿರ್ಮಿಸಿದ್ದಾರೆ.

ದೇವಾಲಯದಲ್ಲಿರುವ ಲಿಂಗ ಮತ್ತು ನಂದಿ ಶಿಲ್ಪಗಳು ಕ್ರಿ.ಶ. ೧೬-೧೭ ನೆಯ ಶತಮಾನದ ರಚನೆಗಳಂತೆ ಕಂಡುಬರುತ್ತವೆ. ಹೊರಭಾಗದಲ್ಲಿರುವ ಭಗ್ನಗೊಂಡ ಲಿಂಗ ಪ್ರಾಚೀನವಾದುದು. ಅದರ ಬ್ರಹ್ಮ ಭಾಗದ ಮೇಲೆ ಸಂಸ್ಕೃತದ ಅಕ್ಷರಗಳಿದ್ದು, ಅಲ್ಲಲ್ಲಿ ಹಾಳಾಗಿವೆ. ರುದ್ರಭಾಗ ಸವೆದು ಚೂಪಾಗಿ ಕಾಣುತ್ತದೆ. ಬಹುಶಃ, ಇಲ್ಲಿನ ಪ್ರಾಚೀನ ದೇವಾಲಯ ಮತ್ತು ಶಿಲ್ಪಗಳು ಹಾಳಾದ ಮೇಲೆ ಈಗಿನ ದೇವಾಲಯವನ್ನು ನಿರ್ಮಿಸಿರಬೇಕು. ಈ ಊರಿನ ಮಹಾಮಾಯಿ (ದ್ಯಾಮವ್ವ) ದೇವಾಲಯದ ಗೋಡೆಗಳಲ್ಲಿ ಮಹಿಷಮರ್ದಿನಿ, ವೀರಗಲ್ಲು ಹಾಗೂ ಸಪ್ತಮಾತೃಕೆಯರ ಫಲಕಶಿಲ್ಪಗಳನ್ನು ಅಳವಡಿಸಿದ್ದಾರೆ. ಹೊರಭಾಗದಲ್ಲಿ ತಿರುಗಣೆ ಯಂತ್ರದ ಕಂಬಗಳು ಕಂಡುಬರುತ್ತವೆ. ಬಹುಶಃ ಈ ಶಿಲ್ಪಾವಶೇಷಗಳೆಲ್ಲವೂ ಮೇಲೆ ತಿಳಿಸಿದ ಪ್ರಾಚೀನ ಶಿವಾಲಯಕ್ಕೆ ಸಂಬಂಧಿಸಿರಬಹುದು.

ಈ ದೇವಾಲಯದ ಆವರಣದಲ್ಲಿ ರಾಷ್ಟ್ರಕೂಟರ ಮತ್ತು ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಿವೆ. ಈ ಶಾಸನಗಳಲ್ಲೊಂದು ಗಂಗವಂಶದ ಸತ್ಯವಾಕ್ಯ ಕೊಂಗುಣಿವರ್ಮನನ್ನು ಉಲ್ಲೇಖಿಸುತ್ತದೆ (ಕಇ v : ೫) ಕ್ರಿ.ಶ. ೧೨ನೆಯ ಶತಮಾನದ ಶಾಸನವೊಂದು ಕೋಳಿವಾಡದ ಸೋವರಾಸಿ ಮತ್ತು ಇನ್ನೂರು ಪ್ರಮುಖರನ್ನು ಪ್ರಸ್ತಾಪಿಸುತ್ತದೆ (ಅದೇ : ೯೧). ಮತ್ತೊಂದು ಶಾಸನದಲ್ಲಿ ಆರ‍್ಯತಾರಾಭಗವತಿಯ ಪ್ರಾರ್ಥನೆ ಇದೆ (ಅದೇ : ೧೦೭). ಚಾವಡಿ ಹತ್ತಿರದ ಕ್ರಿ.ಶ. ೧೪೫೮ ರ ಶಾಸನ ಅಸ್ಪಷ್ಟವಾಗಿದ್ದು, ಮಹಾದೇವರಿಗೆ ನೀಡಿದ ದತ್ತಿ ಎಂದಿದೆ (ಕಲಬುರ್ಗಿ : ಧಾ ಜಿ ಶಾ ಸೂ).

೧೮

ಊರು ಕೋಳಿವಾಡ
ಸ್ಥಳ ಊರ ನಡುವೆ
ಸ್ಮಾರಕ ವೀರನಾರಾಯಣ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ  

ದೇವಾಲಯವು ಎತ್ತರದ ಸ್ಥಳದಲ್ಲಿ, ಸರಳವಾದ ಅಧಿಷ್ಠಾನದ ಮೇಲಿದೆ. ಗರ್ಭಗೃಹ ಮತ್ತು ಅಂತರಾಳಗಳನ್ನು ಒಳಗೊಂಡಿರುವ ದೇವಾಲಯವು ಜೀರ್ಣೋದ್ಧಾರಗೊಂಡಿದೆ. ಗರ್ಭಗೃಹದ್ವಾರವು ಅರ್ಧಕಂಬಗಳ ಅಲಂಕರಣದಿಂದ ಕೂಡಿದೆ. ಅಂತರಾಳದ ದ್ವಾರದಲ್ಲೂ ಅರ್ಧಕಂಬಗಳ ರಚನೆಯನ್ನು ಮತ್ತು ಜಾಲಂಧ್ರಗಳ ಅಳವಡಿಕೆಯನ್ನು ಕಾಣಬಹುದು. ಅಂತರಾಳದ ನೈಋತ್ಯ ಮೂಲೆಯಲ್ಲಿ ಕಂಬವೊಂದನ್ನು ನಿಲ್ಲಿಸಿದ್ದು, ಅದರಲ್ಲಿ ಶಾಸನವಿದೆ. ನವರಂಗಭಾಗವು ನೆಲಸಮಗೊಂಡಿದ್ದು, ಅದರ ಮಧ್ಯದ ಶಿಲಾವೇದಿಕೆಯನ್ನು ಈಗಲೂ ಕಾಣಬಹುದು. ಇದರಿಂದ ಈ ದೇವಾಲಯವು ಪ್ರಾಚೀನವಾಗಿದ್ದು, ಸುಮಾರು ೧೭-೧೮ನೆಯ ಶತಮಾನದಲ್ಲಿ ಭಿತ್ತಿಭಾಗ ಜೀರ್ಣೋದ್ಧಾರಗೊಂಡಂತೆ ಕಂಡುಬರುತ್ತದೆ. ದೇವಾಲಯದ ಭಿತ್ತಿ ಸರಳವಾಗಿದ್ದು, ಕಲ್ಲು ಚಪ್ಪಡಿಗಳ ರಚನೆಯಾಗಿದೆ.

ಗರ್ಭಗೃಹದಲ್ಲಿರುವ ವಿಷ್ಣು ಶಿಲ್ಪವು ಸುಂದರವಾಗಿದ್ದು, ಗರುಡಲಾಂಛನದ ಪಾಣಿಪೀಠದ ಮೇಲಿದೆ. ಚಕ್ರ, ಶಂಖಗಳು ಭಗ್ನಗೊಂಡಿದ್ದು, ಗಾರೆಯಲ್ಲಿ ದುರಸ್ತಿ ಮಾಡಲಾಗಿದೆ. ಉಳಿದಂತೆ ಗದಾ ಮತ್ತು ಕಟಿಹಸ್ತವನ್ನು ಹೊಂದಿದೆ. ಶಿಲ್ಪದ ಪ್ರಭಾವಳಿಯಲ್ಲಿ ಮಕರತೋರಣ, ಲತಾ ತೋರಣ ಮತ್ತು ಕೀರ್ತಿಮುಖದ ಅಲಂಕರಣವನ್ನು ಕಾಣಬಹುದು. ಲತಾತೋರಣದ ಮೇಲೆ ವಿಷ್ಣುವಿನ ದಶಾವತಾರದ ಸೂಕ್ಷ್ಮ ಶಿಲ್ಪಗಳನ್ನು ಬಿಡಿಸಿದೆ.

ಇಲ್ಲಿರುವ ಕ್ರಿ.ಶ. ೧೫೬೩ರ ಶಾಸನವು, ಸೂರಪಯ್ಯ ಎಂಬುವನು ಮಾಧವಜನಾರ್ಧನ ದೇವಾಲಯದ ಸೇವೆಗೆ ತಿರುಮಲಬೋವನ ಮಗಳಾದ ಸೂರಿಯ ಮಾಣಿಕೆಯನ್ನು ದಾಣ ನೀಡಿದನೆಂದು ತಿಳಿಸುತ್ತದೆ. ಇದು ಆ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ಕುರಿತಂತೆ ಬೆಳಕು ಚೆಲ್ಲುತ್ತದೆ. ಸ್ತ್ರೀಯರನ್ನು ಖರೀದಿಸಿ ದೇವಾಲಯಗಳಿಗೆ ದಾನ ಮಾಡುತ್ತಿದ್ದ ಸಂಗತಿ ಗಮನಾರ್ಹವಾದುದು. ಈ ಶಾಸನದಿಂದ ಪ್ರಸ್ತುತ ವೀರನಾರಾಯಣ ದೇವಾಲಯದ ಮೂಲ ಹೆಸರು. ಮಾಧವಜನಾರ್ಧನ ದೇವಾಲಯವೆಂದು ತಿಳಿದುಬರುತ್ತದೆ.

೧೯

ಊರು ಗಂಗಿವಾಳ
ಸ್ಥಳ ಊರ ಮುಂಭಾಗ
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ.೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಹಳೆಯ ದೇವಾಲಯದ ಗರ್ಭಗೃಹ ಜೀರ್ಣೋದ್ಧಾರಗೊಂಡಿದ್ದು, ಅದಕ್ಕೆ ಹೊಂದಿಕೊಂಡಂತೆ ಅಂತರಾಳ ಮತ್ತು ಮುಖಮಂಟಪಗಳನ್ನು ಹೊಸದಾಗಿ ನಿರ್ಮಿಸಿದ್ದಾರೆ. ಗರ್ಭಗೃಹದ ಚಾವಣಿ ಜೀರ್ಣೋದ್ಧಾರಗೊಂಡು, ಮೇಲೆ ಗಾರಶಿಖರವಿದೆ. ಅಂತರಾಳ ಮತ್ತು ಮುಖಮಂಟಪಗಳನ್ನು ಮಾಳಿಗೆ ಶೈಲಿಯಲ್ಲಿ ನಿರ್ಮಿಸಿದ್ದಾರೆ. ಮುಖಮಂಟಪದಲ್ಲಿ ಭಾರಿ ಗಾತ್ರದ ಮರದ ಕಂಬಗಳನ್ನು ಅಳವಡಿಸಲಾಗಿದೆ. ಇತ್ತೀಚೆಗೆ ಮುಂಭಾಗದಲ್ಲಿ ವಿಶಾಲವಾದ ಆರ್.ಸಿ.ಸಿ. ಸಭಾಂಗಣವನ್ನು ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿ ಲಿಂಗ, ಅಂತರಾಳದ ಗೋಡೆಯ ಗೂಡುಗಳಲ್ಲಿ ವಿಷ್ಣುವಿನ ಎರಡು ಶಿಲ್ಪಗಳು, ಮಹಿಷಮರ್ದಿನಿ, ಗಣಪತಿ ಮತ್ತು ದಕ್ಷಿಣಾಮೂರ್ತಿ ಶಿಲ್ಪಗಳು ಕಂಡುಬರುತ್ತವೆ. ಇವೆಲ್ಲವೂ ಹಳೆಯ ದೇವಾಲಯಕ್ಕೆ ಸಂಬಂಧಿಸಿದ ಶಿಲ್ಪಾವಶೇಷಗಳಾಗಿವೆ.

೨೦

ಊರು ಗಬ್ಬೂರು
ಸ್ಥಳ ಊರ ಮುಂದೆ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಪ್ರಾಚೀನ ದೇವಾಲಯವಿದ್ದ ಸ್ಥಳದಲ್ಲಿ ಇತ್ತೀಚೆಗೆ ಕೊಠಡಿಯೊಂದನ್ನು ನಿರ್ಮಿಸಿ, ಹೊಸದಾಗಿ ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ. ಹೊರಭಾಗದಲ್ಲಿ ಹಳೆಯ ದೇವಾಲಯಕ್ಕೆ ಸಂಬಂಧಿಸಿದ ಲಿಂಗಗಳು, ಕಮಲದ ಶಿಲ್ಪಫಲಕ ಮತ್ತಿತರ ಶಿಲ್ಪಾವಶೇಷಗಳು ಕಂಡುಬರುತ್ತವೆ. ಸಮೀಪದ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಸಪ್ತಮಾತೃಕೆಯರ ಶಿಲ್ಪಫಲಕ ಮತ್ತು ಎರಡು ವೀರಗಲ್ಲುಗಳಿವೆ. ಇಲ್ಲಿನ ನಂದಿಶಿಲ್ಪ ಕಳವಾಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.

ಈ ಊರಿನ ವೀರಗಲ್ಲು ಶಾಸನಗಳು ರಾಷ್ಟ್ರಕೂಟರ ಕಾಲಕ್ಕೆ ಸೇರಿದ್ದು, ಗಬ್ಬೂರಿನ ಸ್ಥಳ ನಾಮದ ಮೇಲೆ ಬೆಳಕು ಚೆಲ್ಲುತ್ತವೆ (ಕಲಬುರ್ಗಿ : ಧಾ ಜಿ ಶಾ ಸೂ). ಗಬ್ಬೂರಿನ ಪ್ರಾಚೀನ ರೂಪ ಗೊಬ್ಬನೂರು ಎಂದು ತಿಳಿದುಬರುತ್ತದೆ.

೨೧

ಊರು ಗಬ್ಬೂರು
ಸ್ಥಳ ಊರ ಈಶಾನ್ಯ ಭಾಗ
ಸ್ಮಾರಕ ಬಸವೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ವಿಜಯನಗರೋತ್ತರ
ಶೈಲಿ ಹಿಂದೂ-ಮುಸ್ಲಿಂ
ಸ್ಥಿತಿ ಮಧ್ಯಮ
ಸಂರಕ್ಷಣೆ

ದೇವಾಲಯವು ಹಿಂದೂ-ಮುಸ್ಲಿಂ ಶೈಲಿಯಲ್ಲಿದ್ದು, ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದ ಒಳಚಾವಣಿ ಗುಮ್ಮಟಾಕಾರದಲ್ಲಿ ನಿರ್ಮಾಣಗೊಂಡಿರುವುದು ಗಮನಾರ್ಹ. ದ್ವಾರ ಗಿಡ್ಡನೆಯದು. ದ್ವಾರಬಂಧದ ಮೇಲೆ ನಾಲ್ಕು ಸ್ತ್ರೀದೇವತೆಗಳ ಉಬ್ಬುಶಿಲ್ಪಗಳಿದ್ದು, ಕೈಗಳಲ್ಲಿ ಖಡ್ಗ, ಬಟ್ಟಲು ಮತ್ತಿತರ ಆಯುಧಗಳನ್ನು ಹಿಡಿದಿವೆ. ಸಭಾಮಂಟಪವು ಮಾಳಿಗೆಶೈಲಿಯಲ್ಲಿದ್ದು, ಮರಮುಟ್ಟುಗಳಿಂದ ನಿರ್ಮಿಸಿದ್ದಾರೆ. ದಕ್ಷಿಣದಲ್ಲಿ ಪ್ರವೇಶದ್ವಾರವಿದೆ. ಗರ್ಭಗೃಹದ ಮೇಲೆ ಗಾರೆಗಚ್ಚಿನಲ್ಲಿ ಮೆಟ್ಟಿಲಾಕಾರದ ಶಿಖರವನ್ನು ಕಟ್ಟಲಾಗಿದೆ. ದೇವಾಲಯದಲ್ಲಿ ಪ್ರಾಚೀನ ಲಿಂಗ ಮತ್ತು ನಂದಿ ಶಿಲ್ಪವಿದೆ. ಬಹುಶಃ ಹಳೆಯ ದೇವಾಲಯ ನಶಿಸಿದ ನಂತರ ಈಗಿರುವ ದೇವಾಲಯವನ್ನು ನಿರ್ಮಿಸಿರಬೇಕು. ಸಭಾಮಂಟಪದಲ್ಲಿರುವ ನಂದಿಯನ್ನೆ ಹೆಚ್ಚಾಗಿ ಆರಾಧಿಸುವುದರಿಂದ ಈ ದೇವಾಲಯವನ್ನು ಬಸವೇಶ್ವರ ಗುಡಿ ಎಂದು ಕರೆಯಲಾಗುತ್ತಿದೆ. ಹೊರಗೆ ಮರದ ಕೆಳಗೆ ಭಗ್ನಗೊಂಡ ಲಿಂಗ, ಪಾಣಿಪೀಠ ಮೊದಲಾದ ಶಿಲ್ಪಾವಶೇಷಗಳು ಕಂಡುಬರುತ್ತವೆ. ಹಿಂಭಾಗದ ಬೇವಿನಮರದ ಕೆಳಗೆ ಭೈರವಿಶಿಲ್ಪವಿದ್ದು, ಸ್ಥಳೀಯರು ಬನಶಂಕರಿ ಎಂದು ಕರೆಯುತ್ತಾರೆ. ೧೯೪೧-೪೨ರ ಶಾಸನ ವರದಿಯಲ್ಲಿ, ಬನಶಂಕರಿ ಗುಡಿಯ ಗೋಡೆಯಲ್ಲಿ ಅಸ್ಪಷ್ಟವಾದ ಶಾಸನವಿತ್ತೆಂದು ದಾಖಲಿಸಿದೆ. ಮಣ್ಣು ಮತ್ತು ಕಲ್ಲುಗಳಿಂದ ನಿರ್ಮಿಸಿದ್ದ ಈ ಗುಡಿ ಸಂಪೂರ್ಣವಾಗಿ ಬಿದ್ದುಹೋಗಿದೆ. ಹಾಗಾಗಿ ಶಿಲ್ಪವನ್ನು ಬೇವಿನಮರದ ಕೆಳಗೆ ಇಟ್ಟಿದ್ದಾರೆ.

೨೨

ಊರು ಗಾಮನಗಟ್ಟಿ
ಸ್ಥಳ ಕೆರೆ ಹತ್ತಿರ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ನೂರು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳಿರುವ ಈ ದೇವಾಲಯದಲ್ಲಿ ಪ್ರಾಚೀನ ಲಿಂಗವಿದೆ. ಬಹುಶಃ ಪ್ರಾಚೀನ ದೇವಾಲಯ ಬಿದ್ದುಹೋದ ನಂತರ ಈಗಿನ ದೇವಾಲಯವನ್ನು ನಿರ್ಮಿಸಿರಬೇಕು.

ಗರ್ಭಗೃಹದಲ್ಲಿ ಪ್ರಾಚೀನ ಲಿಂಗವಿದೆ. ನಂದಿಶಿಲ್ಪ ಇತ್ತೀಚಿನದು. ಹೊರಭಾಗದಲ್ಲಿ ಭಗ್ನಗೊಂಡಿರುವ ಕಾರ್ತಿಕೇಯ ಶಿಲ್ಪವನ್ನು ಕಾಣಬಹುದು.

೨೩

ಊರು ಗೋಪನಕೊಪ್ಪ
ಸ್ಥಳ ಬಸವಣ್ಣ ದೇವರ ಗುಡಿ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಉತ್ತಮ
ಸಂರಕ್ಷಣೆ  

ಹಳೆಯ ಕಲ್ಮೇಶ್ವರ ದೇವಾಲಯವು ನಶಿಸಿದ ನಂತರ, ಈಗ ಹೊಸ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ. ಹಾಗೂ ಹೊಸ ಲಿಂಗ ಮತ್ತು ನಂದಿಶಿಲ್ಪಗಳನ್ನು ಪ್ರತಿಷ್ಠಾಪಿಸುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಹಳೆಯ ಲಿಂಗ ಮತ್ತು ನಂದಿ ಶಿಲ್ಪಗಳನ್ನು ಬಸವಣ್ಣ ದೇವರ ಗುಡಿಯ ಮುಂದಿಟ್ಟಿದ್ದಾರೆ.

೨೪

ಊರು ಛಬ್ಬಿ
ಸ್ಥಳ ಬಡಿಗೇರ ಓಣಿ
ಸ್ಮಾರಕ ಕಾಳಮ್ಮನ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಕ್ರಿ.ಶ. ೧೮೮೭ರಲ್ಲಿ ನಿರ್ಮಾಣಗೊಂಡ ಈ ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಪಾಣಿಪೀಠದ ಮೇಲಿರುವ ಕಾಳಿಶಿಲ್ಪವು ವಿಜಯನಗರ ಕಾಲದ್ದು. ಶಿಲ್ಪದ ಕೈಗಳಲ್ಲಿ ಪಾಶಾಂಕುಶ, ಖಡ್ಗ, ತ್ರಿಶೂಲ ಮತ್ತು ಬಟ್ಟಲುಗಳನ್ನು ಬಿಡಿಸಲಾಗಿದೆ. ದೇವಿಯ ಇಕ್ಕೆಲುಗಳಲ್ಲಿ ಪರಿವಾರಸ್ತ್ರೀಯರ ಶಿಲ್ಪಗಳಿವೆ. ಗರ್ಭಗೃಹದ ದಕ್ಷಿಣ ಗೋಡೆಯ ಗೂಡಿನಲ್ಲಿ ಪ್ರಾಚೀನ ಉಮಾಮಹೇಶ್ವರ ಶಿಲ್ಪವಿದೆ.

ಈ ದೇವಾಲಯದಲ್ಲಿ ಕ್ರಿ.ಶ.ಸು. ೧೫ನೆಯ ಶತಮಾನದ ಶಾಸನವಿದ್ದು, ಅಸ್ಪಷ್ಟವಾಗಿದೆ. ಈ ಶಾಸನದ ಲಭ್ಯತೆಯಿಂದಾಗಿ ಮೇಲಿನ ದೇವಾಲಯದ ಮೂಲವನ್ನು ವಿಜಯನಗರ ಕಾಲಕ್ಕೆ ನಿರ್ದೇಶಿಸಬಹುದು.

೨೫

ಊರು ಛಬ್ಬಿ
ಸ್ಥಳ ಕೆರೆ ಏರಿ
ಸ್ಮಾರಕ ಕೆರೆಮಲ್ಲೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ದೇವಾಲಯವು ಗರ್ಭಗೃಹವನ್ನು ಮಾತ್ರ ಹೊಂದಿದ್ದು, ಹೊರಭಾಗ ಜೀರ್ಣೋದ್ಧಾರಗೊಂಡಿದೆ. ಗರ್ಭಗೃಹದ ಮೇಲೆ ಸುತ್ತಲೂ ಬೃಂದಾವನಶೈಲಿಯ ಕೈಪಿಡಿಗೋಡೆಯ ಅಲಂಕರಣವುಂಟು. ನಡುವೆ ಗುಮ್ಮಟಾಕಾರದ ಗಾರೆಶಿಖರವನ್ನು ಕಟ್ಟಿದ್ದಾರೆ. ನೋಡಲು ಮುಸ್ಲಿಮ್‌ಸ್ಮಾರಕವನ್ನು ನೆನಪಿಸುತ್ತದೆ. ಶಿಖರದ ಮುಂಭಾಗದಲ್ಲಿ ಜಿನಮೂರ್ತಿಯ ಒರಟು ರಚನೆಯನ್ನು ಕಾಣಬಹುದು. ಅಂದರೆ ಜೀರ್ಣೋದ್ಧಾರದ ಸಂದರ್ಭದಲ್ಲಿ ಮೇಲ್ಭಾಗದ ರಚನೆಗಳನ್ನು ಸಂಪೂರ್ಣವಾಗಿ ಗಾರೆಯಿಂದ ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿರುವ ಲಿಂಗ ನಕ್ಷತ್ರಾಕಾರದಲ್ಲಿದೆ. ಹೊರಭಾಗದಲ್ಲಿ ಭಗ್ನ ನಂದಿಶಿಲ್ಪಗಳು ಮತ್ತು ಭಗ್ನ ಭೈರವಿ ಶಿಲ್ಪಗಳಿವೆ. ಈ ದೇವಾಲಯದ ಸಮೀಪ ಪ್ರಾಚೀನ ಜೈನಶಿಲ್ಪವಿದೆ. ಇನ್ನಿರ ಕೆಲವು ಶಿಲ್ಪಗಳನ್ನು ಧಾರವಾಡ ವಿಶ್ವವಿದ್ಯಾಲಯಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.

೨೬

ಊರು ಛಬ್ಬಿ
ಸ್ಥಳ ಊರಿನ ಉತ್ತರ ಭಾಗ
ಸ್ಮಾರಕ ಬಸವಣ್ಣನ ಗುಡಿ
ಅಭಿಮುಖ ದಕ್ಷಿಣ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ಇತ್ತೀಚೆಗೆ ನಿರ್ಮಿಸಿರುವ ದೇವಾಲಯವಿದು. ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡ ದೇವಾಲಯವು ಸರಳ ರಚನೆಯದು.

ಗರ್ಭಗೃಹದಲ್ಲಿ ಎತ್ತರವಾದ ನಂದಿ ಕಂಬವಿದೆ. ತುದಿಯಲ್ಲಿ ನಂದಿಶಿಲ್ಪವುಂಟು. ಇದರ ಮೇಲೆ ಹಾನುಗಲ್ಲ ಕದಂಬರ ಕಾಮದೇವನ ಶಾಸನವಿದ್ದು, ಶಿವಮುದ್ದುದೇವನ ಶಿಷ್ಯ ಹಾಗೂ ಕಾಲಡಿಯ ಧವಳೇಶ್ವರ ದೇವರ ಅರ್ಚಕನಾದ ರಾಜಗುರು ಲಕ್ಷ್ಮೀದೇವನಿಗೆ ಬಿಟ್ಟ ದಾನವನ್ನು ಉಲ್ಲೇಖಿಸುತ್ತದೆ (ಕಲಬುರ್ಗಿ       ಧಾ ಜಿ ಶಾ ಸೂ). ಇದರಿಂದಾಗಿ ಗರ್ಭಗೃಹದಲ್ಲಿರುವ ನಂದಿಕಂಬ ಹಾನುಗಲ್ಲ ಕದಂಬರ ಕಾಲದ್ದೆಂದು ಸ್ಪಷ್ಟವಾಗುವುದು.

೨೭

ಊರು ಛಬ್ಬಿ
ಸ್ಥಳ ಊರ ನಡುವೆ
ಸ್ಮಾರಕ ಶಾಂತಿನಾಥ ಬಸದಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ

ದಿಗಂಬರ ಪಂಥಕ್ಕೆ ಸೇರಿದ ಶಾಂತಿನಾಥ ಬಸದಿಯನ್ನು ಸ್ಥಳೀಯ ಮಾಳಿಗೆ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹ, ಸಭಾಮಂಟಪ ಮತ್ತು ಮುಖಮಂಟಪಗಳನ್ನು ಹೊಂದಿರುವ ಬಸದಿಯು ಪ್ರಮುಖ ಜೈನಕೇಂದ್ರವಾಗಿದೆ. ಬಸದಿಯ ಸುತ್ತಮುತ್ತ ವಸತಿಗೃಹಗಳಿವೆ.

ಗರ್ಭಗೃಹದಲ್ಲಿ ಸುಮಾರು ೩ ಅಡಿ ಎತ್ತರದ ಶಾಂತಿನಾಥನು ನಿಂತ ವಿಗ್ರಹವಿದ್ದು, ಇದರ ಕಾಲ ಸುಮಾರು ೧೨ನೆಯ ಶತಮಾನವಿರಬಹುದು. ಅಕ್ಕಪಕ್ಕಗಳಲ್ಲಿ ಇನ್ನೂ ಮೂರು ತೀರ್ಥಂಕರರ ಶಿಲ್ಪಗಳು ಕಂಡುಬರುತ್ತವೆ.

ಈ ಊರಿನಲ್ಲಿ ಬಾದಾಮಿ ಚಾಲುಕ್ಯ, ಕಲ್ಯಾಣ ಚಾಲುಕ್ಯ, ಹಾನುಗಲ್ಲ ಕದಂಬ ಮತ್ತು ಯಾದವರ ಕಾಲದ ಶಾಸನಗಳಿವೆ. ಬಸದಿಯಲ್ಲಿರುವ ವಿಗ್ರಹದ ಪಾದಪೀಠದ ಶಾಸನವು ಸುಮಾರು ೧೨ ನೆಯ ಶತಮಾನಕ್ಕೆ ಸೇರಿದ್ದು, ವಿಗ್ರಹದ ಸ್ಥಾಪನೆಯ ವಿಷಯವನ್ನು ಒಳಗೊಂಡು, ಅಸ್ಪಷ್ಟವಾಗಿದೆ. ಹುಡೇದಬಾವಿ ಹತ್ತಿರವಿರುವ ಕ್ರಿ.ಶ.೧೦೬೧ ರ ಶಾಸನ ಸಬ್ಬಿಯಧೋರ ಜಿನಾಲಯದ ಕನಕನಂದಿಯ ನಿಷದಿಯನ್ನು ಉಲ್ಲೇಖಿಸುತ್ತದೆ (ಕಲಬುರ್ಗಿ         ಧಾ ಜಿ ಶಾ ಸೂ). ಅಂದರೆ ಛಬ್ಬಿಯನ್ನು ಸಬ್ಬಿ ಎಂದು ಕರೆದು, ಇಲ್ಲಿನ ಜಿನಾಲಯವನ್ನು ಧೋರ ಜಿನಾಲಯವೆನ್ನಲಾಗಿದೆ. ಹಾಗೂ ಅಲ್ಲಿದ್ದ ಕನಕನಂದಿ ಎಂಬ ಹೆಸರಿನ ಆಚಾರ್ಯನನ್ನು ಮತ್ತು ಆತನ ನಿಷದಿಯನ್ನು ಪ್ರಸ್ತಾಪಿಸಿರುವುದರಿಂದ ಛಬ್ಬಿಯು ೧೧ನೆಯ ಶತಮಾನದಲ್ಲೆ ಜೈನಕೇಂದ್ರವಾಗಿತ್ತೆಂಬುದು ಗಮನಾರ್ಹ. ಹಾಗಾಗಿ ಈಗಿನ ಬಸದಿಯ ವಿಗ್ರಹದ ಪಾದಪೀಠದಲ್ಲಿರುವ ಶಾಸನದ ಕಾಲವನ್ನು ಸಹ ಕ್ರಿ.ಶ. ೧೧ನೆಯ ಶತಮಾನಕ್ಕೆ ನಿರ್ದೇಶಿಸಬಹುದಾಗಿದೆ.

೨೮

ಊರು ತಾರಿಹಾಳ
ಸ್ಥಳ ಊರ ಮುಂಭಾಗ
ಸ್ಮಾರಕ ಕಲ್ಮೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಬಹುಶಃ ಪ್ರಾಚೀನ ದೇವಾಲಯವು ನಶಿಸಿಹೋದ ನಂತರ ಈಗಿನ ದೇವಾಲಯವನ್ನು ನಿರ್ಮಿಸಿಕೊಂಡಿರಬೇಕು. ಗರ್ಭಗೃಹ ಮತ್ತು ಸಭಾಮಂಟಪಗಳಿರುವ ದೇವಾಲಯವಿದು. ಸಭಾಮಂಟಪ ಮಾಳಿಗೆಶೈಲಿಯಲ್ಲಿದ್ದು, ಇತ್ತೀಚೆಗೆ ಮುಂಭಾಗ ಭಗ್ನಗೊಂಡಿದೆ.

ದೇವಾಲಯದಲ್ಲಿರುವ ಲಿಂಗ ಮತ್ತು ನಂದಿ ಪ್ರಾಚೀನ ಶಿಲ್ಪಗಳಲ್ಲ. ಆದರೆ ಹೊರಭಾಗದಲ್ಲಿರುವ ವೀರಗಲ್ಲು ಶಿಲ್ಪ ಪ್ರಾಚೀನವಾದುದು.

೨೯

ಊರು ದೇವರಗುಡಿಹಾಳ
ಸ್ಥಳ ಕೆರೆ ಮುಂಭಾಗ
ಸ್ಮಾರಕ ಮಲ್ಲಿಕಾರ್ಜುನ ಗುಡಿ
ಅಭಿಮುಖ ಪೂರ್ವ
ಕಾಲ ಕ್ರಿ.ಶ. ೧೧-೧೨ನೆಯ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಸ್ಥಿತಿ ಮಧ್ಯಮ
ಸಂರಕ್ಷಣೆ  

ದೇವಾಲಯವು ಗರ್ಭಗೃಹ, ಅರ್ಧಮಂಟಪ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹ ಮತ್ತು ಅರ್ಧಮಂಟಪಗಳು ಜೀರ್ಣೋದ್ಧಾರಗೊಂಡಿವೆ. ಸಭಾಮಂಟಪ ಇತ್ತೀಚಿನ ರಚನೆ. ಗರ್ಭಗೃಹದ ಬಾಗಿಲು ಗಿಡ್ಡಗಿದ್ದು, ಬಾಗಿಲುವಾಡಗಳಲ್ಲಿ ಅರ್ಧಕಂಬಗಳ ಅಲಂಕರಣವನ್ನು ಕಾಣಬಹುದು. ದ್ವಾರಬಂಧದ ಲಲಾಟಬಿಂಬದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವನ್ನು ಕಡೆಯಲಾಗಿದೆ. ಇತ್ತೀಚೆಗೆ ಗರ್ಭಗೃಹ ಮತ್ತು ಅರ್ಧಮಂಟಪಗಳ ಒಳಬಿತ್ತಿಯನ್ನು ಟೈಲ್ಸ್‌ನಿಂದ ಅಲಂಕರಿಸಿದ್ದಾರೆ. ಸಭಾಮಂಟಪವನ್ನು ಚಚ್ಚೌಕದ ಕಲ್ಲಿನ ಕಂಬಗಳು ಮತ್ತು ತೊಲೆಗಳನ್ನು ಅಳವಡಿಸಿ ಇತ್ತೀಚೆಗೆ ನಿರ್ಮಿಸಿದ್ದಾರೆ. ಸಭಾಮಂಟಪವು ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಪ್ರವೇಶದ್ವಾರಗಳನ್ನು ಹೊಂದಿದೆ. ದೇವಾಲಯದ ಹೊರಭಿತ್ತಿಯು ಜೀರ್ಣೋದ್ಧಾರಗೊಂಡಿರುವುದರಿಂದ ಸಪಾಟಾಗಿದೆ. ಆದರೆ ಅದಿಷ್ಠಾನವು ಜಗತಿ, ಪ್ರತಿ, ಉಪಾನ, ಕಂಠ, ಕುಮುದ, ಕಪೋತ ಭಾಗಗಳನ್ನು ಹೊಂದಿದ್ದು, ದೇವಾಲಯದ ಪ್ರಾಚೀನತೆಯ ಬಗ್ಗೆ ಬೆಳಕು ಚೆಲ್ಲುವುದು. ಗರ್ಭಗೃಹದ ಮೇಲೆ ಇತ್ತೀಚೆಗೆ ಶಿಖರವನ್ನು ನಿರ್ಮಿಸಿದ್ದಾರೆ.

ಗರ್ಭಗೃಹದಲ್ಲಿ ಲಿಂಗ, ಸಭಾಮಂಟಪದ ಗೂಡುಗಳಲ್ಲಿ ಭಗ್ನಗೊಂಡ ಕಾರ್ತಿಕೇಯ, ಗಣಪತಿ ಮತ್ತು ನಾಗಶಿಲ್ಪಗಳಿವೆ. ಇವೆಲ್ಲವೂ ಪ್ರಾಚೀನವಾದವು. ಸಭಾಮಂಟಪದಲ್ಲಿ ಪೂರ್ವದಿಕ್ಕಿನ ಚಾವಣಿಯಲ್ಲಿ ನಾಗಬಂಧಶಿಲ್ಪವನ್ನು ಕಡೆಯಲಾಗಿದೆ. ಹೊರಭಾಗದಲ್ಲಿರುವ ನಂದಿಶಿಲ್ಪ ಇತ್ತೀಚಿನದು.

ಈ ಊರಿನ ದಾರಿಯಲ್ಲಿರುವ ಸುಮಾರು ೧೭ನೆಯ ಶತಮಾನದ ಶಾಸನವೊಂದು, ಘಂಟರಾವುತ ಎಂಬುವನು ಮಲ್ಲಿಕಾರ್ಜುನ ದೇವಾಲಯಕ್ಕೆ ಭೂಮಿಯನ್ನು ದಾನ ನೀಡಿದನೆಂದು ತಿಳಿಸುತ್ತದೆ (ಕಲಬುರ್ಗಿ ಧಾ ಜಿ ಶಾ ಸೂ).

೩೦

ಊರು ನಾಗರಹಳ್ಳಿ
ಸ್ಥಳ ಊರ ನಡುವೆ
ಸ್ಮಾರಕ ನಾಗಲಿಂಗೇಶ್ವರ ಗುಡಿ
ಅಭಿಮುಖ ಪೂರ್ವ
ಕಾಲ ಆಧುನಿಕ
ಶೈಲಿ ಸ್ಥಳೀಯ
ಸ್ಥಿತಿ ಮಧ್ಯಮ
ಸಂರಕ್ಷಣೆ  

ಮಾಳಿಗೆ ಶೈಲಿಯಲ್ಲಿರುವ ದೇವಾಲಯವು ಗರ್ಭಗೃಹ, ಸಭಾಮಂಟಪ ಮತ್ತು ಪ್ರವೇಶ ಮಂಟಪಗಳಿಂದ ಕೂಡಿದೆ. ಗರ್ಭಗೃಹಕ್ಕೆ ಮರದ ಬಾಗಿಲನ್ನು ಅಳವಡಿಸಿದ್ದಾರೆ.

ಗರ್ಭಗೃಹದಲ್ಲಿ ಹಳೆಯ ಲಿಂಗ (ಕಲ್ಮೇಶ್ವರ) ಮತ್ತು ಇತ್ತೀಚಿನ ಲಿಂಗ (ನಾಗಲಿಂಗೇಶ್ವರ)ಗಳಿವೆ. ಸಭಾಮಂಟಪದಲ್ಲಿ ಹಳೆಯ ಲಿಂಗ ಮತ್ತು ನಾಗಶಿಲ್ಪಗಳಿವೆ.